ನನ್ನ ದಸರಾ ಬಾಲ್ಯಕ್ಕೆ ಸೇರಿದ್ದು. ನಾನು ಹುಟ್ಟಿ ನನ್ನ ಬಾಲ್ಯವನ್ನು ಕಳೆದ ಸಹ್ಯಾದ್ರಿ ತಪ್ಪಲಿನ ನನ್ನ ಹಳ್ಳಿಗೆ ಸೇರಿದ್ದು.

ಬಲ್ಲಾಳರೆಂದು ನಾವು ಕರೆಯುತ್ತಿದ್ದ ಮುದುಕರೊಬ್ಬರು ಕಾಡಿನೊಳಗೆ ಹಲವಾರು ಮೈಲಿಗಳನ್ನು ನಡೆದು ನಮ್ಮ ಮನೆಗೆ ಬರುತ್ತಿದ್ದರು. ಅವರು ಹಣೆಯ ಮೇಲೆ ಅಕ್ಷತೆ ಇಟ್ಟುಕೊಂಡು ಬಂದರೆ ಅವರು ಊಟ ಮಾಡಿ ಬಂದಿದ್ದಾರೆ ಎಂದರ್ಥ. ಹಣೆಯ ಮೇಲೆ ಅಕ್ಷತೆ ಇಲ್ಲದಿದ್ದರೆ ಅವರು ಮಧ್ಯಾಹ್ನದ ಊಟಕ್ಕಿರುತ್ತಾರೆ ಎಂಬುದು ನನ್ನಮ್ಮನಿಗೆ ಅರ್ಥವಾಗಿ ಬಿಡುತ್ತಿತ್ತು.

ಹಜಾರದಲ್ಲಿ ಚಾಪೆ ಹಾಸಿ ನಾವೆಲ್ಲಾ ಅವರ ಜತೆಗೆ ಊಟಕ್ಕೆ ಕೂತು ಬಲ್ಲಾಳರು ಹೇಳುವ ಕತೆ ಕೇಳುತ್ತಿದ್ದೆವು. ಬಲ್ಲಾಳರು ಕಥೆ ಹೇಳುವುದರಲ್ಲಿ ನಿಷ್ಣಾತರು. ಅವರು ಮೈಸೂರಿಗೆ ದಸರಾ ನೋಡಲು ಹೋದ ಕಥೆಯನ್ನು ಆರಂಭಿಸುವುದಕ್ಕಾಗಿ ಕಾಯುತ್ತಿರುತ್ತಿದ್ದೆವು. ಅವರು ನಮ್ಮನ್ನು ಯಾವತ್ತೂ ನಿರಾಶರನ್ನಾಗಿಸಲಿಲ್ಲ.

ಅವರು ಮೈಸೂರಿಗೆ ಹೋಗಿದ್ದು, ದಸರಾ ನೋಡಿದ್ದು, ಜಂಬೂ ಸವಾರಿ ಕಂಡಿದ್ದೆಲ್ಲಾ ಬಹಳ ಹಿಂದೆ. ಆದರೆ ಪ್ರತೀ ಸಾರಿ ಅವರು ಕಥೆ ಹೇಳುವಾಗಲೂ ಅದರಲ್ಲಿ ಏನಾದರೊಂದು ಹೊಸತಿರುತ್ತಿತ್ತು. ಅವರ ಕಥೆ ಹೇಳುವಿಕೆ ಯಾವಾಗಲೂ ವರ್ತಮಾನ ಕಾಲದಲ್ಲಿಯೇ ಇರುತ್ತಿತ್ತು. ಪ್ರತೀ ಬಾರಿಯೂ ಮಹಾರಾಜರು ಮತ್ತು ಅಂಬಾರಿಯನ್ನು ಹೊತ್ತಿರುವ ಆನೆ ಹೆಚ್ಚು ಹೆಚ್ಚು ಉಜ್ವಲವಾದ ಆಭರಣಗಳನ್ನು ಧರಿಸಿರುತ್ತಿದ್ದರು. ಪ್ರತೀ ಬಾರಿಯೂ ಮಹಾರಾಜರು ಜನರತ್ತ ಬೀರುತ್ತಿದ್ದ ಮಂದಹಾಸದ ಶೈಲಿ ಬೇರೆಯಾಗಿರುತ್ತಿತ್ತು. ಕೆಲವು ಸಾರಿ ನಮ್ಮ ಆಲಿಸುವ ಉತ್ಸಾಹವೇ ಬಲ್ಲಾಳರ ಉತ್ಸಾಹವನ್ನು ಹೆಚ್ಚಿಸುತ್ತಿತ್ತು. ಇಂಥ ಹೊತ್ತಿನಲ್ಲಿ ಅವರು ‘ನಿಮ್ಮ ಈ ಕರಿಮೂತಿ ಚಿಕ್ಕಪ್ಪನನ್ನೂ ಮಹಾರಾಜರು ನೋಡಿದರು’ ಎಂದು ಶುಭ ಸಮಾರಂಭಗಳಿಗೆ ತಾವು ಕಾದಿರಿಸಿದ ತಮ್ಮ ಜರಿ ಶಾಲಿನ ಮಹಿಮೆಯನ್ನು ಕೊಂಡಾಡುತ್ತಿದ್ದರು. ಅವರು ನಮ್ಮನ್ನು ಮೆಚ್ಚಿಸುವುದಕ್ಕಾಗಿ ಶಾಲನ್ನೂ ತರುತ್ತಿದ್ದರು.

ತೀರ್ಥಹಳ್ಳಿ ಜಾತ್ರೆ ನಮಗೆ ಗೊತ್ತಿದ್ದ ದೊಡ್ಡ ಉತ್ಸವ. ಸೋಡಾ ಕುಡಿಯುವುದು, ಮಿಠಾಯಿ ತಿನ್ನುವುದು, ಎಲ್ಲಕ್ಕಿಂತ ಮುಖ್ಯವಾಗಿ ಬಾಂಬೇ ಬಾಕ್ಸ್‌ನಲ್ಲಿ ಚಿತ್ರಗಳನ್ನು ನೋಡುವುದಕ್ಕಾಗಿ ನಾವು ಜಾತ್ರೆ ಬರುವುದನ್ನು ಕಾಯುತ್ತಿದ್ದೆವು. ಜಾತ್ರೆಗೆ ಈ ಪೆಟ್ಟಿಗೆ ಬಂದೆ ಬರುತ್ತಿತ್ತು. ನಾವಿದನ್ನು ಬೊಂಬಾಯಿ ಪೆಟ್ಟಿಗೆ ಎಂದು ಕರೆಯುತ್ತಿದ್ದೆವು. ಒಂದು ಆಣೆ ದುಡ್ಡು ಕೊಟ್ಟು ಅದರ ಸಣ್ಣ ತೂತಿನಲ್ಲಿ ಕಣ್ಣಿಟ್ಟು ಕುಳಿತರೆ ಬೊಂಬಾಯಿ ಪೆಟ್ಟಿಗೆ ತಂದವನು ಡೋಲು ಬಡಿಯುತ್ತಾ ಅದರ ತಾಳಕ್ಕೆ ಹೆಜ್ಜೆ ಹಾಕುತ್ತಾ ಪೆಟ್ಟಿಗೆಯಲ್ಲಿದ್ದ ಒಂದು ದಾರ ಎಳೆದು ನಮ್ಮ ಕಣ್ಣಿಗೆ ಕಾಣುವ ದೃಶ್ಯಗಳನ್ನು ಬದಲಾಯಿಸುತ್ತಿದ್ದ. ಭೂತಕನ್ನಡಿಯಲ್ಲಿ ಕಾಣಿಸುತ್ತಿದ್ದ ಈ ದೃಶ್ಯಗಳನ್ನು ನಾನು ಯಾವತ್ತೂ ಮರೆಯಲಾರೆ.

ಆತ ಕುಣಿಯುತ್ತಾ ‘ದಿಲ್ಲಿ ದರ್ಬಾರ್ ನೋಡು, ರಾಣಿ ನೋಡು, ಬೊಂಬಾಯಿ ಸೂಳೆ ನೋಡು, ಜಂಬೂ ಸವಾರಿ ನೋಡು’ ಎಂದು ಹೇಳುತ್ತಿದ್ದರೆ ಪೆಟ್ಟಿಗೆಯೊಳಗೆ ಆ ದೃಶ್ಯಗಳು ಕಾಣಿಸಿಕೊಳ್ಳುತ್ತಿದ್ದವು. ಆಗೆಲ್ಲ ಬಲ್ಲಾಳರು ನೆನಪಾಗಿ ಅವರ ಹೇಳುವುದೆಷ್ಟೊಂದು ನಿಜ ಎನಿಸುತ್ತಿತ್ತು.

ಆದರೆ ನಾನು ಮೊದಲು ದಸರಾ ನೋಡಿದಾಗ ಅದೇ ಮೊದಲ ಬಾರಿಗೆ ತೀರ್ಥಹಳ್ಳಿ ಬಿಟ್ಟು ಮೊದಲ ಬಾರಿಗೆ ಬಸ್ ಮತ್ತು ಮೂರನೇ ದರ್ಜೆ ರೈಲಿನಲ್ಲಿ ಒಂದು ಹಗಲು ಒಂದು ರಾತ್ರಿ ಪ್ರಯಾಣಿಸಿದ್ದೆ. ನನ್ನ ಈ ಪ್ರಯಾಣ ದಸರಾ ನೋಡುವುದಕ್ಕಂತೂ ಆಗಿರಲಿಲ್ಲ. ನಾನು ಮೈಸೂರಿಗೆ ಹೋಗಿದ್ದು ಪ್ರಸಿದ್ಧರಾದ ಸರ್ವೇಪಲ್ಲಿ ರಾಧಾಕೃಷ್ಣನ್ ವಿದ್ವತ್ತಿನಲ್ಲಿ ದೊಡ್ಡವರಾದರೂ ಅಷ್ಟೇನೂ ಪ್ರಸಿದ್ಧರಾಗಿರದ ಹಿರಿಯಣ್ಣನವರಂಥ ಶಿಕ್ಷಕರಿದ್ದ ಐತಿಹಾಸಿಕ ಮಹಾರಾಜ ಕಾಲೇಜಿನಲ್ಲಿ ಕಲಿಯುವುದಕ್ಕಾಗಿ. ರಾಜ ಪ್ರಭುತ್ವವನ್ನು ವಿರೋಧಿಸುತ್ತಿದ್ದ ಕುವೆಂಪು ಕೂಡಾ ಅಲ್ಲಿಯೇ ಶಿಕ್ಷಕರಾಗಿದ್ದರು. ಮಲೆನಾಡಿನ ಸಮಾಜವಾದಿ ಚಳವಳಿಯ ಪ್ರಭಾವಕ್ಕೆ ಒಳಗಾಗಿ ರಾಜಪ್ರಭುತ್ವ ವಿರೋಧಿಯಾಗಿದ್ದ ನಾನು ಕುವೆಂಪು ಅವರ ಪ್ರಭಾವದಡಿಯಲ್ಲಿ ಶಿಕ್ಷಣ ಮುಂದುವರಿಸಲು ಮೈಸೂರು ತಲುಪಿದ್ದೆ.

ನಾನು ಮೊದಲು ದಸರ ನೋಡುವ ಹೊತ್ತಿಗೆ ಬಲ್ಲಾಳರ ಕಥೆಗಳ ಮಾಂತ್ರಿಕ ಆವರಣದಾಚೆಗೆ ಬೆಳೆದುಬಿಟ್ಟಿದ್ದೆ. ಬಾಂಬೇ ಬಾಕ್ಸ್‌ನ ಭೂತಕನ್ನಡಿಗೆ ಕಣ್ಣಿಟ್ಟು ಕುಳಿತು ಕೊಳ್ಳುವುದೂ ಅಷ್ಟೇನೂ ಕುತೂಹಲಕಾರಿ ವಿಷಯವಾಗಿ ನನಗೆ ಕಾಣಿಸುತ್ತಿರಲಿಲ್ಲ.

ಲೋಹಿಯಾ ಮತ್ತು ಜಯಪ್ರಕಾಶರಿಂದ ಪ್ರಭಾವಿತರಾಗಿದ್ದ ಶಾಂತವೇರಿ ಗೋಪಾಲಗೌಡರು ಆ ಕಾಲದ ಬಹಳ ದೊಡ್ಡ ಸಮಾಜವಾದಿ ನಾಯಕರು. ಸಮಾಜವಾದಿಗಳಾಗಿದ್ದ ನಮಗೆಲ್ಲಾ ಮಹಾರಾಜರನ್ನು ಆನೆಯ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡುವುದು ಊಳಿಗಮಾನ್ಯ ಸಂಸ್ಕೃತಿಯಂತೆಯೂ, ಹಿಂದುಳಿದಿರುವಿಕೆ ಮತ್ತು ಮೂಢನಂಬಿಕೆಯ ಸಂಕೇತದಂತೆಯೂ ಕಾಣಿಸುತ್ತಿತ್ತು. ಸಮಾಜವಾದಿಗಳೆಲ್ಲಾ ಜಂಬೂಸವಾರಿಯ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದರು. ಗೋಪಾಲಗೌಡರ ನೇತೃತ್ವದಲ್ಲಿ ಜೆ.ಎಚ್. ಪಟೇಲರಂಥ ಯುವ ಸಮಾಜವಾದಿಗಳು ಮೈಸೂರಿಗೆ ಬಂದಿಳಿದು ಒಂದಷ್ಟು ಕಾರ್ಯಕರ್ತರನ್ನು ಒಗ್ಗುಡಿಸಿ ಸಾಲಂಕೃತ ಆನೆಯ ಮೇಲೆ ಸರ್ವಾಭರಣ ಭೂಷಿತರಾಗಿ ಕುಳಿತ ಮಹಾರಾಜರ ಮೆರವಣಿಗೆ ಬರುವಾಗ ಕಪ್ಪು ಬಾವುಟ ತೋರಿಸುವ ಕಾರ್ಯಕ್ರಮ ರೂಪಿಸಿದರು.

ಇದು ಸಮಾಜವಾದೀ ಸತ್ಯಾಗ್ರಹಿಗಳ ಮಟ್ಟಿಗೆ ಬಹಳ ಅಪಾಯಕಾರಿಯಾದ ಕೆಲಸವಾಗಿತ್ತು. ಏಕೆಂದರೆ ಜನರು ಮಹಾರಾಜರನ್ನು, ಮೆರವಣಿಗೆಯನ್ನೂ ಪ್ರೀತಿಸುತ್ತಿದ್ದರು. ಅವರ ಮೆರವಣಿಗೆಗೆ ಅಶುಭ ಕೋರಿ ಕಪ್ಪು ಬಾವುಟ ತೋರಿಸಿದ್ದರೆ ಜನರೇ ಪ್ರತಿಭಟನಕಾರರಿಗೆ ಹೊಡೆಯುವ ಸಾಧ್ಯತೆ ಇತ್ತು. ಇದಕ್ಕಾಗಿ ನಮ್ಮ ಪ್ರತಿಭಟನೆಗೆ ಪೊಲೀಸ್ ಭದ್ರತೆ ಕೇಳಿ ಕಪ್ಪುಬಾವುಟ ತೋರಿಸುವ ಸಾಂಕೇತಿಕ ಪ್ರತಿಭಟನೆ ನಡೆಸಿದೆವು. ಇದು ವರ್ಷ ವರ್ಷವೂ ಮುಂದುವರಿಯಿತು.

ನಾವಿದನ್ನು ಇಲ್ಲಿಯೇ ನಿಲ್ಲಿಸಲು ಇಚ್ಛಿಸುವುದಿಲ್ಲ. ಶಾಂತವೇರಿ ಗೋಪಾಲಗೌಡರು ಕವಿಯ ಹೃದಯವಿದ್ದ ಮಹಾ ಸಂವೇದನಾಶೀಲ ಮನುಷ್ಯ. ಮಹಾರಾಜರ ತಮ್ಮ ದೊರೆತನ ಮತ್ತು ಅದರ ಜತೆಗಿದ್ದ ಎಲ್ಲ ವೈಭವವನ್ನು ಕಳೆದುಕೊಂಡ ನಂತರ ಒಮ್ಮೆ ಗೋಪಾಲಗೌಡರು ಅವರನ್ನು ವಿಮಾನ ನಿಲ್ದಾಣದಲ್ಲಿ ನೋಡಿದರಂತೆ. ಎಲ್ಲರೂ ಬಿಟ್ಟುಬಿಟ್ಟಂತೆ ಕಾಣಿಸುತ್ತಿದ್ದ, ಗುಂಪಿನೊಳಗೆ ಒಂಟಿಯಾಗಿಬಿಟ್ಟಿದ್ದ ಅವರನ್ನು ನೆನಪಿಸಿಕೊಂಡು ಗೋಪಾಲಗೌಡರು ಮರುಗುತ್ತಿದ್ದರು.

೧೦೨೦೦೬

* * *