ಕನ್ನಡಿಗರಾದ ನನ್ನ ಹಿಂದೂ ಬಾಂಧವರಲ್ಲೂ ನನ್ನ ಮುಸ್ಲಿಂ ಗೆಳೆಯರಲ್ಲೂ ಒಟ್ಟಾಗಿ ಕೆಲವು ವಿಚಾರಗಳನ್ನೂ ಭಾವನೆಗಳನ್ನೂ ನಿವೇದಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ನಾನು ಹುಟ್ಟಿದ್ದು ಬ್ರಾಹ್ಮಣನಾಗಿ, ನನ್ನ ಬಾಲ್ಯದಲ್ಲಿ ನಾನೊಬ್ಬ ಹಿಂದೂ ಎಂದು ತಿಳಿದೇ ಇರಲಿಲ್ಲ. ಮಠದ ಆವರಣದಲ್ಲಿ ಹಳ್ಳಿಯೊಂದರಲ್ಲಿ ಬೆಳೆದ ನಾನು ಬಹಳ ಕಾಲ ಮಾಧ್ವ ಮಠದ ವಿಚಾರಗಳನ್ನು ಶ್ರದ್ಧೆಯಿಂದ ನಂಬುತ್ತ ಇದ್ದೆ. ಈ ಜಗತ್ತು ಸತ್ಯ, ಶಂಕರಾಚಾರ್ಯರು ತಿಳಿದಂತೆ ಮಿಥ್ಯೆಯಲ್ಲ; ದೇವರು ಒಬ್ಬನೇ, ಅವನೇ ವಿಷ್ಣು, ಶಿವ, ಜೀವೋತ್ತಮನೇ ಹೊರತು ದೇವರು ಅಲ್ಲ, ದೇವರ ಸೃಷ್ಟಿಯಲ್ಲಿ ಅಂತರಗಳು ಇವೆ, ತಾರತಮ್ಯಗಳು ಇವೆ –  ಇತ್ಯಾದಿ. ತೀರ್ಥಹಳ್ಳಿಯ ಹೈಸ್ಕೂಲಿನಲ್ಲಿ ಓದುತ್ತ ಇದ್ದ ನಾನು ಹಳ್ಳಿಯಿಂದ ಸ್ಕೂಲಿಗೆ ಹೋಗುವ ದಾರಿಯಲ್ಲಿ ನನ್ನ ಅದ್ವೈತಿ ಮಿತ್ರರೊಂದಿಗೆ ಪ್ರಾಯಶಃ ಬಾಲಿಶವಾಗಿ ದ್ವೈತಾದ್ವೈತದ ಪಾರಮಾಥಿಕ ಚರ್ಚೆಯಲ್ಲಿ ಕಾಲ ಕಳೆದವನು. ಹೀಗೆ ನನ್ನ ಜೊತೆ ಅದ್ವೈತದ ಪರ ಚರ್ಚಿಸುತ್ತ ಇದ್ದ ಮಿತ್ರನೊಬ್ಬ ಕೆಲವು ತಿಂಗಳುಗಳ ಹಿಂದೆ ಮೃತನಾದ.

ಮುಂದಿನ ನನ್ನ ಬೆಳವಣಿಗೆಯನ್ನು ಹೇಳುವೆ. ವಿವೇಕಾನಂದ, ರಾಮಕೃಷ್ಣ ಪರಮಹಂಸ, ಮಹಾತ್ಮ ಗಾಂಧೀಜಿಯವರ ವಿಚಾರಗಳನ್ನು ಸ್ಕೂಲಿನಲ್ಲಿ ಅರಿಯುತ್ತ ಹೋದಂತೆ, ಜೊತೆಗೇ, ಹರಿಜನ ಪತ್ರಿಕೆಯನ್ನು ತಂದು ಓದುವ, ಒಂದು ಮಾಧ್ವ ಮಠದ ಏಜೆಂಟರಾಗಿದ್ದ ನನ್ನ ತಂದೆಯವರ ವೈಯಕ್ತಿಕ ವಿಚಾರಗಳಿಗೆ ಮಿಡಿಯುತ್ತ ಹೋದಂತೆ, ಎಲ್ಲ ಜಾತಿಗಳ ಜನರೂ ನಮ್ಮಂತೆ ಮನುಷ್ಯರು, ನಮಗೆ ಪಾರಮಾರ್ಥಿಕವಾಗಿ ಸಮಾನರು, ಲೌಕಿಕವಾಗಿಯೂ ಸಮಾನರಾಗಬೇಕಾದವರು, ಅಸ್ಪೃಶ್ಯತೆಯನ್ನು ಆಚರಿಸುವುದು ಅನೈತಿಕ ಮಾತ್ರವಲ್ಲ ಸೃಷ್ಟಿಕರ್ತನ ದೃಷ್ಟಿಯಿಂದ ಅದೊಂದು ಪಾಪದ ಆಚರಣೆ ಇತ್ಯಾದಿಯಾಗಿ ನಾನು, ಕಾರಂತರನ್ನೂ ಕುವೆಂಪುರವರನ್ನೂ ಓದಿದ್ದರಿಂದ ಹಿಂಜರಿಯುವ ನನ್ನ ತಂದೆಯನ್ನೂ ಮೀರಿ, ಬೆಳೆಯುತ್ತ ಹೋದೆ. ಆ ದಿನಗಳಲ್ಲಿ ನಾನೊಬ್ಬ ಹಿಂದೂ ಎಂದು ತಿಳಿದು ವರ್ತಿಸುವುದು ಕ್ರಾಂತಿಕಾರಕವಾಗಿ ಕಂಡಿತ್ತು. ಆದರೆ, ನಾನು ಬ್ರಾಹ್ಮಣನೆಂದು ಗೊತ್ತಿರುವವರ ನಡುವೆ ಹೀಗೆ ಉದ್ದೇಶಪೂರ್ವಕವಾಗಿ ಹೇಳಿಕೊಳ್ಳುವುದು ಕೃತಕವಾಗಿ ಕಾಣುತ್ತ ಇತ್ತು. ಈಗಲೂ ಇದು ನಿಜ. ಹೆಸರಿನಿಂದಲೇ ಜಾತಿ ಊಹಿಸುವ ನಾವು, ಯಾರಾದರೂ ತಾವು ಹಿಂದೂ ಎಂದರೆ, ಅವರ ಜಾತಿ ಯಾವುದೆಂದು ತಿಳಿಯಲು ಅವರ ಅಪ್ಪ ಅಜ್ಜರ ಹೆಸರುಗಳನ್ನು ಕೇಳುತ್ತೇವೆ.

ಎಲ್ಲರನ್ನೂ ವಾತ್ಸಲ್ಯದಿಂದ ಕಾಣುತ್ತ ಇದ್ದ ನನ್ನ ತಾಯಿ ಮಾತ್ರ ಮಡಿಮೈಲಿಗೆ ಬಿಟ್ಟವರಲ್ಲ. ತನ್ನ ಜಾತಿಯ ಬಗ್ಗೆ (ಉಪಜಾತಿ ಎನ್ನುವುದೇ ಹೆಚ್ಚಿನ ಸತ್ಯ) ನಾಚಿಕೊಂಡ ಆಧುನಿಕರಲ್ಲ. ಅವರಿಗೆ ಶಾಕ್ ಆದದ್ದು ಪೇಜಾವರ ಸ್ವಾಮಿಗಳು ಹರಿಜನ ಕೇರಿಗೆ ಹೋದರೆಂದು ಗೊತ್ತಾದಾಗ. ಯಾಕೆ ಹೋದರೋ, ಹೋದಮೇಲೆ ಅವರು ಪಂಚಗವ್ಯ ಶುದ್ಧಿ ಮಾಡಿಕೊಳ್ಳದೇ ಇರುತ್ತಾರೆಯೆ? ಎಂದೇ, ಯಾರನ್ನೂ ನಿಕೃಷ್ಟವಾಗಿ ಕಾಣದ, ಆದರೆ ಜಾತಿ ಬಿಡದ ನನ್ನ ತಾಯಿ ಭಾವಿಸಿದ್ದರು. ಮುಸ್ಲಿಮರ ದೇವರಿಗೆ ಹರಕೆ ಹೊತ್ತರೆ, ಅಂದರೆ ಯಾವುದೋ ದರ್ಗಕ್ಕೆ ಇರಬೇಕು, ಮಕ್ಕಳ ಕೆಲವು ಕಾಯಿಲೆಗಳು ಗುಣವಾಗುತ್ತವೆ ಎಂದೂ ಈ ನನ್ನ ತಾಯಿ ತಿಳಿದಿದ್ದರು. ತನ್ನ ಸಾವು ಸನ್ನಿಹಿತವಾದ ಕಾಲದಲ್ಲಿ ಶನಿಮಹಾತ್ಮೆ ಓದುತ್ತ ಇದ್ದರು. ರಸ್ತೆಬದಿ ಪುಸ್ತಕದಂಗಡಿಗಳಲ್ಲಿ ಸಿಗುವ, ಹಳತಾಗಿ ಹಳದಿ ಬಣ್ಣಕ್ಕೆ ತಿರುಗಿದ, ಅಲ್ಲಲ್ಲಿ ಹರಿದ ಹಾಳೆಗಳ, ಚೂಪಾದ ಕಣ್ಣುಮೂಗಿನ ಶನಿಯ ಚಿತ್ರದ ಮಾಸಿದ ಹೊದಿಕೆಯ ಪುಸ್ತಕವನ್ನು ದಪ್ಪ ಗಾಜಿನ ಕನ್ನಡಕ ತೊಟ್ಟು ವಯಸ್ಸಾಗಿ ಹಣ್ಣಾದ ಮೇಲೆ ಬೆನ್ನು ಮುರಿದುಕೊಂಡವರು ಓದುತ್ತ, ಓದಿದ್ದನ್ನು ತನಗೇ ಅಂದುಕೊಳ್ಳುವಂತೆ ತುಟಿಯಡಿಸುತ್ತ ತನ್ನ ಪಾಡಿಗೆ ತಾನು ತುಳಸಿ ಕಟ್ಟೆಯ ಬಳಿ ಗಾಲಿ ಕುರ್ಚಿಯ ಮೇಲೆ ಕೂತು, ತನ್ನ ಸಾವನ್ನು ಶನಿಕೃಪೆಯಲ್ಲಿ ಮುಂದೂಡುತ್ತ ಇದ್ದದ್ದು ನೆನಪಾಗುತ್ತದೆ.

ಜಾತಿಯ ಕಟ್ಟುಪಾಡುಗಳನ್ನು ಮದುವೆಯಲ್ಲೇ ಮೀರಿದ ನನ್ನನ್ನು ನೋವಿನಲ್ಲೂ ಒಪ್ಪಿ ಸಹಿಸಿಕೊಂಡದ್ದು ನೆನಪಾಗುತ್ತದೆ. ಎಲ್ಲ ದೇವರೂ, ನನ್ನ ಹೆಂಡತಿಯ ಧರ್ಮದ ದೇವರೂ, ದೇವರೇ ಅವರ ಪಾಲಿಗೆ. ಅಂದರೆ ತನ್ನನ್ನು ಹಿಂದೂ ಎಂದು ಗುರುತಿಸಿಕೊಳ್ಳದ ಈ ನನ್ನ ತಾಯಿಯೇ ನಿಜವಾದ ಹಿಂದೂ ಎನ್ನಬಹುದೇನೊ? ನಮ್ಮ ದೇಶದ ಕೋಟ್ಯಾಂತರ ಜನರು, ನಾವು ಈಗ ಹಿಂದೂ ಎಂದು ಗುರುತಿಸುವವರು ಹಿಂಧುಗಳಾಗಿರುವುದು ಈ ಬಗೆಯ ವಿರೋಧಾಭಾಸದಲ್ಲೇ.

ಸೆಮಿಟಿಕ್ ಧರ್ಮದವರಾದ ಕ್ರಿಶ್ಚಿಯನ್ನರಿಗೆ, ಮುಸ್ಲಿಮರಿಗೆ, ಯಹೂದ್ಯರಿಗೆ ಸೈದ್ಧಾಂತಿಕವಾಗಿ ಇದು ಸಾಧ್ಯವಾಗದು. ಆದರೆ ನಿಜ ಜೀವನದ ಸತ್ಯಗಳೇ ಬೇರೆ, ಸೈದ್ಧಾಂತಿಕವಾಗಿ ಸಲ್ಲದ ಎಷ್ಟೋ ಸಂಗತಿಗಳು ಬದುಕಿನ ಆತಾರ್ಕಿಕ ಸಂಭ್ರಮದ, ಬೆರಗಿನ ಸತ್ಯಗಳಾಗಿ ಇರುತ್ತವೆ. ದೇವರ ಮೇಲಿನ ಪ್ರೀತಿಯ ಹುಚ್ಚು ಹಿಡಿದವರಂತೂ ಎಲ್ಲ ಮತ – ಧರ್ಮಗಳಲ್ಲೂ ಅವಧೂತರಾಗಿ ಪರಮಾರ್ಥಕಕ್ಕೆ ಒಳದರಿಗಳನ್ನು ಹುಡುಕಿದವರಾಗಿರುತ್ತಾರೆ.

ಈ ಯಾವ ವಿಶೇಷ ಅವಸ್ಥೆಗಳ ಗೊಡವೆಗೂ ಹೋಗದ ನನ್ನ ತಾಯಿಯಂಥವರು ಅಪ್ಪಟ ನೈಜ ಜೀವಿಗಳು, ಆದರೆ ನಿಜ ಯಾವುದೆಂದು ತಲೆಕೆಡಿಸಿಕೊಂಡವರಲ್ಲ. ಅವರು ಇರುವ ಸಂದರ್ಭಕ್ಕೂ, ಅವರ ಇರುವಿಕೆಗೂ ನಡುವೆ ಬಿರುಕುಗಳಿಲ್ಲ. ನಮ್ಮ ಇರುವಿಕೆಯ ಸಂದರ್ಭದಿಂದ ಬೇರೆಯಾಗಲು, ಅನ್ಯವಾಗಲು ಯತ್ನಿಸುವ ನಮ್ಮಂಥವರು, ನಿಜದ ಹುಡುಕಾಟದಲ್ಲಿ ನಮ್ಮ ಸಂದರ್ಭದ ನೈಜತೆಯನ್ನು ಮರೆಮಾಚದೆ ಇರಬೇಕೆಂಬ ಆಸೆಯುಳ್ಳವರೂ ಆದವರಾದರೆ ಏನೇನೋ ನಮಗೇ ಅಂದುಕೊಳ್ಳುತ್ತೀವಿ; ಹೊರಗೆ ಏನೇನೋ ಆಗಿ ತೋರಿಕೊಳ್ಳುತ್ತೀವಿ. ಜಾತಿಯನ್ನು ಮೀರಬೇಕೆಂದು ಹಿಂದೂ ಎಂದುಕೊಳ್ಳುತ್ತೀವಿ. ಹಿಂದೊಂದು ಕಾಲದಲ್ಲಿ ವಿವೇಕಾನಂದರಿಂದಲೋ, ಗಾಂಧಿಯಿಂದಲೋ ಪ್ರೇರಿತರಾಗಿ, ಒಗ್ಗಟ್ಟಿನಲ್ಲಿ ಬಲವಿದೆಂದು ತಿಳಿದು ಹೀಗೆ ಜಾತಿಭಾವನೆ ಮೀರುವಂತೆ ನಾವು ಹುರುಪುಗೊಂಡದ್ದು ಇದೆ. ಆದರೆ ಬ್ರಿಟಿಷರ ಆಡಳಿತದಿಂದ ಬಿಡುಗಡೆಯಾಗಲು ಈ ಹಿಂದುತ್ವದ ಒಗ್ಗಟ್ಟಿನ ಭಾವನೆ ಸಾಲದಾಗಕ ನಾವೆಲ್ಲರೂ ಭಾರತೀಯರು ಎನ್ನುವ ಕಲ್ಪನೆಯನ್ನು – ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಪರ್ಶಿಯನ್ನರು ಒಳಗೊಳ್ಳುವಂತೆ –  ಬೆಳೆಸಿಕೊಳ್ಳಬೇಕಾಯಿತು. ನಮ್ಮ ಸ್ವಾತಂತ್ರ್ಯ ಹೋರಾಟದ ನಾಯಕರೆಲ್ಲರೂ ಇದರ ಫಲವಾಗಿ ಬೆಳೆದವರು. ಇದರಿಂದ ಗಡಿನಾಡಿನ ಗಾಂಧಿಯೆಂದೇ ಖ್ಯಾರಾದ ಖಾನ್ ಅಬ್ದುಲ್ ಗಫಾರ್ ಖಾನರು ಹೋರಾಟಕ್ಕೆ ದಕ್ಕಿದರು. ಇಸ್ಲಾಂ ಧರ್ಮದ ಟೀಕಾಚಾರ್ಯರೆಂದೇ  ಕರೆಯಬಹುದಾದ ಮೌಲಾನಾ ಆಝಾದರು ನಮ್ಮ ಮೊದಲ ಸಾಲನ ನಾಯಕರಾದರು.

ಈಗ ಎಲ್ಲವೂ ಬದಲಾಗಿದೆ. ವಿರಾಟ್ ಹಿಂದೂ ಜಾಗೃತಿಯ ಸಮ್ಮೇಳನಗಳು ಒಗ್ಗಟ್ಟಿಗಾಗಿಯೋ ಓಟಿಗಾಗಿಯೋ ಎಂಬುದು ಸಾಮಾನ್ಯರಿಗೆ ತಿಳಿಯಲಾಗದಂತೆ ಕಾವಿ ಧರಿಸಿದವರೂ, ರಾಜಕಾರಣಿಗಳೂ ಅದರಲ್ಲಿರುತ್ತಾರೆ. ಈ ಸಮ್ಮೇಳನಗಳು ಒಗ್ಗಟ್ಟಿಗಾದರೆ, ಇಸ್ಲಾಂ ಅನ್ನು ತಮ್ಮ ಜೀವದ ರಕ್ಷಣೆಗಾಗಿ ನಂಬುವವರೂ ಆದ (ಇನ್ನೊಂದು ಧರ್ಮದ ನನ್ನ ತಾಯಿಯಂತೆಯೇ) ನೈಜರೂ ಮುಗ್ಧರೂ ಆದ ಸಾಮಾನ್ಯ ಬಡಪಾಯಿ ಮುಸ್ಲಿಮರನ್ನು ಭಯಗ್ರಸ್ತರನ್ನಾಗಿ ಮಾಡುವ ಉಪಾಯವಾಗಿ ಪರಿಣಮಿಸುತ್ತದೆ. ಇದನ್ನು ಮುಸ್ಲಿಮರು ವಿರೋಧಿಸಬೇಕೆಂಬ ಕಾಲು ಕೆರೆದು ಜಗಳಕ್ಕೆ ಆಹ್ವಾನಿಸುವ ಗೂಳಿಯ ಗುಪ್ತ ಆಶಯವೂ ಅಡಗಿರುತ್ತದೆ. ಬದಲಾಗಿ ಇದು ಓಟಿಗಾಗಿ ಮಾತ್ರ ಆದರೆ (ಹಾಗಿರುವುದೇ ಈ ಕಾಲದಲ್ಲಿ ಹೆಚ್ಚು) ಬಿಜೆಪಿ ವಿರುದ್ಧದ ಕಾಂಗ್ರೆಸ್ ರಾಜಕಾರಣವಾಗಿ ಮುಸ್ಲಿಮರು ಸಂಘಟಿತರಾಗುತ್ತಾರೆ.

ಮುಸ್ಲಿಮನೊಬ್ಬ ಸತ್ತರೆ ಕಾಂಗ್ರೆಸ್ಸಿಗೆ ಲಾಭ. ಹಿಂದೂ ಸತ್ತರೆ ಬಿಜೆಪಿಗೆ ಲಾಭ. ಇದು ಓಟಿನ ರಾಜಕಾರಣ. ನಾವೆಲ್ಲರೂ ಬೇರೆ ಪರ್ಯಾರ ಕಾಣದೆ ಬೆಂಬಲಿಸುವ ಪ್ರಜಾತಂತ್ರದ ಹೊಟ್ಟೆಯಲ್ಲೇ ಹುಟ್ಟುವ ಆಮಶಂಕೆಯಂತಹ ಕಾಯಿಲೆ ಇದು. ಎಲ್ಲ ಪಕ್ಷಗಳೂ ಹುಟ್ಟುಹಾಕುವ ಕಾಯಿಲೆ, ಪ್ರಜಾತಂತ್ರದ ಅಗತ್ಯವಾದ ಚುನಾವಣೆಯ ರಾಜಕಾರಣವನ್ನು ಮನಸಾರೆ ಒಪ್ಪಿಕೊಳ್ಳುವುದೂ ಸಾಧ್ಯವಾಗದ, ನಿರಾಕರಿಸಲೂ ಸಾಧ್ಯವಾಗದ ಬಿಕ್ಕಟ್ಟಿನಲ್ಲಿ ನಾವು ಕಂಗೆಡುತ್ತೇವೆ.

ಇರಾಕಿನ ಸರ್ವಾಧಿಕಾರಿಯಾಗಿದ್ದ ಆಳೆತ್ತರದ ಸದ್ದಾಂನನ್ನು ಗಲ್ಲಿಗೇರಿಸುವಾಗ ಅವನ ಸಾಯಲಿರುವ ಮಾನವ ಜೀವದ ದೇಹಕ್ಕೆ ಯಾವ ಮರ್ಯಾದೆಯನ್ನೂ ಕೊಡದಂತೆ ಹೀಯಾಳಿಸಿ ಕೊಂದ ದೃಶ್ಯವನ್ನು ಕಂಡು ನನ್ನ ಹೊಟ್ಟೆ ತೊಳೆಯಿಸಿದಂತೆ ಅಸಹ್ಯವೆನ್ನಿಸಿತು. ಹೀಯಾಳಿಸಿದವರು ಶಿಯಾಗಳು. ಸದ್ದಾಂ ಸೆಕ್ಯುಲರ್ ಪ್ರಭುತ್ವ ನಡೆಸಿದವನು. ಭಾರತಕ್ಕೆ ಸ್ನೇಹಿತನಾಗಿ ಇದ್ದವನು. ಆದರೆ ಶಿಯಾ ಇರಾನ್ ವಿರುದ್ಧ ಅಮೆರಿಕನ್ ಸಹಾಯ ಪಡೆದು ಯುದ್ಧ ಮಾಡಿದವನು. ಮುಸ್ಲಿಮರೇ ಆದ ಇನ್ನೊಂದು ಜನಾಂಗವನ್ನು ವಿಷವಾಯು ಬಳಸಿ ನಿರ್ನಾಮ ಮಾಡಲು ಅಂಜದವನು. ಶಿಯಾ – ಸುನ್ನಿ ಜಗಳ ನನಗಂತೂ ನಮ್ಮ ಶೈವ – ವೈಷ್ಣವ ಪ್ರಾಚೀನ ಕಾದಾಟದಂತೆಯೇ ಅರ್ಥಹೀನವೆನ್ನಿಸುತ್ತದೆ. ಎಲ್ಲ ರಾಷ್ಟ್ರ ಕಟ್ಟುವವರಂತೆ –  ಹಿಟ್ಲರ್‌ನಂತೆ, ನೆಪೋಲಿಯನ್‌ನಂತೆ, ಸ್ಟಾಲಿನ್‌ನಂತೆ, ಮಾವೋನಂತೆ – ನಿರ್ದಯವಾಗಿ ವರ್ತಿಸಿದವನು ಈ ಸೆಕ್ಯುಲರ್ ಪ್ರಭುತ್ವದ ಸದ್ದಾಂ. (ಇಪ್ಪತ್ತನೇ ಶತಮಾನದಲ್ಲಿ ಹೆಚ್ಚು ಹಿಂಸೆ ನಡೆಸಿದವರು ಸೆಕ್ಯುಲರಿಸ್ಟರೇ). ಇವನನ್ನು ಅಮೆರಿಕಾ ಮತ್ತು ಇಂಗ್ಲೆಂಡು ನಿರ್ನಾಮ ಮಾಡಿದ್ದು ಪ್ರಜಾತಂತ್ರಕ್ಕಾಗಿ ಅಲ್ಲ; ಇರಾಕಿನ ಪೆಟ್ರೋಲ್‌ಗಾಗಿ. ಶಿಯಾ ದ್ವೇಷವನ್ನು ಬಳಸಿಕೊಂಡಿದ್ದು ಅಮೆರಿಕಾದ ಪ್ರಭುತ್ವ. ನಮ್ಮಲ್ಲಿ ಹಿಂದೂಗಳನ್ನೂ ಮುಸ್ಲಿಮರನ್ನೂ ಒಡೆದು ಆಳಿದ ಬ್ರಿಟಿಷ್ ರಾಜಕಾರಣದ ಮುಂದುವರಿಕೆ ಇದು.

ಏನನ್ನು ಹೇಳಲು ಮೇಲಿನದನ್ನೆಲ್ಲಾ ಬರೆದೆ ಎಂಬುದನ್ನು ಸ್ಪಷ್ಟಗೊಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಸದ್ದಾಂ ಪರವಾಗಿ ಬೆಂಗಳೂರಿನಲ್ಲಿ ಮುಸ್ಲಿಮರನ್ನು ಸಂಘಟಿಸುವುದು ಅನವಶ್ಯಕವಾಗಿತ್ತು. ಅಮೆರಿಕಾದ ಒಡೆದಾಳುವ, ಇಡೀ ಜಗತ್ತನ್ನು ತನ್ನ ಮಾರುಕಟ್ಟೆ ಮಾಡುವ ಉಪಾಯಗಳನ್ನು ವಿರೋಧಿಸಲು ಇರಾಕ್‌ ಆಕ್ರಮಣವನ್ನು ನಾವು ವಿರೋಧಿಸಬೇಕಿತ್ತು. ಮುಸ್ಲಿಮರು ಮಾತ್ರವಲ್ಲ ಹಿಂದುಗಳಿಗೂ ಇದು ಅಗತ್ಯವಾದ ಆಂದೋಲನವಾಗಬೇಕಿತ್ತು. ಹೀಗೆ ಮುಸ್ಲಿಮರನ್ನು ಒಟ್ಟುಮಾಡಲು ಯಾರೋ ಪ್ರಯತ್ನಿಸಿದಾಗ ಹಿಂದೂ ವಿರಾಟ್‌ಸಮ್ಮೇಳನಗಳು ಅದಕ್ಕೆ ವಿರೋಧವಾಗಿ ಹುಟ್ಟಬಾರದಿತ್ತು.

ಈಗ ನಡೆಯುವುದೆಲ್ಲವೂ ಮಾರುಕಟ್ಟೆ ವಿಸ್ತರಣದ ರಾಜಕಾರಣ. ಗುಜರಾತಿನಲ್ಲಿ ಸದ್ದಾಂನಷ್ಟು ಏಕಾಧಿಪತ್ಯದ ಅವಕಾಶವಿದ್ದಲ್ಲಿ ಅವನನ್ನೇ ನಾಚಿಸಬಹುದಾಗಿದ್ದ ಮಾರಣಹೋಮವನ್ನು ತಡೆಯದಂತೆ ಆಗಲು ಬಿಟ್ಟ ಮುಖ್ಯಮಂತ್ರಿ ಮೋದಿ ಈಗ ಎಲ್ಲ ಉದ್ಯಮಿಗಳ ವಿಕಾಸವಾದೀ ಹೀರೋ. ರಿಲಯನ್ಸ್‌ನವರು, ಟಾಟಾದವರು, ಇನ್‌ಫೋಸಿಸ್‌ನವರು ಮೋದಿಯನ್ನು ಅಪ್ಪಿಕೊಳ್ಳುತ್ತಾರೆ. ಮೋದಿ ಮುಂದಿನ ಹಿಂದುತ್ವದ ರೂವಾರಿ. ಜಿನ್ನಾರನ್ನು ಹೊಗಳಿದ ಅದ್ವಾನಿಯವರೂ ಅಲ್ಲ; ಲಾಹೋರಿಗೆ ಬಸ್ಸಿನಲ್ಲಿ ಹೋಗಿ ನಮ್ಮ ಮೆಚ್ಚುಗೆ ಗಳಿಸಿದ ವಾಜಪೇಯಿಯವರೂ ಅಲ್ಲ. ಬುಷ್‌ನಂತೆಯೇ ಗುಜರಾತಿನ ಮೋದಿ ಕೂಡಾ ಪರಮ ಲೌಕಿಕ; ಜಾಗತಿಕ ಮಾರುಕಟ್ಟೆಗೆ ಸಲ್ಲುವ ಹಿಂದುತ್ವದ ಎನ್.ಆರ್.ಐ.ಗಳ ಅಪ್ಪಟ ಸಿದ್ಧಾಂತಿ.

ಈಗ ನಾವೇನು ಮಾಡಬೇಕು? ಹಿಂದೂಗಳಿಗೆ ಹೇಳಬೇಕು: ನಮ್ಮ ಸಂಸ್ಕೃತಿಯದೇ ಆದ ಜೀವನ ಕ್ರಮವನ್ನು ನಾಶ ಮಾಡುವವರು ಮುಸ್ಲಿಮರಲ್ಲ; ಅಮೇರಿಕಾದ ಪ್ರಭುತ್ವ. ಮುಸ್ಲಿಮರು ಅರಿಯಬೇಕು. ಅವರ ಸಂಸ್ಕೃತಿಯ ನಾಶವಾಗುವುದು ಬಡಪಾಯಿಗಳಾದ ಹಿಂದೂಗಳಿಂದ ಅಲ್ಲ; ಅಮೇರಿಕಾದಿಂದ. ನಮ್ಮ ಮತಧರ್ಮಗಳ ಅಲೌಕಿಕ ಒಳನೋಟಗಳು ಆಧುನಿಕ ಪ್ರಭುತ್ವರಾಜಕಾರಣದ, ಸದ್ಯದಲ್ಲಿ ಆಕರ್ಷಕವೆನ್ನಿಸುವ ವಿಕಾರಗಳಿಂದ, ನಮ್ಮನ್ನು ಪಾರುಮಾಡುವ ಪ್ರೇರಣೆಗಳಾಗಬೇಕು; ಬದಲಾಗಿ ಪರಸ್ಪರ ಹಿಂಸೆಗೆ ಅವು ಕಾರಣಗಳಾಗಿವೆ. ಗೋಡ್ಸೆ ಗಾಂಧಿಯನ್ನು ಕೊಂದದ್ದು ಧಾರ್ಮಿಕ ಕಾರಣಕ್ಕಾಗಿ ಅಲ್ಲ; ಲೌಕಿಕ ಖದೀಮತೆಯಲ್ಲೂ ಉಪಾಯಗಳಲ್ಲೂ ಬೆಳೆಸಬೇಕಾದ ಬಲಿಷ್ಠಗೊಳಿಸಬೇಕಾದ ರಾಷ್ಟ್ರ ರಾಜಕಾರಣದಲ್ಲಿ ಅವರು ಹಿಂದೂಧರ್ಮದ ಆಳದಲ್ಲಿರುವ ಪಾರಮಾರ್ಥಿಕ ನೈತಿಕತೆಯನ್ನು ತಂದರು ಎಂಬುದು ಗಾಂಧೀ ಕೊಲೆಗೆ ಕಾರಣವಾಯಿತು. ಇಲ್ಲಿ ಕೊಂದವನು ಲೌಕಿಕ ರಾಷ್ಟ್ರೀಯವಾದಿ; ಸತ್ತವನು ಪಾರಮಾರ್ಥಿಕ ಮೌಲ್ಯಗಳನ್ನು ಅಕ್ಷರಶಃ ಆಚರಿಸಲು ಯತ್ನಿಸಿದ ಸಂತ.

* * *

ಮಹಾರಾಷ್ಟ್ರದಲ್ಲಿ ಮುಸ್ಲಿಮರ ಮೂರ್ಖ ಮತೀಯತೆಯನ್ನೂ ಹಿಂದೂಗಳ ಪ್ರತಿರೋಧದ ಮತೀಯತೆಯನ್ನೂ ಟೀಕಿಸುತ್ತ ಇದ್ದ ದಿಟ್ಟ ನಿಲುವಿನ ಸೋಷಲಿಸ್ಟ್ ಧೋರಣೆಯ ಕ್ರಿಯಾಶೀಲರಾದ ಲೇಖಕರೊಬ್ಬರು ಇದ್ದರು. ಇವರ ಹೆಸರು ಹಮೀದ್ ದಲ್ವಾಯಿ. ಪಾಕಿಸ್ತಾನದ ಬೇಡಿಕೆಯಿಂದ ಪ್ರಾರಂಭವಾದ ಮುಸ್ಲಿಮ್ ಮತೀಯ ರಾಜಕಾರಣವನ್ನು ಇವರು ನಿರ್ದಯವಾಗಿ ಖಂಡಿಸುತ್ತ ಇದ್ದರು. ಹಾಗೆಯೇ ಮುಸ್ಲಿಮರು ಹೆಚ್ಚು ಹೆಚ್ಚು ಮತೀಯರಾಗಲು ಕಾರಣ ಹಿಂದು ಮತೀಯತೆಯೆಂದೂ ಗುರುತಿಸಿದ್ದರು. ಮುಸ್ಲಿಮರಲ್ಲಿ ಧೀಮಂತರಾದವರು ತಮ್ಮ ಜನರ ಮತೀಯ ರಾಜಕಾರಣವನ್ನು ಟೀಕಿಸ ಬೇಕೆಂದೂ, ಹಿಂದೂಗಳು ತಮ್ಮ ಜನಗಳ ಮತೀಯ ರಾಜಕಾರಣವನ್ನು ತಿರಸ್ಕರಿಸಬೇಕೆಂದೂ ಅವರು ಹೋರಾಡಿದ್ದರು. ಅವರನ್ನು ಹಿಂದೂ ಧೀಮಂತರೇ ಹೆಚ್ಚು ಮೆಚ್ಚುತ್ತ ಇದ್ದುದರಿಂದ ಮುಸ್ಲಿಮರು ಅವರನ್ನು ಅನುಮಾನಿಸುವಂತೆ ಆದದ್ದು ಒಂದು ದುರಂತ. ಇದು ಎಲ್ಲ ಧೀಮಂತ ಮುಸ್ಲಿಮ್ ನಾಯಕರ ದುರಂತ. ನಮ್ಮ ಕಾಲದ ದುರಂತವೂ ಹೌದು.

ಹಿಂದೂ ವಿರಾಟ್ ಸಮ್ಮೇಳನಗಳ ರಾಜಕಾರಣವನ್ನೂ, ಮುಸ್ಲಿಮ್ ಮತೀಯತೆಯ ರಾಜಕಾರಣವನ್ನೂ ವಿರೋಧಿಸುವ, ಅವು ಹುಟ್ಟಿಸುವ ಕ್ರೌರ್ಯದಿಂದ ಹೇಸರು ನಮ್ಮಂಥವರು ಏನು ಮಾಡಬಹುದು? ಸದ್ಯ ಯಾವ ಮತೀಯ ವಿರಾಟ್‌ಸಮ್ಮೇಳನಗಳಿಗೂ ಸರ್ಕಾರ ಸಾರ್ವಜನಿಕ ಕ್ಷೇಮದ ದೃಷ್ಟಿಯಿಂದ ಅನುಮತಿ ಕೊಡದಂತೆ ಒತ್ತಾಯಿಸಬೇಕು. ಸಾಮಾನ್ಯ ಜನರ ದೈವಶ್ರದ್ಧೆಗೂ ಮತೀಯ ರಾಜಕಾರಣಕ್ಕೂ ಸಂಬಂಧವಿಲ್ಲ ಎಂಬುದನ್ನು ಗುರುತಿಸಬೇಕು. ಮತೀಯ ರಾಜಕಾರಣದ ಅಧ್ವರ್ಯುಗಳಾದ ಸಾವರ್ಕರರೂ ದೈವಶ್ರದ್ಧೆ ಇದ್ದವರಲ್ಲ. ಜಿನ್ನಾರಿಗೂ ದೈವಶ್ರದ್ಧೆಯಿರಲಿಲ್ಲ. ಸಾಮಾನ್ಯರು ಅವರಿಂದ ಮೋಸ ಹೋದರು. ಹಿಂದೆ ನಾವು ಚರಿತ್ರೆಯಲ್ಲಿ ಮುಸ್ಲಿಮರು ನಮ್ಮನ್ನು ಆಳಿದರೆಂದು ಹೇಳುತ್ತ ಇರಲಿಲ್ಲ. ಮೊಗಲರು, ತುರುಕರು ಇತ್ಯಾದಿ ನಮ್ಮನ್ನು ಆಳಿದರು ಎಂದುಕೊಂಡಿದ್ದೆವು. ನಮ್ಮ ಚರಿತ್ರೆಯುದ್ದಕ್ಕೂ ಇಸ್ಲಾಂ ನಂಬಿದವರೇ ತಮ್ಮಂತೆ ನಂಬಿದವರಿಗೆ ವಿರೋಧಿಗಳಾಗಿ ಹೋರಾಡಿದ್ದರು. ಹಿಂದೂಗಳು ಹಿಂದೂಗಳ ವಿರುದ್ಧ ಹೋರಾಡಿದ್ದರು. ಹಿಂದೂ ಪ್ರಭುತ್ವದ ಪರವಾಗಿ ಮುಸ್ಲಿಮ್ ಸೈನಿಕರು, ಮುಸ್ಲಿಂ ಪ್ರಭುತ್ವದ ಪರವಾಗಿ ಹಿಂದೂ ಸೈನಿಕರು ಕಾದಾಡಿದ್ದರು. ನಾವು ಬ್ರಿಟಿಷ್ ಆಳ್ವಿಕೆಯನ್ನು ಎಂದೂ ಕ್ರಿಶ್ಚಿಯನ್ ಆಳ್ವಿಕೆಯೆಂದೂ ಕರೆದಿರಲಿಲ್ಲ.

ಎಲ್ಲ ಕಾಲದಲ್ಲೂ ರಾಜ ರಾಜನೇ; ಪ್ರಜೆಗಳು ಪ್ರಜೆಗಳೇ. ಬದುಕಿನ ಸಂದರ್ಭದ ನೈಜತೆಯನ್ನು ಒಪ್ಪಿಕೊಂಡು ಬದುಕುವವರೆಲ್ಲರೂ ಅಹನ್ಯಹನಿ ತಮ್ಮ ಬಾಳನ್ನು ಬದುಕಿ ಸಾಯುತ್ತಾರೆ. ಆದರೆ ನಿಜವೇನೆಂದು ಪಾರಮಾರ್ಥಿಕವಾದ ಹುಡುಕಾಟದಲ್ಲಿ ಇರುವವರಿಗೆ ಒಮ್ಮೊಮ್ಮೆ ಎಲ್ಲ ಮತಧರ್ಮಗಳೂ ಅಪೂರ್ಣವೆನ್ನಿಸಿ ಬಿಡುತ್ತದೆ. ಆಗ ಜಾತಿಯನ್ನು ಮೀರಬೇಕಾಗುತ್ತದೆ; ಮತಗಳನ್ನು ಮೀರಬೇಕಾಗುತ್ತದೆ. ಅಂದರೆ ಅವುಗಳಲ್ಲಿ ಇರುವ ಸತ್ಯಗಳನ್ನು ಗ್ರಹಿಸಿ ವಿನಯದಲ್ಲಿ ಮೀರಬೇಕಾಗುತ್ತದೆ. ತಮ್ಮ ನಿಲುವನ್ನು ಸತತವಾದ ಶೋಧನೆಗೆ ಒಳಪಡಿಸಿಕೊಂಡು ಮುಂದುವರಿಯಬೇಕಾಗುತ್ತದೆ. ವೇದವ್ಯಾಸ, ಟಾಲ್‌ಸ್ಟಾಯ್‌ ಶೇಕ್ಸ್‌ಪಿಯರ್‌, ನಮ್ಮ ಬೇಂದ್ರೆ ಕುವೆಂಪು ಕಾರಂತರಂಥವರು ಎಡವಲು ಹೆದರದೆ ನಡೆದಂಥವರು. ಖೊರಾನ್‌, ಬೈಬಲ್, ವೇದೋಪನಿಷತ್ತುಗಳು, ಶರಣರ ವಚನಗಳು ತೆರೆಯುವ ಪ್ರಪಂಚದಲ್ಲಿ ಈ ಸೃಜನಶೀಲ ಲೇಖಕರಿಗೂ, ಸತ್ಯಾನ್ವೇಷಿಗಳಾದ ವಿಜ್ಞಾನಗಳಿಗೂ ಇಣುಕಲು, ತಮ್ಮ ಅನುಭವದ ಮಾತುಗಳನ್ನು ಸ್ವತಂತ್ರ ಸಾಕ್ಷಿತ್ವದಲ್ಲಿ ಹೇಳಲು ಅವಕಾಶವಿದ್ದಲ್ಲಿ ನಮ್ಮ ಪಾರಮಾರ್ಥಿಕ ನಿಜದ ಹುಡುಕಾಟ ಮುಂದುವರೆಯುತ್ತ ಹೋಗುತ್ತದೆ. ಇಲ್ಲವಾದರೆ ಈ ವಿರಾಟ್‌ಸಮ್ಮೇಳನಗಳಲ್ಲಿ, ಬಲ ಪ್ರದರ್ಶನದ ಮಾರ್ಚುಗಳಲ್ಲಿ ಗುಜರಾತ್‌ಬಗೆಯ ಕ್ರೌರ್ಯ, ಪಾರ್ಟಿಶನ್ ಕಾಲದ ಕ್ರೌರ್ಯ ಬಲಿಷ್ಠ ಹಿಂದೂಗಳನ್ನು ಬಲಿಷ್ಠ ಮುಸ್ಲಿಮರನ್ನು ಬಲಿಪಶುಗಳಾಗುವಂತೆ ಮಾಡುತ್ತದೆ.

ಬ್ರಾಹ್ಮಣನಾಗಿ ಹುಟ್ಟಿ ಬ್ರಾಹ್ಮಣನಾಗಿ ಮಾತ್ರ ಉಳಿಯಬಯಸದೆ, ಮತದಿಂದ ಹೊರಗೆ ಮದುವೆಯಾಗಿ ಮತಾಂತರವಾಗಲು ಬಯಸದೆ, ನಾನು ಬೆಳೆದ ಬ್ರಾಹ್ಮಣ ಸಂದರ್ಭದ ನೆನಪುಗಳನ್ನು ಕಳೆದುಕೊಳ್ಳದವನಾಗದೆ, ಈ ಕಾಲದ ಹಿಂದುತ್ವವನ್ನು ಒಪ್ಪಿಕೊಳ್ಳಲಾರದೆ ಇರುವ ನನ್ನ ವಿಚಾರಗಳನ್ನು ಬರೆದುಕೊಂಡಿದ್ದೇನೆ. ಯಾವ ಮತಧರ್ಮದಲ್ಲೂ ಪೂರ್ಣಸತ್ವವನ್ನು ಕಾಣಲಾರದೆ, ಆದರೆ ಪರಮಾರ್ಥದ ಹುಡುಕಾಟವನ್ನು ಬಿಟ್ಟುಕೊಡಲಾರದೆ ಬದುಕುತ್ತ ಇರುವ ನನ್ನಂಥವರು, ನನಗಿಂತ ಉತ್ತಮರು ಆಗಿಹೋಗಿದ್ದಾರೆ. ಆದರೆ ಇನ್ನು ಮುಂದೆ ಹುಟ್ಟುವವರೂ ಇದ್ದಾರೆಂಬ ವಿನಯದ ಆಶಯ, ಈ ಆಶಯಗಳನ್ನು ಮತೀಯ ಕ್ರೌರ್ಯ ನಾಶಗೊಳಿಸಿಬಿಡಬಹುದೆಂಬ ತಲ್ಲಣ ಈ ಬರಹದ ಹಿಂದಿನ ಆತಂಕಗಳಲ್ಲಿ ಅಡಗಿದೆ.

೨೮೨೦೦೭