ಕೇರಳದ ಓ.ವಿ. ವಿಜಯನ್‌ ಈ ನಮ್ಮ ಯುಗದ ಅತ್ಯಂತ ಮಹತ್ವದ ಲೇಖಕರಲ್ಲಿ ಒಬ್ಬರು. ಈಗ ಅವರು ಬದುಕಿಲ್ಲ. ಆದರೆ ಹಲವು ಮಲೆಯಾಳಿ ಓದುಗರಿಗೆ ಇವತ್ತಿಗೂ ಅಚ್ಚುಮೆಚ್ಚಿನ ಲೇಖಕ ವಿಜಯನ್‌. ಅವರ ‘ಕಸಾಕಿನ ಇತಿಹಾಸ’ ಎನ್ನುವ ಕಾದಂಬರಿಯನ್ನು ಪುಸ್ತಕದ ಸಹಾಯವಿಲ್ಲದೆ ಇಡೀ ಪೇಜುಗಳನ್ನು ನೆನಪಿನಿಂದ ವಾಚಿಸುವವರನ್ನು ನಾನು ನೋಡಿದ್ದೇನೆ. ಅದು ಕಾದಂಬರಿಯಾಗಿದ್ದೂ ಒಂದು ದೀರ್ಘ ಕವನದಂತಿದೆ. ಈ ಕಾಲದ ಎಲ್ಲ ಬೌದ್ಧಿಕ ಹಾಗೂ ಆಧ್ಯಾತ್ಮಿಕ ಹುಡುಕಾಟದಲ್ಲಿ ತನ್ನ ಇಡೀ ಜೀವನವನ್ನು ವಿಜಯನ್ ಕಳೆದರು. ಕಮ್ಯುನಿಸ್ಟ್ ಆಗಿ ಕಾರ್ಟೂನುಗಳನ್ನು ಬರೆಯುತ್ತಿದ್ದ ವಿಜಯನ್‌ ಆಗಿನ ಪ್ರಸಿದ್ಧ ಶಂಕರ್ಸ್ ವೀಕ್ಲಿಯಲ್ಲಿ ಕೆಲಸ ಮಾಡುತ್ತಿದ್ದರು. ಆಮೇಲೆ ಸ್ಟಾಲಿನ್ ವಿರೋಧಿಯಾದರು. ವಿಜಯನ್ ಎಮರ್ಜೆನ್ಸಿ ಕಾಲದಲ್ಲಿ ಕಾರ್ಟೂನುಗಳನ್ನು ಬರೆಯುವುದನ್ನು ಬಿಟ್ಟರು. ಪ್ರಜಾತಂತ್ರದಲ್ಲಿ ಮಾತ್ರ ವ್ಯಂಗ್ಯ ಚಿತ್ರಕಲೆ ಸಾಧ್ಯವೆಂದ ಅವರ ನಂಬಿಕೆಯಾಗಿತ್ತು. ಕಟುವಾದ ವಿಡಂಬನೆಯಲ್ಲಿ ಎಲ್ಲ ಬಗೆಯ ಆತ್ಮವಂಚನೆಗಳನ್ನೂ ಪರ ವಂಚನೆಗಳನ್ನೂ ಬಯಲಿಗೆಳೆಯುತ್ತಿದ್ದ ವಿಜಯನ್‌ ಜನಪ್ರಿಯನಾಗಿ ಬರೆಯಲು ಪ್ರಯತ್ನಪಟ್ಟವರೇ ಅಲ್ಲ. ನಾನು ಹಿಂದಿನ ಲೇಖನದಲ್ಲಿ ವಿವರಿಸಿದ ಬ್ಯಾಡ್‌ಫೈತ್‌ನಲ್ಲಿ ಅವರು ಬದುಕಲೇ ಇಲ್ಲ.

ಈ ವಿಜಯನ್‌ರವರ ಒಳಜೀವನ, ದೇವರನ್ನು ಹುಡುಕಿಕೊಳ್ಳಲು ಪ್ರಾರಂಭಿಸಿದ ಅವರ ಅತ್ಯಂತ ಸಂಕಟದ ದಿನಗಳು ನನಗೆ ನೆನಪಿವೆ. ನಕ್ಸಲೀಯರಾದ ಯುವಕರ ತೀವ್ರವಾದ ಸಾಮಾಜಿಕ ನ್ಯಾಯದ ಹೋರಾಟವನ್ನು ಅದರ ಪ್ರಾರಂಭದ ದಿನಗಳಲ್ಲಿ ತನ್ನ ಕಾವ್ಯ ಪ್ರತಿಭೆಯಿಂದ ವಿಮರ್ಶಾತ್ಮಕವಾಗಿಯೂ ಸಹಾನುಭೂತಿಯಿಂದಲೂ ಕಂಡು ಬರೆದ ವಿಜಯನ್‌ ಈ ಇಡೀ ಜಗತ್ತಿನ ಒಳಗೆ ಅದೃಶ್ಯವಾಗಿ ಕೆಲಸ ಮಾಡುವ ಚೈನತ್ಯದ ಹುಡುಕಾಟಕ್ಕೂ ಅವರ ಅಭಿಮಾನಿಗಳಿಗೆ ಒಗಟಾಗಿ ಕಾಣುವಂತೆ ತೊಡಗಿದರು. ಅವರ ವಿರೋಧಿಗಳಂತೂ ತಮ್ಮ ಒರಟಾದ ‘ಸೆಕ್ಯುಲರಿಸ್ಟ್’ ಧೋರಣೆಗಳಲ್ಲಿ ಇವರ ಒಳನೋಟಗಳನ್ನು ಮೃದುವಾದ ಕೋಮುವಾದವೆಂದೇ ಜರೆದರು. ಹೀಗೆ ನಮ್ಮ ಕಾಲದ ಗೊಂದಲಗಳ ದಿನಗಳಲ್ಲಿ ಪ್ರಗತಿಶೀಲರಂತೆ ಕೋಮುವಾದಿಗಳೂ ಸಂಶಯದಿಂದ ನೋಡುವ ಲೇಖಕರಾಗಿಬಿಟ್ಟರು. ಆದರೆ ಗಾಢವಾದ ಮಾನವೀಯವಾದ ಈ ಹುಡುಕಾಟದಲ್ಲಿ ಅವರೊಬ್ಬ ಖೋಟಾ ಅಲ್ಲದ ಗುರುವನ್ನೂ ಪಡೆದೆನೆಂದು ಭಾವಿಸಿದರು. (‘ಗುರುಸಾಗರಂ’ನಲ್ಲಿ ಈ ಅನುಭವದ ಸೂಕ್ಷ್ಮಗಳು ಚಿತ್ರಿತವಾಗಿದೆ) ಸಾಮಾಜಿಕ ಸಮಾನತೆ ಮತ್ತು ನ್ಯಾಯದ ಹುಡುಕಾಟವನ್ನು ಬಿಟ್ಟುಕೊಡದಂತೆ ದೈವದ ಹುಡುಕಾಟದಲ್ಲೂ ಇದ್ದ ಈ ಲೇಖಕ ವೈಯಕ್ತಿಕವಾಗಿಯೂ ನನಗೆ ಬಹಳ ಪ್ರಿಯರಾದ ಲೇಖಕ.

ಅವರ ಜತೆಗಿನ ಒಂದು ಸಂವಾದವನ್ನು ನೆನಪು ಮಾಡಿಕೊಳ್ಳುತ್ತೇನೆ. ಶ್ರೀ ಅಧ್ವಾನಿಯವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕೆಂದು ಒಂದು ಯಾತ್ರೆ ಹೊರಟಾಗ ನಾನೂ ಅವರೂ ಹೀಗೆ ಮಾತಾಡಿಕೊಂಡಿದ್ದೆವು:

ಅಧ್ವಾನಿಯವರ ಯಾತ್ರೆ ಪಕ್ಷರಾಜಕೀಯ ಮಾತ್ರವಲ್ಲ ಎಂದು ವಾದಿಸುವವರು ಇದ್ದಾರೆ. ಆದರೆ ಅವರ ಯಾತ್ರೆಯ ಜೊತೆ ಅಯ್ಯಪ್ಪ ಭಕ್ತರು ಕೈಗೊಳ್ಳುವ ಯಾತ್ರೆಯನ್ನು ಹೋಲಿಸಿದಾಗ ಅಯ್ಯಪ್ಪನನ್ನು ನಂಬುವವರ ಯಾತ್ರೆ ಹೆಚ್ಚು ಸಹಜ ಸ್ಫೂರ್ತಿಯದೂ, ನಮ್ಮ ಪರಂಪರೆಯಲ್ಲಿ ಊರಿ ಬೆಳೆದದ್ದೂ ಎಂದು ಎನಿಸುತ್ತದೆ. ಅಧ್ವಾನಿಯರದು ವೋಟಿನ ರಾಜಕೀಯವೆನ್ನಿಸುತ್ತದೆ. (ರಾಮಚಂದ್ರ ಗಾಂಧಿಯವರ ಸೀತಾಸ್ ಕಿಚನ್, ಸೀತೆಯ ಅಡುಗೆಮನೆ ಎಂಬುದು ಆ ಕಾಲದ ಮಹತ್ವದ ಪುಸ್ತಕ.)

ಯಾಕೆಂದರೆ ಹಿಂದಿನ ಭಕ್ತಿ ಪಂಥದ ಹಲವು ಗುಣಗಳು ಈ ಯಾತ್ರೆಯಲ್ಲಿ ನಮಗೆ ಕಂಡಿದ್ದವು. ಮೊದಲನೆಯದಾಗಿ: ಭಕ್ತರು ತಾವೊಂದು ಮೇಲು ಕೀಳಿಲ್ಲದ ಕಾಂಗ್ರಗೇಷನ್? ಕುಟುಂಬ/(ಅಲ್ಲಮನ ನುಡಿಯಲ್ಲಿ ‘ಸಮಯ’) ಎಂದು ಬಗೆದುಕೊಳ್ಳುತ್ತಾರೆ. ಹೀಗೆ ಶರಣರಾದವರು ನಿಜ ಜೀವನದಲ್ಲಿ ಆಟೋ ಡ್ರೈವರ್‌ ಇರಲಿ, ಗುಮಾಸ್ತನಿರಲಿ, ಆಫೀಸರ್‌ ಇರಲಿ ಒಂದೇ ಬಗೆಯ ಬಟ್ಟೆಯನ್ನು ತೊಡುತ್ತಾರೆ. ತಮ್ಮ ಹೆಸರುಗಳನ್ನು ಕಳೆದುಕೊಂಡು ಒಬ್ಬರಿಗೊಬ್ಬರು ಸ್ವಾಮಿಯಾಗುತ್ತಾರೆ. ಪಂಡರಪುರದ ವಿಠಲನಿಗೆ ನಡೆದುಕೊಳ್ಳುವ ಭಕ್ತರಂತೆ ಇವರೂ ಕಷ್ಟಸಹಿಷ್ಣುವಾದ ಒಂದು ಯಾತ್ರೆಯನ್ನು ಕೈಗೊಳ್ಳುತ್ತಾರೆ. ಈ ಯಾತ್ರೆಯಲ್ಲಿ ತಪಸ್ವಿಗಳಂತೆ ತಮ್ಮ ಎಲ್ಲ ಚಟಗಳನ್ನೂ ಬಿಟ್ಟು ಸ್ತ್ರೀ ಸಂಗವನ್ನೂ ಬಿಟ್ಟಿರುತ್ತಾರೆ. ತಮ್ಮ ಯಾತ್ರೆಯ ದಾರಿಯಲ್ಲಿ ಕ್ರೈಸ್ತ ಹಾಗೂ ಮುಸ್ಲಿಂ ಸಂಪ್ರದಾಯಗಳ ಪವಿತ್ರ ಸ್ಥಳಗಳನ್ನೂ ದರ್ಶಿಸಿರುತ್ತಾರೆ. ಭಕ್ತಿ ಸಂಪ್ರದಾಯದ ಈ ಗುಣಗಳನ್ನು ಅಯ್ಯಪ್ಪ ವ್ರತದಲ್ಲಿ ಕಂಡಿದ್ದ ನನಗೂ, ವಿಜಯನ್‌ರಿಗೂ ಕೆಲವು ಅನುಮಾನಗಳೂ ಇದ್ದವು.

ವಚನ ಚಳವಳಿಯ ಹಲವು ವಚನಗಳು ನಮ್ಮ ಅಂತರಂಗ ಬಹಿರಂಗಗಳನ್ನು ಶೋಧಿಸಿ ನಮ್ಮ ಅರಿವನ್ನು ಹಿಗ್ಗಿಸುವಂತಿವೆ. ದಾಸರ ಹಾಡುಗಳು ಮನಸ್ಸನ್ನು ಗಾಢವಾಗಿ ಆರ್ದ್ರಗೊಳಿಸಿ ನಮ್ಮನ್ನು ಅಹಂಕಾರ ಮುಕ್ತರನ್ನಾಗಿ ಮಾಡುತ್ತವೆ. ಆದರೆ ಅಯ್ಯಪ್ಪ ಚಳವಳಿಯಲ್ಲಿ ಇಂತಹ ಅರಿವನ್ನು ಹಿಗ್ಗಿಸುವ, ವಿಸ್ತರಿಸುವ, ಸೂಕ್ಷ್ಮಗೊಳಿಸುವ ಯಾವ ಗುಣವನ್ನೂ ನಾವು ಕಂಡಿರಲಿಲ್ಲ. ಬದಲಾಗಿ ಇದೊಂದು ಅಬ್ಬರದ ಸಿನಿಮೀಯ ಭಕ್ತಿಯಾಗಿ ನಮಗೆ ಕಂಡಿತ್ತು. ಸಿನಿಮಾ ಹೀರೋ ಎನ್‌ಟಿ ಆರ್‌ಗೆ ಪೂಜೆ ಸಲ್ಲಿಸುವ ದೇವಾಲಯವೂ ಇತ್ತೆಂದು ಕೇಳಿದ್ದೆ. ನಮ್ಮ ಅರಿವನ್ನು ಹಿಗ್ಗಿಸದೇ ಕೇವಲ ಸಮಾಧಾನವನ್ನು ತರುವ ಆಧ್ಯಾತ್ಮಿಕ ಚಳವಳಿಗಳು ಮಾರ್ಕ್ಸ್ ಹೇಳುವಂತೆ ಅಫೀಮು ಆಗತೊಡಗುತ್ತವೆ.

ಇಷ್ಟಾದರೂ ಅಧ್ವಾನಿಯವರ ರಥಯಾತ್ರೆಯನ್ನು ಕಿಂಚಿತ್ತೂ ಒಪ್ಪಿಕೊಳ್ಳಲಾರದ ನಮಗೆ ಈ ಕಾಲದಲ್ಲಿ ಸುಖಜೀವನ ನಡೆಸುವವರೂ ಕೂಡಾ ಸುಮಾರು ನಲವತ್ತು ದಿನಗಳ ಕಾಲವಾದರೂ ವ್ರತನಿಷ್ಠರಾಗಿ ಸರಳವಾಗಿ ಬದುಕುವುದು ಗಮನಾರ್ಹವಾದ ಸಂಗತಿ ಎನ್ನಿಸಿತ್ತು. ಲೌಕಿಕದಲ್ಲಿ ಮುಳುಗಿರುವವರು ಯಾವುದೋ ಹೊರದಾರಿಗಳಿಗಾಗಿ ಹಾತೊರೆಯುತ್ತಾರೆ ಎನ್ನಿಸಿತ್ತು. ಮೇಲುಕೀಳುಗಳು ಅಚ್ಚೊತ್ತಿದ ಈ ಜಾತಿಸಮಾಜದಲ್ಲಿ ನಿತ್ಯದಲ್ಲಿ ಕಾಣದ ಸಮಾನತೆಯನ್ನು ಭಕ್ತವೃಂದದ ಒಳಗೆ ಕೆಲಕಾಲವಾದರೂ ಸೃಷ್ಟಿಸುವ ಅದರ ಶ್ರದ್ಧೆಯನ್ನು ಕಡೆಗಾಣಿಸುವುದು ಸಾಧ್ಯವಿರಲಿಲ್ಲ.

* * *

ಮೈಸೂರಿನಲ್ಲಿ ಪ್ರಾಧ್ಯಾಪಕನಾಗಿದ್ದ ನಾನು ರಾಮ ಎನ್ನುವ ಒಬ್ಬ ದಲಿತ ನೌಕರನೊಬ್ಬನ ಜತೆ ಆಗೀಗ ತುಂಬಾ ಮಾತನಾಡುತ್ತಿದ್ದೆ. ವಿಶ್ವವಿದ್ಯಾಲಯದಲ್ಲಿ ನಮ್ಮ ಕೋಣೆಗಳನ್ನು ಸ್ವಚ್ಛ ಮಾಡುವುದು ಈತನ ಕೆಲಸ. ರಾಮನ ಹೆಂಡತಿಗೂ ಅದೇ ಕೆಲಸ. ಆದರೆ ಇಡೀ ಸಂಸಾರದ ನಿರ್ವಹಣೆ ಹೆಂಡತಿಯದ್ದು. ಯಾಕೆಂದರೆ ರಾಮ ಸಂಬಳ ಬಂದಿದ್ದೇ ಹೆಂಡತಿಗೆ ಕೊಂಚ ಹಣವನ್ನು ಕೊಟ್ಟು ಉಳಿದಿದ್ದನ್ನು ತನ್ನ ಗೆಳೆಯರ ಜತೆಗಿನ ಕುಡಿತದಲ್ಲಿ ಕಳೆದು ಬಿಡುತ್ತಿದ್ದ. ಈ ರಾಮನಿಗೆ ರಾಜಕೀಯ ಪ್ರಜ್ಞೆಯೂ ಇತ್ತು. ಜನತಾ ಪಕ್ಷದ ಬೆಂಬಲಿಗನಾಗಿದ್ದ ನಾನು ಒಮ್ಮೆ ಅವನಿಗೆ ಹೇಳಿದೆ: ‘ನೋಡು ರಾಮ ನಿನ್ನ ಜನರೇ ಆದ ಬಾಬೂ ಜಗಜೀವನ್‌ರಾಂ ಅವರು ಜನತಾದ ಈಗಿನ ಮುಖಂಡರು. ಅವರ ಪಕ್ಷಕ್ಕೆ ನೀನು ಓಟು ಕೊಡುತ್ತೀತಾನೆ?’ ಎಂದು ಕೈಯಲ್ಲಿ ಪೊರಕೆ ಹಿಡಿದು ಬಾಯಲ್ಲಿ ಕವಳತುಂಬಿ ನಿಂತ ರಾಮ ಮುಗುಳ್ನಗುತ್ತಾ ಹೇಳಿದ್ದ : ‘ನನ್ನ ಓಟು ಅಮ್ಮನಿಗೇ. ಅಮ್ಮ (ಇಂದಿರಾ) ಮಾತ್ರ ನಮಗೇನಾದರೂ ಮಾಡಿಯಾರು. ಅವರು ಹೇಳಿದ್ದನ್ನು ಉಳಿದವರು ಕೇಳುತ್ತಾರೆ. ಜಗಜೀವನ್ ರಾಂ ನಮ್ಮವರೇ ನಿಜ. ಆದರೆ ಅವರು ಹೇಳಿದ್ದನ್ನು ನೀವೆಲ್ಲಾ ಎಲ್ಲಿ ಕೇಳುತ್ತೀರಿ?’

ಈ ರಾಮ ಇದ್ದಕ್ಕಿದ್ದಂತೇ ಅಯ್ಯಪ್ಪ ವ್ರತಿಯಾದ. ಕಪ್ಪು ಉಡುಪಿನಲ್ಲಿ, ಕ್ಷೌರ ಮಾಡಿಕೊಳ್ಳದ ಮುಖದಲ್ಲಿ, ವಿಭೂತಿ ಧರಿಸಿದ ಹಣೆಯಲ್ಲಿ, ಕುಡಿಯುವುದನ್ನು ನಿಲ್ಲಿಸಿದ ಆರೋಗ್ಯದಲ್ಲಿ ನಮಗೆ ಎದುರಾಗತೊಡಗಿದೆ. ಅವನ ಹೆಂಡತಿಗಂತೂ ಇದರಿಂದ ಅಪಾರವಾದ ಸಂತೋಷವಾಗಿತ್ತು. ಅವಳೂ ಕವಳ ತುಂಬಿದ ಬಾಯಲ್ಲಿ ನನಗೆ ಹೇಳಿದ್ದಳು; ‘ನಾಯಿ ಬಾಲ ಯಾವತ್ತೂ  ಡೊಂಕೇ. ಆದರೆ ಈ ನಲವತ್ತು ದಿನಗಳಾದರು ನನ್ನ ಯಜಮಾನ ಕುಡಿಯುವುದನ್ನು ನಿಲ್ಲಿಸಿದ್ದಾನಲ್ಲ. ಅಷ್ಟೇ ನನಗೆ ಸಾಕು. ಪ್ರತೀ ವರ್ಷ ನಲವತ್ತು ದಿನ ಸ್ವಾಮಿಗೆ ನಡೆದುಕೊಳ್ಳಲಿ ಅಂತ ದೇವರಲ್ಲಿ ಕೇಳಿಕೋತೇನೆ’ ಎಂದು ಕಣ್ಣುಮುಚ್ಚಿ ಕೈಮುಗಿದವಳು ಹೊರನಡೆದು ಕವಳ ಉಗುಳಿ ಬಂದು, ‘ಸ್ವಾಮಿ ದರ್ಶನಕ್ಕೆ ಹೋಗೋವ್ನಿಗೆ ಏನಾದರೂ ಅಯ್ಯಾರವರು ಕೊಡಬಾರದ? ಕುಡೀಲಿಕ್ಕೆ ಕೊಡ್ತಾ ಇದ್ದವರು ನೀವೇ ಅಲ್ವ?’ ಎಂದು ನಗೆಮಾಡಿ ನನ್ನಿಂದ ಅವನ ದಾರಿ ಖರ್ಚಿಗೆ ಕೊಂಚ ಹಣ ಗಿಟ್ಟಿಸಿಕೊಂಡಿದ್ದಳು.

ನನಗಾದ ಸಂತೋಷ ಮತ್ತು ಆಶ್ಚರ್ಯವನ್ನು ನಾನಿಲ್ಲಿ ಹೇಳಲೇ ಬೇಕು. ರಾಮ ತಾನೊಬ್ಬ ಅಸ್ಪೃಶ್ಯನೆಂಬುದನ್ನು ಸಂಪೂರ್ಣ ಮರೆತು ಅಯ್ಯಪ್ಪ ದರ್ಶನ ಮಾಡಿ ಬಂದವನು ನನಗೆ ಪ್ರಸಾದವನ್ನು ತಂದು ಕೊಟ್ಟಿದ್ದ. ಆಮೇಲೆ ಯಥಾಪ್ರಕಾರದ ರಾಮನಾಗಿದ್ದ.

* * *

ದೇವರು ಇದ್ದಾನೋ ಇಲ್ಲವೋ ಎಂಬ ಪ್ರಶ್ನೆಯನ್ನು ನನ್ನ ಬಾಲ್ಯದಿಂದಲೂ ನಾನು ಹೊತ್ತುಕೊಂಡು ಬದುಕಿದ್ದೇನೆ. ನನ್ನ ತಂದೆಯವರು ಉಪನಯನ ಮಾಡಲೆಂದು ನನ್ನನ್ನು ತಿರುಪತಿಗೆ ಕರೆದುಕೊಂಡು ಹೋಗಿದ್ದರು. ಉಪನಯನ ಮುಗಿದ ಮೇಲೆ ಆಗಲೂ ಇರುತ್ತಿದ್ದ ಕ್ಯೂನಲ್ಲಿ ನಿಂತು ಅತ್ಯಂತ ಭಕ್ತಿಯಿಂದ ಸರ್ವಾಲಂಕೃತನಾದ ತಿಮ್ಮಪ್ಪನನ್ನು ಕಣ್ಣು ಬಿಟ್ಟು ನೋಡಿದಾಗ ಇದು ದೇವರಲ್ಲ ಎಂದು ನನಗೆ ಅನ್ನಿಸಿ ಬಹಳ ಗೊಂದಲಕ್ಕೆ ಒಳಗಾಗಿದ್ದೆ.

ಕೇರಳದಲ್ಲಿ ನಾನು ಕುಲಪತಿಯಾಗಿದ್ದಾಗ ನನ್ನ ಅಧಿಕಾರದ ವೇಷ ಭೂಷಣಗಳನ್ನು ಕೆಲಕಾಲವಾದರೂ ಬಿಡುವ ಆಸೆ ನನಗಾಯಿತು. ನನಗೊಬ್ಬ ಬಹಳ ಪ್ರಿಯನಾದ, ಬಹಳ ಚುರುಕಿನ ಡ್ರೈವರ್‌ ಇದ್ದ. ಅವನು ನಾರಾಯಣ ಗುರುಕುಲಕ್ಕೆ ಸೇರಿದ ಈಳರವನು. ಅವನಿಂದ ನಾನು ಅಯ್ಯಪ್ಪ ದೀಕ್ಷೆಯನ್ನು ಪಡೆದು, ಅನಾಯಾಸವಾಗಿ ಕಾರಿನಲ್ಲಿ ಬೆಟ್ಟದ ತನಕ ಹೋಗಿ, ಎಲ್ಲರ ಎದಿರು ಮುಜುಗರಪಡುತ್ತ ಬಟ್ಟೆ ಬಿಚ್ಚಿ, ಕಾಚಾ ಮಾತ್ರ ತೊಟ್ಟು  ತಣ್ಣೀರಿನಲ್ಲಿ ಸ್ನಾನ ಮಾಡಿ ಕಪ್ಪು ಬಟ್ಟೆ ತೊಟ್ಟು ಅವನ ಜತೆ ಬೆಟ್ಟ ಹತ್ತಿದೆ.

ನಮ್ಮಿಬ್ಬರ ನಡುವೆ ಒಂದು ಸಮಸ್ಯೆ ಇತ್ತು. ಅವನನ್ನು ನಾನು ಹೆಸರು ಹಿಡಿದು ಕರೆಯುವಂತಿಲ್ಲ. ದೀಕ್ಷೆಯಲ್ಲಿ ಅವನೂ ನನಗೆ ಸ್ವಾಮಿ. ನಾನೂ ಹಾಗೆಯೇ ಅವನಿಗೆ ಸ್ವಾಮಿ. ಆದರೆ ಅವನು ಕೆಲವೊಮ್ಮೆ ಮರೆತು ನನ್ನನ್ನು ‘ಸ್ವಾಮಿ ಸರ್‌’ ಎನ್ನುತ್ತಿದ್ದ. ಇದರಿಂದ ನನಗೂ ಅವನಿಗೂ ನಗು ಬರುತ್ತಿತ್ತು. ನನ್ನದೊಂದು ನಾಟಕವಾಯಿತಲ್ಲವೇ? ಎಂದು ಮುಜುಗರವೂ ಆಗುತ್ತಿತು.

ಆದರೂ ಆ ಬೆಟ್ಟ ಹತ್ತುವುದು ಒಂದು ದೊಡ್ಡ ಖುಷಿ. ಹತ್ತುವ ನಾವೆಲ್ಲರೂ ನಮ್ಮ ನಮ್ಮ ಸ್ಥಾನಗಳನ್ನು ಮರೆಯಲೇ ಬೇಕಾದ ಪರಿಸ್ಥಿತಿಯಂತೂ ಏದುಸಿರಿನ ಆರ್ತ ಅಯ್ಯಪ್ಪ ನಾಮಸ್ಮರಣೆಯಲ್ಲಿ ನಿರ್ಮಾಣವಾಯಿತು. ಆದರೂ ಯಾರಾದರೂ ನನ್ನ ಗುರುತು ಹಿಡಿದಾರು ಎಂದು ಮುಜುಗರಪಡುತ್ತಲೇ ಬೆಟ್ಟ ಹತ್ತಿದೆ. ನನ್ನ ಡ್ರೈವರನ ತನ್ಮಯತೆ ನನಗೆ ಇರಲಿಲ್ಲ. ಅಂತೂ ಅನಾಮಧೇಯ ಸ್ವಾಮಿಯಾಗಿ ಬೆಟ್ಟ ಹತ್ತಿ ಹೋದ ಮೇಲೆ ಮಾಧ್ಯಮದವರು ನನ್ನನ್ನು ಗುರುತಿಸಿ ಬಿಟ್ಟಿದ್ದೇ ನಾನೊಬ್ಬ ಕೇವಲ ಅಯ್ಯಪ್ಪ ವೇಷಧಾರಿಯಾಗಿ ಬಿಟ್ಟೆ. ನನ್ನನ್ನು ಅವರು ಟೇಪ್‌ರೆಕಾರ್ಡರ್ ಹಿಡಿದು ಇಂಟರ್ ವ್ಯೂ ಮಾಡತೊಡಗಿದರು. ಭಕ್ತನಾಗುವುದರ ಬದಲು ನಾನೊಬ್ಬ ಎಂದಿನ ಎಚ್ಚರದ ಮಾತುಗಾರನಾದೆ. ಆ ಜನಸಂದಣಿಯ ನಡುವೆಯೂ ನನಗೆ ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪ ದರ್ಶನ ಮಾಡುವ ಸ್ಪೆಷಲ್ ಉಪಚಾರವೂ ಆಯಿತು.

ಹೆಂಗಸರಿಗೆ ಯಾಕಿಲ್ಲಿ ಪ್ರವೇಶವಿಲ್ಲ? ಎಂಬುದು ನನ್ನನ್ನು ಕಾಡಿತ್ತು. ಜೊತೆಗೇ ಕೊನೆಯ ದಿನ ಆಗುವ ಮಕರ ಜ್ಯೋತಿ ದರ್ಶನ ನೈಜವಾದುದೇ? ಯೋಜಿತವಾದುದೇ? ಎಂಬ ಅನುಮಾನ ನನ್ನನ್ನು ಕಾಡಿತ್ತು. ಅಲ್ಲದೇ ಈ ಅಯ್ಯಪ್ಪ ಭಕ್ತರು ಮುಡಿಗಳನ್ನು ಮಾತ್ರ ತರದೇ ಟೇಪ್‌ ರೇಕಾರ್ಡರ್‌, ಕ್ಯಾಮರಾಗಳನ್ನು ತಂದು ಕೆಲವರಿಗೆ ಇದೂ ಒಂದು ಪಿಕ್ನಿಕ್ ಆಗಿಬಿಟ್ಟಿರುವುದನ್ನು, ವಾಹನೋದ್ಯಮಿಗಳಿಗೆ ಟೂರಿಸಂ ಉದ್ಯಮವಾಗಿಬಿಟ್ಟಿರುವುದನ್ನೂ ನಾನು ಗಮನಿಸಿದ್ದೆ. ಈ ನಮ್ಮ ಆಧುನಿಕ ಕಾಲದಲ್ಲಿ ಯಾವುದನ್ನೂ ಅದರ ಪವಿತ್ರ ಸ್ಥಿತಿಯಲ್ಲಿ ಉಳಿಸಿಕೊಳ್ಳುವುದು ಸಾಧ್ಯವೇ ಇಲ್ಲವೋ ಏನೋ ಎಂದು ನನಗನ್ನಿಸಿತ್ತು.

ಬಾಲೆಯರು ಮತ್ತು ವೃದ್ಧೆಯರು ಅಯ್ಯಪ್ಪ ದರ್ಶನ ಮಾಡಬಹುದು. ಆದ್ದರಿಂದ ಇದು ಸ್ತ್ರೀ ವಿರೋಧಿಯಲ್ಲ. ಕೇವಲ ಯುವತಿಯರಿಗಷ್ಟೇ ವಿರೋಧಿಯಾದ ನಿಯಮ. ಯಾಕೆಂದರೆ ನಲವತ್ತು ದಿನಗಳ ಏಕಾಗ್ರವಾದ ದೈವನಿಷ್ಠೆಯ ವ್ರತ ಬಹಿಷ್ಠೆಯರಾಗಬಹುದಾದ ಹೆಂಗಸರಿಗೆ ಸಲ್ಲದ ವ್ರತ ಎಂದು ಈ ನಿಯಮ ಇದ್ದಿರಬಹುದು. ಇದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ಒಪ್ಪಿಕೊಳ್ಳಲಾರೆ. ಯಾಕೆಂದರೆ ಯುವತಿಯರಾಗಿದ್ದಾಗಲೇ ಅಕ್ಕಮಹಾದೇವಿ ಮತ್ತು ಮೀರಾ ಸಂತತ್ವವನ್ನು ಪಡೆದವರು ಎಂಬ ನಮ್ಮ ಗಾಢವಾದ ನಂಬಿಕೆಯನ್ನು ಮರೆಯುವಂತಿಲ್ಲ. ದೈವ ಸಾಕ್ಷಾತ್ಕಾರ ಯಾರಿಗಾದರೂ ಯಾವ ಸಮಯದಲ್ಲಾದರೂ ಆಗಬಹುದು ಎನ್ನುವುದೇ ಭಕ್ತಿ ಮಾರ್ಗದ ಗಾಢವಾದ ನಂಬಿಕೆ. ಪ್ರಹ್ಲಾದ ಮತ್ತು ಧ್ರುವ ಬಾಲರಾಗಿದ್ದಾಗಲೇ ದೈವ ಸಾಕ್ಷಾತ್ಕಾರ ಪಡೆದವರು.

ಮಾನವ, ದೇವರು ಮತ್ತು ಧರ್ಮಕ್ಕೆ ಸಂಬಂಧಪಟ್ಟಂತೆ ಗಾಢವಾದ ಆಲೋಚನೆಗಳನ್ನು ಮಾಡುತ್ತಲೇ ಬಂದಿದ್ದಾನೆ –  ಅವನ ಆದಿಮ ಸ್ಥಿತಿಯಿಂದ ಇವತ್ತಿನ ತನಕವೂ. ಗಂಡುಕವಿಗಳ ಕಾವ್ಯದಲ್ಲಂತೂ ಕಾಡುವ ಎರಡು ಸಂಗತಿಗಳು: ಹೆಣ್ಣಿನ ಮೇಲೆ ಹುಟ್ಟುವ ಪ್ರೇಮ ಮತ್ತು ದೇವರ ಮೇಲೆ ಹುಟ್ಟುವ ಪ್ರೇಮ. ಅಕ್ಕನಿಗಂತೂ ದೇವರು ಸಾಕಾರನಾದ ಶಿವ. ಮನಮೋಹಕನಾದ ಅವಳಿಗೆ ಒಲಿದ ಗಂಡು. ವೇದ, ಉಪನಿಷತ್ತು, ಬೈಬಲ್‌, ಖೊರಾನ್‌, ಹಲವು ಸಂತರ ವಚನಗಳು –  ಈ ಎಲ್ಲವೂ ಮಾನವ ನಾಗರಿಕತೆಯನ್ನು ಕಟ್ಟಿರುವ ಆಳವಾದ ಪಠ್ಯಗಳು. ಮತ್ತು ಯಾವತ್ತೂ ಸದ್ಯವೆನ್ನಿಸುವಂತೆ ಉಳಿದ ನೆನಪುಗಳು. ದೇವರನ್ನು ಸಾಕ್ಷಾತ್ಕರಿಸಿಕೊಂಡವರು ಎಂದು ನಾವು ತಿಳಿಯುವ ಪರಮಹಂಸರು, ಬಸವ – ಅಲ್ಲಮರು, ತುಕಾರಾಂ – ಕಬೀರರು, ಶಿಶುನಾಳ್ ಶರೀಫರು ಅತೀತವಾದುದನ್ನು ಇಲ್ಲೇ ಈ ನಿಟ್ಟಿನಲ್ಲೇ ನಿಜ ಮಾಡಿಕೊಳ್ಳಬೇಕೆಂಬ ತುರ್ತಿನ ಹಂಬಲದವರು; ಮತ್ತು ಈ ಹಂಬಲದಿಂದ ಹುಟ್ಟಿದ ಸಂಕಟದವರು. ದೇವರನ್ನು ಕಂಡೆನೆಂದು ಇವರು ಎಷ್ಟು ಕೊಂಡಾಡುವುದುಂಟೋ, ಅಷ್ಟೇ ಕಾಣಲಿಲ್ಲ ಎಂದು ಹಲುಬುವುದುಂಟು. ‘ಕಸ್ಮೈದೇವಾಯ ಹವಿಷಾ ವಿಧೇಮ’ – ಯಾವ ದೇವರಿಗೆ ಹವಿಸ್ಸನ್ನು ಕೊಡಲಿ ಎಂದು ಅನುಮಾನದಲ್ಲಿ ಅಚ್ಚರಿಯಲ್ಲಿ ಶೋಧಿಸುವುದುಂಟು.

ಭಕ್ತರಿರಲಿ, ರಸೆಲ್, ಐನ್‌ಸ್ಟೀನ್‌ರಂಥಹ ವಿಚಾರವಾದಿಗಳು ಕೂಡ ನಿಜದ ದರ್ಶನಕ್ಕೂ ಅದರ ಜತೆಗಿನ ನಿತ್ಯದ ಒಡನಾಟಕ್ಕೂ  ಹಂಬಲಿಸಿದವರು ಎಂಬುದನ್ನು ನಾವು ಮರೆಯಬಾರದು. ದೇವರು ಇದ್ದಾನೆ ಎನ್ನುವುದು ಎಷ್ಟು ಉತ್ಕಟವಾದ ಅನುಭವವನ್ನು ತರಬಲ್ಲದೋ ಹಾಗೆಯೇ ದೇವರು ಎಂಬ ಒಂದು ವಸ್ತು ಇಲ್ಲದಿದ್ದರೂ ಈ ಪ್ರಪಂಚದ ರಹಸ್ಯವೇ ಅಷ್ಟೇ ಉತ್ಕಟವಾದ ಅನುಭವವನ್ನು ತರಬಲ್ಲದೆಂಬುದು ಒಂದು ಅಚ್ಚರಿಯ ಸಂಗತಿ. ನಮ್ಮಲ್ಲಿ ಬುದ್ಧನೇ ಇಲ್ಲವೆ?

ಮಾನವನಿಗೆ  ಈ ಹುಡುಕಾಟ ಅಗತ್ಯವಾಗಿಯೇ ಉಳಿದಿರುತ್ತದೆ. ಅಯ್ಯಪ್ಪ ವ್ರತ ಇದನ್ನು ತೀರಿಸಲಾರದೇನೊ ಎಂಬ ನನ್ನ ಸಂಶಯದಲ್ಲಿ ನಾವು ಸಂಭ್ರಮಿಸುತ್ತಿಲ್ಲ.

೨೦೦೬

* * *