೧. ಎಲ್ಲ ಭಾಷೆಗಳೂ ಉಳಿಯುವುದು ಆ ಭಾಷೆಯನ್ನು ಮಾತ್ರ ಬಲ್ಲ ಜನರು ಇರುವ ತನಕ. ಆದರೆ ಇಲ್ಲೊಂದು ವಿರೋಧಾಭಾಸವೆಂದು ಕಾಣುವ ಸಂಗತಿಯಿದೆ. ಭಾಷೆಗಳು ಬೆಳೆಯುವುದು ಆ ಭಾಷೆಗಳನ್ನು ಬಲ್ಲ ಜನರಿಗೆ ಇನ್ನೊಂದು ಸಾಹಿತ್ಯ ಸಮೃದ್ಧವಾದ ಭಾಷೆಯಾದರೂ ಗೊತ್ತಿದ್ದಾಗ. ಹಿಂದೆ ಸಂಸ್ಕೃತದ ಜೊತೆ ಕನ್ನಡ ಅದರ ಅತ್ಯುತ್ತಮ ಮನಸ್ಸುಗಳಲ್ಲಿ ಕೆಲಸ ಮಾಡಿತು. ಈ ಕಾಲದಲ್ಲಿ ಇಂಗ್ಲಿಷ್ ಜೊತೆ ಕೆಲಸ ಮಾಡಿತು.

೨. ಈ ಎರಡು ಭಾಷೆಗಳ ನಡುವಿನ ಕೊಡು – ಕೊಳ್ಳುವ ಸಂಬಂಧದ ಒಂದು ಇನ್ನೊಂದಕ್ಕೆ ಮೇಲಿನದು ಎಂಬ ಭಾವನೆ ಇದ್ದಾಗ ಮತ್ತು ಈ ಭಾವನೆ ರಾಜಕೀಯ, ಆರ್ಥಿಕ ಕಾರಣಗಳನ್ನೂ ಪಡೆದಿದ್ದಾಗ ಈ ಒಡನಾಟ ‘ಒಂದು ಭಾಷೆ ಕೊಡುವುದು ಮಾತ್ರ, ಇನ್ನೊಂದು ಭಾಷೆ ಪಡೆಯುವುದು ಮಾತ್ರ’ ಎಂಬ ಯಜಮಾನಿಕೆಯದಾಗಿರುತ್ತದೆ. ಈ ಯಜಮಾನಿಕೆಯನ್ನು ಗೆದ್ದವರು ನಮ್ಮ ಹಲವು ಹಿರಿಯ ಲೇಖಕರು –  ಮುಖ್ಯವಾಗಿ ಸಾಹಿತ್ಯದಲ್ಲಿ. ಇದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ತನ್ನ ಪ್ರದೇಶದ್ದು ಮಾತ್ರವಾದ ಚಲಿಸದ ಭಾಷೆಯಾದ ಕನ್ನಡ ತನ್ನೊಳಗೆ ಇಡೀ ಪ್ರಪಂಚವನ್ನು ಕಂಡು ಕಾಣಿಸಬಲ್ಲದು ಎನ್ನುವ ವಿಶ್ವಾಸ ಕವಿರಾಜಮಾರ್ಗದ ಕಾಲದಿಂದ ಈವರೆಗೆ ನಮ್ಮ ಅತ್ಯುತ್ತಮ ಮನಸ್ಸುಗಳಲ್ಲಿ ಕೆಲಸ ಮಾಡಿದೆ. (ಇಂಗ್ಲಿಷಿನಲ್ಲೂ ಅದು ಚಲಿಸದ ಭಾಷೆಯಾಗಿದ್ದಾಗ ಶೆಕ್ಸ್‌ಪಿಯರ್ ಬಂದನೆಂಬುದನ್ನು ಮರೆಯಬಾರದು.)

೩. ಚಲಿಸದ ಸ್ಥಳೀಯ ಭಾಷೆಗೂ ಚಲಿಸುವ ಇನ್ನೊಂದು ಭಾಷೆಗೂ ನಡುವೆ ಏರುಪೇರಿಲ್ಲದ ಸಮಸಮವೆನ್ನಿಸುವ ಸಂಬಂಧವಿರಬಹುದೆಂಬುದನ್ನು ಮೊನ್ನೆ ತಾನೇ ಯುಗೋಸ್ಲಾವಿಯಾದ, ಫ್ರಾನ್ಸ್‌ನಲ್ಲಿ ಕಲಿಸುವ ರಾದಾ ಎಂಬ ಒಬ್ಬ ಮಹಿಳೆಯನ್ನು ಕೇರಳದಲ್ಲಿ ಭೇಟಿಯಾದಾಗ ತಿಳಿದೆ. ತಮ್ಮ ಜನರ ಜೊತೆ ಮಾತಾಡುವಾಗ ಸ್ವೀಡಿಷ್ ಜನರು ಸ್ವೀಡಿಷ್ ಭಾಷೆಯನ್ನು ಮಾತ್ರ ಬಳಸುತ್ತಾರೆ. ಅದರಲ್ಲೆ ಬರೆಯುತ್ತಾರೆ: ಅದರಲ್ಲೇ ಕಲಿಯುತ್ತಾರೆ. ಜೊತೆಗೇ ಎಲ್ಲರಿಗೂ ಇಂಗ್ಲಿಷ್‌ಕೂಡ ಇನ್ನೊಂದು ಭಾಷೆಯಾಗಿ ಗೊತ್ತಿರುತ್ತದೆ; ಹೊರಗಿನವರ ಜೊತೆ ಇಂಗ್ಲಿಷನ್ನು ಸಂಪರ್ಕ ಭಾಷೆಯಾಗಿ ಬಳಸುತ್ತಾರೆ. ಅದರದರ ಸ್ಥಾನ, ಮನ್ನಣೆಗಳಲ್ಲಿ ಗೊಂದಲವಿಲ್ಲ; ಎರಡೂ ಒಂದೇ ಬಲದ ಭಾಷೆಗಳು. ಫ್ರೆಂಚನ್ನಾಗಲೀ, ಜರ್ಮನ್‌ನನ್ನಾಗಲೀ ಅವರು ಕಲಿಯಬಹುದು. ಆದರೆ ಹೀಗೆ ಇಂಗ್ಲಿಷನ್ನು ಬಳಸುವಂತೆ ಉಳಿದ ಐರೋಪ್ಯ ಭಾಷೆಗಳನ್ನು ಅವರು ಬಳಸುವುದಿಲ್ಲ. ಹಲವು ಬಗೆಗಳ ಇಂಗ್ಲಿಷುಗಳು ಇರುವಂತೆ ಹಲವು ಫ್ರೆಂಚುಗಳೂ ಜರ್ಮನ್ನುಗಳೂ ಇರಬಹುದು; ಆದರೆ ಅವು ಇಂಗ್ಲಿಷಿನಂತೆ ಸರ್ವ ಸ್ವೀಕಾರದ ಜಾಗತಿಕ ಭಾಷೆಗಳಲ್ಲವೆಂಬುದೇ ಅದಕ್ಕೆ ಕಾರಣವೆಂದು ಪ್ರೊಫೆಸರ್ ರಾದಾ ಅವರು ವಾದಿಸಿದರು.

ಇದನ್ನು ಕೇಳಿದಾಗ ನನ್ನ ನೆನಪಿಗೆ ಬಂದದ್ದು ನಾವು ಕೊಂಕಣಿ, ತುಳುಗಳ ಜೊತೆ ಕನ್ನಡವನ್ನು ಬಳಸುವ ಬಗೆ. ಇಲ್ಲಿ ಹೆಜಿಮನಿ, ಯಾಜಮಾನ್ಯದ ಮೇಲುಗಾರಿಕೆಯಿಲ್ಲ. ಎರಡೂ ಸ್ಥಳೀಯವೇ.

ನಾವು ಬಳಸುವ ಇಂಗ್ಲಿಷಾದರೋ ಪರಸ್ಥಳೀಯರಿಗೆ ಕಾಲ್‌ಸೆಂಟರ್‌ಗಳಲ್ಲಿ ಸಲ್ಲಲೆಂದು, ತನ್ನ ಹಿಂದಿನ ಸ್ಥಳೀಯ ಗುಣಗಳನ್ನು ಕಳೆದುಕೊಂಡು, ಕನ್ನಡವನ್ನು ಕೇವಲ ಅಡುಗೆಮನೆ ಭಾಷೆಯಾಗುವ ಸ್ಥಿತಿಗೆ ತಳ್ಳುತ್ತಿದೆ ಅಥವಾ ಕನ್ನಡ ಆರಾಮಿನ ಬೆರಕೆ ಭಾಷೆಯಾಗಿ ತನ್ನ ಗುಣಗಳನ್ನೂ ಶಬ್ದಗಳನ್ನೂ ಕಳೆದುಕೊಳ್ಳುತ್ತಿದೆ. ಇಂಗ್ಲಿಷ್ ಮಾಧ್ಯಮದಲ್ಲೇ ಓದಿದ ಪುಣ್ಯವಂತರು ಕನ್ನಡವನ್ನು ಕೇವಲ ಅಡುಗೆ ಮನೆ ಭಾಷೆಯಾಗಿ ಬಳಸಬಲ್ಲವರಾಗಿರುತ್ತಾರೆ; ಇವರಿಗೆ ಸ್ವಂತ ಮನೆಯ ಪರಿಸರದಲ್ಲೇ ಇಂಗ್ಲಿಷ್ ಇರುತ್ತದೆ. ಇಂತಹ ಪರಿಸರವಿಲ್ಲದ ದುರದೃಷ್ಟವಂತರು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತಾಗ ಏನನ್ನೂ ಆತ್ಮೀಯವಾಗಿ ಕಲಿಯದೆ, ಪಡೆಯದೆ ಭಾಷಾದರಿದ್ರರಾಗಿ ಇರುತ್ತಾರೆ. ಸ್ವೀಡಿಷ್ ಮತ್ತು ಇಂಗ್ಲಿಷ್ ಸಮಸಮವಾಗಿ ಜೊತೆಯಾಗಿರುವಂತೆ ಕನ್ನಡ – ಇಂಗ್ಲಿಷ್ ಇರುವುದು ಸಾಧ್ಯವೆ? ಇದೊಂದು ಕೈಗೂಡಬೇಕಾದ ಕನಸು – ಅಧಿಕರದ ಸ್ಥಾನದಿಂದ ಇಂಗ್ಲಿಷನ್ನು ಅಟ್ಟುವುದು ಸಾಧ್ಯವಾಗದೇ ಹೋದಲ್ಲಿ ಈ ಸಮಸಮದ ಸಂಬಂಧಕ್ಕೆ ಪ್ರಜಾತಂತ್ರದ ಭಾರತ ಪ್ರಯತ್ನಿಸಬೇಕಾಗುತ್ತದೆ. ಇದು ಸಾಧ್ಯವಾಗಲು ಕನ್ನಡಿಗರೆಲ್ಲರೂ ಅಕ್ಷರಸ್ಥರಾಗಬೇಕು; ಕನ್ನಡದಲ್ಲೇ ಜ್ಞಾನವನ್ನು ಸೃಷ್ಟಿಸಬಲ್ಲವರು ಸಾಹಿತ್ಯದಲ್ಲಿ ಮಾತ್ರವಲ್ಲದೆ ಎಲ್ಲ ರಂಗವನ್ನೂ ಹುಟ್ಟಬೇಕು.

೪. ಕನ್ನಡ ಶಿಕ್ಷಣ ಮಾಧ್ಯಮವಾಗಿರಬೇಕೆಂದೂ, ಇಂಗ್ಲಿಷನ್ನು ಕಲಿಸುವುದಾದರೆ ಅದನ್ನು ತಡವಾಗಿ ಅಂದರೆ ಕನ್ನಡ ಕಲಿತ ನಂತರ ಕಲಿಸಬೇಕೆಂದೂ ಹಲವರು ವಾದಿಸುತ್ತಾರೆ. ಲಭ್ಯವಿರುವ ಸಮಯದ ದೃಷ್ಟಿಯಿಂದ ಮತ್ತು ಇದನ್ನು ಎಲ್ಲ ಮಕ್ಕಳಿಗೂ ಅನ್ವಯಿಸಿದಾಗ ಮಾತ್ರ ಇದು ಸರಿಯಾದ ವಾದ. ಮೊದಲಿನಿಂದ ಕೊನೆಯವರೆಗೆ, ಸ್ನಾತಕೋತ್ತರ ಶಿಕ್ಷಣದಲ್ಲೂ ಅನ್ವಯವಾಗುವಂತಿದ್ದರೆ ಅತ್ಯಂತ ಸಮರ್ಪಕವಾದ ಕ್ರಮ. ಆದರೆ ತಡವಾಗಿ ಇಂಗ್ಲಿಷ್ ಕಲಿತವರೂ, ಮುಂಚೆಯೇ ಕಲಿತವರೂ ಒಟ್ಟಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಲೇಬೇಕಾದ ಸ್ಥಿತಿಯಲ್ಲಿ ಇದು ಅಸಮಾನತೆಯನ್ನು ಸೃಷ್ಟಿಸುತ್ತಿರುವುದರಿಂದ ಸಮಸ್ಯೆಯಾಗಿ ಪರಿಣಮಿಸಿದೆ.

೫. ಹಿಂದೀ ಲೇಖಕರಿಗೆ ನಾನೊಮ್ಮೆ ಹೇಳಿದ್ದೆ. ‘ನೀವು ಹಿಂದಿಯಲ್ಲಿ ಜ್ಞಾನವನ್ನು ಸೃಷ್ಟಿಸುತ್ತಿಲ್ಲ. ಇಂಗ್ಲಿಷಿನಿಂದ ಆಮದು ಮಾಡಿಕೊಳ್ಳುತ್ತಿದ್ದೀರಿ. ನಾವು ಯಾಕೆ ಜ್ಞಾನದ ಭಾಷೆಯಾಗಿ ಹಿಂದಿಯನ್ನು ಕಲಿಯಬೇಕು ಹೇಳಿ? ನಾವೂ ಇಂಗ್ಲಿಷಿನಿಂದ ಆಮದು ಮಾಡಿಕೊಳ್ಳುತ್ತೀವಿ. ಬದಲಾಗಿ ಹಿಂದಿಯಲ್ಲಿ ಹೊಸ ಜ್ಞಾನದ ಸೃಷ್ಟಿಯಾಗುತ್ತ ಇದ್ದಿದ್ದರೆ ನಾವೂ ಹಿಂದಿಯನ್ನು ಜ್ಞಾನದ ಇನ್ನೊಂದು ಭಾಷೆಯಾಗಿ ಕಲಿಯಬೇಕಾಗಿ ಬರುತ್ತ ಇತ್ತು.’ ಇಡೀ ದೇಶ ತಮ್ಮ ಸರ್ವ ವ್ಯವಹಾರದಲ್ಲೂ –  ಊಟ, ತಿಂಡಿ, ವೇಷಭೂಷಣ, ವಿಜ್ಞಾನ, ಮಾನವಿಕ ಶಾಸ್ತ್ರಗಳು –  ಎಲ್ಲದರಲ್ಲೂ ಅನುಸರಿಸುತ್ತ ಇರುವುದು ಅಮೆರಿಕಾವನ್ನು.

೫. ಇದನ್ನು ಕೊಂಚ ಬೇಸರದಲ್ಲಿ ಹೇಳುತ್ತಿದ್ದೇನೆ. ನಮ್ಮ ಸರ್ಕಾರೀ ಶಾಲೆಗಳಲ್ಲಿ ಎಲ್ಲ ಮಕ್ಕಳೂ ಹತ್ತನೇ ಇಯತ್ತೆಯ ತನಕವಾದರೂ ಒಟ್ಟಾಗಿ ವಿದ್ಯಾಭ್ಯಸ ಪಡೆಯಬೇಕೆಂದೂ, ನಮ್ಮದು ದುಬಾರಿ ಖಾಸಗಿ ಶಾಲೆಗಳು ದುಷ್ಟವೆಂದೂ ನಾನು ಹೇಳುತ್ತ ಬಂದಿರುವುದನ್ನು ಕನ್ನಡದ ವಾದಿಗಳೆಲ್ಲರೂ ನಿರ್ಲಕ್ಷಿಸಿದ್ದಾರೆ. ವರ್ಗ – ವರ್ಣಗಳ ಭೇದವಿಲ್ಲದಂತೆ ಹತ್ತನೆಯ ಇಯತ್ತೆಯ ತನಕವಾದರೂ ಎಲ್ಲ ಮಕ್ಕಳು ಒಡನಾಡುವಂತಿದ್ದರೆ ಅವರ ಅನ್ಯೋನ್ಯತೆಯಲ್ಲಿ ನಾವು ಭಾರತೀಯರು ಎನ್ನುವ ಭಾವನೆ ಬಲಗೊಳ್ಳುತ್ತಿತ್ತು. ಮಕ್ಕಳ ಬೇರೆ ಬೇರೆ ಲೋಕಗಳು, (ಈ ಲೋಕಗಳ ‘ಬಹುವಚನಗಳು’) ಏಕತ್ರವಾಗಿ ಒದಗುವುದೂ, ಪರಸ್ಪರ ಹೆಣೆದುಕೊಳ್ಳುವುದೂ ಶಾಲೆಗಳಲ್ಲಾದರೂ ಸಾಧ್ಯವಾಗಬಹುದಿತ್ತು. ಎಷ್ಟು ಕನ್ನಡ, ಎಷ್ಟು ಇಂಗ್ಲಿಷ್‌ಬೇಕೆಂಬುದನ್ನು ಶಾಲೆಯ ಜ್ಞಾನಸೃಷ್ಟಿಯ ನಿತ್ಯಯಜ್ಞದಲ್ಲೇ ಕಂಡುಕೊಳ್ಳಬಹುದಿತ್ತು.

೬. ಈ ಸಾಮಾನ್ಯ ಶಾಲೆಗಳಿಗೆ ಎಲ್ಲ ಮಕ್ಕಳೂ ಹೋಗಿ ಕಲಿಯುವಂತಾಗಲು ಇಂಗ್ಲಿಷನ್ನು ಒಂದನೇ ತರಗತಿಯಿಂದ ಕಲಿಸುವುದು ಅಗತ್ಯವಾದರೆ –  ಮಾತಾಡಲು ಮಾತ್ರ –  ಓದಲು, ಬರೆಯಲು ಅಲ್ಲ –  ಕಲಿಸಬೇಕೆಂದು ನಾನು ಹೇಳುತ್ತಿದ್ದೇನೆ. ಬಡ ತಾಯಿ – ತಂದೆಯರೂ ಇದನ್ನು ಬಯಸುವುದರಿಂದ – ಅಷ್ಟೆ. ನಾನು ಕೊಡುವ ಕಾರಣದ (ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣ ದೊರೆಯಬೇಕೆಂಬ ಕಾರಣದ) ಈ ವಾದವನ್ನು ಯಾರೂ ಇಂಗ್ಲಿಷ್ ಬೇಕೆನ್ನುವವರೂ ಬೇಡವೆನ್ನುವವರೂ ಮೊದಲಿನಿಂದಲೂ ಗಂಭೀರವಾಗಿ ಪರಿಗಣಿಸಿದಂತೆ ನನಗೆ ತೋರುವುದಿಲ್ಲ.

೭. ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳನ್ನು ಕಾನೂನುಬದ್ಧವಾಗಿ ನಾವು ಮುಚ್ಚುವಂತಿಲ್ಲ. ಆದರೆ ಒಂದು ಮಾನವಿಕ ವಿಷಯವನ್ನು ಈ ಶಾಲೆಗಳಲ್ಲಿ ಕನ್ನಡದಲ್ಲೇ ಕಲಿಸಬೇಕೆಂಬ ನಿಯಮವಿರಬೇಕು. ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯ ಮಾಡಿದರೆ ಸಾಲದು. ಶೇಕಡಾ ಮುವ್ವತ್ತೈದು ಅಂಕಗಳಿಗೆ ಕನ್ನಡ ಪರಿಮಿತವಾಗಿ ನಂತರ ಮರೆತುಬಿಡುವ ಭಾಷೆಯಾಗುತ್ತದೆ.

೮. ಒಂದು ಸಾವಿರ ವರ್ಷಗಳ ಹಿಂದೆ ಮೇಲುವರ್ಗದವರ ಸರ್ವತ್ರದ ಭಾಷೆಯಾಗಿದ್ದ ಸಂಸ್ಕೃತ ತನ್ನ ಜಾಗವನ್ನು ಭಾರತೀಯ ಜನಸಾಮಾನ್ಯರ ಭಾಷೆಗೆ ಎಡೆಮಾಡಿಕೊಟ್ಟು ಒಂದು ಕಲಾಕ್ರಾಂತಿಗೂ, ಜ್ಞಾನ ಕ್ರಾಂತಿಗೂ ಕಾರಣವಾಯಿತು. ತುಳಸೀದಾಸರು, ಕಂಬನ್, ಪಂಪ, ಅಲ್ಲಮ, ತುಕಾರಾಮ್ – ಹೀಗೆ ಹಲವರು ಹುಟ್ಟಿಕೊಂಡು ವಾಙ್ಮಯದ ಜೀವನವನ್ನು ಸಮೃದ್ಧಗೊಳಿಸಿದರು. ಸುಮಾರು ಐದು ನೂರು ವರ್ಷಗಳ ಹಿಂದೆ ಐರೋಪ್ಯ ನಾಗರೀಕತೆಯ ಶ್ರೇಷ್ಠರ ಜ್ಞಾನಭಾಷೆಯಾಗಿದ್ದ ಲ್ಯಾಟಿನ್ ಹಲವು ಐರೋಪ್ಯ ಜನ ಸಮುದಾಯಗಳ ಭಾಷೆಗಳಿಗೆ ಎಡೆಮಾಡಿಕೊಟ್ಟು ಶೇಕ್ಸ್‌ಪಿಯರ್‌, ಡಾಂಟೆಯಂಥವರು ಹುಟ್ಟಿಕೊಂಡರು. ಜ್ಞಾನಿ ನ್ಯೂಟನ್‌ಬರೆದದ್ದು ಲ್ಯಾಟಿನ್‌ನಲ್ಲಿ; ಕವಿಯಾಗಿ ತಾನು ಅದೃಶ್ಯನಾಗಬಹುದೆಂಬ ಭಯದಲ್ಲಿ ಮಿಲ್ಟನ್ ಕೂಡ ಲ್ಯಾಟಿನ್‌ನಲ್ಲಿ ಬರೆದನಂತೆ. ಅದೇ ಡಾರ್ವಿನ್‌ಜನಭಾಷೆಯಾದ ಇಂಗ್ಲಿಷಿನಲ್ಲಿ ಬರೆದು ಎಲ್ಲ ವಲಯದಲ್ಲೂ ಒಂದು ಕ್ರಾಂತಿಯನ್ನೇ ಮಾಡಿದ.

೯. ಈತ ತದ್ವಿರುದ್ಧದ ಕ್ರಿಯೆ ನಡೆದಿದೆ. ಯೂರೋಪಿನಲ್ಲೂ ಇಂಗ್ಲಿಷ್ ಯಜಮಾನಿಕೆ ಮಾಡುತ್ತಿದೆ. ವಿಕೇಂದ್ರಿಕೃತವಾದ್ದದು ಕೇಂದ್ರೀಕೃತವಾಗುತ್ತಿದೆ. ಈವರೆಗೆ ಪ್ರಪಂಚ ಕಾಣದ ಯಜಮಾನಿಕೆ ಹುಟ್ಟಿಕೊಂಡಿದೆ. ಇದು ಅಲ್ಪಾಯುವಿರಬಹುದೆಂಬ ಕನಸನ್ನು ಕಾಣುವವರಲ್ಲಿ ನಾನೂ ಒಬ್ಬ.

೧೦. ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ಒಬ್ಬ ಆಸ್ಟ್ರೇಲಿಯಾದ ಲೇಖಕನನ್ನು ಭೇಟಿಯಾದೆ. ವ್ಯವಹಾರದ ದೃಷ್ಟಿಯಿಂದ ಇವನೊಬ್ಬ ಡಾನ್‌ಕ್ವಿಕ್ಸಾಟ್‌ನಂತಹ ಹುಚ್ಚನೇ. ಆದರೆ ಈ ದಾರ್ಶನಿಕ ಹುಚ್ಚನ ಮಾತು ನನ್ನನ್ನು ಆಳವಾಗಿ ಕಲುಕಿತು. ಬಿಳಿ ಜನರು ಆಸ್ಟ್ರೇಲಿಯಾದ ಮೂಲ ನಿವಾಸಿಗಳಿಂದ ಎಲ್ಲವನ್ನೂ ಕದ್ದರು. ಕ್ರಿಶ್ಚಿಯನ್ ಪಾದ್ರಿಗಳು ಅವರ ದೇವ ದೇವತೆಗಳೆಲ್ಲ ಸುಳ್ಳೆಂದು ನಾಶಮಾಡಿದರು. ಅವರ ಭಾಷೆಗಳನ್ನು, ಅವರ ಕಥೆಗಳನ್ನು, ಅವರ ಜಾನಪದ ನೃತ್ಯ ಕಾವ್ಯಗಳನ್ನು ಮರೆಯುವಂತೆ ಮಾಡಿ ಅವರನ್ನು ಕಳಪೆಗೊಳಿಸಿದರು. ಇಂತಹ ಒಂದು ಬುಡಕಟ್ಟಿನಲ್ಲಿ ಹುಟ್ಟಿದ ಈ ಲೇಖಕ ಹೇಳಿದ : “ನನ್ನ ಜೀವನದ ಗುರಿ ಸತ್ತ ನಮ್ಮ ಭಾಷೆಗಳನ್ನು ಮತ್ತೆ ನೆನಪು ಮಾಡಿಕೊಳ್ಳುವದು; ಸತ್ತ ನಮ್ಮ ದೇವತೆಗಳಿಗೆ ಮತ್ತೆ ಜೀವ ತರುವುದು. ಅದಕ್ಕಾಗಿ ನಾನು ಬದುಕುತ್ತೇನೆ. ”

ಅಮೆರಿಕಾದಲ್ಲೂ ಮೂಲನಿವಾಸಿಗಳು ಇದ್ದರು. ನಿಸರ್ಗ ಪ್ರೇಮದಲ್ಲಿ, ನಾಗರಿಕ ನಡಾವಳಿಗಳಲ್ಲಿ ಇವರೇನೂ ಐರೋಪ್ಯರಿಗಿಂತ ಕಮ್ಮಿಯಲ್ಲ. ಆದರೆ ಯೂರೋಪಿನ ಕೈಯಲ್ಲಿ ಬಂದೂಕಿತ್ತು. ಬಡವರಿಗಾಗಿಯೇ ಹುಟ್ಟಿದ ಕ್ರೈಸ್ತಧರ್ಮವನ್ನು ಇವರು ತಮ್ಮ ದುರಾಸೆಯನ್ನು ಸಾಧಿಸಿಕೊಳ್ಳುವ ಉಪಾಯ ಮಾಡಿಕೊಂಡಿದ್ದರು. ಈಗ ‘ರಿಸರ್ವೇಶನ್’ ಗಳಲ್ಲಿ ಬದುಕಿರುವ ಅಳಿದುಳಿದ ಮೂಲನಿವಾಸಿಗಳ ಸಂತತಿಯವರು ಪೊಟ್ಟಣಗಳಲ್ಲಿ ಸಿದ್ಧಪಡಿಸಿದ್ದನ್ನು ಹೊಟ್ಟೆತುಂಬ ತಿಂದು, ದಿನವಿಡೀ ಕುಡಿದು, ಆಕಳಿಸುವ ಸೋಮಾರಿಗಳು. ಟೂರಿಸ್ಟರ ಕುತೂಹಲ ತಣಿಸುವ ವೇಷಧಾರಿಗಳು. ಹಿಂದೆ ಗುಲಾಮರಾಗಿದ್ದ ಕಪ್ಪು ಜನರ ಕೆಚ್ಚು ಅಮೆರಿಕಾದ ಮೂಲ ಯಜಮಾನರಾಗಿದ್ದ ಇವರಲ್ಲಿ ಇಲ್ಲ.

ಭಾರತವನ್ನು ಅದರ ಜನಮೊತ್ತದಿಂದಾಗಿ, ಅದರ ಅನೇಕಾನೇಕ ಭಾಷೆಗಳಿಂದಾಗಿ, ಅದರ ವೈವಿಧ್ಯದ ಮತಧರ್ಮಗಳಿಂದಾಗಿ ರಿಸರ್ವೇಶನ್ನುಗಳಲ್ಲಿ ಕೂಡಿಸಲು ಸಾಧ್ಯವಾಗಲಿಲ್ಲ. ಭಾರತದ ಸಿಟಿಗಳನ್ನು ಸಿಂಗಪುರ್‌ಮಾಡಲು ಹೊರಟಿರುವ ನಮ್ಮ ಕೆಲವು ವಾಣಿಜ್ಯದವರಿಗೆ, ಅವರನ್ನು ಅನುಸರಿಸುವ ರಾಜಕಾರಣಿಗಳಿಗೆ ಕರಷಿ ಜೀವನವನ್ನು ಕ್ರಮೇಣ ಕಳಪೆಗೊಳಿಸುವ ಮೂಲಕ ಇಂತಹ ಬಡಜನರ ರಿಸರ್ವೇಸನ್ನುಗಳನ್ನು ಸೃಷ್ಟಿಸುವ ಹುನ್ನಾರವಿರುವಂತೆ ಕಾಣುತ್ತದೆ.

* * *

ಈಚೆಗೆ ನಡೆದೊಂದು ಘಟನೆ ಹೇಳುತ್ತೇನೆ. ಬೆಂಗಳೂರಿನಲ್ಲಿ ಒಂದು ಬ್ಯಾಂಗಲೂರ್ ಕ್ಲಬ್‌ಇದೆ. ಅಲ್ಲಿಗೆ ಅದರ ಮೆಂಬರೊಬ್ಬರು ನನ್ನನ್ನು ಊಟಕ್ಕೆ ಕರೆದುಕೊಂಡು ಹೋದರು. ನಾನು ಶೂ ಪ್ಯಾಂಟು ಧರಿಸಿದ್ದೆ. ಆದರೆ ಕುರ್ತಾ ಹಾಕಿದ್ದೆ. ಹುಲ್ಲಿನ ಬಣ್ಣದ ತಾಜಾ ಹಸಿರಿನ ಕುರ್ತಾ. ಒಂದು ವಾರದ ಹಿಂದಷ್ಟೇ ಅದನ್ನು ಕಂಡು ಟಾಮ್ ಆಲ್ಟರ್‌ಎಂಬ ಭಾರತೀಯನಾಗಿ ಬಿಟ್ಟ ಬ್ರಿಟಿಷ್ ನಟ ಪುಣೆಯಲ್ಲಿ ಮೋಹಿತನಾಗಿದ್ದ. ಅದರ ತಾಜಾ ಬಣ್ಣಕ್ಕೆ, ಅದರ ಕೈಮಗ್ಗದ ಹೆಣೆಗೆಗೆ. ನಾನು ಈ ದೇಸೀ ಬಟ್ಟೆಗಳನ್ನು ಹೆಣೆದು ಹೊಲಿಯುವ ಹಳ್ಳಿಯ ಹೆಂಗಸರ ಬಗ್ಗೆಯೂ, ಇದನ್ನು ಸಾಧ್ಯಗೊಳಿಸಿದ ನಮ್ಮ ಮೆಚ್ಚಿನ ರಂಗಕರ್ಮಿ ಲೇಖಕ ಚಿಂತಕ ಪ್ರಸನ್ನನ ಸಾಹಸದ ಬಗ್ಗೆಯೂ ಕೊಚ್ಚಿಕೊಂಡಿದ್ದೆ.

ಆದರೆ ವನಸ್ಪತಿ ಲೋಕದಿಂದಲೂ ಹಳ್ಳಿಯ ಕುಶಲ ಬೆರಳುಗಳಿಂದಲೂ ಸೃಷ್ಟಿಯಾದ ಈ ಕುರ್ತಾ ತೊಟ್ಟ ನನ್ನನ್ನು ಒಳಗೆ ಬಿಡುವಂತಿಲ್ಲ ಎಂದು ಗೇಟಿನಲ್ಲೇ ಬ್ಯಾಂಗಲೂರ್‌ಕ್ಲಬ್ಬಿನ ಅಧಿಕಾರಿಗಳು (ಕಾವಲಿನವರು) ತಡೆದರು.  ‘ಶರ್ಟ್‌ಧರಿಸಿದವರಿಗೆ ಇಲ್ಲಿ ಪ್ರವೇಶವಿಲ್ಲ’ ಎಂದರು. ಹೀಗೆ ಹೇಳಿದವರು ನನ್ನ ಬಣ್ಣದವರೇ. ಸುಳ್ಳು ಸೌಜನ್ಯಕ್ಕೆ ಅಪರಿಮಿತವಾದ ಅವಕಾಶವಿರುವ ಇಂಗ್ಲೀಷನ್ನು ಮಾತಾಡುವ ನಮ್ಮ ಊರಿನವರೇ. ಪಾಪ, ತಮ್ಮ ಭಾಷಾ ಸಾಧನೆಗೆ ತಕ್ಕ ಸಂಬಳ ಪಡೆಯುವ ಈ ಟೆರಿಲೀನ್ ನುಣುಪಿನ ಸೂಟ್‌ಧಾರಿ ಕ್ಲಬ್ ಕಾರ್ಮಿಕರ ಜೊತೆ ಹೇಗೆ ಜಗಳವಾಡಲಿ? ನಾನು ಎಲ್ಲಿದ್ದೇನೆಂದು ನನಗೇ ಆಶ್ಚರ್ಯವಾಯಿತು. ಇಲ್ಲಿಗೆ ಬಂದದ್ದೇ ತಪ್ಪೆನ್ನಿಸಿ ನನಗೇ ನಾನು ಹೀಗೆ ಅಂದುಕೊಂಡೆ.

* * *

ಉಸಿರಾಡಲು ಅವಕಾಶವಿಲ್ಲದಂತೆ ಬೆಳೆದಿರುವ ಈ ನಗರದಲ್ಲಿ ಆ ಕ್ಲಬ್ಬನ್ನು ಸರ್ಕಾರ ಜನಹಿತಕ್ಕಾಗಿ ವಶಪಡಿಸಿಕೊಳ್ಳಬೇಕು. ಅಲ್ಲಿರುವ ಬಿಲ್ಡಿಂಗುಗಳನ್ನು ಕೆಡವಬೇಕು. ಮರಗಳನ್ನು ನೆಡಬೇಕು. ಸೂಟು ಹಾಕಿದವರಿಗೂ ಮತ್ತು ಅವರ ಸೂಟಿನಲ್ಲಿ ಕನ್ನಡ ಬಾರದಂತಾದವರಿಗೂ, ಜೊತೆಯಲ್ಲೇ ಪಂಚೆಯುಟ್ಟ, ಪೈಜಾಮಾ –  ಕುರ್ತಾ ತೊಟ್ಟ, ಸಲ್ವಾರ್‌ಕಮೀಸ್ ತೊಟ್ಟ, ಸೀರೆಯುಟ್ಟ ಎಲ್ಲರಿಗೂ, ಚಡ್ಡಿ ತೊಟ್ಟ ಮಕ್ಕಳಿಗೂ, ಕಡಲೆಯಕಾಯಿ ಮಾರಾಟ ಮಾಡುವವರಿಗೂ, ಓಡಾಡುವ ನೆರಳಿನ ಪಾರ್ಕಾಗಿ ಈ ಶ್ರೀಮಂತರ ರಿಸರ್ವೇಶನ್ನನ್ನು ಪರಿವರ್ತಿಸಬೇಕು. (ಬೇಕೆಂದೇ ನಾನು ರಿಸರ್ವೇಶನ್ ಪದವನ್ನು ಇಲ್ಲಿ ಬಳಸಿದ್ದೇನೆ.) ಮರದ ನೆರಳಿನಲ್ಲಿ ಕೂತು ಹುರಿದ ನೆಲಗಡಲೆಯನ್ನು ಬಿಡಿಸಿ ನಿಧಾನವಾಗಿ ತಿನ್ನುತ್ತ ಹರಟುವುದು ಕನ್ನಡಿಗರ ಖುಷಿ. ಸುಲಿದದ್ದನ್ನು ಪಕ್ಕದಲ್ಲಿ ಸುಮ್ಮನೇ ಕೂತ ಸೂಟುಧಾರಿಗೂ ತಿನ್ನಲು ಕೊಡುವುದು ನಮ್ಮ ಸಂಪ್ರದಾಯ.

ನನ್ನ ಮಾತುಗಳು ಎತ್ತೆತ್ತಲೋ ಹರಿದಂತೆ ಕಂಡರೂ, ಈ ಮಾತುಗಳನ್ನು ಓದಿದವರಿಗೆ ಪುನಾವರ್ತನೆ ಎನ್ನಿಸಿದರೂ –  ಕುರ್ತಾಕ್ಕೆ ಅವಕಾಶವಿಲ್ಲದ ಬ್ಯಾಂಗಲೂರ್‌ ಕ್ಲಬ್‌, ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣ, ದಲಿತ ರೈತರ ಹೋರಾಟ, ಸಾವಯವ ಕೃಷಿ, ಮೇಧಾಪಾಟ್ಕರ್‌ ಕಮ್ಯುನಿಸ್ಟ್ ಬಂಗಾಳದಲ್ಲಿ ನಡೆಸಿರುವ ಹೋರಾಟ – ಇವೆಲ್ಲವನ್ನೂ ಒಂದೇ ಸಮಸ್ಯೆಯೆಂಬಂತೆ ನಾನು ನೋಡಲು, ನೋಡಿದ್ದನ್ನು ನಿಮಗೆ ಕಾಣಿಸಲು ಮತ್ತೆ ಮತ್ತೆ ಯತ್ನಿಸುತ್ತೇನೆ.

೧೩೧೨೨೦೦೬

* * *