ಸುಮಾರು ನಲವತ್ತಮೂರು ವರ್ಷಗಳ ಹಿಂದಿನ ನೆನಪು ಇದು. ಬರ್ಮಿಂಗಂಲ್ಲಿ ನಾನು ವಿದ್ಯಾರ್ಥಿ. ನನಗೆ ಒಬ್ಬ ಪಾಕೀಸ್ತಾನೀ ಸ್ನೇಹಿತ. ಅವನ ಹೆಸರು ಕೂಡ ಭುಟ್ಟೋ. ಯೂನಿವರ್ಸಿಟಿ ಕ್ಯಾಂಟೀನಿನ ಹುಲ್ಲು ಹಾಸಿನ ಮೇಲೆ ಅಪರೂಪದ ವರವೆಂಬಂತೆ ಬೆಳಗುವ ಬಿಸಿಲಿನಲ್ಲಿ ನಾವು ಡ್ರಾಫ್ಟ್‌ ಬಿಯರ್‌ ಕುಡಿಯುತ್ತ ಕೂರುತ್ತಿದ್ದೆವು. ತನ್ನ ಹೆಸರು ಕೂಡ ಭುಟ್ಟೋ ಎನ್ನುವುದೇ ನಮ್ಮ ಹರಟೆಯ ವಿಷಯವಾಯಿತು ಒಮ್ಮೆ. ‘ಒಂದು ಕಾಲದಲ್ಲಿ ನಾವು ಭಟ್ಟರಿರಬಹುದೇನೋ!’ ಎಂದು ನಕ್ಕು ಭುಟ್ಟೋ ಹೇಳಿದ : ‘ಪಾಕಿಸ್ತಾನದಲ್ಲಿ ಒಬ್ಬ ಭುಟ್ಟೋ ಗೆದ್ದುಬರುವುದೇನೂ ಸುಲಭವಲ್ಲ. ಮೌಲ್ವಿಗಳಿಗೂ, ಸೇನೆಯವರಿಗೂ, ಜನಸಾಮಾನ್ಯರಿಗೂ ಒಂದೇ ಕಾಲದಲ್ಲಿ ಬೇಕಾದ ಮನುಷ್ಯನಾಗುವುದು ಎಷ್ಟು ಕಷ್ಟ ನೀನು ಊಹಿಸಲಾರೆ. ನಮ್ಮ ಭುಟ್ಟೋ ಬಡಬಡಾಯಿಸುತ್ತಾನೆ. ಜಾಣ. ನಿಮ್ಮನ್ನು ಬೈಯದೆ ಅವನು ಜನಪ್ರಿಯನಾಗಲಾರ.’

ಕ್ರಿಶ್ಚಿಯನ್ನರಂತೆ ಮುಸ್ಲಿಮರು ತಾವು ಹಿಂದೆ ಮೇಲ್ಜಾತಿಯ ಹಿಂದೂಗಳು ಎಂದು ನೆನೆಯುವುದೂ ಇಲ್ಲ, ಜಂಬ ಪಡುವುದೂ ಇಲ್ಲ. ತಮ್ಮ ಭೂತವನ್ನು ಸುಟ್ಟು ಮುಸ್ಲಿಮರಾಗಿರುತ್ತಾರೆ ಎಂದು ತಿಳಿದಿದ್ದ ನನಗೆ ಈ ಸಹಪಾಠಿ ಭುಟ್ಟೋ ಅಪರೂಪದ ಮನುಷ್ಯ. ಮುಚ್ಚುಮರೆಯಿಲ್ಲದೆ ಮಾತಾಡುವ ಗೆಳೆಯ ಇವನು. ‘ನೋಡು ನೀವು ಅದೃಷ್ಟವಂತರು. ಬೀದಿಗೊಬ್ಬ ರಾಜಕಾರಣಿ ನಿಮ್ಮಲ್ಲಿ ಇದ್ದಾರೆ. ನಮ್ಮಲ್ಲಿ ಜಿನ್ನಾ ಮತ್ತು ಲಿಯಾಕತ್‌ಆದನಂತರ ಇಡೀ ದೇಶಕ್ಕೆ ಸಲ್ಲುವ ರಾಜಕಾರಣಿಗಳೇ ಇಲ್ಲ. ಹಾಗಾಗಿ ದೇಶದ ವ್ಯವಸ್ಥೆಯ ನಿರ್ವಹಣೆಗೆ ಮಿಲಿಟರಿಯನ್ನೇ ನಾವು ನೆಚ್ಚುವಂತಾಗಿಬಿಟ್ಟಿದೆ.’

ನನ್ನಂತೆಯೇ ಇಂಗ್ಲಿಷ್‌ ಆಧ್ಯಾಪಕನಾಗಿದ್ದ ಭುಟ್ಟೋ ಹೆಂಡತಿಯನ್ನು ಬಿಟ್ಟು ಒಬ್ಬನೇ ಓದಲು ಬಂದಿದ್ದ. ಅವನ ಹೆಂಡತಿಯೂ ಸೋಷಿಯಾಲಜಿಯ ಅಧ್ಯಾಪಕಿ. ಆಕೆ ತನ್ನ ರಿಸರ್ಚ್‌‌ಗೆ ಒಂದು ವಿಷಯ ಆಯ್ದುಕೊಂಡಳು. ಅದು ವಿದ್ಯಾವಂತ ಮುಸ್ಲಿಮರಲ್ಲಿ ಕಾಣುವ ದೇವರ ಕಲ್ಪನೆ ಎಂದಾಗಿತ್ತು. ಮುಸ್ಲಿಮರಲ್ಲಿ ಪವಿತ್ರ ಖೊರಾನ್‌ಗೆ ಹೊರತಾಗಿ ದೇವರ ಕಲ್ಪನೆ ಇರುವುದು ಸಾಧ್ಯವೆ? ಎಂದು ಮೌಲ್ವಿಗಳು ಗಲಾಟೆ ಮಾಡಿದ್ದರಿಂದ ಆಕೆ ಕ್ಷಮೆ ಕೇಳಬೇಕಾಯಿತಂತೆ. ನಾಲ್ಕು ದಶಕಗಳ ಹಿಂದಿನ ಮಾತು ಇದು. ಈಗ ಏನಾಗುತ್ತಿದೆಯೋ ತಿಳಿಯದು. ಗೆಳೆಯ ಭುಟ್ಟೊ ತಮ್ಮನ್ನು ಆಧುನಿಕವಾಗಲು ಬಿಡದ ಮೌಲ್ವಿಗಳ ಪರಮ ವಿರೋಧಿಯಾಗಿದ್ದ. ಆಧುನಿಕತೆಯನ್ನು ಸಮಸ್ಯಾತ್ಮಕವಾಗಿ ಕಾಣದೆ ಕಣ್ಣುಮುಚ್ಚಿ ನಂಬಿದ್ದ ವೈದಿಕ ವಿರೋಧಿಯಾದ ನನಗೆ ಮೌಲ್ವಿ ವಿರೋಧಿಯಾದ ಭುಟ್ಟೋ ಪ್ರಿಯನಾಗಿದ್ದ. ಆದರೆ ನಮ್ಮಿಬ್ಬರಲ್ಲೂ ನಮ್ಮ ನಮ್ಮ ಧರ್ಮಗಳ ಮೂಲಾರ್ಕಗಳಾದ ವಿಚಾರಗಳಿಗೆ ನಾವಿಬ್ಬರೂ ಒಳಗೊಳಗೇ ನಮಗೆ ಪ್ರತ್ಯಕ್ಷವಾಗದಂತೆ ಬದ್ಧರೆಂಬುದು ಆಗೀಗ ಇಬ್ಬರಿಗೂ ಹೊಳೆಯುವುದಿತ್ತು.

‘ಭಾರತ ಒಡೆಯಬಾರದಿತ್ತು. ನಾವೆಲ್ಲರೂ ಒಟ್ಟಾಗಿ ಇದ್ದಿದ್ದರೆ ನೀವೂ ನಮ್ಮಂತೆ ಆಧುನಿಕರಾಗಿರುತ್ತಿದ್ದಿರಿ’ ಹೀಗೆ ದಾಕ್ಷಿಣ್ಯ ಪಡದೆ ನನಗೆ ಭುಟ್ಟೋ ಜೊತೆ ಮಾತಾಡುವ ಸಲಿಗೆಯಿತ್ತು. ಅದೇ ಸಲಿಗೆಯಲ್ಲಿ ಭುಟ್ಟೋ ಹೇಳಿದ. ‘ಪಾಕಿಸ್ತಾನವಾದಾಗ ನಾನು ಪಂಜಾಬಿನಲ್ಲಿದ್ದೆ. ನಾನೂ ಒಬ್ಬ ನೆಹರೂ ಅಭಿಮಾನಿ. ಆದರೂ ನನ್ನ ಇಚ್ಛೆಯ ಮೇಲೆಯೇ ನಾನು ಪಾಕಿಸ್ತಾನಿಯಾದೆ. ಯಾಕೆಂದು ನೀನು ಊಹಿಸಬಲ್ಲೆಯ?’ ಮತಾಂಧತೆಗೆ ಒಳಗಾದವರಲ್ಲಿ ಇವನೂ ಒಬ್ಬನಿರಬಹುದು ಎಂದು ನಾನು ಸಲೀಸಾಗಿ ಊಹಿಸಬಹುದಾಗಿತ್ತು. ಆದರೆ ಸೌಮ್ಯವಾದ ಚರ್ಯೆಯ, ಎತ್ತರದ ನಿಲುವಿನ, ರುಚಿಯಾದ ಊಟದಲ್ಲಿ ಹಿಗ್ಗುವ ಈ ಮನುಷ್ಯ ಹೇಗೆ ಮತಾಂಧನಾದಾನು?

ನನ್ನನ್ನು ಕಂಡಿದ್ದೇ ಧಾರಾಳವಾಗಿ ಅರಳುವ ಅಪ್ಪುವ ಎಲ್ಲ ಪಂಜಾಬಿಗಳ ಹಾಗಿನ ಈ ಪಂಜಾಬಿ ಏನನ್ನೂ ಅತಿ ಸೀರಿಯಸ್ಸಾಗಿ ಅತಿರೇಕಕ್ಕೆ ತೆಗೆದುಕೊಂಡು ಹೋಗಬಲ್ಲವನು ಎಂದು ಊಹಿಸುವುದು ಸಾಧ್ಯವಿರಲಿಲ್ಲ. ಗಾಜಿನ ಅಂಚಿನಲ್ಲಿ ಬಿಯರಿನ ನೊರೆ ಒಡೆಯುವುದನ್ನು ಹಿತವಾದ ಬಿಸಿಲಿನಲ್ಲಿ ಗಮನಿಸುತ್ತ ಕೂತ ನನಗೊಂದು ಆಶ್ಚರ್ಯ ಕಾದಿತ್ತು. ಭುಟ್ಟೋನ ಮುಂದಿನ ಮಾತಿನ ತೀವ್ರತೆ ನನ್ನನ್ನು ಅಲುಗಾಡಿಸಿತ್ತು. ‘ಪಂಜಾಬಿನ ಸಣ್ಣದೊಂದು ಊರಿನಲ್ಲಿ ನಾನು ಬೆಳೆದದ್ದು. ನನ್ನ ಹೆಚ್ಚು ಸ್ನೇಹಿತರು ಪಂಜಾಬಿ ಹಿಂದೂಗಳೇ. ಅವರಲ್ಲಿ ಒಬ್ಬನೇ ಒಬ್ಬ ಎಂದೂ ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಿದ್ದಿಲ್ಲ; ಅವರು ಕದ್ದು ಬಂದು ನಮ್ಮ ಮನೆಯಲ್ಲಿ ಬಿರಿಯಾನಿ ತಿಂದು ಹೋಗಿದ್ದಾರೆ. ನಾನು ಪಂಜಾಬಿನಲ್ಲಿ ಯಾವ ಮನೆಯ ಒಳಗೂ ಕಾಲಿರಿಸಿ ಅವರ ಊಟದ ಜಾಗವನ್ನು ನೋಡಿದ್ದೂ ಇಲ್ಲ. ನಿಮ್ಮ ಜಾತಿ ಪದ್ಧತಿಯಲ್ಲಿ ನಾನೊಬ್ಬ ಶೂದ್ರನಂತೆ ಬದುಕಬೇಕಾಗಿತ್ತು ಎನ್ನುವುದು ನನಗೆ ಒಪ್ಪಲಾರದ ಸತ್ಯವಾಗಿತ್ತು. ನಮ್ಮದೇ ಒಂದು ದೇಶವಿದ್ದರೆ ಮಾತ್ರ ನಾವು ಮರ್ಯಾದೆಯಿಂದ ಬಾಳುವುದು ಸಾಧ್ಯವೆಂದು ನನಗೆ ಅನ್ನಿಸಿತ್ತು. ಜಿನ್ನಾರ ವಾದ ನನಗೆ ಸರಿಯೆನ್ನಿಸಿತು. ನೆಹರೂ ನನ್ನ ಇಷ್ಟದ ನಾಯಕ. ಆದರೆ ನಿಮ್ಮ ದೇಶದ ಜಾತಿ ಪದ್ಧತಿಯನ್ನು ಈ ಆಂಗ್ಲನಾದ ನೆಹರೂ ಹೇಗೆ ಮೀರಿಯಾನು ಎಂಬ ಅನುಮಾನವಿತ್ತು. ಪಾಕಿಸ್ತಾನಿಯಾದೆ. ಆದರೂ ನನಗೆ ಸಮಾಧಾನ ಸಿಗಲಿಲ್ಲ. ನನ್ನಂತಹ ಎಷ್ಟೋ ಜನ ಇವನ್ನೆಲ್ಲ ಮಾತನಾಡಲಾರದೆ ಮೌಲ್ವಿಗಳು ಒಡ್ಡುವ ಇಕ್ಕಟ್ಟುಗಳಲ್ಲಿ ಬದುಕುತ್ತಿದ್ದೇವೆ.’

ಭುಟ್ಟೋ ಮಾತಿನ ಗುಂಗಿನಲ್ಲಿದ್ದ. ಒಂದೇ ಗುಟುಕಿಗೆ ಬಿಯರ್‌ ಹೀರಿ ಕ್ಯಾಂಟೀನಿನಿಂದ ಇನ್ನೊಂದು ಬಿಯರ್‌ನನಗೂ ಅವನಿಗೂ ತಂದು ಕೂತ. ‘ನಾನು ಮಾತಾಡಲೇ ಬೇಕು. ನೀನು ಕೇಳಿಸಿಕೊಳ್ಳಲೇ ಬೇಕು, ಈ ಬಿಯರ್‌ ಮುಗಿಯುವವರೆಗಾದರೂ’ ಎಂದು ನಕ್ಕು ಮುಂದುವರೆದ. ನಾನು ಹೇಳಬೇಕೆಂದಿದ್ದೆ. ಹಳ್ಳಿಗಳಲ್ಲಿ ಎಲ್ಲರಂತೆ ಮುಸ್ಲಿಮರೂ ಒಂದು ಜಾತಿ. ಅವರವರ ಜಾತಿಯ ನಿಯಮ ಅವರಿಗೆ ಎಂದು ತಿಳಿದ ಹಳ್ಳಿಗಳಲ್ಲಿ ದ್ವೇಷವಿಲ್ಲ. ಆದರೆ ಮುಸ್ಲಿಮರಿಗೆ ಒಬ್ಬ ಪ್ರವಾದಿಯಿದ್ದಾನೆ; ಅವರದೇ ಧರ್ಮವಿದೆ, ನಾಗರಿಕತೆಯಿದೆ. ಹೀಗೊಬ್ಬ ಮುಸ್ಲಿಮ್‌ ಎಚ್ಚರವಾದದ್ದೇ ತನ್ನನ್ನು ಇನ್ನೊಂದು ಜಾತಿಯೆಂದು ತಿಳಿಯುವ ಹಿಂದೂಗಳ ಅಸಡ್ಡೆಯನ್ನು ಅವನು ಸಹಿಸಲಾರ. ಒಮ್ಮೆ ಈ ದೇಶವನ್ನು ಆಳಿದವರು ಕೂಡ ಅವರು. ಆದರೆ ನಾನು ಸುಮ್ಮನಿದ್ದು ಅವನ ಮಾತು ಕೇಳಿಸಿಕೊಂಡೆ.

‘ಅಯೂಬ್ ಆಮಂತ್ರಿಸಿದನೆಂದು ನೆಹರೂ ನಮ್ಮ ದೇಶಕ್ಕೆ ಬಂದ. ನಿನಗೆ ಗೊತ್ತಿರಬೇಕು, ನಾಲ್ಕು ವರ್ಷಗಳ ಕೆಳಗೆ. ಕರಾಚಿಗೆ. ಆಗೇನಾಯಿತು ಗೊತ್ತೆ? ನಾನು ಕಣ್ಣಾರೆ ಕಂಡದ್ದನ್ನು ಹೇಳುತ್ತಿದ್ದೇನೆ. ತೆರೆದ ಜೀಪಿನಲ್ಲಿ ನೆಹರೂ. ಅವನ ಪಕ್ಕದಲ್ಲಿ ಅಯೂಬ್‌ ಖಾನ್‌. ದಾರಿಯುದ್ದಕ್ಕೂ ಸಹಸ್ರ ಸಂಖ್ಯೆಯಲ್ಲಿ ಕಿಕ್ಕಿರಿದಿದ್ದ ಜನ. ಯಾರನ್ನು ನೋಡಲು ಅವರು ಬಂದದ್ದು? ನಮ್ಮ ಅಯೂಬ್‌ ಖಾನ್‌ರನ್ನಲ್ಲ. ನಮ್ಮ ವನಾಗಬಹುದಿದ್ದ ನೆಹರೂನನ್ನು. ನೆಹರೂ ಆಗ ಹೇಗೆ ವರ್ತಿಸಿದ ಗೊತ್ತೆ? ಇದು ತನ್ನದೇ ದೇಶ ಇವರು ತನ್ನವರೇ ಆಗಬೇಕಾಗಿದ್ದ ಜನ ಎನ್ನುವಂತೆ ಪಾಕಿಸ್ತಾನವನ್ನೇ ಆಕ್ರಮಿಸಿಬಿಟ್ಟವನಂತೆ ಎರಡೂ ಕೈಗಳನ್ನು ಬೀಸುತ್ತ ಜನರನ್ನು ವಂದಿಸಿದ. ನಮ್ಮ ಅಯೂಬ್‌ಗೆ ಭಾರೀ ಹೊಟ್ಟೆಕಿಚ್ಚಾಗಿರಬೇಕೆಂದೇ ನನ್ನ ಊಹೆ…’

ತನ್ನ ಪಂಜಾಬಿ ಹಿಗ್ಗಿನ ಖುಷಿಯನ್ನು ಕೊಂಚ ಮರೆತು ಸೀರಿಯಸ್ಸಾಗಿ ಭುಟ್ಟೋ ನನ್ನ ಕಡೆ ನೋಡದೆ ತನಗೇ ಮಾತಾಡಿಕೊಳ್ಳುವವನಂತೆ ಹೇಳಿದ: ‘ಈ ನಮ್ಮ ಹೀರೋ ನೆಹರೂ ಕೂಡ ಜಿನ್ನಾರ ಜೊತೆ ಕೊಟ್ಟುಕೊಡುವುದರಲ್ಲಿ ಸಣ್ಣವನಾಗಿ ನಡೆದುಕೊಳ್ಳದಿದ್ದರೆ, ಜಾತೀಯವಾದಿಗಳಾದ ಹಿಂದೂಗಳು ಕುತಂತ್ರಿಗಳೆಂದು ನಮಗೆ ಅನ್ನಿಸದೇ ಇದ್ದಿದ್ದರೆ ನಾವು ಮೌಲ್ವಿಗಳ ಹಿಡಿತದಲ್ಲಿ ಈ ಮಿಲಿಟರಿ ಮುಖಂಡರ ಭ್ರಷ್ಟಾಚಾರದಲ್ಲಿ ಅಮೆರಿಕಾದ ದಾಸರಾಗಿ ಬದುಕಬೇಕಾಗಿ ಬರುತ್ತಿರಲಿಲ್ಲ.’

‘ಪಾಕಿಸ್ತಾನ ಎನ್ನುತ್ತೇವೆ? ಎಲ್ಲಿದೆ ಪಾಕಿಸ್ತಾನ? ನೀನೇ ನೋಡಿದ್ದೀಯ. ಇಲ್ಲಿರುವ ನನ್ನ ಸ್ನೇಹಿತರೆಲ್ಲ ಪಂಜಾಬಿ ಹಿಂದೂಗಳೇ. ಪಾಕಿಸ್ತಾನದ ಬಂಗಾಳಿಗಳು ನಮ್ಮ ಜೊತೆ ಬೆರೆಯುವುದಿಲ್ಲ. ಬಂಗಾಳದ ಹಿಂದೂಗಳೇ ಅವರ ಸ್ನೇಹಿತರು… ಉರ್ದು ನಮ್ಮ ಭಾಷೆ ಎನ್ನುತ್ತೀವಿ. ಆದರೆ ಯಜಮಾನಿಕೆಯೆಲ್ಲ ಪಂಜಾಬಿಗಳದು.’

ಆಗಿನ್ನೂ ಬಾಂಗ್ಲಾದೇಶ ಹುಟ್ಟಿರಲಿಲ್ಲ. ಆದರೆ ಇಂಗ್ಲೆಂಡಿನಲ್ಲಿದ್ದ ನಮ್ಮ ಕಣ್ಣಿಗೆ ಅವರು ಬೇರೆ ಬೇರೆಯೆಂದೇ ಅನ್ನಿಸುತ್ತಿತ್ತು. ಪಂಜಾಬಿಗಳದು ಒಂದು ಗುಂಪಾದರೆ ಬಂಗಾಳಿಗಳದು ಇನ್ನೊಂದು. ಬಂಗಾಳಿ ಮುಸ್ಲಿಮ್ ಹೆಂಗಸರು ಜಂಬದಿಂದ ತಮ್ಮ ಹಣೆಯಲ್ಲಿ ಕುಂಕುಮ ಮೆರೆಯುತ್ತ ಇದ್ದರು. ರವೀಂರ ಸಂಗೀತ ಕೇಳಿಸಿಕೊಳ್ಳುತ್ತಿದ್ದರು. ಭುಟ್ಟೋ ಇವೆಲ್ಲವನ್ನೂ ಗಮನಿಸುತ್ತಿದ್ದ. ಅವನು ತುಂಬ ಬೇಸರದಿಂದ ಗಮನಿಸಿದ್ದ ಇನ್ನೊಂದು ವಿಷಯ ಹೇಳಲೇಬೇಕು.

ಪಾಕಿಸ್ತಾನದ ವಶದಲ್ಲಿದ್ದ ಕಾಶ್ಮೀರದಿಂದ ಬಂದ ಹಲವರು ಬರ್ಮಿಂಗಂನಲ್ಲಿ ಇದ್ದರು. ಕಳಪೆಯಾದ ಕೆಲಸಗಳಲ್ಲಿ ಕಡುಬಡವರಾಗಿ ಇದ್ದವರು ಇವರು. ಯಾವ ಪಾಕಿಸ್ತಾನಿಯಾಗಲೀ, ಅವನು ಪಂಜಾಬಿಯಾದರೂ ಬಂಗಾಳಿಯಾದರೂ ಇವರನ್ನು ತಮ್ಮವರೆಂದು ತಿಳಿಯುತ್ತಿರಲಿಲ್ಲ. ಇಂಗ್ಲೆಂಡಿನ ಕಣ್ಣಿಗೆ ಕಾಣಿಸದಂತೆ ಕೆಲಸ ಮಾಡುವ ವರ್ಣಬೇಧದ ವಾತಾವರಣದಲ್ಲಿ ಬಿಳಿಯರಿಗೆ ಸಲ್ಲುವಂತೆ ಅತಿಸಭ್ಯರಾಗಿ ವರ್ತಿಸುವ ನಾವೆಲ್ಲರೂ ಈ ಒರಟು ಚರ್ಯೆಯವರು ನಮ್ಮವರೇ ಅಲ್ಲವೆನ್ನುವಂತೆ ದೂರ ಇದ್ದುಬಿಡುತ್ತಿದ್ದೆವು. ನಮ್ಮ ದೇಶಗಳಿಂದ ಕೂಲಿಗಾಗಿ ಬರುವ ಎಲ್ಲರೂ ವಿದ್ಯಾವಂತರಾಗಿ ಒಳ್ಳೆಯ ಹುದ್ದೆಯಲ್ಲಿ ಇರುವ ನಮ್ಮವರಿಗೆ ಮುಜುಗರ ಹುಟ್ಟಿಸುವ ಜನರಾಗಿದ್ದರು. ಒಬ್ಬ ಕನ್ನಡದ ಡಾಕ್ಟರ್‌ನನಗೆ ಹೇಳಿದ್ದರು : ‘ನೋಡಿ ನಾನು ಒಂದು ಬಸ್ಸಿನಲ್ಲಿ ಪ್ರಯಾಣ ಮಾಡುತ್ತ ಇದ್ದರೆ ಒಬ್ಬ ಬಿಳಿಯನ ಕಣ್ಣಲ್ಲಿ ನಾನೂ ಒಬ್ಬ ಈ ಕಂಡಕ್ಟರ್‌ಕೆಲಸ ಮಾಡುತ್ತಿರುವ ಪಂಜಾಬಿಯಂತೆ ಇನ್ನೊಬ್ಬ ಕಲರ್ಡಮ್ಯಾನ್‌ಅ ಲ್ಲವೆ?’

ಆನರರಿ ವೈಟ್ ಆಗುವುದೇ ನಮ್ಮೆಲ್ಲರ ಗುರಿಯಾಗಿರುತ್ತಿತ್ತು. ಭುಟ್ಟೋ ಪ್ರಕಾರ ಈ ಕಾಶ್ಮೀರಿಗಳಿಗೆ –  ಅದರಲ್ಲೂ ಕಡುಬಡವರಾಗಿಯೇ ಉಳಿದಿದ್ದ ‘ಅಜಾದ್ ಕಾಶ್ಮೀರಿ’ಗಳಿಗೆ –  ಸ್ವಾಯುತ್ತತೆ ಪಡೆದ ಕಾಶ್ಮೀರವೇ ಸರಿಯಾದ ಆಯ್ಕೆ. ‘ನಿಮ್ ಅಧೀನದಲ್ಲಿರುವ ಕಾಶ್ಮೀರಕ್ಕೂ….’ ಎಂದು ಸೇರಿಸಿ ನಕ್ಕಿದ್ದ.

ಆತ್ಮೀಯನಾದ ಖದೀಮನೊಬ್ಬನ ಕೆಣಕುವ ಕುಹಕವನ್ನು ಕಂಡು ನಾನು ಉಲ್ಲಸಿತನಾಗಿ ನಮ್ಮಿಬ್ಬರಿಗೂ ಕ್ಯಾಂಟೀನಿನಿಂದ ಸ್ಯಾಂಡ್‌ ವಿಚ್‌ಗಳನ್ನು ತಂದು ಕೂತು ಹೇಳಿದೆ. ವಡ್ಸ್‌ ವರ್ತ್‌‌ನನ್ನು ಮೈಸೂರಿನಲ್ಲಿ ತೀರ್ಥಹಳ್ಳಿಯ ಹುಡುಗನಾದ ನಾನು ಓದಿದ ದಿನದಿಂದಲೂ ನೋಡಲು ಬಯಸಿದ್ದ ಡ್ಯಾಫೋಡಿಲ್‌ಗಳು ಹುಲ್ಲುಗಾವಲಿನ ಅಂಚಿನಲ್ಲಿ ಅರಳಿದ್ದವು. ಚಿಕನ್‌ ಕರಿ ಪ್ರಿಯನಾದ ಭುಟ್ಟೋ ಸದಾಚಾರಕ್ಕಾಗಿ ಥ್ಯಾಂಕ್ಸ್‌ ಹೇಳಿ ನನ್ನ ಮಾತಿಗೆ ಕಾದ.

‘ನೋಡು ಭುಟ್ಟೋ. ನಮ್ಮದು ಸೆಕ್ಯುಲರ್‌ ದೇಶ; ನಿಮ್ಮದು ಅಲ್ಲ. ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದರೆ ಅಲ್ಲಿರುವ ಹಿಂದೂಗಳು ಸೆಕಂಡ್‌ ರೇಟ್ ನಾಗರಿಕರಾಗಿರುತ್ತಾರೆ. ಕಾಶ್ಮೀರ ಸ್ವಾಯತ್ತತೆ ಪಡೆದ ರಾಷ್ಟ್ರವಾದರೆ ನಮ್ಮ ನಿಮ್ಮ ನಡುವೆ ಅಮೆರಿಕಾ ಬಂದು ಕೂರುತ್ತದೆ; ಕಾಶ್ಮೀರವನ್ನು ನಮ್ಮಿಬ್ಬರಿಂದಲೂ ರಕ್ಷಿಸುವ ನೆವದಲ್ಲಿ, ಏಕೆ? ಮುಸ್ಲಿಮರು ಅತಿಯಾಗಿ ಮತಾಭಿಮಾನಿಗಳು; ತಮ್ಮದೇ ಒಂದು ರಾಷ್ಟ್ರವಾಗಬೇಕೆಂದು ದುಂಬಾಲು ಬಿದ್ದವರು ಎಂದು ಈಗಲೇ ಭಾರತೀಯರು ಅನುಮಾನಿಸುತ್ತಾರೆ.’

ನನ್ನ ಮಾತನ್ನು ತಡೆದು ಭುಟ್ಟೋ ಹೇಳಿದ. ‘ಜಿನ್ನಾರಿಂದ ಒಂದು ತಪ್ಪಾಯಿತು. ಎಲ್ಲ ಮುಸ್ಲಿಮರಿಗೂ ಪಾಕಿಸ್ತಾನದಲ್ಲಿ ಎಲ್ಲಿದೆ ಜಾಗ? ಈ ಎರಡು ತುಂಡುಗಳನ್ನು ಜಿನ್ನಾ ಹೇಗೆ ಒಪ್ಪಿಕೊಂಡರೊ? ಹೆಚ್ಚು ಮುಸ್ಲಿಮರು ಇರುವುದು ನಿಮ್ಮ ದೇಶದಲ್ಲಿ. ಅವರು ಅತಂತ್ರರಾಗಿಬಿಟ್ಟರು –  ದೇಶ ಇಬ್ಭಾಗವಾಗಿ.’

ನಾನು ಆಡಬೇಕೆಂದಿದ್ದುದನ್ನು ನನ್ನ ಗೆಳೆಯನೇ ಹೇಳಿದ್ದ. ಕಾಶ್ಮೀರ ಭಾರತದ ಕೈ ತಪ್ಪಿದರೆ ಈಗಾಗಲೇ ಅಪನಂಬಿಕೆಯ ಹಿಂದುತ್ವವಾದಿಗಳಿಗೆ ಬೆದರಿ ಬದುಕುವ ಮುಸ್ಲಿಮರು ಇನ್ನಷ್ಟು ಅನುಮಾನಕ್ಕೊಳಗಾಗ ಬೇಕಾಗುತ್ತದೆ. ಮತೀಯ ಆಧಾರದ ಮೇಲೆ ರಾಷ್ಟ್ರ ನಿರ್ಮಿಸಬೇಕೆನ್ನುವ ಸಾವರ್ಕರ್‌ ವಾದಿಗಳಿಗಾಗಲೀ ಜಿನ್ನಾರಿಗಾಗಲೀ ಇದು ಸಮಸ್ಯೆಯಲ್ಲ. ಆದರೆ ದೇಶದ ಕಾರುಬಾರುಗಳೆಲ್ಲವೂ ಸೆಕ್ಯುಲರ್‌ ಚಿಂತನೆಯ ಆಧಾರದ ಮೇಲೆ ಜರುಗಬೇಕೆಂಬ ನಮಗೆ ಇದು ಸಮಸ್ಯೆ ಎಂದು ನಾನು ಹೇಳಿದೆ.

ಭುಟ್ಟೋಗೆ ನನ್ನ ವಿವರಣೆ ಅಗತ್ಯವಾಗಿರಲಿಲ್ಲ. ಅವನಂತಹ ಎಷ್ಟೋ ಜನ ನಾಗರಿಕ ಸಮಾಜದಲ್ಲಿ (ಸಿವಿಲ್ ಸೊಸೈಟಿಯಲ್ಲಿ) ನಂಬುವ ಪಾಕಿಸ್ತಾನಿಗಳು ಇದ್ದಾರೆಂಬುದು ನನಗೆ ಖಚಿತವಾಗಿತ್ತು. ಇದು ನಮಗೆ ಗೊತ್ತಾಗುವುದು ನಾವು ಪರದೇಶದಲ್ಲಿ ಭೇಟಿಯಾದಾಗ. ಕೆಲವು ವರ್ಷಗಳ ಹಿಂದೆ ಚಿಕಾಗೋ ಧರ್ಮ ಸಮ್ಮೇಳನಕ್ಕೆ ಹೋಗಿದ್ದ ನಾನು ಒಂದು ಟ್ಯಾಕ್ಸಿ ಹತ್ತಿದೆ. ಡ್ರೈವರ್‌ ನನ್ನ ಊರು ಇತ್ಯಾದಿ ಕೇಳಿದ. ತನ್ನನ್ನು ಪಾಕಿಸ್ತಾನಿಯೆಂದು ಪರಿಚಯ ಮಾಡಿಕೊಂಡ. ಇಳಿಯುವಾಗ ನಾನು ಕೊಡಲು ಹೋದ ಬಾಡಿಗೆಯನ್ನು ತೆಗೆದುಕೊಳ್ಳಲಿಲ್ಲ. ‘ನಿನ್ನನ್ನು ನೋಡಿ ನನ್ನ ಊರು ಜನ ನೆನಪಾದರು. ನಾವು ಮಿತ್ರರಾಗೋಣ’ ಎಂದು ನನ್ನ ಕೈಕುಲುಕಿದ.

೧೧೨೦೦೬

* * *