ಚರಿತ್ರೆಯನ್ನು ಕುರಿತ ಮೂರು ಬಗೆಯ ಗ್ರಹಿಕೆಗಳನ್ನು ನಿಮ್ಮ ಇದಿರು  ಇಡಲು ಬಯಸುತ್ತೇನೆ. ಮಾರ್ಕ್ಸ್‌ವಾದಿಗಳಿಗೆ ಮನುಷ್ಯನನ್ನು ಅರಿಯಲು ಅವನನ್ನು ಚರಿತ್ರೆಯಲ್ಲಿಟ್ಟು ನೋಡುವುದು ಬಹಳ ಅಗತ್ಯ. ಇದನ್ನು ಒಂದು ತತ್ವವಾಗಿ ಮಾತ್ರ ಅವರು ನಂಬುವುದಿಲ್ಲ; ಕ್ರಿಯಾಶೀಲರಾದ ಮಾರ್ಕ್ಸಿಸ್ಟರು ಚರಿತ್ರೆಯನ್ನು  ಬದಲಾಯಿಸಬಹುದೆಂದೂ ತಿಳಿಯುತ್ತಾರೆ. ಈ ಬದಲಾವಣೆ ಸಾಧ್ಯವಾಗುವುದು ಮೊದಲನೆಯದಾಗಿ ಉತ್ಪಾದನಾ ವಿಧಾನಗಳಲ್ಲಿ ವ್ಯತ್ಯಾಸವಾಗುವುದರಿಂದ; ಎರಡನೆಯದಾಗಿ ಉತ್ಪಾದನಾ ಸಂಬಂಧಗಳಲ್ಲಿ ಬಿಕ್ಕಟ್ಟು ಉಂಟಾಗುವುದರಿಂದ; ಮೂರನೆಯದಾಗಿ, ಇದರಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ತುಳಿತಕ್ಕೊಳಗಾದವರು ಒಗ್ಗಟ್ಟಾಗಿ ಹೋರಾಡುವುದರಿಂದ. ಹೀಗೆ ಮನುಷ್ಯನನ್ನು ಅರ್ಥ ಮಾಡಿಕೊಳ್ಳಲು, ಸಮಾಜವನ್ನು ಬದಲಿಸಲು ಚರಿತ್ರೆ ಮಾರ್ಕ್ಸ್‌ವಾದಿಗಳಿಗೆ ಮುಖ್ಯವಾದ ಅರಿಯುವ ಸಾಧನವಾಗುತ್ತದೆ.

ಇದನ್ನು ಇನ್ನೂ ಸೂಕ್ಷ್ಮವಾಗಿ ಅರಿತಿದ್ದ ವಾಲ್ಟರ್ ಬೆಂಜಮಿನ್ ತನ್ನ ಕೊನೆಗಾಲದಲ್ಲಿ ಅತ್ಯಂತ ಕಷ್ಟವಾದ ದಿನಗಳಲ್ಲಿ ಕಂಡ. ಸ್ಟಾಲಿನ್‌, ಹಿಟ್ಲರ್‌ನ ಜತೆ ಒಪ್ಪಂದವನ್ನು ಮಾಡಿಕೊಂಡ – ಇದು ‘ರಾಷ್ಟ್ರ ರಾಜಕಾರಣ’ದ ಅಗತ್ಯವಾಯಿತು. ಬೆಂಜಮಿನ್‌ಗೆ ಒಬ್ಬ ಮಾರ್ಕ್ಸ್‌ವಾದಿಯಾಗಿ ಪ್ರಗತಿಯಲ್ಲಿ ನಂಬಿಕೆ ಇತ್ತೆಂದೇ ತಿಳಿಯಬಹುದು. ಆದರೆ ಈ ಪ್ರಗತಿ ಡಯಲೆಕ್ಟಿಕ್ ಆಗಿ ಮುಂದುವರಿಯುವಂಥದ್ದು. ಈ ಡಯಲೆಕ್ಟಿಕಲ್ ಎಂಬುದರಲ್ಲಿಯೂ ಎರಡು ವಿಧಗಳಿವೆ. ಒಂದು ಬಹಳ ತಾತ್ವಿಕವಾಗಿ ನೋಡುವ ಹೆಗೆಲ್‌ನ ವಿಧಾನ –  ಐಡಿಯಾಗಳ ನೆಲೆಯಲ್ಲ ನೋಡುವ ವಿಧಾನ. ಮತ್ತೊಂದು ಇದನ್ನು ಚಾರಿತ್ರಿಕವಾಗಿ ಪ್ರಪಂಚದ ವಿದ್ಯಮಾನಗಳ ಮೂಲಕವೇ, ಆರ್ಥಿಕ ವ್ಯವಸ್ಥೆಯ ಮೂಲಕವೇ, ಅರ್ಥ ಮಾಡಿಕೊಳ್ಳುವ ಮಾರ್ಕ್ಸ್‌ನ ವಿಧಾನ. ಇವೆಲ್ಲವನ್ನೂ ಮೈಗೂಡಿಸಿಕೊಂಡು ಯೋಚಿಸುತ್ತಿದ್ದ ಬೆಂಜಮಿನ್ ಕೊನೆಯಲ್ಲಿ ಹಿಟ್ಲರ್‌ನ ಜರ್ಮನಿಯಿಂದ ತಪ್ಪಿಸಿಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಂಡ.

ಆತ ಸಾಯುವುದಕ್ಕೆ ಮುಂಚೆ ಥೀಸೀಸ್ ಆನ್ ಹಿಸ್ಟರಿ ಎಂಬ ಬಹಳ ಮುಖ್ಯವಾದ, ಬಹಳ ಬಿಗಿಯಾದ ಒಂದು ಲೇಖನ ಬರೆದಿದ್ದಾನೆ. ಅದರಲ್ಲಿ ಚರಿತ್ರೆ ಏಂಜೆಲ್ ಆಗಿ ಬರುತ್ತದೆ. ಈ ಏಂಜೆಲ್ ಭೂತಕಾಲಕ್ಕೆ ಮುಖ ಮಾಡಿದೆ; ಭವಿಷ್ಯಕ್ಕೆ ಬೆನ್ನು ಮಾಡಿದೆ. ಅದರ ಎದುರು ಪಾಳು ಬಿದ್ದ ಅವಶೇಷಗಳು ಒಂದು ತಿಪ್ಪೆಯ ಹಾಗೆ ಎತ್ತರೆತ್ತರ ಬೆಳೆಯುತ್ತಲೇ ಇವೆ. ಇದನ್ನು ದುರುಗುಟ್ಟಿ ನೋಡುತ್ತಿರುವ ಏಂಜಲ್‌ಗೆ (ಕ್ಲೀ ಎಂಬ ಚಿತ್ರಕಾರ ಕಲ್ಪಿಸಿದ ಏಂಜಲ್ ಇವನು) ಮತ್ತೆ ಕೆಲವನ್ನು ಜೀವಂತಗೊಳಿಸಬೇಕು, ಅರ್ಥಪೂರ್ಣಗೊಳಿಸಬೇಕು, ಹರಿದು ಹಂಚಿಹೋದುದನ್ನು ಒಟ್ಟು ಮಾಡಬೇಕು ಮುಂತಾದ ಆಶಯಗಳಿವೆ. ಆದರೆ ವೇಳೆಯಿಲ್ಲ. ನಿಂತಲ್ಲಿ ನಿಲ್ಲಲು ಬಾರದು. ಭೂತಕಾಲದ ಅವಶೇಷಗಳನ್ನು ನೋಡು ನೋಡುತ್ತಿದ್ದಂತೆಯೇ ದೊಡ್ಡ ಬಿರುಗಾಳಿ ಬೀಸುತ್ತಿದೆ. ಆ ಬಿರುಗಾಳಿ ಏಂಜೆಲ್‌ನ ರೆಕ್ಕೆಗಳೊಲಗೆ ತುಂಬಿ ಅವನನ್ನು ವಿರುದ್ಧವಾದ ದಿಕ್ಕಿಗೇ ಸೆಳೆದೊಯ್ಯುತ್ತಿದೆ. ಕಣ್ಣು ಮಾತ್ರ ಭೂತವನ್ನು ನೋಡುತ್ತಿದೆ. ಏಂಜೆಲ್‌ನ ಶರೀರ ಭವಿಷ್ಯದ ಕಡೆ ಚಲಿಸುತ್ತಿದೆ. ಚಲಿಸುತ್ತಿದ್ದಂತೆಯೇ ಕಣ್ಣೆದುರಿನ ಭೂತದ ತಿಪ್ಪೆ ಬೆಳೆಯುತ್ತಲೇ ಇದೆ. ಅಂದರೆ ಹೀಗೇ ಚರಿತ್ರೆಯನ್ನು ಊಹಿಸುವಾಗ ವಾಲ್ಟರ್ ಬೆಂಜಮಿನ್, ಹೆಗಲ್‌ನಿಂದ ಪ್ರಾರಂಭವಾದ ‘ಸತತವಾದ ಪ್ರಗತಿ’ ಎನ್ನುವ ಆಶಾವಾದವನ್ನು ಕಳೆದುಕೊಂಡನೇ ಎಂಬುದು ಮುಖ್ಯ ಪ್ರಶ್ನೆ.

ಈ ಆಶಾವಾದವೆಂದರೆ ಚರಿತ್ರೆ ತನ್ನ ಡಯಲೆಕ್ಟಿಕ್‌ನಲ್ಲಿ ಮೇಲ್ಮುಖವಾಗಿ ಚಲಿಸುತ್ತಲೇ ಇರುತ್ತದೆ. ಮನುಷ್ಯನಿಗೆ ಹೆಚ್ಚು ಹೆಚ್ಚು ಒಳ್ಳೆಯದನ್ನು ಸಾಧಿಸಲು ಸಾಧ್ಯವಾಗುತ್ತದೆ. ಮಾರ್ಕ್ಸ್‌ವಾದದ ಪ್ರಕಾರ ಉತ್ಪಾದನಾ ಸಂಬಂಧಗಳಲ್ಲಿ, ಉತ್ಪಾದನಾ ವಿಧಾನಗಳಲ್ಲಿ ಹಲವು ವ್ಯತ್ಯಾಸಗಳಾಗಿ ಮುಂದೊಂದು ದಿನ ಮನುಷ್ಯ ಯಾವ ಕಿತ್ತಾಟವೂ ಇಲ್ಲದೆ ನದಿ ದಂಡೆಯ ಮೇಲೆ ಕುಳಿತು ಮೀನು ಹಿಡಿಯುತ್ತಾನೆ ಅಥವಾ ಒಬ್ಬ ಕವಿಯಾಗುತ್ತಾನೆ. ಇಂಥ ಒಂದು ಕನಸು ಕೂಡಾ ಮಾರ್ಕ್ಸ್‌ಗೆ ಇತ್ತು. ಈ ಕನಸನ್ನು ಕಾಣಲಾರದವನಂತೆ ಬೆಂಜಮಿನ್‌ಬರೆಯುತ್ತಾನೆ. ಏಕೆಂದರೆ ಬಿರುಗಾಳಿಯಾಗಿ ಭವಿಷ್ಯದೆಡೆಗೆ ಚರಿತ್ರೆ ತನ್ನನ್ನು ತಳ್ಳುತ್ತಿದೆ. ಆದರೆ ಕಣ್ಣೆದುರು ಕಾಣುವುದು ಮಾತ್ರ ತಿಪ್ಪೆ.

* * *

ಬೇಂದ್ರೆಯ ಮೊದಲಗಿತ್ತಿ ಪದ್ಯವನ್ನು ಓದಿದಾಗ ಮತ್ತೆ ಬೆಂಜಮಿನ್‌ನ ನೆನಪಾಯಿತು. ಈ ಮೊದಲಗಿತ್ತಿಯಲ್ಲಿ ಬರುವುದು ಮೊದಲಗಿತ್ತಿಯಾದ ಭೂಮಿ, ಭೂಮಿಯೇ ಪ್ರಕೃತಿ ದೇವಿ. ಇಲ್ಲಿಯೂ ಚರಿತ್ರೆಯಿದೆ. ಆ ಚರಿತ್ರೆಯನ್ನು ಆಗುವ ಹಾಗೆ ಮಾಡುತ್ತಿರುವದು ಈ ಭೂಮಿ. ಬೆಂಜಮಿನ್‌ಕಲ್ಪಿಸಿದ ಚರಿತ್ರೆಯೇ ಏಂಜಲ್. ಆದರೆ, ಇಲ್ಲಿ ದೇವಿಯಾಗಿ ಬರುವವಳು ಭೂಮಿ. ಅವಳು ಮೊದಲಗಿತ್ತಿಯಂತೆ ದಿವ್ಯ ನಿರ್ಲಕ್ಷ್ಯದಲ್ಲಿ ಮೆರೆಯುತ್ತಿದ್ದಾಳೆ. ಇವಳು ಒದಗಿಸುವ ಅವಕಾಶದಲ್ಲಿ ಅಲ್ಪಮಾನವನ ದುರಂತದ ಮೇಲಿನ ದುರಂತದ ಚರಿತ್ರೆ ಜರುಗುತ್ತಿದೆ. ಆದರೆ ಅವೆಲ್ಲವನ್ನೂ ಒಂದು ಮಕ್ಕಳಾಟದ ಹಾಗೆ ಈ ಮೊದಲಗಿತ್ತಿ ನೋಡುತ್ತಿದ್ದಾಳೆ. ಅವಳಿಗೆ ದಣಿವಾಗುವುದೇ ಇಲ್ಲ. ಪುಂಡರು ಹಿಂಡಾಗಿ ಅಂಡಲೆದರೆ ಅವರ ನೆತ್ತರನ್ನು ಒರೆಹಚ್ಚಿ ನೋಡಿದ್ದಾಳೆ ಇವಳು.

ಬೇಂದ್ರೆಯ ಈ ಪದ್ಯದ ಒಂದು ಸಾಲು ಹೀಗಿದೆ: ‘ಪಾತಾಳ ಕಂಡರು ಕೆಲವು ತಾಯಿಗ್ಗಂಡರು/ಅವರನ್ನು ಮಡಿಲಾಗ ಮಲಗಿಸಿಹೆ’. ಇಲ್ಲಿಂದ ತಾಯಿಗಂಡ ಎನ್ನುವ ಶಬ್ದ ನಾವು ಬೈಗುಳದಲ್ಲಿ ಬಳಸುವ ಪದ. ಹಾಗೆಯೇ ಇದು ‘ಭೂಪತಿ’ ಎಂಬುದಕ್ಕೆ ಭಾಷಾಂತರವೂ ಹೌದು. ‘ಭೂಪತಿ’ಗಳು ‘ತಾಯಿಗಂಡರು’ –  ಇದು ಬೇಂದ್ರೆಯ ಅದ್ಭುತವಾದ ಒಳನೋಟ.

ಎಷ್ಟೋ ರಾಜರು ಬಂದರು ಹೋದರು. ಆದರೆ ಈ ಭೂಮಿ ತಲೆ ಎತ್ತಿಯೇ ನಿಂತಿದ್ದಾಳೆ. ತಾಯಿ ಮಕ್ಕಳ ಆಟವನ್ನ ನೋಡುವ ಹಾಗೆ ಈ ಭೂಮಿ ಎನ್ನುವ ತಾಯಿ ರಾಜರ ಯಶಸ್ಸಿನ ಆಟವನ್ನು ನೋಡುತ್ತಾಳೆ. ‘ಅವಳ ತೇಜದ ಮುಂದೆ ರಾಜ ತೇಜವು ಕೂಸು.’ ಈ ಪದ್ಯದ  ಮತ್ತೊಂದು ಸಾಲು ಹೇಳುತ್ತದೆ… ‘ಕೊಡಲಿ ರಾಮನು ಎರೆದ ಕೆನ್ನೀರ ಜಳಕಕ್ಕೆ ಕೂದಲೂ ನೆನೆಯಲಿಲ್ಲ ಎನ್ನುತಿಹೆ’ – ಪರಶುರಾಮ ನಡೆಸಿದ ರಾಜ ಸಂಹಾರದ ರಕ್ತಪಾತಕ್ಕೆ ಅವಳ ಕೂದಲೂ ನೆನೆಯಲಿಲ್ಲ. ಹಾಗಾಗಿ ಅವಳು ಇನ್ನಷ್ಟು ರಕ್ತಪಾತವನ್ನೂ ಇದೊಂದು ತಮ್ಮನ್ನು ಭೂಪತಿಗಳು ಎಂದು ಭ್ರಮಿಸುವ ತನ್ನ ಮಕ್ಕಳ ಆಟವೆಂಬಂತೆ ಸಹಿಸುತ್ತಾಳೆ. ಮೊದಲಗಿತ್ತಿಯಂತೆ ಮೆರೆಯುತ್ತಲೇ ಇರುತ್ತಾಳೆ.

ಈ ಪದ್ಯ ಕೊನೆಯಾಗುವುದು ಮಾತ್ರ ಆರ್ತತೆಯಲ್ಲ. ಬೆಂಜಮಿನ್‌ಗೆ ಇರುವಂಥದೇ ಒಂದು ಆರ್ತತೆ ಬೇಂದ್ರೆಗೂ ಇದೆ ಎಂಬುದು ಪದ್ಯದ ಅಂತ್ಯದಲ್ಲಿ ತಿಳಿಯುತ್ತದೆ. ಬೇಂದ್ರೆ ಚರಿತ್ರೆಯನ್ನು ಆತಂಕಿತ ಏಂಜಲ್ ಆಗಿ ಮಾಡಿ ನೋಡಿ ಹತಾಶರಾಗುವುದಿಲ್ಲ. ‘ಹಾಲಿನ ಹೃದಯಕ್ಕೆ ಕುಬ್ಬುಸವನು ತೊಡಿಸಿ/ ಹು ಮುಡಿಸಿಕೊಂಡೆಂದು ನೀ ನಲಿವೆ?’

ಬೆಂಜಮಿನ್ ಒಬ್ಬ ಐರೋಪ್ಯನಾಗಿಮನುಷ್ಯ ಕೇಂದ್ರಿತ ಚರಿತೆಯನ್ನು ಎಂಜೆಲ್ ಆಗಿ ಮಾಡಿ ನೋಡುವುದಕ್ಕೂ ಭಾರತೀಯರಾದ ಬೇಂದ್ರೆ ಎಲ್ಲದಕ್ಕೂ ಮೂಲವಾಗಿರುವ ಭೂಮಿಯನ್ನೇ (ಪ್ರಕೃತಿಯನ್ನೇ) ಇಲ್ಲಿ ಮುಖ್ಯವಾಗಿಸುವುದಕ್ಕೂ ಇರುವ ವ್ಯತ್ಯಾಸವನ್ನು ನಾವು ಗಮನಿಸಬೇಕು. ಪದ್ಯದ ಕೊನೆಯ ಭಾಗದಲ್ಲಿ ಕವಿ ಭೂಮಿತಾಯಿಯನ್ನು ಕೇಳುತ್ತಾನೆ.. ‘ಎಂದು ಮಂಗಲ ನಿನ್ನ ದೇವಗರ್ಭಕೆ? –  ಇನ್ನೂ / ಮೊದಲಗಿತ್ತಿಯಂತೆ ಮೆರೆಯುತಿಹೆ?’

ಈ ಪದ್ಯದಲ್ಲಿ ಮನುಷ್ಯ ಮಾತ್ರನಾಗಿ ನೋಡಲಾರದ್ದೊಂದನ್ನು ಕವಿ ಏನನ್ನಾದರೂ ಕಾಣಬಲ್ಲ ಬೆರಗಿನಲ್ಲಿ ಕಂಡಿದ್ದಾರೆ. ಯಾಕೆಂದರೆ, ಮನುಷ್ಯ ಮಾತ್ರರಾಗಿ ನೋಡಿದರೆ ನಾವು ಈ ಘೋರ ಕ್ರೂರ ಚರಿತ್ರೆಯಿಂದ ಬೆಂಜಮಿನ್ನನಂತೆ ವಿಚಲಿತರಾಗಬೇಕು, ಚಂಚಲಿತರಾಗಬೇಕು –  ಹತಾಶೆಯ ಅಂಚಿಗೆ ಹೋಗಬೇಕು. ಬೇಂದ್ರೆಯವರಲ್ಲಿ ಹತಾಶೆಯ ಬದಲು ಒಂದು ಅಚ್ಚರಿ ಇದೆ. ಭೂಮಿತಾಯಿಯ ಸತತ ಚೊಚ್ಚಲಿನ ಮೊದಲಗಿತ್ತಿಯ ಸಂಭ್ರಮದ ಬಗ್ಗೆ ಒಂದು ಆರಾಧಕವೆನ್ನಿಸುವ ಬೆರಗಿದೆ. ಮನುಷ್ಯನ ಕ್ರಿಯಾಶೀಲತೆಯಲ್ಲಿರುವ ಕ್ರೌರ್ಯ, ಪ್ರೇಮ ಇವುಗಳೆಲ್ಲವನ್ನೂ ಮೀರಿದ ಒಂದು ಮನುಷ್ಯಾತೀತವಾದ ಪ್ರಕೃತಿಯ ಶಕ್ತಿಯನ್ನು ಇಲ್ಲಿ ಬೇಂದ್ರೆ ಭೂಮಿಗೆ ಆರೋಪಿಸಿ ಮನುಷ್ಯ ಚರಿತ್ರೆಯ ಅಟ್ಟಹಾಸದ ಎಲ್ಲ ಗರ್ವವನ್ನೂ ಕಳೆಯುವ ಹಾಗೆ ಮಾಡುತ್ತಾರೆ. ಎಷ್ಟು ಯುದ್ಧಗಳನ್ನು ಬೇಕಾದರೂ ಮಾಡು. ಎಷ್ಟೇ ಕೊಲೆಗಳನ್ನು ಮಾಡು. ಆದರೆ ನಾನು ಮೊದಲಗತ್ತಿಯ ಹಾಗೆ ಇರುತ್ತೇನೆ ಎಂದು ಭೂಮಿ ಹೇಳುತ್ತಿದೆ.

ಬೆಂಜಮಿನ್‌ನ ಚರಿತ್ರೆಯ ಬಗ್ಗೆ ಇರುವ ನೋಟಕ್ಕೂ ಬೇಂದ್ರೆಯ ಕವನದಲ್ಲಿ ಇರುವ ನೋಟಕ್ಕೂ ಇರುವ ವ್ಯತ್ಯಾಸಗಳನ್ನು ಇಲ್ಲಿ ಚರ್ಚಿಸುತ್ತಿರುವ ಕಾರಣ ಒಂದು ಮೇಲು ಮತ್ತೊಂದು ಕೀಳು ಎಂಬುದನ್ನು ನಿರ್ಧರಿಸುವುದಕ್ಕಲ್ಲ. ಒಟ್ಟು ನಮ್ಮ ಪಾಡನ್ನು ಅರ್ಥ ಮಾಡಿಕೊಳ್ಳಲು ಈ ಎರಡೂ ನೋಟುಗಳೂ ಒಟ್ಟಾಗಿ ದಕ್ಕಬೇಕೆಂದು ಈ ಟಿಪ್ಪಣಿಯನ್ನು ಮಾಡಿದ್ದೇನೆ. ಬೇಂದ್ರೆಯ ಬಗ್ಗೆ ಬರೆಯುತ್ತಿದ್ದಂತೆಯೇ ಕುವೆಂಪುರವರು ಕಾಲಪುರುಷನನ್ನು ತರುವ ಸ್ಮಶಾನ ಕುರುಕ್ಷೇತ್ರವನ್ನೂ ನೆನಪು ಮಾಡಿಕೊಳ್ಳುತ್ತ ಇದ್ದೇನೆ.

* * *

ಮನುಷ್ಯ ಮಾತ್ರರಾದ ನಮ್ಮಂಥವರಿಗೆ ಬೆಂಜಮಿನ್‌ನಂತೆ ಅನ್ನಿಸುವುದೇ ಹೆಚ್ಚು ಸ್ವಾಭಾವಿಕ. ಆದರೆ ಕವಿಗೆ ಒಂದು ದಾರ್ಶನಿಕ ನೋಟದಲ್ಲಿ ಭೂಮಿತಾಯಿಯ ದೃಷ್ಟಿಯಿಂದ ಈ ಎಲ್ಲವೂ ಒಂದು ಆಟವೆಂಬಂತೆ ಕಾಣುವುದು ಸಾಧ್ಯವಾಗಿದೆ. ‘ಲೀಲೆ’ ಎನ್ನುವ ಭಾರತೀಯ ತತ್ವಶಾಸ್ತ್ರದ ಪದಕ್ಕೆ ಇಷ್ಟು ಗಾಢವಾದ ಅರ್ಥವನ್ನು ಕೊಡುವ ಇನ್ನೊಂದು ಪದ ನನಗೆ ಕಾಣುತ್ತಿಲ್ಲ. ಈ ಎರಡರ ಜತೆಗೆ ಅಡಿಗರ ‘ಭೂತ’ ಪದ್ಯ ಚರಿತ್ರೆಯನ್ನು ನೋಡುವ ಕ್ರಮವನ್ನು ಈಗ ಮುಂದಿಡುತ್ತೇನೆ.

ಅಡಿಗರು ಭೂತಕಾಲವನ್ನು ಭ್ರೂಣ ಗೂಡುಗಳು ಎನ್ನುತ್ತಾರೆ, ಅವು ನಮ್ಮನ್ನು ವರ್ತಮಾನಕ್ಕೂ ಬಂದು ಕಾಡುತ್ತಿವೆ. ಯಾಕೆಂದರೆ ನಾವು ಅವುಗಳಿಗೆ ಮಾಡಬೇಕಾದ ಶ್ರಾದ್ಧವನ್ನು ಮಾಡಿಲ್ಲ. ಒಂದರ್ಥದಲ್ಲಿ ನಮ್ಮ ಪಿತೃಗಳಿಗೆ ನಾವು ಮಾಡಬೇಕಾದ ಶ್ರಾದ್ಧವನ್ನು ಮಾಡಿಲ್ಲ. ಬೆಂಜಮಿನ್ ಕೂಡಾ ತಿಪ್ಪೆಯ ಹಾಗೆ ಬಿದ್ದ ಭೂತದ ಕಾಲವನ್ನು ಮಾರ್ಪಡಿಸುವ ಬಗ್ಗೆ ಯೋಚಿಸುತ್ತಾನೆ. ಆದರೆ ಅಡಿಗರು ಬಹುಮುಖ್ಯವಾಗಿ ವೈದಿಕ ಪರಂಪರೆಯ ವಿಚಾರಗಳನ್ನಿಟ್ಟೇ ಇವನ್ನು ನೋಡುತ್ತಾರೆ. ಶ್ರಾದ್ಧ ಮಾಡದಿದ್ದರೆ ಪಿತೃಗಳಾಗಬೇಕಾದವರು ಪ್ರೇತಗಳಾಗುತ್ತಾರೆ. ನೀರು ನೆಲೆಯಿಲ್ಲದೆ ಅಲೆಯುತ್ತಾರೆ. ಅವರದು ತಿರುಗು ಮುರುಗು ಪಾದದ ಪರಿಶೆ. ಭೂತಗಳು ನಡೆಯುವಾಗ ಹೆಜ್ಜೆ ತಿರುಗಿಮುರುಗಾಗಿರುತ್ತದಂತೆ. ಹೆಜ್ಜೆಯನ್ನು ಹಿಂಬಾಲಿಸುತ್ತಾ ಹೋದರೆ ಮುಂದಿರುವಂತೆ ತೋರುವುದು ಹೊರಟಲ್ಲಿಗೇ ಹಿಂದಿರುಗುವಂತೆ ಮಾಡುತ್ತವೆ.

ವರ್ತಮಾನದಲ್ಲಿ ನಮ್ಮನ್ನು ಕಾಡುವ ಭೂತದಿಂದ ಪಾರಾಗುವ ವಿಧಾನವನ್ನೂ ಅಡಿಗರು ಯೋಚಿಸುತ್ತಾರೆ. ‘ತಕ್ಕ ಶ್ರಾದ್ಧವನ್ನು ಮಾಡುವುದು’ ಎಂದರೆ ಭೂತವನ್ನು ಮತ್ತೆ ಅಗೆದು ನೋಡುವುದು. ಈ ಅಗೆತದಲ್ಲಿ ಮೊದಲು ಅದಿರು ಸಿಗುತ್ತದೆ. ಆಮೇಲೆ ಅದರಲ್ಲಿ ಬಂಗಾರ ಸಿಗುತ್ತದೆ. ಆಮೇಲೆ ಬಂಗಾರದಿಂದ ನಮ್ಮ ಇಷ್ಟದೇವತೆಯ ಅಂದರೆ ನಮ್ಮ ವೈಯಕ್ತಿಕ ಅಗತ್ಯಗಳಿಗೆ ಬೇಕಾದ ವಿಗ್ರಹವನ್ನು ಮಾಡಿಕೊಳ್ಳಲಾಗುತ್ತದೆ. ಅಡಿಗರ ಯೋಚನೆ ಇಲ್ಲಿಗೆ ನಿಲ್ಲುವುದಿಲ್ಲ. ಭೂತವನ್ನು ಅಗೆಯುವ ಕ್ರಿಯೆಯ ಜೊತೆಯಲ್ಲೇ ಭೂಮಿ ಹಸನಾಗುತ್ತಿದ್ದಂತೆ ಆಕಾಶದಲ್ಲಿ ಮೋಡ ಸಂಚಾರವಾಗುತ್ತದೆ. ಅದರಿಂದ ಮಳೆ ಬೀಳುತ್ತದೆ. ಇದು ಭೂಮಿಗೂ ಆಕಾಶಕ್ಕೂ ನಡುವೆ ಕಾಮದ ಸಂಬಂಧದಂತೆ (ವರುಣ) ಕಾಣಿಸಿಕೊಂಡು ‘ಅಗೆದುತ್ತ ಗದ್ದೆಗಳಲ್ಲಿ ಭತ್ತ ಗೋದುವೆಗಳು’ ಬೆಳೆದು, ಉತ್ಪನ್ನದ ಸಮೃದ್ಧಿಯಲ್ಲಿ ಇಡೀ ಸಮುದಾಯಕ್ಕೆ ದೈವವಾಗುವ ಗುಡಿಗೋಪುರಗಳ ಬಂಗಾರ ಶಿಖರವಾಗುತ್ತದೆ.

ಬೆಂಜಮಿನ್‌ಈ ಬಗೆಯಲ್ಲಿ ತನ್ನ ಭೂತದ ಪಾಠವನ್ನು ಓದಲಾರ, ಅರಿಯಲಾರ, ದಾಟಲಾರ. ಅಡಿಗರು ದಾಟುತ್ತಾರೆಂದರೆ ಬೆಂಜಮಿನ್‌ಗಿಂತ ಅಡಿಗರು ಹೆಚ್ಚು ಅರ್ಥಪೂರ್ಣ ಎಂದೇನೂ ನಾನು ಭಾವಿಸುವುದಿಲ್ಲ. ಯಾಕೆಂದರೆ ಅಡಿಗರ ಪದ್ಯ ನೀಡುವ ಪರಿಹಾರಕ್ಕೆ ಒಂದು ರೀತಿಯ ಪರಂಪರೆಯಲ್ಲಿ ಅಡಗಿರುವ ಶ್ರದ್ಧೆಯ ಅಗತ್ಯವಿದೆ. ಆ ಶ್ರದ್ಧೆಯ ಅಗತ್ಯವಿಲ್ಲದಂತೆ ಬೆಂಜಮಿನ್‌ ಯೋಚಿಸುತ್ತಾನೆ ಅಥವಾ ಅಂಥ ಶ್ರದ್ಧೆಯಿದ್ದೂ ಪ್ರಯೋಜನವಿಲ್ಲವೆಂದು ಅವನಿಗೆ ಗೊತ್ತು. ಯಾಕೆಂದರೆ ದುಃಖ ದುಃಖವೇ. ಆಗಿರುವ ಅನ್ಯಾಯ ಅನ್ಯಾಯವೇ. ಸತ್ತವರು ಸತ್ತಿದ್ದಾರೆ. ಅವರಿನ್ನು ಬದುಕಲು ಸಾಧ್ಯವಿಲ್ಲ. ಚರಿತ್ರೆಯುದ್ಧಕ್ಕೂ ತಪ್ಪುಗಳಾಗುತ್ತಿವೆ ಮತ್ತು ಆ ತಪ್ಪುಗಳು ತನ್ನ ಕಾಲದಲ್ಲಿ ಮತ್ತೆ ಆಗುತ್ತಿರುವುದನ್ನೂ ಬೆಂಜಮನ್‌ಕಂಡಿದ್ದಾನೆ. ಘೋರಪಾತಕದ ಯುದ್ಧದಲ್ಲಿ ಪಾಲುದಾರನಾದ ಸ್ಟಾಲಿನ್ನನೂ ಪ್ರಗತಿಯಲ್ಲಿ ನಂಬಿದವನೇ. ಹಿಟ್ಲರನೂ ನಂಬಿದವನೇ, ಚರ್ಚಿಲ್ಲನೂ ನಂಬಿದವನೇ, ರೂಸ್ವೆಲ್ವನೂ ನಂಬಿದವನೇ. ಈ ಸತತ ಪ್ರಗತಿಯ ಫಲಮಾತ್ರ ಕಣ್ಣೆದುರು ಅಸಹ್ಯವಾಗಿ ಬೆಳೆಯುತ್ತಲೇ ಹೋಗುವ ತಿಪ್ಪೆ. ಸದ್ಯದಲ್ಲಿ ಕ್ಷಣ ನಿಂತು ಗ್ರಹಿಸಲು ಸಾಧ್ಯವಾಗದಂತೆ ಮುಂದಕ್ಕೆ ಭವಿಷ್ಯಕ್ಕೆ ಇನ್ನಷ್ಟು ಪ್ರಗತಿಗೆ ತಳ್ಳುತ್ತಿರುವ ಪ್ರಗತಿ.

ಅಡಿಗರ ಭೂತದ ಹಿಂದೆ ತಾತ್ವಿಕ ಆಲೋಚನೆ ಇದೆ. ಆದರೆ ಬೆಂಜಮಿನ್‌ನ ಸಂಕಟ ಅದರಲ್ಲಿ ಇಲ್ಲ. ಬೇಂದ್ರೆಯಲ್ಲೂ ಆ ಸಂಕಟವಿಲ್ಲ. ಶಾಶ್ವತಿಯಾದ ಪ್ರಕೃತಿಯ ದೃಷ್ಟಿಯಿಂದಲೇ ಅದನ್ನು ನೋಡುತ್ತಾರೆ. ಈ ಮೂರು ಬಗೆಯ ನೋಟಗಳ ಬಗ್ಗೆಯೂ ಗಾಢವಾದ ಚರ್ಚೆ ಸಾಧ್ಯವಾಗಲೆಂದು ಈ ಟಿಪ್ಪಣೆಯನ್ನು ಮಾಡಿದ್ದೇನೆ –  ನಮ್ಮ ಕಾಲದ ಸಂಕಟಗಳ ಎದುರಿನಲ್ಲಿ.

೨೪೧೨೨೦೦೬

* * *