ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಶ್ರೀಮಂತರು ಎಷ್ಟು ಮಂದಿ ಇದ್ದಾರೆ? ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನ ಯಾವ ವಿದ್ಯಾರ್ಥಿಗೆ ವರ್ಷಕ್ಕೆ ಎಷ್ಟು ಲಕ್ಷ ರೂಪಾಯಿಯ ಸಂಬಳ ಸಿಗುವುದು ಸಾಧ್ಯವಾಯಿತು? ಇತ್ಯಾದಿ ವಾರ್ತೆಗಳನ್ನು ಓದಿ ಖಿನ್ನನಾಗಿದ್ದ ನನಗೆ ಮತ್ತೆ ಭಾರತದ ಭವಿಷ್ಯದ ಬಗ್ಗೆ ನಂಬಿಕೆ ಮತ್ತು ಪ್ರೀತಿ ಹುಟ್ಟಿದ್ದು ಬೇಗೂರು ಎಂಬ ಗ್ರಾಮದಲ್ಲಿ, ಕೆಲವು ದಿನಗಳ ಹಿಂದೆ ನಾನು ಕಡು ದಾರಿದ್ರ‍್ಯದ ಗುಂಡ್ಲುಪೇಟೆ ತಾಲೂಕಿನ ಬೇಗೂರು ಎಂಬ ಗ್ರಾಮದಲ್ಲಿ ಸುಮಾರು ನಾಲ್ಕು ಸಾವಿರ ಮಹಿಳೆಯರ ಜತೆ ಕೂತು ಪಡೆದ ಈ ಸಂತೋಷವನ್ನು ಇಲ್ಲಿ ಹಂಚಿಕೊಳ್ಳಿತ್ತಿದ್ದೇನೆ.

ಅಮೆರಿಕದಲ್ಲಿ ದೊಡ್ಡ ವೈದ್ಯರಾಗಿದ್ದು ಭಾರತಕ್ಕೆ ಮರಳಿ ಬಂದ ಅಜಯ್‌ಕುಮಾರ್‌ ಎನ್ನುವವರು ಈ ಗ್ರಾಮದಲ್ಲಿ ಏರ್ಪಡಿಸಿದ ಸಭೆ ಇದು. ಶಿವರಾಮ ಕಾರಂತರು ತಮ್ಮ ಕಾದಂಬರಿಯಲ್ಲಿ ಚಿತ್ರಿಸುವ ತನ್ನ ಮಣ್ಣಿಗೆ ಮರಳುವ ಆದರ್ಶವಾದಿ ನಾಯಕರನ್ನು ಕ್ಯಾನ್ಸರ್‌ ವೈದ್ಯ ಡಾ. ಅಜಯ್‌ಕುಮಾರ್‌ ನನಗೆ ನೆನಪು ಮಾಡಿಕೊಟ್ಟರು. ಸುಮಾರು ನಲವತ್ತೈದು ಗ್ರಾಮಗಳಿಂದ ಸ್ವಸಹಾಯ ಆಂದೋಲನದಲ್ಲಿ ಭಾಗಿಯಾದ ಸಾವಿರಾರು ಮಹಿಳೆಯರು ಈ ಸಭೆಯಲ್ಲಿದ್ದರು.

ವಿಶೇಷವಾದ ಸಭೆಗೆ ನಿತ್ಯದ್ದಲ್ಲದ ಒಂದು ಸೀರೆ ಬೇಕಲ್ಲವೇ? ದಿಂಬಿನಡಿ ನೀಟಾಗಿ ಮಡಚಿ ಇಟ್ಟು ಇಸ್ತ್ರಿ ಮಾಡಿದ, ಪ್ರಾಯಶಃ ಅದೊಂದೇ ಸೀರೆಯಾದ, ಒಂದರಂತೆ ಇನ್ನೊಂದು ಕಾಣದ ಬಣ್ಣಗಳ ಸೀರೆಗಳನ್ನುಟ್ಟು, ತಲೆಬಾಚಿ, ಹೆರಳಲ್ಲಿ ಹೂ ಮುಡಿದು ಎದುರಾಗುವ ಈ ಹಳ್ಳಿಯ ಹೆಂಗಸರಲ್ಲಿ ಯಾರು ಯಾವ ಜಾತಿ ಯಾವ ವರ್ಗ ಎಂದು ಗುರುತಿಸುವುದು ಬಹಳ ಕಷ್ಟ. ಗಂಡಸಾದರೆ ಅವರ ಬಟ್ಟೆಯಿಂದ, ನಡಾವಳಿಯಿಂದ ಊಹಿಸಬಹುದು. ಈ ಸಭೆಯಲ್ಲಿ ಎಲ್ಲ ಜಾತಿಯ ಎಲ್ಲ ವರ್ಗದ ಮಹಿಳೆಯರೂ ಇದ್ದರು ಎಂದು ತಿಳಿಯಿತು. ಪ್ರಾಯಶಃ ಇವರ ನಡುವೆ ಮುಸ್ಲಿಂ ಮಹಿಳೆಯೊಬ್ಬಳು ಇಲ್ಲವೇನೋ ಎಂದು ನಾನು ಖಿನ್ನನಾದೆ.

ಇಡೀ ಸಭೆಯನ್ನು ನಡೆಸಿದವರು ಪರಸ್ಪರ ಪರಿಚಯದ ಆ ಹಳ್ಳಿಯ ಹೆಂಗಸರೇ. ಅವರ ಬಾಯಲ್ಲಿ ಕನ್ನಡ ಭಾಷೆ ಎಷ್ಟು ಜೀವಂತ ಎಂಬುದನ್ನು ಬೆಂಗಳೂರಿನಿಂದ ಹೋದ ನಾನು ಅನುಭವಿಸಿದೆ.

ನನಗೆ ಮರೆಯಲಾರದ ಒಂದು ಘಟನೆಯನ್ನು ಈಗ ಹೇಳುವೆ. ಒಬ್ಬ ಕಂದು ಬಣ್ಣದ, ಚಿಕ್ಕ ಪ್ರಾಯದ ಚೆಲುವೆ ಮೈಕ್ ಹಿಡಿದು ಮಾತಾಡಲು ನಿಂತಳು. ಮೈಕ್ ಕೆಟ್ಟಿತು. ಅವಳು ಗಾಬರಿಯಾಗಲಿಲ್ಲ; ನಾಚಿದಳು. ಮೈಕ್‌ ಸರಿ ಹೋಗಲು ಕಾದಳು. ಅಲ್ಲಿಲ್ಲಿ  ಗ್ರಾಮ್ಯದ ಸಹಜತೆಯಿಂದ ಕೂಡಿದ ಭಾಷೆಯಲ್ಲಿ, ನಾನು ಮೈಯೆಲ್ಲಾ ಕಿವಿಯಾಗಿ ಕೇಳುವಂತೆ ಒಂದು ಕತೆ ಹೇಳಿದಳು. ಅವಳಿಗೊಬ್ಬ ಸ್ನೇಹಿತೆ ಇದ್ದಾಳೆ. ನೋಡಲು ಚೆನ್ನಾಗಿದ್ದಾಳೆ. ಕಡು ಬಡವರ ಮನೆಯ ಹೆಣ್ಣು. ಈ ಕಾಲದ ದುಷ್ಟ ಪದ್ಧತಿಯಿಂದಾಗಿ ಅವಳಿಗೆ ಮದುವೆಯಾಗಲು ಮನೆಯವರು ಒಂದೆರಡು ಲಕ್ಷ ರೂಪಾಯಿಗಳನ್ನಾದರೂ ಖರ್ಚು ಮಾಡಬೇಕು. ಇಂತಲ್ಲಿ ಒಂದು ವಿಚಿತ್ರವಾದ ಸನ್ನಿವೇಶ ಸೃಷ್ಟಿಯಾಯಿತು. ವರದಕ್ಷಿಣೆಯ ಬದಲು ವಧು ದಕ್ಷಿಣೆಯನ್ನು ಕೊಟ್ಟು ಮದುವೆಯಾಗಲು ಒಬ್ಬ ಶ್ರೀಮಂತ ಮುಂದಾದ. ಎರಡು ಲಕ್ಷ ಹಣವನ್ನು ಕೊಟ್ಟು ಅವಳನ್ನು ಮದುವೆಯಾಗುತ್ತೇನೆ ಎಂದು ಹುಡುಗಿಯ ಮನೆಯವರಿಗೆ ಹೇಳಿದ.

ಅವನಿಗೆ ಸ್ವಲ್ಪ ವಯಸ್ಸು ಹೆಚ್ಚು. ಎರಡು ಮಕ್ಕಳು ಬೇರೆ. ಆದರೆ ಅವನಲ್ಲಿ ಒಂದು ಕಾರಿತ್ತು. ಅವನನ್ನು ಮದುವೆಯಾದರೆ ಸಭೆ ಸಮಾರಂಭಗಳಿಗೆ ಕಾರಲ್ಲಿ ಓಡಾಡುವುದು ಸಾಧ್ಯವಿತ್ತು. ಹುಡುಗಿ ಗಲಿಬಿಲಿಗೊಂಡಳು. ಮನೆಯವರು ಮದುವೆಯಾಗುವಂತೆ ಅವಳ ಮೇಲೆ ಒತ್ತಡ ಹೇರಿದರು. ಇಡೀ ಸಂಸಾರದ ಸಮಸ್ಯೆ ಅವಳಿಂದ ಪರಿಹಾರವಾಗುವುದು ಎಂದರು. ಆದರೆ ಈ ಹುಡುಗಿ ಏನು ಮಾಡುವುದು ಎಂದು ತೋಚದೆ ಬೇಗೂರಿನ ಅಂತಾರಾಷ್ಟ್ರೀಯ ಮಾನವ ಅಭಿವೃದ್ಧಿ ಮತ್ತು ಏಳಿಗೆ ಸಂಸ್ಥೆಯ ಉತ್ತೇಜಕರಲ್ಲಿ ಒಬ್ಬಳಾದ ತನ್ನ ಊರಿನ ಮಹಿಳೆಯನ್ನು ಭೇಟಿ ಮಾಡಿದಳು. ಅವಳು ಇಂತಹ ಮದುವೆ ನಿನಗೆ ಬೇಡ ಎಂದಳು. ತನ್ನ ಸಂಸ್ಥೆಯಿಂದ ತರಬೇತಿ ಪಡೆದು ಒಂದು ಹೊಲಿಗೆ ಯಂತ್ರವನ್ನು ಕೊಂಡು ಜೀವನ ಮಾಡು ಎಂದಳು.

ಈ ಹುಡುಗಿ ಮನೆಯವರ ಒತ್ತಾಯಕ್ಕೆ ಮಣಿಯದೆ ಹೊಲಿಗೆ ಕಲಿತು ಮೂರು ತಿಂಗಳಲ್ಲಿ ದಿನಕ್ಕೆ ಐವತ್ತು ರೂಪಾಯಿ ಸಂಪಾದನೆ ಮಾಡಲು ಶುರು ಮಾಡಿದಳು. ಇದಾದ ಮೇಲೆ ಅವಳು ಮದುವೆಯಾಗಲು ನಿರ್ಧರಿಸಿದಳು. ಈ ಯುವಕ ಸಂಬಳ ಪಡೆಯುವ ಸರಕಾರೀ ನೌಕರನಲ್ಲ. ಅವನ ಬಳಿ ಕಾರಿಲ್ಲ. ಆದರೆ ಹೊಲದಲ್ಲಿ ದುಡಿದು ಸಂಪಾದಿಸಬಲ್ಲ. ಹುಡುಗಿಗೆ ಅನುರೂಪನಾದ ಚೆಲುವ. ಈ ಚೆಲುವನನ್ನು ಈ ಹುಡುಗಿ ಈ ತಿಂಗಳ ೨೨ನೇ ತಾರೀಕು ಮದುವೆಯಾಗಲಿದ್ದಾಳೆ.

ಮೈಕ್‌ ಹಿಡಿದು ಇಷ್ಟು ಕತೆಯನ್ನು ಹೇಳಿದ ಹುಡುಗಿ ಮಾತು ನಿಲ್ಲಿಸಿದಳು. ಕತ್ತು ಓರೆ ಮಾಡಿ ನಾಚಿದಳು. ನಮ್ಮನ್ನು ಕೊಂಚ ಕಾಯಿಸಿ ‘ಆ ಮದುವೆಯಾಗುವ ಹುಡುಗಿ ನಾನೇ!’ ಎಂದಳು. ಐಐಎಂನಲ್ಲಿ ಓದಿ, ಭಾರತ ಬಿಟ್ಟು ಹೊರದೇಶಕ್ಕೆ ಹೋಗಿ ಲಕ್ಷಾಂತರ ರೂಪಾಯಿ (ಇದು ಡಾಲರ್‌ಅಲ್ಲ!) ಸಂಬಳ ಪಡೆಯುವ ಸುದ್ದಿಗಿಂತ ಈ ಕಥೆ ನನ್ನಲ್ಲಿ ತುಂಬ ಖುಷಿಯನ್ನು ಉಂಟು ಮಾಡಿತು. ಆ ದಿನವಿಡೀ ನಾನು ಇಂತಹ ಪರಿವರ್ತನೆಯ ಅನೇಕ ಕತೆಗಳನ್ನು ಆ ಬಡ ಗ್ರಾಮದಲ್ಲಿ ಆಲಿಸಿದೆ.

* * *

ಹಿಂದೊಮ್ಮೆ ನಾನು ದೊಡ್ಡವರೊಬ್ಬರಿಂದ ಕೇಳಿಸಿಕೊಂಡಿದ್ದ ಕತೆಯೊಂದನ್ನು ಕೊಂಚ ಬದಲಾಯಿಸಿ ಅಲ್ಲಿರುವ ಹೆಂಗಸರಿಗೆ ಹೇಳಿದೆ.

ಮೊದಲು ಬಂಡಾಯವೇಳಬೇಕಾದ್ದು ಮಕ್ಕಳು. ಬಡವರ ಮನೆಯಲ್ಲಿ ತಾಯಂದಿರು ಮಕ್ಕಳನ್ನು ಹೊಡೆಯಲು ಅಥವಾ ಬೈಯಲು ಶುರು ಮಾಡಿದಾಗ ಮಕ್ಕಳು ಹೇಳಬೇಕು –  ‘ಅಮ್ಮ, ನಿನಗಿರುವುದು ನಿಜವಾಗಿ ಅಪ್ಪನ ಮೇಲೆ ಸಿಟ್ಟು. ನಮ್ಮ ಮೇಲೆ ಅದನ್ನು ಯಾಕೆ ತೀರಿಸಿಕೊಳ್ಳುತ್ತೀಯಾ?’ ಇದರಿಂದ ತಾಯಿ ಎಚ್ಚೆತ್ತು ಬೈಯಲು ಅಥವಾ ಹೊಡೆಯಲು ಬರುವ ತನ್ನ ಕುಡುಕ ಗಂಡನನ್ನು ಕೇಳಬೇಕು –  ‘ನಿನಗೆ ನಿಜವಾಗಿ ಸಿಟ್ಟಿರುವುದು ನಿನ್ನ ಒಡೆಯನ ಮೇಲೆ, ಅಥವಾ ನಿನ್ನ ಮಾಲೀಕನ ಮೇಲೆ. ಅದನ್ನು ಯಾಕೆ ನನ್ನ ಮೇಲೆ ತೀರಿಸಿಕೊಳ್ಳುತ್ತೀಯಾ?’ ಇದರಿಂದ ಮನೆಯ ಯಜಮಾನನಲ್ಲಿ ಅರಿವು ಮೂಡಿದರೆ, ಅವನು ಮಾನವಂತನಾಗಿ ಸೆಟೆದು ನಿಂತರೆ, ಆಗ ಭಾರತದಲ್ಲ ನಡೆಯುವ ಹಿಂಸಾಚಾರ ಕೊನೆಯ ಪಕ್ಷ ಸಂಸಾರದ ಚೌಕಟ್ಟಿನಲ್ಲಾದರೂ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ಉಳ್ಳವರ ಅಟ್ಟಹಾಸ ಕಡಿಮೆಯಾಗುವಂಥ ಪ್ರತಿಭಟನೆ ದೇಶದಲ್ಲಿ ಎಲ್ಲೆಲ್ಲೂ ಕಾಣಿಸಿಕೊಳ್ಳತೊಡಗುತ್ತದೆ. ಹೀಗೆ ಜನಶಕ್ತಿ ಬಲಗೊಂಡ ದೇಶದಲ್ಲಿ ಮಲ್ಯರು ಎಷ್ಟು ದೊಡ್ಡವರು? ಪ್ರೇಂಜಿ ಎಷ್ಟು ಶ್ರೀಮಂತರು? ಇನ್ಫೋಸಿಸ್ ಈ ದೇಶಕ್ಕೆ ಎಷ್ಟು ಒಳ್ಳೆಯದನ್ನು ಮಾಡಿದೆ ಇತ್ಯಾದಿಗಳು ಮಾತ್ರ ದೊಡ್ಡ ಸುದ್ದಿಯಾಗುವುದಿಲ್ಲ! ಅಷ್ಟೇಕೆ ಯಾರದೋ ಮೇಲಿನ ಸಿಟ್ಟನ್ನು ಇನ್ನಾರ ಮೇಲೆಯೋ ತೀರಿಸುವ ಕೋಮು ಗಲಭೆಗಳನ್ನೂ ಇದು ನಿವಾರಿಸಬಹುದು.

* * *

ಬಡ ಹೆಣ್ಣುಮಕ್ಕಳ ಮಟ್ಟಿಗೆ ಮಾತ್ರ ನಾನು ಹೇಳುವ ಮಾತುಗಳು ಸೀಮಿತವಲ್ಲ. ಈ ಮಾತುಗಳನ್ನು ನಾನು ಹಂಚಿಕೊಂಡಾಗ ಮಧ್ಯಮ ವರ್ಗದ ಮಹಿಳೆಯೊಬ್ಬಳು ಹೇಳಿದಳು. ‘ನಾನು ಕೂಡಾ ಮನೆಯ ಎಲ್ಲ ಕೆಲಸವನ್ನೂ ಮಾಡಿ ಶಾಲೆಗೆ ಹೋಗಿ, ಮತ್ತೆ ಮನೆಗೆ ಬಂದು ದುಡಿಯುವ ಅಮ್ಮನಿಗೆ ಸಹಾಯ ಮಾಡುತ್ತಿದ್ದೆ’.

ಡಾ. ಅಜಯ್‌ಕುಮಾರ್‌ ನನ್ನಲ್ಲಿ ಹೇಳಿದರು. ‘ಕೊನೆಯ ಪಕ್ಷ ಎಲ್ಲ ಹೆಂಗಸರೂ ಈ ದೇಶದಲ್ಲಿ ಸುಮಾರು ೧೮ ಗಂಟೆಗಳ ಕಾಲ ದುಡಿಯುತ್ತಾರೆ.’ ನಮ್ಮ ಭಾರತದ ಸಂಪತ್ತನ್ನು ಸೃಷ್ಟಿಸುವವರು ಹೀಗೆ ದಿನಗೂಲಿ ಮಾಡುವ ಎಲ್ಲ ಹೆಂಗಸರು ಮತ್ತು ಗಂಡಸರು. ಭಾರತ ಮುಂದೊಂದು ದಿನ ಬಹಳ ಬಲಿಷ್ಠ ರಾಷ್ಟ್ರವಾಗುತ್ತದೆ ಎಂದು ಹೇಳುವ ತಜ್ಞರು ಈ ದೇಶದ ಸಂಪತ್ತನ್ನು ಯಾರು ಸೃಷ್ಟಿ ಮಾಡುತ್ತಿದ್ದಾರೆ ಎಂಬುದನ್ನು ಹೇಳಲು ಮರೆಯುತ್ತಾರೆ. ನಮ್ಮ ಮನೆಯಲ್ಲಿ ಸಹಾಯಕಳಾಗಿರುವ ಹೆಂಗಸೊಬ್ಬಳ ಗಂಡ ಬಿಇಎಲ್‌ಸಂಸ್ಥೆಯಲ್ಲಿ ದಿನಗೂಲಿ ಮಾಡಿಕೊಂಡಿದ್ದ. ಅವನು ಒಂದು ದಿನ ತನಗೆ ಇಷ್ಟವಿಲ್ಲದೇ ಇದ್ದರೂ ಹುಣಿಸೆ ಮರ ಹತ್ತಿ ಅದರ ರೆಂಬೆ ಕಡಿಯಬೇಕಾಯಿತು. ಹೀಗೆ ಕಡಿಯುತ್ತಿದ್ದಾಗ ಮರದಿಂದ ಕೆಳಗೆ ಬಿದ್ದು ಸತ್ತುಹೋದ. ಹುಣಿಸೆಮರದಲ್ಲಿ ದೆವ್ವ ಇರುತ್ತದೆ ಎಂಬ ಗ್ರಾಮೀಣ ನಂಬಿಕೆಯನ್ನು ಗಟ್ಟಿಮಾಡಿ ಸತ್ತ. ಇಂಥ ಘಟನೆಗಳು ನಿತ್ಯವೂ ನಮಗೆ ಎದುರಾಗುತ್ತವೆ.

ಆದರೆ ನಮ್ಮ ಎಲ್ಲ ಮಾಧ್ಯಮಗಳೂ ಪ್ರಪಂಚದಲ್ಲಿ ಭಾರತ ಎಂದು ಶ್ರೀಮಂತವಾಗುತ್ತದೆ ಎಂಬ ಗುಣಾಕಾರದಲ್ಲಿ ಮಗ್ನವಾಗಿವೆ.

ನಮ್ಮ ಮೌಲ್ಯಗಳೆಲ್ಲಾ ಬದಲಾಗಿವೆ. ಹಾಟ್‌ಮೇಲ್ ಸೃಷ್ಟಿಸಿದ ಸಬೀರ್‌ ಭಾಟಿಯಾ ಬಗ್ಗೆ ನಾವು ಮಾತನಾಡುವುದಿಲ್ಲ. ಆದರೆ ೨೪ x ೭ ಚಾನಲ್‌ನಲ್ಲಿ ಪ್ರಣಯ್‌ರಾಯ್‌ ಜತೆ ಪ್ರಪಂಚದ ಅತ್ಯಂತ ದೊಡ್ಡ ಶ್ರೀಮಂತ ಬಿಲ್‌ಗೇಟ್ಸ್‌ ಮತ್ತು ನಾರಾಯಣಮೂರ್ತಿಯವರು ಹರಟೆ ಹೊಡೆಯುವುದನ್ನು ನಾವು ನೋಡುತ್ತೇವೆ. ಇನ್ನೂ ಮುಂದೆ ಪೆನ್ಸಿಲಿನ್‌ನಂತಹ ಜೀವರಕ್ಷಕ ಔಷಧವನ್ನು ಪತ್ತೆ ಮಾಡಿದವನು, ವಿದ್ಯುಚ್ಛಕ್ತಿಯ ಬಳಕೆಯನ್ನು ಪತ್ತೆ ಮಾಡಿದವರು –  ಇಂತಹ ದೊಡ್ಡ ತಂತ್ರಜ್ಞಾನಿಗಳನ್ನು ನಾವು ನೆನೆಯುವುದಿಲ್ಲ. ಆದರೆ ಇದರಿಂದ ಲಾಭ ಮಾಡಿಕೊಂಡ ಶ್ರೀಮಂತರನ್ನು ನೆನೆಯುತ್ತೇವೆ!

ನಮ್ಮ ಪಾಲಿಗೆ ಈಗ ವಿದ್ಯಾರ್ಥಿಗಳಲ್ಲಿ ಜ್ಞಾನಿಗಳೆಂದರೆ ಕೇಳಿದ ಪ್ರಶ್ನೆದ ಥಟ್ಟನೆ ಉತ್ತರ ಕೊಡುವ ಹುಡುಗರು. ಕ್ಲಿಕ್ ಮಾಡಿದ ಕೂಡಲೇ ಒದಗಿಬರುವ ಮಾಹಿತಿಗಳನ್ನು ತುಂಬಿಕೊಡುವ ಯಂತ್ರಗಳು ಇವರು. ಇಂತಹ ಲೋಕದಲ್ಲಿ ೧೮ ಗಂಟೆಗಳ ಕಾಲ ದುಡಿದೂ ಹಾಡು ಹೇಳಬಲ್ಲ, ಕವಿತೆಗಳನ್ನು ರಚಿಸಬಲ್ಲ, ತಮ್ಮ ಜೀವನದ ಕತೆಗಳನ್ನು ಸ್ವಾರಸ್ಯವಾಗಿ ಹೇಳಬಲ್ಲ ಬೇಗೂರಿನ ಮಹಿಳೆಯರಿಗೆ ನನ್ನ ಅಭಿನಂದನೆಗಳು.

೧೯೨೦೦೬

* * *