ಬಲಿ ತೆಗೆದುಕೊಳ್ಳುವುದಕ್ಕೂ ಅಭಿವೃದ್ಧಿ ಕಾರ್ಯಗಳಿಗೂ ಸಂಬಂಧವಿದೆಯೆಂಬ ಜಾನಪದ ಗಾಢ ನಂಬಿಕೆಯೊಂದಿದೆ. ‘ಕೆರೆಗೆಹಾರ’ವೆಂಬ ಕನ್ನಡದ ಒಂದು ಜಾನಪದ ಗೀತೆಯ ಬಗ್ಗೆ ಬರೆಯುತ್ತ ಸುಬ್ಬಣ್ಣ ಈ ಪ್ರಶ್ನೆ ಎತ್ತುತ್ತಾರೆ. ಯಜಮಾನ ಕಟ್ಟಿಸಿದ ಕೆರೆಯಲ್ಲಿ ನೀರು ತುಂಬಲು ಸರ್ವರ ಹಿತಕ್ಕಾಗಿ ಅವರ ಸೊಸೆ ಬಲಿಯಾಗುತ್ತಾಳೆ. ಯಾರನ್ನೂ ನಿಂದಿಸದ, ದುರಂತದ ದುಃಖವನ್ನು ನಿಯಮವೆನ್ನುವಂತೆ ಎದುರಿಸುವ ಮಾನವ ಅನುಕಂಪದ ವಿಚಿತ್ರ ಕಥೆ ಇದು. ತರುಣಿಯಾದ ತನ್ನ ಒಲವಿನ ಹೆಣ್ಣನ್ನು ಬಲಿಕೊಡುವುದನ್ನು ಕನಸಿನಲ್ಲಿ ಕಂಡ ದೂರದಲ್ಲೆಲ್ಲೋ ಇರುವ ಸಾಹಸಿಯಾದ ಅವಳ ಗಂಡ ಮಾದೇವರಾಯ ಆತಂಕದ ಅವಸರದಲ್ಲಿ ‘ಹತ್ತಿದ ಬೆತ್ತಲೆ ಕುದುರಿ’ ಎಂದು ಈ ಗೀತೆ ಮೊದಲಾಗುತ್ತದೆ. ನಾವು ಎಳೆಯರಿದ್ದಾಗ ತೀರ್ಥಹಳ್ಳಿಯಲ್ಲಿ ಆಗಿನ ಕಾಲದಲ್ಲಿ ವಿಶೇಷವೆನ್ನಿಸುವ ಒಂದು ಕಮಾನು ಸೇತುವೆಯನ್ನು ಕಟ್ಟಲು ಶುರುವಾದ ಸಂದರ್ಭದಲ್ಲಿ ಹಳ್ಳಿಯ ಹೆಂಗಸರು ನಡುವೆ ಕಂಬಗಳಿಲ್ಲದೆ ತೂಗುವಂತೆ ಕಟ್ಟುವ ಕಮಾನನ್ನು ನಿಲ್ಲುವಂತೆ ಮಾಡಲು ಮಕ್ಕಳ ಬಲಿಯನ್ನು ಅದು ಕೇಳುತ್ತದೆಯೆಂತೆ ಎಂದು ಭಯಪಡುತ್ತಿದ್ದುದು ನೆನಪಾಗುತ್ತದೆ.

ಜಾನಪದ ನಂಬಿಕೆಯಲ್ಲಿ ಗಾಢವಾಗಿ ಊರಿರುವ ಈ ಭಯ ನಮ್ಮ ಗಿರಿಜನರ ಬಗ್ಗೆಯಂತೂ ಈ ಕಾಲದಲ್ಲಿ ಅಕ್ಷರಶಃ ನಿಜವಾಗಿದೆ. ಇಲ್ಲಿ ಕಾಣೆಯಾಗಿರುವುದು ಸರ್ವಹಿತದ ಜಾನಪದ ಕಲ್ಪನೆ. ನಾವು ಕಟ್ಟುತ್ತಿರುವ ಡ್ಯಾಮ್‌ಗಳಿಂದಾಗಿ, ನಾವು ಬೆಳೆಸುತ್ತಿರುವ ಸಿಟಿಗಳಿಂದಾಗಿ ತಮ್ಮ ಭೂಮಿಯನ್ನು ಕಳೆದುಕೊಳ್ಳುತ್ತ ಇರುವ ಬಡ ರೈತರು ಪರ್ಯಾಯ ಭೂಮಿ ಸಿಕ್ಕರೂ ತಮ್ಮ ಕುಟುಂಬಗಳಿಂದ, ತಾವು ನಂಬುವ ಕ್ಷೇತ್ರ ದೇವತೆಗಳಿಂದ, ತಮಗೆ ಒಗ್ಗಿದ ಜೀವನಕ್ರಮಗಳಿಂದ ದೂರವಾಗುತ್ತಾರೆ. ಹೇಗೂ ಜಾನಪದ ಕಥೆ ಸೂಚಿಸುವಂತೆ ಬಲಿಯಾಗುತ್ತಾರೆ. ದುಃಖಿಗಳಾಗುತ್ತಾರೆ.

ಆದರೆ ನಮ್ಮ ಕಾಲದ ದುರದೃಷ್ಟವೆಂದರೆ ಹೀಗೆ ಅವರು ನೆಲೆಸಬಲ್ಲ ಭೂಮಿ ಸಿಗುವುದೂ ಅಪರೂಪ. ಲಂಚರುಷುವತ್ತುಗಳನ್ನು ಕೊಟ್ಟಾದ ಮೇಲೆ ಉಳಿದ ಒಂದಿಷ್ಟು ಹಣವನ್ನು ಅವರು ಪಡೆದು ಸಿಟಿಗಳಲ್ಲಿ ದಿನಗೂಲಿಗಳಾಗಿ ಬದುಕಬೇಕಾಗಿ ಬರುವ ಸಂದರ್ಭಗಳೆ ಹೆಚ್ಚು.

* * *

ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್‌ಉಪವಾಸ ಕುಳಿತು ಇಂದಿಗೆ (೧೧ – ೦೪ – ೨೦೦೬) ಹದಿನಾಲ್ಕು ದಿನಗಳಾಗಿವೆ. ಭಾರತದ ಇಂದಿನ ಸಂದರ್ಭದಲ್ಲಿ ಅತ್ಯಂತ ಮುಖ್ಯವಾದದ್ದು ಬಲಿ/ಅಭಿವೃದ್ಧಿಯ ನಡುವಿನ, ಅನಿವಾರ್ಯವಾಗಬೇಕಿಲ್ಲದ, ಸಂಬಂಧ. ಈ ಪ್ರಶ್ನೆಯನ್ನು ಪರೋಕ್ಷವಾಗಿ ನಮಗೇ ನಾವು ಕೇಳಿಕೊಳ್ಳುವಂತೆ ಮೇಧಾ ಒತ್ತಾಯಿಸುತ್ತಲೇ ಇದ್ದಾರೆ – ಹಲವು ವರ್ಷಗಳಿಂದ. ಅಭಿವೃದ್ಧಿ, ಮತ್ತು ಈ ಉಳ್ಳವರ ಲಂಪಟತನದ ಐಷಾರಾಮ ಜೀವನದ ಅಭಿವೃದ್ಧಿಗಾಗಿ ನಾವು ತೆಗೆದುಕೊಳ್ಳುವ ಬಲಿ – ಇದು ಸರ್ವಜನಹಿತದ ದೃಷ್ಟಿಯಿಂದ ಎಷ್ಟು ಅನಿವಾರ್ಯ?

ಗಾಂಧಿಜಿ ಸತ್ಯಾಗ್ರಹವನ್ನು ಕಲಿತದ್ದು ಅವರ ತಾಯಿಯಿಂದ. ಅವರ ತಂದೆಯ ವರ್ತನೆಯಲ್ಲಿ ಕೊಂಚ ಸ್ವೇಚ್ಛಾಚಾರವಿತ್ತೆಂದು ಹೇಳುತ್ತಾರೆ. ಇದರಿಂದ ಬೇಸತ್ತಾಗಲೆಲ್ಲಾ, ತಾಯಿ ಉಪವಾಸ ಕೂರುತ್ತಿದ್ದರಂತೆ. ಮೌನವಾಗಿ ಇದ್ದು ಬಿಡುತ್ತಿದ್ದರಂತೆ. ಇಲ್ಲಿ ಬಹಳ ಮುಖ್ಯವಾದ್ದು ಉಪವಾಸದ ಮೂಲಕ ಮಾಡುವ ಪ್ರತಿಭಟನೆ ಅಸತ್ಯದ ಮೇಲೆ ನಿಂತಿದ್ದರೆ ಅದರಿಂದ ನೋವಾಗುವುದು ಪ್ರತಿಭಟನಾಕಾರನಿಗೇ ಹೊರತು ಎದುರಾಳಿಗೆ ಅಲ್ಲ ಎಂಬುದು. ಆದರೆ ಅದು ಸತ್ಯದ ಮೇಲೆ ನಿಂತಿದ್ದ ಪಕ್ಷದಲ್ಲಿ ಯಾರ ವಿರುದ್ಧ ನಾವು ಪ್ರತಿಭಟನೆ ಮಾಡುತ್ತೇವೋ ಅವರಿಗೆ ಈ ಸತ್ಯ ಗೋಚರವಾಗುವಂತೆ ಮಾಡುವ ನೈತಿಕ ಆಗ್ರಹ ಈ ಉಪವಾಸ. ಮೇಧಾ ಪಾಟ್ಕರ್‌ಉಪವಾಸದ ಮೂಲಕ ಯಾರನು ವಿರೋಧಿಸುತ್ತಿದ್ದಾರೋ ಅವರೆಲ್ಲರೂ ತಾನು ಕಂಡ ಸತ್ಯವನ್ನು ಕಾಣದೇ ಹೋದ ತನ್ನ ಕುಟುಂಬ ಎಂಬ ಭಾವನೆ ಇರದಿದ್ದರೆ ಈ ಉಪವಾಸ ಅರ್ಥಹೀನವಾಗುತ್ತಿತ್ತು.

* * *

ಮೇಧಾ ಪಾಟ್ಕರ್‌ ಅವರ ಸತ್ಯಾಗ್ರಹ ಗಾಂಧೀಜಿಯವರು ಕೇರಳದಲ್ಲಿ ನಡೆಸಿದ ವೈಕಂ ಸತ್ಯಾಗ್ರಹವನ್ನು ನೆನಪು ಮಾಡುತ್ತಿದೆ. ಗಾಂಧೀಜಿ ವೈಕಂ ಸತ್ಯಾಗ್ರಹದಲ್ಲಿ ಹರಿಜನರ ದೇವಾಲಯ ಪ್ರವೇಶವನ್ನೂ ಕೇಳಲಿಲ್ಲ. ಅವರು ಕೇಳಿದ್ದು ಸರಕಾರೀ ರಸ್ತೆಯ ಮೇಲೆ ಎಲ್ಲರಿಗೂ ನಡೆಯುವ ಅಧಿಕಾರವಿದೆ; ಪೂಜೆಯ ಸಮಯದಲ್ಲಿ ಅಸ್ಪೃಶ್ಯಯ ಈ ರಸ್ತೆಯ ಮೇಲೆ ನಡೆಯಬಾರದು ಎಂಬುದು ಸರಕಾರದ ಕಾನೂನನ್ನೇ ಉಲ್ಲಂಘಿಸಿದಂತೆ, ಆದ್ದರಿಂದ ತಾನು ಸರಕಾರದ ಕಾನೂನನ್ನು ಎತ್ತಿ ಹಿಡಿಯಲು ವೈಕಂಗೆ ಬಂದಿರುವುದಾಗಿ ಹೇಳಿದ್ದರು.

ಆಣೆಕಟ್ಟಿನ ಎತ್ತರವನ್ನು ಹೆಚ್ಚಿಸುವುದಕ್ಕಿಂತ ಆರು ತಿಂಗಳ ಮುಂಚೆ ಅದರಿಂದ ನಿರಾಶ್ರಿತರಾಗುವ ಎಲ್ಲರಿಗೂ ಜೀವನೋಪಾಯದ ನೈಜ ನೆಲೆಗಳನ್ನು (ಪರಿಹಾರ ರೂಪದ ಹಣವನ್ನಲ್ಲ) ಒದಗಿಸಬೇಕೆಂದು ಇಲ್ಲಿ ಮೇಧಾ ಪಾಟ್ಕರ್‌ಉಪವಾಸ ಕುಳಿತು ಆಗ್ರಹಿಸುತ್ತಿದ್ದಾರೆ. ಇದು ಸುಪ್ರೀಂ ಕೋರ್ಟ್‌‌ನ ಆದೇಶವೂ ಆಗಿದೆ. ಆದ್ದರಿಂದ ಕೆಲವರು ಅಪಪ್ರಚಾರ ಮಾಡುವಂತೆ ಮೇಧಾ ಮಾಡುತ್ತಿರುವುದು ಬ್ಲಾಕ್‌ಮೇಲ್ ಅಲ್ಲ.

ಇದಕ್ಕಿಂತ ಹಿಂದೆ ಮೇಧಾ ಪಾಟ್ಕರ್ ಹಲವು ಪ್ರತಿಭಟನೆಗಳನ್ನು ಮಾಡಿದ್ದಾರೆ. ಮೊದಲು ಈ ಬಗೆಯ ಅಣೆಕಟ್ಟುಗಳಿಂದ ಯಾವ ಪ್ರಯೋಜನವೂ ಇಲ್ಲ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಪ್ರತಿಭಟಿಸಿದ್ದರು. ಅಣೆಕಟ್ಟುಗಳು ಕೆಲವು ವರ್ಷಗಳ ನಂತರ ತಮ್ಮ ಉಪಯೋಗಗಳನ್ನು ಕಳೆದುಕೊಳ್ಳುತ್ತವೆ ಎಂಬುದು ವೈಜ್ಞಾನಿಕವಾಗಿ ಸತ್ಯವೆಂದು ಈಗ ಸಾಬೀತಾಗಿದೆ. ಈ ಹೋರಾಟದಲ್ಲಿ ಮೇಧಾ ಗೆಲ್ಲಲಿಲ್ಲ; ಆದರೆ ಕೈಚೆಲ್ಲಿ ಅವರು ಕೂರಲಿಲ್ಲ. ಕಟ್ಟಿಮುಗಿದ ಅಣೆಕಟ್ಟಿನ ಎತ್ತರವನ್ನಾದರೂ ಹೆಚ್ಚಿಸಲೇಬಾರದೆಂದೂ, ನೀರಿಲ್ಲದ ಪ್ರದೇಶಗಳಿಗೆ ನೀರು ಒದಗಿಸಲು ಪರ್ಯಾಯ ವಿಧಾನಗಳನ್ನು ಕಂಡುಕೊಳ್ಳಬೇಕೆಂದೂ ಅವರು ಹೋರಾಟ ಮಾಡಿದರು. ಸರ್ಕಾರ ಅವರ ಮಾತನ್ನು ಕೇಳಲಿಲ್ಲ. ಆಗ ಅವರು ತಮ್ಮ ಹೋರಾಟಕ್ಕೆ ಕೋರ್ಟಿನ ಬೆಂಬಲ ಸಿಗಬಹುದೆಂದು ತಿಳಿದು ಕೋರ್ಟಿಗೆ ಹೋದರು. ಹೋದದ್ದೇ ತಪ್ಪಾಯಿತೋ ಏನೋ? ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಬಹುದು ಎನ್ನುವ ತೀರ್ಮಾನವನ್ನು ಸುಪ್ರೀಂ ಕೋರ್ಟು ಕೊಟ್ಟಿತು. ಜೊತೆಗೆ ಭೂಮಿ ಕಳೆದುಕೊಂಡ ಜನರಿಗೆ ಪರ್ಯಾಯವಾಗಿ ಆರು ತಿಂಗಳ ಮುನ್ನವೆ ಜಮೀನು ಕೊಡಬೇಕೆಂಬ ಶರತ್ತು ಹಾಕಿತ್ತು.

ಆ ಸಂದರ್ಭದಲ್ಲಿ ದೆಹಲಿಗೆ ಸಹಸ್ರಾರು ಗಿರಿಜನರೊಡನೆ ಆಕೆ ಬಂದು ಒಂದು ಸಭೆ ನಡೆಸಿದರು. ಈ ಸಭೆಗೆ ನನ್ನನ್ನೂ ಕರೆದಿದ್ದರು. ದಿಲ್ಲಿಗೆ ಆಗ ವಿಶ್ವಬ್ಯಾಂಕ್‌ನ ಅಧ್ಯಕ್ಷರು ಬಂದಿದ್ದರು. ನನಗಿನ್ನೂ ಕಣ್ಣಿಗೆ ಕಟ್ಟುವಂತಿದೆ ಆ ಚಿತ್ರ.

ಮೇಧಾ ತನ್ನ ಸಂಗಡಿಗರೊಡನೆ ವಿಶ್ವಬ್ಯಾಂಕ್‌ನ ಮುಖ್ಯಸ್ಥ ಇಳಿದುಕೊಂಡಿದ್ದ ಹೊಟೇಲಿಗೆ ಹೋಗಿ ಧರಣಿ ಕುಳಿತು ಆತ ಹೊರಗೆ ಬರುವಂತೆ ಮಾಡಿದರಲ್ಲದೆ, ಹೊರಬಂದವನನ್ನು ಬಿಸಿಲಲ್ಲಿ ನಿಲ್ಲಿಸಿ ಅಲ್ಲಿ ಸೇರಿದ್ದ ಗಿರಿಜನರ ಜತೆ ಒಂದು ಸಂವಾದವನ್ನು ಏರ್ಪಡಿಸಿದರು. ಏಕೆಂದರೆ ನರ್ಮದಾ ಅಣೆಕಟ್ಟಿನಿಂದ ದೂರವುಳಿದಿದ್ದ ವಿಶ್ವಬ್ಯಾಂಕ್‌ಮತ್ತೆ ತನ್ನ ಆಸಕ್ತಿಯನ್ನು ತೋರಿಸಲು ಆರಂಭಿಸಿತ್ತು. ಮೇಧಾ ಅದನ್ನು ಪ್ರತಿಭಟಿಸಿದ ರೀತಿ, ಆಕೆ ತನ್ನ ಎಲ್ಲಾ ಸೌಜನ್ಯವನ್ನು ಉಳಿಸಿಕೊಂಡೇ ವಿಶ್ವಬ್ಯಾಂಕ್‌ನ ಅಧ್ಯಕ್ಷ ಬಿಸಿಲಲ್ಲೇ ನಿಂತು ಆದಿವಾಸಿಗಳ ಪ್ರಶ್ನೆಗೆ ಉತ್ತರ ಕೊಡುವಂತೆ ಮಾಡಿದ್ದು ನನ್ನ ಕಣ್ಣಿಗೆ ಕಟ್ಟಿದಂತೆ ಇದೆ.

ಆನಂತರ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌‌ನ ನಾಲ್ಕು ಮಂದಿ ನಿವೃತ್ತ ನ್ಯಾಯಾಧೀಶರ ಜತೆ ನಾವು ಕೆಲವು ಜನ ಕುಳಿತು ಮರು ವಿಚಾರಣೆ ನಡೆಸಿದೆವು. ಅಲ್ಲಿ ಸೇರಿದ್ದ ಗಿರಿಜನರ ನಾಯಕರು ಬಂದು ಆ ಅಣೆಕಟ್ಟನ್ನು ಯಾಕೆ ಎತ್ತರಿಸಬಾರದು ಎಂಬುದಕ್ಕೆ ತಮ್ಮ ಕಾರಣಗಳನ್ನು ಕೊಟ್ಟರು. ಅವೆಲ್ಲವನ್ನೂ ಕೇಳಿ ನಾವು ಅಣೆಕಟ್ಟನ್ನು ಎತ್ತರಿಸುವುದರಿಂದ ನಿಜವಾಗಿ ಯಾವ ಪ್ರಯೋಜನವೂ ಇಲ್ಲ ಎಂಬ ನಿರ್ಣಯಕ್ಕೆ ಬಂದೆವು.

ಇಲ್ಲಿ ಹೇಳಲೇ ಬೇಕಾದ ಒಂದು ಮಾತು ಇದೆ. ತೀರ್ಪು ಕೊಡಲು ಕೂತ ಜನರ ಮಧ್ಯೆ ಅಣೆಕಟ್ಟು ಬೇಕೆಂದು ವಾದಿಸುತ್ತಿದ್ದ ಗುಜರಾತ್‌ನ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಇದ್ದರು. ಅಣೆಕಟ್ಟು ಬೇಕೆಂದು ವಾದಿಸುತ್ತಿದ್ದ ಅವರು ಕೊನೆ ಕೊನೆಯಲ್ಲಿ ಪಶ್ಚಾತ್ತಾಪ ಪಟ್ಟು ತಾನು ವಾದಿಸಿದ್ದು ತಪ್ಪೆಂದು ಅರ್ಥ ಮಾಡಿಕೊಂಡಿದ್ದರು. ಆದರೂ ಅವರು ಸಂಪೂರ್ಣ ಬದಲಾಗಿರಲಿಲ್ಲ. ಅಣೆಕಟ್ಟು ಬೇಕು. ಆದರೆ ಅದು ಇಷ್ಟು ದೊಡ್ಡದಾಗಿರಬಾರದು ಎಂಬ ತೀರ್ಮಾನಕ್ಕೆ ಬಂದಿದ್ದರು. ಆದರೆ ಅವರೂ ಅಂದು ಅಣೆಕಟ್ಟಿನ ಎತ್ತರವನ್ನು ವಿರೋಧಿಸಿ ನಮ್ಮ ಜೊತೆಯೇ ತೀರ್ಪಿತ್ತರು. ಮುಳುಗಡೆಯಾದ ಪ್ರದೇಶದ ಬಡಜನರನ್ನು ಸರ್ಕಾರ ನಡೆಸಿಕೊಂಡ ರೀತಿಯಿಂದ ಅವರು ರೋಸಿದ್ದರು. ಈ ತೀರ್ಪು ನೀಡಲು ಕುಳಿತವರಲ್ಲಿ ಎಲ್ಲರೂ ಮೇಧಾ ಅವರಂತೆ ಯೋಚಿಸುವರಾಗಿರಲಿಲ್ಲ. ಆದರೂ ಮೇಧಾ ಅವರ ನಿಲುವು ಸರಿಯೆಂದೂ ಸುಪ್ರೀಂ ಕೋರ್ಟ್‌ತೀರ್ಪು ಅಷ್ಟು ಸರಿಯಲ್ಲವೆಂದೂ ಎಲ್ಲರ ಭಾವನೆಯಾಗಿತ್ತು.

ಸುಪ್ರೀಂಕೋರ್ಟ್‌‌ನ ತೀರ್ಪು ಬಂದ ನಂತರ ಮೇಧಾ ಅದನ್ನು ಒಪ್ಪಿಕೊಂಡೇ ಹೋರಾಟ ಮುಂದುವರಿಸುತ್ತಿದ್ದಾರೆ. ಕೇಂದ್ರದ ಜಲಸಂಪನ್ಮೂಲ ಸಚಿವ ಸೈಫುದ್ದೀನ್ ಸೋಜ್ ಕೂಡಾ ಅಣೆಕಟ್ಟನ್ನು ಎತ್ತರಿಸುವುದು ಇಷ್ಟು ಆತುರದಲ್ಲಿ ಮಾಡಬೇಕಾದ ಕಾರ್ಯವಲ್ಲ ಎಂದು ಹೇಳಿದ್ದಾರೆ. ಆದರೂ ಆತುರದಲ್ಲಿ ಈ ಕೆಲಸ ನಡೆಯುತ್ತಿದೆ ಯಾಕೆ?

ಈ ಪ್ರಶ್ನೆಯ ಉತ್ತರ ಇಂದಿನ ವ್ಯವಸ್ಥೆ ಯಾವ ಪಕ್ಷದ್ದೇ ಆಗಲಿ, ಅದು ಏನಕೇನ ಭಾರತ ಶ್ರೀಮಂತ ರಾಷ್ಟ್ರವಾಗಬೇಕೆಂಬ ಪಾಶ್ಚಿಮಾತ್ಯ ಮಾದರಿಯ ಅಭಿವೃದ್ಧಿ ರಾಜಕಾರಣದ ನೆವದಲ್ಲಿ ಅನೈತಿಕವಾಗಿದೆ ಎಂಬುದರಲ್ಲಿದೆ. ಒಂದು ಕಾಲದಲ್ಲಿ ನಮ್ಮ ಆಡಳಿತದಲ್ಲಿ ಜಾತಿಯೇ ಮುಖ್ಯವಾಗಿತ್ತು ಎಂಬ ಆರೋಪವಿತ್ತು. ಜಾತಿ ಮುಖ್ಯವಾಗಿದ್ದಾಗ ಕಡೆಯ ಪಕ್ಷ ತನ್ನ ಜಾತಿಯಲ್ಲಿರುವ ಬಡಜನರನ್ನಾದರೂ ಮುಟ್ಟಬೇಕೆನ್ನುವ ಒತ್ತಾಯ ಆ ಜಾತಿವಾದಿ ರಾಜಕಾರಣಿಗೆ ಇರುವುದು ಸಾಧ್ಯವಿತ್ತು. ಇದರರ್ಥ ಜಾತಿವಾದಿ ರಾಜಕಾರಣಿಗಳೆಲ್ಲಾ ಹೀಗಿದ್ದರು ಎಂದಲ್ಲ. ಅಂಥದ್ದೊಂದು ಅಲ್ಪವಾದ ಸಂಕುಚಿತ ಕುಟುಂಬ ಭಾವನೆಯ ಸಾಧ್ಯತೆಯಾದರೂ ಈ ಜಾತಿ ರಾಜಕಾರಣದಲ್ಲಿ ಇತ್ತು ಎಂದು ತೋರುತ್ತದೆ. ಜಾತಿ ರಾಜಕಾರಣ ಮಾಡಬಹುದಾದ ಅನಾಹುತಕ್ಕಿಂತ ಘೋರವಾದ ಅಮಾನವೀಯತೆ ಇರುವುದು ಹಣದ ಮೇಲೆ ನಿಂತಿರುವ ಇಂದಿನ ರಾಜಕೀಯದಲ್ಲಿ. ಹಣದಷ್ಟು ಅಮೂರ್ತವಾದ ಕಾಮರೂಪಿಯಾದ ರಾಕ್ಷಸೀಯತೆ ಇನ್ನೊಂದಿಲ್ಲ. ಜಾತಿ ಮೂರ್ತವಾದದ್ದು. ಸ್ಥಳೀಯವಾದ್ದು. ಅಲ್ಲಿ ಪ್ರೀತಿ, ದ್ವೇಷ ಇತ್ಯಾದಿ ಮಾನವೀಯವಾದ ಭಾವನೆಗಳು ಇರುತ್ತವೆ. ಅವುಗಳನ್ನು ಗ್ರಹಿಸಿ ಅವುಗಳ ವಿರುದ್ಧ ಹೋರಾಡಬಹುದು.

ಆದರೆ ಹಣ ಎಂಬುದು ಒಂದು ಅಮೂರ್ತವಾದ ಮೌಲ್ಯ. ಅಲ್ಲಿ ಮಾನವೀಯ ಭಾವನೆಗಳೇ ಇಲ್ಲ. ಎಲ್ಲವೂ ವ್ಯಾಪಾರಕ್ಕಿರುವ ಅವಕಾಶಗಳು. ಪ್ರೇಮ, ಯುದ್ಧ, ಊಟ, ಫ್ಯಾಶನ್, ಮಕ್ಕಳ ಆಟದ ಸಾಮಗ್ರಿಗಳು, ಕಾಮುಕತೆ, ದೇವತಾದರ್ಶನ, ಯೋಗ – ಎಲ್ಲವೂ ವ್ಯಾಪಾರ. ತಂದೆ ಮಕ್ಕಳ, ಗಂಡ ಹೆಂಡಿರ ಸಂಬಂಧವೂ ವ್ಯವಹಾರ.

ಇವತ್ತು ಯಾರೇ ಅಧಿಕಾರಕ್ಕೆ ಬಂದರೂ ಎಷ್ಟು ಹೊಸ ರಸ್ತೆಗಳನ್ನು ನಿರ್ಮಾಣ ಮಾಡಬಹುದು? ಎಷ್ಟು ಹೊಸ ಸೇತುವೆಗಳನ್ನು ನಿರ್ಮಾಣ ಮಾಡಬಹುದು? ಎಷ್ಟು ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಬಹುದು? ಎಷ್ಟು ಹೊಸ ಅಣೆಕಟ್ಟುಗಳನ್ನು ನಿರ್ಮಾಣ ಮಾಡಬಹುದು? ಎಷ್ಟು ಹೊಸ ಅಣೆಕಟ್ಟುಗಳನ್ನು ನಿರ್ಮಾಣ ಮಾಡಬಹುದು? ಎಂದು ಯೋಚಿಸುತ್ತಾರೆ. ಹಾಗೆಂದು ಇವರಾರಿಗೂ ಸರ್‌ ಎಂ. ವಿಶ್ವೇಶ್ವರಯ್ಯನವರಿಗಿರುವ ತುರ್ತು ಇರುವುದಿಲ್ಲ. ವಿಶ್ವೇಶ್ವರಯ್ಯ ತಾನು ಜನ ಹಿತಕ್ಕಾಗಿ ಇದನ್ನು ಮಾಡುತ್ತಿದ್ದೇನೆಂದು ಪ್ರಾಮಾಣಿಕವಾಗಿ ಭಾವಿಸಿದ್ದರು. ಈಗಿನ ರಾಜಕಾರಣ ಜನಹಿತವನ್ನು ಮಾತಿನಲ್ಲಿ ಸಾರುತ್ತದೆಯೇ ಹೊರತಾಗಿ ತಾನು ತೆಗೆದುಕೊಳ್ಳುವ ನಿರ್ಧಾರಗಳಿಗೆ ಜನ ಬೆಂಬಲ ಅಗತ್ಯವೆಂದು ಭಾವಿಸುವುದೂ ಇಲ್ಲ. ಏಕೆಂದರೆ ಈ ಎಲ್ಲಾ ನಿರ್ಮಾಣ ಕಾಮಗಾರಿಗಳಿಂದ ಅವರಿಗೆ ಕಮಿಷನ್ ದೊರೆಯುತ್ತದೆ. ಈ ಲಂಚಕ್ಕಾಗಿ ಎಲ್ಲರೂ ‘ಅಭಿವೃದ್ಧಿ’ಯನ್ನು ಕೈಗೆತ್ತಿಕೊಳ್ಳುತ್ತಾರೆ.

ಪರದೇಶಗಳಿಂದ ಎಷ್ಟು ಹಣ ಯಾವ ಕಾರಣಕ್ಕಾಗಿ –  ಸಾಲವಾಗಿ, ದಾನವಾಗಿ –  ಬಂದರೂ ಅದು ಅಲ್ಲಲ್ಲಿ ಸೋರಿ ಜನರಿಗೆ ತಲುಪುವುದು ಒಂದು ಸಣ್ಣ ಪಾಲು ಮಾತ್ರ. ಈ ಸೋರಿ ಹೋಗುವುದೆಲ್ಲವೂ ರಾಜಕಾರಣಿಗಳ/ವ್ಯವಹಾರಿ ವ್ಯಾಪಾರಿಗಳ/ಬ್ಯೂರೋಕ್ರೇಟರು ಗಳ ಕಿಸೆಗೆ ಸೇರುತ್ತದೆ. ಹಣದ ವಿಷಯಕ್ಕೆ ಬಂದಾಗ ಆಳುವ/ಆಳಲಿರುವ ಎಲ್ಲರಲ್ಲೂ ಒಂದು ಒಮ್ಮತವಿರುವಂತೆ ತೋರುತ್ತದೆ. ಭಾರತದಲ್ಲಿ ತನ್ನ ಜಾತಿಯ ಪ್ರೀತಿ ಅಪ್ರಸ್ತುತವಾಗುವಷ್ಟು ಹಣ ಹೆಚ್ಚಿಸುವ ವ್ಯಾಪಾರ ಬೆಳೆದಿದೆ. ನಮ್ಮ ಸ್ವಂತಿಕೆಯ ಗುರುತುಗಳಾದ ನಮ್ಮ ಮನುಷ್ಯ ಸಹಜ ಇತಿಮಿತಿಗಳನ್ನು ಕರಗಿಸಿ, ಯಾವ ಆತ್ಮೀಯ ಭಾವನೆಗಳೂ ಇಲ್ಲದ ಜಾಗತಿಕ ಬೊಂಬೆಗಳನ್ನಾಗಿ ನಮ್ಮನ್ನು ಎರಕಹೊಯ್ಯುತ್ತಿರುವ ಇಂದಿನ ಎರಡು ಸಾಧನಗಳೆಂದರೆ : ಅಮೆರಿಕನ್ ಇಂಗ್ಲಿಷ್‌ ಮತ್ತು ಅಮೆರಿಕನ್ ಡಾಲರ್.

* * *

ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವುದನ್ನು ಕೇಂದ್ರ ಜಲಸಂಪನ್ಮೂಲ ಸಚಿವರೇ ಪ್ರಿಮೆಚೂರ್ ಎಂದು ಹೇಳಿದ್ದಾರೆ. ೩೫,೦೦೦ ಸಂಸಾರಗಳು ತಮ್ಮ ಮನೆ, ಜಮೀನು, ತಮ್ಮ ಜೀವನಾಧಾರ, ತಮ್ಮ ಆಪ್ತರ ಜತೆಗೆ ಬದುಕುತ್ತಿದ್ದಾಗ ಅವರಿಗಿದ್ದ ಸೌಕರ್ಯಗಳು ಎಲ್ಲವನ್ನೂ ಕಳೆದುಕೊಳ್ಳಲಿದ್ದಾರೆ. ಮಾರ್ಚ್‌೩೧ – ೨೦೦೧ ರಂದು ಮಹಾ ಲೇಖಪಾಲರು (ಸಿಎಜಿ) ಗುಜರಾತಿನ ಆರ್ಥಿಕ ವ್ಯವಸ್ಥೆ ಅತ್ಯಂತ ದುಸ್ಥಿತಿಯಲ್ಲಿದೆ ಎಂದಿದ್ದರು. ಅವರು ಸರದಾರ್ ಸರೋವರ್ ನರ್ಮದಾ ನಿಗಮ್ ಲಿಮಿಟೆಡ್ ಮಾಡಿರುವ ಸಾಲ, ಅದರ ಮೇಲೆ ಪಾವತಿಸುತ್ತಿರುವ ಬಡ್ಡಿಯನ್ನು ಈ ಸಿಎಜಿ ವರದಿ ಖಂಡಿಸಿದೆ. ೨೦೦೧ ರ ಮಾರ್ಚ್‌೩೧ ರವರೆಗೆ ಈ ಅಣೆಕಟ್ಟಿಗೆ  ಆಗಿರುವ ಖರ್ಚು ೧೦,೯೭೮ ಕೋಟಿ ರೂಪಾಯಿಗಳು. ಇದರ ಶೇಕಡಾ ೨೨ರಷ್ಟು ಭಾಗ ಸಾಲದ ನಿರ್ವಹಣೆ ಮತ್ತು ಬಡ್ಡಿ ಪಾವತಿಗಾಗಿಯೇ ಖರ್ಚಾಗುತ್ತಿದೆ. ಅಣೆಕಟ್ಟು ಕಟ್ಟುವುದಕ್ಕೆ ೧೯೯೪ರಿಂದಲೂ ಮೇಧಾ ಚಳವಳಿ ಅಡ್ಡಗಾಲು ಹಾಕುತ್ತಿರುವುದರಿಂದ ಇಷ್ಟೆಲ್ಲಾ ಖರ್ಚಾಯಿತು ಎಂದು ಗುಜರಾತ್ ಸರಕಾರ ಹೇಳುತ್ತಿದೆ. ಈ ಬಗೆಯ ಆರೋಪಗಳನ್ನು ಮಾಡುತ್ತಿರುವುದು ಕೇವಲ ಗುಜರಾತ್‌ನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮಾತ್ರ ಅಲ್ಲ. ಅಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಕೂಡಾ.

ಕೆಲವು ವಾರಗಳ ಹಿಂದೆ ನರ್ಮದಾ ಅಣೆಕಟ್ಟಿನ ವಿಚಾರದಲ್ಲಿ ಗುಜರಾತ್‌ ವಿಧಾನ ಸಭೆಯಲ್ಲಿ ಚರ್ಚೆಯಾದಾಗ ಕಾಂಗ್ರೆಸ್‌ನ ಮುಖ್ಯ ಸಚೇತಕ ಬಲವಂತ್ ಸಿಂಗ್ ರಾಜಪೂತ್ ಎನ್ನುವವರು ಹೀಗೆ ಹೇಳಿದರು; ‘ನಮ್ಮ ರಾಜ್ಯ ಬಡ್ಡಿ ಕೊಡಲು ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳನ್ನು ಖರ್ಚುಮಾಡುತ್ತಿದೆ. ಕೇಂದ್ರ ಜಲಸಂಪನ್ಮೂಲ ಸಚಿವರು ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವುದನ್ನು ಪುನರ್ ಪರಿಶೀಲಿಸುವುದಾಗಿ ಹೇಳಿದ್ದಾರೆ. ಇದಕ್ಕೆ ನಾವು ಅವಕಾಶ ಮಾಡಿಕೊಡಕೂಡದು. ಏಕೆಂದರೆ ಇದರಿಂದ ಬಡ್ಡಿ ಕೊಡಲು ಇನ್ನಷ್ಟು ಹಣ ಖರ್ಚಾಗುತ್ತದೆ’. ಹೀಗೆ ಮೋದಿ ಸರಕಾರವನ್ನು ಅದು ಬಡ್ಡಿ ಪಾವತಿಗೆ ಅನಗತ್ಯವಾಗಿ ಹಣ ಖರ್ಚು ಮಾಡುತ್ತಿದೆ ಎಂದು ಜರೆಯುತ್ತಲೇ ಅಣೆಕಟ್ಟಿನ ಎತ್ತರವನ್ನು ಬೆಂಬಲಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.

ಸುಮಾರು ಸಾವಿರಾರು ಕೋಟಿ ರೂಪಾಯಿಗಳು ಬಡ್ಡಿಯಾಗಿಯೇ ಸಂದಿದೆ. ಅಂದರೆ ಸಾಲಕೊಟ್ಟ ಧನವಂತರಿಗೆ ಇದು ಕಿಂಚಿತ್ತೂ ತಡವಾಗದಂತೆ ಸಂದಾಯವಾಗಿದೆ. ಆದರೆ ಭೂಮಿ ಕಳೆದುಕೊಂಡವರಿಗೆ ಸಿಕ್ಕಿರುವುದು ಕಿಂಚಿತ್ತು ಮಾತ್ರ.

***

ಮೇಧಾ ಪಾಟ್ಕರ್ ಅವರ ಉಪವಾಸ ಸತ್ಯಾಗ್ರಹದ ಹಿಂದೆ ನಮ್ಮನ್ನು ಆಳುವವರಲ್ಲಿ ಒಳ್ಳೆತನ ಇರಬಹುದು ಎಂಬ ನಿರೀಕ್ಷೆ ಇದೆ. ದುರಂತವೆಂದರೆ ಪ್ರಜಾತಂತ್ರದಲ್ಲಿ ಇಂಥ ನಿರೀಕ್ಷೆಯನ್ನು ಇಟ್ಟುಕೊಂಡಿರುವವರ ಮಾತನ್ನು ಸರಕಾರ ಕೇಳುತ್ತಿಲ್ಲ. ಬದಲಿಗೆ ಬಂದೂಕು ಹಿಡಿದು ಕೊಲ್ಲುವುದರ ಮುಖಾಂತರ ಕ್ಷೋಭೆಯನ್ನು ಉಂಟುಮಾಡಿ ಕ್ರಾಂತಿಯನ್ನು ಸಾಧ್ಯವಾಗಿಸುತ್ತೇವೆಂಬ ನಕ್ಸಲೈಟರ ಹಿಂಸಾಕ್ರಮಗಳಿಗೆ ಕೂಡಲೇ ಎಚ್ಚೆತ್ತು ಸರಕಾರ ಪ್ರತಿಕ್ರಿಯಿಸುತ್ತದೆ. ಈ ಮೂಲಕ ಪ್ರಜಾತಾಂತ್ರಿಕವಾದ ಒತ್ತಡಗಳು, ಚಳವಳಿಗಳು ನಿರುಪಯುಕ್ತ ಎನ್ನುವುದನ್ನು ನಮ್ಮ ವ್ಯವಸ್ಥೆಯೇ ಹೇಳುತ್ತಿದೆ. ಇದಾಗ ಕೂಡದು ಎಂದು ನಂಬುವ ನಾವೆಲ್ಲವರೂ ಮೇಧಾ ಪಾಟ್ಕರ್‌ಅವರ ಸತ್ಯಾಗ್ರಹ ನಮ್ಮೆಲ್ಲರ ಪರವಾಗಿ, ಪ್ರಜಾತಂತ್ರ ವ್ಯವಸ್ಥೆಯ ಕ್ರಿಯಾಶೀಲವಾದ ಸ್ಪಂದನಕ್ಕಾಗಿ ನಡೆಯುತ್ತಿರುವ ಸತ್ಯಾಗ್ರಹ ಎಂದು ತಿಳಿಯಬೇಕು.

ಈಗ ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ಹಿಂಸೆ ಜರ್ಮನಿಯಲ್ಲಿ ಹಿಟ್ಲರ್‌ಮಾಡಿದ ಹಿಂಸೆಗಿಂತ ಜೀವನ ಕ್ರಮಗಳ ನಾಶದ ದೃಷ್ಟಿಯಿಂದ ಕಡಿಮೆಯಾದದ್ದಲ್ಲ. ರಷ್ಯಾದಲ್ಲಿ ಸ್ಟಾಲಿನ್‌ಕೂಡಾ ಅಭಿವೃದ್ಧಿಗಾಗಿಯೇ ಎಲ್ಲ ಹಿಂಸೆಯನ್ನೂ ಮಾಡಿದ್ದು. ಚೀನಾದಲ್ಲೂ ಆಗಿರುವ ಹಿಂಸೆ ಈ ಅಭಿವೃದ್ಧಿಗಾಗಿ. ಭಾರತದಲ್ಲಿಯೂ ಹಾಗೆಯೇ ಆಗುತ್ತಿದೆ. ಆದ್ದರಿಂದ ಈ ಅಭಿವೃದ್ಧಿ ಎನ್ನುವುದನ್ನು, ಅದು ಕೇಳುವ ಅಪಾರವಾದ, ಅನಿವಾತ್ಯವಲ್ಲದ ಬಲಿಯನ್ನು ನಾವು ಮರು ಪರಿಶೀಲನೆಗೆ ಒಳಪಡಿಸಬೇಕಾದ ಅಗತ್ಯವಿದೆ.

ಅಭಿವೃದ್ಧಿ ಬೇಡವೆಂದಲ್ಲ. ಬದುಕುತ್ತಿರುವ ಎಲ್ಲ ಸಮಾಜಗಳೂ ಬದಲಾಗುತ್ತಲೇ ಇರಬೇಕಾಗುತ್ತದೆ. ಆಯಾ ಕಾಲಘಟ್ಟದಲ್ಲಿ ತಾನು ಉಳಿದುಕೊಳ್ಳಲು ಯಾವ್ಯಾವ ಉಪಾಯಗಳನ್ನು ಮಾಡಬೇಕೋ ಅವನ್ನು ಎಲ್ಲ ಸಮಾಜಗಳೂ ಮಾಡುತ್ತಲೇ ಇರುತ್ತವೆ. ಇದಕ್ಕೆ ಬೇಕಾದ ತಂತ್ರಜ್ಞಾನವನ್ನು ಅದು ಹುಡುಕಿಕೊಳ್ಳುತ್ತದೆ. ಆದರೆ ಈಗ ತಂತ್ರಜ್ಞಾನ ದರಿದ್ರರನ್ನು ದೀನರನ್ನಾಗಿ ಮಾಡಿ, ಉಳ್ಳವರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡಲು, ನಮ್ಮ ನಗರಗಳನ್ನು ಸಿಂಗಪುರಗಳನ್ನಾಗಿ ಮಾಡಲು ಬಳಕೆಯಾಗುತ್ತಿದೆ.

ಈಗಾಗಲೇ ಊರು ಸೇರಿಬಿಟ್ಟವರು ಅಥವಾ ದಡ ಸೇರಿದವರು ಹೇಗೋ ಬಚಾವಾಗುತ್ತಾರೆ. ಅಮೆರಿಕಾದ ಕಪ್ಪು ಜನರಂತೆ ನಮ್ಮ ದಲಿತರೂ ಬಚಾವಾಗುತ್ತಾರೆ –  ಏಕೆಂದರೆ ಅವರು ಕೆಲ ಮಟ್ಟಿಗೆ ದಡ ಸೇರಿಯಾಗಿದೆ. ಆದರೆ ದಡ ಸೇರದವರೆಂದರೆ ಈಗಲೂ ಕೊಳಚೆ ಪ್ರದೇಶದಲ್ಲಿ ಇರುವವರು ಮತ್ತು ತಮ್ಮದೇ ಆದ ಜೀವನ ಶೈಲಿಯಲ್ಲಿ ಪ್ರಕೃತಿಗೆ ಹತ್ತಿರವಾಗಿ ಇರುವ ಗಿರಿಜನರು. ಪಾಶ್ಚಾತ್ಯ ನಾಗರೀಕತೆ ಮೂಲನಿವಾಸಿಗಳನ್ನು ನಾಶಮಾಡಿದಂತೆಯೇ ನಾವು ಗಿರಿಜನರನ್ನು, ಅವರ ಅಮೂಲ್ಯ ಜೀವನ ಶೈಲಿಯನ್ನು ನಾಶಮಾಡಲು ತೊಡಗಿದ್ದೇವೆ.

* * *

ಮೇಧಾ ಪಾಟ್ಕರ್‌ರಲ್ಲಿ ಗಾಂಧಿ ಇನ್ನೂ ಜೀವಂತವಾಗಿ ಇದ್ದಾರೆ. ಅವರ ಉಪವಾಸ ಸತ್ಯಾಗ್ರಹದಿಂದ ನಮ್ಮನ್ನು ಆಳುವವರಲ್ಲಿ ಇರಬಹುದಾದ ಒಳಿತು ಜಾಗೃತಗೊಳ್ಳಲಿ ಎಂದು ನಾವೆಲ್ಲರೂ ನಿರೀಕ್ಷಿಸಬೇಕು.

ಗಾಂಧೀಜಿ ಹೃದಯ ಪರಿವರ್ತನೆಯಲ್ಲಿ ನಂಬಿಕೆ ಇದ್ದವರು ಎಂದು ನಾವೆಲ್ಲರೂ ತಿಳಿದಿದ್ದೇವೆ; ಜೊತೆಗೇ ಅವರು ಹೃದಯ ಪರಿವರ್ತನೆಯಾಗುವಂತೆ ಒತ್ತಾಯವನ್ನೂ ತರುತ್ತಿದ್ದವರು ಎನ್ನುವುದನ್ನು ಮರೆಯುತ್ತಿದ್ದೇವೆ. ಹೃದಯ ಪರಿವರ್ತನೆಯಲ್ಲಿ ನಂಬಿಕೆ ಇದ್ದಾತ ಅದಕ್ಕೆ ಒತ್ತಾಯ ಅಗತ್ಯವೆನ್ನಿಸಿದಾಗ ರಾಜಕಾರಣಿಯೂ ಆಗುತ್ತಾನೆ. ವಿನೋಬಾಗೂ ಗಾಂಧೀಜಿಗೂ ಹೋಲಿಸಿದಾಗ ಈ ವ್ಯತ್ಯಾಸ ತಿಳಿಯುತ್ತದೆ. ವಿನೋಬಾ ಹೃದಯ ಪರಿವರ್ತನೆಯಲ್ಲಿ ನಂಬಿ ದೇಶಾದ್ಯಂತ ಓಡಾಡಿದರು. ಆದರೆ ಈ ಹೃದಯ ಪರಿವರ್ತನೆಗೆ ಅಗತ್ಯವಿದ್ದ ಒತ್ತಾಯವನ್ನು ಹೋರಾಟದ ಮೂಲಕ ಸೃಷ್ಟಿಸಲಿಲ್ಲ. ಗಾಂಧೀಜಿಗೆ ಹೃದಯ ಪರಿವರ್ತನೆಯಲ್ಲಿ ನಂಬಿಕೆ ಇತ್ತು ಆದರೆ ಅಂತಹ ಹೃದಯ ಪರಿವರ್ತನೆಗೆ ಅಗತ್ಯವಿರುವ ಒತ್ತಡವನ್ನು ಅವರು ಜನಾಂದಾಲೋನದ ಮೂಲಕ ಸೃಷ್ಟಿಸುತ್ತಿದ್ದರು. ಮೇಧಾ ಪಾಟ್ಕರ್‌ಅವರು ಮಾಡುತ್ತಿರುವುದೂ ಅದನ್ನೇ.

* * *

ಕೇಂದ್ರದ ಮೂವರು ಸಚಿವರ ತಂಡ ಮುಳುಗಡೆಯಿಂದ ಸಂತ್ರಸ್ತರಾದವರಿಗೆ ಏನೇನು ಪರಿಹಾರ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವುದನ್ನು ಕಣ್ಣಾರೆ ಕಂಡುಬಂದಿದ್ದಾರೆ. ಈ ಲೇಖನವನ್ನು ನಾನು ಬರೆಯುವ ಹೊತ್ತಿಗೆ ಸಚಿವರ ತಂಡ ಹಿಂದಿರುಗಿ ನಾಲ್ಕು ದಿನಗಳಾಗಿವೆ. ಅವರು ಕಂಡದ್ದೇನು ಎಂಬುದನ್ನು ಅವರ ಮೌನದಿಂದಲೇ ಊಹಿಸಬಹುದು ಮೇಧಾ ಆಸ್ಪತ್ರೆಯಲ್ಲಿ ಉಪವಾಸದಿಂದ ಬಳಲುತ್ತಲೇ ಇದ್ದಾರೆ.

ನಮ್ಮ ಪ್ರಧಾನಿ ಮನಮೋಹನ್‌ಸಿಂಗ್‌, ಶ್ರೀಮತಿ ಸೋನಿಯಾ ಗಾಂಧಿ ಮತ್ತು ಎಲ್ಲ ಕೇಂದ್ರ ಮಂತ್ರಿಗಳ ಮೇಲೆ ಮೇಧಾ ಉಪವಾಸ ನಿಲ್ಲಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕೆಂದು ನಾವೆಲ್ಲಾ ಒತ್ತಾಯಿಸಬೇಕು. ಅಂದರೆ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಬೇಡಿ, ಮೊದಲು ನಿರಾಶ್ರಿತರಾದವರಿಗೆ ಜೀವನಕ್ಕೆ ಅಗತ್ಯವಾದ ಭೂಮಿಯನ್ನು ಒದಗಿಸಿ ಎಂದು ಕಾಗದಗಳನ್ನು ಸಹಸ್ರ ಸಂಖ್ಯೆಯಲ್ಲಿ ಬರೆಯಬೇಕು. ಇದು ಇರುವ ಕಾನೂನನ್ನು ಜಾರಿಗೊಳಿಸಲು ಮಾಡುತ್ತಿರುವ ಒತ್ತಾಯ.

೧೬೨೦೦೬

* * *