ಈ ಲೇಖನದ ಒಟ್ಟು ಉದ್ದೇಶವಾದ ನೀತಿಯೊಂದನ್ನು ಮೊದಲೇ ಸರಳವಾಗಿ ಮಂಡಿಸಿಬಿಡುತ್ತೇನೆ: ಅದಿರನ್ನು ಪರದೇಶಗಳಿಗೆ ಮಾರುವ ಗಣಿಗಾರಿಕೆಯನ್ನು ನಮ್ಮ ಸರ್ಕಾರ ಕೂಡಲೇ ನಿಷೇಧಿಸಬೇಕು; ನಮಗೆ ಅಗತ್ಯವಾದ ಲೋಹವನ್ನು ತಯಾರಿಸಿಕೊಳ್ಳಲು ಮಾತ್ರ ಗಣಿಗಾರಿಕೆಯನ್ನು ಮಾಡಬೇಕು. ಒಳ್ಳೆಯ ಬೆಲೆಗೆ ಪರದೇಶಗಳಿಗೆ ಮಾರಲು ವಿವೇಕಯುತವಾಗ ನಮ್ಮ ಅಗತ್ಯಕ್ಕಿಂತ ಹೆಚ್ಚಿನ ಲೋಹವನ್ನು ಮಾಡಬಹುದು; ಆದರೆ ಗಣಿಗಾರಿಕೆಯಿಂದಲೂ ಉಕ್ಕಿನ ಉತ್ಪಾದನೆಯಿಂದಲೂ ಪರಿಸರದ ನಾಶವಾಗದಂತೆ ಎಚ್ಚರವಹಿಸಿರಬೇಕು. ಇದಿಷ್ಟು ಗಣಿಗಾರಿಕೆಯ ಬಾಲಬೋಧೆ.

ಇದನ್ನು ಬರೆಯುವಾಗ ಪಾಜಕದಲ್ಲಿ ಬಂಡೆಗಳನ್ನು ಒಡೆಯುವುದನ್ನು ನಿಲ್ಲಿಸಲು ಮುರಾರಿ ಬಲ್ಲಾಳರ ಜೊತೆ ಕೂಡಿ ನಾವು ಕೆಲವರು ನಡೆಸಿದ ಚಳುವಳಿ, ಮತ್ತು ಉಲ್ಲಾಸ ಕಾರಂತರ ಜೊತೆ ನಾವು ಹಲವರು ಕುದುರೆಮುಖ ಗಣಿಗಾರಿಕೆಯ ವಿರೋಧವಾಗಿ ನಡೆಸಿದ ಚಳುವಳಿ ನನ್ನ ಹಿನ್ನೆಲೆಗಿದೆ.

* * *

ಮೇಲಿನ ಮಾತುಗಳಿಗೆ ಒಂದು ತಾತ್ವಿಕವಾದ ಧ್ಯಾನದ ಚೌಕಟ್ಟು ಒದಗಿಸಲು ಎರಡು ಪದ್ಯಗಳನ್ನು ವಿಶ್ಲೇಷಿಸಲಿದ್ದೇನೆ. ಓದುಗರು ಇದನ್ನು ತಾಳಿಕೊಂಡಾರೆಂದು ತಿಳಿಯುವೆ. ಮೈಕಜ್ಜಿ ತುರಿಕೆಯ ಸುಖದ ಭ್ರಷ್ಟಾಚಾರದ ಬೀದಿಜಗಳವನ್ನು ಕಾಣಬಾರದ ಕಡೆಗಳಲ್ಲಿ ಕಂಡು ರೋಸಿಹೋದಾಗ ನನ್ನ ಪುಣ್ಯಕ್ಕೆ ಈ ಪದ್ಯಗಳು ನೆನಪಾದವು; ಸಿಟ್ಟು ತೀರಿಸಿಕೊಳ್ಳುವಂತೆ ಮಾತಾಡಬೇಕು ಆಸೆಗೆ –  ತೀಟೆಗೆ –  ತಡೆಹಾಕಿದವು. ಅಥವಾ ಷಂಡವಾಗದ ಭಂಡವಾಗದ ಆತಂಕ ಅಭಿವ್ಯಕ್ತಿಗೆ ನೆರವಾದವು. ನನ್ನ ಲಹರಿಗೀಗ ಓದುಗರಾದ ನೀವು ಅನುವಾಗಬೇಕು.

* * *

‘ಅಗೆದಾಗ ನಕ್ಕದ್ದು ನುಣುಪು ಕುಂಕುಮ ಭೂಮಿ.’ ಹೀಗೊಂದು ನರಸಿಂಹಸ್ವಾಮಿಗಳ ಪದ್ಯ ಶುರುವಾಗುತ್ತದೆ. ಎರೆಹುಳಗಳ ತೇವ ಕಾಯಕದ ಫಲವಾಗಿ ಜೀವಪೋಷಕಾಂಶಗಳು ನೆಲದ ಮೇಲ್ಪದರದಲ್ಲಿ ಮಾತ್ರ ಇರುತ್ತವೆ. ಇನ್ನು ರೈತ ಹೆಚ್ಚು ಅಗೆಯಬಾರದು. ಆದ್ದರಿಂದ ಗುದ್ದಲಿಯ ಕೆಲಸ ಅಲ್ಲಿಗೆ ನಿಂತಿದೆ. ಮುಂದೆ ಪ್ರಕೃತಿಯ ಸಹಯೋಗದಲ್ಲಿ ನಡೆಯುವ ಆತುರ ಪಡದ ಕಾಯಕ ಈ ನೇಗಿಲಯೋಗಿಯದು. ಅವನ ಪುಣ್ಯಕ್ಕೆ ಪಂಚಾಂಗ ಹೇಳುವಂತೆ ಮಳೆಯೂ ಬಿತ್ತು ಹತ್ತು ಹನಿ. ಇದಕ್ಕಿಂತ ಹೆಚ್ಚು ಮಳೆಯೂ ಆಗಬಾರದು –  ಬೀಜಾ ಮೊಳೆಯಲು! ಈ ಅವಸರವಿಲ್ಲದ ಜೀವೋತ್ಪತ್ತಿಯ ಪ್ರಕ್ರಿಯೆಯ ಫಲವಾಗಿ ನಮ್ಮ ನಾಗರಿಕತೆ, ನಮ್ಮ ಸಂಸ್ಕೃತಿಗಳು ಬೆಳೆಯುತ್ತವೆ. ಸರದಿ ಬದಲಾಯಿಸುವ ಕುದುರೆ, ಅರಮನೆ, ದೇವಸ್ಥಾನ ಇತ್ಯಾದಿಗಳು ಪದ್ಯದಲ್ಲಿ ಮುಂದೆ ಬರುತ್ತದೆ. ಎಲ್ಲವಕ್ಕೂ ಮೂಲ ಅಗೆದಾಗ ನಕ್ಕ ನುಣುಪು ಕುಂಕುಮ ಭೂಮಿ.

ದುಡಿಮೆ, ಉದ್ಯಮ, ಇದರಿಂದ ಹುಟ್ಟುವ ಸಂಬಂಧಗಳು, ವ್ಯವಸ್ಥೆಗಳು, ತನ್ಮೂಲಕ ಚಿಗುರೊಡೆದು ಹೊಮ್ಮುವ ಮಾನವ ಪ್ರಜ್ಞೆ ಇತ್ಯಾದಿಗಳ ಬಗ್ಗೆ ಮಾರ್ಕ್ಸ್‌ ಹೇಳುವುದೆಲ್ಲವೂ ಪದ್ಯದಲ್ಲಿ ಸಂಕೇತಗೊಳ್ಳುತ್ತವೆ. ಆದರೆ ಮಾರ್ಕ್ಸ್ ಕೃಷಿ ಮಾತ್ರದಲ್ಲಿ ಉನ್ನತನಾಗರಿಕ ಪ್ರಜ್ಞೆಯನ್ನು ಸೃಷ್ಟಿಸಬಲ್ಲ ಸಂಕೀರ್ಣತೆಯನ್ನು ಕಾಣುವುದಿಲ್ಲ. ವಿಲೇಜ್ ಈಡಿಯಸಿ –  ಗಾಂಪತನ –  ಎನ್ನುವುದು ಹಳ್ಳಿಗರ ತೃಪ್ತ ಜೀವನವನ್ನು ಅರಿಯಲು, ಟೀಕಿಸಲು ಅವನು ಬಳಸುವ ಪದ. ಅವನಿಗೆ ತೊಡಕುಗಳನ್ನು ಹುಟ್ಟಿಸುವ ನಗರಗಳು ಬೇಕು; ಈ ತೊಡಕುಗಳನ್ನು ಒಂದು ಕುದಿಗೆ ತಂದು ನಿವಾರಿಸುವ ತಿಕ್ಕಾಟಗಳು ಬೇಕು. ಉತ್ಪಾದನೆಯಲ್ಲಿ ಉಳಿತಾಯ ಮಾಡಲು ಕಡಿಮೆ ಸಂಬಳಕ್ಕೆ ಹೆಚ್ಚು ದುಡಿಯುವ ಕಾರ್ಮಿಕರು ಬೇಕು. ಈ ಕಾರ್ಮಿಕರು ಅಸಂತೃಪ್ತರಾಗಿ ಒಗ್ಗಟ್ಟಾಗಿ ಹೋರಾಡಬೇಕು. ಆಸೆ ಅಸೂಯೆಗಳು ಬೇಕು. ಪ್ರಾಯಶಃ ಈ ‘ಬೇಕು’ ಎನ್ನುವ ಶಬ್ದ ಉಚಿತವಲ್ಲ; ಹೀಗೆಲ್ಲ ಆಗುವುದು ಬದುಕಿನ ಚಲನೆಯಲ್ಲೇ ಅನಿವಾರ್ಯ ಎಂದು ವಿಜ್ಞಾನಿಯಂತೆ ಮಾರ್ಕ್ಸ್ ಗಮನಿಸುತ್ತಾನೆ –  ಅಷ್ಟೆ. ಈ ಸಂಕೀರ್ಣತೆ ಸಂಭ್ರಮಗಳು, ಅದರಿಂದ ಹುಟ್ಟುವ ತಾಂತ್ರಿಕ ಪ್ರಗತಿ ಇತ್ಯಾದಿಗಳು ನರಸಿಂಹಸ್ವಾಮಿಗಳಿಗೆ ಬೇಕಾಗಿಲ್ಲ.

ನನ್ನ ಯುವ ಮಿತ್ರನೊಬ್ಬ ಹೇಳುತ್ತಾನೆ: ಕೃಷಿಮೂಲ ಸಂಸ್ಕೃತಿಯ ಭಾವುಕ ಆದರ್ಶವಾದೀ ಕಲ್ಪನೆಯಿದು; ಈಗ ಕೃಷಿಯೆಂದರೆ ರಾಸಾಯನಿಕ ಗೊಬ್ಬರ, ಕೀಟನಾಶಕ, ಬ್ಯಾಂಕಿನ ಸಾಲ, ಕೈಗೆ ಬಾರದ ಫಸಲು, ಅಥವಾ ಅನಿರೀಕ್ಷಿತ ಬೆಲೆಯ ಕುಸಿತ, ರೈತನ ಆತ್ಮಹತ್ಯೆ ಇತ್ಯಾದಿ. ಆಧುನಿಕ ನಾಗರೀಕತೆಯ ಹೊಟ್ಟೆಬಾಕತನ ಮತ್ತು ಆತಂಕಗಳು ಕೃಷಿಯನ್ನೂ ಬಿಟ್ಟಿಲ್ಲ. ಪರಾವಂಬಲನೆಯ ಅಗತ್ಯವಿಲ್ಲದ ಸ್ವದೇಶಿ ಸ್ಥಿತಿ ಈಗ ಎಲ್ಲಿಯೂ ಇಲ್ಲ.

ಆದರೆ ಈ ಬಗೆಯಲ್ಲಿ ಒಂದು ಪದ್ಯದ ಧ್ವನ್ಯರ್ಥವನ್ನು ಕಡೆಗಾಣಿಸಿ ಅದರ ವಾಚ್ಯಾರ್ಥವನ್ನು ಜಗ್ಗಾಡಿ ಚರ್ಚಿಸುವುದು ಸರಿಯೆ?

ಇದಕ್ಕೆ ನನ್ನ ಯುವಮಿತ್ರನ ಉತ್ತರವೂ ಮಾರ್ಮಿಕವಾದ್ದು. ಅಲಂಕಾರಿಕ ಭಾಷೆಗೆ ಮುದಗೊಂಡು, ನಮ್ಮ ಪ್ರಸ್ತುತ ಸಂಕಟಗಳಿಗೆ ಕಾರಣವಾದ ಪದ್ಯದಲ್ಲಿರುವ ವಾಚ್ಯವನ್ನು ಮರೆಯುವುದೂ ಸಾಧ್ಯವೆ?

ವಾಲ್ಟರ್ ಬೆಂಜಮಿನ್‌ ತಾಜ್‌ಮಹಲ್ ನೋಡಿದ್ದರೆ ಹೇಳುತ್ತಿದ್ದ: ‘ಈ ಕಟ್ಟಡವನ್ನು ಕಟ್ಟಿದ ಗುಲಾಮೀ ಕಾರ್ಮಿಕರ ನಿತ್ಯದ ಬವಣೆಯನ್ನು ನೆನೆದರೆ ತಾಜ್‌ಮಹಲ್‌ ಸೌಂದರ್ಯ ಹೇಯವಾದ್ದು ಎನ್ನಿಸುತ್ತದೆ. ಅದರ ಮಾಯೆಗೆ ಒಳಗಾಗಿ ಏನಾದರೂ ಅದು ಸುಂದರವೆನ್ನಿ ಬಿಟ್ಟರೆ ನನ್ನೊಳಗೆ ಪಾಪಪ್ರಜ್ಞೆಯನ್ನು ಅದು ಮೂಡಿಸುತ್ತದೆ’. ‘ಯಹೂದ್ಯರನ್ನು ಜೀವಂತ ಬೇಯಿಸಿ ಕೊಂದಾದ ನಂತರ ಕಾವ್ಯ ಸಾಧ್ಯವೆ?’ ಎಂದು ಹೇಳಿದ ಕವಿಯೊಬ್ಬನೂ ನೆನಪಾಗುತ್ತಾನೆ. ‘ಕುಂಕುಮಭೂಮಿ’ ಇಷ್ಟೆಲ್ಲ ಅಧಿಕ ಪ್ರಸಂಗಕ್ಕೆ ಕಾರಣವಾಗಬೇಕೆ?

ಹಿಂದೊಮ್ಮೆ ಗೆಳೆಯ ಕಿರಂ ನಾಗರಾಜರ ಜೊತೆ ಈ ಪದ್ಯವನ್ನು ಚರ್ಚಿಸುತ್ತ ಇದ್ದಾಗ ಥಟ್ಟನೇ ಹೊಳೆದದ್ದು ಅಡಿಗರ ‘ಭೂತ’ ಕವಿತೆಗೆ ಇದು ಸಂವಾದಿಯೆಂದು. ಆಶ್ಚರ್ಯವೆಂದರೆ ಇದು ನಮಗೆ ಮಿದುಳಿನಲ್ಲಿ ಹುಟ್ಟಿದ ತಾರ್ಕಿಕ ಅರಿವು ಅಲ್ಲ. ಕಿವಿಯ ಮೂಲಕ ಹೊಳೆದದ್ದು. ಅಡಿಗರ ಕವನದ ‘ಅಗೆವಾಗ್ಗೆ’ ಎನ್ನುವ ಒತ್ತಿನ ಶಬ್ದ ನರಸಿಂಹಸ್ವಾಮಿಗಳಲ್ಲ ಒತ್ತನ್ನೂ ಒತ್ತಾಯವನ್ನೂ ಕಳೆದುಕೊಂಡು, ‘ಅಗೆದಾಗ’ ಎನ್ನುವ, ಅಗೆಯುವ ಕ್ರಿಯೆ ಮುಗಿದ ನಂತರದ ಶಬ್ದವಾಗುತ್ತದೆ.

ಅಡಿಗರದು ಕೃಷಿಯಲ್; ಗಣಿಗಾರಿಕೆ. ಗುದ್ದಲಿಯ ಕೆಲಸ ಮೇಲ್ಪದರದ ಫಲವಂತಿಕೆಗೇ ಸಮಾಧಾನಪಟ್ಟು ನರಸಿಂಹಸ್ವಾಮಿಗಳ ಪದ್ಯದಲ್ಲಿ ಗುದ್ದಲಿಯ ಕೆಲಸ ನಿಲ್ಲುತ್ತದೆ. ಆದರೆ ಅಡಿಗರ ಪದ್ಯದಲ್ಲಿ ಗುದ್ದಲಿಯ ಕೆಲಸ ನಿಲ್ಲುವುದಿಲ್ಲ. ಅಡಿಗರ ಒತ್ತುಗಳಲ್ಲಿ ಅನುರಣನಗೊಳ್ಳುವಂತೆ ಸಂಕಲ್ಪಬಲದಲ್ಲಿ ನಡೆಯುವ ಶೋಧದ ಮಾತುಗಳ ಲಯವನ್ನು ಗಮನಿಸಿ: ‘ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು. ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ ಕಂಡೀತು ಗೆರೆ ಮಿರಿವ ಚಿನ್ನದದಿರು.’ ಅಲ್ಲಿಗೇ ಕೆಲಸ ನಿಲ್ಲುವುದಿಲ್ಲ. ಅದಿರನ್ನು ಶುದ್ಧ ಮಾಡಬೇಕು. ಅಪರಂಜಿ ವಿದ್ಯೆ ಗೊತ್ತಿರಬೇಕು. ಚಿನ್ನ ಸಿಕ್ಕರೆ ಸಾಲದು. ಈ ಹೊನ್ನನ್ನು ಕಾಯಿಸಿ, ಹಿಡಿದು, ಬಡಿದು ಇಷ್ಟದೇವತಾ ವಿಗ್ರಹಕ್ಕೊಗ್ಗಿಸುವ ಅಸಲು ಕಸುಬು ಗೊತ್ತಿರಬೇಕು.

ಪ್ರೇತವಾಗಿರುವ ನಮ್ಮ ಭೂತಕಾಲವನ್ನು ಕಲ್ಯಾಣದಾಯಕ ಪಿತೃವಾಗಿ ಮಾಡಿಕೊಳ್ಳುವ ಈ ಶೋಧದ ಗಣಿಗಾರಿಕೆಯ ಪ್ರತಿಮ ಅಡಿಗರಲ್ಲಿ ಕೃಷಿಯನ್ನು ಒಳಗೊಂಡಿದ್ದೂ ಅದನ್ನು ಮೀರಿ ಮಿಕ್ಕುವ ಸಂಕೀರ್ಣತೆ ಪಡೆದದ್ದು. ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ, ಅಂದರೆ ಆಕಾಶ ಭೂಮಿಗಳ ಅನುರಕ್ತಿಯ ರತಿ ನಡೆಯಬೇಕು. (ಬೇಸಾಯವೂ ಸಂಭೋಗದ ರೂಪಕದಲ್ಲಿ ಧ್ವನಿಸುವುದನ್ನು ಗಮನಿಸಿ) ತತ್ಪರಿಣಾಮವಾಗಿ, ಗರ್ಭವತಿಯಾದ ಭೂಮಿ ಭತ್ತ ಗೋಧುವೆ ಹಣ್ಣುಬಿಟ್ಟ ವೃಂದಾವನವಾಗಬೇಕು. ಕೊನೆಯಲ್ಲಿ ಇಡೀ ಸಮುದಾಯದ ಸಮೃದ್ಧಿಯನ್ನು ಮತ್ತು ಆಧ್ಯಾತ್ಮಿಕ ಆಶಯವನ್ನು ಸೂಚಿಸುವ ಗುಡಿಗೋಪುರಗಳ ಬಂಗಾರ ಶಿಖರ ಮೇಲಕ್ಕೆ ಎತ್ತಿದ ಕಣ್ಣಿಗೆ ಕಾಣಬೇಕು. ‘ಅಲ್ಲಿಯೂ ಸಲ್ಲುವ ಇಲ್ಲಿಯೂ ಸಲ್ಲುವ’ ಲೌಕಿಕ – ಅಲೌಕಿಕ ಬೆಸೆತ ವರ್ತಮಾನ ಭೂತಗಳ ಅನ್ಯೋನ್ಯ ಅಡಿಗರ ನಾಗರಿಕತೆಯ ಕಲ್ಪನೆಯಲ್ಲಿದೆ. ಇಡೀ ಸಮುದಾಯಕ್ಕೆ ಸಲ್ಲುವ ಊರಿನ ಮಧ್ಯದ ಚಿನ್ನದ ಗೋಪುರವೂ ಇಲ್ಲಿ ಇದೆ; ವ್ಯಕ್ತಿ ಸಫಲತೆಯ ಮನೆಯೊಳಗಿನ ಚಿನ್ನ ‘ಇಷ್ಟದೇವತೆಯೂ’ ಇಲ್ಲಿ ಇದೆ. ಎರಡು ಗಣಿರೂಪಕದಲ್ಲಿ ನಡೆಯುವ ಶೋಧದ ಫಲ. ಈ ಶೋಧದ ಸಫಲತೆಗೆ ಅದಿರಿನಿಂದ ಕೂಡಿದ ಕೋಶಾವಸ್ಥೆ ಮಣ್ಣನ್ನು ಶುದ್ಧಮಾಡಬಲ್ಲ, ಸೋಸಬಲ್ಲ –  ಅಪರಂಜಿ ವಿದ್ಯೆ – ತಂತ್ರಜ್ಞಾನವೂ ಗೊತ್ತಿರಬೇಕು.

ಈ ಪದ್ಯದ ವಾಚ್ಯವನ್ನೂ ಕೊಂದ ಅಧಿಕಪ್ರಸಂಗದಲ್ಲಿ ಉತ್ಪ್ರೇಕ್ಷಿಸಲೆ? ಅಡಿಗರ ಕವನದೊಳಗೆ ವಾಚ್ಯವಾಗಿ ಇರುವುದೂ ಎಷ್ಟು ವಿಕೃತವಾಗಬಲ್ಲದು ನೋಡಿ.

ಅದಿರನ್ನು ಕಬ್ಬಿಣ ಮಾಡುವ ವಿದ್ಯೆ ನಮ್ಮಲ್ಲಿದೆ. ಆದರೆ ಸುಲಭ ಲಾಭ ಗಳಿಕೆಯ ಲೋಭಿಗಳು ಬಳ್ಳಾರಿಯಲ್ಲಿ ಈಗ ಮಾಡುವಂತೆ ಮಣ್ಣನ್ನು ಅವಸರದಲ್ಲಿ ಕೆರೆದು, ಚೀಲದಲ್ಲಿ ತುಂಬಿ, ಪರದೇಶಕ್ಕೆ ಚೀಪಾಗಿ ಮಾರಿ, ಊರನ್ನು ಹಾಳುಗೆಡವಿ, ಭ್ರಷ್ಟರಾಗಿ, ತಾವೂ ಹಾಳಾಗುವುದು ಸಾಧ್ಯವಾಗಿಬಿಟ್ಟಿದೆ; ಪರಸ್ಪರ ಭ್ರಷ್ಟಾಚಾರದ ಆರೋಪದ ಮೈಕಜ್ಜಿ ತುರಿಕೆಯ ಸುಖದಲ್ಲಿ ಗುಡಿಗೋಪುರಗಳ ಬಂಗಾರ ಶಿಖರಗಳನ್ನು ಪಡೆದ ಊರುಗಳಿಗೆ ತೀರ್ಥಯಾತ್ರೆ ಮಾಡುವುದು ಶುರುವಾಗಿದೆ. ‘ಅರೆರೆರೆ ಗಣಿರಾಮ’ ಎನ್ನುವ ಕಾವ್ಯಗುಣ ಪಡೆದ ಶೀರ್ಷಿಕೆಯಲ್ಲಿ ಪತ್ರಿಕೆಗಳಲ್ಲಿ ಪಡೆಯುವ ದಿನಕ್ಕೊಂದು ಹೇಳಿಕೆ ಕೊಡುವ ಭಾಗ್ಯವಂತನೊಬ್ಬನನ್ನೂ ಈ ಗಣಿಗಾರಿಕೆ ಸೃಷ್ಟಿಸಿದೆ.

ಈ ಪದ್ಯಗಳ ಬಗ್ಗೆ ಡಿ.ಆರ್. ನಾಗರಾಜರು ಸುಮಾರು ಮೂರು ದಶಕಗಳ ಹಿಂದೆ ನನಗೆ ಹೇಳಿದ್ದು ನೆನಪಾಗುತ್ತದೆ. ಆ ದಿನಗಳಲ್ಲಿ ನಾಗರಾಜರು ಅಡಿಗರ ಕಾವ್ಯವನ್ನು ‘ಜೀವ ವಿರೋಧಿ’ ಎಂದು ವಾದಿಸುತ್ತ ಇದ್ದವರು. ಕಾವ್ಯ ಖಡ್ಗವಾಗಬೇಕೆಂದವರು. ಆಗ ರಾಜಕಾರಣಿಗಳು ಈಗಿನಷ್ಟು ಭ್ರಷ್ಟರಾಗಿರಲಿಲ್ಲವಾದ್ದರಿಂದ ಇಂತಹ ಮುಗ್ಧ ಕ್ರಾಂತಿಕಾರಕ ಮಾತುಗಳು, ಕಾವ್ಯದ ರಾಜಕೀಯ ಶಕ್ತಿಯ ಬಗ್ಗೆ ಭ್ರಮೆಗಳು ಸಾಧ್ಯವಾಗಿದ್ದವು. ನಾವು ಗಮನಿಸಿದ ಎರಡು ಪದ್ಯಗಳ ಸಂವಾದದಿಂದ ಅವರು ಇನ್ನಷ್ಟು ಹುರುಪುಗೊಂಡು, ‘ಅದೇ ನನಗೆ ಅನ್ನಿಸುವುದು. ನರಸಿಂಹಸ್ವಾಮಿ ಕೃಷಿಕಾಯಕದಲ್ಲಿ ನಂಬಿದ ಕವಿ; ಅಡಿಗರು ಲೌಕಿಕವನ್ನು ಮೀರುವ ಆಧ್ಯಾತ್ಮವನ್ನು ಹುಡುಕುವ ವೈದಿಕ ಕವಿ. ಮನುಷ್ಯನ ಶ್ರಮದಲ್ಲೆ ಎಲ್ಲ ಮೌಲ್ಯವನ್ನು ಕಾಣುವ ಕುಂಕುಮ ಭೂಮಿ ಮಾರ್ಕ್ಸ್‌ವಾದಕ್ಕೆ ಹತ್ತಿರವಾದ್ದು’ ಎಂದರು. ‘ಗುಡಿಗೋಪುರಗಳ ಬಂಗಾರ ಶಿಖರ’ದಲ್ಲಿ ನಾಗರಾಜರು ಅವುಗಳನ್ನು ಕಟ್ಟಬೇಕೆಂಬ ಹಿಂದುತ್ವವಾದಿಗಳ ಅಥವಾ ಕೆಡವಬೇಕೆಂಬ ಇಸ್ಲಾಮಿಕ್ ಟೆರರಿಸ್ಟರ ಹುನ್ನಾರಗಳನ್ನು ಕಂಡಿರಲಿಲ್ಲ. ಆ ದಿನಗಳಲ್ಲಿ ಕಾವ್ಯದ ಸಾಂಕೇತಿಕ ಅರ್ಥಗಳನ್ನು ಪೂರ್ಣ ಗೌಣಗೊಳಿಸಿ ಅದರ ವಾಚ್ಯವನ್ನು ಮಾತ್ರ ಹಿಡಿದು ಮಾತಾಡುವ ಅತಿರೇಕಕ್ಕೆ ಹೋದವರು ನನ್ನ ಇನ್ನೊಬ್ಬ ಗೆಳೆಯ ಪೋಲಂಕಿ ರಾಮಮೂರ್ತಿ ಮಾತ್ರ. ಅಡಿಗರು ‘ಏನಾದರು ಮಾಡುತಿರು ತಮ್ಮ’ ಎನ್ನುವ ತಮ್ಮ ಪದ್ಯದಲ್ಲಿ ಶತಾಯಗತಾಯ ಪರಿಸರನಾಶವನ್ನು ಮಾಡಬೇಕೆಂದೇ ಹೇಳುತ್ತಿದ್ದಾರೆ ಎನ್ನುವ ಅತಿಗೆ ಅವರ ವಾದಕ್ರಮ ಬೆಳೆದು ನಮ್ಮನ್ನು ದಿಗ್ಭ್ರಾಂತಗೊಳಿಸಿತ್ತು.

ಎಲ್ಲ ಒಳ್ಳೆಯ ಪದ್ಯಗಳಲ್ಲೂ ಹೊಳೆಯುವ ಧ್ವನ್ಯರ್ಥದ ಜೊತೆಗೆ ಅದಕ್ಕೊಂದು ಬೆವರಬಲ್ಲ ಮೈಯ ವಾಚ್ಯಾರ್ಥದ ಶರೀರವೂ ಇರುತ್ತದೆ. (ಈಚೆಗೆ ಡಾ. ಆಶಾದೇವಿ ಮತ್ತು ಡಾ. ದಾಮೋದರ ರಾಯರು ಕಾವ್ಯದ ಈ ಮೈಯನ್ನೂ ಬಹು ಸೂಕ್ಷ್ಮವಾಗಿ ಗಮನಿಸುವಂತೆ ಕಾಣುತ್ತದೆ.)

ಕೃಷಿಗೆ ಆದ್ಯತೆಯನ್ನು ಕೊಡುವುದು ನರಸಿಂಹಸ್ವಾಮಿಗಳು. ಆದರೆ ಜ್ಞಾನ, ತಪಸ್ಸು, ಉದ್ಯಮಶೀಲತೆಗೆ ಆದ್ಯತೆ ಕೊಡುವುದು ಅಡಿಗರು. ಹೀಗೆನ್ನಿಸುವುದು ಮೇಲ್ನೋಟಕ್ಕೆ ಮಾತ್ರ. ಮುಷ್ಠಿಯಾಗಬಲ್ಲ, ಏನನ್ನಾದರೂ ಹಿಡಿಯಬಲ್ಲ, ಹೆಬ್ಬೆರಳಿಗೆ ಎದುರಾಗಬಲ್ಲ ನಾಲ್ಕು ಬೆರಳುಗಳನ್ನು ಪಡೆದ ಮಾನವ ಜೀವಿ ಅನಾದಿಕಾಲದಿಂದಲೂ ತಂತ್ರಜ್ಞಾನಿಯೇ. ರಾಮಚಂದ್ರ ದೇವ ತಮ್ಮೊಂದು ನಾಟಕದಲ್ಲಿ ಚಿತ್ರಿಸಿರುವಂತೆ ಪುರಾಣಗಳ ಕಾಲದಿಂದಲೂ ತಮ್ಮ ವೈರಿಗಳನ್ನು ಕೊಲ್ಲಬಲ್ಲ ಶಸ್ತ್ರಾಸ್ತ್ರಗಳ ಹುಡುಕಾಟದಲ್ಲಿ ಮಾನವರೆಲ್ಲರೂ ಮಗ್ನರೇ. ವಜ್ರಾಯುಧ, ಆಗ್ನೇಯಾಸ್ತ್ರ, ಬ್ರಹ್ಮಾಸ್ತ್ರ –  ಒಂದೇ? ಎರಡೇ? ಸಮಾಧಾನದಲ್ಲಿ, ತೃಪ್ತಿಯಲ್ಲಿ ಬದುಕಬೇಕೆಂಬುದು ಕೂಡ ಮಾನವನ ಸತತವಾದ ಹುಡುಕಾಟವೇ. ಹುಟ್ಟಿದವನು ಸಾಯಲೇಬೇಕಲ್ಲ!

* * *

ಪದ್ಯಗಳ ನೆರವಿನಿಂದ ಕೊಂಚ ನಾವು ಬಳ್ಳಾರಿಯ ಗೊಂದಲವನ್ನು ಗಮನಿಸೋಣವೆ? ನನ್ನ ಕಾರವನ್ನು ಓಡಿಸುವ ಶಿವಕುಮಾರ್ ಜೊತೆ ನಾನು ರಾಜಕೀಯವನ್ನು ಚರ್ಚಿಸುತ್ತಿರುತ್ತೇನೆ. ನಿನ್ನೆ ಅವನು ನಮ್ಮ ಕಾರನ್ನು ರೋಡುಗಳು ಸಂಧಿಸುವ ಟ್ರಾಫಿಕ್ ಜಾಮಿನಲ್ಲಿ ಹೀಗೇ ನುಸುಳುವ ಬೇರೆ ಕಾರುಗಳಿಗೆ ತಾಕದಂತೆ ತುಸುತುಸುವೇ ಜಾಣತನದಲ್ಲಿ ನುಸುಳಿಸುತ್ತ ಹೇಳಿದು: ‘ಸಾರ್‌, ನನಗೆ ಭಾರೀ ಆಶ್ಚರ್ಯವಾಗ್ತ ಇದೆ. ನಾನೇನಾದರೂ ಒಂದು ನೂರು ರೂಪಾಯಿ ಕದ್ದರೆ ಪೊಲೀಸರು ಬಂದು ನನ್ನ ಅರೆಸ್ಟ್ ಮಾಡ್ತಾರೆ. ಸುಮಾರು ಇನ್ನೂರು ಕೋಟೀನ ನಮ್ಮನ್ನ ಆಳೋವರೇ ತಗೊಂಡಿದಾರೆ ಅಂತ ಎಷ್ಟೇ ಹೇಳಿದರೂ ಯಾರೂ ಏನೂ ಮಾಡ್ತಾ ಇಲ್ಲಾ ಯಾಕೆ? ಪೊಲೀಸರು ಹೋಗಲಿ. ಈ ನಮ್ಮ ಜನಾನೇ ಸುಮ್ಮನೆ ಇದಾರಲ್ಲ. ಇದು ಯಾಕೆ ಹೀಗಾಗ್ತ ಇದೆ ಸಾರ್. ಯಾರೂ ತಲೆ ಕೆಡಿಸಿಕೊಂಡಿಲ್ವಲ್ಲ?’

ಇದಕ್ಕೆ ನಾನೇನು ಉತ್ತರ ಹೇಳಲು ಸಾಧ್ಯ? ಒಂದಷ್ಟು ದೊಡ್ಡ ಮಾತುಗಳನ್ನು ಹೇಳಲೇ ಬೇಕಲ್ಲವೆ? ಶಿವನಿಗೆ ಹೇಳಿದೆ: ಮುಂದಿನವನ ಕಾರನ್ನೂ ಎಡಬಲದ ಕಾರುಗಳನ್ನೂ ಮಧ್ಯೆ ನುಗ್ಗುವ ಸ್ಕೂಟರುಗಳನ್ನೂ ಆಟೋರಿಕ್ಷಾಗಳನ್ನೂ ಗಮನಿಸುತ್ತಲೇ ನನ್ನ ಮಾತುಗಳನ್ನು ಅವನು ಕೇಳಿಸಿಕೊಂಡ.

‘ನೋಡು ಶಿವಾ. ಈ ನಮ್ಮ ನೆಲವನ್ನು ನಮಗೋಸ್ಕರ ಮಾತ್ರ ದೋಚುವುದು ಸರಿಯಲ್ಲ; ನಮ್ಮ ಮೊಮ್ಮಕ್ಕಳು ಮರಿಮಕ್ಕಳ ಕಾಲಕ್ಕೂ ಈ ನೆಲದ ಭೂಗರ್ಭ ತನ್ನ ಸಮೃದ್ಧಿಯನ್ನು ಕಳೆದುಕೊಂಡಿರಬಾರದು ಎನ್ನುವ ಸಂಸಾರಿಯೊಬ್ಬನ ವಿವೇಕ ನಮಗಿರಬೇಕು. ತನ್ನಲ್ಲಿರುವ ಪೆಟ್ರೋಲನ್ನು ಅಮೆರಿಕಾದ ಮುಚ್ಚಿಟ್ಟುಕೊಂಡೇ ಅರಬ್ಬರಿಂದ ಪೆಟ್ರೋಲು ಪಡೆಯುತ್ತದೆ ಅಲ್ಲವೆ? ಅರಬ್ಬರ ಪೆಟ್ರೋಲು ಇಂಗಿದ ಮೇಲೆ ತನ್ನ ಪೆಟ್ರೋಲಿನಿಂದ ಜಗತ್ತನ್ನು ಆಳುವ ಉಪಾಯ ಅಮೇರಿಕಾದ್ದು.’

ಈ ಮಾತುಗಳನ್ನು ಶಿವ ಗೌರವದಿಂದ ಕೇಳಿಸಿಕೊಂಡ. ಆದರೆ ಮುಂದಿನ ನನ್ನ ವಿಚಾರಗಳು ಅವನಿಗೆ ಸಮ್ಮತವಾದವು ಎಂದು ನನಗೆ ಅನ್ನಿಸಿತು. ‘ಸಂಸಾರಿಯ ಜುಗ್ಗುತನದಲ್ಲೂ ಈ ವಿವೇಕ ಅಡಗಿದೆ –  ಅಲ್ಲವೆ ಶಿವ? ನೋಡು, ಮುಚ್ಚಿಡುವುದು, ಬಚ್ಚಿಡುವುದು, ಅಗತ್ಯಬಿದ್ದಾಗ ಗೊಣಗುತ್ತಲೇ ಸಂಸಾರದ ಮರ್ಯಾದೆ ಕಾಯಲು ಬಚ್ಚಿಟ್ಟದ್ದನ್ನು ಬಿಚ್ಚುವುದು, ನಮ್ಮ ಅಮ್ಮಂದಿರಲ್ಲೂ ಅಜ್ಜಿಯರಲ್ಲೂ ಕಾಣುತ್ತ ಇದ್ದ ಗುಣ. ಈಗ ತಮ್ಮ ಹಲ್ಲುಗುರುಗಳನ್ನೂ ಬಳಸಿ ಪರಚುವ ಕೆಲವು ಪ್ರಾಣಿಗಳಂತಿರುವ ನಮ್ಮ ಗಣಿ ಮಾಲೀಕರ ದುರಾಸೆ ಯಾವ ಮಟ್ಟದ್ದೆಂದರೆ… ನನ್ನ ಬಾಯಲ್ಲಿ ಆ ಮಾತುಗಳು ಬರಲಾರದೆ ಉಳಿದವು.

ನಾನು ಹೇಳಲಾರದೆ ಹೇಸಿದ್ದನ್ನು ಸಾತ್ವಿಕವಾಗಿ ಅನುವಾದಿಸಿಕೊಂಡವನಂತೆ ಧರ್ಮಸ್ಥಳದ ಪರಮಭಕ್ತನಾದ ಶಿವ ಹೇಳಿದ : ‘ಯಾರು ಯಾರಿಗೆ ಲಂಚಕೊಟ್ಟರು, ಯಾವತ್ತಿನಿಂದ ಕೊಡುತ್ತ ಬಂದಿದ್ದಾರೆ ನಮ್ಮಂತಹ ಬಡವರಿಗೆ ಬೇಕಾಗಿಲ್ಲ. ಲಂಚದಿಂದ ಪಡೆದಿದ್ದನ್ನು ಒದ್ದು ಕಕ್ಕಿಸಬೇಕು; ಅವರು ಯಾರೇ ಆಗಿರಲಿ. ಮುಲಾಜಿಲ್ಲದೆ ಕಕ್ಕಿಸಬೇಕು. ಈ ದರಿದ್ರ ಗಣಿಗಾರಿಕೇನ ನಿಲ್ಲಿಸ್ತೀನಿ ಅಂತ ಕುಮಾರಸ್ವಾಮಿಗಳು ಹೇಳ್ತಿದಾರೆ. ಹೆದರಿಕೊಂಡಾದರೂ ಅವರಿದನ್ನ ಮಾಡಿಯಾರು ಅಲ್ಲವೆ?’

* * *

ನಾನು ಉತ್ತರಿಸಲಿಲ್ಲ. ನುಸುಳುವ ಕಾರುಗಳ ಮಧ್ಯೆ ನುಸುಳುವ ಶಿವನ ಉಪಾಯಗಳನ್ನು ಮೆಚ್ಚುತ್ತ ಬಳ್ಳಾರಿಯ ಗಣಿಕಾರರು ಕೊಂಡ ಲಕ್ಸುರಿ ಕಾರುಗಳನ್ನು ನೆನೆದೆ. ಹೆಣಭಾರದ ಅದಿರಿನ ಲಾರಿಗಳಿಂದ ಬಳ್ಳಾರಿಯ ರೋಡುಗಳು ಎಷ್ಟು ಕೆಟ್ಟಿವೆಯೆಂದರೆ ಈಗ ರಸ್ತೆಗಳನ್ನು ಹಾಳುಗೈದವರು ಹೆಲಿಕಾಪ್ಟರ್‌ಗಳಲ್ಲಿ ಓಡಾಡುವಂತೆ! ಈಗ ಬೆಂಗಳೂರಲ್ಲಿ ಅಂಥವರ ಕಾರುಗಳ ನಡುವೆ ಶಿವನ ಸಾಹಸ ಗಮನಿಸುತ್ತ ನನ್ನ ಕನಸಿಗೆ ಹಿಂದುರುಗಿದೆ. ಅಂತಹ ಒಂದು ಕಾರನ್ನು ನಡೆಸಬೇಕೆಂಬ ಕನಸು ಶಿವನದು.

* * *

ಮನುಷ್ಯ ಉದ್ಯಮಶೀಲನೂ, ಪ್ರಕೃತಿಗೆ ಕೃತಜ್ಞನೂ, ಉಂಡು ತಿಂದು ನಿದ್ರೆ ಮಾಡುವುದರಲ್ಲಿ ಸುಖಿಯೂ, ಮಕ್ಕಳನ್ನು ಪ್ರೀತಿಸುವವನೂ ಆಗಬೇಕು. ಆಗ ಅವನ ಕೃಷಿಗೆ ನುಣಪು ಕುಂಕುಮ ಭೂಮಿ ನಗುತ್ತದೆ. ಕಾರ್ಮುಗಿಲ ಖಾಲಿಕೋಣೆಯಲ್ಲಿನ ಅಗೋಚರ ಬಿಂದು ಅವಸರದ ಹೆರಿಗೆಯಾಗದಂತೆ ನವಮಾಸವೂ ಕಾವ ಭ್ರೂಣರೂಪಿಯಾಗಿರುತ್ತದೆ. ಅಂತರಪಿಶಾಚಿಯಾದ ಗುಡುಗಾಟ ಸಿಡಿಲಿನ ಕಾಟ ಇದ್ದೇ ಇರುತ್ತದೆ. ಆದರೆ ಆಗಾಗ ಕಾಡುವ ಭೂತಕ್ಕೆ ಮಳೆ ವರ್ತಮಾನವಾಗುತ್ತದೆ.

* * *

ತಮಾಷೆಯೆಂದರೆ ನನಗೆ ಒಂದು ಮಾತನ್ನು ಯಾವಾಗಲೂ ಹೇಳಬೇಕೆನ್ನಿಸುತ್ತದೆ. ನನ್ನ ಅಜ್ಜ ಅಜ್ಜಿ ಹೇಳುತ್ತ ಇದ್ದ ಮಾತಿದು. ಅದೊಂದು ದೈವನಿಯಾಮಕವಾದ ಸತತವಾದ ಸತ್ಯವೆಂಬಂತೆ. ಯಾರೋ ಒಳ್ಳೆಯವರು ಇನ್ನೂ ಇದಾರೆ ಈ ಪ್ರಪಂಚದಲ್ಲಿ. ಅದಕ್ಕೆ ಒಂದಿಷ್ಟು ಮಳೆ ಬೆಳೆ ಈಗಲೂ ಆಗ್ತದೆ ಎನ್ನುವ ಅಲೌಕಿಕ ನಂಬಿಕೆಯ ಮಾತಿದು. ಆದರೆ ಈ ಮಾತನ್ನು ಹೇಳಿ ಸಮಾಧಾನ ಕೊಡುವುದಾಗಲೀ ಪಡೆಯುವುದಾಗಲೀ ನನಗೆ ನನ್ನ ತಾರ್ಕಿಕತೆಯಿಂದಾಗಿ ಹುಟ್ಟಿಕೊಂಡಿರುವ ಮುಜುಗರದಿಂದ ಸಾಧ್ಯವಿಲ್ಲ. ಹಾಗೆ ಹೇಳುವ ಒಂದು ಪದ್ಯಕ್ಕಾಗಿ, ವಾಚ್ಯದ ಮುಜುಗರಗಳನ್ನೂ, ತಾರ್ಕಿಕ ನಿಯತಿಗಳನ್ನೂ ಎಂಥ ಜಾಣರೂ ಮೀರಬಲ್ಲ ಬೆರಗಿನ ಅರಿವಿನ ಅದರ ಧ್ವನ್ಯರ್ಥಕ್ಕಾಗಿ, ನಾನು ಕಾದಿರಬಹುದೇನೊ!

೩೦೨೦೦೬

* * *