ಅಡಿಗರ ಪ್ರೇರಣೆಯಿಂದಾಗಿ, ಜೊತೆಗೆ ಲೋಹಿಯಾರಿಂದಾಗಿ ನಾನು ಓದಲು ತೊಡಗಿದ ಇತಿಹಾಸಕಾರ ಆರ್ನಾಲ್ಡ್‌ ಜೆ ಟಾಯ್ನ್‌ಬಿ ಕೂಡಾ ಆರ್ಟೆಗಾ ಗ್ಯಾಸೆಯಂತೆಯೇ ನನ್ನ ಬರವಣಿಗೆಯ ಮೇಲೆ ಪರಿಣಾಮವನ್ನು ಬೀರಿದವನು. (A study of History ೧೯೬೧) ನಾನೇನೂ ಟಾಯ್ನ್‌ಬಿಯನ್ನು ಆಳವಾಗಿ ಅರ್ಥಮಾಡಿಕೊಂಡಿದ್ದೆ ಎಂದು ಹೇಳುತ್ತಿಲ್ಲ. ಬರಹಗಾರನಾದವನೊಬ್ಬ ಅಪಾರ್ಥ ಮಾಡಿಕೊಂಡಾಗಲೂ ಇರುವ ವಿಚಾರ ನಮಗೆ ಅಗ್ಯವಾದ ಇನ್ನೇನೋ ಆಗಿ ರೂಪಾಂತರಗೊಂಡು ಇನ್ನೊಂದು ಆಯಾಮವನ್ನೇ ಪಡೆದು ಉಪಯುಕ್ತವಾಗುವುದು ಇದೆ.

ಟಾಯ್ನ್‌ಬಿ ಬರೆಯುವ ಚರಿತ್ರೆ, ದೇಶಗಳ ಮತ್ತು ರಾಷ್ಟ್ರಗಳ ಚರಿತ್ರೆಯಲ್ಲ; ನಾಗರಿಕತೆಗಳ ಚರಿತ್ರೆ. ಪ್ರತೀ ನಾಗರಿಕತೆಯೂ ಕೆಲವು ಸವಾಲುಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ. ನಿರ್ವಹಣೆಗೆ ಅಸಾಧ್ಯವಾದ ಸವಾಲಾದರೆ ನಾಗರಿಕತೆಗಳು ಸಾಯುತ್ತವೆ. ಯಾರೋ ಕೊಂದಿದ್ದರಿಂದ ನಾಗರಿಕತೆಗಳು ಸಾಯುವುದಿಲ್ಲ; ಆತ್ಮ ಹತ್ಯೆಯಿಂದ ನಾಗರಿಕತೆಗಳು ಸಾಯುವುದು ಎಂದು ಟಾಯ್ನ್‌ಬಿ ತಿಳಿಯುತ್ತಾನೆ. ಗರ್ವದ ಅತಿರೇಕಕ್ಕೆ ಏರಿದ ರೋಮನ್ ನಾಗರಿಕತೆ ನಾಶವಾದದ್ದು ಹೀಗೆ, ತನ್ನ ಅತಿರೇಕದಿಂದಾಗಿಯೇ ಇಡೀ ಜಗತ್ತನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂಬ ಮಾರುಕಟ್ಟೆ ದುರಾಸೆಯ ಇಂದಿನ ಅಮೆರಿಕ ಕೂಡ ಆತ್ಮಹತ್ಯೆಯ ದಾರಿಯಲ್ಲಿಯೇ ಇರಬಹುದು. ಅಥವಾ ಜಾಗತಿಕ ತಾಪಮಾನ ಹೆಚ್ಚು ಮಾಡಿಸುವ ಅಮೇಕರಿಕಾದ ಜೀವನಕ್ರಮವನ್ನು ಮಾರುಕಟ್ಟೆಯ ರಾಜಕೀಯ ಇಡೀ ಜಗತ್ತಿನ ಜೀವನಕ್ರಮವಾಗಿ ಮಾಡಲು ಹೋಗಿ ಈ ಪ್ರಪಂಚವನ್ನು ನಾವೆಲ್ಲರೂ ಕೂಡಿ ನಾಶಮಾಡಬಹುದು. ಚರಿತ್ರೆಯಲ್ಲಿ ಕಾಣಸಿಗುವ ೨೨ ನಾಗರಿಕತೆಗಳಲ್ಲಿ ೧೯ ನಾಗರಿಕತೆಗಳು ಅಮೆರಿಕಾದಷ್ಟು ಅನೀತಿವಂತವಾದಾಗ ನಾಶಗೊಂಡವು ಎನ್ನುತ್ತಾನೆ ಟಾಯ್ನ್‌ಬಿ. ತಮಾಷೆಯಾಗಿ ಹೀಗೂ ಹೇಳುತ್ತಾನೆ. ಒಂದು ಪುಟ್ಟ ಕೋಣೆಯಲ್ಲಿ ಬೃಹತ್ ಗಾತ್ರದ ನಾಯಿಯೊಂದಿದೆ. ಅದು ಸ್ನೇಹಸೂಚಕವಾಗಿ ತನ್ನ ಬಾಲವನ್ನು ಆಡಿಸುತ್ತ ಇದೆ. ಹೀಗೆ ಬಾಲವಾಡಿಸಿ ಪುಟ್ಟ ಕೋಣೆಯಲ್ಲಿ ಇರುವ ಕುರ್ಚಿಗಳನ್ನೆಲ್ಲ ಬೀಳಿಸುತ್ತ ಇದೆ. ಅಂತಹ ನಾಯಿ ಅಮೆರಿಕಾ.

ಅನೇಕ ನಾಗರಿಕತೆಗಳು ನಾಶದ ಅಂಚಿನಲ್ಲಿದ್ದಾಗ ಆ ನಾಗರಿಕತೆಗಳ ಒಳಗೆ ಒಂದು ಇಂಟರ್ನಲ್ ಪ್ರೊಲಿಟೇರಿಯಟ್ (ಅಂದರೆ ತುಳಿಯಲ್ಪಟ್ಟ ಒಂದು ಸೃಜನಶೀಲ ಗುಂಪು) ಇರಬಹುದೆಂದೂ ಅವು ತಿಳಿಯುತ್ತಾನೆ. ಉದಾಹರಣೆಗೆ ರೋಮನ್ ಚಕ್ರಾಧಿಪತ್ಯದ ಅವನತಿಯ ಕಾಲದಲ್ಲಿ ಯೇಸುಕ್ರಿಸ್ತ ಮತ್ತು ಅವನ ಸಂಗಡಿಗರು ಹೀಗೊಂದು ಇಂಟರ್ನಲ್ ಪ್ರೊಲಿಟೇರಿಯಟ್ ಆಗಿದ್ದರು. ಅಂದರೆ ಆ ಕಾಲದ ಆ ನಾಗರಿಕತೆಯ ಸೃಜನಶೀಲ ದಲಿತರು ಇವರು. ಎಲ್ಲೆಲ್ಲೂ ಇದು ನಿಜ, ತಮ್ಮ ಮೂಲ ಮಾತೃಕೆಯಂತೆ ಇದ್ದ ಪರಬ್ರಹ್ಮನ ಕಲ್ಪನೆಯನ್ನೇ ಯಜ್ಞಯಾಗಾದಿಗಳಲ್ಲಿ ಮತ್ತು ರಾಜ್ಯ ವೈಭವದಲ್ಲಿ ಭಾರತ ಮೆರೆಯುತ್ತಿದ್ದ ಕಾಲದಲ್ಲಿ ಸುಮಾರು ೨೫೦೦ ವರ್ಷಗಳ ಹಿಂದೆ ಗೌತಮ ಬುದ್ಧ ಮತ್ತು ಅವನ ಸಂಗಡಿಗರು ಇಡೀ ನಾಗರಿಕತೆಯನ್ನು ಪುನಶ್ಚೇತನಗೊಳಿಸಬಲ್ಲ ದಾರ್ಶನಿಕರಾದರು. ಭಾರತದ ಆಗಿನ ಅಧಿಕಾರಶಾಹಿಯ ಹೊರಗಿನವರಾದ ಸೃಜನಶೀಲ ಅಲ್ಪಸಂಖ್ಯಾತರು ಇವರು.

ನಮ್ಮ ಕರ್ನಾಟಕವನ್ನೇ ನೋಡಿ, ಬಸವ, ಅಲ್ಲಮ, ಅಕ್ಕ ಇಂಥವರು ನಮ್ಮ ಕರ್ನಾಟಕದ ನಾಗರಿಕತೆಯ ಒಳಗೆ ಬದುಕಿದ ಸೃಜನಶೀಲ ಅಲ್ಪಸಂಖ್ಯಾತರೇ ಬಿಜ್ಜಳನ ಕಾಲದಲ್ಲಿ.

ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯದ ಒಳಗೆ ಇದ್ದ ಇಂಥದೇ ಒಂದು ಸೃಜನಶೀಲಶಕ್ತಿ ಎಂದರೆ ಗಾಂಧಿಯದು. ದಕ್ಷಿಣ ಆಫ್ರಿಕಾದಲ್ಲಿ ಮೊದಲನೇ ದರ್ಜೆಯ ರೈಲಿನಿಂದ ಹೊರ ನೂಕಲ್ಪಟ್ಟ ಗಾಂಧಿಯ ಮನಸ್ಸಿನಲ್ಲಿ ತನ್ನನ್ನು ನೂಕಿದವರ ಮೇಲೆ ಮಾತ್ರ ಸಿಟ್ಟು ಹುಟ್ಟಿದ್ದಲ್ಲ; ನಮ್ಮ ದೇಶದಲ್ಲೂ ನಾವು ಅಸ್ಪೃಶ್ಯರನ್ನು ನಾವೇ ಅವಹೇಳನ ಮಾಡುತ್ತೇವೆಂಬ ಭಾವನೆಯೂ ಹುಟ್ಟಿದಾಗ, ಕೋಪ ಮತ್ತು ಕರುಣೆ ಕೂಡಿಕೊಂಡು ಇಡೀ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅದರ ಒಳಗೇ ಹುಟ್ಟಿ ಬೆಳೆದ ಸವಾಲಾಯಿತು.

ಈ ಸವಾಲನ್ನು ಎದುರಿಸಿ ನಾಗರಿಕತೆಯನ್ನು ಉಳಿಸಬಲ್ಲ ಒಳಗಿನ ಶಕ್ತಿಗಳಿಗೆ ಅಗತ್ಯವಾದದ್ದು ನಿರಂತರ ಕ್ರಿಯಾಶೀಲತೆ ಮಾತ್ರವಲ್ಲ; ಸಮಾಧಾನದ ತಪಸ್ಸೂ ಈ ಶಕ್ತಿಯನ್ನು ಕಾಪಾಡಿ ಬೆಳೆಸುತ್ತದೆ. ಆದ್ದರಿಂದ ನಾಗರಿಕತೆಯನ್ನು ರಕ್ಷಿಸಲು ಒಳಪ್ರವೇಶ ಶಕ್ತಿಯನ್ನು ಕಾಪಾಡಿ ಬೆಳೆಸುತ್ತದೆ. ಆದ್ದರಿಂದ ನಾಗರಿಕತೆಯನ್ನು ರಕ್ಷಿಸಲು ಒಳಪ್ರವೇಶ ಮಾಡುವ ಶಕ್ತಿಗಳು ಕೆಲವು ಕಾಲ ನಾಗರಿಕತೆಗೆ ಹೊರಗಿನವರಾಗಿದ್ದು, ಅಂತ್ಯಜರಂತೆ ಇದ್ದು, ಎಲ್ಲ ಕಷ್ಟಗಳನ್ನೂ ಮೂದಲಿಕೆಯನ್ನೂ ಸಹಿಸಿಕೊಂಡಿರುವುದನ್ನು ಕಲಿತಿರುತ್ತವೆ…. ಟಾಯ್ನ್‌ಬಿ ಇದನ್ನು ವಿತ್‌ಡ್ರಾಯಲ್ ಅಂಡ್ ರಿಟರ್ನ್‌ಎಂದು ಕರೆಯುತ್ತಾನೆ. ಯೇಸುಕ್ರಿಸ್ತ ಕ್ರಿಯಾಶೀಲವಾಗುವುದಕ್ಕಿಂತ ಮುಂಚೆ ಕೆಲವು ಕಾಲ ಅಜ್ಞಾತನಾಗಿದ್ದ. ಗೌತಮ ಬುದ್ಧ ಅರಮನೆ ಬಿಟ್ಟು ನಡೆದವನು ಕೆಲವು ಅಜ್ಞಾತನಾಗಿದ್ದ. ಪಾಂಡವರು ಅಜ್ಞಾತವಾಸ ಮಾಡಿದರೆಂದು ಮಹಾಭಾರತ ಹೇಳುತ್ತದೆ. ಪೈಗಂಬರನೂ ಅಜ್ಞಾತನಾಗಿ ದೇವರ ಕರೆಗೆ ಕಾದು ಇದ್ದ. ಗಾಂಧಿ ದೂರದ ಆಫ್ರಿಕಾದಲ್ಲಿ ಭಾರತಕ್ಕೆ ಅಜ್ಞಾತನಾಗಿ ಇದ್ದ.

ಅಡಿಗರು ತಮ್ಮ ರಾಮನವಮಿಯ ದಿವಸದಲ್ಲಿ ಹೀಗೆ ಬರೆಯುತ್ತಾರೆ ವಾಲ್ಮೀಕಿಯ ಬಗ್ಗೆ: ಅವನು ರಾಮಾಯಣವನ್ನು ಸೃಷ್ಟಿಸುವುದಕ್ಕಿಂತ ಮುನ್ನ ತನ್ನಸುತ್ತ ಹುತ್ತ ಕಟ್ಟುವಷ್ಟು ಅಜ್ಞಾತನಾಗಿ, ಮೌನವಾಗಿ ಇದ್ದನೆಂಬುದು ಈ ಸಾಲುಗಳಲ್ಲಿ ವರ್ಣಿತವಾಗಿದೆ:

ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತಿತೇನು
ಪುರುಷೋತ್ತಮನ ಅಂಥ ರೂಪು ರೇಖೆ?

ಈ ಸೃಜನಶೀಲ ಅಲ್ಪಸಂಖ್ಯಾತರು ಯಶಸ್ಸನ್ನು ಪಡೆದು ಎಲ್ಲರ ಮೇಲೆ ಅಧಿಕಾರ ಚಲಾಯಿಸುವ ಮದಿಸಿದ ಅಲ್ಪಸಂಖ್ಯಾತರೂ ಆಗುವುದುಂಟು. ತಮ್ಮ ಪೂರ್ವಕಾಲದ ಸಾಧನೆಯನ್ನೇ ಜಪಿಸುತ್ತ, ತಮ್ಮ ಸಾಧನೆಯ ಬಗ್ಗೆ ತಾವೇ ಹೆಮ್ಮೆಪಡುವ ಇವರನ್ನು ತಾವು ಮೇಲಿನವರು ಎಂದುಕೊಳ್ಳುವವರಲ್ಲಿ ನಾವು ಕಾಣುತ್ತೇವೆ ಅಲ್ಲವೆ? ಇದೊಂದು ಅವನತಿಯ ಸೂಚನೆ. ‘ವಿಪ್ರಾಃ ಪಶ್ಚಿಮ ಬುದ್ಧಯಃ’ ಎನ್ನುವುದು ಈಕಾರಣಕ್ಕೇ ಇರಬಹುದು. ಪುರೋಹಿತರ ನಂಬಿ ಪಶ್ಚಿಮ ಬುದ್ಧಿಯಾದೆವೋ ಎನ್ನುತ್ತಾರೆ ಅಡಿಗರು. (ಹಿಂದೆ ಹಿಂದೆ ನೋಡುತ್ತ ನಡೆಯುವ ಸತತ ಪಶ್ಚಾತ್ತಾಪದ ಬುದ್ಧಿ + ಪಶ್ಚಿಮದ ಕಡೆ ಮುಖಮಾಡಿಕೊಂಡ ದಾಸ್ಯಬುದ್ದಿ) ಇವರಿಗೆ ಎದುರಾಗಿ ಇನ್ನೊಂದು ಕಾಯಕಲ್ಪವಾಗಿ ಸೃಜನಶೀಲ ಅಲ್ಪಸಂಖ್ಯಾತರು ಇದೇ ನಾಗರಿಕತೆಯ ಅಂತಃಸತ್ವದ ಮಂಥನದಿಂದ ಹುಟ್ಟಿಕೊಳ್ಳಬಹುದು.

ಸವಾಲುಗಳನ್ನು ನಾವು ಎದುರಿಸುವಾಗ ನಮಗೆ ನಮ್ಮ ಪೂರ್ವಿಕರ ವಿವೇಕವೂ ಪರಂಪರೆಯ ಒಳಗಿನ ಅಂತಹ ನೆನಪುಗಳೂ ಅಗತ್ಯವಾಗುತ್ತವೆ. ಮೊನ್ನೆ ಬೆಂಗಳೂರಿನಲ್ಲಿ ಚೀನೀ ವಿದ್ವಾಂಸನೊಬ್ಬ (ಪ್ರೊಫೆಸರ್ ವಾಂಗ್ ಹುಯಿ) ತನ್ನ ದೇಶ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ. ಅವನು ಕೊಟ್ಟ ಒಂದು ಉದಾಹರಣೆ ನನಗೆ ಒಂದು ಗಮನಾರ್ಹ ರೂಪಕ ಎನ್ನಿಸಿತು. ಚೀನಾ ವರ್ಲ್ಡ್‌ಟ್ರೇಡ್ ಆರ್ಗನೈಸೇಶನ್‌ಗೆ ಸಹಿ ಮಾಡಿದ ನಂತರ ಪ್ರಪಂಚದ ಕಣ್ಣಿನಲ್ಲಿ ಶ್ರೀಮಂತ ರಾಷ್ಟ್ರವಾಗಿದೆ. ಆದರೆ ಈ ಜಾಗತೀಕರಣದಲ್ಲಿ ಶ್ರೀಮಂತಗೊಂಡ ಚೀನಾದಲ್ಲಿ ರೈತರು ಕಡುಬಡವರಾಗಿದ್ದಾರೆ. ಉಚಿತವಾಗಿ ಸಿಗುತ್ತಿದ್ದ ವೈದ್ಯಕೀಯ ಸಹಾಯ ನಿಂತುಹೋಗಿ ಅದು ಖಾಸಗೀಕರಣಗೊಂಡು ಶ್ರೀಮಂತರಿಗೆ ಮಾತ್ರ ಲಭ್ಯವಾಗುವಂತಾಗಿದೆ. ರೈತಾಪಿ ಜೀವನದಲ್ಲಿ ಹೊಟ್ಟೆ ಹೊರೆಯುತ್ತಿದ್ದವರು ಗ್ರಾಮಗಳನ್ನು ತೊರೆದು ಈಗ ಹೊಟ್ಟೆಪಾಡಿಗಾಗಿ ಸಿಟಿಗಳಲ್ಲಿ ತುಂಬ ಕಡಿಮೆ ಸಂಬಳ ಪಡೆಯುವ ಚೀಪ್ ಕೂಲಿಗಳಾಗಿದ್ದಾರೆ. ಆದ್ದರಿಂದ ಚೀನಾ ಮಾರುಕಟ್ಟೆಯಲ್ಲಿ ತಾವು ತಯಾರಿಸುವ ಸಾಮಾನುಗಳನ್ನು ಬೇರೆ ದೇಶಗಳಿಗಿಂತ ಕಡಿಮೆ ಬೆಲೆಗೆ ಮಾರುವುದು ಸಾಧ್ಯವಾಗಿದೆ. ವಿದ್ಯಾಭ್ಯಾಸವೂ ಖಾಸಗೀಕರಣಗೊಂಡಿದೆ.

ವಿದ್ಯೆ ಮತ್ತು ಆರೋಗ್ಯ ಸರಕಾರದ ಹಿಡಿತದಿಂದ ತಪ್ಪಿ ಹೋದಾಗ ಆಗಬಹುದಾದ ಎ೪ಲ್ಲಾ ಅನಿಷ್ಟಗಳೂ ಚೀನಾವನ್ನು ಕಾಡುತ್ತಿವೆ. ಸಾರ್ಸ್‌ಎಂಬ ವೈರಸ್ ರೋಗ ವೈದ್ಯ ಲಭ್ಯವಿರುವುದು ಹೆಚ್ಚಾಗಿ ದೊಡ್ಡ ಪಟ್ಟಣಗಳಲ್ಲಿ ಮಾತ್ರ. ಗ್ರಾಮಾಂತರ ಪ್ರದೇಶಗಳಿಗೆ ಸಾರ್ಸ್ ಹರಡಿದ್ದೇ ಆದರೆಏನು ಮಾಡಬೇಕು? ಯಾರಿಗೂ ತಿಳಿಯದು. ಇದರ ಬಗ್ಗೆ ಚೀನೀ ವಿದ್ವಾಂಸ ಹೂಯಿ ತಾನೇ ಕರೆದ ಒಂದು ಸಮಾಲೋಚನೆಯ ಸಭೆಯಲ್ಲಿ ನಡೆದ ಒಂದು ಘಟನೆಯನ್ನು ಮೊನ್ನೆ ಬೆಂಗಳೂರಿನಲ್ಲಿ ವಿವರಿಸಿದ. ಎಲ್ಲ ವೈದ್ಯರ ಒಂದು ಸಭೆಯನ್ನು ಕರೆಯಲಾಯಿತು. ಈ ಅಲೋಪತಿಯವರ ನಡುವೆ ಚೀನಾದ ಸ್ವದೇಶಿ ವೈದ್ಯ ಪಂಡಿತನೊಬ್ಬನೂ ಆಮಂತ್ರಿತನಾಗಿದ್ದ. ಅವನು ವಿನಯಪೂರ್ವಕವಾಗಿ ಎಲ್ಲರನ್ನು ಉದ್ದೇಶಿಸಿ ಹೀಗೆ ಹೇಳಿದನಂತೆ: ‘ಅಲೋಪತಿಯ ನಿಮಗೆ ಈ ವೈರಸ್ ಯಾವುದೆಂದು ಗೊತ್ತಿಲ್ಲ. ಇದಕ್ಕೆ ಯಾವ ಮದ್ದನ್ನು ಕೊಡಬೇಕೆಂಬುದೂ ನಿಮಗೆ ಗೊತ್ತಿಲ್ಲ. ನಮ್ಮ ವೈದ್ಯಪದ್ಧತಿಯಲ್ಲಂತೂ ನಮಗೆ ಯಾವ ವೈರಸ್‌ಗಳ ಜ್ಞಾನವೂ ಇಲ್ಲ. ಆದ್ದರಿಂದ ಯಾವ ಮದ್ದನ್ನು ಯಾವ ಕಾಯಿಲೆಗೆ ಕೊಡಬೇಕೆಂಬುದೂ ಆಂಟಿಬಯಾಟಿಕ್ ಉಪಯೋಗಿಸುವ ನಿಮ್ಮ ಹಾಗೆ ನಮಗೆ ಗೊತ್ತಿಲ್ಲ…

‘ನಮ್ಮ ಪುರಾತನ ವೈದ್ಯಶಾಸ್ತ್ರವೇ ಬೇರೆ ಬಗೆಯದು. ನಮ್ಮ ದೇಹವೇ ತನಗೆ ಬಂದ ಆಪತ್ತನ್ನು ಹೇಗೆ  ಎದುರಿಸಬೇಕೆಂಬ  ಜ್ಞಾನವನ್ನು ನಮಗೆ ಗೊತ್ತಿಲ್ಲದಂತೆ ಪಡೆದಿರುತ್ತದೆ. ದೇಹಕ್ಕಿರುವ ಈ ವಿಶೇಷ ಶಕ್ತಿಯನ್ನು ಇನ್ನಷ್ಟು ಗಟ್ಟಿ ಮಾಡುವ ಉಪಾಯಗಳು ನಮಗೆ ಗೊತ್ತು. ಅಲ್ಲದೆ ಈ ಸ್ವದೇಶೀ ಉಪಾಯಗಳು ನಿಮ್ಮ ಮದ್ದಿನಂತೆ ದುಬಾರಿ ಕೂಡಾ ಅಲ್ಲ. ಆದ್ದರಿಂದ ಸಾರ್ಸ್‌ವಿರುದ್ಧದ ಹೋರಾಟದಲ್ಲಿ ಪ್ರಾಯಶಃ ನಮ್ಮ ವೈದ್ಯಶಾಸ್ತ್ರವೇ ನಿಮ್ಮದಕ್ಕಿಂತ ಉತ್ತಮವಾಗಿರಬಹುದು… ಅಲ್ಲವೆ?’

ಪ್ರತೀ ನಾಗರಿಕತೆಯೂ ಸ್ವಾನುಭವದಲ್ಲಿ ಕಲಿಯುತ್ತಲೇ ಇರುವ ಸ್ವದೇಶಿಯಾದ ಬದುಕಿನ ವಿವೇಕವನ್ನು ಕಳೆದುಕೊಂಡಾಗ, ಅಥವಾ ನಿರಂತರ ಪ್ರಗತಿಯ ಗರ್ವದಲ್ಲಿ ಮರೆತುಬಿಟ್ಟಾಗ, ನಾಗರಿಕತೆ ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತದೆ. ಈಗಿನ ಭಾರತವೂ ಆಧುನಿಕತೆಯ ಬೆನ್ನಟ್ಟಿ ಅಮೆರಿಕದಂತೆ ಆಗಲು ಸಿದ್ಧವಾಗಿ ನಿಂತಿರುವಾಗ ನಮಗೆ ಟಾಯ್ನ್‌ಬಿ ಆಲೋಚಿಸುತ್ತಿದ್ದ ಕ್ರಮ ಮುಖ್ಯವೆನಿಸುತ್ತದೆ.

ಪಾಶ್ಚಿಮಾತ್ಯ ನಾಗರಿಕತೆಯ ಬಹು ನಿಷ್ಠುರ ವಿಮರ್ಶಕರೆಂದರೆ ಟಾಯ್ನ್‌ಬಿ, ಓಸ್ವಾಲ್ಡ್ ಸ್ಪೆಂಗ್ಲರ್ (Oswald spengler – Decline of the West ಬರೆದಾತ) ಲಾರೆನ್ಸ್, ಯೇಟ್ಸ್, ಎಲಿಯಟ್‌ರಂತಹವರು. ಇಪ್ಪತ್ತನೇ ಶತಮಾನವನ್ನು ಎಲಿಯಟ್ ಕಾಣುವ ಬಗೆ ಅದೊಂದು ಮರುಭೂಮಿಯೆಂದು. ಅವನ ಪ್ರಖ್ಯಾತ ಪದ್ಯದ ಹೆಸರು, The Waste Land.

ಈ ಪದ್ಯದ ಕೊನೆಯಲ್ಲಿ ಗಂಗೆ ಬತ್ತಿದೆ; ಹಿಮವಂತನ ಮೇಲೆ ಮೋಡಗಳು ದಟ್ಟವಾಗಿ ಕವಿದಿವೆ. ಧಧಧ ಎಂಬ ಗುಡುಗು ಕೇಳುತ್ತದೆ. ಗುಡುಗಿನ ‘ಧಧಧಧ’ ನಾದವನ್ನು ಅವರವರ ಸ್ವಭಾವಕ್ಕೆ ತಕ್ಕಂತೆಯೂ, ಅಗತ್ಯಕ್ಕೆ ತಕ್ಕಂತೆಯೂ ದೇವದಾನವಮಾನವರು ಅರ್ಥೈಸಿಕೊಳ್ಳುತ್ತಾರೆ. ದತ್ತ(ಕೊಡು) ದಯಧ್ವಂ (ದಯೆತೋರು) ದಮ್ಯತ (ನಿಗ್ರಹಿಸು) ಆಸೆಬುರುಕ ಮನುಷ್ಯರಿಗೆ ಕೊಡು ಎಂದ ಈ ಗುಡುಗು ಅರ್ಥವಾದರೆ, ಕ್ರೂರಿಗಳಾದ ರಾಕ್ಷಸರಿಗೆ ದಯೆತೋರು ಎಂದು ಅರ್ಥವಾಗುತ್ತದೆ, ಲಂಪಟರಾದ ದೇವತೆಗಳಿಗೆ ನಿಗ್ರಹಿಸು ಎಂದು ಅರ್ಥವಾಗುತ್ತದೆ. ನಮ್ಮ ಶತಮಾನದಲ್ಲಿ ಮಾನವ ಏಕಕಾಲಕ್ಕೆ ಆಸೆಬುರುಕನೂ, ಕ್ರೂರಿಯೂ, ಲಂಪಟನೂ ಆದ್ದರಿಂದ ದತ್ತ ದಯಧ್ವಂ ದಮ್ಯತ ಮನುಷ್ಯನಿಗೇ ಅನ್ವಯವಾಗುತ್ತದೆ.

ಭೂತದ ಆರಾಧನೆಯಾಗಲೀ ಹಳಹಳಿಕೆಯಾಗಲೀ ಆಗದ, ಭವಿಷ್ಯದ ಲಂಪಟ ಕನಸುಗಾರಿಕೆಯೂ ಆಗದ, ವರ್ತಮಾನದಲ್ಲಿ ಕಾಲದ ಸವಾಲಿಗೆ ಜವಾಬಾಗುವ ಶ್ರೇಷ್ಠ ಚಿಂತನೆ ಈ ಕಾಲದಲ್ಲಿ ಆಳುವ ವರ್ಗಗಳಿಗೆ ಬೇಡವಾಗಿದೆ. ಏನನ್ನಾದರೂ ಇವತ್ತಲ್ಲ ನಾಳೆ ನಮ್ಮ ಟೆಕ್ನಾಲಜಿ ಮತ್ತು ನಮ್ಮ ವಿಜ್ಞಾನ ಬಗೆಹರಿಸಬಲ್ಲುದು ಎಂಬ ನಂಬಿಕೆ ಅಮರ್ತ್ಯರಾಗಲು ಬಯಸುತ್ತ ಇರುವ ಮರ್ತ್ಯರಿಗೆ ಇದೆ.

ಆದರೆ ಸರ್ವನಾಶದ ಪ್ರಳವನ್ನು ಕಾಣುವ ಯೇಟ್ಸ್‌ನಿಗೂ ಯುರೋಪು ಜನ್ಮವಿತ್ತಿದೆ. ಉತ್ತಮರಲ್ಲಿ ಮನೋನಿಶ್ಚಯವಿಲ್ಲ; ಆಧಮರಲ್ಲಿ ಭಾವೋನ್ಮಾದವಿದೆ. ಸರ್ವಗ್ರಾಹಿಯಾದ ಕೇಂದ್ರಶಕ್ತಿ ಕಾಣೆಯಾಗಿದೆ; ಎಲ್ಲವೂ ಉದುರಿ ಬೀಲುತ್ತಿದೆ. ಕೇಳುವವರಿಲ್ಲ; ಹೇಳುವವರಿಲ್ಲ. ಎಲ್ಲೆಲ್ಲೂ ಅರಾಜಕತೆ ಮೆರೆದಿದೆ. ಇಪ್ಪತ್ತು ಶತಮಾನಗಳ ನಿದ್ದೆ ದುಃಸ್ವಪ್ನವಾಗಿದೆ. ಸಿಂಹದ ಘನ ಘೋರ ಉನ್ಮತ್ತ ದೇಹದ, ಲೆಕ್ಕಾಚಾರದ ಮನುಷ್ಯನ ತಲೆಯ, ಕರುಣೆಯಿಲ್ಲದ, ಏನನ್ನೂ ಕಾಣದಂತೆ ನಿರ್ದಯವಾಗಿ ದಿಟ್ಟಿಸುವ ನೋಟದ ಮೃಗವೊಂದು ಮರುಳುಗಾಡಿನಲ್ಲಿ ತೊಡೆಯೆತ್ತಿ ತೆವಳುತ್ತ ನಮ್ಮೆಡೆ ಬರುತ್ತ ಇದೆ. ಇದು ದುಷ್ಟ ಶಿಕ್ಷಣ – ಶಿಷ್ಟರಕ್ಷಣದ ನರಸಿಂಹನಲ್ಲ; ಶಿಷ್ಟನಾಶದ ಸಿಂಹವರ.

ಕ್ರಿಸ್ತನ ನಂತರದ ಎರಡನೇ ಅವತಾರವನ್ನು (Second coming) ಹಿಟ್ಲರನ ಕಾಲದಲ್ಲಿ ಯೇಟ್ಸ್ ಕಂಡದ್ದು ಹೀಗೆ. ಆದರೆ ಜಗತ್ತಿನ ಆದ್ಯಂತ ನೆಲ ಮತ್ತು ಆಕಾಶಗಳ ಪಿಸುಮಾತನ್ನು ಕೇಳಿಸಿಕೊಳ್ಳಬಲ್ಲ ಸೃಜನಶೀಲರ ಸಣ್ಣ ಪಡೆಯೊಂದು ತಾನಾಡಬೇಕಾದ್ದನ್ನು ಆಡುತ್ತಲೂ ಇದೆ.

೧೧೧೨೨೦೦೭

* * *