೧. ಪ್ರಜಾತಂತ್ರದ ಮುಖ್ಯ ಲಕ್ಷಣಗಳು ಯಾವುವು? ಬಹುಮತ ಪಡೆದವರು ಆಳುವುದು ಮತ್ತು ಬಹುಮತ ಪಡೆಯಲಾರದ ಭಿನ್ನಮತೀಯರು ತಮ್ಮ ನಿಲುವು ಸತ್ಯವೆಂದು ಅನ್ನಿಸಿದಾಗ ಬಹುಮತದ ಆಡಳಿತಕ್ಕೆ ವಿರೋಧವಾಗಿ ನಿಲ್ಲುವುದು ಸಾಧ್ಯವಾಗುವುದು. ಹೀಗೆ ಬಹುಮತಕ್ಕೆ ವಿರುದ್ಧವಾಗಿ ನಿಂತವನಿಗೆ ತನ್ನ ಅಭಿಪ್ರಾಯಕ್ಕೆ ಉಳಿದವರನ್ನು ಒಲಿಸಿಕೊಳ್ಳಬಲ್ಲೆ ಎಂಬ ನಂಬಿಕೆ ಇರುವುದು ಪ್ರಜಾತಂತ್ರದಲ್ಲಿ ಬಹಳ ಮುಖ್ಯ. ಅಂದರೆ ತಾನು ಆಡುವ ಭಾಷೆಗೆ ಹೀಗೆ ಎದುರಾಳಿಯನ್ನು ಒಲಿಸಿಕೊಳ್ಳಬಲ್ಲ ಸಂವಾದವಾಗುವ ಶಕ್ತಿ ಇದೆ ಎಂದು ತಿಳಿದಿರಬೇಕಾಗುತ್ತದೆ.

೨ ಸದ್ಯದ ಸತ್ಯಗಳು ಎಂದರೆ ವ್ಯವಹಾರದ ಇಂದಿನ ಸತ್ಯಗಳು; ಶಾಶ್ವತ ಸತ್ಯಗಳು ಎಂದರೆ ಯಾವತ್ತೂ ಬದಲಾಗದ ಸತ್ಯಗಳು ಎಂದು ತಿಳಿದು ಮಾಡುವ ರಾಜಕಾರಣ ಮಾತಿನಲ್ಲಿ ಉದಾತ್ತವೂ ವರ್ತನೆಯಲ್ಲಿ ವಂಚಕವೂ ಆಗಿರುತ್ತದೆ. ಇದಕ್ಕೆ ಬದಲಾಗಿ ಶಾಶ್ವತ ಎಂದರೆ ಸತತವಾಗಿ ನಮಗೆ ಎದುರಾಗುತ್ತಲೇ ಹೋಗುವ, ಬೆರಗುಗೊಳಿಸುವ ಮತ್ತು ಬೆಚ್ಚಿಸುವ ಸದ್ಯಗಳೇ ಎಂದು ತಿಳಿದು ಮಾಡುವ ರಾಜಕಾರಣದಲ್ಲಿ ಕಾಲಕ್ಕೆ ಸದಾ ಸ್ಪಂದಿಸುವ ನೈತಿಕೆ, ಹಲವರಿಗೆ ಅಪ್ರಿಯವಾಗಿ ನಡೆದುಕೊಳ್ಳುವ ವಿನಯದ ಎದೆಗಾರಿಕೆ ಇರುತ್ತದೆ. ನಿರಂತರ ಕ್ಷಣಿಕಗಳಾದ ಕಾಲಕ್ಕೆ ಸ್ಪಂದಿಸುವ ಮನಸ್ಸಿಗೆ ಪ್ರೀತಿಯೂ ಸಾಧ್ಯ ವೈರಾಗ್ಯವೂ ಸಾಧ್ಯ ಅಥವಾ ಈ ಎರಡು ಬೇರೆ ಬೇರೆಯಲ್ಲ.

೩. ಈಗ ಈ ಸದ್ಯದಲ್ಲಿ ಗಳಿಸಿಕೊಂಡಷ್ಟು ಮಾತ್ರ ಸತ್ಯ ಎಂಬ ಭ್ರಮೆಯಲ್ಲಿ ನಾವೆಲ್ಲರೂ ಬದುಕುವುದು. ಹಾಗೆಯೇ ಪೇಚಾಡುವುದು. ಈ ಪರದಾಟ ಸ್ಥಾನಕ್ಕಾಗಿ; ‘ಆಫೀಸಿ’ಗಾಗಿ, ಸದ್ಯಗಳು ಸದಾ ಬದಲಾಗುವ ಸತ್ಯಗಳು ಎಂದು ತಿಳಿದಾಗ ‘ಪವರ್‌’ – ಶಕ್ತಿಯ ಪ್ರಾಮುಖ್ಯತೆ ತಿಳಿಯುತ್ತದೆ. ಇದು ತಿಳಿದಾಗ ಸತತ ಎದುರಾಗುವ ಸದ್ಯಗಳನ್ನು ಮಾನವ ಹಿತಕ್ಕಾಗಿ ಬದಲಿಸಿಕೊಳ್ಳುವುದು, ಎಂದರೆ ಸತತ ಸದ್ಯಗಳ ಚರಿತ್ರೆಯಲ್ಲಿ ಪಾಲುದಾರರೂ ಆಗುವುದು ಸಾಧ್ಯವೆಂಬುದು ಅರಿವಾಗುತ್ತದೆ. ಸದ್ಯಗಳು ನಿರಂತರ ಮತ್ತು ಸತತ. ಇವುಗಳ ಮಧ್ಯೆ ಮನುಷ್ಯನಿಗೆ ಆಯ್ಕೆಯೂ ಸಾಧ್ಯವಾಗುವುದರಿಂದ ಕಾಲವನ್ನು ಗೆಲ್ಲುವ ಛಲ ಮೂಡುತ್ತದೆ. ಕೆಲವು ಪಾರಮಾರ್ಥವಾದಿಗಳಲ್ಲಿ ಕಾಣಿಸುವ ಸದ್ಯದ ಲಾಭಕ್ಕೆ ಮಾತ್ರ ಎದುರಾಗಿ ಶಾಶ್ವತದ ನೆವದಲ್ಲಿ ಜಾರಿಕೊಳ್ಳುವ ಆತ್ಮವಂಚನೆ ಇಂಥವರಲ್ಲಿ ಇರುವುದಿಲ್ಲ ಅಥವಾ ಸದ್ಯ ತರುವ ಸ್ಥಾನಗಳಿಗೆ ಮಾತ್ರ ಜೋತುಬೀಳುವುದೂ ಇರುವುದಿಲ್ಲ.

೩. ಭಾರತೀಯ ಪ್ರಜಾತಂತ್ರದ ಸದ್ಯವನ್ನು ನೋಡೋಣ. ಇದು ಭ್ರಷ್ಟವಾಗಿದೆ ಎಂದು ಗೊಣಗುವುದೇ ಒಂದು ಬಗೆಯ ಲಂಪಟ ಸುಖ ತಂದುಕೊಡುತ್ತಿದೆ. ಮನುಷ್ಯ ಸಹಜವಾಗಿ ಭ್ರಷ್ಟ ಎನ್ನುವುದ ಜಾರಿಕೆಯ ಉತ್ತರ. ಚುನಾವಣೆಗಳು ದುಬಾರಿಯಾಗುತ್ತ ಹೋಗುತ್ತಿವೆ; ಕೋಟಿಗಟ್ಟಲೆ ಖರ್ಚು ಮಾಡದವನು ಗೆಲ್ಲುವಂತಿಲ್ಲ ಎಂದು ಅನ್ನುತ್ತೇವೆ. ಇದು ನಿಜ. ಆದರೆ ಪರಿಹಾರವೇನೆಂದು ಯಾರೂ ಆಳವಾಗಿ ಚಿಂತಿಸುವುದಿಲ್ಲ.

ಮೊದಲನೆಯದಾಗಿ ಎಲ್ಲರೂ ವೋಟು ಮಾಡಲೇಬೇಕು; ಈ ಕರ್ತವ್ಯದಿಂದ ವಿಮುಖನಾದರೆ ಏನಾದರೂ ಒಂದು ಸವಲತ್ತನ್ನು ಕಳೆದುಕೊಳ್ಳಬೇಕು ಎಂದಿದ್ದರೆ ಮತಗಟ್ಟೆಗೆ ಆದಷ್ಟು ಜನ ಬರುವಂತೆ ಹುರಿದುಂಬಿಸುವ ಪ್ರಚಾರಕ್ಕಾಗಿ ಆಗುವ ಅಪಾರ ಖರ್ಚು ಕಡಿಮೆಯಾಗುತ್ತದೆ. ಮತಗಟ್ಟೆಗೆ ಬಂದು ನಾನು ಯಾರಿಗೂ ಮತ ಹಾಕುವುದಿಲ್ಲ ಎನ್ನುವ ಸ್ವಾತಂತ್ರ್ಯವೂ ಇರಬೇಕು –  ಈ ನಿಯಮದಲ್ಲಿ.

ಎರಡನೆಯದಾಗಿ ಎಲ್ಲ ಅಭ್ಯರ್ಥಿಗೂ ಒಟ್ಟಾಗಿ ಒಂದೇ ವೇದಿಕೆಯ ಮೇಲೆ ಕೂತು ತಮ್ಮ ವಿಚಾರಗಳನ್ನು ಚರ್ಚೆಗೆ ಒಡ್ಡಬೇಕು. ಈ ಸಭೆಗಳು ಸರ್ಕಾರದ ಖರ್ಚಿನಲ್ಲೇ ನಡೆಯಬೇಕು.

೪. ಇದಾದ ನಂತರವೂ ಭ್ರಷ್ಟಾಚಾರಿಗಳು ಅಧಿಕಾರಕ್ಕೆ ಬಂದರೆ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಸಾಧ್ಯವಿರಬೇಕು. Right to recall ಎನ್ನುತ್ತಾರೆ ಇದನ್ನು.

೫. ಸತತವಾಗಿ ಸದ್ಯಗಳಲ್ಲಿ ರೂಪಿತವಾಗುತ್ತ ಹೋಗುವುದು ಮನುಷ್ಯ ಸ್ವಭಾವ ಎಂದು ತಿಳಿದಾಗ ಈ ಬದಲಾವಣೆಗಳಿಗೆ ಅಗತ್ಯವಾದ ಸದ್ಯದ ಚಾಲೆಂಜುಗಳು ಯಾವುವು ಎಂಬುದು ತಿಳಿಯುತ್ತದೆ. ನಾವೆಲ್ಲರೂ ಬದುಕುವುದು ಸದ್ಯದಲ್ಲಿ ತಾನೆ? ದೈವ ಸಾಕ್ಷಾತ್ಕಾರವೆಂಬುದು ನಿಜವಿದ್ದರೆ ಅದೂ ಆಗುವುದು ಯಾವುದೋ ಒಂದು ಸದ್ಯವಾದ ಕ್ಷಣದಲ್ಲಿ ತಾನೆ? ಯಾವುದೋ ಸದ್ಯದಲ್ಲಿ ಹುಟ್ಟಿ ಯಾವುದೋ ಸದ್ಯದಲ್ಲಿ ಸಾಯುವ ಈ ಮಾನವ ಜನ್ಮ ಪ್ರೀತಿ ಮತ್ತು ವೈರಾಗ್ಯಗಳ ಮಿಲನದಲ್ಲಿ ಜೀವಂತವಾಗುವುದು ಹೀಗೆ ಎನ್ನಬಹುದು.

೨೦೦೬

* * *