ದಾಂಪತ್ಯದಲ್ಲಿ ಕಾಣುವ ಗಂಡು ಹೆಣ್ಣಿನ ಪ್ರೀತಿ, ಈ ಪ್ರೀತಿ ಹುಟ್ಟಿಸುವ ನೆಮ್ಮದಿ, ಅನ್ಯೋನ್ಯತೆಯಲ್ಲಿ ಬೆಳೆಯುವುದೆಷ್ಟು ಸಾಧ್ಯವೋ ಹಾಗೆಯೇ ಪ್ರೀತಿಯಿಂದ ಹುಟ್ಟಬಹುದಾದ ಮತ್ಸರ, ಒಬ್ಬರನ್ನೊಬ್ಬರು ನಾಶ ಮಾಡಬಹುದಾದ ದ್ವೇಷದ ಸಾಧ್ಯತೆ –  ಈ ಎರಡನ್ನೂ ಅತ್ಯಂತ ತೀವ್ರತೆಯಲ್ಲಿ ಬದುಕಿದವರು ಟಾಲ್‌ಸ್ಟಾಯ್ ಮತ್ತು ಅವನ ಹೆಂಡತಿ ಸೋಫಿ. ಈ ವಾಕ್ಯದಲ್ಲೇ ಒಂದು ದೋಷವಿದೆ ಎನ್ನುವುದನ್ನು ಹೇಳಿಯೇ ಮುಂದುವರಿಯಬೇಕು. ಎರಡೂ ಸಾಧ್ಯತೆಗಳು ಮಾತ್ರವಲ್ಲ ಪ್ರಣಯ ಸಂಬಂಧದಲ್ಲಿ ಒಟ್ಟಾಗಿ ಇರುವ ಜೀವಲಕ್ಷಣಗಳು. ಹಾಗಿರುವುದು ಮನುಷ್ಯ ಸುಲಭವಾಗಿ ಮೀರಬಹುದಾದ ತಪ್ಪೆಂದೂ, ಕಾಮಿಸುವುದು ಅನೈತಿಕವೆಂದೂ ಟಾಲ್ಸ್‌ಟಾಯ್‌ಅವನ ಕೊಂಚ ಸ್ವಪ್ರತಿಷ್ಠೆಯೆನ್ನಿಸುವ ನೇರ ಬರಹಗಳಲ್ಲಿ ವಾದಿಸುವಂತೆ ತೋರಿದರೂ ಅವನ ಆಳದ ಸೃಜನಶೀಲ ಬರವಣಿಗೆಯಲ್ಲಿ ಹಾಗೆ ತಿಳಿದಿರಲಿಲ್ಲ ಎಂಬುದು, ಅದನ್ನೊಂದು ಅನಿವಾರ್ಯವಾದ ಮಾನವಸ್ಥಿತಿಯ ಅವಸ್ಥೆ ಎಂದೇ ತಿಳಿದಿದ್ದ ಎಂಬುದು, ನಮ್ಮಲ್ಲಿ ಹೊಸ ಅರಿವಿನ ಎಚ್ಚರವನ್ನು ಹುಟ್ಟಿಸುವಂತೆ ಇವೆ; ವಿಪರ್ಯಾಸವೆಂದರೆ ಅಷ್ಟೇ ತೀವ್ರವಾದ ವಿರೋಧವನ್ನು ಹುಟ್ಟಿಸುವಂತೆ ಇವೆ.

ಟಾಲ್ಸ್‌ಟಾಯ್‌ನನ್ನು ಒಬ್ಬ ಜೀವವಿರೋಧಿ ಮುದಿಗೂಬೆಯೆಂದು ಹಳಿಯುವ ಲಾರೆನ್ಸ್‌ಕೂಡ (ಅವನ ಅಂತಹ ಮಾತುಗಳ ಹಿಂದಿನ ದ್ವೇಷದ ತೀವ್ರತೆ ಗಮನಿಸಿದಾಗ) ಟಾಲ್ಸ್‌ಟಾಯ್‌ನಿಂದ ವಿಚಲಿತನಾಗಿಯೇ ಅವನು ಚೀರುತ್ತಿರುವಂತೆ ನಮಗೆ ಅನ್ನಿಸುತ್ತದೆ. ಅನ್ನಾಕರೆನೀನಾ ಎಂಬ ಟಾಲ್ಸ್‌ಟಾಯ್‌ನ ಕಾದಂಬರಿಯ ಕಥೆಯೇ ಲಾರೆನ್ಸ್‌ನ ನಿಜಜೀವನದ ಕಥೆಯೂ ಆಗಿತ್ತು, ವಿದ್ವಾಂಸನಾಗಿದ್ದ ತನ್ನ ಗಂಡನನ್ನೂ, ಅವನಿಗೆ ಹುಟ್ಟಿದ ಮಕ್ಕಳನ್ನೂ ತೊರೆದು ಲಾರೆನ್ಸ್‌ನನ್ನು ಮದುವೆಯಾದ ಜರ್ಮನ್ ಹೆಂಗಸು ಫ್ರೀಡಾಳೂ ಲಾರೆನ್ಸ್‌ನನ್ನು ಒಲಿದಂತೆಯೇ ತನ್ನ ಮಕ್ಕಳಿಗಾಗಿ ಹಂಬಲಿಸಿ ಎಲ್ಲರ ಎದುರು ಲಾರೆನ್ಸ್‌ಮಾನ ಕಳೆಯುವಂತೆ ಜಗಳವಾಡುವ ದಿಟ್ಟೆಯೂ ಆಗಿದ್ದಳು. ಅನ್ನಾಳನ್ನು ಕೂಡಿದ ವ್ರಾನ್ಸ್‌ಕಿಯೂ ಅವಳ ಪ್ರೇಮದ ತೀವ್ರತೆಯಿಂದಲೇ ಸುಸ್ತಾಗಿ ತನ್ನ ಎಗ್ಗಿಲ್ಲದ ಹಿಂದಿನ ರೋಚಕ ಬದುಕನ್ನು ಹಂಬಲಿಸಿ ಅವಳಿಂದ ದೂರವಾಗತೊಡಗಿದ್ದ. ಪರಮ ಜೀವಕಾಮಿಯೂ ಆತ್ಮಕಾಮಿಯೂ ಆಗಿದ್ದ ಟಾಲ್ಸ್‌ಟಾಯ್‌ನ ಸಮಸ್ಯೆಯೂ ತನಗೆ ಹದಿಮೂರು ಮಕ್ಕಳನ್ನು ಹೆತ್ತುಕೊಟ್ಟ, ತನ್ನ ದೈತ್ಯ ಪ್ರತಿಭೆಯ ಕೃತಿಗಳನ್ನು ಪೋಷಿಸಿದ ಮನೆಯೊಡತಿಗಾಗಿ ತಾನು ರಾಣಿಯೆಂದೇ ತಿಳಿದಿದ್ದ ಸೋಫಿ ಪ್ರತಿನಿಧಿಸುವ ಶ್ರೀಮಂತಲೋಕದಿಂದ ಹೊರಬರುವುದಾಗಿತ್ತು.

ತನ್ನ ಕೃತಿ ಮುಂದೊಡ್ಡುವ ಜೀವಕಾಮದಿಂದ ತಾನೇ ದಿಗ್ಭ್ರಮೆಗೊಂಡು ಟಾಲ್ಸ್‌ಟಾಯ್‌ಕುದಿಯುವ ಸೋಜಿಗವೂ, ಈ ಜೀವಕಾಮವೇ ತರುವ ನೈತಿಕ ಪ್ರಶ್ನೆಗಳನ್ನು ತಿರಸ್ಕರಿಸಲು ಲಾರೆನ್ಸ್ ಹೆಣಗುವ ಪರಿಯೂ ಸಾಹಿತ್ಯಲೋಕದಲ್ಲಿ ಇಂದಿಗೂ ಎಲ್ಲೆಲ್ಲೂ ಮಹತ್ವದ ಪ್ರಶ್ನೆಯಾಗಿಯೇ ಉಳಿದಿವೆ.

ಸಾಹಿತ್ಯಲೋಕದ ಪರಮಸುಂದರಿಯರಲ್ಲಿ ಒಬ್ಬಳಾದ ಅನ್ನಾ ಮದುವೆಯಾದದ್ದು ಕರೆನಿನಾ ಎಂಬ ಒಣಗಾಂಭೀರ್ಯದ, ಶಾಸ್ತ್ರೋಕ್ತ ನೈತಿಕತೆಯ, ಕಾಣುವಂತೆ ಯಾವ ತಪ್ಪೂ ಮಾಡದ ವಿಧಿವತ್ತಾದ ನಡತೆಯ ಪ್ರತಿಷ್ಠಿತನನ್ನು. ಅವನಿಂದ ಒಬ್ಬ ಮಗನನ್ನು ಪಡೆದು, ಎಲ್ಲರಂತೆ ಸಾಂಸಾರಿಕ ಲೋಕದಲ್ಲಿ ಒಗ್ಗಿಕೊಂಡು ಪ್ರಸನ್ನಳೂ ಸ್ವಸ್ಥಳೂ ಆಗಿದ್ದಂತೆ ತೋರುವ ಅನ್ನಾ ತನ್ನ ಸೌಂದರ್ಯದ ಪರಾಕಾಷ್ಠೆಯನ್ನು ಮುಟ್ಟಿದ ನಡುವಯಸ್ಸಿನ ಪ್ರಾಯದವಳು. ತನ್ನ ಸೋದರನ ಹಾದರದ ಹಗರಣದಿಂದ ಉಂಟಾದ ಸಾಂಸಾರಿಕ ಬಿಕ್ಕಟ್ಟನ್ನು ಪರಿಹರಿಸಲು ಬಂದ ಒಂದು ದಿನ ಈ ಶೀಲವಂತ ಜಾಣೆ ರೈಲ್ವೆ ನಿಲ್ದಾಣದಲ್ಲಿ ವ್ರಾನ್‌ಸ್ಕಿ ಎಂಬ ಆರಾಮದ ಶ್ರೀಮಂತ ಜೀವನ ನಡೆಸುವ, ಸದ್ಯಕ್ಕೆ ಎಗ್ಗಿಲ್ಲದೆ ಸ್ಪಂದಿಸುವ ಯುವಕನೊಬ್ಬನನ್ನು ಭೇಟಿಯಾಗುತ್ತಾಳೆ. ಅವಳು ರೈಲಿನಿಂದ ಇಳಿಯುತ್ತಿದ್ದಂತೆಯೇ ಕೂಲಿಕಾರನೊಬ್ಬ ಹಳಿಗೆ ಸಿಕ್ಕು ಅಪಘಾತದಲ್ಲಿ ಸತ್ತಿರುತ್ತಾನೆ. ಅವನ ಕುಟುಂಬಕ್ಕೆ ವ್ರಾನ್ಸ್‌ಕಿ ತನ್ನ ಜೇಬಿನಲ್ಲಿರುವ ಹಣವನ್ನೆಲ್ಲ ಕೊಡುವುದನ್ನು ಕೊಟ್ಟ ಕ್ಷಣದಲ್ಲಿಯೇ ಅದನ್ನು ಮರೆತುಬಿಡುವ ಅವನ ಧಾರಾಳವನ್ನು, ಶ್ರೀಮಂತ ಸರಳತೆಯನ್ನು ಅನ್ನಾ ಗಮನಿಸುತ್ತಾಳೆ.

ಯಾವುದೋ ಒಂದು ಸನ್ನೆಯಿಂದ ಒಳಗಿನ ಸತ್ಯ ಫಕ್ಕನೆ ಹೊರಗಿಣಿಕುವ ಘಳಿಗೆಯನ್ನು ಎಪಿಫೆನಿ (epiphany) ಎನ್ನುತ್ತಾರೆ. ಏನೊ ಸನ್ನೆಯಾಗುತ್ತದೆ; ಆಗ ಸತ್ಯ ಹೊಳೆಯುತ್ತದೆ; ಹೊಳೆಯುವ ಎರಡು ಅರ್ಥದಲ್ಲೂ ಹೊಳೆಯುತ್ತದೆ. ಇಂತಹ ಒಂದು ಕ್ಷಣದಲ್ಲಿ ಅನ್ನಾಗೆ ತನ್ನ ಗಂಡನ ಎಂದಿನ ಒಡ್ಡಿಕೊಂಡ ಕಿವಿಗಳು ಹಿಂದೆಂದೂ ಕಾಣದಂತೆ ಕಾಣುತ್ತವೆ, ಅಳೆದು ಹುಯ್ಯುವ ನೈತಿಕತೆಯ, ಸಲೀಸು ಮಾತುಗಾರಿಕೆಯ ತನ್ನ ಗಂಡನ ಕಿವಿಗಳು ಅಸಹ್ಯವೆನ್ನಿಸಿ ಇವಳಿಗೆ ಇದ್ದಕ್ಕಿದ್ದಂತೆ ವಾಕರಿಕೆಯಾಗುತ್ತದೆ. ಈ ಕ್ಷಣದಿಂದ ಅವಳ ಇಡೀ ಜೀವ ವ್ರಾನ್ಸ್‌ಕಿಗಾಗಿ ಕಾಮಿಸತೊಡಗುತ್ತದೆ. ಗಂಡನನ್ನೂ, ತಾನು ಪ್ರೀತಿಸುವ ತನ್ನ ಮಗನನ್ನೂ ತೊರೆದು ವ್ರಾನ್ಸ್‌ಕಿಯನ್ನು ಅವಳು ಕೂಡುತ್ತಾಳೆ. ಲಾರೆನ್ಸ್‌ಗೆ ಇದು ಜೀವಕಾಮದ ಅತ್ಯಂತ ನೈತಿಕ ಘಟನೆ; ಟಾಲ್ಸ್‌ಟಾಯ್‌ಗೆ ಜೀಕಾಮದ ಅನಿವಾರ್ಯ ಸತ್ಯ. ಆದರೆ ಈ ಸತ್ಯವೂ ಎಂತಹ ನೈತಿಕ ಬಿಕ್ಕಟ್ಟುಗಳನ್ನು ತಂದೀತು ಎಂದು ಟಾಲ್ಸ್‌ಟಾಯ್‌ಚಿತ್ರಿಸುವುದನ್ನು ಜೀವಕಾಮದ ಪರಮ ನೈತಿಕತೆಗೆ ಸಾಮಾಜಿಕ ಮನುಷ್ಯನಾಗಿ ಕಾದಂಬರಿಕಾರ ಮಾಡುವ ಅಪಚಾರವೆಂದು ಲಾರೆನ್ಸ್ ವಾದಿಸುತ್ತಾನೆ. ಲಾರೆನ್ಸ್ ಹೇಳುವುದರಲ್ಲಿ ಪರಿಮಿತವಾದ ಒಂದು ನಿಜವಿದೆ. ಯಾವ ಗಾಢವಾದ ನೈತಿಕ ಪ್ರಜ್ಞೆಯೂ ದೈಹಿಕವಾಗಿ ಅಸಹ್ಯವೆನ್ನಿಸಿದ್ದನ್ನು ಸಹ್ಯವೆಂದು ಪರಿವತಿಸಲಾರದು. ಇಂತಹ ಸತ್ಯಗಳನ್ನು ತಾನು ಬರೆದಿದ್ದೇ ತಪ್ಪೆಂದು, ಅಪರಾಧವೆಂದು ಕೊನೆಯಲ್ಲಿ ಟಾಲ್ಸ್‌ಟಾಯ್‌ತನ್ನ ಘನವಾದ ಕಲಾಕೃತಿಗಳನ್ನೇ ತಿರಸ್ಕರಿಸಿ ನೈತಿಕ ಪಾಠಹೇಳುವ ಕಥೆಗಳನ್ನು ಬರೆದ. ಆದರೂ ತನ್ನನ್ನೆ ತಾನು ತನ್ನ ಚೈತನ್ಯದ ಮೂಲದಲ್ಲಿ ನಿರಾಕರಿಸಿಕೊಳ್ಳಲಾರದೆ ಸತ್ತ.

* * *

ಟಾಲ್‌ಸ್ಟಾಯ್‌ತನಗಿಂತ ಹದಿನಾರು ವರ್ಷ ಕಿರಿಯಳನ್ನು ಬೇರೆ ಮದುವೆಯಾಗಿದ್ದ. ಯಾಸ್ನಾ ಪೊಲ್ಯಾನಾ ಎಂಬ ಪ್ರದೇಶದ ರಾಜನಂತೆ ಬದುಕಿದವನು ಈ ಟಾಲ್‌ಸ್ಟಾಯ್‌. ಸೋಫಿಯನ್ನು ಪ್ರೀತಿಸಿ ಮದುವೆಯಾದ ಈ ಶ್ರೀಮಂತ ಜಮೀನುದಾರ ಮದುವೆಗೆ ಮುನ್ನ ತನ್ನ ಸೇವೆಯಲ್ಲಿದ್ದ ಹೆಣ್ಣುಗಳ ಜೊತೆ ಕಾಮಸಂಬಂಧವಿಟ್ಟುಕೊಂಡಿದ್ದ. ಅವನ ರಿಸರೆಕ್ಷನ್ ಎಂಬ ಕಾದಂಬರಿ ಓದಿದಾಗ ಸೇವಕಿಯಿಂದ ಪಡೆದ ಮಗನೊಬ್ಬನೂ ಇದ್ದ ಇವನಿಗೆ ಎನ್ನಿಸುತ್ತದೆ.

ಟಾಲ್ಸ್‌ಟಾಯ್ ಕಾಮದ ಅದಮ್ಯ ಶಕ್ತಿಯನ್ನು ಸ್ವತಃ ತನ್ನಲ್ಲಿ ಕಂಡವನು. ಅವನೊಬ್ಬ ಮಹರ್ಷಿಯೆಂದು ಜಗತ್ತಿನಲ್ಲಿ ಖ್ಯಾತನಾದ ಮೇಲೂ ತನ್ನೊಳಗಿನ ಕಾಮವನ್ನು ಮೀರಲಾರದೆ ಬೆರಗಾದವನು; ಸಂತತ್ವದಲ್ಲಿ ಒಣಗಲು ಹೋರಾಡಿದವನು. ಒಣಗಲಾರದ್ದನ್ನು ದಿಟ್ಟಿಸಿ ನೋಡಿ, ತನ್ನ ಹೆಂಡತಿ ಕೋಪತಾಪದಲ್ಲಿ ತನ್ನನ್ನು ಹೀಯಾಳಿಸಿ ಗುರುತಿಸಿದ ಸತ್ಯವನ್ನು ಬರೆದುಕೊಂಡವನು. ಅವನ ಸೃಜನತೆಯ ಮೂಲದಲ್ಲಿ ಎಷ್ಟು ಕಾಮದ ವಿಲಾಸವಿದೆಯೋ, ಅವಳ ಸರಳ ಸಂತತನದ ಹುಡುಕಾಟದಲ್ಲೂ ಕಾಮದ ತಿವಿಯುವ ಗೂಳಿಯ ಚೂಪಾದ ಹಾಯುವ ಕೊಂಬುಗಳು ಇವೆ.

ಟಾಲ್‌ಸ್ಟಾಯ್‌ತನ್ನ ಶ್ರೀಮಂತಿಕೆಗೆ ಹೇಸಿ ತನ್ನ ಎಲ್ಲ ಸಂಪತ್ತನ್ನೂ ಹಂಚಲು ಶುರು ಮಾಡಿದಾಗ ಸಂಪದ್ಭರಿತವಾದ ಧಾರಾಳವಾದ ಬದುಕನ್ನು ಪ್ರೀತಿಸುತ್ತಿದ್ದ ಅವನ ಹೆಂಡತಿ ವಿರೋಧಿಯಾದಳು. ಟಾಲ್ಸ್‌ಟಾಯ್‌ನನ್ನು ಅಕ್ಷರಶಃ ನಂಬುತ್ತ ಇದ್ದ ಕೆಲವು ಮೂರ್ಖ ಅನುಯಾಯಿಗಳು ಅವನ ಹೆಗಲೇರಿ ಕೂತರು. ತಾನು ಎಷ್ಟು ಸರಳನಾಗಬೇಕೆಂದರೂ ಅವನಿಗಾಗಿಯೇ ಬದುಕಿದ, ಅವನ ಸಾವಿರಾರು ಪುಟದ ಬರವಣಿಗೆಗಳನ್ನು ಏಳೆಂಟು ಬಾರಿ ಮುದ್ರಕನಿಗೆ ಗೊತ್ತಾಗುವಂತೆ ಬರೆದುಕೊಡುತ್ತಾ ಇದ್ದ ಸೋಫಿಗೆ ಗೊತ್ತಿದ್ದ ಸತ್ಯವೇ ಬೇರೆ. ಅವನನ್ನು ಅವಳು ಹಗಲೂ ಕಂಡವಳು; ರಾತ್ರಿಶಯ್ಯೆಯಲ್ಲೂ ಕಂಡವಳು. ಸಸ್ಯಾಹಾರಿಯಾದ ತನ್ನ ಗಂಡನಿಗೆ ಅಣಬೆಯ ಸೂಪಿನ ಒಳಗೆ ಅವನಿಗೆ ಗೊತ್ತಾಗದಂತೆ ದೇಹದ ಶಕ್ತಿಗೆ ಅಗತ್ಯವೆಂದು ಮಾಂಸದ ಸೂಪನ್ನು ಇವಳು ಬೆರಸಿ ಕೊಡುತ್ತಿದ್ದಳು. ಮಹರ್ಷಿಗೆ ಈ ಹೆಂಡತಿಯ ಕಾಣ್ಕೆಯಿಂದ ಎಷ್ಟು ಕಿರಿಕಿರಿಯೋ ಅವನ ಶಿಷ್ಯರ ಗೊಡ್ಡು ಸರಳ ನಂಬಿಕೆಗಳಿಂದಲೂ ಅಷ್ಟೇ ಕಿರಿಕಿರಿ.

ಇಲ್ಲಿ ನನ್ನದೊಂದು ಅನುಭವವನ್ನು ಹೇಳಿ ಮುಂದುವರಿಯುತ್ತೇನೆ. ನಾನು ರಷ್ಯಾಕ್ಕೆ ಹೋಗಿದ್ದಾಗ ಟಾಲ್‌ಸ್ಟಾಯ್‌ಇದ್ದ ಮನೆಯನ್ನು ನೋಡಿಬಂದೆ. ನನ್ನನ್ನು ಆಗ ಆಕರ್ಷಿಸಿದ್ದು ಟಾಲ್‌ಸ್ಟಾಯ್ ಮಲಗುತ್ತಿದ್ದ ಕೋಣೆಗಳು. ಅವನು ಪರಿವರ್ತನೆಯಾಗುತ್ತಾ ಹೋದಂತೆಲ್ಲಾ ಮುಂದಿದ್ದ ಈ ಕೋಣೆಗಳು ಕಿರಿದಾಗುತ್ತ ಹಿಂದಾಗುತ್ತಾ ಕೊನೆಯಲ್ಲಿ ಸೇವಕರು ಮಲಗುವ ಕೋಣೆಗಳಿಗೆ ಹತ್ತಿರವಾಗುತ್ತಾ ಹೋಗಿದನ್ನು ಕಂಡೆ. ಕೊನೆಯಲ್ಲಿ ಅವನು ಮನೆಬಿಟ್ಟು ಒಂದು ರಾತ್ರಿ ರೈತ ಪೋಷಾಕಿನಲ್ಲಿ ನಡೆದುಬಿಟ್ಟ. ಸಂಕಟದ ಹಂತಗಳನ್ನು ಈ ಬದಲಾಗಿರುವ ಅರಮನೆಯ ಕೋಣೆಗಳಲ್ಲಿ ಕಂಡೆ. ವಿಸ್ತಾರವಾದ ಈ ಯಾಸ್ನಪೊಲ್ಯಾನದಲ್ಲಿ ಒಂದು ಮರದ ಅಡಿ ಅವನನ್ನು ಹೂಳಿದ್ದಾರೆ. ಹೂಳಿನಲ್ಲಿ ರೈತರಿಗಿರುವಂತಹ ಒಂದು ಮಣ್ಣುಗುಡ್ಡೆ ಮಾತ್ರ ಇದೆ. ಈ ಮಣ್ಣುಗುಡ್ಡೆಯ ಮೇಲೆ ಹುಲ್ಲು ಬೆಳೆದಿದೆ. ಟಾಲ್ಸ್‌ಟಾಯ್‌ಬದುಕಿನಲ್ಲಿ ಬಯಸಿ ಆಗಿಯೂ ಆಗದೆ ಹೆಣಗಾಡಿದ್ದು ಸಾವಿನಲ್ಲ ಹುಲ್ಲಾಗಿ ನಿಜವಾಗಿದೆ. ಆದರೆ ಸಮಾನತೆಗಾಗಿ ಹೋರಾಡಿದ ಲೆನಿನ್ ಹೆಣ ಮಿಲಿಟರಿ ಸಮವಸ್ತ್ರ ಧರಿಸಿ ಕೊಳೆಯದಂತೆ ಗಾಜಿನ ಗೂಡಿನಲ್ಲಿ ಇದೆ. ಎಂತಹ ವಿಪರ್ಯಾಸ!

ಟಾಲ್‌ಸ್ಟಾಯ್‌ನ ಹೆಂಡತಿ ದುರ್ಗೆಯಂತೆ ಅಪಾರವಾದ ಶಕ್ತಿ, ಯುಕ್ತಿ ಎರಡನ್ನೂ ಪಡೆದಿದ್ದವಳು. ಟಾಲ್‌ಸ್ಟಾಯ್‌ಬ್ರಹ್ಮಚರ್ಯದ ಬಗ್ಗೆ ಮಾತಾಡುತ್ತಿದ್ದಾಗ ಅವಳು ಅವನಿಂದ ಬಸುರಾಗಿ ತನ್ನ ಗಂಡ ಎಲ್ಲರಂತೆಯೇ ಕಾಮಿ ಎಂದು ಜಗತ್ತಿಗೆ ಸಾರಿದಳು. ಹದಿಮೂರು ಮಕ್ಕಳನ್ನು ಹೆತ್ತು ಐದು ಮಕ್ಕಳನ್ನು ಕಳೆದುಕೊಂಡವಳು. ತನ್ನ ಗಂಡನ ಪ್ರತಿಭೆ ಅವನ ಬೃಹತ್ ಕಾದಂಬರಿಗಳಲ್ಲಿ ಮಾತ್ರ ಕಾಣಿಸುವಂಥದು, ಅವನ ಬಡಜನರ ಪ್ರೀತಿಯಲ್ಲಾಗಲೀ ಆದರ್ಶದಲ್ಲಾಗಲೀ ಅಲ್ಲ ಎಂದು ಸಾರಿದಳು. ಟಾಲ್‌ಸ್ಟಾಯ್‌ನ ಪುಸ್ತಕಗಳನ್ನು ರಷ್ಯ ಸರ್ಕಾರ ಬಹಿಷ್ಕರಿಸಿದಾಗ ಈಕೆ ಪೀಟರ್ಸ್‌ಬರ್ಗ್‌ಗೆ ಹೋಗಿ ಅಲ್ಲಿ ಚಕ್ರವರ್ತಿಯನ್ನು ಸ್ವತಃ ಕಂಡು ಅವನನ್ನು ಒಲಿಸಿ ಬಹಿಷ್ಕಾರವನ್ನು ತೆಗೆಸಿ ಆ ಭೇಟಿಯ ಬಗ್ಗೆ ಹೆಮ್ಮೆಯಿಂದ ಬಂಧು ಬಳಗದವರೆದುರು ಮಾತಾಡುತ್ತಿದ್ದವಳು. ಟಾಲ್‌ಸ್ಟಾಯ್‌ದಾಂಪತ್ಯದ ಈ ಅಂತರ್ಯುದ್ಧಕ್ಕೆ ಶಿವ ಪಾರ್ವತಿಯರ ಪ್ರೇಮದ ಕಥೆಯ ಗಾಢತೆ ಇದೆ.

ಈ ಕಥೆಯನ್ನು ಬೆಳೆಸುವುದು ನನ್ನ ಉದ್ದೇಶವಲ್ಲ. ಹೆಣ್ಣು ಗಂಡಿನ ಸಂಬಂಧದ ಬಗ್ಗೆ ಟಾಲ್‌ಸ್ಟಾಯ್‌ಬರೆದ ಒಂದು ಅಪೂರ್ವ ಕಥೆಯನ್ನು ನೆನೆಯುತ್ತೇನೆ. ಕಥೆಯ ಹೆಸರು ಕ್ರೂಟ್ಝರ್‌ಸೊನಾಟ. ನಮ್ಮ ಸ್ತ್ರೀವಾದಿಗಳು ಈ ಕತೆಯ ಮಹತ್ವನ್ನು ಅಷ್ಟಾಗಿ ಗಮನಿಸಿದಂತೆ ನನಗೆ ಕಾಣುವುದಿಲ್ಲ.

ಸಂಗೀತ, ನೃತ್ಯ ಕಾವ್ಯ ಈ ಎಲ್ಲವೂ ಕತೆಯ ನಿರೂಪಕನ ಪಾಲಿಗೆ ಕಾಮವರ್ಧಿನಿಗಳು. (ಗಾಂಧಿಯವರು ಅಸ್ವಾದದ ಬಗ್ಗೆ ಹೇಳುವುದು, ಅಂದರೆ ನಾವು ರುಚಿಗಳನ್ನು ಬೆಳಸಿಕೊಳ್ಳಬಾರದು ಎನ್ನುವುದು ನೆನಪಾಗುತ್ತದೆ). ಕತೆಯ ನಿರೂಪಕನಿಗೆ ಕಲೆಯ ರುಚಿಯೂ ಈ ಕಾಮವರ್ಧಿನಿಯಾದ ಇನ್ನೊಂದು ರುಚಿ. ಈ ನಿರೂಪಕ ಮತ್ಸರದಲ್ಲಿ ತನ್ನ ಹೆಂಡತಿಯನ್ನು ಕೊಂದಿರುತ್ತಾನೆ.

ಅವನು ಹೇಳುವ ತಪ್ಪೊಪ್ಪಿಗೆಯ ಕತೆಯಲ್ಲಿ ಬರುವ ಮುಖ್ಯ ವಿಚಾರ ಇದು : ಗಂಡು ತನ್ನ ಕಾಮುಕತೆಯಿಂದಾಗಿ ಹೆಣ್ಣನ್ನು ಅಧೀನಗೊಳಿಸುತ್ತಾನೆ. ತನ್ನ ತೀಟೆಯನ್ನು ತೀರಿಸಿಕೊಳ್ಳುವ, ತನ್ನ ವಂಶವನ್ನು ಬೆಳೆಸಲು ಮಕ್ಕಳನ್ನು ಹೆರುವ ಒಂದು ವಸ್ತುವಾಗಿ ಹೆಣ್ಣನ್ನು ಪರಿವರ್ತಿಸುತ್ತಾನೆ. ಇದರಿಂದ ಹೆಣ್ಣು ಎಷ್ಟು ಬಾಧಿತಳಾಗುತ್ತಾಳೆಂದರೆ ಗಂಡಿನ ಮೇಲೆ ತನ್ನ ರೊಚ್ಚನ್ನು ತೀರಿಸಿಕೊಳ್ಳುತ್ತಾಳೆ. ಗಂಡು ತನ್ನ ಜೀವನವಿಡೀ ತನ್ನ ಹೆಣ್ಣನ್ನು ಸಮಾಧಾನಪಡಿಸಲು ಅಗತ್ಯವಾದ ಸೌಂದರ್ಯ ಸಾಧನಗಳನ್ನೂ ಅನಗತ್ಯವಾದ ಅಲಂಕಾರಗಳನ್ನೂ, ಮನೆಯ ಚೆಂದವನ್ನೂ ಹೆಚ್ಚಿಸುತ್ತಾ ಹೋಗಲು ಹಲವು ಉದ್ಯಮಗಳನ್ನು ಸೃಷ್ಟಿಸುತ್ತಾನೆ. ನಾವು ದೇಶದ ಆರ್ಥಿಕ ಸಂಪತ್ತು ಎಂದು ತಿಳಿದಿರುವ ಎಷ್ಟೋ ದ್ರವ್ಯಗಳು ಸೃಷ್ಟಿಯಾಗುವುದು ಹೆಣ್ಣಿನ ಆಸೆಗಳನ್ನು ತೀರಿಸಲಿಕ್ಕಾಗಿ. ಈ ಆಸೆಗಳು ಹೆಣ್ಣಿನಲ್ಲಿ ಹುಟ್ಟಿರುವುದಕ್ಕೆ ಕಾರಣ ಗಂಡು ಅವಳನ್ನು ಕೇವಲ ಭೋಗದ ವಸ್ತುವಾಗಿ ಪರಿವರ್ತಿಸುವುದರ ಕಾರಣದಿಂದ.

ನನ್ನ ತಾತ್ಪರ್ಯ ರೂಪದ ವಿವರಣೆ ಇಲ್ಲಿ ಸರಳವಾಗಿದೆ. ಕಥೆ ಇನ್ನೂ ಗಾಢವಾಗಿದೆ. ತೀಟೆಯ ಸ್ವರೂಪದ ಕಾಮದ ಬಗ್ಗೆ ಟಾಲ್‌ಸ್ಟಾಯ್‌ಬರೆಯುವುದಲ್ಲ. ನಾವು ಯಾವುದನ್ನು ಉತ್ಕಟವಾದ ಪ್ರಣಯ ಎಂದು ತಿಳಿಯುತ್ತೇವೋ ಅದರ ಬಗ್ಗೆ ಅವನು ಚಿಂತಿಸುವುದು. ಗಂಡು ಹೆಣ್ಣಿನ ನಡುವಿನ ಪ್ರಣಯ ಉತ್ಕಟವಾದಷ್ಟೂ, ಒಬ್ಬರನ್ನೊಬ್ಬರು ನಾಶಮಾಡಿಕೊಳ್ಳುವ ವಿರಸಗಳೂ ಗಾಢವಾಗುತ್ತವೆ. ಕ್ರೂಟ್ಝರ್‌ಸೊನಾಟದಲ್ಲಿ ತನ್ನ ಹೆಂಡತಿಯನ್ನು ಕೊಂದವನು ಆಡುವ ಕೆಲವು ಮಾತುಗಳು ಬರುತ್ತವೆ :

‘ನಿತ್ಯದ ಯಾವ ಘಟನೆಯಾದರೂ ವಿರಸಕ್ಕೆ ಕಾರಣವಾಗುವುದುಂಟು. ಕುಡಿಯುವ ಕಾಫಿ, ಟೇಬಲ್ಲಿನ ಹೊದಿಕೆ, ಪ್ರಯಾಣದ ಸಾರೋಟು, ಇಸ್ಪೀಟಿನ ಆಟ – ಯಾವುದಾದರೂ. ನನ್ನೊಳಗೆ ಇದ್ದಕ್ಕಿದ್ದಂತೆ ದ್ವೇಷ ಮೊಳೆಯುತ್ತಿತ್ತು. ಅವಳು ಟೀಯನ್ನು ಸುರಿಯುವ ಕ್ರಮ, ಕಾಲಾಡಿಸುತ್ತ ಕೂತಿರುವ ಭಂಗಿ, ಅವಳು ತಿನ್ನುವಾಗ ಚಮಚವನ್ನು ಬಾಯಿಗೊಯ್ಯುವ ರೀತಿ, ತಿನ್ನುವುದನ್ನು ಚಪ್ಪರಿಸುತ್ತ ಮಾಡುವ ಶಬ್ದ – ಎಲ್ಲವೂ ನನ್ನಲ್ಲಿ ದ್ವೇಷವನ್ನು ಹುಟ್ಟಿಸುವ ಅವಳ ತಪ್ಪುಗಳಾಗಿ ಕಾಣತೊಡಗಿದುವು. ಈ ಬಗೆಯ ನನ್ನ ಜುಗುಪ್ಸೆಗೂ ನಮ್ಮ ನಡುವೆ ಇದ್ದ ತೀವ್ರವಾದ ದೈಹಿಕ ಆಕರ್ಷಣೆಗೂ ಇರುವ ಸಂಬಂಧವನ್ನೂ ನಾನು ಮೊದಲು ಗಮನಿಸಿರಲಿಲ್ಲ. ಪ್ರೀತಿ ಮಾಡುವ ಮಾರ್ದವದ ದಿನಗಳು, ತಿರಸ್ಕಾರದ ದಿನಗಳು, ಉತ್ಕಟವಾದ ಬಯಕೆಯಿಂದ ನಮ್ಮ ಮೈಗಳು ಕೂಡುವ ಕ್ಷಣಗಳು, ದೀರ್ಘಕಾಲದ ತಾತ್ಸಾರ, ಲಘುವಾದ ಪ್ರಣಯ, ಕೆಲವು ಕ್ಷಣಗಳ ಕಹಿ – ಇವು ಅದಲು – ಬದಲಾಗಿ ಮಾರ್ಪಡುವ ಸರಣಿಗಳಾಗಿದ್ದವು. ನಾವಿಬ್ಬರೂ ಒಬ್ಬರನ್ನೊಬ್ಬರು ಬಂಧಿಸಿಕೊಂಡ ಕೈದಿಗಳಂತಿದ್ದೆವು. ಅದೇ ಕೈಕೋಳ ಇಬ್ಬರಿಗೂ. ಒಬ್ಬರನ್ನೊಬ್ಬರು ನಾಶ ಮಾಡುತ್ತಿದ್ದೇವೆಂದು ನಾವು ಗಮನಿಸದೇ ಹತ್ತರಲ್ಲಿ ಒಂಬತ್ತು ಸಂಸಾರಗಳು ನಮ್ಮಂತೆಯೇ ನರಳುವ ನರಕದಲ್ಲಿ ಇರುತ್ತವೆಂದು ತಿಳಿಯದಂತೆಯೇ ನಾವು ಬದುಕಿದೆವು.’

ಇದನ್ನು ಓದಿದ ಸೋಫಿ ತನ್ನ ದಿನಚರಿಯಲ್ಲಿ ಬರೆಯುತ್ತಾಳೆ: ‘ತನ್ನನ್ನು ತಾನೇ ಹಿಂಸಿಸಿಕೊಂಡು ಅವನು ನಾಶವಾಗುತ್ತಿದ್ದಾನೆ. ನನಗೆ ಆಶ್ಚರ್ಯ: ಇವನು ಮಾಂಸ ತಿನ್ನುವುದಿಲ್ಲ. ಧೂಮಪಾನ ಮಾಡುವುದಿಲ್ಲ. ತನ್ನ ಶಕ್ತಿ ಮೀರಿ ಕೆಲಸ ಮಾಡುತ್ತಾನೆ. (ಕೌಂಟ್‌ಟಾಲ್‌ಸ್ಟಾಯ್ ಸಾಮಾನ್ಯ ರೈತನಂತೆ ಹೊಲದಲ್ಲಿ ದುಡಿಯಲು ತೊಡಗಿದ್ದ.) ಇಂಥವನು ಸಸ್ಯಹಾರಿಯಾಗಿರುವುದು ಎಂತಹ ಮೂರ್ಖತನ! ದೇಹದ ಎಲ್ಲ ಆಸೆಗಳನ್ನೂ ಬತ್ತಿಸಿ ಒಣಗುವುದೆ? ಹೀಗೆ ನಿಧಾನವಾಗಿ ಸಾಯುವುದರ ಬದಲು ಯಾಕೆ ಆತ್ಮಹತ್ಯೆ ಮಾಡಿಕೊಂಡು ಇವನು ಸಾಯಬಾರದು?’

ಟಾಲ್‌ಸ್ಟಾಯ್‌ಬಯಸಿದ್ದು ಇದು: ದೀನರಲ್ಲಿ ದೀನನಾಗಬೇಕು. ಶುದ್ಧವಾಗಬೇಕು. ಎಲ್ಲ ತೀಟೆಗಳಿಂದೆ –  ಮದ್ಯ, ಕಾಮ, ಕೀರ್ತಿ –  ಎಲ್ಲದರಿಂದ ಮುಕ್ತನಾಗಬೇಕು.

ಯೌವನದಲ್ಲಿ ಜಬರದಸ್ತಿನಿಂದ ಬದುಕಿದ ಟಾಲ್‌ಸ್ಟಾಯ್ ತನ್ನ ಶಿಷ್ಯರ ಕುಮ್ಮಕ್ಕಿನಲ್ಲಿ ಹೀಗಾಗುವ ಒತ್ತಡಕ್ಕೆ ಒಲ್ಲದೆ ಒಳಗಾದವನಂತೆ ಅವನ ಹೆಂಡತಿಗೆ ಮಾತ್ರವಲ್ಲ, ಅವನನ್ನು ಮೆಚ್ಚಿದ ಹಲವರಿಗೆ ಕಾಣತೊಡಗಿತು. ಇದೊಂದು ಹೊಸ ವೇಷವೆನ್ನಿಸಿತು. ಟಾಲ್‌ಸ್ಟಾಯ್‌ನನ್ನೂ ಗಾಂಧಿಯನ್ನು ಮೆಚ್ಚುತ್ತಲೆ ಕಟುವಾಗಿ ಟೀಕಿಸಿ ಅರ‍್ವೆಲ್ ಎಂಬ ಬರಹಗಾರ –  ದೀನನಾಗಲು ಸ್ವತಃ ಪ್ರಯತ್ನಿಸಿದ ಪ್ರಾಮಾಣಿಕ ನಿಷ್ಠುರ ಸತ್ಯವಾದಿ –  ತನ್ನನ್ನೇ ಟೀಕಿಸಿಕೊಳ್ಳುವಷ್ಟು ನಿರ್ದಯವಾಗಿ ಇವರನ್ನೂ ಟೀಕಿಸುತ್ತಾನೆ. ಸಹಜ ಮನುಷ್ಯ ಸ್ಥಿತಿಯನ್ನು ಕಳೆದುಕೊಂಡು ಸಂತನಾಗುವುದೂ ಅಹಮಿನ ತೀಟೆಯೇ. ಷೇಕ್ಸ್‌ಪಿಯರ್‌ನಂತೆ ಇರುವುದೆಲ್ಲವನ್ನೂ ಸಂಭ್ರಮದಲ್ಲಿ ಜೀವನದ ಲೀಲೆಯೆಂದು ಕಾಣುವುದು ಟಾಲ್‌ಸ್ಟಾಯ್‌ಗೆ ಅಪರಾಧದಂತೆ ತೋರಿರಬೇಕು – ಅವನ ಸಂತತನದ ದುರಾಸೆಯಲ್ಲಿ. ಕಿಂಗ್‌ಲಿಯರ್‌ನ ತ್ಯಾಗದ ಸೋಗಿನಲ್ಲಿ ಅಡಗಿದ ಅಹಮ್ಮಿನ ಅಬ್ಬರವನ್ನು ಷೇಕ್ಸ್‌ಪಿಯರ್‌ಬಯಲು ಮಾಡುವುದನ್ನು ಓದಿ, ತನ್ನದೇ ಆದ ಲಿಯರ್ ಬಗೆಯ ಅಹಮ್ಮಿನ ವಿಕಾರಗಳನ್ನು ಕಣ್ಣಿಟ್ಟು ನೋಡಲಾರದೆ ಟಾಲ್‌ಸ್ಟಾಯ್‌ಷೇಕ್ಸ್‌ಪಿಯರ್‌ನನ್ನು ಜರಿಯುತ್ತಾನೆಂದು ಅರ‍್ವೆಲ್‌ದೂಷಿಸುತ್ತಾನೆ.

ದೇವರ ಕಣ್ಣಲ್ಲಿ ತನ್ನ ಕಣ್ಣಲ್ಲಿ ತನಗೆ ಸಾಧ್ಯವಾದಷ್ಟು ನಿಗ್ರಹದಲ್ಲಿ ಬದುಕಬೇಕೆಂದು ಟಾಲ್‌ಸ್ಟಾಯ್ ಬಯಸಿದ್ದನೆಂಬುದನ್ನು ಅವನನ್ನು ಟೀಕಿಸುವವರು ಕಾಣುವುದಿಲ್ಲ; ಅವನ ಶಿಷ್ಯರೂ ಕಾಣುವುದಿಲ್ಲ. ಬ್ರಹ್ಮಚರ್ಯ ಸಂಕಲ್ಪವೇ ಹೊರತಾಗಿ ಮಾನವನಾದವನು ಮುಟ್ಟಬಹುದಾದ ಗುರಿಯಲ್ಲವೆಂದು ಟಾಲ್‌ಸ್ಟಾಯ್ ತನ್ನ ಸಮಾಧನದ ಕ್ಷಣಗಳಲ್ಲಿ ಹೇಳಿಕೊಳ್ಳುತ್ತಾನೆ. ಜೀವಕಾಮದ ಸಾಕ್ಷಿಯಾಗಿಯೇ, ಆತ್ಮಕಾಮದ ಸಾಧಕನಾಗಿಯೇ ಕೊನೆಗೊಂದು ದಿನ ಟಾಲ್‌ಸ್ಟಾಯ್‌ತನ್ನ ಕಿರಿಯ ಮಗಳ ಜೊತೆ ಯಾರಿಗೂ ತಿಳಿಯದಂತೆ ಗೃಹತ್ಯಾಗ ಮಾಡಿದ. ಅವನನ್ನು ಬಿಟ್ಟಿರಲಾರದೆ ಅಟ್ಟಿಬಂದ ಹೆಂಡತಿಗೆ ಮುಖ ತೋರದೆ ಯಾವದೋ ರೈಲ್ವೆ ನಿಲ್ದಾಣದಲ್ಲಿ ತನ್ನ ಎಂಬತ್ತೆರಡನೇ ವಯಸ್ಸಿನಲ್ಲಿ ಟಾಲ್‌ಸ್ಟಾಯ್‌ಜರ್ಜರಿತನಾಗಿ ದೀನನಾಗಿ ಸತ್ತ. ಇವನ ಮಹಾನ್ ಪ್ರತಿಭೆಯನ್ನು ಅರಿತಿದ್ದ ಲಾರೆನ್ಸನೂ ಗಂಡು ಹೆಣ್ಣಿನ ಉತ್ಕಟ ಪ್ರೀತಿಯ ಸಮಸ್ಯೆಗಳನ್ನೂ ಅರಿತಿದ್ದವನೇ. ಆದರೆ ಇವನು ಟಾಲ್‌ಸ್ಟಾಯ್‌ನಷ್ಟು ಉತ್ಕಟವಾದ ಕಾಮವನ್ನು ಸೃಷ್ಟಿಸಿದವನಲ್ಲ. ರಷ್ಯಾದ, ಏಕೆ ಇಡೀ ಯುರೋಪಿನ ಆ ಕಾಲದ ಅತಿಶ್ರೇಷ್ಠ ಲೇಖಕನಾದ ಟಾಲ್‌ಸ್ಟಾಯ್ ಕುದುರೆ ಸವಾರಿಯನ್ನೂ ಹುಲ್ಲು ಕೊಯ್ಯುವ ಕಾಯಕವನ್ನೂ ಒಬ್ಬ ಮಹಾನ್ ಕಾಮಿಯಂತೆ ವರ್ಣಿಸಬಲ್ಲವನಾಗಿದ್ದ. ಲಾರೆನ್ಸನೂ ತನ್ನ ಕಾಲದ ಯಾಂತ್ರಿಕ ನಾಗರಿಕತೆಯ ಕೃತಕತೆಯನ್ನು ಧಿಕ್ಕರಿಸಿ ಪ್ರೇಮದ ಆರಾಧಕನಂತೆ ಕಂಡರೂ ಗಂಡು ಮತ್ತು ಹೆಣ್ಣು ತಮ್ಮ ಉತ್ಕಟ ಜೀವಕಾಮದಲ್ಲಿ ಒಬ್ಬರನ್ನೊಬ್ಬರು ಆಕರ್ಷಿಸಿದರೂ, ತನ್ಮಯದ ಪ್ರೇಮದಲ್ಲಿ ಒಂದಾಗಲಾರರು, ಎರಡು ನಕ್ಷತ್ರಗಳಂತೆ ಆಕರ್ಷಣೆಯಲ್ಲೂ ದೂರ ಕಳೆದುಕೊಳ್ಳದಂತೆ ಬಿಡಿಯಾಗಿ ಇಡಿಯಾಗಿ ತಮ್ಮ ತಮ್ಮ ವಲಯದಲ್ಲಿ ಇರಬೇಕಾದವರು ಎನ್ನುತ್ತಾನೆ. ‘ಪ್ರಜಾಯೈಹಿ ಗೃಹಮೇದಿನಾ’ – ವಂಶವನ್ನು ಮುಂದುವರಿಸಬೇಕಾದ ಕರ್ತವ್ಯಕ್ಕಗಿ ಮದುವೆಯಾಗುತ್ತಿದ್ದವರು ರಘುವಿನ ವಂಶದವರು ಎಂದು ಕಾಳಿದಾಸ ಹೇಳುತ್ತಾನೆ. (ಟಾಲ್‌ಸ್ಟಾಯನೂ ತನ್ನ ಶಿಷ್ಯರ ಶಿಕ್ಷಣಕ್ಕಾಗಿ ಹೀಗೆ ಹೇಳಬಹುದಿತ್ತು.) ಆರೆ ಪ್ರಣಯವನ್ನೂ ವಿರಹವನ್ನೂ ತನ್ನ ಮೂಲದ್ರವ್ಯವಾಗಿ ಪಡೆದಿದ್ದ ಕಾಳಿದಾಸ ತಾನು ಹೇಳಿದಷ್ಟು ಮಾತ್ರ ಜೀವನದ ಸತ್ಯವೆನ್ನಲಾರ ಎನ್ನಿಸುತ್ತದೆ. ಟಾಲ್‌ಸ್ಟಾಯನೂ ಕಾಮವನ್ನು ಅದುಮಲು ಪ್ರಯತ್ನಿಸಿ ಗೆಲ್ಲಲಾರದೆ ಸೋಲಲಾರದೆ ನಾವು ಕಾಣಲೊಲ್ಲದ ಸತ್ಯಗಳನ್ನು ಕಂಡವನು.

೫-೧೧-೨೦೦೬

* * *