ಕಳೆದ ಶತಮಾನದ ಎರಡು ಮಹತ್ವದ ಪರಿವರ್ತನೆಗಳೆಂದರೆ ಎಲ್ಲ ಕುಲೀನರಂತೆ ಇನ್ನೊಬ್ಬ ಕುಲೀನರಂತೆ ಇನ್ನೊಬ್ಬ ಕುಲೀನನಾಗಿದ್ದ ಮೋಹನದಾಸ ಕರಮಚಂದ್ ಗಾಂಧಿ ಪರಿವರ್ತನೆಯಾದದ್ದು; ಹಾಗೆಯೇ ಎಲ್ಲ ಪಂಚಮರಂತೆ ಇನ್ನೊಬ್ಬ ಪಂಚಮರಾಗಿದ್ದ ಅಂಬೇಡ್ಕರ್‌ ಪರಿವರ್ತನೆಯಾದದ್ದು. ಈ ಎರಡು ಪರಿವರ್ತನೆಗಳೂ ಪರಸ್ಪರ ವಿರೋಧ / ಸಂವಾದಗಳಲ್ಲಿ, ವಸಾಹತುಶಾಹಿ ವಿರೋಧದ ಚರಿತ್ರೆಯ ಮಂಥನದಲ್ಲಿ ಉತ್ಪನ್ನವಾದವು.

ಗಾಂಧೀಜಿ ಮೊದಲ ಬಾರಿ ಅಂಬೇಡ್ಕರ್‌ರನ್ನು ಭೇಟಿಯಾದಾಗ ಅವರ ತೀವ್ರವಾದ ವಾದವನ್ನೂ ಬುದ್ಧಿಸೂಕ್ಷ್ಮವನ್ನೂ ಕಂಡು ಅಂಬೇಡ್ಕರ್‌ ಒಬ್ಬ ಬ್ರಾಹ್ಮಣನೆಂದು ಭಾವಿಸಿರಬಹುದೆಂದು ತೋರುತ್ತದೆ. ಆದ್ದರಿಂದ ಅವರು ಅಸ್ಪೃಶ್ಯರ ಸಂಕಟ ಅಂಬೇಡ್ಕರ್‌ಗಿಂತ ತನಗೇ ಹೆಚ್ಚು ಗೊತ್ತು ಎಂದು ಅಂಬೇಡ್ಕರ್‌ಗೆ ಅನ್ನಿಸುವಂತೆ ಮಾತಾಡಿರಬಹುದು. ಹಾಗೆಂದು ಅಂಬೇಡ್ಕರ್‌ ಜೀವನ ಚರಿತ್ರೆ ಬರೆಯುತ್ತಿದ್ದ ಝೆಲಿಯಟ್ ಎಂಬ ಅಮೆರಿಕನ್‌ ಮಹಿಳೆ ಹೇಳಿದ್ದು ನೆನಪಾಗುತ್ತದೆ. ಇದರಿಂದ ಅಂಬೇಡ್ಕರ್‌ ಬೇಸರಪಟ್ಟಿರಬೇಕು. ಬುದ್ಧಿವಂತರೆಲ್ಲಾ ಮೇಲ್ಜಾತಿಯವರೇ ಆಗಿರಬೇಕೆಂದು ತಿಳಿಯುವುದು ಭಾರತೀಯರಲ್ಲಿ ಸಾಮಾನ್ಯವಲ್ಲವೆ? ಹಾಗೂ ತಿಳಿಯಬಹುದಾಗಿದ್ದ ಗಾಂಧೀಜಿ ಪರಿವರ್ತನೆಯಾದರು.

ಪರಿವರ್ತನೆಯಾದ ನಂತರ ಗಾಂಧೀಜಿ ಹೇಳಿದ ಮಾತೊಂದಿದೆ –  ‘ನಾನು ಈ ಜನ್ಮದಲ್ಲಿ ಅಸ್ಪೃಶ್ಯನಾಗುವುದು ಸಾಧ್ಯವಿಲ್ಲ. ಆಗಬೇಕೆಂದರೆ ಮತ್ತೆ ಹುಟ್ಟಿ ಬರಬೇಕು.’ ಈ ಮಾತು ಗೆಳೆಯ ದೇವನೂರು ಮಹಾದೇವರಿಗೆ ಬಹಳ ಮಹತ್ವದ ಮಾತಾಗಿ –  ಗಾಂಧಿ ಬಗ್ಗೆ ಬಂದ ಸಿನಿಮಾ ಕುರಿತು ನಡೆದ ವಿವಾದಲ್ಲಿ –  ಕಂಡದ್ದು ನೆನಪಾಗುತ್ತದೆ. ತಾವು ದಲಿತರನ್ನು ತುಂಬಾ ಅನುಕಂಪದಿಂದ ನೋಡುತ್ತೇವೆ ಎಂಬುದನ್ನೇ ಮನಸ್ಸಿಗೆ ಸಮಾಧಾನದ ಹಿತ ತರುವ ಭಾವನೆಯಾಗಿ ಮಾಡಿಕೊಳ್ಳುವುದರ ಸೂಕ್ಷ್ಮ ರಾಜಕೀಯ – ಮೇಲು ಜಾತಿಯ ಸಜ್ಜನರ ರಾಜಕೀಯ –  ಗಾಂಧೀಜಿಗೆ ಅರಿವಾಗಿತ್ತು.

* * *

ಈ ಪರಿವರ್ತನೆಗಳಿಗೆ ಸಂಬಂಧಿಸಿದಂತೆ ಎರಡು ಘಟನೆಗಳನ್ನು ಇಲ್ಲಿ ಪ್ರಸ್ತಾಪ ಮಾಡುತ್ತೇನೆ.

ಮೊದಲನೆಯದು ಒಂದು ಕಥಾರೂಪಕ: ಗೆಳೆಯ ದೇವನೂರು ಮಹಾದೇವ ಮಣಿಪಾಲದ ಮಾಹೆಯಲ್ಲಿ ಹೇಳಿದ್ದು. ನಮ್ಮೆಲ್ಲರಿಗೆ ಆಮ್ಲಜನಕದಂತಿದ್ದ ಗತಿಸಿದ ಮುರಾರಿ ಬಲ್ಲಾಳರ ಉತ್ಸಾಹದಿಂದ ಗಾಂಧಿ ಮತ್ತು ಅಂಬೇಡ್ಕರ್‌ಕುರಿತ ಅಖಿಲ ಭಾರತ ಮಟ್ಟದ ವಿಚಾರ ಸಂಕಿರಣವೊಂದನ್ನು ಮಾಹೆಯಲ್ಲಿ ಏರ್ಪಡಿಸಿದ್ದೆವು. ಇದಕ್ಕೆ ಭಾರತದ ಬಹಳ ದೊಡ್ಡ ವಿದ್ವಾಂಸರು ಬಂದಿದ್ದರು. ಎಲ್ಲರೂ ಸಾಮಾಜಿಕ ವಿಶ್ಲೇಷಣೆಯ ಮಾತುಗಳಿಂದ ಗಾಂಧಿ ಮತ್ತು ಅಂಬೇಡ್ಕರ್‌ಅವರನ್ನು ವಿಶ್ಲೇಷಿಸುತ್ತಾ ಇದ್ದಾಗ ದಲಿತರು ಯಾಕೆ ಗಾಂಧೀಜಿಯನ್ನು ದ್ವೇಷಿಸುತ್ತಾರೆ ಎಂಬ ಪ್ರಶ್ನೆ ಉದ್ಭವವಾಯಿತು. ಈ ಸಮಯದಲ್ಲಿ ದೇವನೂರರು ದಲಿತರೇಕೆ ಗಾಂಧೀಜಿಯನ್ನು ದ್ವೇಷಿಸುವಂತೆ ನಮಗೆ ಕಾಣುತ್ತಾರೆ ಎಂಬುದನ್ನು ಕತೆಯೊಂದರ ರೂಪಕ ಬಳಿಸಿ ಕನ್ನಡದಲ್ಲಿಯೇ ವಿವರಿಸಿದರು: ‘ಒಂದು ಮನೆ ಇದೆ ಅದು ಹಳೆಯ ಕಾಲದ ಮನೆ. ಆಗಲೇ ಜೀರ್ಣಾವಸ್ಥೆಗೆ ಬಂದಿದೆ. ಅದನ್ನು ಬೀಳಿಸಲೇಬೇಕು. ಕಣ್ಣಿಗೆ ಅವಲಕ್ಷಣವಾಗಿ ನಿಂತುಬಿಟ್ಟಿದೆ. ಮನೆಯ ಒಳಗೇ ಇರುವ ಒಬ್ಬನಿಗೆ ಮನೆಯ ಬಗ್ಗೆ ಅತ್ಯಂತ ಬೇಸರ ಬಂದಿದೆ, ಸಿಟ್ಟೂ ಬಂದಿದೆ. ಅವನು ಅದರ ಕಂಬಗಳನ್ನು ಒಡೆಯುತ್ತಾ ನಿಂತಿದ್ದಾನೆ. ಮನೆಯ ಹೊರಗಡೆಯೂ ಒಬ್ಬ ಇದ್ದಾನೆ. ಅವನಿಗೂ ಆ ಅವಲಕ್ಷಣದ ಮನೆಯ ಮೇಲೆ ಸಿಟ್ಟು. ಆ ಸಿಟ್ಟಿನಲ್ಲಿ ಅವನು ಮನೆಯ ಮೇಲೆ ಕಲ್ಲೆಸೆಯುತ್ತಾನೆ. ಹೀಗೆ ಎಸೆಯುವ ಕೆಲವು ಕಲ್ಲುಗಳು ಮನೆಯ ಒಳಗೆ ಕಂಬಗಳನ್ನು ಒಡೆಯುತ್ತಿರುವವನ ಮೇಲೂ ಬೀಳಬಹುದು. ಅದರಿಂದ ನಾವು ಅತಿಯಾಗಿ ಬೇಸರಪಟ್ಟುಕೊಳ್ಳಬಾರದು.’

ಅಲ್ಲಿ ಮಾತನಾಡಿದ ಎಲ್ಲರ ಮಾತುಗಳಿಗೂ ಮೀರಿದ ವಿಶ್ಲೇಷಣೆ ಹಾಗೂ ಚಿಂತನೆ ಈ ರೂಪದಲ್ಲಿತ್ತು.

ಇನ್ನೊಂದು ಸಾಮಾಜಿಕ ಬದಲಾವಣೆಯ ಸ್ವರೂಪದ ರೂಪಕ ಒಂದು ವಾರದ ಹಿಂದೆ ನಾನು ಕೇಳಿಸಿಕೊಂಡದ್ದು. ನಾವೆಲ್ಲಾ ರಾಜ್ಯಸಭಾ ಚುನಾವಣೆ ಬಗ್ಗೆ ಅಗ್ನಿ ಶ್ರೀಧರ್ ಮನೆಯಲ್ಲಿ ಚರ್ಚಿಸುತ್ತಿದ್ದಾಗ ಡಾ. ಮರುಳಸಿದ್ದಪ್ಪನವರು ಸೂಟಿನಲ್ಲಿ ಕಾಣಿಸುವ ಅಂಬೇಡ್ಕರ್‌ ಮತ್ತು ಅರೆಬೆತ್ತಲೆಯ ಗಾಂಧಿ ಬಗ್ಗೆ ತಮ್ಮದೊಂದು ವಿಶ್ಲೇಷಣೆಯನ್ನು ಆಕರ್ಷಕವಾಗಿ ನಮ್ಮ ಮುಂದಿಟ್ಟರು: ಮೈತುಂಬಾ ಬಟ್ಟೆ ಉಳ್ಳವನು ಹಾಗೆ ಬಟ್ಟೆಯನ್ನು ಉಡುವುದು ತನ್ನ ಆಜನ್ಮಸಿದ್ಧ ಅಧಿಕಾರ ಎಂದು ಭಾವಿಸುತ್ತಾನೆ. ಅಂಥವನಲ್ಲಿ ನೈತಿಕ ಪ್ರಜ್ಞೆ ಜಾಗೃತವಾಗಿ ತಾನೊಬ್ಬ ಅಪರಾಧಿ ಎನಿಸತೊಡಗಿದಾಗ ಅವನು ಬಟ್ಟೆ ಕಳಚಿಕೊಂಡು ಬೆತ್ತಲಾಗಲೇಬೇಕು –  ಗಾಂಧಿಯ ಹಾಗೆ. ಬೆತ್ತಲಾಗಿಯೇ ಬದುಕುತ್ತಿರುವವನು ಯವತ್ತೋ ಒಂದು ದಿನ ಮೈ ತುಂಬ ಬಟ್ಟೆ ಹಾಕಿಕೊಳ್ಳಬೇಕು ಎಂಬ ಸ್ವಾಭಿಮಾನದ ಕನಸನ್ನು ಕಾಣಲೇಬೇಕು –  ಅಂಬೇಡ್ಕರ್‌ಹಾಗೆ. ಈ ಬೆತ್ತಲಾಗುವಿಕೆ ಮತ್ತು ಬಟ್ಟೆ ಧರಿಸುವಿಕೆಗಳು ಕೇವಲ ಆರ್ಥಿಕ ಮೌಲ್ಯಗಳಿಂದ ಮಾತ್ರ ಹುಟ್ಟಿಕೊಂಡ ಅಗತ್ಯಗಳಲ್ಲ ಎಂಬುದು ಮರುಳಸಿದ್ದಪ್ಪನವರ ಮಾತಿನ ಇಂಗಿತವಾಗಿತ್ತು. ತಮ್ಮ ರಾಜಕೀಯ ಒಳನೋಟಗಳನ್ನು ಮಾರ್ಕ್ಸ್‌‌ವಾದದಿಂದ ಪಡೆದುಕೊಂಡವರು ಡಾ. ಮರುಳಸಿದ್ದಪ್ಪನವರು ಎಂಬುದು ಇಲ್ಲಿ ನಾವು ಗಮನಿಸಬೇಕಾದ್ದು.

ಅರೆ ಬೆತ್ತಲಾಗಿದ್ದ ಗಾಂಧೀಜಿಗೆ ಮೈತುಂಬಾ ಬಟ್ಟೆ ಹಾಕಿಕೊಂಡವನನ್ನು ಹೀಯಾಳಿಸುವುದು ಸಾಧ್ಯವಾಗಲು ಬ್ರಿಟನ್‌ಗೆ ಹೋಗಬೇಕಾಯಿತು. ಅಲ್ಲಿ ದುಂಡು ಮೇಜಿನ ಪರಿಷತ್ತಿನ ಮಾತುಕತೆ ಮುಗಿದ ಬಳಿಕ ಹೊರಬಂದ ಗಾಂಧೀಜಿಯವರನ್ನು ಯಾರೋ ಒಬ್ಬ ಬ್ರಿಟಿಷ್ ಪತ್ರಕರ್ತ ಕೇಳುತ್ತಾನೆ –  ‘ನೀವು ಹೀಗೆ ಅರೆ ಬೆತ್ತಲೆಯಾಗಿಯೇ ಹೋಗಿ ಸಾಮ್ರಾಟರನ್ನು ನೋಡಿದಿರಾ?’ ಅದಕ್ಕೆ ಗಾಂಧೀಜಿ ನಮಗಿಬ್ಬರಿಗೂ ಸಾಕಾಗುವಷ್ಟು ಬಟ್ಟೆಯನ್ನು ಆತನೇ ತೊಟ್ಟಿದ್ದನಲ್ಲವೆ?’ ಎಂದರಂತೆ.

ಇಂಥ ಗಾಂಧೀಜಿಯೇ ಅಸ್ಪೃಶ್ಯರ ಬಗ್ಗೆ ಮಾತನಾಡುವಾಗ ಒಂದು ತಪ್ಪು ಮಾಡಿದರೇನೋ? ಬಹುಶಃ ಇದನ್ನೂ ನನಗೆ ಹೇಳಿದವರು ದೇವನೂರು ಮಹಾದೇವ ಅವರೇ ಇರಬೇಕು. ಅಸ್ಪೃಶ್ಯತೆಯ ಸಮಸ್ಯೆಯನ್ನು ಗಾಂಧೀಜಿ ಅನುಕಂಪದಿಂದಲೇ ನೋಡುತ್ತಿದ್ದುದರಿಂದ ಅವರು ದಲಿತರನ್ನು ಹರಿಜನರು ಎಂದು ಕರೆದು, ಅವರು ಮಕ್ಕಳಿದ್ದಂತೆ ಎಂದು ಭಾವಿಸಿದರು. ಇದರ ಬದಲಾಗಿ ದಲಿತರು ನಮ್ಮ ಪಿತೃಗಳು ಅಥವಾ ನಮ್ಮ ಹಿರೀಕರು ಎಂದು ಗಾಂಧೀಜಿ ತಿಳಿಯಬೇಕಾಗಿತ್ತು. ಯಾಕೆಂದರೆ ಭಾರತದಲ್ಲಿ ಎಲ್ಲೆಲ್ಲೂ ಅವರೇ ಮೂಲನಿವಾಸಿಗಳು.

ಮಹಾರಾಷ್ಟ್ರದಲ್ಲಿ ದಲಿತರು ಮಹಾರ್‌ ಜನ – ಅಲ್ಲಿನ ಮೂಲ ನಿವಾಸಿಗಳಿರಬೇಕು ಇಲ್ಲಿ ನಾವು ಆದಿ ಕರ್ನಾಟಕರು ಎನ್ನುತ್ತೇವೆ. ಪ್ರಾಯಶಃ ಇತಿಹಾಸದಲ್ಲಿ ಮೊದಲಿದ್ದವರು ಅವರು. ನಂತರ ಅವರನ್ನು ಆಕ್ರಮಿಸಿಕೊಂಡವರು ನಮ್ಮಂಥವರು. ಆದ್ದರಿಂದ ಅವರನ್ನು ನಮ್ಮ ಹಿರೀಕರು ಎಂಬಂತೆಯೇ ಕಂಡಿದ್ದರೆ ಪ್ರಾಯಶಃ ಗಾಂಧೀಜಿಯವರದ್ದೂ ಸೇರಿದಂತೆ ದಲಿತರ ಬಗೆಗಿನ ಎಲ್ಲರ ಅನುಕಂಪಕ್ಕೆ ಇನ್ನೊಂದು ಬಗೆಯ ಋಣಸಲ್ಲಿಕೆಯ ಅರ್ಥವೂ ಬರುವುದಕ್ಕೆ ಸಾಧ್ಯವಿತ್ತು.

* * *

ಅಂಬೇಡ್ಕರ್‌ ದಲಿತರಿಗೆ ವಿಶೇಷವಾದ ಮತಕ್ಷೇತ್ರಗಳ ಸವಲತ್ತನ್ನು ಕೇಳಿದಾಗ ಗಾಂಧೀಜಿ ಅದನ್ನು ವಿರೋಧಿಸಿ ಅಮರಣಾಂತ ಉಪವಾಸ ಕೈಗೊಂಡರು. ತಮ್ಮಂತೆಯೇ ಹಿಂದೂಗಳು ಎಂದು ತಿಳಿದಿದ್ದ ದಲಿತರು ತಾವು ಇನ್ನೊಂದು ರಾಷ್ಟ್ರ ಎಂದು ತಿಳಿದರೆ ಭಾರತ ಕೇವಲ ಹಿಂದೂ – ಮುಸ್ಲಿಂ ಅಲ್ಲದೆ ದಲಿತ ಆಗಿಯೂ ಒಡೆಯಬಹುದೆಂಬ ದಿಗಿಲು ಗಾಂಧೀಜಿಗೆ ಇತ್ತೆಂದು ತೋರುತ್ತದೆ.

ಗಾಂಧೀಜಿ ಈ ಉಪವಾಸ ಕೈಗೊಂಡಾಗ ಮತ್ತೊಂದು ಕುತೂಹಲಕಾರೀ ಘಟನೆಯು ನಡೆಯಿತು. ಗಾಂಧೀಜಿಯವರ ಗುರುದೇವ ಎಂದು ಕರೆಯಿಸಿಕೊಂಡಿದ್ದ ನಮ್ಮ ದೇಶದ ಮಹಾನ್ ಕವಿ ಟ್ಯಾಗೋರ್‌ ಅನೇಕ ವಿಷಯಗಳಲ್ಲಿ ಗಾಂಧೀಜಿ ಜತೆಗೆ ಜಗಳವಾಡುತ್ತಿದ್ದವರು. ಸ್ವದೇಶಿಯೂ ಈ ಜಗಳಗಳಲ್ಲಿ ಒಂದು. ಟ್ಯಾಗೋರ್‌ಗೆ ನಾವು ವಿಶ್ವಮಾನವರಾಗಬೇಕು, ಸ್ವದೇಶಿಯ ಮೂಲಕ ಸಂಕುಚಿತರಾಗಬಾರದು ಎಂಬ ಧೋರಣೆ ಇತ್ತು. ಆದರೂ ಅವರು ಗಾಂಧೀಜಿಯನ್ನು ಮಹಾತ್ಮ ಎಂದು ಕರೆದಿದ್ದರು. ಗಾಂಧೀಜಿ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ನೀಡಿದ್ದನ್ನು ವಿರೋಧಿಸಿ ಉಪವಾಸ ಕೈಗೊಂಡಾಗ ಅನಾರೋಗ್ಯದಲ್ಲಿದ್ದರೂ ಬಂಗಾಳದಿಂದ ಟ್ಯಾಗೋರ್‌ಬಹುದೂರ ಪ್ರಯಾಣ ಮಾಡಿ ಗಾಂಧೀಜಿಯವರಿದ್ದಲ್ಲಿಗೆ ಬಂದು ತಮ್ಮ ಬೆಂಬಲ ವ್ಯಕ್ತಪಡಿಸಿದರು. ಇದು ಮಹತ್ವದ ಉಪವಾಸ ಎಂದು ಅವರಿಗೆ ತೋರಿತ್ತು.

ಗಾಂಧೀಜಿಯವರ ಉಪವಾಸದ ಪರಿಣಾಮವಾಗಿ ಅಂಬೇಡ್ಕರ್‌ ಪ್ರತ್ಯೇಕ ಮತಕ್ಷೇತ್ರ ಬೇಡಿಕೆಯನ್ನು ಕೈಬಿಟ್ಟು ಗಾಂಧೀಜಿ ಹೇಳಿದ್ದನ್ನು ಒಪ್ಪಿಕೊಂಡರು. ಆದರೆ ಈ ಬಗೆಯ ಒತ್ತಡ ಹೇರಿದ್ದಕ್ಕಾಗಿ ಗಾಂಧೀಜಿಯನ್ನು ಅವರು ಕ್ಷಮಿಸಲಿಲ್ಲ. ಅದು ಯಾಕೆಂದು ನಮಗೆ ಅರ್ಥವಾಗಬೇಕು.

ಪ್ರತ್ಯೇಕ ಮತ ಕ್ಷೇತ್ರಗಳ ಚರ್ಚೆಯ ಪರಿಣಾಮವಾಗಿ ಗಾಂಧೀಜಿ ದಲಿತರಿಗೆ ಅಂಬೇಡ್ಕರ್‌ಕೇಳಿದ್ದಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಸೃಷ್ಟಿಸಿಕೊಟ್ಟರು. ಎಲ್ಲರೂ ಮತದಾರರಾಗಿರುವ ಕ್ಷೇತ್ರಗಳಿಂದ ದಲಿತರು ಆಯ್ಕೆಯಾದರೆ ಅವರು ಪ್ರತ್ಯೇಕವಾಗಿ ಉಳಿಯದೆ ಕ್ರಮೇಣ ಮುಖ್ಯವಾಹಿನಿಯಲ್ಲಿ ಬೆರೆತು ಬಿಡುತ್ತಾರೆ. ಈ ಮೂಲಕ ಅಸ್ಪೃಶ್ಯತೆಯನ್ನು ಸಂಪೂರ್ಣ ತೊಡೆದು ಹಾಕಬಹುದು ಎಂದು ಗಾಂಧೀಜಿ ನಂಬಿದ್ದರು. ಆದರೆ ಅಂಬೇಡ್ಕರ್‌ಗೆ ಇದ್ದ ಭಯ ಬೇರೆಯೇ. ಇಂಥಾ ಮತ ಕ್ಷೇತ್ರಗಳಲ್ಲಿ ಚುನಾವಣೆಗೆ ಗೆಲ್ಲುವುದಕ್ಕಾಗಿ ಅವರು ‘ಎಲ್ಲರಿಗೂ ಬೇಕಾದವರಂತೆ’ ನಡೆದುಕೊಳ್ಳಲು ಆರಂಭಿಸುತ್ತಾರೆ ಎಂಬುದು ಅಂಬೇಡ್ಕರ್‌ ಅವರ ಆತಂಕವಾಗಿತ್ತು.

ಅಂಬೇಡ್ಕರ್‌ರ ಅನುಮಾನದ ವಾದದಲ್ಲೂ ಸದ್ಯದ ನಿಜವಿದೆ. ಗಾಂಧೀಜಿಯವರ ಒತ್ತಾಸೆಯಲ್ಲೂ ಭವಿಷ್ಯದಲ್ಲಿ ಅರ್ಥಪೂರ್ಣ ನಿತ್ಯವಾಗುವ ನಿಜವಿದೆ. ಇದರಲ್ಲಿ ಯಾವುದೋ ಒಂದನ್ನು ಸುಲಭವಾಗಿ ಆಯ್ದುಕೊಳ್ಳಬಹುದು ಎಂದು ನನಗನ್ನಿಸುವುದಿಲ್ಲ. ದಲಿತನೊಬ್ಬ ಮೀಸಲು ಕ್ಷೇತ್ರದಿಂದ ಗೆದ್ದು ಬರಬೇಕಾದರೆ ಅಲ್ಲಿರುವ ಉಳಿದ ಜಾತಿಯವರಿಗೆ ಪ್ರಿಯನಾಗಿರಬೇಕಾಗುತ್ತದೆ. ಅವರಿಗೆ ಅಪ್ರಿಯನಾದರೆ ಅವನಿಗೆ ದಲಿತರ ಓಟು ಸಿಕ್ಕರೂ ಗೆಲ್ಲಲು ಸಾಧ್ಯವಿಲ್ಲ. ಆದ್ದರಿಂದ ಹೀಗೆ ಗೆದ್ದು ಬರುವ ದಲಿತರು ಕ್ರಮೇಣ ಸವರ್ಣೀಯರ ರಾಜಕೀಯದ ಆಮಿಷಗಳಿಗೆ ಬಲಿಯಾಗಬಹುದು ಎನ್ನುವ ಭಯವೇನೋ ನಿಜ. ಹಾಗೆಂದು ಇದರ ಬದಲಿಗೆ ಅಂಬೇಡ್ಕರ್‌ ಹೇಳಿದಂತೆ ಮಾಡಿದ್ದರೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳೂ ಮತದಾರರೂ ದಲಿತರೇ ಆಗಿರುತ್ತಿದ್ದರು. ಈ ಸ್ಥಿತಿಯಲ್ಲಿ ಯಾರು ಹೆಚ್ಚು ತೀವ್ರವಾಗಿ ಮತ್ತು ತೀಕ್ಷ್ಣವಾಗಿ ದಲಿತತ್ವವನ್ನು ಪ್ರತಿಪಾದಿಸುತ್ತಾರೆ ಎಂಬ ಪೈಪೋಟಿ ಇರುತ್ತಿತ್ತು. ಈ ಪೈಪೋಟಿ ಅನೇಕ ಸಾರಿ ಕೇವಲ ಮಾತಿನ ಉಗ್ರತೆಯಾಗಿರುತ್ತದೆ. ಆಕರ್ಷಕವಾದ ಬಾಯಿ ಬಡಾಯಿಯಾಗುತ್ತ ಹೋಗುತ್ತದೆ –  ಮುಖ್ಯವಾಗಿ ಓಟು ಗಳಿಕೆಯ ರಾಜಕಾರಣದಲ್ಲಿ ಹೀಗೆ ಒಂದು ರೀತಿಯ ಮಾತುಗಾರಿಕೆಯ ಹುಸಿ ಜನಪ್ರಿಯತೆಯ ಭ್ರಮೆಯಲ್ಲಿ ಇರುವ ಸ್ಥಿತಿಯೇ ರಾಜಕಾರಣ ಮಾಡುವುದಕ್ಕೆ ಅಗತ್ಯವಾದ ಬಂಡವಾಳವಾಗುತ್ತದೆ ಅಥವಾ ಇದು ಕೊನೆಯಲ್ಲಿ ನೈಜವಾದ ಮಿಲಿಟನ್ಸಿಯ ನಡುವಿನ ಕ್ರೌರ್ಯದ ಪೈಪೋಟಿಯೂ ಆಗಿಬಿಡಬಹುದು. ಇದು ಸಂಭವಿಸಬಾರದು ಎನ್ನುವುದೂ ಗಾಂಧೀಜಿಯವರ ಮನಸ್ಸಿನಲ್ಲಿ ಇತ್ತು ಎಂದು ಹೇಳಬಹುದು. ಮಾತ್ರವಲ್ಲ ಹೊಂದಿಕೊಂಡು ಹೋಗುವ ಪ್ರಕ್ರಿಯೆಯಲ್ಲಿ ಕ್ರಮೇಣ ಎಲ್ಲರೂ ಒಂದಾಗಬಹುದಾದ ಕನಸನ್ನೂ ಗಾಂಧೀಜಿ ಕಂಡಿದ್ದರು.

* * *

ದಲಿತರು ಸೂಟ್ ಹಾಕಿದ ಅಂಬೇಡ್ಕರ್‌ರ ಚಿತ್ರವನ್ನು ಪೂಜಿಸುತ್ತಾರೆ. ಅಂಬೇಡ್ಕರ್‌ ಅವರ ಇನ್ನೊಂದು ಚಿತ್ರವನ್ನು ನಾನು ನೋಡಿದ್ದೇನೆ. ಅದನ್ನು ದಲಿತರು ಪೂಜಿಸಿದ್ದರೆ ಏನಾಗಬಹುದಿತ್ತು ಎಂದು ಅನೇಕ ಬಾರಿ ಚಿಂತಿಸಿದ್ದೇನೆ. ಅದೊಂದು ಅಪರೂಪದ ಚಿತ್ರ ಅದರಲ್ಲಿ ಅಂಬೇಡ್ಕರ್‌ತಲೆ ಬೋಳಿಸಿಕೊಂಡು ಬೌದ್ಧ ಭಿಕ್ಷುವಿನ ಬಟ್ಟೆ ಉಟ್ಟುಕೊಂಡು ಕೈಯಲ್ಲಿ ಒಂದು ಕೋಲನ್ನು ಹಿಡಿದುಕೊಂಡಿದ್ದಾರೆ. ಒಂದು ರೀತಿಯಲ್ಲಿ ಇದು ಗಾಂಧೀಜಿಯ ಚಿತ್ರವನ್ನೇ ನೆನಪಿಸುತ್ತದೆ.

ಅಂಬೇಡ್ಕರ್‌ರ ಈ ಚಿತ್ರವೇನಾದರೂ ಜನಪ್ರಿಯವಾಗಿದ್ದಲ್ಲಿ ಬಹುಶಃ ಅವಮಾನಿತರಾದ ದಲಿತರು ಹೆಚ್ಚು ಆಳದಲ್ಲಿ ಜಾಗೃತರಾಗುತ್ತಿದ್ದರು. ಅವರ ಹೋರಾಟ ಕೇವಲ ನೌಕರಿಗೆ ಮಾತ್ರ ಸೀಮಿತವಾಗಿರುತ್ತಿರಲಿಲ್ಲ. ಕೇರಳದಲ್ಲಿ ಈಳವರಿಗೆ (ಈಡಿಗರು) ನಾರಾಯಣ ಗುರು ಇದ್ದಂತೆ ಈಗಲೂ ದಲಿತರಿಗೆ ಅಂಬೇಡ್ಕರ್‌ಇದ್ದಾರೆ. ಸೂಟ್‌ಧರಿಸಿದ ಅಂಬೇಡ್ಕರ್‌ ಹೇಳುವುದಕ್ಕಿಂತ ಹೆಚ್ಚಿನದನ್ನು ಬೌದ್ಧ ಉಡುಪಿನಲ್ಲಿದ್ದ ಅಂಬೇಡ್ಕರ್‌ಹೇಳಬಹುದಿತ್ತು. ಡಾ. ಮರುಳಸಿದ್ದಪ್ಪನವರು ನನ್ನ ಈ ವಾದ ಸರಣಿಯನ್ನು ಒಪ್ಪಲಾರರೇನೂ?

ಅಂಬೇಡ್ಕರ್‌ ಎಂಥಾ ಆಮಿಷಗಳಿದ್ದರೂ ಕ್ರಿಶ್ಚಿಯನ್‌ ಆಗಲಿಲ್ಲ. ಮುಸ್ಲಿಂ ಕೂಡಾ ಆಗಲಿಲ್ಲ. ಆದರೆ ನಾನು ಹಿಂದೂ ಆಗಿದ್ದು ಸಾಯುವುದಿಲ್ಲ ಎಂದು ಶಪಥ ಮಾಡಿ ಅವರು ಬೌದ್ಧರಾದರು. ರಾಜಕಾರಣಿಯಾಗಿ ಸತತ ಸೆಣಸುತ್ತ ಕೊನೆಯಲ್ಲಿ ಬೌದ್ಧಧರ್ಮ ಸ್ವೀಕರಿಸಿ ಆಧ್ಯಾತ್ಮಿಕರಾದ ಅಂಬೇಡ್ಕರ್‌ಮತ್ತು ಬಹಳ ಭಕ್ತಿಯಿಂದ ಆಧ್ಯಾತ್ಮಿಕ ಮೌಲ್ಯಗಳನ್ನೇ ತಮ್ಮ ಜೀವನದ ಶೈಲಿಯಾಗಿ ಸ್ವೀಕರಿಸಿದ್ದರೂ ಸಂಘರ್ಷದ ಐಹಿಕ ರಾಜಕಾರಣಕ್ಕೆ ಅಂಜದಿದ್ದ ಗಾಂಧೀಜಿ –  ಈ ಇಬ್ಬರ ಮಧ್ಯೆ ಯಾವ ವ್ಯತ್ಯಾಸವೂ ಇಲ್ಲವೆನ್ನಿಸುತ್ತದೆ.

ಪ್ರಾಯಶಃ ದೇವನೂರು ಹೇಳಿದ ದೃಷ್ಟಾಂತವನ್ನು ನೆನಪಿಸಿಕೊಳ್ಳುವುದಾದರೆ ಇಬ್ಬರೂ ಆ ಹಳೆಯ ಮನೆಯನ್ನು ನಾಶ ಮಾಡಲು ಹೊರಟಿದ್ದಾರೆ. ಒಬ್ಬರಿಗೊಬ್ಬರು ವಿರೋಧಿಗಳಂತೆ ಕಾಣಿಸುತ್ತಾರೆ. ಆದರೆ ಕೊನೆಯಲ್ಲಿ ಒಬ್ಬರಿಗೆ ಇನ್ನೊಬ್ಬರು ಪೂರಕವಾಗಿರುತ್ತಾರೆ.

* * *

ಒಮ್ಮೆ ಕೆಲವು ದಲಿತ ಸ್ನೇಹಿತರು ಕವಿ ಪುತಿನ ಅವರನ್ನು ನೋಡಲು ಹೋಗಿದ್ದರಂತೆ. ಹಣೆಯ ಮೇಲೆ ನಾಮ ಹಾಕಿ ನಿತ್ಯ ತಪ್ಪದೆ ಜಪ ಮಾಡುತ್ತಿದ್ದ ಈ ಶ್ರೀವೈಷ್ಣವ ಕವಿ ಪ್ರೀತಿ ತುಂಬಿದ್ದ ಹೃದಯದ ಮನುಷ್ಯ. ಅವರು ‘ನೀವು ಗಾಂಧಿಯನ್ನು ಯಾಕೆ ಬೈಯ್ಯುತ್ತೀರಿ?’ ಅಂತ ದಲಿತರನ್ನು ಕೇಳಿದರಂತೆ. ದಲಿತರು ತಮ್ಮ ಕಾರಣಗಳನ್ನೆಲ್ಲಾ ಪಟ್ಟಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪುತಿನ ‘ಮಹಾತ್ಮಾ ಗಾಂಧಿ ಈ ದೇಶದಲ್ಲಿ ಹುಟ್ಟದೇ ಇದ್ದಿದ್ದರೆ ಈ ಜಾಗದಲ್ಲಿ ಕೂತು ನಿಮ್ಮ ಜತೆ ಮಾತಾಡುವ ಸಾಧ್ಯತೆಯೇ ನನಗೆ ಇರುತ್ತಿರಲಿಲ್ಲ ಎಂದರಂತೆ.

* * *

ನಾನು ಹುಟ್ಟಿನಲ್ಲಿ ಬ್ರಾಹ್ಮಣ. ಚಿಕ್ಕವಯಸ್ಸಿನಲ್ಲಿಯೇ ವೇದೋಪನಿಷತ್ತುಗಳ ಬಗ್ಗೆ ನನ್ನ ಹಿರಿಯರು ಮಾತಾಡುವುದನ್ನು ಕೇಳಿ ಅದನ್ನು ಬಹಳ ಮೆಚ್ಚಿಕೊಂಡು ಬೆಳೆದವನು. ‘ಜೋಮನ ದುಡಿ’ ಕಾದಂಬರಿಯನ್ನು ಹೈಸ್ಕೂಲಿನ ಪ್ರಾರಂಭದಲ್ಲಿ ಓದಿದ ಕೂಡಲೇ ನನ್ನಲ್ಲಿ ಹುಟ್ಟಿದ ಪ್ರಶ್ನೆ ಒಂದೇ –  ಇಷ್ಟೆಲ್ಲಾ ಉದಾತ್ತವಾದ ಮಾತುಗಳನ್ನು ಆಡುವ ಒಂದು ಸಂಸ್ಕೃತಿ ಅಸ್ಪೃಶ್ಯತೆಯನ್ನು ಹೇಗೆ ಸೃಷ್ಟಿಸಿತು? ಭಾರತದ ಪ್ರಾಚೀಣ ಧರ್ಮಗ್ರಂಥಗಳ ಬಗ್ಗೆ ನಾನು ಬಹಳ ಭಾವುಕನಾದಾಗಲ್ಲೆಲ್ಲಾ ಥಟ್ಟನೆ ನೆನಪಾಗುವುದು ಈ ಧರ್ಮದ ಒಳಗೆ ಅಸ್ಪೃಶ್ಯತೆಯಂಥ ಒಂದು ರಾಕ್ಷಸ ಪದ್ಧತಿ ಇತ್ತು ಎಂಬುದು. ವಾಲ್ಟರ್‌ ಬೆಂಜಮಿನ್ ಹೇಳುವಂತೆ, ಅತ್ಯಂತ ಸುಂದರವಾದ ಪುರಾತನ ಸ್ಮಾರಕಗಳನ್ನು ನೋಡಿ ಮನಸ್ಸು ತುಂಬಿ ಬಂದಾಗ ಅವನಿಗೆ ಥಟ್ಟನೆ ನೆನಪಾಗುವುದು’ ಎಷ್ಟು ಕ್ರೌರ್ಯದ ಮೇಲೆ ಇಂಥಾ ಸ್ಮಾರಕಗಳು ನಿರ್ಮಾಣವಾಗಿವೆ?’ ಎಂಬುದು. ಜಗತ್ತಿನಲ್ಲಿ ಸುಂದರವಾದದ್ದು, ಭವ್ಯವಾದದ್ದು ಮತ್ತ ಉದಾತ್ತವಾದುದು ಎಂದು ಭಾವಿಸಿ ಏನನ್ನು ಹೊಗಳುತ್ತೇವೋ ಅವೆಲ್ಲವೂ ಮನುಷ್ಯನ ರಾಕ್ಷಸೀಯತೆಗೆ ಅವಕಾಶ ನೀಡಿಯೇ ಬೆಳೆದ ಭವ್ಯತೆ.

* * *

ಶಂಕರಾಚಾರ್ಯರಿಗೆ ಸಂಬಂಧಿಸಿದಂತೆ ಕಥೆಯನ್ನೇನೋ ಹೇಳುತ್ತೇವೆ. ಅವರಿಗೆ ಒಬ್ಬ ಚಾಂಡಾಲ ಎದುರಾದಾಗ ‘ನೀನು ದಾರಿಬಿಡು’ ಎಂದರಂತೆ. ಅವನು ‘ದಾರಿ ಬಿಡುವುದಿಲ್ಲ, ನಾನು ನೀನು ಇಬ್ಬರ ದೇವರ ಅಂಶ ಎನ್ನುತ್ತೀಯ, ನಾನೇಕೆ ದಾರಿಬಿಡಬೇಕು?’ ಎಂದು ಆತ ಪ್ರಶ್ನಿಸುತ್ತಾನೆ. ಇದರಿಂದ ಶಂಕರಾಚಾರ್ಯರಿಗೆ ಜ್ಞಾನೋದಯವಾಯಿತು ಎನ್ನುವ ನಾವು ಶಿವನೇ ಬಂದು ಚಾಂಡಾಲನ ರೂಪದಲ್ಲಿ ಈ ಪ್ರಶ್ನೆಯನ್ನು ಕೇಳಿದ ಎಂದು ಬಿಡುತ್ತೇವೆ. ಈ ಕತೆ ಸ್ವಲ್ಪ ಬದಲಾಗಬೇಕಿತ್ತು. ನಿಜವಾದ ಚಾಂಡಾಲನೇ ಈ ಪ್ರಶ್ನೆಯನ್ನು ಕೇಳಿ ಶಂಕರಾಚಾರ್ಯರ ಪರಿವರ್ತನೆ ಆಗಬೇಕಿತ್ತು. ಆ ಬಗೆಯ ಪರಿವರ್ತನೆ ಶಂಕರಾಚಾರ್ಯರ ಕಾಲದಲ್ಲಿ ಆಗಲಿಲ್ಲ.

ಈಗ ಅಸ್ಪೃಶ್ಯ ತನ್ನ ನಿಜ ಮುಖದಲ್ಲೇ ನಮ್ಮ ಮಾನವೀಯತೆಗೆ ಸವಾಲಾಗಿ ಎದುರಾಗಿದ್ದಾನೆ. ಹೀಗೆ ಎದುರಾಗುವಾಗ ನಮ್ಮೊಳಗೊಂದು ಅಪರಾಧಪ್ರಜ್ಞೆ ಕಾಡಿದರೆ ಅದು ಗಾಂಧೀಜಿ ಹುಟ್ಟಿಸಿದ ಅಪರಾಧಿ ಪ್ರಜ್ಞೆ. ಹಾಗೆಯೇ ಸವರ್ಣೀಯರನ್ನು ಎದುರಾಗುವ ದಲಿತನಲ್ಲಿ ಇರುವ ಸ್ವಾಭಿಮಾನದ ಪ್ರಜ್ಞೆ ಅಂಬೇಡ್ಕರ್‌ ಹುಟ್ಟಿಸಿದ್ದು. ಈ ಅಪರಾಧೀ ಪ್ರಜ್ಞೆ ಮತ್ತು ಸ್ವಾಭಿಮಾನದ ಪ್ರಜ್ಞೆ ಎರಡೂ ಕೂಡಿ ಈ ದೇಶಕ್ಕೆ ಒಳ್ಳೆಯದನ್ನು ಮಾಡಿದೆ. ದಲಿತರಲ್ಲಿ ಮಾತ್ರ ಸ್ವಾಭಿಮಾನದ ಪ್ರಜ್ಞೆ ಇದ್ದು ನಮ್ಮಲ್ಲಿ ಅಪರಾಧ ಪ್ರಜ್ಞೆ ಇಲ್ಲದೇ ಇದ್ದಲ್ಲಿ ಈ ಪ್ರಜಾತಂತ್ರದಲ್ಲಿ ಹೊಂದಿಕೊಂಡು ಹೋಗುವ ಅಷ್ಟಿಷ್ಟು ಕೆಲಸವೂ ಆಗುತ್ತಿರಲಿಲ್ಲ.

ಸವರ್ಣೀಯರಲ್ಲಿರುವ ಅಪರಾಧಿ ಭಾವನೆ, ದಲಿತರಲ್ಲಿರುವ ಸ್ವಾಭಿಮಾನದ ಪ್ರಜ್ಞೆ ಈ ಎರಡೂ ಈಚೆಗೆ ಕ್ರಮೇಣ ಕಣ್ಮರೆಯಾಗುತ್ತಿವೆ. ದಲಿತರು ಎಲ್ಲರಂತೆ ಮಾಧ್ಯಮ ವರ್ಗದವರಾಗಿ ಮಧ್ಯಮ ವರ್ಗದ ಎಲ್ಲ ಗುಣಗಳನ್ನೂ ಪಡೆದುಕೊಳ್ಳತೊಡಗಿದ್ದಾರೆ. ಹೀಗೆ ನೌಕರಿಗಳಿಗಾಗಿ ಪೈಪೋಟಿ ಮಾಡುತ್ತಿರುವ ದಲಿತರನ್ನು ಅಸೂಯೆಯಿಂದ ನೋಡುತ್ತಿರುವ ಮೇಲ್ಜಾತಿಯವರೂ ತಮ್ಮಂತೆಯೇ ಆಗುತ್ತಿರುವ ದಲಿತರ ಜತೆ ಬೆರೆಯಲೂ ತೊಡಗಿದ್ದಾರೆ. ಇವರನ್ನು ಹೊರತುಪಡಿಸಿದ ಅಪಾರವಾದ ಒಂದು ಜನವರ್ಗವಿದೆ. ಸವರ್ಣೀಯರಲ್ಲಿ ಬಡವರಾದವರು, ದಲಿತರಲ್ಲಿ ಕಡು ಬಡವರಾದವರು ಈ ವರ್ಗದಲ್ಲಿದ್ದಾರೆ. ಸವರ್ಣೀಯರು ರೈತರಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಡವರು ಭಿಕ್ಷಾವೃತ್ತಿಗೆ ಇಳಿಯುವ ಸ್ಥಿತಿಯಲ್ಲಿದ್ದಾರೆ. ನಗರಗಳು ದೊಡ್ಡದಾಗಿ ಬೆಳೆಯುತ್ತಿವೆ. ಆದರೂ ನಾವೂ ಟೆಲಿವಿಷನ್ ಹಾಕಿದಾಗ ಎಷ್ಟು ಸುಂದರವಾದ ಫ್ಯಾಷನ್‌ಶೋಗಳು ಕಾನುತ್ತವೆ. ನಮ್ಮ ದೇಶದಲ್ಲಿ ಅಪಾರವಾದ ಭೇದ ಉಳಿದಿದೆ ಎಂದು ನಮ್ಮಲ್ಲಿ ಅರಿವು ಮೂಡಿಸಿದ ಗಾಂಧಿ ಮತ್ತು ಅಂಬೇಡ್ಕರ್‌ ಇಬ್ಬರೂ ನಮಗೆ ಅಪ್ರಸ್ತುತರಾಗುತ್ತಿದ್ದಾರೆ. ನಾವು ಪ್ರಸ್ತುತ ಎಂದು ತಿಳಿದಿರುವುದು ಅಮೆರಿಕದ ರೀತಿಯ ಅಭಿವೃದ್ಧಿ ಮಾರ್ಗಗಳನ್ನು ಮಾತ್ರ.

ಗಾಂಧಿ ಮತ್ತು ಅಂಬೇಡ್ಕರ್‌ ಮತ್ತೆ ನಮ್ಮನ್ನು ಎಚ್ಚರಿಸಬೇಕು. ಮಧ್ಯಮ ವರ್ಗವಾಗಿರುವ ದಲಿತರನ್ನೂ ಕೊಂಚ ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಮಾಡಬೇಕು. ಸತತ ಆರ್ಥಿಕ ಅಭಿವೃದ್ಧಿಯ ದುರಾಸೆಗೆ ಅಡ್ಡವಾಗಿ ಹೋರಾಡುತ್ತ ಆಮರಣಾಂತ ಉಪವಾಸದಲ್ಲಿ ಕೂತಿರುವ ಗಾಂಧಿವಾದಿ ಮೇಧಾ ಪಾಟ್ಕರ್‌ಗೆ ನಾವು ಸ್ಪಂದಿಸಬೇಕು. ಅದು ಈ ದೇಶದ ತುರ್ತು.

೨೦೦೭

* * *