ಅನಂತಮೂರ್ತಿಯವರ ಋಜುವಾತ ಅಂಕಣ ಒಂದು ವರ್ಷಕ್ಕೂ ಹೆಚ್ಚು ಕಾಲು ಉದಯವಾಣಿ ಸಾಪ್ತಾಹಿಕ ಸಂಪದ ಪುರವಣಿಯಲ್ಲಿ ಪ್ರಕಟವಾಯಿತು; ಪ್ರತಿ ಆದಿತ್ಯವಾರವೂ, ಅವರ ಅಂಕಣಕ್ಕಾಗಿಯೇ ಪತ್ರಿಕೆಯನ್ನು ಹುಡುಕಿಕೊಂಡು ಹೋಗಿ ಓದುವಷ್ಟು ವೈಚಾರಿಕ ವಾಗ್ವಾದ ತೀವ್ರತೆಯನ್ನು ಪ್ರಸ್ತುತ ಅಂಕಣ ರೂಢಿಸಿತ್ತು. ಕೆಟ್ಟ ಅಂಕಣ ಬರಹಗಳು ಬರಹಗಾರನ ಪ್ರಜ್ಞೆಯನ್ನು ಹಸಿ ಹಸಿಯಾಗಿ ಓದುಗರ ಮುಂದಿಡುತ್ತವೆ; ಆ ರೀತಿ ಮಾಡಿದಾಗ, ಒಂದೋ ಅದರ ನೈತಿಕ ಒತ್ತಾಯಕ್ಕೆ ಓದುಗರು ಬೆದರಿಬಿಡುತ್ತಾರೆ, ಇಲ್ಲವೇ ಹೇವರಿಕೆಯಿಂದ ಓದುವುದನ್ನೇ ನಿಲ್ಲಿಸಿಬಿಡುತ್ತಾರೆ. ಒಳ್ಳೆಯ ಅಂಕಣ ಬರಹಗಳಿಗೆ ಆಟದ ಗುಣವಿರುತ್ತದೆ; ಬರಹಗಾರ ಆಟದ ನಿಯಮಗಳನ್ನು ರೂಪಿಸಿದರೂ, ಇದು ತಾನೊಬ್ಬನೇ ಆಡುವ ಆಟವಲ್ಲ ಎಂದೂ ಓದುಗರನ್ನು ಹೆಚ್ಚು ಸಂಖ್ಯೆಯಲ್ಲಿ ಅಂಕಣಕ್ಕೆ ಸೆಳೆದಷ್ಟೂ ಆಟ ರೋಚಕವಾಗಿರುತ್ತದೆ ಎಂದೂ ಬಲ್ಲವನಾಗಿರುತ್ತಾನೆ. ಅನಂತಮೂರ್ತಿಯವರ ಪ್ರಸ್ತುತ ಅಂಕಣದ ಮುಕ್ಕಾಲುವಾಸಿ ಬರಹಗಳಿಗೆ, ವೈಚಾರಿಕವಾಗಿ ತನ್ನಂತಲ್ಲದ ಓದುಗರನ್ನು ಅಂಕಣದಿಂದ ಹೊರದೂಡದ, ಆದರೆ ಆಟದ ಕೆಚ್ಚನ್ನು ಮರೆಯದೇ ಅಂಕಣ ಸುತ್ತಿಸುವ ‘ಫೇರ್ ಪ್ಲೆ’ ಸತ್ಯ ಇರುವುದರಿಂದಲೇ, ಅವರ ಜೊತೆ ವಾಗ್ವಾದ ಸಾಧ್ಯವಾಗಿದೆ.

ಈಗ, ಋಜುವಾತು ಅಂಕಣದ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿವೆ. ಆಯಾ ವಾರ ಪ್ರಕಟವಾದ ಬರಹಗಳಿಗೆ, ನಾನು ಕಳುಹಿಸಿದ ಪ್ರತಿಕ್ರಿಯೆಗಳು ಪ್ರಸ್ತುತ ಪುಸ್ತಕದಲ್ಲಿ ಪ್ರಕಟವಾಗಬೇಕೆಂದು ಅನಂತಮೂರ್ತಿಯವರು ಇಚ್ಛಿಸುತ್ತಿದ್ದಾರೆ. ಮೊದಲನೆಯದಾಗಿ, ಪ್ರತಕ್ರಿಯೆಗಳನ್ನು ನಾನು ನೇರವಾಗಿ ಅನಂತಮೂರ್ತಿಯವರಿಗೇ ಕಳಿಸುತ್ತಿದ್ದುದ್ದರಿಂದ, ವಾಗ್ವಾದ ಪ್ರಥಮ ಮತ್ತು ದ್ವಿತೀಯ ಪುರುಷದಲ್ಲಿಯೇ ಇರುತ್ತಿತ್ತು; ಒಂದು ಪ್ರತಿಕ್ರಿಯೆಯನ್ನು (ವಾಸ್ತವದ ಋಜುತ್ವವನ್ನು ಕಾಣುವ ರೂಪಕದ ಹಂಬಲ) ಉದಯವಾಣಿಗೆ ಕಳುಹಿಸಿದ್ದರಿಂದ ಮತ್ತು ‘ಉತ್ತರ ಕೊರಿಯ ಜೊತೆ ರಾಗಿ ಸಂಬಂಧಕ್ಕೆ’ನೀಡಿರುವ ಪ್ರತಿಕ್ರಿಯೆ ಅನಂತಮೂರ್ತಿಯವರ ಇತ್ತೀಚಿನ ಪ್ರಬಂಧ ಸಂಕಲನ ವಾಲ್ಮೀಕಿಯ ನೆವದಲ್ಲಿ (ಅಭಿನವ ಪ್ರಕಾಶನ, ಬೆಂಗಳೂರು, ೨೦೦೭) ನ ಬರಹಗಳಿಗೆ ವ್ಯಕ್ತಪಡಿಸಿದ ಪ್ರತಿಕ್ರಿಯೆಯ ಭಾಗವಾಗಿ ಬಂದ್ದರಿಂದ, ತೃತೀಯ ಪುರುಷದಲ್ಲಿವೆ; ಇಷ್ಟನ್ನು ಬಿಟ್ಟರೆ, ನನ್ನ ಪ್ರತಿಕ್ರಿಯೆಗಳಲ್ಲಿ ಖಾಸಗಿ ಎನ್ನಿಸುವ ಗುಟ್ಟಿನ ಮಾತುಗಳೇನೂ ಇಲ್ಲ. ಎರಡನೆಯದಾಗಿ, ಅನಂತಮೂರ್ತಿಯವರಿಗೆ ನೇರವಾಗಿ ಕಳುಹಿಸಿದ ಪ್ರತಿಕ್ರಿಯೆಗಳಲ್ಲಿ, ಅವರೇ ಒದಗಿಸಿಕೊಟ್ಟಿರುವ ಆತ್ಮೀಯತೆ ಹಾಗು ಜರೂರಿನ ಗುಣಗಳಿವೆ. ಹೀಗಾಗಿ, ಪುಸ್ತಕ ರೂಪದ್ಲಲಿ ಪ್ರಕಟವಾಗುವಾಗ ಅವುಗಳ ಶೈಲಿಯನ್ನು ಬದಲಾಯಿಸುವ ಅವಶ್ಯಕತೆ ಇಲ್ಲ, ಅದು ಸಮಂಜಸವೂ ಅಲ್ಲ ಎಂದೇ ನನಗನ್ನಿಸುತ್ತಿದೆ. ತಮ್ಮ ವಿಚಾರಗಳ ಜೊತೆ ನನ್ನ ತಕರಾರುಗಳನ್ನೂ ಪ್ರಕಟಿಸುತ್ತಿರುವುದು, ಅನಂತಮೂರ್ತಿಯವರ ವೈಚಾರಿಕ ವೈಶಾಲ್ಯ ಹಾಗು ಹಿರಿಮೆಗಳನ್ನು ತೋರುತ್ತದೆ; ಈ ಪ್ರೀತಿಗೆ ನಾನುಋಣಿ.

ಭಾರತಪಾಕಿಸ್ತಾಣ ಸಂಬಂಧ

ಋಜುವಾತು ಅಂಕಣದಲ್ಲಿ ಅನಂತಮೂರ್ತಿ ಬರೆದಿರುವ ಕಾಲ ದೇಶ ಮೀರಿದ ಅಪೂರ್ವ ಘಟನೆ ತುಂಬ ಚೆನ್ನಾಗಿದೆ. ಈ ಮೂರು ಅಂಕಣಮಾಲೆಯಲ್ಲಿ (ಭಾರತಪಾಕಿಸ್ತಾನ: ಚರಿತ್ರೆಯನ್ನು ಮೀರುವ ಕನಸು, ದೇಶ ವಿಭಜನೆ: ಇನ್ನೊಂದು ಕಾರಣದ ಕಥನ, ಕಾಲ ದೇಶ ಮೀರಿದ ಒಂದು ಅಪೂರ್ವ ಘಟನೆ) ಅನಂತಮೂರ್ತಿ ಕಥನ ಶೈಲಿಯಲ್ಲಿ ತಮ್ಮ ವಿಚಾರಗಳನ್ನು ನಿರೂಪಿಸುತ್ತಿದ್ದಾರೆ. ಕಥನಶೈಲಿಯ ನಿರೂಪಣೆ ಆಪ್ತವಾಗಿರುತ್ತದೆ, ಕತೆಗಾಗಿಯೇ ಓದುವ ಕುತೂಲಹವನ್ನು ಓದುವವರಲ್ಲಿ (ಕೇಳುವವರಲ್ಲಿ) ಮೂಡಿಸುತ್ತದೆ. ಅನಂತಮೂರ್ತಿಯವರ ಬರಹದಲ್ಲಿ ಈ ಗುಣಗಳಂತೂ ಇದ್ದೇ ಇವೆ – ಅನಂತಮೂರ್ತಿ ನಮ್ಮ ಅಗ್ರಪಂಕ್ತಿಯ ಕತೆಗಾರರಾಗಿರುವುದರಿಂದ ಇದು ವಿಶೇಷವಲ್ಲ. ಆದರೆ ವೈಚಾರಿಕ ನಿಲುವುಗಳನ್ನು ಕಥನಶೈಲಿಯಲ್ಲಿ ನಿರೂಪಿಸುವಾಗ, ಅದರಲ್ಲೂ ಸ್ವಾನುಭವದ ಕಥನವಾಗಿ ನಿರೂಪಿಸುವಾಗ, ಕೆಲವು ಅಪಾಯಗಳು ಇರುತ್ತವೆ. ಸಿದ್ಧವಾದ ಸೈಧ್ಧಾಂತಿಕ ದೃಷ್ಟಿಕೋನದಿಂದ ವಿಚಾರಗಳನ್ನು ಪ್ರಕಟಿಸುವಾಗ ಕಣ್ನೋಟ ಕಿರಿದಾಗುವ ಹಾಗೆಯೇ ಉದ್ದೇಶಿತ ನಿಲುವನ್ನು ಕಥಾಮಾರ್ಗದಲ್ಲಿ ನಿರೂಪಿಸುವಾಗಲೂ ಆಗುತ್ತದೆ. ಇಲ್ಲಿ, ನಿರೂಪಕನ ವಿಚಾರಗಳ ಸಾಚಾತನವನ್ನು ಸಾಬೀತು ಮಾಡುವುದು ಮಾತ್ರ ಕತೆಯ ಕೆಲಸ. ಇದು ಒಂದು ಬಗೆಯ ಅಪಾಯ. ಮತ್ತೊಂದು ಇದಕ್ಕೆ ತದ್ವಿರುದ್ಧವಾದ್ದು; ನಿರೂಪಕ, ತನ್ನ ಕತೆಯ ಮೋಹದಲ್ಲಿ ತಾನೇ ಸಿಲುಕಿ, ಕತೆ ಹೇಳುವುದೇ ಒಂದು ವಿಲಾಸವಾಗಿ, ಕೊನೆಗೆ ತಾನು ಹೇಳಹೊರಟ ವಿಚಾರದ ಸ್ಪಷ್ಟತೆಯನ್ನೇ ಕಳೆದುಕೊಂಡು ಬಿಡುವುದು. ಹಾಗಿದ್ದರೆ ಯಾವ ಸುಖಕ್ಕಾಗಿ ಕಥನ ಮಾರ್ಗ ಹಿಡಿಯಬೇಕು?

ವೈಚಾರಿಕ ನಿಲುವುಗಳನ್ನು ಕಥನವಾಗಿಸುವುದರಲ್ಲಿ ಎರಡು ಉದ್ದೇಶವಿರಬೇಕು:

೧. ನನ್ನ ಅಭಿಪ್ರಾಯಗಳ ಬಗ್ಗೆ ನನಗೆ ಸ್ಪಷ್ಟತೆ ಇದೆ. ಆದರೆ ಅದೇ ಪೂರ್ಣ ನಿಜವಿರಲಿಕ್ಕಿಲ್ಲ. ನಿರ್ದಿಷ್ಟ ಘಟನಾವಳಿಯಲ್ಲಿ ನನ್ನ ಅಭಿಪ್ರಾಯಗಳ ಸಹಿತ ನಾನು ಒಂದು ಪಾತ್ರವಾಗಿ ಲೀನವಾಗಿ ಪುರುಷ ಪರೀಕ್ಷೆಗೆ ಒಡ್ಡಿಕೊಳ್ಳುವುದು.

೨. ಘಟನಾವಳಿಗೆ ಸಿಕ್ಕಿದ್ದ ನನ್ನ ಅಭಿಪ್ರಾಯಗಳ ಗತಿ ಎಂತಾದರೂ ಒಟ್ಟೂ ನಿರೂಪಣೆಯಿಂದ ವಾಸ್ತವದ ಋಜುತ್ವವನ್ನುಕಾಣುವ ಒಂದು ರೂಪಕ ಕಟ್ಟಿಕೊಂಡೀತು ಎಂಬ ಹಂಬಲ,

ಈ ಉದ್ದೇಶಗಳು ಈಡೇರದಿದ್ದರೆ ಕಥನಗಳು ಪಂಡಿತರ ಅಹಂನ ಕಾಲಕ್ಷೇಪವೋ, ಮುದ ನೀಡುವ ವಿಲಾಸವೋ ಆಗಿ ಉಳಿಯುತ್ತವೆ. ಈ ಅಂಕಣಗಳು ಪರಿಶೋಧನೆಯಿಂದ ಹುಟ್ಟಿಕೊಂಡ ರೂಪಕಗಳಾಗಿರುವುದರಿಂದಲೇ ಅಪರೂಪದ ಕಥನಗಳಾಗಿವೆ.

ಅನಂತಮೂರ್ತಿಯವರ ಈ ಅಂಕಣಗಳು ದಕ್ಷಿಣ ಏಷಿಯಾದ ಹಿಂದು – ಮುಸ್ಲಿಮರ ಸಂಬಂಧಗಳನ್ನು ಕುರಿತಾಗಿದೆ. ಈ ವಿಷಯದ ಬಗ್ಗೆ ಈಗಾಗಲೇ ಸ್ಥಾಪಿತವಾಗಿರುವ ಕೆಲವು ನಿಲುವುಗಳಿವೆ. ಒಂದನೆಯದು: ಮುಸ್ಲಿಮರದ್ದು ಧಾರ್ಮಿಕ ಮೂಲಭೂತವಾದವನ್ನು ನೆಚ್ಚಿಕೊಂಡಿರುವ ಸಮುದಾಯ. ಹಿಂದೂ ಸಮುದಾಯವನ್ನು ಪೂರ್ಣ ನಿರ್ನಾಮ ಮಾಡುವುದೇ ಅವರ ಗುರಿ. ಈ ಗುರಿ ಸಾಧಿಸಲು ಅವರು ಯಾವುದಕ್ಕೂ ಹೇಸುವುದಿಲ್ಲ. ಹೀಗಾಗಿ ಅವರು ಲಾಗಾಯ್ತಿನಿಂದ ನಿಮ್ಮ ಜೊತೆ ಬದುಕಿಕೊಂಡಿರುವ ನಿಮ್ಮ ಊರಿನವರಾದರೂ ಸರಿ, ನಂಬಿಕೆಗೆ ಯೋಗ್ಯರಲ್ಲದ ಶತ್ರುಗಳು ಎಂದು ತಿಳಿದು, ಅವರನ್ನು ಅಂಕೆಯಲ್ಲಿ ಇಡಲಿಕ್ಕೆ ಎಂಥಾ ದುಷ್ಟ ಮಾರ್ಗಗಳನ್ನಾದರೂ ಅನುಸರಿಸುವುದುತಪ್ಪಲ್ಲ. ಇದು ಭಾರತದಲ್ಲಿ ವ್ಯಾಪಕವಾಗಿ ತಳ ಊರಿರುವ ಹಿಂದುತ್ವವಾದಿ ನಿಲುವು.

ಎರಡನೆಯದು: ನಮ್ಮ ಊರಿನ ಮುಸಲ್ಮಾನರು ನಮ್ಮ ಜೊತೆ ಚೆನ್ನಾಗಿದ್ದಾರೆ, ಆದರೆ ಇತ್ತೀಚೆಗಿನ ಪೀಳಿಗೆಯಲ್ಲಿ ಬಹುಸಂಖ್ಯಾತ ಹಿಂದೂಗಳ ಜೊತೆ ಹೊಂದಿಕೊಂಡು ಹೋಗುವ ಗುಣ ಕಾಣುತ್ತಿಲ್ಲ. ಬಹುಸಂಖ್ಯಾತರ ನಂಬಿಕೆಗಳಿಗೆ ಗೌರವ ಕೊಟ್ಟುಕೊಂಡು ಬದುಕಿದರೆ ಯಾವ ತಕರಾರೂ ಇಲ್ಲ. ಇದನ್ನು ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು. ಇದು ಅತ್ತ ಇತ್ತ ತೂಗುತ್ತಿರುವ ಸಾಮಾನ್ಯ ಜನರ ನಿಲುವು.

ಮೂರನೆಯದು: ಕೊಡು ಕೊಳ್ಳುವಿಕೆಯ ಕೆಲವು ಪ್ರಸಂಗಗಳು, ಎರಡು ಧರ್ಮಗಳ ನಂಬಿಕೆಯಲ್ಲಿರುವ ಸಮಾನ ಗುಣಗಳನ್ನು ತಾಳೆ ಹಾಕಿಕೊಂಡು ಕಟ್ಟಿಕೊಂಡಿರುವ ‘ಹಿಂದೂ ಮುಸ್ಲಿಂ ಭಾಯಿ ಭಾಯಿ’ ಎಂಬ ರಮ್ಯವಾದ ನಿಲುವು.

ನಾಲ್ಕನೆಯದು: ಭಾರತದ ಪ್ರಜಾಪ್ರಭುತ್ವದ ಸಂವಿಧಾನಿಕ ನಿಲುವು; ಹಿಂದುಗಳು – ಮುಸಲ್ಮಾನರು ಭಾರತದ ಸಮಾನ ಪ್ರಜೆಗಳು. ಸಂವಿಧಾನಬದ್ಧ ಹಕ್ಕು, ಸ್ವಾತಂತ್ರ್ಯಗಳು, ಕಾನೂನು ನಡಾವಳಿಗಳು ಇಬ್ಬರಿಗೂ ಸಮ ಸಮ. ಈ ಸಾಂವಿಧಾನಿಕ ಚೌಕಟ್ಟಿನಲ್ಲಿ ಬದುಕುವುದು ಎಲ್ಲರ ಕರ್ತವ್ಯ.

ಅನಂತಮೂರ್ತಿಯವರು ‘ಹಿಂದುತ್ವ ವಾದ’ಕ್ಕೆ ಸ್ಪಷ್ಟವಾದ ವಿರೊಧ ತೋರುತ್ತಿರುವವರು; ಉಳಿದ ಮೂರು ನಿಲುವುಗಳಲ್ಲಿ ಯಾವುದಾದರೂ ಒಂದನ್ನು ನೆಚ್ಚಿಕೊಂಡವರಲ್ಲ; ಆದರೆ ಸಭ್ಯ ಸಾಮಾಜಿಕ ಜೀವನಕ್ಕೆ ಯಾವುದು ಮುಖ್ಯವೋ ಅಂತಹ ಅಂಶಗಳನ್ನು ಈ ಮೂರು ನೆಲೆಗಳಿಂದ ಸ್ವೀಕರಿಸಲು ತಯಾರಿರುವವರು. ಹಾಗೆಂದು ಈ ಮೂರು ನೆಲೆಗಳಿಂದ ಬೇಕಾದ್ದನ್ನು ಆಯ್ದು, ‘ಹಿಂದು – ಮುಸ್ಲಿಮ್ ಸಂಬಂಧ’ದ ಒಂದು ಆಕೃತಿಯನ್ನು ಸುಲಭದಲ್ಲಿ ಸಂಶ್ಲೇಷಣೆ ಮಾಡಿಕೊಳ್ಳಬಹುದು ಎನ್ನುವ ಭೋಳೆಯಾದ ನಿಲುವನ್ನು ಅವರು ಒಪ್ಪುವುದಿಲ್ಲ. ಈ ಕಾರಣದಿಂದಾಗಿಯೇ ಅವರು ಒಪ್ಪುವುದಿಲ್ಲ. ಈ ಕಾರಣದಿಂದಾಗಿಯೇ ಅವರು ತಮ್ಮ ಎಲ್ಲವೈಚಾರಿಕ ನಂಬಿಕೆಗಳನ್ನು ಪರೀಕ್ಷೆಗೆ ಒಳಪಡಿಸುವ ಕಥನಗಳನ್ನುಹೇಳುತ್ತಿದ್ದಾರೆ. ಈ ಕಥನಗಳು ಮೂರು ಮುಖ್ಯ ಸಂಗತಿಗಳನ್ನು ಹೇಳುತ್ತವೆ:

೧. ಒಂದು ಸಮಾಜದಲ್ಲಿ ಬದುಕುವ ಸಮುದಾಯಗಳ ನಡುವಿನ ನಂಟು ರಮ್ಯವಾದುದ್ದಲ್ಲ; ನಂಬಿಕೆ, ಜೀವನಕ್ರಮಗಳ ಭಿನ್ನತೆಯಿಂದ ಸಮುದಾಯಗಳ ನಡುವೆ ಬಿರುಕುಗಳಿರುವುದು ಸಹಜ. ಈ ಬಿರುಕುಗಳು – ಅವುಗಳ ಉದ್ಭವಕ್ಕೆ ಕಾರಣಗಳು ಏನೇ ಇದ್ದರೂ – ನಮ್ಮ ಜೊತೆ ಇಂದು ಇವೆ, ಮುಂದೆಯೂ ಮುಂದುವರೆದುಕೊಂಡು ಹೋಗಬಹುದು ಎನ್ನುವುದನ್ನು ನಮ್ಮ ಸಾಮಾಜಿಕ ಅಸ್ತಿತ್ವದ ಭಾಗವಾಗಿ ನಾವು ಒಪ್ಪಿಕೊಳ್ಳಬೇಕು.

೨. ಸಮುದಾಯಗಳ ನಡುವಿನ ಬಿರುಕನ್ನು ರಾವುಗನ್ನಡಿ ಇಟ್ಟು ಉತ್ಪ್ರೇಕ್ಷಿಸಿ, ಅಧಿಕಾರ ಲಾಭಕ್ಕಾಗಿ ಹಲವು ಬಗೆಯ ಹಿಂಸೆಗಳನ್ನು ಉದ್ರೇಕಿಸುತ್ತಿರುವ, ಹಿಂದುತ್ವವೂ ಸೇರಿದ ಹಾಗೆ, ಆಧುನಿಕ ರಾಜಕೀಯದ ವರಸೆಗಳನ್ನು ನೇರವಾಗಿ ಮುಖಾಮುಖಿಯಾಗಬೇಕು.

೩. ಹಿಂದೂಗಳ ಹಾಗೆ ಮುಸ್ಲಿಮರೂ ಸುಖ – ಸಂಕಷ್ಟಗಳಿಗೆ ತುತ್ತಾಗುವ ದೇಹ, ನೆಮ್ಮದಿ – ನಿರಾಶೆಗಳನ್ನು ಉದ್ದೀಪಿಸುವ ಉದ್ಯೋಗ, ಕಷ್ಟ – ಕಾರ್ಪಣ್ಯಗಳಿಗೆ ತುತ್ತಾಗುವ ಸಾಂಸಾರಿಕ ಬದುಕು ಮುಂತಾದುವುಗಳನ್ನೆಲ್ಲಾ ನೆಚ್ಚಿಕೊಂಡಿರುವ ನಿತ್ಯಜೀವಿಗಳು. ಇದು ನಮಗೆ ಅರ್ಥವಾದರೆ, ನಮ್ಮ ನಡುವಿನ ಬಿರುಕಗಳನ್ನು ಅರ್ಥೈಸಿಕೊಳ್ಳಲಿಕ್ಕೂ ಅವುಗಳನ್ನು ಮೀರಿ ಬದುಕುವ ದಾರಿಗಳನ್ನುಕಂಡುಕೊಳ್ಳಲಿಕ್ಕೂ ನಮ್ಮ ನಿತ್ಯದ ಬದುಕನ್ನು ಒರೆಗಲ್ಲು ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಇದು ನಾವು ಅಗತ್ಯವಾಗಿ ಮನಗಂಡು, ಹಂಬಲಿಸಿ, ರೂಢಿಸಿಕೊಳ್ಳಲು ಉತ್ಸುಕವಾಗಬೇಕಾದ ರಾಜಕೀಯ.

ಹಿಂದುತ್ವದ ಭೀಭತ್ಸ ಹಿಂಸೆ ಹಾಗೂ ಅದಕ್ಕೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಳ್ಳಬಹುದಾದ ಹಲವು ಬಗೆಯ ಪ್ರತಿಹಿಂಸೆಗಳಿಂದ ಆತಂಕಿತರಾಗಿರುವ ನನ್ನಂತಹವರಿಗಂತೂ ಈ ಕಥನಗಳು ಅಪೂರ್ವವಾದವು. ಇದಕ್ಕಿಂತಲೂ ಹೆಚ್ಚಾಗಿ, ಹಿಂದುತ್ವದ ರಾಜಕೀಯವನ್ನು ಬೆಂಬಲಿಸುವವರನ್ನೂ ಒಂದಿಷ್ಟು ಯೋಚಿಸುವಂತೆ, ತಮ್ಮ ಒಳಗೆ ನೋಡಿಕೊಳ್ಳುವಂತೆ ಪ್ರೇರೇಪಿಸುವ ಶಕ್ತಿಯೂ ಈ ಕಥನಗಳಿಗೆ ಇದೆ.

ಇಷ್ಟು ಹೇಳಿದ ಮೇಲೆ, ಅನಂತಮೂರ್ತಿಯವರ ಕಥನದಲ್ಲಿ ಸಹಜವಾಗಿ ಪ್ರಕಟಿಸಿರುವ ಒಂದು ವಿಸಗಂತಿಯ ಬಗ್ಗೆ ಹೇಳಬೇಕು. ಭಾರತಪಾಕಿಸ್ತಾನ: ಚರಿತ್ರೆಯನ್ನು ಮೀರುವ ಕನಸುವಿನ ಬುಖಾರಿ, ದೇಶ ವಿಭಜನೆ: ಇನ್ನೊಂದು ಕಾರಣದ ಕಥನದ ಭುಟ್ಟೊ, ಕಾಲ ದೇಶ ಮೀರಿದ ಒಂದು ಅಪೂರ್ವ ಘಟನೆಯ ಪಾಕಿಸ್ತಾನಿ ಲೇಖಕ ಇಂತಿಜಾರ್ ಹುಸೇನ್ ಮತ್ತು ಒಬ್ಬ ಲೇಖಕಿ – ಇವರೆಲ್ಲ ಕಥಾನಕದಲ್ಲಿ, ಒಂದು ಚೌಕಟ್ಟಿನಲ್ಲಿ ಅಚ್ಚುಕಟ್ಟಾಗಿ ಕೂತ ಸಪಾಟು ಚಿತ್ರಗಳ ಹಾಗೆ ಕಾಣುತ್ತಾರೆ. ಆಧುನಿಕ ವಿದ್ಯಾವಂತರೂ ಸೂಕ್ಷ್ಮಜ್ಞರೂ ಆದ ಈ ಜನ ತಮ್ಮ ಪ್ರಭುತ್ವದ ಬಗ್ಗೆ ನಿರಾಶೆಭರಿತ ಗೊಂದಲದಲ್ಲೂ ಭಾರತದ ಲಿಬರಲ್ ವಾತವರಣದ ಬಗ್ಗೆ ಆಕರ್ಷಣೆಯಲ್ಲೂ ಭಾರತದ ನಾಯಕರು ಒಂದಿಷ್ಟು ರಾಜಕೀಯ ಸಂಕಲ್ಪ ತೋರಿದ್ದರೆ ತಮ್ಮ ಪರಿಸ್ಥಿತಿ ಹೀಗಿರುತ್ತಿರಲಿಲ್ಲ ಎಂಬ ತೋರಿಸಿಕೊಳ್ಳಲಾಗದ ಈರ್ಷೆಯಲ್ಲೂ ಬದುಕುತ್ತಿರುವ, ಕನಿಕರಕ್ಕೆ ಅರ್ಹರಾದ ಮನುಷ್ಯರ ಹಾಗೆ ತೋರುತ್ತಾರೆ. ಭಾರತದ ಉನ್ನತಮಟ್ಟದ ಅಧಿಕಾರಿಗಳು ತಮ್ಮ ನೆನಪಿನ ಚಿತ್ರಗಳಲ್ಲಿ ನಿರೂಪಿಸುವ ಪಾಕಿಸ್ತಾನಿ ಅಧಿಕಾರಿಗಳ ಚಿತ್ರವೂ ಭಾರತದ ಶೈಕ್ಷಣಿಕ ವಿನಿಮಯ ಕಾರ್ಯಕ್ರಮದ ಭಾಗವಾಗಿ ಪಾಕಿಸ್ತಾನದ ಶಿಕ್ಷಕರು – ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಬಂದ ಜನರೂ ನೀಡುವ ವಿವರವೂ ಹೆಚ್ಚುಕಮ್ಮಿ ಇದೇ ರೂಹುಗಳನ್ನು ತೋರಿಸುತ್ತದೆ. ಅಂದರೆ ಪಾಕಿಸ್ತಾನದ ವಿದ್ಯಾವಂತರ ಬಗ್ಗೆ ನಾವು ನಮಗೇ ಮುದ ನೀಡುವಂತಹ ಒಂದು ಸಿದ್ಧ ಮಾದರಿಯ ಕಣ್ನೋಟವನ್ನು ರೂಢಿಸಿಕೊಂಡುಬಿಟ್ಟಿದ್ದೇವೆಯೇ? ಈ ಚೌಕಟ್ಟಿನಾಚೆಗೆ ಅವರಿಗೆ ಒಂದು ಅಸ್ತಿತ್ವವಿದೆ ಎನ್ನುವುದನ್ನು ನಾವು ಕಾಣಲುಇಚ್ಛಿಸುತ್ತಿಲ್ಲ. ಇದರ ಅರ್ಥ ಪಾಕಿಸ್ತಾನದ ಸಮ್ಮುಖ ನಾವು patronizing civilian world ಎಂದು ತೋರಿಸಿಕೊಳ್ಳುತ್ತಿದ್ದೇವೆಯೇ? ಅನಂತಮೂರ್ತಿಯವರ ಕಥನದ ಉದ್ದೇಶವೇ ಸಹಜವೂ, ಕಲ್ಪಿತವೂ ಆದ ಬಿರುಕುಗಳನ್ನು ಕಂಡುಕೊಳ್ಳುವ ಪ್ರಯತ್ನವಾದ್ದರಿಂದ ಈ ವಿಸಂತಿಯೂ ಕಥನ ಪ್ರಕಟಿಸುವ ರೂಪಕದಲ್ಲಿ ಒಟ್ಟಂದದಲ್ಲಿ ಸೇರಿಬಿಡುತ್ತದೆ. ಒಂದು ಒಳ್ಳೆಯ ಕಥನ ವಿಸಂತಿಗಳನ್ನು ನಿರೀಕ್ಷಿಸದೆಯೂ ಪ್ರಕಟಿಸುತ್ತದೆ.

ಇಲ್ಲಿಯೇ ಸಾಂದರ್ಭಿಕವಾಗಿ ಪಾಕಿಸ್ತಾನದ ಜನರ ಬಗ್ಗೆ ನಾವು ರೂಢಿಸಿಕೊಂಡಿರುವ ಕಣ್ನೋಟಕ್ಕೆ ವಿದ್ರೋಹ ತೋರಿದ ಒಂದು ಕಥನದ ಬಗ್ಗೆ ಹೇಳಬೇಕು. ಜಾವೇದ್ ಮಿಯಾಂದಾದ್ ಒಬ್ಬ ಅದ್ಭುತ ಕ್ರಿಕೆಟ್ ಆಟಗಾರ ಮಾತ್ರವಲ್ಲದೆ, ಆಟದಂಗಳದಲ್ಲಿ ರೋಚಕ ಜಗಳಗಂಟನೂ ಆಗಿದ್ದವನು. ಆತ ತನ್ನ ಕೊನೆಯ ಕ್ರಿಕೆಟ್ ಪಂದ್ಯವನ್ನು ಆಡಿದ್ದು ಬೆಂಗಳೂರಿನಲ್ಲಿ. ಆ ಮಹಾನ್ ಆಟಗಾರನ ಬಗ್ಗೆ ಮರುದಿನ ನಮ್ಮ ಪತ್ರಿಕೆಗಳು ವಿಶೇಷವಾಗಿ ಏನನ್ನೂ ಬರೆಯದಿದ್ದ ಹೊತ್ತಿನಲ್ಲಿ, ಮಿಯಾಂದಾದ್‌ನ ಪ್ರತಿಭೆ ಹಾಗೂ ವ್ಯಕ್ತಿತ್ವದ ಬಗ್ಗೆ ಭಾರತದ ಖ್ಯಾತ ಆಟಗಾರರನ್ನೂ ಸೇರಿದ ಹಾಗೆಯೇ ಪಾಕಿಸ್ತಾನದ ಜನರ ಬಗ್ಗೆ ನಾವು ಇಟ್ಟುಕೊಂಡಿರುವ ಪೂರ್ವಾಗ್ರಹಗಳನ್ನು ಬುಡಮೇಲು ಮಾಡಿಬಿಡುವಂತಹುದು. ನಮ್ಮ ಇಂಗ್ಲಿಷ್‌ ಪತ್ರಿಕೆಗಳು ಕಟ್ಟಿಕೊಟ್ಟ ಒರಟ, ಜಗಳಗಂಟ ಮಿಯಾಂದಾದನ ಸಪಾಟು ಚಿತ್ರವನ್ನು ಛಿದ್ರಮಾಡಿ, ಜೀವಂತ ಮಿಯಾಂದಾದ್‌ನನ್ನು ನಿರೂಪಿಸಿದ ಕಪಿಲ್‌ನ ಕಥಾನಕ ಇವತ್ತೀಗೂ ಅಪರೂಪ.

ಅಯ್ಯಪ್ಪನೂ ಭಕ್ತಿಪಂಥವೂ

ನಿಮ್ಮ ಸ್ವಾನುಭವವಾಗಿ, ಮುಖ್ಯವಾಗಿ ಅಹಂಕಾರಕ್ಕೆ ಕನ್ನಡಿಯಾಗಿ ಹಿಡಿದುಕೊಳ್ಳುವ ಸ್ವಾನುಭಾವವಾಗಿ, ಈ ಬರಹ ಅನುಭವ – ಅನುಭಾವವಗಳ ಎಳೆದಾಟವನ್ನು ಹಿಡಿಯಲು ತುಡಿಯುವ ಮಹಾತ್ವಾಕಾಂಕ್ಷಿ ಕಥನವಾಗಿ ನನಗೆ ತೋರುತ್ತಿದೆ. ಓ.ವಿ.ವಿಜಯನ್‌ರ ಒಡನಾಟದ ನೆನಪಿನಿಂದ ಇಡೀ ನಿರೂಪಣೆಗೆ ಒಂದುಕೊಂಕಿನ ಮೆರುಗು ದಕ್ಕಿದೆ. ಈ ‘ಮೆರಗು’ ನಿಷ್ಕಂಳಕ ಸೌಂದಾರ್ಯಾನುಭವದ ರೇಕು, ಅದು ಬುರುಡೆಯಾಗಿರುವುದಕ್ಕೂ ಸಾಕು; ‘ಕೊಂಕಿನ ಮೆರಗು’ ಸೌಂದಾರ್ಯಾನುಭವದ ಒಳಗಿಂದ ಎದ್ದು ನಿಲ್ಲುವ ಲೋಕವಿರೂಪ, ಸೌಂದಾರ್ಯಾನುಭೂತಿಯ ನಿಷ್ಕಳಂಕತೆಯನ್ನೂ ಪ್ರಶ್ನಿಸುವ ಛಾತಿ.

ಅಯ್ಯಪ್ಪನ ಭಕ್ತರಿಗೆ ಮಾಲೆ ಧರಿಸುವುದರಿಂದ ದಕ್ಕುವ ಐಡೆಂಟಿಟಿಯನ್ನು ನಿರ್ಲಕ್ಷಿಸಲಾಗದು ಎಂಬುದು ನನ್ನ ನಿಲುವು ಸಹ ಹೌದು; ಆದರೆ ನಿಮ್ಮ ನಿರೂಪಣೆ ಅಷ್ಟಕ್ಕೆ ನಿಲ್ಲದೆ, ಆಧುನಿಕ ವಿಚಾರವಂತರಾಗಿ ಸಂಪೂರ್ಣ ಭಕ್ತಿಪರವಶರಾಗಲು ಅಸಾಧ್ಯವಾದ ನಮ್ಮ ಇರುವಿಕೆಯನ್ನು ಎದುರು ಹಾಕಿಕೊಳ್ಳುತ್ತದೆ. ಅದಕ್ಕಿಂತಲು ಒಂದು ಹೆಜ್ಜೆ ಮುಂದೆ ಹೋಗಿ, ವೈಚಾರಿಕ ಅಹಮಿಕೆಯನ್ನು ನಿವಾರಿಸಿಕೊಂಡರೂ, ಲೋಕವಶರಾದವರು ಶುದ್ಧಾಂಗ ಭಕ್ತಿಪರವಶವಾಗುವುದಾದರೂ ಹೇಗೆ? ಎಂಬ ಭವದುಃಖ (ಬಸವಣ್ಣ)ದ ಸಮಸ್ಯೆಯನ್ನು ಲೀಲಾಜಾಲವಾಗಿ ತಂದುಬಿಡುತ್ತದೆ. ಈ interplay ಇರುವುದರಿಂದಲೇ ಅತಿಯಾದ ನಿಲುವಿನ ತರ್ಕಲೋಲುಪತೆಯಿಂದ ಪಾರಾಗುವುದಕ್ಕೂ ಸಾಧ್ಯವಾಗಿದೆ – again I am giving credit to strength of narrative structure, without ignoring the intellectual insights. ಇಷ್ಟಾದರೂ ನಿರೂಪಣೆಯ ಪರಿಣಾಮ, ಬೌದ್ಧಿಕ ತಳಮಳವಾಗದೆ ಬೌದ್ಧಿಕ ಪ್ರಸನ್ನತೆ ಯಾಕಾಗಿದೆ ಎಂದು ಯೋಚಿಸುತ್ತಿರುವೆ. ಕಥನದ ಓಘದಲ್ಲಿ ಕೆಲವು ಸಂಕಷ್ಟದ ಸಂಗತಿಗಳು ನುಣುಚಿಕೊಂಡುಬಿಟ್ಟಿರಬಹುದೇ? ಎಂಬ ಅನುಮಾನದಲ್ಲಿ ನನಗೆ ತಕ್ಷಣಕ್ಕೆ ಹೊಳೆಯುತ್ತಿರುವ ಎರಡು ಸಂಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದೇನೆ:

೧. ಅಯ್ಯಪ್ಪನೂ ಸೇರಿದ ಹಾಗೆ, ಪಳನಿಯ ಮುರುಗ ಹಾಗು ನಮ್ಮ ಸಂಡೂರಿನ ಕುಮಾರಸ್ವಾಮಿ – ಇವರೆಲ್ಲಾ ಬ್ರಹ್ಮಚಾರಿ ಸುಬ್ರಹ್ಮಣ್ಯನ ವಿವಿಧ ರೂಪಗಳು – ಇವುರಗಳ ಕುರಿತು ಸಂಸಾರ ಕಲಹದ ಪುರಾಣ ಕಥನಗಳಿವೆ. ಸಂಡೂರಿನ ಕುಮಾರಸ್ವಾಮಿಯನ್ನು ಕುರಿತ ಇರುವ ಕಥನ – ತಾಯಿ, ಮಗನ ನಡುವೆ ನಡೆದ ಸಂಸಾರ ಸಂಬಂಧಿ ಕಲಹ. ಪುರಾಣದ ಪ್ರಕಾರ, ಸುಬ್ರಹ್ಮಣ್ಯ ಸಕಲ ಸ್ತ್ರೀಯರಲ್ಲೂ ತಾಯಿಯನ್ನು ಕಾಣುವವನಾಗಿ, ಮದುವೆಗೆ ಒಪ್ಪುವುದಿಲ್ಲ. ಪಾರ್ವತಿ ಪರಿಪರಿಯಾಗಿ ಹೆಂಗಸರ ಪ್ರಭೇದಗಳನ್ನು ವಿವರಿಸಿದರೂ ಅವನು ಜಗ್ಗುವುದಿಲ್ಲ. ಇದರಿಂದ ಕ್ರುದ್ಧಳಾದ ಪಾರ್ವತಿ, ತಾಯಿಯ ಮಾತು ಮೀರುವವನಾದರೆ, ತಾಯುಣಿಸಿದ ಹಾಲನ್ನು ಕಕ್ಕು ಎನ್ನುತ್ತಾಳೆ. ಆ ಪ್ರಕಾರ ಕುಮಾರಸ್ವಾಮಿ ಎದೆ ಹಾಲನ್ನು ಕಕ್ಕುತ್ತಾನೆ; ತನ್ನ ತಾಯಿಯೂ ಸೇರಿದ ಹಾಗೆ ಸಂತಾನ ಪ್ರಾಪ್ತಿ ಇರುವ ಹೆಂಗಸರ ದರ್ಶನವನ್ನು ಕೈದು ಮಾಡುತ್ತಾನೆ. ಇವತ್ತಿಗೂ ಸಂಡೂರಿನ ಕುಮಾರಸ್ವಾಮಿ ದೇವಸ್ಥಾನಕ್ಕೆ ಹೆಂಗಸರು ಹೋಗುವ ಹಾಗಿಲ್ಲ. ಇದು ಬರಿ ಸ್ತ್ರೀಸಂಗ ಪರಿತ್ಯಾಗದ ತಿಳಿಸಾರಿನ ಕತೆಯಲ್ಲ; ಪಾವಿತ್ರ್ಯ ನಿಷ್ಠೆ ಹಾಗು ಲೋಕಗತಿಯ ಸಾತತ್ಯಗಳ ನಡುವಿನ ವಿಷಾದಪೂರ್ಣವೂ ಅಪರಿಹಾರ್ಯವೂ ಆದ ಬಿಕ್ಕಟ್ಟಿನ ಕಥನ. ಇದೊಂದು ದುರಂತ ಕಥನ. ಇಲ್ಲಿ ಸ್ತ್ರೀ ನಿಷೇಧಕ್ಕೆ ಈ ದುರಂತದ ಛಾಯೆ ಇದೆ. ಆದರೆ ಆಧುನಿಕ ಪ್ರಜಾಪ್ರಭುತ್ವದ ನಿಯಮಾವಳಿಗಳಿಗೆ ವಿರುದ್ಧವಾದ ಕಥನವಿದು. ಪ್ರಜಾಪ್ರಭುತ್ವದ ನಿಯಮಾವಳಿಗಳಿಗೆ ವಿರುದ್ಧವಾದ ಕಥನವಿದು. ಪ್ರಜಾಪ್ರಭುತ್ವದ ನಿಯಮಾವಳಿಯಷ್ಟೇ ಈ ದುರಂತ ಪುರಾಣಾನುಭವವೂ ನಮ್ಮ ಸದ್ಯದ ಲೋಕಜೀವನಕ್ಕೆ ಮುಖ್ಯ.

ಆದರೆ ಸದರಿ ಲೋಕಜೀವನ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಹಾಗಿದೆ; ಪುರಾಣ ಶಕ್ತಿಯನ್ನು, ಲೋಕಸಮಾನತೆಯ ತತ್ವವನ್ನೂ ಒಟ್ಟಿಗೆ ಹಿಡಿದಿಟ್ಟುಕೊಳ್ಳಲಾಗದ ಸನ್ನಿವೇಶದಲ್ಲಿ ಎರಡನ್ನೂ ನೆಚ್ಚಿಕೊಂಡವರ ಸಂಕಲ್ಪದ ಸಂಕಟಗಳನ್ನು ನಿರೂಪಿಸುವ ರೂಪಕಗಳು ಇಲ್ಲ. ಗಾಂಧಿಯ ಪ್ರಾರ್ಥನಾ ಸಭೆಗಳಿಗೆ ಈ ತರಹದ ರೂಪಕವಾಗುವ ಶಕ್ತಿ ಇತ್ತು. ಫಂಡರಾಪುರದ ವಿಠಲನ ಭಕ್ತರ ದಿಂಡಿ ಯಾತ್ರೆಗೆ ಈ ಹೊರೆ ಇಲ್ಲ, ಯಾಕೆಂದರೆ ಅದು ವೈಚಾರಿಕ ಆಧುನಿಕತೆಗೂ ಪೂರ್ವದ್ದು. ಆದರೆ ಅಯ್ಯಪ್ಪ ಮತ್ತು ಆತನ ಅನುಯಾಯಿಗಳು – ಇಬ್ಬರೂ ಆಧುನಿಕ ಭಾರತದ ಉತ್ಪಾದನೆಗಳು; ಮೂಲ ಆಚರಣೆಯ ಆಯಸ್ಸು ಎಷ್ಟೂ ಇರಲಿ, ಮಾಲಧಾರಣೆ ಒಂದು syncretic ಆಚರಣೆ ಯಾಗಿರುವುದು ತೀರಾ ಆಧುನಿಕವಾದ ವಿದ್ಯಮಾನ. ಅಯ್ಯಪ್ಪನ ಭಕ್ತಾಧಿಗಳ ಆಧ್ಯಾತ್ಮಿಕತೆ – ಲೋಕ ಸಮಾನತೆಯ ಸಾಮರಸ್ಯ, ಆಳದ ಆಧ್ಯಾತ್ಮಿಕತೆ ಮತ್ತು ಸಮಾನತೆಯ ಸಂಕಟಗಳನ್ನು ಮರೆಸುವುದಕ್ಕೆ ರೂಪಪಡೆದಿರಲೂ ಸಾಕು ಅಲ್ಲವೆ?

೨. ನಮ್ಮ ಆಧುನಿಕ ಪ್ರಭುತ್ವ, ಹೇಗೆ ಸಮಾನತೆಯ ಸಂಕಲ್ಪವನ್ನು ಹೃಸ್ವಗೊಳಿಸಿ ಪ್ರಜಾಪ್ರಭುತ್ವವನ್ನು ಸಂಖ್ಯಾಬಲದ ರಾಜಕೀಯದ ಮಟ್ಟಕ್ಕೆ ಎಳೆದು ತಂದಿದೆಯೋ, ಹಾಗೇ ಅಯ್ಯಪ್ಪನಿಗೆ ಹರಕೆ ಹೊತ್ತು ಮಾಲೆ ಧರಿಸುವ ವ್ರತಾಚರಣೆ, ಆಧ್ಯಾತ್ಮಿಕ ನೆಲೆಯ ಸುಮುದಾಯ ನಿರ್ವಚನವಾಗದೆ, ಸೋಷಿಯೋ – ಪೊಲಿಟಿಕಲ್  ಮೊಬಿಲೈಜೇಶನ್‌ನ ಸಾಧನವಾಗಿ ಬಿಟ್ಟಿದೆ. ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಒಗ್ಗೂಡುತ್ತಿದ್ದ ದಲಿತರು ಈಗ ಅಯ್ಯಪ್ಪನ ಮಾಲೆ ಧರಿಸುವ ಆಚರಣೆಯಲ್ಲಿ ಒಗ್ಗೂಡುತ್ತಿರುವುದು, ಸಂಘಪರಿವಾರ ಬಾಬಾಬುಡನ್‌ಗಿರಿಯನ್ನು ಧ್ವಂಸ ಮಾಡಲು ಕೆಳಜಾತಿಯ ಯುವಕರನ್ನು ಅಯ್ಯಪ್ಪನ ವ್ರತಧಾರಿಗಳ ಮಾದರಿಯಲ್ಲಿ, ದತ್ತಮಾಲಾಧಾರಿಗಳನ್ನಾಗಿ ಸಂಘಟಿಸುತ್ತಿರುವುವಂಥ ವಿದ್ಯಮಾನಗಳೆಲ್ಲಾ ಏನನ್ನು ಸೂಚಿಸುತ್ತವೆ? ಕರಾವಳಿಯಲ್ಲಿ ಈ ಅಯ್ಯಪ್ಪನ ವ್ರತಾಚರಣೆಯ ಮಾಸ ಕೋಮುಗಲಭೆಯ ಕಿಡಿ ಹೊತ್ತಿಸಲು ಅನುಕೂಲಕರವಾಗಿರುವ ದಿನಗಳೂ ಹೌದು. ಇದನ್ನು ನೋಡಿದರೆ, ಸಂಘಪರಿವಾರ ಇತ್ತೀಚಿನ ವರ್ಷಗಳಲ್ಲಿ ನಡೆಸುತ್ತಿರುವ ಹಿಂದೂ ಸಮಾಜೋತ್ಸವ ಕೆಳಜಾತಿಯ ಜನರಿಗೆ ನೀಡುತ್ತಿರುವ ಐಡೆಂಟಿಟಿಗೂ ಅಯ್ಯಪ್ಪನ ಮಾಲೆ ಧರಿಸಿದವರು ಪಡೆದುಕೊಳ್ಳುತ್ತಿರುವ ಐಡೆಂಟಿಟಿಗೂ ಹೆಚ್ಚು ವ್ಯತ್ಯಾಸ ಕಾಣಿಸುತ್ತಿಲ್ಲ. ಅಂದರೆ ಆಧುನಿಕ ಯುಗದಲ್ಲಿ ಭಕ್ತಿಪಂಥದ ಮಾರ್ಗಗಳ ಮರುಪ್ರವೇಶ ಅಷ್ಟು ಸುಖದಾಯಕವಾದುದಲ್ಲ. ಗಾಂಧಿಯ ಕೊನೆ ದಿನಗಳಲ್ಲಿ ಅವರ ಪ್ರಾರ್ಥನಾ ಸಭೆಯಲ್ಲಿ ಖುರಾನ್ ಪಠಣ ಕೂಡದು ಎಂದು ಹಲವು ಪ್ರಾರ್ಥನಾರ್ಥಿಗಳು ತಕರಾರು ತೆಗೆದಾಗ, ಗಾಂಧಿ ‘ಪಠಣ ನಿಲ್ಲುವುದಿಲ್ಲ, ಬೇಡದವರು ಸಭೆಯಿಂದ ಹೊರನಡೆಯಬಹುದು’ ಎಂದು ಕಟುವಾಗಿ ಹೇಳುತ್ತಿದ್ದರು. ಅವರ ಹತ್ಯೆಯ ಮುಂಚಿನ ಒಂದು ತಿಂಗಳಲ್ಲಿ ಈ ತರಹದ ಘಟನೆ ಕೆಲವು ಭಾರಿ ನಡೆಯಿತು. ತನ್ನ ಮಾರ್ಗದ ಸಂಕಟಗಳನ್ನು ಗಾಂಧಿ ಕೊನೆಯ ದಿನಗಳ ಪ್ರಾರ್ಥನಾ ಸಭೆಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ. They were quite disturbing, as did the following days.

ರಂಪ ಮತ್ತು ಗಣಿಗಾರಿಕೆ

ಉದ್ಧಟತನ ಎನ್ನಿಸಿದರೂ ಸೈ, ದಡ್ಡತನ ಎನ್ನಿಸಿದರೂ ಸೈ, ವಿಶ್ವಾಸವಿಟ್ಟುಕೊಂಡವರ ಹತ್ತಿರ ನೇರವಾಗೇ ಮಾತನಾಡಬೇಕು. ಈ ಬರಹ ನನಗೆ ಇಷ್ಟವಾಗಲಿಲ್ಲ. ಇಲ್ಲಿರುವ ನೈತಿಕ ಸಿಟ್ಟು ನಿಜ. ಆದರೆ ಉತ್ಕಟವಾದ ನೈತಿಕ ಸಿಟ್ಟನ್ನು ವ್ಯಕ್ತಪಡಿಸುವಲ್ಲಿ ಭಾಷೆ, ಅಭಿವ್ಯಕ್ತಿ ಕ್ರಮ ಎರಡೂ ಒದಗಿ ಬಂದಿಲ್ಲ. ‘ಭೂಮಿ ತಾಯಿಯ ರೇಪ್’ ಎನ್ನುವ ಮೆಲೋಡ್ರಾಮ್ಯಾಟಿಕ್ ವಾಕ್ಯಗಳನ್ನು ಬರೆಸುವ ಸಿಟ್ಟಿಗೆ ಕಾಲದ ದುರಂತವನ್ನು ಹೇಳುವ ವಿಷಾದಮಯ ತಾಳಿಕೆ ಇರುತ್ತದೆಯೇ?

ತಪ್ಪು ತಿಳಿಯಬೇಡಿ, ಈ ಬರಹದ ಭಾಷೆ, ಶೈಲಿ ಇಂಇಡಯನ್ ಎಕ್ಸ್‌ಪ್ರೆಸ್ಸಿನಲ್ಲಿ ಬರೆಯುವ ಟಿ.ಜೆ.ಎಸ್.ಜಾರ್ಜ್‌‌ನನ್ನು ಹೋಲುತ್ತಿದೆ; ಆತ ನಮ್ಮ ಅಧಃಪತನಗಳ ವಾಸ್ತವಿಕತೆಯ ಬಗ್ಗೆ ಮಾತನಾಡುತ್ತಾನೆ – ಹೇಗೆಂದರೆ ಎತ್ತರದ ಬಾಲ್ಕನಿಯಲ್ಲಿ ನಿಂತುಕೊಂಡು ರಸ್ತೆಯಲ್ಲಿ ಹೋಗುವವರ ನೈತಿಕ ನಡುವಳಿಕೆಯನ್ನು ಟೀಕಿಸುವ ಹಾಗೆ. He won’t even allow them to wink back at him! ರಂಪ ನಮ್ಮ ಬದುಕಿನಲ್ಲಿ ರಕ್ತಗತವಾಗಿಬಿಟ್ಟಿರುವ ಕೆಡುಕಿನ ಒಂದು ಝಲಕ್ ಅಲ್ಲವೆ? ಅಂದರೆ ಅದರಲ್ಲಿ ಇಡಿ ಸಮಾಜದ ಹಿಸ್ಸೆ ಇದ್ದೆ ಇದೆ; ರಂಪದ ಬಗ್ಗೆ ಬರೆಯುವಾಗ ಈ ತರಹ ಹದಗೆಟ್ಟ ನೈತಿಕತೆಯ ಒಂದುವರ್ಣಪಟ್ಟಿಕೆ ನಮ್ಮ ಕಣ್ಣೆದುರು ರಾಚಬೇಕು, ರಾವುಗನ್ನಡಿಯಲ್ಲಿ ನಮ್ಮ ಮುಖವೂ ಕಂಡು ನಾವೇ ಬೆಚ್ಚಬೇಕು. ನೈತಿಕ ವ್ಯಾಖೆಯಲ್ಲಿ ನಾವು ರೆಫರಿಗಳ ತರಹ ಮಾತನಾಡಲು ತೊಡಗಿದ ತಕ್ಷಣ ನಮ್ಮನ್ನು ಈ ರಂಪ ರೂಪಕ ತಂದಿದ್ದೀರಿ ಎಂದು ನನಗೆ ಅರ್ಥವಾಗುತ್ತಿದೆ; ಆದರೆ ಅಲ್ಲಿಯೂ ನಿಮ್ಮ ಧ್ವನಿ ಒಬ್ಬ ರೆಫರಿಯದ್ದು; ಅದು ಮತ್ತೊಬ್ಬನ ಸಂಸಾರದ ಬಗ್ಗೆ, ಸಧ್ಯಕ್ಕೆ ರಂಪವಿಲ್ಲದ ಸಂಸಾರಸ್ಥನ ಗತ್ತು; ಯಾಕೋ ನಿಮ್ಮ ಬರಹದಲ್ಲಿ ಅದು ನನ್ನ ಸಂಸಾರದ್ದೂ ಆಗಿರಬಹುದು ಎಂಬ ಧ್ವನಿ ಇಲ್ಲ. ನ್ಯಾಯಕರ್ತದಲ್ಲಿ ನಾವು ರೆಫರಿಯಾಗಿರಬೇಕು, ನಾನು ಯಾಕೆ ಒಂದು ಪಕ್ಷದ ಪರವಿದ್ದೇನೆ ಎಂದು ಹೇಳಿಕೊಳ್ಳುವ ಸಲುವಾಗಿ – ಅಲ್ಲಿ ಎಲ್ಲರೂ ತಪ್ಪಿತಸ್ಥರೇ ಎನ್ನುವುದು ಉಡಾಫೆಯಾಗುತ್ತದೆ. ಆದರೆ ನೈತಿಕ ವ್ಯವಹಾರ ಹಾಗಲ್ಲವಲ್ಲ.

ಇವತ್ತಿನ ವಿದ್ಯಮಾನಗಳ ಬಗ್ಗೆ ಉಂಟಾಗುವ ಹೇವರಿಕೆಗೆ ಒದಗಿಬರುವುದು ಬ್ರೆಕ್ಟ್ ಮತ್ತು – ಅವನಿಗಿಂತ ಹರಿತವಾಗಿ – ದಾರಿಯೋಫೋನ ಅಭಿವ್ಯಕ್ತಿ ವಿಧಾನ. ಬಿಳಿಗಿರಿಯವರ ಪದ್ಯ ಒಂದು ಇದೆಯಲ್ಲ ‘ಬಿ ಐ ಎಲ್ ಐ ಜಿ ಐ ಆರ್ ಐ/ ಶಿವನಿಗೆ ಮೂರೈ, ನನಗೆ ನಾಲ್ಕೈ’ ಎಂಬ ನಮೂನೆಯ ವಿಟ್ ಮಾತ್ರ ನೈತಿಕ ಸಿಟ್ಟನ್ನು ಮೆಲೋಡ್ರಾಮ್ಯಾಟಿಕ್ ಆಗುವುದನ್ನು ತಪ್ಪಿಸಬಲ್ಲದು ಅನ್ನಿಸುತ್ತದೆ – ನಂಗಲಿ ಖಂಡಿತವಾಗಿಯೂ ಅಲ್ಲ. ಹೌದು, ಯಾವತ್ತೂ ಇಂತಹ ಜಾಗ್ರತೆಯಲ್ಲಿ, ಸವೆಸಿದ ದಾರಿಯಲ್ಲಿ ನಡೆಯುವ ಚಟಕ್ಕೆ ಬೀಳದೆ, ಹೊಸ ದಾರಿಗಳನ್ನು ಕಂಡುಕೊಳ್ಳಬೇಕು; ಆದರೆ ದಾರಿ ತಪ್ಪಿದೆ ಅನ್ನಿಸಿದರೆ, ವಾಪಾಸು ಬರಲಿಕ್ಕೆ ಕೆಲವು ಗುರುತುಗಳನ್ನು ಖಂಡಿತಕ್ಕೂ ಇಟ್ಟುಕೊಂಡಿರಬೇಕು. ನನ್ನ ಬ್ಯಾಟಿಷ್ ಅನ್ನಿಸುವ ಈ ಪ್ರತಿಕ್ರಿಯೆಯನ್ನು ಅಂತಹ ಒಂದು ಗುರುತಾಗಿ ಇಟ್ಟುಕೊಳ್ಳಬಹುದಲ್ಲ?

ಕೃಷಿಯೋ ಗಣಿಗಾರಿಕೆಯೋ?

ನಿಮ್ಮ ಅಜ್ಜಿ ಹೇಳುತ್ತಿದ್ದ ಮಾತಿನ ಬಗ್ಗೆ ನೀವು ಮಾಡಿರುವ ಧ್ಯಾನವೇ ನಾನು ಹೇಳಬೇಕೆಂದುದ್ದನ್ನೆಲ್ಲ ಹೇಳುತ್ತದೆ. ನಿಮ್ಮ ಮಾತುಗಳ ಬಾಣದ ಗುರುತುಗಳನ್ನು ಹಿಡಿದು ದಾರಿ ಹುಡುಕುವ ಟ್ರೆಷರ್ ಹಂಟರನಂತೆ, ನನಗೆ ನಾನೇ ಕೆಲವು ವಿಷಯಗಳನ್ನು ಹೇಳಿಕೊಳ್ಳುತ್ತ ಹೋಗಿದ್ದೇನೆ. ಭಕ್ತಿಯೆಂಬುದ ಮಾಡಬಾರದು/ ಗರಗಸದಂತೆ ಹೋಗುತ್ತ ಕೊರೆವುದು;/ಬರುತ್ತ ಕೊಯ್ವದು/ ಘಸರ್ಪನಲ್ಲಿ ಕೈದುಡುಕಿದರೆ ಹಿಡಿಯದೆ ಮಾಂಬುದೆ? ಎಂಬ ಬಸವಣ್ಣನ ಭವದುಃಖದ ಒಕ್ಕಲಿನವನು ನಾನು; ತಾವು ದಯವಿಟ್ಟು ನನ್ನ ಮಾತನ್ನು ಈ ಆಂತರ್ಯದಲ್ಲಿ ಕೇಳಿಸಿಕೊಳ್ಳಬೇಕು.

ನಮ್ಮ ಸಾಮಾಜಿಕ ನಡಾವಳಿಗಳು ಎಕ್ಕ ಎದ್ದು ಹೋದಾಗ, ಆಡುವ ಭಾಷೆಯೂ ಸಭ್ಯತೆಯನ್ನು ಕಳೆದುಕೊಂಡು, ಮಾತಿಗೆ ದನಿ ಒಂದು ಇತ್ತೆಂಂದುಂಬುದನ್ನೇ ನಾವು  ಭಂಡತನದಲ್ಲಿ ನಿರಾಕರಿಸತೊಡಗುತ್ತೇವೆ. ವಾಚ್ಯಾರ್ಥ ಕುಲಗೆಡುವುದು ಹೀಗೆ ? ರಸದ ಭಾವಿಯ ತುಡುಕಬಾರದು/ ಕತ್ತರಿವಾಣಿಯ ದಾಂಟಿದವಂಗಲ್ಲದೆ? ಎನ್ನುತ್ತಾನಲ್ಲ ಅಲ್ಲಮ! ಭೂಮಿಗೂ, ಭೂಮಿಯ ಮೇಲಿನ ಮನುಷ್ಯರ ಬದುಕಿಗೆ ಕೇಡು ಬಗೆಯದ ಹಾಗೆ ಗಣಿಗಾರಿಕೆಯನ್ನು ನಿರ್ವಹಿಸುವ ಕಾರ್ಯಸಾಧ್ಯವಾದ ವಿವರಗಳನ್ನು ನೀವು ಬಾಲಬೋಧೆ ಎಂದು ಕರೆದಿರುವುದು ಸರಿಯಾಗಿದೆ; ಅದು ಸಂಬಂಧಪಟ್ಟ ಎಲ್ಲರಿಗೂ ತಿಳಿದಿರುವಂತಹದು ಮತ್ತು ಅವರು ತಿಳಿದೇ ಅದನ್ನು ಉಲ್ಲಂಘಿರುವಂತಹುದು. ಇವರಿಗೆ ಮತ್ತೆ ಗಣಿಗಾರಿಕೆಯ ವಿವರಗಳನ್ನು ವಾಚ್ಯಾರ್ಥದಲ್ಲಿ ಹೇಲುವುದಕ್ಕೇನಿದೆ ಎನ್ನುವುದನ್ನು ಮತ್ತು ಅನಿವಾರ್ಯ ಎಂದು ಹಾಗೇ ಹಠಕಟ್ಟಿ ಹೇಳ ಹೋದರೆ ಸವೆದ ವಾಚ್ಯಾರ್ಥದ ಚಾಳಿಗಳು ನಮ್ಮ ದನಿಗೇ ದುಸ್ಸಂಗವಾಗಿಬಿಡುವ ಆತಂಕವನ್ನೂ ನೀವು ಪ್ರಕಟಿಸಿರುವುದು ಸಕಾರಣವಾಗಿಯೇ ಇದೆ.

ವಾಚ್ಯಾರ್ಥ ನಿಸ್ಸಾರವಾಗಿದೆ ಎಂದು ನಿರ್ಧರಿಸಿಕೊಳ್ಳುವ ಮುಂಚೆ, ಅದರ ಆತ್ಯಂತಿಕ ಸಾಧ್ಯತೆಗಳನ್ನು ಪರೀಕ್ಷಿಸಕೊಳ್ಳುವ ಸಲುವಾಗಿ ನೀವು ಕಟ್ಟಿಕೊಂಡಿರುವ ಪೂರ್ವಪಕ್ಷವೂ ಹರಿತವಾಗಿದೆ. ಇಲ್ಲಿ ನನಗಾದ ಒಂದು ನೋವಿನ ಬಗ್ಗೆ ಹೇಳಿಬಿಡುವೆ. ‘ಯುವ ಮಿತ್ರ’ಹಾಗೂ ಮಾರ್ಕ್ಸ್‌ಬಗೆಗಿನ takeಗಳು invitingಆಗಿವೆ; ‘ಯುವ ಮಿತ್ರ’ನಿಗೆ ನಿಮ್ಮ ಜೊತೆ ವಾಗ್ವಾದಕ್ಕೆ ಇಳಿಯಬಹುದು, ಅದಕ್ಕೆ ಅವಕಾಶವೂ ಇದೆ; ಮಾರ್ಕ್ಸ್‌ಲೋಕವಿಖ್ಯಾತ ಹಾಗು ಆತನ ಮಾತು – ಕೃತಿಗಳು ಸ್ವಲ್ಪ ಶ್ರಮವಹಿಸಿದರೆ ಸಿಗುತ್ತವೆಯಾದ್ದರಿಂದ ಓದುಗರು ನಿಮ್ಮ ಅರ್ಥೈಸುವಿಕೆಯನ್ನು ಪರೀಕ್ಷಿಸಿಕೊಳ್ಳಬಹುದು, ವಾಗ್ವಾದಕ್ಕಿಳಿಯಬಹುದು. ಆದರೆ ವಾಲ್ಟರ್ ಬೆಂಜಮಿನ್ ನಮ್ಮ ಅಕ್ಷರಸ್ತರಿಗೂ ಅಜ್ಞಾತ, ಆತನ ಕೃತಿಗಳು ದುರ್ಲಭ. ಆತ ವೈಚಾರಿಕ ಹಠಗಳನ್ನು ಮೀರಿದ ಸೂಕ್ಷ್ಮಬುದ್ಧಿ – ಭಾವಗಳಿದ್ದವನು, ತನ್ನ ದೇಶ – ಕಾಲದ ದುರಂತಗಳ ವಾಚ್ಯಾರ್ಥಗಳನ್ನು ಮೀರಿ ಆಳವಾದ ದುರಂತದ ಧ್ವನಿಗಳನ್ನು ಕಾಣಿಸಿದವನು; ಬೆಂಜಮಿನ್‌ನ ನಿಮ್ಮ ಚಿತ್ರ ಎಷ್ಟು ಹೃಸ್ವವಾಗಿದೆ ಅಂದರೆ ಆತ ನಮ್ಮ ಬಂಡಾಯದ ಸರಳೀಕೃತ ವಾದಗಳ ವಕ್ತಾರನ ಹಾಗೆ ಕಾಣುತ್ತಾನೆ. ಬೆಂಜಮಿನ್‌ನ ಬಗ್ಗೆ ನನಗಿಂತ ಚೆನ್ನಾಗಿ ನಿಮಗೆ ತಿಳಿದಿದೆ ಹಾಗು ಅವನನ್ನು ಹಗುರವಾಗಿ ಕಾಣುವುದು ತಮ್ಮ ಉದ್ದೇಶವಲ್ಲ – ಇದು ನನಗೆ ಖಂಡಿತ ಗೊತ್ತು. If you really mean what you have said, then we have to go back to Benjamin and re – read him to see your meaning. But as I said, Benjamin is hard to get for common readers.

ವಾಚ್ಯಾರ್ಥವನ್ನು ಛೇದಿಸಿ ಧ್ವನ್ಯಾಕೃತಿಯನ್ನು ನಿರ್ಮಿಸುವ ಸೂಕ್ಷ್ಮಜ್ಞರಿಗೆ, ಸದ್ಯದ ಸನ್ನಿವೇಶದಲ್ಲಿ ಇರುವ ಆಯ್ಕೆಯಾದರೂ ಏನು? ಒಂದನೆಯದಾಗಿ, ಸಹಿಸಿಕೊಂಡಿರಲಾರೆ ಎಂದು ಸಾರ್ವಜನಿಕವಾಗಿ ಪ್ರಕಟವಾಗುವ ಪ್ರತಿರೋಧಗಳಲ್ಲಿ ತೊಡಗಿಕೊಳ್ಳುವುದು – ಆದರೆ ಸಾಮೂಹಿಕ ಪ್ರತಿರೋಧದ ವ್ಯಾಕರಣಗಳಿಗೆ ವಾಚ್ಯಾರ್ಥದ ಹಂಗನ್ನು ತಕ್ಷಣಕ್ಕೆ ತೊಡೆದುಕೊಳ್ಳಲು ಸಾಧ್ಯವಾಗದು; ಸಾಮೂಹಿಕವಾಗಿ ಸಮ್ಮತವಾಗಿಬಿಟ್ಟಿರುವ ವಾಚ್ಯಾರ್ಥ್ಯಕ್ಕೆ ಹೊಸ ಧ್ವನ್ಯರ್ಥವನ್ನು ನೀಡಿ ಲೋಕನಾಯಕರಾಗುವುದು ಸುಲಭವಲ್ಲ. ಎರಡನೆಯದು, ಧ್ವನಿವಿಹೀನವಾದ ವಾಚ್ಯಾರ್ಥಗಳನ್ನು ಪಲ್ಲಟಗೊಳಿಸಿ, ಛಿದ್ರ ಮಾಡಿ, ಲೋಕವಿಲಕ್ಷಣ ರೂಪಕಗಳ ಮೂಲಕ ಬೆಚ್ಚಿಬೀಳಿಸುವ ಲೋಕವಿಕಾರಗಳನ್ನು ಪ್ರಕಟಿಸುವ ಲೋಕೋತ್ತರ ಕಾಯಕ – ಪ್ರತಿಭೆ ಕೈಕೊಟ್ಟರೆ ಅದು ಅಗ್ಗದ ಪ್ರಹಸನವಾಗಿ ಲೋಕವೇ ನಮ್ಮನ್ನು ನುಂಗಿಬಿಡುತ್ತದೆ! ಮೂರನೆಯದು ನೀವು ಆಯ್ದುಕೊಂಡಿರುವ ಧ್ವನಿ ನಿರೂಪಣಾಮಾರ್ಗ – ಅಥವ ನೀವು ಕರೆದ ಹಾಗೆ ‘ವಾಚ್ಯಾರ್ಥ ನಿವೃತ್ತಿ’; ಇದು ನೋಡುವುದಕ್ಕೆ, ಪ್ರಜ್ಞೆಯನ್ನು ಗಟ್ಟಿಯಾಗಿಟ್ಟುಕೊಂಡವರಿಗೆ ಸಲೀಸು ಎಂದು ಕಾಣುತ್ತದೆ; ಆದರೆ ನಾವು ಆಯ್ದು ನೇಯ್ದ ಧ್ವನಿಯ ಆಕೃತಿ ಸದ್ಯದ ಲೋಕವಿಕಾರವನ್ನು ಪೂರ್ಣಲೋಕಾಕಾರದ ಬಿಡಿಸಲಾಗದ ಭಾಗವಾಗಿ ತೋರಿಸುವ ಒಂದು ಕನ್ನಡಿಯಾಗಿರಬೇಕು (ಉರ್ದು ಸಾಹಿತ್ಯ ಲೋಕ ‘ಕನ್ನಡಿ’ಯನ್ನು ತುಂಬ ಕ್ರಿಯಾಶೀಲವಾದ ಧ್ವನಿಪ್ರತಿಮೆಯಾಗಿಸಿಕೊಂಡು ಭಾಷೆಯ ವಾಚಾರ್ಥ್ಯವನ್ನು ಮುರಿಯುವ ಸಾರ್ಥಕ ಸಾಧನ ಮಾಡಿಕೊಂಡಿದೆ ಎಂದು ಬಲ್ಲವರು ಹೇಳುತ್ತಾರೆ; ದೇಶವಿಭಜನೆಯೊಟ್ಟಿಗೆ ವಿಧಿಯಂತೆ ಎರಗಿದ ಸಾಮಾಜಿಕ – ಸಾಂಸ್ಕೃತಿಕ ವಿಕಾರಗಳನ್ನು ಉರ್ದು ಭಾಷಿಕಲೋಕ ಮೇಲೆ ಹೇಳಿರುವ ಮೂರು ಮಾರ್ಗಗಳ ಮೂಲಕ ಎದುರಿಸಲು ಹೆಣಗಿದ ಕಥನ ಬೋಧನೀಯವಾಗಿದೆ ಎಂದೂ ವಿದ್ವಾಂಸರು ಹೇಳುತ್ತಾರೆ.) ಮೂರು ಮಾದರಿಗಳಲ್ಲಿ ಯಾವುದೂ ಸಲೀಸಲ್ಲ, ಮೂರೂ ಸಂಕಷ್ಟದ ಹಾದಿಗಳೇ ಸರಿ; ಹಾಗೆಂದೇ ಈ ಹಾದಿಗಳ ಪಥಿಕರು ನಮನೀಯರು. ಬಸವಣ್ಣ ಧ್ವನ್ಯಾರ್ಥದ ಹುಡುಕಾಟದಲ್ಲಿ ಇದೇ ನಮೂನೆಯ ಸಂಕಷ್ಟದ ಹಾದಿ ತುಳಿದ ಎಂದೇ ಅನ್ನಿಸುತ್ತದೆ – ಆತ ‘ಭಾಷೆ ತೀರಿದಲ್ಲದೆ ದಾರಿದ್ರ‍್ಯವಿಲ್ಲ’ ಎನ್ನುತ್ತಾನೆ, ತನ್ನ ಸಹಜೀವಿಗಳಾದ ಶರಣಾಢ್ಯರನ್ನು ‘ಪುರಾತರು’, ‘ಪ್ರಥಮರು’ ಎಂದು ಆವಾಹಿಸಿಕೊಳ್ಳುತ್ತಾನೆ, ‘ಭಕ್ತಿಯೆಂಬ ಮೃಗ ಎನ್ನನಟ್ಟಿ ಬಂದು ನುಂಗಿತು’ ಎನ್ನುತ್ತಾನೆ! ಅದು ಅಂತಿರಲಿ.

ವಾಚ್ಯಾರ್ಥ ಛೇದ ಹಾಗು ಧ್ವನ್ಯಾಕೃತಿ ನಿರ್ಮಾನ ಕಾಯಕದ ಯಾವುದೇ ಆಯ್ಕೆಯಗೂ, ಸಮಕಾಲೀನ ಚರಿತ್ರೆ (contemporary history)ಯ ಪೂರ್ಣ ಅರಿವು ಮತ್ತು ಆ ಅರಿವು ಉದ್ಧೀಪಿಸುವ ಒಳನೋಟ ತುಂಬ ಅಗತ್ಯ ಎನ್ನುವುದನ್ನು ಒಪ್ಪಿಕೊಂಡರೆ, ಈ ಕಾಯಕದ ಸಂಕಷ್ಟಗಳು ಮತ್ತಷ್ಟೂ ನಿಚ್ಚಳವಾಗುತ್ತವೆ. ಈ ಕಾರಣವಾಗಿಯೇ, ‘ಕೃಷಿಯೋ ಗಣಿಗಾರಿಕೆಯೋ’ ಅನ್ನು ನಾನು ತಕ್ಷಣದ ಸ್ಪೂರ್ತಿಯ ಸಲೀಲ ಲಹರಿ ಎಂದು ಭಾವಿಸದೆ, ವಿಸ್ತಾರವಾದ ಸಮಸ್ಯಾತ್ಮಕ ಭಿತ್ತಿಯಲ್ಲಿ ರಚಿತವಾದ ಚಿತ್ರದ ತುಣುಕು ಎಂದೇ ನೋಡುತ್ತೇನೆ. ಚಿತ್ರದ ಅನುಭಾವಾಸ್ವಾದನೆಗೆ ಭಿತ್ತಿಯೇ ಭಾರವಾಗಬೇಕೆ? ಲೋಕಾರೂಢವಾಗಿಬಿಟ್ಟಿರುವ ವಾಚ್ಯಾರ್ಥ ಸಂಕೋಲೆಗಳಿಂದ ಬಿಡಿಸಿಕೊಳ್ಳುವ ಇರಾದೆಯ ಧ್ವನ್ಯಾಕೃತಿ ನಿರ್ಮಿತಿ ಕಾಯಕಕ್ಕೆ ಮತ್ತೆ ‘ಸಮಯ ಪರೀಕ್ಷೆ’ಯ ಲಂಗರು ಬೇಕೆ? ನಿರಾಕಾರ ಆವರಣದ ಭಿತ್ತಿಯಲ್ಲಿ ಸ್ವಾಯತ್ತ ಧ್ವನಿಚಿತ್ರಗಳನ್ನು ಅನುಭವಿಸಲೇನು ಅಡ್ಡಿ? ಬೇಕಿಲ್ಲವೇನೊ, ಆದರೆ, ‘ಧ್ವನಿವಿಲಾಸ’ ಮತ್ತು ‘ಧ್ವನಿ ಪ್ರತಿಮೆ’ಗಳ ನಡುವೆ ಒಂದು – ಅದೂ ಅಲ್ಲದ, ಇದೂ ಅಲ್ಲದ ಒಂದು ಪಟ್ಟಿ (ಗ್ರೇ ಏರಿಯ) – ಮಸುಕಿನ ಆವರಣವಿದೆಯಲ್ಲ; ನಾವೆಲ್ಲ ಬಹುತೇಕ ಈ ಆವರಣದ ಪಥಿಕರು, ವಿಳಾಸ ತಪ್ಪಿ ‘ಧ್ವನಿವಿಲಾಸ’ದ ಸೀಮೆಗೆ ನುಗ್ಗುವುದು ಸಹಜ; ವಾಪಾಸು ಬರಲು ಒಂದು ಗಟ್ಟಿ ವಿಳಾಸ ಬೇಕಲ್ಲ! ಇದೆಲ್ಲ ಗೊತ್ತಿದ್ದೇ ನೀವು ಡ್ರೈವರ್ ಶಿವನನ್ನು ಅಂಥಾ ಒಂದು ವಿಳಾಸ ಮಾಡಿಕೊಂಡಿದ್ದೀರಿ ಎನ್ನುವುದು ವಿದಿತ. ಆದರೆ ನಿಮ್ಮ ಶಿವನನ್ನು ನೀವು ವಾಚ್ಯಾರ್ಥವನ್ನು ವಿಕೃತಗೊಳಿಸಿರುವ contemporary historyಯಿಂದ ಮುಕ್ತಗೊಳಿಸಿ ಬಿಟ್ಟಿದ್ದೀರಿ. ಅವನು ನಿಮ್ಮ ಹಾಗಲ್ಲ, ನಿಜಕ್ಕೂ ಒಬ್ಬ ಪ್ಲೆಬಿಯನ್ – ಇದರಲ್ಲಿ ತಕರಾರಿಲ್ಲ; But he is a plebian who doesn’t have a stake in tha part of the society – in our case region of Bellary – under focus. ಮಸಲ ಶಿವ ಬಳ್ಳಾರಿ ಪ್ರದೇಶದಲ್ಲಿ ಸಾಂಸಾರಿಕ ನಂಟು ಅನಿವಾರ್ಯವಾಗಿರುವ ಒಬ್ಬ ಸಂಸಾರಸ್ಥ ಎಂದುಕೊಂಡುಬಿಟ್ಟರೆ, ಅವನಾಡುವ ಮಾತುಗಳೆಲ್ಲ ಸಾಮಾನ್ಯ ಸಂಸಾರಸ್ಥನ ವಿವೇಕದ ಮಾತುಗಳ ಹಾಗೆ ಕೇಳದೆ, ದೇಶವಾರಿ moral verboseನ ಧ್ವನಿ ಕೇಳತೊಡಗುತ್ತದೆ.

ನಾನು ಹುಟ್ಟಿದ್ದು, ಬೆಳೆದದ್ದು ನನ್ನ ಊರು ಎಂದು ನನ್ನ ಹೆಸರಿಗೆ ‘ಕೆ’ ಆಗಿ ಲಗತ್ತಿಸಿರುವ ಊರು ಇರುವುದು ಎಲ್ಲ ಬಳ್ಳಾರಿ ಜಿಲ್ಲೆಯಲ್ಲಿ. ಹಾಗಾಗಿ ನನ್ನ ಬದುಕು ಕಂಡ contemporary historyಯನ್ನು ಸ್ವಲ್ಪ ಹೇಳಬಹುದು. ನಮ್ಮ ಜಿಲ್ಲೆಯ ಊರುಗಳು ಮೊದಲು ಹಣದ ರುಚಿ ಕಂಡದ್ದು ಗಣಿಗಾರಿಕೆಯಿಂದ ಮಾತ್ರವಲ್ಲದೆ ಆಧುನಿಕ ಕೃಷಿಯಿಂದಲೂ ಹೌದು. ೧೯೬೦ರ ದಶಕದಲ್ಲಿ ಭರಾಟೆಗೆ ಬಂದ ಹೈಬ್ರಿಡ್ ತಳಿಯಾಧಾರಿತ ಕೃಷಿ, ತುಂಗಭದ್ರ ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶದಲ್ಲಿಯ ನೀರಾವರಿಯ ಕಾರಣವಾಗಿ ರೂಢಿಗೆ ಬಂದ ಭತ್ತ, ಕಬ್ಬಿನ ಕೃಷಿಗಳಿಂದ ಇಲ್ಲಿ ಸಂಪತ್ತಿನ ಮಹಿಮೆ ಹಬ್ಬಿಕೊಂಡಿತು. ಲಾಭದಾಯಕ ನೀರಾವರಿ ಕೃಷಿಯನ್ನು ಕಂಡು ಆಂಧ್ರಪ್ರದೇಶದಿಂದ ಸಾಹುಕಾರರು ಇಲ್ಲಿಗೆ ಬಂದು, ಗದ್ದೆಗಳನ್ನು ಖರೀದಿಸಿ, ಟೆನೆನ್ಸಿ ಸೀಲಿಂಗಿನಿಂದ ನುಣುಚಿಕೊಳ್ಳುವ ಕಲೆಯರಿತ ಭೂಮಾಲೀಕರಾದರು. ಕಬ್ಬಿನ ಬೆಳೆಯಿಂದಾಗಿ ಸಕ್ಕರೆ ಕಾರ್ಖಾನೆಗಳು, ಹೆಂಡ ಸಂಸ್ಕರಿಸುವ ಫ್ಯಾಕ್ಟರಿಗಳೂ ಬಂದವು. ಈ ಜಿಲ್ಲೆಯ ಗಣಿಸಂಪತ್ತನ್ನು ಕಂಡು ಕೊಂಡು ಗಣಿಗಾರಿಕೆಯನ್ನು ಶುರುಮಾಡಿದ ಕೇಂದ್ರ ಸರಕಾರದ MMDC, ಖಾಸಗಿ ಗಣಿಗಾರಿಕೆ ಶುರುಮಾಡಿದ ರಾಜಸ್ಥಾನದಿಂದ ಬಂದ ಉದ್ಯಮಿಗಳು ಇಲ್ಲಿಯ ಜನರಿಗೆ ಮೇಸ್ತ್ರಿ ಕೆಲಸ, ಕೂಲಿ ಕೆಲಸ ಸೃಷ್ಟಿಸಿದರಷ್ಟೆ; ಆದರೆ ಘೋರ್ಪಡೆ ಗಣಿಗಾರಿಕೆಯ ಜೊತೆ ಸಂಸ್ಕೃರಣ ಕೈಗಾರಿಕೆಯನ್ನು ಪ್ರಾರಂಭಿಸಿ ಒಂದು ಕೈಗಾರಿಕೆ ಸಮಾಜದ ಛಾಪನ್ನು ಈ ಊರುಗಳಿಗೆ ಒತ್ತಿದ. ಕೈಗಾರಿಕೆಯಲ್ಲಿನ ಶ್ರೇಣೀಕೃತ ನೌಕರಿಗಳ ಜೊತೆ, ಘೋರ್ಪಡೆ ಶುರುಮಾಡಿದ ಶಾಲೆ, ಕಾಲೇಜು, ಆಸ್ಪತ್ರೆಗಳು ಆತನನ್ನು ಜನ ಯಜಮಾನ ಎಂದು ಸಮ್ಮತಿಸಲು ದಾರಿ ಮಾಡಿದವು. ಈ ಘೋರ್ಪಡೆ, ಈ ಯಜಮಾನಿಕೆಯ ವತಿಯಿಂದ ಒಂದು ಪಾಳೇಗಾರಿಕೆಯನ್ನೇ ಕಟ್ಟಿಕೊಂಡು, ಮಂತ್ರಿಯಾಗಿದ್ದಾಗಲೇ ಭೂಹಂಚಿಕೆಯ ಕಾನೂನುಗಳಿಂದ ಸಾಮ – ದಂಡಗಳ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದ್ದನ್ನೂ ಸಂಡೂರಿನ ಭೂಹೀನರು ಸೋಶಿಯಲಿಸ್ಟರ ನಾಯಕತ್ವದಲ್ಲಿ ಈ ಪಾಳೇಗಾರಿಕೆಗೆ ಸವಾಲು ಹಾಕಿದ್ದನ್ನೂ ನಾವು ಮರೆಯಬಾರದು.

೧೯೬೦ರ ದಶಕದಲ್ಲಿ ಇಲ್ಲಿ ಸಾರ್ವಜನಿಕ ಉದ್ಯಮವಾಗಿ ಮಧ್ಯಮ ಗಾತ್ರದ ಸ್ಟೀಲ್ ಪ್ಲಾಂಟ್ ಕೂಡ ಬಂತು. ೧೯೭೦ರಲ್ಲಿ ಇಂದಿರಾಗಾಂಧಿ ಸಾರ್ವಜನಿಕ ವಲಯದ ಭಾರಿ ಗಾತ್ರದ ವಿಜಯನಗರ ಉಕ್ಕು ಕಾರ್ಖಾನೆಯ ಕನಸನ್ನೂ ಈ ಊರುಗಳಲ್ಲಿ ಬಿತ್ತಿಹೋದರು. ಮುಂದಿನ ೨೫ ವರ್ಷಗಳ ಕಾಲ ಅದು ಎಲ್ಲ ನಮೂನೆಯ ರಾಜಕೀಯ ಪಕ್ಷಗಳ ಅಂಜೆಂಡವಾಗಿತ್ತು ಹಾಗು ಕಮ್ಯುನಿಸ್ಟರು ಇದಕ್ಕಾಗಿ ರಾಜ್ಯವ್ಯಾಪಿ ಚಳುವಳಿಯನ್ನೂ ನಡೆಸಿದರು. ಈ ಸಾಮಾನ್ಯ ಜ್ಞಾನದ ವಿರಗಳನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ, ಈ ಊರುಗಳು ಆಧುನಿಕ ಕೃಷಿಯನ್ನು, ಗಣಿಗಾರಿಕೆಯ ಉದ್ದಿಮೆಯನ್ನು, ತತ್ಸಂಬಂಧಿ ಕೈಗಾರಿಕೆಗಳನ್ನೂ ತಮ್ಮ ಸುಖ, ಸಮೃದ್ಧಿಯ ಸಾಮುದಾಯಿಕ ಸಂಕೇತ ಎಂದು ನಂಬಿಕೊಂಡು ಬಿಟ್ಟಿವೆ. ಇಲ್ಲಿ ಕೃಷಿಯನ್ನು, ಕೈಗಾರಿಕೆಯನ್ನು ಜನ ಎರಡು ಭಿನ್ನವಾದ ಅನ್ನದ ಸಾಧನಗಳು ಎಂದೋ, ಎರಡು ಒಡೆದು ಕಾಣುವ ರೀತಿಯ ಸಾಮಾಜಿಕ ಲಕ್ಷಣಗಳನ್ನು ಹೊಂದಿವೆ ಎಂದೋ ಕಾಣುವುದಿಲ್ಲ; ಈ ವೈಚಿತ್ರ್ಯ ಯಾರಿಗಲ್ಲದಿದ್ದರೂ ಕಮ್ಯುನಿಸ್ಟರಿಗೆ ದೊಡ್ಡ ತಲೆನೋವು ಎಂದು ನಾವು ಹಾಸ್ಯ ಮಾಡುತ್ತಿದ್ದದ್ದು ಉಂಟು. ‘ಹಂಪಿಯ ಜೊತೆ, ಅಣೆಕಟ್ಟು ಹಾಗೂ ಗಣಿಗಾರಿಕೆಯ ವಿರುದ್ಧ ಚಳುವಳಿ ಮಾಡದೇ ಇರುವ ಜನರು ವಾಸಿಸುವ ಜಗತ್ತಿನ ಏಕೈಕ ಪ್ರದೇಶವೆಂದೂ ನಮ್ಮೂರು ಖ್ಯಾತವು!’ಎಂದು ಇತ್ತೀಚಿಗೆ ನಾನು ಸ್ನೇಹಿತರ ಹತ್ತಿರ ಹೇಳುತ್ತಿರುವುದು ಉಂಟು. ಎಗ್ಗಿಲ್ಲದ ಗಣಿಗಾರಿಕೆ, ಅದರಿಂದ ಹರಿಯುತ್ತಿರುವ ಕೋಟ್ಯಾಂತರ ರೂಪಾಯಿ ಹಣ ಈಗಿನ ೧೦ ವರ್ಷಗಳ ವಿದ್ಯಮಾನ ಎನ್ನುವುದು ಸರಿ. ಆದರೆ ಈ ವಿದ್ಯಮಾನಕ್ಕೆ ನಮ್ಮ ಊರಿನ ಜನ ಪ್ರತಿಕ್ರಿಯಿಸುವ ರೀತಿ ನೋಡಿ. ಜನ ತಮ್ಮ ಸ್ವಾಮ್ಯದ ಪುಡಿ ಜಾಗಗಳನ್ನು ಅಗೆದಗೆದು, ಅಗ್ಗದ ಅದಿರನ್ನು ಹೆಕ್ಕಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ, ಲಾರಿಗಳಿಂದ ದಾರಿಗುಂಟ ಚೆಲ್ಲಿದ ಅದಿರಿನ ತುಣುಕುಗಳನ್ನು ಮುಗಿಬಿದ್ದು ಹೆಕ್ಕಿ ಒಂದು ಕೆ.ಜಿ. ಯಾದರೆ ಒಂದು ಕೆ.ಜಿ. ಎಂದು ಮಾರುತ್ತಿದ್ದಾರೆ. ಸಾಲಸೋಲ ಮಾಡಿ ಲಾರಿಗಳನ್ನು, ಟಿಪ್ಪರ್‌ಗಳನ್ನು ಕೊಂಡು, ನೋಡು ನೋಡುತ್ತಿದ್ದ ಹಾಗೆ ದುಡ್ಡು ಮಾಡುತ್ತಿರುವ ಹುಡುಗರು ಈಗ ಊರವರ ಕಣ್ಮಣಿಗಳು. ವಿಪರ್ಯಾಸಗಳು ಇಲ್ಲಿಗೇ ನಿಲ್ಲುವುದಿಲ್ಲ. ಸಾರ್ವಜನಿಕ ವಲಯದ ಉಕ್ಕು ಕಾರ್ಖಾನೆಗೆ ೨೫ ವರ್ಷದಿಂದ ಹೋರಾಡಿದರೂ ಏನು ಆಗಲಿಲ್ಲ; ಆದರೆ ಐದೇ ವರ್ಷಗಳಲ್ಲಿ ಮೂರು ಭಾರೀ ಖಾಸಗಿ ಉದ್ಯಮಗಳು ಬಂದಿವೆ. ಸಾರ್ವಜನಿಕವಲಯದ ಒಂದೇ ಒಂದು ಮಧ್ಯಮಗಾತ್ರದ ಸ್ಟೀಲ್ ಪ್ಲಾಂಟ್ ರೋಗಗ್ರಸ್ತ ಎಂದು ಘೋಷಿತವಾಗಿ, ಬಹುಶಃ ಈ ತಿಂಗಳಲ್ಲಿ ಸಂಪೂರ್ಣ ಮುಚ್ಚಿ ಹೋಗುತ್ತದೆ. ಘೋರ್ಪಡೆಯ ಕಾರ್ಖಾನೆಗಳಿಂದ ಸಾವಿರಾರು ಜನ ಕೆಲಸ ಕಳೆದುಕೊಂಡು ಕೂತಿದ್ದಾರೆ. ಪರಿಸರವಂತೂ ಸರಿಯೇ. ಇನ್ನು ಹತ್ತು ವರ್ಷ ಹೀಗೆ ಮುಂದುವರೆದರೆ ಹೊಸಪೇಟೆಯಿಂದ ಬಳ್ಳಾರಿಯವರೆಗಿನ ಪ್ರದೇಶ ಇಡೀ ಜಿಲ್ಲೆಯ ಜನರನ್ನು ಒಟ್ಟಾಗಿ ಹುಗಿದರೂ ಮತ್ತಷ್ಟೂ ಜಾಗ ಮಿಕ್ಕಿದ ಗುಂಡಿಯಾಗುತ್ತದೆ. ನಮ್ಮೂರ ಜನ ಶಾಕ್ ಆಗದೇ ಇರುವುದಕ್ಕೆ ಕಾರಣವೇನು? ಹಿಂದಿನ ಬೆಳವಣಿಗೆಯ ಉಚ್ಛ್ರಾಯವೆಂದು ಖುಷಿಗೊಂಡಿದ್ದಾರಾ? ಗಾಳಿ ಬಂದಾಗ ತೂರಿಕೊಳ್ಳಬೇಕು ಎನ್ನುವ ಜಾಣತನವಾ? ‘ಸಿರಿಯ ಗರವೇ’ ಊರಿನ ಗುಣವಾದರೆ ಆ ಊರಿನ ಜನ ಸಮುದಾಯವನ್ನು ಕಲ್ಪಿಸಿಕೊಳ್ಳುವ ಬಗೆ ಯಾವುದು? ಈ ಸೂಕ್ಷ್ಮ ದುರಂತಗಳನ್ನು ಹಿಡಿದಿಡುವ ಧ್ವನಿ ಪ್ರತಿಮೆ ಯಾವುದು?

ಸೆಪ್ಟಂಬರ್ ೧೧

ಮೊದಲಿಗೆ ನನಗೆ ಇಷ್ಟವಾಗದ ನಿಮ್ಮ ಸಾಲುಗಳ ಬಗ್ಗೆ ನೇರವಾದ ಭಿನ್ನಮತ:

“ಅಮೆರಿಕದ ರಾಜಕೀಯ ನೀತಿಯನ್ನು ಟೀಕಿಸುವ ಸದ್ಗೃಹಸ್ಥರೇ ತಮ್ಮ ದೇಶದಲ್ಲಿ ಕಷ್ಟದ ಜೀವನ ನಡೆಸಬೇಕಾಗಿ ಬರುವುದನ್ನು ಸಹಿಸಿಕೊಳ್ಳಲಾರರೇನೋ? ಅಮೆರಿಕದಲ್ಲಿ ಆದಾಯತೆರಿಗೆ ಹೆಚ್ಚಿಸುವಂತಿಲ್ಲ; ಬ್ರೆಡ್ಡು ಹಾಲಿನ ಬಲೆ ಏರುವಂತಿಲ್ಲ; ಪೆಟ್ರೋಲ್ ಬೆಲೆಯಂತೂ ಏರುವುದು ಸಾಧ್ಯವೇ ಇಲ್ಲ. ಸಾಯಲೇ ಬೇಕಾದ ಇಳಿವಯಸ್ಸಿನಲ್ಲಿ ಯಾರೂ ಸಾಯುವಂತಿಲ್ಲ. ಮುದಿಯಾಗುವುದು ತೋರದಂತೆ ಮಾಡುವ ಅಮರರಾಗುವ ಕನಸಿನ ಭ್ರಮಾದೇವಲೋಕ ಆಧುನಿಕ ಅಮೇರಿಕಾ.” ಇದು ಒಂದು ಗ್ರಾಸ್ ಸ್ಟೇಟ್ಮೆಂಟ್; ನೀವು ಅಲ್ಲಿನ ಪ್ರಭುತ್ವದ ಹಣವಂತರ ಪರ ಆಡಳಿತಕ್ಕೂ, ಈಗಲೋ ಆಗಲೋ ಎನ್ನುವಂತೆ ಉಳಿದುಕೊಂಡಿರುವ ‘ಸೋಷಿಯಲ್ ಸೆಕ್ಯುರಿಟಿ ಮೆಷರ್ಸ್‌’ಗೂ ಅಂಥಾ ವ್ಯತ್ಯಾಸ ಏನೂ ಇಲ್ಲ ಎನ್ನುವ ಹಾಗೆ ಮಾತನಾಡುವುದು, ಕನಿಷ್ಟ ನನ್ನ ಪ್ರಕಾರ ತಪ್ಪು. ನೀವು ಅಮೆರಿಕಾದ ಭಿನ್ನಮತೀಯರ ಧಾರಣ ಶಕ್ತಿಯನ್ನು ಹೀಗೆ ಹೃಸ್ವಗೊಳಿಸುವುದನ್ನು ನಾನು ಸುತಾರಾಮ್ ಸಹಿಸುವುದಿಲ್ಲ. ಶಶಿ ತಾರೂರನ ಕಾಸ್ಮೋಪಾಲಿಟನ್ಯಾಸಮ್ಮನ್ನು ಯಾರಾದರೂ ಪಶ್ಚಿಮದವರು ಒಟ್ಟಾಗಿ ಭಾರತದ ಹಿಂದುತ್ವ ವಿರೋಧಿಗಳಿಗೆ ಆರೋಪಿಸಿದರೆ ಹೇಗಿರುತ್ತದೆ? ಅಥವಾ ನಿಮ್ಮ ಹಾಗೆ ನನಗೂ ತುಂಬ ಇಷ್ಟವಾದ ‘ಕಾಮನ್ ಸ್ಕೂಲ್ಸ್’ನ್ನೇ ತೆಗೆದುಕೊಳ್ಳಿ; ಅದಕ್ಕೆ ಸರಕಾರ ಹಣ ಖರ್ಚು ಮಾಡಬೇಕು ಎಂದು ವಾದಿಸುವವರು ನಾವು; ಹಾಗಾದರೆ ಸಮಾಜ ಕಲ್ಯಾಣ ಯೋಜನೆಯ ಇತರ ಖರ್ಚನ್ನು ಕಡಿತಗೊಳಿಸಿ ಈ ಯೋಜನೆ ಬರಲಿ ಎಂದರೆ ನಾವು ಏನನ್ನುತ್ತೇವೆ? ಅಮೇರಿಕಾದ ರಾಜಕೀಯ ಅರ್ಥಶಾಸ್ತ್ರದ ಪೂರ್ಣ ವಿವೇಚನೆಯ ಮೂಲಕ ಇಂಥಾ ಸಂಗತಿಗಳನ್ನು ನಾವು ನೋಡುವುದು ಉತ್ತಮ ನಿಮ್ಮ ಬರಹದ ಉದ್ದೇಶ ಅದಲ್ಲವಾದ್ದರಿಂದ ಇದು ತೀರಾ ಅನವಶ್ಯಕವಾದ ತೆಳು ನಿಲುವು.

ನಿಮ್ಮ ಬರಹದಲ್ಲಿ ಅನೇಕ ರೂಪಕಗಳು ಒಟ್ಟಿಗೆ ಕಿಕ್ಕಿರಿದುಬಿಟ್ಟಿವೆ. ಒಂದು ಗಾಢವಾದ (ಅಡೆನ್‌ನ ಕವನ) ರೂಪಕ ನಿರೂಪಣೆಯಿಂದ ಶುರುವಾದದ್ದು, ಸಾಂಗತ್ಯ ಮೀರಿದಂತಹ ಹಲವು ರೂಪಕಗಳ ಕಡೆ ಚಾಚಿಕೊಂಡಿದೆ. ಬಹುರೂಪಕತೆಗೆ ತೋರಿಕೆಯ ಸಾಂಗತ್ಯಗಳನ್ನು ಕೊಟ್ಟು ನಮ್ಮ ಅಂತರಂಗದ ಗೊಂದಲಗಳನ್ನು ಮರೆಮಾಚಬಾರದು ಎಂಬ ನಿಮ್ಮ ನಿಲುವನ್ನು ನಾನು ಒಪ್ಪುವೆ. ಆದರೆ ವೈರುಧ್ಧ್ಯಮಯವಾದ ಸಂಗತಿಗಳು ಹೆಣೆದುಕೊಳ್ಳುವುದಕ್ಕೆ ನಾವು ಮೋಚಿಯ ಹಾಗೆ ಬಡಿದದ್ದನ್ನೇ ಬಡಿಯಬೇಕು, ಒಂದು ಹದ ಬರುವವರೆಗೆ. ತೀವ್ರವಾದ ಉತ್ಸಾಹದಿಂದ. ಆಡೆನ್‌ನ ಕವನದ ವಿವೇಚನೆಯ ಎಳೆಕಡಿದುಕೊಂಡು, ಉಳಿದ ಪ್ರಸ್ತಾವಿತ ರೂಪಕಗಳ ಜೊತೆ ಹೆಣೆದುಕೊಳ್ಳದೆ, ಜೋತು ಬಿದ್ದಿರುವ ಹಾಗೆ ಕಾಣುತ್ತದೆ. ಐ ವಿಷ್ ದಟ್ ಯು ಪ್ಲೇಸ್ ಲಿಟ್ಲ್‌ಬೈ ಲಿಟ್ಲ್‌ದ್ಯಾನ್ ಲೀಪ್ ಇನ್ ಮೆನಿ ಡೈರಕ್ಷನ್ಸ್. ಇದನ್ನು ಸದ್ಯದ ವಿದ್ಯಮಾನಗಳಿಗೆ ತೀವ್ರವಾಗಿ ಸ್ಪಂದಿಸಿ, ಹೊಸ ಕಾಣ್ಕೆಯನ್ನು ಕಾಣುವ ನಿಮ್ಮ ತಹತಹಿಕೆಯನ್ನು ತುಂಬ ಗೌರವದಿಂದ ಕಂಡು ಹೇಳುತ್ತಿದ್ದೇನೆ.

ಉತ್ತರ ಕೊರಿಯಾ ಜೊತೆ ರಾಗಿ ಸಂಬಂಧ

ಆಧುನಿಕತೆ – ಪರಂಪರೆಗಳ ಕುರಿತಾಗಿ ಅನಂತಮೂರ್ತಿ ಅತಿಯಾದ ನಿಲುವುಗಳನ್ನು ತೆಗೆದುಕೊಂಡವರಲ್ಲ. ಅವರು ಪರಂಪರೆಯನ್ನು ನೆಚ್ಚಿಕೊಂಡ ಜೀವನಕ್ರಮಗಳ ಸಮ್ಮುಖ ತಮ್ಮನ್ನು ಕ್ರಿಟಿಕಲ್ ಇನ್‌ಸೈಡರ್ ಎಂದು ಗುರುತಿಸಿಕೊಳ್ಳುತ್ತಾರೆ. ಹಾಗೆಯೇ ಪರಪಂರೆಯಿಂದ ಬಂದ ಶಠ ವಾದಗಳನ್ನು ಆಧುನಿಕ ವಿಮೋಚನಾ ವಿಚಾರಗಳ ಮೂಲಕವೂ, ಆಧುನಿಕ ವೈಚಾರಿಕತೆಯ ದರ್ಪ – ಅಹಂಕಾರಗಳನ್ನು ಪರಂಪರೆಯಿಂದ ಒದಗಿ ಬರುವ ಜೀವನ ಕಾಣ್ಕೆಗಳ ಮೂಲಕವೂ ನೀಗಿಕೊಳ್ಳುವ ಒಂದು ಮಾರ್ಗದ ಹುಡುಕಾಟವೇ ಲೇಖಕನಾಗಿ ತಮ್ಮನ್ನು ಪೊರೆಯುತ್ತಿದೆ ಎಂದು ಹಲವು ಬಗೆಗಳಲ್ಲಿ ಅವರು ಹೇಳುತ್ತಿದ್ದಾರೆ. ಮತ್ತು, ಈ ನಮೂನೆಯ ಪರಾಮರ್ಶೆಗೆ ಅನಂತಮೂರ್ತಿ ಆತ್ಮಕಥನಾ ಮಾರ್ಗವನ್ನು ಆಯ್ದುಕೊಳ್ಳುವುದು ಕುತೂಹಲಕರ. ಕುಶಲ ಸಂಸಾರಸ್ಥರು ಹಾಲಿನಿಂದ ಬೆಣ್ಣೆಯನ್ನೂ ಮಜ್ಜಿಗೆಯನ್ನೂ ಪಡೆದ ಹಾಗೆ, ತಮ್ಮ ಬದುಕನ್ನು ಕಡೆದು ಪರಂಪರೆ – ಆಧುನಿಕತೆಗಳ ಸಹಜ ಸಹಯೋಗವನ್ನು ಪಡೆಯುವ ಆಕಾಂಕ್ಷೆಯುಳ್ಳ ಅವರ ವಿಚಾರದ ಅಶ್ವಮೇಧದ ಕುದುರೆ ಬಡಪೆಟ್ಟಿಗೆ ಬಗ್ಗುವಂತಹದಲ್ಲ. ಮೇಲಾಗಿ, ಇಂಥಾ ವಾಗ್ವಾದಗಳಲ್ಲಿ ಅನಂತಮೂರ್ತಿ ಪಳಗಿದ ಜಟ್ಟಿ; ಸತ್ವಶಾಲಿ ರೂಪಗಳ ಮೂಲಕ ಚಿತ್ತು ಹಾಕುವ ಪಟ್ಟುಗಳನ್ನು ಬಲ್ಲ ಜಟ್ಟಿ! ಹಾಗಾಗಿ, ಕೊಂಚ ನಾಟಕೀಯತೆಯಿಂದಲೇ ನನ್ನ ತಕರಾರನ್ನು ಎತ್ತುತ್ತೇನೆ.

ಅನಂತಮೂರ್ತಿಯವರು ಕಮ್ಯುನಿಸ್ಟ್ ಆಡಳಿತವಿರುವ ಉತ್ತರ ಕೊರಿಯಾದಲ್ಲಿ ಬೌದ್ಧ ವಿಹಾರಗಳು ಹಾಗು ಅವುಗಳ ಉಸ್ತುವಾರಿ ನೋಡಿಕೊಳ್ಳುವ ಭಿಕ್ಷುಗಳು ತಲುಪಿರುವ ದೈನೇಸಿ ಸ್ಥಿತಿಯನ್ನು ಕಂಡು, ತಮಗೆ ಅನ್ನಿಸಿದ್ದನ್ನು ಹೀಗೆ ವಿವರಿಸಿದ್ದಾರೆ;

ನನಗೆ ಬಡಪಾಯಿಯಂತೆ ಕರುಣಾಜನಕನಾಗಿ ಕಂಡ ಬೌದ್ಧ ಭಿಕ್ಷು ಮತ್ತು ಅವನ ಹಿರಿಯರು ಹಿಂದೆ ಹೇಗಿದ್ದಿರಬಹುದೆಂದು ಊಹಿಸಿದೆ. ಪ್ರಾಯಶಃ ಸುತ್ತಮುತ್ತಲಿನ ಗ್ರಾಮದ ಎಲ್ಲರೂ ಅವರ ಗೇಣೀದಾರರಾಗಿದ್ದಿರಬೇಕು. ಅವರು ಗೇಣಿ ಕೊಡದಿದ್ದರೆ ಅವರನ್ನು ಶಿಕ್ಷಿಸುವ ಅಧಿಕಾರ ಭಿಕ್ಷುಗಳಿಗೆ ಇದ್ದಿರಬೇಕು. ಒಂದು ಮಠದ ಜಗತ್ತಿನಿಂದ ಬಂದ ನನಗೆ ಹೇಗೆ ಮಠದಲ್ಲಿ ನಿತ್ಯದ ಪೂಜೆಯ ಜತೆಗೇ ನಿತ್ಯದ ಜಪ್ತಿಗಳೂ ನಡೆಯುತ್ತಿದ್ದುವೆಂಬುದು ಇನ್ನೂ ನೆನಪಿದೆ. ಆದರೂ ನನಗೆ ಬುದ್ಧ, ಕ್ರಿಸ್ತ, ಪೈಗಂಬರ, ಶಂಕರ, ಆನಂದತೀರ್ಥ, ರಾಮಾನುಜ, ರಮಣ, ಪರಮಹಂಸಎಲ್ಲರೂ ಬೇಕು. ಅವರ ವಿರೋಧಿಗಳಾದ ಮೆಟೀರಿಯಲಿಸ್ಟರಿಂದಲೂ ಮುಕ್ತರಾಗಿ ಬೇಕು; ಅವರ ಕಪಟ ಭಕ್ತರಿಂದಲೂ ಮುಕ್ತರಾಗಿ ಬೇಕು. ಅವರೇ ಆಗಿಬೇಕು; ಅವರ ಕಾಲದವರೂ ಆಗಿ ಬೇಕು; ನಮ್ಮಕಾಲಕ್ಕೆ ಸಲ್ಲುವವರೂ ಆಗಿರಬೇಕು.

ಇದೇ ಅರ್ಥ ಧ್ವನಿಸುವ ಸಾಲುಗಳನ್ನು ಅನಂತಮೂರ್ತಿಯವರ ಕಳೆದ ಎರಡು ದಶಕಗಳ ಅನೇಕ ಬರಹಗಳಲ್ಲಿ ನಾವು ಕಾಣಬಹುದು. ಈ ಸಾಲುಗಳನ್ನು ಕಾಲಕ್ರಮದಲ್ಲಿ  ಹತ್ತಿರದ್ದು ಎಂಬ ಕಾರಣಕ್ಕಾಗಿಯಲ್ಲದೆ, ತಮ್ಮ ಚಿಂತನೆಯ್ಲಲಿ ಅವರು ವ್ಯಕ್ತಪಡಿಸುತ್ತಿರುವ ವೈಚಾರಿಕ ಸಂಕಲ್ಪಕ್ಕೆ ಸಂಕಲ್ಪಕ್ಕೆ (ಇಂಟೆಲೆಕ್ಟುಯಲ್ ವಿಲ್ – ವಾಸ್ತವ ಬದಲಾಗದು ಎನ್ನುವಂತಹ ಸ್ಥಿತಿಯಲ್ಲಿ, ವಾಸ್ತವವನ್ನು ಭಿನ್ನ ಬಗೆಯಲ್ಲಿ ಕಂಡು, ಬದಲಾವಣೆಯ ಒಳದಾರಿಗಳನ್ನು ಅರಸುವ ಬುದ್ಧಿಯ ಛಲ) ಉದಾಹರಣೆಯಾಗಿ ಮಾತ್ರ ತೆಗೆದುಕೊಂಡಿದ್ದೇನೆ. ಅನಂತಮೂರ್ತಿಯವರ ವಿಚಾರಧಾರೆಯಲ್ಲಿ ಇದು ತಕ್ಷಣಕ್ಕೆ ಹೊಳೆದು ಕರಗಿ ಬಿಡುವ ವಿಲಾಸದ ಮಾತಲ್ಲ. ಮೇಲಿನ ಸಾಲುಗಳಲ್ಲಿ ಪ್ರಕಟವಾಗಿರುವ ವಿಚಾರ, ಆಧುನಿಕನಾಗಿದ್ದು ಕೊಂಡೇ ಪರಂಪರೆಯ ಚೈತನ್ಯವನ್ನು ಆವಾಹಿಸಿಕೊಳ್ಳುವ ಅವರ ವೈಚಾರಿಕ ಸಂಕಲ್ಪದ ಹಂಬಲವಾಗಿ ಎನ್ನುವುದರ ಬಗ್ಗೆ ನನಗೆ ಯಾವ ಅನಮಾನವೂ ಇಲ್ಲ. ಈಗ ಅನಂತಮೂರ್ತಿಯವರ ಕಾಣ್ಕೆಯನ್ನು ಸ್ವಲ್ಪ ತಿರುಚಿ ಹೀಗೆ ಬರೆಯಬಹುದು (ಅನಂತಮೂರ್ತಿಯವರ ಉತ್ತರ ಕೊರಿಯಾ ಪ್ರವಾಸದಲ್ಲಿ, ಅವರ ಜೊತೆ ಇರುವವರು ಅಲ್ಲಿನ ಕಮ್ಯುನಿಸ್ಟ್ ಪ್ರಭುತ್ವ ನಿಯೋಜಿಸಿರುವ ಇಬ್ಬರು ಮಾರ್ಗದರ್ಶಿಗಳು);

ನನಗೆ ತಿಂದುಂಡು ಆರೋಗ್ಯವಂತರಂತೆ ಕಾಣುವ ಹಾಗು ಈಗ ಅಧಿಕಾರಸ್ಥರ ಬೆಂಬಲವಿರುವ ಇಬ್ಬರು ಮಾರ್ಗದರ್ಶಿಗಳು ಮತ್ತು ಅವರ ಹಿರಿಯರು ಹೇಗಿದ್ದಿರಬಹುದು ಎಂದು ಊಹಿಸಿದೆ. ಪ್ರಾಯಶಃ ಅವರ ಕುಟುಂಬದವರು ಹಾಗೂ ಅವರ ಸುತ್ತಮುತ್ತಲಿನ ಗ್ರಾಮದ ಎಲ್ಲರೂ ಭಾರಿ ಜಮೀನುದಾರರ ಗೇಣಿದಾರರೋ ಜೀತದಾಳುಗಳೋ ಆಗಿದ್ದಿರಬೇಕು. ಜಮೀನುದಾರರಿಗೆ ಇವರನ್ನು ನಿರಂಕುಶವಾಗಿ ದುಡಿಸಿಕೊಳ್ಳುವ ಅಧಿಕಾರವೂ ಇದ್ದಿರಬೇಕು. ನನ್ನೂರಿನ ಸುತ್ತಮುತ್ತಲಿನ ಜಮೀನುದಾರರ ಅಧಿಕಾರ ಜಗತ್ತನ್ನು ಕಂಡಿರುವ ನನಗೆ ಯಾವ ನಮೂನೆಗಳಲ್ಲಿ ನಿತ್ಯದ ದಬ್ಬಾಳಿಕೆಗಳು ನಡೆಯುತ್ತಿದ್ದುವೆಂಬುದು ಇನ್ನೂ ನೆನಪಿದೆ. ಕಾರಣವಾಗಿಯೇ ನನಗೆ ಮಾರ್ಕ್ಸ್, ಲೆನಿನ್, ಸ್ಟ್ಯಾಲಿನ್, ಮಾವೋ, ಕಿಮ್ಸಾಂಗ್, ನಂಬೂದ್ರಿಪಾಡ್, ಚಾರು ಮಜುಂದಾರ್, ದೇವರಾಜ ಅರಸುಎಲ್ಲರೂ ಬೇಕು. ಅವರ ವಿರೋಧಿಗಳಾದ ಭೂಮಾಲಿಕರು, ಕ್ಯಾಪಿಟಲಿಸ್ಟರಿಂದಲೂ ಮುಕ್ತರಾಗಿ ಬೇಕು; ಅವರ ಕಪಟ ಭಕ್ತರಿಂದಲೂ ಮುಕ್ತರಾಗಿ ಬೇಕು. ಅವರೇ ಆಗಿ ಬೇಕು; ಅವರ  ಕಾಲದವರೂ ಆಗಿ ಬೇಕು; ನಮ್ಮ ಕಾಲಕ್ಕೆ ಸಲ್ಲುವವರೂ ಆಗಿರಬೇಕು.

ಈ ಸಾಲುಗಳು ಪ್ರಜ್ಞಾಪೂರ್ವಕ ಅಣಕವಾದರೂ ಸುಳ್ಳನ್ನೇನೂ ಹೇಳುವುದಿಲ್ಲ; ಆದರೆ ಈ ಸಾಲುಗಳು ಧ್ವನಿಸುವುದು ವಾಸ್ತವದ ಅರ್ಧ ಸತ್ಯವನ್ನು ಮಾತ್ರ. ಹಾಗೆಯೇ ಅನಂತಮೂರ್ತಿಯವರ ಸಾಲುಗಳು ಉಳಿದ ಅರ್ಧಸತ್ಯವನ್ನು ಧ್ವನಿಸುತ್ತವೆ ಎಂದಿಟ್ಟು ಕೊಂಡರೂ, ಎರಡನ್ನು ಜೋಡಿಸಿದರೂ ಒಂದು ಪೂರ್ಣ ರೂಪ ಸಿಕ್ಕುವುದಿಲ್ಲ. ಯಾಕೆಂದರೆ, ಎರಡೂ ಒಂದಕ್ಕೊಂದು ತಲೆ ಕೆಳಗಾದ ಚಿತ್ರಗಳು, ಒಟ್ಟಾದರೆ ದಕ್ಕುವುದು ಕ್ರೂರ ಪರಿಹಾಸ. ಕಂಪ್ಯೂಟರ್ ಗ್ರಾಫಿಕ್ಸ್‌ನಲ್ಲಿ ಚಿತ್ರದ ಕಣ ಕಣಗಳನ್ನು ಛಿದ್ರ ಮಾಡಿ, ಡಿಜಿಟಲ್ ರೂಪದಲ್ಲಿ – ಅಂದರೆ ೦ ಮತ್ತು ೧ ರ ತಾರ್ಕಿಕ ಸಮೂಹವಾಗಿ – ಶೇಖರಿಸಿ ಇಟ್ಟುಕೊಳ್ಳುತ್ತಾರಂತೆ; ಆ ಸ್ವರೂಪದಲ್ಲಿ ಚಿತ್ರಗಳನ್ನು ಸಂಗ್ರಹಿಸುವುದರಿಂದಲೇ, ಶೇಖರಿಸಿದ ಡಿಜಿಟಲ್ ಚಿತ್ರದ ತರ್ಕವನ್ನು ಬದಲಾಯಿಸಿ, ಇಚ್ಛಿಸಿದ ರೂಪದಲ್ಲಿ ಚಿತ್ರ ಪಡೆಯಬಹುದಂತೆ. ಹಾಗೆ ಮಾಡಿದರೂ ಅದೊಂದು ಭ್ರಮೆಯೇ ಹೊರತು ವಾಸ್ತವ ಚಿತ್ರವಲ್ಲ. ಅನಂತಮೂರ್ತಿ ಯವರ ಕಥಾನಿರೂಪಣೆಯ ಭಾಗವನ್ನು ಮಾತ್ರ ಓದಿಕೊಂಡರೆ, ಅದರಲ್ಲಿ ಸಾಕಷ್ಟು ಒಳನೋಟಗಳು ಸಿಕ್ಕುತ್ತವೆ. ಅನಂತಮೂರ್ತಿ, ಬಲಪಂಥೀಯರ ಹಾಗೆ, ಸಾಂಸ್ಥಿಕವಾಗಿ ಬೌದ್ಧವಿಹಾರಗಳು ದಬ್ಬಾಳಿಕೆ ಮಾಡುವ ಅಧಿಕಾರ ವ್ಯವಸ್ಥೆಯ ಅವಿಚ್ಛಿನ್ನ ಭಾಗಗಳಾಗಿದ್ದವು ಎನ್ನುವುದನ್ನು ಮುಚ್ಚಿಹಾಕುವುದಿಲ್ಲ. ದಬ್ಬಾಳಿಕೆ ತುತ್ತಾದವರು ಈಗ ಅಧಿಕಾರಹೀನವಾದ ಸಂಸ್ಥೆಗಳಿಗೆ ತೋರುವ ಕಟು ಪ್ರತಿಕ್ರಿಯೆಗಳ ಬಗ್ಗೆ ಹೀಯಾಳಿಕೆಯ ಧೋರಣೆ ತಾಳುವ ಅಸೂಕ್ಷ್ಮತೆಯನ್ನೂ ಅವರು ತೋರುವುದಿಲ್ಲ. ಭೂಹೀನರನ್ನು ಲೌಕಿಕ ಸಂಕೋಲೆಗಳಿಂದ ಮುಕ್ತಗೊಳಿಸಿದ ಕಮ್ಯುನಿಸ್ಟ್ ಕ್ರಾಂತಿಯ ತತ್ವಾಚರಣೆಗಳಿಗೆ, ಬೌದ್ಧಧರ್ಮವು ಲೋಕ ಸಮಾನತೆಯ ಅಧ್ಯಾತ್ಮವನ್ನು ಸಂಚಯಿಸಿಕೊಂಡಿರುವ ಸಿರಿಯಾಗಿ, ತಾನು ನಿರೂಪಿಸಲು ಹೊರಟಿರುವ ಲೌಕಿಕ ಸಮಾನತೆಗೆ ಅಪೂರ್ವ ಸಹಯೋಗವಾಗಿ ಕಾಣದೆ, ಪ್ರತೀಕಾರಕ್ಕೆ ತಕ್ಕುದಾದ ಸಾಂಸ್ಥಿಕ ರೂಪದಲ್ಲಿ ಮಾತ್ರ ಕಾಣುವುದು ಒಂದು ದುರಂತ. ಬೌದ್ಧಧರ್ಮವನ್ನು ಸಾಂಸ್ಥಿಕವಾಗಿ ನಿರ್ವಿಣ್ಣಗೊಳಿಸುವ ಭರದಲ್ಲಿ, ಕಮ್ಯುನಿಸ್ಟ್ ಸಮಾಜಕ್ಕೆ ನಿಜಕ್ಕೂ ಅರ್ಥಪೂರ್ಣ ಅಂತಃ ಚೇತನವನ್ನು ಒದಗಿಸಬಲ್ಲ ಆಧ್ಯಾತ್ಮಿಕ ಪರಂಪರೆಯನ್ನು ನಾಶಮಾಡುತ್ತಿರುವ ಕಮ್ಯುನಿಸ್ಟ್ ಪ್ರಭುತ್ವದ ಅಧಿಕಾರ ದರ್ಪ, ಅದು ಪ್ರತಿನಿಧಿಸುತ್ತಿದ್ದೇನೆ ಎಂದು ಸಾರಿಕೊಳ್ಳುತ್ತಿರುವ ಜನರ ಸಾಮುದಾಯಿಕ ಜೀವನಕ್ಕೆ ಮಾರಕ. ಇವುಗಳನ್ನೆಲ್ಲ ಅನಂತಮೂರ್ತಿ ನಮಗೆ ಕಾಣಿಸುತ್ತಾರೆ. ಆದರೆ, ಈ ಪ್ರಸಂಗ ನಿರೂಪಣೆಗೆ ಉಪಸಂಹಾರದಂತೆ ಅವರು ಕೊಡುವ ಪರಂಪರೆಯ ಕುರಿತಾದ ಸಂಕಲ್ಪದ ವ್ಯಾಖ್ಯಾನದ್ದೇ ಒಂದು ಸಮಸ್ಯೆ.

ಕೊರಿಯಾದ ಕಮ್ಯುನಿಸ್ಟ್ ಪ್ರಭುತ್ವ ಮತ್ತು ಅದನ್ನು ಮನಸಾರೆ ಅನುಮೋದಿಸುವ ಆ ಇಬ್ಬರು ಮಾರ್ಗದರ್ಶಿಗಳು, ಬೌದ್ಧ ಪರಂಪರೆಯನ್ನು ಮೂಲೆಗುಂಪುಮಾಡುವುದೇ ಪ್ರಗತಿ ಎಂಬಂತೆ ವರ್ತಿಸುವುದರ ಸಮ್ಮುಖ ಅನಂತಮೂರ್ತಿ ಪರಂಪರೆಯನ್ನು ಉದ್ದೀಪಿಸಲು ನೀಡುವ ನಾಮಾವಳಿಯೂ ಭಕ್ತನ ಹಾಗೆ ತನ್ನ ಸ್ವಾಮಿಯನ್ನು ಸದ್ಯದ ತುರ್ತಿಗೆ ತಕ್ಕ ಆಕಾರದಲ್ಲಿ ಕಲ್ಪಿಸಿಕೊಳ್ಳುವ ಆಕಾಂಕ್ಷೆಯೂ ಆ ಸನ್ನಿವೇಶದಲ್ಲಿ ಮೆಲೋಡ್ರಾಮ್ಯಾಟಿಕ್ ಗುಣ ಪಡೆದುಕೊಂಡುಬಿಡುತ್ತದೆ. ನಾವು ಸಂಕಷ್ಟ ಒಂದರಲ್ಲಿ ಸಿಲುಕಿ, ದಿಕ್ಕು ಕಾಣದೆ ಇರುವಾಗ ಯಾರಾದರೂ ಅನಿರೀಕ್ಷಿತವಾಗಿ ಒದಗಿ ಆಸರೆ ನೀಡಿದರೆ ಅವರು ದೇವರ ಹಾಗೆ ಬಂದರು ಎನ್ನುತ್ತೇವೆ – ಇದು ಲೋಕ ಸಹಜತೆ. ಅದೇ, ನಮ್ಮ ಸಂಕಷ್ಟಕ್ಕೆ ಲೋಕದ ಆಸರೆಯೇ ಇಲ್ಲ ಎನ್ನುವಾಗ, ಸಾಕ್ಷಾತ್ ದೇವರು ಪ್ರತ್ಯಕ್ಷನಾಗಿ, ಇಡೀ ಸಂಕಷ್ಟದ ಸನ್ನಿವೇಶವನ್ನೇ ತನ್ನ ಪ್ರಭೆಯ ಮೂಲಕ ಕ್ಷುಲ್ಲಕಗೊಳಿಸುವುದು ಮೆಲೋಡ್ರಾಮ್ಯಾಟಿಕ್. ಅನಂತಮೂರ್ತಿಯವರು ಹೇಳುವ ಉದ್ದಂಡ ನಾಮಾವಳಿ ಎಕ್ಲೆಕ್ಟಿಕ್ ಆಗಿದೆ ಎನ್ನುವುದು ನನ್ನ ತಕರಾರು ಅಲ್ಲ. ಆಧುನಿಕ ವಾಸ್ತವಕ್ಕೆ ವೈದೃಶ್ಯವಾಗಿ ಅವರು ಆ ನಾಮಾವಳಿಯ ಮೂಲಕ ಪರಂಪರೆಯ ಪ್ರತಿಮೆಯನ್ನು ಕಟ್ಟಿಕೊಡಲು ಇಚ್ಛಿಸುತ್ತಿದ್ದಾರೆ. ಆದರೆ ಆ ವಾಸ್ತವಕ್ಕೂ ಪರಂಪರೆಯ ಅವರ ಪ್ರತಿಮೆಗೂ ಪ್ರಮಾಣ (ಸ್ಕೇಲ್)ದಲ್ಲಿ ವ್ಯತ್ಯಾಸ ಇದೆ – ಅದು ಸಾಮಾನ್ಯ ಎತ್ತರದ ಮನುಷ್ಯರು ಅಡ್ಡಾಡುವ ವಾತಾವರಣದಲ್ಲಿ ಗಾಳಿ ತುಂಬಿದ ಬೃಹತ್ ಬೊಂಬೆಯನ್ನು ತೇಲಿಸಿ ದಿಗ್ಭ್ರಮೆಗೊಳಿಸುವ ಹಾಗಿದೆ! ಉತ್ತರ ಕೊರಿಯಾದಲ್ಲಿ ನಿತ್ಯ ಜೀವನ ನಡೆಸುತ್ತಲೇ, ಪ್ರಭುತ್ವದ ವರ್ತನೆಗೆ ಪ್ರತಿರೋಧ ತೋರುವ ಬೌದ್ಧರು – ಅವರ ಸಂಖ್ಯೆ ಮುಖ್ಯವಲ್ಲ – ಅವರು ನನ್ನ ಪ್ರಕಾರ ಪರಂಪರೆಗೆ ವಾರಸುದಾರರು. ಅಂತಹವರು ಇರದ ವಾತಾವರಣ ಅಲ್ಲಿದೆ ಎಂದರೆ ಪ್ರಭುತ್ವದ ದರ್ಪಕ್ಕೆ ಸಾಮಾನ್ಯರ ಸಮ್ಮತಿ ಇರುವ ಲಕ್ಷಣವದು. ದರ್ಪಕ್ಕೆ ಸಹಮತ ದುರಂತ, ಅದು ಬರೀ ಆಧುನಿಕತೆಯ ವಾಸ್ತವವಲ್ಲ ಆಧ್ಯಾತ್ಮಿಕತೆಯ ವಾಸ್ತವ ಸ್ಥಿತಿಯೂ ಹೌದು.

ಬರ್ಮಾ ದೇಶವೂ ಬೌದ್ಧರು ಬಹುಸಂಖ್ಯಾತರಾಗಿರುವ ದೇಶವೇ. ಆದರೆ ಅಲ್ಲಿನ ಪ್ರಭುತ್ವದ ನೀಚತನದ ಎದಿರು ನಾವು ಪ್ರತಿರೋಧವಾಗಿ ಕಾಣುವುದು ಆಂಗ್‌ಸಾನ್ ಸೂಕಿಯನ್ನೇ ಹೊರತು ಬುದ್ಧನನ್ನಲ್ಲ. ಆಕೆಯನ್ನು ರೂಪಿಸಿದ ಚಳುವಳಿ ಇಲ್ಲದಿದ್ದಲ್ಲಿ ಯಾವ ಬೌದ್ಧಧರ್ಮ, ಯಾವ ಆಧ್ಯಾತ್ಮಿಕತೆಯನ್ನು ನಾವು ಕೊಂಡಾಡಬೇಕು? ಇನ್ನು ಹತ್ತಿರಕ್ಕೆ ಬಂದರೆ, ನರ್ಮದಾ ಕಣಿವೆಯ ಆದಿವಾಸಿಗಳು ಯಾವ ಪರಂಪರೆಯ ಮೂಲಕ ವಿನಾಶಕಾರಿ ಆಧುನಿಕತೆಯನ್ನು ಎದುರಿಸುತ್ತಿದ್ದಾರೆ ಎನ್ನುವುದು ನನಗಿಂತ ಹೆಚ್ಚು ಸ್ಪಷ್ಟವಾಗಿ ಅನಂತಮೂರ್ತಿಯವರಿಗೆ ಗೊತ್ತಿದೆ – ನಮ್ಮೆಲ್ಲರಿಗಿಂತ ಮಿಗಿಲಾಗಿ ಮೇಧಾರನ್ನು ಲೌಕಿಕವಾಗಿಯೂ, ವೈಚಾರಿಕವಾಗಿಯೂ ಬೆಂಬಲಿಸಿರುತ್ತಿರುವವರು ಅವರು. ಸೋಜಿಗದ ಸಂಗತಿ ಎಂದರೆ, ನರ್ಮದ ಕಣಿವೆಯ ವಿಷಯಕ್ಕೆ ಬಂದಾಗ, ಅನಂತಮೂರ್ತಿಯವರು ಮೇಧಾರ ಚಳುವಳಿಯನ್ನು ಆಧುನಿಕತೆ ಸಮ್ಮುಖ ಬಂದಾಗ, ಆಧ್ಯಾತ್ಮಿಕ ಎಂದು ಸ್ವೀಕರಿಸುವವರು (ನಾವು ಈ ತೆರನಾದ ಪಾಠ ಕಲಿತಿರುವುದು ಅವರಿಂದಲೇ, ಇದನ್ನು ಹೇಳಲು ನನಗೆ ಯಾವ ಸಂಕೋಚವೂ ಇಲ್ಲ.)  ಅಂದರೆ ನರ್ಮದಾ ವಿಷಯದಲ್ಲಿ ಅನಂತಮೂರ್ತಿ ಮೇಲಿನ ತರಹದ ಮೇಲೋಡ್ರಾಮ್ಯಾಟಿಕ್ ಆದ ಪರಂಪರೆಯನ್ನು ಉದ್ದೀಪಿಸದೇ – ಅಲ್ಲಿ ರಮಣ ಮಧ್ವಾಚಾರ್ಯರಿರಲಿ ಗಾಂಧಿಯನ್ನೂ ಅನಂತಮೂರ್ತಿ ಅನವಶ್ಯವಾಗಿ ಎಳೆದು ತರುವುದಿಲ್ಲ – ಲೌಕಿಕ ವಾಸ್ತವಕ್ಕೆ ಪ್ರತಿರೋಧ ಒಡ್ಡುತ್ತಿರುವವರನ್ನು ಆಧ್ಯಾತ್ಮದ ಪ್ರತಿಮೆಯಾಗಿ ಸ್ವೀಕರಿಸುತ್ತಾರೆ. ಕಾಲ – ದೇಶ ಸಮೀಪವಾದ ಈ ಆಧ್ಯಾತ್ಮದ ಮೂಲಕ ಅನಂತಮೂರ್ತಿಯವರಿಗೆ, ನಮ್ಮ ಪ್ರಭುತ್ವ, ಪ್ರಜಾಪ್ರಭುತ್ವದ ನೀತಿ – ನಡಾವಳಿಗಳನ್ನು ಕ್ಷುಲ್ಲಕಗೊಳಿಸುತ್ತಿರುವುದನ್ನೂ, ಇಂಥಾ ವರ್ತನೆ ತರುವ ಗಂಡಾಂತರವನ್ನೂ ಆತಂಕದಿಂದ ತೋರಿಸಲು ಸಾಧ್ಯವಾಗುತ್ತದೆ. ಇಂತಹ ಕಡೆಗಳಲ್ಲಿ, ಅನಂತಮೂರ್ತಿಯವರಿಗೆ ಪರಂಪರೆ, ಆಧ್ಯಾತ್ಮಗಳನ್ನು ಮೆಲೋಡ್ರಾಮ್ಯಾಟಿಕ್ ಆಗಿ ಪ್ರಕಟಿಸುವುದಿರಲಿ, ವಾಚ್ಯಗೊಳಿಸುವ ಅವಶ್ಯಕತೆಯೂ ಕಂಡು ಬರುವುದಿಲ್ಲ. ಅದು ಲೋಕಪ್ರತಿರೋಧದಲ್ಲಿ ಪ್ರಕಟಗೊಳ್ಳುವ ಜೀವಂತ ಅಧ್ಯಾತ್ಮ (ಲಂಕೇಶ್ ಮತ್ತು ಡಿ.ಆರ್.ನಾಗರಾಜ್, ಸೂಕಿಯ ಬಗ್ಗೆ ಬರೆಯುವಾಗ ಪ್ರಕಟಿಸುವುದು ಇದೇ ಅಧ್ಯಾತ್ಮವನ್ನು). ಹೀಗಿರುವಾಗ, ಅನಂತಮೂರ್ತಿ, ಪರಂಪರೆಯನ್ನು ಉತ್ಪ್ರೇಕ್ಷಿತ ಪ್ರಮಾಣದಲ್ಲಿ ಪ್ರಕಟಿಸುವುದನ್ನು ಹೇಗೆ ಅರ್ಥಮಾಡಿಕೊಳ್ಳುವುದು?

* * *