ನೋಯಿಡಾ ಘಟನೆಯನ್ನು ಇಡೀ ದೇಶ ಚರ್ಚಿಸುತ್ತಿದೆ. ಬಡಮಕ್ಕಳ ಸರಣಿ ಕೊಲೆಯ ಬಗ್ಗೆ ಕೇಳಿದೊಡನೆ ನಾವು ಪಟ್ಟ ಒಂದು ಘಳಿಗೆಯ ತಲ್ಲಣ ಈಗ ಕುತೂಹಲವಾಗಿ ಪರಿಣಮಿಸುತ್ತಿದೆ. ಮಾನವನ ಪಾಡೇ ಇದಿರಬಹುದು. ಹೆಚ್ಚು ಕಾಲ ದರ್ಶನದ ತಲ್ಲಣವನ್ನು ನಾವು ಸಹಿಸಲಾರೆವು. ಈಗ ನಮ್ಮ ಕುತೂಹಲ ಮಕ್ಕಳನ್ನು ಕೊಂದು ಅವರು ತಿಂದಿರಬಹುದೆ? ಅಂಗಾಂಗಗಳನ್ನು ಮಾರಿಕೊಂಡಿರಬಹುದೆ? ಇದೊಂದು ಅವರ ಮನೋವಿಕಾರವಿರಬಹುದೆ? ಕಾನೂನಿನ ಪ್ರಕಾರ ಅವರಿಗೆ ಶಿಕ್ಷೆಯಾಗುತ್ತದೆಯೆ? ಇತ್ಯಾದಿ. ಹೀಗೆನ್ನಿಸುವುದೆಲ್ಲ ಸಹಜವೇ; ಆದರೆ ಕೊಂಚ ಸುಮ್ಮನಿದ್ದು ನೋಡಿಕೊಂಡರೆ ನಮಗೇ ನಮ್ಮ ಬಗ್ಗೆ ಅಸಹ್ಯವಾಗುತ್ತದೆ.

ಹೀಗೆ ಈ ಬಗ್ಗೆ ಮಾತಾಡಬೇಕು ಎಂಬುದು ತಿಳಿಯದಿರುವ ಮೌನದಲ್ಲಿ ನಾವಿದನ್ನು ಎದುರಾಗಬೇಕು. ಆದರೆ ಅದು ಹೇಳಿದಷ್ಟು ಸುಲಭವಲ್ಲ. ಮಕ್ಕಳನ್ನು ಕಳೆದುಕೊಂಡ ಬಡಪಾಯಿಗಳ ಆಕ್ರೋಶ ಇನ್ನೂ ಕ್ರೂರವಾಗಿರಬಹುದಿತ್ತು. ಆಗಿಲ್ಲ ಅದು ಆಶ್ಚರ್ಯ, ದುಡಿಯುವ ಜನ ತಮ್ಮ ಎಂದಿನ ದುಡಿಮೆಗೆ ಮರಳುತ್ತಾರೆ. ಅಸ್ಸಾಮ್‌ನಲ್ಲಿ ಉಗ್ರರು ಬಿಹಾರಿಗಳನ್ನ ಕೊಂದರು. ಮಾರನೇ ದಿನ ಮತ್ತೆ ಬಿಹಾರಿ ಬಡವರು ತಮ್ಮ ಇಟ್ಟಿಗೆ ಕೆಲಸ ಮುಂದುವರಿಸಿದರು. ಜಗತ್ತಿನಲ್ಲಿ ಎಲ್ಲೆಲ್ಲೂ ಬಡವರು ಬದುಕುವುದು ಹೀಗೆ.

ಈ ಬಗ್ಗೆ ಬರೆಯುವುದು ಕಷ್ಟ. ಹದಿನೆಂಟನೇ ಶತಮಾನದಲ್ಲಿ ಐರ್ಲೆಂಡಿನ ಪಾಡಿಗೆ ಮರುಗುತ್ತಿದ್ದ ಬ್ರಿಟಿಷರ ಸಾಮ್ರಾಜ್ಯದ ದುರಹಂಕಾರದಿಂದಲೂ ನಿರ್ಲಕ್ಷ್ಯದಿಂದಲೂ ಕ್ರುದ್ಧನಾಗಿದ್ದ ಜೊನಾಥನ್‌ಸ್ವಿಫ್ಟ್ ಎಂಬ ಬರಹಗಾರ (ಗಲಿವರನ ಕಥೆ ಬರೆದವನು) A Modest Proposal ಎಂಬ ದೀರ್ಘವಾದ ಪ್ರಬಂಧವನ್ನು ಬರೆದ. ಇಷ್ಟು ಕ್ರೂರವಾದ ವ್ಯಂಗ್ಯದ ಬರವಣಿಗೆ ಜಗತ್ತಿನ ಯಾವ ಭಾಷೆಯಲ್ಲೂ ಇಲ್ಲವೋ ಏನೋ? ತಣ್ಣಗೆ ಅವನು ನಿರ್ವಿಕಾರವಾಗಿ ನಿಶ್ಚಲನಾಗಿ ಹೇಳುತ್ತ ಹೋಗುತ್ತಾನೆ. ಈ ಐರಿಷ್ ಬಡ ಹೆಂಗಸರು ಮಕ್ಕಳನ್ನು ಕಟ್ಟಿಕೊಂಡು ಬೀದಿಗಳಲ್ಲಿ ಭಿಕ್ಷೆಯೆತ್ತುವುದನ್ನು ನಾವು ಸಹಿಸಲು ಸಾಧ್ಯವಿಲ್ಲ; ದೇಶವೂ ಬಡವಾಗಿರುವುದರಿಂದ ಅವರ ಸ್ಥಿತಿಯನ್ನು ಸುಧಾರಿಸುವಂತೆ ನಾವು ಏನೂ ಮಾಡಲಾರೆವು. ಆದ್ದರಿಂದ ವಿನಯಪೂರ್ವಕವಾಗಿ ಅವನು ಒಂದು ಪ್ರೊಪೋಸಲ್ ಮಾಡುತ್ತಾನೆ. ಈ ಪ್ರೊಪೋಸಲ್ ಅಂತಹ ಪ್ರೊಪೋಸಲ್‌ಗಳ ತರಹದಲ್ಲೇ ತಣ್ಣನೆಯ ವ್ಯಾಕರಣ ಶುದ್ಧವಾದ ಕಾನೂನು ಬದ್ಧವಾದ ಲೀಗಲ್ ಭಾಷೆಯಲ್ಲೇ ಇದೆ. ಹೀಗೆ ತಾನು ಹೇಳುವುದು ಅಧಿಕ ಪ್ರಸಂಗವಲ್ಲ, ನೀವೆಲ್ಲವೂ ಯೋಚಿಸಿದ್ದೇ ಇರಬಹುದು ಎಂಬ ಗೃಹೀತದ ಧಾಟಿ ಈ ಲೇಖನಕ್ಕಿದೆ. ಅವನ ಪ್ರೊಪೋಸಲ್ ಏನೆಂದರೆ ಈ ಮಕ್ಕಳನ್ನು ಹಣವಂತರು ತಿನ್ನಲು ಶುರುಮಾಡಬೇಕು. ಹೆಂಗಸರು ಮಾಂಸದ ಉತ್ಪಾದಕರಾಗಬೇಕು. ಆರ್ಥಿಕವಾಗಿ ಇದು ಬಡವರ ಹಿತದೃಷ್ಟಿಯಿಂದ ಸಮಂಜಸವೂ ಆಗಿರುತ್ತದೆ. ಒಂದು ವರ್ಷಗಳ ಕಾಲ ಹೇಗೂ ಸರ್ಕಾರದ ಖರ್ಚಿಲ್ಲದೆ ತಾಯಿಯ ಮೊಲೆಹಾಲಿನಿಂದ ಅವು ಬೆಳೆಯುತ್ತವೆ. ಈ ನಮ್ಮ ಕಾಲದ ಚಿಕನ್ ವ್ಯವಸಾಯದ ಎಲ್ಲ ಗುಣಗಳನ್ನೂ ಈ ಮಕ್ಕಳ ಮಾಂಸದ ವ್ಯವಸಾಯಕ್ಕೆ ಅನ್ವಯವಾಗುವಂತೆ ಸ್ವಿಫ್ಟ್ ಬರೆಯುತ್ತಾನೆ.

ಸ್ವಿಫ್ಟ್ ಬರವಣಿಗೆಯ ತಣ್ಣನೆಯ ಮಾತಿನ ಕ್ರೌರ್ಯವನ್ನು ಸಹಿಸುವುದು ಯಾತನೆಯ ವಿಷಯ. ಆದರೆ ನಾವು ಏನೇನನ್ನು ನಿಜದಲ್ಲಿ ಸಹಿಸುತ್ತೇವೆಂದು ಯೋಚಿಸಿದಾಗ ಸ್ವಿಫ್ಟ್‌ನ ಬರವಣಿಗೆಯ ಸಮಾಧಾನದ ಶೈಲಿಯ ಕ್ರೌರ್ಯದಿಂದ ನಾವು ಹೇಸುತ್ತೇವೆಂಬುದೂ ಅಥವಾ ಅಂತಹ ಬರವಣಿಗೆಯನ್ನು ಸಾಹಿತ್ಯವೆಂದು ಮೆಚ್ಚುತ್ತೇವೆ ಎಂಬುದೂ ಆಘಾತ ಹುಟ್ಟಿಸುವ ನೈತಿಕ ಪ್ರಶ್ನೆಯಾಗುತ್ತದೆ.

ಮನುಷ್ಯನಿಗೆ –  ಅಂದರೆ ನಮ್ಮೆಲ್ಲರಿಗೂ –  ಸಾಧ್ಯವಾಗುವ ಕ್ರೌರ್ಯವನ್ನು ವಿಶ್ಲೇಷಣೆ ಮಾಡುತ್ತ ಅದಕ್ಕೆ ಕಾರಣಗಳನ್ನು ಹುಡುಕುತ್ತ ಹೋಗುವುದೇ ತಾರ್ಕಿಕ ವಿಲಾಸವಾಗಿ ಅನೈತಿಕವಾಗುತ್ತದೆ. ನಾವು ಕೂಡಲೇ ಹೇಳಬಹುದಾದದ್ದು ಇದೆ –  ಅದನ್ನು ಸ್ಪಷ್ಟವಾಗಿ ಹೇಳಬೇಕು. ಬಡ ಹೆಂಗಸರು, ಶ್ರೀಮಂತರ ಮನೆಗಳಲ್ಲಿ ಮುಸುರೆ ಕೆಲಸ ಮಾಡುವ ಹೆಂಗಸರು, ತಮ್ಮ ಮಕ್ಕಳು ಕಾಣೆಯಾದದ್ದೇ ಪೋಲೀಸರಿಗೆ ದೂರಿತ್ತರೂ ಪೋಲೀಸರು ಅದನ್ನು ದಾಖಲೆ ಮಾಡಿಕೊಂಡಿಲ್ಲ. ಚುನಾವಣೆಗೆ ತಯಾರಾಗುತ್ತಿರುವ ಉತ್ತರ ಪ್ರದೇಶದ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಕ್ರೈಮ್ ಕಡಿಮೆಯಾಯಿತು ಎನ್ನುವ ಅಂಕಿ ಅಂಶಗಳಲ್ಲಿ ಈ ಮಕ್ಕಳು ದುಷ್ಟರ ಆಹಾರವಾದದ್ದು ಇನ್ನಷ್ಟು ಸಂಖ್ಯೆಗಳಾಗಿ ಸೇರಿಕೊಂಡು ಚುನಾವಣೆಯಲ್ಲಿ ಸಮಸ್ಯೆಯಾಗುವುದು ಸಮಾಜವಾದಿ ಪಕ್ಷಕ್ಕೆ ಬೇಕಿರಲಿಲ್ಲ. ಭ್ರಷ್ಟಾಚಾರದಿಂದಲೂ, ರಾಜಕಾರಣಿಗಳ ಶಿಫಾರಸಿನಿಂದಲೂ ತಮ್ಮ ಪೊಲೀಸ್ ಕೆಲಸವನ್ನು ಪಡೆದವರು ಈ ರಾಜಕಾರಣಿಗಳಿಗೆ ತೊಂದರೆಯಾಗುವಂತೆ ನಿಜವಾದ ಕ್ರೈಮಿನ ಅಂಕಿ ಅಂಶಗಳನ್ನು ಹೊರಗೆಡಹುವಂತಿಲ್ಲ. ಶ್ರೀಮಂತರ ಕೇಸಾದರೆ ಆ ವಿಷಯ ಬೇರೆ. ಅದರಲ್ಲಿ ಆದಾಯವಿದೆ.

ಇದನ್ನು ವಿರೋಧಿಸುವವರು ಯಾರು? ಬೇರೆ ರಾಜಕೀಯ ಪಕ್ಷಗಳೂ ಅಧಿಕಾರದಲ್ಲಿದ್ದಾಗ ಮಾಡಿದ್ದು ಇದ್ದನ್ನೇ. ನಾಚಿಕೆ ಕೆಟ್ಟವರು ಒಬ್ಬರನ್ನೊಬ್ಬರು ನಿಂದಿಸಿಕೊಳ್ಳುವ ನಾಟಕ ಇಂದಿನ ರಾಜಕಾರಣವಾಗಿದೆ. ಇದು ಆಗದ ಹಾಗೆ ಮಾಡಲು ಏನೇನು ಕಾನೂನಿನ ಬದಲಾವಣೆಗಳಾಗಬೇಕು ಎಂದು ನ್ಯಾಯಪರರಾದ ನಮ್ಮಂತಹ ಸಜ್ಜನರು ಚರ್ಚಿಸಲು ತೊಡಗುತ್ತೇವೆ. ಆದರೆ ಒಂದು ಸತ್ಯವನ್ನು ಮರೆಯುತ್ತೇವೆ. ಕಾನೂನು ವ್ಯವಸ್ಥೆ ಈಗಿರುವಂತೆಯೇ ಈ ಕ್ರೌರ್ಯಕ್ಕೆ ಅವಕಾಶವಿಲ್ಲ. ಇದಾಗದಂತೆ ತಡೆಯಬಹುದಿತ್ತು. ಆದರೆ ಯಾರೂ ಏನೂ ಮಾಡಲಿಲ್ಲ. ನಮ್ಮ ಪಾಡಿಗೆ ನಾವು ಇದ್ದೆವು.

ನಾನು ನೈತಿಕ ಅಧಃಪತನದ ಕಾಲ, ಸ್ವಾತಂತ್ರ್ಯದ ನೆವದಲ್ಲಿ ಪೆಟ್ರೋಲಿಗಾಗಿ ಬುಷ್ ಇರಾಕ್‌ನ್ನು ನಾಶ ಮಾಡುತ್ತಾನೆ. ಕ್ರೂರ ಸರ್ವಾಧಿಕಾರಿಯಾಗಿದ್ದ ಸದ್ದಾಂನನ್ನು ನೇಣುಗಂಬದ ಕೆಳಗೆ ನಿಲ್ಲಿಸಿ ಅಣಕಿಸಿ ಗೇಲಿ ಮಾಡಿ, ಅವನ ರಾಷ್ಟ್ರನಿರ್ಮಾಣದ ಕ್ರೌರ್ಯಕ್ಕಿಂತ ಹೆಚ್ಚು ಹೇಸಿಗೆ ಹುಟ್ಟಿಸುವ ಕ್ರೌರ್ಯದಲ್ಲಿ ಕೊಲ್ಲುತ್ತಾರೆ. ಸದ್ದಾಂ ಮಾಡಿದ್ದು ನೆಪೋಲಿಯನ್, ಸ್ಟಾಲಿನ್ ಮಾಡಿದ್ದಕ್ಕಿಂತ ಭಿನ್ನವಾದ ಅಪರಾಧವಲ್ಲ. ಕೌಟಿಲ್ಯ, ಮೆಕಾವಲ್ಲಿಯಂಥವರು ಒಪ್ಪುವ ಉಪಾಯಗಳೇ ಅವನವು. ಪ್ರೀತಿಯಿಂದ ಆಳುವುದು ಅಸಾಧ್ಯವಾದಾಗ ಭೀತಿ ಹುಟ್ಟಿಸಿ ಆಳು ಎನ್ನುವದು ರಾಷ್ಟ್ರ ನಿರ್ಮಾಣದ ಸನಾತನ ಸೂತ್ರ.

ಸಮಾಜವಾದದ ಬಗ್ಗೆಯೂ ಲೋಹಿಯಾ ಬಗ್ಗೆಯೂ ಮಾತಾಡುವ ಮುಖ್ಯಮಂತ್ರಿಯೊಬ್ಬ ನೊಯಿಡಾಕ್ಕೆ ಹೋದರೆ ತನ್ನ ಪದವಿ ಕಳೆದುಕೊಳ್ಳಬಹುದೆಂಬ ಮೂಢನಂಬಿಕೆಯಲ್ಲಿ ಸರಣಿ ಕೊಲೆಯಲ್ಲಿ ಮುಗ್ಧಮಕ್ಕಳು ಸತ್ತಿರುವುದನ್ನು ಲೆಕ್ಕಿಸದೆ ಜಾಣ ವಿವರಣೆಗಳನ್ನು ಕೊಡುತ್ತಾನೆ. ಬಂಗಾಳದಲ್ಲಿ ಮಾರ್ಕ್ಸ್‌ವಾದೀ ಸರ್ಕಾರದವರು ರೈತರ ಅನುಮತಿಯಿಲ್ಲದೆ ಅವರ ಫಲದಾಯಕವಾದ ಭೂಮಿಯನ್ನು ಕೈಗಾರೀಕರಣಕ್ಕೆ ಹಂಚುತ್ತಾರೆ. ಒಬ್ಬ ಹಿಂದೂ ಅಪರಾಧಿಯಾದರೆ ಎಲ್ಲ ಹಿಂದೂಗಳೂ ಸೈತಾನ ಸಂತತಿಯವರೆಂದು ಕಾಣುವಂತೆ ಇಸ್ಲಾಮಿಸ್ಟರು ತಮ್ಮ ಪೂಜ್ಯ ಗ್ರಂಥವನ್ನು ಅಪಾರ್ಥಕ್ಕೆ ತಿರುಚುತ್ತಾರೆ. ಒಬ್ಬ ಮುಸ್ಲಿಂ ಅಪರಾಧಿಯಾದರೆ ಎಲ್ಲ ಮುಸ್ಲಿಮರನ್ನೂ ಶಂಕಿಸುವಂತೆ ಹಿಂದುತ್ವವನ್ನು ಬಳಸುತ್ತೇವೆ. ಈ ಎಲ್ಲದರ ನಡುವೆ ನಮ್ಮ ದೇಶ ಜಗತ್ತಿನ ಮಹಾರಾಷ್ಟ್ರಗಳ ಸಾಲಿಗೆ ಸದ್ಯದಲ್ಲೇ ಸೇರಲಿದೆ ಎಂಬ ಕನಸನ್ನು ಜಾಗತೀಕರಣದ ಅಧ್ವರ್ಯಗಳು ಮಧ್ಯವರ್ಗದವರಿಗೆ ಮಾರುತ್ತಾರೆ.

ಎಲ್ಲ ರಾಜಕೀಯ ಸಿದ್ಧಾಂತಗಳೂ ಹುರುಳಿಲ್ಲದಂತೆ ಸುಳ್ಳೆನ್ನಿಸುವಂತೆ ಕಾಣುತ್ತಿರುವ ಈ ಕಾಲ ದುಷ್ಟ ಕಾಲ. ಅಲ್ಲಿ ಇಲ್ಲಿ ಗಾಳಿಗೊಡ್ಡಿದ ಸಣ್ಣ ಬತ್ತಿಯ ಮೇಲೆ ಬಳುಕುತ್ತ ಉರಿಯುವ ದೀಪಗಳು ಇವೆ. ಈ ಸಣ್ಣ ಸಣ್ಣ ಸಮುದಾಯಗಳಲ್ಲಿ ಉರಿಯುವ ದೀಪಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನುಗಾರರನ್ನು ನಾಶಮಾಡುವ ಉಷ್ಣಸ್ಥಾವರ ಬೇಡವೆಂದು ದನಿಯೆತ್ತುತ್ತವೆ; ಮತೀಯ ಗಲಭೆಗಳು ಆಗದಂತೆ ಸುಳ್ಳುಗಳು ಹರಡದಂತೆ ಸತ್ಯವನ್ನು ಎಲ್ಲರಿಗೆ ಕೇಳಿಸುವಂತೆ ಪೇಚಾಡುವ ಕೆಲವು ಜನರು ಇನ್ನೂ ಇದ್ದಾರೆ. ಇವು ಯಾವುವೂ ಸಂಘಟಿತವಾದ ಶಕ್ತಿಗಳಲ್ಲ. ಆದರೆ ಇವು ಇಲ್ಲವೆಂದು ತಿಳಿದು ಸಿನಿಕರಂತೆ ಮಾತಾಡುವುದೂ ಲಂಪಟತನವಾಗುತ್ತದೆ. ಸ್ವಿಫ್ಟ್‌ನಂತೆ ಮಾತಾಡುವುದೂ ದುಃಖದ ಸಂದರ್ಭದಲ್ಲಿ ಲಂಪಟತನವೇ.

ಗಾಂಧೀಜಿಯನ್ನು ಇಂಗ್ಲೆಂಡಿನಲ್ಲಿ ಪತ್ರಕರ್ತನೊಬ್ಬ ಕೇಳುತ್ತಾನೆ. ಇದು ಪಾಶ್ಚಿಮಾತ್ಯ ನಾಗರೀಕತೆ ಅತ್ಯುತ್ತಮವೆಂದು ಹಲವರು ತಿಳಿದಿದ್ದ ಕಾಲ. ‘ಪಾಶ್ಚಿಮಾತ್ಯ ನಾಗರೀಕತೆ ಬಗ್ಗೆ ಏನೆನ್ನುತ್ತೀರಾ?’ ಅದಕ್ಕೆ ಗಾಂಧಿ ಕೊಟ್ಟ ಉತ್ತರ: ‘ಅದೊಂದು ಗುಡ್ ಐಡಿಯಾ’. ಈಗ ಗಾಂಧೀಜಿಯನ್ನು ಯಾರಾದರೂ ‘ಭಾರತೀಯ ನಾಗರೀಕತೆ ಬಗ್ಗೆ ಏನೆನ್ನುತ್ತೀರಾ?’ ಎಂದು ಕೇಳಿದ್ದರೆ ಅವರು ಏನೆನ್ನಬಹುದಿತ್ತು? ಶಿವ ವಿಶ್ವನಾಥನ್‌ ಊಹಿಸುವಂತೆ ಗಾಂಧಿ ಹೇಳುತ್ತ ಇದ್ದರು, ಪ್ರಾಯಶಃ ಹೀಗೆ: ‘ಅದೊಂದು ಗುಡ್ ಐಡಿಯಾ’.

ಆಶಾವಾದದ ಸಮಾಧಾನವನ್ನೂ ಅಪೇಕ್ಷಿಸದಂತೆ, ನಿರಾಶಾವಾದದ ಲಂಪಟತನವೂ ಇಲ್ಲದೆ ನಾವು ಪ್ರಸ್ತುತದಲ್ಲಿ ಬಾಳಬೇಕಾಗಿದೆ.

೧೪೨೦೦೭

* * *


3�PiePd p�an”;color:black’> ಇರುವ ವ್ಯತ್ಯಾಸಗಳನ್ನು ಇಲ್ಲಿ ಚರ್ಚಿಸುತ್ತಿರುವ ಕಾರಣ ಒಂದು ಮೇಲು ಮತ್ತೊಂದು ಕೀಳು ಎಂಬುದನ್ನು ನಿರ್ಧರಿಸುವುದಕ್ಕಲ್ಲ. ಒಟ್ಟು ನಮ್ಮ ಪಾಡನ್ನು ಅರ್ಥ ಮಾಡಿಕೊಳ್ಳಲು ಈ ಎರಡೂ ನೋಟುಗಳೂ ಒಟ್ಟಾಗಿ ದಕ್ಕಬೇಕೆಂದು ಈ ಟಿಪ್ಪಣಿಯನ್ನು ಮಾಡಿದ್ದೇನೆ. ಬೇಂದ್ರೆಯ ಬಗ್ಗೆ ಬರೆಯುತ್ತಿದ್ದಂತೆಯೇ ಕುವೆಂಪುರವರು ಕಾಲಪುರುಷನನ್ನು ತರುವ ಸ್ಮಶಾನ ಕುರುಕ್ಷೇತ್ರವನ್ನೂ ನೆನಪು ಮಾಡಿಕೊಳ್ಳುತ್ತ ಇದ್ದೇನೆ.

 

* * *

ಮನುಷ್ಯ ಮಾತ್ರರಾದ ನಮ್ಮಂಥವರಿಗೆ ಬೆಂಜಮಿನ್‌ನಂತೆ ಅನ್ನಿಸುವುದೇ ಹೆಚ್ಚು ಸ್ವಾಭಾವಿಕ. ಆದರೆ ಕವಿಗೆ ಒಂದು ದಾರ್ಶನಿಕ ನೋಟದಲ್ಲಿ ಭೂಮಿತಾಯಿಯ ದೃಷ್ಟಿಯಿಂದ ಈ ಎಲ್ಲವೂ ಒಂದು ಆಟವೆಂಬಂತೆ ಕಾಣುವುದು ಸಾಧ್ಯವಾಗಿದೆ. ‘ಲೀಲೆ’ ಎನ್ನುವ ಭಾರತೀಯ ತತ್ವಶಾಸ್ತ್ರದ ಪದಕ್ಕೆ ಇಷ್ಟು ಗಾಢವಾದ ಅರ್ಥವನ್ನು ಕೊಡುವ ಇನ್ನೊಂದು ಪದ ನನಗೆ ಕಾಣುತ್ತಿಲ್ಲ. ಈ ಎರಡರ ಜತೆಗೆ ಅಡಿಗರ ‘ಭೂತ’ ಪದ್ಯ ಚರಿತ್ರೆಯನ್ನು ನೋಡುವ ಕ್ರಮವನ್ನು ಈಗ ಮುಂದಿಡುತ್ತೇನೆ.

ಅಡಿಗರು ಭೂತಕಾಲವನ್ನು ಭ್ರೂಣ ಗೂಡುಗಳು ಎನ್ನುತ್ತಾರೆ, ಅವು ನಮ್ಮನ್ನು ವರ್ತಮಾನಕ್ಕೂ ಬಂದು ಕಾಡುತ್ತಿವೆ. ಯಾಕೆಂದರೆ ನಾವು ಅವುಗಳಿಗೆ ಮಾಡಬೇಕಾದ ಶ್ರಾದ್ಧವನ್ನು ಮಾಡಿಲ್ಲ. ಒಂದರ್ಥದಲ್ಲಿ ನಮ್ಮ ಪಿತೃಗಳಿಗೆ ನಾವು ಮಾಡಬೇಕಾದ ಶ್ರಾದ್ಧವನ್ನು ಮಾಡಿಲ್ಲ. ಬೆಂಜಮಿನ್ ಕೂಡಾ ತಿಪ್ಪೆಯ ಹಾಗೆ ಬಿದ್ದ ಭೂತದ ಕಾಲವನ್ನು ಮಾರ್ಪಡಿಸುವ ಬಗ್ಗೆ ಯೋಚಿಸುತ್ತಾನೆ. ಆದರೆ ಅಡಿಗರು ಬಹುಮುಖ್ಯವಾಗಿ ವೈದಿಕ ಪರಂಪರೆಯ ವಿಚಾರಗಳನ್ನಿಟ್ಟೇ ಇವನ್ನು ನೋಡುತ್ತಾರೆ. ಶ್ರಾದ್ಧ ಮಾಡದಿದ್ದರೆ ಪಿತೃಗಳಾಗಬೇಕಾದವರು ಪ್ರೇತಗಳಾಗುತ್ತಾರೆ. ನೀರು ನೆಲೆಯಿಲ್ಲದೆ ಅಲೆಯುತ್ತಾರೆ. ಅವರದು ತಿರುಗು ಮುರುಗು ಪಾದದ ಪರಿಶೆ. ಭೂತಗಳು ನಡೆಯುವಾಗ ಹೆಜ್ಜೆ ತಿರುಗಿಮುರುಗಾಗಿರುತ್ತದಂತೆ. ಹೆಜ್ಜೆಯನ್ನು ಹಿಂಬಾಲಿಸುತ್ತಾ ಹೋದರೆ ಮುಂದಿರುವಂತೆ ತೋರುವುದು ಹೊರಟಲ್ಲಿಗೇ ಹಿಂದಿರುಗುವಂತೆ ಮಾಡುತ್ತವೆ.

ವರ್ತಮಾನದಲ್ಲಿ ನಮ್ಮನ್ನು ಕಾಡುವ ಭೂತದಿಂದ ಪಾರಾಗುವ ವಿಧಾನವನ್ನೂ ಅಡಿಗರು ಯೋಚಿಸುತ್ತಾರೆ. ‘ತಕ್ಕ ಶ್ರಾದ್ಧವನ್ನು ಮಾಡುವುದು’ ಎಂದರೆ ಭೂತವನ್ನು ಮತ್ತೆ ಅಗೆದು ನೋಡುವುದು. ಈ ಅಗೆತದಲ್ಲಿ ಮೊದಲು ಅದಿರು ಸಿಗುತ್ತದೆ. ಆಮೇಲೆ ಅದರಲ್ಲಿ ಬಂಗಾರ ಸಿಗುತ್ತದೆ. ಆಮೇಲೆ ಬಂಗಾರದಿಂದ ನಮ್ಮ ಇಷ್ಟದೇವತೆಯ ಅಂದರೆ ನಮ್ಮ ವೈಯಕ್ತಿಕ ಅಗತ್ಯಗಳಿಗೆ ಬೇಕಾದ ವಿಗ್ರಹವನ್ನು ಮಾಡಿಕೊಳ್ಳಲಾಗುತ್ತದೆ. ಅಡಿಗರ ಯೋಚನೆ ಇಲ್ಲಿಗೆ ನಿಲ್ಲುವುದಿಲ್ಲ. ಭೂತವನ್ನು ಅಗೆಯುವ ಕ್ರಿಯೆಯ ಜೊತೆಯಲ್ಲೇ ಭೂಮಿ ಹಸನಾಗುತ್ತಿದ್ದಂತೆ ಆಕಾಶದಲ್ಲಿ ಮೋಡ ಸಂಚಾರವಾಗುತ್ತದೆ. ಅದರಿಂದ ಮಳೆ ಬೀಳುತ್ತದೆ. ಇದು ಭೂಮಿಗೂ ಆಕಾಶಕ್ಕೂ ನಡುವೆ ಕಾಮದ ಸಂಬಂಧದಂತೆ (ವರುಣ) ಕಾಣಿಸಿಕೊಂಡು ‘ಅಗೆದುತ್ತ ಗದ್ದೆಗಳಲ್ಲಿ ಭತ್ತ ಗೋದುವೆಗಳು’ ಬೆಳೆದು, ಉತ್ಪನ್ನದ ಸಮೃದ್ಧಿಯಲ್ಲಿ ಇಡೀ ಸಮುದಾಯಕ್ಕೆ ದೈವವಾಗುವ ಗುಡಿಗೋಪುರಗಳ ಬಂಗಾರ ಶಿಖರವಾಗುತ್ತದೆ.

ಬೆಂಜಮಿನ್‌ಈ ಬಗೆಯಲ್ಲಿ ತನ್ನ ಭೂತದ ಪಾಠವನ್ನು ಓದಲಾರ, ಅರಿಯಲಾರ, ದಾಟಲಾರ. ಅಡಿಗರು ದಾಟುತ್ತಾರೆಂದರೆ ಬೆಂಜಮಿನ್‌ಗಿಂತ ಅಡಿಗರು ಹೆಚ್ಚು ಅರ್ಥಪೂರ್ಣ ಎಂದೇನೂ ನಾನು ಭಾವಿಸುವುದಿಲ್ಲ. ಯಾಕೆಂದರೆ ಅಡಿಗರ ಪದ್ಯ ನೀಡುವ ಪರಿಹಾರಕ್ಕೆ ಒಂದು ರೀತಿಯ ಪರಂಪರೆಯಲ್ಲಿ ಅಡಗಿರುವ ಶ್ರದ್ಧೆಯ ಅಗತ್ಯವಿದೆ. ಆ ಶ್ರದ್ಧೆಯ ಅಗತ್ಯವಿಲ್ಲದಂತೆ ಬೆಂಜಮಿನ್‌ ಯೋಚಿಸುತ್ತಾನೆ ಅಥವಾ ಅಂಥ ಶ್ರದ್ಧೆಯಿದ್ದೂ ಪ್ರಯೋಜನವಿಲ್ಲವೆಂದು ಅವನಿಗೆ ಗೊತ್ತು. ಯಾಕೆಂದರೆ ದುಃಖ ದುಃಖವೇ. ಆಗಿರುವ ಅನ್ಯಾಯ ಅನ್ಯಾಯವೇ. ಸತ್ತವರು ಸತ್ತಿದ್ದಾರೆ. ಅವರಿನ್ನು ಬದುಕಲು ಸಾಧ್ಯವಿಲ್ಲ. ಚರಿತ್ರೆಯುದ್ಧಕ್ಕೂ ತಪ್ಪುಗಳಾಗುತ್ತಿವೆ ಮತ್ತು ಆ ತಪ್ಪುಗಳು ತನ್ನ ಕಾಲದಲ್ಲಿ ಮತ್ತೆ ಆಗುತ್ತಿರುವುದನ್ನೂ ಬೆಂಜಮನ್‌ಕಂಡಿದ್ದಾನೆ. ಘೋರಪಾತಕದ ಯುದ್ಧದಲ್ಲಿ ಪಾಲುದಾರನಾದ ಸ್ಟಾಲಿನ್ನನೂ ಪ್ರಗತಿಯಲ್ಲಿ ನಂಬಿದವನೇ. ಹಿಟ್ಲರನೂ ನಂಬಿದವನೇ, ಚರ್ಚಿಲ್ಲನೂ ನಂಬಿದವನೇ, ರೂಸ್ವೆಲ್ವನೂ ನಂಬಿದವನೇ. ಈ ಸತತ ಪ್ರಗತಿಯ ಫಲಮಾತ್ರ ಕಣ್ಣೆದುರು ಅಸಹ್ಯವಾಗಿ ಬೆಳೆಯುತ್ತಲೇ ಹೋಗುವ ತಿಪ್ಪೆ. ಸದ್ಯದಲ್ಲಿ ಕ್ಷಣ ನಿಂತು ಗ್ರಹಿಸಲು ಸಾಧ್ಯವಾಗದಂತೆ ಮುಂದಕ್ಕೆ ಭವಿಷ್ಯಕ್ಕೆ ಇನ್ನಷ್ಟು ಪ್ರಗತಿಗೆ ತಳ್ಳುತ್ತಿರುವ ಪ್ರಗತಿ.

ಅಡಿಗರ ಭೂತದ ಹಿಂದೆ ತಾತ್ವಿಕ ಆಲೋಚನೆ ಇದೆ. ಆದರೆ ಬೆಂಜಮಿನ್‌ನ ಸಂಕಟ ಅದರಲ್ಲಿ ಇಲ್ಲ. ಬೇಂದ್ರೆಯಲ್ಲೂ ಆ ಸಂಕಟವಿಲ್ಲ. ಶಾಶ್ವತಿಯಾದ ಪ್ರಕೃತಿಯ ದೃಷ್ಟಿಯಿಂದಲೇ ಅದನ್ನು ನೋಡುತ್ತಾರೆ. ಈ ಮೂರು ಬಗೆಯ ನೋಟಗಳ ಬಗ್ಗೆಯೂ ಗಾಢವಾದ ಚರ್ಚೆ ಸಾಧ್ಯವಾಗಲೆಂದು ಈ ಟಿಪ್ಪಣೆಯನ್ನು ಮಾಡಿದ್ದೇನೆ –  ನಮ್ಮ ಕಾಲದ ಸಂಕಟಗಳ ಎದುರಿನಲ್ಲಿ.

೨೪೧೨೨೦೦೬

* * *