ಸಾಹಿತ್ಯದಲ್ಲಿ ಸ್ವೀಕರಿಸುವ ಕಾಲದಂತೆ ನಿರಾಕರಿಸುವ ಕಾಲವೂ ಇರುತ್ತದೆ. ಕುವೆಂಪು, ಬೇಂದ್ರೆ, ಪುತಿನ ಅವರ ಕಾಲ ಸ್ವೀಕಾರದ ಕಾಲ. ಭಾರತದ ನವ ನಿರ್ಮಾಣದ ಕಾಲದಲ್ಲಿ ಪ್ರಾಚೀನ ಭಾರತದಿಂದಲೂ ಆಧುನಿಕ ಯೂರೋಪಿನಿಂದಲೂ ನಮ್ಮ ಲೇಖಕರು ತಮಗೆ ಬೇಕಾದ್ದನ್ನು ಸ್ವೀಕರಿಸಿದರು. ಪಡೆದದ್ದನ್ನು ಕನ್ನಡಿಸಿದರು. ಇದು ಹಿಗ್ಗುತ್ತ ಹೋದ ಕಾಲ, ಹಿಗ್ಗುವುದಕ್ಕಿರುವ ಎರಡು ಅರ್ಥದಲ್ಲೂ.

ಇವರಲ್ಲಿ ಭಾವುಕರೂ ಚಿಂತನಶೀಲರೂ ಆದವರು ಆತ್ಮೋನ್ನತಿಗಾಗಿ, ಸಮಾಜ ಸುಧಾರಣೆಗಾಗಿ ಹಿಗ್ಗಿದವರು; ಕನ್ನಡ ಭಾಷೆಯ ಎಲ್ಲ ಸಾಧ್ಯತೆಗಳನ್ನು ಹುಡುಕುವುದಕ್ಕಾಗಿ ಹಿಗ್ಗಿದವರು. ತಾವೇ ಹುರಿದುಂಬಿದವರು; ಓದುಗರನ್ನು ಹುರಿದುಂಬಿಸಿದವರು. ಹುರಿದುಂಬಿಸುವ ಮಾತಿನ ಓಘ ಉತ್ಕರ್ಷಗಳಿಗೆ ಅವರ ಬಾಳಿನಿಂದಲೇ, ಕಾಲದಿಂದಲೇ ನೈಜತೆಯೂ ಯಥಾರ್ಥಗೊಳ್ಳುವ ಅಧಿಕೃತತೆಯೂ ಒದಗುತ್ತಿತ್ತು.

ಆದರೆ ಭಾರತ ಸ್ವತಂತ್ರವಾದ ನಂತರ ಹೀಗೆ ಮಾತನಾಡುವುದು ಹವ್ಯಾಸವಾಯಿತು; ಸುಲಭ ಲಭ್ಯವಾಯಿತು; ಜನರನ್ನು ಮೆಚ್ಚಿಸುವ ಉಪಾಯವಾಯಿತು. ರಾಜಕಾರಣದಲ್ಲಿ ಹುಸಿ ಜನಪ್ರಿಯತೆಗಾಗಿ ಹಾಕುವ ಸೋಗಾಯಿತು. ಒಮ್ಮೆ ನಾನು ಒಂದು ಸಭೆಯಲ್ಲಿ ‘ಈಗ ನಾವೇನಾದರೂ ದೇಶಪ್ರೇಮದ ಮೇಲೆ ಬರೆದರೆ ಅದು ನೈಜವೆನ್ನಿಸುವುದಿಲ್ಲ’ ಎಂದೆ. ಸಭೆಯಲ್ಲಿ ಕೂತಿದ್ದ ರಂಶ್ರೀ ಮುಗಳಿಯವರು ಕುಪಿತರಾಗಿ ಎದ್ದು ‘ದೇಶಪ್ರೇಮ ಹುಸಿ ಎನ್ನುತ್ತೀರಾ?’ ಎಂದರು. ಆಗ ಅವರ ಪಕ್ಕವೇ ಕೂತಿದ್ದ ಮಾಸ್ತಿ ಎದ್ದು ಹೇಳಿದರು: ‘ದೇಶಪ್ರೇಮ ಹುಸಿಯೆಂದು ಹೇಳಿದ್ದಲ್ಲ; ಯಾಕದನ್ನು ನೈಜವೆನ್ನಿಸುವಂತೆ ಮಾಡಲು ಲೇಖಕರಿಗೆ ಆಗುತ್ತಿಲ್ಲ ಎಂದು ಕೇಳಿದ ಪ್ರಶ್ನೆ ಮುಖ್ಯ’. ಅವರ ವಾರಿಗೆಯವರಲ್ಲೆಲ್ಲ ಮಾತಿನ ಪ್ರಾಮಾಣಿಕತೆಗೂ ಇಳಿದನಿಗೂ ಹೆಚ್ಚು ಬೆಲೆಕೊಡುತ್ತಿದ್ದ, ಅಬ್ಬರದ ಮಾತಿಗೆ ನಾಚುತ್ತಿದ್ದ ಮಾಸ್ತಿ ಹೇಳಿದ್ದು ನೆನಪಾಗುತ್ತಿದೆ.

* * *

ಆತ್ಮೋನ್ನತಿಯ ಮಾತಿನ ರೆಟರಿಕ್‌ನಲ್ಲಿ ಆತ್ಮಪರೀಕ್ಷೆಗೆ ಅವಕಾಶವಿಲ್ಲದೇ ಹೋದದ್ದು ಆಕಾಶರಾಯರೆಂದು ನಾವು ತಮಾಷೆ ಮಾಡುತ್ತಿದ್ದ ಹಲವು ಕವಿಗಳ ಸೃಷ್ಟಿಗೆ ಕಾರಣವಾಯಿತು. ಸತತ ಆತ್ಮ ಪರೀಕ್ಷೆಯ ಗಾಂಧಿ ಮಾಯವಾಗಿ ಸತತ ಆತ್ಮ ವಿಕಾಸದ, ಔನ್ನತ್ಯದ ಅರವಿಂದರು ಮುಖ್ಯರಾದರು, ನಮ್ಮ ಮುಖ್ಯ ಕವಿಗಳಿಗೆ ಕೂಡ. ಇದಕ್ಕೆ ವಿರೋಧವಾಗಿ ಬೆವರುವ ಈ ದೇಹದ ಅಗತ್ಯವಿಲ್ಲದೆ ಒಂದು ಆತ್ಮ ತನ್ನಷ್ಟಕ್ಕೆ ತಾನೇ ಮಾತಾಡಲು ತೊಡಗಿದ್ದೇ ಆದರೆ ನಾನು ಬೆಚ್ಚಿಬೀಳುತ್ತೇನೆ ಎಂದು ಅಡಿಗರು ಒಮ್ಮೆ ಮೈಸೂರಿನ ಸಭೆಯೊಂದರಲ್ಲಿ ಹೇಳಿದ್ದು ನೆನಪಾಗುತ್ತದೆ.

* * *

ಆ ಕಾಲದ ಕನ್ನಡದಲ್ಲಿ ಆದ ಬದಲಾವಣೆಯ ಮುಖ್ಯ ಸ್ವರೂಪವೇನು? ಅದು ಭಾಷೆಯ ಪ್ರಯೋಗಕ್ಕೂ ಮನಸ್ಸಿಗೂ ಇರುವ ಸಂಬಂಧಕ್ಕೆ ಸೇರಿದ್ದು; ಕೇವಲ ಬೌದ್ಧಿಕವಾದ ತಿಳುವಳಿಕೆಗೂ, ಈ ತಿಳುವಳಿಕೆ ಅನುಭವದಲ್ಲಿ ಅಧಿಕೃತಗೊಳ್ಳುವ ಸಾಹಿತ್ಯದ ಜೀವಂತಿಕೆಗೂ ಸಂಬಂಧಿಸಿದ್ದು.

ಸ್ವೀಕಾರದಿಂದ ಹಿಗ್ಗುವುದರ ಬದಲಾಗಿ, ಮನುಷ್ಯ ಮತ್ತೆ ಜೀವಂತವಾಗಲು ತನ್ನಲ್ಲಿ ಕಡವಾಗಿ ಪಡೆದು ಬಂದದ್ದನ್ನು ನಿರಾಕರಿಸುವ, ಅನುಮಾನಿಸುವ ಧೈರ್ಯವನ್ನು ತೋರಬೇಕೆಂಬುದೇ ಆಗ ಆದ ಬದಲಾವಣೆ.

ಅಧಿಕೃತವೆನ್ನಿಸುವಂತೆ ಪ್ರಾಮಾಣಿಕವಾಗಿ ಸ್ವಾನುಭವದ ನಿಕಷದಲ್ಲಿ ಪರೀಕ್ಷಿಸಿ ಮಾತಾಡಬೇಕು, ಈ ಮಾತಿಗೆ ತಕ್ಕ ಲಯವನ್ನೂ ವಿಲಾಸವಾಗದ ವಾಗರ್ಥ ಪ್ರತಿಪತ್ತಿಯನ್ನೂ ವಾಕ್‌ಶುದ್ಧಿಯ ಹೊಸ ವಾಕ್‌ರಚನೆಗಳನ್ನೂ ಹುಡುಕಬೇಕು –  ಇದು ಕೆಲವು ಲೇಖಕರು ಕೈಗೊಂಡ ವ್ರತವಾಯಿತು. ಇವರಲ್ಲಿ ಮುಖ್ಯರು ಅಡಿಗರು.

ಅಡಿಗರಂತೆ ಸತ್ತು ಮರುಹುಟ್ಟು ಪಡೆದ ಕನ್ನಡದ ಕವಿ ಇನ್ನೊಬ್ಬನಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ತಾನು ಪಡೆದಿದ್ದ ಮಾತಿನ ಗೇಯತೆಯನ್ನೂ ಇದರಿಂದ ಪಡೆದಿದ್ದ ಜನಾನುರಾಗವನ್ನೂ ತನ್ನ ಆವರೆಗಿನ ಒಟ್ಟು ವಾಕ್‌ಸಿದ್ಧಿಯನ್ನೂ ನಿರಾಕರಿಸಿ ಅವರು ತನಗೇ ಹೊಸಬರಾದರು. ‘ನಡೆದು ಬಂದ ದಾರಿಯೆಡೆಗೆ ತಿರುಗಿಸಬೇಡ ಕಣ್ಣಹೊರಳಿಸಬೇಡ’ ಎಂದು ನಿರ್ಧರಿಸಿದರು. ಒಣಗಿ ಬೀಜವಾಗಿ ನೆಲಕ್ಕುದುರಿ ಮಣ್ಣಿನ ‘ಸಹಿಷ್ಣು ಕತ್ತಲಿನಲ್ಲಿ’ ಕಾದಿರಬೇಕು –  ಇದು ಅಡಿಗರದೇ ರೂಪಕ; ಗಂಗಾಧರ ಚಿತ್ತಾಲರು ಅಡಿಗರ ಈ ಮಾತು ತನ್ನನ್ನು ಹೇಗೆ ಚಕಿತಗೊಳಿಸಿ ಎಚ್ಚರಿಸಿತು ಎಂದದ್ದು ನೆನಪಾಗುತ್ತದೆ. ಜೈವಿಕ ಕ್ರಿಯೆಯಲ್ಲಿ ಸದಾ ‘ಆಗುತ್ತ’ ಹೋಗುವ, ಧೋರಣೆಯಾಗದೆ ‘ಸಂಕಲ್ಪ ಬಲದ ಜಾಗರಣೆ’ಯಾಗುವ, ‘ಹಣ್ಣುತಿನ್ನದ ಅಪೂರ್ವ ಹಕ್ಕಿ’ ಬರುವುದಕ್ಕೆ ಕಾಯುತ್ತಿರುವ ಮರದ ‘ಕದವಿರದೆ ಅಲುಗಾಡುವ’ ಕೊಂಬೆಯಾಗುವ ವ್ರತ ಅಡಿಗರ ಕಾವ್ಯದ್ದು. ಉಪನಿಷತ್ತಿನ ಪಿಪ್ಪಲ ಮರದಲ್ಲಿ (‘ದ್ವಾ ಸುಪರ್ಣ’) ಒಂದು ಹಕ್ಕಿ ಹಣ್ಣನ್ನು ತಿಂದು ಅನುಭವಿಸುತ್ತದೆ; ಇನ್ನೊಂದು ‘ಅಪೂರ್ವ ಹಕ್ಕಿ’ ಸಾಕ್ಷಿಯಾಗಿ ಕಂಡು ಅನುಭವಿಸುತ್ತದೆ. ‘ಗೃಹಸ್ಥ ಧರ್ಮದ ಗಂಧ’ ಈ ಸಾಕ್ಷಿಗಾಗಿ ಕಾಯುತ್ತ ತನ್ನ ನಿತ್ಯಕರ್ಮದ ದೈನಿಕದಲ್ಲಿ ವಾಸನಾಭರಿತವಾಗಿ ಉಳಿದಿದ್ದೇ ತೇಯುತ್ತದೆ.

ಅವರು ಸತ್ತು ಹುಟ್ಟಿದ ಬಗೆ ಯೇಟ್ಸ್‌ನದು. ಆದರೆ ಯೇಟ್ಸ್‌‌ನಲ್ಲಿ ನಾವು ಕಾಣುವಂತಹ ಚಪಲ ಚಂಚಲ ಶ್ರೀಮಂತಿಕೆಯಾಗಲೀ, ಆಪಾರವಾದ ವಿದಗ್ಧವಾದ ಜೀವನಾನುಭವವಾಗಲೀ ಅಡಿಗರ ವಸ್ತುವಲ್ಲ. ಅವರು ತಮ್ಮ ಮನೋಭೂಮಿಕೆಯನ್ನು ಎಲಿಯಟ್‌ನಿಂದ ರೂಪಿಸಿಕೊಂಡವರು. ಆದರೆ ಎಲಿಯಟ್‌ಅಕಾಲ ವೃದ್ಧನಂತೆ ಬರೆದವನು; ಹುಟ್ಟಿದಾಗಲೇ ತನಗೆ ನಲವತ್ತು ವರ್ಷವೆನ್ನುವಂತೆ ಎಲಿಯಟ್ ಬರೆಯುವುದು.

ಮಾತು ಸತ್ಯವಾಗುವುದು ಹೇಗೆಂದು ಅಡಿಗರು ಯೋಚಿಸಿದ್ದೇ ನಮಗೆ ಆ ದಿನಗಳಲ್ಲಿ ಮುಖ್ಯವಾದದ್ದು. ಮಾತಿನಲ್ಲಿ ಇದು ಸಾಚ ಇದು ಮೋಸ ಎಂದು ಹೇಳುವುದು ಬಡಪಾಯಿ ಕಿವಿಗಲ್ಲ ಸುಲಭ: ಮಿಂಚುತಂತಿ ಕಾಣುವುದಕ್ಕೆ ಬರೆ ತಂತಿ; ಆದರೆ ಮುಟ್ಟಿ ಒದೆಸಿಕೊಂಡಾಗ ಅದರ ನಿಜ ತಿಳಿಯುತ್ತದೆ. ಮಾತು ಇರಬೇಕಾದ್ದು ಮಿಂಚು ತಂತಿಯ ಹಾಗೆ –  ಇದು ಅಡಿಗರ ಮತ. ವಾಗ್ಮಿಯಾದ ರಾಜಕಾರಿಣಿ ತನ್ನ ನೆರೆಯವರನ್ನು ಮೋಸಮಾಡಲು ಯತ್ನಿಸಿದರೆ, ಭಾವಾತಿರೇಕದ ಲಂಪಟ ಕವಿ ತನ್ನನ್ನೇ ವಂಚಿಸಿಕೊಳ್ಳುತ್ತಾನೆ. ಆದ್ದರಿಂದ ಅಧ್ಯಯನ ಶೀಲನಾದ ಓದುಗ ತನ್ನ ಬರವಣಿಗೆಗೆ ಒದಗಿ ಬರುವಂತೆ ಪ್ರೇರೇಪಿಸುವ ‘ಉಪಾಯ’ವಾಗಿ ಕಾವ್ಯ ರಚನೆ ಮಾಡಿದರು.

ಮಾತಿನ ಬಗ್ಗೆ ಅಡಿಗರು ಎತ್ತಿದ ಅನುಮಾನಗಳಿಗೂ ಆ ಕಾಲದ ರಾಜಕೀಯಕ್ಕೂ ಹಲವು ಸಂಬಂಧಗಳಿವೆ. ನೆಹರು ನಿವೃತ್ತರಾಗುವುದಿಲ್ಲ ಎನ್ನುವ ವ್ಯಂಗ್ಯದ ಪದ್ಯದಲ್ಲಿ ಅಡಿಗರು ಇದನ್ನು ಸೂಚಿಸುತ್ತಾರೆ. ಈ ಪದ್ಯ ಬಂದಾಗ ಅದು ಎಷ್ಟು ಶಾಕಿಂಗ್ ಆಗಿ ಇತ್ತೆಂದರೆ ಹಿರಿಯ ವಿಮರ್ಶಕ ಕುರ್ತುಕೋಟಿ ಕೂಡಾ ನೆಹರು ಬಗ್ಗೆ ಹೀಗೆಲ್ಲಾ ಬರೆಯಬಾರದು ಎಂದಿದ್ದರು. ‘ಹೊತ್ತು ಸುತ್ತುತ್ತಾನೆ ಬಲು ಭಾರೀ ಭೂಗೋಳ! ಗಂಟೆಗೆ ಎಂಬತ್ತೆಂಟು ಮೈಲಿ ಸ್ವಗತ’ –  ತನ್ನ ಮಾತಿಗೆ ತಾನೇ ಮೋಹಿತನಾದ ನಾರ್ಸಿಸಸ್‌ ಆಗಿ ನೆಹರು ನಮಗೆ ತೋರುತ್ತಾರೆ. ಟ್ಯಾಗೋರ್‌ರನ್ನು ಅಡಿಗರು ಹೀಗೆಯೇ ಅಣಕಿಸುತ್ತಾರೆ. ಆದರೆ ಹೀಗೆ ವ್ಯಂಗ್ಯವಾಡುವಾಗ ಅಡಿಗರು ಹಿಂದೆ ತಾನೇ ಏನಾಗಿದ್ದೆನೋ ಅದನ್ನೇ ಗೇಲಿ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಮರೆಯಬಾರದು. ಕೆಲವೊಮ್ಮೆ ತನ್ನನ್ನೇ ತಾನು ಹಾಸ್ಯ ಮಾಡಿಕೊಳ್ಳುವ ಕೋಡಂಗಿಯಂತೆಯೂ ಅವರು ನಮಗೆ ಎದುರಾಗುತ್ತಾರೆ.

ಕೃಷ್ಣ ಮೆನನ್‌ರು ವಿಶ್ವಸಂಸ್ಥೆಯಲ್ಲಿ ದಣಿವಿಲ್ಲದೇ ಗಂಟೆಗಟ್ಟಳೆ ಕಾಶ್ಮೀರದ ಭಾರತದ ನೀತಿಯನ್ನು ಕುರಿತು ಮಾಡಿದ ಭಾಷಣದಿಂದ ಅಡಿಗರು ಕೆಂಡವಾಗಿದ್ದರು ಎಂಬುದು ನೆನಪಾಗುತ್ತದೆ. ಅವರು ಉಡುಪಿಯಲ್ಲಿ ಪ್ರಿನ್ಸಿಪಾಲರಾಗಿದ್ದಾಗ ಆಡಿದ ಒಂದು ಮಾತು ದಕ್ಷಿಣ ಕನ್ನಡ ಜಿಲ್ಲೆಯ ಹಲವರನ್ನು ಕೋಪಗ್ರಸ್ತರಾಗುವಂತೆ ಮಾಡಿತ್ತು. ಅಡಿಗರು ಹೇಳಿದ್ದು ಇಷ್ಟೇ: ‘ದಕ್ಷಿಣ ಕನ್ನಡ ಜಿಲ್ಲೆಯ ಜನ ಮಹಾ ಮಾತುಗಾರರು, ಅವರ ಮಾತಿನ ಬಿಂಕ, ಬಿನ್ನಾಣ, ಸೇಳೆ, ಆರ್ಭಟ ಎಲ್ಲವೂ ತಾಳಮದ್ದಳೆಯಿಂದ ಅವರಿಗೆ ಅಭ್ಯಾಸವಾದುದು. ಹೀಗಾಗಿ ಈ ಜನರಿಗೆ ಸತ್ಯವಾಗಿ ಏನನ್ನಾದರೂ ಅನ್ನಿಸಿದಂತೆ ಹೇಳುವುದು ಹೇಗೆಂದು ಮರೆತೇಹೋಗಿದೆ.’

ಅಡಿಗರೂ ಕೆಲವು ಪದ್ಯಗಳಲ್ಲಿ ಯಕ್ಷಗಾನದ ಒಂದು ವೇಷವೇ. ಆದರೆ ತಾನು ವೇಷ ಹಾಕಿಕೊಂಡಿದ್ದೇನೆಂದು ಪ್ರಜ್ಞಾಪೂರ್ವಕವಾಗಿ ನಮ್ಮೆದುರು ಅವರು ನಿಲ್ಲುತ್ತಾರೆ. ಅವರ ಕಾವ್ಯದ ನಾಟಕೀಯತೆಗಾಗಿ ಈ ವೇಷ ಕಟ್ಟುವುದು, ಪ್ರಜ್ಞಾಪೂರ್ವಕವಾಗಿ ವೇಷಕಟ್ಟುವುದು ಮುಖ್ಯವೆಂಬುದನ್ನು ನಾವು ಮರೆಯಬಾರದು.

ನೆಹರು, ಕೃಷ್ಣ ಮೆನನ್‌ – ಈ ಬಗೆಯ ಸಮಾಜವಾದೀ ವಾಕ್ಚತುರ ರಾಜಕಾರಣವನ್ನು ಅಡಿಗರು ವಿರೋಧಿಸುತ್ತಲೇ ಮೊದಲು ರಾಜಾಜಿಯವರ ಸ್ವತಂತ್ರ ಪಕ್ಷಕ್ಕೂ ಆಮೇಲೆ ಕಾಂಗ್ರೆಸ್ಸೇತರ ರಾಜಕಾರಣದ ಅಡಿಯಲ್ಲಿ ಜನಸಂಘಕ್ಕೂ ಹತ್ತಿರವಾದರು. ಬೆಂಗಳೂರಿನಲ್ಲಿ ಜನಸಂಘದಿಂದ ಚುನಾವಣೆಗೂ ನಿಂತರು. ಆಗ ನಾನು ವಿರೋಧಿಸಿದೆ; ಆದರೆ ಅಡಿಗರ ಮೇಲಿನ ಪ್ರೀತಿಯನ್ನು ಉಳಿಸಿಕೊಂಡೆ. ಲಂಕೇಶರು ಸಕ್ರಿಯವಾಗಿ ಅಡಿಗರಿಗೆ ಚುನಾವಣೆಯಲ್ಲಿ ನೆರವಾದರು; ಆದರೆ ನಂತರ ಹಲವು ಭಿನ್ನಾಭಿಪ್ರಾಯಗಳಲ್ಲಿ ಅವರಿಂದ ದೂರವಾದರು.

ಅಡಿಗರು ಆರ್‌ಎಸ್‌ಎಸ್‌ನ ಶಿಸ್ತು ಸಂಯಮಗಳನ್ನು ಮೆಚ್ಚಿಕೊಂಡಿದ್ದರು. ಆದರೆ ಸಂಘದವರು ಅಡಿಗರ ಒಳದನಿಗಳನ್ನು ಆಲಿಸಬಲ್ಲವರಾಗಿರಲಿಲ್ಲ ಎಂದೇ ನನ್ನ ಅನುಮಾನ. ಒಮ್ಮೆ ದೇವರಸ್ ಬಂದಾಗ ಅಡಿಗರು ರೈಲ್ವೇ ನಿಲ್ದಾಣಕ್ಕೆ ಹೋಗಿ ಅವರನ್ನು ಬರಮಾಡಿಕೊಳ್ಳಬೇಕು ಎಂದು ಸಂಘದವರು ಕೇಳಿದಾಗ ಅಡಿಗರು ಕೊಟ್ಟ ಉತ್ತರ ಇದು; ‘ದೇವರಸ್ ನಾನು ಗೌರವಿಸುವ ನಾಯಕರು. ನಮ್ಮ ಮನೆಗೇ ಬಂದು ನನ್ನನ್ನು ನೋಡಲಿ. ಆದರೆ ಜಯಪ್ರಕಾಶ್‌ ನಾರಾಯಣ್‌ರು ಬಂದಿದ್ದರೆ ನಾನೇ ಹೋಗಿ ನೋಡುತ್ತಿದ್ದೆ.’

ಅಡಿಗರನ್ನು ಆ ದಿನಗಳಲ್ಲಿ ನಾನು ಕನ್ಸರ್ವೇಟಿವ್‌ಎಂದು ತಿಳಿದಿದ್ದೆ. ಇಂಗ್ಲಿಷ್‌ನ ಈ ಶಬ್ದಕ್ಕೆ ಸಮರ್ಪಕವಾದ ಕನ್ನಡ ಶಬ್ದ ನನಗೆ ಹೊಳೆಯುತ್ತಿಲ್ಲ. ಹತ್ತೊಂಬತ್ತನೇ ಶತಮಾನದ ಜಾನ್‌ ಸ್ಟುವರ್ಟ್‌ ಮಿಲ್ ಉದಾರವಾದಿಯಾದ ಸಾಮಾಜಿಕ ಚಿಂತಕ. ಆದರೆ ತನ್ನನ್ನು ಕಣ್ಣು ಮುಚ್ಚಿ ಅನುಸರಿಸುವ ಶಿಷ್ಯರು ತನಗೆ ತದ್ವಿರುದ್ಧವಾಗಿ ಯೋಚಿಸುವ ಕನ್ಸರ್ವೇಟಿವ್‌ ಮನಸ್ಸಿನ ಕೋಲ್‌ರಿಜ್‌ನ ವಿಚಾರಗಳಿಗೂ ಕಿವಿಗೊಡಬೇಕು; ಇಲ್ಲವಾದರೆ ಅವರ ಮನಸ್ಸು ಕುರುಡು ಉದಾರವಾದದಲ್ಲಿ ತೆಳುವಾಗಿಬಿಡಬಹುದು ಎಂದು ಹೇಳುತ್ತಿದ್ದನಂತೆ. ನಮಗೆ ಸಮಾಜವಾದೀ ಕನಸುಗಾರಿಕೆಯ ಆ ದಿನಗಳಲ್ಲಿ ಅಡಿಗರ ಕೆಲವು ವಿಚಾರಗಳು ಅಡ್ಡಗಾಲು ಹಾಕಿ ನಮ್ಮನ್ನು ತಡೆಯುತ್ತಿದ್ದ ಕ್ರಮ ನನಗಂತೂ ಮುಖ್ಯವೆನಿಸಿತ್ತು.

ವಾಲ್ಮೀಕಿ ಹುತ್ತಗಟ್ಟಿ ಕೂತಿದ್ದು ಋಷಿಯಾಗುತ್ತಾನೆ. ಹೀಗೆ ಹುತ್ತಗಟ್ಟಿದೆ ನಾವು ಪುರುಷೋತ್ತಮನನ್ನು ಮತ್ತೆ ಸೃಷ್ಟಿಸಲಾರೆವು ಎಂಬ ವ್ರತಶೀಲತೆಯಲ್ಲಿ ಅಡಿಗರಿಗೆ ನಂಬಿಕೆ ಇತ್ತು. ಸತತ ಹರಿಯುವ ‘ಬತ್ತಲಾರದ ಗಂಗೆ’ಯಿಂದ ನಾವು ಕ್ರಿಯಾಶೀಲರಾಗದೆ ಹೋಗಿದ್ದೇವೆ ಎಂಬ ಭಾರತೀಯ ಪರಂಪರೆಯ ಟೀಕೆಯೂ ಅವರ ಚಿಂತನೆಯಲ್ಲಿತ್ತು.:

ಬತ್ತಲಾರದ ಗಂಗೆಗೆಂಥ ಕುತ್ತಿದ್ದು, ನೋಡು
ಅದೇ ಪಾತ್ರ, ಅದೇ ಧಾಟಿ, ವಸ್ತುಗಳ ಪಾಳಿ;
ಹೊಸ ನೀರು ಬಂದರೂ ಆದೇ ಪುರಾತನದಮಲು,
ರಂಗಮಂದಿರ ಅದೇ, ನಾಟಕವೂ ಅದೇ.

ಇಡೀ ಜಗತ್ತಿಗೆ ಭಾರತ ಪಾಠ ಹೇಳಬಹುದೆಂಬ ನೆಹರೂ ಯುಗದ ಅಹಮಿಕೆಯನ್ನು ಅವರು ಟೀಕಿಸುತ್ತಿದ್ದರು. ಮೋಡ ನಿರಾತಂಕವಾಗಿ ಆಕಾಶದಲ್ಲಿ ಎಲ್ಲೆಲ್ಲೂ ಸಂಚರಿಸಬಹುದು. ಆದರೆ ಅದು ನೆಲಕ್ಕೆ ಇಳಿಯುವಾಗ ತನುರೂಪಿ ಬಿಂದು. ವಿಶ್ವಪ್ರಜ್ಞೆಯೆಂದರೆ ಏನು? ಪಡುಗಡಲು ಮೊರೆಯ ಬಾರುಗೋಲಿನ ಬೀಸಿಗೆ ಸಿಕ್ಕ ತನ್ನ ಬಾಲ್ಯದ ಮನೆಯ ಎದುರು ಒಂದು ‘ಹಳಬ’ ಹನೆಮರವಿದೆ; ಅಲ್ಲಿ ಬರುವ ಹಕ್ಕಿಗಳಿಗೆ ಮಕ್ಕಳು ಖುಷಿಯಲ್ಲಿ ಬೆಳತಿಗೆ ಚೆಲ್ಲುತ್ತಾರೆ; ಅವನ್ನು ಕುಟುಕಿ ತಿನ್ನುವ ಹಕ್ಕಿಗಳಿಗೆ ಬೆರಗಾಗುತ್ತಾರೆ. ಹೀಗೆ ‘ಪಾಚಿಗಟ್ಟಿ ಜಾರುವ ನಮ್ಮ ಬಳುಮಾಡಿಗೂ ಬಂದ ವಿಶ್ವ’ವೇ ನೈಜವಾದ ವಿಶ್ವಪ್ರಜ್ಞೆ. ಅಡಿಗರು ತಮ್ಮ ಅತ್ಯುತ್ತಮ ಕವನಗಳಲ್ಲಿ ಒಬ್ಬ ಉಗ್ಗನಂತೆ ಮಾತು ಹುಡುಕುತ್ತಾರೆ. ‘ಶಬ್ದ ಸೂತಕದ’ ಬಗ್ಗೆ ಪರಮ ಎಚ್ಚರದ ಅಲ್ಲಮನ ಕುಲದವರಾಗುತ್ತಾರೆ.

ಉದಾತ್ತವಾದ ಮಾತಿನಿಂದಲೇ, ವಿಚಾರಗಳಿಂದಲೇ ಮುದಗೊಳ್ಳುವ ಭಾರತೀಯ ಮನಸ್ಸನ್ನು ಅವರಷ್ಟು ಚುಚ್ಚಿ ಎಚ್ಚರಿಸಿದ ಲೇಖಕರು ಇನ್ನೊಬ್ಬರಿದ್ದರೆ ಅದು ಕಾರಂತರು.

ಕಪ್ಪೆ ತನ್ನ ದುರಾಸೆಯಲ್ಲಿ ಎಲ್ಲೆಲ್ಲೂ ಕುಪ್ಪಳಿಸುತ್ತಿದ್ದು, ತನ್ನ ಮೈಯ ಹೊಳಪನ್ನು ಕಳೆದುಕೊಂಡಾಗ ಮತ್ತೆ ಕೆಸರಿನಲ್ಲಿ ಕೂತಿದ್ದು ತನ್ನ ಹೊಳಪನ್ನು ಪಡೆಯುತ್ತದೆ ಎಂಬುದು ಅವರಿಗೆ ಬಹಳ ಮುಖ್ಯ ಮೆಟಫರ್‌ ಆಯಿತು. ಕೂಪ ಮಂಡೂಕದ ಗ್ರಹೀತ ಅರ್ಥವೇ ಬದಲಾಗುವಂತೆ ಅವರು ಮಾಡುತ್ತಾರೆ.

ಮಾತುಗಳೆಲ್ಲವೂ ತಮ್ಮ ಅರ್ಥಗಳನ್ನು ಕಳೆದುಕೊಳ್ಳುತ್ತಿರುವ ಹುಸಿ ಭಂಗಿಗಳ ಈ ಕಾಲದಲ್ಲಿ ಅಡಿಗರ ಸ್ವಾನುಭವದ ವ್ರತ ಅರ್ಥಪೂರ್ಣವಾಗಿಯೇ ಉಳಿದಿದೆ.

ಬೌದ್ಧಿಕ ಸಂಕಟ ಎಂಬುದೊಂದು ಇದೆ. ಇಂಗ್ಲಿಷ್‌ನಲ್ಲಿ ಇದನ್ನು ಇಂಟಲೆಕ್ಚುಯಲ್ ಸಫರಿಂಗ್ ಎನ್ನುತ್ತಾರೆ. ನಮ್ಮ ಅನೇಕ ಚಿಂತಕರು ಸಾರಾ ಸಗಟಾಗಿ ತಮಗೆ ಹೊಳೆದದ್ದನ್ನು ಸಾರುತ್ತಲೇ ಇರುತ್ತಾರೆ. ಇದು ನನ್ನ ಪಾಲಿಗೆ ಎಷ್ಟು ನಿಜ, ಇದು ಅಂತರಂಗದ ವಿಚಾರವಾಗುವಂತೆ ಯಾವ ಧಾರಣೆಯಲ್ಲಿ ನಾನಿದನ್ನು ಬಗೆಹರಿಸಿಕೊಳ್ಳಬೇಕು ಎನ್ನುವ ಸಾವಧಾನವಿಲ್ಲದ, ಕಟ್ಟೆಚ್ಚರವಿಲ್ಲದ ಮಾತುಗಳೇ ಈಗ ಹೆಚ್ಚಾಗಿವೆ.

ನಮ್ಮ ಭವ್ಯ ಭಾವುಕ ವಿಚಾರಗಳೆಲ್ಲವೂ ಮನುಷ್ಯ ಒಳ್ಳೆಯವನು ಎಂದುಕೊಂಡು ಅವನ ದುಷ್ಟತನ ಕಾಣದಂತೆ ಕಣ್ಣುಮುಚ್ಚಿ ಆಡುವ ಮಾತುಗಳಾಗುತ್ತವೆ; ಅಥವಾ ಮನುಷ್ಯ ಕೆಟ್ಟವನು ಎಂದು ತಿಳಿದೇ ಅವನನ್ನು ಕುಗ್ಗಿಸುವ ಕ್ರಮಗಳನ್ನು ವ್ಯವಸ್ಥೆಯಲ್ಲಿ ಹುಡುಕುವುದೇ ಆಗಿರುತ್ತದೆ. ಈ ಎರಡು ಬಗೆಯ ಆಲೋಚನೆಗಳೂ ಸತ್ಯಕ್ಕೆ ದೂರವೆಂದು ತಿಳಿದವನು ಅಡಿಗರಂತೆ ಮಾತನಾಡುತ್ತಾನೆ –

ಒಳ್ಳೆತನ ಸಹಜವೇನಲ್ಲ; ಸಹಜದೊಳಗಿನ ಕಿಡಿಗೆ
ಆಟವಾಡುವ ತಲುಬು ಮುಖ್ಯ; ರೂಪಾಂತರದ ಅಥವಾ
ಸಾಯದೆ ಸತ್ತು, ಹುಟ್ಟದೆ ಹುಟ್ಟಿ, ಮತ್ತೆ ಮತ್ತೆ ಪುಟ್ಟಡಿಯಿಟ್ಟು
ಹಂತ ಹಂತಕ್ಕೆ ಜಿಗಿಯುವ ಗುಪ್ತ ತಾಖತ್ತಿನ ವಿಕಾಸದ ವಿಚಾರ.
………
ಒಳ್ಳೆತನ ಅಸಹಜವೂ ಅಲ್ಲ, ಅದು ಬೆಳವಣಿಗೆಯ
ಸವಾಲು. ಬೀಜ, ಮೊಳಕೆ, ಎಲೆ, ಕೊಂಬೆ, ಮಿಡಿಗೊಂಚಲು  ಯಾವ
ಹಂತದಲ್ಲಿ ಕೊಡಲಿಯ ಕಾವು ಆಡಿತೋ; ಹುಳು ಹತ್ತಿ,
ಬಿರುಗಾಳಿ ಬಡಿದು, ನೀರಿಲ್ಲದೇ
ಅಡಗಿತೋ ದೀಪತಿಳಿಯದು.
……

ಒಳ್ಳೆತನ ಸಹಜವೂ ಅಲ್ಲ, ಅಸಹಜವೂ ಅಲ್ಲ ಎಂದು ಏಕಕಾಲದಲ್ಲಿ ತಿಳಿದವನ ಚಿಂತನೆ ಇಲ್ಲಿದೆ. ಮಗುವನ್ನು ಪಾಲಿಸಿ ಬೆಳೆಸುವ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವನ ಒಳ್ಳೆತನದ ಸಹಜತೆ/ಅಸಹಜತೆ ಎರಡೂ ನಮಗೆ ಗೊತ್ತಿರಬೇಕು. ರಾಜಕೀಯವಾಗಿ ಕಟ್ಟುವ ಸಾಮಾಜಿಕ ವ್ಯವಸ್ಥೆಯಲ್ಲೂ, ನಿತ್ಯ ಜೀವನದ ಸಂಬಂಧಗಳ ನಿರ್ವಹಣೆಯಲ್ಲೂ ಮನುಷ್ಯನ ಒಳ್ಳೆತನದ ಸಹಜತೆ/ಅಸಹಜತೆ –  ಎರಡೂ ನಮಗೆ ಅರಿವಾಗಿರಬೇಕು. ಕೊನೆಯ ತೀರ್ಮಾನವಾಗದ ಯಾವ ವಿನಯದಲ್ಲಿ, ಇದಕ್ಕೆ ಅವಶ್ಯವಾದ ಯಾವ ಸಂಕಟದಲ್ಲಿ ನಮ್ಮ ಬದುಕು ಅಧಿಕೃತವಾದ ಸತ್ಯವನ್ನು ಪಡೆಯುತ್ತದೆ ಎಂದು ಹುಡುಕುತ್ತಿದ್ದವರು ಅಡಿಗರು. ಭಯೋತ್ಪಾದಕ ಹಿಂಸಾಚಾರದಿಂದ ನಾವು ಮನುಷ್ಯನ ಸ್ವರೂಪದ ಬಗ್ಗೆಯ ಕಂಗೆಡುತ್ತಿರುವ ಈ ದಿನಗಳಲ್ಲಿ ಅಡಿಗರ ನಿಷ್ಠು ನಿಲುವುಗಳೂ, ಸತತವಾಗಿ ‘ಆಗು’ತ್ತಲೇ ಇರುವ, ಮನುಷ್ಯನ ಅಹಂಕಾರದ ಆಚೆಗಿನ ಜೈವಿಕ ಕ್ರಿಯೆಯ ಬೆರಗೂ ನಮಗೆ ಅಗತ್ಯವಾಗಿ ಉಳಿದಿವೆ.

೧೨೨೦೦೬

* * *