ಸುಮಾರು ಹದಿನೈದು ವರ್ಷಗಳಷ್ಟು ಹಿಂದೆ ನಡೆದ ಒಂದು ಘಟನೆ ನೆನಪಾಗುತ್ತಿದೆ. ನಾನು ಕೇರಳದಲ್ಲಿ ವಿಶ್ವವಿದ್ಯಾನಿಲಯವೊಂದರ ಕುಲಪತಿಯಾಗಿದ್ದು ಆಗತಾನೇ ಮೈಸೂರು ವಿಶ್ವವಿದ್ಯಾನಿಲಯಕ್ಕೆ ನನ್ನ ಕೆಲಸಕ್ಕೆ ಹಿಂದಿರುಗಿದ್ದೆ. ಡಾ. ರಾಜಾರಾಮಣ್ಣನವರು ತಮ್ಮ ಸಂಸ್ಥೆಯಲ್ಲಿ ಶಿಕ್ಷಣದ ಕುರಿತು ಒಂದು ಉಪನ್ಯಾಸ ಕೊಡಲು ಕೇಳಿದ್ದರು. ಆವತ್ತು ನಾನು ಆಡಿದ ಮಾತಿನ ಸಾರಾಂಶ ಹೀಗಿತ್ತು : ‘ಜ್ಞಾನದಲ್ಲಿ ಶ್ರೇಷ್ಠವಾದ ಮಟ್ಟವನ್ನು ನಾವು ಇನ್ನೂ ಮುಟ್ಟಿಲ್ಲ. ಇದಕ್ಕೆ ಕಾರಣ ಉತ್ತಮ ಜಾತಿಗಳ ಸಣ್ಣ ಸಣ್ಣ ಕೊಳಗಳಲ್ಲಿ ನಾವು ಜ್ಞಾನದ ಶ್ರೇಷ್ಠತೆಯನ್ನು ಹುಡುಕುತ್ತಿದ್ದೇವೆ. ಅಂದರೆ ಸಣ್ಣ ಕೊಳಗಳಲ್ಲಿ ದೊಡ್ಡ ಮೀನನ್ನು ಹುಡುಕಿದಂತೆ. ಆದರೆ ಭಾರತದ ಅಪಾರವಾದ ಜನಸಾಗರದಲ್ಲಿ ನಾವು ಬಲೆಯನ್ನು ಇನ್ನೂ ಬೀಸಿಲ್ಲ. ಕೆಳಜಾತಿಯ ಯುವಕ ಯುವತಿಯರು ವಿದ್ಯಾಭ್ಯಾಸವನ್ನೇ ಪಡೆಯುತ್ತಿಲ್ಲ. ಪಡೆದವರು ಕೆಲವರಿದ್ದರೂ ಅವರು ಕಳಪೆ ಶಾಲೆಗಳಿಗೆ ಹೋಗಿ ಓದಿರುತ್ತಾರೆ. ಆದರೆ ಎಲ್ಲ ಮಕ್ಕಳೂ ಒಂದೇ ಗುಣಮಟ್ಟದ ಶಾಲೆಗಳಲ್ಲಿ ಸಮಾನ ಶಿಕ್ಷಣವನ್ನು ಪಡೆದುದೇ ಆದಲ್ಲಿ ಆಗ ಸಮುದ್ರಕ್ಕೆ ಬಲೆ ಬೀಸಿದಂತೆ ನಮ್ಮ ಶ್ರೇಷ್ಠತೆಯ ಹುಡುಕಾಟ ಸಾಗುತ್ತದೆ. ಈಗಿರುವ ಅಸಮಾನತೆಯನ್ನು ಮೀಸಲಾತಿಯ ಮುಖೇನ ಸರಿಪಡಿಸಬಹುದೆಂದು ನಾವು ನಮ್ಮನ್ನೇ ವಂಚಿಸಿಕೊಳ್ಳುತ್ತಿದ್ದೇವೆ. ಅಂಬೇಡ್ಕರ್‌ಕೂಡಾ ಕೆಲವು ವರ್ಷಗಳಿಗಷ್ಟೇ ಮೀಸಲಾತಿ ಇರಬೇಕೆಂದು ಹೇಳಿದ್ದರು. ಆದರೆ ಕೆಲವರಿಗೆ ಮೀಸಲಾತಿಯನ್ನು ಕೊಡುವ ನೆವದಲ್ಲಿ ಜಾತಿಗಿಂತ ಹೆಚ್ಚು ಅಸಮಾನತೆಯನ್ನು ಸೃಷ್ಟಿಸುತ್ತಿರುವ ಆಧುನಿಕ ಶಿಕ್ಷಣ ಪದ್ಧತಿಯಿಂದ ನಾವು ಇನ್ನಷ್ಟು ಅಸಮಾನತೆಯನ್ನು ಸೃಷ್ಟಿಸಿ ಹೇಗೂ ಮೀಸಲಾತಿಯಿಂದ ಇದನ್ನು ಸರಿಪಡಿಸಬಹುದೆಂಬ ಭ್ರಮೆಯಲ್ಲಿ ಬದುಕುತ್ತಿದ್ದೇವೆ. ಒಮ್ಮೊಮ್ಮೆ ಅನ್ನಿಸುತ್ತದೆ. ಸಮಾನ ಶಿಕ್ಷಣ ದೊರೆಯುವುದಾದರೆ ಜನಸ್ತೋಮದ ವಿದ್ಯಾಮಂಥನದಿಂದ ದೊಡ್ಡದೊಂದು ಸೃಜನಶೀಲತೆ ದೇಶದಲ್ಲಿ ವ್ಯಕ್ತವಾದೀತು.’

ನಾನು ಹೀಗೆ ಹೇಳಿದ ಮಾತನ್ನು ಪತ್ರಿಕೆಯೊಂದು ‘ಅನಂತಮೂರ್ತಿ ಮೀಸಲಾತಿಯನ್ನೇ ವಿರೋಧಿಸುತ್ತಾರೆ’ ಎಂದು ಪ್ರಕಟಿಸಿತು. ಮೈಸೂರು ಇಂಗ್ಲಿಷ್‌ವಿಭಾಗದಲ್ಲಿದ್ದ ನನ್ನ ರೂಮಿಗೆ ಕುಪಿತರಾದ ದಲಿತ ವಿದ್ಯಾರ್ಥಿಗಳು ನುಗ್ಗಿ – ನನ್ನ ಮೇಜು – ಖುರ್ಚಿಗಳನ್ನು ಸುಟ್ಟು ಹಾಕಿದರೆಂದೂ ವಿಶ್ವವಿದ್ಯಾನಿಲಯ ಈ ಬಗ್ಗೆ ನನ್ನ ವಿವರಣೆ ಕೇಳುವುದೆಂದೂ ಪ್ರಕಟವಾಯಿತು. ನಾನು ಆಗ ನನ್ನ ಹಳ್ಳಿಯಲ್ಲಿದ್ದೆ. ಏನೂ ಹೇಳಲಾರದ, ದೂರದಲ್ಲಿದ್ದ ನನಗೆ ಆ ದಿನಗಳಲ್ಲಿ ಬೆಂಬಲಕ್ಕೆ ನಿಂತವರು ದಲಿತ ಚಳುವಳಿಯಲ್ಲಿ ಮುಖ್ಯರಾಗಿದ್ದ ದೇವನೂರು ಮಹಾದೇವ ಮತ್ತು ಡಾ. ಸಿದ್ಧಲಿಂಗಯ್ಯ.

ಇವತ್ತಿಗೂ ನಾನು ನನ್ನ ಆ ಹಿಂದಿನ ನಿಲುವಿಗೆ ಬದ್ಧನಾಗಿದ್ದೇನೆ. ಮಾತೃಭಾಷೆಯಲ್ಲಿ ಸಮಾನ ಶಿಕ್ಷಣ ಕೊಡುವ ತನಕ, ಅಸಮಾನತೆಯನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸುವ ಆಂಗ್ಲಭಾಷಾ ಮಾಧ್ಯಮದ ಶಾಲೆಗಳನ್ನು ಮುಚ್ಚುವ ತನಕ, ಮೀಸಲಾತಿಯ ತೇಪೆಗಳ ಮುಖಾಂತರ ಮಾತ್ರ ನಮ್ಮ ಸಮಾಜದ ಅಸಮಾನತೆಯನ್ನು ಅಷ್ಟಿಷ್ಟು ರಿಪೇರಿ ಮಾಡುತ್ತ ಒಂದು ಮೂರ್ಖ ದೇಶವಾಗಿ ಉಳಿದು ಬಿಡುತ್ತೇವೆ.

ನನ್ನ ದಲಿತ ಮಿತ್ರರಲ್ಲಿ ಯಾವಾಗಲೂ ನಾನು ಹೇಳುವ ಒಂದು ಮಾತಿದೆ. ಮೊದಲನೆಯದು ಮೀಸಲಾತಿಯನ್ನು ಆದಷ್ಟು ಬೇಗ ಅನಗತ್ಯಗೊಳಿಸುವ ಪೂರ್ಣ ಪ್ರಮಾಣದ ಮೀಸಲಾತಿ. ಎರಡನೆಯದು ಯಾವ ಮೀಸಲಾತಿಯ ಅಗತ್ಯವೂ ಇರದಂತೆ ಮಾಡುವ ಸಮಾನ ಶಿಕ್ಷಣ ಪದ್ಧತಿ. ಈ ಎರಡರ ಮುಖಾಂತರ ನಾವು ಕೆಳಜಾತಿಯಲ್ಲೂ ದಲಿತರಲ್ಲೂ ಆತ್ಮವಿಶ್ವಾಸವನ್ನು ಬೆಳೆಸುವುದು ಸಾಧ್ಯವಾಗುತ್ತದೆ.

ಮೊದಲನೆಯದ್ದರ ಬಗ್ಗೆ ಒಂದಷ್ಟು ವಿವರಣೆ; ಸರಕಾರೀ ಉದ್ಯಮಗಳಲ್ಲಿ ಮಾತ್ರ ಮೀಸಲಾತಿ ಇದ್ದರೆ ಸಾಲದು. ಬಹುರಾಷ್ಟ್ರೀಯ ಸಂಸ್ಥೆಗಳೂ ಖಾಸಗಿ ಸಂಸ್ಥೆಗಳೂ ಮೀಸಲಾತಿಯನ್ನು ಜಾರಿಗೆ ತರಬೇಕು. ಕೆನಡಿ ಕಾಲದಲ್ಲಿ ಅಮೆರಿಕದ ಖಾಸಗೀ ಸಂಸ್ಥೆಗಳೆಲ್ಲವೂ ಕರಿಯರಿಗೆ ಅವಕಾಶ ಮಾಡಿಕೊಡಬೇಕಾಗಿ ಬಂದ ಹಾಗೆ ನಾವು ಮಾಡಬೇಕು. ಇದರ ಜತೆಗೇ ಇನ್ನೊಂದು ಮುಖ್ಯವಾದ ಮಾತಿದೆ. ಇಲ್ಲಿಯವರೆಗೆ ನಾವು ಅವಮಾನ ಆಧಾರಿತವಾದ ಮೀಸಲಾತಿಯನ್ನು ಮಾತ್ರ ಬಹು ಮುಖ್ಯ ಎಂದುಕೊಂಡಿದ್ದೇವೆ. ಅಸ್ಪೃಶ್ಯತೆಯ ನಿವಾರಣೆಗೆ ಮೀಸಲಾತಿ ಅಗತ್ಯ ಎಂಬುದರಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಆದರೆ ಮೀಸಲಾತಿಯನ್ನು ಪಡೆದು ಮುಂದೆ ಬಂದವರ ಮಕ್ಕಳಿಗೆ ಮೀಸಲಾತಿ ಇರಕೂಡದು. ಯಾವ ಮೀಸಲಾತಿಯನ್ನೂ ಪಡೆಯದ ಈ ಜಾತಿಗಳಲ್ಲೇ ಇನ್ನೂ ಹಿಂದುಳಿದ ಜನರಿಗೆ ಮೀಸಲಾತಿಯ ಸೌಲಭ್ಯವನ್ನು ಕಲ್ಪಿಸಬೇಕು. ಮೆರಿಟ್ ಬಗ್ಗೆ ನಾವು ಮಾತಾಡುವುದನ್ನು ನಿಲ್ಲಿಸಬೇಕು. ಜ್ಞಾನಕ್ಕಾಗಿಯೂ ಒಳ್ಳೆಯ ಜೀವನಕ್ಕಾಗಿಯೂ ಹಸಿದ ಜನಸಾಗರದಲ್ಲಿ ಮೆರಿಟ್ ಎಂಬುದು ಅರ್ಥಹೀನವಾದುದು. ನಾವು ಈ ಮೆರಿಟ್ ಅನ್ನು ಅಲ್ಲೆಲ್ಲಿಯೂ ಸೃಷ್ಟಿಸಲು ಸಾಧ್ಯ ಎಂಬುದನ್ನು ಈವರಿಗೆ ಮೀಸಲಾತಿಯಿಂದ ಸೃಷ್ಟಿಸಿದ ಮೆರಿಟ್‌ನಿಂದಲೇ ಮನಗಂಡಿದ್ದೇವೆ. ಮೀಸಲಾತಿಗೆ ಅರ್ಹರಾಗಿರುವ ಸಮುದಾಯಗಳ ಒಳಗೆ ಮೀಸಲಾತಿ ಲಭ್ಯವಾದ ತಲೆಮಾರಿನಲ್ಲಿ ಇರುವ ಎಲ್ಲರೂ ಈಗ ಎಲ್ಲರ ಜತೆ ಪೈಪೋಟಿ ಮಾಡುವಷ್ಟು ಸಮರ್ಥರಾಗಿದ್ದಾರೆ. ಹೀಗೆ ಮೀಸಲಾತಿಯನ್ನು ಇನ್ನೂ ಕೆಳಗಿನವರೆಗೆ ಕೊಡುವುದರಿಂದ ಒಳ ಮೀಸಲಾತಿಯ ಓಟ್‌ಬ್ಯಾಂಕ್ ರಾಜಕಾರಣಕ್ಕೆ ತಡೆಯೊಡ್ಡಿದಂತಾಗುತ್ತದೆ.

ಅವಮಾನ ಆಧಾರಿತ ಮೀಸಲಾತಿಯಲ್ಲದೆ ಇನ್ನೊಂದು ಬಗೆಯ ಮೀಸಲಾತಿಯ ಅಗತ್ಯ ಈ ತಂತ್ರಜ್ಞಾನದ ಯುಗದಲ್ಲಿ ಅತ್ಯಂತ ಅವಶ್ಯವಾಗಿದೆ. ತೀರಿ ಹೋದ ನನ್ನ ಗೆಳೆಯ ಡಿ.ಆರ್.ನಾಗರಾಜರು ಈ ಬಗ್ಗೆ ಆಳವಾದ ಚಿಂತನೆ ನಡೆಸಿದ್ದರು. ಇಂಗ್ಲಿಷ್‌ನಲ್ಲಿ ಸೂಯಿಸೈಡ್ ಎನ್ನುವ ಶಬ್ದ ಇರುವಂತೆ ಟೆಕ್ನಿಸೈಡ್ ಎನ್ನುವ ಪದವನ್ನು ನಾಗರಾಜ್ ಬಳಸುತ್ತಿದ್ದರು. ಈ ಟೆಕ್ನಿಸೈಡ್ ಉಂಟಾಗುವುದು ಹೊಸ ತಂತ್ರಜ್ಞಾನದಿಂದ ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಅಸಂಖ್ಯಾತರ ದೃಷ್ಟಿಯಿಂದ. ಪ್ಲಾಸ್ಟಿಕ್‌ನಿಂದಾಗಿ, ಮಡಕೆ ಮಾಡುವವರು ತಮ್ಮ ಉದ್ಯೋಗ ಕಳೆದುಕೊಂಡರು. ಬಹಳ ದೊಡ್ಡ ಬೂಟು, ಶೂಗಳ ಕಂಪೆನಿಗಳು ಬಂದ ನಂತರ ಚಪ್ಪಲಿ ಹೊಲಿಯುವವರೆಲ್ಲಾ ಕೆಲಸ ಕಳೆದುಕೊಂಡರು. ದೊಡ್ಡ ಗಿರಣಿಗಳು ಬಂದ ಕೂಡಲೇ ಬಟ್ಟೆ ನೇಯುವವರು ಅನಾಥರಾದರು. ಸ್ಪೇನ್‌ಲೆಸ್‌ ಸ್ಟೀಲ್ ಪಾತ್ರೆಗಳಿಂದಾಗಿ ಕಲಾಯಿ ಹಾಕುತ್ತಿದ್ದ ಹಳ್ಳಿಯ ಮುಸ್ಲಿಮರು ವೃತ್ತಿಹೀನರಾದರು. ಹೀಗೇ ತಂತ್ರಜ್ಞಾನದ ಬೆಳವಣಿಗೆಯ ಪ್ರತಿಹಂತದಲ್ಲೂ ತಮ್ಮ ಜೀವನಾಧಾರವನ್ನೇ ಕಳೆದುಕೊಳ್ಳುವ ಅಸಂಖ್ಯಾತ ಜನರಿದ್ದಾರೆ.

ಮೇಲ್ವರ್ಗದ ಜ್ಞಾನವೆಲ್ಲಾ ಅವರ ಮೆದುಳುಗಳಲ್ಲಿದ್ದರೆ ಕೆಳವರ್ಗದ ಜ್ಞಾನವೆಲ್ಲಾ ಅವರ ಬೆರಳುಗಳಲ್ಲಿ ಇರುತ್ತದೆ. ಅವರ ಕಾಲುಗಳಲ್ಲಿ ಇರುತ್ತದೆ. ಅವರ ಮಾಂಸ ಖಂಡಗಳಲ್ಲಿ ಇರುತ್ತದೆ. ಅವರ ರಕ್ತದಲ್ಲಿ, ಅವರ ಉಸಿರಲ್ಲಿ ಇರುತ್ತದೆ. ಅಂದರೆ ಈ ದಿನ ತಮ್ಮ ಅಗಾಧವಾದ ಜ್ಞಾನವನ್ನು ತಮ್ಮ ದೇಹದಲ್ಲೇ ಅಂತರ್ಗತ ಮಾಡಿಕೊಂಡವರು. ನಮ್ಮ ದೇಶದ ಸಂಸ್ಕೃತಿಯನ್ನು ಈ ತನಕ ಉಳಿಸಿದವರೂ ಇವರೇ. ಇವರ ಬುದ್ಧಿವಂತಿಕೆ, ಆ ಜ್ಞಾನದಿಂದ ಹುಟ್ಟಿದ ತಂತ್ರಗಾರಿಕೆಯನ್ನು ಆಧುನಿಕ ತಂತ್ರಜ್ಞಾನ ನಾಶ ಮಾಡುತ್ತಿದೆ.

ನಾವು ಇಲ್ಲಿಯವರೆಗೂ ಮೀಸಲಾತಿ ಎನ್ನುವ ತತ್ವವನ್ನು ಯೋಚನೆ ಮಾಡಿದ್ದು ಅವಮಾನ ಆಧಾರಿತವಾಗಿ. ಈಗ, ಹರಿಜನರನ್ನು ಯಾರೂ ಮುಟ್ಟುವುದಿಲ್ಲ. ಅವರು ಅವಮಾನಿತರಾದ ಜಾತಿ. ದಲಿತರು ಅವಮಾನಿತರು. ಆದ್ದರಿಂದ ಅವರಿಗೆ ಮೀಸಲಾತಿ ಕೊಡಬೇಕು ಎಂಬುದು ನಮ್ಮ ಈಗಿನ ಮೀಸಲಾತಿ ಪರಿಕಲ್ಪನೆ, ವರ್ತಮಾನದ ಸಂದರ್ಭದಲ್ಲಿ ಮೀಸಲಾತಿಗೆ ಅವಮಾನ ಒಂದೇ ಆಧಾರವಾದರೆ ಸಾಕಾಗದು. ಇನ್ನು ಮುಂದೆ ಯಾರು ತಮ್ಮ ತಾಂತ್ರಿಕತೆಯನ್ನು ಕಳೆದುಕೊಳ್ಳುತ್ತಾರೋ ಅವರಿಗೆ ಮೀಸಲಾತಿಯನ್ನು ಕೊಡಬೇಕು.

ಈಗ ಲೆದರ್‌ ಟೆಕ್ನಾಲಜಿಯ ಒಂದು ಇನ್ಸ್‌ಟಿಟ್ಯೂಟ್ ಮಾಡಿದರೆ ಅದಕ್ಕೆ ಪ್ರವೇಶ ಪಡೆಯಲು ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು. ಪಿಯುಸಿಯಲ್ಲಿ ರ‍್ಯಾಂಕ್ ಬಂದಿರಬೇಕು. ಇಷ್ಟಾದ ಮೇಲೆ ಸಂಸ್ಥೆಯವರು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಬೇಕು ಎಂದರೆ ಯಾವ ಮೆಟ್ಟು ಹೊಲಿಯುವವನಿಗೂ ಅಲ್ಲಿ ಸೀಟು ಸಿಗುವುದಿಲ್ಲ.

ಯಾವತ್ತು ಮೆಟ್ಟು ಹೊಲಿಯುವ ಆಲೋಚನೆಯನ್ನೂ ಮಾಡದ, ಮೆಟ್ಟು ಹೊಲಿಯುವವರು ಅಸ್ಪೃಶ್ಯರು ಎಂದು ತಿಳಿದ ಉತ್ತಮ ಜಾತಿಯ ಮಕ್ಕಳೇ ಈ ಲೆದರ್ ಟೆಕ್ನಾಲಜಿಯ ಕಾಲೇಜಿಗೆ ಸೇರಲು ಅರ್ಹರಾಗಿರುತ್ತಾರೆ. ಹಾಗೆಯೇ ಟೆಕ್ಸ್‌ಟೈಲ್ ಟೆಕ್ನಾಲಜಿಯ ಕಾಲೇಜಿಗೆ ಪ್ರವೇಶಾರ್ಹತೆ ಗಳಿಸಿಕೊಳ್ಳುವವರಲ್ಲಿ ನೇಕಾರರ ಮಕ್ಕಳು ಇರುವುದೇ ಇಲ್ಲ. ಏಕೆಂದರೆ ಇವರೆಲ್ಲಾ ಎಸ್‌ಎಸ್‌ಎಲ್‌ಸಿ ಪಾಸಾಗುವುದಕ್ಕೆ ಸಾಧ್ಯವಿಲ್ಲದವರು! ಅಲ್ಲಿಗೂ ಸೇರಬಹುದಾದ ಮೀಸಲಾತಿಯ ಶೇಕಡಾ ೧೮ ರಷ್ಟು ಜನರು ಈಗಾಗಲೇ ಮೀಸಲಾತಿ ಪಡೆದು ಮುಂದೆ ಬಂದ ಮಧ್ಯವರ್ಗದವರಾಗಿರುತ್ತಾರೆ.

ಇದರ ಪರಿಣಾಮವಾಗಿ ನಾವು ದೇಶದಲ್ಲಿ ಯಾವ ತಂತ್ರಜ್ಞಾನಗಳನ್ನು ಬೆಳೆಸಬೇಕೆಂದು ಪ್ರಯತ್ನಿಸುತ್ತಿದ್ದೇವೆಯೋ ಅವುಗಳನ್ನು ಕಲಿಯುವವರೆಲ್ಲಾ ಮ್ಯಾನೇಜರ್‌ಗಳಾಗುತ್ತಿದ್ದಾರೆ. ಅವರಿಗೆ ತಾವು ಕಲಿತ ತಂತ್ರಜ್ಞಾನ ಒಂದು ನೆವ ಮಾತ್ರ. ಅದನ್ನು ಮುಂದಿಟ್ಟುಕೊಂಡು ಮ್ಯಾನೇಜ್‌ಮೆಂಟ್ ಕೋರ್ಸ್‌‌ಗಳನ್ನು ಮಾಡಿಕೊಂಡು ಮ್ಯಾನೇಜರ್‌ಗಳಾಗುವುದರಲ್ಲಿ ತಮ್ಮ ಕಲಿಕೆಯ ಸಾರ್ಥಕತೆಯನ್ನು ಕಾಣುತ್ತಿದ್ದಾರೆ. ನೀವು ಯಾವ ಐಐಟಿಗೂ ಹೋಗಿ ನೋಡಿದರು ಇದು ಅರ್ಥವಾಗುತ್ತದೆ. ಅಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ಟಿಕಲ್ ಇಂಜಿನಿಯರಿಂಗ್‌ ಮಾಡುವವರು ಹಲವರಿರುತ್ತಾರೆ. ಅವರ ಕೋರ್ಸ್‌ ಮುಗಿದ ತಕ್ಷಣ ಒಂದು ಬಿಸಿನೆಸ್ ಸ್ಕೂಲಿಗೆ ಹೋಗಿ ತರಬೇತಿ ಪಡೆದು ಮ್ಯಾನೇಜರ್‌ಗಳಾಗಿ ಬಿಡುತ್ತಾರೆ. ಈ ಮ್ಯಾನೇಜರ್‌ಗಳ ಕೈಕೆಳಗೆ ಹೆಚ್ಚು ಕಲಿಯದೇ ಇರುವವರು, ಅಂದರೆ ನಾನು ಮೊದಲೇ ಹೇಳಿದ ಜ್ಞಾನವನ್ನು ದೇಹದಲ್ಲಿ ಅಂತರ್ಗತವಾಗಿಸಿಕೊಂಡವರು ಕೆಲಸ ಮಾಡುತ್ತಾರೆ.

ಈ ಅಸಮಾನತೆ ದೇಶದ ಅಗಾಧವಾದ ಜನಸ್ತೋಮದ ನಡುವಿನ ವಿದ್ಯಾ ಮಂಥನವನ್ನು ಬಯಸುವ ಎಲ್ಲರಿಗೂ ಸವಾಲಾಗಿದೆ. ಆದ್ದರಿಂದ ಆಧುನಿಕ ಕಾಲದಲ್ಲಿ ನೀಡುವ ಮೀಸಲಾತಿ ಆಧುನಿಕ ಜ್ಞಾನ ಪ್ರಸಾರದಿಂದ ಯಾರ ಕೌಶಲ್ಯಗಳು ಅಪ್ರಸ್ತುತವಾಗುತ್ತಿವೆಯೋ ಅವರನ್ನೂ ಒಳಗೊಳ್ಳಬೇಕು. ಲೆದರ್‌ ಟೆಕ್ನಾಲಜಿ ಕಾಲೇಜಿನಲ್ಲಿ ಮೆಟ್ಟು ಹೋಲಿದು ಜೀವನ ಮಾಡುತ್ತಿದ್ದು ಈಗ ಆ ಅವಕಾಶವನ್ನೂ ಯಾರೂ ಕಳೆದುಕೊಳ್ಳುತ್ತಿದ್ದಾರೋ ಅವರು ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕು. ಹಾಗೆಯೇ ಅನೇಕ ತಂತ್ರಜ್ಞಾನಗಳಲ್ಲಿ ಇಂಥವರಿಗೆ ಹೆಚ್ಚಿನ ಮೀಸಲಾತಿ ಇರಬೇಕು. ಅವರ ಜ್ಞಾನವನ್ನು ಬಳಸಿಕೊಳ್ಳುವಂತೆ ಶಿಕ್ಷಣ ಕ್ರಮವನ್ನು ನಾವು ರೂಪಿಸಬೇಕು.

ನಮ್ಮ ಪರೀಕ್ಷೆಗಳು ಮೆದುಳಿನಲ್ಲಿ ನೆನಪಿಟ್ಟುಕೊಂಡದ್ದನ್ನು ಮಾತ್ರ ಪರೀಕ್ಷಿಸುವಂಥ ವ್ಯವಸ್ಥೆ. ಆದುದರಿಂದ ಬಹಳ ಜನ ಅಂಥ ಪರೀಕ್ಷೆಗಳಲ್ಲಿ ಪಾಸಾಗದೇ ಉಳಿದುಬಿಡುವ ಸಾಧ್ಯತೆ ಹೆಚ್ಚು. ಆದುದರಿಂದ ಎಸ್‌ಎಸ್‌ಎಲ್‌ಸಿಗೆ ಫೇಲ್ ಆಗದೇ ಇರುವಂತೆ, ಮುಂದೆ ಓದುವಂತೆ ಶಿಕ್ಷಣ ಕ್ರಮವನ್ನೂ ನಾವು ಬದಲಾಯಿಸಿಕೊಳ್ಳಬೇಕು. ಜ್ಞಾನ ಅಂದರೆ ಏನು ಎನ್ನುವ ವ್ಯಾಖ್ಯೆಯನ್ನು ನಾವು ಬದಲಾಯಿಸಿಕೊಳ್ಳಬೇಕು.

ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಅಮೆರಿಕ ಸಂಶೋಧಕನೊಬ್ಬನ ಅನುಭವವನ್ನು ಇಲ್ಲಿ ಉಲ್ಲೇಖಿಸುವುದು ಒಳ್ಳೆಯದೇನೋ. ಷಿಕಾಗೋ ವಿಶ್ವವಿದ್ಯಾನಿಲಯದ ಸಂಶೋಧಕನೊಬ್ಬ ಈ ಐಐಟಿಗಳಿಗೆ ಸೇರಿದ ಬಹಳ ಜನ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು, ದಲಿತರು ಹೀಗೆ ರಿಸರ್ವೇಶನ್‌ನಿಂದ ಬಂದವರು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವುದೇ ಇಲ್ಲ ಎಂದು ಅಭಿಪ್ರಾಯಪಡುತ್ತಾನೆ. ಏಕೆಂದರೆ ಅವರು ಫೇಲಾಗಿಬಿಡುತ್ತಾರೆ. ಅಂದರೆ ಐಐಟಿಗಳಿಗೆ ಸಂಸ್ಥೆಗಳಿಗೆ ಹಿಂದುಳಿದವರು, ದಲಿತರು ಸೇರುವುದೇ ಕಡಿಮೆ, ಸೇರಿದವರೂ ಮುಂದುವರಿಸುವುದಿಲ್ಲ!

* * *

ನಮ್ಮ ದೇಶದಲ್ಲಿ ಸಾಫ್ಟ್‌ವೇರ್ ತಂತ್ರಜ್ಞಾನ ಬೆಳೆದಷ್ಟು ಹಾರ್ಡ್‌‌ವೇರ್‌ ತಂತ್ರಜ್ಞಾನ ಬೆಳೆದಿಲ್ಲ. ಯಾವ ತಂತ್ರಜ್ಞಾನ ತೆಗೆದುಕೊಂಡರೂ ನಮ್ಮಲ್ಲಿ ಸಾಫ್ಟ್‌ವೇರ್ ಬೆಳೆಯುತ್ತದೆಯೇ ಹೊರತು ಹಾರ್ಡ್‌‌ವೇರ್‌ ಬೆಳೆಯುವುದಿಲ್ಲ. ಅಮೆರಿಕದಲ್ಲಿ ಒಂದು ಕನ್ನಡಿಗರ ಸಮಾವೇಶ ನಡೆದಿತ್ತು. ಅದರಲ್ಲಿ ಭಾಗವಹಿಸಿದ್ದ ಅಮೆರಿಕನ್ನಡಿಗರೆಲ್ಲಾ ಸಾಫ್ಟ್‌ವೇರ್‌ ಉದ್ದಿಮೆಯಲ್ಲಿ ಇರುವವರು. ಆ ಸಮಾವೇಶದಲ್ಲಿ ನಾನೊಂದು ಜೋಕ್‌ಮಾಡಿದೆ –  ‘ನೀವು ಸಾಫ್ಟ್‌ವೇರ್‌ನಲ್ಲಿ ಇದ್ದೀರಿ. ನಿಮ್ಮ ಅಂಗಿ ತೆಗೆದರೆ ಇರುವ ಜನಿವಾರವೂ ಕೂಡ ಸಾಫ್ಟ್‌ವೇರ್.’

ಭಾರತೀಯರು ಸಾಫ್ಟ್‌ವೇರ್‌ನಲ್ಲಿ ಮಾತ್ರ ಮುಂದಿದ್ದಾರೆ. ಹಾರ್ಡ್‌ವೇರ್‌ನಲ್ಲಿ ಅವರ ಸಾಧನೆ ಇಲ್ಲವೇ ಇಲ್ಲ. ಇದಕ್ಕೆ ಇರುವ ಕಾರಣ ಬಹಳ ಸರಳ. ಹಾರ್ಡ್‌‌ವೇರ್ ಮಾಡುವುದಕ್ಕೆ ಸಾಧ್ಯವಿರುವುದು ಯಾರ ಜ್ಞಾನ ಅವರ ಕೈಬೆರಳುಗಳು, ಮಾಂಸಖಂಡಗಳು ಮತ್ತು ಉಸಿರಿನಲ್ಲಿದೆಯೋ ಅವರಿಗೆ ಮಾತ್ರ. ಅಂದರೆ ಯಾವ ಜ್ಞಾನ ಅವರ ಜೀವನ ಕ್ರಮದಲ್ಲಿದೆಯೋ ಅವರಿಗೆ ಸಾಧ್ಯ.

ಯಾರ ಜ್ಞಾನ ಜೀವನ ಕ್ರಮದಲ್ಲಿದೆಯೋ ಅವರ ಜಾಣ್ಮೆಯನ್ನು ಬಳಸಿಕೊಳ್ಳುವುದಕ್ಕೆ ಆಗದೇ ಇರುವಂತೆ ಈ ನಮ್ಮ ಶಿಕ್ಷಣ ಕ್ರಮವನ್ನು ನಾವು ರೂಪಿಸಿದ್ದೇವೆ. ಆದುದರಿಂದ ನಾವು ಶಿಕ್ಷಣ ಕ್ಷೇತ್ರದಲ್ಲಿ ಅಗತ್ಯವಿರುವ ಬದಲಾವಣೆಗಳಿಗಾಗಿ ಪ್ರಯತ್ನಿಸಬೇಕು.

ನಮ್ಮ ನಡುವಿನ ರೈತ ಚಳವಳಿಯ ಜನ, ದಲಿತ ಚಳವಳಿಯ ಕ್ರಿಯಾಶೀಲರು ಕೇವಲ ಮಧ್ಯಮವರ್ಗದ ಪ್ರಶ್ನೆಗಳನ್ನೇ ಮುಂದೆ ಮಾಡಿಕೊಂಡಾರು ಎಂಬ ಆತಂಕದಿಂದ ನನ್ನ ಮೇಲಿನ ಮಾತುಗಳು ಹುಟ್ಟಿಕೊಂಡಿವೆ. ಏಕೆಂದರೆ ಈಗ ನಡೆಯುತ್ತಿರುವ ಅಹಿಂದದಂಥ ಚಳವಳಿಗಳು ಕೇವಲ ಸರಕಾರೀ ಕೆಲಸದಲ್ಲಿ ಮೀಸಲಾತಿಯನ್ನು ಒದಗಿಸುವುದಕ್ಕೆ ಮಾತ್ರ ಹೋರಾಟ ನಡೆಸುವಂತೆ ಕಾಣಿಸುತ್ತಿದೆ. ಇದು ಬಹಳ ದೊಡ್ಡ ತಪ್ಪು. ಸರಕಾರೀ ಕೆಲಸಗಳ ಸಂಖ್ಯೆಯಾದರೂ ಎಷ್ಟಿದೆ? ಇರುವ ಸ್ವಲ್ಪ ಕೆಲಸಕ್ಕೆ ಮುನ್ನುಗ್ಗುವವರು ಹೆಚ್ಚಾದಾಗ ಜಾತಿ ಜಾತಿಗಳ ಮಧ್ಯೆ ಜಗಳ ಆರಂಭವಾಗುತ್ತದೆ. ಕುರುಬರನ್ನು ಕಂಡರೆ ಒಕ್ಕಲಿಗರಿಗೂ, ಒಕ್ಕಲಿಗರನ್ನು ಕಂಡರೆ ಕುರುಬರಿಗೂ ಆಗದಂಥ ಸ್ಥಿತಿ ಬರುತ್ತದೆ. ಆದ್ದರಿಂದ ಮೀಸಲಾತಿಯನ್ನು ಅನಗತ್ಯ ಮಾಡುವ ಹೊಸ ಮೀಸಲಾತಿ ಮತ್ತು ಸಮಾನ ಶಿಕ್ಷಣ –  ಈ ಎರಡರ ಮುಖೇನ ಒಂದು ದೊಡ್ಡ ಚಳುವಳಿ ಹುಟ್ಟಿಕೊಳ್ಳುವುದು ಅಗತ್ಯವಾಗಿದೆ.

೨೬೨೦೦೬

* * *