ಭಾರತವನ್ನು ಪಾಶ್ಚಿಮಾತ್ಯ ಆಧುನಿಕ ನಾಗರೀಕತೆಯ ದಿಕ್ಕಿನಲ್ಲಿ ಬೆಳೆಸಿದ ನೆಹರೂರವರ ಬಲಗೈಯಾಗಿದ್ದವರು ಡಾಕ್ಟರ್‌ ಹೋಮಿಭಾಭಾ. ಗಾಂಧಿಯವರ ಕನಸಿಗೆ ಅನ್ಯವಾದ, ಆದರೆ ಗಾಂಧೀಜಿಯ ಆಶೀರ್ವಾದವನ್ನು ಪಡೆದ, ನೆಹರೂರವರ ಆಧುನಿಕ ನಾಗರೀಕತೆಯ ವ್ಯಸನವೆನ್ನಬಹುದಾದ ಕನಸು ಇವರದು. ಆಧ್ಯಾತ್ಮಿಕವಾಗಿ ಅಂದರೆ ನಿರಾಯಾಸವಾಗಿ, ಗಾಂಧಿಯ ಪರವಾಗಿಯೂ, ಲೌಕಿಕವಾಗಿ ಅಂದರೆ ತೊಡಗಿದ ನಿತ್ಯವಾಗಿ, ಐರೋಪ್ಯ ಆಧುನಿಕತೆಯ ಪರವಾಗಿಯೂ ಇರುವ, ಎಲ್ಲೆಲ್ಲೂ ಇರುವ, ಹೀಗಿರುವುದೇ ಸಹಜವೆನ್ನಿಸಲು ಶುರುವಾಗಿರುವ ನಮ್ಮ ನಿಮ್ಮಂತಹವರಿಗೆ ಅನುಕೂಲರು.

ನಾವೀಗ ನಮ್ಮ ವರ್ಗಕ್ಕೆ (ಅಂದರೆ ನಮ್ಮ ವರ್ಗಕ್ಕೆ ಮಾತ್ರ) ಲಾಭದಾಯಕವೆನ್ನಿಸುವಂತೆ ಬದುಕುತ್ತ ಇರುವುದು ನೆಹರೂ ಮತ್ತು ಭಾಭಾ ಸೃಷ್ಟಿಸಿದ ಅಣು ವಿದ್ಯುತ್‌ ಸ್ಥಾವರಗಳ (ಗುಪ್ತವಾಗಿ ಸೃಷ್ಟಿಸುವ ಅಣುಬಾಂಬುಗಳ) ಯುಗದಲ್ಲಿ. ಇಂತಹ ನಮ್ಮಲ್ಲಿ ಕೆಲವರಾದರೂ, (ರೈತರು ಆತ್ಮಹತ್ಯೆ ಮಾಡಿಕೊಂಡಾಗ, ಬಾಲಬಾಲೆಯರು ಪರೀಕ್ಷೆಯಲ್ಲಿ ಫೇಲಾಗಿ ಸತ್ತಾಗ) ಕನಸುಗಳಲ್ಲಿ ಕಾಣುವುದು ಗಾಂಧಿಯನ್ನು. ಇದರ ತೊಡಕು ಮತ್ತು ಗೊಂದಲಗಳನ್ನು, ನಿಷ್ಠುರವಾಗಿ ಹೇಳುವುದಾದರೆ bad faithನ್ನು, ನನಗೆ ನಾನೇ ನಿಮಗೆ ಕೇಳಿಸುವಂತೆ ಹೇಳಿಕೊಳ್ಳಲು ಪ್ರಯತ್ನಿಸುತ್ತೇನೆ.

‘ಬ್ಯಾಡ್ ಫೇತ್‌’ ಸಾರ‍್ತರ್‌ ಎಂಬ ಫ್ರೆಂಚ್ ಚಿಂತಕ ಬಳಸುವ ಶಬ್ದ. ತಿಳಿದರೂ ತಿಳಿಯದಂತಿರುವ, ಸಾಚಾ ಎಂದೇ ಅಂದುಕೊಂಡು ವರ್ತಿಸುವ (ಆದರೂ ನಿಜವಲ್ಲದ?) ಸ್ಥಿತಿ. ಸಾರ‍್ತರ್ ಕೊಡುವ ಉದಾಹರಣೆಯನ್ನು ಕೊಂಚ ಉಪ್ಪು ಖಾರ ಸೇರಿಸಿ ಬದಲಿಸಿಕೊಂಡು ವಿವರಿಸಿಕೊಳ್ಳುವೆ. ಒಬ್ಬ ಯುವಕ – ಯುವತಿ ನಡುವೆ ಗೆಳೆತ ಶುರುವಾಗಿದೆ. ತಮ್ಮಿಬ್ಬರದೂ ಕೇವಲ ಸ್ನೇಹವೆಂದು ಅವರು ತಿಳಿದಿದ್ದಾರೆ. ಲೈಬ್ರರಿ ಎದುರು ಬೆಂಚಿನಮೇಲೆ ಕೂತು ಅದೂ ಇದೂ ಮಾತಾಡುತ್ತ ಯುವಕ ‘ಎಲ್ಲಿ ನಿಮ್ಮ ಕೈ ತೋರಿಸಿ, ನನಗೆ ಹಸ್ತ ನೋಡುವುದು ಗೊತ್ತು, ನನಗೇನೂ ಅದರಲ್ಲಿ ನಂಬಿಕೆ ಇಲ್ಲ ಎನ್ನಿ’ –  ಅನ್ನುತ್ತಾನೆ. ಯುವತಿ ‘ಎಡಗೈಯಲ್ಲವೆ? ಹೆಂಗಸರಿಗೆ?’ ಎಂದು ನಕ್ಕು ಸಹಜವೆಂಬಂತೆ ಕೈ ಒಡ್ಡುತ್ತಾಳೆ. ತರುಣ ಅವಳ ಕೈಯನ್ನು ಹಿಡಿದು ಪರೀಕ್ಷಿಸಲು ಸುಲಭವಾಗಲಿ ಎಂಬಂತೆ ತನ್ನ ಕಣ್ಣಿಗೆ ಹತ್ತಿರ ಹಿಡಿದು ನೋಡಲು ಅವಳೇ ಒಡ್ಡಿದ ಕೈಯನ್ನು ಮೃದುವಾಗಿ ಎಳೆದುಕೊಂಡಾಗ ಭುಜಗಳು, ಅದೂ ಸಹಜವೆಂಬಂತೆ, ತಾಗುತ್ತವೆ. ತಮ್ಮ ಉದ್ದೇಶ ಹೀಗೆ ತಾಗುವಂತೆ ಕೂರುವುದಲ್ಲ ಎನ್ನುವ ಹಾಗೆ ಇಬ್ಬರೂ ಕೂತಿದ್ದಾರೆ. ‘ಈ ಗೆರೆ ಇಲ್ಲಿ ಹೇಗೆ ಯಾವ ಕೋನದಲ್ಲಿ ಯಾವ ಇನ್ನೊಂದು ಗೆರೆಯನ್ನು ಅತಿ ವಿಶೇಷವೆಂಬಂತೆ ಸಂಧಿಸುತ್ತ ಇದೆ ಎಂದು’ ತನ್ನ ತೋರುಬೆರಳಿನ ಉಗುರಿನಲ್ಲಿ ಅದನ್ನು ಗುರುತಿಸುತ್ತ ಇರುವ ಯುವಕನನ್ನು ತಾನೇನೂ ನಂಬದ ಹಸ್ತಸಾಮುದ್ರಿಕದ ಜ್ಞಾನವನ್ನು ಮಾತ್ರ ಮೆಚ್ಚುವಂತೆ ನೋಡುತ್ತ ಕೂರುತ್ತಾಳೆ. ಗಾಳಿಯಲ್ಲಿ ಹಾರಾಡುತ್ತಿರುವ ಅವನ ತಲೆಗೂದಲು ಕಣ್ಣುಗಳ ಮೇಲೆ ಬಿದ್ದಿರುವುದನ್ನು ತಳ್ಳಿಕೊಳ್ಳಲೂ ಯುವಕನಿಗೆ ವ್ಯವಧಾನವಿಲ್ಲವೆಂಬಷ್ಟು ಅವನು ಹಸ್ತಪರೀಕ್ಷೆಯಲ್ಲಿ ಮಗ್ನನಾಗಿದ್ದಾನೆ.

ಈ ಹಸ್ತಪರೀಕ್ಷೆ ಯಾಕೆಂದು ಅವರಿಗೆ ಗೊತ್ತೆ? ಗೊತ್ತಿಲ್ಲವೆ? ಗೊತ್ತಿಲ್ಲದವರಂತೆ, ಸಹಜ ಸ್ನೇಹದಲ್ಲಿ ಎಂಬಂತೆ, ಇಬ್ಬರಿಗೂ ಮುಟ್ಟಿಕೊಂಡಿರುವ ಪರಸ್ಪರದ ಮಾರ್ದವದ ಅರಿವಾಗಿದೆ, ಎಂದರೆ ಅದು ಹೊರಗಿನಿಂದ ಆಡಬಹುದಾದ ನಮ್ಮ ಮಾತಷ್ಟೇ ಆಯಿತೆ? ಈ ಕ್ರಿಯೆಯ ಒಳ ಇಂಗಿತಗಳು ಗೊತ್ತಾಗದಂತೆ ಹತ್ತಿರ ಹತ್ತಿರ ಆಗುವ ಉಪಾಯಗಳನ್ನು ಅವರೇ ಆಯ್ಕೆ ಮಾಡಿಕೊಂಡಿರುವುದಲ್ಲವೆ? ಆಯ್ಕೆಯನ್ನು ಆಯ್ಕೆಯೆಂದೇ ಗುರುತಿಸಿಕೊಳ್ಳದಂತೆ ಮಾಡುವ ಆಯ್ಕೆ ಅಂದರೆ ‘ಬ್ಯಾಡ್ ಫೇತ್’. ಇದು ಆತ್ಮವಂಚನೆಯಷ್ಟು ಸರಳವಲ್ಲ; ಮೋಸದಷ್ಟು ಒರಟಲ್ಲ; ಮಾಯಾವಶವಾದ ಸ್ಥಿತಿ ಎನ್ನೋಣವೆ? ನಟನೆಯೆಂದು ಅವರೇ ಪ್ರಜ್ಞಾಪೂರ್ವಕವಾಗಿ ಅಂದುಕೊಳ್ಳದಿರುವುದನ್ನು ನಟನೆಯೆಂದು ಹೇಳುವುದು ಯಾರು? ಮಾಯೆ ಎಂದು ಬಿಟ್ಟರೆ ಅವರು ಆಯ್ಕೆಗೆ ಅವಕಾಶವಿಲ್ಲದ ಅಸ್ವತಂತ್ರರು ಎಂದಂತಾಗುತ್ತದೆ. ಆದರೆ ಸಾರ‍್ತರ್‌ನಿಗೆ ಮಾನವ ಅಸ್ವತಂತ್ರನಲ್ಲ –  ಅವನ ಯಾವ ಆಯ್ಕೆಯಲ್ಲೂ.

* * *

ಚಳಿಗಾಲದ ಒಂದು ಬೆಳಿಗ್ಗೆ ಆಧುನಿಕ ಕೈಗಾರಿಕೆಗಳ ಹೊಗೆ ತೇಲುವ, ನಕ್ಷತ್ರ ಕಾಣದ ಚಂದ್ರ – ಸೂರ್ಯರೂ ಕಾಣದ ಬರ್ಮಿಂಗಂನಲ್ಲಿ (‘ಕರುಣಾಳು ಬಾ ಬೆಳಕೆ’ ಎಂಬ ಗಾಂಧಿಗೆ ಪ್ರಿಯವಾಗಿದ್ದ ಸ್ತೋತ್ರವನ್ನು ಬರೆದ ಕಾರ್ಡಿನಲ್ ನ್ಯೂಮನ್ ಬದುಕಿದ್ದ ಊರಿನಲ್ಲಿ) ನನಗೆ ಬಹು ಪ್ರಿಯವಾದ ‘ಗಾರ್ಡಿಯನ್‌’ ಪತ್ರಿಕೆಯಲ್ಲಿ ಭಾಭಾರವರು ವಿಮಾನ ದುರಂತದಲ್ಲಿ ಸತ್ತ ವಾರ್ತೆಯನ್ನು ಓದಿದ್ದು ನೆನಪಾಗುತ್ತದೆ. ಜೊತೆಗೇ ಮಾರನೇ ದಿನ ಭಾಭಾರಷ್ಟೇ ನೆಹರೂಗೆ ಪ್ರಿಯರಾದ ವಯಲಿನ್ ವಾದಕ ಮೆನೂಹಿನ್ ಬರೆದೊಂದು ಪತ್ರ ನೆನಪಾಗುತ್ತದೆ. ಯಿಹೂದಿ ಮೆನುಹಿನ್ ಬಾಬಾರ ಆತ್ಮೀಯ ಸ್ನೇಹಿತ. ಗೆಳೆಯನ ಸಾವಿಗೆ ಮರುಗುತ್ತ ಮೆನುಹಿನ್‌ ಬರೆದೊಂದು ಮಾತಿನ ತಾತ್ಪರ್ಯ ಹೀಗಿತ್ತು. ಆಧುನಿಕ ಕಾಲದಲ್ಲಿ ಲಿಯನಾರ್ಡೊ ಡವಿಂಚಿಯಂತಹ encyclopaedic mind ಇಲ್ಲ. ಅಂದರೆ ವಿಶ್ವಕೋಶದಂತಹ ಮನಸ್ಸು ಇಲ್ಲ. ಇದ್ದರೆ ಅದು ಹೋಮಿಭಾಭಾರಲ್ಲಿ ಮಾತ್ರ.

ಅಲ್ಡಸ್ ಹಕ್ಸಲೀಯದೂ ಈ ಬಗೆಯ ವಿಶ್ವಕೋಶದಂತಹ ಮನಸ್ಸು ಎಂದು ಯಾರೊ ಹೊಗಳಿದಾಗ ಗ್ರಹಾಂಗ್ರೀನ್ ಎಂಬ ಇನ್ನೊಬ್ಬ ಕಾದಂಬರಿಕಾರ ಮಾಡಿದ ಜೋಕು ನನಗಾಗ ನೆನಪಾಗಿತ್ತು. ‘ಹೌದು ನಿಜ. ಹಕ್ಸಲೀ ತನ್ನ ಪಕ್ಕದಲ್ಲೇ ಬ್ರಿಟಾನಿಕಾ ಎನ್ನುವ ಎನ್‌ಸೈಕ್ಲೊಪೀಡಿಯಾ ಇಟ್ಟುಕೊಂಡಿರುತ್ತಾನೆ’. ನಲವತ್ತು ವರ್ಷಗಳ ನಂತರ ಈಗ ಕಂಪ್ಯೂಟರ್ ನಲ್ಲಿ ಗೂಗಲ್‌ ಸದಾ ಅವನ ಬೆರಳಿಗೆ ನಿಲುಕುವಂತಿರುತ್ತದೆ ಎನ್ನುತ್ತ ಇದ್ದನೋ ಏನೊ!

ಈ ಗ್ರಹಾಂಗ್ರೀನ್ ಸಹಾ ಯಾವ ದೇಶವನ್ನಾದರೂ ತನ್ನ ಭೂಮಿಕೆ ಮಾಡಿಕೊಂಡು ಕಾದಂಬರಿ ಬರೆಯಬಲ್ಲ ಮನುಷ್ಯನೇ ಆಗಿದ್ದ. ನಮ್ಮ ಕಾರಂತರಂತಹ ‘ಸ್ವ’ – ದೇಶಸ್ಥ ಬರಹಗಾರನಲ್ಲ ಅವನು. ತಾನು ಬದುಕಿರದೇ ಇದ್ದ ಕಾಲದ ಐತಿಹಾಸಿಕ ಕಾದಂಬರಿ ಬರೆಯುವುದೂ ಕಾರಂತರ ಪ್ರಾಮಾಣಿಕ ನೋಟಕ್ಕೆ ಅಥೆಂಟಿಕ್ ಅನ್ನಿಸುತ್ತ ಇರಲಿಲ್ಲ.

ಕಾರಂತರು ತಾವಿರುವ ಜಗತ್ತಿನ ಸ್ವರೂಪದ ಬಗ್ಗೆ ಪರಮ ಕುತೂಹಲಿ; ಆದರೆ ಸಮಕಾಲೀನ ಐರೋಪ್ಯ ತಾತ್ವಿಕರನ್ನು ಓದಿ ಮೆರೆಯುವ ನಮ್ಮಲ್ಲಿ ಹಲವರಂತೆ ‘ಜ್ಞಾನಲೋಲಿ’ಯಲ್ಲ. ಜ್ಞಾನವನ್ನು ಶೇಖರಿಸಿ ಅದನ್ನು ಮೆರೆಯುವುದರಲ್ಲಿ ಸುಖ ಇರುವವರನ್ನು ವರ್ಣಿಸಲು ನಾನು ಈ ಶಬ್ದವನ್ನು ಸೃಷ್ಟಿಸಿಕೊಂಡಿದ್ದೇನೆ. ನಮ್ಮ ಪುರಾತನ ತಾರ್ಕಿಕರಲ್ಲೂ ಹಲವರು ಜ್ಞಾನಲೋಲರು. ಈ ಲೋಲುಪತೆ, ಅದನ್ನು ಒಂದು ಬಗೆಯ ಬೌದ್ಧಿಕ ಆಟದ ಸುಖವೆಂದು ಬೇಕಾದರೆ ಅನ್ನಿ, ಜ್ಞಾನಾರ್ಜನೆಯೆಂದು ನಾವು ಗೌರವಿಸುವುದರಲ್ಲಿ ಅಡಕವಾದದ್ದು. ನನ್ನ ಗುರು ಮತ್ತು ಗೆಳೆಯ ಮಾರ್ಟಿನ್ ಗ್ರೀನ್ ಎಂಬ ಮಹತ್ವದ ಲೇಖಕರೊಬ್ಬರು –  ಗಾಂಧಿ ಮತ್ತು ಟಾಲ್‌ಸ್ಟಾಯ್‌ರನ್ನು ಮೆಚ್ಚಿಕೊಂಡವರು ಇವರು –  ಒಮ್ಮೆ ಅಂತರ್ಮುಖಿಯಾಗಿ ಹೇಳಿದ್ದರೂ: ನನಗೆ ಈ ಜ್ಞಾನಾರ್ಜನೆ ಬಹಳ ಸುಖ ತರುವ ಸಂಗತಿ; ನಾನು ನಿಜವಾಗಿ ಗಾಂಧಿಯ ಅನುಯಾಯಿಯಾದರೆ ಈ ಸುಖವನ್ನ ಬಿಟ್ಟುಕೊಡಬೇಕಾಗುತ್ತದೆ. ಗಾಂಧಿ ಮತ್ತು ಟಾ‌ಲ್‌ಸ್ಟಾಯ್ ಕ್ರಮೇಣ anti – intellectual ಆಗಿಬಿಟ್ಟರು.

‘ಅಸ್ವಾದ’ ಎಂದರೆ ನಾಲಿಗೆಯ ರುಚಿಯನ್ನು ಮಾತ್ರ ಬಿಡುವುದಲ್ಲ; ತನ್ನಲ್ಲಿ ತಾನೇ ಆಟವಾಡುತ್ತಿರಲು ಮೋಹಿಸುವ ಭೃಂಗವೃತ್ತಿಯ ಮನಸ್ಸಿಗೂ ಕಡಿವಾಣ ಹಾಕುವುದು. ಹಾಗಾದಾಗ ಬೇಂದ್ರೆ ಸಾಧ್ಯವಿರುವುದಿಲ್ಲ; ನಮ್ಮ ಮಹಾತಾರ್ಕಿಕ ಆಚಾರ್ಯರಿಗೂ ಜಾಗವಿಲ್ಲ. ಶಂಕರರು ತಮ್ಮ ತಾರ್ಕಿಕತೆಗೇ ಸುಸ್ತಾಗಿ ‘ನಹಿ ನಹಿ ರಕ್ಷತಿ ಡುಕ್ರಿಂಕರಣೇ’ ಎಂದಿರಬೇಕು. ಭಾಗವತನ ಅಹಂಕಾರ ವಿಸರ್ಜನೆಯಲ್ಲಿ ಮಾತ್ರ ‘ಅಮಲಾಭಕ್ತಿಶ್ಚ ತತ್ ಸಾಧನಂ’ ಎಂಬ ದೈವಸಾಕ್ಷಾತ್ಕಾರದ ಏಕಮಾತ್ರ ಮಾರ್ಗದ ನಿರ್ಣಯಕ್ಕೆ ಮಾಧ್ವರು ಬಂದಿರಬೇಕು. ನನಗೆ ಗೊತ್ತಿದೆ ಎನ್ನುವ ಸ್ಥಿತಿಯಿಂದ ‘decreate’ ಮಾಡಿಕೊಳ್ಳದೆ ಮುಮುಕ್ಷುವಾಗಲಾರೆ ಎಂದು ಸಿಮೋನ್‌ವೇಲ್ ಹೇಳಿಕೊಂಡಿರಬೇಕು. ಜಿಡ್ಡು ಕೃಷ್ಣಮೂರ್ತಿಯವರಿಗೆ ಜ್ಞಾನವೆಂದರೆ ಆಯ್ಕೆಗೆ ಅವಕಾಶವಿಲ್ಲದ ಅರಿವು. Choiceless awareness ಅಥವಾ ಅದನ್ನು ಜ್ಞಾನವೆಂದು ಕರೆಯುವುದೂ ಸರಿಯಲ್ಲ. ‘ಬ್ಯಾಡ್ ಫೇತ್‌’ನ ಸಮಸ್ಯೆಯೇ ಇಲ್ಲದವರಂತೆ ಸಂತರು ಮಾತನ್ನಾಡುತ್ತಾರೆ. ಅಥವಾ ಹಾಗೆ ಮಾತಾಡಬಲ್ಲವರು ಸಂತರಾಗುತ್ತಾರೆ.

* * *

ಸರಳವಾಗಿ ಹೇಳುವುದಾದರೆ, ಲಿಯನಾರ್ಡೊ ಡ ವಿಂಚಿಯ ಕಾಲದಲ್ಲಿ ಅವನು ಹಲವು ವಿಷಯಗಳಲ್ಲಿ ಜ್ಞಾನಿಯಾಗಿದ್ದ ಎಂಬುದು ಮೆಚ್ಚಿಗೆಯ ವಿಷಯವಾದಷ್ಟು ವಿಶ್ವಕೋಶ, ಗೂಗಲ್ ಇತ್ಯಾದಿ ಲಭ್ಯವಿರುವ ಇವತ್ತು ಅಲ್ಲ. ಆದರೂ ಮೆನುಹಿನ್ ಭಾಭಾರನ್ನು ಹಾಗೆ ಹೊಗಳಿದಾಗ ಅವನ ಉದ್ದೇಶ ಕೇವಲ ಸಂಗ್ರಹಿತ ಜ್ಞಾನವಿದ್ದಿರಲಾರದು ಎಂದು ನನ್ನನ್ನು ತಿದ್ದಿಕೊಂಡು ಮುಂದುವರೆಯುತ್ತೇನೆ.

ಭಾಭಾರಂತಹ ಅಣುವಿಜ್ಞಾನಿ ಎದುರಾದಾಗ, ಇಂತಹ ವಿಜ್ಞಾನಿಗೂ ಸಂಗೀತ ಕಲೆ ಸಾಹಿತ್ಯ ಗೊತ್ತಲ್ಲವೆ? ಎಂದು ನಾವೆಲ್ಲರೂ ಬಾಯ್ಬಿಡುತ್ತೇವೆ. ಅಷ್ಟು ‘ಪವರ್‌’ ಈ ಕಾಲದಲ್ಲಿ ವಿಜ್ಞಾನಿಗೆ ಇದೆ! ಯಹೂದಿ ಮೆನುಹಿನ್ ಸಹ ಇದಕ್ಕೆ ಹೊರತಲ್ಲವೇನೊ! ಐನ್‌ಸ್ಟೈನ್ ದೊಡ್ಡವನೆನ್ನಿಸಲು ಮೆನುಹಿನ್‌ ಅವನನ್ನು ಹೊಗಳಬೇಕಿಲ್ಲ. ಆದರೆ ವಿಜ್ಞಾನಿಯಾಗಿ ಐನ್‌ಸ್ಟೈನ್‌ ಮೆಚ್ಚಿದನೆಂಬುದು ಮೆನುಹಿನ್‌ ಶೋಭೆಯನ್ನು ನಮಗೆ ಹೆಚ್ಚಿಸುತ್ತದೆ. ಹೋಮಿ ಬಾಬಾ ಭಾರತೀಯ; ಮೆನುಹಿನ್ ಪಶ್ಚಿಮದಲ್ಲಿ ನೆಲಸಿ ಖ್ಯಾತಿ ಪಡೆದವ. ಆದ್ದರಿಂದ ಹೀಗೆ ವಿಶೇಷನಾದ ಪಾಶ್ಚಾತ್ಯ ಸಂಗೀತಗಾರನೊಬ್ಬನ ಮೆಚ್ಚುಗೆ ಭಾರತೀಯನಾದ ವಿಜ್ಞಾನಿಗೆ ಕೂಡ ಶೋಭಾದಾಯಕವಾಗಿರಬಹುದೆಂದು ಬೇಕೆಂದೇ ನಾನು ಅದಲುಬದಲು ಮಾಡಿ ನೋಡಿದ್ದೇನೆ. ಅಥವಾ ಏಕೋಪಾಸಕರಾದ ತಜ್ಞರಂತೆ ಭಾಭಾ ಇರಲಿಲ್ಲ; ಅವರು ಸುಶಿಕ್ಷಿತರು ಚುರುಕು ಸಂವೇದನೆಯವರು ಎ‌ನ್ನುವುದು ಮೆನುಹಿನ್ನರ ಆಶಯವಿದ್ದಿರಬಹುದು. ಮೆನುಹಿನ್‌ರ ಹಾಗೆ ಉತ್ಸಾಹದಲ್ಲೂ ಪ್ರೀತಿಯಲ್ಲೂ ಮಾತಾಡುವವರು ನನಗಂತೂ ಬಹು ಪ್ರಿಯರಾದ ಹಳೆತಲೆಮಾರಿನವರು. ಆದರೂ ಯಾಕೆ ನನ್ನ ತಕರಾರು? ಇದೂ ಒಂದು ಬಗೆಯ ಕ್ಯಾತೆ ತೆಗೆಯುವ ಚಪಲವೆ?

* * *

ಮೆನುಹಿನ್ನರಿಗೆ ನೆಹರೂ ಅಂದರೂ ಅಭಿಮಾನ. ೧೯೫೨ ರಲ್ಲಿ ಮೆನುಹಿನ್‌ರನ್ನು ಭಾರತಕ್ಕೆ ನೆಹರೂ ಕರೆಸಿಕೊಂಡರು. ಮೆನುಹಿನ್‌ ಪಾಲೆಸ್ತೀನ್‌ನಲ್ಲಿ ಹುಟ್ಟಿದವನು, ನಮ್ಮ ಸುಬ್ಬಲಕ್ಷ್ಮಿಯವರಂತೆ ಬದುಕಿಡೀ ತನಗೆ ಪ್ರಿಯವಾದ ಘನೋದ್ದೇಶಗಳಿಗಾಗಿ ಉಚಿತವಾಗಿ ವಯಲೀನ್ ನುಡಿಸಿ ನಿಧಿ ಸಂಗ್ರಹಿಸಿದವನು. ಯಹೂದ್ಯ ಕುಟುಂಬದಲ್ಲಿ ಹುಟ್ಟಿದವನಾದರೂ ಪಾಲೆಸ್ತೀನ್‌ಗೆ ಆದ ಅನ್ಯಾಯದ ವಿರುದ್ಧ ಮಾತಾಡಿದವನು. ಸೋವಿಯತ್‌ ರಷ್ಯಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಆ ದೇಶದಲ್ಲಿ ಅತಿಥಿಯಾಗಿ ಹೋಗಿ ಇದ್ದಾಗಲೇ ಟೀಕಿಸಿದವನು. ನಿಜವಾದ ಧೀರ, ನಮ್ಮ ಕಾಲದ ಮಹಾನುಭಾವರಲ್ಲಿ ಒಬ್ಬ. ನಮಗೆಲ್ಲ ಗೊತ್ತಿರುವುದು ಇವನು ಯೋಗಾಸನದ ಮಹಾಚಾರ್ಯ ಐಯ್ಯಂಗಾರರ ಶಿಷ್ಯನೆಂದು. ಬಿ.ಕೆ.ಎಸ್. ಐಯ್ಯಂಗಾರ್ಯರನ್ನು ಮೆನುಹಿನ್ ಕರೆಯುವುದು ತನ್ನ ವಯಲಿನ್ ಗುರುವೆಂದು.

ಮೇಲುಕೀಳುಗಳ ಹಲವು ಗೊಂದಲಗಳಲ್ಲೂ ಮುಚ್ಚುಮರೆಯ ಹಲವು ನಾಟಕಗಳಲ್ಲೂ ಪೂರ್ವ – ಪಶ್ಚಿಮಗಳ ನಡುವೆ ಸಂಭವಿಸಿಬಿಡುವ ಅಪರೂಪದ ಇಂತಹ ಸಂಬಂಧಗಳು ನಮ್ಮ ಭಾರತದಲ್ಲಿ ಪಡೆಯುವ ಪ್ರಚಾರ ಮಾತ್ರ ವಿಚಿತ್ರವಾದದ್ದು. ಗಯಟೆಯೆಂಬುವನೊಬ್ಬ ಕಾಳಿದಾಸನನ್ನು ಹೊಗಳಿದನೆಂದು, ಯೇಟ್ಸ್‌ ಎಂಬುವನೊಬ್ಬ ಟಾಗೋರರನ್ನು ಹೊಗಳಿದ ನೆಂದು, ಗ್ರಹಾಂ ಗ್ರೀನ್‌ ನಾರಾಯಣರನ್ನು ಮೆಚ್ಚಿದ್ದನೆಂದು ಹೇಳಿಕೊಳ್ಳಲು ಈ ಲೇಖಕರನ್ನು ಓದದವರು ಕೂಡ ಮರೆಯುವುದಿಲ್ಲ. ನೆಹರೂರನ್ನು ಹೊಗಳಲು ನಮ್ಮ ನಡುವಿನ ಆಕರ್ಷಕವಾಗಿ ಇಂಗ್ಲಿಷಿನಲ್ಲಿ ಬರೆಯುವ ಲೇಖಕರೊಬ್ಬರು ಹೇಳಿದ್ದಾರಂತೆ: ಮಾಲ್ರೋ ಮತ್ತು ಮೆನುಹಿನ್‌ಕೂಡ ನೆಹರೂ ಜೊತೆ ಫೋಟೋ ತೆಗೆಸಿಕೊಳ್ಳಲು ಇಷ್ಟಪಡುತ್ತಿದ್ದರೆಂದು! ನಾನು ಕೂಡ ನನ್ನ ನೆಹರು ಮೆಚ್ಚುಗೆಯನ್ನು ಸಾರಲು ಹೇಳಬಹುದಾದ ವಿಷಯವಿದು ಎಂದು ನಾಚಿಕೆಯಿಂದ ಒಪ್ಪಿಕೊಳ್ಳುತ್ತೇನೆ.

ಪಾಶ್ಚಿಮಾತ್ಯರ ಸರ್ಟಿಫಿಕೇಟ್ ಪಡೆಯಲು ಪ್ರಯತ್ನಿಸುವುದು ಕೆಲವೊಮ್ಮೆ ಮುಜುಗರದ ವಿಷಯವೂ ಆಗಬಹುದು ಎಂಬುದಕ್ಕೆ ಒಂದು ಉದಾಹರಣೆ ಕೊಡುವೆ. ಪರಮ ತಾಯಿಗಂಡನಾದ ಕಿಸಿಂಜರ್‌ಗೂ ನೊಬೆಲ್‌ ಶಾಂತಿ ಪ್ರಶಸ್ತಿ ಬಂತು. ಆಮೇಲೆ ಇನ್ನೂ ಯಾರ್ಯಾರಿಗೋ ಬಂದಿತು. ಹೀಗೆ ಬಂದವರಲ್ಲಿ ಒಬ್ಬರು ದೆಹಲಿಯ ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ನನಗೆ ಅಕಸ್ಮಾತ್‌ ಎದುರಾದರು. ಅವರ ಜೊತೆ ಇದ್ದ ನನ್ನ ಪರಿಚಿತರೊಬ್ಬರು ಗುರುತುಮಾಡಿಕೊಡುವಾಗ ಹೇಳಿದರು: ‘ಈಗ ತಾನೇ ನಾನು ಈ ನೊಬೆಲ್ ಲಾರಿಯೇಟರನ್ನು ಅಭಿನಂದಿಸುವಾಗ ಹೇಳಿದೆ, ಭಾರತೀಯರಾದ ನಮಗೆ ಮಹಾತ್ಮ ಗಾಂಧೀಜಿಯವರಿಗೂ ಈ ಪ್ರಶಸ್ತಿ ಬಂದಿದ್ದರೆ ಬಹಳ ಸಂತೋಷವಾಗುತ್ತಿತ್ತು.’ ಅವರ ಈ ಮಾತನ್ನು ಕೇಳಿ ನಾನು ಪಟ್ಟ ಮುಜುಗರ ಅಷ್ಟಿಷ್ಟಲ್ಲ. ಅದನ್ನು ನೆನೆಯುವುದೂ ಹೇಸಿಗೆ. ಆದರೆ ಗಾಂಧೀಜಿ ಬಗ್ಗೆ ಮಾತ್ರ ನಾವು ಹೀಗೆ ಭಾವಿಸುವುದು. ರಮಣರನ್ನು ಯೂಂಗ್ ಹೊಗಳಿದನೆಂಬುದು, ಪರಮಹಂಸರ ಅನುಯಾಯಿ ಇಷರ್‌ವುಡ್ ಎಂಬುದು ನಮಗೆ ಹೆಮ್ಮೆಯ ವಿಷಯ. ಗಾಂಧೀಜಿ ನೆಹರೂರನ್ನು ತನ್ನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿಕೊಂಡಂತೆ ಪರಮಹಂಸರು ಆಯ್ಕೆ ಮಾಡಿದ್ದು ನಿರರ್ಗಳವಾಗಿ ಇಂಗ್ಲಿಷ್ ಮಾತಾಡಬಲ್ಲ ವಿವೇಕಾನಂದರನ್ನು.

ಈಗ ಇನ್ನೂ ಒಂದು ಕಥೆ ನೆನಪಾಗುತ್ತದೆ. ಆ ಹಿಂದಿನ ದಿನಗಳಲ್ಲಿ ಪ್ರಸಿದ್ಧವಾದ ಕಥೆ. ನೆಹರೂರನ್ನು ಭೇಟಿಯಾದಾಗ ಮೆನೂಹಿನ್‌ ಭಾರತದ ಯೋಗಾಸನ ಮೆಚ್ಚಿ ಏನೋ ಹೇಳುತ್ತಾರೆ. ಆಗ ನಿನಗೆ ಶೀರ್ಷಾಸನ ಹಾಕುವುದು ಹೇಗೆ ಗೊತ್ತೆ? ಎಂದು ನೆಹರೂ ಕೇಳಿ ತನ್ನ ಟೋಪಿ ತೆಗೆದು ಅಲ್ಲೇ ಶೀರ್ಷಾಸನ ಹಾಕಿ ತೋರುತ್ತಾರೆ. ತಲೆಕೆಳಗಾಗಿ ಶುರುವಾದ ಈ ಸ್ನೇಹ (ಪೂರ್ವಪಶ್ಚಿಮಗಳೆರಡೂ ರೂಢಿಸಿಕೊಳ್ಳುವ ಸ್ನೇಹದ ರೂಪಕವಾಗಿ?) ಮುಂದುವರಿಯಿತು.

ಯೋಗಾಸನವನ್ನು ಸೃಷ್ಟಿಸಿದ ದೇಶವೆಂದೇ ಈ ಬಡ ಭಾರತದ ಕೀರ್ತಿ ಜಗತ್ತಲ್ಲಿ ಹರಡಿರುವುದು. ಎಲ್ಲೆಲ್ಲೂ ಕಾಣುವ ಇನ್ನೊಂದು ಭಾರತೀಯ ಪುಸ್ತಕವೆಂದರೆ ಧ್ವನ್ಯಾಲೋಕವಲ್ಲ, ಭರತನ ನಾಟ್ಯಶಾಸ್ತ್ರವಲ್ಲ, ವಾತ್ಸ್ಯಾಯನ ಋಷಿಯ ಕಾಮಸೂತ್ರ! ಹಿಂದಿಯ ಪ್ರಸಿದ್ಧಕವಿ ವಾತ್ಸ್ಯಾಯನರನ್ನು ಅಮೆರಿಕಾದಲ್ಲಿ ಯಾರಿಗೋ ಪರಿಚಯ ಮಾಡಿಸಿದಾಗ ‘ನೀವೇ ಕಾಮಸೂತ್ರ ಬರೆದವರೆ?’ ಎಂದು ಈ ಮಹಾನುಭಾವ ಕೇಳಿದನಂತೆ. ಬಲುನಾಚಿಕೆಯ ಸೂಕ್ಷ್ಮರಾದ ವಾತ್ಸ್ಯಾಯನರು ಇಡೀ ಸಂಜೆ ಯಾರ ಜೊತೆಯೂ ಮಾತಾಡಲೇ ಇಲ್ಲವಂತೆ.

ನೆಹರೂ ನಂತರ ಭಾರತ ಸರ್ಕಾರ ಕೊಡುವ ೧೯೬೮ನೇ ಸಾಲಿನ ನೆಹರೂ ಅಂತರ ರಾಷ್ಟ್ರೀಯ ಪ್ರಶಸ್ತಿಯನ್ನು ಮೆನುಹಿನ್ನರಿಗೆ ಕೊಡಲಾಯಿತು. ತನ್ನ ಏಳನೇ ವಯಸ್ಸಿನಲ್ಲೇ ಸಂಗೀತದ ಅಭಿಮಾನಿಗಳ ಮೆಚ್ಚುಗೆ ಗಳಿಸಿದ ಮೆನೂಹಿನ್ನಿನ ವಯಲಿನ್ ಕೇಳಿ ಬೆರಗಿನ ಮೆಚ್ಚುಗೆಯಲ್ಲಿ ಐನ್‌ಸ್ಟೈನ್‌ ಉದ್ಗರಿಸಿದ್ದನಂತೆ: Now I know there is God in heaven –  ದೇವರಿದ್ದಾನೆಂದು ಈಗ ನನಗೆ ತಿಳಿಯಿತು.

ಮೆಚ್ಚುಗೆಯೆಂದರೆ ಇದು ನಿಜವಾದ ಮೆಚ್ಚುಗೆ. ರವಿಶಂಕರ್‌ ಮುಖೇನ ಮೆನೂಹಿನ್‌ ಭಾರತೀಯ ಸಂಗೀತಕ್ಕೆ ತೆರೆದುಕೊಂಡದ್ದು, ರವಿಶಂಕರ್‌ ಪಾಶ್ಚಿಮಾತ್ಯ ಸಂಗೀತಗಾರನ ಕಿವಿಗೆ ತನ್ನದು ಹಿಡಿಸಿತೆಂದು ವಿನಯದಿಂದ ಹಿಗ್ಗಿದ್ದು ಸಾಚಾ ಎನ್ನಿಸುವ, (ಅಷ್ಟೇನೂ ಸೀರಿಯಸ್‌ ಆದ ತಾಳಿಕೆಯ ಗುಣವಿಲ್ಲದ) ಪೂರ್ವ – ಪಶ್ಚಿಮ ಮಿಲನ. ಹೀಗೆ ಪಾಶ್ಚಿಮಾತ್ಯರ ಕಿವಿಯನ್ನು ಹಿಗ್ಗಿಸಿದವರಲ್ಲಿ ಲಿವರ್ ಪೂಲಿನ ಕೆಳಸ್ತರದಿಂದ ಹುಟ್ಟಿಬಂದ ಸಂಗೀತದ ಹುಚ್ಚಿನ ಬೀಟಲ್ಸ್ ಮುಖ್ಯರು ಎಂದು ಹೇಳುವವರಿದ್ದಾರೆ.

ಆಧುನಿಕ ನಾಗರೀಕತೆಯ ತೆವಲುಗಳನ್ನೂ, ಅದು ನಮ್ಮ ಅಂತರಂಗದಲ್ಲಿ ಹುಟ್ಟಿಸುವ ಶೋಭೆಯನ್ನೂ, ಕೇವಲ ನರಜೀವಿಗಳೂ ಆದ ನಮಗದು ಕೆಲವೊಮ್ಮೆ ತರುವ ದಣಿವನ್ನೂ ಹೀಗೆ ನಾನು ನನಗೇ ಹರಟಿಕೊಳ್ಳುತ್ತ ಹೋಗುತ್ತಿದ್ದಂತೆ, ಏನೋ ಹೇಳಲು ಹೊರಟು ಏನೋ ಹೇಳುತ್ತ, ಮುಖ್ಯವಾದೊಂದು ವಿಷಯಕ್ಕೆ ಬರುತ್ತೇನೆ. ಜ್ಞಾನಲೋಲನಾಗಿದ್ದರೂ ಕಾರ್ಮಿಕರ ನಡುವೆ ಕೆಲಸ ಮಾಡುತ್ತಿದ್ದ ನನ್ನ ಸೋಷಲಿಸ್ಟ್‌ ಹಿರಿಯ ಗೆಳೆಯ ವೆಂಕಟರಾಮ್‌ ನನಗೆ ಇದನ್ನು ಹೇಳಿದ್ದು. ಕ್ರಿಯಾಶೀಲ ರಾಜಕಾರಣಿಯೂ ಆಗಿದ್ದ ಈ ಗೆಳೆಯ ಲಿವರ್ ಕಾಯಿಲೆಯಲ್ಲಿ ಸ್ವಪ್ರತಿಷ್ಠೆಯ ಸೋಂಕು ಇಲ್ಲದ ತನ್ನ ಬುದ್ಧಿಶಕ್ತಿಯ ಎಲ್ಲ ಸೂಕ್ಷ್ಮಗಳನ್ನೂ ಡೆಲಿರಿಯಮ್ಮಿನಲ್ಲಿ ಕಳೆದುಕೊಂಡು ಬರಬಡಿಸುತ್ತ ಸತ್ತದ್ದು ನೆನಪಾಗಿ ಭಯವಾಗುತ್ತದೆ. ಮೆನುಹಿನ್ ತನ್ನ ನೆಹರೂ ಪ್ರಶಸ್ತಿಯ ಸಂದರ್ಭದಲ್ಲಿ ಮಾಡಿದ ಭಾಷಣವನ್ನು ವೆಂಕಟರಾಮ್‌ ಓದಿ, ನನ್ನನ್ನು ಹುಡುಕಿಕೊಂಡು ಬಂದು, ಬೆಂಗಳೂರಿನ ಕೋಶಿಸ್‌ಗೆ ಕರೆದೊಯ್ದು, ನಮ್ಮಿಬ್ಬರ ಜೇಬಿನಲ್ಲಿದ್ದ ಅಷ್ಟೂ ಹಣವನ್ನು ಒಟ್ಟುಮಾಡಿ ತಣ್ಣನೆಯ ಬಿಯರ್‌ತರಿಸಿ ಕುಡಿಯುತ್ತ ಮೆನುಹಿನ್ ಮಾತುಗಳಿಗೆ ಸಂಭ್ರಮಿಸಿದ್ದರು.

ಮೆನೂಹಿನ್‌ ಆಧುನಿಕ; ಭಾಭಾ ಗೆಳೆಯ; ನೆಹರೂ ಗೆಳೆಯ. ಆದರೆ ಅವನ ಪುರಾತನರಾದ ಬಿಥೋವನ್‌ರನ್ನೂ ಬ್ರಾಹ್ಮಾಸ್‌ರನ್ನೂ ಆವಾಹಿಸಿಕೊಳ್ಳಬಲ್ಲವ. ಆದ್ದರಿಂದ ಪ್ರಾಯಶಃ ನಮಗೆಲ್ಲರಿಗೂ ಪ್ರಿಯರಾದ ಭಾರತೀಯ ಸರ್ಕಾರೀ ವಿಜ್ಷಾನಿಗಳಾಗಲೀ, ಅರ್ಥಶಾಸ್ತ್ರದ ಪಂಡಿತರಾಗಲೀ ಹೇಳದ್ದನ್ನು ಅವನು ಹೇಳಿದ್ದ. ಹೇಳುವಾಗ ಗಾಂಧಿಯವರ ವಿಚಾರಕ್ಕೆ ಹತ್ತಿರವಾಗಿದ್ದ –  ಅವನದೇ ರೀತಿಯಲ್ಲಿ. ಪೂರ್ವಸೂರಿಗಳ ನೆನಪಿಲ್ಲದವರು ನಿಜವಾದ ಹೊಸಮಾತು ಹೇಳಲಾರರು ಎಂಬ ನನ್ನ ಭಾವನೆಯನ್ನು ಆಧುನಿಕತೆಯ ಗೋಳು ಗಮ್ಮತ್ತುಗಳ ನನ್ನ ಈ ಕಥನದಲ್ಲಿ ನುಣುಚಲು ಹೀಗೆ ಜಾಗಮಾಡಿಕೊಂಡಿದ್ದೇನೆ.

ಅವನ ಮಾತುಗಳ ತಾತ್ಪರ್ಯವಿದು. ಅವನು ಆ ಕಾಲದ ಮಾವೋ ವಾದಿಗಳಂತೆ ಮಧ್ಯಂತರದ ತಾಂತ್ರಿಕತೆಯನ್ನು ಕುರಿತು ಮಾತಾಡಲಿಲ್ಲ. Intermediate Technology ಎಂದರೆ ಬೃಹತ್‌ ಕೈಗಾರಿಕೆಗಳ ನಿರ್ಮಾಣಕ್ಕೆ ಪೂರ್ವದ್ದು ಮಾತ್ರ. ಆದರೆ ಮೆನೂಹಿನ್ ಮಾತಾಡಿದ್ದು ಪರ್ಯಾಯ ತಾಂತ್ರಿಕತೆ –  alternative technology

ಪಾಶ್ಚಿಮಾತ್ಯ ನಾಗರೀಕತೆ ತನ್ನ ಜನಸಮೂಹದ ಆಸೆಬುರುಕತನದಲ್ಲಿ ತನ್ನ ಕ್ರಿಯಾಶೀಲತೆಯನ್ನು ಕಳೆದುಕೊಂಡಿದೆ. ಕುಟುಂಬ ಪ್ರಜ್ಞೆಯಾಗಲೀ, ತಾನೊಂದು ಸಮುದಾಯವೆಂಬ ಭಾವನೆಯಾಗಲೀ ಅದಕ್ಕೆ ಇಲ್ಲ. ಎಲ್ಲರೂ ಬಿಡಿಬಿಡಿಯಾದ ವ್ಯಕ್ತಿಗಳು. ತನ್ನ ಸುಖ ತನಗೆ ಎಂದುಕೊಳ್ಳುವವರು. ಆದ್ದರಿಂದ ಲೊಕೋಪಯೋಗಿಯಾದ ಹೊಸದೇನನ್ನೂ ಅದು ಸೃಷ್ಟಿಸಲಾರದು. ಮನೆಯಲ್ಲಿ ಗಂಡ ಹೆಂಡತಿ ಒಬ್ಬ ಮಗ ಇದ್ದರೆ ಮೂವರಿಗೂ ಮೂರು ಕಾರುಗಳು ಬೇಕು; ಮೂರು ಟೆಲಿವಿಷನ್‌ಗಳು ಬೇಕು. ನಿಮ್ಮ ಭಾರತ ಹಾಗಿಲ್ಲ. ನಿಮಗಿನ್ನೂ ಸಮುದಾಯದ ಪ್ರಜ್ಞೆಯಿದೆ; ಹುಟ್ಟಿದ ಊರಿನಲ್ಲೇ ಬದುಕಿ ಬಾಳಿ ಸಾಯಬೇಕೆಂಬುವವರೇ ನಿಮ್ಮಲ್ಲಿ ಹೆಚ್ಚಾಗಿದ್ದಾರೆ. ಹೊಟ್ಟೆ ತುಂಬ ಉಂಡು, ಸೂರಿನ ಕೆಳಗೆ ನೆಲದ ಮೇಲೆ ಚಾಪೆಹಾಸಿ ಮಲಗಿ ಸುಖವಾಗಿ ನಿದ್ರೆ ಮಾಡಿ ವರ್ಷಕ್ಕೊಮ್ಮೆ ತೀರ್ಥಸ್ನಾನ ಮಾಡಿ ಬರುವುದರಲ್ಲೇ ಸಾರ್ಥಕತೆ ಕಾಣುವ ಈ ಜನ ಆಳುವವರ ಮೇಲೆ ಇಲ್ಲಸಲ್ಲದ ಸೌಕರ್ಯಗಳಿಗಾಗಿ ಒತ್ತಡ ತರುತ್ತಿಲ್ಲ. ಹೀಗಿರುವಾಗ ನಿಮ್ಮ ದೇಶ ಹೊಸ ತಂತ್ರಜ್ಞಾನದ, ಅಂದರೆ ಪಶ್ಚಿಮಕ್ಕೆ ಪರ್ಯಾಯವಾದ ತಂತ್ರಜ್ಞಾನದ ಅವಿಷ್ಕಾರಕ್ಕೆ ಪ್ರಯತ್ನಿಸಬೇಕು. ಆಗ ನಿಮ್ಮ ಅಸಾಧಾರಣ ತಜ್ಞತೆ ಪಡೆದ ವಿಜ್ಞಾನಿಗಳು ಸಾರ್ಥಕರಾಗುತ್ತಾರೆ. ಇತ್ಯಾದಿ…..

ನಾನು ಯಥಾವತ್ತಾಗಿ ಮೆನೂಹಿನ್ನರನ್ನು ಉದ್ಧರಿಸುತ್ತಿಲ್ಲ. ವೆಂಕಟರಾಮ್‌ ಜೊತೆಗಿನ ‘ಕೋಶಿಸ್’ ಸಖ್ಯದಲ್ಲಿ ಕೇಳಿದ್ದನ್ನು ನನಗೇ ನಾನೊಂದು ಪುರಾಣ ಮಾಡಿಕೊಂಡಿದ್ದೇನೆ… ಪ್ರಾಯಶಃ. ಆದರೆ ಈ ಬಗೆಯಲ್ಲಿ ಮೆನೂಹಿನ್ ಮಾತನ್ನಾಡಿದ್ದರು ಎಂಬುದಷ್ಟು ನನಗೆ ನೆನಪಿದೆ. ಸುಮಾರು ಮುವ್ವತ್ತೆಂಟು ವರ್ಷಗಳ ಹಿಂದೆ ನಾವೆಲ್ಲರೂ ಮಾತಾಡಿಕೊಳ್ಳುತ್ತ ಇದ್ದ ವಿಷಯ ಇದಲ್ಲವೆ?

* * *

ಈಗೇಕೆ ಅರ್ಜೆಂಟಾಗಿ ಮೆನುಹಿನ್ ಹೇಳಿದ್ದನ್ನು ನೆನೆಯುತ್ತಿದ್ದೇನೆ ಎಂದು ನೀವು ಕೇಳಿದರೆ ಮೈಸೂರು ಬೆಂಗಳೂರು ನಡುವಿನ ರಸ್ತೆಯ ರಾದ್ಧಾಂತ ಅದಕ್ಕೆ ಕಾರಣ. ಈಗಲೇ ರಸ್ತೆಯಿದೆ; ರೈಲು ಇದೆ; ಇನ್ನೊಂದು ರೈಲು ಸಮಾನಾಂತರವಾಗಿ ಓಡುವಂತೆ ಮಾಡಬಹುದು. ಸಾರ್ವಜನಿಕ ಓಡಾಟದ ಒಳ್ಳೆಯ ಬಸ್ಸುಗಳನ್ನು ಹೆಚ್ಚಿಸಬಹುದು; ಕಾರುಗಳನ್ನು ಕಡಿಮೆ ಮಾಡಬಹುದು. ಇದರ ಬದಲಾಗಿ ಹೊಸ ರಸ್ತೆ ಮಾಡಿ ಅದರ ಉದ್ದಕ್ಕೂ ಉಪನಗರಗಳನ್ನು ಸೃಷ್ಟಿಸಿ, ಎಲ್ಲಲ್ಲೂ ಅಮೆರಿಕಾದ ಹಗಲಿಗಾಗಿ ರಾತ್ರಿಯೆಲ್ಲ ನಮ್ಮ ಯುವಕ ಯುವತಿಯರನ್ನು ಅವರು ನಿರ್ಬೀಜರಾಗುವಂತೆ / ನಿರ್ವೀರ್ಯರಾಗುವಂತೆ ದುಡಿಸುವ ಸೇರೇಗಾರರ ಈಜುಕೊಳ, ಗಾಲ್ಫ್‌ರೆಸಾರ್ಟ್‌‌ಗಳಿಗಾಗಿ ರೈತರ ಭೂಮಿಯನ್ನು ಕಸಿದುಕೊಂಡು ಈ ರೈತರನ್ನು ಟೆನ್ನಿಸ್‌ಕೋರ್ಟುಗಳ ಜವಾನರನ್ನಾಗಿಯೋ, ಅವರ ಹೆಂಗಸರನ್ನು ಮುಸುರೆತಿಕ್ಕುವ ಕೆಲಸದವರನ್ನಾಗಿಯೋ ಮಾಡಿ ಅಲ್ಪತೃಪ್ತರಾದ, ತಮ್ಮೆಲ್ಲಬವಣೆಗಳಲ್ಲೂ ಜೀವನಸಂತೋಷ ಕಳೆದುಕೊಳ್ಳದ ಬಡವರು ನಿರ್ಗತಿಕರಾಗಿಬಿಡುವುದನ್ನು ತಪ್ಪಿಸಬಹುದು; ಅಥವಾ ಈ ರೈತರು ಭೂಮಿಗಾಗಿ ಪರದಾಡುತ್ತ ಆನೆಗಳ ಓಡಾಡುವ ಜಾಗದಲ್ಲಿ ಗದ್ದೆಗಳನ್ನು ಮಾಡಿಕೊಂಡು ಆನೆಗಳ ನಾಶಕ್ಕೆ ಕಾರಣರಾಗದಂತೆ ತಪ್ಪಿಸಬಹುದು; ಈಗಿರುವ ರೈತರ ಈಗಿರುವ ಭೂಮಿಗಳ ಜಲಸಂಪತ್ತಿನ ಕೊಯ್ಲು ಮಾಡಬಹುದು; ಸಾವಯವ ಕೃಷಿ ಮಾಡಬಹುದು; ಎಲ್ಲ ಮಕ್ಕಳ ಜೊತೆ ಅವರ ಮಕ್ಕಳೂ ವಿದ್ಯಾವಂತರಾಗಬಹುದು; ಎಲ್ಲ ರೈತರೂ ವರ್ಷಕ್ಕೊಮ್ಮೆಯಾದರೂ ರೈಲಿನಲ್ಲಿ ದೂರದ ಹಿಮಾಲಯವನ್ನೂ ನೋಡಿ ಬರಬಹುದು.

* * *

ಹೀಗೆ ಕನಸು ಕಟ್ಟುವಾಗಲೇ ನಮ್ಮಂತಹವರಿಗೆ ಶರವೇಗದಲ್ಲಿ ಬೆಂಗಳೂರಿನಿಂದ ಮೈಸೂರು ಸೇರಬಹುದೆಂಬುದೂ ಆಕರ್ಷಕವಾಗಿರುತ್ತದೆ ಅಲ್ಲವೆ?

ಮುಖ್ಯಮಂತ್ರಿಯಾಗಿ ಹೊಸದಾರಿಗಳ ಹುಡುಕಾಟದಲ್ಲಿ ವಿಫಲರಾದರೂ ಒಮ್ಮೆ ಗೆಳೆಯ ಪಟೇಲರು ಹೇಳಿದ್ದು ನೆನಪಾಗುತ್ತದೆ. ನಾವೊಂದು ರೈಲಿನಲ್ಲಿ ಕೂತಿದ್ದೇವೆ. ಅದು ಪಶ್ಚಿಮದ ದಿಕ್ಕಿನಲ್ಲಿ ಧಾವಂತದಿಂದ ಓಡುತ್ತಿದೆ. ಮುಂದೊಂದು, ಇನ್ನೂ ಮುಂದಿನ ಪಯಣಕ್ಕೆ ಮುಂದೇ ಇಲ್ಲದ ಕಂದಕವಿದೆ. ಆದರೆ ನಾವು ಪ್ರಯಾಣವಾಡುತ್ತಿದ್ದೇವೆಂದು ನೆಮ್ಮದಿಯಲ್ಲಿ ಭಾವಿಸಿಕೊಳ್ಳುತ್ತ ನಿಶ್ಚಿಂತರಾಗಿದ್ದೇವೆ.

ಇಲ್ಲಿ ನಾನೊಂದು ಮಾತು ಸೇರಿಸುವೆ. ಈ ಪಶ್ಚಿಮಮುಖ ಎಕ್ಸ್‌ಪ್ರೆಸ್‌ನಲ್ಲಿ ನಮ್ಮ ಜೊತೆ ಪೂರ್ವಾಭಿಮುಖಿ ಭ್ರಮೆಯಲ್ಲಿ ಎಲ್ಲ ಮಠಗಳ ಯತಿಗಳೂ, ಸಂಘ ಪರಿವಾರದವರೂ, ಜನಪ್ರಿಯ ಆಧ್ಯಾತ್ಮಿಕ ಗುರುಗಳೂ ಕೂತಿದ್ದಾರೆ.

ಡ್ರೈವರ್ ಸೀಟಿನಲ್ಲಿ ಕೂತಿರುವವರು ಯಾರು ನೀವೇ ಊಹಿಸಿ.

೨೦೦೬

* * *