ಇಪ್ಪತ್ತನೇ ಶತಮಾನದ ಇಬ್ಬರು ದೊಡ್ಡ ಕನಸುಗಾರರೆಂದರೆ ಗಾಂಧಿ ಮತ್ತು ಮಾರ್ಕ್ಸ್‌. ದೇಶವನ್ನು ಬಲಿಷ್ಠಗೊಳಿಸುವ ಕಾರಣಕ್ಕಾಗಿ ನಾವು ಗಾಂಧಿ ಮತ್ತು ಮಾರ್ಕ್ಸ್ ಇಬ್ಬರ ಕನಸುಗಳನ್ನೂ ಕಡೆಗಾಣಿಸಿ ಅವರನ್ನು ಆಳುವವರ ವ್ಯವಹಾರಕ್ಕೆ ಅನುಕೂಲವಾಗುವಷ್ಟು ಮಾತ್ರ ಉಳಿಸಿಕೊಂಡಿದ್ದೇವೆ. ಈಗ ಚಿಂತಕನೊಬ್ಬನನ್ನು ಓದಿ ಈ ಕಾಲದ ವಿದ್ಯಮಾನಗಳಿಂದ ಖಿನ್ನವಾಗುತ್ತಿದ್ದ ನನ್ನ ಮನಸ್ಸು ಉಲ್ಲಸಿತವಾಗಿದೆ.

ಈ ಭಾಷಣ*ವನ್ನು ಕೊಟ್ಟ ಡಗ್ಲಸ್‌ ಲುಮ್ಮಿಸ್‌ ಜಪಾನಿ ಭಾಷೆಯಲ್ಲೂ ಮಾತನಾಡುವ, ಜಪಾನ್ ಮಹಿಳೆಯೊಬ್ಬಳನ್ನು ಮದುವೆಯಾದ ಅಮೆರಿಕನ್ ಚಿಂತಕ ಮಾತ್ರ ಅಲ್ಲ; ತನ್ನ ತತ್ವಗಳಿಗಾಗಿ ಹೋರಾಡುವ ಮನುಷ್ಯ. ಅವನ ಭಾಷಣದ ಶೀರ್ಷಿಕೆ ಬಹಳ ಅರ್ಥಪೂರ್ಣವಾಗಿದೆ. ಇಂಗ್ಲಿಷ್‌ನಲ್ಲಿ ಅದು Smallest Army imaginable ಎಂದಿದೆ. ಅಂದರೆ ನಾವು ಕಲ್ಪಿಸಿಕೊಳ್ಳಬಹುದಾದ ಅತ್ಯಂತ ಸಣ್ನ ಸೈನ್ಯ. ಈ ಶೀರ್ಷಿಕೆಯನ್ನು ಅವನು ಪಡೆದದ್ದು ಗಾಂಧಿಯ ಒಂದು ಮಾತಿನಿಂದ.

೧೯೩೧ನೇ ಇಸ್ವಿಯಲ್ಲಿ ದುಂಡು ಮೇಜಿನ ಪರಿಷತ್ತಿಗೆ ಗಾಂಧೀಜಿಯವರು ಹೋದಾಗ ರೂಟರ್‌ನ ಒಬ್ಬ ಸಂಪಾದಕ ಅವರ ಕನಸೇನೆಂದು ಕೇಳುತ್ತಾನೆ. ತನ್ನ ಕನಸಿನ ಭಾರತ ಸ್ವತಂತ್ರವಾಗಿರುತ್ತದೆ, ಎಲ್ಲ ಜನರಿಗೂ ಸೇರಿರುತ್ತದೆ. ಮೇಲು ಕೀಳು ವರ್ಗಗಳು ಅಲ್ಲಿ ಇರುವುದಿಲ್ಲ, ಹೆಂಗಸರನ್ನು ಭೇದಭಾವದಿಂದ ನೋಡುವುದಿಲ್ಲ. ಮಾದಕ ದ್ರವ್ಯಗಳಿರುವುದಿಲ್ಲ ಇತ್ಯಾದಿಗಳನ್ನು ಹೇಳಿದ ಗಾಂಧಿ ಈ ಪದ ಪ್ರಯೋಗವನ್ನು ಮಾಡುತ್ತಾರೆ –  ನನ್ನ ಕನಸಿನ ಭಾರತದಲ್ಲಿ ಇರುವುದು: ‘Smallest Army imaginable.’

ಈ ಬಗ್ಗೆ ಡಗ್ಲಸ್‌ ಲುಮ್ಮಿಸ್‌ ಬರೆದದ್ದನ್ನು ನಾನು ಅವಸರದಲ್ಲಿ ಸ್ವಲ್ಪ ಒರಟಾಗಿಯೇ ಸಂಗ್ರಹಿಸುತ್ತಿದ್ದೇನೆ. ಕನ್ನಡದ ಓದುಗರಿಗೆ ಈ ಭಾಷಣದ ಮುಖ್ಯ ವಿಚಾರ ಆದಷ್ಟು ಸರಳವಾಗಿ ಲಭ್ಯವಾಗಲೆಂದು ಹೀಗೆ ಮಾಡುತ್ತಿದ್ದೇನೆ. ಈ ಭಾಷಣದಿಂದ ನಾನು ನನ್ನ ಮನಸ್ಸಿಗೆ ಪಡೆದುಕೊಂಡ ಉಲ್ಲಾಸ ಮತ್ತು ವಿಸ್ತಾರ ಕೊಂಚವಾದರೂ ಓದುಗರಿಗೆ ಲಭ್ಯವಾದರೆ ನಾನು ಕೃತಾರ್ಥನಾದೇನು.

* * *

ಕಲ್ಪಿಸಿಕೊಳ್ಳಬಹುದಾದ ಅತ್ಯಂತ ಸಣ್ಣ ಸೈನ್ಯ ಎಂದರೆ ಏನು? ಇದೇ ಒಂದು ಒಗಟು. ಸೈನ್ಯವಿಲ್ಲದ ದೇಶವನ್ನು ಯಾರೂ ಕಲ್ಪಿಸಿಕೊಳ್ಳಲಾರರು. ಯುದ್ಧ ಬೇಡ, ಶಾಂತಿ ಬೇಕು ಇತ್ಯಾದಿಗಳನ್ನು ಕೆಲವರು ಸುಳ್ಳು ಸುಳ್ಳೇ ಹೇಳುತ್ತಿರುತ್ತಾರೆ. ಆದರೆ ಸೈನ್ಯವೇ ಇಲ್ಲದ ಅಥವಾ ನಾಮಕಾವಸ್ಥೆಯಾಗಿ ಕೊಂಚ ಇರುವ ಸ್ಥಿತಿಯನ್ನು ಯಾರೂ ಊಹಿಸಲಾರರು ಮಾತ್ರವಲ್ಲ; ಬಯಸುವುದೂ ಇಲ್ಲ.

ಆಶ್ಚರ್ಯವೆಂದರೆ, ಜಪಾನಿನ ಹೊಸ ಸಂವಿಧಾನದ ಆರ್ಟಿಕಲ್ ೯ ಹೀಗೆ ಹೇಳುತ್ತದೆ. ‘ಒಂದು ರಾಜ್ಯ ವ್ಯವಸ್ಥೆಗೆ ಯುದ್ಧವನ್ನು ಮಾಡುವ ಹಕ್ಕಿದೆ ಎಂಬುದನ್ನು (Right of belligerance) ನಾವು ಜಪಾನೀಯರು ನಿರಾಕರಿಸುತ್ತೇವೆ.’

ಇದೊಂದು ಹೊಸ ರಾಜ್ಯ ವ್ಯವಸ್ಥೆಯ ಕಲ್ಪನೆಯೇ ಆಯಿತು. ಎರಡನೇ ಮಹಾಯುದ್ಧ ಮುಗಿದ ನಂತರ ಅಣುಬಾಂಬಿನ ದಾಳಿಯಿಂದ ತತ್ತರಿಸಿದ ಜಪಾನಿಗೆ ಹೀಗೆ ಹೇಳುವುದು ಅನಿವಾರ್ಯವಾಗಿತ್ತು. ಈ ಒಪ್ಪಂದಕ್ಕೆ ಸಹಿ ಹಾಕಿದ ಟೋಕಿಯೋ ನಗರದಲ್ಲಿ ಹೆಣಗಳ ವಾಸನೆ ಇನ್ನೂ ಉಳಿದಿತ್ತು. ಆದರೆ ಇದನ್ನು ಒಪ್ಪಿಕೊಳ್ಳುವಂತೆ ಜಪಾನನ್ನು ಒತ್ತಾಯಿಸಿದ ಅಮೆರಿಕದ, ಉದ್ದೇಶ ಬೇರೆಯಾಗಿತ್ತು. ಅದು ತನ್ನ ಅಧಿಕಾರವನ್ನು ಸಂಪೂರ್ಣವಾಗಿ ಜಪಾನಿನ ಮೇಲೆ ಹೇರಲು ಜಪಾನ್ ಯುದ್ಧದ ಅಗತ್ಯವನ್ನೇ ಕೈಬಿಡುವಂತೆ ಒತ್ತಡ ಹೇರಿತು. ಆದರೆ ಜಪಾನ್ ಪೊಲೀಸ್‌ರಿಸರ್ವ್ ಎಂಬ ನೆವದಲ್ಲಿ ಒಂದು ಸಣ್ಣ ಸೈನ್ಯವನ್ನು ಹೊಂದಲು ಅಮೆರಿಕವನ್ನು ಒಲಿಸಿಕೊಂಡಿತು. ಜತೆಗೆ ಅಮೆರಿಕದ ಸೈನ್ಯಕ್ಕೆ ತನ್ನ ದೇಶದಲ್ಲೇ ಅವಕಾಶ ಮಾಡಿಕೊಟ್ಟಿತ್ತು. ಆದ್ದರಿಂದ ಯುದ್ಧ ಮಾಡದ ದೇಶ ತಾನೆಂಬ ಜಪಾನಿನ ಘೋಷಣೆ ಹೊಸ ವ್ಯವಸ್ಥೆಯೊಂದರ ಭರವಸೆಯೂ ಹೌದು; ವಂಚನೆಯೂ ಹೌದು.

* * *

ಯುದ್ಧ ಮಾಡುವ ಅಧಿಕಾರ ಎಂದರೇನು? ಆಧುನಿಕ ರಾಜ್ಯ ವ್ಯವಸ್ಥೆಯ ಮೂಲ ಸ್ವರೂಪವೇನೆಂದು ಗುರುತಿಸುವಾಗ ಮ್ಯಾಕ್ಸ್‌ ವೆಬರ್‌ ಅದೊಂದು (legitimate violence) ಅಧಿಕೃತ ಹಿಂಸೆಯ – ಅಂದರೆ ಹಿಂಸೆಯನ್ನು ಮಾಡಲು ಅಧಿಕಾರ ಪಡೆದ – ವ್ಯವಸ್ಥೆ ಎಂದು ಅಭಿಪ್ರಾಯ ಪಡುತ್ತಾನೆ.

ನಮ್ಮೆಲ್ಲರ ಮನಸ್ಸಿನಲ್ಲಿ ಈ legitimate violenceನ ಪರಿಕಲ್ಪನೆ ಎ‌ಷ್ಟು ಆಳವಾಗಿ ಬೇರೂರಿದೆ ಎಂದರೆ ಯಾರಾದರೊಬ್ಬ ಮನುಷ್ಯ ನಾಲ್ಕೈದು ಜನರನ್ನು ಸುಮ್ಮನೇ ಗುಂಡಿಕ್ಕಿ ಕೊಂದರೆ ಭಯಭೀತರಾಗುವ, ಖಿನ್ನರಾಗುವ ನಾವೇ ಒಬ್ಬ ಸೈನಿಕ ಅಥವಾ ಏರ್‌ಫೋರ್ಸ್‌ ಪೈಲೆಟ್ ಪ್ರತಿದಿನ ಐದಾರು ಜನರನ್ನು ಕೊಲ್ಲುತ್ತಿದ್ದರೆ ಸರ್ವೇಸಾಮಾನ್ಯವೆಂದು ತಿಳಿದು ಒಪ್ಪಿಬಿಟ್ಟಿರುತ್ತೇವೆ. ಯಾಕೆಂದರೆ ಆಧುನಿಕ ರಾಜ್ಯಮಟ್ಟದ ವ್ಯವಸ್ಥೆಗೆ ನಾವೇ ಕೊಟ್ಟಿರುವ ಅಧಿಕಾರ ಇದು. ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಡಲು ರಾಜ್ಯ ವ್ಯವಸ್ಥೆ ಅನಿವಾರ್ಯವಾಗಿ ಮಾಡುವ ಹಿಂಸೆ ಇದು ಎಂದು ನಾವು ತಿಳಿದಿರುತ್ತೇವೆ. ಹಿಂಸೆಯಲ್ಲಿ ತೊಡಗಿದ ಸೈನಿಕ ಅಪರಾಧಿಯಲ್ಲ. ಇಂಗ್ಲಿಷ್ ಕವಿಯೊಬ್ಬ ಮೊದಲ ಮಹಾ ಯುದ್ಧದ ನಂತರ ಇದನ್ನು ಮಾರ್ಮಿಕವಾಗಿ ಪ್ರಶ್ನಿಸಿದ್ದು ಲುಮ್ಮಿಸ್‌ನನ್ನು ಓದುತ್ತಿದ್ದಂತೆ ನೆನಪಾಯಿತು. ಸತ್ತವರಿಬ್ಬರು ಶಾಶ್ವತ ಕತ್ತಲೆಯಲ್ಲಿ ಎದುರುಬದುರಾಗಿ ಹೀಗೆ ಗುರುತಿಸಿಕೊಳ್ಳುತ್ತಾರೆ: ‘ನಾನು ಕೊಂದ ವೈರಿ ನೀನು, ಓ ಗೆಳೆಯ’ ಆದರೆ ಎಲ್ಲ ಯುದ್ಧದ ನಿಯಮವೆಂದರೆ, ಯುದ್ಧದಲ್ಲಿ ಕೊಲ್ಲುವುದು ಪಾಪವಲ್ಲ; ಅದು ಶೌರ್ಯ.

* * *

ಇಪ್ಪತ್ತನೇ ಶತಮಾನದಲ್ಲಿ ಮೊದಲು ಇದ್ದ ೫೫ ರಾಜ್ಯ ಪ್ರಭುತ್ವಗಳು ೧೯೩ ರಾಜ್ಯ ಪ್ರಭುತ್ವಗಳಾಗಿ ಒಡೆದುಕೊಂಡವು. ಇದರ ಹಿಂದಿದ್ದ ನಂಬಿಕೆ ಎಂದರೆ ಹೆಚ್ಚು ರಾಜ್ಯಗಳು ಸಾಮ್ರಾಜ್ಯಶಾಹಿ ಹಿಡಿತದಿಂದ ಪಾರಾಗಿ ಸ್ವತಂತ್ರವಾಗಿ ಬೇರೆಯಾದರೆ ಹಿಂಸೆ ಇನ್ನಷ್ಟು ಕಡಿಮೆಯಾಗಿ ನಾವು ಸ್ವತಂತ್ರರಾಗುತ್ತೇವೆ ಎಂಬುದು. ಆದರೆ ಇಪ್ಪತ್ತನೇ ಶತಮಾನದಲ್ಲಿ ಯುದ್ಧದಿಂದ ಸತ್ತವರ ಸಂಖ್ಯೆ ೨೦ ಕೋಟಿ. ಇವರೆಲ್ಲಾ ಸೈನಿಕರಲ್ಲ. ಸಾಮಾನ್ಯ ನಾಗರಿಕರು. ಇವರೇಕೆ ಸತ್ತರೆಂದರೆ ಅವರನ್ನು ಕೊಲ್ಲುವುದು ಸುಲಭ! ಹೀಗೆ ಸತ್ತವರು ಅನ್ಯದೇಶೀಯರೂ ಅಲ್ಲ. ಈ ರಾಜ್ಯ ಪ್ರಭುತ್ವಗಳು ಕೊಂದದ್ದು ತಮ್ಮ ಜನರನ್ನೇ.

ಅಂದರೆ ಯಾರೂ ಪ್ರಶ್ನಿಸದಂತೆ ಹಿಂಸೆ ಮಾಡುವ ಅಧಿಕಾರವನ್ನು ಹೊಂದಿರುವುದೇ ರಾಜ್ಯ ಪ್ರಭುತ್ವದ ಲಕ್ಷಣ. ರಾಜ್ಯ ವ್ಯವಸ್ಥೆಯ ಮೂಲಾಧಾರಗಳನ್ನು ಪಾಶ್ಚಿಮಾತ್ಯರಿಗೆ ಮೊದಲು ಕೊಟ್ಟವನು ಮೆಕವಲ್ಲಿ. ಅವನಿಗೆ ಒಂದು ರಾಜ್ಯದ ಆಧಾರವಾಗಿ ಒಬ್ಬ ರಾಜ ಅಥವಾ ಪ್ರಿನ್ಸ್‌ಬೇಕು. ಹೀಗೆ ಒಂದು ರಾಜ್ಯವನ್ನು ಕಟ್ಟಬಲ್ಲ ಪ್ರಿನ್ಸ್‌ಗೆ ಇರಬೇಕಾದ ಗುಣಗಳನ್ನು ಒಂದು ಒಗಟಾಗಿ ನಮ್ಮ ಮುಂದೆ ಇಡುತ್ತಾನೆ. ಒಂದು ರಾಜ್ಯ ವ್ಯವಸ್ಥೆಯಲ್ಲಿ ಜನಹಿತ ಸಾಧಿಸಲು ಪ್ರಿನ್ಸ್ ಒಳ್ಳೆಯನಾಗಿರಬೇಕು. ಆದರೆ ಆ ರಾಜ್ಯ ವ್ಯವಸ್ಥೆಗೆ ಅಪಾಯ ಬಾರದಂತೆ ರಕ್ಷಿಸಲು ಪ್ರಿನ್ಸ್‌ಯಾವ ಹಿಂಸೆಗೂ ಹೇಸದಂಥವನೂ ಆಗಿರಬೇಕು. ಪ್ರಿನ್ಸ್‌ನ ಜಾಗದಲ್ಲಿ ಆಧುನಿಕ ಪ್ರಜಾತಂತ್ರದಲ್ಲಿ ನಾವು ಅಪೂರ್ವ ಶೋಭೆಯ ನಾಯಕ ಬೇಕೆಂದು ಇಚ್ಛಿಸುತ್ತೇವೆ. ಇಂಥ ಒಬ್ಬ ನಾಯಕ – ಡಿಗಾಲ್, ಸ್ಟಾಲಿನ್, ಲೆನಿನ್‌, ಮಾವೋ, ಚರ್ಚಿಲ್‌, ರೂಸ್‌ವೆಲ್ಟ್ ಇಂದಿರಾಜಿ –  ಯಾರೇ ಆಗಿರಲಿ ಅವರು ಒಳ್ಳೆಯದನ್ನು ಮಾಡಬಲ್ಲವರಾಗಿಯೂ, ಹಿಂಸೆಯನ್ನೂ ಮಾಡಬಲ್ಲವರಾಗಿಯೂ ಇರಬೇಕಾಗುತ್ತದೆ. (ನೆಪೋಲಿಯನ್‌ಮಾದರಿಯಲ್ಲಿ ಪಾಪಭಾವದಿಂದ ಕಾಡದ ಹಿಂಸೆ ಮಾಡುವ ಅಧಿಕಾರವನ್ನು ತಾನು ಪಡೆದಿದ್ದೇನೆಂದು ಪರೀಕ್ಷಿಸಿಕೊಳ್ಳಲು ಹೋಗಿ ಎರಡು ಕೊಲೆಗಳನ್ನು ಮಾಡಿ ಪಾಪ ಭಾವನೆಯಿಂದ ಒದ್ದಾಡುವ ದಾಸ್ತೊವಸ್ಕಿಯ ರಾಸ್ಕಲ್ನಿಕೋವ್‌ ನನಗೆ ಇಲ್ಲಿ ನೆನಪಾಗುತ್ತಾನೆ.)

ಗಾಂಧೀ ಈ ಎಲ್ಲ ರಾಜ್ಯ ವ್ಯವಸ್ಥೆಯ ಕಲ್ಪನೆಗಳಿಂದ ಬೇರೆಯಾಗುವುದು ಇಲ್ಲೇ. ಮೆಕವಲ್ಲಿ ರಾಜ್ಯಕಟ್ಟಲು ಅಗತ್ಯವೆಂದು ತಿಳಿದ ವ್ಯಕ್ತಿಯನ್ನು ಗಾಂಧಿ ಬಯಸಲಿಲ್ಲ. ಅಂತಹ ವ್ಯಕ್ತಿಯ ಶೌರ್ಯ ಸಾಹಸಗಳನ್ನು ಯಃಕಶ್ಚಿತ್ತಾಗಿ ಕಂಡರು.

ತಮ್ಮನ್ನು ಕ್ರಾಂತಿಕಾರಿಗಳೆಂದುಕೊಳ್ಳುವವರೂ ಹಿಂಸೆಯ ಅಧಿಕಾರ ರಾಜ್ಯ ಪ್ರಭುತ್ವಕ್ಕೆ ಇದೆ ಎಂಬುದನ್ನು ಒಪ್ಪುವವರೇ. ರಾಜ್ಯಾಧಿಕಾರ ಪಡೆಯಲೆಂದು ಈಗ ಹಿಂಸೆಗಿಳಿದಿರುವ ನಕ್ಸಲೀಯರು ಮುಂದೊಂದು ದಿನ ಹಿಂಸೆಯ ಅಧಿಕಾರವನ್ನು ಹೊಂದಿರುವ ರಾಜ್ಯ ವ್ಯವಸ್ಥೆಯನ್ನೆ ನೆಚ್ಚಿದವರು.

ನ್ಯಾಯಯುತವಾದ ಯುದ್ಧ ಎಂಬ ಕಲ್ಪನೆಯೊಂದಿದೆ. ಅದರ ಹಿಂದಿರುವ ವಿಚಾರವೇನು ಎಂಬುದನ್ನು ನೋಡೋಣ. ಕುಸ್ತಿ ಪಂದ್ಯದಲ್ಲಿ ಇಬ್ಬರು ಕುಸ್ತಿಯಾಡುತ್ತಿದ್ದರೆ ಒಬ್ಬರನ್ನೊಬ್ಬರು ನೋಯಿಸಲು, ಆ ಮೂಲಕ ತನ್ನ ಎದುರಾಳಿಯನ್ನು ಸೋಲಿಸಲು ಪ್ರಯತ್ನಿಸುತ್ತಿರುತ್ತಾರೆ. ಹಾಗೇ ಎರಡು ದೇಶಗಳು ಯುದ್ಧದಲ್ಲಿ ತೊಡಗಿರುವಾಗಲೂ ಆಯಾ ದೇಶಗಳ ಸೈನಿಕರು ತಮ್ಮ ವಿರೋಧಿ ದೇಶದವರನ್ನು ಕೊಲ್ಲಲು ನೋಡುತ್ತಿರುತ್ತಾರೆ. ಆದ್ದರಿಂದ ಇಲ್ಲಿ ಕೊಲ್ಲುವುದು ನ್ಯಾಯಯುತವಾದ ರಾಜ್ಯ ವ್ಯವಸ್ಥೆಯಿಂದ ಪಡೆದಿರುವ ಅಧಿಕಾರ. ಆದ್ದರಿಂದ ಪಾಪವಲ್ಲ. ಅಪರಾಧವಲ್ಲ, ಯಾಕೆಂದರೆ ಇವನು ಕೊಲ್ಲದಿದ್ದರೆ ಅವನು ಕೊಲ್ಲುತ್ತಿದ್ದ.

ಗಾಂಧಿಯ ಸತ್ಯಾಗ್ರಹ ಈ ತತ್ವವನ್ನೇ ಬುಡಮೇಲು ಮಾಡುತ್ತದೆ. ವೈರಿಯನ್ನು ಕೊಲ್ಲುವ ಅಧಿಕಾರವನ್ನು ನಾನು ಬಿಟ್ಟುಕೊಟ್ಟರೆ ಆಗ ವೈರಿಗೆ ನನ್ನನ್ನು ಕೊಲ್ಲುವ ಅಧಿಕಾರ ಇರುವುದಿಲ್ಲ. ಆದ್ದರಿಂದ ಸತ್ಯಾಗ್ರಹವನ್ನು ಒಪ್ಪಿಕೊಂಡ ಕೂಡಲೇ ಒಬ್ಬ ಸೈನಿಕನೂ ಅಪರಾಧಿಯಾಗಿಬಿಡುತ್ತಾನೆ.

ಸತ್ಯಾಗ್ರಹದಲ್ಲಿ ಗೆಲ್ಲುವುದು ಸಾಧ್ಯವೇ? ಎಂದು ನಾವೆಲ್ಲರೂ ಅನುಮಾನಿಸುತ್ತೇವೆ. ನಿಜ ಆದರೆ ಮಿಲಿಟರಿ ಕಾರ್ಯಾಚರಣೆಯೂ ನೂರಕ್ಕೆ ನೂರು ಯಶಸ್ವಿಯಾಯಿತೆಂದು ಹೇಳುವಂತೆ ಇಲ್ಲ.’ (ಇರಾಕ್‌ ಮೇಲೆ ಅಮೆರಿಕ ಮಾಡಿದ ಯುದ್ಧವೇ ಉದಾಹರಣೆ) ಆದ್ದರಿಂದ ಸತ್ಯಾಗ್ರಹ ನೂರಕ್ಕೆ ನೂರು ಯಶಸ್ವಿಯಾಗುವುದಿಲ್ಲ ಎನ್ನುವ ವಾದ ಅಷ್ಟು ಸಮರ್ಪಕವಲ್ಲ. ಹಾಗೆಯೇ ಸತ್ಯಾಗ್ರಹಿಯಾದವನು ಯುದ್ಧ ಮಾಡುತ್ತಿರುವ ಎರಡು ರಾಜ್ಯಗಳಲ್ಲಿ ಯಾವುದಾದರೂ ಒಂದು ರಾಜ್ಯದ ಕಡೆ ಹೆಚ್ಚು ನ್ಯಾಯವಿದೆ ಎಂಬ ನಿಲುವನ್ನು ಬಿಟ್ಟುಕೊಡಬೇಕಾಗಿಲ್ಲ. ಯುದ್ಧಕಾಲದಲ್ಲಿ ಗಾಂಧೀಜಿ ಇದನ್ನು ಅರಿತಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ಬಂದದ್ದೇ ಗಾಂಧೀಜಿ ಅತ್ಯಂತ ಒಂದು ದೊಡ್ಡ ಪರೀಕ್ಷೆಗೆ ಒಳಗಾದರು. ಎಲ್ಲೆಲ್ಲೂ ಹಿಂಸೆ – ಪ್ರತಿಹಿಂಸೆ ಕಾಣಿಸಿಕೊಂಡಿತ್ತು. ಸೇನೆಯ ಸಹಾಯವಿಲ್ಲದೆ ಗಾಂಧೀಜಿ ನವಾಖಲಿಯಲ್ಲಿ ಹಿಂಸೆಯನ್ನು ಗೆದ್ದರು. ಶಾಶ್ವತ ಶಾಂತಿಯ ಮತ್ತು ಸೈನ್ಯವಿಲ್ಲದ ರಾಜ್ಯದ ಕನಸು ಕಾಣುವವರು ಈ ಘಟನೆಯನ್ನು ನಿರ್ಲಕ್ಷಿಸಬಾರದು.

* * *

ನನ್ನದೊಂದು ನೆನಪನ್ನು ಈ ಲುಮ್ಮಿಸ್ ವಿಚಾರಧಾರೆಯೊಳಗೇ ಬಳಸಿಕೊಳ್ಳಲು ಬಯಸುತ್ತೇನೆ. ಜನರಲ್ ಕಾರಿಯಪ್ಪನವರನ್ನು ಮಡಿಕೇರಿಯಲ್ಲಿ ಅವರ ಮನೆಯಲ್ಲಿ ಭೇಟಿಯಾದಾಗ ಅವರು ನನಗೆ ಹೇಳಿದ ಘಟನೆ ಇದು. ಹಿಂಸೆಯನ್ನು ಮಾಡಬಾರದು ಎಂದು ಹೇಳುವ ಗಾಂಧೀಜಿಗೆ ಕಾರಿಯಪ್ಪ ಒಂದು ಕಾಗದ ಬರೆದರು : ‘ನೀವು ಹೇಳುವುದನ್ನು ನಾನು ಅನುಸರಿಸುವುದಾದರೆ ನಮ್ಮ ಸೈನಿಕರನ್ನು ಯಾವ ರೀತಿಯಲ್ಲಿ ನಾನು ತಯಾರು ಮಾಡಬೇಕು ಹೇಳಿ?’

ಇದಕ್ಕೆ ಉತ್ತರವಾಗಿ ಗಾಂಧೀಜಿ ತಮ್ಮನ್ನು ಭೇಟಿಯಾಗುವಂತೆ ಕಾರಿಯಪ್ಪನವರನ್ನು ಕರೆದಿದ್ದರು. ಕಾರಿಯಪ್ಪನವರು ಹೋದ ದಿನ ಗಾಂಧಿ ಮೌನವ್ರತ ಪಾಲಿಸುತ್ತಿದ್ದುದರಿಂದ ಅವರು ಒಂದು ಚೀಟಿಯಲ್ಲಿ ಹೀಗೆ ಬರೆದರು. ‘ಕರ್ತವ್ಯ ನಿಷ್ಠರಾದ ನಿಮ್ಮ ಪ್ರಶ್ನೆ ಬಹಳ ಮುಖ್ಯವಾದುದು. ಈ ಪ್ರಶ್ನೆಯ ಬಗ್ಗೆ ನಾನು ಚಿಂತಿಸಿ ಹೇಳುವುದಿದೆ, ಇನ್ನೊಮ್ಮೆ ಬನ್ನಿ.’

ಜನರಲ್ ಕಾರಿಯಪ್ಪನವರು ವ್ಯಾಕುಲದಿಂದ ಹೇಳಿದರು. ‘ಇದು ಸಾಧ್ಯವಾಗಲಿಲ್ಲ. ಸ್ವಲ್ಪ ದಿನಗಳಲ್ಲೇ ಮಹಾತ್ಮರು ಹುತಾತ್ಮರಾದರು.’

ಅತ್ಯಂತ ಕನಿಷ್ಠ ಪ್ರಮಾಣದ ಸೈನ್ಯವನ್ನು ಪಡೆದ ವ್ಯವಸ್ಥೆಯ ಸ್ವರೂಪ ಕುರಿತು ಗಾಂಧೀಜಿ ಬಹಳ ಕಾಲದಿಂದ ಚಿಂತಿಸುತ್ತಿದ್ದಿರಬೇಕು –  ಅವರು ಕಾರಿಯಪ್ಪನವರಿಗೆ ಹೀಗೆ ಹೇಳಿದಾಗ.

ಶ್ರೀಮನ್ ನಾರಾಯಣ ಅಗರ್‌ವಾಲ್ ಎನ್ನುವವರದ್ದೊಂದು ಪುಸ್ತಕ ಇದೆ. ಗಾಂಧಿಯನ್ ಕಾನ್ಸ್‌ಟಿಟ್ಯೂಟ್‌ಫಾರ್ ಫ್ರೀ ಇಂಡಿಯಾ ಎನ್ನುವುದು ಪುಸ್ತಕದ ಹೆಸರು. ಆದರೆ ಈ ಮಹತ್ವದ ಪುಸ್ತಕ ಎಲ್ಲೂ ಸಿಗುವುದಿಲ್ಲ ಎಂದು ಡಗ್ಲಸ್‌ ಲುಮ್ಮೀಸ್‌ ಬೇಸರ ಪಡುತ್ತಾನೆ. ಭಾರತದ ಸ್ವತಂತ್ರವಾಗುದಕ್ಕೆ ಸ್ವಲ್ಪ ದಿನ ಮುನ್ನ ಗಾಂಧಿ ಮಾಡಿದ ವಿಚಾರಗಳು ಈ ಪುಸ್ತಕದಲ್ಲಿವೆ. ಈ ಇಡೀ ಪುಸ್ತಕದ ವೈಚಾರಿಕತೆಯ ಆಧಾರವಾಗಿರುವ ಮಾತೆಂದರೆ ಇದು. ಸ್ವಾತಂತ್ರ್ಯ ತಳಮಟ್ಟದಿಂದ ಪ್ರಾರಂಭವಾಗಬೇಕು. ಪ್ರತಿಯೊಂದು ಹಳ್ಳಿಯೂ ಒಂದು ರಿಪಬ್ಲಿಕ್ ಆಗಿರಬೇಕು. ಗಾಂಧಿ ಹೀಗೆ ಹೇಳಿರಬಹುದೇ ಎಂದು ಅನುಮಾನಿಸುವವರೂ ಅಚ್ಚರಿ ಪಡುವವರೂ ಇದ್ದಾರೆ.

ಗಾಂಧೀಜಿ ರಿಪಬ್ಲಿಕ್ ಎನ್ನುವ ಶಬ್ದವನ್ನು ಉಪಯೋಗಿಸಿದರು ಎಂಬುದನ್ನು ಸಮರ್ಥಿಸಿಕೊಳ್ಳಲಾರದೆ ಬಿಕ್ಕು ಪಾರೀಖ್‌ನಂಥವರೂ ಸ್ವಾಯತ್ತತೆ ಪಡೆದ ಹಳ್ಳಿಗಳು ಎಂದು ಇದನ್ನು ಅರ್ಥೈಸುತ್ತಾರೆ. ಗಾಂಧಿಯನ್ನು ಅಕ್ಷರಶಃ ನಂಬುವುದಾದರೆ ಭಾರತದಲ್ಲಿ ೭೦೦ ಸಾವಿರ ಹಳ್ಳಿಗಳಿದ್ದರೆ ೭೦೦ ಸಾವಿರ ರಿಪಬ್ಲಿಕ್‌ಗಳು ಇರುವುದೆಂದಾಯಿತು. ಈ ಎಲ್ಲಾ ರಿಪಬ್ಲಿಕ್‌ಗಳ ರಾಯಭಾರಿಗಳಿಗೆ ಯುನೈಟೆಡ್‌ ನೇಷನ್ಸ್‌ (ವಿಶ್ವಸಂಸ್ಥೆ)ನಲ್ಲಿ ಜಾಗವೇ ಇರುವುದಿಲ್ಲ. ವಿಶ್ವಸಂಸ್ಥೆಯನ್ನು ಹೀಗೆ ತುಂಬುವುದು ಗಾಂಧೀಜಿಯ ಉದ್ದೇಶವಾಗಿರಲಿಲ್ಲ. ಈ ಹಳ್ಳಿ ರಿಪಬ್ಲಿಕ್‌ಗಳು (ಪಂಚಾಯಿತಿಗಳು) ತಾಲೂಕು ಪಂಚಾಯಿತಿಯನ್ನೂ, (೨೦ ಹಳ್ಳಿಗಳು ಸೇರಿ), ಈ ಪಂಚಾಯಿತಿಗಳ ಅಧ್ಯಕ್ಷರು ಜಿಲ್ಲಾ ಪಂಚಾಯಿತಿಯನ್ನೂ, ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರು ರಾಜ್ಯ ಪಂಚಾಯಿತಿಯನ್ನೂ, ರಾಜ್ಯ ಪಂಚಾಯಿತಿಯ ಅಧ್ಯಕ್ಷರು ಅಖಿಲ ಭಾರತ ಪಂಚಾಯಿತಿಯನ್ನೂ ರೂಪಿಸುತ್ತಿರುತ್ತಾರೆ. ಇದನ್ನು ಮುಂದಿಟ್ಟುಕೊಂಡು ಕೆಲವರು ‘ಕೊನೆಯಲ್ಲಿ ಗಾಂಧಿ ರಾಜ್ಯ ಪ್ರಭುತ್ವವನ್ನು ಹಿಂಬಾಗಿಲಿನಿಂದ ಒಪ್ಪಿಕೊಂಡರಾಯಿತು’ ಎನ್ನುವವರಿದ್ದಾರೆ. ಆದರೆ ಗಾಂಧಿಯ ಕನಸು ಈ ಅಖಿಲ ಭಾರತ ಪಂಚಾಯಿತಿ ವಿಶ್ವಸಂಸ್ಥೆಯ ಮಾದರಿಯಲ್ಲಿ ಇರಬೇಕು ಎಂಬುದಾಗಿತ್ತು. ವಿಶ್ವಸಂಸ್ಥೆಗೆ ಅಧಿಕಾರವಿದೆ. ಅದು ಅಂತಾರಾಷ್ಟ್ರೀಯ. ಆದರೆ ಅದಕ್ಕೆ ಒಂದು ರಾಜ್ಯ ಪ್ರಭುತ್ವದ ಅಧಿಕಾರ ಅಥವಾ ಸಾರ್ವಭೌಮತೆ ಇರುವುದಿಲ್ಲ. ಅಂದರೆ ಗಾಂಧಿಯ ಕನಸಿನ ಭಾರತದಲ್ಲಿ ಈ ಪಂಚಾಯಿತಿ ಸಮುಚ್ಚಯದಲ್ಲಿ ಒಬ್ಬರಿಗೊಬ್ಬರು ಅನುಕೂಲವಾಗಿ ವರ್ತಿಸುತ್ತಾರೆ. ಕೊಟ್ಟು ಕೊಳ್ಳುವ ವ್ಯವಹಾರ ನಡೆಸುತ್ತಾರೆ. ಆದರೆ ಒಬ್ಬರ ಮೇಲೆ ಒಬ್ಬರು ಅಧಿಕಾರ ಚಲಾಯಿಸುವುದಿಲ್ಲ.

ಗಾಂಧೀಜಿಯ ಕನಸಾಗಿದ್ದ ಈ ವ್ಯವಸ್ಥೆ ಕಾರ್ಲ್‌‌ಮಾರ್ಕ್ಸ್ ಕೊನೆಯಲ್ಲಿ ಒಪ್ಪಿಕೊಂಡಿದ್ದನೆಂದು ಹೇಳಬಹುದಾದ ವ್ಯವಸ್ಥೆಗೆ ಸಮೀಪವಾದುದು. ಪ್ರಿಮಿಟಿವ್‌ ಕಮ್ಯುನಿಸ್ಟ್‌ ವ್ಯವಸ್ಥೆಗಳಿದ್ದ ಇತಿಹಾಸಪೂರ್ವದ ವ್ಯವಸ್ಥೆಯನ್ನೇ ರಷ್ಯಾದ ಕ್ರಾಂತಿಕಾರರು ಒಪ್ಪಿಕೊಳ್ಳಬಹುದೆಂದು ಮಾರ್ಕ್ಸ್‌ಭಾವಿಸಿದ್ದನಂತೆ. ಮಾರ್ಕ್ಸ್ ಈ ಬಗೆಯ ತೀರ್ಮಾನಕ್ಕೆ ಬಂದಿದ್ದನೆಂಬುದು ಬಾಲ್ಶಿವಿಕ್‌ರಿಗೆ ಆಗಲೀ ಲೆನಿನ್‌ಗಾಗಲೀ ಗೊತ್ತೇ ಇರಲಿಲ್ಲವೆಂದು (?) ಮಾರ್ಕ್ಸ್‌ಬರೆದ ಪತ್ರಗಳನ್ನು ೧೯೨೪ ರ ತನಕ ಮುಚ್ಚಿಡಲಾಯಿತೆಂದೂ ಹೇಳುತ್ತಾರೆ.

ಪಂಚಾಯತ್‌ವ್ಯವಸ್ಥೆಯಲ್ಲಿ ಒಂದು ದೊಡ್ಡ ಸೈನ್ಯಕ್ಕೆ ಜಾಗವೇ ಇಲ್ಲ. ಅಂತಹ ಒಂದು ವ್ಯವಸ್ಥೆಯಲ್ಲಿ ಕೇಂದ್ರದಲ್ಲಿರುವ ಆಡಳಿತವೊಂದಕ್ಕೆ ತಲೆಬಾಗಿ ಬಾಳಬೇಕಾದ ಅಗತ್ಯ ಯಾರಿಗೂ ಇರುವುದಿಲ್ಲ. ಯಾಕೆಂದರೆ  ಸಾರ್ವಭೌಮತೆ ಪಡೆದ ಕೇಂದ್ರವೇ ಇರುವುದಿಲ್ಲ.

ಡಗ್ಲುಸ್ ಲುಮ್ಮಿಸ್ ನೂರಾರು ಪಂಚಾಯತ್‌ಗಳಿಂದ ರೂಪುಗೊಳ್ಳುವ ರಾಜ್ಯವನ್ನು ಒಂದು ರೂಪಕದಿಂದ ವರ್ಣಿಸುತ್ತಾನೆ. ಅದು ಮೈಯಲ್ಲಾ ಮುಳ್ಳಿನ ಚೂಪು ಬಾಣಗಳನ್ನು ಪಡೆದ ಮುಳ್ಳುಹಂದಿ. ಈ ಮುಳ್ಳುಹಂದಿಯ ಮೇಲೆ ಎಗರಿ ಯಾವ ದೇಶವಾದರೂ ಯುದ್ಧ ಮಾಡುವುದು ಸಾಧ್ಯವೇ ಎಂದು ಕೇಳುತ್ತಾನೆ.

ಹೀಗೆ ಇವತ್ತು ಊಹಿಸಲೂ ಸಾಧ್ಯವಿಲ್ಲದ ರಾಜ್ಯ ವ್ಯವಸ್ಥೆಯ ಕನಸನ್ನು ಗಾಂಧಿ ಕಂಡಿದ್ದರು. ಭಾರತ ಸ್ವಾತಂತ್ರ್ಯವಾಗುವ ಸಂದರ್ಭದಲ್ಲಿ ಸ್ವಾಯತ್ತ ಹಳ್ಳಿಗಳನ್ನು ಕಂಡು ಅನುಭವವಿದ್ದ ಗಾಂಧೀಜಿಗೆ ಹಳ್ಳಿಯೊಂದು ಸ್ವಾಯತ್ತ ರಿಪಬ್ಲಿಕ್‌ನಂತೆ ಇರುವುದು ಕೇವಲ ಕನಸಾಗಿರಲಿಲ್ಲ. ಎಷ್ಟೋ ಹಳ್ಳಿಗಳ ವಾಸ್ತವ ಅದಾಗಿತ್ತು. ಹೀಗಾಗಿ ಅಸ್ಪೃಶ್ಯತೆಯನ್ನು ತೊಡೆದುಹಾಕಿದ ಸ್ವತಂತ್ರ ಭಾರತ ಆಯ್ಕೆ ಮಾಡಿಕೊಳ್ಳಬಹುದಾದ ಒಂದು ವ್ಯವಸ್ಥೆಯೂ ಆಗಿತ್ತು. ಈ ಕನಸುಗಳನ್ನು ಕಾಣುತ್ತಿದ್ದಾಗಲೇ ತನ್ನ ವೈಯಕ್ತಿಕ ನೈತಿಕತೆಯ ಬಲದಿಂದ ನವಾಖಲಿಯಲ್ಲೂ ದೆಹಲಿಯಲ್ಲೂ ಹಿಂಸೆಯನ್ನು ತಡೆಗಟ್ಟಿ ಪಾಕಿಸ್ತಾನಕ್ಕೆ ಸಲ್ಲಬೇಕಾದ ಹಣವನ್ನು ಕೊಡಬೇಕೆಂದು ಆಗ್ರಹಿಸಿ ಉಪವಾಸ ಮಾಡಿದ ಗಾಂಧಿ ಗೋಡ್ಸೆಯ ಗುಂಡಿಗೆ ಬಲಿಯಾಗಿ ಸತ್ತರು.

* * *

ನನಗೆ ನೆನಪಿರುವಂತೆ ಕನ್ನಡ ಲೇಖಕ ವಿ. ಸೀತಾರಾಮಯ್ಯನವರು ಗಾಂಧಿ ಕೊಲೆಯಾದಾಗ ಒಂದು ಮಾತು ಹೇಳಿದ್ದರು. ‘ಗಾಂಧಿಯನ್ನು ಕೊಂದ ಸರ್ಪದ ವಿಷಪೂರಿತವಾದ ದೇಹ ನಾವು. ಗೋಡ್ಸೆ ಅದರ ಹಲ್ಲು ಮಾತ್ರ’ ಎಂದು. ಇದೇ ಅರ್ಥ ಬರುವಂತೆ ಡಗ್ಲಸ್‌ಲುಮ್ಮಿಸ್‌ ತನ್ನ ಭಾಷಣದ ಕೊನೆಯಲ್ಲಿ ವಾದಿಸುತ್ತಾನೆ. ಈ ಭಾಷಣದಲ್ಲಿ ನನಗೆ ಬಹಳ ಕುತೂಹಲಕರವಾಗಿ ಕಂಡದ್ದೆಂದರೆ ನಾನು ಈ ಹಿಂದೆ ಸುಬ್ಬಣ್ಣ ವಿವರಿಸುವ ಜನಪದೀಯ ಬಲಿ ಕಲ್ಪನೆಯ ಬಗ್ಗೆ ಹೇಳಿದ್ದನ್ನು ಇನ್ನೂ ವಿಶಾಲವಾದ ಅರ್ಥದಲ್ಲಿ ಡಗ್ಲುಸ್‌ ಲುಮ್ಮಿಸ್ ಹೆಚ್ಚು ಅರ್ಥಪೂರ್ಣವಾಗಿ ಹಿಗ್ಗಿಸುತ್ತಾನೆ ಎಂಬುದು. ನಾವು ಕಟ್ಟಲು ಹೊರಟಿದ್ದ ಹೊಸ ರಾಜ್ಯವ್ಯವಸ್ಥೆಗೆ ತುಂಬ ಪ್ರೀತಿಸುತ್ತಿದ್ದ ಗಾಂಧೀಜಿ ಒಂದು ತೊಡಕಾಗಿ ಕಂಡಿದ್ದರಿಂದ ಅವರನ್ನು ಬಲಿ ಕೊಡುವುದು ಹೊಸದಾಗಿ ಹುಟ್ಟುತ್ತಿದ್ದ ಯಥಾವತ್ತಾದ ರಾಷ್ಟ್ರದ ಅಗತ್ಯವಾಗಿತ್ತೆ? ಅವರ ಎಲ್ಲ ಹಿಂಬಾಲಕರಿಗೂ ಹೀಗೆ ಅನ್ನಿಸಿದ್ದಿರಬಹುದೇ?

ಗಾಂಧಿ ಕೊಲೆಯಾದ ನಂತರ ದೇಶ ಸರಿಯಾದ ಹಾದಿಯಲ್ಲಿ ಬಲಿಷ್ಠ ರಾಷ್ಟ್ರವಾಗಲು ಹೊರಟಿದೆ ಎಂದು ಗೋಡ್ಸೆ ಸಂತೋಷಪಟ್ಟು ಹೇಳಿದ ಮಾತುಗಳು ಅವನ ಮರಣ ಪೂರ್ವ ಹೇಳಿಕೆಯಲ್ಲಿವೆ. ಗಾಂಧಿಯ ರಕ್ತವನ್ನು ಅವನು ಚೆಲ್ಲಿದ್ದು ಮಾತ್ರ; ಆದರೆ ನಾವೆಲ್ಲರೂ ಅದನ್ನು ಬಯಸಿದ್ದೆವು – ಅಪ್ರಜ್ಞಾಪೂರ್ವಕವಾಗಿ ಬಯಸಿದೆವು – ಎಂದು ಲುಮ್ಮಿಸ್ ಆಶೀಶ್‌ ನಂದಿಯನ್ನು ಒಪ್ಪಿ ವಾದಿಸುತ್ತಾನೆ.

ಮೆಕವಲ್ಲಿಯನ್ನು ಅವನು ಮತ್ತೆ ಉದ್ಧರಿಸುತ್ತಾನೆ. ಎಲ್ಲಾ ಹೊಸ ರಾಜ್ಯ ವ್ಯವಸ್ಥೆಗಳೂ ಬಲಿಯನ್ನು ಕೇಳುತ್ತವೆ. ಬ್ರೂಟಸ್‌ ತಾನು ಬಯಸುವ ಸ್ವಾತಂತ್ರ್ಯಕ್ಕಾಗಿ ಅದನ್ನು ವಿರೋಧಿಸಿದ ತನ್ನ ಮಕ್ಕಳನ್ನೂ ಕೊಲ್ಲುತ್ತಾನೆ, ಸೀಸರನನ್ನು ಕೊಲ್ಲುತ್ತಾನೆ. ನಿರಂಕುಶ ಪ್ರಭುತ್ವದ ಸ್ಥಾಪನೆಗಾಗಿ ಆಂಟನಿ ಬ್ರೂಟಸ್‌ನನ್ನು ಕೊಲ್ಲುತ್ತಾನೆ.

ಗೋಡ್ಸೆಯು ಇಡೀ ರಾಜ್ಯ ಪ್ರಭುತ್ವದ ಪ್ರತಿನಿಧಿಯಾಗಿ ತಾನು ಗಾಂಧಿಯನ್ನು ಬಲಿ ತೆಗೆದುಕೊಳ್ಳಬೇಕಾಯಿತು ಎಂದು ತಿಳಿಯುತ್ತಾನೆ. ಮೆಕವಲ್ಲಿಯನ್ನು ಬಳಸಿಕೊಂಡು ಡಗ್ಲಸ್‌ ಲುಮ್ಮಿಸ್ ಹೇಳುತ್ತಾನೆ ‘ಹಿಂಸೆಯ ಅಧಿಕಾರವನ್ನು ಪಡೆದ ರಾಜ್ಯ ವ್ಯವಸ್ಥೆಯನ್ನು ಕಟ್ಟಬೇಕೆಂದರೆ ಗಾಂಧಿಯನ್ನು ಕೊಲ್ಲಲೇಬೇಕಾಗಿತ್ತು.’

ಹಿಂಸೆಯ ಅಧಿಕಾರವನ್ನು ಪಡೆದ ರಾಜ್ಯವೆಂದರೆ ಹಿಂಸಾತ್ಮಕ ವ್ಯವಸ್ಥೆಯೆಂದೇ ತಿಳಿಯಬೇಕಾಗಿಲ್ಲ. ಪ್ರಜಾತಂತ್ರದಲ್ಲಿ ಇದಕ್ಕೆ ಸಾಕಷ್ಟು ನೀತಿ ನಿಯಮಗಳ ನಿಬಂಧನೆ ಇದ್ದೇ ಇರುತ್ತದೆ. ಭಾರತವೂ ತಾನೊಂದು ನಿರಂಕುಶ ರಾಜ್ಯ ವ್ಯವಸ್ಥೆಯೆಂದು ಹುಚ್ಚುಹುಚ್ಚಾಗಿ ವರ್ತಿಸಿದೆ ಎಂದು ಹೇಳುವಂತಿಲ್ಲ. ಆದರೆ ಒಂದು ಬಲಿಷ್ಠ ರಾಷ್ಟ್ರವಾಗಲು ಎಷ್ಟು ಹಿಂಸೆಗೆ ತಯಾರಾಗಬೇಕೋ ಅಷ್ಟೂ ತಯಾರಿಕೆಯನ್ನು ಭಾರತ ಮಾಡಿಕೊಂಡಿದೆ. ಇದರ ಮುನ್ಸೂಚನೆ ಎಂಬಂತೆಯೇ ಗಾಂಧೀಜಿಯ ಸಂಸ್ಕಾರವೂ ಅದ್ಧೂರಿಯಾದ ಸೈನ್ಯದ ಕವಾಯಿತಿನಲ್ಲಿ ನಡೆಯಿತು. ಅವನ ಪಾರ್ಥೀವ ಶರೀರವನ್ನು ಶಸ್ತ್ರಾಸ್ತ್ರಗಳನ್ನು ಒಯ್ಯುವ ವಾಹನದ ಮೇಲೆ ತೆಗೆದುಕೊಂಡು ಹೋಗಲಾಯಿತು.

ಡಗ್ಲಸ್‌ ಲುಮ್ಮಿಸ್ ತನ್ನ ಭಾಷಣವನ್ನು ಬರ್ನಾಡ್‌ಶಾ ನ ಸೇಂಟ್ ಜೋನ್‌ನಾಟಕದ ಒಂದು ಸಂಭಾಷಣೆಯಿಂದ ಮುಗಿಸುತ್ತಾನೆ. ‘ಅವಳ ಹೋರಾಟದಿಂದಾಗಿ ಚಾರ್ಲ್ಸ್ ದೊರೆಯಾದ. ಅವಳನ್ನು ಬೆಂಕಿಯಲ್ಲಿ ಸುಟ್ಟು ಕೊಂದವರೆಲ್ಲರೂ ತಮ್ಮ ತಪ್ಪನ್ನು ಒಪ್ಪಿಕೊಂಡರು.’ ಈ ಸಂದರ್ಭದಲ್ಲಿ ಬರ್ನಾಡ್‌ಶಾ ನಾಟಕಕಾರನಾಗಿ ತನ್ನ ಸ್ವಾತಂತ್ರ್ಯ ಬಳಸಿ ೧೯೨೦ ಕ್ಕೆ ಒಬ್ಬ ದೂತನನ್ನು ನಾಟಕದೊಳಕ್ಕೆ ತರುತ್ತಾನೆ. ಜೋನ್‌ಗೆ ಸಂತತ್ವ ಪ್ರಾಪ್ತಿಯಾಗಿದೆ ಎಂದು ಆತ ಹೇಳಿದಾಗ ಎಲ್ಲರೂ ತಲೆಬಾಗಿ ಜೋನಳನ್ನು ಪ್ರಾರ್ಥಿಸಲು ಶುರು ಮಾಡುತ್ತಾರೆ. ಆಗ ಜೋನ್‌ಹೇಳುತ್ತಾಳೆ ‘ಎಲ್ಲರೂ ನನ್ನನ್ನು ಸ್ತುತಿಸಲು ಪ್ರಾರಂಭವಾದದ್ದೇ ನಾನು ನಾಶವಾದೆ ಎಂದು ಅರ್ಥ. ನನ್ನನ್ನು ಸಂತಳೆಂದು ತಿಳಿಯುತ್ತೀರಲ್ಲವೇ? ಸಂತರಿಗೆ ಪವಾಡ ಮಾಡುವ ಶಕ್ತಿಯಿದೆಯಲ್ಲವೇ? ಹಾಗಾದರೆ ಕೇಳಿ: ನಾನು ಸಾವಿನಿಂದ ಹಿಂದಿರುಗಿ ಒಬ್ಬ ಜೀವಂತ ಹೆಂಗಸಾಗಿ ನಿಮ್ಮೊಡನೆ ಬಂದು ಸೇರಿಕೊಳ್ಳಲೇ?’

ಪ್ರಾರ್ಥನಾ ನಿರತರಾಗಿದ್ದ ಭಕ್ತರೆಲ್ಲರೂ ಮುಜುಗರ ಪಡುತ್ತಾ ಭೀತರಾಗಿ ಹಿಂದಿರುಗುತ್ತಾರೆ.

೨೦೦೭

* * *


* ಸಿಎಸ್‌ಡಿಎಸ್‌ನಲ್ಲಿ ರಜಿ ಕೊಠಾರಿ ಸಂದರ್ಶಕ ಪ್ರಾಧ್ಯಾಪಕರಾಗಿ ಡಗ್ಲಾಸ್‌ಲುಮ್ಮಿಸ್‌ಮಾಡಿದ ಭಾಷಣದ ಆಧಾರ