ದೂರದರ್ಶನದಲ್ಲಿ ಬರುವ ಸೀರಿಯಲ್‌ಗಳನ್ನು ನಾವು ಬೇಕಾದರೆ ನೋಡಬಹುದು. ಬೇಡದೇ ಇದ್ದರೆ ನೋಡದೇ ಇರಬಹುದು. ಆದರೆ ಈಗ ಕರ್ನಾಟಕದಲ್ಲಿ ದೇವೇಗೌಡರು ನಡೆಸುತ್ತಿರುವ ಸೀರಿಯಲ್ಲನ್ನು ನಾವೆಲ್ಲರೂ ಬಲವಂತವಾಗಿ ನೋಡಬೇಕಾಗಿ ಬಂದಿದೆ. ಹೀಗೆ ನೋಡಲೇಬೇಕಾದ ಸೀರಿಯಲ್‌ನಮ್ಮಲ್ಲಿ ಭ್ರಮೆಗಳನ್ನೂ, ಹುಸಿ ಭರವಸೆಗಳನ್ನೂ ಹುಟ್ಟಿಸುವುದರಿಂದ ಅದನ್ನು ಕೇವಲ ಪಾತ್ರಧಾರ ನಾಯಕರ ವೈಯಕ್ತಿಕವಾದ ತೆವಲುಗಳಿಗೆ ಸಂಬಂಧಪಟ್ಟದ್ದು ಎಂದು ಮಾತ್ರ ನೋಡದೆ ನಮ್ಮ ಮನಸ್ಸಿನ ಆರೋಗ್ಯಕ್ಕಾಗಿ ಗುಮಾನಿಯಿಂದಲೂ ನೋಡಬೇಕಾಗುತ್ತದೆ.

ಯಾವ ನಾಟಕವಾದರೂ ನಮ್ಮಲ್ಲಿ ಭಾವನೆಯ ತರಂಗಗಳನ್ನು, ನಿರೀಕ್ಷೆಗಳನ್ನು ಹುಟ್ಟಿಸುತ್ತದೆ. ಅದರಿಂದ ಒಂದೋ ನಮ್ಮ ಅರಿವು ಪಲ್ಲಟವಾಗಿ ಬೇರೆ ಕಡೆಗೆ ಹರಿಯುತ್ತದೆ ಅಥವಾ ಇರುವ ಅರಿವು ಹಿಗ್ಗುತ್ತದೆ ಅಥವಾ ಆತುರ ಮತ್ತು ಆತಂಕದಲ್ಲಿ ನೋಡುತ್ತ ಹೋದದ್ದು ಕೊನೆಯಲ್ಲಿ ಪಿಚ್ಚೆನ್ನಿಸುವಂತೆ ಮುಗಿಯುತ್ತದೆ.

ಈ ಹುಸಿ ನಾಟಕದಲ್ಲಿ ನಾವು ಮೋಸ ಹೋಗಿದ್ದೇವೆ. ನನ್ನ ಮಟ್ಟಿಗೇ ಹೇಳಿಕೊಳ್ಳುವುದಾದರೆ ದೇವೇಗೌಡರು ಪ್ರಧಾನಿಯಾದಾಗ ಅವರ ಕ್ರಿಯಾಶೀಲ ರಾಜಕಾರಣವನ್ನು ಮೆಚ್ಚಿಕೊಂಡವನು ನಾನು. ಭಾರತದ ಯಾವ ಸಾಮಾನ್ಯನಾದರೂ ಪ್ರಧಾನಿಯಾಗುವುದು, ಆಗಿ ದೇಶದ ಹಿತವನ್ನೂ ಪ್ರಜಾಹಿತವನ್ನೂ ಕಾಪಾಡುವುದು ಸಾಧ್ಯವೆಂಬ ನಂಬಿಕೆ ಹುಟ್ಟಿಸಿದವರು ದೇವೇಗೌಡರು. ಆದ್ದರಿಂದ ಅವರು ತಮ್ಮ ಮಗನ ವರ್ತನೆಯಿಂದ ದುಃಖಿತರಾಗಿರಬಹುದು ಎಂಬ ನಂಬಿಕೆ ಹಾಗೂ ಅನುಮಾನದಲ್ಲೇ ನಾನು ಈ ನಾಟಕವನ್ನು ನೋಡಬೇಕಾಗಿ ಬಂದ ಸುಸ್ತಿನಲ್ಲಿ ಈ ಮಾತುಗಳನ್ನು ಆಡುತ್ತಿದ್ದೇನೆ.

ನಮ್ಮಲ್ಲಿ ಒಂದು ಗಾದೆ ಇದೆ.  ನಿಜವಾದ ಗಾದೆ, ‘ಹಾವೂ ಸಾಯಬೇಕು, ಕೋಲೂ ಮುರಿಯಬಾರದು’ ಎಂದು. ಅದನ್ನು ಕೆಲವರು ತಪ್ಪಾಗಿ ‘ಹಾವೂ ಸಾಯಬಾರದು ಕೋಲೂ ಮುರಿಯಬಾರದು’ ಎಂದು ಹೇಳುವುದುಂಟು. ದೇವೇಗೌಡರು ಮಗನ ಮೇಲೆ ಶಿಸ್ತಿನ ಶಿಕ್ಷೆ ವಿಧಿಸುತ್ತಿರುವುದು ಎರಡನೇ ಗಾದೆಯ ಬಗೆಯಲ್ಲಿ. ಅವರಿಗೆ ತಮ್ಮ ಮಗನ ಅಪವಿತ್ರ ಮೈತ್ರಿ ತಪ್ಪು ಅನ್ನಿಸದ್ದರೆ ಅವರು ಪತ್ರ ಬರೆಯಬೇಕಿದ್ದದ್ದು ರಾಜ್ಯಪಾಲರಿಗಲ್ಲ. ಅವರು ಸ್ಪೀಕರ್‌ಗೆ ಪತ್ರ ಬರೆಯಬೇಕಿತ್ತು. ಆದರೆ ಪ್ರತೀ ಹಂತದಲ್ಲೂ ಅವರು ತಾನು ಜನರಿಗೆ ಜಾತ್ಯಾತೀತನೆಂದು ಕಾಣಿಸಬೇಕು. ಆದರೆ ಅದಕ್ಕೆ ಬೇಕಾದ ಕ್ರಿಯೆ ತನ್ನಿಂದ ಆಗಕೂಡದು ಎನ್ನುವ ಹಾಗೆ ನೋಡಿಕೊಂಡಿದ್ದಾರೆ. ಇದನ್ನು ಪ್ರಾಯಶಃ ಅನುಮಾನಿಸುವ ಪ್ರಕಾಶ್‌ರಂತಹ ನುರಿತ ರಾಜಕಾರಣಿಗಳೂ ತಾವು ದೇವೇಗೌಡರ ಬೆಂಬಲಿಗರೆಂದೇ ಹೇಳಿಕೊಂಡು ಹುಸಿನಾಟಕಕ್ಕೆ ನೈಜತೆಯ ಮೆರುಗು ಬರುವಂತೆ ನೋಡಿಕೊಳ್ಳುತ್ತಿದ್ದಾರೆ. ಯಾವ ನೈಜ ಪ್ರೀತಿಯೂ ಇಲ್ಲದ ರಾಜಕೀಯ ಸಂಬಂಧಗಳು ಇವು. ಜೀವವನ್ನೇ ಕೊಡುವ ಹಿಂಬಾಲಕರು ಇಲ್ಲದ ನಾಯಕರೇ ಈ ದಿನಗಳಲ್ಲಿ ನಮಗೆ ಕಾಣುವುದು. ಜಯಪ್ರಕಾಶ್, ನೆಹರೂ, ಲೋಹಿಯಾ, ಅಣ್ಣಾದೊರೆ, ಕಾಮರಾಜ್, ಎ.ಕೆ. ಗೋಪಾಲನ್ –  ಈ ನಾಯಕರು ಈಗ ಕೇವಲ ನೆನಪುಗಳು.

ಈ ನಾಟಕದಲ್ಲಿ ನಮ್ಮ ಭಾವನಾ ಲೋಕವನ್ನು ಕಲಕುವ ಹುನ್ನಾರದ ಅನೇಕ ಸಂಗತಿಗಳಿದ್ದಾವೆ. ಮಗ ತಪ್ಪು ಮಾಡಿದರೆ ಅಪ್ಪ ಅದನ್ನು ಒಪ್ಪದೆ ಶಿಕ್ಷಿಸುತ್ತಾನೆ ಎನ್ನುವ ಮೆಚ್ಚುಗೆಯನ್ನು ನಮ್ಮಿಂದ ಗೌಡರು ಪಡೆಯಲು ನೋಡಿದರು. ಸ್ವಂತ ಮಗನಿಗಿಂತಲೂ ತಾನು ನಂಬಿದ ಮೌಲ್ಯಗಳೇ ಮುಖ್ಯ ಎನ್ನುವುದಕ್ಕಿಂತ ಹೆಚ್ಚಿನ ಧೀರೋದಾತ್ತನಾಯಕ ಎಲ್ಲಿದ್ದಾನೆ?

ಜೊತೆಗೇ ಇನ್ನೊಂದು ಸ್ವಾರಸ್ಯದ ನಾಟಕ ಇಲ್ಲಿ ನಡೆದಿದೆ. ತನಗೆ ಅಪ್ಪನ ಮೇಲೆ ಬಹಳ ಗೌರವವಿದೆ. ಬಹಳ ಪ್ರೀತಿ ಇದೆ. ಆದರೂ ಅವರ ವಿರುದ್ಧವಾಗಿ ಹೋಗಬೇಕಾದ ಅನಿವಾರ್ಯತೆ ಈ ಕಾಲದಲ್ಲಿದೆ ಎಂದು ಪರಿತಪಿಸುತ್ತ ಇಂದಿನ ಯುವಜನರ ಪ್ರತಿನಿಧಿಯಾಗಲು ಮಗ ಯತ್ನಿಸುತ್ತಿದ್ದಾನೆ.

ಹೀಗೆ ಅಪ್ಪ ಮಗ ಇಬ್ಬರೂ ಈ ಕಾಲದ ಅನೇಕ ಸದ್ಭಾವನೆಗಳನ್ನು ಬಳಸಿಕೊಂಡು ಬಂದು ಹುಸಿ ನಾಟಕವನ್ನು ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲ; ಈ ನಾಟಕಕ್ಕಾಗಿ ಇವರು ಬಳಸುತ್ತಿರುವ ಅಲೌಕಿಕ ಪರಿಕರಗಳು –  ಪೂಜೆ, ಹೋಮ, ಹವನ ಇತ್ಯಾದಿಗಳು ನಮ್ಮ ಜನರ ಮನಸ್ಸಿನೊಳಕ್ಕೆ ಆಳವಾಗಿ ಕೆಲವು ಸದ್ಭಾವನೆಗಳನ್ನು, ಆದರ್ಶಗಳನ್ನು ಊರಬಲ್ಲ ಸಾಮರ್ಥ್ಯವುಳ್ಳ ಕ್ರಿಯೆಗಳಾಗಿವೆ. ತಮಾಷೆ ಅಂದರೆ ಹಿಂದೂಧರ್ಮದ ಆಧಾರದ ಮೇಲೆಯೇ ದೇಶವನ್ನು ಕಟ್ಟಬೇಕು ಎಂದು ಹೊರಟ ವಾಜಪೇಯಿ, ಅಡ್ವಾಣಿ ಮತ್ತು ನಮ್ಮ ಕರ್ನಾಟಕದ ಬಿಜೆಪಿಯ ನಾಯಕರೂ ಕೂಡ, ಮಾಡದೇ ಇದ್ದ ಪೂಜೆಗಳನ್ನೂ ಹವನಗಳನ್ನೂ ಈ ಜಾತ್ಯಾತೀತರು ಮಾಡುತ್ತಿದ್ದಾರೆ.

ನಮ್ಮ ಮಾಧ್ಯಮಗಳು ಈ ಬಗೆಯ ಹುಸಿ ನಾಟಕಗಳನ್ನು ಬಯಲು ಮಾಡುವುದರ ಬದಲು ಮನರಂಜನೆಗೆ ಅವುಗಳನ್ನು ಬಳಸುತ್ತವೆ. ಪರಿಣಾಮವಾಗಿ ಭಾಷೆಗೆ ಇರುವ ಅರ್ಥಗಳೆಲ್ಲಾ ಹೊರಟು ಹೋಗುತ್ತಿವೆ. ಇದನ್ನೇ ಆರ್ವೆಲ್ ಮೂವತ್ತರ ದಶಕದಲ್ಲಿ ಇಂಗ್ಲೆಂಡ್‌ನಲ್ಲಿ ‘ಪಾಲಿಟಿಕ್ಸ್ ಅಂಡ್ ದಿ ಇಂಗ್ಲಿಷ್ ಲ್ಯಾಂಗ್ವೇಜ್‌’ ಎಂಬ ಲೇಖನದಲ್ಲಿ ಹೇಳಿದ್ದ. ‘ಶಬ್ದಗಳೆಲ್ಲಾ ತಮ್ಮ ಅರ್ಥಗಳನ್ನು ಕಳೆದುಕೊಳ್ಳುತ್ತಿವೆ; ಆದರಿಂದ ಸತ್ಯವಾದುದನ್ನು ಹೇಳುವುದಕ್ಕೆ ಸಾಧ್ಯವಾಗದಂತೆ ಭಾಷೆ ಬೆಳೆಯುತ್ತಿದೆ’ ಎಂದು ಅವನು ಆಗ ಹೇಳಿದ್ದು ನಮ್ಮಲ್ಲೂ ನಿಜವಾಗಿದೆ. ಕನ್ನಡ ಭಾಷೆಯಲ್ಲಿ ನಾವು ಸತ್ಯವನ್ನು ಹೇಳಲಾರದ ಸ್ಥಿತಿ ತಲುಪಿದ್ದೇವೆ. ಧರ್ಮ, ಪಿತೃಗೌರವ, ಪುತ್ರ ವಾತ್ಸಲ್ಯ, ದೇವತೆಗಳ ಬಗ್ಗೆ ನಮಗಿರುವ ಪ್ರೀತಿ ಹೀಗೆ ಎಲ್ಲವಕ್ಕೂ ಅವುಗಲಿಗೆ ಇರುವ ನಿಜವಾದ ಅರ್ಥಗಳು ವಿಕೃತಗೊಂಡು ನಾಶವಾಗಿವೆ.

ಇಲ್ಲಿ ದೇವತಾ ಕಲ್ಪನೆಯಲ್ಲಿ ಆಗಿರುವ ಬದಲಾವಣೆಗಳನ್ನು ನೋಡಿದರೆ ಪ್ರಾಯಶಃ ನಾವು ಮತ್ತೆ ಮಾಟ ಮಂತ್ರಗಳನ್ನು ನಂಬುವ ತಾಂತ್ರಿಕರ ಹಾಗೆ ಆಗಿಬಿಟ್ಟಿದ್ದೇವೆ. ಒಂದು ಕಾಲದಲ್ಲಿ ತಾಂತ್ರಿಕರನ್ನು ಶಂಕರಾಚಾರ್ಯರು ಹಿಮ್ಮೆಟ್ಟಿಸಿದ್ದರು. ಆಮೇಲೆ ಆನಂದ ತೀರ್ಥರಾಗಲೀ, ರಾಮಾನುಜರಾಗಲೀ ಭಕ್ತಿಯೇ ಸರ್ವೋತ್ಕೃಷ್ಟವಾದ ಮಾರ್ಗ ಎಂದು ನಂಬಿದವರಾಗಿದ್ದರಿಂದ ತಾಂತ್ರಿಕವಾದ ರೀತಿಯಲ್ಲಿ ನಾವು ನಮ್ಮ ಲೌಕಿಕ ಯಶಸ್ಸನ್ನು ಸಾಧಿಸಿಕೊಳ್ಳುವುದಕ್ಕೆ ಸಾಕಷ್ಟು ವಿರೋಧವನ್ನು ತೋರಿದ್ದರು. ಬಸವಣ್ಣ ತಾಂತ್ರಿಕರ ಪರಮ ಶತ್ರುವಾಗಿದ್. ಈಗ ಭಾರತದಲ್ಲಿ ತಾಂತ್ರಿಕತೆ ಮತ್ತೆ ಗೆಲುವು ಸಾಧಿಸುವ ಹಾಗೆ ತೋರುತ್ತಿದೆ. ಈ ಜ್ಯೋತಿಷಿಗಳೇ ನಮ್ಮ ರಾಜಕಾರಣದ ನಿಯಂತ್ರಕರೂ ಆಗಿಬಿಟ್ಟಿದ್ದಾರೆ.

ಗಾಂಧೀಜಿ ಮತ್ತೆ ನೆನಪಾಗುತ್ತಿದ್ದಾರೆ. ಸರ್ವಧರ್ಮ ಪ್ರಾರ್ಥನೆಯಿಂದ ಅವರ ದಿನ ಪ್ರಾರಂಭವಾಗುತ್ತಿತ್ತು. ಅದರ ಜತೆಗೆ ಪ್ರತಿಯೊಬ್ಬನೂ ಮಲವನ್ನು ಎತ್ತುವಂಥ ಕೆಲಸವನ್ನೂ ಮಾಡಬೇಕಿತ್ತು. ಹೀಗೆ ದೈಹಿಕವಾದ ಕಾಯಕದಿಂದ ಹಿಡಿದು ದೈವದ ಆರಾಧನೆಯವರೆಗೆ ಮನುಷ್ಯನ ಪ್ರಜ್ಞೆಯನ್ನು ಅವರು ವಿಸ್ತರಿಸುತ್ತಿದ್ದರು.

* * *

ಇವತ್ತು ಇಡೀ ಭಾರತದಲ್ಲಿ ಒಬ್ಬನೇ ಒಬ್ಬ ದೊಡ್ಡ ರಾಜಕೀಯ ನಾಯಕನಿಲ್ಲ. ನೈಜ ರಾಜಕೀಯ ನಾಯಕನ ಲಕ್ಷಣ ಏನೆಂದರೆ ಆತ ಜನರಿಗೆ ಅಪ್ರಿಯವಾದ ಸತ್ಯವನ್ನೂ ಹೇಳಲೂ ಅವಶ್ಯವಿದ್ದಾಗ ಮುಂದಾಗುತ್ತಾನೆ. ರಾಜಗೋಪಾಲಾಚಾರಿಯವರಲ್ಲಿ ಆ ಧೈರ್ಯವಿತ್ತು. ಗಾಂಧೀಜಿಗೆ ಆ ಧೈರ್ಯವಿತ್ತು. ಜಯಪ್ರಕಾಶರಲ್ಲಿ ಆ ಧೈರ್ಯವಿತ್ತು. ನಂಬೂದರಿಪಾಡರಲ್ಲಿ ಆ ಧೈರ್ಯವಿತ್ತು. ಕೃಪಲಾನಿಯವರಲ್ಲಂತೂ ಅಪಾರವಾಗಿ ಆ ಧೈರ್ಯ ತುಂಬಿತ್ತು. ಅಂಥಾ ಯಾರನ್ನೂ ಕೂಡಾ ಈಗ ಭಾರತದಲ್ಲಿ ನಮಗೆ ಗುರುತಿಸಲು ಸಾಧ್ಯವಾಗುತ್ತಿಲ್ಲ. ಜನಪ್ರಿಯತೆ ಎನ್ನುವುದು ಈಗ ಇಂಗ್ಲಿಷಿನ ಪಾಪ್ಯುಲಿಸಂ ಆಗಿದೆ –  ಜನರಿಗೆ ಪೂಸಿ ಹೊಡೆಯುವ ಭ್ರಷ್ಟತೆಯಾಗಿದೆ. ನಿಜವಾಗಿ ಜನರ ಮೇಲೆ ಪ್ರೀತಿ ಇದ್ದ ನಾಯಕ ಹೇಗೋ ಜನಪ್ರಿಯನಾಗಲು ಹೊಂಚುವುದಿಲ್ಲ.

ಪ್ರಾಯಶಃ ಎಲ್ಲ ರಾಜಕಾರಣಿಗಳಿಗೂ ಧನಗಳಿಕೆ ಬಹಳ ಮುಖ್ಯವಾಗಿಬಿಟ್ಟಿದೆ. ಅದರಿಂದಾಗಿ ಕಾಂಗ್ರೆಸ್, ಬಿಜೆಪಿ, ಜನತಾದಳ ಹೀಗೆ ಯಾರೇ ಅಧಿಕಾರಕ್ಕೆ ಬಂದರೂ ಅವರು ಭ್ರಷ್ಟಾಚಾರದ ಮುಖಾಂತರ ಬಲವಾಗಲು ಪ್ರಯತ್ನಿಸುತ್ತಾರೆ. ಅದರಿಂದ ಜನರ ಕಣ್ಣಲ್ಲಿ ರಾಜಕೀಯ ತತ್ವಗಳಿಗೆ ಯಾವ ರೀತಿಯ ಅರ್ಥವೂ ಉಳಿಯುವುದಿಲ್ಲ. ತತ್ವದ ಮಾತು ಕೇವಲ ಗುಡ್‌ಮ್ಯಾನರ್ಸ್‌; ದಾಕ್ಷಿಣ್ಯಕ್ಕಾಗಿ ವಿಧಿಯಿಲ್ಲದೆ ಆಡಬೇಕಾದ ಮಾತು. ಕೇರಳದಲ್ಲಿ ಕಮ್ಯುನಿಸ್ಟ್‌ಪಕ್ಷ ಕೂಡಾ ದೊಡ್ಡ ಪ್ರಮಾಣದಲ್ಲಿ ಆಸ್ತಿಯನ್ನು ಮಾಡಿಕೊಳ್ಳುತ್ತಿದೆ ಎಂದು ಭ್ರಮನಿರಸನಗೊಂಡವರನ್ನು ನಾನು ನೋಡಿದ್ದೇನೆ.

ಪ್ರಜಾತಂತ್ರದಲ್ಲಿ ಈ ಬಗೆಯ ಭ್ರಷ್ಟತೆ ಅನಿವಾರ್ಯವೆಂದು ತಿಳಿದವರೂ ಇರುತ್ತಾರೆ. ಆಗುತ್ತಿರುವುದಕ್ಕೆಲ್ಲ ನಾವು ಹೀಗೆ ಒಗ್ಗುತ್ತ ನಮ್ಮ ‘ಅನಿವಾರ್ಯತೆ’ಯ ಲಿಸ್ಟನ್ನು ಬೆಳೆಸುತ್ತ ಹೋಗುವುದಾದರೆ ನಿಜವಾದ ಚಿಂತನಶೀಲತೆಯೇ, ಪರ್ಯಾಯಗಳ ಹುಡುಕಾಟವೇ ನಮ್ಮಲ್ಲಿ ಮಾಯವಾದಂತೆ.

ಇನ್ನೊಂದು ದೇವೇಗೌಡರ ನಾಟಕದ ಸೀನು ಹೀಗಿರಬಹುದು – ಮಗನನ್ನೂ ಅವರ ಬೆಂಬಲಿಗರನ್ನೂ ಗೌಡರು ಉಚ್ಛಾಟಿಸುತ್ತಾರೆ. ನಿಜವಾದ ಜಾತ್ಯಾತೀತ ದಳವನ್ನು ಉಳಿಸಿಕೊಳ್ಳುತ್ತಾರೆ. ಹೀಗೆ ಅವರು ಕಟ್ಟುವ ಇನ್ನೊಂದು ಮನೆ ತನ್ನ ಮಗ ಬಿಜೆಪಿಯಿಂದ ಇಪ್ಪತ್ತು ತಿಂಗಳ ನಂತರ ಹತಾಶರಾದಾಗ ಒಳ ಸೇರಿಸಿಕೊಳ್ಳಲು ಸಜ್ಜಾಗಿರುತ್ತದೆ.

ಮನುಷ್ಯನಲ್ಲಿ ಸಾಮಾನ್ಯವಾಗಿ ಆತ್ಮಾನುರಕ್ತಿ ಇರುತ್ತದೆ. ಎಲ್ಲರಲ್ಲೂ ಇದು ಇರುತ್ತದೆ. ಕೆಲವರಲ್ಲಿ ಇದು ರೋಗಗ್ರಸ್ತವಾಗುವಷ್ಟು ಬೆಳೆದಿರುತ್ತದೆ. ರಾಜಕಾರಣಿಯಲ್ಲಿ ಇದು ರೋಗಗ್ರಸ್ತವಾಗುವಷ್ಟು ಬೆಳೆದಾಗ ದೇವೇಗೌಡರ ರೀತಿಯ ವರ್ತನೆಗಳು ಶುರುವಾಗುತ್ತವೆ. ಅವರಿಗೆ ತಮ್ಮ ಧ್ವನಿ ಮಾತ್ರ ಕೇಳುತ್ತಿರುತ್ತದೆ. ಬೇರೆಯವರದ್ದೇನೂ ಕೇಳಿಸುವುದಿಲ್ಲ ಮತ್ತು ತಾನು ಆಡಿದ್ದರಿಂದ, ಇನ್ನೊಬ್ಬರ ಮನಸ್ಸನ್ನು ಗೆಲ್ಲುತ್ತಿದ್ದೇನೆ ಎನ್ನುವ ಭ್ರಮೆ ಇರುತ್ತದೆ. ಒಬ್ಬ ರಾಜಕಾರಣಿಯಲ್ಲಿ ಆತ್ಮಾನುರಕ್ತಿ ಮಾತ್ರ ಇದ್ದಾಗ ಆತ ನಿಜವಾಗಿಯೂ ಜನಾನುರಾಗಿಯಾಗಿ ಬದುಕಲಾರ. ಆದರೆ ಈವತ್ತಿನ ಪ್ರಜಾತಂತ್ರದ ರಾಜಕಾರಣದಲ್ಲಿ ಆತ್ಮಾನುರಕ್ತಿಯಿಂದಲೇ ಬರುವ ಒಂದು ಶಕ್ತಿ ಇದೆ. ಅದು ದೇವೇಗೌಡರದಲ್ಲಿ ಯಥೇಚ್ಛವಾಗಿದೆ ಅನ್ನಿಸುತ್ತದೆ.

ರಾಜಕಾರಣ ಅವರಿಗೆ ಕೇವಲ ಹವ್ಯಾಸವಲ್ಲ; ಇಪ್ಪತ್ತನಾಲ್ಕು ಗಂಟೆಗಳ ಕಾಲವೂ, ಪೂಜೆ ಪುನಸ್ಕಾರಗಳಲ್ಲಿ ಅವರು ತೊಡಗಿದ್ದಾಗಲೂ ಅವರು ಮಾಡುವುದು ರಾಜಕಾರಣವನ್ನೇ. ತನ್ನ ರೂಪಕ್ಕೆ ತಾನೇ ಮರುಳಾದವನು, ತನ್ನ ಧ್ವನಿಗೇ ತಾನೇ ಮರುಳಾದವನು, ತನ್ನ ವಿಚಾರಗಳಿಗೇ ತಾನೇ ಮರುಳಾದವನು ನಾರ್ಸಿಸಸ್. ಇಂಥವರಿಗೆ ತನ್ನ ಆಚೆಗೆ ಇರುವ ಸತ್ಯವನ್ನು ನೋಡಬೇಕು ಎನ್ನುವುದು ಮರೆತು ಹೋಗಿರುತ್ತದೆ. ಇದು ಅವರ ರೋಗ ಮಾತ್ರ ಅಲ್ಲ ನಮಗೆ ಅಂಟುವ ಕಾಯಿಲೆಯೂ ಆಗುತ್ತದೆ. ಯಾಕೆಂದರೆ ಮಾಧ್ಯಮಗಳಿಂದಾಗಿ ನಾವೂ ಅದರಿಂದ ಮರುಳಾಗಿರುತ್ತೇವೆ.

* * *

ಇದರಿಂದ ನಾವು ಬಿಡುಗಡೆಯಾಗಲು ಹುಸಿಮಾತುಗಳ ಸತತ ತುಳಿತದಿಂದ ಕೆಸರಾದ ನಮ್ಮ ಸಾರ್ವಜನಿಕ ಸತ್ಯಗಳು ಕೊಂಚ ತಿಳಿಯಾಗಬೇಕು. ತಿಳಿಯಾಗುವುದೆಂದರೆ ನಿಜ ತಿಳಿಯುವುದು. ಅವು ಹೀಗಿವೆ:

೧. ಸಿದ್ಧರಾಮಯ್ಯನವರು ಅಹಿಂದ ಚಳುವಳಿಯಲ್ಲಿ ಭಾಗವಹಿಸಲು ಶುರು ಮಾಡಿದ್ದೇ ಗೌಡರು ಗಾಬರಿಗೊಂಡರು. ಅವರೇ ಮುಖ್ಯಮಂತ್ರಿಯಾದಾರೆಂದು, ತನ್ನ ಮಗನಿಗೆ ಅದು ತಪ್ಪೀತೆಂದು ಹೆದರಿದರು. ಶಿಸ್ತಿನ ನೆವದಲ್ಲಿ ಅವರನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ನಾಟಕ ಶುರುವಾದದ್ದು ಹೀಗೆ. ಆದರೆ ಕೆಲವರ ಪ್ರಕಾರ ಜಾತಿ ಬಲವಿಲ್ಲದ ಧರಂಸಿಂಗರನ್ನು ಮುಖ್ಯಮಂತ್ರಿಯಾಗುವಂತೆ ಮಾಡಿದ ದಿನದಿಂದಲೇ ಈ ನಾಟಕ ಶುರುವಾಯಿತು.

೨. ಇದು ಅವರಿಗೆ ಸುಲಭ ಸಾಧ್ಯವಾಗಲು ಕಾರಣ ಸಿದ್ಧರಾಮಯ್ಯನವರ ಅಹಿಂದ ಚಳವಳಿ, ಸಂಪನ್ಮೂಲಗಳ ನ್ಯಾಯಯುತ ಹಂಚಿಕೆಯ ಘನೋದ್ದೇಶದ್ದಾಗಿ ನಮಗೆ ಕಂಡರೂ ಜನಸಾಮಾನ್ಯರ ಸಮುದಾಯದ ನೆಲೆಯಿಂದಲೇ ಅದು ಹುಟ್ಟಿಬಂದದ್ದಾಗಿರಲಿಲ್ಲ. ಅಂದರೆ ಪ್ರಭುತ್ವ ನೆಲೆಯಲ್ಲಿ ಪಲ್ಲಟಗಳನ್ನು ಮಾಡುವ ಮೇಲುಮೇಲಿನ ರಾಜಕಾರಣದ ಹುನ್ನಾರವೂ ಸದ್ಯದ ಪ್ರಭುತ್ವಕ್ಕೆ ಈ ಚಳವಳಿಯಲ್ಲಿ ಕಾಣತೊಡಗಿತ್ತು. ಹೀಗೆ ಪವರ್‌ ಪಾಲಿಟಿಕ್ಸ್‌ ಅಹಿಂದ ಚಳುವಳಿಯನ್ನು ಅದರ ಘನೋದ್ದೇಶದಿಂದ ಮೊಟಕುಗೊಳಿಸಿತು.

೩. ದೇವೇಗೌಡರ ಉದ್ದೇಶ ಈಗ ನೆರವೇರಿದ. ಮಗ ಮುಖ್ಯಮಂತ್ರಿಯಾಗಿದ್ದಾರೆ. ಯಥಾ ಪ್ರಕಾರ ಮಾಧ್ಯಮಗಳಲ್ಲಿ ಏನಾದರೂ ಆದೀತೆಂಬ ಆಕರ್ಷಣೆ ಭರವಸೆಯನ್ನು ಎನರ್ಜಿ ಇರುವ ಯುವಕರಾಗಿ ಹುಟ್ಟಿಸಿದ್ದಾರೆ. ಆದ್ದರಿಂದ ಗೌಡರು ತಮ್ಮ ಜಾತ್ಯತೀತತೆಯ ನಾಟಕವಾಡುವುದನ್ನು ಬಿಟ್ಟು ಹರ್ಷಿತರಾಗಬೇಕು; ಸರಳವಾಗಬೇಕು; ರಿಲ್ಯಾಕ್ಸ್‌ ಮಾಡಬೇಕು. ಅವರ ಆರೋಗ್ಯಕ್ಕಲ್ಲದೆ ಸಾರ್ವಜನಿಕರ ಮನಸ್ಸಿನ ಆರೋಗ್ಯಕ್ಕೂ ಇದು ಅಗತ್ಯ.

೪. ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ನಮ್ಮ ಆರ್ಥಿಕ ನೀತಿಯಲ್ಲಾಗಲೀ, ವಿದೇಶಾಂಗ ನೀತಿಯಲ್ಲಾಗಲೀ ಮುಖ್ಯವೆನ್ನಿಸುವ ಯಾವ ಬದಲಾವಣೆಯೂ ಆಗಲಿಲ್ಲ. ಆದದ್ದೆಲ್ಲ ಶಿಕ್ಷಣ ನೀತಿಯಲ್ಲಿ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ನಿರ್ವಹಣೆಯಲ್ಲಿ. ಎಲ್ಲೆಲ್ಲೂ ಆರೆಸ್ಸೆಸ್‌ ಕೇಡರುಗಳು ತುಂಬಿಕೊಂಡರು. ಈಗ ಇಲ್ಲಿ ಕರ್ನಾಟಕದಲ್ಲಿ ಹಾಗಾಗದಂತೆ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿಗಳೂ, ಅವರ ‘ಜಾತ್ಯತೀತ’ ತಂದೆಯವರೂ ನಿಗಾವಹಿಸಬೇಕು. ಜಿಡ್ಡಾದ ಗೊಡ್ಡಾದ ಮನಸ್ಸುಗಳು ಸಾಂಸ್ಕೃತಿಕ ಲೋಕದ ವಕ್ತಾರರಾಗುವುದನ್ನು ಕರ್ನಾಟಕದ ಧೀಮಂತಲೋಕ ಸಹಿಸಲಾರದು.

೫. ಲೋಹಿಯರವರು ಎರಡು ಲೇಖನಗಳನ್ನು ಕೊನೆಯಲ್ಲಿ ಬರೆದಿದ್ದರು. ಮೊದಲನೆಯದು : ‘ಇನ್ನು ನೂರು ವರ್ಷಗಳಲ್ಲಿ ಸಮಾಜವಾದ’ ಎಂಬುದು. ಸಮಯಸಾಧಕ ಸಮಾಜವಾದದಿಂದ ಬೇಸತ್ತು ಅವರು ಬರೆದ ಲೇಖನವಿದು. ಎರಡನೆಯ ಲೇಖನ ಇನ್ನೂ ಮುಖ್ಯವಾದದ್ದು. ‘ನಿರಾಶೆಯಲ್ಲಿ ಕರ್ತವ್ಯ ಪಾಲನೆ’ ಎಂದು ಇದರ ಹೆಸರು. ಸದ್ಯದಲ್ಲೇ ಏನೋ ಆಗಿಬಿಡುತ್ತದೆಂಬ ಭ್ರಮೆ, ನಿಷ್ಠೆಯುಳ್ಳ ರಾಜಕಾರಣಿಗಳಲ್ಲಿ ಇರಬಾರದೆಂಬ ಉದ್ದೇಶದಿಂದ ಈ ಎರಡೂ ಲೇಖನಗಳು ಹುಟ್ಟಿಕೊಂಡದ್ದು.

ಸರ್ವೋದಯದ ಕನಸು ಕಾಣುವ ಎಲ್ಲರೂ ಸಿನಿಕರಾಗದಿರಲು ದಿಗಂತದಲ್ಲಿ ದೃಷ್ಟಿನೆಟ್ಟವರಾಗಿ ‘ಸೀರಿಯಲ್‌’ಗಳಲ್ಲಿ ಕೊಂಚ ಉದಾಸೀನರಾಗುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಮೇಲಿನ ಮಾತಿಗೆ ಇನ್ನೊಂದು ಮಾತು ಸೇರಿಸುತ್ತೇನೆ. ಪ್ರಜಾತಂತ್ರ ರಾಜಕಾರಣದಲ್ಲಿ ಸಿಗುವ ಅವಕಾಶವನ್ನು ತತ್ಕಾಲದಲ್ಲಿ ಬಳಸಲು ಹಿಂಜರಿಯುವವನು ಕನಸುಗಾರನಾಗುತ್ತಾನೆ. ಇದು ವೈಚಾರಿಕನಿಗೆ ಹೆತ್ತುವ ತೆವಲು. ಹಾಗೆಯೇ ದೂರದೃಷ್ಟಿಯಿಲ್ಲದೆ, ಕನಸುಗಳೇ ಇಲ್ಲದೆ ತತ್ಕಾಲದ ಅಗತ್ಯಗಳನ್ನು ಮಾತ್ರ ಹೇಗಾದರೂ ಪೂರೈಸಿಕೊಳ್ಳುವವನು ಅವಕಾಶವಾದಿ ಭ್ರಷ್ಟನಾಗುತ್ತಾನೆ. ಕ್ರಿಯೆಗೂ ಚಿಂತನೆಗೂ ಇರುವ ಈ ನೈತಿಕ ಆಯ್ಕೆಗಳ ಕಾಠಿಣ್ಯವನ್ನು ಅರಿತ ರಾಜಕಾರಣಿಗಳು ನಮ್ಮ ಇಂದಿನ ಅಗತ್ಯ.

೧೨೨೦೦೬

* * *