ನಾನು ಬರ್ಮಿಂಗಂನಲ್ಲಿ ಇದ್ದಾಗಲೇ ಭಾರತ –  ಪಾಕಿಸ್ತಾನ ಯುದ್ಧ ಪ್ರಾರಂಭವಾಯಿತು. ಸಾರಿ ಮಾಡಿದ ಯುದ್ಧ ಇದಲ್ಲ. ಕಾಲು ಕೆದರಿ ಪಾಕಿಸ್ತಾನವೇ ಇದ್ದಕ್ಕಿದ್ದಂತೆ ಶುರುಮಾಡಿದ್ದು. ೧೯೬೫ನೇ ಇಸವಿಯ ಆಗಸ್ಟ್ ತಿಂಗಳಲ್ಲಿ ಎಂದು ನೆನಪು. ಇದರ ಕೊನೆಯಾದದ್ದು ಭಾರತದ ಇತಿಹಾಸದಲ್ಲಿ ಪರಮ ಸಜ್ಜನನಾದ ಲಾಲ್‌ ಬಹದ್ದೂರ್ ಶಾಸ್ತ್ರಿಗಳ ಸಾವಿನಲ್ಲಿ; ತಾಷ್ಕೆಂಟ್ ಒಪ್ಪಂದದ ನಂತರ.

ನಾನಿದ್ದ ಮನೆಯ ಮಹಡಿಯ ಮೇಲೆ ಬುಖಾರಿ ಎಂಬ ನನ್ನಂತೆಯೇ ರಿಸರ್ಚ್‌ ಮಾಡುತ್ತಿದ್ದ ಪಾಕಿಸ್ತಾನಿ ಇದ್ದರು. ನಾನು – ಅವರು ಸ್ನೇಹಿತರಾಗಿದ್ದಂತೆ ನನ್ನ ಹೆಂಡತಿಯೂ ಅವರ ಹೆಂಡತಿಯೂ ಸ್ನೇಹಿತರು. ಯಾವಾಗಲೆಂದರೆ ಆವಾಗ ಮಹಡಿ ಹತ್ತಿ ನಾವೂ ಮಹಡಿ ಇಳಿದು ಅವರೂ ಒಟ್ಟಾಗುತ್ತಿದ್ದೆವು. ಮಹಡಿಯ ಮೆಟ್ಟಲಿನ ಮೇಲೆ ಆಡಿಕೊಳ್ಳುತ್ತಿದ್ದ ಮೂರು ವರ್ಷದ ನನ್ನ ಮಗನನ್ನು ಅವರು how do you do ಎನ್ನಲೇಬೇಕು. ಶರತ್‌ ಅವರನ್ನು how do you do? fine thank you ಎನ್ನಲೇಬೇಕು. ನನ್ನ ಮಗನಿಗೆ ಬ್ರಿಟಿಷ್‌ ಸದಾಚಾರದ ಪ್ರಥಮ ಪಾಠ ಕಲಿಸಿದ ಬುಖಾರಿಯನ್ನು ಅವನು ಕರೆಯುವುದು ‘ಹೌ ಡು ಯು ಡು ಮಾಮ’. ಈ ಹೌ ಡು ಯು ಡು ಮಾಮನ ಹೆಂಡತಿ ಎರಡು ದಿನ ನನ್ನ ಹೆಂಡತಿಯ ಜೊತೆ ಮಾತಾಡಲೇ ಇಲ್ಲ. ಕಾರಣ ಊಹಿಸಿದ ನನ್ನ ಹೆಂಡತಿ ಮಹಡಿ ಹತ್ತಿಹೋಗಿ ಆಕೆಯನ್ನು ಕೇಳಿಯೇ ಬಿಟ್ಟಳು. ‘ಯುದ್ಧ ಮಾಡುತ್ತಿರುವುದು ನಮ್ಮ ಎರಡು ದೇಶಗಳು. ನಾನು ನೀನೂ ಸ್ನೇಹಿತರು – ನಾವೇಕೆ ಮುನಿಸಿಕೊಂಡಿರಬೇಕು?’ ಕಣ್ಣೀರಿಡುತ್ತ ಬುಖಾರಿಯ ಹೆಂಡತಿ ಹೇಳಿದರು : ‘ನನ್ನ ತಮ್ಮ ಪೈಲೆಟ್. ಈಗ ಅವನು ಕಾಣೆಯಾಗಿದ್ದಾನೆ. ಯುದ್ಧದಲ್ಲಿ ಸತ್ತೇ ಹೋದನೊ ಅಥವಾ ವೈರಿ ವಶವಾದನೊ ನಮಗೆ ಗೊತ್ತಿಲ್ಲ. ನನ್ನ ತಾಯಿ ಊರಲ್ಲಿ ಅಳುತ್ತ ಊಟ ಮಾಡದೆ ಕೂತಿದ್ದಾರೆ.’

ಪಾಕಿಸ್ತಾನವೇ ಯುದ್ಧ ಶುರು ಮಾಡಿದ್ದು ಎಂದು ನಮಗೆಲ್ಲ ಸಿಟ್ಟು ಇತ್ತು. ಇದನ್ನು ನಾನು ಭುಟ್ಟೋಗೆ ಮಾತ್ರ ಹೇಳಿದ್ದೆ. ಅವನು ತನ್ನ ದೇಶವನ್ನು ಬಿಟ್ಟು ಕೊಡಲಾರದೆ ಏನೇನೋ ಕಾಶ್ಮೀರದ ವಿಷಯದಲ್ಲಿ ನಾವು ಮಾಡಿದ ವಚನಭಂಗ ಇತ್ಯಾದಿ ವಾದಿಸಿದ್ದ. ಬುಖಾರಿ ಜೊತೆ ನನಗೆ ಹೀಗೆ ಮಾತಾಡುವ ಸಲಿಗೆ ಇರಲಿಲ್ಲ. ನಾವಿಬ್ಬರೂ ಸೇರಿದಾಗ ಮಾತಾಡುತ್ತಿದ್ದುದು ಅವನ ಪ್ರಿಯವಾದ ನೆನಪಿನ ಬೆಂಗಳೂರಿನ ಬಗ್ಗೆ. ಆದರೆ ಆ ಘಳಿಗೆಯಲ್ಲಿ ಬುಖಾರಿಯ ಹೆಂಡತಿಯ ತಮ್ಮ ಸುರಕ್ಷಿತವಾಗಿರಲಿ ಎಂದು ನಾವು ಪ್ರಾಮಾಣಿಕವಾಗಿ ಬಯಸಿ ಬುಖಾರಿಗಳನ್ನು ಸಂತೈಸಿದ್ದೆವು. ಅವನು ಭಾರತದ ವಶದಲ್ಲಿದ್ದಾನೆ ಎಂದು ವಾರದ ನಂತರ ತಿಳಿದಿದ್ದೇ ಭಾರತ ಎಂದೂ ಅವನಿಗೆ ಹಾನಿ ಮಾಡುವುದಿಲ್ಲ ಎಂದು ನಾವು ಮಾತ್ರವಲ್ಲದೆ ಬುಖಾರಿಗಳೂ ನೆಚ್ಚಿದ್ದರು.

* * *

ಇದಾದ ಒಂದು ವರ್ಷದ ನಂತರ  ನಾನು ಒಂದು ಸ್ಲಬ್‌ ಕೊಲಿನಲ್ಲಿ ಟೀಚರ್ ಆಗಿ ಸೇರಿಕೊಂಡೆ. ನನ್ನ ಥೀಸಿಸ್ ಮುಗಿಸಿದ್ದೆ. ರಜಾ ಹೋದವರ ಬದಲಿಗೆ ಮಾಡುವ ಕೆಲಸ ಇದು –  ವಾರ ವಾರ ಸಂಬಳ. ರಜಾ ಹೋಗಿದ್ದ ಒಬ್ಬ ಸ್ಕಾಟಿಶ್ ಟೀಚರ್‌ ಖಾಯಂ ಆಗಿ ರಜಾ ಹೋದಂತೆ ಕಾಣುತ್ತ ಇತ್ತು. ಅವನಿಗೆ ನರ್ವಸ್‌ ಬ್ರೇಕ್ ಡೌನ್ ಆದ ಕಥೆಯನ್ನು ಅಲ್ಲಿನ ಎಲ್ಲ ಟೀಚರುಗಳು ವರ್ಣಿಸುತ್ತ ಇದ್ದರು. ಸ್ಲಮ್ಮಿನ ಮಕ್ಕಳು ಅದೆಷ್ಟು ಕಿಡಿಗೇಡಿಗಳು ಎಂದರೆ ಪ್ರತಿ ಕ್ಲಾಸಿಗೆ ಹೋಗುವ ಮುನ್ನ ಈ ಟೀಚರ್ ತನ್ನ ಫ್ಲಾಸ್ಕಿನಿಂದ ನೇರವಾಗಿ ಮೂರು ನಾಲ್ಕು ಗುಟುಕು ವಿಸ್ಕಿಯನ್ನು ಧೈರ್ಯಕ್ಕೆ ಎಂದು ಕುಡಿದು ಹೋಗುವವನಂತೆ!

ನನಗೊಬ್ಬ ಪಾಕಿಸ್ತಾನದ ವಿದ್ಯಾರ್ಥಿ ಇದ್ದ. ಬಡವರ ಮನೆಯ ಸಣಕಲು ಹುಡುಗ; ಬಲು ತುಂಬ. ಅವನ ಜೊತೆಗಾರರು ಇನ್ನಷ್ಟು ತುಂಟರಾದ ವೆಸ್ಟ್ ಇಂಡಿಯನ್ ಹುಡುಗರು. ಅಲ್ಲದೆ ಗಲಾಟೆಗೆ ಪ್ರಸಿದ್ಧರಾದ ಐರಿಷ್‌ ಹುಡುಗರು. ಈ ಎಲ್ಲರ ಮನೆಗಳಲ್ಲೂ ಏನಾದರೂ ಸಮಸ್ಯೆ ಇರುತ್ತಿತ್ತು. ಸಾಮಾನ್ಯವಾಗಿ ಕುಡುಕರಾಗಿ ಮನೆ ಸೇರದ ತಂದೆಯರದೇ ಸಮಸ್ಯೆ. ತಾಯಂದಿರು ಸ್ಕೂಲಿಗೆ ಬಂದು ಮಕ್ಕಳ ಬಗ್ಗೆ ಬೇಡಿಕೊಳ್ಳುವುದು –  ಅವರನ್ನು ಕೊಂಚ ಶಿಕ್ಷಿಸಿ ದಾರಿಗೆ ತನ್ನಿ, ತಂದೆಯಂತಾಗಲು ಬಿಡಬೇಡಿ ಇತ್ಯಾದಿ.

ಒಂದು ದಿನ ನಾನು ಈ ಮಕ್ಕಳನ್ನು ಆಟ ಆಡಲೆಂದು ಫುಟ್‌ಬಾಲ್ ಫೀಲ್ಡಿಗೆ ಕರೆದುಕೊಂಡು ಹೋಗಬೇಕಿತ್ತು. ನಾನು ಮುಂದೆ; ಸಾಲಾಗಿ ನನ್ನ ಹಿಂದೆ ಈ ತುಂಟ ಮಕ್ಕಳು. ಫೀಲ್ಡಿನಲ್ಲಿ ನಾವು ಡ್ರಿಲ್ ಟೀಚರ್‌ ಎಂದು ಕರೆಯುವ ಟೀಚರೊಬ್ಬರು ನಾವು ಬರುವುದನ್ನೇ ಕಾದಿದ್ದರು.

ಮಕ್ಕಳನ್ನು ನಾನು ಟೀಚರಿಗೆ ಒಪ್ಪಿಸಿ ನಿಂತೆ. ದುರುಗುಡುತ್ತ ನಿಂತ ಟೀಚರ್‌ ನಮ್ಮ ಪಾಕಿಸ್ತಾನಿ ಹುಡುಗನನ್ನು ಗುಂಪಿನಿಂದ ಹೊರಗೆ ಎಳೆದು ನಿಲ್ಲಿಸಿಕೊಂಡ. ನನಗೆ ಗೊತ್ತಿರಲಿಲ್ಲ –  ಆಟದ ಮೈದಾನದ ಪಕ್ಕದಲ್ಲಿದ್ದ ಸೇಬಿನ ತೋಟದಿಂದ ಕೈಗೆ ಎಟಕುವಂತೆ ಇದ್ದ ಒಂದು ಸೇಬಿನ ಹಣ್ಣನ್ನು ಈ ಹುಡುಗ ಕೊಯ್ದು ತಿಂದಿದ್ದಾನೆಂದು. ಆದರೆ ದೂರದಿಂದಲೇ ಡ್ರಿಲ್ ಟೀಚರ್‌ಈ ಕಳುವನ್ನು ಗಮನಿಸಿದ್ದ.

ಟೀಚರ್‌ತಾನು ತೊಟ್ಟಿದ್ದ ಕ್ಯಾನ್‌ವಾಸ್ ಶೂ ಬಿಚ್ಚಿ ಬಾಗಿದ ಹುಡುಗನ ಅಂಡಿನ ಮೇಲೆ ಶೂವನ್ನು ಎತ್ತಿ ಎತ್ತಿ ಹೊಡೆಯಲು ಶುರುಮಾಡಿದ. ಈ ಬಗೆಯ ಶಿಕ್ಷೆ ಈ ಸ್ಲಮ್‌ ಸ್ಕೂಲಿನಲ್ಲಿ ಹೊಸದಲ್ಲ. ಹುಡುಗ ಸಹಿಸಿಕೊಂಡ. ಆದರೆ ಟೀಚರ್‌ ಕಿರುಚಿ ತೋಡಿಕೊಳ್ಳುತ್ತ ಇದ್ದ ಕೋಪ ಮಾತುಗಳನ್ನು ನನಗೆ ಸಹಿಸುವುದು ಸಾಧ್ಯವಾಗಲಿಲ್ಲ. ‘ಯಾವ ದೇಶದಲ್ಲಿ ಇದ್ದೀಯೆಂದು ನೀನು ತಿಳಿದಿದ್ದೀಯ? ಇದು ಪಾಕಿಸ್ತಾನವಲ್ಲ. ಇದು ಇಂಗ್ಲೆಂಡ್‌. ನಿನ್ನ ದೇಶದಲ್ಲಿ ಇನ್ನೊಬ್ಬರ ತೋಟದಿಂದ ಕದಿಯುವುದು ಅಪರಾಧವಾಗಲಾರದು. ಆದರೆ ನೀನು ಈ ದೇಶದ ಅನ್ನ ತಿನ್ನುವುದರಿಂದ ಈ ದೇಶದ ಶಿಸ್ತನ್ನು ಪಾಲಿಸಬೇಕು.’

ಇಷ್ಟನ್ನು ಹೇಳಿದ್ದಲ್ಲದೆ ಹುಡುಗನನ್ನು ಮತ್ತೆ ಬಾಗಿಸಿ ಶೂವನ್ನು ಅವನು ಎತ್ತಿದ್ದೇ ನಾನೂ ರೋಷದಲ್ಲಿ ಕುದಿಯತೊಡಗಿದ್ದೆ. ಹುಡುಗ ನನಗೆ ಕೇವಲ ಪಾಕಿಸ್ತಾನಿಯಾಗಿ ಕಾಣಲಿಲ್ಲ. ಬಿಳಿಯರು ಏಷ್ಯದ ಜನರನ್ನು ಎಷ್ಟು ಕೀಳಾಗಿ ನೋಡುತ್ತಾರೆ ಎನ್ನಿಸಿ, ಕಡು ಕೋಪದಲ್ಲಿ ನಡುಗುತ್ತಿದ್ದ ನನ್ನ ಕೈಗಳಿಂದ ಟೀಚರ್‌ನನ್ನು ತಡೆದು ‘ನಿಲ್ಲಿಸು’ ಎಂದು ಕಿರುಚಿದೆ. ತನ್ನ ಸಹೋದ್ಯೋಗಿಯೊಬ್ಬ ತನ್ನನ್ನು ದಬ್ಬಿ ಗದರಿಸುತ್ತಿರುವುದನ್ನು ಕಂಡ ಟೀಚರ್ ತಬ್ಬಿಬ್ಬಾಗಿ ಸುಮ್ಮನೇ ನಿಂತ. ನಾನು ಬಡಬಡಿಸತೊಡಗಿದ್ದೆ: ‘ನಮ್ಮ ದೇಶದ ಹುಡುಗರು ಹಸಿವಿಗಾಗಿ ಚಪಲಕ್ಕಾಗಿ ಸೇಬು ಕದಿಯುತ್ತಾರೆ; ಆದರೆ ನಿಮ್ಮ ದೇಶದಲ್ಲಿ ಟ್ರೈನ್ ರಾಬರಿಯಾಗುವುದಿಲ್ಲವೆ? ಟ್ರೈನ್ ನಿಲ್ಲಿಸಿ ದರೋಡೆ ಮಾಡಿದವರು ನಿಮ್ಮ  ಬಿಳಿಯರಲ್ಲವೆ? ಮಾಡಿದ ತಪ್ಪನ್ನು ಶಿಕ್ಷಿಸು. ಆದರೆ ಇಡೀ ದೇಶವನ್ನೇ ಹೀಯಾಳಿಸಬೇಡ. ಈ ಪಾಪದ ಹುಡುಗನ ನೆವದಲ್ಲಿ.’

ಟೀಚರ್‌ ಥಟ್ಟನೇ ‘ಸಾರಿ’ ಎಂದ. ‘ನಾನೇನು ಹೇಳುತ್ತಿದ್ದೆ ಎಂಬುದು ನನಗೇ ಅರಿವಾಗಲಿಲ್ಲ. ಸಿಟ್ಟಿನಲ್ಲಿ ಬಡಬಡಿಸಿದೆ, ಕ್ಷಮಿಸು’ ಎಂದ. ‘ನಮಗೆ ಗೊತ್ತಿಲ್ಲದಂತೆ ನಾವು ಮೈ ಮರೆತು ಆಡುವ ಇಂತಹ ಮಾತುಗಳ ಹೊಟ್ಟೆಯಲ್ಲಿಯೇ ಫ್ಯಾಸಿಸಂ ಹೊಂಚುತ್ತ ಇರುತ್ತದೆ’ ಎಂದು ನಾನು ಕೊಂಚ ಸಮಾಧಾನದಲ್ಲಿ ನಮ್ಮಿಬ್ಬರಿಗೂ ಅರ್ಥವಾಗುವ ವಿವರಣೆ ಕೊಟ್ಟೆ. ‘ಯೆಸ್, ನೀನು ಹೇಳುವುದು ನಿಜ’ ಎಂದು ಟೀಚರ್‌ ಸೈಕಲ್ ಹತ್ತಿ ಹೊರಟುಹೋದ.

ನನ್ನ ರೋಷ, ಅದೂ ಈ ಬಾಲಕರ ಎದುರಿಗೆ, ಕೊಂಚ ಹೆಚ್ಚಾಯಿತೇನೊ ಎಂದು ನನಗೆ ಕೊಂಚ ನಾಚಿಕೆಯಾಗಿತ್ತು. ನನ್ನ ಸುತ್ತಲಿದ್ದ ಕಪ್ಪು ಹುಡುಗರೆಲ್ಲರೂ ಮೆಚ್ಚುಗೆಯಿಂದ ನನ್ನನ್ನು ತಬ್ಬಿಕೊಂಡರೆಂದು ನನಗೆ ಇನ್ನಷ್ಟು ಮುಜುಗರವಾಯಿತು. ಸುಮಾರು ಮೂವತ್ತೈದು ವಯಸ್ಸಿನ ಗೃಹಸ್ಥನಾದ ನಾನು ರೇಸಿಸ್ಟಾಗಿ ಯೋಚಿಸುವಂತೆ ಮಕ್ಕಳನ್ನು ಹುರಿದುಂಬಿಸಿದ್ದೇನೆ ಎಂದು ಗಲಿಬಿಲಿಗೊಂಡು ಇದನ್ನು ನಿವೇದಿಸಿಕೊಳ್ಳಲು ಹೆಡ್‌ಮಾಸ್ಟರ್ ಕೋಣೆಗೆ ಸೀದಾ ಹೋದೆ. ಅಲ್ಲಿ ನನಗೆ ಒಂದು ಆಶ್ಚರ್ಯ ಕಾದಿತ್ತು.

ಹೆಡ್‌ ಮಾಸ್ಟರ್ ನನ್ನ ಕೈ ಕುಲುಕಿದರು. ಡ್ರಿಲ್ ಟೀಚರ್ ಬಂದಿದ್ದನೆಂದೂ ತಾನು ಮಾಡಿದ ತಪ್ಪನ್ನು ಒಪ್ಪಿ ಅಲ್ಲಿಯೇ ಪ್ರತಿಭಟಿಸಿದ ನನ್ನನ್ನು ಅಭಿನಂದಿಸಿದನೆಂದೂ ಹೇಳಿದರು. ‘ಈ ಸ್ಲಮ್‌ ಸ್ಕೂಲಿನಲ್ಲಿ ಕೆಲಸ ಮಾಡುವುದು ಕಷ್ಟ. ನಮ್ಮ ದುಗುಡಗಳೆಲ್ಲವೂ ಕುದಿದು ಸ್ಫೋಟವಾಗಲು ಕಾದಿರುತ್ತವೆ’ ಎಂದರು. ಮಾರನೇ ದಿನ ಇದನ್ನು ತಿಳಿದ ನನ್ನ ಮೆಚ್ಚಿನ ರಿಚರ್ಡ್ ಹೋಗಾರ್ಟ್ ಎಂಬ ನಮ್ಮ ಕಾಲದ ಮಹಾನ್ ಧೀಮಂತರೊಬ್ಬರು, (ಕೂಲಿವರ್ಗದಿಂದ ಬೆಳೆದು ಬಂದವರು, ನನಗೆ ಪಾಠ ಹೇಳಿದವರು, Use of literacy ಎಂಬ ಮಹತ್ವದ ಪುಸ್ತಕದ ಬರೆದವರು) ‘ನೀನು  ಥಟ್ಟನೆ ಸಿಟ್ಟಾದದ್ದು ಸರಿಯೇ ಆಯಿತು. ಇಂಗ್ಲೆಂಡಿನ ದುಷ್ಟತನದ ಅರಿವು ಭಾರತೀಯನಾದ ನಿನಗಿರುವುದರಿಂದ ಪಾಕಿಸ್ತಾನೀ ಹುಡುಗನ ಪರವಾಗಿ ನಿಲ್ಲುವಂತೆ ಮಾಡಿತಲ್ಲವೆ? ಗುಡ್‌’ ಎಂದು ಕೊಂಚ ತುಂಟತನದಲ್ಲೇ ಹೇಳಿದ್ದರು. ನಮ್ಮ ದೇಶಗಳ ಜಗಳಗಳನ್ನು, ತನ್ನ ದೇಶವೂ ಪುಟಕೊಟ್ಟು ಬೆಳೆಸಿದ ಜಗಳನ್ನು ನಿತ್ಯ ಓದುತ್ತಿದ್ದವರು ಅವರಲ್ಲವೆ?

* * *

ಆ ದಿನಗಳಲ್ಲಿ ನಾನು ಕಾಣುತ್ತಿದ್ದ ಕನಸನ್ನು ಇಂದಿಗೂ ನಾನು ಕಳೆದುಕೊಂಡಿಲ್ಲ. ಈ ಭಾರತ ಭೂಖಂಡದ ಎಲ್ಲ ದೇಶಗಳೂ ಒಂದು ಫೆಡರೇಶನ್ ಆಗಬೇಕು. ಈ ಒಕ್ಕೂಟದ ರಾಷ್ಟ್ರಗಳಿಗೆ ತಮ್ಮದೇ ಸೈನ್ಯಗಳಿರಬಾರದು. ಒಟ್ಟಾಗಿ ಒಂದೇ ಸೈನ್ಯ ಇರಬೇಕು. ಪ್ರತ್ಯೇಕ ಸೈನ್ಯಗಳಿಲ್ಲದ, ಅದರ ಅವಶ್ಯಕತೆ ಬಾರದ, ಉಳಿದ ವಿಚಾರಗಳ್ಲಿ ಸರ್ವತಂತ್ರ ಸ್ವತಂತ್ರ್ಯ ರಾಷ್ಟ್ರಗಳ ಒಕ್ಕೂಟ ಇದಾಗಬೇಕು. ಪಾಶ್ಚಿಮಾತ್ಯವಲ್ಲದ ಒಂದು ಬದಲೀ ನಾಗರಿಕತೆ ಇಂತಹ ವ್ಯವಸ್ಥೆಯಿಂದಾಗಿ ಈ ಭೂಮಿಯಲ್ಲಿ ಬೆಳೆಯಬೇಕು….

ಇಂತಹ ಕನಸುಗಳನ್ನು ಕಾಣದೆ ಬದುಕುವುದಾದರೂ ಹೇಗೆ? ನಮ್ಮಂತೆಯೇ ಮನುಷ್ಯರಾದ ಪಾಕಿಸ್ತಾನದವರು ಅವರ ಮಿಲಿಟರಿ ಆಳ್ವಿಕೆಯಿಂದ, ಮೌಲ್ವಿಗಳ ಕುರುಡು ಹಿಡಿತದಿಂದ, ಹಿಂಸಾಚಾರದಿಂದ ಲಾಭ ಪಡೆಯುವ ರಕ್ಕಸರಿಂದ ಪಾರಾಗಬೇಕು ಎಂಬ ಕನಸನ್ನೂ ನಾವು ಕಾಣಬೇಕು. ಹಾಗೆಯೇ ಇದಕ್ಕೆ ಪ್ರತೀಕಾಲ ಮಾಡುವ ನೆವದಲ್ಲಿ ನಾವೂ ಮತಾಂಧ ದುಷ್ಪರಾಗದಂತೆ ಬಾಳಬೇಕು. ಇಂದಿನ ಹೊಲಸು ಕ್ರೂರ ಚರಿತ್ರೆ ಏನೇ ಹೇಳಲಿ, ಅತ್ಯಂತ ಸರಳವೂ ಸಾಮಾನ್ಯವೂ ಆದ ನನ್ನ ಕೆಲವು ನೆನಪುಗಳು ನನ್ನ ಕನಸನ್ನು ಪೋಷಿಸುವಂತಿವೆ.

ಸಾಯುವುದಕ್ಕೆ ಸ್ವಲ್ಪ ದಿನಗಳ ಹಿಂದೆ ಪಾಕಿಸ್ತಾನಕ್ಕೆ ಹೋಗಲು ಇಚ್ಛಿಸಿ ಗಾಂಧೀಜಿ, ಜಿನ್ನಾರಿಗೆ ಬರೆದಿದ್ದರಂತೆ. ಜಿನ್ನಾರು ಒಪ್ಪಿದ್ದರಂತೆ. ಇದು ನಿಜವಿರಬೇಕೆಂದು ನನ್ನ ಭಾವನೆ. ಜಿನ್ನಾರವರು ಪಾಕಿಸ್ತಾನ ಕೇವಲ ಮುಸ್ಲಿಮರ ರಾಷ್ಟ್ರವಾಗಬಾರದು ಎಂದು ಆಶಿಸಿದ್ದಂತೂ ದಾಖಲೆಯಾಗಿದೆ. ಕನಸುಗಳನ್ನು ಯಾಕೆ ಭಯಂಕರ ಅರ್ಥಹೀನ ಹುಚ್ಚಿನ ಚರಿತ್ರೆಗೆ ವಿರುದ್ಧವಾಗಿ ಕಾಣಬಾರದು?

೧೮೨೦೦೬

* * *