ನಾನು ಮಹಾರಾಜಾ ಕಾಲೇಜಿನಲ್ಲಿ ಎಂ.ಎ. ಓದುತ್ತಾ ಇದ್ದಾಗ ಪ್ರತಿನಿತ್ಯ ಸಂಜೆ ದಾಸ್ ಪ್ರಕಾಶ್ ಹೋಟೆಲಿನ ವೃತ್ತದಲ್ಲಿ ಇದ್ದ ಕಾಫಿ ಹೌಸ್‌ನಲ್ಲಿ ಹರಟಲು ಸೇರುತ್ತ ಇದ್ದೆವು. ಮೇಲಿಂದ ಮೇಲೆ ಒನ್ ಬೈ ಟು ಕಾಫಿಯನ್ನು ಆರ್ಡರ್ ಮಾಡಿ ಬೆತ್ತದ ಕುರ್ಚಿಗಳ ಮೇಲೆ ಕೂತು ಕಾಫಿ ಸವಿಯುತ್ತ ನಾವು ಓದಿದ್ದನ್ನೆಲ್ಲ ಎಷ್ಟು ಉತ್ಕಟವಾಗಿ ಚರ್ಚಿಸುತ್ತಾ ಇದ್ದೆವು ಎಂದು ಈಗ ಆಶ್ಚರ್ಯವಾಗುತ್ತದೆ. ನಮ್ಮ ಜೊತೆ ಅಡಿಗರೂ ಇರುತ್ತಿದ್ದರು. ಅವರು ಏನೇ ಹೊಸದನ್ನು ಓದಲಿ, ಅದನ್ನು ನಮಗೆ ಓದಿಸುತ್ತಿದ್ದರು. ಹಾಗೆಯೇ ನಾವು ಓದಿದ್ದನ್ನು ಅವರಿಗೆ ಓದಿಸುತ್ತಿದ್ದೆವು. ನನಗೆ ಇಷ್ಟವಾದ ಲೋಹಿಯಾರ ಪ್ರಬಂಧಗಳನ್ನು ಲಾರೆನ್ಸ್‌ನ ಪ್ರಬಂಧಗಳನ್ನ ಅಡಿಗರಿಗೆ ಓದಿಸಿದ್ದೆ – ರಾಜಾಜಿಯ ಕನ್ಸರ್ವೆಟಿವ್ ನಿಲುವುಗಳನ್ನು ಮೆಚ್ಚುತ್ತಿದ್ದ ಅಡಿಗರಿಗೆ ಈ ಲೇಖಕ ಚಿಂತರಕೂ ಬೇಕಾದವರು. ಅಡಿಗರ ಮುಖೇನ ನನ್ನ ಅರಿವಿಗೆ ಬಂದವರಲ್ಲಿ ಮುಖ್ಯವಾಗಿ ಇಬ್ಬರು: ಸ್ಪ್ಯಾನಿಷ್ ಚಿಂತಕ ಆರ್ಟೆಗಾ ಗ್ಯಾಸೆ (Jose Ortegay Gasset)  ಮತ್ತು ಜಗತ್ತಿನ ನಾಗರೀಕತೆಗಳ ಬಗ್ಗೆ ಬರೆದ ತಾತ್ವಿಕ ಇತಿಹಾಸಕಾರ ಆರ್ನಾಲ್ಡ್ ಟಾಯನ್‌ಬೀ. ನಮ್ಮ ನಮ್ಮ ವಿಶಿಷ್ಟ ಅಂತರ್ಮುಖಿ ಅಗತ್ಯಗಳಲ್ಲಿ ಈ ಚಿಂತಕರು ನಮ್ಮ ಒಳಗಿನ ಲೋಕವನ್ನು ಬೆಳೆಸಿದರು. ಲೇಖಕರಾದ ನಮ್ಮ ಬರವಣಿಗೆಯ ಮುಖ್ಯ ರೂಪಕಗಳನ್ನು ನಮ್ಮ ಒಳಗೆ ಬರದೆ, ರೂಪಕಗಳ ಸಂಕಿರಣಗಳಾಗಿ ನಮಗೆ ಇವರು ಒದಗಿದರು. ಅಡಿಗರ ಕಾವ್ಯದಲ್ಲಂತೂ ಈ ಚಿಂತಕರು ಭಾರತೀಯ ಪುರಾಣಲೋಕದಲ್ಲಿ ಬೆರೆತು ಮರುಹುಟ್ಟು ಪಡೆದರು.

ಪ್ರಜಾತಂತ್ರಕ್ಕೆ ಬದ್ಧರಾದ ನಮ್ಮ ಮನುಸ್ಸುಗಳಿಗೆ ಪ್ರಜಾತಂತ್ರವನ್ನು ವಿಮರ್ಶಾತ್ಮಕವಾಗಿ ನೋಡಲು ಸಹಕರಿಸಿದ ಚಿಂತಕನೆಂದರೆ ಆರ್ಟೆಗಾ. ಅವನ ಬಗ್ಗೆ ಕೆಲವು ಮಾತುಗಳನ್ನು ಬರೆಯುವೆ. ಅವನ ಚಿಂತನೆಗಳನ್ನು ಕೊಂಚ ಸರಳಗೊಳಿಸದೆ ವಿಧಿಯಿಲ್ಲ – ಈ ಲೇಖನದ ವ್ಯಾಪ್ತಿಯಲ್ಲಿ. ಆ ಬಗ್ಗೆ ನನಗೆ ಪಶ್ಚಾತ್ತಾಪವೂ ಇಲ್ಲ. ಯಾಕೆಂದರೆ ಈ ದಿನಗಳಲ್ಲಿ ಪ್ರಜಾತಂತ್ರದ ಸವಲತ್ತುಗಳನ್ನು ಬಳಸಿಕೊಂಡೇ ಪ್ರಜಾತಂತ್ರವನ್ನು ನಾಶ ಮಾಡುವ ವಿಷಮ ಪ್ರಜಾತಂತ್ರದ ಸವಲತ್ತುಗಳನ್ನು ಬಳಸಿಕೊಂಡೇ ಪ್ರಜಾತಂತ್ರವನ್ನು ನಾಶ ಮಾಡುವ ವಿಷಮ ಸನ್ನಿರೋಗದ ಲಕ್ಷಣಗಳನ್ನು ಗುರುತಿಸಲು ಅಗತ್ಯವಾದಷ್ಟು ಆರ್ಟೆಗಾನನ್ನು ಬಳಸಿಕೊಳ್ಳುವ ಜರೂರು ನನಗೂ, ನನ್ನಂತೆ ಭಾವಿಸುವ ಎಲ್ಲರಿಗೂ ಎದುರಾಗಿದೆ.

ಆರ‍್ಟೆಗಾನ ಪ್ರಕಾರ ಯೂರೋಪಿನಲ್ಲಿ ೨೦ನೇ ಶತಮಾನದಲ್ಲಿ ಜನಸಮೂಹ ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಸಮೂಹ ಸನ್ನಿಗೆ ಒಳಗಾದವರು ಎಂತಹ ಭಯದ ಉತ್ಪಾದಕರೂ ಅವಿಚಾರಿಗಳೂ ಆಗುತ್ತಾರೆಂದು ಹಿಟ್ಲರನ ಕಾಲದಲ್ಲಿ ಜರ್ಮನಿಯಲ್ಲೂ, ಮುಸೋಲಿನಿಯ ಇಟಲಿಯಲ್ಲೂ ಫ್ರಾಂಕೋನ ಸ್ಪೇನಿನಲ್ಲೂ (ಅಂದರೆ ತನ್ನ ದೇಶದಲ್ಲೂ) ಗಮನಿಸಿದ ಆರ್ಟೆಗಾನ ವಿಚಾರಗಳು ನಮಗೀಗ ಪ್ರಸ್ತುತವಾಗಿದೆ. ಈಚೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಯಾವ ವಿಚಾರಕ್ಕೂ, ಪಕ್ಷಗಳ ಪ್ರಣಾಳಿಕೆಗಳಿಗೂ ಆಸ್ಪದವೇ ಇಲ್ಲದಂತೆ ಚುನಾವಣೆ ನಡೆಯಿತೆಂದು ಕೇಳಿದ ನನಗೆ ಕೆಲವು ದಶಕಗಳ ಹಿಂದೆ ಶಾಂತವೇರಿ ಗೋಪಾಲಗೌಡರು, ತದನಂತರ ಹೆಗಡೆಯವರು, ಪಟೇಲರು, ದೇವರಾಜ ಅರಸರು, ಬೊಮ್ಮಾಯಿಯವರು, ಬಸವಲಿಂಗಪ್ಪನವರು ಎಂತಹ ಬೃಹತ್ ಸಭೆಯಾದರೂ ಜನರನ್ನು ಗೆಲ್ಲಲು ಬಳಸುತ್ತಿದ್ದ ವೈಚಾರಿಕತೆ ನೆನಪಾಯಿತು. ಈಗ ಅವೆಲ್ಲವೂ ಮಾಡುವುದು ಸಾಧ್ಯವಿಲ್ಲ ಎಂಬ ನಿಲುವಿಗೆ ನಮ್ಮ ಘನವಂತರಾದ ರಾಜಕಾರಣಿಗಳೂ ಬಂದಿದ್ದಾರೆ. ಇದು ಶಾಶ್ವತವಾಗಿ ಉಳಿಯಲಾರದು ಎಂಬ ಭರವಸೆಯಲ್ಲೂ. ಆದರೆ ನಮ್ಮ ಜನಸಮೂಹವೂ ಯಾಕೆ ಭ್ರಷ್ಟಗೊಳ್ಳುತ್ತ ಇದೆ ಎಂದು ತಿಳಿಯುವುದಕ್ಕಾಗಿಯೇ ಆರ್ಟೆಗಾ ಬಾರಿಸುವ ಎಚ್ಚರಿಕೆ ಗಂಟೆಯನ್ನು ಕೇಳಿಸಿಕೊಳ್ಳುವಂತೆ ಅದಕ್ಕೆ ವ್ಯವಧಾನವಿರುವ ಓದುಗರನ್ನು ಕೋರುತ್ತೇನೆ.

* * *

ಆರ್ಟೆಗಾ ತನ್ನ ಹೊಸಕಾಲವನ್ನು ಹೀಗೆ ವಿವರಿಸುತ್ತಾನೆ. ನಮಗೇನು ಆಗುತ್ತಿದೆ ಎಂಬುದನ್ನು ನಮಗೆ ಗೊತ್ತಿಲ್ಲ. ನಮಗೇನು ಆಗುತ್ತಿದೆ ಎಂಬುದನ್ನು ನಮಗೆ ಹೀಗೆ ಗೊತ್ತಿಲ್ಲದೇ ಇರುವುದೇ ನಮಗೀಗ ಆಗುತ್ತಿರುವುದು. ಇವತ್ತಿನ ಮನುಷ್ಯ ತನ್ನ ಆಂತರ್ಯದಲ್ಲಿ ಏನಾಗುತ್ತ ಇದೆ ಎಂಬುದನ್ನೇ ತಿಳಿಯಲಾರದವನಾಗಿದ್ದಾನೆ. ಭೂತ ಹೊಕ್ಕವನಂತೆ ಅವನು ವರ್ತಿಸುತ್ತಾನೆ.

ಈ ಬಗೆಯ ಜನಸಮೂಹವೇ ಬೇರೆ. ವಿಶಿಷ್ಟನಾಗಿದ್ದೂ ವ್ಯಷ್ಟಿಯಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಜನಸಮೂದಾಯವೇ ಬೇರೆ. ವ್ಯಕ್ತಿಯ ವಿಶಿಷ್ಟತೆಗೆ ಅವಕಾಶವಿಲ್ಲದೆ ಅಗತ್ಯವೂ ಇಲ್ಲದೆ ಹೋದಾಗ ಅದೊಂದು ಚಹರೆ ಚರ್ಯೆಗಳಿಲ್ಲದ ಸಮೂಹವಾಗುತ್ತದೆ. ಒಬ್ಬ ವ್ಯಕ್ತಿಯನ್ನು ನಾವು ವ್ಯಕ್ತಿಯಾಗಿಯೇ ನೋಡಿದಾಗ ಅವನು ಸಮೂಹದವನೋ ಅಲ್ಲವೋ ಎನ್ನುವುದನ್ನು ಕೇಳುವುದು ಸಾಧ್ಯ. ಆದರೆ ಸಮೂಹದಲ್ಲೇ ಪಾಲುಗೊಳ್ಳುವಾಗ ಪ್ರತಿಯೊಬ್ಬನೂ ಇತರರಿಗಿಂತ ಅನ್ಯನವಾಗಿ ಉಳಿಯುವುದಿಲ್ಲ. ಎಲ್ಲರಂತೆ ತಾನೂ ಎಂದು ತಿಳಿದಿರುತ್ತಾನೆ. ಹೀಗೆ ತಿಳಿಯುವುದರಲ್ಲಿ ಅವನಿಗೆ ಗೊಂದಲವಿಲ್ಲ. ಸಮಸ್ಯೆಯಿಲ್ಲ. ಬದಲಾಗಿ ಸುಖವಿದೆ. ತಾನು ಪ್ರಶ್ನಾತೀತ, ಸಮೂಹದಲ್ಲಿ ರಕ್ಷಿತ ಎನ್ನುವುದರಿಂದ ಹುಟ್ಟುವ ಅಬಾಧಿತ ಮನಸ್ಸಿನ ಸುಖ ಇದು.

ಈ ಕಾಲದ ಮುಖ್ಯ ಲಕ್ಷಣವೆಂದರೆ ಇದು; ಸರ್ವೇ ಸಾಮಾನ್ಯವಾದ ಮನಸ್ಸಿಗೆ ತಾನು ಸರ್ವೇ ಸಾಮಾನ್ಯವಾದದ್ದು ಎಂಬುದು ಗೊತ್ತಿರುತ್ತದೋ ಇಲ್ಲವೋ ಎಂಬುದು ಮುಖ್ಯವಲ್ಲ; ತನ್ನ ಇಚ್ಛೆಯನ್ನು – ಅಂದರೆ ಸಮೂಹದ ಸಂಕಲ್ಪವನ್ನು – ಎಲ್ಲರ ಮೇಲೂ ಹೇರಬಹುದೆಂದು ಅದು ತಿಳಿದಿರುತ್ತದೆ.

ಅಮೆರಿಕದಲ್ಲಿ ಒಂದು ಭಾವನೆ ಇದೆ. ಅನ್ಯವಾಗಿರುವುದು, ವಿಶಿಷ್ಟ ವ್ಯಕ್ತಿಯಾಗಿ ಚಿಂತಿಸುವುದು ಅಶ್ಲೀಲ. ಜನಸಮೂಹ ಹೀಗೆ ಅನ್ಯವಾದದ್ದು ಎಷ್ಟೇ ಉತ್ಕೃಷ್ಟವಿರಲಿ ಎಲ್ಲರಂತೆ ಈ ಅನ್ಯ ಚಿಂತಿಸುವುದಿಲ್ಲವಲ್ಲ, ಬದುಕುವುದಿಲ್ಲವಲ್ಲ ಎಂಬ ಕಾರಣಕ್ಕಾಗಿಯೇ ವಿಶಿಷ್ಟವಾದ ಅನ್ಯವನ್ನು ತುಳಿಯುತ್ತದೆ. ಹೀಯಾಳಿಸುತ್ತದೆ.

ಸಮೂಹದ ಮನುಷ್ಯ ‘ಒಟ್ಟಾರೆ ಮನುಷ್ಯ’ನಾಗುತ್ತಾನೆ. ಈ ನನ್ನ ‘ಒಟ್ಟಾರೆ ಮನುಷ್ಯ’ ಎನ್ನುವ ನುಡಿಯನ್ನು ಕೊಂಚ ವಿವರಿಸುತ್ತೇನೆ. ಏನನ್ನಾದರೂ ಒಟ್ಟಾರೆಯಾಗಿ ನೋಡಿ ಇದು ಹೀಗೆ ಎಂಬ ನಿರ್ಣಯಕ್ಕೆ ಬರುವುದು ಈ ಒಟ್ಟಾರೆ ಶೂರರ ಲಕ್ಷಣ. ‘ಮುಸ್ಲಿಮರೇ ಹೀಗೆ; ಬ್ರಾಹ್ಮಣರೇ ಹೀಗೆ; ಗೌಡರೇ ಹೀಗೆ; ಲಿಂಗಾಯತರೇ ಹೀಗೆ; ತಮಿಳರೇ ಹೀಗೆ’ ಎಂಬ ಒಟ್ಟಾರೆಯಾಗಿ ಎಲ್ಲವನ್ನೂ ನೋಡುವ ನಿರ್ಣಯಕ್ಕೆ ಈ ‘ಒಟ್ಟಾರೆ ಮನುಷ್ಯರು’ ಸುಲಭವಾಗಿ ತಲುಪಿರುತ್ತಾರೆ. ಯಾರೂ ತಮ್ಮಂತೆ ಮನುಷ್ಯರು ಎಂದು ಈ ಒಟ್ಟಾರೆ ದರ್ಪದ ಚಿಂತನೆಯ ಜನ ತಿಳಿಯುವುದಿಲ್ಲ. ಇವರಲ್ಲಿ ಅಂತರ್ಮುಖವಾದ ಯಾವ ಅನುಮಾನಕ್ಕೂ ಇತರರ ಜೊತೆ ನಡೆಯಬಹುದಾದ ಅನುಸಂಧಾನಕ್ಕೂ, ಸಂವಾದಕ್ಕೂ ಜಾಗವೇ ಇರುವುದಿಲ್ಲ.

ಜನಸಮೂಹದಲ್ಲಿ ಗುರುತಿಸಿಕೊಳ್ಳುವ ಈ ಒಟ್ಟಾರೆ ಮನುಷ್ಯರು ನಮ್ಮ ನಾಗರಿಕತೆಯನ್ನು ಮುಂದುವರಿಸಬಲ್ಲವರಂತೂ ಖಂಡಿತ ಅಲ್ಲ ಎಂದು ಹೇಳಲೇಬೇಕಾಗಿಲ್ಲ. ಆದರೆ ಹೇಳಬೇಕಾದ ಒಂದು ಮಾತಿದೆ. ನಾಗರಿಕತೆಯ ಸವಲತ್ತುಗಳನ್ನೆಲ್ಲಾ ಬಳಸಿಕೊಂಡು, ಅದೇ ನಾಗರಿಕತೆಯ ಮೂಲದಲ್ಲಿ ಇರುವ ಯಾವ ಸದ್ಭಾವಕ್ಕೂ ಮಿಡಿಯದೆ, ತನ್ನ ಮೂರ್ಖತನದಲ್ಲಿ ಸುಮ್ಮಗೂ ತನ್ನ ಪಾಡಿಗೆ ತಾನಿರದೆ ಈ ಜನಸಮೂಹದ ಒಟ್ಟಾರೆ ಮನುಷ್ಯ ಸತತವಾಗಿ ಕಾರ್ಯೋನ್ಮುಖನಾಗಿರುತ್ತಾನೆ.

***

ಆರ್ಟೆಗಾನ ಪ್ರಕಾರ ಯುರೋಪ್ ಮತ್ತು ಅಮೆರಿಕಾದಲ್ಲಿ ಬಹಳ ಕಾಲದವರೆಗೆ ಈ ಒಟ್ಟಾರೆ ಮನುಷ್ಯ ತಾನೂ ಒಬ್ಬ ವೈಚಾರಿಕ ಎಂದು ಭ್ರಮಿಸಿರಲಿಲ್ಲ. ಸಮೂದಾಯದ ಸಾಮಾನ್ಯವಾಗಿ ಅವನಿಗೆ ನಂಬಿಕೆಗಳಿದ್ದವು. ಸಂಪ್ರದಾಯಗಳಿದ್ದವು. ಅನುಭವವಿತ್ತು. ಗಾದೆಗಳಿದ್ದವು. ಆದರೆ ತಾತ್ವಿಕವಾಗಿ ಯಾವುದು ಹೇಗಿರಬೇಕೆಂದು ನಿರ್ಣಯಿಸುವ ಶಕ್ತಿಯೂ ನಿರ್ಧರಿಸಬೇಕಾದವನು ತಾನೇ ಎಂದು ಅವನು ತಿಳಿದಿದ್ದಾನೆ. ಅವನಿಗೆ ಕಿವಿಗಳೇ ಇಲ್ಲ, ಎಲ್ಲವೂ ತನಗೆ ಗೊತ್ತಿರುವಾಗ, ಏನನ್ನು ತಾನು ಕೇಳಿಸಿಕೊಳ್ಳಬೇಕು ಎಂಬ ಗರ್ವ (ಗ್ರೀಕರು ಅವನ ಕೆಲಸ. ಸಾರ್ವಜನಿಕ ಜೀವನದಲ್ಲಿ ಕುರುಡನೂ ಕಿವುಡನೂ ಆದ ಈ ಒಟ್ಟಾರೆ ಮನುಷ್ಯ ಪ್ರವೇಶಿಸಲು ಹಿಂಜರಿಯುವ ಜಾಗವೇ ಇಲ್ಲ.

ಹೀಗೆ ಸರ್ವೇ ಸಾಮಾನ್ಯವಾದ ಜನ ಸಮೂಹದ ಒಟ್ಟಾರೆ ಮನುಷ್ಯನಿಗೂ ವೈಚಾರಿಕ ಶಕ್ತಿ ಇರುವುದು ಪ್ರಗತಿಯ ಲಕ್ಷಣವಲ್ಲವೇ ಎಂದು ಕೇಲಬಹುದು – ಆರ್ಟೆಗಾ ಇದನ್ನು ನಿರಾಕರಿಸುತ್ತಾನೆ. ಒಬ್ಬ ವೈಚಾರಿಕನಿಗೆ ಇರಬೇಕಾದ ಮೊಟ್ಟ ಮೊದಲನೆಯ ಗುಣ ಅವನು ಸತ್ಯವನ್ನು ಬಯಸಬೇಕು ಮತ್ತು ಈ ಸತ್ಯವನ್ನು ಅರಿಯುವ ಕ್ರಮಗಳಿಗೇ ತನ್ನನ್ನು ಅಧೀನಗೊಳಿಸಿಕೊಳ್ಳುವ ವಿನಯ ಅವನಿಗೆ ಇರಬೇಕು ಎಂಬುದು. ಅವನು ಕಂಡ ಸತ್ಯ ಒಂದು ಚರ್ಚೆಗಾಗಲೀ ಸಂವಾದಕ್ಕಾಗಲೀ ನಿಲುಕುವುದು ಯಾವಾಗ ಎಂದರೆ ಸತ್ಯಾಕಾಂಕ್ಷಿ ನ್ಯಾಯಸಮ್ಮತವಾಗಿರಬೇಕು ಎಂಬ ಅಪೇಕ್ಷೆ ಇಲ್ಲವೋ, ಎಲ್ಲಿ ನಮ್ಮ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಬಲ್ಲ ನಮ್ಮ ವೈಯಕ್ತಿಕ ತೀಟೆ ತೆವಲುಗಳನ್ನು ಮೀರಿದ ನಮಗಿಂತ ಮೇಲಿನ ತಾಣವೊಂದು ನಡುವೆ ಹೊಂದಾಣಿಕೆ ಇರಬೇಕೆಂಬ ಕಾಳಜಿಯೇ ಇಲ್ಲವೋ ಅಂತಲ್ಲಿ ಸಂಸ್ಕೃತಿ ಎಂಬುದು ಇರುವುದಿಲ್ಲ. ಒಂಟಿಯಾಗಿದ್ದಾಗ ಮುಖಹೀನರಾದವರು ಗುಂಪಿನಲ್ಲಿ ವ್ಯಾಘ್ರಮುಖಿಗಳಾಗುತ್ತಾರೆ.

ಸಂಸ್ಕೃತಿಯ ಬದಲಾಗಿ ಅಲ್ಲಿರುವುದು ಬರ್ಬರತೆ. ನೆಲೆಗಳ ಕಲ್ಪನೆ ಇದ್ದಲ್ಲಿ,  ತಾರತಮ್ಯ ವಿವೇಚನೆಯ ವಿನಯವಿದ್ದಲ್ಲಿ ಸಂಸ್ಕೃತಿ ಇರುತ್ತದೆ. ನೆಲೆಗಳ ಕಲ್ಪನೆ ಇಲ್ಲದಿರುವುದೇ ಬರ್ಬರತೆ. ಯೂರೋಪಿನಲ್ಲಿ ಫ್ಯಾಸಿಸ್ಟ್ ಆಡಳಿತ ಚಾಲ್ತಿಯಲ್ಲಿದ್ದಾಗ ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಒಂದು ವಾಗ್ವಾದದಲ್ಲಿ ನಿರ್ಧರಿಸಬೇಕೆಂಬ ಕಲ್ಪನೆಯೇ ಇರಲಿಲ್ಲ – ಬಲಾ ಚ ಪೃಥಿವೀ – ಈ ಭೂಮಿ ಬಲಿಷ್ಠರಿಗೆ ಸೇರಿದ್ದು – ಅಷ್ಟೇ ಆ ಕಾಲದಲ್ಲಿ ಆಳುವ ಜನಸಮೂಹಕ್ಕೆ ಸಾಕೆನ್ನಿಸಿತು. ಅದೇ ನಿಯಮಾತೀತವಾದ ಮೇಜಾರಿಟಿಯ ಆಡಳಿತ. ಮೆಜಾರಿಟಿಯ ಆಳ್ವಿಕೆಯೇ ಪ್ರಜಾತಂತ್ರವೆಂದು ತಿಳಿದಾಗ ಈ ಮೆಜಾರಿಟಿ ಪ್ರಶ್ನಾತೀತವೆಂದು ತಿಳಿಯುವುದು ಸಾಧ್ಯವೆ? ಅದೇ ನಮ್ಮ ಮುಂದಿರುವ ಸಮಸ್ಯೆ.

ಈ ಒಟ್ಟಾರೆ ಮನುಷ್ಯ ಏನನ್ನು ವಿಚಾರವೆಂದು ತಿಳಿಯುತ್ತಾನೋ ಅದು ವಿಚಾರವಲ್ಲ. ಅವನ ಹೊಟ್ಟೆಯೊಳಗಿನ ರಾವು ಹೊಮ್ಮಿಸುವ ಮಾತುಗಳು ಅಷ್ಟೇ.

ವಿಚಾರ ಎಂಬ ಒಂದು ಸಂಗತಿ ನಿಜವಾಗಬೇಕಾದರೆ ಅಂತಹ ವಿಚಾರವನ್ನು ಹುಟ್ಟಿಸುವ ಕಾರಣಗಳು ಇವೆ ಎಂಬ ಕಲ್ಪನೆ ಇರಬೇಕು. ಈ ಕಾರಣಗಳು ಪರಸ್ಪರ ವಿನಿಮಯ ಮಾಡಿಕೊಳ್ಳಬಲ್ಲ ಕಾರಣಗಳಾಗಿರಬೇಕು. ಈ ಸರ್ವಸಮ್ಮತವಾದ ಅಧಿಕಾರದ ಜಾಗದಲ್ಲಿ ಸಕಾರಣವಾಗಿ ಈ ವಿಚಾರ ಮಂಡಿತವಾಗಬೇಕು. ಅಂದರೆ ನಮ್ಮ ವಿಚಾರಗಳನ್ನು ನಾವು ಚರ್ಚಿಸುವಾಗ ಅವುಗಳನ್ನು ಹುಟ್ಟಿಸಿದ ಕಾರಣಗಳನ್ನೂ ನಾವು ಚರ್ಚಿಸುತ್ತೇವೆ ಎಂದರ್ಥ. ಆದರೆ ಈ ಒಟ್ಟಾರೆ ಮನುಷ್ಯ ತನ್ನ ಹೊರಗೆ ಯಾವ ಅಧಿಕಾರವನ್ನೂ ಗೌರವಿಸದವನಾದ್ದರಿಂದ ಈ ಚರ್ಚೆಯ ಗೊಡವೆಗೇ ಹೋಗುವುದಿಲ್ಲ. ಆದ್ದರಿಂದ ಜನಸಮೂಹ ಸನ್ನಿಯ ಬರ್ಬರತೆಯಲ್ಲಿ ಸಮುದಾಯದ ಮನುಷ್ಯನ ಕೊಡುಕೊಳ್ಳುವಿಕೆ ನಾಶವಾಗುತ್ತದೆ.

* * *

ಸಿಮೋನ್ ವೇಲ್ ಹೇಳಿದ್ದನ್ನು ಇಲ್ಲಿ ನೆನೆಯಬೇಕು. ದೇವರು ಒಂದು ಪ್ರಾಣಿಯಲ್ಲಿ, ಒಂದು ಮೃಗದಲ್ಲಿ, ಒಬ್ಬ ವ್ಯಕ್ತಿಯಲ್ಲಿ ಇರಬಹುದು. ಆದರೆ ಎಂದೆಂದೂ ಅವನು ಸಮೂಹವೊಂದರಲ್ಲಿ ಇರುವುದು ಸಾಧ್ಯವಿಲ್ಲ. ಜನಸಾಮಾನ್ಯರ ಬಗ್ಗೆ ಪ್ರೀತಿ ಗೌರವಗಳು ಇದ್ದು, ಈ ಸಾಮಾನ್ಯರೇ ಸಮೂಹಗೊಂಡಾಗ ಏನಾಗಬಹುದೆಂದು ತಿಳಿದವರು, ಭಯಗ್ರಸ್ತರಾದವರು ಮಾತ್ರ ಹೇಳಬಲ್ಲ ಮಾತು ಇದು.

೨೦೦೭

* * *