ಚಿಕಾಗೊ ನಗರದ ರಾಮಾನುಜನ್‌ ಮನೆಯಲ್ಲಿ ಕಾದಂಬರಿಕಾರ ಸಾಲ್‌ ಬೆಲ್ಲೊನನ್ನು ಭೇಟಿಯಾಗಿದ್ದೆ. ಎಪ್ಪತ್ತರ ದಶಕದ ಮಧ್ಯದಲ್ಲಿ ಎಂದು ನೆನಪು. ಮಗನನ್ನು ಈಜಲು ಕೊಳದಲ್ಲಿ ಬಿಟ್ಟು ಬೆಲ್ಲೋ ಬಂದಿದ್ದ. ಸಾಲ್ ಬೆಲ್ಲೊನನ್ನು ಟೀಸ್ ಮಾಡಲೆಂದು ರಾಮಾನುಜನ್ನರ ಹೆಂಡತಿ ಮಾಲಿ ‘ನಿನ್ನ ಯಾವ ಹೆಂಡತಿಯ ಮಗನ ಸರದಿ ಇವತ್ತು?’ ಎಂದಳು. ಹಲವು ಬಾರಿ ಮದುವೆಯಾದ ಖ್ಯಾತಿ ಬೆಲ್ಲೋನದು. ಬೆಲ್ಲೊ ನಕ್ಕು ಜಂಬದಿಂದ ಹುಬ್ಬನ್ನು ಏರಿಸಿ. ‘ಯಾವ ಹೆಂಡತಿ ಎಂದು ಹೇಗೆ ವಿವರಿಸಲಿ? ಸೀಸರನ ಹೆಂಡತಿ ಎಂದರೆ ಸಾಕಲ್ಲವೆ?’ ಎಂದ. ಪ್ರಿಯರ ಎದುರು ಕೊಚ್ಚಿಕೊಳ್ಳುವ ಖುಷಿಯವನಾದ ನನಗೆ ಬೆಲ್ಲೋನ ಹಾಸ್ಯದ ಗರ್ವ ಇಷ್ಟವಾಯಿತು. ಬೇಸಿಗೆಯಾದ್ದರಿಂದ ತುಂಡುತೋಳಿನ ಅಂಗಿ ತೊಟ್ಟಿದ್ದ ಬೆಲ್ಲೋಗೆ ಟೀ ಕೊಡುತ್ತ ಮಾಲಿ, ಅವಳ ಸುಂದರವಾದ ಅಗಲವಾದ ಕಣ್ಣುಗಳನ್ನು ಮಿಟುಕಿಸಿ, ‘ಅಂಗಿ ಚೆನ್ನಾಗಿದೆ. ನೀನೇ ಕೊಂಡದ್ದೊ ಅಥವಾ ನಿನ್ನ ಮಿಲಿಯನರ್‌ ತಮ್ಮ ತೊಟ್ಟು ವರ್ಗಾಯಿಸಿದ್ದೊ?’ ಎಂದಳು. ನಮ್ಮ ಲಂಗ ತೊಟ್ಟ ಬಾಲೆಯರ ಕೀಟಲೆ ಮಾಲಿಯ ಹಾವಭಾವದಲ್ಲಿತ್ತು.

ಎದುರಿನ ಕುರ್ಚಿಯಲ್ಲಿ ಕೂತಿದ್ದ ಬೆಲ್ಲೋನನ್ನೂ ಅವನಿಗೆ ಅಪರಿಚಿತನಾದ ನನ್ನನ್ನೂ ಈ ಹಾಸ್ಯದಲ್ಲಿ ಹತ್ತಿರ ತರುವ ಉಪಾಯ ಮಾಲಿಯದಾಗಿತ್ತು. ಅವತ್ತು ಸಂಜೆ ನನ್ನನ್ನು ಭೇಟಿಯಾಗಲು ಒಂದು ಔತಣಕೂಟವನ್ನು ರಾಮಾನುಜನ್‌ ಮತ್ತು ಮಾಲಿ ಏರ್ಪಡಿಸಿದ್ದರು. ಈ ಕೂಟಕ್ಕೆ ತನಗೆ ಬರಲಾಗುವುದಿಲ್ಲವೆಂದು ಒಬ್ಬನೇ ನನ್ನನ್ನು ನೋಡಲು ಬೆಲ್ಲೋ ಬಂದಿದ್ದ. ಈ ವಿಶೇಷ ಭೇಟಿ ನನಗೆ ಹಗುರಾಗಲೆಂದು ಇಬ್ಬರೂ ಸಂಚುಮಾಡಿದಂತೆ ಕಂಡು ನಾನು ಪುಳಕಿತನಾಗಿದ್ದೆ. ನೊಬೆಲ್ ಪಾರಿತೋಷಕ ಪಡೆದಾತ ಕೆಲವು ನಿಮಿಷಗಳ ಕಾಲ ನನ್ನ ಜೊತೆಗಾರನಾಗುವಂತೆ ಮಾಲಿ ಮಾಡಿದ್ದಳು.

ತುಂಟುತನದಲ್ಲಿ ಮಿಂಚುವ ಮಾಲಿ, ಮೂಲೆಯ ಕುರ್ಚಿಯಲ್ಲಿ ಅಚ್ಚುಕಟ್ಟಾಗಿ ಕೂತ ರಾಮಾನುಜನ್‌ ಮತ್ತು ಅವನ ಜೊತೆ ಮಾತಿಗೆ ಕಾದ ನಾನು ಬೆಲ್ಲೋ ಕಣ್ಣುಗಳಲ್ಲಿ ಇದ್ದೆವು. ರಾಮನ ಗುಣಗಳನ್ನು ಕೊಂಡಾಡುತ್ತ ವಾಲ್ಮೀಕಿ ಅವನನ್ನು ‘ಪೂರ್ವ ಭಾಷಿ’ ಎನ್ನುತ್ತಾನೆ. ಅಂದರೆ ಎದುರು ಸಿಕ್ಕವನ ಜೊತೆ ಅವನ ಮಾತಿಗೆ ಕಾಯದೆ ತಾನೇ ಮಾತಿಗೆ ಪ್ರಾರಂಭಿಸುವ ಸೌಜನ್ಯ ರಾಮನದು ಎನ್ನುತ್ತಾನೆ ವಾಲ್ಮೀಕಿ. ತನ್ನ ಕಣ್ಣುಗಳಲ್ಲಿ ಇದ್ದ ಮೂವರಲ್ಲಿ ನನ್ನನ್ನು ಆಯ್ದು ಉಳಿದಿಬ್ಬರಿಗೆ ಗೊತ್ತಿದ್ದನ್ನು ನನಗಾಗಿ ಬೆಲ್ಲೋ ಮತ್ತೆ ಹೇಳಿದ: ‘ಹಲವು ವರ್ಷಗಳ ಕಾಲ ನಾನು ನನ್ನ ಅಂಗಿ ಕೊಂಡಿದ್ದೇ ಇಲ್ಲ. ನನ್ನ ಮಿಲಿಯನರ್‌ ಅಣ್ಣ ಕೊಂಡು ತೊಟ್ಟು ನನಗದನ್ನು ಕೊಡುವುದು. ಈಗ ನಾನೇ ಕೊಳ್ಳಲು ಶುರುಮಾಡಿದ್ದೇನೆ. ನನಗೆ ಬೇಕಾದ ಬಣ್ಣ ನೇಯ್ಗೆಯನ್ನು ಆಯುವುದರ ಉಲ್ಲಾಸ ಈಗ ನನ್ನ ಅನುಭವಕ್ಕೆ ಬಂದಿದೆ ಈ ಇಳಿ ವಯಸ್ಸಿನಲ್ಲಿ’ ಎಂದು ನಕ್ಕು ಗಂಭೀರನಾಗಿ ಮುಂದುವರೆದ.

ಚಿಕಾಗೋ ವಿಶ್ವವಿದ್ಯಾಲಯ ಇರುವ ಪ್ರದೇಶದ ಅಂಚಿನಲ್ಲಿ ಕಡುಬಡವರು ಬದುಕುವ ಕೊಳಚೆ ಪ್ರದೇಶ ಇನ್ನೂ ಇದೆ. ಬೆಲ್ಲೋ ಹುಟ್ಟಿ ಬೆಳೆದದ್ದು ಈ ಕೊಳಚೆ ಪ್ರದೇಶದಲ್ಲಿ, ಹೆಚ್ಚಾಗಿ ಕಪ್ಪು ಜನರ ನಡುವೆ. ಕೆಲವು ಕಿಲೋಮೀಟರುಗಳ ಆಚೆ ಇರುವ ಈ ಪ್ರದೇಶದ ದಿಕ್ಕನ್ನು ಬೊಟ್ಟು ಮಾಡಿ ತೋರಿಸಿ ‘ನನ್ನ ತಂದೆಯವರ ಇಡೀ ಜೀವನದ ಹೋರಾಟ ಈ ಕೆಲವು ಕಿಲೋಮೀಟರ್‌ಗಳನ್ನು ನಾನು ದಾಟುವಂತೆ ಮಾಡಿದ್ದು. ಆಚೆಯಿಂದ ಈಚೆ ಬಂದದ್ದೇ ಬದುಕಿನ ಅರ್ಥಗಳೇ ಬದಲಾದವು. ಸೋದರ ಮಿಲಿಯನರ್‌ ಆದ. ನಾನು ಲೇಕಕನಾಗಿ ಇಲ್ಲಿ ಪ್ರಾಧ್ಯಾಪಕನಾದೆ. ಎರಡಕ್ಕೂ ಒಂದೆರಡು ಕಿಲೋಮೀಟರ್‌ ಅಂತರ – ಅಷ್ಟೆ.’

ತನ್ನ ಸಾಧನೆ ಅಲ್ಪವೆಂದೂ ಅಪಾರವೆಂದೂ ಏಕಕಾಲದಲ್ಲಿ ಹಾಸ್ಯದಲ್ಲಿ ಹೇಳಿದವನು ನನ್ನನ್ನು ಸ್ನೇಹದಲ್ಲಿ ಕೇಳಿದ: ‘ಭಾರತದಲ್ಲಿ ವಿಶೇಷವಾಗಿ ಏನು ನಡೆಯುತ್ತಿದೆ’. ಮಾಲಿ ಹಿಂದಿನ ದಿನದ ನಮ್ಮ ಮಾತಿನ ನೆನಪಿನಲ್ಲಿ ಉತ್ಸಾಹಿತಳಾಗಿ, ‘ಅದೊಂದು ಮಲೆಯಾಳಿ ಕಥೆಯನ್ನು ನನಗೆ ಹೇಳಿದೆಯಲ್ಲಾ ಮೈಕಂ ಮೊಹಮ್ಮದ್ ಬಷೀರರದು, ಅದನ್ನು ಬೆಲ್ಲೋಗೆ ಹೇಳು’ ಎಂದಲು. ಕಥೆ ಹೇಳಲು ತೊಡಗಿದರೆ ನಾನು ಉಲ್ಲಸಿತನಾಗಿ ಮಾತನಾಡುವನೆಂದು ಮಾಲಿಗೆ ಗೊತ್ತಿತ್ತು. ನಾನು ‘ಪಾತುಮ್ಮನ ಆಡು’ ಕಥೆಯನ್ನು ಬೆಲ್ಲೋಗೆ ಹೇಳಿದೆ. ತಂಗಿ ಸಾಕಿದ ಹಪಹಪಿಸುವ ಹಸಿವಿನ ಆಡು, ತಂಗಿಯ ಜೊತೆ ಎಲ್ಲೆಲ್ಲೂ ಓಡಾಡುತ್ತ, ಸಿಕ್ಕಿದ್ದನ್ನು ತಿನ್ನಲೆಂದೇ ಹುಡುಕಾಡುತ್ತ ಮನೆಯಲ್ಲಿ ಎಲ್ಲವನ್ನೂ ತಿನ್ನುತ್ತಾ ಕೊನೆಗೆ ಬರಹಗಾರನಾದ ವೈಕಂ ಬಷೀರನ ಹಸ್ತಪ್ರತಿಯನ್ನೂ ತಿಂದಿದ್ದನ್ನು ನಾನು ವಿವರಿಸಿದೆ. ಈ ಕಥೆಯಲ್ಲಿ ಕುಟುಂಬದ ಎಲ್ಲರೂ ಒಬ್ಬರನ್ನೊಬ್ಬರು ಶೋಷಿಸುತ್ತಾರೆ. ತಾಯಿ ಮಗಳಿಗೆ ಗೊತ್ತಿಲ್ಲದಂತೆ ಆಡಿನ ಹಾಲು ಕರೆದುಕೊಳ್ಳುತ್ತಾಳೆ. ಮಗಳು ತಾಯಿಯ ಸಂಬಾರ ಪದಾರ್ಥ ಕದಿಯುತ್ತಾಳೆ. ಮನೆಯಲ್ಲಿ ಕಾಲು ಕುಂಟಾದ ಸಹೋದರನೊಬ್ಬ ‘ನಾನು ನತದೃಷ್ಟ ಕುಂಟ ನೀನೊಬ್ಬ ಹಣಗಳಿಸಿ ಮನೆಗೆ ಬಂದಿದ್ದಿಯ’ ಎಂದು ಅಣ್ಣನನ್ನು ಬ್ಲಾಕ್‌ ಮೇಲ್ ಮಾಡುತ್ತಾನೆ. ಕಾಲಿನ ಕುಂಟೇ ಅವನ ಅಸ್ತ್ರ. ನಾನು ಬೆಲ್ಲೋಗೆ ಹೇಳಿದೆ : ‘ಕಾಫ್ಕಾ ಈ ಕಥೆಯನ್ನು ಬರೆದಿದ್ದರೆ ಇದೊಂದು ಭೀಕರ ದುಃಸ್ವಪ್ನದ ಕಥೆಯಾಗಿ ಇರುತ್ತಿತ್ತು ಆದರೆ ವೈಕಂ ಮೊಹಮ್ಮದ್ ಬಷೀರರ ಮಲೆಯಾಳೀ ಮುಸ್ಲಿಂ ಹಾಸ್ಯದಲ್ಲಿ ಈ ಕಥೆ ಉದಾರವಾದ ಅಂತಃಕರಣದ ಹಾಸ್ಯ ಕತೆಯಾಗಿದೆ.’

ನಾನು ಹೇಳಿದ್ದು ಬೆಲ್ಲೋಗೆ ಇಷ್ಟವಾಗಿರಬೇಕು. ‘ಭಾರತಕ್ಕೆ ಇನ್ನೂ ಕತೆ ಹೇಳುವುದು, ಹೇಳಿದ ಕತೆ ತಾತ್ವಿಕವಾಗಿಯೂ ಗಹನವಾಗುವುದು ಸಾಧ್ಯವಿದೆಯಲ್ಲಾ’ ಎಂದು ಮೆಚ್ಚಿಕೆಯಲ್ಲಿ ನುಡಿದ.

* * *

ಬೆಲ್ಲೋ ಜೊತೆ ಆಡಿದ ಇನ್ನಷ್ಟು ವಿಚಾರಗಳು ನೆನಪಾಗುತ್ತವೆ.

ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ರಷ್ಯಾದ ಲೇಖಕರು ಎಲ್ಲಾ ತಾತ್ವಿಕ ವಿಚಾರಗಳಿಗೆ ಬಹಳ ಹುಮ್ಮಸ್ಸಿನಿಂದ ಸ್ಪಂದಿಸುತ್ತಿದ್ದರು. ಕ್ರಾಂತಿ ಪೂರ್ವ ರಷ್ಯಾ ಹೊಸತಿಗಾಗಿ ಕುದಿಯುತ್ತಿತ್ತು. ಮರಣ ದಂಡನೆಗೆ ಒಳಗಾಗಿ ಸೈಬೀರಿಯಾದಲ್ಲಿ ದುಡಿಮೆ ಮಾಡುತ್ತಿದ್ದ ದಾಸ್ತೋವಸ್ಕಿ ತನ್ನ ಸೋದರನಿಗೆ ಮಿಲ್ ಮತ್ತು ಬೆಂಥಮರ ಹೊಸತೊಂದು ಪುಸ್ತಕವನ್ನು ಕಳುಹಿಸು ಎಂದು ಹಾತೊರೆದು ಬರೆಯುತ್ತಾನೆ. ಮನುಷ್ಯನ ಒಳ್ಳೆತನವೆಲ್ಲವೂ ಅವನ ಸ್ವಾರ್ಥದಿಂದಲೇ ಹೊಮ್ಮುತ್ತದೆ, ಯಾವ ದೈವಕೃಪೆಯೂ ಅದಕ್ಕೆ ಆಧಾರವಲ್ಲ ಎಂದು ತಿಳಿದಿದ್ದ ಇಂಗ್ಲೆಂಡಿನ ಪ್ರಯೋಜನವಾದಿಗಳು ದಾಸ್ತೊವಸ್ಕಿಯ ಆತ್ಮದ ಎದುರಾಗಳಿಗಳು. ಅಂಥವರಿಗೆ ಎದುರಾಗುವುದು ದಾಸ್ತೊವಸ್ಕಿಯ ಸೃಜನಶೀಲತೆಯ ಮೂಲದ ರಹಸ್ಯವಾಗಿದೆ. ಬೆಲ್ಲೋ ಜೊತೆ ಇದನ್ನು ಚರ್ಚಿಸುತ್ತಿದ್ದ ನಾನು ತುರ್ತುಪರಿಸ್ಥಿಗೆ ಪೂರ್ವದಲ್ಲಿ ಜನಾಂದೋಲನದಲ್ಲಿ ತೊಡಗಿದ್ದ ಜಯಪ್ರಕಾಶರು ಹೇಳಿದ ಒಂದು ಮಾತನ್ನು ನೆನಪು ಮಾಡಿಕೊಂಡು ಹೇಳಿದೆ. ಅಮೆರಿಕದಲ್ಲಿ ಓದುತ್ತಿದ್ದಾಗ ಕಮ್ಯುನಿಸ್ಟನಾಗಿದ್ದ ಜಯಪ್ರಕಾಶ್ ವಿನೋಬಾರ ನಾಯಕತ್ವದಲ್ಲಿ ಜೀವನ ದಾನ ಮಾಡಿದ ನಂತರ ಹೇಳಿದ್ದ ಮಾತಿದು –  ‘ಮಾರ್ಕ್ಸ್‌‌ವಾದ ಈ ಜಗತ್ತಿನ ಭೌತಿಕವಾದ ಎಲ್ಲ ಸತ್ಯಗಳನ್ನೂ ವಿವರಿಸುತ್ತದೆ. ಆದರೆ ಮನುಷ್ಯ ಯಾಕೆ ಒಳ್ಳೆಯವನಾಗಿರಬೇಕೆಂಬುದನ್ನು ಮಾರ್ಕ್ಸ್‌ವಾದ ವಿವರಿಸಲಾರದು.’

ಇದನ್ನು ಕೇಳಿಸಿಕೊಂಡ ಬೆಲ್ಲೋ ನಸುನಕ್ಕು ಹೇಳಿದ: ‘ಹತ್ತೊಂಬತ್ತನೇ ಶತಮಾನದ ರಷ್ಯನ್ನರಂತೆ ನೀವು ಭಾರತೀಯರೂ ತತ್ವಕ್ಕೆ ಹುರುಪಿನಲ್ಲಿ ಸ್ಪಂದಿಸುವುದು ನನಗೆ ವಿಶೇಷವೆನ್ನಿಸುತ್ತದೆ. ನಾವೀಗ ಯೂರೋಪಿನಲ್ಲಿ ವಿಚಾರಗಳಿಗೆ ಹೀಗೆ ಭಾವಾವೇಷದಲ್ಲಿ ಸ್ಪಂದಿಸುವುದಿಲ್ಲ. ಹಾಗೆ ಸ್ಪಂದಿಸಿದರೆ ನಾವು ಪೆದ್ದು ಭಾವುಕರಂತೆ ಕಾಣುತ್ತೇವೆ. ಇದು ಸರಿಯಲ್ಲ.’

‘ಭಾರತಕ್ಕೆ ಬರುವುದಿಲ್ಲವೆ?’ ಎಂದು ನಾನು ಬೆಲ್ಲೋನನ್ನು ಕೇಳಿದೆ. ಸತ್ಯಜಿತ್‌ ರಾಯ್‌ರ ಪಥೇರ್ ಪಂಚಾಲಿಯಲ್ಲಿ ಬರುವ ಸಾವನ್ನು ಉತ್ಕಟವಾಗಿ ಅನುಭವಿಸಿ ಬೆಲ್ಲೋ ಬರೆದದ್ದು ನನ್ನ ನೆನಪಿನಲ್ಲಿತ್ತು. ಇಲ್ಲ. ನನಗೆ ವಯಸ್ಸಾಯಿತು. ಭಾರತದ ಬಡತನದ ಬವಣೆಯನ್ನು ನಾನು ಎದುರಿಸಲಾರೆ’ ಎಂದ. ಹೊರಡುವಾಗ ಕೊಂಚ ಮುಜುಗರದಲ್ಲಿ ರಾಮಾನುಜನ್‌ಗೆ ಹೇಳಿದ: ‘ನೀವು ಭಾಷಾಂತರಿಸಿದ ಇವರ ಕಾದಂಬರಿಯನ್ನು ಅಮೆರಿಕಾದಲ್ಲಿ ಪ್ರಕಟಿಸುವುದು ಅವಶ್ಯವೆನ್ನಿಸಿದರೆ ನನ್ನ ಸಹಾಯ ಕೇಳಲು ಹಿಂಜರಿಯಬೇಡಿ. ಒಂದು ಒಳ್ಳೆಯ ಕೃತಿಗೆ ಈ ಬೆಲ್ಲೋನ ಸರ್ಟಿಫಿಕೇಟ್‌ ಬೇಕೆಂದು ನಾನು ಹೇಳುತ್ತಿರುವುದಿಲ್ಲ.’

ನಾನು ಬಹಳ ಇಷ್ಟಪಡುತ್ತಿದ್ದ ಸಾಲ್ ಬೆಲ್ಲೋ ಅಮೆರಿಕದ ದೊಡ್ಡ ಲಿಬರಲ್‌ ಲೇಖಕನಾಗಿದ್ದ –  ಲಯನಲ್ ಟ್ರಿಲ್ಲಿಂಗ್‌ನಂತೆ. ಈ ಬಗೆಯ ಲಿಬರಲ್ ಮನೋಧರ್ಮದವರು ಯಾವತ್ತು ಕ್ಷೇಮದ ವೈಚಾರಿಕತೆಗೆ –  ಇರುವುದರ ಸಮರ್ಥನೆಗೆ –  ಜಾರುವರೋ ಹೇಳಲಾಗದು. ಲಿಬರಲ್ ಮನೋಧರ್ಮದವನು ಸುಸ್ತಾದಾಗ ಕನ್ವರ್ವೇಟಿವ್‌ ಆಗಿಬಿಡುತ್ತಾನೆ. ಇಸ್ರೇಲಿಗೆ ಹೋದ ಬೆಲ್ಲೋ ಪ್ಯಾಲೆಸ್ಟೀನರ ನೋವು ಸಂಕಟಗಳಿಗೆ ಸ್ಪಂದಿಸಲಾರದೇ ಹೋದ. ಶಿಕಾಗೋ ವಿಶ್ವವಿದ್ಯಾಲಯದ ಪಕ್ಕದ ಲೋಕದಿಂದ ಶ್ರಮವಹಿಸಿ ಹೊರಬಂದಿದ್ದ ಸಾಲ್‌ ಬೆಲ್ಲೋ ತನ್ನದೊಂದು ಕಾದಂಬರಿಯಲ್ಲಿ ಒಂದು ಭೀಕರ ಅನುಭವವನ್ನು ವರ್ಣಿಸುತ್ತಾನೆ. ಕಾದಂಬರಿಯ ನಾಯಕನನ್ನು ಧಾಂಡಿಗನಾದ ಕರಿಯನೊಬ್ಬ ಓಣಿಯ ಮೂಲೆಯೊಂದಕ್ಕೆ ಕರೆದುಕೊಂಡು ಹೋಗಿ ತನ್ನ ಪ್ಯಾಂಟನ್ನು ಬಿಚ್ಚಿ ಶಿಶ್ನ ದರ್ಶನ ಮಾಡಿಸುತ್ತಾನೆ. ಇಂಥ ಘಟನೆಗಳನ್ನು ಬೆಲ್ಲೋ ಸೂಕ್ಷ್ಮದಲ್ಲಿ ವರ್ಣಿಸುತ್ತಾನೆ. ಒರಟಾಗಿ ಏನೂ ಹೇಳುವುದಿಲ್ಲ. ಆದರೆ ಒಂದು ಬಗೆಯ ನಯನಾಜೂಕು ಕಾಣೆಯಾಗಿಬಿಟ್ಟಿತಲ್ಲವೆ ನಮ್ಮ ಈ ದುಷ್ಟಕಾಲದಲ್ಲಿ ಎಂಬ ವ್ಯಾಕುಲ ಅಂಥವರ ಬರೆವಣಿಗೆಯಲ್ಲಿ ಆವರಿಸಿ ಕೊಂಡಿರುತ್ತದೆ. ಅನುನಯದ ವರ್ತನೆಯ ಸಮುದಾಯ ಜೀವನ ಅಧೋಲೋಕದಿಂದ ಬಂದ ಜನರಿಂದ ಅಲ್ಲಾಡತೊಡಗಿದಾಗ ಲಿಬರಲ್ ಮನೋಧರ್ಮದವನು ಮನುಷ್ಯನ ಸಾಧ್ಯತೆಗಳ ಬಗ್ಗೆ ಅನುಮಾನಗಳನ್ನು –  ಅಗತ್ಯಕ್ಕಿಂತ ಹೆಚ್ಚಾಗಿ –  ತೋರತೊಡಗುತ್ತಾನೆ. ಅಮೆರಿಕಾದ ಘನತೆವೆತ್ತ ಮಹಾನ್ ವಿಶ್ವವಿದ್ಯಾಲಯವೊಂದರಲ್ಲಿ ಪಾಠಮಾಡುತ್ತಿದ್ದ ಟ್ರಿಲ್ಲಿಂಗ್ ಬಂಡೆದ್ದ ವಿದ್ಯಾರ್ಥಿಗಳ ಅಸೌಜನ್ಯದಿಂದ ಕೊನೆಗೂ ಚೇತರಿಸಿಕೊಳ್ಳಲಾರದೆ ಹೋದ ಎಂದು ಕೇಳಿದ್ದೇನೆ.

ಬೆಲ್ಲೋ ಬಗ್ಗೆಯಾಲೀ ಟ್ರಿಲ್ಲಿಂಗ್‌ ಬಗ್ಗೆಯಾಗಲೀ ನಿರ್ಣಾಯಕವಾಗಿ ಅವರ ಔದಾರ್ಯದ ಮನಸ್ಸು ಹಿಂಸೆಯಿಂದ ಪೂರ್ಣ ಹಿಮ್ಮೆಟ್ಟಿತು ಎಂದು ಹೇಳಲಾಗದು. ಆದರೂ ಮನುಷ್ಯನ ಒಳ್ಳೆತನದ ಹಿಂದಿರುವ ರಹಸ್ಯ ಶಕ್ತಿಯ ಬಗ್ಗೆ ಮುಗ್ಧವಾಗಿ ಸ್ಪಂದಿಸುವ ಅನುಭಾವಿಗಳು ಈ ಬಗೆಯ ಲಿಬರಲ್ ಮನೋಧರ್ಮದವರಿಗಿಂತ ಮುಂದೆ ಹೋಗಿ ಹೊಸ ಜೀವನಕ್ಕಾಗಿ ತಹತಹಿಸುವ ಆಗೀಗ ಕ್ರೂರಿಗಳೂ ಆಗುವ ಹೊಸ ಜನರಿಗೆ ಮುಕ್ತರಾಗಿ ಸ್ಪಂದಿಸಬಲ್ಲವರು ಎನ್ನಬಹುದು. ಸೆಕ್ಯುಲರ್ ಆದ ಆರ್ವೆಲ್‌ಗೂ ಈ ಶಕ್ತಿ ಇತ್ತು. ಸ್ಪಾನಿಶ್ ಸಿವಿಲ್ ವಾರ್‌ನಲ್ಲಿ ಎಡಪಂಥೀಯರ ಮೋಸ ದಗಗಳಿಂದ ಕ್ರುದ್ಧನಾದ ಆರ್ವೆಲ್ ಬಡಜನರ ಬಗ್ಗೆ ಅನುಕಂಪ ಕಳೆದುಕೊಳ್ಳಲಿಲ್ಲ. ಹತ್ತೊಂಬತ್ತನೇ ಶತಮಾನದ ಫ್ರೆಂಚ್‌ ಕ್ರಾಂತಿಯಿಂದ ಆಕರ್ಷಿತನಾಗಿ ಅನಂತರ ಅದರ ಅನಗತ್ಯ ಕ್ರೌರ್ಯದಿಂದ ಕಂಗೆಟ್ಟ ವರ್ಡ್ಸವರ್ತ್‌‌ನು ಸಾಮಾನ್ಯ ಮನುಷ್ಯರಲ್ಲಿಟ್ಟ ತನ್ನ ಶ್ರದ್ಧೆ ಕಳೆದುಕೊಳ್ಳಲಿಲ್ಲ. ಆದರೆ ಅವನು ರಿಲಿಜಸ್ ಆಗಿದ್ದ.

ನಾನು ಸಾಲ್‌ ಬೆಲ್ಲೋಗೆ ಜೆಪಿ ಹೇಳಿದ್ದನ್ನು ಚರ್ಚಿಸುವ ಹೊತ್ತಿಗಾಗಲೇ ಸಿಮೋನ್ ವೇಲ್ ಎಂಬಾಕೆಯ ಬಗ್ಗೆ ಕುತೂಹಲಿಯಾಗಿದ್ದೆ. ಈ ಆಸಕ್ತಿಯನ್ನು ಮೊದಲು ನನ್ನಲ್ಲಿ ಹುಟ್ಟಿಸಿದವರು ಸಮಾಜವಾದಿ ಚಳವಳಿಯಲ್ಲಿ ಕ್ರಿಯಾಶೀಲರಾಗಿದ್ದ ಲೋಹಿಯಾರಿಗೆ ಸೆಕ್ರಟರಿಯಾಗಿಯೂ ಕೆಲಸ ಮಾಡಿದ್ದ ಕಮಲೇಶ್‌ ಎಂಬುವವರು. ಹಿಂದಿ ಸಾಹಿತ್ಯ ಲೋಕದ ಬಹಳ ಒಳ್ಳೆಯ ಮನಸ್ಸುಗಳು ಇವತ್ತಿಗೂ ಕಮಲೇಶ್‌ ಬರೆದ ಒಂದು ಕವನ ಸಂಕಲನವನ್ನು ಈ ಕಾಲದ ಅತ್ಯುತ್ತಮ ಕೃತಿಗಳಲ್ಲಿ ಒಂದು ಎಂದು ಭಾವಿಸುತ್ತಾರೆ. ಈ ಕಮಲೇಶ್‌ ನನ್ನ ಆತ್ಮೀಯರಲ್ಲಿ ಒಬ್ಬರು. ಜಾರ್ಜ್‌ ಫರ್ನಾಂಡಿಸರ ಬರೋಡಾ ಡೈನಮೈಟ್ ಚಳವಳಿಯಲ್ಲಿ ಇವರೂ ಪಾಲುದಾರರು. ಕಮಲೇಶ್ ತುರ್ತುಪರಿಸ್ಥಿತಿಯ ದಿನಗಳಲ್ಲಿ ಜೈಲುವಾಸ ಮಾಡಿದ್ದರು.

ಈ ಕಮಲೇಶರೇ ಸಿಮೋನ್‌ ವೇಲ್‌ನ ‘ಗೇಟ್ ವೇ ಟು ಗಾಡ್’ ಎನ್ನುವ ಪುಸ್ತಕವನ್ನು ಮೊದಲು ನನಗೆ ಓದಿಸಿದವರು. ಆನಂತರದಲ್ಲಿ ಸಿಮೋನ್‌ ವೇಲ್‌ನ ಸರ್ಚ್‌ ಫಾರ್‌ ರೂಟ್ಸ್ ಮತ್ತು ಆಪ್ರೆಶನ್ ಅಂಡ್ ಲಿಬರ್ಟಿ ಇತ್ಯಾದಿಗಳನ್ನು ಓದಲು ತೊಡಗಿದೆ. ನನಗೆ ಇನ್ನೂ ಸಿಮೋನ್ ವೇಲ್‌ನ ತಾತ್ವಿಕ ಭಾಷೆಯ ಒಳಾರ್ಥಗಳು ದಕ್ಕಿಲ್ಲ. ಆದರೆ ಅವಳ ಯೋಚನೆಗಳ ಸಾನ್ನಿಧ್ಯದಲ್ಲಿ ಸುಮಾರು ಮೂವ್ವತ್ತು ವರ್ಷಗಳನ್ನಾದರೂ ನಾನು ಕಳೆದಿದ್ದೇನೆ. ಸಿಮೋನ್‌ ವೇಲ್ ಈ ಯುಗದ ವಿಭೂತಿ ಶಕ್ತಿಗಳಲ್ಲಿ ಒಬ್ಬರು ಎಂಬುದರಲ್ಲಿ ನನಗೆ ಅನುಮಾನವಿಲ್ಲ. ಅವರನ್ನು ಒಪ್ಪುವುದಾಗಲೀ ಒಪ್ಪದಿರುವುದಾಗಲೀ ಮುಖ್ಯವಲ್ಲ. ಅವರ ಬದುಕು ಮತ್ತು ವಿಚಾರಗಳ ಸಂಪರ್ಕ ಲಭಿಸಿರಬೇಕು.

ಕಮಲೇಶ್‌ ಅಲ್ಲದೆ ಸಿಮೋನ್‌ ಮೇಲ್‌ನಿಂದ ತುಂಬ ಪ್ರಭಾವಿತರಾದ ಇನ್ನೊಬ್ಬ ಹಿಂದಿ ಲೇಖಕರೆಂದರೆ ನಿರ್ಮಲ್ ವರ್ಮ.

ಭಾರತದಂತಹ ಕಡುಬಡವರ ದೇಶದಲ್ಲಿ ಬಡತನವನ್ನು ಬಹ್ಯುತ್ಪನ್ನದ ಮುಖಾಂತರ ನಿವಾರಿಸಿಕೊಳ್ಳುವುದು ಸಾಧ್ಯವೆಂದು ಯೋಚಿಸುವ ಬಂಡವಾಳ ಶಾಹಿಯಾಗಲಿ, ಕಮ್ಯುನಿಸ್ಟರೇ ಆಗಲಿ ಭೌತಿಕ ನೆಲೆಯಲ್ಲಿಯೇ ಬಡತನದ ನಿವಾರಣೆ ಸಾಧ್ಯ ಎಂದು ತಿಳಿಯುವರು. ಆದರೆ ಈಗಿಂದೀಗಲೇ ಕಷ್ಟ ಕಾರ್ಪಣ್ಯದಲ್ಲಿ ಬದುಕಲೇ ಬೇಕಾಗಿ ಬಂದವರು ಉಲ್ಲಸಿತರಾಗಿ ಅರಳಲು ಸಾಧ್ಯ ಎಂದು ಭಾವಿಸುವ ಮನಸ್ಸುಗಳು ನನಗೆ ಮುಖ್ಯರಾಗುತ್ತ ಹೋಗಿದ್ದಾರೆ. ಕಬೀರ್‌, ಬಸವ, ತುಕಾರಾಮ್‌, ರಮಣ, ಪರಮಹಂಸ ಈ ಬಗೆಯವರು.

ಲೋಹಿಯಾ, ಮಾರ್ಕ್ಸ್ ಅಲ್ಲದೆ, ಜಿಡ್ಡು ಕೃಷ್ಣಮೂರ್ತಿಯಂಥವರಿಂದಲೂ ಪ್ರಭಾವಿತರಾದ ನನ್ನಂಥವರಿಗೆ ಸಿಮೋನ್‌ ವೇಲ್‌ ಸಹಜವಾಗಿಯೇ ಆಪ್ತವಾದಳು. ಆದರೆ ಇಲ್ಲಿಯೇ ಒಂದು ಮಾತನ್ನು ಹೇಳಿ ಮುಂದುವರಿಯುತ್ತೇನೆ. ಅದೊಂದು ಮುಖ್ಯವಾದ ಮಾತು. ನನ್ನ ಒಳಗೇ ಬಾರಿಸುವ ಒಂದು ಎಚ್ಚರದ ಗಂಟೆ. ಆಪತ್ತಿನ ಸಮಯದಲ್ಲಿ ಲಿಬರಲ್ ಮನೋಧರ್ಮದವನು ಜಾರಬಲ್ಲಂತೆಯೇ ರಿಲಿಜಿಯಸ್ ಆದ ಒಳ ಪ್ರೇರಣೆಯಿಂದ ಈ ಪ್ರಪಂಚಕ್ಕೆ ತುಡಿಯುವ ಮನಸ್ಸೂ ಜಾರಬಲ್ಲದು. ಜಿಡ್ಡು ಕೃಷ್ಣಮೂರ್ತಿಯವರ ಅಪಾರವಾದ ಒಳನೋಟಗಳು ಫಲದಾಯಕವಾದದ್ದು ಶ್ರೀಮಂತರ ಮಕ್ಕಳು ಮಾತ್ರ ಓದಬಲ್ಲ ಶಾಲೆಗಳಲ್ಲಿ. ರಾಮಕೃಷ್ಣಾಶ್ರಮದ ಶಾಲೆಗಳೂ ಮೀಸಲಾತಿಯಿಂದ ಬಿಡುಗಡೆಯಾಗಲು ತಾವು ಹಿಂದೂಗಳೇ ಅಲ್ಲ ಮತ್ತು ಅಲ್ಪಸಂಖ್ಯಾತರ ಸಂಸ್ಥೆ ಎಂದು ಕೋರ್ಟಿಗೆ ಹೋಗಿದ್ದರು. ಹಾಗೆಯೇ ಸಿಮೋನ್‌ ವೇಲ್‌ನ ಉಜ್ವಲವಾದ ವೈಚಾರಿಕತೆಯನ್ನು ನನಗೆ ಪರಿಚಯಿಸಿದ ನನ್ನ ಹಿಂದಿ ಗೆಳೆಯರೂ ಭಾರತ ತನ್ನ ತೇಜಸ್ಸನ್ನು ಮರಳಿ ಪಡೆಯಲು ಹಿಂದುತ್ವದ ಪುನರುಜ್ಜೀವನ ಅಗತ್ಯವೆಂದು ಬಹಳ ಗಹನವಾಗಿಯೇ ಪ್ರಾಮಾಣಿಕವಾಗಿಯೇ ತಿಳಿದವರಾದರು. ಅಂದರೆ ಸಾಲ್‌ಬೆಲ್ಲೋ ಪ್ಯಾಲಿಸ್ಟೀನಿಗೆ ಮಿಡಿಯಲಾರದೆ ಹೋದಂತೆ ಇವರು ಗುಜರಾತಿನ ಹಿಂಸೆಗೆ ಮಿಡಿಯಲಾರದವರಾದರು. ಮಿಡಿದಾಗಲೂ ಈ ಹಿಂಸೆಗೆ ಕಾರಣರಾದವರ ದುಷ್ಟರ ಹಿಂಸೆಯ ಬಗ್ಗೆಯೂ ಮಾತನಾಡಬೇಕೆಂಬ ಒತ್ತಾಯವುಳ್ಳವರಾದರು. ಅಂದರೆ ಹಿಂಸೆ – ಪ್ರತಿ ಹಿಂಸೆ ವಾದಗ್ರಸ್ತವಾಗಿ ಬಿಟ್ಟ ಮೇಲೆ ಅದೊಂದು ನಮ್ಮನ್ನು ನಿಜವಾಗಿ ಕಾಡುವ ಆತ್ಮೀಯ ವಿಷಯವಾಗಿ ಉಳಿಯುವುದೇ ಇಲ್ಲ.

ಸಮುದಾಯದ ನೆಮ್ಮದಿಗಿಂತಲೂ ಬಹುತ್ಪನ್ನದ ಅಭಿವೃದ್ಧಿಯೇ ಮುಖ್ಯವೆಂದು ಕಾಣುವವರ ಹಾಗೂ ‘ಸೆಕ್ಯುಲರ್‌’ ಮತ್ತು ವೈಜ್ಞಾನಿಕವೆಂದು ತಮ್ಮನ್ನು ಭಾವಿಸಿಕೊಂಡಿರುವವರ ನಡುವೆ ಸಿಮೋನ್‌ ವೇಲ್ ನಾವು ಕಾಣಲು ಬಯಸದ್ದನ್ನು ಕಾಣುವಂತೆ ಮಾಡುತ್ತಾರೆ. ಆಧುನಿಕ ಜೀವನದ ನೀರಸತೆ ಮತ್ತು ಹಿಂಸೆಯ ಮೂಲ ಕಾಣುವಂತೆ ಮಾಡುತ್ತಾರೆ. ಈ ಬಗ್ಗೆ ಮುಂದೆ ಬರೆಯಲಿದ್ದೇನೆ.

೨೧೨೦೦೬

* * *