ಬದುಕಿದ್ದರೆ ಅಡಿಗರಿಗೆ ಇಂದಿಗೆ ತೊಂಬತ್ತು ವರ್ಷವಾಗಿರುತ್ತಿತ್ತು. ಯಾವತ್ತೋ ಅವರು ಬರೆದ ‘ಇಂದು ನಮ್ಮೀ ನಾಡು’ ಎನ್ನುವ ಮೂರು ಪದ್ಯಗಳು ಇವೆ. ಆ ಮೂರು ಪದ್ಯಗಳೂ ಇವತ್ತಿಗೂ ಪ್ರಸ್ತುತವೆಂದರೆ ಅವರ ಕಾವ್ಯದ ಹಿರಿಮೆಯನ್ನು ಹೇಳಿದಂತಾಗಬಾರದು; ಬದಲಾಗಿ, ಆ ಪದ್ಯಗಳು ಪ್ರಸ್ತುತವಾಗುವಂತೆ ನಾವಿನ್ನೂ ಬದುಕುತ್ತ ಇದ್ದೀವಿ ಅಲ್ಲವೆ ಎಂದು ನಾಚಿಕೆಯಾಗಬೇಕು.

ಮೊದಲನೆಯ ಪದ್ಯದಲ್ಲಿ ಇಂದು ನಮ್ಮೀ ನಾಡು ಜಾತ್ರೆ ಗಜಿಬಿಜಿ ಕಳೆದು ಪಡಖಾನೆಯಲ್ಲಿ ಪಟ್ಟ ಜನರ ಪಾಡು ಆಗಿದೆ. ತೇರ ಹಿಡಿದೆಳೆದ ಕೈ, ಬಾಗಿ ಪೊಡಮಟ್ಟ ಮೈ, ಭಕ್ತಿ ತುಳುಕಾಡಿದ್ದ ಅಂತರಂಗ ಈಗ ನರಕಕ್ಕೆ ಕೈಮರ. ಉತ್ಸವದ ಮೂರ್ತಿ ರಥವಿಳಿದು ದೇವಾಲಯದ ಮೂಲೆ ಕತ್ತಲಿನಲ್ಲಿ ಮುಗ್ಗುತಿಹುದು. ಇನ್ನು ಮೂಲ ವಿಗ್ರಹವೋ? ಅದು ಅಚಲವಾದ ಕಲ್ಲು. ಅದರ ಘೋರ ನೈರಾಶ್ಯವನ್ನು ಹಲ್ಲಿ ಲೊಚಗುಟ್ಟಿ ಧ್ವನಿಸುತ್ತದೆ. ಜಾತ್ರೆ ಹೀಗೆ ಬರುತ್ತದೆ; ಹೋಗುತ್ತದೆ; ತೇರು ಅರಳುತ್ತದೆ; ಬೋಳಾಗುತ್ತದೆ. ಕವಿಗೆ ಇನ್ನೂ ಆಶಯಗಳು ಇವೆ. ಮೂಲವಿಗ್ರಹವೆ ಉತ್ಸವಮೂರ್ತಿಯಾದೀತೆ? ದಿನದಿನವು ಜಾತ್ರೆಯ ಉತ್ಸಾಹ ಹೊಮ್ಮೀತೆ?

ಎರಡನೆಯ ಪದ್ಯದಲ್ಲಿ ಇಂದು ನಮ್ಮೀ ನಾಡು ಹೊಸ ಹೊಸ ಸರಕುಗಳನ್ನು ಮಾರುತ್ತಲಿದೆ. ಇತ್ತೀಚಿನ ನೊಯಿಡಾ ಘಟನೆಯನ್ನು ನೆನಪು ಮಾಡುವಂತೆ ಮಾರುವುದು ಏನನ್ನು? ‘ಕೂಸುಗಳ ಕಂಕಾಲ, ಕಣ್ಣುಗುಡ್ಡೆಗಳ ಗಾಜು, ಹೃತ್ಪಿಂಡ ಚೆಂಡು, ಬೆನ್ನಲುಬಿನ ದಾಂಡು’.

ಮೂರನೆಯ ಪದ್ಯದಲ್ಲಿ ನಾವೀಗ ನಮ್ಮ ಭವ್ಯ ಸಮಾಜೋತ್ಸವಗಳಲ್ಲಿ, ರಾಜಕಾರಣಿಗಳು ನಡೆಸುವ ಯಜ್ಞಯಾಗಾದಿಗಳಲ್ಲಿ, ಮಠಾಧೀಪತಿಗಳು ಒಟ್ಟಾಗಿ ಕೊಡುವ ದಿವ್ಯ ಸಂದೇಶಗಳಲ್ಲಿ ಆಗುತ್ತ ಇರುವುದನ್ನೇ ವರ್ಣಿಸುತ್ತಾರೆ. ‘ಏ ಮಗು ಬೇರು ಸತ್ತೀ ಮರವ ಎತ್ತಿ ನಿಲ್ಲಿಸು. ಕೊಂಬೆರೆಂಬೆಗಳು ಅವೇ ಇರಲಿ. ಒಣಗಿದೆಲೆಯ ತಂದು ಕಾಫಿಕಾಯಿಸಿ ಕುಡಿದು ನಿನ್ನ ಕಂಠಕಳಲ ಬೇಗೆಯನ್ನು ನೀಗಿಕೊ.’

ಎತ್ತಿ ನಿಲ್ಲಿಸಿದ ಈ ಬೇರುಸತ್ತ ಮರದ ಸುತ್ತ ಒಂದು ಕಟ್ಟೆಯನ್ನು ಕಟ್ಟು. ಅದರಲ್ಲಿ ನೀರನ್ನು ಹಾಕು. ಕೊಂಚ ವಿಷಾದವೆ? ಒಂದಿಷ್ಟು ಕಣ್ಣೀರನ್ನೂ ಹಾಕು. ಮರ ಚಿಗುರಲಿಲ್ಲವೆ? ಬಲ್ಬುಗಳನ್ನು ತಂದು ಜೋಡಿಸು. ಕಾಗದ ಹೂ ಕುಚ್ಚುಗಳನ್ನು ತಂದು ಹಚ್ಚು.

ಈ ಮರದ ಬುಡದಲ್ಲಿ ನೆರಳಿಲ್ಲ; ಕೊಂಬೆ ಬರಿ ಪೊಳ್ಳು ಎಂದುಕೊಳ್ಳಬೇಡ. ಹೊನ್ನಿನ ಹೊದಿಕೆಯನ್ನು ಅದಕ್ಕೆ ಹಾಕು. ಅದರ ಮಿರುಗಿಗಿಂತ ಹೆಚ್ಚಿನ ನೆರಳು ಯಾಕೆ ಬೇಕು? ನೆನಪಿಡು. ಇದು ಸನಾತನ ವೃಕ್ಷ. ನೇಣು ಹಾಕಿಕೊಳ್ಳಲು ಈ ಸನಾತನ ವೃಕ್ಷದ ಕೊಂಬೆಗಿಂತ ಬೇರೆ ಆಧಾರ ಯಾಕೆ ಬೇಕು ನಿನಗೆ? ಈ ಮಹಾನ್ ಭವ್ಯ ಸನಾತನ ಸಂಸ್ಕೃತಿಯ ಈ ನಮ್ಮ ದಿವ್ಯತರು ನೆಲದ ಕೊಳೆ ನೀರನ್ನು ಒಲ್ಲದು; ಅದು ಕುಡಿದು ಬೆಳೆಯುವುದು ಸ್ವಪ್ನಲೋಕದ ಅಮೃತವನ್ನೆ. ನಮ್ಮ ವಿರಾಟ್ ಸಮ್ಮೇಳನಗಳಲ್ಲಿ ನಮ್ಮ ಮಠಾಧೀಶರೆಲ್ಲರೂ ಈ ಅಮೃತವನ್ನು ಸತತ ಹರಿಸುತ್ತ ಇಲ್ಲವೆ?

ಇಲ್ಲಿಗೊಂದೂ ಹಕ್ಕಿ ಬರುವುದಿಲ್ಲವೆಂದು ಬೇಸರವೆ? ಬೇರುಸತ್ತ ಮರಕ್ಕೆ ಬರುವುದಿಲ್ಲವೆಂಬ ಹಠದ ಕೋಗಿಲೆಯನ್ನು ಕೊಲ್ಲು. ಅದರ ಒಳಗೆ ಹುಲ್ಲು ತುರುಕಿ ಕೊಂಬೆ ಮೇಲೆ ಸಾಲಾಗಿ ಇಡು. ಅಪರಂಜಿ ತಡಗನ್ನು ಮರದ ಹುಳುಕು ತೊಗಟೆಗೆ ಹೊದೆಸು. ಇದರ ಮೇಲೆ ಈ ಮರದ ಅಪೂರ್ವ ಕಥೆಯನ್ನು ಕೆತ್ತಿಸು. (ಇನ್ನು ಮುಂದೆ ನನ್ನ ಅಧಿಕಪ್ರಸಂಗವನ್ನು ಬೆರೆಸದೆ ಅಡಿಗರ ಸಾಲುಗಳನ್ನೆ – ಹಾಗೆ ಬರೆಸಬೇಕೆಂಬ ಆಸೆಯುಳ್ಳ ಈ ಕಾಲದ ಭಾಗ್ಯಶಾಲೀ ಶೂರರಿಗೂ, ಅವರನ್ನು ಅನುಯಾಯಿಗಳಾಗಿ ಪಡೆದ ಮಠಾಧೀಶರಿಗೂ, ಯಜ್ಞಯಾಗಾದಿಗಳನ್ನು ಮಾಡಿಸಬಲ್ಲ ತಾಂತ್ರಿಕರಿಗೂ ಅನುಕೂಲವಾಗಲಿ ಎಂದು ಉದ್ಧರಿಸುತ್ತೇನೆ):

ಇಲ್ಲಿ ನೆರಳಿತ್ತು, ಹಸುರೆಲೆತಳಿರು ಹೂ ಹಣ್ಣು,
ಕೋಗಿಲೆಯ ಸರವಿತ್ತು, ಗಿಳಿಯನಿಲಯ!
….
ಇಲ್ಲಿ ಮಿಡಿದಿತ್ತು ಕೋದಂಡ, ಮೊಳಗಿತ್ತಿಲ್ಲಿ
ಪಾಂಚಜನ್ಯವು, ಚಕ್ರ ತಿರುಗುತ್ತಿತ್ತು;
ದಂಡವೊ, ಕಮಂಡಲವೊ, ದರ್ಭಾಸನವೊ, ಪರ್ಣ –
ಶಾಲೆಯೋ ಈ ಇಲ್ಲಿ ಸೊಗಸುತ್ತಿತ್ತು.

ಮುಂದೆ ಅಡಿಗರು ಹೇಳುವುದನ್ನು ನನ್ನ ಮಾತು ಬೆರೆಸಿ ಹೇಳುತ್ತೇನೆ. ‘ಯುವಜನ ನಾಯಕ ಮಹಾಶಯರೇ, ಭಾರತ ಸಂಸ್ಕೃತಿಯ ಮುಕುಟಮಣಿಗಳೇ, ಮೋದಿಪ್ರಿಯರೇ, ‘ಇತ್ತು’ಗಳ ಧ್ವಜವನ್ನೆ ಹಿಡಿದು ಎತ್ತಿ ನಿಲ್ಲಿಸಿ… ಅವು ಇನ್ನೂ ಇದೆಯೆ ಎಂದು ಕೇಳುವ ಸಂಕಟ ನಿಮಗೆಬೇಡ.’

ಮರ ಉಂಟು.
ಮರಕ್ಕೆ ಬಂಗಾರವೂ ಉಂಟು.
ಅಲ್ಲದೆಯೆ ಕಟ್ಟೆಯೂ ಉಂಟಲ್ಲವೆ?
ನೀರಿಕ್ಕು ಅದಕೆ.

* * *

ದೇಶದ ಎಲ್ಲೆಲ್ಲೂ ಕಮ್ಯುನಿಸ್ಟರು ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಸಹಮತದಿಂದಲೂ ಇವರೂ ಅವರೂ ಎಲ್ಲರೂ ನಿರ್ಮಿಸಲಿರುವ ಸ್ಪೆಶಲ್ ಎಕನಾಮಿಕ್ Zoneಗಳ ಕೇಂದ್ರಗಳಲ್ಲಿ ಭಾರತದ ಉದ್ದಗಲಕ್ಕೂ ಇಂತಹ ಮರಗಳನ್ನು ನೆಡಬಹುದು ಅಲ್ಲವೆ?

* * *

ಏನಾದರೂ ಮಾಡುತ್ತಿರುವ ಗೊಂದಲಪುರದ ಶೂರರ ಬಗ್ಗೆ (ಸಮೂಹಸನ್ನಿಯ ಒಟ್ಟಾರೆ ಶೂರರ ಬಗ್ಗೆ) ಮೇಲಿನ ಮಾತುಗಳಾದರೆ ಏನನ್ನೂ ಮಾಡದೆ ಸುಮ್ಮನಿರುವ ನಮ್ಮಂತಹ ಹಲವರ ಬಗ್ಗೆ ಅಡಿಗರ ಕೆಲವು ಸಾಲುಗಳನ್ನು ಉದ್ಧರಿಸುತ್ತೇನೆ:

‘ಇಲ್ಲ ಇಲ್ಲ – ಏನೊಂದನೂ ಮಾಡಲಿಲ್ಲ ಇವನು’

ಇವನು ಒಂದುಕೊರಡಿನ ಹಾಗೆ ಬಿದ್ದಿರುತ್ತಾನೆ. ತನ್ನ ಪಾಡಿಗೆ ತಾನು. ಇದ್ದಕ್ಕಿದ್ದಂತೆ ಎಲ್ಲಿಂದಲೋ ಒಂದು ಕೆಂಡದ ಮಳೆ ಹುಯ್ಯುತ್ತದೆ. ಆಗ ‘ಕೊರಡಿನ ತುದಿ ಹೊತ್ತಿತು/ಬೆಳಕಿನ ಗುಡಿ ಎತ್ತಿತು’. ಆದರೆ ಇದು ಒಂದೆ ನಿಮಿಷ – ಅಷ್ಟೆ! ಬೆಂಕಿ ಕೂಡ ತಿನ್ನದಂಥ ಬರಡು ಕೊರಡು ಅದು. ‘ಉರಿ ಹತ್ತಿಯು ಉರಿಯಲಿಲ್ಲ/ಬೆಳಕು ಬಂದೂ ಬೆಳಗಲಿಲ್ಲ/ಇಲ್ಲ ಇಲ್ಲ ಏನೊಂದನೂ ಮಾಡಲಿಲ್ಲ ಇವನು.’

ಕಗ್ಗವಿಯಲಿ ಕುಳಿತು ರವಿಯ
ಕನಸು ಕಾಣುತ್ತಿದ್ದನು;
ಬಾಳಬೇರು ಅಲುಗುತಿರಲು
ಹೂವನರಸುತಿದ್ದನು;
ಲಗ್ಗೆ ಹತ್ತಿ ಉರಿಯುತಿರಲು
ಮಗ್ಗಿ ಹೇಳುತ್ತಿದ್ದನು

ಹುಟ್ಟಿದುದಕೆ ಹುಟ್ಟಿಸಿದನು; ಹೊಟ್ಟೆಗಷ್ಟು ಗಿಟ್ಟಿಸಿದನು; ಹಣಕೆ ಕುಣಿಯ ತೋಡಿ ಅಲ್ಲಿ ತನ್ನತನವ ಮುಟ್ಟಿಸಿದನು.

‘ಇಲ್ಲ ಇಲ್ಲ ಏನೊಂದನೂ ಮಾಡಲಿಲ್ಲ ಇವನು’

* * *

ಈ ಬಗೆಯ ದುರವಸ್ಥೆಯ ಆತಂಕಕಾರಿಯಾದ ನಮ್ಮ ಕಾಲ ಬದಲಾಗಬೇಕು ಎಂಬ ಆರ್ತತೆಯ ಕವಿ ಅಡಿಗರು. ಆದರೆ ನಾವು ಹಾಗೇ ಇದ್ದೇವೆ ಎಂಬ ದುಃಖವನ್ನಾದರೂ ನಮಗೆ ಇಂದಿಗೂ ಮುಟ್ಟಿಸುವ ತೀವ್ರ ಸಂವೇದನೆಯ ಮನಸ್ಸಿನ ನಮ್ಮ ಪೂರ್ವಸೂರಿಗಳಲ್ಲಿ ಒಬ್ಬರಾದ ಗೋಪಾಲಕೃಷ್ಣ ಅಡಿಗರಿಗೆ ನಮಸ್ಕಾರ.

೧೮೨೦೦೭