ಹತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಪತ್ರಕರ್ತನಾಗಿ ಕಣ್ಣು ಬಿಡುತ್ತಿದ್ದೆನಷ್ಟೆ. ಆಗಿನ್ನೂ ಉಡುಪಿ ಜಿಲ್ಲೆಯಾಗಿರಲಿಲ್ಲ. ಅದು ದಕ್ಷಿಣಕನ್ನಡ ಭಾಗವೇ ಆಗಿತ್ತು. ಈಗ ನಾಗಾರ್ಜುನ ಸಂಸ್ಥೆ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಲು ಹೊರಟಿರುವ ಅದೇ ಪ್ರದೇಶದಲ್ಲಿ, ಅಮೆರಿಕದ ಕೊಜೆಂಟ್ರಿಕ್ಸ್ ಸಂಸ್ಥೆ ಮುಖ್ಯ ಪ್ರವರ್ತಕನಾಗಿದ್ದ ಮಂಗಳೂರು ಪವರ್ ಕಂಪೆನಿ ಒಂದೂ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಹೊರಟಿತ್ತು. ಅದರ ವಿರುದ್ಧವೂ ಈಗಿನಂತೆಯೇ ಚಳವಳಿಗಳು ನಡೆಯುತ್ತಿದ್ದವು. ಈ ಚಳವಳಿಯ ಭಾಗವಾಗಿ ದಕ್ಷಿಣಕನ್ನಡ ಜಿಲ್ಲಾ ಪರಿಸರಾಸ್ತಕ ಒಕ್ಕೂಟ ಮಂಗಳೂರಿನಲ್ಲಿ ಒಂದು ಹಕ್ಕೊತ್ತಾಯ ಸಮಾವೇಶವನ್ನು ಹಮ್ಮಿಕೊಂಡಿತ್ತು. ಇದರಲ್ಲಿ ಇಬ್ಬರು ಜ್ಞಾನಪೀಠ ಪುಸ್ಕೃತ ಸಾಹಿತಿಗಳು ಭಾಗವಹಿಸಿದ್ದರು. ಒಬ್ಬರು ಶಿವರಾಮ ಕಾರಂತರು. ಮತ್ತೊಬ್ಬರು ಯು. ಆರ್. ಅನಂತಮೂರ್ತಿ.

ಮಂಗಳೂರಿನಲ್ಲಿರುವ ಜಿಲ್ಲಾ ಕ್ರೀಡಾಂಗಣದಿಂದ ಜಾಥಾ ಹೊರಡಲಿತ್ತು. ಸಹಜವಾಗಿಯೇ ಪತ್ರಕರ್ತರು, ಪತ್ರಿಕಾ ಛಾಯಾಗ್ರಾಹಕರೆಲ್ಲಾ ಅಲ್ಲಿ ಸೇರಿದ್ದರು. ಆಗಷ್ಟೇ ಪತ್ರಿಕೋದ್ಯಮದ ಮೊದಲ ಪಾಠಗಳನ್ನು ಕಲಿಯುತ್ತಿದ್ದ ನಾನೂ ಅಲ್ಲಿದ್ದೆ. ಜತೆಗಿದ್ದ ಮಲೆಯಾಳಿ ಗೆಳೆಯ ‘ದೀಪಿಕಾ’ ಪತ್ರಿಕೆಯ ವರದಿಗಾರ, ಅನಂತಮೂರ್ತಿಯವರನ್ನು ಕಂಡದ್ದೇ ಥ್ರಿಲ್ ಆಗಿ ಅವರನ್ನು ಮಾತನಾಡಿಸೋಣ ಎಂದು ಒತ್ತಾಯಿಸತೊಡಗಿದ. ಅನಂತಮೂರ್ತಿಯವರ ಅವರೆಗಿನ ಎಲ್ಲಾ ಪುಸ್ತಕಗಳನ್ನು ಓದಿದ್ದೆನಾದರೂ ಏಕಾಏಕಿ ಹೋಗಿ ಏನೆಂದು ಮಾತನಾಡಿಸುವುದು ಎಂದು ಅರಿಯದೆ ಸುಮ್ಮನೆ ನಿಂತಿದ್ದೆ. ಆದರೆ ಆ ಮಲೆಯಾಳಿ ಬಿಡಲಿಲ್ಲ.

ಜಿಲ್ಲಾ ಕ್ರೀಡಾಂಗಣದ ಪ್ರವೇಶ ದ್ವಾರದ ಮೆಟ್ಟಿಲುಗಳ ಮೇಲೆ ಕಂದು ಬಣ್ಣದ ಜುಬ್ಬಾ ಧರಿಸಿ ಕುಳಿತಿದ್ದ ಅನಂತಮೂರ್ತಿಯವರ ಜತೆಗೆ ಶ್ವೇತವಸನಧಾರಿ ನಿ. ಮುರಾರಿ ಬಲ್ಲಾಳರೂ ಇದ್ದರು. ಬಲ್ಲಾಳರಿಗೆ ಗುರುತು ಸಿಕ್ಕಿತು. ಅವರೇ ಅನಂತಮೂರ್ತಿಯವರಿಗೆ ಪರಿಚಯಿಸಿದರು. ಮಲೆಯಾಳಿ ಗೆಳೆಯ ಎಂದಿನ ಕೇರಳೀಯ ಉತ್ಸಾಹದಲ್ಲಲಿ ತನ್ನನ್ನು ತಾನೇ ಪರಿಚಯಿಸಿಕೊಂಡ. ತನ್ನ ಪದವಿ ಪ್ರಮಾಣಪತ್ರಕ್ಕೆ ನಿಮ್ಮದೇ ಸಹಿ ಇದೆ. ‘ನಾನು ಮಹಾತ್ಮಾಗಾಂಧಿ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯಶಾಸ್ತ್ರ ಕಲಿತೆ’ ಎಂದೆಲ್ಲಾ ಹೇಳಿಕೊಂಡು ಅನಂತಮೂರ್ತಿಯವರ ‘ಹಳೆಯ ವಿದ್ಯಾರ್ಥಿ’ಯಾಗಿಬಿಟ್ಟ. ಅನಂತಮೂರ್ತಿವರೂ ಅವನಲ್ಲಿ ಕೇರಳದ ವಿಷಯ ಮಾತನಾಡತೊಡಗಿದರು. ಈ ಮಾತುಕತೆ ಹೇಗೋ ಪರಿಸರ ಹೋರಾಟಗಳ ಕಡೆಗೆ ತಿರುಗಿದಾದ ಧೈರ್ಯ ಮಾಡಿ ಒಂದು ಪ್ರಶ್ನೆ ಕೇಳಿಯೇ ಬಿಟ್ಟೆ. ‘ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವುದು ಪರಿಸರ ಹೋರಾಟವೇ?’

ಅನಂತಮೂರ್ತಿ ತಕ್ಷಣ ಕೇರಳದ ಕುರಿತು ಮಾತುಕತೆಗಳನ್ನು ಬದಿಗಿಟ್ಟು ‘ಯಾಕೆ ಈ ಪ್ರಶ್ನೆ’ ಎಂದು ಕೇಳಿದರು. ದಕ್ಷಿಣಕನ್ನಡದಲ್ಲಿ ನಡೆಯುತ್ತಿರುವ ಹೋರಾಟದ ಹಿಂದಿನ ಪರಿಸರಪರ ಸಂಘಟನೆಗಳೆಲ್ಲಾ ಎಷ್ಟು ಕಡಿಮೆ ಶಕ್ತಿಹೊಂದಿವೆ ಎಂಬುದನ್ನು ವಿವರಿಸಿ ಪ್ರಸ್ತಾವಿತ ಬೃಹತ್ ಯೋಜನೆಗಳಿಂದ ನಿರ್ವಸತಿಯ ಭೀತಿಯನ್ನು ಎದುರಿಸುತ್ತಿರುವವರು ಈ ಹೋರಾಟದಿಂದ ಹಿಂದೆ ಸರಿದ ತಕ್ಷಣ ಅದು ಹೇಗೆ ಶಕ್ತಿ ಕಳೆದುಕೊಳ್ಳಬಹುದು ಎಂಬುದನ್ನು ಪತ್ರಕರ್ತನ ಉತ್ಸಾಹದಲ್ಲಿ ವಿವರಿಸಿದೆ.

ನಿರ್ವಸಿತರು ಹೋರಾಟದಿಂದ ಹಿಂದಕ್ಕೆ ಹೋಗುವ ಸಾಧ್ಯತೆಗಳಿಗೆ ಉದಾಹರಣೆಯಾಗಿ ಎಂಆರ್‌ಪಿಎಲ್ ಹೋರಾಟವನ್ನು ಸರಕಾರ ಹೇಗೆ ವಿಫಲಗೊಳಿಸುತ್ತಿದೆ ಮತ್ತು ಪರಿಹಾರ ಸಿಕ್ಕ ತಕ್ಷಣ ನಿರ್ವಹಿಸಿತರು ಹೇಗೆ ಹೋರಾಟದಿಂದ ದೂರವಾಗುತ್ತಾರೆ ಎಂಬುದನ್ನು ಸ್ವಲ್ಪ ಅತಿರಂಜಿತವಾಗಿಯೇ ಹೇಳಿದೆ.

ಇವೆಲ್ಲವನ್ನೂ ಕೇಳಿಸಿಕೊಂಡ ಅನಂತಮೂರ್ತಿಯವರು ‘ಸರಕಾರ ನಿರ್ವಸಿತರಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ. ಹೆಚ್ಚೆಂದರೆ ದುಡ್ಡು ಕೊಡಬಹುದು…’ ಎಂದು ಏನೋ ವಿವರಿಸಲು ಹೊರಟರು. ಆ ಹೊತ್ತಿಗೆ ಜಾಥಾ ಪ್ರಾರಂಭವಾಯಿತು. ಮಾತು ಮುಂದುವರಿಸಲು ಸಾಧ್ಯವಾಗಲಿಲ್ಲ.

’ಪರಿಹಾರ ಕೊಡಲು ಸಾಧ್ಯವಿಲ್ಲ. ದುಡ್ಡು ಕೊಡಬಹುದು!’ ಎಂಬ ಮಾತುಗಳ ಕುರಿತು ಕಳೆದ ಹತ್ತು ವರ್ಷಗಳಿಂದ ಯೋಚಿಸಿದ್ದೇನೆ. ಈ ದುಡ್ಡು ಎಂಥಾ ಪರಿಣಾಮವನ್ನುಂಟು ಮಾಡಬಹುದು ಎಂಬುದನ್ನು ಹೊಸ ಉದಾಹರಣೆಗಳ ಮೂಲಕ ಕಂಡುಕೊಂಡಿದ್ದೇನೆ. ಎಲ್ಲದಕ್ಕಿಂತ ಹೆಚ್ಚಾಗಿ ಸರಕಾರ ಹೇಳುವ ‘ಪುನರ್ವಸತಿ’ ಈ ‘ದುಡ್ಡಿನ’ ಆಚೆಗೆ ಹೋಗಲಾರದು ಎಂಬುದನ್ನು ಅರಿತುಕೊಂಡಿದ್ದೇನೆ. ಕರಾವಳಿಯ ಎರಡು ಜಿಲ್ಲೆಗಳಲ್ಲಿ ಬೃಹತ್ ಉದ್ದಿಮೆಗಳ ವಿರುದ್ಧ ನಡೆಯುತ್ತಿರುವ ಹೋರಾಟ ಎಲ್ಲಾ ರಾಜಕೀಯ ಪಕ್ಷಗಳ ‘ಅಭಿವೃದ್ಧಿ ವಾದ’ದ ನಡುವೆಯೂ ಇನ್ನೂ ಉಳಿದುಕೊಂಡಿದ್ದರೆ ಅದಕ್ಕೆ ಮುಖ್ಯ ಕಾರಣ ಪುನರ್ವಸತಿಯ ವ್ಯಾಖ್ಯೆ ದುಡ್ಡಿನಿಂದ ಆಚೆಗೆ ಬೆಳೆಯದೇ ಇದ್ದದ್ದು. ಅದು ಈಗ ಅತ್ಯಂತ ನಿರಾಶಾವಾದಿಯಾದ ಪತ್ರಕರ್ತನಿಗೂ ಸ್ಪಷ್ಟವಾಗಿದೆ.

* * *

ಮಂಗಳೂರಿನ ಹಕ್ಕೊತ್ತಾಯ ಜಾಥಾದ ದಿನದಂದಿನಿಂದ ಅನಂತಮೂರ್ತಿ ಅವರನ್ನೊಮ್ಮೆ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಂದರ್ಶಿಸಬೇಕು ಎಂಬ ಆಸೆ ಇತ್ತು. ಇದು ಕೈಗೂಡಿದ್ದು ಮೂರು ಪತ್ರಿಕೆಗಳನ್ನು ಬದಲಾಯಿಸಿ ‘ಉದಯವಾಣಿ’ಗೆ ಸೇರಿಕೊಂಡು ಬೆಂಗಳೂರಿಗೆ ಬಂದ ನಂತರ. ಈ ಹೊತ್ತಿಗೆ ಐದು ವರ್ಷಗಳು ಉರುಳಿ ಹೋಗಿದ್ದವು.

‘ಉದಯವಾಣಿ’ಯ ಬೆಂಗಳೂರು ಆವೃತ್ತಿಯಲ್ಲಿ ಸಂದರ್ಶನಾಧರಿತ ಅಂಕಣ ‘ಸಮ್ಮುಖ’ ೨೦೦೨ರಲ್ಲಿ ಆರಂಭವಾಯಿತು. ಈ ಅಂಕಣದಲ್ಲಿ ಪ್ರಕಟವಾಗುವ ಮೊದಲ ಸಂದರ್ಶನ ಅನಂತಮೂರ್ತಿಯವರದ್ದೇ ಆಗಿರಬೇಕು ಎಂಬುದನ್ನು ನಮ್ಮ ಸಂಪಾದಕರಾದ ಡಾ. ಆರ್. ಪೂರ್ಣಿಮಾ ಅವರ ಹಠ. ಸಂದರ್ಶನ ಮಾಡುವ ಹೊಣೆಯನ್ನು ನನಗೆ ವಹಿಸಿದ ಅವರು ‘ಕನ್ನಡದ ಬೌದ್ಧಿಕ ಜಗತ್ತಿನಲ್ಲಿ ಎಲ್ಲಾ ಹೊಸ ಚರ್ಚೆಗಳನ್ನು ಆರಂಭಿಸಿದ್ದು ಅನಂತಮೂರ್ತಿಯವರು. ಸಂದರ್ಶಿಸುವಾಗ ಈ ಅಂಶ ನಿಮಗೆ ನೆನಪಿರಬೇಕು’ ಎಂದು ಹೇಳಿದ್ದರು.

ಐದು ವರ್ಷದ ಹಿಂದೆ ಮಂಗಳೂರಿನ ಜಿಲ್ಲಾ ಕ್ರೀಡಾಂಗಣದ ಬಳಿ ನಿಂತು ಹೋಗಿದ್ದ ಮಾತುಕತೆಯನ್ನು ಮುಂದುವರಿಸಲು ಸಿಕ್ಕ ಈ ಅವಕಾಶವನ್ನು ಕಳೆದುಕೊಳ್ಳಲು ಸಿದ್ಧನಿರಲಿಲ್ಲ. ಅಂದೇ ಅನಂತಮೂರ್ತಿಯವರ ಮನೆಗೆ ದೂರವಾಣಿಸಿ ಸಂದರ್ಶನದ ವಿಷಯ ಹೇಳಿ ಸಮಯ ಕೇಳಿದೆ. ಅವರುಯಾವ ವಿಷಯದ ಕುರಿತು ಸಂದರ್ಶನ ಎಂದು ಕೇಳಿದರೆ ಜಾಗತೀಕರಣ, ನಿರ್ವಸತಿ ಮುಂತಾಗಿ ವಿವರಿಸಿದೆ. ಆದರೆ ಅನಂತಮೂರ್ತಿಯವರು ‘ನನಗೆ ಕೋಮುವಾದದ ಬಗ್ಗೆ ಮಾತನಾಡಬೇಕು. ಅದು ಹೊಸ ಬಗೆಯ ನಿರ್ವಸಿತರನ್ನು ಸೃಷ್ಟಿಸುತ್ತಿದೆ’ ಎಂದರು.

ಅದಕ್ಕೊಪ್ಪಿದೆ. ಆಮೇಲೆ ನನ್ನ ಮಿತಿಗಳು ನನಗೇ ಅರ್ಥವಾಗತೊಡಗಿತು. ಮಂಗಳೂರಿನ ಭೀಕರ ಕೋಮುಗಲಭೆಯೊಂದನ್ನು ಅದು ನಡೆಯುತ್ತಿದ್ದ ಪ್ರದೇಶದಿಂದಲೇ ವರದಿ ಮಾಡಿದ ಅನುಭವ ಇತ್ತಾದರೂ ಕೋಮುವಾದದ ಸ್ವರೂಪದ ಕುರಿತು ನನಗಿದ್ದದ್ದು ಕೇವಲ ಜನಪ್ರಿಯ ಕಲ್ಪನೆಗಳು ಮಾತ್ರ. ಈ ಹೊತ್ತಿಗೆ ಗುಜರಾತ್‌ನಲ್ಲಿ ನಡೆಯುತ್ತಿದ್ದ ನರಮೇಧ ಕೋಮುವಾದದ ಕುರಿತು ನನ್ನಲ್ಲಿದ್ದ ಎಲ್ಲಾ ಜನಪ್ರಿಯ ನಂಬಿಕೆಗಳನ್ನೂ ಬುಡಮೇಲು ಮಾಡಿಬಿಟ್ಟಿದ್ದವು. ಕೋಮುವಾದವೂ ಆಧುನಿಕ ಅಭಿವೃದ್ಧಿಯಂತೆಯೇ ಜನರ ಬದುಕನ್ನು ಕಿತ್ತುಕೊಂಡು ಅಭದ್ರಗೊಳಿಸುತ್ತಿರುವುದು ಕಾಣಿಸುತ್ತಿದ್ದರೂ ಅದನ್ನು ಅರ್ಥ ಮಾಡಿಕೊಳ್ಳಲು ಭಾರತೀಯ ಮುಸ್ಲಿಮನೊಬ್ಬನಿಗೆ ಇರುವ ಎಲ್ಲಾ ಸಮಸ್ಯೆಗಳೂ ನನಗೂ ಇದ್ದವು. ಕೋಮುವಾದದ ರಾಜಕೀಯ ಅರ್ಥಶಾಸ್ತ್ರದ ಕುರಿತ ನನ್ನ ಅನುಮಾನಗಳನ್ನೇ ಪ್ರಶ್ನೆಗಳನ್ನಾಗಿ ಸಿದ್ಧಪಡಿಸಿಕೊಂಡು ಅನಂತಮೂರ್ತಿಯವರೆದುರು ಕುಳಿತೆ.

ಸುಮಾರು ಎರಡು ಗಂಟೆಗಳ ಕಾಲ ಕೋಮುವಾದದ ಸಂಕೀರ್ಣ ಸ್ವರೂಪವನ್ನು ಕುರಿತು ಅನಂತಮೂರ್ತಿಯವರು ಮಾತನಾಡಿದರು. ಅಂದು ಧ್ವನಿಮುದ್ರಿಸಿದ ಆ ಸಂದರ್ಶನ ಈಗಲೂ ನನ್ನ ಬಳಿ ಇದೆ. ಬಹುಶಃ ಈವರೆಗಿನ ವೃತ್ತಿಜೀವನದಲ್ಲಿ ನಡೆಸಿದ ಅತ್ಯುತ್ತಮ ಸಂದರ್ಶನ ಅದು. ಅಲ್ಲಿ ನಾನು ಕೇಳಿದ ಪ್ರಶ್ನೆಗಳು ಬಹಳ ಬೇಸಿಕ್ ಆದಂಥವು. ಹಾಗೆ ನೋಡಿದರೆ ಪತ್ರಿಕೋದ್ಯಮದ ವಿದ್ಯಾರ್ಥಿಗಳೂ ಕೇಳಬಹುದಾದ ತೀರಾ ಸಾಮಾನ್ಯ ಪ್ರಶ್ನೆಗಳು. ಆದರೆ ಅನಂತಮೂರ್ತಿಯವರು ಕೊಟ್ಟ ಉತ್ತರಗಳು ಆಧುನಿಕೋತ್ತರ ಭಾರತದ ಹೊಸ ಸವಾಲೊಂದನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸುವಂಥವು. ಈ ಸಂದರ್ಶನವನ್ನು ಪೂರ್ಣವಾಗಿ ಅಕ್ಷರ ರೂಪಕ್ಕಿಳಿಸುವ ಕೆಲಸ ಇನ್ನೂ ಬಾಕಿ ಇದೆ ಎಂಬುದು ಈಗಲೂ ನನ್ನಲ್ಲಿ ಅಪರಾಧಭಾವವನ್ನು ಹುಟ್ಟಿಸುತ್ತಿದೆ. ಈ ಸಂದರ್ಶನದಲ್ಲಿ ಅನಂತಮೂರ್ತಿಯವರು ವ್ಯಕ್ತಪಡಿಸಿದ ಅನೇಕ ಅಭಿಪ್ರಾಯಗಳು ಈ ಪುಸ್ತಕದಲ್ಲಿರುವ ಕೆಲವು ಲೇಖನಗಳಲ್ಲಿ ಬಂದಿವೆ.

ಈ ಸಂದರ್ಶನದ ವೇಳೆ ನಡೆದ ಒಂದು ಸಣ್ಣ ಘಟನೆಯನ್ನು ಇಲ್ಲಿ ಬರೆಯುವುದು ತಪ್ಪಾಗಲಾರದು ಎಂದುಕೊಳ್ಳುತ್ತೇನೆ. ಗುಜರಾತ್ ನರಮೇಧದ ಕುರಿತು ಮಾತನಾಡುತ್ತಾ ಅನಂತಮೂರ್ತಿಯವರು ‘ಗುಜರಾತ್ ಗಲಭೆಗಳು ಆರಂಭವಾದ ನಂತರ ಅದರ ಬಗ್ಗೆ ಹೀಗೆ ಮಾತನಾಡಲು ಸಿಕ್ಕ ಮೊದಲ ಮುಸ್ಲಿಂ ನೀನು’ ಅಂದರು. ಈ ಮಾತು ಕೇಳುತ್ತಿದ್ದಂತೇ ನನ್ನೊಳಗಿದ್ದ ಕ್ರಾಂತಿಕಾರಿಗೆ ಜೀವ ಬಂದು ‘ನನ್ನನ್ನು ಮುಸ್ಲಿಂ ಅನ್ನಲು ಸಾಧ್ಯವಿಲ್ಲ. ಏಕೆಂದರೆ ಹುಟ್ಟಿನಿಂದಲೇ ಹೇಳಿಬಿಟ್ಟೆ. ಅವರದನ್ನು ಗಂಭೀರವಾಗಿ ಪರಿಗಣಿಸದೆ ಸುಮ್ಮನಾಗಿಬಿಟ್ಟರು. ಇದಕ್ಕಾಗಿ ಈಗಲೂ ನಾಚಿಕೊಳ್ಳುವಂತಾಗಿದೆ. ಭಾರತದಲ್ಲಿ ಮುಸ್ಲಿಮನಾಗಿರುವುದು ಎಂದರೆ ಹುಟ್ಟಿನಿಂದ ನಿರ್ದಿಷ್ಟ ಜಾತಿಯವನಾಗಿರುವಂಥದ್ದೇ ಸ್ಥಿತಿ ಎಂಬುದು ಈಗ ನನಗೂ ಅರ್ಥವಾಗಿದೆ.

ಈ ಸಂದರ್ಶನದ ನಂತರ ಅನಂತಮೂರ್ತಿಯವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ನಿಲ್ಲಲು ಹೊರಾಟಾಗ ಮತ್ತೊಂದು ಸಂದರ್ಶನ ನಡೆಸಿದೆ. ಆಮೇಲೆ ಬೆಳಗಾವಿಯ ಇಬ್ಬರು ಮರಾಠಿ ರಾಜಕಾರಣಿಗಳಿಗೆ ಕನ್ನಡ ಹೋರಾಟಗಾರರೆಂದು ಹೇಳಿಕೊಳ್ಳುವವರು ಮಸಿ ಬಳಿದಾಗ ಮತ್ತೊಮ್ಮೆ ಸಂದರ್ಶಿಸಿದೆ. ಈ ಎಲ್ಲಾ ಸಂದರ್ಶನಗಳ ವೇಳೆಯಲ್ಲೂ ಅನಂತಮೂರ್ತಿಯವರ ಜತೆ ಸಣ್ಣ ಮಟ್ಟಿಗೆ ಜಗಳ ತೆಗೆಯುವಂಥ ಬಾಲಿಶ ಪ್ರಶ್ನಗಳನ್ನು ಕೇಳಿದ್ದೇನೆ. ಆದರೆ ಅವರು ನನ್ನ ಜಗಳದ ತಂತ್ರವನ್ನು ಮೊದಲೇ ಅರಿತು ನನ್ನನ್ನೇ ಕೀಟಲೆ ಮಾಡುವಂತೆ ಗಂಭೀರವಾದ ಉತ್ತರಗಳನ್ನೇ ಕೊಟ್ಟಿದ್ದಾರೆ. ನಾನೂ ಅಷ್ಟೇ. ಮಕ್ಕಳಂತೆ ಮತ್ತೆ ಮತ್ತೆ ಈ ಸಂತೋಷಕ್ಕಾಗಿ ತಹತಹಿಸುತ್ತಿದ್ದೆ.

* * *

ಕಳೆದ ವರ್ಷ ಅಂದರೆ ೨೦೦೬ ಜನವರಿಯಲ್ಲಿ ಆವರೆಗೂ ಮಣಿಪಾಲದಲ್ಲಿ ಸಿದ್ಧಗೊಳ್ಳುತ್ತಿದ್ದ ‘ಉದಯವಾಣಿ’ಯ ಭಾನುವಾರದ ಪುರವಣಿ ‘ಸಾಪ್ತಾಹಿಕ ಸಂಪದ’ವನ್ನು ಬೆಂಗಳೂರಿನಿಂದಲೇ ಸಿದ್ಧಪಡಿಸಲು ನಿರ್ಧರಿಸಲಾಯಿತು. ಪತ್ರಿಕೆಯಲ್ಲಿ ಯಾವುದೇ ಹೊಸತನ್ನು ಕಾರ್ಯರೂಪಕ್ಕೆ ತರುವ ಕೆಲಸದಲ್ಲಿ ನನ್ನ ಪಾಲನ್ನು ನಿರೀಕ್ಷಿಸುವ ಸಂಪದಾಕರಾದ ಡಾ.ಆರ್. ಪೂರ್ಣಿಮಾ ಈ ಜವಾಬ್ದಾರಿಯನ್ನು ಹೊರಿಸಿ ನಮ್ಮ ಪ್ರತಿಭಾವಂತ ಉಪ ಸಂಪಾದಕರಲ್ಲೊಬ್ಬರಾದ ಸುರೇಶ್ ಕೆ.ಯವರನ್ನು ಜತೆಯಾಗಿಸಿದರು. ಹೊಸ ಜವಾಬ್ದಾರಿಯನ್ನು ಹೊತ್ತ ನಮಗೆ ‘ಸಾಪ್ತಾಹಿಕ ಸಂಪದ’ ಹೊಸ ಬಗೆಯಲ್ಲೇ ಇರಬೇಕೆಂಬ ಆಸೆಯಿತ್ತು. ಅಂಕಣಗಳು ಹೊಸ ಬಗೆಯಲ್ಲಿರಬೇಕು ಎಂಬ ಚರ್ಚೆ ಬಂದ ತಕ್ಷಣ ಸಂಪಾದಕರು ‘ಅನಂತಮೂರ್ತಿಯವರು ನಮಗೊಂದು ಅಂಕಣ ಬರೆಯುತ್ತಾರೆ’ ಎಂದು ಪ್ರಕಟಿಸಿದರು.

‘ಅವರನ್ನು ಒಪ್ಪಿಸುವುದು ಹೇಗೆ?’ ಎಂಬ ಪ್ರಶ್ನೆ ಕೇಳುವ ಮೊದಲೇ ‘ನಾಳೆಯೇ ಅವರ ಮನೆಗೆ ಹೋಗೋಣ. ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಿ’ ಎಂದು ಆದೇಶಿಸಿಯೂ ಬಿಟ್ಟರು. ಮರುದಿನವೇ ಅನಂತಮೂರ್ತಿಯವರ ಮನೆಗೆ ಹೋದೆವು. ಅವರು ನಿರಾಕರಿಸಿದರೆ ಏನು ಮಾಡಬೇಕು ಎಂದು ಚಿಂತಿಸುತ್ತಿದ್ದ ನನ್ನ ಎಲ್ಲಾ ಭಯವನ್ನು ಹೋಗಲಾಡಿಸುವಂತೆ ‘ಖಂಡಿತವಾಗಿ ಬರೆಯುತ್ತೇನೆ. ಆದರೆ ಇಸ್ಮಾಯಿಲ್‌ನನ್ನು ಇಲ್ಲಿಗೆ ಕಳುಹಿಸಿಕೊಡಬೇಕು. ಒಬ್ಬರು ಜತೆಗಿದ್ದರೆ ನನಗೆ ಕೆಲಸ ಸುಲಭವಾಗುತ್ತದೆ…’ ಎಂದು ಅನಂತಮೂರ್ತಿ ಹೇಳಿದರು. ‘ರೊಟ್ಟಿ ಜಾರಿ ತುಪ್ಪದಲ್ಲಿ ಬೀಳುವುದು’ ಎಂದರೇನು ಎಂಬುದು ಅರ್ಥವಾಯಿತು.

ಅಂದಿನಿಂದ ಆರಂಭಗೊಂಡು ಮುಂದಿನ ೧೩ ತಿಂಗಳುಗಳ ಕಾಲ ‘ಋಜುವಾತು’ ಒಂದು ವಾರವೂ ತಪ್ಪದೇ ಪ್ರಕಟವಾಯಿತು. ಪ್ರತೀ ಬರೆಹವೂ ರೂಪುಗೊಳ್ಳುವ ಮ್ಯಾಜಿಕ್ ನೋಡಿದ್ದೇನೆ. ಈ ಪುಸ್ತಕದಲ್ಲಿ ನನ್ನದೊಂದು ಬರೆಹ ಸೇರುವುದಕ್ಕೆ ಇರುವ ಏಕೈಕ ಅರ್ಹತೆ ಬಹುಶಃ ಅದು ಮಾತ್ರ.

* * *

ಅನಂತಮೂರ್ತಿಯವರನ್ನು ಪ್ರತೀ ಬಾರಿ ಸಂದರ್ಶಿಸುವ ಮುನ್ನವೂ ನಾನು ಇನ್ನಿಬ್ಬರನ್ನು ‘ಸಂದರ್ಶಿಸುತ್ತಿದ್ದೆ’. ಒಬ್ಬರು ನಮ್ಮ ಸಂಪಾದಕರು, ಮತ್ತೊಬ್ಬರು ಪಟ್ಟಾಭಿರಾಮ ಸೋಮಯಾಜಿ. ನನ್ನ ಪ್ರಶ್ನೆಗಳನ್ನು ಸ್ಪಷ್ಟಗೊಳಿಸಿಕೊಳ್ಳುವುದು ಈ ‘ಸಂದರ್ಶನ’ಗಳ ಉದ್ದೇಶವಾಗಿರುತ್ತಿತ್ತು. ನಾನು ಬಾಲಿಶವಲ್ಲದ ಪ್ರಶ್ನೆಗಳನ್ನೇನಾದರೂ ಕೇಳಿದ್ದರೆ ಅದರಲ್ಲಿ ಇವರಿಬ್ಬರ ಪಾಲು ದೊಡ್ಡದು. ಅನಂತಮೂರ್ತಿಯವರ ಅಂಕಣಕ್ಕೊಂದು ಶೀರ್ಷಿಕೆ ಕೊಡಬೇಕಲ್ಲ ಎಂದು ಒದ್ದಾಡುತ್ತಿದ್ದಾಗ ಅವರೇ ಸಂಪಾದಿಸುತ್ತಿದ್ದ ‘ರುಜುವಾತು ನೆನಪಾಯಿತು. ಇದಕ್ಕೆ ಮರುಹುಟ್ಟು ಕೊಡೋಣ ಎಂದುಕೊಂಡಿದ್ದಾಗ ಪಟ್ಟಾಭಿ ಅದನ್ನು ‘ಋಜು ಮಾತು’ ಎಂದು ಬದಲಾಯಿಸಿದರೆ ಒಳ್ಳೆಯದು ಎಂದು ‘ಋತು’ ಮತ್ತು ‘ಸತ್ಯ’ದ ಕುರಿತ ಅನಂತಮೂರ್ತಿಯವರು ಚಿಂತನೆಗಳನ್ನು ವಿವರಿಸಿದ್ದರು. ಕೊನೆಗೆ ಇದು ‘ಋಜುವಾತು’ ಎಂದಾಯಿತು. ಈ ಪದ ನನ್ನ ಹೃದಯಕ್ಕೆ ಹತ್ತಿರವಾದದ್ದು ಎಂದು ಅನಂತಮೂರ್ತಿಯವರೂ ಒಪ್ಪಿದರು.

ಈ ಅಂಕಣ ಆರಂಭವಾಗುತ್ತದೆ ಎಂದು ಹೇಳಿದಾಗ ಪಟ್ಟಾಭಿ ಹೇಳಿದ ಮಾತುಗಳು ಈಗಲೂ ನನಗೆ ನೆನಪಿದೆ – ‘ಸದ್ಯಕ್ಕೆ ಸಮಗ್ರ ಕರ್ನಾಟಕವನ್ನು ಉದ್ದೇಶಿಸಿ ಮಾತನಾಡಬಲ್ಲ ಏಕೈಕ ಲೇಖಕ ಅವರು ಮಾತ್ರ. ನೀವು ಮಾಡುತ್ತಿರುವ ಕೆಲಸ ಎಷ್ಟು ದೊಡ್ಡದು ಎಂಬುದು ನಿಮಗೆ ಗೊತ್ತಿಲ್ಲ…?

ಅಂಕಣ ಆರಂಭವಾದ ಮೊದಲ ವಾರವೇ ಪಟ್ಟಾಭಿಯವರ ಹೇಳಿಕೆ ಸಾಭೀತಾಗಿ ಹೋಯಿತು. ಶ್ರವಣಬೆಳಗೊಳದ ಗೊಮ್ಮಟಗಿರಿಗೆ ರೋಪ್‌ವೇ ಹಾಕುವುದರ ಕುರಿತ ಈ ಲೇಖನ ಅನಂತಮೂರ್ತಿಯವರಿಗೆ ಮಾತ್ರ ಸಾಧ್ಯವಿರುವ ಸಂವಾದದ ಶಕ್ತಿಯನ್ನು ತೋರಿಸಿಕೊಟ್ಟಿತು. ಅಲ್ಲಿಯವರೆಗೂ ‘ಧಾರ್ಮಿಕ ಭಾವನೆ’ಗಳಿಗೆ ಧಕ್ಕೆಯಾಗಬಹುದು ಎಂದು ಪೊಲಿಟಿಕಲಿ ಕರೆಕ್ಟ್ ಆಗಿ ಈ ವಿಷಯಕ್ಕೆ ಪ್ರತಿಕ್ರಿಯಿಸುತ್ತಿದ್ದವರೆಲ್ಲಾ ಮೈ ಕೊಡವಿಕೊಂಡು ‘ಧರ್ಮಕ್ಕೆ ಸ್ಪಂದಿಸದ ರೋಪ್ ವೇ’ಯ ಕುರಿತು ಚರ್ಚಿಸಲು ಆರಂಭಿಸಿದರು. ರೋಪ್ ವೇಯನ್ನು ವಿರೋಧಿಸುವುದರ ಮೂಲಕ ಮಾತ್ರ ಧರ್ಮಕ್ಕೆ ಹತ್ತಿರವಾಗಲು ಸಾಧ್ಯ ಎಂಬುದನ್ನು ಈ ಲೇಖನ ಪ್ರತಿಪಾದಿಸಿತ್ತು. ಇದು ಅಭಿವೃದ್ಧಿಯ ಅಧಾರ್ಮಿಕ ಆಯಾಮವೊಂದನ್ನು ತೋರಿಸಿಕೊಡುವಂತೆಯೇ ವರ್ತಮಾನದ ಮತ – ಧರ್ಮದ ಆಷಾಢಭೂತಿತನವನ್ನು ಬಯಲಿಗೆಳೆದ ಧಾರ್ಮಿಕ ಲೇಖನ ಎಂದರೆ ತಪ್ಪಾಗಲಾರದೇನೋ.

ಪೊಲಿಟಿಕಲಿ ಕರೆಕ್ಟ್ ಆಗುತ್ತಾ ಹೋದರೆ ನಿಜವಾದ ಅಭಿಪ್ರಾಯಗಳನ್ನು ಹೇಳಲು ಹೇಗೆ ಅಸಮರ್ಥರಾಗಿಬಿಡುತ್ತೇವೆ ಎಂಬುದನ್ನು ಈ ಸಂಕಲನದಲ್ಲಿರುವ ಹಲವು ಲೇಖನಗಳು ಬೇರೆ ಬೇರೆ ಬಗೆಯಲ್ಲಿ ಚರ್ಚಿಸಿವೆ. ವರ್ತಮಾನದ ರಾಜಕಾರಣಕ್ಕೆ ಸ್ಪಂದಿಸಿದ ಅವರ ಲೇಖನಗಳಲ್ಲಿ ಇದು ‘ನಿಜವಾದ ಜನನಾಯಕ ಜನರಿಗೆ ಅಪ್ರಿಯವಾದ ನಿರ್ಧಾರಗಳನ್ನೂ ಕೈಗೊಳ್ಳಬೇಕು’ ಎಂಬ ಅರ್ಥದಲ್ಲಿ ಬಂದಿದ್ದರೆ ಕೆ.ವಿ. ಸುಬ್ಬಣ್ಣ, ಅಡಿಗ ಮತ್ತು ಟಾಲ್ಸ್‌ಟಾಯ್ ಕುರಿತ ಬರೆಹಗಳಲ್ಲಿ ಇದು ‘ಸದ್ಯಕ್ಕೆ ಸ್ಪಂದಿಸದೆ ಭವಿಷ್ಯಕ್ಕೆ ಸ್ಪಂದಿಸಲು ಸಾಧ್ಯವಿಲ್ಲ’ ಎಂಬ ಅರ್ಥದಲ್ಲಿ ಬಂದಿದೆ. ಇದು ಅನಂತಮೂರ್ತಿಯವರ ನಡವಳಿಕೆಯ ಮಟ್ಟಿಗೂ ನಿಜ. ‘ಋಜುವಾತು’ ಅಂಕಣ ಆರಂಭಗೊಂಡ ಕೆಲವೇ ತಿಂಗಳುಗಳಲ್ಲಿ ಅವರು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದರು. ದುಡ್ಡಿರುವ ಉದ್ಯಮಿಯೊಬ್ಬರ ವಿರುದ್ಧ ಅನಂತಮೂರ್ತಿಯವರು ಅಭ್ಯರ್ಥಿಯಾದುದರ ಹಿಂದಿನ ‘ರಾಜಕಾರಣ’ ವನ್ನು ಮಾಧ್ಯಮಗಳು ರಂಜನೀಯವಾಗಿ ವಿಶ್ಲೇಷಿಸಿದವು. ‘ಋಜುವಾತು’ ಅಂಕಣವಿಲ್ಲದಿದ್ದರೆ ಈ ರಂಜನೀಯ ವಿಶ್ಲೇಷಣೆಗಳಲ್ಲಿ ನಾನೂ ಪಾಲುದಾರನಾಗುತ್ತಿದ್ದೇನೇನೋ?

‘ನೀವು ಚುನಾವಣೆಗೆ ನಿಲ್ಲಬೇಕು’ ಎಂಬ ಬಿ.ಆರ್. ಪಾಟೀಲರ ದೂರವಾಣಿ ಕರೆ ಬಂದ ಕ್ಷಣದಿಂದ ಚುನಾವಣೆಯ ಫಲಿತಾಂಶ ಹೊರಬೀಳುವವರೆಗಿನ ಎಲ್ಲ ಘಟನೆಗಳಿಗೂ ಸಾಕ್ಷಿಯಾಗಿದ್ದುದರಿಂದ ನನಗೆ ತಿಳಿದ ಚುನಾವಣಾ ಚಿತ್ರವೇ ಬೇರೆ. ಅಭ್ಯರ್ಥಿಯಾಗುವ ಕ್ಷಣದಲ್ಲೇ ಅನಂತಮೂರ್ತಿಯವರಿಗೆ ತಾನು ಸೋಲಬಹುದು ಎಂಬುದರ ಅರಿವಿತ್ತು. ನಾನಿದನ್ನು ಹೇಳಿದಾಗ ‘ನಾನು ನಿಲ್ಲುತ್ತಿರುವುದು ಗೆಲ್ಲುವುದಕ್ಕೆ ಅಂತ ನಿನಗ್ಯಾರು ಹೇಳಿದ್ದು’ ಎಂದು ಮರುಪ್ರಶ್ನೆ ಎಸೆದಿದ್ದರು.

ಮುಂದಿನ ಘಟನೆಗಳು ಎಲ್ಲರಿಗೂ ತಿಳಿದಿರುವಂಥದ್ದೇ. ‘ದೇಶಭಕ್ತ’ರಾದವರು, ‘ಮಣ್ಣಿನ ಮಕ್ಕಳು’, ‘ಹಿಂದುಳಿದ ವರ್ಗಗಳ ನಾಯಕ’ರೆಲ್ಲರೂ ‘ಪೊಲಿಟಿಕಲೀ ಕರೆಕ್ಟ್’ ಆಗಿರುವ ಅಂದರೆ ತಮ್ಮ ತಮ್ಮ ಸ್ಥಾನಗಳಿಗೆ ಧಕ್ಕೆಯುಂಟಾಗದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು (ಬಿ.ಆರ್. ಪಾಟೀಲ್‌ಮತ್ತು ಅವರ ಜತೆಗಿದ್ದ ಕೆಲವು ಸಾಮಾನ್ಯ ಕಾರ್ಯಕರ್ತರು ಮಾತ್ರ ಇದಕ್ಕಿಂತ ಭಿನ್ನವಾಗಿದ್ದರು.) ಅನಂತಮೂರ್ತಿ ಮಾತ್ರ ಸದ್ಯಕ್ಕೆ ಸ್ಪಂದಿಸುತ್ತಾ ಮತ್ತೊಂದಷ್ಟು ಟೀಕೆಗಳನ್ನು ಮೈಮೇಲೆ ಎಳೆದುಕೊಂಡರು. ಇಷ್ಟೆಲ್ಲಾ ನಡೆಯುತ್ತಿದ್ದಾಗಲೂ ‘ಚುನಾವಣೆಗೆ ನಾನು ಸ್ಪರ್ಧಿಸಿದ್ದರ ಬಗ್ಗೆ ಕಾಲಂನಲ್ಲಿ ಬರೆಯುವುದಿಲ್ಲ. ಅದುನೈತಿಕವಾಗಿ ಸರಿಯಲ್ಲ’ ಎಂದರು. ಆ ವಾರ ನಾನು ಮೀಸಲಾತಿಗೆ ಸಂಬಂಧಿಸಿದಂತೆ ಅನಂತಮೂರ್ತಿಯವರು ಮಾಡಿದ್ದ ಭಾಷಣವೊಂದನ್ನು ಲೇಖನರೂಪಕ್ಕಿಳಿಸಿದೆ. ಅದನ್ನೇ ಅಂಕಣಕ್ಕೆ ಬೇಕಾದಂತೆ ತಿದ್ದಿಕೊಟ್ಟರು.

ಚುನಾವಣೆಯ ಫಲಿತಾಂಶಗಳು ಬಂದ ನಂತರ ಇಡೀ ಚುನಾವಣೆಯಲ್ಲಿ ನಮ್ಮ ರಾಜಕಾರಣಿಗಳು ಹೇಗೆ ವರ್ತಿಸಿದರು ಎಂಬುದನ್ನು ಬರೆಯಲು ಕೇಳಿಕೊಂಡೆ. ಅವರು ಹೇಳುತ್ತಾ ಹೋದುದನ್ನು ನಾನೇ ಟೈಪ್ ಮಾಡಿದೆ. ಅಂಕಣದ ಮಿತಿಗಿಂತ ಸ್ವಲ್ಪ ಉದ್ದವಿದ್ದ ಆ ಲೇಖನವನ್ನು ಎಡಿಟ್ ಮಾಡಿ ಕೊಡುತ್ತೇನೆ ಎಂದು ನನ್ನನ್ನು ಕಳುಹಿಸಿದವರು ಸಂಜೆ ಬೇರೆಯೇ ಲೇಖನವನ್ನು ಕಳುಹಿಸಿದರು. ಈ ಸಂಕಲನದಲ್ಲಿರುವ ಎಲ್ಲಾ ಬರೆಹಗಳಿಗಿಂತ ಪುಟ್ಟದಾಗಿರುವ ಆ ಬರೆಹದಲ್ಲಿ ನಾನು ಟೈಪ್ ಮಾಡಿ ಕೊಟ್ಟಿದ್ದ ಒಂದು ಪದವೂ ಇರಲಿಲ್ಲ. ನಾನು ಆಶ್ಚರ್ಯದಿಂದ ‘ಇದೇನ್ಸಾರ್’ ಎಂದು ಕೇಳಿದರೆ ಅವರು ‘ಕಾಲಂ ನನ್ನ ಸಮರ್ಥನೆಗೆ ಬಳಕೆಯಾಗುವುದು ಬೇಡ’ ಎಂದು ಬಿಟ್ಟರು.

’ಇದೂ ಒಂದು ತರಾ ಪೊಲಿಟಿಕಲಿ ಕರೆಕ್ಟ್ ಆಗಿರುವ ನಿಲುವೇ ಆಗುತ್ತೆ’ ಎಂದು ಕೀಟಲೆ ಮಾಡೋಣ ಅನ್ನಿಸಿದರೂ ಅದು ಸಂದರ್ಭವಲ್ಲ ಎಂದು ಸುಮ್ಮನಾಗಿಬಿಟ್ಟೆ. ಅನೇಕ ಕಾಲಮಿಸ್ಟ್‌ಗಳನ್ನು ನಿರ್ವಹಿಸಿದ ನಾನು ಈ ಬಗೆಯ ಸಂಯಮ ಮತ್ತು ಪ್ರಾಮಾಣಿಕತೆಯನ್ನು ಮೊದಲ ಬಾರಿಗೆ ಕಂಡಿದ್ದಂತೂ ನಿಜ. ಅಂದು ಟೈಪ್ ಮಾಡಿದ ಲೇಖನದ ಪ್ರತಿ ಈಗಲೂ ನನ್ನ ಕಂಪ್ಯೂಟರಿನಲ್ಲಿದೆ. ಅನಂತಮೂರ್ತಿಯವರ ಅನುಮತಿ ದೊರೆತರೆ ಅದನ್ನು ಪ್ರಕಟಿಸಬೇಕೆಂಬ ಆಸೆಯೂ ಇದೆ. ಈ ಲೇಖನ ರಾಜ್ಯಸಭಾ ಚುನಾವಣೆಯೊಂದರ ಹಿಂದಿನ ‘ರಾಜಕಾರಣ’ವನ್ನು ತಾತ್ವಿಕವಾಗಿ ಚರ್ಚಿಸಿದೆ. ಮಾತ್ರವಲ್ಲ ಚುನಾವಣೆಯೊಂದರ ಕುರಿತು ಇದು ಹಲವು ಸತ್ಯಗಳನ್ನೂ ಹೇಳುತ್ತದೆ.

* * *

ಅನಂತಮೂರ್ತಿಯವರು ಸದ್ಯಕ್ಕೆ ಪ್ರತಿಕ್ರಿಯಿಸುವ ಕ್ರಿಯೆ ಬಹಳ ಕುತೂಹಲಕರವಾದದ್ದು. ಅವರು ನಿರ್ದಿಷ್ಟ ವಿಷಯವೊಂದರ ಬಗ್ಗೆ ಮಾತನಾಡುತ್ತಾ ಹೋದಂತೆ ಅವರ ಚಿಂತನೆಗಳೂ ಬೆಳೆಯುತ್ತಾ ಹೋಗುತ್ತವೆ. ಇದರಿಂದಾಗಿಯೇ ಅವರ ಬರವಣಿಗೆ ಹೆಚ್ಚು ಆತ್ಮೀಯ ಅನ್ನಿಸುತ್ತವೆಯೇನೋ. ಅವರು ತಮ್ಮ ವಿಚಾರವನ್ನು ಬರೆಯುವುದರ ಬದಲಿಗೆ ಆ ವಿಷಯಕ್ಕೆ ಸಂಬಂಧಿಸಿದಂತೆ ಓದುಗನ ಜತೆಗೆ ಸಂವಾದ ನಡೆಸುತ್ತಾ ಹೋಗುತ್ತಾರೆ. ‘ಋಜುವಾತು’ ಅಂಕಣಗಳ ಮಟ್ಟಿಗೆ ನಾನು ಮೊದಲ ಓದುಗ/ಕೇಳುಗನಾಗಿದ್ದುದರಿಂದ ಈ ಮ್ಯಾಜಿಕ್ ಅನ್ನು ಹತ್ತಿರದಿಂದ ಕಾಣಲು ಸಾಧ್ಯವಾಯಿತು.

ನನ್ನ ಟೈಪಿಂಗ್ ವೇಗ ಸಾಮಾನ್ಯಕ್ಕಿಂತ ಹೆಚ್ಚಾಗಿರುವುದರಿಂದ ಅವರು ಹೇಳುವುದನ್ನು ಟೈಪಿಸಿ ಬಿಡುತ್ತಿದ್ದೆ (ಕೆಲವೊಮ್ಮೆ ಮೊದಲಿಗೆ ರೆಕಾರ್ಡ್ ಮಾಡಿ ಕೆಲ ಮಟ್ಟಿಗಿನ ಸಂಪಾದನೆಯ ಕೆಲಸದೊಂದಿಗೆ ಇದನ್ನು ಮಾಡುತ್ತಿದ್ದುದೂ ಉಂಟು.) ಈ ಬರೆಹವನ್ನು ಸ್ಫುಟಗೊಳಿಸುವ ಕೆಲಸಕ್ಕೆ ಅವರು ತೊಡಗಿದರೆಂದರೆ ಮತ್ತೆ ಅವರಿಗೆ ನಿದ್ರೆಯೂ ಕಾಡುತ್ತಿರಲಿಲ್ಲ. ಎಷ್ಟೋ ಸಾರಿ ಅಂತಿಮ ಪ್ರತಿ ಕಳುಹಿಸಿಕೊಟ್ಟ ನಂತರ ಮಧ್ಯರಾತ್ರಿಯ ವೇಳೆಗೆ ಮತ್ತಷ್ಟು ಬದಲಾಯಿಸಿದ ಮತ್ತೊಂದು ಅಂತಿಮ ಪ್ರತಿ ಬರುತ್ತಿತ್ತು. ನಾವಂತೂ ಕೊನೆಯ ಕ್ಷಣದವರೆಗೂ ಅನಂತಮೂರ್ತಿಯವರ ಅಂಕಣವನ್ನು ಕಾಯುತ್ತಲೇ ಇರುತ್ತಿದ್ದೆವು. ‘ಫೈನಲ್ ಡ್ರಾಫ್ಟ್’ಗಳು ಮತ್ತೆ ಮತ್ತೆ ಬದಲಾಗಿ ಎಷ್ಟೋ ವೇಳೆ ಅದು ಮೊದಲಿದ್ದ ರೂಪವನ್ನೇ ಕಳೆದುಕೊಂಡು ಬಿಡುತ್ತಿತ್ತು. ಈ ನಿರಂತರ ಬದಲಾವಣೆ ಪತ್ರಕರ್ತನ ಮಟ್ಟಿಗೆ ಒಂದು ನುಂಗಲಾರದ ತುತ್ತು. ಪ್ರತೀ ಬದಲಾವಣೆಯ ಜತೆಗೆ ಲೇಖನದ ಗಾತ್ರವೂ ಬದಲಾಗುತ್ತಿರುತ್ತದೆ. ಈ ಬದಲಾವಣೆಗೆ ತಕ್ಕಂತೆ ಪುಟದ ಮರುವಿನ್ಯಾಸವೂ ಅಗತ್ಯ. ಈ ಒತ್ತಡವನ್ನು ಯಶಸ್ವಿಯಾಗಿ ನಿರ್ವಹಿಸಿದವರು ನನ್ನ ಸಹೋದ್ಯೋಗಿ ಮತ್ತು ಗೆಳೆಯ ಸುರೇಶ್ ಕೆ. ಅನಂತಮೂರ್ತಿಯವರ ಲೇಖನದ ಕೊನೆಯ ಪ್ರತಿಯೇ ಮುದ್ರಣಕ್ಕೆ ಹೋಗಬೇಕೆಂಬ ನನ್ನ ನಿಲುವನ್ನು ಕಾರ್ಯರೂಪಕ್ಕೆ ತರುವ ಪ್ರಾಯೋಗಿಕ ಮಾರ್ಗವನ್ನು ಹುಡುಕಿಕೊಟ್ಟು ಅದನ್ನು ಸಾಧ್ಯವಾಗಿಸಿದರು.

’ಋಜುವಾತು’ ಅಂಕಣದ ಉಪಸಂಹಾರದಲ್ಲಿ ಅನಂತಮೂರ್ತಿಯವರು ‘ಆಡಿದ ಮಾತು ನನಗೇ ಆಡಿಕೊಂಡ ಮಾತಾಗಿರುವಂತೆ’ ಈ ಲೇಖನಗಳನ್ನು ಬರೆದೆ ಎಂದಿದ್ದಾರೆ. ಅವರು ಆಡಿದ ಮಾತನ್ನು ಅವರೊಳಗೇ ಕೇಳುತ್ತಿದ್ದವರಲ್ಲಿ ನಾವೆಲ್ಲರೂ ಇದ್ದೆವು ಎಂಬುದು ಇಲ್ಲಿನ ದೊಡ್ಡ ಕೌತುಕ. ತನ್ನ ನಿಲುವನ್ನು ತನ್ನೊಳಗೇ ಸಂವಾದವಾಗಿಸುವ ಕ್ರಿಯೆ ಅದರ ಬಾಹ್ಯ ಸಂವಹನದ ವ್ಯಾಪ್ತಿಗೂ ವಿಸ್ತರಿಸಿಕೊಳ್ಳುವುದರ ದೊಡ್ಡ ಅಪಾಯ ಎಂದರೆ ಅದು ‘ಜನರಿಗೆ ಬೇಕಾದುದನ್ನು’ ಕೊಡುವ ಜನಪ್ರಿಯ ಬರೆಹ ಮಾತ್ರವಾಗಿಬಿಡುವುದು. ಫಣಿರಾಜ್ ಹೇಳುವ ಅನಂತಮೂರ್ತಿಯವರ ಬರೆಹಗಳ ‘ಫೇರ್ ಪ್ಲೇ’ಯ ಗುಣದಿಂದಾಗಿ ಅವು ಕೇವಲ ಜನಪ್ರಿಯ ಬರೆಹಗಳಾಗುವುದಿಲ್ಲ. ಅವು ಯಾವ ಹಂತದಲ್ಲೂ ಓದುಗನನ್ನು ಓಲೈಸದೆಯೇ ಅವನನ್ನು ಒಳಗೊಂಡು ಅವನನ್ನು ಚಿಂತಿಸುವಂತೆ, ಪ್ರತಿಕ್ರಿಯಿಸುವಂತೆ ಪ್ರಚೋದಿಸುತ್ತಾ ಹೋಗುತ್ತವೆ. ಇದು ಅನಂತಮೂರ್ತಿಯವರ ಬರೆಹ/ಮಾತುಗಳೆರಡರಲ್ಲೂ ಇರುವ ಅಪರೂಪದ ಶಕ್ತಿ. ಪರಿಣಾಮವಾಗಿ ನಾವು ಅವರೊಂದಿಗೆ ಜಗಳವಾಡುತ್ತಿದ್ದರೂ ಅವರ ಪ್ರಭಾವಕ್ಕೆ ಒಳಗಾಗಿರುತ್ತೇವೆ. ಈ ಬಗೆಯ ಮತ್ತೊಂದು ಗದ್ಯವಿದ್ದರೆ ಅದು ಪಿ. ಲಂಕೇಶ್ ಅವರದ್ದು ಮಾತ್ರ ಎನಿಸುತ್ತದೆ. ಅನಂತಮೂರ್ತಿಯವರ ಜತೆ ಸಂವಾದಕ್ಕೆ ತೊಡಗಿದರೆ ಸೋತು ಹೋಗಿಬಿಡುತ್ತೇವೆ ಎಂಬ ಭಯದಿಂದಲೋ ಏನೋ ಅವರ ‘ಕಟು ವಿಮರ್ಶಕ’ರು ಕಲ್ಲೆಸೆದು ಓಡಿ ಹೋಗುವ ತುಂಟ ಹುಡುಗರ ತಂತ್ರವನ್ನು ಬಳಸುತ್ತಾರೆ. ಇದೊಂದು ಬಗೆಯ ‘ಹಿಟ್ ಅಂಡ್ ರನ್’ ವಿಮರ್ಶೆ. ತಮಾಷೆಯೆಂದರೆ ಈ ಕ್ರಿಯೆಯಲ್ಲಿಯೂ ಅನಂತಮೂರ್ತಿಯವರು ಪ್ರತಿಕ್ರಿಯಿಸಲಿ ಎಂಬ ಅವರ ಆಸೆಯೇ ಮೇಲುಗೈ ಸಾಧಿಸಿರುತ್ತದೆ.

ಗೋ ಮಾಂಸದ ವಿವಾದಕ್ಕೆ ಸ್ಪಂದಿಸಿದ ಲೇಖನವೊಂದು ಈ ಸಂಕಲನದಲ್ಲಿದೆ. ಇದನ್ನು ಅನಂತಮೂರ್ತಿಯವರ ಗದ್ಯದ ಸಂವಾದದ ಶಕ್ತಿಯ ಉತ್ತಮ ಉದಾಹರಣೆ ಗಳಲ್ಲೊಂದೆಂದು ನಾನು ಭಾವಿಸುತ್ತೇನೆ. ಇದಕ್ಕೆ ಫಣಿರಾಜ್ ಅವರ ಭಿನ್ನಮತವಿದೆಯೆಂದು ಗೊತ್ತಿದ್ದೂ ಇದನ್ನೇ ಆರಿಸಿಕೊಳ್ಳುತ್ತೇನೆ. ಗೋವನ್ನು ಭಕ್ತಿಯಿಂದ ಕಾಣುವುದನ್ನು ಆ ಭಕ್ತಿಯ ಜತೆಗಿರುವ ಮುಗ್ದತೆಯೊಂದಿಗೆ ಅರ್ಥ ಮಾಡಿಕೊಳ್ಳುವ ಮನಸ್ಸಿಗೆ ಮಾತ್ರ ಈ ಲೇಖನ ಬರೆಯಲು ಸಾಧ್ಯ. ಗೋಮಾಂಸದ ವಿವಾದಕ್ಕೆ ಸ್ಪಂದಿಸುವ ರ್ಯಾಡಿಕಲ್‌ಗಳಾದ ನಾವು ಗೋವಿನ ಪಾವಿತ್ಯ್ರವನ್ನುಗೌರವಿಸುವ ಎಲ್ಲರನ್ನೂ ‘ಇವರು ಗೋವಿನ ಪಾವಿತ್ರ್ಯವನ್ನು ರಾಜಕೀಯ ಅಸ್ತ್ರವನ್ನಾಗಿಸಿಕೊಂಡವರ ಬಲಿಪಶುಗಳಾಗಿರಬಹುದೇ?’ ಎಂಬ ‘ಬೌದ್ಧಿಕ ಎಚ್ಚರ’ದೊಂದಿಗೆ ಅರ್ಥ ಮಾಡಿಕೊಳ್ಳುತ್ತೇವೆ. ಇಲ್ಲಿಗೆ ಗೋಮಾಂಸದ ರಾಜಕಾರಣವನ್ನು ಹುಟ್ಟುಹಾಕಿದವರ ಅಜೆಂಡ ಪೂರ್ಣಗೊಳ್ಳುತ್ತದೆ. ನಮಗರಿವಿಲ್ಲದಂತೆಯೇ ನಾವು ಗೋಮಾಂಸದ ರಾಜಕಾರಣದ ವಿಜೃಂಭಣೆಗೆ ಸಹಾಯ ಮಾಡಿಬಿಡುತ್ತೇವೆ. ಅನಂತಮೂರ್ತಿಯವರು ಗೋಮಾಂಸದ ರಾಜಕಾರಣವನ್ನು ಗೋವನ್ನು ಪವಿತ್ರವಾಗಿ ಕಾಣುವವರ ದೃಷ್ಟಿಯಿಂದಲೂ ವಿರೋಧಿಸುತ್ತಾರೆ. ಇದನ್ನು ‘ಕ್ರಿಟಿಕಲ್ ಇನ್‌ಸೈಡರ್’ಎಂದು ಕರೆಯುವುದು ತೀರಾ ಸರಳೀಕರಣವಾಗಿಬಿಡುತ್ತದೆ. ಈ ಲೇಖನದಲ್ಲಿ ರೂಪಕದಂತೆ ಬಳಕೆಯಾಗಿರುವ ‘ನೀನಾಗರಿಗಾದೆಯೋ ಎಲೆಮಾನವ… ಹರಿ ಹರಿ ಗೋವು ನಾನು’ ಎಂಬ ಪದ್ಯ ಗೋವಿನ ಪಾವಿತ್ರ್ಯ ಮತ್ತು ಮಾಂಸಗಳೆರಡರನ್ನೂ ರಾಜಕಾರಣಕ್ಕೆ ಬಳಸಿಕೊಳ್ಳುವ ಎಲ್ಲರನ್ನೂ ಕಟೆಕಟೆಯಲ್ಲಿ ನಿಲ್ಲಿಸುತ್ತದೆ. ಗೋವಿನ ಪಾವಿತ್ಯ್ರವು ‘ಗೋಮಾಂಸದ ರಾಜಕಾರಣ’ ವಾಗಲು ಅವಕಾಶ ಮಾಡಿಕೊಟ್ಟ ‘ಮುಗ್ಧ ಆಸ್ತಿಕ’ರೊಳಗೆ ಕ್ರಿಟಿಕಲ್ ಇನ್‌ಸೈಡರ್ ಆಗುವ ಅನಂತಮೂರ್ತಿ ಅದೇ ಹೊತ್ತಿನಲ್ಲಿ ಗೋಮಾಂಸದ ರಾಜಕಾರಣವನ್ನು ವಿರೋಧಿಸುವ ರ್ಯಾಡಿಕಲ್‌ಗಳಾದ ನಮ್ಮಮಧ್ಯೆಯೂ ಕ್ರಿಟಿಕಲ್ ಇನ್‌ಸೈಡರ್ ಆಗುತ್ತಾರೆ.

’ಅಲ್ಲಿರುವ ತಿರುಪತಿಗೆ ಇಲ್ಲೊಂದು ತಿರುಪತಿ’ ಲೇಖನ ಹುಟ್ಟುಹಾಕುವ ಸಂವಾದವೂ ಇಂಥದ್ದೇ. ದೇವಸ್ಥಾನ, ಆರತಿ, ಜಾತ್ರೆಗಳ ಸೌಂದರ್ಯವನ್ನು ವಿವರಿಸುವಾಗ ಅವುಗಳ ಸೌಂದರ್ಯಾಸ್ವಾದನೆಗೆ ಅಗತ್ಯವಿರುವ ಮುಗ್ಧ ಭಕ್ತಿಯ ಜತೆಗೇ ಗ್ರಹಿಸುತ್ತಾರೆ. ಎಲ್ಲೂ ಪೊಲಿಟಿಕಲಿ ಕರೆಕ್ಟ್ ಆದ ಜಾತ್ಯತೀತನಾಗಲು ಪ್ರಯತ್ನಿಸುವುದಿಲ್ಲ. ಆದರೆ ಅನಂತಮೂರ್ತಿ ಕೇವಲ ಮುಗ್ಧ ಭಕ್ತನಲ್ಲ. ಈ ಲೇಖನದ ಎರಡನೇ ಭಾಗದಂತೆ ಇರುವ ‘ಎಲ್ಲವನ್ನೂ ಚೀಪ್‌ಗೊಳಿಸುವ ಆಧುನೀಕರಣದ ಕೊನೆಯ ಸಾಲುಗಳು ಅನಂತಮೂರ್ತಿಯವರು ದೇವರು, ದೇವಸ್ಥಾನ, ಭಕ್ತಿಗಳನ್ನು ಹೇಗೆ ನೋಡುತ್ತಾರೆ ಎಂಬುದಕ್ಕೆ ಸಾಕ್ಷಿಯಾಗುತ್ತವೆ. ‘ದೇವರನ್ನು ಇದ್ದಾನೆ ಎಂದು ಭಾವಿಸಿ ಸಂಸಾರವನ್ನೇ ತೊರೆದ ಅಕ್ಕ, ಮೀರಾರನ್ನು ಕಂಡೂ ಬೆರಗಾಗುವುದು; ಜೊತೆಗೇ, ಬಡಜನರು ಈ ಲೋಕದ ಒಡೆಯರಾಗುವ ಕನಸನ್ನು ಕಂಡ ಕ್ರಿಸ್ತನನ್ನೂ ಅಲ್ಲಾಹುವಿಗೆ ತನ್ನನ್ನು ಸರ್ವಾರ್ಪಣೆ ಮಾಡಿ ಪೈಗಂಬರರನ್ನೂ ನಮ್ಮ ಪೂರ್ವಸೂರಿಗಳು ಎಂದು ಪವಿತ್ರ ಭಾವನೆಯಲ್ಲಿ ಗೌರವಿಸುವುದು ವೈಯಕ್ತಿಕವಾಗಿ ಮುಖ್ಯ ಮಾತ್ರವಲ್ಲ, ಹಿಂಸೆಯು ನಮ್ಮ ಕಾಲದ ತಲ್ಲಣಗಳಿಂದ ಪಾರಾಗಲು ಅಗತ್ಯ. ಈ ಅಗತ್ಯದಲ್ಲಿ ರಾಜಕೀಯ ಜಾಣತನವಿಲ್ಲ; ನಾವೆಲ್ಲರೂ ಹುಡುಕುವ ಸತ್ಯವೂ ಎಲ್ಲಾ ಧರ್ಮಗಳಲ್ಲಿ ಹುಡುಕಿಕೊಳ್ಳಬೇಕಾದ ಸತ್ಯವೂ ಅಡಗಿದೆ. ಯಾಕೆಂದರೆ, ಈ ಪ್ರಪಂಚದಲ್ಲಿ ಆಚರಣೆಯಲ್ಲಿರುವ ಯಾವ ಮತವೂ ತನ್ನಲ್ಲೇ ತನ್ನಷ್ಟಕ್ಕೇ ಪರಿಪೂರ್ಣವಲ್ಲ; ಪೂರ್ಣತೆಗೆ ಹಂಬಲಿಸದ ಯಾವ ಮತವೂ ಇಲ್ಲ.’

* * *

ನಮ್ಮ ಕಾಲದ ಇಬ್ಬರು ಪ್ರಖರ ಚಿಂತಕರಾದ ಎಡ್ವರ್ಡ್‌ಸೈದ್ ಮತ್ತು ನೋಮ್ ಚಾಮ್‌ಸ್ಕಿ ಸತ್ಯವನ್ನು ಯಾರಿಗೆ ಹೇಳಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಎರಡು ಧ್ರುವಗಳಲ್ಲಿ ನಿಂತು ವಾದಿಸಿದ್ದರು. ಎಡ್ವರ್ಡ್‌ಸೈದ್ ‘ಅಧಿಕಾರಕ್ಕೆ (Power) ಸತ್ಯಹೇಳಬೇಕು’ ಎಂದರೆ ಚಾಮ್‌ಸ್ಕಿ ‘ಜನರಿಗೆ ಸತ್ಯ ಹೇಳಬೇಕು’ ಎಂದು ವಾದಿಸಿದ್ದ. ಈ ವಿಷಯಕ್ಕೆ ಬಂದರೆ ಅನಂತಮೂರ್ತಿಯವರು ಸೈದ್‌ನ ಉದ್ದೇಶವನ್ನು ಇಟ್ಟುಕೊಂಡು ಚಾಮ್‌ಸ್ಕಿಯ ವಾದವನ್ನು ಅನುಸರಿಸುತ್ತಾರೆ. ವರ್ತಮಾನದ ರಾಜಕಾರಣಕ್ಕೆ ಸ್ಪಂದಿಸುವ ಪ್ರತೀ ಲೇಖನದಲ್ಲೂ ಇದು ಸ್ಪಷ್ಟ. ಅಧಿಕಾರದ ಕೇಂದ್ರಗಳಿಗೆ ಸತ್ಯವನ್ನು ಮುಟ್ಟಿಸುವ ಜವಾಬ್ದಾರಿಯನ್ನು ಅವರು ಜನರಿಗೆ ಸತ್ಯವನ್ನು ಹೇಳುವ ಮಾರ್ಗದಲ್ಲಿ ಸಾಧಿಸಲು ಹೊರಡುತ್ತಾರೆ.

ಮೀಸಲಾತಿಯ ಕುರಿತ ಅನಂತಮೂರ್ತಿಯವರ ನಿಲುವುಗಳು ಕೇವಲ ಅದರ ‘ಪರ – ವಿರೋಧ’ದ ಮಾದರಿಗಳಲ್ಲಿ ಹಿಡಿದಿಡುವಂಥದ್ದಲ್ಲ. ಇದು ಜಾತೀಯ ಅಸಮಾನತೆಯ ಚರ್ಚೆಯಾಗುವಂತೆಯೇ ಆಧುನಿಕತೆ ಸೃಷ್ಟಿಸಿರುವ ಹೊಸ ಜಾತಿಗಳು ಹಾಗೂ ಸಾಂಸ್ಕೃತಿಕ ಅನನ್ಯತೆಯ ಕುರಿತ ಚರ್ಚೆಯೂ ಹೌದು. ಮೀಸಲಾತಿಯ ಕುರಿತ ಚರ್ಚೆಯಲ್ಲಿ ‘ಮೆರಿಟ್‌’ನ ಪರವಾಗಿ ಮತ್ತು ವಿರುದ್ಧವಾಗಿ ವಾದಿಸುವವರೆಲ್ಲರೂ ಆಧುನಿಕ ಅಭಿವೃದ್ಧಿಯ ಸವಾಲುಗಳನ್ನು ಪರಿಗಣಿಸುವುದಿಲ್ಲ. ಇದು ಸೃಷ್ಟಿಸಿರುವ ಹೊಸ ಸಾಮಾಜಿಕ ಶ್ರೇಣೀಕರಣ ತಂತ್ರಜ್ಞಾನದ ನಿಜ ವಾರಸುದಾರರನ್ನು ಅಂಚಿನಲ್ಲಿಯೇ ಉಳಿಸಿ ಕೌಶಲ್ಯಗಳನ್ನು ತಮಗಾಗಿ ದುಡಿಸಿಕೊಳ್ಳುವ ‘ಮ್ಯಾನೇಜ್‌ಮೆಂಟ್ ಎಕ್ಸ್‌ಪರ್ಟ್’ಗಳೇ ತಂತ್ರಜ್ಞಾನ ತಿಳಿದವರಾಗುತ್ತಿರುವ ಕ್ರಿಯೆಯ ಅಪಾಯಗಳಿಗೆ ಒತ್ತು ನೀಡಿ ಅನಂತಮೂರ್ತಿ ಮೀಸಲಾತಿಯನ್ನು ಸಮರ್ಥಿಸುತ್ತಾರೆ. ಇದನ್ನು ವಿವರಿಸಲು ಅವರು ಆರಿಸಿಕೊಳ್ಳುವ ಅತ್ಯಾಧುನಿಕ ಲೆದರ್ ಟೆಕ್ನಾಲಜಿ ಇನ್ಸ್‌ಟಿಟ್ಯೂಟ್‌ನ ಉದಾಹರಣೆ ಈಗಿನ ಮೀಸಲಾತಿ ಸೋತಿರುವುದೆಲ್ಲಿ ಎಂದು ಹೇಳುವಂತೆಯೇ ಪರ್ಯಾಯ ಹೇಗಿರಬಹುದು ಎಂಬುದನ್ನೂ ವಿವರಿಸುತ್ತದೆ.

ಲೆದರ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್ ಒಂದನ್ನು ಸ್ಥಾಪಿಸಿ ಅದಕ್ಕೆ ಪ್ರವೇಶ ಪಡೆಯಲು ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಪ್ರಥಮ ದರ್ಜೆ, ಆಮೇಲೋಂದು ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆಗಳನ್ನೆಲ್ಲಾ ಅರ್ಹತೆಯಾಗಿಟ್ಟರೆ ಅಲ್ಲಿ ಚಪ್ಪಲಿಯನ್ನು ಕಾಲಿಗೆ ಹಾಕುವುದನ್ನು ಬಿಟ್ಟರೆ ಅದರ ಬಗ್ಗೆ ಯಾವುತ್ತೂ ಯೊಚಿಸದವರೇ ಅಲ್ಲಿಗೆ ಪ್ರವೇಶ ಪಡೆಯುತ್ತಾರೆ. ಅವರು ಚಪ್ಪಲಿಯನ್ನು ತಯಾರಿಸುವ ತಂತ್ರಜ್ಞಾನದ ಬಗ್ಗೆ ಆಲೋಚಿಸದೆ ತಂತ್ರಜ್ಞಾನ ಗೊತ್ತಿರುವ ಕುಶಲಕರ್ಮಿಗಳನ್ನು ದುಡಿಸಿಕೊಳ್ಳುವ ಮ್ಯಾನೇಜರ್‌ಗಳಾಗುತ್ತಾರೆ.

ಕೆಳಜಾತಿಯ ಕುಶಲಕರ್ಮಿಯ ಕೈಯಲ್ಲಿರುವ ತಂತ್ರಜ್ಞಾನ ಮೇಲ್ಜಾತಿಯ ಮ್ಯಾನೇಜರ್ ಗಳಿಗೆ ಬೇಕಿರುವ ಉತ್ಪನ್ನವಾಗುವ ಕ್ರಿಯೆಯನ್ನು ಡಿ.ಆರ್.ನಾಗರಾಜ್ ಅವರು ಪ್ರತಿಪಾದಿಸಿದ ಟೆಕ್ನಿಸೈಡ್‌ಗೆ ಸಮೀಕರಿಸುವ ಈ ಉದಾಹರಣೆಗೆ ಇನ್ನೂ ಒಂದು ಆಯಾಮವಿದೆ. ಆರ್ಥಿಕ ಉದಾರಿಕರಣದ ಭಾಗವಾಗಿ ಭಾರತ ಸರಕಾರ ಒಪ್ಪಿಕೊಂಡಿರುವ ಪೇಟೆಂಟ್ ಪದ್ಧತಿಯ ಹಿನ್ನೆಲೆಯಲ್ಲಿ ದೇಶೀ ತಂತ್ರಜ್ಞಾನವನ್ನು ನೋಡಿದರೆ ಇದು ಗೊತ್ತಾಗುತ್ತದೆ. ಪೇಟೆಂಟ್ ಆಫೀಸಿಗೆ ಅರ್ಥವಾಗುವ ರೀತಿಯಲ್ಲಿ ತಂತ್ರಜ್ಞಾನವೊಂದನ್ನು ವಿವರಿಸಲು ಸಾಧ್ಯವಿರುವವರಿಗೆ ಅದರ ಪೇಟೆಂಟ್ ದೊರೆಯುತ್ತದೆ. ಈ ಪೇಟೆಂಟ್‌ನ ಮೂಲಕ ಯಾರದ್ದಾದರೂ ಹಕ್ಕು ಉಲ್ಲಂಘನೆಯಾಗಿದ್ದರೆ ಅವರು ಅದನ್ನು ಪ್ರತಿಭಟಿಸಲು ಪೇಟೆಂಟ್ ಆಫೀಸಿನ ಭಾಷೆಯನ್ನು ತಿಳಿದಿರಬೇಕಾಗುತ್ತದೆ. ಇಲ್ಲದಿದ್ದರೆ ಆ ಪ್ರತಿಭಟನೆಯನ್ನೂ ಪೇಟೆಂಟ್ ಆಫೀಸ್ ಮಾನ್ಯಮಾಡುವುದಿಲ್ಲ. ಈಗ ಮೀಸಲಾತಿ ಬೇಡ ಎನ್ನುತ್ತಿರುವವರೆಲ್ಲಾ ತಮಗೆ ತಾವೇ ‘ಪ್ರತಿಭೆ’ಗೆ ‘ಮೆರಿಟ್’ ಎಂಬ ಪೇಟೆಂಟ್ ಕೊಟ್ಟುಕೊಂಡಿದ್ದಾರೆ. ಅನಂತಮೂರ್ತಿ ಪ್ರತಿಭೆಗೆ ಕೊಟ್ಟ ಪೇಟೆಂಟ್‌ಗೆ ಮಾನ್ಯತೆ ಇಲ್ಲ ಎಂಬುದನ್ನು ಸಾರ್ವತ್ರಿಕವಾದ ಭಾಷೆಯೊಂದರಲ್ಲಿ ಅಂದರೆ ಜನರಿಗೆ ಅರ್ಥವಾಗುವ ಹಾಗೆಯೇ ಅಧಿಕಾರಿವೂ ಆಲಿಸಲೇ ಬೇಕಾದ ಭಾಷೆಯಲ್ಲಿ ಹೇಳುತ್ತಾರೆ.

* * *

‘ಅನುಸಂಧಾನ’, ‘ಸಂಸಾರಿಯ ಆಯ್ಕೆ’ಗಳೆಂಬ ಕೆ.ವಿ. ಸುಬ್ಬಣ್ಣ ಅವರ ಪರಿಕಲ್ಪನೆಗಳು ಅನಂತಮೂರ್ತಿಯವರಿಗೆ ಇಷ್ಟ. ಇನ್ನೊಂದರ್ಥದಲ್ಲಿ ಈ ಪರಿಕಲ್ಪನೆಗಳಿಗೆ ಒಂದು ತಾತ್ವಿಕ ಚೌಕಟ್ಟನ್ನು ರೂಪಿಸಿದ್ದು ಅನಂತಮೂರ್ತಿಯವರ ಮಾತು ಮತ್ತು ಬರೆಹಗಳು. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಅನಂತಮೂರ್ತಿಯವರದ್ದು ‘ಸಂಸಾರಿಯ ಆಯ್ಕೆ’. ಈ ಕಾರಣದಿಂದಾಗಿಯೇ ಅವರುಇಂಗ್ಲಿಷ್‌ನ್ನು ನಿರಾಕರಿಸದೆ ಅದನ್ನು ಪಳಗಿಸಿಕೊಳ್ಳುವ ಮಧ್ಯಮ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ಮಾತ್ರವಲ್ಲ ಇದನ್ನು ವರ್ತಮಾನದ ಆರ್ಥಿಕತೆಯ ಹಿನ್ನೆಲೆಯಲ್ಲಿ ಒಂದು ಪರ್ಯಾಯ ರಾಜಕಾರಣವಾಗಿಯೂ ಪ್ರತಿಪಾದಿಸುತ್ತಾರೆ. ‘ಇಂಗ್ಲಿಷ್ ಕಲಿಯಿರಿ – ಕನ್ನಡದಲ್ಲಿ ಕಲಿಯಿರಿ’ ಎಂಬ ಘೋಷಣೆಯ ಹಿಂದೆ ಅನಂತಮೂರ್ತಿಯವರಿಗೆ ‘ಅನುಸಂಧಾನ’ದಲ್ಲಿ ಇರುವ ನಂಬಿಕೆ ಕಾಣಿಸುತ್ತದೆ. ಸಂಸ್ಕೃತವನ್ನು ಅರಗಿಸಿಕೊಂಡು ಕನ್ನಡ ಬೆಳೆದ ಹಾಗೆ ಇಂಗ್ಲಿಷನ್ನು ಅರಗಿಸಿಕೊಂಡೂ ಕನ್ನಡ ಬೆಳೆಯುವ ಸಾಧ್ಯತೆಯನ್ನು ಅವರು ಕಾಣುತ್ತಾರೆ. ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಬೋಧಿಸುವ ಬದಲಿಗೆ ಮಾನವಿಕ ವಿಷಯವೊಂದನ್ನು ಕನ್ನಡದಲ್ಲಿಯೇ ಕಲಿಸಬೇಕು ಎನ್ನುವುದು ಇದೇ ಕಾರಣಕ್ಕಾಗಿ. ಈ ಚರ್ಚೆ ಇಲ್ಲಿಗೇ ನಿಲ್ಲುವುದಿಲ್ಲ. ‘ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣದ ಯಜ್ಞ’ವೊಂದು ಸಾಧ್ಯವಾಗುವದು ಅವರ ಕನಸು. ಶಿಕ್ಷಣಕ್ಕೆ ಸಂಬಂಧಿಸಿದ ಕೇಂದ್ರೀಯ ಸಲಹಾ ಮಂಡಳಿಯ ಉಪಸಮಿತಿಯ ಮುಖ್ಯಸ್ಥರಾಗಿ ಅವರು ನೀಡಿದ ವರದಿಯ ಮುಖ್ಯ ಅಂಶವೇ ಸಾಮಾನ್ಯ ಶಾಲೆ. ಅನಂತಮೂರ್ತಿಯವರ ಸಾಮಾನ್ಯ ಶಾಲೆಗಳ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅರ್ಥಶಾಸ್ತ್ರಜ್ಞ ಎ. ನಾರಾಯಣ ಸಾಮಾನ್ಯ ಶಾಲೆಗಳ ಮಹತ್ವವನ್ನು ಕೃಷ್ಣ ಮತ್ತು ಕುಚೇಲನ ರೂಪಕದ ಮೂಲಕ ವಿವರಿಸಿದ್ದರು. ಕೃಷ್ಣನೂ ಕುಚೇಲನೂ ಒಂದೇ ಗುರುಕುಲದಲ್ಲಿ ಕಲಿತಿದ್ದರಿಂದಷ್ಟೇ ಕುಚೇಲನಿಗೆ ಕೃಷ್ಣನನ್ನು ಭೇಟಿಯಾಗಲು ಸಾಧ್ಯವಾಯಿತು. ಇದೊಂದು ರೀತಿಯ ಸೋಷಿಯಲ್ ಕ್ಯಾಪಿಟಲ್‌ನ ಅನುಕೂಲತೆ. ಸಾಮಾನ್ಯ ಶಾಲೆ ಕೇವಲ ಒಂದು ‘ಐಡಿಯಾ’ ಮಾತ್ರ ಅಲ್ಲ. ಅದೊಂದು ಅಭಿವೃದ್ಧಿ ಮಾದರಿಯೂ ಹೌದು.

ಅನಂತಮೂರ್ತಿಯವರ ಈ ಸಂಸಾರಿಯ ಚಿಂತನೆಗಳು ರಾಜಕೀಯಕ್ಕೆ ಬರುವಾಗ ಪಡೆಯುವ ಸ್ವರೂಪದ ಬಗ್ಗೆ ನನಗೆ ಯಾವಾಗಲೂ ಜಗಳಗಳಿವೆ. ವರ್ತಮಾನದ ರಾಜಕೀಯ ಸಂಸ್ಕೃತಿಯನ್ನು ನಿಷ್ಠುರವಾಗಿ ವಿಮರ್ಶಿಸುವಾಗಲೂ ಅನಂತಮೂರ್ತಿಯವರು ಎಂ.ಪಿ. ಪ್ರಕಾಶ್, ಸಿದ್ಧರಾಮಯ್ಯ ತರಹದ ‘ಕೇವಲ ರಾಜಕಾರಣಿ’ಗಳೂ ಮುಂದೆ ಎಂದಾದರೊಂದು ದಿನ ಲೋಕೋತ್ತರವಾದುದನ್ನು ಸಾಧಿಸಬಹುದು ಎಂದು ಮುಗ್ಧವಾಗಿ ನಂಬಿಬಿಡುತ್ತಾರೆ. ಈ ರಾಜಕಾರಣಿಗಳಾದರೂ ವರ್ತಮಾನದ ಅವರ ಸ್ಥಿತಿಯಲ್ಲಿ ಇದಕ್ಕೆ ಅರ್ಹರಲ್ಲ.

ವೋಟ್ ಬ್ಯಾಂಕ್ ರಾಜಕಾರಣದ ಕುರಿತ ಅನಂತಮೂರ್ತಿಯವರ ನಿಲುವುಗಳ ಬಗ್ಗೆ ಒಂದು ಜಗಳ ತೆಗೆಯಲೇಬೇಕಾಗಿದೆ. ಕಾಂಗ್ರೆಸ್‌ನ ಮುಸ್ಲಿಂ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಿಜೆಪಿಯ ಹಿಂದೂ ವೋಟ್ ಬ್ಯಾಂಕ್ ರಾಜಕಾರಣ ಹುಟ್ಟಿದೆಯೆಂಬ ಸರಳ ಸೂತ್ರವೊಂದು ಅನಂತಮೂರ್ತಿಯವರ ಬರೆಹಗಳಲ್ಲಿದೆ. ಕಾಂಗ್ರೆಸ್ಸಿಗರು ಮಾಡಿದ ವೋಟ್ ಬ್ಯಾಂಕ್ ಕೇವಲ ಮುಸ್ಲಿಮರದ್ದಲ್ಲ. ಅವರು ದಲಿತರ ವೋಟ್ ಬ್ಯಾಂಕ್ ಸೃಷ್ಟಿಸಿದ್ದಾರೆ. ಉತ್ತರ ಪ್ರದೇಶದ ಉದಾಹರಣೆಯನ್ನು ತೆಗೆದುಕೊಂಡರೆ ಅಲ್ಲೊಂದು ಬ್ರಾಹ್ಮಣ ವೋಟ್ ಬ್ಯಾಂಕ್ ಸೃಷ್ಟಿಸಿದ್ದರು. ಕರ್ನಾಟಕದ ರಾಜಕಾರಣವನ್ನು ನೋಡಿದರೆ ಇಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ವೋಟ್ ಬ್ಯಾಂಕ್ ಸೃಷ್ಟಿಯಾಗಲು ಕಾರಣವಾದದ್ದೇ ಈ ಕಾಂಗ್ರೆಸ್‌ನಿಂದ. ಈ ಎಲ್ಲಾ ವೋಟ್ ಬ್ಯಾಂಕ್‌ಗಳನ್ನು ಮರೆತು ಮುಸ್ಲಿಂ ವೋಟ್ ಬ್ಯಾಂಕ್‌ನ ಬಗ್ಗೆ ಚರ್ಚಿಸುವುದರಿಂದ ಅನೇಕ ಅಪಾಯಗಳಿವೆ. ಇದು ಒಬ್ಬ ಮುಸ್ಲಿಂ ಸತ್ತರೆ ಕಾಂಗ್ರೆಸ್‌ಗೆ ಅನುಕೂಲ, ಒಬ್ಬ ಹಿಂದೂ ಸತ್ತರೆ ಬಿಜೆಪಿಗೆ ಅನುಕೂಲ ಎಂಬ ಮತ್ತೊಂದು ಸರಳ ಸಮೀಕರಣದಲ್ಲಿ ಕೊನೆಯಾಗುತ್ತದೆ. ಕರ್ನಾಟಕದಲ್ಲಿ ಹಾಗೆಯೇ ಭಾರತಾದ್ಯಂತ ಇರುವ ಕೋಮುವಾದದ ಈಗಿನ ಸ್ವರೂಪ ಹೇಗಿದೆಯೆಂದರೆ ಒಬ್ಬ ಮುಸ್ಲಿಮ ಸತ್ತರೂ ಒಬ್ಬ ಹಿಂದೂ ಸತ್ತರೂ ಬಿಜೆಪಿಗೇ ಅನುಕೂಲವಾಗುತ್ತದೆ. ಕಳೆದ ಹದಿನೈದು ವರ್ಷಗಳಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಇದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆಗಳಿಗೆ ತಥಾಕಥಿತ ಜಾತ್ಯತೀತ ಪಕ್ಷಗಳಿಂದ ಬಂದ ಪ್ರತಿಕ್ರಿಯೆ ಬಿಜೆಪಿಯ ಪ್ರತಿಕ್ರಿಯೆಗಿಂತ ಭಿನ್ನವಾಗಿರಲಿಲ್ಲ. ಇದು ಕೋಮುವಾದೀ ರಾಜಕಾರಣದ ಬೇರೆಯದೇ ಆದ ಸ್ವರೂಪವನ್ನು ಹೇಳುತ್ತಿದೆ. ಅನಂತಮೂರ್ತಿಯವರು ಮುಗ್ಧವಾಗಿ ಗ್ರಹಿಸುತ್ತಿರುವ ‘ಸಂಪ್ರದಾಯಿಕ ಕೋಮುವಾದ’ ಇದಲ್ಲ.

* * *

ನಾನು ಹೇಳಬೇಕಾಗಿರುವುದಕ್ಕಿಂತ ಸ್ವಲ್ಪ ಹೆಚ್ಚೇ ಇಲ್ಲಿ ಹೇಳಿದ್ದೇನೆ. ಅನಂತಮೂರ್ತಿಯವರ ಪ್ರೀತಿಯನ್ನು ಸಲುಗೆಯಾಗಿ ಭಾವಿಸಿ ಕೆಲ ಜಗಳಗಳನ್ನೂ ತೆಗೆದಿದ್ದೇನೆ. ಈ ರೀತಿಯ ಮಾತುಗಳನ್ನಾಡಲು ನಾನೆಷ್ಟು ಅರ್ಹ ಎಂಬ ಭಯ, ಸಂಕೋಚದೊಂದಿಗೇ ಮೇಲಿನ ಎಲ್ಲವನ್ನೂ ಬರೆದಿದ್ದೇನೆ.

* * *