ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷನಾಗಿಬಿಡು ಎಂಬ ಒಂದು ವ್ಯಂಗ್ಯದ ಮಾತಿದೆ. ನಾನೀಗ ಆಗಿಬಿಟ್ಟಿದ್ದೇನೆ. ಏನನ್ನೂ ಹರಿಯದೆ. ಏನನ್ನೂ ಕೆಡವದೆ. ಏನನ್ನೂ ಬರೆಯದೆ. ಲಂಡನ್ನಿನಿಂದ ಬಿಬಿಸಿಯವರು ಮೂರು ಬಾರಿ ಕರೆದು ವಿಚಾರಿಸಿಕೊಂಡರು. ‘ಯುಎಸ್‌ಎ ಟುಡೆ’ ಕರೆದು ಅರ್ಧಗಂಟೆ ಕಾಲ ಮಾತಾಡಿಸಿದರು. ‘ನ್ಯೂಯಾರ್ಕ್‌ ಟೈಂಸ್‌’ರವರು ಇಲ್ಲಿಯೇ ಇರುವ ಪತ್ರಕರ್ತರೊಬ್ಬರಿಂದ ಬೇಕಾದ ಮಾಹಿತಿ ಪಡೆದರು. ಇನ್ನು ಉಳಿದ ನಮ್ಮವರೇ ಬಿಡಿ: ಎನ್‌ಡಿಟಿವಿ, ಟೈಮ್ಸ್ ನಾನಿದ್ದಲ್ಲೇ ಬಂದು, ತಮ್ಮಲ್ಲಿಗೂ ಕರೆಸಿಕೊಂಡು ಮಾತಾಡಿಸಿದರು. ಹಾಸ್ಯದಲ್ಲಿ ನಾನೀನ ಮಾತಾಡುತ್ತಿದ್ದರೂ ನಿಮಗೆ ಕೊಚ್ಚಿಕೊಂಡಂತೆ ಕಂಡೀತೆಂದು ಉಳಿದ ವಿವರಗಳನ್ನು ಬಿಟ್ಟಿದ್ದೇನೆ.

ಕಾರಣ ಇಷ್ಟೆ: ‘ಬೆಂಗಳೂರನ್ನು ಬೆಂಗಳೂರು ಎಂದು ಕರೆಯುವಂತೆ, ಬ್ಯಾಂಗಲೂರ್ ಎನ್ನದಂತೆ, ಒತ್ತಾಯಿಸಿದ್ದು ನೀವಂತೆ ಹೌದೆ?’ ಎನ್ನುವುದರಿಂದ ಶುರುವಾಗುವ ಪ್ರಶ್ನೆಯ ಮುಂದಿನ ಪ್ರಶ್ನೆಯನ್ನು ನಾನೇ ಊಹಿಸಿ ಮುಂದಾಗಿ ಉತ್ತರಿಸುತ್ತಿದೆ. ‘ನಿಜವೇ, ಬೆಂಗಳೂರು ಎಂದು ಬೆಂಗಳೂರನ್ನು ಕರೆದಾಕ್ಷಣ ಇನ್‌ಫ್ರಾಸ್ಟ್ರಕ್ಚರ್‌ಡೆವಲಪ್‌ಮೆಂಟ್ ಆದಂತೇನೂ ಅಲ್ಲ’ ಇತ್ಯಾದಿ. ಬ್ಯಾಂಗಲೂರ್‌ ಇಡೀ ಜಗತ್ತಿನಲ್ಲಿ ಬ್ರಾಂಡ್‌ ಆಗಿರುವಾಗ ಏಕಿದನ್ನು ನಿಮ್ಮ ಸರ್ಕಾರ ಬದಲುಮಾಡಿ ಬ್ರಾಂಡ್‌ನಿಂದಾಗಿ ಒದಗುವ ಎಲ್ಲ ಐಶ್ವರ್ಯವನ್ನು ಕಳೆದುಕೊಳ್ಳಬೇಕು? ‘ನಿಜವೇ, ಆದರೆ ನೋಡಿ ಮಿಸ್ಟರ್, ನಮ್ಮ ಹವಾದಿಂದಾಗಿ ಬ್ಯಾಂಗಲೂರ್‌ ಬ್ರಾಂಡ್ ಆಯಿತು; ಬ್ರಾಂಡ್ ಆದದ್ದರಿಂದ ಹವಾ ಕೆಟ್ಟಿತು. ಎಲ್ಲೆಲ್ಲೂ ಕಾರುಗಳಾಗಿ ಈಗ ಹೊಗೆಯೇ ಹೊಗೆ. ಮೂಗು ಮುಚ್ಚಿಕೊಂಡು ಓಡಾಡುವಂತೆಯೂ ಇಲ್ಲ. ಅಷ್ಟು ಜನ.’

ಬೆಂಗಳೂರಿನವರೇ ಆದ ಒಬ್ಬರು ತಪ್ಪು ತಪ್ಪು ಇಂಗ್ಲಿಷಿನಲ್ಲಿ ನನಗೆ ಬೈದು ಎರಡು ಕಾಗದ ಬರೆದಿದ್ದಾರೆ. ‘ಯಾಕ್ರೀ ನಾನು ಕನ್ನಡ ಕಲೀಬೇಕು. ನಿಮ್ಮ ಐವತ್ತು ಮಿಲಿಯನ್ ಜನರ ಒಪ್ಪಿಗೆ ಪಡೆದು ಮಾಡಿರೋ ಬದಲಾವಣೆಯೇನ್ರಿ ಇದು? ಅವರು ಏನೇ ಕರೆದರೂ ಕೆಲವು ಕೆಲವರು ಯಾಕೆ ಬ್ಯಾಂಗಲೂರ್ ಅಂತ ಕರೀಬಾರದು?’ ಗೆಳೆಯ ಆಶೀಶ್ ನಂದಿಯವರೂ, ಗೆಳೆಯರೂ ಹಿರಿಯರೂ ಆದ ಶಾರದಾ ಪ್ರಸಾದರೂ ಈ ಮನುಷ್ಯನಂತೆ ಕುಪಿತರಾಗದೆ ಅದೇ ವಾದ ಮಾಡುತ್ತಾರೆ: ‘ಇರುವುದು ಒಂದೇ ಸಿಟಿಯಲ್ಲ; ಇನ್ನೊಂದು ಸಿಟಿಯೂ ಇದೆ. ಬೆಂಗಳೂರು  ಇರಲಿ, ಬ್ಯಾಂಗಲೂರ್‌ ಕೂಡ ಇರಲಿ.’ ನನ್ನ ಉದಾರವಾದಿ ಮನಸ್ಸಿಗೆ ಈ ವಾದ ಹಿಡಿಸುತ್ತದೆ. ಸಂಕೋಚದಿಂದಲೇ ಅವರಿಗೆ ಹೇಳಲು ಪ್ರಯತ್ನಪಡುತ್ತೇನೆ:

‘ನೋಡಿ, ಬ್ಯಾಂಗಲೂರ್‌ಗೆ ಇನ್ನೊಂದು ಬೆಂಗಳೂರು ಇದೆ ಎಂದು ಗೊತ್ತೇ ಇಲ್ಲ. ರಾಜಕುಮಾರ್‌ ಅಪಹರಣವಾದಾಗ, ತೀರಿಕೊಂಡಾಗ ಅವರ ಕಾರುಗಳ ಮೇಲೆ ಜನ ಕಲ್ಲು ತೂರಿದಾಗ, ಬಸ್ಸು ಸುಟ್ಟಾಗ ಬೆಂಗಳೂರು ಕೂಡ ಇರುವುದು ಗೊತ್ತಾಗುತ್ತದೆ. ಆದರೆ ಅದೊಂದು ಕ್ಷಣ ಮಾತ್ರ. ಹಿಂದೆ ಬಂದವರೆಲ್ಲ ಕನ್ನಡವನ್ನು ಮಾತಾಡಲಾದರೂ ಕಲಿಯುತ್ತ ಇದ್ದರು. ಮಾಸ್ತಿ, ಪುತಿನರಂತಹ ತಮಿಳು ಮಾತಾಡುವವರು ಕನ್ನಡದ ಶ್ರೇಷ್ಠ ಲೇಖಕರಾದರು. ಈಗಿನವರ ಹೆಂಡಂದಿರು ಕೂಡ ಕನ್ನಡ ಕಲಿಯಬೇಕಾಗಿಲ್ಲ. ತರಕಾರಿಯವನ ಹತ್ತಿರ ಅವರು ಚೌಕಾಸಿ ಮಾಡಬೇಕಾಗಿಲ್ಲ. ಫುಡ್‌ಮಾಲ್‌ಗಳು, ಫುಡ್‌ವರ್ಲ್ಡ್‌ಗಳು ಎಲ್ಲೆಲ್ಲೂ ಇವೆ. ಚೌಕಾಸಿ ಮಾಡಬಲ್ಲ, ಹರಟೆಹೊಡೆದು ಕಾಲಕಳೆಯಬಲ್ಲ ಸಣ್ಣ ಪುಟ್ಟ ಅಂಗಡಿಗಳೆಲ್ಲವೂ ಮುಚ್ಚಿ ಹೋಗಲಿವೆ. ತಾವಿರುವ ಜಾಗ ತಮ್ಮದೇ ಆದರೆ, ಅದನ್ನು ಮರಿಕೊಂಡರೆ ಅದು ಕೆಲಸವಿಲ್ಲದ ಕೋಟ್ಯಾಧಿಪತಿಗಳಾಗುತ್ತಾರೆ. ಬಾಡಿಗೆಗೆ ಹಿಡಿದವರಾದರೆ ದೆಸೆ ದಿಕ್ಕಿಲ್ಲದ ಬಡಪಾಯಿಗಳಾಗುತ್ತಾರೆ. ಈಗ ಇಂಗ್ಲಿಷಿನಲ್ಲೇ ಇಲ್ಲ ಹೆಂಗಸರು ಬ್ರಿಂಜಾಲ್, ಲೇಡೀಸ್ ಫಿಂಗರ್‌ ಬನಾನಾ ಕೊಳ್ಳಬಹುದು. ಇನ್ನು ಅವರ ಮಕ್ಕಳಿಗಂತೂ ಇಲ್ಲಿನ ಮಕ್ಕಳ ಸಂಸರ್ಗವೇ ಇಲ್ಲ. ಅವರು ಹೋಗುವ ಸ್ಕೂಲೇ ಬೇರೆ, ಕನ್ನಡದ ಮಕ್ಕಳು ಹೋಗುವ ಸ್ಕೂಲೇ ಬೇರೆ. ಪ್ಲೀಸ್, ಇನ್ನೊಂದು ಮಾತು. ಕನ್ನಡದ ಮಕ್ಕಳು ಎಂದರೆ ಬಡವರ ಮಕ್ಕಳು ಎಂದು ಅರ್ಥ ಮಾಡಿಕೊಳ್ಳಬೇಕು. ಕನ್ನಡದವರ ಮಕ್ಕಳು ಎಂದುಕೊಳ್ಳಕೂಡದು. ಯಾಕೆಂದರೆ ಇವರ ಮಕ್ಕಳೂ ಕನ್ನಡ ಮಾತಾಡಬೇಕಾಗಿಲ್ಲ. ವರ್ಷಕ್ಕೆ ಒಂದು ಲಕ್ಷ ಫೀಸ್ ಕೊಟ್ಟು ಒಂದು ಒಂದೂವರೆ ಗಂಟೆ ಪ್ರಯಾಣ ಮಾಡಿ ಕನ್ನಡದ ಮಕ್ಕಳ ಸ್ಪರ್ಶವಾಗದಂತೆ, ಹೆಣ್ಣುಮಕ್ಕಳ ತಲೆಯಲ್ಲಿ ಬಡವರ ಮಕ್ಕಳ ಹೇನು ಸೇರದಂತೆ ಇವರು ಬದುಕುತ್ತಾರೆ. ಇದು ಬ್ಯಾಂಗಲೂರ್‌.

ಈ ಸಂಕಟದಲ್ಲಿ ಎಲ್ಲರೂ ಒಂದು ಕನ್ನಡ ಶಬ್ದವನ್ನಾದರೂ ಮಾತಾಡಬೇಕಾಗಿ ಬರಲಿ ಎಂದು ಬೆಂಗಳೂರನ್ನು ಬೆಂಗಳೂರು ಅನ್ನುವಂತೆ ನಾನು ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಕೇಳಿಕೊಂಡೆ –  ಅಷ್ಟೆ’ ಇತ್ಯಾದಿ ಹೇಳುತ್ತೇನೆ. ಸರಿ. ಬೆಂಗಳೂರು ಎಂದು ಹೆಸರು ಬದಲಾಯಿಸಿದರೂ ಹೊರಗಿನ ಹಲವರಿಗೆ ‘ಳ’ಕಾರ ಸಾಧ್ಯವಿಲ್ಲವಲ್ಲ ಎಂದು ಹಿರಿಯರೊಬ್ಬರು ಹೇಳುತ್ತಾರೆ. ಆಗ ನನಗೆ ನನ್ನ ಆಯುಷ್ಯದ ಬಹುಪಾಲನ್ನು ಇಂಗ್ಲಿಷಿನ ‘ಎ’ಗೂ ನಮ್ಮ ಉಚ್ಛಾರದ ‘ಯೆ’ಗೂ ನಡುವಿನ ವ್ಯತ್ಯಾಸ ಗೊತ್ತಾಗುವಂತೆ ಮಾತಾಡಲು ಹೆಣಗಿದ್ದು ನೆನಪಾಗುತ್ತದೆ. ಇಂಗ್ಲಿಷ್ ಮಾತಾಡುವವರೂ ಕೊಂಚ ಕಷ್ಟಪಡಲಿ ಬಿಡಿ ಎನ್ನುತ್ತೇನೆ. ಹೀಗೆಲ್ಲ ಕಷ್ಟಕೊಡಲು ಶುರುಮಾಡಿದರೆ ಅವರು ತಮ್ಮ ಅಂಗಡಿಗಳನ್ನು ನಡೆಸುವ ಪುಣ್ಯಾತ್ಮರನ್ನು ಕೆಣಕಬಾರದು ಎಂದಾಗ ನನ್ನ ಮೂರ್ಖ ಉತ್ತರವನ್ನು ಎಗ್ಗಿಲ್ಲದೆ ಕೊಡುತ್ತೇನೆ. ಛೆ ಛೆ ವ್ಯಾಪಾರ ಮಾಡುವವರು ಜಾಣರು ಬಿಡಿ. ಲಾಭವಾಗುವುದಾದರೆ ಅವರು ಕನ್ನಡವನ್ನೂ ಕಲಿತುಬಿಡುತ್ತಾರೆ. ಐವತ್ತು ಮಿಲಿಯನ್, (ಐದು ಕೋಟಿ ನಮ್ಮ ಭಾಷೆಯಲ್ಲಿ) ಜನ ಕನ್ನಡವನ್ನು ಓದಿ ಬರೆಯಬಲ್ಲವರಾದರೆ ಕನ್ನಡದ ಬೋರ್ಡನ್ನು ಅವರು ಹಾಕುವುದು ಮಾತ್ರವಲ್ಲ, ಕನ್ನಡವನ್ನು ಬಳಸಲೂ ಶುರು ಮಾಡುತ್ತಾರೆ – ಎನ್ನುತ್ತೇನೆ. ನಾನು ಇಂಗ್ಲಿಷ್ ಮಾತಾಡಿದಂತೆ ಅವರು ಕನ್ನಡ ಮಾತಾಡುತ್ತಾರೆ ಬಿಡಿ ಎನ್ನುತ್ತೇನೆ. ಈಗ ಕೂಡ ಇರುವುದು ಒಂದೇ ಕನ್ನಡವೆ? ಹಲವು ಕನ್ನಡಗಳು ಇಲ್ಲವೆ?

ಇಂಗ್ಲಿಷರು ಸೂರ್ಯಮುಳುಗದ ಚಕ್ರಾಧಿಪತಿಗಳಾಗಿದ್ದವರು ಅಲ್ಲವೆ? ತಮ್ಮದೇ ಇಂಗ್ಲಿಷನ್ನು ಎಲ್ಲರೂ ಮಾತಾಡಬೇಕೆಂದು ಅವರು ಇಷ್ಟಪಟ್ಟರೂ ಎಲ್ಲೆಲ್ಲಿ ಸೋತರು ನೋಡಿ. ತಮ್ಮದೇ ಅಮೆರಿಕಾದಲ್ಲಿ. ಆಸ್ಟ್ರೇಲಿಯಾದಲ್ಲಿ. ಲಂಡನ್ನಿನಲ್ಲೇ ಅವರು ಸೋತರಲ್ಲವೆ? ಜಾರ್ಜ್‌ ಬರ್ನಾಲ್ಡ್ ಶಾ ಯಾಕೆ ಪಿಗ್‌ಮೇಲಿಯನ್ ಬರೆಯಬೇಕಾಯಿತು, ಯೋಚಿಸಿ.

ಇಂಗ್ಲಿಷ್ ಜೊತೆ ನನ್ನದೇ ಹೆಣಗಾಟದ ಹಲವು ಕಥೆಗಳಲ್ಲಿ ಒಂದನ್ನು ಈಗ ಹೇಳುತ್ತೇನೆ. ಅರವತ್ತರ ದಶಕದ ಪ್ರಾರಂಭದಲ್ಲಿ ನಾನು ಇಂಗ್ಲೆಂಡಿಗೆ ಓದಲು ಹೋದೆ. ಆಗ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಧೀಮಂತ ಇತಿಹಾಸ ಪಂಡಿತ ಫಣಿಕ್ಕರ್‌ರವರ ಅನುಮತಿ ಕೇಳಲು ಅವರ ಬಳಿ ನಾನು ಹೋದಾಗ ‘ಏನು ರಿಸರ್ಚ್‌ ಮಾಡಲು ಹೋಗುತ್ತಿದ್ದೀಯ?’ ಎಂದು ಕೇಳಿದರು. ‘ಲಾರೆನ್ಸ್‌ ಮೇಲೆ’ ಎಂದೆ. ‘ನಮ್ಮಲ್ಲೇ ಎಷ್ಟು ವಿಷಯವಿದೆ ಕಲಿಯಲು? ಕಾಳಿದಾಸ, ಭಾಷ, ಭವಭೂತಿ, ನಿಮ್ಮ ಭಾಷೆಯಲ್ಲು ಎಷ್ಟು ಸಾಹಿತಿಗಳು –  ಇವರನ್ನೆಲ್ಲ ಚೆನ್ನಾಗಿ ಓದಿಕೊಳ್ಳದೆ ಅಲ್ಲೇನು ನೀನು ಲಾರೆನ್ಸ್ ಮೇಲೆ ರಿಸರ್ಚ್ ಮಾಡಿ ಹೊಸದರು ಹೇಳುವುದಿದೆ?’ ಎಂದರು. ‘ಏನೋ ಇದೆ’ ಎಂದು ತಿಳಿಯುವ ಆಧುನಿಕತೆಯ ಗರ್ವದ ಧಾಟಿಯಲ್ಲಿ ಗೌರವದಿಂದಲೇ ನಾನು ವಾದಿಸಿದೆ. ಫಣಿಕ್ಕರ್‌ ಒಳ್ಳೆಯದಾಗಲಿ ನಿನಗೆ ಎಂದು ರಜಾಕೊಟ್ಟರು

ಬರ್ಮಿಂಗಮ್‌ಗೆ ಸಂಸಾರ ಸಮೇತ ಹೋದೆ. ಹೊಸ ಸೂಟು, ಆಗಿನ ಘನತೆಯ ಸಂಕೇತವಾದ ಉಲ್ಲನ್ನಿನ ಪಿನ್ ಸ್ಟ್ರೈಪ್ ಸೂಟು, ಖುದ್ದಾಗಿ ಅಳತೆಕೊಟ್ಟು ಹೊಲಿಸಿಕೊಂಡು ತೊಟ್ಟೆ. ಅಲ್ಲಿ ನೋಡಿದರೆ ಎಲ್ಲರ ಗೌರವಕ್ಕೆ ಪಾತ್ರನಾದ ರಿಚರ‍್ಡ್ ಹಾಗರ್ಟ್ –  ಕಾರ್ಮಿಕ ವರ್ಗದಿಂದ ಹುಟ್ಟಿಬಂದ ಮಹಾ ಪ್ರತಿಭಾಶಾಲಿ –  ಕಾರ್ಮಿಕರು ಹಾಕುವ ಟೋಪಿ ಹಾಕಿಕೊಂಡು ಮಾಸಿದ ಸೂಟು ತೊಟ್ಟು, ಟೈ ಇಲ್ಲದೆ ಬರುತ್ತಿದ್ದ. ಕ್ಲಾಸು ತೆಗೆದುಕೊಳ್ಳುವಾಗ ಮಾತ್ರ ಕಪ್ಪು ಗೌನನ್ನು ಹಾಕಿಕೊಂಡಿರುತ್ತಿದ್ದ. ಪಬ್ಬಿನಲ್ಲಿ ಕೂತು ವಿದ್ಯಾರ್ಥಿಗಳ ಜೊತೆ ಹರಟೆ ಹೊಡೆಯುತ್ತಿದ್ದ. ಇವನ uses of Literacy ಎನ್ನುವ ಪುಸ್ತಕ ಆಗ ಎಲ್ಲ ಧೀಮಂತರ – ರೇಮಂಡ್ ವಿಲಿಯಮ್ಸ್‌ನಂಥವರ ಮೆಚ್ಚುಗೆ ಗಳಿಸಿತ್ತು.

ಇವರಿಗೆ ಹತ್ತಿರವಾಗುವುದು ನನ್ನ ಆಸೆಯಾದರೂ ಮೊದಲು ಆರು ತಿಂಗಳು ಇಂಗ್ಲಿಷ್‌ಕಾಂಪೊಸಿಶನ್‌ಕ್ಲಾಸಿಗೆ ನನ್ನನ್ನು ಕಳಿಸಿದರು. ಅದನ್ನೆಲ್ಲ ಎಂ.ಎ. ಮಾಡಿಹೋಗಿದ್ದ ನಾನು ಸಹಿಸಿಕೊಂಡೆ. ಇಂಗ್ಲಿಷ್ ಪರಭಾಷೆಯಲ್ಲವೆ? ನಾನು ಕಲಿಯಬೇಕಾದ್ದು ಇರಬಹುದು ಎಂದುಕೊಂಡೆ. ಪಾಸಾದೆ. ಆಮೇಲೆ ಏನು ರಿಸರ್ಚ್ ಮಾಡಬಹುದೆಂದು ನನ್ನ ಟ್ಯೂಟರ್‌ನನ್ನು ಕೇಳಬೇಕಾಗಿತ್ತು. ಲಾರೆನ್ಸ್ ಮೇಲೆ ಹಲವರು ಬರೆದಾಗಿಬಿಟ್ಟಿದ್ದರಿಂದ ಹೆಚ್ಚೇನೂ ನನಗೆ ಹೇಳುವದು ಉಳಿದಿರಲಿಲ್ಲ. ಮುವ್ವತ್ತರದ ದಶಕದ ಕೊನೆಯಲ್ಲಿ ಹಿಟ್ಲರನ ಯಮಪಾಶದಲ್ಲಿ ಇಡೀ ಯೂರೋಪೇ ಸಿಕ್ಕಿಬಿದ್ದಾಗ ಹುಟ್ಟಿದ ಆರ‍್ವಲ್, ಆಡೆನ್, ಇಶರ‍್ವುಡ್, ಇನ್ನೂ ಮುಖ್ಯವಾಗಿ ವಿಮರ್ಶಕರ ಕಣ್ಣಿಗೆ ಬೀಳದ ಎಡ್ವರ್ಡ್ ಅಪ್‌ವರ್ಡ್ ಎಂಬಾತನ ಬಗ್ಗೆ ನಾನು ರಿಸರ್ಚ್ ಮಾಡಬೇಕೆಂದುಕೊಂಡಿದ್ದೆ. ಇಂಗ್ಲೆಂಡಿನಲ್ಲಿ ಆಗಾಗಲೇ ಕಾದಂಬರಿಕಾರನೆಂದೂ, ಹೊಸ ಚುರುಕಿನ ವಿಮರ್ಶಕನೆಂದೂ ಖ್ಯಾತನಾಗಿದ್ದ ಮಾಲ್ಕಂ ಬ್ರಾಡ್ ಬರಿ ಎಂಬಾತನ, ನನ್ನಷ್ಟೇ ವಯಸ್ಸಿನ ಅಧ್ಯಾಪಕನ, ಬೆಂಬಲವೂ ನನಗೆ ಇತ್ತು. ಆದರೆ ನನ್ನ ಟ್ಯೂಟರ್‌ಇದನ್ನ ಒಪ್ಪಬೇಕಾಗಿತ್ತು. ಈತ ವಯಸ್ಸಾದವ; ಹಳೆಯಕಾಲದವ. ಒಳ್ಳೆಯ ಮನುಷ್ಯ. ಅವನು ಆಗ ತಾನೇ ಭಾರತದಲ್ಲಿ ಪ್ರವಾಸ ಮಾಡಿ ಬಂದಿದ್ದ. ನನಗೆ ಅವನ ಹಿರಿತನದ ಉಪದೇಸ ಹೀಗಿತ್ತು : ‘ರಿಸರ್ಚ್‌ಬೇಡ. ಫೋನೆಟಿಕ್ಸ್ ಮಾಡು. ಇಂಗ್ಲಿಷಿನ ಫೋನೆಟಿಕ್ಸ್‌ಸಿಸ್ಟಮ್‌ನಿನಗೆ ಕರಗತವಾದರೆ ನಿನ್ನಂತಹ ಬುದ್ಧಿವಂತ ಯುವಕ ಯುಎನ್‌ಓನಲ್ಲಿ ಕೆಲಸ ಮಾಡಬಹುದು. ಕೇಂಬ್ರಿಜ್‌ನಲ್ಲಿ ಕಲಿತ ರಾಜನ್ ಎಷ್ಟು ಎತ್ತರಕ್ಕೆ ಏರಿದ್ದಾನೆ ನೋಡು. ಯಾಕೆ ಗೊತ್ತೆ? ಕತ್ತಲಲ್ಲಿ ಅವನ ಮುಖ ನೋಡದೆ ಅವನ ಮಾತು ಕೇಳಿಸಿಕೊಂಡರೆ ಅವನೊಬ್ಬ ನಮ್ಮಂತೆಯೇ ಇಂಗ್ಲಿಷ್‌ಮನ್ ಎಂದು ತಿಳಿಯುವಂತಾಗುತ್ತದೆ. ಇಂಡಿಯಾದಲ್ಲಿ ನಾನು ಒಬ್ಬ ದೊಡ್ಡ ಪ್ರೊಫೆಸರ್‌ರನ್ನು ಭೇಟಿಮಾಡಿದೆ. ಅವರ ಹೆಸರು ಇಯಂಗಾರ್ ಅಂತೆ. ಅವನು ಏನು ಹೇಳುತ್ತಾನೆ ತಿಳಿಯುವುದೇ ನನಗೆ ಕಷ್ಟವಾಯಿತು. ಇರಲಿ ಯಾರ ಮೇಲೆ ರಿಸರ್ಚ್ ಮಾಡಬೇಕೆಂದಿದ್ದೀಯ?

ನನ್ನ ಕಸಿವಿಸಿ ಅದುಮಿಟ್ಟು ಹೇಳಿದೆ : ‘ಎಡ್ವರ್ಡ್ ಅಪ್‌ವರ್ಡ್’. ಮತ್ತೆ ಟ್ಯೂಟರ್ ಕೇಳಿದ: ‘ಯಾರು?’ ಮತ್ತೆ ನಾನು ಉಗುಳು ನುಂಗಿಕೊಳ್ಳುತ್ತ ಶುದ್ಧ ಗಂಟಲಿನಲ್ಲಿ ಹೇಳಿದೆ: ‘ಎಡ್ವರ್ಡ್ ಅಪ್‌ವರ್ಡ್’. ತನ್ನ ಬಿಳಿಕೂದಲಿನ ಗೋಟಿಯನ್ನು ಸವರುತ್ತ ಕರುಣೆ ತುಂಬಿದ ದನಿಯಲ್ಲಿ ಟ್ಯೂಟರ್‌ಹೇಳಿದ : ‘ನಾನು ಯಾಕೆ ಸಾಹಿತ್ಯದ ರಿಸರ್ಚ್ ಬದಲು ಲಿಂಗ್ವಿಸ್ಟಿಕ್ಸ್ ಮತ್ತು ಫೋನೆಟಿಕ್ಸ್ ಮಾಡೆಂದು ನಿನ್ನಂತಹ ಬುದ್ಧಿವಂತನಿಗೆ ಹೇಳಿದೆ ಗೊತ್ತೆ? ನಿನಗೆ ‘ಎ’ಗೂ ‘ಯೆ’ಗೂ ನಡುವಿನ ವ್ಯತ್ಯಾಸ ಗೊತ್ತಾಗುತ್ತ ಇಲ್ಲ. ಹೇಳು ‘ಎಡ್ ವರ್ಡ್’ ಎಡ್ ಎಡ್, ಯೆಡ್ ಯೆಡ್ ಅಲ್ಲ.’

ನನಗೆ ತಡೆಯದಾಯಿತು. ‘ಸರ್ ನಿಮಗೆ ಅಯ್ಯಂಗಾರ್ ಎನ್ನಲು ಬರುವುದಿಲ್ಲ. ಇಯಂಗಾರ್ ಎನ್ನುತ್ತೀರಿ. ನಾನು ಯಾಕೆ ಯೆಡ್ವರ್ಡ್‌ಅನ್ನಬಾರದು? ನಿಮ್ಮ ಹಾಗೆ ನಾನು ಮೈಸೂರಿನಲ್ಲಿ ಪಾಠಮಾಡುವಾಗ ಮಾತಾಡಿದರೆ ವಿದ್ಯಾರ್ಥಿಗಳು ನನ್ನನ್ನು ಇಂಗ್ಲಿಷ್ ಸೋಗಿನ ಮಂಗ ಎಂದುಕೊಳ್ಳುತ್ತಾರೆ.’

ನಾನು ಬೈ ಹೇಳಿ ಸೀದ ರಿಚರ‍್ಡ್ ಹಾಗರ್ಟ್ ಹತ್ತಿರ ಹೋದೆ. ಅವನು ಅಲ್ಲಿ ಸೀನಿಯರ್ ಪ್ರಾಧ್ಯಾಪಕ. ಆದದ್ದನ್ನು ವಿವರಿಸಿ ‘ನಾನು ಫೋನೆಟಿಕ್ಸ್ ಮಾಡುವುದಿಲ್ಲ. ನನ್ನ ಕಾಮನ್‌ವೆಲ್ತ್‌ ಸ್ಕಾಲರ್‌ಶಿಪ್ ಬಿಟ್ಟುಕೊಡುತ್ತೇನೆ. ಮೈಸೂರಿಗೆ ಹಿಂದಕ್ಕೆ ಹೋಗುತ್ತೇನೆ’ ಎಂದೆ. ಹಾಗರ್ಟ್ ನಗುತ್ತ ಹೇಳಿದ: ‘ನಿನ್ನ ಟ್ಯೂಟರ್ ಒಳ್ಳೆಯ ಮನುಷ್ಯ. ಅವನಿಗೆ ಹೇಳುತ್ತೇನೆ. ಈ ವರ್ಷದ ಕೊನೆಯಲ್ಲಿ ನಿನಗೊಂದು ಎಂ.ಎ. ಪರೀಕ್ಷೆ ಮಾಡುತ್ತೇನೆ. ನಿನ್ನ ಮೆಚ್ಚಿನ ಷೇಕ್ಸ್‌ಪಿಯರ್‌ಬಗ್ಗೆ ನಾಲ್ಕು ಪೇಪರ್‌ಗಳನ್ನು ತೆಗೆದುಕೊಂಡು ಪಾಸು ಮಾಡು. ಆಮೇಲಿಂದ ನಿನಗೆ ಪ್ರಿಯವಾದ ರಿಸರ್ಚ್ ಮಾಡು. ನಾನು ಕೂಡ ಮರೆತಾಗ ಸಹಜವಾಗಿ ಮಾತಾಡೋದು ಕಾರ್ಮಿಕರ ಇಂಗ್ಲಿಷ್. ನಿನ್ನ ಟ್ಯೂಟರ್‌ನನಗೂ ಹೀಗೇ ಹೇಳಬಹುದಿತ್ತು’ ಎಂದು ನಕ್ಕರು. ಎಂ.ಎ.ಗೆ ಈ ಟ್ಯೂಟರ್‌ನೇ ಪರೀಕ್ಷಕನಾಗಿದ್ದ. ನಾನು ಬರೆದದ್ದನ್ನು ಓದಿ ತುಂಬ ಇಷ್ಟಪಟ್ಟು. ನನ್ನ ದುಗುಡ ದುಮ್ಮಾನದ ಮಾತಿನಿಂದ ನಾನೇ ನಾಚುವಷ್ಟು ಒಳ್ಳೆಯ ಮಾತಾಡಿ, ರಿಸರ್ಚ್‌ಗೆ ಕಳಿಸಿಕೊಟ್ಟ.

ಅಪ್‌ವರ್ಡ್‌‌ಗೂ ನನಗೂ ರಿಸರ್ಚಿನಾಚೆಯೂ ಬೆಳೆದ ಸಂಬಂಧ ಬಹು ಸ್ವಾರಸ್ಯದ ನನ್ನನ್ನು ಗಾಢವಾಗಿ ಮುಟ್ಟಿ ಬೆಳೆಸಿದ ಇನ್ನೊಂದು ವೃತ್ತಾಂತ. ಪ್ರತ್ಯೇಕವಾಗಿ ಬರೆಯಬೇಕಾದ್ದು –  ನನ್ನ ಕಮ್ಯುನಿಸ್ಟ್ ಗೆಳೆಯರಿಗಾಗಿ.

* * *

ಹೆಸರಿನ ಬದಲಾವಣೆ ಮಾತ್ರವಲ್ಲ: ಇನ್ನೂ ಕೆಲವು ವಿಷಯಗಳನ್ನು ಸಭೆಯಲ್ಲಿ ಧರಂಸಿಂಗ್‌ರಿಗೆ ನಾನು ನಿವೇದಿಸಿದ್ದೆ. ಕರ್ನಾಟದ ಎಲ್ಲರೂ ಅಕ್ಷರಸ್ತರಾಗಬೇಕು. ಈ ವರ್ಷವೇ ಕನ್ನಡ ಮಾಧ್ಯಮದಲ್ಲಿ ಶಬ್ದ ಸಂಕೋಚ ತೊರೆದು ಇಂಗ್ಲಿಷನ್ನೂ ಬಳಸುವ ಒಂದು ಮೆಡಿಕಲ್ ಕಾಲೇಜು, ಒಂದು ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಬೇಕು; ಈ ಕಾಲೇಜುಗಳಿಗೆ ಕನ್ನಡ ಓದಲು – ಬರೆಯಲು ಕಲಿತು ಬರುವ ಯಾರಿಗಾದರೂ ಪ್ರವೇಶವಿರಬೇಕು; ಎಲ್ಲ ಮಕ್ಕಳಿಗೂ ಸಾಮಾನ್ಯ ಶಾಲೆಗಳಲ್ಲಿ ಉಚಿತ ಸಮಾನ ಶಿಕ್ಷಣ ದೊರೆಯಬೇಕು. ಎಲ್ಲರಿಗೂ ಇಂಗ್ಲಿಷ್ ಮಾತಾಡಲು ಸಾಧ್ಯವಾಗುವಂತೆ ಮಾಡಿ ಇಂಗ್ಲಿಷನ್ನು ನಮಗೆ ಬೇಕಾದಂತೆ ಪಳಗಿಸಿಕೊಂಡು ಅದರ ಭ್ರಮೆ ಕಳೆಯುವಂತೆ ಮಾಡಬೇಕು.

ಧರಂಸಿಂಗ್‌ ಒಪ್ಪಿಕೊಂಡಿದ್ದರು. ಈ ಸುವರ್ಣ ಕರ್ನಾಟಕದ ವರ್ಷದಲ್ಲಿ ಈಗಿನ ಮುಖ್ಯಮಂತ್ರಿಗಳೂ ಮೇಲಿನ ಎಲ್ಲವನ್ನೂ ಒಪ್ಪಿಕೊಂಡಾರೆಂಬ ಭರವಸೆ ಇಟ್ಟುಕೊಳ್ಳೋಣವೆ? ಜಾಗತೀಕರಣದ ಅಧ್ವರ್ಯುಗಳು ಒಂದು ಹೆಸರಿನ ಬದಲಾವಣೆಯಿಂದಲೇ ಇಷ್ಟು ಬೆಚ್ಚುತ್ತಾರೆ –  ಅಲ್ಲವೆ? ರೈತರ ಆತ್ಮಹತ್ಯೆಗೂ, ಸುನಾಮಿಗೂ ಸಂಬಂಧವಿರುವ ಸೆನ್ಸೆಕ್ಸ್ ಬೆಂಗಳೂರು ಬೆಂಗಳೂರೇ ಆಗಿಬಿಟ್ಟರೆ ಇಳಿಯಬಹುದೆನ್ನುವ ಭಯ ನಮ್ಮ ಐಟಿಗಳಿಗೆ ಇರಬಹುದೆ?

ಹೆಸರಿನ ಬದಲಾವಣೆ ಒಂದು ಸಂಪೂರ್ಣ ಕನ್ನಡೀಕರಣದ, ಅಂದರೆ ನಾವು ಕನ್ನಡಿಗರಾಗಿದ್ದೇ ಜಗತ್ತಿಗೆ ಸಲ್ಲುವರಾಗುವ ದಿಕ್ಕಿನತ್ತ ಇಟ್ಟು ಸಾಂಕೇತಿಕ ಕ್ರಿಯೆಯಾಗಲಿ, ಕೇವಲ ಪ್ರಚಾರ ಪಡೆದು ಮರೆತ ಸಂಕೇತವಾಗಿ ಉಳಿಯದಿರಲಿ ಎಂದು ಆಶಿಸುತ್ತೇನೆ,

ವರ್ಡ್ಸ್‌ವರ್ತ್ ಕವಿಯಲ್ಲಿ ಓದಿದ ಡಾಫಡಿಲ್ಸ್ ಎಂಬ ಹೂವು ಗಾಳಿಗೆ ಓಲಾಡುವುದನ್ನು ಕಣ್ಣಾರೆ ನೋಡಲೆಂದೂ ಇಂಗ್ಲೆಂಡಿಗೆ ಹೋಗಿದ್ದ ನನಗೊಂದು ಆಸೆಯಿದೆ. ಬೆಂಗಳೂರಿಗೆ ಬರುವ ಎಲ್ಲ ಹೊರಗಿನವರೂ ಮೈಸೂರು ಮಲ್ಲಿಗೆಗೂ, ಉಡುಪಿಯ ವಾದಿರಾಜ ಗುಳ್ಳಕ್ಕೂ, ನಂಜನಗೂಡಿನ ರಸಬಾಳೆಗೂ, ಅಲ್ಲಮ ಬಸವರ ವಚನಗಳಿಗೂ ಆಸೆ ಪಡುವವರಾಗಬೇಕು. ಜಾಯ್ಸ್‌ನಲ್ಲಿ ಅವನ ಹೀರೋ ಡೆಡಲಾಸ್‌ನ ಅಲೆದಾಟವನ್ನು ಮೆಚ್ಚಿದವರು, ಕುವೆಂಪುವಿನ ನಾಯಿಗುತ್ತಿ ಅಲೆದು ಕಾಣುವ ದಟ್ಟ ದಲಿತ ಪ್ರಪಂಚವನ್ನೂ ಕಾಣುವಂತವರಾಗಬೇಕು.

೧೨೧೧೨೦೦೬

* * *