ರಾಜಕುಮಾರರು ಅಕ್ಷರವಾಗಬೇಕು ಎಂಬ ನನ್ನ ಆಸೆಗೆ ಪೂರಕವಾಗಿ ಇನ್ನಷ್ಟು ಮಾತುಗಳು. ಬೇಂದ್ರೆಯವರು ತಮ್ಮ ಪ್ರಸಿದ್ಧ ಮುನ್ನುಡಿಯೊಂದರಲ್ಲಿ ಕನ್ನಡದ ಹಲವು ಭಾಷಾ ಪ್ರಬೇಧಗಳು ಹೆದ್ದಾರಿ ಸೇರಲು ಇರುವ ಒಳದಾರಿಗಳು ಎಂಬರ್ಥ ಬರುವ ಮಾತಾಡಿದ್ದರು. ಈ ಎಲ್ಲ ಒಳದಾರಿಗಳಲ್ಲಿ ನಡೆದಾಡುತ್ತಲೇ ಕನ್ನಡದ ಮುಖ್ಯ ಹಾದಿಯೊಂದನ್ನು ಸೃಷ್ಟಿಸುವ ಆಶಯವನ್ನು ಪ್ರಕಟಿಸಿದ್ದರು. ಈ ಕೆಲಸ ಸದ್ದಿಲ್ಲದೆ ನಡೆದಿದೆ –  ಬೇಂದ್ರೆಯಿಂದ ಮೊದಲಾಗಿ ಕಂಬಾರ, ಮಹದೇವರ ತನಕ. ಈ ನಮ್ಮ ಈಗಿನ ಕನ್ನಡದ ಮುಖ್ಯವಾಹಿನಿ ಕೇವಲ ಮೈಸೂರು ದೇಶದ ಕನ್ನಡವಾಗಿ ಉಳಿದಿಲ್ಲ. ಮಾತಿನ ಓಘದಲ್ಲಿ ಗತ್ತಿನಲ್ಲಿ, ಏರಿಳಿಕೆಯ ವಿನ್ಯಾಸಗಳಲ್ಲಿ, ಪ್ರಾದೇಶಿಕತೆಯ ತನ್ನ ವಾಸನೆಯನ್ನು ಉಳಿಸಿಕೊಂಡೇ ಎಲ್ಲರ ಕನ್ನಡವೊಂದು ಸೃಷ್ಟಿಯಾಗುತ್ತಲೇ ಇದೆ. ವೈಚಾರಿಕೆಯ ಸಂವಹನದ ಗದ್ಯಕ್ಕೆ ಇದು ಅಗತ್ಯ. ಕನ್ನಡ ಇವತ್ತು ಭಾವವಾಹಿನಿ ಮಾತ್ರವಲ್ಲ; ಜ್ಞಾನವಾಹಿನಿಯೂ ಹೌದು. ವಿಜ್ಞಾನ, ಎಂಜಿನಿಯರಿಂಗ್, ಮೆಡಿಕಲ್, ಸಮಾಜಶಾಸ್ತ್ರ ಚರಿತ್ರೆ –  ಏನನ್ನಾದರೂ ಕನ್ನಡದಲ್ಲಿ ಕಲಿಸುವುದು ಸಾಧ್ಯವಾಗಿದೆ.

‘ಶುದ್ಧವೆಂದು’ ಹೇಳಬಹುದಾದ ಕನ್ನಡವನ್ನು ಕಿಂಚಿತ್ತೂ ಕೃತಕವೆನ್ನಿಸದಂತೆ ಮಾತಾಡಬಲ್ಲವರಲ್ಲಿ ರಾಜಕುಮಾರರು ಮುಖ್ಯರು. ಆದ್ದರಿಂದ ಕನ್ನಡ ಅಕ್ಷರ ಕಲಿಯುವವರಿಗೆ ಅಕ್ಷರಗಳನ್ನು ಒಟ್ಟಾಗಿ ಶಬ್ದವಾಗಿ ಗ್ರಹಿಸಬೇಕಾದ ಕಠಿಣವಾದ ಮಾನಸಿಕ ಪ್ರಕ್ರಿಯೆ ರಾಜಕುಮಾರರ ಹಾಡುಗಳನ್ನೂ ಸಂಭಾಷಣೆಗಳನ್ನೂ ಶೀರ್ಷಿಕೆ ಸಮೇತವಾಗಿ ನೋಡುತ್ತಲೇ ಕೇಳುವಾಗ ಸುಲಭವಾಗುತ್ತದೆ ಮಾತ್ರಲ್ಲ ಸುಖದಾಯಕವೂ ಆಗುತ್ತದೆ ಎಂದು ನನ್ನ ನಂಬಿಕೆ.

ಇದು ಈ ಸುವರ್ಣ ಕರ್ನಾಟಕ ಆಚರಣೆಯ ಅತಿ ಮುಖ್ಯ ಕಾರ್ಯಕ್ರಮವಾಗಬೇಕೆಂದು ನನ್ನ ಆಶಯ. ರಾಜಕುಮಾರರು ತಮ್ಮ ‘ಅಭಿಮಾನಿ ದೇವರುಗಳು’ ಎಂದು ಕರೆಯುತ್ತಿದ್ದ ಜನಸಮೂಹ ಒಂದು ಸಮುದಾಯವಾಗಿ ಈ ಅಕ್ಷರ ಯಜ್ಞರ ಪಾಲುದಾರರಾಗಬೇಕೆಂದು ನನ್ನ ಆಸೆ. ಕನ್ನಡದ ಎಲ್ಲ ಟೀವಿ ಚಾನೆಲ್ಲುಗಳೂ ಶೀರ್ಷಿಕೆ ಸಮೇತ ಅವರ ಹಾಡುಗಳನ್ನು ಬಿತ್ತರಿಸಿ ಜನಪ್ರಿಯ ಮಾಡಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಈ ಕಾರ್ಯಕ್ರಮದ ಸೀಡಿಗಳು ಸಿಗುವಂತಿರಬೇಕು. ಅಕ್ಷರ ಪ್ರಚಾರದ ಆಂದೋಲನ ಮತ್ತೆ ಪ್ರಾರಂಭವಾಗಿ ಈ ಸೀಡಿಗಳ ಬಳಕೆ ಮಾಡಿಕೊಳ್ಳಬೇಕು. ರಾಜಕುಮಾರರ ನೆನಪಿಗೆ ಅರ್ಪಿತವೆಂದು ಉಳಿದ ಮುಖ್ಯ ಜನಪ್ರಿಯ ನಟರ ಹಾಡುಗಳೂ ಸಂಭಾಷಣೆಗಳೂ ಸಿಡಿಗಳಾಗಿ ದೊರೆಯಬೇಕು. ರಾಜಕುಮಾರರು ನಟಿಸಿದ ಇಡೀ ಸಿನಿಮಾಗಳೂ ಅವುಗಳಲ್ಲಿ ಮುಖ್ಯವಾದ ಕೆಲವಾದರೂ, ಕನ್ನಡ ಶೀರ್ಷಿಕೆ ಸಮೇತ ದೊರೆಯಬೇಕು. ಹೀಗೆ ರಾಜಕುಮಾರರು ಈ ಸುವರ್ಣ ಕರ್ನಾಟಕದ ಆಚರಣೆಯಲ್ಲಿ ಅಕ್ಷರವಾಗಬೇಕು.

ಇದರ ಜೊತೆಯಲ್ಲೇ ಇಂದಿಗೂ ಅರ್ಥವಾಗುವ ನಮ್ಮ ವಚನಗಳನ್ನೂ ದಾಸರ ಪದಗಳನ್ನೂ ವೀಡಿಯೋ ಮಾಡಿ ಶೀರ್ಷಿಕೆ ಸಮೇತ ಬಳಸಬಹುದು. ಬೈಬಲ್, ಖೊರಾನುಗಳ ಕನ್ನಡ ಅನುವಾದಗಳನ್ನೂ ಬಳಸಬಹುದು. ಜನರು ಪ್ರೀತಿಸುವುದನ್ನು ಬಳಸಿಯೇ ಅವರನ್ನು ಅಕ್ಷರಸ್ಥರನ್ನಾಗಿ ಮಾಡಬೇಕು. ತೆಲುಗಿನಲ್ಲಿ ಒಂದು ಕಥೆಯನ್ನು ಓದಲು ಕಲಿತ ಮಹಿಳೆಯರು ಸಾರಾಯಿ ವಿರೋಧಿಸಿ ಚಳುವಳಿ ಮಾಡಿ ಒಂದು ಸರ್ಕಾರವನ್ನೇ ಅಲ್ಲಾಡಿಸಿದರು, ಅಲ್ಲವೆ? ನಮ್ಮ ಅನಕ್ಷರಸ್ಥರು ಅಸಂಸ್ಕೃತರೇನೂ ಅಲ್ಲ.

ಹೀಗೆ ಅಕ್ಷರಗಳನ್ನು ಪದಗಳಾಗಿ ಗುರುತಿಸಲು ಕಲಿಯುತ್ತಿದ್ದಂತೆಯೇ ಈ ನಮ್ಮ ರಾಜ್ಯಾಂಗದ ಆಶಯಗಳಾದ ಸಮಾನತೆ, ಸಾಮಾಜಿಕ ನ್ಯಾಯ, ಆತ್ಮಗೌರವಗಳನ್ನು ಪ್ರಚೋದಿಸುವ ಬರವಣಿಗೆಯನ್ನು ಅವರಿಗೆ ಓದಲು ಕೊಡಬೇಕು. ಮಕ್ಕಳಿಗೂ ವಯಸ್ಕರಿಗೂ ಈಗಾಗಲೇ ಕಾರಂತರು ಬರೆದ ವೈಜ್ಞಾನಿಕ ಕೃತಿಗಳು ಇವೆ. ತೇಜಸ್ವಿಯವರು ಎಲ್ಲ ವಯಸ್ಸಿನವರಿಗೂ ಪ್ರಿಯವಾಗುವಂತೆ ಬರೆಯುತ್ತಿರುವ ಪುಸ್ತಕಗಳು ಇವೆ. ಮೈಸೂರಿನ ರೀಜನಲ್ ರಿಸೋರ್ಸ್ ಸೆಂಟರ್‌ನವರು ತಯಾರಿಸಿದ ಪುಸ್ತಕಗಳು ಇವೆ. ರಾಜಕುಮಾರರ ಮೇಲಿನ ಜನರ ಪ್ರೇಮ ಇಂತಹ ಅಕ್ಷರ ಪ್ರಸಾರದ ಕೆಲಸವನ್ನು ಗೆಲುವಿನಲ್ಲೂ ಉತ್ಸಾಹದಲ್ಲೂ ಮಾಡುವಂತಾಗಬೇಕು.

* * *

ಎಲ್ಲ ಜಾತಿ ಮತಗಳನ್ನೂ ಮೀರಿ ಕನ್ನಡನಾಡು ಒಂದು ಜನ ಸಮುದಾಯವಾಗಬೇಕು, ಇದು ನಮ್ಮ ಆಸೆ. ಸಾವಿರ ವರ್ಷಗಳ ಹಿಂದಿನ ಕವಿರಾಜಮಾರ್ಗದ ಕರ್ತೃವಿನ ಆಶಯ ಕೂಡ ಇದೇ. ಆದರೆ ತನ್ನದೇ ವ್ಯಾಪ್ತಿಯ ಕನ್ನಡದ ಲೋಕ ಜಗತ್ತಿನಲ್ಲಿ ವಿಶಿಷ್ಟವೂ, ತನ್ನ ವಿಶಿಷ್ಟತೆಯಲ್ಲಿ ಜಗತ್ತನ್ನು ಒಳಗೊಳ್ಳಬಲ್ಲ ಔದಾರ್ಯದ್ದೂ ಆಗಿರಬೇಕೆಂಬ ಒತ್ತಾಸೆ ನಮ್ಮ ರಾಜಕಾರಣಿಗಳಲ್ಲೂ. ನಮ್ಮ ಅದೃಷ್ಟವಂತೆ ವ್ಯಾಪಾರಿಗಳಾದ ಐಟಿ ಸಂಸ್ಥೆಗಳಲ್ಲೂ ಕಣ್ಮರೆಯಾಗಿದೆ. ಜಗತ್ತಿಗೂ, ಭಾರತದ ಆಳುವ ವರ್ಗಕ್ಕು ಹಿಡಿದಿರುವ ಧನದಾಹದ ಹುಚ್ಚು ನಮಗೂ ಹಿಡಿದಿರುವಂತೆ ಕಾಣುತ್ತಿದೆ. ರಾಜಕುಮಾರರು ನಿಧನರಾಗಿ, ಅವರ ಮೃತದೇಹವನ್ನು ಎತ್ತೆತ್ತಲೋ ಒಯ್ಯುವುದನ್ನು ಕಂಡ ಜನ ಕುಪಿತರಾದಾಗ ಭಾರತದ ಅಹೋದಿನರಾತ್ರಿಯ ಸುದ್ದಿಚಾನೆಲ್ಲುಗಳನ್ನು ಬಾಧಿಸಿದ್ದು ಬೆಂಗಳೂರಿನಲ್ಲಿ ಇನ್ನು ಮುಂದೆ ವ್ಯಾಪಾರಕ್ಕೆಂದು ಠಿಕಾಣಿ ಹೂಡುವುದು ಕ್ಷೇಮವೆ ಎಂಬುದು. ಇಂತಹ ಜನ ಸಮುದಾಯದ ಹಂಬಲಗಳನ್ನು ವಿಕಾರಗೊಳಿಸುವ ಕರ್ನಾಟಕದ ಮೇಲಿನ ಧನದಾಹೀ ಆಕ್ರಮಣವನ್ನು ಮಾಡುತ್ತಿರುವುದು ಭಾರತದ ಇತರೆ ಭಾಷೆಗಳಾದ ತಮಿಳು, ತೆಲುಗು, ಹಿಂದಿಗಳಲ್ಲ. ಅವೂ ಆಕ್ರಮಣಕ್ಕೆ ಒಳಗಾಗಿವೆ. ಅಮೇರಿಕಾದ ಹಗಲಿಗೆ ನಮ್ಮ ರಾತ್ರಿಗಳನ್ನು ಕಾಲೊನೈಸ್‌ ಮಾಡಲೆಂದು ಇರುವ ಇಂಗ್ಲಿಷ್‌ ಭಾಷೆಯನ್ನು ಮಾತ್ರ ಬಲ್ಲವರಾದ, ಕನ್ನಡದಲ್ಲಿ ಅನಕ್ಷರಸ್ಥರಾದ ಫರಂಗಿ ಮೋಹದ ದೂತ ಪಡೆಯೊಂದರಿಂದ ಇದು ನಡೆಯುತ್ತಿದೆ. ನಮ್ಮ ಎಕಾನಮಿ ಲಿಬರಲೈಸ್, ಆಗಲು ಶುರುವಾದಾಗಿನಿಂದ ಮ್ಯಾನೇಜ್‌ಮೆಂಟ್ ಇನ್ಸ್‌ಟಿಟ್ಯೂಟುಗಳಲ್ಲಿ ತಯಾರಾಗುತ್ತಿರುವ ಅಮೇರಿಕಾಕ್ಕೆ ಸೇರೆಗಾರಿಕೆ ಮಾಡುವ ವರ್ಗ ಇದು (ಇಲ್ಲಿನ ಇಂಗ್ಲಿಷ್‌ ಶಬ್ದಗಳ ಬಳಕೆ ಉದ್ದೇಶಪೂರ್ವಕ). ಈ ವರ್ಗ ನಮ್ಮನ್ನು ಆಳುವುದರಿಂದ ನಮ್ಮ ದೈಹಿಕ, ಮಾನಸಿಕ ಆರೋಗ್ಯ, ನಮ್ಮ ಕೌಟುಂಬಿಕ ವ್ಯವಸ್ಥೆ ನಮ್ಮ ಕೃಷ್ಣ ಸಹಿಷ್ಣುತೆ, ನಮ್ಮ ಔದಾರ್ಯ (ಕಾರಂತರ ಕಾದಂಬರಿಗಳಲ್ಲಿನ ಅತ್ಯಂತ ಬಡವರಲ್ಲೂ ಕಾಣುವ ಔದಾರ್ಯ) ಎಲ್ಲವೂ ನಾಶವಾಗುತ್ತಿವೆ. ನಮ್ಮ ಕನ್ನಡವೂ ನಾಶವಾಗುತ್ತಿದೆ.

ನಮ್ಮ ಮಕ್ಕಳನ್ನಾದರೂ ಇದರಿಂದ ಪಾರು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈಗ ಬೆಳೆಯುತ್ತಿರುವ ಮಧ್ಯಮ ಹಾಗೂ ಶ್ರೀಮಂತ ವರ್ಗದ ಮಕ್ಕಳು ನಮ್ಮವರಾಗಿ ಬೆಳೆಯಬೇಕು. ಅವರ ಜ್ಞಾನ, ಜೀವನದ ಅನುಭವ, ತಮ್ಮ ಲಾಭಕ್ಕೆ ಇತರರನ್ನು ಬಳಸಿಕೊಳ್ಳುವ ಹುನ್ನಾರವಿಲ್ಲದ ಸಂಬಂಧ ಬೆಸೆಯಬಲ್ಲ ಹೃದಯವಂತಿಕೆ, ಸಾರ್ವಜನಿಕ ನಡಾವಳಿಯಲ್ಲಿ ಸದ್ವರ್ತನೆ, ನೈತಿಕ ಆಡಂಬರದಲ್ಲಿ ಬತ್ತಿಹೋಗದ ಔದಾರ್ಯ ಇತ್ಯಾದಿ ಗುಣಗಳು ಬೆಳೆಯಬೇಕೆಂದರೆ ಅವರ ಚಿಕ್ಕ ವಯಸ್ಸಿನಲ್ಲಾದರೂ, ಅವರಿಗೆ ಹದಿನೈದು ತುಂಬುವ ತನಕವಾದರೂ, ದೇಶದ ಎಲ್ಲ ಮಕ್ಕಳ ಜೊತೆ, ತಮ್ಮ ವರ್ಗದ ವ್ಯಾಪಾರೀ ಧನಿಕರ ಮಕ್ಕಳ ಜೊತೆಗೆ ಮಾತ್ರ ಸೀಮಿತವಾಗದಂತೆ ಅವರು ವಿದ್ಯಾಭ್ಯಾಸ ಪಡೆಯಬೇಕು. ಅಂದರೆ ನಾನು ಹಿಂದೊಮ್ಮೆ ಇಲ್ಲಿ ಬರೆದಂತೆ ಸಮಾನ ಶಾಲೆಗಳಲ್ಲಿ ಎಲ್ಲ ಮಕ್ಕಳೂ ಒಟ್ಟಾಗಿ ಶಿಕ್ಷಣ ಪಡೆಯಬೇಕು. ಪುಸ್ತಕಗಳಿಂದ ಮಾತ್ರವಲ್ಲದೆ ಸ್ಥಳೀಯವಾದ ಹಾದಿಬೀದಿಗಳ ಸಮೃದ್ಧ ಜೀವಂತಿಕೆಗಳಿಂದಲೂ ಅವರ ತುಂಟತನದ ಗೆಲುವು ತಣಿದು ಅವರ ಮನಸ್ಸು ಅರಳಬೇಕು. ಸಾಕಾದಷ್ಟು ಹಲವರು, ಬೇಕಾದಷ್ಟು ಕೆಲವರು ಇಂಗ್ಲಿಷನ್ನೂ ಕಲಿಯಬೇಕು. ಅವರು ಗಳಿಸುವ ಎಲ್ಲ ಜ್ಞಾನವೂ ನಮ್ಮ ಪರಿಸರದ ಭಾಷೆಯಲ್ಲಿ ಅವರಿಗೆ ಆತ್ಮೀಯವೆನ್ನಿಸಬೇಕು.

* * *

ನಾವು ಶಾಲೆಗಳಲ್ಲಿ ಮಕ್ಕಳನ್ನು ಕಲಿಸುವ ನೆವದಲ್ಲಿ ಹಿಂಸಿಸುತ್ತೇವೆ; ಅವರನ್ನು ಜ್ಞಾನದ್ವೇಷಿಗಳನ್ನಾಗಿಯೋ ಅಥವಾ ಕಲಿತದ್ದನ್ನು ಹಿಂದಕ್ಕೆ ಒಪ್ಪಿಸುವ ಯಾಂತ್ರಿಕ ಗಿಣಿಗಳನ್ನಾಗಿಯೋ ಮಾಡುತ್ತೇವೆ. ಜ್ಞಾನವೆಂದರೆ ತುಂಬಿದ ಒಂದು ಪಾತ್ರೆಯಿಂದ ಬರಿದಾದ ಇನ್ನೊಂದು ಪಾತ್ರೆಗೆ ಸುರಿಯುವ ದ್ರಾವಣವಲ್ಲ; ಗುರುಶಿಷ್ಯರು ಒಟ್ಟಾಗಿ ಕೂತು ಸೃಷ್ಟಿಸುವುದೇ ಜ್ಞಾನ. ಉಪನಿಷತ್ತು ಹೇಳುವಂತೆ ನಾವು ತೇಜಸ್ವಿಗಳಾಗಲು ಅನ್ಯೋನ್ಯದಲ್ಲಿ ಕೂಡಿ ಉಂಡು, ಕೂಡಿ ಬಾಳಿ, ಕೂಡಿ ಕಲಿಯುವ ಯಜ್ಞ ಇದು.

ಗುರುಶಿಷ್ಯರ ಅನ್ಯೋನ್ಯ ಸಹವಾಸದಲ್ಲಿ ಸತತವಾಗಿ ಜ್ಞಾನಸೃಷ್ಟಿಯಾಗುವ ಬಗೆಯನ್ನು ಪ್ರಸಿದ್ಧ ವಿಜ್ಞಾನಿಗಳಾದ ಪ್ರೊಫೆಸರ್‌ ಯಶಪಾಲರ ಪುಸ್ತಕವೊಂದಕ್ಕೆ ಹಿನ್ನುಡಿಯಾಗಿ ಕೆಲವು ಮಾತುಗಳನ್ನು ಬರೆಯಬೇಕಾಗಿ ಬಂದಾಗ ನಾನು ಅರಿತೆ. ಈ ಅರಿವಿನಲ್ಲಿ ನನ್ನ ಉಪಾಧ್ಯಾಯ ವೃತ್ತಿಯ ಅನುಭವದ ಹಿನ್ನೆಲೆಯೂ ಇತ್ತು ಎನ್ನಬಹುದು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಯಶಪಾಲರು ಇಲ್ಲಿ ಉತ್ತರ ಕೊಡುತ್ತಾರೆ. ಉತ್ತರ ಕೊಡುವಾಗ ಈ ಪ್ರಶ್ನೆಯಲ್ಲಿ ತನಗಿನ್ನೂ ತಿಳಿಯದೇ ಇರುವುದು ಏನು ಎಂಬುದನ್ನೂ ಅವರು ಹೇಳುತ್ತಾರೆ. ತನ್ನ ಪ್ರಶ್ನೆಯೂ ಇದಾಗಿರಬಹುದು ಎನ್ನುವಂತೆ ಮಾತಾಡುತ್ತಾರೆ. ತಿಳಿದವನ ಸೊಕ್ಕಾಗಲೀ ತಿಳುವಳಿಕೆಯ ದರ್ಪವಾಗಲೀ ಅವರ ಮಾತಿನಲ್ಲಿ ಸುಳಿಯುವುದಿಲ್ಲ. ಭಾರತದ ಶ್ರೇಷ್ಠ ವಿಜ್ಞಾನಿಯೊಬ್ಬರು ಹೀಗೆ ಮಾತಾಡಬಲ್ಲರು ಎಂದು ನಾನು ಹೊಗಳುತ್ತಿಲ್ಲ. ಇದರಲ್ಲಿ ಹೊಗಳುವುದೇನಿದೆ? ಅವರು ಹೀಗೆ ಮಾತಾಡಬಲ್ಲವರಲ್ಲದಿದ್ದರೆ ಅವರಲ್ಲಿ ಸತ್ಯಶೋಧಕ ನೊಬ್ಬನ ಗುಣವೇ ಇರುತ್ತಿರಲಿಲ್ಲ.

ಎನ್.ಸಿ.ಇ.ಆರ್.ಟಿ.ಯವರ ಈಚಿನ ಮಹತ್ವದ ಸುಧಾರಣೆಗಳಲ್ಲಿ ಭಾಗಿಯಾದ ಯಶಪಾಲರು ಅವರ ತುಂಬಿದ ವಯಸ್ಸಿನಲ್ಲಿ, ಕತ್ತಿನ ತನಕ ಹರಡಿದ ಬಿಳಿಕೂದಲಿನಲ್ಲಿ ಒಬ್ಬ ಹಿಪ್ಪಿಯಂತೆ ಕಾಣುತ್ತಾರೆ. ಈ ಜಗತ್ತಿನ ಸ್ವರೂಪ ಬಗ್ಗೆ ಸದಾ ಅಚ್ಚರಿಯಲ್ಲೂ ತಿಳಿಯುವ ಕುತೂಹಲದಲ್ಲೂ ಬಾಳುವ ಈ ಭೌತವಿಜ್ಞಾನಿ ಒಮ್ಮೆ ನನಗೆ ಹೇಳಿದರು. ಪ್ರಸಿದ್ಧವಲ್ಲದ ಯಾವುದೋ ಒಂದು ಸರ್ಕಾರಿ ಶಾಲೆಯ ಬಾಲಕಿಯೊಬ್ಬಳು ಅವರನ್ನು ಕೇಳಿದಳಂತೆ –  ಪ್ರತಿ ರಾತ್ರೆ ಚಂದ್ರ ಚೂರು ಚೂರೇ ಕರಗುತ್ತ ಒಂದು ದಿನ ಇಲ್ಲವಾಗುತ್ತಾನಲ್ಲ, ಇದಕ್ಕೇನು ಕಾರಣ?

ಇಲ್ಲಿ ಗಮನಿಸಬೇಕಾದ್ದು ಈ ಪ್ರಶ್ನೆಯನ್ನು ಕೇಳಬಹುದೆಂದು ಬಾಲಕಿಯೊಬ್ಬಳು ಧೈರ್ಯ ಮಾಡಿರುವುದು. ನಮಗೆಲ್ಲರಿಗೋ ಎಂದೊ ಒಮ್ಮೆ ನಮ್ಮ ಬಾಲ್ಯದಲ್ಲಿ ಕಾಣುವ ಚಂದ್ರ ತಿಂಗಳಿಗೊಮ್ಮೆ ಕಾಣೆಯಾಗುವುದು ಬೆರಗಿನ ವಿಷಯವೇ. ಆದರೆ ಶಾಲೆಯಲ್ಲಿ ನಾವು ಈ ಪ್ರಶ್ನೆಯನ್ನು ಕೇಳುವ ಧೈರ್ಯ ತೋರಿರುವುದಿಲ್ಲ. ತನ್ನ ಅಜ್ಞಾನ ಕಂಡು ಮೇಷ್ಟ್ರರು ನಕ್ಕಾರೆಂಬ ಭಯದಲ್ಲೇ ನಾವು ಶಾಲೆಯಲ್ಲಿರುತ್ತೇವೆ. ಇಂತಹದೊಂದು ಪ್ರಶ್ನೆ ಎದುರಾದಾಗ ಗುರುಗಳು ಹುಣ್ಣಿಮೆ – ಅಮಾವಾಸ್ಯೆಗಳ ವಿವರ ಹೇಳಿ ಮುಗಿಸಿಬಿಡಬಹುದು. ಆದರೆ ಯಶಪಾಲರಿಗೆ ಅಂತಹ ಉತ್ತರದಿಂದ ನಿವಾರಣೆಯಾಗುವ ಪ್ರಶ್ನೆ ಇದಲ್ಲ. ನಾವು ಬಾಳುತ್ತಿರುವ ಸೌರವ್ಯೂಹದ ಬಗ್ಗೆಯೇ ಜ್ಞಾನವನ್ನು ಉತ್ಪತ್ತಿ ಮಾಡಬಲ್ಲ ಬೆರಗು ಈ ಪ್ರಶ್ನೆಯಲ್ಲಿದೆ. ಇಂಗ್ಲಿಷ್ ಮಾತಾಡಲು ಬಾರದ ಈ ಬಾಲೆ ಮುಂದೊಂದು ದಿನ ಖಗೋಳ ವಿಜ್ಞಾನಿ ಯಾಕಾಗಬಾರದು ಎನ್ನುವ ಪ್ರೀತಿಯಲ್ಲೇ ಬಾಲೆಯ ಬೆರಗಿನ ಕುತೂಹಲದ ಪಾಲುದಾರನಾಗಿ ಗುರು ಮಾತಾಡಬೇಕಲ್ಲವೆ? ಎಂದು ಯಶಪಾಲರು. ಇಂತಹ ಬೆರಗುಗಲಿಗೂ ಕುತೂಹಲಗಳಿಗೂ ಅವಕಾಶವಿರುವುದು ನಾವು ಕರ್ನಾಟಕದಲ್ಲಿ ಕನ್ನಡದಲ್ಲಿ ಕಲಿಸಿದಾಗ. ಅಲ್ಲದೆ ಇಂತಹ ಒಂದು ಪ್ರಶ್ನೆಯನ್ನು ಎಲ್ಲ ವರ್ಗದ ಮಕ್ಕಳೂ ಇರುವ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಕೇಳಿದಾಗ ಪ್ರಶ್ನೆಯಲ್ಲೂ ಪಡೆಯುವ ಉತ್ತರದಲ್ಲೂ ಎಲ್ಲ ಮಕ್ಕಳು ಏಕಕಾಲಕ್ಕೆ ಒಳಗಾಗಿರುತ್ತಾರೆ.

ಎಲ್ಲ ಮಕ್ಕಗಳು ಸಮಾನವಾಗಿ ಒಟ್ಟಿಗೇ ಕಲಿಯುವ ಶಾಲೆಗಳಿಗಾಗಿ ನಾವು Cetnral Advisory Board of Education ನಲ್ಲಿ ಒಂದು ಬಿಲ್ಲನ್ನು ಯೋಜಿಸಿದೆವು. ಇದು ಕೇಂದ್ರ ಸರ್ಕಾರದ ನೀತಿಯಾಗಬೇಕಿತ್ತು. ಆದರೆ ದುರದೃಷ್ಟದಿಂದ ನಮ್ಮ ಕೇಂದ್ರ ಸರ್ಕಾರ ಇದನ್ನು ಕೈಬಿಟ್ಟಿದೆ. ಖಾಸಗಿ ಶಾಲೆಗಳ ಹಿತಾಸಕ್ತಿಯೇ ಮೇಲಾಗಿದೆ. ದೇಶಾದ್ಯಂತ ಸಮಾನ ಶಾಲೆಗಳಿಗಾಗಿ ಜನ ಹೋರಾಡಬೇಕಾಗಿದೆ ಅಥವಾ ತೆಪ್ಪಗಿದ್ದು ಈ ದೇಶ ಬಡವರ ಭಾರತವೂ ಶ್ರೀಮಂತರ ಇಂಡಿಯಾವೂ ಆಗುವುದನ್ನು ನೋಡುತ್ತ ಕೂರಬೇಕಾಗುತ್ತದೆ.

ಅಥವಾ ಭಾರತ ಸರ್ಕಾರ ಮಾಡಿದನ್ನು ನಾವೇಕೆ ಮಾಡಬಾರದು? ಈ ಸುವರ್ಣ ಕರ್ನಾಟಕದ ವರ್ಷದಲ್ಲಿ ಛಲವಂತರೂ ಸೂಕ್ಷ್ಮಜ್ಞರೂ ಆದ ಯುವಜನ ಕೊನೆಪಕ್ಷ ಅಂತಹ ಸಂಕಲ್ಪವನ್ನಾದರೂ ಮಾಡಿಯಾರೆ ಎಂಬ ಆಸೆಯಿಂದ ಈ ಮಾತನ್ನಾಡಿದ್ದೇನೆ.

* * *

ಕರ್ನಾಟಕ ಸರ್ಕಾರ ಹಿಂದೊಮ್ಮೆ ಕನ್ನಡ ಕಡ್ಡಾಯವೆಂದು ಹೇಳಿತು. ಏನೂ ಮಾಡಲಿಲ್ಲ – ಶಿಕ್ಷಣಕ್ಕೆ ಸಂಬಂಧಿಸಿದಂತೆ. ಅಷ್ಟಕ್ಕೇ ಗಾಬರಿಗೊಂಡ ಇಂಗ್ಲೆಂಡಿನ ಬಿಬಿಬಿ ನನ್ನನ್ನು ಫೋನಿನಲ್ಲಿ ಸಂಪರ್ಕಿಸಿ ಕೇಳಿತು; ‘ನಿಮ್ಮ ನಾಡಿನಲ್ಲಿ ಇನ್ನು ಮುಂದೆ ಕನ್ನಡ ಶಿಕ್ಷಣದಲ್ಲಿ ಕಡ್ಡಾಯವಂತೆ ನಿಜವೆ?’ ನಾನೂ ಆಶ್ಚರ್ಯವನ್ನು ನಟಿಸಿ ಕೇಳಿದೆ: ‘ನಿಮ್ಮ ದೇಶದಲ್ಲಿ ಇಂಗ್ಲಿಷೂ, ಫ್ರಾನ್ಸ್‌ನಲ್ಲಿ ಫ್ರೆಂಚೂ ಕಡ್ಡಾಯವಂತೆ ನಿಜವೆ?’

ಕರ್ನಾಟಕದ ಐದು ಕೋಟಿ ಜನ ಕನ್ನಡದಲ್ಲಿ ಅಕ್ಷರಸ್ಥರಾದರೆ ರಾಜಕುಮಾರರನ್ನು ಕೇಳುವ ನೋಡುವ ಸಾಂಸ್ಕೃತಿಕ ಹಸಿವಿನ ಈ ಜನ ಓದಬಲ್ಲವರೂ ಆದರೆ, ವ್ಯಾಪಾರಿಗಳು ಘಾಟಿಗಳಲ್ಲವೆ? ಅಮೆರಿಕಾ ತನ್ನ ಸರಕು ಮಾರಲಾದರೂ ಕನ್ನಡವನ್ನೂ ಬಳಸಿದರೆ ಆಶ್ಚರ್ಯವಿಲ್ಲ.

* * *

ಲಿಪಿ ಜ್ಞಾನ ಅಗತ್ಯವೆನ್ನಿಸಿದರೆ ಜನ ಅಕ್ಷರ ಕಲಿಯಲು ಮುಂದಾಗುತ್ತಾರೆ. ಕೇರಳದಲ್ಲಿ ಎಲ್ಲರಿಗಿಂತ ಮುಂಚೆ ಲಿಪಿ ಜ್ಞಾನ ಅಗತ್ಯವಾದುದಕ್ಕೆ ಕಾರಣ ಆ ದೇಶದ ಜ್ಞಾನದಾಹ ಮಾತ್ರವಲ್ಲ. ಬೇಸಾಯಕ್ಕೂ ಹೊರಗಿನ ಮಾರುಕಟ್ಟೆಗೂ ನಮಗಿಂತ ಮುಂಚೆ ಕೇರಳದಲ್ಲಿ ಸಂಬಂಧ ಹುಟ್ಟಿಕೊಂಡಿತು. ಟೀ ಮತ್ತು ರಬ್ಬರ್‌ ನಂತಹ ಬೆಳೆಗಳನ್ನು ಬೆಳೆಯುವ ಕೃಷಿಕರ ಮನೆಯಲ್ಲಿ ಒಬ್ಬನಾದರೂ ಓದಬಲ್ಲವನ ಅಗತ್ಯವಿತ್ತು. ಕೊಡುಕೊಳ್ಳುವ ಉದ್ಯಮದಲ್ಲಿ ಪತ್ರ ವ್ಯವಹಾರ ಅಗತ್ಯವಲ್ಲವೆ? ಲೆಕ್ಕ ಬರೆದಿಟ್ಟುಕೊಳ್ಳಬೇಕಲ್ಲವೇ? ಕಾನೂನು ಕಟ್ಟಳೆಗಳು ಗೊತ್ತಿರಬೇಕಲ್ಲವೆ?

* * *

ಎಂಬತ್ತರ ದಶಕದ ಕೊನೆಯಲ್ಲಿ ಕೊಟ್ಟಾಯಂನಲ್ಲಿ ನಾನು ಪಾಲುಗೊಂಡ ಅಕ್ಷರ ಆಂದೋಳನದ ಕೆಲವು ಸ್ವಾರಸ್ಯದ ಅನುಭವಗಳನ್ನು ಹೇಳುತ್ತೇನೆ. ಒಂದು ನೂರು ದಿನಗಳ ಅವಧಿಯಲ್ಲಿ ಆ ಊರಿನ ಅಕ್ಷರ ಬಾರದ ಸುಮಾರು ಎರಡು ಸಾವಿರ ಜನರನ್ನು ಅಕ್ಷರಸ್ಥರನ್ನಾಗಿ ಮಾಡುವುದು ನಮ್ಮ ಗುರಿಯಾಗಿತ್ತು. ಒಂದು ಸಾವಿರ ವಿದ್ಯಾರ್ಥಿ ಸ್ವಯಮ ಸೇವಕರು ನಮ್ಮ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ನಿಂದ ಇದಕ್ಕೆ ತಯಾರಾಗಿ ಹಗಲಿರುಳು ದುಡಿದರು. ನಮಗೆ ಆ ಊರಿನ ಡಿಸ್ಟ್ರಿಕ್ಟ್‌ಕಲೆಕ್ಟರನ ಉತ್ಸಾಹದ ಬೆಂಬಲ ಸಿಕ್ಕಿತು. ನಮ್ಮ ಎನ್‌ಎಸ್‌ಎಸ್‌ನ ಡೈರೆಕ್ಟರ್ ತೀವ್ರವಾದ ಶ್ರದ್ಧೆ ಉತ್ಸಾಹಗಳ ಯುವಕ. ಕೇರಳದ ಅತ್ಯಧಿಕ ಪ್ರಸಾರದ ಪತ್ರಿಕೆ ಮಲೆಯಾಳ ಮನೋರಮಾದ ಮೂಟೆಗಳನ್ನು ಲಾರಿಗೆ ತುಂಬುತ್ತಿದ್ದ ವಯಸ್ಕನೊಬ್ಬ ಮಾತ್ರ ಅಕ್ಷರ ಕಲಿಯಲು ಒಲ್ಲದ ಏಕಮಾತ್ರ ನಿರಕ್ಷರನೆಂದು ಅವನಿಗೆ ಗೊತ್ತಾಗಿ ಗಲಿಬಿಲಿಗೊಂಡು ನನ್ನ ಬಳಿ ಬಂದ.

ನನಗವನು ಹೇಳಿದ್ದನ್ನು ಇನ್ನು ಯಾರಿಗೆ ಹೇಳಲಿ? ಜಿಲ್ಲೆಯ ಪರಮಾಧಿಕಾರ ಪಡೆದ ಕಲೆಕ್ಟರ್‌ಗೆ ಹೇಳಿದೆ. ಯುವಕನಾದ ಕಲೆಕ್ಟರ್‌ಗೆ ಅವನ ಅಪ್ಪನ ವಯಸ್ಸಿನ ಮೂಟೆ ಹೊರುವಾತ ಹೇಳಿದ: ‘ಇಷ್ಟೊಂದು ಅಕ್ಷರದ ಮೂಟೆಗಳನ್ನು ಬೆನ್ನ ಮೇಲೆ ಹೊತ್ತಿದ್ದು ಸಾಲದೆ ಅದನ್ನು ನನ್ನ ತಲೆಯಲ್ಲೂ ತುಂಬಿಕೊಳ್ಳಬೇಕೆ?’ ಹೇಗೋ ಅಂತೂ ಅವನನ್ನೂ ಒಲಿಸಿ ನೂರು ದಿನ ಮುಗಿದದ್ದೇ ಮಂತ್ರಿ ಮಹೋದಯರ ಸನ್ನಿಧಿಯಲ್ಲಿ ಕೊಟ್ಟಾಯಂ ಪಟ್ಟಣ ನೂರಕ್ಕೆ ನೂರು ಅಕ್ಷರಸ್ಥವೆಂದು ಸಾರಲು ದೊಡ್ಡ ಸಭೆ ನಡೆಯಿತು. ನಾನು ಅದನ್ನು ಸಾರಬೇಕಿತ್ತು. ನಮ್ಮ ಜುಲುಮೆಗೆ ಒಲಿದು ಅಕ್ಷರ ಕಲಿತ ಮೂಟೆ ಹೋರುವ ಮಾಲಿ ದೀಪ ಬೆಳಗಿದ ಮೇಲೆ ನಾನು ನಿಂತು ಇಂಗ್ಲಿಷಿನಲ್ಲಿ ಸಾರಿದೆ.

This city of Kottayam is one hundred percent literate except for one person. That is me (ಈ ಕೊಟ್ಟಾಯಂ ನಗರ ನೂರಕ್ಕೆ ನೂರು ಅಕ್ಷರಸ್ಥವಾಗಿದೆ. ನನ್ನೊಬ್ಬನ ಹೊರತಾಗಿ.)

ಕೇರಳದಲ್ಲಿ ನಾನು ಇದ್ದಂತೆ ಬೆಂಗಳೂರಿನಲ್ಲಿ ಹಲವು ಮಂದಿ ಜಾಣ ಅನಕ್ಷರಸ್ಥರಿದ್ದಾರೆ. ಅವರು ಇಲ್ಲೇ ಇರಲು ಬಂದವರಾದರೆ ಅವರೂ ಕನ್ನಡದಲ್ಲಿ ಅಕ್ಷರಸ್ಥರಾಗಬೇಕು. ರಾಜಕುಮಾರರ ವೀಡಿಯೋಗಳನ್ನು ಕನ್ನಡ ಶೀರ್ಷಿಕೆ ಸಮೇತ ತಮ್ಮ ಬಂಗಲೆಗಳಲ್ಲಿ ಸಂಸಾರ ಸಮೇತ ಕೂತು, ಕೇಳಿ, ನೋಡಿ ಖುಷಿಯಲ್ಲಿ ಕನ್ನಡದವರಾಗಬೇಕು.

೧೩೨೦೦೬

* * *