‘ಕನ್ನಡವು ಕನ್ನಡ ಕನ್ನಡಿಸುತಿರಬೇಕು’
– ದ.ರಾ.ಬೇಂದ್ರೆ

ಗಾಯತ್ರಿ ಸ್ಪೀವಾಕ್‌ ಅವರು ‘ಟ್ರಾನ್‌ಲೆಷನ್‌ ಥಿಯರಿ’ ಬಗ್ಗೆ ಅನನ್ಯವಾದ ಒಳನೋಟ ಪಡೆದವರು. ಬಂಗಾಳದ ಮೂಲ ನಿವಾಸಿಗಳ ನಡುವೆ ಅವರು ಮಾಡುತ್ತಿರುವ ಕೆಲಸದ ಮೂಲಕ, ಜೊತೆಗೇ ಮಹಾಶ್ವೇತಾದೇವಿಯವರ ಕೃತಿಗಳನ್ನು ಇಂಗ್ಲಿಷಿಗೆ ತರುವುದರ ಮೂಲಕ, ವಸಾಹತುಶಾಹಿಯ ವಿರುದ್ಧದ ಅವರ ಹೋರಾಟದಲ್ಲಿ ಡೆರಿಡಾನನ್ನು ಮೂಲದಲ್ಲಿ ನೋಡಿ ಅರ್ಥಮಾಡಿಕೊಂಡು ಅನುವಾದಿಸಿದವರು ಇವರು. ಸ್ಪೀವಾಕ್‌ ಟ್ರಾನ್‌ಲೇಷನ್‌‌ಗೆ ಬಳಸುವ ಪದ ಅನುವಾದ. ಅನುಸರಿಸು, ಅನುವಾಗು, ಅನುಸಂಧಾನಿಸು –  ಈ ಅರ್ಥಗಳನ್ನು ಹೊಳೆಯಿಸುವ ಪದ ಅನುವಾದ. ಭಾಷಾಂತರಕ್ಕಿಂತ ಸೂಕ್ಷ್ಮವಾದ ಹೊಳಹುಗಳು ಅನುವಾದ ಶಬ್ದದಲ್ಲಿ ಇದೆ ಎಂದುಕೊಳ್ಳಬಹುದು.

ಅನುವಾದಿಸುವುದೆಂದರೆ ಮೂಲಕ್ಕೆ ಹತ್ತಿರವಾಗುವುದು. ಕನ್ನಡ ಭಾಷೆ ಅಭ್ಯಾಸಗತವಾದ ಸಂಸ್ಕೃತದ ನುಡಿಗಟ್ಟುಗಳಿಂದಲೂ ವೃತ್ತಗಳಿಂದಲೂ ಬಿಡುಗಡೆ ಪಡೆಯಲು, ಆಧುನಿಕಕ್ಕೆ ಸ್ಪಂದಿಸಲು ಇಂಗ್ಲಿಷ್ ಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿಕೊಂಡಿತು. ಹೀಗೆ ಚಾರಿತ್ರಿಕವಾಗಿ ಸದ್ಯದ ಕನ್ನಡಕ್ಕೆ ಹತ್ತಿರವಾಯಿತು. ಬಿಎಂಶ್ರೀ ಅವರು ಇಂಗ್ಲಿಷ್ ಮುಖೇನ ಕನ್ನಡವನ್ನು ಹೊಸ ಕಾಲದ ಒತ್ತಡಗಳಿಗೆ ಅನುವಾಗುವಂತೆ ಸಡಿಲಿಸಿಕೊಂಡರು. ಬಿಎಂಶ್ರೀ ಹುಡುಕಿದ ಹೊಸ ಲಯಗಳಿಂದ ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ ಮತ್ತು ಅಡಿಗರು ಕನ್ನಡದಲ್ಲಿ ಬರೆಯುವುದು ಸಾಧ್ಯವಾಯಿತು. ಬೇಂದ್ರೆಗೂ ಇದು ಉಪಯೋಗವಾಯಿತು. ಆದರೆ ಅವರಿಗೆ ಇಂಗ್ಲಿಷ್‌ನ ಹಂಗಿಲ್ಲದರೆ ಬರೆಯುವುದೂ ಸಾಧ್ಯವಿತ್ತು. ಯಾಕೆಂದರೆ ಇವರು ಜಾನಪದ ಪ್ರಜ್ಞೆಯನ್ನು ಕನ್ನಡದ ಹೊಸ ಅಗತ್ಯಕ್ಕೆ ಅನುವಾಗುವಂತೆ ಅನುವಾದಿಸಿಕೊಂಡರೆಂದೇ ಹೇಳಬಹುದು. ಆದರೆ ಈ ಎಲ್ಲಾ ಲೇಖಕರಲ್ಲೂ ಇಂಗ್ಲಿಷ್ ಮುಖೇನ ನಮ್ಮ ಸಂಪ್ರದಾಯದ ಬಿಗಿಗಳಿಂದ ಬಿಡುಗಡೆಯಾಗುವುದರ ಜತೆಗೆ, ಇಂಗ್ಲಿ‌ಷ್‌ನಿಂದಲೂ ಬಿಡುಗಡೆಯಾಗಿ ಕನ್ನಡದ ಒಂದು ಸಾವಿರ ವರ್ಷದ ಒಳಗನ್ನು ಬೆಳೆಯಿಸಿ ಬೆಳಗಿಸಿಕೊಂಡು ಇನ್ನಷ್ಟು ಗಟ್ಟಿಮಾಡಿಕೊಳ್ಳುವ ಅಭೀಪ್ಸೆಯೂ ಇತ್ತು.

ಇಂಗ್ಲಿಷ್‌ನ ಕಾದಂಬರಿ ಪರಂಪರೆಗೆ ಹತ್ತಿರವಾಗಲು ಹೊರಟ ಕಾರಂತರು ಚೋಮನ ತುಳುವಿಗೆ ಹತ್ತಿರವಾಗಿ ಅವನನ್ನು ತಮ್ಮ ಕನ್ನಡದ ಲೋಕಕ್ಕೆ ಅನುವಾದಿಸಿಕೊಳ್ಳಲು ಆಗದೇ ಹೋಗಿದ್ದರೆ ಅವರು ದೊಡ್ಡ ಕಾದಂಬರಿಕಾರರಾಗುತ್ತಲೇ ಇರಲಿಲ್ಲ.

ಇಂಗ್ಲಿಷ್‌ನಿಂದ ನಮಗೆ ಲಭ್ಯವಾದ ಈ ಎಲ್ಲಾ ಉಪಕಾರಗಳನ್ನು ಸ್ಮರಿಸುತ್ತಲೇ ಈಗ ಇಂಗ್ಲಿಷ್‌ನಮಗೆ ಕಂಟಕವಾಗಿರುವುದನ್ನು ಗುರುತಿಸಿಕೊಳ್ಳಬೇಕಾಗಿದೆ. ಇವತ್ತು ಇಂಗ್ಲಿಷ್ ಕಲಿತರೆ ಸಾಕಾಗದು; ಅಮೆರಿಕನ್ನರಂತೆ ಮಾತಾಡಲೂ ಕಲಿತಿರಬೇಕು. ಆಗ ಇನ್ನೇನೂ ಮಾಡದೆ ೨೦,೦೦೦ ರೂಪಾಯಿ ಸಂಬಳ ಬರುವ ಕಾಲ್ ಸೆಂಟರಿನ ಕೂಲಿ ದೊರೆಯುತ್ತದೆ. ನಮ್ಮ ರಾತ್ರಿಗಳನ್ನು ಅಮೆರಿಕದ ಹಗಲಿಗೆ ಮುಡಿಪಿಟ್ಟು ದುಡಿಯುವ ಸಾಧನವಾಗಿ (ಜ್ಞಾನಾರ್ಜನೆಯ ಸಾಧನವಾಗಿ ಅಲ್ಲ) ಈ ಇಂಗ್ಲಿಷ್ ಬಳಕೆಯಾಗುತ್ತಿದೆ. ಶಿಲ್ಪಾಶೆಟ್ಟಿಯವರ ಉಚ್ಚಾರಣೆಯನ್ನು ಮೂದಲಿಸಲು ಇಂಗ್ಲಿಷ್ ಬಳಕೆಯಾಗುತ್ತ ಇದೆ. ಈ ಮೂದಲಿಕೆಯನ್ನು ಇಡೀ ಜಗತ್ತೇ ಕಾಣುವಂತಾಗಲು, ಅದನ್ನು ಬಿತ್ತರಿಸುವ ಟೆಲಿವಿಷನ್ ಚಾನೆಲ್ ಅನ್ನು ನೋಡುವವರ ಸಂಖ್ಯೆ ಈ ಸುದ್ದಿ ಸ್ಫೋಟದಿಂದ ಬೆಳೆಯುವಂತಾಗಲು, ಬೆಳೆಯುವ ಚಾನೆಲ್ ಮುಖೇನ ಮಾರುವ ಸರಕುಗಳು ಇನ್ನೂ ಹೆಚ್ಚು ಮಾರಾಟವಾಗುವಂತಾಗಲೂ ಒದಗಿರುವ ಜಾಗತಿಕ ಭಾಷೆ ಇಂಗ್ಲಿಷ್ ಆಗಿದೆ.

ನಾವೆಲ್ಲರೂ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಬೇಕು ಎಂದಾಗ ಪಾಶ್ಚಾತ್ಯ ಜ್ಞಾನ ಕನ್ನಡದಲ್ಲಿ ಭಾಷಾಂತರವಾಗಿ ದೊರಕಲಿ ಎಂದು ಮಾತ್ರ ಕೇಳುತ್ತಿರುವುದಲ್ಲ; ಕನ್ನಡದಲ್ಲಿ ಜ್ಞಾನದ ಸೃಷ್ಟಿಯಾಗಬೇಕೆಂದು ನಾವು ಕೇಳುತ್ತಿರುವುದು. ಈ ಸೃಷ್ಟಿಯಲ್ಲಿ ಇನ್ನೂ ಹೊರಹೊಮ್ಮದ ಗುಪ್ತಶಕ್ತಿಯ ಕೆಳವರ್ಗದ ಎಲ್ಲ ಜನರೂ ಪಾಲಾಗಬೇಕು, ಅರಳಬೇಕು ಎಂದು ನಾವು ಬಯಸುತ್ತ ಇರುವುದು.

ಬಹಳ ಹಿಂದೆಯಲ್ಲ, ಸುಮಾರು ಐನೂರು ವರ್ಷಗಳ ಹಿಂದೆ, ಇಂಗ್ಲಿಷ್‌ನಲ್ಲಿ ಜ್ಞಾನದ ಸೃಷ್ಟಿ ಸಾಧ್ಯವಾಗಲು ಅಶ್ಯಾಮ್‌ಮುಲ್ ಕಾಸ್ಟರ್‌ರಂತಹ ಬಹಳ ಜನ ಕೆಲಸ ಮಾಡಿದ್ದಾರೆ. ಇಲ್ಲವಾದರೆ ಜ್ಞಾನವೆಲ್ಲಾ ಲ್ಯಾಟಿನ್ ಬಲ್ಲ ಮೇಲ್ವರ್ಗದ ಬಳಿಯೇ ಉಳಿದಿರುತ್ತಿತ್ತು. ಸಾಮಾನ್ಯ ಜನರಿಂದ ಹುಟ್ಟಿ ಬಂದ ಷೇಕ್ಸ್‌ಪಿಯರ್‌ನಂಥವನೊಬ್ಬ ಸಾಧ್ಯವಾದದ್ದು ಜನಸಾಮಾನ್ಯರ ಇಂಗ್ಲಿಷ್‌ಭಾಷೆ ಜ್ಞಾನಸೃಷ್ಟಿಯ ಭಾಷೆಯೂ ಆಗಿದ್ದರಿಂದ, ಷೇಕ್ಸ್‌ಪಿಯರ್‌ಮಾತ್ರವಲ್ಲ, ಜಗತ್ತನ್ನು ಅಲ್ಲಾಡಿಸಿದ ಡಾರ್ವಿನ್ ಬರೆದದ್ದೂ ಇಂಗ್ಲಿಷ್‌ನಲ್ಲಿ. ರಷ್ಯದಲ್ಲೂ ಇಟಲಿಯಲ್ಲೂ ಜರ್ಮನಿಯಲ್ಲೂ ಡೇನಿಷ್‌ನಂತಹ ಸಣ್ಣ ಭಾಷೆಯಲ್ಲೂ ಇಂತಹ ಕೆಲಸ  ನಡೆಯಿತು. ಕನ್ನಡದಲ್ಲಿ ಒಂದು ಸಾವಿರ ವರ್ಷಗಳ ಹಿಂದೆಯೇ ಶ್ರೀ ವಿಜಯ ತನ್ನ ಕವಿರಾಜ ಮಾರ್ಗದಲ್ಲಿ ಇಂತಹ ಕೆಲಸಕ್ಕೆ ನಾಂದಿ ಹಾಕಿದ. ಸಂಸ್ಕೃತದಲ್ಲಿ ಇದ್ದುದನ್ನು ಕನ್ನಡ ಮುನ್ನಡೆಯುವಂತೆ ಅನುವಾದಿಸಿಕೊಂಡ. ಭಾಷಾಂತರದ ಮುಖೇನ ಅಲ್ಲಿರುವುದನ್ನು ಇಲ್ಲಿಗೆ ರವಾನಿಸುವುದನ್ನು ತೃಪ್ತನಾಗಲಿಲ್ಲ.

ಈಗಿನ ಇಂಗ್ಲಿಷ್‌ಭಾಷೆ ಪ್ರಪಂಚದ ಮೇಲೆ ಅಷ್ಟೇಕೆ ಹುಟ್ಟಿದ ಇಂಗ್ಲೆಂಡಿನ ಮೇಲೂ ತನ್ನ ಅಧಿಕಾರವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುವ ಅಮೆರಿಕದ ಭಾಷೆ. ಆದ್ದರಿಂದ ಇಂಗ್ಲಿಷ್‌ನಿಂದ ಅಗತ್ಯವೂ ಜೀವೋಪಯೋಗಿಯೂ ಆದ ಜ್ಞಾನಕ್ಕಿಂತ ಹೆಚ್ಚಾಗಿ, ನಮ್ಮ ಕೊಳ್ಳುವ, ತಿನ್ನುವ, ನೋಡುವ, ಬಾಚುವ ರಾವುಗಳನ್ನು ಬೆಳೆಸುವುದಕ್ಕಾಗಿ, ಕೀಳು ಮನರಂಜನೆಗಾಗಿ ನಮ್ಮ ಭಾಷೆಗಳಿಗೆ ಭಾಷಾಂತರ ಮಾಡುವ ಆತುರದ ಜಾಗತಿಕ ರಾಜಕೀಯ ಈಗ ನಡೆದಿದೆ. ಇದು ಅಮೆರಿಕದಿಂದ ನಡೆದಿದೆ; ಇಲ್ಲಿರುವ ಅವರ ಏಜೆಂಟರಿಂದ ನಡೆದಿದೆ. ದೇಶೀಯವಾದ ರುಚಿಗಳ ಅಡೆತಡೆಗಳನ್ನು, ದೇಶೀಯ ಸ್ಮೃತಿಗಳನ್ನು, ದೇಶೀಯ ಸಂಕಲ್ಪ ಶಕ್ತಿಯನ್ನು, ನಡೆನುಡಿಗಳನ್ನು ತಮ್ಮ ಮಾರುಕಟ್ಟೆಯ ವಿಸ್ತರಣಕ್ಕಾಗಿ ನಾಶಗೊಳಿಸುವ ರಾಜಕಾರಣ ಈ ಬಗೆಯ ರವಾನಿಸುವ ಭಾಷಾಂತರ ಕ್ರಿಯೆಯಲ್ಲಿ ಅಡಗಿದೆ. ಲೋಹಿಯಾ ಮಾತಿನಲ್ಲಿ ಇದು ಕಾಸ್ಮೊಪೊಲೈಟರ ರಾಜಕಾರಣ.

ಬಿಎಂಶ್ರೀಗೆ ಇದ್ದಂತೆ ಭಾಷಾಂತರ ಕ್ರಿಯೆ ಆಧುನಿಕತೆಯ ಅನುಸಂಧಾನದ ಮಾರ್ಗವಾಗಿ ಈಗ ಉಳಿದಿಲ್ಲ. ಇನ್ನು ಮುಂದೆ ಅಮೆರಿಕನ್ ಪ್ರಭುತ್ವವನ್ನು ನಮ್ಮೆಲ್ಲರ ಮೇಲೂ ಹೇರುವ ಸಾಧನವಾಗಿ ಇಂಗ್ಲಿಷ್‌ನಿಂದ ಭಾಷಾಂತರಗಳು ನಡೆಯುತ್ತವೆ. ಈ ಭಾಷಾಂತರಗಳ್ಲಿ ನಮಗೆ ಲಭ್ಯವಾಗುವುದು ಟಾಲ್‌ಸ್ಟಾಯ್‌, ದಾಸ್ತೋವಸ್ಕಿ, ಸಾರ್ತ್ರ್‌, ಲಾರೆನ್ಸ್‌, ಷೇಕ್ಸ್‌ಪಿಯರ್‌ಮುಂತಾದ ಮಹಿಮರು ಮಾತ್ರವಲ್ಲ; ಅಮೆರಿಕದ ಮೂರನೆಯ ದರ್ಜೆಯ, ಪ್ರಯಾಣದ ಆಯಾಸ ಕಳೆಯಲು ಸುಲಭವಾಗಿ ಓದಿ ಬಿಸಾಕಬಹುದಾದ ಕಾದಂಬರಿಗಳೆಲ್ಲವೂ ನಮ್ಮ ಭಾಷೆಗಳಿಗೆ ಭಾಷಾಂತರಗೊಳ್ಳುವ ಕಾಲ ಸನ್ನಿಹಿತವಾಗಿದೆ.

ಕೊರಿಯಾದ ಕಥೆ ಕೇಳಿ, ಇಂಗ್ಲಿಷ್‌ನಿಂದ ನೇರವಾಗಿ ಸುಲಲಿತರಾಗಿ ಸಂದರ್ಭೋಚಿತವಾಗಿ ತತ್‌ಕ್ಷಣವೇ ಜನಪ್ರಿಯವಾದ ಅಮೆರಿಕಾದ ಎಲ್ಲಾ ಪಲ್ಪ್‌ಫಿಕ್ಷನ್‌ಗಳೂ ಕೊರಿಯನ್‌ ಭಾಷೆಯಲ್ಲಿ ಲಭ್ಯವಾಗುವುದರಿಂದ ಕೊರಿಯನ್ ಲೇಖಕರೇ ಬರೆದ ಕೃತಿಗಳಿಗೆ ಪುಸ್ತಕದ ಅಂಗಡಿಗಳಲ್ಲಿ ಜಾಗವಿಲ್ಲವೆಂದು ಕೇಳಿದ್ದೇನೆ. ಕೇರಳದಲ್ಲಿ ಎಲ್ಲರೂ ಓದಬಲ್ಲವರಾದ್ದರಿಂದ ಓದುವ ಹಸಿವೂ ಇರುವವರಾದ್ದರಿಂದ ಅಲ್ಲಿಯೂ ಅಮೆರಿಕದ ಓದಿ ಬಿಸಾಡುವ ಪುಸ್ತಕಗಳು ಇನ್ನು ಮುಂದೆ ಸುಲಭವಾಗಿ ಲಭ್ಯವಾಗುವ ಅಪಾಯವಿದೆ. ಭಾರತ ಒಂದು ದೊಡ್ಡ ಮಾರ್ಕೆಟ್ ಅಲ್ಲವೆ? ಐದು ಕೋಟಿ ಕನ್ನಡಿಗರು ಅಮೆರಿಕನ್ ಪಲ್ಪ್‌ಫಿಕ್ಷನ್‌ನ ಭಾಷಾಂತರಗಳನ್ನು ಓದಬಲ್ಲಂತೆ ಅಕ್ಷರಸ್ಥರಾಗುವುದು ನಾವು ಈ ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ಕಾನಬೇಕಾದ ಕನಸಲ್ಲ.

ಜ್ಞಾನದ ಸೃಷ್ಟಿಗೆ ಕನ್ನಡವನ್ನು ಬಳಸಬೇಕೆಂಬ ಕನ್ನಡದ ಆಶಯಕ್ಕೆ ಒಂದು ಇತಿಹಾಸವೇ ಇದೆ. ಕನ್ನಡ ಶಿಕ್ಷಕರಿಗೆ ಇಂಗ್ಲಿಷ್ ಶಿಕ್ಷಕರಿಗಿಂತ ಕಡಿಮೆ ಸಂಬಳವಿದ್ದಾಗಲೂ ಅರ್ಥಶಾಸ್ತ್ರಜ್ಞರಾದ ವಿ. ಸೀತಾರಾಮಯ್ಯನವರು ತಾವೇ ಬಯಸಿ ಕನ್ನಡ ಅಧ್ಯಾಪಕರಾದರು. ಕುವೆಂಪು ಅವರು ಫಿಲಾಸಫಿ ಓದಿ ದೊಡ್ಡ ಕೆಲಸವನ್ನು ಮಾಡಬಲ್ಲ ಆಸೆಯನ್ನು ಬಿಟ್ಟು, ಕನ್ನಡ ಸಾಹಿತ್ಯ ವಿಶ್ವವಿದ್ಯಾಲಯಗಳಲ್ಲಿ ಒಂದು ಐಚ್ಛಿಕ ವಿಷಯವೂ ಅಲ್ಲದಿದ್ದಾಗ ಕನ್ನಡ ಎಂ.ಎ.ಗೆ ಸೇರಿದರು. ಇದೊಂದು ತನ್ನ ಬಾಳಿನಲ್ಲಿ ಎ.ಆರ್. ಕೃಷ್ಣಶಾಸ್ತ್ರಿಗಳ ಉತ್ತೇಜನದಿಂದ ಒದಗಿದ ದೈವಕೃಪೆಯ ಕ್ಷಣವೆಂದು ಕೂಡಾ ಅವರು ತಿಳಿದಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ.

ಕನ್ನಡದ ಪತ್ರಿಕೋದ್ಯಮ್ಕಕೆ ತನ್ನದೇ ಆದ ಒಂದು ಇತಿಹಾಸವಿದೆ. ತಿರುಮಲೆ ತಾತಾಚಾರ್ಯ ಶರ್ಮರಿಂದ ಹಿಡಿದು ನಮ್ಮ ಕಾಲದ ಲಂಕೇಶರ ತನಕ ಈ ಸುದ್ದಿ ಮಾಧ್ಯಮವನ್ನು ಸೃಜನಶೀಲವಾಗಿ ಮಾಡಿದ ನೂರಾರು ಜನ ಧೀಮಂತರಿದ್ದಾರೆ. ಆದರೆ ನಮ್ಮ ಈಗಿನ ಪಾಡು ನೋಡಿ. ಜ್ಞಾನ ಹೋಗಲಿ, ಸುದ್ದಿಯಾದರೂ ಕನ್ನಡದಲ್ಲಿ ಸೃಷ್ಟಿಯಾಗುತ್ತಿತ್ತು. ಇನ್ನು ಮುಂದೆ ಈ ಸುದ್ದಿಗಳೂ ಇಂಗ್ಲಿಷಿನಿಂದ ಕನ್ನಡಕ್ಕೆ ತರ್ಜುಮೆಯಾಗಿ, ಅಂದರೆ ರವಾನೆಯಾಗಿ, ಬೆಂಗಳೂರಿನ ರಾವನ್ನು ಹೆಚ್ಚಿಸುವ ವರ್ಣರಂಜಿತ ದಿನ ಪತ್ರಿಕೆಯಾಗಿಬಿಟ್ಟಿದೆ. ಕನ್ನಡದಲ್ಲಿ ಸಿನಿಮಾಗಳನ್ನು ಡಬ್ಬಿಂಗ್ ಮಾಡುವುದನ್ನು ವಿರೋಧಿಸುವ ನಾವು ಪತ್ರಿಕೆಯ ಈ ಡಬ್ಬಿಂಗನ್ನು ಸ್ವಾಗತಿಸಿದ್ದೇವೆ. ಇದೊಂದು ಅಪಾಯಕಾರಿಯಾದ ಬೆಳವಣಿಗೆ: ಯಾಕೆಂದರೆ ಈಗಿರುವ ಕಾನೂನಿನಲ್ಲಿ ಇಂತಹ ವ್ಯಾಪಾರವನ್ನು ತಡೆಗಟ್ಟುವಂತಿಲ್ಲ.

ಕನ್ನಡದಲ್ಲಿ ಹುಟ್ಟಿದ ಸುದ್ಧಿ, ಕನ್ನಡದ ಧೀಮಂತರಾದ ಬರವಣಿಗೆಗಳು ಕನ್ನಡದಿಂದ ಇಂಗ್ಲಿಷಿಗೂ ಬೇರೆ ಭಾಷೆಗಳಿಗೂ ಅನುವಾದವಾಗುವ ಅಗತ್ಯ ಇದೆ. ಯಾಕೆಂದರೆ ಭಾರತದ ಪ್ರಜಾತಂತ್ರ ರಾಜಕಾರಣವನ್ನು ಎಲ್ಲ ವಿಘ್ನಗಳ ನಡುವೆಯೂ ಸೃಷ್ಟಿಸುತ್ತಿರುವವರು ಭಾರತೀಯ ಭಾಷೆಗಳನ್ನಾಡುವ ಸಾಮಾನ್ಯ ಜನರು. ಹೊಸಜ್ಞಾನವನ್ನು ಹುಟ್ಟಿಸಬಲ್ಲ ಅಜ್ಞಾತರಾಗಿಯೇ ಈ ತನಕ ಉಳಿದುಬಿಟ್ಟಿರುವ ದೀನ ದರಿದ್ರರು. ಗಾಂಧಿಯ ಭಾಷೆಯಲ್ಲಿ ದರಿದ್ರ ನಾರಾಯಣರು.

ಇಂಗ್ಲಿಷ್ ಪತ್ರಿಕೆಗಳು ಕನ್ನಡದಲ್ಲೂ ಅವತಾರಗಳನ್ನು ಪಡೆಯಲು ಇರುವ ಮುಖ್ಯ ಉದ್ದೇಶ ಜಾಹೀರಾತನ್ನು ಹೆಚ್ಚಿಸಿಕೊಳ್ಳುವುದು; ಇನ್ನೂ ಮುಖ್ಯವಾಗಿ ಪೈಪೋಟಿಯಲ್ಲಿರುವ ಕನ್ನಡದಲ್ಲೇ ಸೃಷ್ಟಿಯಾಗುತ್ತಿರುವ ಪತ್ರಿಕೆಗಳನ್ನು ಕೊಲ್ಲುವುದು. ಜಾಹೀರಾತಿನಿಂದಲೇ ನಡೆಯುವ ಪತ್ರಿಕೆಗಳು ತಮ್ಮ ಬೆಲೆಯನ್ನು ಎಷ್ಟು ಬೇಕಾದರೂ ಕಡಿಮೆ ಮಾಡಿಕೊಳ್ಳಬಹುದು ಚೀಪ್ ಆದ ಬೆಲೆಯಲ್ಲಿ ಚೀಪ್ ಆಗಿರುವ ವಿಷಯಗಳು; ವಿಷಯಾಸಕ್ತಿಗಳು; ಗಾಸಿಪ್‌ಗಳು, ಕೊಂಡಾಟ ಮಂಗಾಟಗಳು ಯಾರಿಗೆ ಬೇಡ? ಅಂತಹದನ್ನು ಪ್ರಜ್ಞಾಪೂರ್ವಕವಾಗಿ ಒಪ್ಪದವರೂ, ಮೊದಲು ಕುತೂಹಲಕ್ಕಾಗಿ ಓದಿ, ನಂತರ ಅದೊಂದು ಗೀಳಾಗಿ, ನಿತ್ಯ ಕಣ್ಣಾದರೂ ಹಾಯಿಸಲು ಬಯಸುವವರಾಗುತ್ತಾರೆ. ಇಡೀ ಭಾರತವನ್ನು ತಮ್ಮ ಅಧೀನಕ್ಕೆ ಪಡೆದುಕೊಳ್ಳಲು ಹೊಂಚಿರುವ ಜಾಗತೀಕರಣದ ಶಕ್ತಿಗಳ ಸೂಕ್ಷ್ಮಾತಿಸೂಕ್ಷ್ಮ ಹುನ್ನಾರಗಳು ಭಾರತದ ಸಾಮಾನ್ಯರನ್ನು ಅವರ ಭಾಷೆಯಲ್ಲಿಯೇ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಈ ಬಗೆಯ ಭಾಷಾಂತರಗಳು ಕೆಲಸ ಮಾಡುತ್ತವೆ.

ಇಂಗ್ಲೆಂಡಿನಲ್ಲಿ ಸರ್ವಸ್ವಾಮ್ಯದ ಪತ್ರಿಕೋದ್ಯಮದ ಬಂಡವಾಳ ಶಾಹಿ ಎಲ್ಲ ಪತ್ರಿಕೆಗಳನ್ನೂ ಕೊಲ್ಲಲು ಪ್ರಯತ್ನಿಸಿದಾಗ ಬ್ರಿಟನ್ನಿನ ಅಲ್ಪಸ್ವಲ್ಪವಾದರೂ ಮನೋಧಾರಾಳದ ಗಾರ್ಡಿಯನ್ ಎಂಬ ಪತ್ರಿಕೆ ತನ್ನ ಉಳಿವಿಗಾಗಿ ಜ್ಞಾನಿಗಳೆಲ್ಲರ ಸಹಕಾರ ಪಡೆದು ಹೋರಾಡಿ ಇವತ್ತಿಗೂ ಉಳಿದು ಬಿಟ್ಟಿದೆ. ನಾವು ಕನ್ನಡಿಗರ ಕನ್ನಡದಲ್ಲೇ ಜನಸಾಮಾನ್ಯರ ಆಸೆಗಳನ್ನು ಹೋರಾಟಗಳನ್ನು ಅವರಿಗೆ ಗೊತ್ತಿರುವ ಭಾಷೆಯಲ್ಲೇ ಸೃಷ್ಟಿಯಾಗಿ ಲಭ್ಯವಾಗುವ ಅಗತ್ಯವಾದ ಎಚ್ಚರವನ್ನು ಎಲ್ಲರಲ್ಲೂ ಹುಟ್ಟಿಸಬೇಕಾಗಿದೆ.

ಭಾಷಾ ವ್ಯಾಯಾಮದಲ್ಲಿ ಪಳಗಿದ ಶಕ್ತಿಯುಳ್ಳ ಪತ್ರಕರ್ತರೇ ಈ ದಿನಗಳಲ್ಲಿ ಕಡಿಮೆಯಾಗಿದ್ದಾರೆ: ಇಂಗ್ಲಿಷಿನಲ್ಲೂ, ಕನ್ನಡದಲ್ಲೂ ಸದ್ಯದ ಸ್ಥಿತಿಯೇ ಹೀಗಿರುವಾಗ ಇನ್ನು ಮುಂದೆ ಅಳಿದುಳಿದ ಕೆಲವೇ ಸೃಜನಶೀಲರಾದ ಪತ್ರಕರ್ತರು ಹೊಟ್ಟೆಪಾಡಿಗಾಗಿ ಅಥವಾ ಹೆಚ್ಚಿನ ಸಂಬಳದ ಆಸೆಗಾಗಿ ಕೇವಲ ಭಾಷಾಂತರಿಗಳಾಗಿಬಿಟ್ಟರೆ ಆಶ್ಚರ್ಯ ಪಡಬೇಕಾಗಿಲ್ಲ. ಮೊದಲೇ ಇಂಗ್ಲಿಷಿನ ಪತ್ರಕರ್ತರಿಗೆ ಕನ್ನಡದ ಪತ್ರಕರ್ತರಿಗಿಂತ ಹೆಚ್ಚಿನ ಸಂಬಳವಿದೆ ಎಂದು ಕೇಳಿದ್ದೇನೆ. ರದ್ದಿಯಾಗಿ ಮಾರುವಾಗಲೂ ಇಂಗ್ಲಿಷ್ ಪತ್ರಿಕೆಗೆ ಕನ್ನಡದ್ದಕ್ಕಿಂತ ಹೆಚ್ಚುಬೆಲೆ –  ಅದೇ ತೂಕಕ್ಕೆ. ನನ್ನ ಅಮೆರಿಕನ್ ಸ್ನೇಹಿತರಿಗೆ ಇದನ್ನು ಹೇಳಿದರೆ ಅಬ್ಸರ್ಡ್ ಎಂದು ನಗುತ್ತಾರೆ.

ಇಂಗ್ಲಿಷಿನಲ್ಲಿ ‘ಟ್ರಾನ್ಸ್‌ಲೇಟ್’ ಎಂಬ ಪದಕ್ಕೆ ಒಂದು ಇನ್ನೊಂದಾಗಿ ಬಿಡುವ ರೂಪಾಂತರ ಎಂಬ ಅರ್ಥವೂ ಇದೆ. ಷೇಕ್ಸ್‌ಪಿಯರನ ನಾಟಕವೊಂದರಲ್ಲಿ ಬಾಟಮ್ ಎಂಬ ಹಾಸ್ಯಾಸ್ಪದನಾದ ಗಮಾರ ಪ್ರಣಯಿಯೊಬ್ಬ ರೂಪಾಂತರಗೊಂಡು ದೊಡ್ಡ ಕಿವಿಗಳ ಕತ್ತೆಯಾಗಿ ಬಿಡುತ್ತಾನೆ. ಆಗ ಅವನು ಬಯಸಿದ ಸುಂದರಿ ಅವನ ಬೆಳೆದ ಕತ್ತೆ ಕಿವಿಗಳನ್ನು ಕಂಡು ‘Oh! Bottom thou art trnaslated’  ಎನ್ನುತ್ತಾಳೆ.

ಇಂಗ್ಲಿಷಿನ ಕತ್ತೆ ಕನ್ನಡದ ಹೇಸರಗತ್ತೆಯಾಗಿ ಪ್ರತದಿನ ಪ್ರತ್ಯಕ್ಷವಾಗುವುದನ್ನು ಕನ್ನಡಿಗರೆಲ್ಲರೂ ನೋಡಲು ಕಾತರರಾಗಿದ್ದಾರೆ ಎಂದು ಹೇಳುವ ಜಾಹೀರಾತುಗಳನ್ನು ಅಪ್ಪಟ ಕನ್ನಡ ಪತ್ರಿಕೆಯಲ್ಲೇ ನಾವೀಗ ನೋಡಬೇಕಾಗಿ ಬಂದಿದೆ.

೨೧೨೦೦೭

* * *