ಈಚೆಗೆ ಬೆಂಗಳೂರಿಗೆ ಅಮೆರಿಕದಲ್ಲಿರುವ ಬಂಗಾಳದ ಖ್ಯಾತ ಲೇಖಕಿ ಗಾಯತ್ರಿ ಸ್ಪೀವಾಕ್‌ ಬಂದಿದ್ದರು. ಅವರು ತಮ್ಮ ಕ್ರಾಂತಿಕಾರಕವಾದ ‘ಸಬಾಲ್ಟರನ್‌’ ರಾಜಕೀಯ ಸಾಂಸ್ಕೃತಿಕ ಕ್ರಿಯೆಗಳಿಗೂ, ಜೊತೆಗೆ ಬಂಗಾಳಿಯಿಂದಲೂ ಫ್ರೆಂಚ್‌ನಿಂದಲೂ ತಾವು ಮಾಡುವ ಭಾಷಾಂತರಗಳಿಗೂ ಸಮಾನವಾದ ಭೂಮಿಕೆಯೊಂದನ್ನು ಸೃಷ್ಟಿಸಿಕೊಳ್ಳಲು ‘ಅನುವಾದ’ ಎನ್ನುವ ಪದವನ್ನು ಬಳಸಿದರು. ಈ ‘ಅನುವಾದ’ಕ್ಕೆ ಅವರ ತಾತ್ವಿಕತೆ ಹಚ್ಚಿದ ಅರ್ಥಗಳು ಅನೇಕ. ಅನುಸರಿಸಿದ್ದು ಎನ್ನುವುದು ಒಂದು ಅರ್ಥ. ಅನಂತರದ್ದು –  ಕಾಲದಲ್ಲಿ ಅಲ್ಪ; ತದ್ತವಾಗುವ ಸಾನ್ನಿಧ್ಯದಲ್ಲಿ –  ಎನ್ನುವುದು ಇನ್ನೊಂದು ಅರ್ಥ.

ಗಾಯತ್ರಿಯವರು ಬಂಗಾಳದ ಗಿರಿಜನರ ಜೊತೆ ಸೇರಿಕೊಂಡು ಹಲವು ಶಾಲೆಗಳನ್ನು ನಡೆಸುತ್ತಾರೆ. ಅದರ ಶಿಕ್ಷಕರನ್ನು ತಯಾರು ಮಾಡುತ್ತಾರೆ. ಗಿರಿಜನರ ಮನಸ್ಸಿನೊಳಗೆ ತನ್ನ ಬೇರೆಯದೇ ಆದ ಮನಸ್ಸನ್ನು ತೊಡಗಿಸಿಕೊಳ್ಳಲು ಅವರು ಮಾಡುವ ಪ್ರಯತ್ನವನ್ನೂ, ಅಂತೆಯೇ ಪಾಶ್ಚಾತ್ಯ ಡೆರಿಡಾನನ್ನೋ, ಬಂಗಾಳಿ ಮಹಾಶ್ವೇತಾ ದೇವಿಯವರನ್ನೋ ಅವರು ಇಂಗ್ಲಿಷಿಗೆ ತರ್ಜುಮೆ ಮಾಡುವಾಗಲೂ ನಡೆಯುವ ಗ್ರಹಿಕೆಯ ಕ್ರಮಗಳನ್ನೂ ಸಂಯೋಜಿಸಲು ಪ್ರಯತ್ನಿಸುತ್ತಾ ಅವರು ಈ ‘ಅನುವಾದ’ ಶಬ್ದವನ್ನು ಬಳಸಿದ್ದು.

ನನ್ನ ಮಟ್ಟಿಗೆ ರಾಜಾರಾಯರ (೧೯೦೮ – ೨೦೦೬) ‘ಕಾಂತಪುರ’ದಂತಹ ಇನ್ನೊಂದು ಅನುವಾದವನ್ನು ನಾನು ಕಾಣೆ. ಇಡೀ ಕಾದಂಬರಿ ನಡೆಯುವುದು ಕನ್ನಡದಲ್ಲಿ. ಕರ್ನಾಟಕದ ಒಂದು ಹಳ್ಳಿಯಲ್ಲಿ. ಅಕ್ಷರ ಬರುವ ಬಾರದ ಒಂದು ಸಮುದಾಯದಲ್ಲಿ. ಆದರೆ ಇಡೀ ಕಾದಂಬರಿ ಅನುವಾದವಾಗಿ ಇರುವುದು –  ಗಾಯತ್ರಿ ಸ್ಪೀವಾಕ್‌ ಅರ್ಥದಲ್ಲಿ –  ಇಂಗ್ಲಿಷಿನಲ್ಲಿ. ನನ್ನ ಯಜಮಾನ –  ವೈರಿಗಳೇ ಆಗಿದ್ದ ಬ್ರಿಟಿಷರು ಆಡುವ ಭಾಷೆಯಾದ ಇಂಗ್ಲಿಷ್‌ನಲ್ಲಿ. ಮುಖ್ಯವಾಗಿ ಅವರು ಆಳುತ್ತಿದ್ದ ಮುವ್ವತ್ತರ ದಶಕದಲ್ಲಿ. ಒಂದರ್ಥದಲ್ಲಿ ಇದು ಕ್ಯಾಲಿಬಾನ್, ಪ್ರಾಸ್ಪರೋನಿಂದ ಭಾಷೆಯನ್ನು ಕಲಿತು ಆ ಭಾಷೆಯಲ್ಲೇ ಅವನನ್ನು ಶಪಿಸಿದಂತೆ. ಇನ್ನೊಂದು ಅರ್ಥದಲ್ಲಿ ನಮ್ಮನ್ನು ಆಳುವವರ ಭಾಷೆಯನ್ನೇ ನಮ್ಮ ಭಾಷೆಯನ್ನಾಗಿಯೂ, ಅವರು ಇಷ್ಟ  ಪಡಲಿ ಬಿಡಲಿ, ನಮ್ಮದನ್ನಾಗಿ ಪಳಗಿಸಿಕೊಂಡಂತೆ.

ಮೆಕಾಲೆ ಇದನ್ನು ನಮ್ಮಿಂದ ನಿರೀಕ್ಷಿಸಿರಲಿಲ್ಲವೇನೊ? ಭಾರತೀಯರು ಇಂಗ್ಲಿಷನ್ನು ಕಲಿತು ತಮ್ಮನ್ನು ಅನುಸರಿಸುತ್ತಾರೆ ಎಂದು ಅವನು ತಿಳಿದಿದ್ದ. ರಾಜಾರಾಯರು ಇಂಗ್ಲಿಷೇ ನಮ್ಮನ್ನು ಅನುಸರಿಸುವಂತೆ ಮಾಡುತ್ತೇನೆಂದು ಹೊರಟರು. ಪ್ರಾಯಶಃ ಇಂಗ್ಲೆಂಡ್ ಜನರ ಪುರಾತನನಾದ ಚಾಸರ್‌ಗೂ ಕಷ್ಟಸಾಧ್ಯವಾದ ಸ್ಥಳಪುರಾಣವನ್ನು ಬರೆದರು.

ಇದಾದ ನಂತರ ರಾಜಾರಾಯರು ‘ಸರ್ಪೆಂಟ್‌ ಅಂಡ್ ದಿ ರೋಪ್’ ಬರೆದರು. ಕನ್ನಡದಿಂದ ‘ಕಾಂತಾಪುರ’ ಬಂದರೆ ಸಂಸ್ಕೃತದಿಂದ ‘ಸರ್ಪೆಂಟ್ ಅಂಡ್ ದಿ ರೋಪ್’ ಬಂದಿತು ಎನ್ನಬಹುದು. ಹಗ್ಗವನ್ನು ಹಾವೆಂದು ಭ್ರಮಿಸುವ ಪ್ರಸಿದ್ಧ ಉಪಮೆ ಅದ್ವೈತ ಸಿದ್ಧಾಂತಕ್ಕೆ ಸೇರಿದ್ದು. ಈ ಕಾದಂಬರಿಯಲ್ಲಿ ರಾಜಾರಾಯರು ಇಂಗ್ಲಿಷಿಗೆ ಉಪನಯನ ಮಾಡಿ ಜನಿವಾರವನ್ನೇ ತೊಡಿಸಿದರು ಎಂದು ಪ್ರಸಿದ್ಧ ಭಾಷಾವಿಜ್ಞಾನಿಯೊಬ್ಬ ಹೇಳುತ್ತಾನೆ.

ಮೂರು ದಶಕಗಳಿಗೂ ಹಿಂದೆ ಈ ಕಾದಂಬರಿಯನ್ನು ಓದಿದಾಗ ನನ್ನಂಥವರಿಗೆ ಆದ ವಿಲಕ್ಷಣ ಅನುಭವ ನೆನಪಾಗುತ್ತದೆ. ಇದೊಂದು ಹೊಸ ಬಗೆಯ ಕಾದಂಬರಿ ಎನ್ನಿಸಿತು. ಈ ಕಾದಂಬರಿ ಅಡ್ಡಾದಿಡ್ಡಿಯಾಗಿ ಬೇಕಾದ ಕಡೆ ತನ್ನ ಪಾಡಿಗ ತಾನು ಚಲಿಸುವ ರೀತಿ ಖಂಡಿತಾ ಇಂಗ್ಲಿಷ್‌ ಸಾಹಿತ್ಯದ ಪರಂಪರೆಯದ್ದಲ್ಲ. ಉಪಕಥೆಗಳಲ್ಲಿ ಮುಖ್ಯ ಕಥೆಯನ್ನೇ ಮರೆಯುತ್ತಾ, ತಿರುಗಿ ಮುಖ್ಯಕಥೆಗೆ ಹಿಂದಿರುಗುತ್ತಾ, ಅಲ್ಲಿ ಇಲ್ಲಿ ಪ್ರವಚನ ಮಾಡುತ್ತಾ ಸಾಗುವ ಪುರಾತನ ಭಾರತೀಯ ಪೌರಾಣಿಕ ಕಥಾನಕಗಳ ರೀತಿ ಇದರದ್ದು. ನವ್ಯರಾದ ನಾವು ಯೂರೋಪಿಗೆ ಹತ್ತಿರವಾಗಿ ಚಲಿಸುತ್ತಿದ್ದಂತೆ, ತನ್ನ ನಿತ್ಯದ ಬದುಕಿನಲ್ಲಿ ಯೂರೋಪಿಗೆ ಹತ್ತಿರವಾದ ರಾಜಾರಾಯರು ನಾವು ಆಧುನಿಕ ಭಾರತೀಯರಾಗಿ ನಮ್ಮ ಬವಣೆಗಳಲ್ಲಿ ಪ್ರಶ್ನಿಸುತ್ತಿದ್ದ ಭಾರತಕ್ಕೆ ಅದು ಪುರಾತನವಲ್ಲ, ಸನಾತನ ಎಂದು ತಿಳಿದು ಹಿಂದಿರುಗಿದ್ದರು. ಇದೊಂದು ವಿಪರ್ಯಾಸವಾಗಿ ನಮಗೆ ಕಾಣಿಸಿತ್ತು. ಇಂಗ್ಲಿಷ್ ಮಾತಾಡುವ ಪ್ರಪಂಚದಲ್ಲಿ ತನ್ನ ಸ್ಥಾನವನ್ನು ಪಡೆದುಕೊಳ್ಳಲು ಇವರು ಭಾರತದ ಕಾಪಿರೈಟ್‌ ಪಡೆದುಕೊಂಡ ಟೂರಿಸ್ಟ್ ಗೈಡ್‌ನಂತೆಯೂ ನಮಗೆ ಕಾಣತೊಡಗಿದ್ದರು. ಭಾರತವೊಂದು ಅಮೆರಿಕನ್ನರಿಗೆ ಮ್ಯೂಸಿಯಂನಲ್ಲಿ ದರ್ಶನೀಯವಾಗುವಂಥ ಅಪರೂಪದ ಪದಾರ್ಥವಾಯಿತೆಂದು ಇವರ ಬರವಣಿಗೆಯನ್ನು ನಾವು ಟೀಕಿಸಿದ್ದುಂಟು. ಎಡ್ವರ್ಡ್ ಸೈದ್‌ನ ಮಾತಿನಲ್ಲಿ ಹೇಳುವುದಾದರೆ ಪಾಶ್ಚಿಮಾತ್ಯ ಓರಿಯಂಟಿಸ್ಟರ ಅನುಗ್ರಹಕ್ಕೆ ಪಾತ್ರವಾಗಬಲ್ಲ ಅಲೌಕಿಕ ಭಾರತವನ್ನು ಅವರು ಸೃಷ್ಟಿಸಿದ್ದರು. ಆದರೂ ಈ ಕಾದಂಬರಿಯಲ್ಲಿ ಬರುವ ಮದುವೆಯೊಂದರ ವರ್ಣನೆ, ಕಾಶಿ ವರ್ಣನೆ, ಪ್ಯಾರಿಸ್‌ನ ವರ್ಣನೆ ಶ್ರೇಷ್ಠ ಕಥೆಗಾರ ಮಾತ್ರ ಸೃಷ್ಟಿಸಬಲ್ಲಂಥವೆಂದೂ ನಾವು ರಾಜಾರಾಯರ  ಪ್ರತಿಭೆಗೆ ಬೆರಗಾಗಿದ್ದೆವು. ಆದ್ದರಿಂದ ಆ ಕಾಲದಲ್ಲಿ ನಮ್ಮನ್ನು ಬಹುವಾಗಿ ಕಾಡಿದ ಕೃತಿಗಳಲ್ಲಿ ಇದೂ ಒಂದು.

ರಾಜಾರಾಯರದ್ದು ಬಹಳ ಆಕರ್ಷಕವಾದ ವ್ಯಕ್ತಿತ್ವ. ಕಾರಂತರ ಹಾಗೆ ಕತ್ತಿನ ಮೇಲೆ ಉದ್ದ ಕೂದಲು ಇವರದ್ದು. ನೀಳವಾದ ಮೂಗು, ಹೊಳೆಯುವ ಕಣ್ಣುಗಳು, ಮೃದುವಾದ ಮಾತು – ಇವುಗಳಿಂದಾಗಿ ಯಾವ ಗುಂಪಿನಲ್ಲಾದರೂ ಎದ್ದು ಕಾಣುತ್ತಿದ್ದ ವ್ಯಕ್ತಿತ್ವ ಇವರದ್ದು. ಫ್ರೆಂಚ್ ಹೆಂಡತಿಯನ್ನು ಬಿಟ್ಟ ನಂತರ ಅಮೆರಿಕನ್ ಒಬ್ಬಳನ್ನು ಇವರು ಮದುವೆಯಾಗಿದ್ದರು. ಇಬ್ಬರೂ ಆಗಿನ ನಮ್ಮ ಗುರುಗಳಾದ ಪ್ರೊ. ಸಿ.ಡಿ. ನರಸಿಂಹಯ್ಯನವರಿಗೆ ಆಪ್ತರು. ಮೈಸೂರಿಗೆ ಬಂದಾಗ ಇವರಾಡುವ ಎಲ್ಲ ಮಾತುಗಳನ್ನೂ ನಾನು ಕೇಳಿಸಿಕೊಂಡಿದ್ದೇನೆ. ಭಾಷೆಯಲ್ಲಿ ಅರ್ಥ ಸ್ಫೋಟವಾಗುವುದು ಹೇಗೆ ಎಂಬುದನ್ನು ವಿವರಿಸಲು ಇವರು ಒಂದು ದಿನ ನಮ್ಮೆದುರು ಕೂತು ತಾನು ಆಡುವುದನ್ನು ಗಮನಿಸಲು ಹೇಳಿದರು. ‘ರಾ’ ಎಂದರು. ಈಗ ಕೇಳಿ ಎಂದು ‘ಮ’ ಎಂದರು. ರಾ ಜತೆ ಮ ಕೂಡಿದಾಗ ಕೇಳುಗರ ಮನಸ್ಸಿನಲ್ಲಿ ಒಂದು ಸ್ಫೋಟವಾಗುತ್ತದೆಲ್ಲಾ ಆ ಸ್ಫೋಟವೇ ಭಾಷೆ ಎಂದರು.

ಅಮೆರಿಕದ ಆಸ್ಟಿನ್ ಟೆಕ್ಸಾಸ್‌ ವಿಶ್ವವಿದ್ಯಾನಿಲಯದಲ್ಲಿ ಇವರ ಭಾಷಣಗಳನ್ನು ಕೇಳಲು ಹಾಲಿನಲ್ಲಿದ್ದ ಎಲ್ಲ ಕುರ್ಚಿಗಳೂ ತುಂಬಿ ನೆಲದ ಮೇಲೂ ಯುವ ವಿದ್ಯಾರ್ಥಿಗಳು ಕೂತಿರುತ್ತಿದ್ದರಂತೆ. ಅದು ವಿಯಟ್ನಾಂ ಯುದ್ಧದ ನಂತರದ ಅಮೆರಿಕನ್ನರ ಆಧ್ಯಾತ್ಮಿಕ ಹುಡುಕಾಟದ ಹಿಪ್ಪಿ ಕಾಲಘಟ್ಟ. ಆದರೆ ಆ ಕಾಲ ಅಲ್ಪಾಯುವಾದದ್ದು. ಎಪ್ಪತ್ತರ ದಶಕದ ಮಧ್ಯದಲ್ಲಿ ನಾನು ಅಮೆರಿಕಕ್ಕೆ ಪಾಠ ಮಾಡಲು ಹೋದಾಗ ಈ ಹಿಪ್ಪೆಗಳೆಲ್ಲರೂ ತಮ್ಮ ಉದ್ದನೆಯ ಅಸ್ತವ್ಯಸ್ತ ಕೂದಲನ್ನು ಎಲೆಕ್ಟ್ರಿಕ್ ಬಾಚಣಿಗೆಯಲ್ಲಿ ಒಪ್ಪ ಮಾಡಿಕೊಳ್ಳಲು ತೊಡಗಿದ್ದರು. ಆದರೆ ರಾಜಾರಾಯರು ಮತ್ತು ಅವರ ವಿಲಕ್ಷಣ ಗೆಳೆಯರೂ ಆದ  ದೇಸಾನಿಯವರು ತಮ್ಮ ಭಾರತೀಯ ಹುಡುಕಾಟವನ್ನು ಬಿಟ್ಟುಕೊಟ್ಟಿರಲಿಲ್ಲ.

೧೯೯೭ ರಲ್ಲಿ ನಾನು ಮತ್ತೆ ಆಸ್ಟಿನ್‌ನ ಟೆಕ್ಸಾಸ್ ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ಉದ್ದೇಶ ರಾಜಾರಾಯರಿಗೆ ಸಾಹಿತ್ಯ ಅಕಾಡೆಮಿಯ ಅತ್ಯಂತ ದೊಡ್ಡ ಪುರಸ್ಕಾರವಾದ ಫೆಲೋಷಿಪ್‌ಅನ್ನು ಅವರು ಇದ್ದಲ್ಲೇ ಹೋಗಿ ಕೊಡುವುದಾಗಿತ್ತು.

ಹಾಲುಬಣ್ಣದ ನುಣುಪಾದ ಉದ್ದ ಕೂದಲಿನ ರಾಜಾರಾಯರು ತಮ್ಮ ನಿಶ್ಯಕ್ತ ದೇಹಸ್ಥಿತಿಯಲ್ಲೂ ತೇಜಸ್ಸಿನ ಋಷಿಯೊಬ್ಬನ ಹಾಗೆ ಕಾಣುತ್ತಿದ್ದರು. ಅವರಿಗೆ ಆಗ ಮೂರನೆಯ ಮದುವೆಯಾಗಿತ್ತು. ಯುವತಿಯಾದ ಸೂಸನ್‌ ಅವರನ್ನು ಕಾಪಾಡುತ್ತಿದ್ದ ಕ್ರಮ ಮನಮುಟ್ಟುವಂತಿತ್ತು. ರಾಜಾರಾಯರ ಪಾಲಿಗೆ ಅವರು ಅಮೆರಿಕನ್‌ ಯುವಜನರ ಆಧ್ಯಾತ್ಮಿಕ ಗುರುಗಳಾಗಿದ್ದಾಗಿನ ಕಾಲವನ್ನು ಇನ್ನೂ ತನ್ನ ಶ್ರದ್ಧೆಯಲ್ಲಿ ಉಳಿಸಿದವಳಂತೆ ಸೂಸನ್ ಕಂಡಳು.

ರಾಜಾರಾಯರು ಕರ್ನಾಟಕದಲ್ಲಿದ್ದಾಗ ಪಂಡಿತ ತಾರಾನಾಥರಿಗೆ ಬಹಳ ಹತ್ತಿರದವರು. ನನ್ನ ಗೆಳೆಯ ಸರೋದ್‌ ವಾದಕ ರಾಜೀವ್‌ ತಾರಾನಾಥರು ತುಂಗಭದ್ರೆಯ ಅವರ ತಂದೆ ಪಂಡಿತ ತಾರಾನಾಥರ ಆಶ್ರಮದಲ್ಲಿ ರಾಜಾರಾಯರು ಕಳೆಯುತ್ತಿದ್ದ ಕಾಲವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಬಲ್ಲರು. ಆಗಿನಿಂದಲೇ ಒಬ್ಬ ಗುರುವಿನ ಹುಡುಕಾಟದಲ್ಲಿದ್ದ ರಾಜಾರಾಯರು ಕೇರಳದಲ್ಲಿ ಒಬ್ಬ ಗುರುವನ್ನು ಪಡೆದರು. ಪ್ರತಿವರ್ಷ ಈ ಗುರುವನ್ನು ನೋಡಲು ರಾಜಾರಾಯರು ಸೂಸನ್ ಜತೆ ಬರುತ್ತಿದ್ದರು.

ಇವರ ಎರಡನೇ ಅಮೆರಿಕನ್‌ ಹೆಂಡತಿ ಕೂಡಾ ಈ ಗುರುವಿನ ಶಿಷ್ಯಳೇ. ನನ್ನನ್ನು  ಆಸ್ಟಿನ್‌ಗೆ ಒಂದು ಭಾಷಣಕ್ಕೆಂದು ಈಕೆ ಕರೆಸಿಕೊಂಡಿದ್ದರು. ಒಂದು ಕೊರಿಯನ್‌ ರೆಸ್ಟೋರೆಂಟಿಗೆ ಕರೆದುಕೊಂಡು ಹೋಗಿ ನನ್ನ ಜತೆ ರಾಜಾರಾಮ್ ಬಗ್ಗೆ ತುಂಬಾ ಅಭಿಮಾನದಿಂದಲೇ ಮಾತನಾಡಿದ್ದರು. ತಾವಿಬ್ಬರೂ ಒಟ್ಟಿಗೇ ಇದ್ದ ಮನೆಯನ್ನು ಕೂಡಾ ತೋರಿಸಿದ್ದರು. ಈ ಘಟನೆಯನ್ನು ನೆನೆದಾಗಲೆಲ್ಲಾ ನನಗೆ ಆಕೆಯ ಬಗ್ಗೆಯೂ ರಾಜಾರಾಯರ ಬಗ್ಗೆಯೂ ಅಭಿಮಾನವೆನ್ನಿಸುತ್ತದೆ. ರಾಜಾರಾಯರಿಗೆ ಫೆಲೋಷಿಪ್‌ ಕೊಡಲು ನಾನು ಹೋದಾಗ ಅವರ ಅಭಿಮಾನಿಗಳೆಲ್ಲರೂ ನೆರೆದಿದ್ದರು. ಅದಾದ ಮೇಲೆ ನಾನು ರಾಜಾರಾಯರನ್ನು ಅವರ ಮನೆಯಲ್ಲಿ ಹೋಗಿ ನೋಡಿದೆ. ರಾಜಾರಾಯರು ಮಲಗಿದ್ದರು. ಅವರ ಹೆಂಡತಿ ಸೂಸನ್ ಪಕ್ಕದಲ್ಲಿ ಕೂತಿದ್ದರು. ರಾಜಾರಾಯರು ತಮ್ಮ ದಣಿವನ್ನು ಲೆಕ್ಕಿಸದೆ ಮಾತನಾಡಲು ತೊಡಗಿದರು. ನಾನು ಮೊದಲು ಆಡಿದ ಎಲ್ಲ ಮಾತುಗಳ ಮೇಲೂ ಅವರು ಆ ದಿನ ಹೇಳಿದ್ದು ಹೊಸ ಬೆಳಕನ್ನು ಚೆಲ್ಲೀತೆಂದು ಭಾವಿಸುತ್ತೇನೆ.

ರಾಜಾರಾಯರು ತನ್ನ ಮೊದಲು ಹೆಂಡತಿಯ ಜತೆ ಪ್ಯಾರಿಸ್‌ನಲ್ಲಿ ಇದ್ದ ದಿನಗಳನ್ನು ನೆನಪು ಮಾಡಿಕೊಂಡರು. ಮೊದಲು ಕನ್ನಡದಲ್ಲಿ ಬರೆಯುತ್ತಿದ್ದ ರಾಜಾರಾಯರು ಇಂಗ್ಲಿಷ್‌ನಲ್ಲಿ ಬರೆಯಲು ಪ್ರಾರಂಭಿಸಿದ್ದೂ ಪ್ಯಾರಿಸ್‌ನಲ್ಲಿ. ಆಗ ಅವರ ಸ್ನೇಹಿತರೊಬ್ಬರು ಫ್ರೆಂಚ್ ಭಾಷೆಯ ಖ್ಯಾತ ಕಾದಂಬರಿಕಾರ ಆಂದ್ರೇ ಮಾಲ್ರೋ. ರಾಜಾರಾಯರ ಫ್ರೆಂಚ್ ಹೆಂಡತಿಗೆ ಇವರ ಇಂಗ್ಲಿಷ್‌ ಬರವಣಿಗೆ ಕೃತಕ ಎನ್ನಿಸಿತಂತೆ. ರಾಜಾರಾಯರು ಸ್ವಂತ ಬರೆಯುತ್ತಿದ್ದುದನ್ನು ಬಿಟ್ಟು ಕನ್ನಡದ ವಚನಗಳನ್ನು ಇಂಗ್ಲಿಷಿಗೆ ಭಾಷಾಂತರಿಸಲು ಪ್ರಾರಂಭಿಸಿದರಂತೆ. ಆಗ ಅವರು ಹುಡುಕಿಕೊಂಡ ವಚನಕ್ಕೆ ಹತ್ತಿರವಾಗಬಲ್ಲ ಇಂಗ್ಲಿಷ್ ಅವರಿಗೆ ತನಗೆ ಬೇಕಾದ ಇಂಗ್ಲಿಷನ್ನು ಕಂಡುಕೊಳ್ಳಲು ಸಹಾಯ ಮಾಡಿತಂತೆ.

‘ಈಗ ನಾನು ಮತ್ತೆ ಕನ್ನಡದಲ್ಲಿ ಬರೆಯುತ್ತಿದ್ದೇನೆ’ ಎಂದು ತಮ್ಮ ಮಾತನ್ನು ಕೊನೆಮಾಡಿದ್ದರು.

ಇಂಗ್ಲಿಷ್‌ನಲ್ಲಿ ಭಾಷೆಗಳ ಸಂಕರದ ಕಾಲವನ್ನು ಪ್ರಾರಂಭಿಸಿದವರಲ್ಲಿ ಇಬ್ಬರು ಮುಖ್ಯರು: ‘ಆಲ್ ಎಬೌಟ್ ಎಚ್ ಹ್ಯಾಟರ್’ ಬರೆದ ದೇಸಾನಿ ಮತ್ತು ರಾಜಾರಾಯರು. (ದೇಸಾನಿಯನ್ನು ಕವಿ ಎಲಿಯೆಟ್ ಮೆಚ್ಚಿಕೊಂಡಿದ್ದ). ಈ ಸಂಕರ ತನ್ನ ಮಹತ್ವದ ಫಲಗಳನ್ನು ಆರುಂಧತಿ ರಾಯ್‌ರ ಕಾದಂಬರಿಯಲ್ಲು ಸಲ್ಮಾನ್‌ ರಶ್ದಿಯವರ ಬರಹಗಳಲ್ಲೂ ಪಡೆದಿವೆ ಎನ್ನಬಹುದು. ಮುಖ್ಯವಾಹಿನಿಯ ಇಂಗ್ಲಿಷ್ ಬಿಬಿಸಿ ಅಥವಾ ಸಿಎನ್‌ಎನ್‌ಗಳು ಮಾಡುವ ಬಾಹ್ಯಲೋಕದ ವಿವರಣೆಗೆ ಮಾತ್ರ ಸಾಕಾಗುವಂಥದ್ದು. ಅಂಥ ಇಂಗ್ಲಿಷ್‌ನಲ್ಲಿ ನಮ್ಮ ಲೇಖಕರು ಬರೆದಿದ್ದರೆ ಅದು ಯಾರ ಕಣ್ಣಿಗೂ ಬೀಳುತ್ತಿರಲಿಲ್ಲ. ಸಂಕರದಲ್ಲಿ ಇಂಗ್ಲಿಷ್ ಜೀವಂತವಾಗಿದೆ. ಅಂದರೆ ಇಂಗ್ಲಿನ ಹೊಸ ಜೀವಂತಿಕೆಗೆ ಉಗಮವಿರುವುದು ನಮ್ಮ ಭಾರತೀಯ ಭಾಷೆಗಳ ಸಾನ್ನಿಧ್ಯದ ಜೀವಂತಿಕೆಯಲ್ಲೇ ಎಂದು ನಾನು ಕೆಲವು ಸಾರಿ ಹೇಳಿ ಇಂಗ್ಲಿಷ್‌ ಪ್ರತಿಪಾದಕರ ಸಿಟ್ಟಿಗೆ ಒಳಗಾಗಿದ್ದೇನೆ.

ಭಾರತೀಯ ಇಂಗ್ಲಿಷ್ ಲೇಖಕರಲ್ಲಿ ನನಗೆ ತುಂಬ ಇಷ್ಟವಾದುವರು ಯಾರೆಂದರೆ ಆರ್.ಕೆ. ನಾರಾಯಣ್‌. ಇವರೇನೂ ನಮ್ಮ ಕುವೆಂಪು, ಮಾಸ್ತಿ, ಕಾರಂತರ ಹಾಗಿನ ವಿಶೇಷ ದಾರ್ಶನಿಕ ಶಕ್ತಿಯ ಬರಹಗಾರರಲ್ಲ. ಆದರೆ ಅವರಲ್ಲಿ ಆಗುವ ಭಾಷಾ ಸಂಕರ ಕಂಡರೂ ಕಾಣಿಸದ ಹಾಗೆ ಇರುತ್ತದೆ. ನಾರಾಯಣ್‌ರ ಇಂಗ್ಲಿಷು ಒಂದು ಬಗೆಯ ಉದಾಸೀನದಲ್ಲೂ ಆಲಿಪ್ತ ಸ್ಥಿತಿಯಲ್ಲೂ ನಾವೆಲ್ಲರೂ ಬಳಸಬಹುದಾದ ಇಂಗ್ಲಿಷ್. ಅವರು ಆರಿಸಿಕೊಳ್ಳುವುದು ಕೂಡಾ ಆಧ್ಯಾತ್ಮಿಕ ಆಯಾಮಕ್ಕಾಗಿ ಯಾವ ಆಯಾಸವನ್ನೂ ಪಡದೆ ಆರಾಮಾಗಿ ಬೆಳೆಯುವ ಕಥನಗಳನ್ನು. ಈ ಆಪ್ತಕಥನಗಳಲ್ಲಿ ನಾರಾಯಣ್‌ರು ಭಾರತಕ್ಕಿರುವ ಬಾಳುವ ‘ಖದೀಮ ಜಾಣ್ಮೆ’ಯನ್ನು ತುಂಬ ಸಹಾನುಭೂತಿಯಿಂದ ಲಘು – ಅನುಕರಣೆಯ ವಿನೋಧದಲ್ಲಿ ಚಿತ್ರಿಸುತ್ತಾರೆ.

ಮೈಸೂರಿನ ಬೀದಿ ಬದಿಯ ಸಣ್ಣ ಡಬ್ಬ ಅಂಗಡಿಗಳು; ಅದರಲ್ಲಿ ಉರಿಯುತ್ತಾ ನೇತಾಡುವ ಒಂದು ಬಲ್ಬು; ಅಂಗಡಿಯ ಟಿನ್ನಿನ ಛಾವಣಿಗೆ ನೇತು ಬಿದ್ದ ಬಾಳೆಹಣ್ಣಿನ ಗೊನೆ; ಉದಾಸೀನನಾಗಿ ಕೂತ ಮಾಲೀಕರ ಎದುರು ಸಾಲಾಗಿ ಗಾಜಿನ ಭರಣಿಗಳಲ್ಲಿ ಇರುವ ಪೆಪ್ಪರ್ಮಿಂಟಗಳು. ಕೂತ ಮಾಲೀಕನ ಪಕ್ಕಕ್ಕೇ ಇರುವ ಒಂದು ಮುಟೆಯಲ್ಲಿ ಹುರಿದ ನೆಲಗಡಲೆ –  ಇಂತಹ ದೃಶ್ಯಗಳನ್ನು ಖುಷಿಯಲ್ಲಿ ಗಮನಿಸುತ್ತ, ಯಾವ ನಿಶ್ಚಿತ ಗುರಿಯೂ ಇಲ್ಲದಂತೆ, ವ್ಯಾಯಾಮಕ್ಕೂ ಅಲ್ಲವೆಂಬಂತೆ ಮೈಸೂರಿನ ಬೀದಿಗಳಲ್ಲಿ ಸೋಮಾರಿಯಂತೆ ತಾವೂ ಓಡಾಡಿ ನಮ್ಮನ್ನೂ ಓಡಾಡಿಸಿದವರು ಆರ್ ಕೆ ನಾರಾಯಣರು.

ರಾಜಾರಾವ್ ಮತ್ತು ನಾರಾಯಣ್ ವಿಭಿನ್ನ ವ್ಯಕ್ತಿಗಳು. ಯಾವ ತೋರಿಕೆಯೂ ಇಲ್ಲದ ಬರೆವಣಿಗೆ ನಾರಾಯಣರದ್ದು. ರಾಜಾರವ್ ಅವರದ್ದು ಕೊಂಚ ತೋರಿಕೆಯ ಬರವಣಿಗೆ. ಆದರೆ ನಮ್ಮಲ್ಲಿ ಎಲ್ಲರೂ ಒಂದಲ್ಲ ಒಂದು ಕಾಲದಲ್ಲಿ ಮೆಚ್ಚಿಕೊಂಡ, ಅಥವಾ ಹಚ್ಚಿಕೊಂಡ ಅಪ್ಪಟ ಭಾರತೀಯತೆಯ ಹುಡುಕಾಟದಿಂದ ಹುಟ್ಟಿದ ತೋರಿಕೆಯದು. ಒಬ್ಬರು ಸತ್ತು ಶತಮಾನ ಮುಗಿಸಿದ್ದಾರೆ. ಇನ್ನೊಬ್ಬರು ಶತಮಾನ ಮುಗಿಸುವವರೆಗೆ ತಾನು ಭಾರತದಲ್ಲಿದ್ದೇನೆಂದೇ ಭಾವಿಸುತ್ತಾ ಅಮೆರಿಕದಲ್ಲಿದ್ದು ಸತ್ತಿದ್ದಾರೆ. ಕನ್ನಡ ನಾಡಿನ ಜತೆಗೇ ಭಾರತದ ಶ್ರೀಮಂತಿಕೆಗೆ ಈ ಇಬ್ಬರೂ ಬಹಳ ಮುಖ್ಯರು.

ರಾಜಾರಾಯರು ಬೇಂದ್ರೆ, ಕುವೆಂಪು, ಮಾಸ್ತಿ, ಶ್ರೀರಂಗ –  ಇವರ ಕಾಲದವರೇ, ಕೊಂಚ ಅವರಿಗಿಂತ ಚಿಕ್ಕವರು. ಆಶ್ಚರ್ಯವೆಂದರೆ ಬೇಂದ್ರೆ, ಕುವೆಂಪು, ಮಾಸ್ತಿ, ಶ್ರೀರಂಗ ಎಲ್ಲರೂ ಇಂಗ್ಲಿಷಿನಲ್ಲೂ ಬರೆದವರು. ಅಥವಾ ಬರೆಯಬಲ್ಲೆವು ಎಂದು ತಿಳಿದು ಅನಂತರ ಬಿಟ್ಟವರು. ರಾಜಾರಾಯರು ಕನ್ನಡದಲ್ಲೂ ಒಂದು ಕಾಲದಲ್ಲಿ ಬರೆದವರೇ. ಕೆಲವು ವರ್ಷಗಳ ಹಿಂದೆ ಮತ್ತೆ ಕನ್ನಡದಲ್ಲಿ ಏಕಾಂಗಿಯಾಗಿ ಅಮೆರಿಕಾದಲ್ಲಿದ್ದುಕೊಂಡೇ ಬರೆಯಬಲ್ಲೆನೆಂದು ತಿಳಿದು ಆಶಿಸಿದವರು ಕೂಡ. ವಸಾಹತುಶಾಹಿಯ ಚರಿತ್ರೆಯ ಈ ಸಂಕರಗಳಲ್ಲಿ ಯಾರು ಹೇಗೆ ಎಲ್ಲಿ ಗಟ್ಟಿಯಾದರೆಂಬುದೇ ಒಂದು ವಿಶೇಷ ಅಧ್ಯಯನದ ಸಂಗತಿಯಾಗಬಹುದು.

೧೬೨೦೦೬

* * *