ದೇಶ ಕಾಲಗಳ ಮಿತಿಗಳನ್ನು ಮೀರಿ ನಾವು ಹಿಂದಿನದನ್ನು ಮಾತ್ರವಲ್ಲ, ಸದ್ಯದ ಸತ್ಯಗಳನ್ನೂ ಕಾಣಬಲ್ಲೆವು. ಕೆಲವು ಸಾರಿಯಾದರೂ, ಅಪರೂಪವಾಗಿ.

ನನಗೆ ಹೀಗೆ ಅನ್ನಿಸಿದ್ದು ಒಂದು ರಾತ್ರಿ ನೇಪಾಳದಲ್ಲಿ. ಪಾಕಿಸ್ತಾನ, ಬಾಂಗ್ಲಾ, ನೇಪಾಳ, ಶ್ರೀಲಂಕಾಗಳಿಂದ ಆಯ್ದ ಲೇಖಕರ ಜೊತೆ ನಾವು ಕೆಲವು ಭಾರತೀಯ ಲೇಖಕರೂ ಕೂಡಿ ಮೂರು ದಿನಗಳನ್ನು ಕಳೆದಿದ್ದೆವು. ನಾವು ಇಳಿದುಕೊಂಡಿದ್ದ ರೆಸಾರ್ಟಿನ ಹಿಂದೆ ಹಿಮದಿಂದ ಬೆಳಗುವ ಹಿಮಾಲಯದ ಎತ್ತರದ ಶ್ರೇಣಿಯಿತ್ತು. ನಾವು ಮಾತಾಡಲು ಕೂರುತ್ತಿದ್ದ ಹಾಲಿನಿಂದ ರಾತ್ರೆ ಮಲಗುವ ಕೋಣೆಗಳ ಕಿಟಕಿಯಿಂದ ಹಿಮ ಹೊದ್ದ ಈ ಪರ್ವತರಾಜ ಕಾಣಿಸುತ್ತಿದ್ದ. ನಿರ್ದಿಷ್ಟ ಅಜೆಂಡಾ ಇಲ್ಲದ, ಒಟ್ಟಿಗೆ ಕೂತು ಹರಟಿ ನಮ್ಮ ಭಾವನೆಗಳನ್ನು ವಿಚಾರಗಳನ್ನು ಹಂಚಿಕೊಳ್ಳಬೇಕೆಂಬ ಕೂಟ ಇದಾಗಿತ್ತು. ಸಂದರ್ಭ ಬಾಬ್ರಿ ಮಸೀದಿ ಪ್ರಕರಣದ ನಂತರದು. ಜನಾಂಗೀಯ ದ್ವೇಷದ ಕಿಚ್ಚಿನಿಂದ ನಮ್ಮ ದೇಶಗಳು ಪಾರಾಗುವುದು ಸಾಧ್ಯವೇ ಎನ್ನುವ ಆತಂಕ ನಮ್ಮನ್ನು ಒಟ್ಟಿಗೆ ತಂದಿತ್ತು.

ಇದನ್ನು ಯೋಜಿಸಿದವರು ನನ್ನ ಇಬ್ಬರು ಗೆಳೆಯರು. ಸಿದ್ದಾರ್ಥ ಈಗ ಬೆಂಗಳೂರಲ್ಲಿ ‘ಮಿಂಚು ಹುಳು’ ಎನ್ನುವ ಆಶ್ರಮ ಸ್ಥಾಪಿಸಿದ್ದಾರೆ. ಕ್ರೈಸ್ತನಾಗಿ ಹುಟ್ಟಿ ಬೌದ್ಧ ಧರ್ಮಕ್ಕೆ ಒಲಿದ ಸಿದ್ಧಾರ್ಥ ಚಿಂತನೆ – ಕ್ರಿಯೆ ಎರಡನ್ನೂ ಬೆರೆಸಿಕೊಂಡವರು. ಇನ್ನೊಬ್ಬರು ಗತಿಸಿದ ಗೆಳೆಯ ಡಿ.ಆರ್. ನಾಗರಾಜ. ಆತ್ಮವನ್ನೂ ನಿರಾಕರಿಸಿ ಶೂನ್ಯದ ಸ್ಥಿತಿಯನ್ನು ತಲುಪಲು ಬಯಸುವ ಬೌದ್ಧ ದರ್ಶನ,  ತಾನು ಪಾಪಿ ಎಂಬ ಧಾರ್ಮಿಕ ಕ್ರೈಸ್ತಭಾವನೆಯನ್ನು ಹೀನಾಯವಾದ ಮನೋದೌರ್ಬಲ್ಯವೆಂದು ತಿಳಿದು ತಿಳಿದು ‘ಧೀ’ – ಚೈತನ್ಯದ ಆರಾಧಕನದ ನೀಶೆಯ ವಿಚಾರ ಸವಣಿ – ಈ ಎರಡು ಅತಿ ಸ್ಥಿತಿಗಳಿಂದಲೂ ಆಕರ್ಷಿಕನಾಗಿದ್ದ ವ್ಯಕ್ತಿ ಡಿ.ಆರ್. ನಾಗರಾಜ.

ಹೊರಗಿನಿಂದ ಬಂದವರಲ್ಲಿ ಒಬ್ಬರ ಹೆಸರನ್ನು ಮಾತ್ರ ಹೇಳುತ್ತೇನೆ. ಅದು ಉರ್ದು ಲೇಖಕ ಇಂತಿಜಾರ್‌ಹುಸೇನ್‌. ಎಲ್ಲರೂ ಮುಚ್ಚುಮರೆಯಿಲ್ಲದೆ, ಆತ್ಮ ಸಮರ್ಥನೆಯಿಲ್ಲದೆ ತಮ್ಮ ಅನುಭವದ ಸತ್ಯವನ್ನು ಬಿಚ್ಚಿಟ್ಟರು. ತಮ್ಮ ದೇಶಗಳಲ್ಲಿ ಆಡಲಾರದ್ದನ್ನು, ಈಗಲೂ ಆಡಲಾರದ್ದನ್ನು ಆಡಿದರು. ಪಾಕಿಸ್ತಾನದಿಂದಲೂ ಬಾಂಗ್ಲಾ ದೇಶದಿಂದಲೂ ಲೇಖಕಿಯರೂ ಬಂದಿದ್ದರು. ಅವರ ಹೆಸರುಗಳನ್ನು ಹೇಳದೆ ಭಾವನೆಗಳನ್ನು ಪ್ರಕಟಪಡಿಸುವುದು ಮಾತ್ರ ಉಚಿತವೆಂದು ನನ್ನ ಅನ್ನಿಸಿಕೆ.

ಬಾಂಗ್ಲಾ ದೇಶದಿಂದ ಬಂದ ಲೇಖಕರಲ್ಲಿ ಒಬ್ಬ ಹಿಂದೂ ಇದ್ದ. ದೊಡ್ಡ ಕವಿಯಂತೆ. ಅವನ ಕೈಯಲ್ಲಿ ನೇಪಾಳದ ಬ್ಲಾಕ್ ಮಾರ್ಕೆಟ್‌ನಲ್ಲಿ ಖರೀದಿಸಿದ ಪಾಮ್‌ ಟಾಪ್ ಇತ್ತು. ಟಿಪ್ಪಣಿಗಳನ್ನು ಮಾಡಿಕೊಳ್ಳಬಲ್ಲಂತಹ ಪಾಮ್‌ ಟಾಪ್‌. ಅದನ್ನು ಉಪಯೋಗಿಸುವುದನ್ನು ಕಲಿಯುತ್ತ, ಯಾರ ಕಡೆಗೂ ನೋಡದೆ ತನಗೆ ಎನ್ನುವಂತೆ ಅವನು ಕೋಪದಲ್ಲಿ ಮಾತಾಡುತ್ತಿದ್ದ. ಇಲ್ಲಿ ಬಾಬ್ರಿ ಮಸೀದಿ ಒಡೆದು ಬಿದ್ದದ್ದೇ ಢಾಕಾದಲ್ಲಿ ಎಷ್ಟು ಕಾಳಿ ದೇವಸ್ಥಾನಗಲು ನೆಲಸಮವಾದವು ಎಂಬುದನ್ನು ವಿವರಿಸುತ್ತ ‘ಈ ಬಗ್ಗೆ ನೀವು ಯಾರೂ ಯಾಕೆ ಮಾತಾಡುವುದಿಲ್ಲ? ನಾನೇನು ಕಾಳಿ ಭಕ್ತನಲ್ಲ. ಆದರೆ ನಿಮ್ಮ ಸೆಕ್ಯುಲರ್‌ ವಾದದ ಹಿಪಾಕ್ರಸಿ ನನಗೆ ಸರಿದೋರುವುದಿಲ್ಲ’ ಎಂದ. ಅಲ್ಲಿದ್ದ ಯಾರೂ ಅವನ ಜೊತೆ ವಾದಿಸಲಿಲ್ಲ. ಅವನ ಕಾವ್ಯ ಗೊತ್ತಿದ್ದ ಉಳಿದ ಬಾಂಗ್ಲಾ ಲೇಖಕರಿಂದ ಅವನ ಕೋಪದ ಮಾತುಗಳು ಹೃದಯದಿಂದ ಬಂದ ಮಾತುಗಳು ಎನ್ನಿಸಿತ್ತು. ಅವರು ಮಾಡಿದ್ದನ್ನು ಇವರೇಕೆ ಮಾಡಬಾರದು, ಇವರು ಮಾಡಿದ್ದನ್ನು ಅವರೇಕೆ ಮಾಡಬಾರದು ಎನ್ನುವ ವಿವಾದದ ವಿಷ ವರ್ತುಲದಿಂದ ಹೊರಬರುವುದೇ ಎಲ್ಲರ ಆಸೆಯಾಗಿತ್ತು. ತನ್ನ ಮನಸ್ಸಿನಲ್ಲಿರುವುದನ್ನು ಹೇಳಿಯಾದ ಬಳಿಕ ಈ ಹಿಂದೂ ಬಾಂಗ್ಲಾ ಕವಿಯೂ ನಮ್ಮೆಲ್ಲರ ಆತಂಕದ ಪಾಲದಾರನಾದ.

ಹಿಂದೂ ಹಿಂಸೆಯನ್ನು ಟೀಕಿಸುವ ಮುಂಚೆ ಮುಸ್ಲಿಂ ಹಿಂಸೆ ಟೀಕಿಸಲೇ ಬೇಕು; ಮುಸ್ಲಿಂ ಹಿಂಸೆ ಟೀಕಿಸುವ ಮುಂಚೆ ಹಿಂದೂ ಹಿಂಸೆ ಟೀಕಿಸಲೇ ಬೇಕು –  ಈ ಬಗೆಯ ಸಮಜಾಯಷಿಯ ವಾದಸರಣಿ ನಮ್ಮೆಲ್ಲರನ್ನೂ ಕಾಣುವ ಪೊಲಿಟಿಕಲೀ ಕರೆಕ್ಟ್ ರಿಚುಯಲ್ ಆಗಿಬಿಟ್ಟಿದೆ. ಸಾಯುವವರು, ನೋಯುವವರನ್ನು ಕೇವಲ ನಮ್ಮ ಹಾಗಿನ ಮನುಷ್ಯರಾಗಿ ಸರಳವಾಗಿ ಕಾಣಲಾರದಂತೆ ನಾವು ಜಾಣ ಪ್ರತಿಕ್ರಿಯೆಗಳನ್ನು ನೀಡತೊಡಗಿದ್ದೇವೆ. ಈ ಸಮಜಾಯಿಷಿಯ ಸಮಾಧಾನಗಳಿಂದ ಬಿಡುಗಡೆಯಾಗುವುದು ಹಿಂದೂಗಳೂ ಮುಸ್ಲಿಮರೂ ಸೇರಿದ್ದ ಈ ಕೂಟದ ಉದ್ದೇಶವಾಗಿತ್ತು. ನಾವು ಇದರಲ್ಲಿ ಯಶಸ್ವಿಯಾದೆವು ಎಂದು ನನಗೆ ಅನ್ನಿಸಿದ ಒಂದು ರಾತ್ರಿಯ ಮಾತುಕತೆಯನ್ನು ನಿಮ್ಮೊಡನೆ ಈಗ ಹಂಚಿಕೊಳ್ಳುವೆ.

ಹಾಸಿದ ಚಾಪೆಗಳ ಮೇಲೆ ದಿಂಬಿಗೊರಗಿ ನಾವೆಲ್ಲ ಆರಾಮಾಗಿ ಕೂತಿದ್ದೆವು. ಊಟ ಮುಗಿದಿತ್ತು. ಬಾಂಗ್ಲಾ ದೇಶದ ಒಬ್ಬ ಲೇಖಕಿ, ನಡುವಯಸ್ಸಿನವಳು, ನಿಧಾನವಾಗಿ ಮಾತಾಡತೊಡಗಿದಳು.

ಸೀರೆಯುಟ್ಟ ಮುಸ್ಲಿಂ ಹೆಂಗಸು ಅವಳೊಬ್ಬಳೇ. ಧಾರಾಳವಾದ ಬಾಚದ ಅವಳ ಕೂದಲು ಎದೆಯ ಮೇಲಿತ್ತು. ಸದಾ ಸ್ನೇಹದಲ್ಲಿ ನಗುವ ಅವಳ ಕಣ್ಣುಗಳು ಅವಳ ಮಾತಿನ ನಡುವೆ ಮುಚ್ಚಿದವು. ಎಲ್ಲರ ಕಣ್ಣುಗಳೂ ಸಹಾನುಭೂತಿಯಲ್ಲಿ ತನ್ನನ್ನು ನೋಡುತ್ತಿವೆ ಎಂದು ಅವಳಿಗೆ ಅನ್ನಿಸುತ್ತಿದೆ ಎಂದು ನನಗನ್ನಿಸಿತು. ಹೇಳಿದ ಮಾತುಗಳು ಕೇಳಿಸಿಕೊಂಡ ಒಳಮಾತುಗಳಾಗುವ ಅಪರೂಪದ ಘಳಿಗೆಯನ್ನು ಅನುಭವಿಸಿದೆವು.

ಅವಳ ಮಾತುಗಳು ಮೊದ ಮೊದಲು ಎಲ್ಲರ ಗಮನವನ್ನೂ ನಿರೀಕ್ಷಿಸುವಂತಿದ್ದವು; ಎರಡನೇ ಹಂತದಲ್ಲಿ ಪಾಕಿಸ್ತಾನದಿಂದ ಬಂದ ಮುಸ್ಲಿಂ ಲೇಖಕರಲ್ಲಿ ಗಂಡಸರ ಗಮನವನ್ನು ವಿಶೇಷವಾಗಿ ಸೆಳೆಯುವಂತಿದ್ದವು. ಕೊನೆಯಲ್ಲಿ ಅವಳ ಧ್ವನಿ ನಡುಗುತ್ತಿತ್ತು. ಪಾಕಿಸ್ತಾನದಿಂದ ಬಂದ ಲೇಖಕಿಯರನ್ನು ಉದ್ದೇಶಿಸಿ ಒಬ್ಬ ಸಾಮಾನ್ಯ ಹೆಣ್ಣಾಗಿ ಅವಳು ಮಾತನಾಡುತ್ತಿದ್ದಳು.

ಪೂರ್ವ ಪಾಕಿಸ್ತಾನವಾಗಿದ್ದ  ತನ್ನ ದೇಶದ ಮೇಲೆ ಪಾಕಿಸ್ತಾನ ಮಾಡಿದ ಯುದ್ಧವನ್ನು ಅವಳು ವರ್ಣಿಸುತ್ತಿದ್ದಳು. ಢಾಕಾದ ವಿಶ್ವವಿದ್ಯಾಲಯದಲ್ಲಿ ಅವಳ ಗಂಡ ಅಧ್ಯಾಪಕನಾಗಿದ್ದ. ಅವನೂ ಒಬ್ಬ ಚಿಂತನಶೀಲ ಅಧ್ಯಾಪಕ. ಬಂಗಾಳಿ ಭಾಷೆಯೂ ರಾಷ್ಟ್ರದ ಇನ್ನೊಂದು ಭಾಷೆಯಾಗಬೇಕೆಂದು ವಾದಿಸುತ್ತಿದ್ದವ.

ಅವನು ಒಂದು ದಿನ ಎಂದಿನಂತೆ ವಿಶ್ವವಿದ್ಯಾಲಯಕ್ಕೆ ಹೋದವನು ಹಿಂದಕ್ಕೆ ಬರಲಿಲ್ಲ. ಸಂಜೆಯಾಯಿತು, ರಾತ್ರಿಯಾಯಿತು, ಮಾರನೆ ಬೆಳಿಗ್ಗೆಯಾಯಿತು –  ಎರಡು ದಿನಗಳಾದವು. ಅವನು ಮನೆಗೆ ಹಿಂದಿರುಗಲಿಲ್ಲ. ಅವನ ಎರಡು ಮಕ್ಕಳು ಶಾಲೆಗೆ ಹೋಗದೆ ತಾಯಿ ಜೊತೆ ಮನೆಯಲ್ಲೇ ಸಂಜೆಯಿಡೀ ಕಾದವು. ಹೊರಗೆ ಹೋಗುವಂತಿಲ್ಲ –  ಎಲ್ಲೆಲ್ಲೂ ಪಾಕಿಸ್ತಾನದ ಸೈನಿಕರು –  ಗನ್ನುಗಳನ್ನು ಹಿಡಿದು ಓಡಾಡುವವರು.

ಎರಡು ದಿನಗಳಾದ ಮೇಲೆ ಢಾಕಾದ ವಿಶ್ವವಿದ್ಯಾಲಯಗಳಲ್ಲಿ ತನ್ನ ಗಂಡನನ್ನು ಹುಡುಕಿಕೊಂಡು ಬರಲು ಲೇಖಕಿ ಹೋದಳು. ಹೀಗೆಯೇ ಗಂಡಂದಿರನ್ನು ಹುಡುಕಿ ತರಲು ಹೊರಟ ಇತರ ಹೆಂಡಂದಿರ ಜೊತೆ.

ಹುಡುಕಲು ಇದ್ದದ್ದು ಏನು? ಒಂದು ರಾಶಿ ಹೆಣ. ಈ ಹೆಣಗಳ ನಡುವೆ ತಮ್ಮ ತಮ್ಮ ಗಂಡಂದಿರ ಹೆಣ ಯಾವುದೆಂದು ಹುಡುಕುವುದೇ ಆಯಿತು.

ಇಷ್ಟು ಕಥೆಯನ್ನು ಅವಳು ಹಲವು ಸಾರಿ ಹೇಳಿರಬೇಕು. ಆದರೆ ತಮ್ಮನ್ನು ಕೊಂದ ಪಾಕಿಸ್ತಾನ ಎಂಬ ರಾಷ್ಟ್ರದ ಲೇಖಕರ ಬಳಿ ಇದನ್ನು ಹೇಳಿಕೊಂಡದ್ದು ಮೊದಲ ಸಲವಿರಬೇಕೆಂಬುದು ಅವಳ ಧ್ವನಿಯ ಆತುರದಲ್ಲೂ ತೀವ್ರತೆಯಲ್ಲೂ ನಮಗೆ ಗೊತ್ತಾಗುವಂತಿತ್ತು.

ನಾವು ಇಂತಿಜಾರ್‌ ಹುಸೇನರ ಪಕ್ಕ ಕೂತಿದ್ದೆ. ದೇಶ ವಿಭಜನೆಯಾದಾಗ ಇಸ್ಲಾಂ ಸಂಸ್ಕೃತಿ ಮತ್ತು ಜೀವನ ಶೈಲಿಯನ್ನು ನಿರ್ಭಿಡೆಯಿಂದ ಉಳಿಸಿ ಬೆಳೆಸಬಲ್ಲ ತನ್ನದೇ ಒಂದು ದೇಶ ಬೇಕೆಂದು ಜಿನ್ನಾ ಪರ ನಿಂತ ನನ್ನ ಗೆಳೆಯ ಭುಟ್ಟೋನ ಹಾಗೆ ಇವರೂ ನಿಂತವರು. ಸ್ವಂತದ ಊರು ತೊರೆದು ಪಾಕಿಸ್ತಾನಿಯಾದವರು… ಉರ್ದುವಿನಲ್ಲಿ ಮಹತ್ವದ ಲೇಖಕ. ಡಾನ್ ಪತ್ರಿಕೆಗೆ ಈತ ಬರೆದು ಬದುಕುವುದು.

ಬಾಂಗ್ಲಾ ಲೇಖಕಿ ಕೊನೆಯಲ್ಲಿ ಹೀಗೆ ಹೇಳಿದಳು: ‘ಇಸ್ಲಾಂ ಎಲ್ಲಿದೆ ಹೇಳಿ? ಖೊರಾನ್‌ಏನು ಹೇಳಿ ಏನು ಪ್ರಯೋಜನ? ನನ್ನ ಗಂಡನೂ ಮುಸ್ಲಿಮ್‌. ಆದರೆ ಇಸ್ಲಾಮಿನ ಹೆಸರಿನಲ್ಲಿ ನನ್ನ ಗಂಡನನ್ನು ಕೊಂದರು. ನೂರಾರು ಹೆಣಗಳಲ್ಲಿ ನನ್ನ ಗಂಡನ ಹೆಣ ಯಾವುದೆಂದು ಹುಡುಕುತ್ತ ಓಡಾಡಿದ ನನಗೆ ಏನೆನ್ನಿಸುತ್ತೆ ಊಹಿಸಿ.’

ಚೂಪಾದ ಮುಖದ ಇಂತಿಜಾರ್‌ ಹುಸೇನ್‌ ತನ್ನೆರಡು ಕೈಗಳನ್ನು ತೊಡೆಯ ಮೇಲಿಟ್ಟು ಪ್ರಾರ್ಥನೆಯಲ್ಲಿ ಎಂಬಂತೆ ತಲೆಬಾಗಿಸಿ ಕೂತು ಕೇಳಿಸಿಕೊಂಡರು. ಬಾಂಗ್ಲಾ ಲೇಖಕಿಯ ಮಾತು ಕೊನೆಯಾಗುತ್ತಿದ್ದಂತೆ ಪಾಕಿಸ್ತಾನದ ಯುವ ಲೇಖಕಿಯೊಬ್ಬಳು ತಡೆಯಲಾರದೆ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದಳು. ಇಂತಿಜಾರ್‌ ಹುಸೇನ್‌ ಮೆಲ್ಲನೆ ತಲೆ ಎತ್ತಿ ಕಣ್ಣು ತೆರೆದರು. ಅವರ ಕಣ್ಣುಗಳಲ್ಲಿ ನೀರು ತುಂಬಿ ಕೆನ್ನೆಯ ಮೇಲೆ ಹರಿಯುತ್ತಿತ್ತು. ಅದುರುತ್ತಿದ್ದ ತುಟಿಯಲ್ಲಿ ‘ಇಡೀ ದೇಶದ ಪರವಾಗಿ ನಿನ್ನ ಕ್ಷಮಾಪಣೆ ಕೇಳುತ್ತೇನೆ’ ಎಂದು ಇಂಗ್ಲಿಷಿನಲ್ಲಿ ಹೇಳಿದರು. ‘ನಿನ್ನ ಗಂಡನ ಕೊಲೆಯಲ್ಲಿ ಅಪ್ರತ್ಯಕ್ಷವಾಗಿ ನಾವೆಲ್ಲರೂ ಭಾಗಿಗಳೇ ಎಂದು ಹೇಳುವುದನ್ನು ಬಿಟ್ಟು ಇನ್ನೇನು ಹೇಳಲು ಸಾಧ್ಯ?’ ಎಂದು ಉಳಿದ ಪಾಕಿಸ್ತಾನಿ ಲೇಖಕಿಯರನ್ನು ಸಮ್ಮತಿಗಾಗಿ ನೋಡಿದರು. ಮೂವರು ಲೇಖಕಿಯರೂ ತಲೆತಗ್ಗಿಸಿ ಕಣ್ಣೀರಿಡುತ್ತ ತಮ್ಮ ಸಮ್ಮತಿ ಸೂಚಿಸಿದರು.

ಇದೊಂದು ನಾನೆಂದೂ ಮರೆಯದ ಅಪೂರ್ವ ಘಟನೆ. ಇಂಗ್ಲಿಷಿನಲ್ಲಿ ‘nation state’ ಎನ್ನುತ್ತಾರಲ್ಲ ಅದರ ಹೆಸರಿನಲ್ಲಿ ಮನುಷ್ಯ ಕುಗ್ಗುತ್ತಾನೆ. ಸರಿ ತಪ್ಪುಗಳ ನೈತಿಕ ಪ್ರಜ್ಞೆಗಳನ್ನು ಕಳೆದುಕೊಂಡು ‘ರಾಷ್ಟ್ರಪ್ರೇಮಿ’ಯಾಗಿ ಬಿಡುತ್ತಾನೆ. ಎರಡನೇ ಮಹಾಯುದ್ಧದ ಕಾಲದಲ್ಲಿ ಈ ‘ರಾಷ್ಟ್ರಪ್ರೇಮ’ವೆಂಬುದು ಜರ್ಮನರನ್ನೂ ಜಪಾನೀಯರನ್ನೂ ರಾಕ್ಷಸರನ್ನಾಗಿ ಮಾಡಿತು. ಸಾಮಾನ್ಯ ಸಜ್ಜನರೂ ಕುರುಡರಾದರು. ಹಿರೋಷಿಮಾ ನಾಗಸಾಕಿಯಲ್ಲಿ ಅಮೆರಿಕ ಹಾಕಿದ ಅಣುಬಾಂಬ್‌ನಿಂದ ಮನುಷ್ಯರಷ್ಟೇ ಅಲ್ಲದೆ ಮೃಗ, ಪಕ್ಷಿ, ಕ್ರಿಮಿಕೀಟಗಳ ಜೀವಲೋಕ ಸಸ್ಯಲೋಕ ಎಲ್ಲವೂ ನಾಶವಾದು.

ಕಮ್ಯುನಿಸ್ಟ್‌ ರಾಷ್ಟ್ರಗಳು ಮಾಡುವ ಅಪರಾಧಗಳನ್ನು ಟೀಕಿಸಲು ಕಾರ್ಲ್‌‌ ಮಾರ್ಕ್ಸ್‌‌ರನ್ನು ಬಳಸಬಹುದು. ಮುಸ್ಲಿಂ ರಾಷ್ಟ್ರಗಳ ಅಪರಾಧವನ್ನು ಟೀಕಿಸಲು ಪ್ರವಾದಿ ಮಹಮ್ಮದರ ಮಾತುಗಳನ್ನು ಬಳಸಬಹುದು, ಕ್ರೈಸ್ತ ರಾಷ್ಟ್ರಗಳ ಅಪರಾಧಗಳನ್ನು ಟೀಕಿಸಲು ಬೈಬಲ್ ಬಳಸಬಹುದು ಎನ್ನುವುದು ನಿಜ. ಆದರೆ ರಾಷ್ಟ್ರಹಿತ ಎನ್ನುವ ರಕ್ಷಣಾ ಕವಚದಲ್ಲಿ ಅಡಗಿ ಇರುವ ಆಳುವವರ ಅಟ್ಟಹಾಸದಿಂದ ಆಗುವ ನಾಶವಂತೂ ಆಗಿಬಿಟ್ಟಿರುತ್ತದೆ. ನಾವು ಎಚ್ಚರಾಗಿ ಮಾಡುವ ಟೀಕೆ ಆಮೇಲಿನದು.

ರಾಷ್ಟ್ರೀಯತೆಯ ಸನ್ನಿಯಿಂದ ಪಾರಾಗಲು ನಾವು ಮಾನವೀಯವಾಗಿ ಯೋಚಿಸುವ ಪರರಿಗೆ ಸದಾ ಕಾಲವೂ ನಮ್ಮ ಸ್ನೇಹದ ಹಸ್ತವನ್ನು ನಿರ್ಭಯವಾಗಿ ಒಡ್ಡುತ್ತಲೇ ಇರಬೇಕು. ಒಂದು ಘಟನೆ ನೆನೆಯುವೆ. ಭಾರತ – ಪಾಕಿಸ್ತಾನಗಳು ಸ್ವತಂತ್ರವಾಗಿ ೫೦ ವರ್ಷಗಳು ಕಳೆದ ನೆನಪಿಗೆ ಪಾಕಿಸ್ತಾನಿ ಲೇಖಕರ ಒಂದು ಪುಸ್ತಕವನ್ನು ನಮ್ಮ ಕೇಂದ್ರ ಸಾಹಿತ್ಯ ಅಕಾಡೆಮಿ ತರಬೇಕು ಎನ್ನುವ ಇಚ್ಛೆಯನ್ನು ಬರ್ಲಿನ್‌ನಲ್ಲಿ ಭೇಟಿಯಾದ ಇಂತಿಜಾರ್‌ ಹುಸೇನ್‌ಗೆ ಹೇಳಿದೆ. ಭಾರತ ಹೇಗೆ ಬಹು ಭಾಷೆಗಳ ಒಕ್ಕೂಟದ ರಾಷ್ಟ್ರವೋ ಹಾಗೆಯೇ ಪಾಕಿಸ್ತಾನದಲ್ಲೂ ಬಹು ಭಾಷೆಗಳು ಚಾಲ್ತಿಯಲ್ಲಿ ಇವೆ. ಪಂಜಾಬಿ, ಸಿಂಧಿ – ಹೀಗೆ ಹಲವು ಭಾಷೆಗಳಲ್ಲಿ ಬರೆಯುವವರಿದ್ದಾರೆ. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿ ಇಂತಿಜಾರ್‌ಗೆ ಬರೆದೆ: ‘ಒಂದು ಕಥಾ ಸಂಕಲನವನ್ನು ಎಲ್ಲ ಭಾಷೆಗಳಿಂದಲೂ ಆಯ್ದು ಉರ್ದುವಿಗೆ ಭಾಷಾಂತರಿಸಿ ಕೊಡಿ’.

ಸಾಹಿತ್ಯ ಅಕಾಡೆಮಿಯ ಎಕ್ಸಿಕ್ಯುಟಿವ್‌ ಕಮಿಟಿ ಸಭೆಯಲ್ಲಿ ಕೆಲವು ಲೇಖಕ ಮಿತ್ರರು ಅನುಮಾನವೆತ್ತಿದರು. ಯಾರಾದರೂ ಭಾರತ ವಿರೋಧಿ ಕಥೆ ಬರೆದಿದ್ದರೆ ಅದನ್ನು ನಾವು ಹೇಗೆ ಪ್ರಕಟಿಸಲು ಸಾಧ್ಯ? ನಾನೆಂದೆ –  ‘ಇಂತಿಜಾರ್‌ ಸೂಕ್ಷ್ಮ ಸಂವೇದನೆಯ ಲೇಖಕ. ಅವರು ದ್ವೇಷ ಹುಟ್ಟಿಸುವುದನ್ನು ಆಯುವುದು ಸಾಧ್ಯವೇ ಇಲ್ಲ. ಈ ರಿಸ್ಕನ್ನು ನಾನು ತೆಗೆದುಕೊಳ್ಳುತ್ತೇನೆ, ಬಿಡಿ’. ಪುಸ್ತಕ ಪ್ರಕಟಣೆಗೆ ತಯಾರಾಗುತ್ತಿದ್ದಂತೆಯೇ ಇನ್ನೊಂದು ಸಮಸ್ಯೆ ಹುಟ್ಟಿಕೊಂಡಿತು. ಲೇಖಕರಿಗೆ ನಾವು ಹೇಗೆ ಸಂಭಾವನೆ ಕೊಡುವುದು? ಎರಡು ದೇಶಗಳ ನಡುವೆ ಸಂಭಾವನೆ ಕೊಡಲು ಅಗತ್ಯವಾದ ಒಪ್ಪಂದವಿರಲಿಲ್ಲ. ನಾನಿದನ್ನು ಇಂಜಿಜಾರ್‌ಗೆ ತಿಳಿಸಿದೆ. ಇಂತಿಜಾರ್‌ ಉಳಿದವರಿಗೆ ಹೇಳಿದರು. ಎಲ್ಲರು ನಮ್ಮ ಅಕಾಡೆಮಿಗೆ ಬರೆದರು: ‘ಭಾರತದಲ್ಲಿ ಸರ್ಕಾರದ ಅನುದಾನ ಪಡೆದ ಅಕಾಡೆಮಿ ನಮ್ಮನ್ನು ಪ್ರಕಟಿಸುವುದೇ ಒಂದು ಭಾಗ್ಯ. ಕೆಲವು ಪ್ರತಿಗಳನ್ನು ಕಳಿಸಿ ಸಾಕು. ಹಣ ಬೇಕಿಲ್ಲ. ನೆಹರೂಗೆ ಇದ್ದ ವಿಷನ್‌ ನಮ್ಮಲ್ಲಿ ಇರಲಿಲ್ಲ. ನಮಗೊಂದು ಸ್ವತಂತ್ರ ಅಕಾಡಮಿ ಇಲ್ಲ – ಇತ್ಯಾದಿ..’

ಈಚೆಗೆ ಇಂತಿಜಾರ್‌ ದೆಹಲಿಯಲ್ಲಿ ಸಾರ್ಕ್ ಲೇಖಕರ ಸಭೆಯಲ್ಲಿ ಸಿಕ್ಕಾಗ ಹೇಳಿದರು : ‘ಪಾಕಿಸ್ತಾನದ ಎಲ್ಲ ಭಾಷೆಗಳ ಲೇಖಕರನ್ನು ಒಳಗೊಂಡ ಅಂತಹ ಇನ್ನೊಂದು ಪುಸ್ತಕ ಉರ್ದುವಿನಲ್ಲಿ ಇಲ್ಲ. ಈಗ ನೀವು ಪ್ರಕಟಿಸಿದ ಪುಸ್ತಕ ಪಾಕಿಸ್ತಾನದ ಕಾಲೇಜುಗಳಲ್ಲಿ ಪಠ್ಯ ಪುಸ್ತಕವಾಗಿದೆ.’

ನಮ್ಮ ನಮ್ಮ ಪರಿಮಿತ ಕ್ಷೇತ್ರಗಳಲ್ಲೂ ನಾವು ಜಗಳಗಂಟಿತನದ ರಾಷ್ಟ್ರೀಯತೆಯನ್ನು ಮೀರಿ ಸಮಾನಮನಸ್ಕರನ್ನು ಇಡೀ ಜಗತ್ತಿನಲ್ಲಿ ಹುಡುಕುತ್ತಲೇ ಇರಬೇಕು.

* * *

ಗಂಟುಹುಬ್ಬಿನ ನೈತಿಕ ಪಾಠ ಹೇಳಿ ಈ ಲೇಖನ ಮುಗಿಸಬಾರದು. ನೇಪಾಳದ ಒಂದು ಪ್ರಸಿದ್ಧ ಪುರಾತನ ದೇವಾಲಯ ನೋಡಲು ನಾವೆಲ್ಲರೂ ಹೋಗಿದ್ದೆವು. ಸಣ್ಣದೊಂದು ಪಟ್ಟಣದ ನಡುವೆ ಇರುವ ಈ ದೇವಸ್ಥಾನದ ಹೊರಾಂಗಣದ ತುಂಬ ರಾಸಲೀಲೆಯ ಚಿತ್ರಗಳು. ಕಾಮಸೂತ್ರದ ಎಲ್ಲ ಭಂಗಿಗಳನ್ನು ಮೀರಿಸುವ ಚಿತ್ರಗಳು. ಪಾಕಿಸ್ತಾನದ ಯುವ ಲೇಖಕಿ (ರಾತ್ರೆ ಅತ್ತವಳು) ಬಾಯಿ ಕಳೆದು ಎರಡು ಕಣ್ಣುಗಳನ್ನೂ ಮುಚ್ಚಿ ಖುಷಿಯಿಂದ ನಗುತ್ತ, ‘ಅದೇನು ಹಿಂದೂಗಳೋ ನೀವು. ಇದು ದೇವರು ಇರುವ ಜಾಗವ?’ ಎಂದು ನನ್ನನ್ನು ತುಂಟಾಗಿ ಕೆಣಕಿದಳು. ಆದರೆ ಚಿತ್ರದಿಂದ ಚಿತ್ರಕ್ಕೆ ಕಣ್ಣನ್ನು ಹಾಯಿಸುತ್ತ ಪ್ರಾಯಶ್ಚಿತ್ತವಾಗಿ ದೇವರನ್ನು ನೆನಪಿಸಿಕೊಳ್ಳುತ್ತಲೇ ಇದ್ದಳು. ದೇವಸ್ಥಾನದಿಂದ ಕಣ್ಣು ಕೀಳಲಾಗದ ಅವಳ ತನ್ಮಯತೆಯೂ ‘ಭಕ್ತಿಯ ಒಂದು ಮಜಲು’ ಎಂದು ನಾನು ನಗೆಯಾಡಿದೆ. ಅವಳು ನನ್ನ ತಾತ್ವಿಕ ವಿವರಣೆಯನ್ನು ಅಣಕಿಸುವಂತೆ ನಕ್ಕು ಪಿತೂರಿಯ ದನಿಯಲ್ಲಿ ನಟಿಸಿ ಕೇಳಿದಳು.. ‘ನಾನು ಈ ಚಿತ್ರಗಳನ್ನು ನೋಡುತ್ತಿರುವುದನ್ನು ಇಂತಿಜಾರ್‌ ಜೀ ನೋಡಿದರಾ? ನೋಡಿದ್ದರೆ ನನ್ನ ಗತಿ ಮುಗಿಯಿತು. ಪಾಕಿಸ್ತಾನದಲ್ಲಿ ಯಾರಿಗಾದರೂ ಅವರು ಹೇಳುವುದಿಲ್ಲವೆಂದು ನಾನು ಹೇಗೆ ನಂಬಲಿ? ಇಂತಿಜಾರ್‌ ನನ್ನ ಅಣ್ಣನೆಂದೇ ತಿಳಿದಿದ್ದೇನೆ. ಆದರೂ…’

ನಾನೂ ಅವಳ ಪಿತೂರಿಯಲ್ಲಿ ಭಾಗಿ ಎನ್ನುವಂತೆ ನಟಿಸಿದೆ: ‘ಇದೋ ನೋಡು ಇಂತಿಜಾರ್ ಕೂಡ ಆ ತುದಿಯಲ್ಲಿ ಇಂಥವೇ ಚಿತ್ರಗಳನ್ನು ನೋಡುವುದನ್ನು ಮಗ್ನರಾಗಿದ್ದಾರೆ’ ಎಂದೆ. ಅದನ್ನು ನೋಡಿ ಖುಷಿಗೊಂಡ ಲೇಖಕಿ ‘ಅವರು ನೋಡುತ್ತಿರುವ ಫೋಟೋವನ್ನು ಹಿಡಿದುಬಿಡು. ನನಗೊಂದು ಬ್ಲಾಕ್‌ಮೇಲ್‌ಅಸ್ತ್ರವಿರಲಿ’ ಎಂದು ನನಗೆ ಅವಳ ಕ್ಯಾಮರಾ ಕೊಟ್ಟಳು.

‘ಇಬ್ಬರದೂ ತೆಗೆಯುತ್ತೇನೆ’ ಎಂದೆ ನಾನು. ‘ಓಕೆ’ ಎಂದು ಅವಳು ಧರ್ಮಕ್ಕೆ ಸಮ್ಮತವಾದ ಗಾಂಭೀರ್ಯದಲ್ಲಿ ತಲೆಯ ಮೇಲೆ ದುಪ್ಪಟ ಹೊದ್ದು ದೇವಾಲಯಕ್ಕೆ ಬೆನ್ನಾಗಿ ನಿಂತಳು.

೨೫-೬-೨೦೦೬

* * *