ಮಾತಿಗೂ ವರ್ತನೆಗೂ ನಡುವೆ ಕೆಲವೊಮ್ಮೆ ವ್ಯತ್ಯಾಸಗಳಿರುತ್ತವೆ. ಒಂದು ಆತ್ಮವಂಚನೆಯಿಂದ ಹುಟ್ಟುವ ವ್ಯತ್ಯಾಸ. ಇನ್ನೊಂದು ಉದ್ದೇಶಪೂರ್ವಕ ವಂಚನೆಯಿಂದ ಹುಟ್ಟಿದ ವ್ಯತ್ಯಾಸ. ರಾಜಕೀಯ ಭಂಡ ಆದಾಗ ಆ ಭಂಡತನದಲ್ಲ ಮಾತಿಗೂ ಕೃತಿಗೂ ಇರುವ ಉದ್ದೇಶಪೂರ್ವಕ ವ್ಯತ್ಯಾಸ ಅಂತರ್ಗತವಾಗಿರುತ್ತದೆ. ಅದರಲ್ಲಿ ಯಾವ ಒಳತೋಟಿಯೂ ಇರುವುದಿಲ್ಲ. ಈಗ ನಡೆಯುತ್ತಿರುವುದು ಯಾವ ಒಳತೋಟಿಯೂ ಇಲ್ಲದ ರಾಜಕಾರಣ. ಇದರಿಂದ ಜನ ಸಿನಿಕರಾಗುತ್ತಾರೆ. ಹಾಗಾದಾಗ ಇಂಥದ್ದನ್ನು ನಿರ್ವಹಿಸುವುದು ಸುಲಭವಾಗುತ್ತದೆ. ಅದರಿಂದ ಸಿನಿಕನಾಗುವ ಪ್ರಲೋಭನೆಗೆ ಒಳಗಾಗದೆ ಈಗಿನ ರಾಜಕಾರಣದ ಬಗ್ಗೆ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಲು ಇಲ್ಲಿ ಪ್ರಯತ್ನಿಸುತ್ತಿದ್ದೇನೆ.

ನಮ್ಮ ರಾಜಕೀಯದಲ್ಲಿರುವ ಪಕ್ಷ ವ್ಯವಸ್ಥೆಯನ್ನು ನೋಡೋಣ. ಲೋಹಿಯಾ ಮಂಡಿಸಿದ ಕಾಂಗ್ರೆಸ್ ವಿರೋಧಿ ತಾತ್ವಿಕತೆ ನನಗೆ ನೆನಪಾಗುತ್ತಿದೆ. ಅವರ ಅಭಿಪ್ರಾಯದಂತೆ ‘ಕಾಂಗ್ರೆಸ್ ಒಂದು ಸಮೂಹ ಇದ್ದಂತೆ. ಅದರಲ್ಲಿ ಒಬ್ಬ ಬಗೆಯ ಆಲೋಚನೆಗಳನ್ನೂ ಇಟ್ಟುಕೊಂಡವರಿದ್ದಾರೆ. ಸಮಾಜವಾದಿಗಳು, ಬಂಡವಾಳಶಾಹಿಗಳು, ಜಮೀನ್ದಾರರ ಪರವಾಗಿರುವವರು, ರೈತರ ಪರವಾಗಿರುವವರು, ಹಿಂದುತ್ವವಾದಿಗಳು, ಸೆಕ್ಯುಲರ್‌ವಾದಿಗಳು ಹೀಗೆ ಎಲ್ಲಾ ಬಗೆಯವರೂ ಅದರಲ್ಲಿದ್ದಾರೆ. ಆದರೆ ನಾವು ಪ್ರತಿಪಕ್ಷವಾಗಿ ಸಮಾಜವಾದಿಗಳು, ಬಂಡವಾಳಶಾಹಿಗಳು, ಹಿಂದುತ್ವವಾದಿಗಳು ಎಂದೆಲ್ಲಾ ಒಡೆದುಕೊಂಡಿದ್ದೇವೆ. ಒಂದು ದೇಶದಲ್ಲಿ ಬದಲಾವಣೆ ಸಾಧ್ಯ ಎಂಬುದನ್ನು ತೋರಿಸಬೇಕಾದರೆ ಒಂದು ಬೆಟ್ಟದ ಹಾಗೆ ಗಟ್ಟಿಯಾಗಿರುವ ಯಾವ ಬದಲಾವಣೆಯೂ ಇಲ್ಲದಂತೆ ನಮ್ಮನ್ನು ಆಳುತ್ತಿರುವ ಕಾಂಗ್ರೆಸ್ಸನ್ನು ಬದಲಾಯಿಸುವುದು ಸಾಧ್ಯ ಎಂಬುದನ್ನು ಜನರಿಗೆ ತೋರಿಸಬೇಕು. ಒಂದು ಸಾರಿಯಾದರೂ ಒಂದು ಪಕ್ಷವನ್ನು ಬದಲಾಯಿಸುವುದು ಸಾಧ್ಯ ಎಂಬುದನ್ನು ಸಾಬೀತು ಮಾಡಿದರೆ ಜನ ಕ್ರಿಯಾಶೀಲರಾಗುತ್ತಾರೆ. ಆದ್ದರಿಂದ ಜನರನ್ನು ಕ್ರಿಯಾಶೀಲರಾಗಿಸಲು ನಾವೆಲ್ಲಾ –  ಬೇರೆ ಬೇರೆ ಪಕ್ಷಗಳಾಗಿ ಒಡೆದಿರುವವರು, ಕಾಂಗ್ರೆಸ್ಸೇತರ ಪಕ್ಷಗಳಲ್ಲಿ ಇರುವವರು –  ಒಂದಾಗಬೇಕು.’

ಎಪ್ಪತ್ತರ ದಶಕದ ನಂತರ ನಡೆಯುತ್ತಿರುವ ರಾಜಕಾರಣವನ್ನು ಕಾಂಗ್ರೆಸ್ಸೇತರ ಒಕ್ಕೂಟಗಳ ರಾಜಕಾರಣ ಎಂದು ಗುರುತಿಸಬಹುದು. ಜಯಪ್ರಕಾಶ್ ನಾರಾಯಣ್‌ ಅವರ ಚಳವಳಿಯ ಜತೆ ಜನಸಂಘವೂ ಗುರುತಿಸಿಕೊಂಡಿತು. ನಾವೆಲ್ಲರೂ ಆಗ ಜನಸಂಘದ ಜತೆ ಕೆಲಸ ಮಾಡಿದೆವು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಆರ್.ಎಸ್‌.ಎಸ್. ಹುಡುಗರ ಜತೆಯೇ ನಾನು ಕೆಲಸ ಮಾಡಿದ್ದೆ. ಆಗಲೂ ನನಗೊಂದು ಸಮಸ್ಯೆ ಇತ್ತು. ಇದರ ಕುರಿತು ನಾನು ಆರ್.ಎಸ್.ಎಸ್. ನವರ ಜತೆಯೇ ಚರ್ಚೆ ಮಾಡಿದ್ದೆ.

ತುರ್ತು ಪರಿಸ್ಥಿತಿಯಲ್ಲಿ ವಿರೋಧಿಸುವ ಚಳವಳಿಯ ದಿನಗಳಲ್ಲಿ ಆರ್‌ಎಸ್‌ಎಸ್ ನ ಪ್ರಮುಖ ಕಾರ್ಯಕರ್ತರಲ್ಲಿ ಒಬ್ಬರಾದ ಮಧ್ವರಾವ್ ಎಂಬವರು ನಮ್ಮ ಮನೆಗೆ ವೇಷ ಮರೆಸಿಕೊಂಡು ಬಂದಿದ್ದರು. ಬಂದವರು ‘ನಾನು ಯಾರು ಗೊತ್ತಾಯ್ತಾ?’ ಎಂದು ಕೇಳಿದರು. ನಾನು ಗೊತ್ತಾಯ್ತು ಎಂದೆ. ಅವರು ‘ನೀವು ನಮ್ಮ ಜತೆ ಸಹಕರಿಸಬೇಕು’ ಎಂದು ಕೇಳಿಕೊಂಡರು.

ಸಹಕರಿಸಲು ಒಪ್ಪಿಕೊಂಡ ನಾನು ಅವರ ಮುಂದೆ ನನ್ನ ಸಮಸ್ಯೆಯನ್ನು ಇಟ್ಟೆ –  ನೀವು ಯಾಕೆ ಇಂದಿರಾಗಾಂಧಿಯನ್ನು ವಿರೋಧಿಸುತ್ತೀರಿ? ಆರ್.ಎಸ್.ಎಸ್.ನ ಎಲ್ಲ ತತ್ವಗಳನ್ನೂ ಇಂದಿರಾ ಗಾಂಧಿಯವರೇ ಜಾರಿಗೆ ತರುತ್ತಿದ್ದಾರೆ. ಪಾಕಿಸ್ತಾನವನ್ನು ಒಡೆದರು, ಅಣುಬಾಂಬ್‌ ತಯಾರಿಸಿದರು, ಸಂಜಯ್‌ಗಾಂಧಿ ನೇತೃತ್ವದಲ್ಲಿ ಮುಸ್ಲಿಮ್ಮರ ಸಂತಾನಶಕ್ತಿಯ ಹರಣವೂ ನಡೆಯುತ್ತಿದೆ. ಇಷ್ಟಾಗಿಯೂ ಆರ್‌.ಎಸ್‌.ಎಸ್. ಯಾಕೆ ಇಂದಿರಾಗಾಂಧಿಯನ್ನು ವಿರೋಧಿಸಬೇಕು?

ಮಧ್ವರಾಯರು ‘ಹೌದು, ನೀವು ಹೇಳೋದೂ ನಿಜ. ಆದರೂ ವಿರೋಧಿಸುತ್ತಾ ಇದ್ದೇವಲ್ಲಾ, ನಮ್ಮನ್ನು ನಂಬಿ’ ಎಂದರು. ನಾವು ನಂಬಿದೆವು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನಾವೆಲ್ಲಾ ನಂಬುವಂಥ ಮನಸ್ಥಿತಿಯಲ್ಲಿ ಇದ್ದೆವು. ಆಮೇಲೇನಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ಸೇತರ ರಾಜಕಾರಣವೂ ಒಡೆದುಕೊಂಡಿತು. ಜನಸಂಘ ದೂರ ಹೋಯಿತು. ಮುಂದೆ ಅದು ಭಾರತೀಯ ಜನತಾ ಪಕ್ಷವಾಯಿತು.

ಈ ಬೆಳವಣಿಗೆಗಳ ನಂತರ ಮೂರನೇ ಶಕ್ತಿಯ ಪರಿಕಲ್ಪನೆ ಹುಟ್ಟಿಕೊಂಡಿತು. ವಿ.ಪಿ. ಸಿಂಗ್‌ ಅವರಿಗೆ ಈ ಮಹತ್ವಾಕಾಂಕ್ಷೆ ಇತ್ತು. ಹೀಗೇ ಚಂದ್ರಶೇಖರ್‌, ರಾಮಕೃಷ್ಣ ಹೆಗಡೆ, ದೇವೇಗೌಡ ಇವರೆಲ್ಲರೂ ಮೂರನೇ ಶಕ್ತಿಯೊಂದನ್ನು ಬೆಳೆಸುವ ಪ್ರಯತ್ನದಲ್ಲಿ ತೊಡಗಿದರು. ಆದರೆ ಈಗಿನ ಸ್ಥಿತಿಯನ್ನು ನೋಡಿದರೆ ಈ ಮೂರನೇ ಶಕ್ತಿಯನ್ನು ನಂಬುವುದಕ್ಕೆ ಸಾಧ್ಯ ಇಲ್ಲ ಅನ್ನಿಸುತ್ತಿದೆ. ಈ ಮೂರನೇ ಶಕ್ತಿ ಒಂದೋ ಕಾಂಗ್ರೆಸ್ ಜತೆಗೆ ಹೋಗುತ್ತೆ. ಇಲ್ಲವೇ ಬಿಜೆಪಿಯ ಜತೆಗೆ ಹೋಗುತ್ತೆ. ಯಾವತ್ತೂ ಅದು ‘ಮೂರನೇ’ ಶಕ್ತಿಯಾಗಿ ನಿಲ್ಲುವುದಿಲ್ಲ. ಅಂದರೆ ಮೂರನೇ ಶಕ್ತಿ ಎನ್ನುವುದು ಸಂಪೂರ್ಣ ಅವಕಾಶವಾದಿ ರಾಜಕಾರಣವಾಗಿ ಬಿಡುತ್ತದೆ.

ಮೂರನೇ ಶಕ್ತಿಯ ಈ ಎಲ್ಲಾ ಮಿತಿಗಳ ಮಧ್ಯೆಯೂ ನಮಗೊಂದು ಭರವಸೆ ಇತ್ತು. ಈ ಭರವಸೆಗೆ ಸಂಬಂಧ ಪಟ್ಟಂತೆ ನನ್ನ ಗೆಳೆಯ ವೆಂಕಟರಾಮ್‌ ಅವರ ಅಭಿಪ್ರಾಯವನ್ನು ಇಲ್ಲಿ ಉಲ್ಲೇಖಿಸಬಹುದು. ‘ಆರ್‌.ಎಸ್‌.ಎಸ್‌. ನವರು ಒಂದು ದೊಡ್ಡ ಜನಾಂದೋಲನದಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಅವರು ನಮ್ಮ ಮುಸ್ಲಿಂ ವಿರೋಧಿ ನಿಲುವನ್ನು ಬದಲಾಯಿಸಿಕೊಳ್ಳಬಹುದು. ಒಂದು ದೊಡ್ಡ ಜನಾಂದೋಲನದಲ್ಲಿ ಯಾರೂ extremist ಆಗಿರಲು ಸಾಧ್ಯವಿಲ್ಲ.’ ಈ ಅಭಿಪ್ರಾಯವನ್ನು ಸಮರ್ಥಿಸಲು ವೆಂಕಟರಾಮ್ ಜೈಲಿನಲ್ಲಿ ತಮ್ಮ ಜತೆ ಸಖ್ಯ ಬೆಳೆಸಿಕೊಂಡ ಸಿಂಧ್ಯ ಬದಲಾಗಿದ್ದನ್ನು ಉದಾಹರಣೆಯಾಗಿ ಹೇಳುತ್ತಿದ್ದರು.

ಇದೇ ರೀತಿ ಇನ್ನೊಂದು ಭರವಸೆಯೂ ಇತ್ತು. ಕೆಲವು ಪಕ್ಷಗಳು ಬಹಳಷ್ಟು ಓಟುಗಳನ್ನು ಗಳಿಸಿದ್ದರೂ ಅವಕ್ಕೆ ಶಾಸನ ಸಭೆಯಲ್ಲಿ ಒಂದು ಸ್ಥಾನ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಜನಸಂಘವೂ ಇಂಥದ್ದೇ ಸ್ಥಿತಿಯಲ್ಲಿತ್ತು. ಇಂಥವರು ಶಾಸನ ಸಭೆಗಳಲ್ಲಿ ಸ್ಥಾನ ಪಡೆದರೆ ಅವರು ತಮ್ಮ ‘ಉಗ್ರ’ ನಿಲುವುಗಳನ್ನು ಸಡಿಲಗೊಳಿಸಿಕೊಳ್ಳಲೇ ಬೇಕಾಗುತ್ತದೆ ಎಂಬ ನಂಬಿಕೆಯೂ ಇತ್ತು. ಅನೇಕ ಬಾರಿ ಮೂರನೇ ಶಕ್ತಿ ಎಂದು ಕರೆಯಿಸಿಕೊಳ್ಳುವ ಗುಂಪಿನಲ್ಲಿದ್ದ ಪಕ್ಷಗಳೇ ಬಿಜೆಪಿಯ ಜತೆಗೆ ಹೋದಾಗ ಕೆಲವರು ‘ನಾವು ಜತೆಗೆ ಇರುವುದರಿಂದ ಬಿಜೆಪಿ ತನ್ನ ನಿಲುವುಗಳನ್ನು ಬದಲಾಯಿಸಿಕೊಳ್ಳುತ್ತದೆ’ ಎಂದು ಪ್ರಾಮಾಣಿಕವಾಗಿಯೇ ನಂಬಿದ್ದರು.

* * *

ನನಗೆ ಇತ್ತೀಚೆಗೆ ಅನ್ನಿಸುತ್ತಿರುವುದೇ ಬೇರೇ. ನಾನು ಮೇಲೆ ಹೇಳಿದ ಭರವಸೆಗಳು ಮತ್ತು ನಂಬಿಕೆಗಳೆಲ್ಲಾ ನಿಜವಾದುವಲ್ಲ. ಪ್ರತ್ಯಕ್ಷವಾಗಿ ರಾಜಕೀಯದಲ್ಲಿ ಇಲ್ಲದೆ ತಾತ್ವಿಕವಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ನಮ್ಮಂಥವರಿಗೆ ಇವೆಲ್ಲಾ ವಿಚಾರ ಮಾಡುವುದಕ್ಕೆ ಚೆನ್ನಾಗಿರುವ ವಿಷಯಗಳು ಮಾತ್ರ. ಏಕೆಂದರೆ ರಾಜಕಾರಣದಲ್ಲಿ ಪ್ರತ್ಯಕ್ಷವಾಗಿ ಇರುವವರು ‘ಲೆಕ್ಕಾಚಾರದ ರಾಜಕಾರಣ’ ಮಾಡುತ್ತಿರುತ್ತಾರೆ. ಉದಾಹರಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲವಾಗಿರುವ ಒಂದು ಕ್ಷೇತ್ರವನ್ನು ತೆಗೆದುಕೊಂಡು ನೋಡೋಣ. ಇಲ್ಲಿ ಕೋಮುಗಲಭೆ ನಡೆದು ಒಬ್ಬ ಮುಸ್ಲಿಂ ಸತ್ತರೆ ಮುಸ್ಲಿಮರ ಓಟುಗಳೆಲ್ಲಾ ಧ್ರುವೀಕರಣಗೊಂಡು ಕಾಂಗ್ರೆಸ್ ಗೆಲ್ಲುತ್ತದೆ. ಒಬ್ಬ ಹಿಂದು ಸತ್ತರೆ ಹಿಂದೂಗಳ ಓಟು ಧ್ರುವೀಕರಣಗೊಂಡು ಬಿಜೆಪಿ ಗೆಲ್ಲುತ್ತದ. ಲೆಕ್ಕಾಚಾರದ ರಾಜಕಾರಣದ ಸಿನಿಕತನಗಳು ಯಾವ ಮಟ್ಟದಲ್ಲಿ ಇರುತ್ತವೆ ಎಂದರೆ ನಾವು ಗೆಲ್ಲಬೇಕಾದರೆ ಕೋಮುಗಲಭೆ ನಡದು ಮುಸ್ಲಿಮನೊಬ್ಬ ಸಾಯಬೇಕು ಎಂದು ಸೆಕ್ಯುಲರಿಸ್ಟರೂ, ಹಿಂದೂ ಸತ್ತರೆ ನಮಗೆ ಅನುಕೂಲವೆಂದು ಹಿಂದುತ್ವವಾದಿಗಳೂ ಬಯಸುತ್ತಾರೆ. ಆದ್ದರಿಂದ ಈ ಸೆಕ್ಯುಲರ್‌ವಾದ ಮತ್ತು ಹಿಂದುತ್ವವಾದಗಳೆರಡೂ ತಮ್ಮ ನಿಜವಾದ ಅರ್ಥಗಳನ್ನು ಕಳೆದುಕೊಂಡಿವೆ.

‘ನಾನು ಮುಸ್ಲಿಮರ ಸ್ನೇಹಿತ, ಆದರೆ ಪಾಕಿಸ್ತಾನದ ವಿರೋಧಿ’ ಎಂದು ಲೋಹಿಯಾ ಹೇಳುತ್ತಿದ್ದರು. ಈ ಹೇಳಿಕೆಯ ಧ್ವನಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಪಾಕಿಸ್ತಾನದ ಸೃಷ್ಟಿಯ ಹಿಂದಿದ್ದ ಸಿದ್ಧಾಂತ ಮತ್ತು ಆರ್‌ಎಸ್‌ಎಸ್ ಪ್ರತಿಪಾದಿಸುತ್ತಿದ್ದ ಸಿದ್ಧಾಂತಗಳೆರಡೂ ಮತವನ್ನು ಆಧಾರವಾಗಿಟ್ಟುಕೊಂಡಿದ್ದವು. ಆದ್ದರಿಂದ ಇವೆರಡೂ ಒಂದೇ ಎಂದು ಲೋಹಿಯಾ ಭಾವಿಸಿದ್ದರು.

ಲೋಹಿಯಾ ಇದನ್ನು ಹೇಳುತ್ತಿದ್ದ ಕಾಲದ ರಾಜಕಾರಣಕ್ಕೂ ಈಗಿನ ರಾಜಕಾರಣಕ್ಕೂ ಬಹಳ ವ್ಯತ್ಯಾಸವಿದೆ. ಸೆಕ್ಯುಲರ್‌ವಾದಿ ರಾಜಕಾರಣ ಮತ್ತು ಮತೀಯವಾದಿ ರಾಜಕಾರಣವಾದ ಮಧ್ಯೆ ನೆಹರು ಅವರ ಕಾಲದಲ್ಲಿ ಇದ್ದ ವ್ಯತ್ಯಾಸ ಈಗ ಕಣ್ಮರೆಯಾಗಿದೆ. ಕಾಂಗ್ರೆಸ್ ಕೂಡಾ ಹೇಗೆ ಹಿಂದೂಗಳನ್ನು ಗೆಲ್ಲಬಹುದು ಎಂಬುದನ್ನು ಯೋಚನೆ ಮಾಡುತ್ತಾ ಮಾಡುತ್ತಾ ಅಯೋಧ್ಯೆಯಲ್ಲಿ ಪೂಜೆಗೆ ಅವಕಾಶ ಮಾಡಿಕೊಟ್ಟಿತು. ನಾವು ಕನ್ಸರ್ವೇಟಿವ್ ಎಂದು ಭಾವಿಸುವ ಸರದಾರ್ ಪಟೇಲ್‌ ಅವರ ಕಾಲದಲ್ಲಿ ಕಾಂಗ್ರೆಸ್‌ಗೆ ಸಾಧ್ಯವಾಗದೆ ಇದ್ದದ್ದು ರಾಜೀವ್‌ಗಾಂಧಿ ಕಾಲದಲ್ಲಿ ಸಾಧ್ಯವಾಯಿತು. ಬಿಜೆಪಿ ಅಯೋಧ್ಯೆಯ ವಿಷಯವನ್ನು ಮುಂದಿಟ್ಟುಕೊಂಡು ಲಾಭ ಮಾಡಿಕೊಳ್ಳುತ್ತದೆ ಎಂಬ ಭಯದಲ್ಲಿಯೇ ಕಾಂಗ್ರೆಸ್ ಇದನ್ನು ಮಾಡಿತು. ಈ ಬಗೆಯ ಲೆಕ್ಕಾಚಾರದ ರಾಜಕಾರಣ ನಿಜವಾಗಿಯೂ ಬಡಪಾಯಿಗಳಾದ, ದುಃಖಿಗಳಾದ, ಶೋಷಿತರಾದ ಜನರನ್ನು ಓಟ್‌ಬ್ಯಾಂಕ್‌ಗಳನ್ನಾಗಿ ಪರಿವರ್ತಿಸಿಬಿಟ್ಟಿದೆ. ದಲಿತರು, ಮುಸ್ಲಿಮರೆಲ್ಲಾ ಓಟ್ ಬ್ಯಾಂಕ್‌ಗಳಾಗಿರುವುದು ಹೀಗೆ.

ನಾವು ಮೂರನೇ ಶಕ್ತಿ ಎಂದು ಕರೆಯುವ ರಾಜಕೀಯ ಪಕ್ಷಗಳಿದ್ದಾವಲ್ಲ, ಅವೂ ಅಷ್ಟೇ. ಅವಕ್ಕೆ ಮುಸ್ಲಿಮರ ಓಟುಗಳು ಅಗತ್ಯ ಅನಿಸಿದಾಗಲೆಲ್ಲಾ ಕಾಂಗ್ರೆಸ್ ಜತೆ ಇರುತ್ತವೆ. ಮುಸ್ಲಿಮರ ಓಟುಗಳು ಸಿಗುವುದಿಲ್ಲ ಅನ್ನಿಸಿದಾಗ ಬಿಜೆಪಿ ಜತೆ ಸೇರಿಕೊಳ್ಳುತ್ತವೆ. ಈಗ ಕರ್ನಾಟಕದ ಜೆಡಿಎಸ್‌ನಲ್ಲಿ ಸಂಭವಿಸಿರುವುದೂ ಇದೇ. ‘ನಮಗೇನೂ ಸಾಕಷ್ಟು ಮುಸ್ಲಿಮರ ಓಟುಗಳು ಸಿಗುವುದಿಲ್ಲ. ಲಿಂಗಾಯತರು, ಒಕ್ಕಲಿಗರು ಮತ್ತು ಬ್ರಾಹ್ಮಣರನ್ನು ಬಿಡದೇ ಹೊಂದಾಣಿಕೆ ಮಾಡಿಕೊಳ್ಳಬೇಕು’ ಎಂದು ಜೆಡಿಎಸ್‌ ಭಾವಿಸರಬಹುದು. ಯಾಕೆಂದರೆ ಸಿದ್ದರಾಮಯ್ಯ ಬಣದವರು ಅಲ್ಪಸಂಖ್ಯಾತರನ್ನು ಮತ್ತು ಬಹಳ ಹಿಂದುಳಿದವರನ್ನು ಸೆಳೆದಿದ್ದಾರೆ. ಆದ್ದರಿಂದ ಲಿಂಗಾಯತರು ಮತ್ತು ಒಕ್ಕಲಿಗರು ರಾಜಕಾರಣ ಮಾಡಬೇಕು ಎಂದು ಅವರಿಗೆ ಅನ್ನಿಸಿಬಿಟ್ಟಿದ್ದರೆ ಅವರು ಏನೋ ಒಂದು ಕಾರಣ ಹುಡುಕಿಕೊಂಡಾದರೂ ಬಿಜೆಪಿಯ ಜೊತೆ ಸಖ್ಯ ಸಾಧಿಸಿಕೊಳ್ಳುತ್ತಾರೆ ಅಷ್ಟೇ.

ಈಗ ಕರ್ನಾಟಕದಲ್ಲಿ ನಿಜಕ್ಕೂ ನಡೆಯುತ್ತಿರುವುದು ಜಾತಿ ರಾಜಕಾರಣ. ಇದನ್ನು ಯಾವ ನಾಚಿಕೆಯೂ ಇಲ್ಲದೆ ಮಾಡಲು ಜೆಡಿಎಸ್ ಹೊರಟಿರುವುದರಿಂದ ನನಗೆ ಬಿಜೆಪಿಯ ತಪ್ಪು ಕಾಣಿಸುತ್ತಿಲ್ಲ. ಯಾಕೆಂದರೆ ಅವರು ಅಷ್ಟು ಸಂಖ್ಯೆಯಲ್ಲಿ ಗೆದ್ದಿದ್ದಾರೆ. ತಾವು ಸರಕಾರ ರಚಿಸಬೇಕು ಎಂದು ಭಾವಿಸುವುದು ಬಹಳ ಸಹಜವಾದುದು. ಆದರೆ ಜೆಡಿಎಸ್‌ನವರು ಮಾತ್ರ ಒಂದು ದೊಡ್ಡನಾಟಕ ಆಡುತ್ತಿದ್ದಾರೆ. ಇದರಿಂದ ಕೊನೆಯಲ್ಲಿ ಯಾರೂ ಮೋಸ ಹೋಗಲಾರರು.

ಕಳೆದ ಚುನಾವಣೆಯ ವೇಳೆ ನಾನು; ಎಸ್‌.ಎಂ. ಕೃಷ್ಣ ಮತ್ತು ಎಚ್‌.ಡಿ. ದೇವೇಗೌಡರಿಗೆ ಪತ್ರ ಬರೆದು ಹಿಂದೆ ಹೇಗೆ ಕಾಂಗ್ರೆಸ್ಸೇತರ ರಾಜಕಾರಣ ಅನಿವಾರ್ಯವಾಗಿತ್ತೋ ಈಗ ಬಿಜೆಪಿಯೇತರ ರಾಜಕಾರಣ ಅನಿವಾರ್ಯವಾಗಿದೆ. ಆದ್ದರಿಂದ ನೀವಿಬ್ಬರೂ ನನಗೆ ಬೆಂಬಲಿಸಿ. ನಾನು ಬಿಜೆಪಿಯ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದೆ. ಆಗ ಬಹಳ ಜನ ನಾನು ಚುನಾವಣೆಗೆ ನಿಲ್ಲಲು ಆಸಕ್ತನಾಗಿದ್ದೇನೆ ಅಂದುಕೊಂಡಿದ್ದರು. ಆದರೆ ನಾನೊಂದು ರಾಜಕೀಯ ತಾತ್ವಿಕತೆಯನ್ನು ಮುಂದಿಡಲು ಪ್ರಯತ್ನಿಸುತ್ತಿದ್ದೆ. ‘ಈಗ ನೀವು ಜಗಳವಾಡುತ್ತಿದ್ದರೂ ಮುಂದೆ ನೀವಿಬ್ಬರೂ ಒಂದಾಗಿ ಸರಕಾರ ರಚಿಸಬೇಕಾಗಬಹುದು. ಅಂಥದ್ದೊಂದು ಹೊಂದಾಣಿಕೆಯನ್ನು ಒಂದು ಕ್ಷೇತ್ರದಲ್ಲಾದರೂ ಸಾಂಕೇತಿಕವಾಗಿ ತೋರಿಸಿ’ ಎಂದು ಗೌಡರು ಮತ್ತು ಕೃಷ್ಣರಿಗೆ ಹೇಳಿದ್ದೆ.

ಮುಂದೆ ನಾನು ಹೇಳಿದ್ದು ನಿಜವಾಯಿತು. ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಳು ಒಟ್ಟಾಗಿಯೇ ಸರಕಾರ ರಚಿಸಿದವು. ಇದಾದ ಮೇಲೆ ಪಂಚಾಯತ್‌ ಚುನಾವಣೆಯ ಸಂದರ್ಭದಲ್ಲಿಯಾದರೂ ಇಬ್ಬರೂ ಒಟ್ಟಾಗಿಯೇ ಚುನಾವಣೆ ಎದುರಿಸಬಹುದಿತ್ತು. ಆದರೆ ಆಗ ಮತ್ತೆ ಒಡೆದುಕೊಂಡರು. ಅಂದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಹೊಂದಾಣಿಕೆ ಮಾಡಿಕೊಳ್ಳುತ್ತಿವೆ. ಇದು ಕೂಡಾ ನಿಜವಾದ ಹೊಂದಾಣಿಕೆ ಆಗಲಾರದು. ಮುಸ್ಲಿಮರ ಓಟುಗಳು ತಮಗೆ ಬೇಕು ಎನ್ನುವ ಕಾರಣದಿಂದ ಜೆಡಿಎಸ್‌ಎಲ್ಲೋ ಒಂದು ಕಡೆ ಬಿಜೆಪಿಯ ತತ್ವಗಳನ್ನು ಟೀಕಿಸುತ್ತಾ ‘ಮಡಿ’ಯಾಗಿಯೇ ಉಳಿಯಲು ಪ್ರಯತ್ನಿಸುತ್ತದೆ. ಹಾಗೇ ಭಾರತೀಯ ಜನತಾ ಪಕ್ಷವೂ ಅಯೋಧ್ಯೆಯಂಥ ವಿಷಯಗಳಲ್ಲಿ ತನ್ನ ನಿಲುವನ್ನು ಹೆಚ್ಚು ಗಟ್ಟಿಯಾಗಿ ಪ್ರತಿಪಾದಿಸುತ್ತಾ ಹೋಗುತ್ತದೆ. ಇದರರ್ಥ ಜೆಡಿಎಸ್‌ಕೂಡಾ ಬದಲಾಗುವುದಿಲ್ಲ. ಬಿಜೆಪಿ ಕೂಡಾ ಬದಲಾಗುವುದಿಲ್ಲ. ಹೊಂದಾಣಿಕೆ ಎಂಬುದು ಕೇವಲ ವ್ಯವಸ್ಥೆಯನ್ನು ನಡೆಸಿಕೊಂಡು ಹೋಗುವ ಸಾಂದರ್ಭಿಕ ಉಪಾಯ ಮಾತ್ರವಾಗಿ ಉಳಿಯುತ್ತದೆ. ವ್ಯವಸ್ಥೆಯಲ್ಲೇ ಒಂದು ನೈತಿಕ ಮೌಲ್ಯವನ್ನು ನೋಡುವ ನಮ್ಮಂಥವರಿಗೆ ಇದನ್ನು ಒಪ್ಪಿಕೊಳ್ಳುವುದು ಅಸಾಧ್ಯ.

ಹಾಗೆಂದು ನಾವು ನಿರಾಶರಾಗಬೇಕಿಲ್ಲ. ನಾವು ಮೂರನೇ ಶಕ್ತಿಯ ರಾಜಕಾರಣದ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು ನಿಜವಾದ ಮೂರನೇ ಶಕ್ತಿ ಎಲ್ಲಿದೆ ಎಂಬುದನ್ನು ಗುರುತಿಸಲು ಮುಂದಾಗಬೇಕು. ಪರಿಸರ ಹೋರಾಟಗಳಲ್ಲಿ ದೊಡ್ಡ ಯೋಜನೆಗಳನ್ನು ವಿರೋಧಿಸುವುದರಲ್ಲಿ, ನೈಸರ್ಗಿಕ ಕೃತಿ ಆಂದೋಲನಗಳಲ್ಲಿ ಈ ಮೂರನೇ ಶಕ್ತಿ ಇದೆ. ಇಂಥ ಮನಸ್ಸುಗಳು ಕರ್ನಾಟಕಾದ್ಯಂತ, ದೇಶಾದ್ಯಂತ ಇವೆ. ಇವು ಎಲ್ಲ ನಿರಾಶೆಗಳ ಮಧ್ಯೆಯೂ ಭರವಸೆ ಹುಟಿಸುತ್ತಿವೆ.

೨೯..೨೦೦೬

* * *