ಎಡ್ವರ್ಡ್‌ ಅಪ್ವರ್ಡ್‌ ಎಂಬಾತನಿಗೆ ಈಗ ಒಂದು ನೂರಾ ಮೂರು ವರ್ಷ. ಮುವ್ವತ್ತರ ದಶಕದ ಇಂಗ್ಲೆಂಡಿನ ಕಮ್ಯುನಿಸಂಗೆ ಒಲಿದ ಲೇಖಕನೊಬ್ಬ ಪಳೆಯುಳಿಕೆಯಂತೆ ಸಾಯದೇ ಉಳಿದಿದ್ದಾನೆ ಎಂದು ಅಚ್ಚರಿಪಡುತ್ತಲೇ ಹಳಿಯುವ ಅವನ ನಿಂದಕರನ್ನೂ, ರಷ್ಯಾ ಮತ್ತು ಚೀನಾದ ಕಮ್ಯುನಿಸ್ಟರು ಕ್ರಾಂತಿಪಥ ಬಿಟ್ಟರೂ ತಾನು ಬಿಡೆನೆಂದು ಲೆನಿನ್‌ಗೆ ನಿಷ್ಠನಾಗಿ ಉಳಿದ ೧೯೦೩ ರಲ್ಲಿ ಹುಟ್ಟಿದ ಈ ಲೇಖಕನನ್ನು ಹೊಗಳುವವರನ್ನೂ ಇಂಟರ್‌ನೆಟ್‌ನಲ್ಲಿ ಓದಿ, ಅರವತ್ತರ ದಶಕದಲ್ಲಿ ನನಗೆ ಪರಿಚಿತನಾಗಿ ಸ್ನೇಹಿತನೂ ಆದ, ನನ್ನ ರಿಸರ್ಚ್‌ನ ವಸ್ತುವೂ ಆದ ಎಡ್ವರ್ಡ್‌ ಅಪ್ವರ್ಡ್ ಬಗ್ಗೆ ಈಗ ಬರೆಯಲು ಕೂತಿದ್ದೆನೆ.

ಬಹು ಖ್ಯಾತರಾದ ಆಡೆನ್, ಇಷರ್‌ವುಡ್ ಮತ್ತು ಸ್ಟೀಫೆನ್ ಸ್ಪೆಂಡರ್‌ಗೆ ಈತ ಗುರು ಹಾಗೂ ಗೆಳೆಯ. ಅವರು ಹೆಸರು ಮಾಡಿದರು; ಆದರೆ ಈಗ ಅಜ್ಞಾತನಾಗಿ ಉಳಿದ. ಫ್ಯಾಸಿಸಂ ಬೆಳೆಯುತ್ತ ಇದ್ದ ಕಾಲದಲ್ಲಿ ಈತನ ಪ್ರಭಾವದಲ್ಲಿ ಕಮ್ಯುನಿಸಂಗೆ ಈ ಲೇಖಕರು ಒಲಿದರು. ಆಮೇಲೆ ಬೇರೆ ಬೇರೆ ಮಾರ್ಗಗಳಲ್ಲಿ ಬೆಳೆದರು. ಇಷರ್‌ವುಡ್ ಪರಮಹಂಸರ ಭಕ್ತನಾದ; ಆಡೆನ್ ಕ್ರೈಸ್ತಧರ್ಮಕ್ಕೆ ಅಸ್ತಿತ್ವವಾದದ ನೆಲೆಯಲ್ಲಿ ಹತ್ತಿರದವನಾದ, ಸ್ಪೆಂಡರ್ ಯುದ್ಧಾನಂತರದ ಪ್ರಸಿದ್ಧ ಮಾಸಪತ್ರಿಕೆಯಾದ ‘ಎನ್‌ಕೌಂಟರ್‌’ನ ಸಂಪಾದಕನಾಗಿ ಪೂರ್ವ ಐರೋಪ್ಯ ಲೇಖಕರ ಸ್ವಾತಂತ್ರ್ಯಕ್ಕಾಗಿ ಕಮ್ಯುನಿಸ್ಟ್‌ವ್ಯವಸ್ಥೆಗಳ ವಿರುದ್ಧ ಎಲ್ಲರೂ ಮೆಚ್ಚುವ ಸಂಗ್ರಾಮ ಹೂಡಿದ.

ಸ್ಟಾಲಿನ್ – ಹಿಟ್ಲರ್‌ಸಂಧಾನದ ನಂತರ ತತ್ವಕ್ಕೆ ಬದ್ಧನಾದ ಸಿದ್ಧಾಂತಿಯಾಗಿ, ಪಕ್ಷದಿಂದ ದೂರವಾಗತೊಡಗಿದ ಅಪ್ವರ್ಡ್, ಸೋವಿಯತ್‌ ಯೂನಿಯನ್ ಹಂಗೆರಿಯನ್ನು ಆಕ್ರಮಣ ಮಾಡಿದಾಗ, ಅಂತಃಕರಣದ ಪಿಸುಮಾತಿಗೆ ಕಿವಿಗೊಡುವ ಲೇಖಕನಾಗಿ ಹಲವರಂತೆ ಸೋವಿಯತ್‌ಒಕ್ಕೂಟದ ವಿಕಾರಗಳನ್ನು ತಡೆದುಕೊಳ್ಳಲಾರದೆ ಪಕ್ಷವನ್ನೇ ಬಿಟ್ಟ; ಕಮ್ಯೂನಿಸ್ಟ್ ಸಿದ್ಧಾಂತದಲ್ಲಿ ಮಾತ್ರ ನಂಬಿಕೆ ಕಳೆದುಕೊಳ್ಳಲಿಲ್ಲ. ಆದರೆ ಸಾಹಿತಿಯಾಗಿ ಬ್ರೆಕ್ಟ್‌ನಂತೆ ಅದನ್ನು ಕೃತಿಯಲ್ಲಿ ಪ್ರತ್ಯಕ್ಷಗೊಳಿಸುವ ಕ್ರಮ ಸೃಷ್ಟಿಸಿಕೊಳ್ಳಲಾರದೆ, ಕಾರ್ಮಿಕ ವರ್ಗಕ್ಕೂ ಹತ್ತಿರವಾಗಲಾರದೆ, ಕಾಲಧರ್ಮಕ್ಕೆ ಒಗ್ಗಿಕೊಳ್ಳಲಾರದೆ ಸುಮ್ಮನಿದ್ದುಬಿಟ್ಟ. ನಾನು ಅವನನ್ನು ಭೇಟಿಯಾದಾಗ ಸಿದ್ಧಾಂತಕ್ಕೆ ಬದ್ಧನಾಗಿದ್ದು ಪಕ್ಷವನ್ನು ಮಾತ್ರ ಬಿಟ್ಟಿದ್ದ; ತನ್ನ ತ್ರಿವಳಿ ಕಾದಂಬರಿಗೆ ಅಗತ್ಯವಾದ ಶೈಲಿಯ ಹುಡುಕಾಟದಲ್ಲಿದ್ದ.

ಸ್ಪೆಂಡರ್‌ನ ಪತ್ರಿಕೆ ನಡೆಯುವುದು ಸಿಐಐ ಗುಪ್ತದಳದ ಹಣದಿಂದ ಎಂದು ಒಂದು ದೂರಿತ್ತು. ಅದನ್ನು ಅಲ್ಲಗಳೆಯುತ್ತಿದ್ದ ಸ್ಪೆಂಡರ್‌ ಕೊನೆಗೆ ಅದು ನಿಜವೆಂದು ತಿಳಿದು ಸಂಪಾದಕ ಕೆಲಸಕ್ಕೆ ರಾಜೀನಾಮೆ ಕೊಟ್ಟ. ನನಗೆ ಪ್ರಿಯರಾದ ಎ.ಬಿ.ಶಾ. ನಡೆಸುತ್ತಿದ್ದ ಕ್ವೆಸ್ಟ್ ಎಂಬ ಪತ್ರಿಕೆಗೂ, ಜಯಪ್ರಕಾಶ ನಾರಾಯಣರು ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಫಾರ್ ಕಲ್ಚರಲ್ ಫ್ರೀಡಂ ಎನ್ನುವ ಸಂಸ್ಥೆಗೂ ಸಿಐಐ ಹಣ ಬರುತ್ತಾ ಇತ್ತು ಎಂಬ ದೂರಿತ್ತು. ೧೯೫೭ನೆಯ ಇಸವಿ ಇರಬೇಕು. ನಾನು ಕಷ್ಟದಲ್ಲಿ ಸಾಲ ಮಾಡಿ ಎಂ.ಎ. ಓದುತ್ತ ಇದ್ದ ಸಮಯದಲ್ಲಿ ಭಾಷಾಂತರಗೊಂಡ ನನ್ನ ‘ಪ್ರಕೃತಿ’ ಎಂಬ ಕಥೆಗೆ ಕ್ವೆಸ್ಟ್‌ನಿಂದ ೫೦೦ ರೂಪಾಯಿ ಗೌರವ ಧನ ಪಡೆದು ಬಹಳ ಸುಖಿಸಿದ್ದೆ: ಆಶ್ಚರ್ಯಪಟ್ಟಿದ್ದೆ. ಇದು ಸಿಐಐ ಹಣವೇ ಇರಬಹುದು. ನನಗದು ಆಗ ಹೊಳೆದೇ ಇರಲಿಲ್ಲ. ನಾನು ಆಗ ಭಾವನೆಯಲ್ಲೂ ಚಿಂತನೆಯಲ್ಲೂ ಸೋಷಲಿಸ್ಟ್‌ ರಷ್ಯಾ ಮತ್ತು ಅಮೆರಿಕಾ ಎರಡನ್ನೂ ಸಮದೂರದಲ್ಲಿ ಇಡಬೇಕೆಂಬ ಲೋಹಿಯಾ ತತ್ವ ನಂಬಿದವನು. ಇದೊಂದು ಐರನಿ. ಆ ಕಾಲದಲ್ಲಿ ಒಂದೋ ಸೋವಿಯತ್‌ ಯೂನಿಯನ್ನಿನಿಂದ ಅಥವಾ ಅಮೆರಿಕಾದಿಂದ ಹಣ ಪಡೆದು ಕೆಲವರು ತಿಳಿದೋ, ತಿಳಿಯದೆಯೋ, ತಿಳಿದಿದ್ದರೂ ತಿಳಿಯದವರಂತೆಯೋ ದೇಶಸೇವೆ ಮಾಡುತ್ತಾ ಇದ್ದವರೇ. ಈಗ ಹಲವರು ಜನಸೇವೆ ಮಾಡುವುದು ಅಮೆರಿಕಾದಿಂದ ಹಣ ಪಡೆದು ಅಥವಾ ಅರಬ್ ದೇಶಗಳಿಂದ ಹಣ ಪಡೆದು. (ಹಿಂದೆ ಸದ್ದಾಂ ಹುಸೇನ್‌ನಿಂದ ಹಣ ಪಡೆದು ಅಥವಾ ಶಸ್ತ್ರಾಸ್ತ್ರಕೊಳ್ಳುವಾಗ ಕಿಕ್‌ಬ್ಯಾಕ್‌ಪಡೆದು, ಬೆಕ್ಕಿನಂತೆ ಕಣ್ಣುಮುಚ್ಚಿ ಹಾಲು ಕುಡಿದು, ರಾಜಾರೋಷವಾಗಿ, ನಾಚಿಕೆಯಿಲ್ಲದೆ, ಸರ್ಕಾರದ ಅನುಮತಿಯನ್ನೂ ಪಡೆದು). ಮೇಧಾ ಪಾಟ್ಕರ್ ಮಾತ್ರ ಇದಕ್ಕೆ ವಿನಾಯಿತಿಯೆಂದು ನಾನು ತಿಳಿದಿದ್ದೇನೆ.

ದುರ್ದಾನ ಹಿಡಿಯಲು ಈಗ ಯಾರೂ ಅಂಜುವುದಿಲ್ಲ. ಪ್ರಾಯಶ್ಚಿತ್ತವಾಗಿ ಮಕ್ಕಳು, ಬಡವರು, ವಿಧವೆಯರು ಎಂದು ಸೆಲ್‌ಫೋನ್ ಹಿಡಿದು ದೇಶಾದ್ಯಂತ ಸುತ್ತಾಡುತ್ತ ಇವರು ಕಣ್ಣೀರು ಸುರಿಸುವುದು ಮಾಧ್ಯಮಗಳಲ್ಲಿ ತೋರಿದರೆ ಪ್ರಾಯಶ್ಚಿತ್ತವಾದಂತೆ ಅಲ್ಲವೆ? ತಾತ್ವಿಕವಾಗಿ ಬಂಡಾಯ ಸಂಸ್ಥೆಗೆ ಸೇರಿದವನಾದರೆ ಸಾಲದೆ?

ಅಪ್ವರ್ಡ್‌ ವಿಷಯಕ್ಕೆ ಹಿಂದಿರುಗುವೆ. ಕಾಫ್ಕಾನನ್ನು ಓದುವ ಮುಂಚೆ ಕಾಫ್ಕಾ ತರಹದ ಸ್ವಪ್ನಶೀಲ ಕಥೆಯೊಂದನ್ನು ಇವನು ಬರೆದಿದ್ದ. ಮುವ್ವತ್ತರ ದಶಕದಲ್ಲಿ ಅದರ ಹೆಸರು ‘ರೈಲ್ವೇ ಆಕ್ಸಿಡೆಂಟ್’. ಆದರೆ ಸೋಷಲಿಸ್ಟ್ ರಿಯಲಿಸಂಗೆ ಒಲಿಯುತ್ತ ಹೋದ ಅಪ್ವರ್ಡ್ ತನ್ನೊಳಗಿನ ಸೃಜನಶೀಲತೆಯನ್ನೇ ಮಧ್ಯಮವರ್ಗದ ಲಂಪಟತನವೆಂದು ತಿಳಿದು ಆ ಕಾಲಕ್ಕೆ ವಿಚಿತ್ರವಾದ, ಕಾಫ್ಕ ಗೊತ್ತಾಗುವುದಕ್ಕಿಂತ ಮುಂಚೆ ಕಾಫ್ಕ ಬರವಣಿಗೆಯ ಸ್ವರೂಪದಲ್ಲಿದ್ದ ತನ್ನ ಕೃತಿಯನ್ನು ಪ್ರಕಟಿಸಲೂ ಇಚ್ಛಿಸಲಿಲ್ಲ.

ಅವನ ಆತ್ಮೀಯ ಗೆಳೆಯನಾಗಿದ್ದ ಇಷರ್‌ವುಡ್‌ನ ಜೊತೆ ಇವನು ಆಕ್ಸ್‌ಫರ್ಡ್‌ನಲ್ಲಿ ಓದಿದ್ದು. ಈ ದಿನಗಳ ಬಗ್ಗೆ ಇಶರ್‌ವುಡ್‌ರೋಚಕವಾದೊಂದು ಕಟ್ಟುಕಥೆ ಬರೆದಿದ್ದಾನೆ. (Lions and Shadows). ಅಪ್ವರ್ಡ್ ಇದರಲ್ಲಿ ಛಾಮರ್ಸ್ ಎಂಬ ಪಾತ್ರ. ಇವನೂ ಇಶರ್‌ವುಡ್‌ನೂ ಕೂಡಿ ಮಾರ್ಟ್‌ಮಿಯರ್‌ಎಂಬ ಕಲ್ಪನಾ ಲೋಕವೊಂದನ್ನು ಕಟ್ಟಿಕೊಳ್ಳುತ್ತಾರೆ. ಇವರು ದ್ವೇಷಿಸುವ ವಿಐಪಿಗಳಾದ ಸಭ್ಯಸೋಗಿನ ಯಶಸ್ವಿಗಳೆಲ್ಲರೂ ಈ ಕಲ್ಪನಾಲೋಕದ ವಿಲನ್ ಪಾತ್ರಗಳಾಗುತ್ತಾರೆ. ಕಪಟದ ತಮ್ಮ ಯೂನಿವರ್ಸಿಟಿಯ ತೋರುಗಾಣಿಕೆಗಳನ್ನು ಈ ಇಬ್ಬರೇ ಒಂದು ಗುಪ್ತಲೋಕದ ಹೀರೋಗಳಾಗಿ ಅಣಕಿಸುತ್ತ ಬದುಕುತ್ತಾರೆ. ಇದು ಯಾವ ಮಟ್ಟ ಮುಟ್ಟುತ್ತದೆಂದರೆ ಇಶರ್‌ವುಡ್ ಪರೀಕ್ಷೆಯಲ್ಲಿ ಬೇಕೆಂದೇ ಅಸಂಬದ್ಧ ಉತ್ತರಗಳನ್ನು ಬರೆದು ಫೇಲಾಗುತ್ತಾನೆ. ಸುಳ್ಳಿನ ಪೋಷೋಕ್ರಸಿಯ (Poschocrasy) ಮೇಲೆ ಅವನ ರಿವೆಂಜ್ ಇದು.

ಹಿಟ್ಲರ್ ಜರ್ಮನಿಯಲ್ಲಿ ಬಲವಾಗುತ್ತ ಹೋದ ಕಾಲವಿದು ಎಂಬುದನ್ನು ನೆನಪಿಟ್ಟುಕೊಂಡು ನಾನು ಮುಂದೆ ಬರೆಯುವುದನ್ನೆಲ್ಲ ಓದಬೇಕು. ಯಹೂದ್ಯರನ್ನು ಕುರಿಮಂದೆಯಂತೆ ಕ್ಯಾಂಪ್‌ಗಳಿಗೆ ಸಾಗಿಸಿ, ಹಗಲಿಡೀ ದುಡಿಸಿ, ಮಕ್ಕಳು ಮುದುಕರೆನ್ನದೆ ದುಡಿಯುವಷ್ಟು ದುಡಿಸಿ, ಗ್ಯಾಸ್ ಛೇಂಬರ್‌ಗಳಿಗೆ ಅವರನ್ನು ನೂಕಿ, ವಿಷ ವಾಯುವಿನಿಂದ ಸಾಯಿಸಿ, ಬೇಯಿಸಿ, ಅವರ ಎಲುಬುಗಳಿಂದ ಅಂಗಿ ಗುಂಡಿಗಳನ್ನೂ ಅವರ ತಲೆಬುರುಡೆಗಳಿಂದ ಆಶ್‌ಟ್ರೇಗಳನ್ನೂ ಮಾಡಿ ಜರ್ಮನ್ ಆರ್ಯರು ಬಳಸಿದ ಕಾಲವದು. ಸ್ಟಾಲಿನ್ ರಷ್ಯಾದಲ್ಲಿ ದೇಶದ ಪ್ರಗತಿಗಾಗಿ, ಬಡಜನರ ವಿಮೋಚನೆಗಾಗಿ ತನ್ನ ಸರ್ವಾಧಿಕಾರ ಒಪ್ಪದವರನ್ನು ಸೈಬೀರಿಯಾಕ್ಕೆ ಕಳಿಸಿ, ಕಾನ್ಸೆಂಟ್ರೇಶನ್ ಕ್ಯಾಂಪುಗಳಲ್ಲಿ ದುಡಿಸಿದ ಕಾಲವದು; ಅಪ್ಪಟ ಕಮ್ಯುನಿಸ್ಟರಾಗಿದ್ದ ತನ್ನ ಜೊತೆಯವರ ಮೇಲೆ ಸುಳ್ಳು ಆಪಾದನೆಗಳನ್ನು ಹೊರಿಸಿ, ಅವರೂ ಆ ಆಪಾದನೆಗಳನ್ನು ಒಪ್ಪುವಂತೆ ಮಿದುಳು ಮಾರ್ಜನಗೊಳಿಸಿ ಕೊಂದ ಕಾಲವದು. ಹಿಟ್ಲರ್‌ನಂಥ ರಾಕ್ಷಸನನ್ನು ಸದೆಬಡಿಯಲು ಸ್ಟಾಲಿನ್‌ನಂಥ ಅಪ್ಪಟ ಲೆನಿನ್ ವಾದಿ ಉಪಾಯಗಾರನಾದ ದೃಢಚಿತ್ತನ ಅಗತ್ಯವಿದೆ ಎಂದು ಸಜ್ಜನರಾದ ಕಮ್ಯುನಿಸ್ಟರು –  ಜಾರ್ಜ್ ಥಾಮ್ಸನ್‌ರಂಥವರು –  ತಿಳಿದಿದ್ದ ಕಾಲವದು (ಜಾರ್ಜ್‌ – ಥಾಮ್‌ಸನ್ ಬಗ್ಗೆ ಮುಂದೆ ಹೆಚ್ಚು ವಿವರಗಳಿವೆ). ತನ್ನ ನೂರಾ ಮೂರನೇ ವಯಸ್ಸಿನಲ್ಲೂ ಎಡ್ವರ್ಡ್‌ಅಪ್ವರ್ಡ್, ‘ಹಿಟ್ಲರ್‌ನಿಗಿಂತ ಸ್ಟಾಲಿನ್ ವಾಸಿ – ಇಬ್ಬರನ್ನೂ ಒಂದೇ ಬಗೆಯಲ್ಲಿ ನೋಡಕೂಡದು’ ಎನ್ನುತ್ತಾನಂತೆ.

ಎರಡು ಬಗೆಯ ಅಮಾನುಷತೆಗಳಲ್ಲಿ ಒಂದನ್ನು ಆಯುವಂತೆ ತಮ್ಮ ನಾಗರೀಕತೆಯನ್ನು ಕಟ್ಟುತ್ತ ಹೋಗಿರುವ, ನಮಗೂ ಹಾಗೆ ಕಟ್ಟುವಂತೆ ಪ್ರೇರೇಪಿಸುತ್ತ ಇರುವ ಐರೋಪ್ಯ ಇತಿಹಾಸದ ಬಗ್ಗೆಯೇ ನಾವು ಅನುಮಾನಿಸಬೇಕಾಗಿದೆ. ಆದರೆ ನೋಡಿ: ನಾವೂ ಚೀನೀಯರೂ ಜಪಾನೀಯರೂ ಅವರ ಹಾಗೇ ನಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಿದ್ದೇವೆ. ರಾವಿನಲ್ಲಿ, ರಾಷ್ಟ್ರೀಯತೆಯ ನೆವದಲ್ಲಿ, ಪ್ರಗತಿಯ ಹುಂಬ ಉತ್ಸಾಹದಲ್ಲಿ ಮತೀಯತೆ ಹುರುಪಿನಲ್ಲಿ. ಈ ನಾಲ್ಕೂ ಬೇರೆ ಬೇರೆ ಇರಲಾರದು.

ಅಪ್ವರ್ಡ್ ಈ ಕಲ್ಪನಾ ಲೋಕದಿಂದ ಹೊರಬಂದು ತನ್ನ ಮಧ್ಯಮವರ್ಗದ ಸೋಗಲಾಡಿತನವನ್ನು ಕಳೆದುಕೊಂಡು, ಜೊತೆಗೇ ಕಲ್ಪನಾಶೀಲವಾದ ಅಡಾಲಸೆಂಟಿನ ಲಂಪಟತನವನ್ನೂ ಕಳೆದುಕೊಂಡು ಕಾಲದ ನಿಜಗಳಿಗೆ ಹತ್ತಿರವಾಗಲು ಬಯಸುತ್ತಾನೆ. ಕೂಲಿಕಾರ್ಮಿಕರಿಗೆ ಹತ್ತಿರವಾಗಲೆಂದು, ತನ್ನ ಅರಿಯುವ ಕ್ರಮವನ್ನೇ ಬದಲಾಯಿಸಿಕೊಳ್ಳ ಬೇಕೆಂದು ಕಮ್ಯುನಿಸ್ಟ್ ಪಕ್ಷ ಸೇರಿ ಕಾರ್ಮಿಕರಿಗಾಗಿ ತನ್ನ ಕಾಯಕ ಪ್ರಾರಂಭಿಸುತ್ತಾನೆ. ಇದೇ ಕಾಲದಲ್ಲಿ ಆರ್ವೆಲ್ಲನೂ ತನ್ನ ಮಧ್ಯವರ್ಗೀಯ ಗುಣಗಳನ್ನು ಕಳೆದುಕೊಳ್ಳಲೆಂದು ಬರ್ಮದಲ್ಲಿ ಪೊಲೀಸ್ ಆಫೀಸರಾಗಿದ್ದವನು ಹಿಂದೆ ಬಂದು ಲಂಡನ್ ಮತ್ತು ಪ್ಯಾರೀಸ್‌ಗಳಲ್ಲಿ ಭಿಕ್ಷುಕನಾಗಿ ಅಲೆಯುತ್ತಾನೆ. ಆಡೆನ್, ಸ್ಪೆಂಡರರು ಸ್ಪೇನ್‌ನಲ್ಲಿ ಸರ್ವಾಧಿಕಾರದ ವಿರುದ್ಧ ಹೋರಾಡಲು ಆರ್ವೆಲ್‌ನಂತೆಯೇ ರಿಪಬ್ಲಿಕನ್ ಬಣ ಸೇರಿ ಹೋರಾಡಲು ಹೋಗುತ್ತಾರೆ. ‘ಕಾವ್ಯದಲ್ಲಿ ಏಳು ಬಗೆಗಳ ಸಂದಿಗ್ಧತೆಗಳು’ ಎನ್ನುವ (ಈ ಪುಸ್ತಕವೇ ಎಂಟನೇ ಬಗೆಯ ಸಂದಿಗ್ಧತೆ ಎನ್ನಿಸುವಂತಿರುವ), ನನಗೆ ಗೆಳೆಯ ರಾಜೀವ ತಾರಾನಾಥರ ಅರವತ್ತರ ದಶಕದ ಪ್ರಾರಂಭದ ಬರವಣಿಗೆಯನ್ನು ನೆನಪು ಮಾಡಿಸುತ್ತಿದ್ದ ವಿಲಿಯಮ್ ಎಂಪ್ಸನ್‌ನಂತಹ (ಮುಂದೆ ನಮ್ಮ ಡಿ.ಎಸ್. ಶಂಕರರ ಗೈಡ್ ಅದವ) ನವ್ಯಾತಿನವ್ಯ ಲೇಖಕನೇ, ಮುವ್ವತ್ತರ ದಶಕದ ಆತ್ಮಪ್ರತ್ಯಯದ ಈ ಕ್ರೈಸಿಸ್‌ನಲ್ಲಿ ಜನಸಂದಣಿಯ ಪ್ರದೇಶಗಳಲ್ಲಿ ನೋಟ್‌ಬುಕ್ ಹಿಡಿದು ನಿಂತು ಬಡಜನರ ದೈನಿಕ ಚಟುವಟಿಕೆಗಳನ್ನು ಕಂಡಿದ್ದನ್ನು ಕಂಡಂತೆ ದಾಖಲಿಸಲು ತೊಡಗಿದ್ದ. ತನ್ನ ಅರಿಯುವ ಬಗೆಯನ್ನೇ ಬದಲಿಸಿಕೊಳ್ಳಲೆಂದು, ಮಧ್ಯಮ ವರ್ಗದ ಲೇಖಕರಲ್ಲಿ ಬದುಕನ್ನು ಗ್ರಹಿಸುವ ತಮ್ಮ ಇಂಗಿತ ಜ್ಞಾನದ ಬಗ್ಗೆಯೇ ಅನುಮಾನ ಹುಟ್ಟಿದ್ದ ಕಾಲ ಅದು.

ಇಷರ್‌ವುಡ್‌ನ ಒಂದು ಫೇಮಸ್ ಮಾತಿದೆ” ಇರುವುದನ್ನು ಇದ್ದಂತೆ ಗ್ರಹಿಸುವ ಕ್ಯಾಮರಾ ಕಣ್ಣು ನನ್ನದು. ನನ್ನದೆಂದು ಹೇಳುವುದು ಏನೂ ಇಲ್ಲ.’ ಆದರೆ ಕ್ಯಾಮರಾದ ಗ್ರಹಿಕೆಗೂ ಆಯ್ದ ಕೋನವೊಂದು ಇರುವುದಿಲ್ಲವೆ? ಆರ್ವೆಲ್ ಹಾಗೇ ಬರೆಯುತ್ತ ಹೋದ. ಸೋಷಲಿಸ್ಟ್ ರಿಯಲಿಸ್ಟರು ಇದನ್ನು ಒಪ್ಪಲಿಲ್ಲ. ಹಾಗೆ ಬರೆಯಬಲ್ಲ ಅತಿ ಸಾಧಾರಣ ಶಕ್ತಿಯ ಹುಂಬ ಬರವಣಿಗೆಯ ಬಗ್ಗೆ ಕ್ರಿಸ್ಟೋಫರ್ ಕಾಡ್ವೆಲ್‌ನಂತಹ ಸೂಕ್ಷ್ಮಜ್ಞ ಮಾರ್ಕ್ಸ್‌ವಾದಿಗಳು ಉತ್ಸಾಹಿಗಳಾಗದಾದರು. ಆರ್ವೆಲ್ ಕಮ್ಯುನಿಸ್ಟರ ಕಪಟ ನಾಟಕಗಳಿಂದ ಪ್ರಕ್ಷುಬ್ಧನಾಗಿ ಬರೆದ. ಈ ಸಾಹಿತ್ಯಕ ಲೋಕದ ಜಂಜಡಗಳಲ್ಲಿ ಅತ್ಯಂತ ಪ್ರತಿಭಾಶಾಲಿಯಾದ ಕ್ರಿಸ್ಟೋಫರ್‌ಕಾಡ್ವೆಲ್ ಅಜ್ಞಾತನಾಗಿದ್ದು, ಕೆಲವು ಪುಸ್ತಕಗಳನ್ನು ಜ್ವರದ ಅವಸರದಲ್ಲಿ ಎಂಬಂತೆ ಬರೆದು, ಬರೆದದ್ದನ್ನು ಪ್ರಕಟಿಸಹೋಗದೆ, ತನ್ನ ಮುವ್ವತ್ತನೇ ವಯಸ್ಸಿನಲ್ಲಿ ಸ್ಪೇನ್‌ನಲ್ಲಿ ಸರ್ವಾಧಿಕಾರದ ವಿರುದ್ಧ ಹೋರಾಡಿ ಸಾಯುತ್ತಾನೆ.

ನನ್ನ ವಾರಿಯವರಲ್ಲಿ ಕಾಡ್ವೆಲ್‌ನನ್ನು ಓದದವರು ಕಡಿಮೆ. ತನ್ನ ಮುವ್ವತ್ತನೇ ವಯಸ್ಸಿನಲ್ಲೇ ಸ್ಪೇನ್‌ಯುದ್ಧದಲ್ಲಿ ಸತ್ತ ಇವನು ಫಿಸಿಕ್ಸ್‌ನಲ್ಲಿ ಕ್ರೈಸಿಸ್ ಎಂಬ ಪುಸ್ತಕವಲ್ಲದೆ ಕಲೆ, ಸಾಹಿತ್ಯ, ಸಿನಿಮಾಗಳ ಮೇಲೂ ಬರೆದಿದ್ದಾನೆ. ಒಂದೆರಡು ವರ್ಷಗಳ ಅಜ್ಞಾತವಾಸದಲ್ಲಿ ಬರೆದ ಪುಸ್ತಕಗಳೂ ಇವು. ಅವನು ಸತ್ತ ಮೇಲೆ ಬರ್ಮಿಂಗಮ್‌ನಲ್ಲಿ ಗ್ರೀಕ್ ಪ್ರೊಫೆಸರ್ ಆಗಿದ್ದ ಜಾರ್ಜ್ ಥಾಮ್‌ಸನ್ ಎಂಬ ಪರಮಾಚಾರ್ಯ ಮಾರ್ಕ್ಸಿಸ್ಟ್ ಚಿಂತಕ, ಬ್ರಿಟಿಷ್ ಕಮ್ಯುನಿಸ್ಟ್‌ಪಕ್ಷಕ್ಕೆ ಬೇಡವಾದವನೇ, ಧೈರ್ಯ ಮಾಡಿ ಕಾಡ್ವೆಲ್‌ನ ಪುಸ್ತಕವನ್ನು ಪ್ರಕಟಿಸಿದವ. ತನ್ನ ಹೆಸರನ್ನು ಬಹಿರಂಗಗೊಳಿಸದೆ ಕಾಡ್ವೆಲ್ ಮಾರ್ಕ್ಸ್‌ವಾದಕ್ಕೆ ಹೊಸದನ್ನು ಸೇರಿಸಿದವನೆಂದು ಹೇಳಿ ಮತೀಯ ಪಕ್ಷದ ನಿಷ್ಠುರಕ್ಕೆ ಥಾಮ್‌ಸನ್ ಒಳಗಾದ. ಮಾರ್ಕ್ಸ್‌ವಾದಕ್ಕೆ ಲೆನಿನ್, ಸ್ಟಲಿನ್ ಅಲ್ಲದೆ ಬೇರೆ ಯಾರಾದರೂ ಹೊಸದನ್ನು ಸೇರಿಸಲು ಸಾಧ್ಯವೆ? ಸಾಧುವೆ?

ಇದು ರಿವಿಷಿನಿಸಂ ಅಥವಾ ಟ್ರಾಟ್ಸ್‌ಕಿಸಂ! ಬಲಪಂಥೀಯರ ಬಳಿ ಕಲ್ಲುಗಳ ಚೀಲ ಇರುವಂತೆ ಎಡಪಂಥೀಯರ ಬಳಿ ಬೈಗುಳದ ಚೀಲವಿರುತ್ತದೆ, ಆ ಕಾಲದಲ್ಲೂ; ಈ ಕಾಲದಲ್ಲೂ. ಸ್ಟಾಲಿನ್ನರ ಬಾಲಬಡುಕನಾದ ಸಡನೋವ್ ಎಂಬುವವನ ಸೋಷಲಿಸ್ಟ್ ರಿಯಲಿಸಂ ಇವರ ಬೈಬಲ್‌. ಕಾಡ್ವೆಲ್‌ರಂಥವರು ಇವರ ಪಾಲಿಗೆ ಬೂರ್ಜ್ವಾ ಆದರ್ಶವಾದಿಗಳು. ಇಂತಹ ವಾದಕ್ಕೆ ಎದುರಾದವರು ಗ್ರೀಕ್ ಪ್ರೊಫೆಸರ್ ಜಾರ್ಜ್‌ ಥಾಮಸನ್, ಯೂನಿವರ್ಸಿಟಿಗೆ ಸೈಕಲ್ ಮೇಲೆ ಬರುತ್ತಿದ್ದ, ಕಾರನ್ನು ಡ್ರೈವ್ ಮಾಡಲೂ ಬಾರದ, ಕಾರ್ಮಿಕರ ಸಂಘಟನೆಗಳಲ್ಲಿ ಶೇಕ್ಸ್‌ಪಿಯರ್‌ನನ್ನು ಓದುತ್ತಿದ್ದ, ಮಾವೋನನ್ನು ಮೆಚ್ಚುತ್ತ ಹೋದ, ಬದುಕಿನಲ್ಲಿ ಒಬ್ಬ ಸರಳ ಋಷಿಯಂತೆ ನನಗೆ ಕಾಣುತ್ತಿದ್ದ ಈ ಥಾಮ್‌ಸನ್‌ನಲ್ಲೂ ಗುಪ್ತವಾಗಿದ್ದ ಸ್ಟಾಲಿನ್‌ಮೆಚ್ಚುಗೆ ಆಗೀಗ ಹೊರಬೀಳುತ್ತಿತ್ತು. ಈ ಥಾಮ್‌ಸನ್‌ ಬಗ್ಗೆ ಇನ್ನಷ್ಟು ಹೇಳಬೇಕು.

ಈ ಕಾಲದ ತಮಿಳು ಚಿಂತಕರಲ್ಲಿ ಒಬ್ಬನಾದ ಶ್ರೀಲಂಕಾದ ನನ್ನ ಗೆಳೆಯ ಕೈಲಾಸಪತಿಗೆ ಈ ಥಾಮ್‌ಸನ್ ಗೈಡು. ಥಾಮ್‌ಸನ್ ಐರಿಷ್ ಭಾಷೆಯ ಪುನರುಜ್ಜೀವನಕ್ಕಾಗಿ ಮಹತ್ವದ ಕೆಲಸ ಮಾಡಿದರು. ಕೈಲಾಸಂ ಅವರನ್ನು ನನಗೆ ಹತ್ತಿರದವರನ್ನಾಗಿ ಮಾಡಿದ, ಎ.ಕೆ.ರಾಮಾನುಜನ್‌ರಿಗೆ ಮಹತ್ವದ ಚಿಂತಕನಾಗಿ ಕಂಡಿದ್ದ ಈ ಕೈಲಾಸಂ ತನ್ನ ಯೌವನದಲ್ಲೇ ಕ್ಯಾನ್ಸರ್‌ ಆಗಿ ಥಟ್ಟನೇ ಕಣ್ಮರೆಯಾಗಿಬಿಟ್ಟನು. ನಾನು ಇಂಗ್ಲೆಂಡಿನಲ್ಲಿ ಬರೆದ ‘ಸಂಸ್ಕಾರ’, ನನ್ನ ಕನ್ನಡದ ಮೇಲಿನ ಬರವಣಿಗೆಗಳು – ಇವೆಲ್ಲದರ ಹಿಂದೆ ಥಾಮ್‌ಸನ್ ಮತ್ತು ಕೈಲಾಸಂ ಜೊತೆಗಿನ ನನ್ನ ಸಂವಾದಗಳು ಕೆಲಸ ಮಾಡಿದೆ. ಹಾಗೆಯೇ ನಾನು ಕಂಡುಕೊಂಡ ಅಪ್ವರ್ಡ್‌ನ ಜೊತೆಗಿನ ನನ್ನ ಮಾತುಕತೆಗಳು.

ಇದನ್ನೆಲ್ಲ ಬರೆಯುತ್ತಿರುವ ನಾನು ಇನ್ನೊಂದು ವಿಷಯ ಹೇಳದೇ ಹೋದರೆ ತಪ್ಪಾಗುತ್ತದೆ. ನಾವು ಈಗ ಬಹಳ ಇಷ್ಟಪಡುವ ಯೇಟ್ಸ್, ಎಲಿಯಟ್ ಮತ್ತು ಪೌಂಡರೂ ಇನ್ನೊಂದು ವಿರುದ್ಧ ದಿಕ್ಕಿನಲ್ಲಿ ಸ್ಪಂದಿಸಿದವರು. ಇಟಲಿಯಲ್ಲಿ ಮುಸ್ಸೋಲಿನಿಯೂ, ಜರ್ಮನಿಯಲ್ಲಿ ಹಿಟ್ಲರನೂ ತಮ್ಮ ಕಾಲದ ನೈತಿಕ ಅಧಃಪತನವನ್ನು ವೀರ್ಯವತ್ತಾಗಿ ಎದುರಿಸಬಲ್ಲರೆಂಬ ಭ್ರಾಂತಿ ಇವರಿಗಿತ್ತು. ಕೆಲವರು ಬೇಗ ಹಿಟ್ಲರ್, ಮುಸ್ಲೋಲಿನಿಯರಿಂದ ಭ್ರಮನಿರಸನರಾದರೆ ಪೌಂಡ್ ಮಾತ್ರ ಇಟಲಿಗೇ ಹೋಗಿ ಕೆಲಸ ಮಾಡಿದ. ಆರ್ವೆಲ್ ಕೊನೆತನಕ ತಾನು ಸೋಷಲಿಸ್ಟ್ ಎಂದೇ ಗುರುತಿಸಿಕೊಂಡು ತನ್ನ ದೇಶದ ಶ್ರೀಮಂತರ ವಿಚಾರಗಳಿಗೂ ಸೋವಿಯತ್‌ದೇಶದ ಸ್ಟಾಲಿನ್‌ಗೂ ಏಕರೀತಿಯಲ್ಲಿ ವಿರೋಧ ತೋರಿಸುತ್ತ ತಾನು ನಂಬಿದ್ದನ್ನು, ಕಂಡದ್ದನ್ನು ನಿರ್ವಂಚನೆಯಿಂದ ಬರೆದ. ನಿಜವಾಗಿ ಇಪ್ಪತ್ತರ ದಶಕದ ಲೇಖಕ ಹೀರೋ ಎಂದರೆ ಆರ್ವೆಲ್ಲನೇ.

ಆರ್ವೆಲ್‌ ಸಿದ್ಧಾಂತಗಳನ್ನು ನಂಬುವವನಲ್ಲ; ಕಂಡದ್ದನ್ನು ಕಂಡ ಹಾಗೆ ಬರೆಯುವ ನಿಷ್ಠುರವಾದಿ. ಕಾಡ್ವೆಲ್ ಸಿದ್ಧಾಂತಿ; ಕಾಣುವುದಕ್ಕೇ ಸಿದ್ಧಾಂತದ ನಿರ್ದೇಶನ ಬೇಕು, ಎರಡೂ ಅನ್ಯೋನ್ಯ ಎಂದು ತಿಳಿದವನು. ಆರ್ವೆಲ್‌ನನ್ನು ಮೆಚ್ಚಿ ನೆಚ್ಚಿ ಆಮೇಲೆ ಅನುಮಾನಿಸ ಬೇಕಾಗುತ್ತದೆ; ಕಾಡ್ವೆಲ್‌ನನ್ನು ಅನುಮಾನಿಸುತ್ತಲೇ ನೆಚ್ಚಬೇಕಾಗುತ್ತದೆ. ಈ ಕಷ್ಟ ಗೊತ್ತಿರುವವರು ಆಧುನಿಕ ಮಾರ್ಕ್ಸ್‌ವಾದಿಗಳಾದ ರೇಮಂಡ್ ವಿಲಿಯಮ್ಸ್ ಮತ್ತು ನಮ್ಮವರೇ ಆದ ರಾಜಶೇಖರರಂಥವರು. ತಾನು ಬರೆಯುತ್ತಿದ್ದ ರೀತಿಯಲ್ಲಿ ಬರೆಯುವುದೇ ಒಂದು ಅಪರಾಧವಾಗಿ ಅಪ್ವರ್ಡ್‌ಗೆ ಕಾಣಿಸಿದ್ರಿಂದ ಅವನು ಬರೆಯುವುದನ್ನೇ ನಿಲ್ಲಿಸಿದ. ಅವನು ನಿರಾಕರಿಸಿದ ಅವನ ಒಂದು ಕಿರು ಕಾದಂಬರಿ ಮತ್ತು ಕೆಲವು ಕಥೆಗಳು ಅವನನ್ನು ಮೆಚ್ಚಿದ, ಅವನಿಂದ ಪ್ರಭಾವಿತರಾದ ಆಡೆನ್‌ರಂತಹವರಿಗೆ ಸಮಸ್ಯಾತ್ಮಕವಾದವು. ಎಲ್ಲೋ ಒಂದು  ಶಾಲೆಯಲ್ಲಿ ಕೆಲಸ ಮಾಡುತ್ತ, ಸಂಜೆ ಪಕ್ಷ ಹೇಳಿದ ಕಾಯಕ ಮಾಡುತ್ತ ಅಪ್ವರ್ಡ್ ತನ್ನ ಕಾಲವನ್ನು ಅಜ್ಞಾತವಾಗಿ ಕಳೆದ. ಅವನು ಇದ್ದಾನೊ ಇಲ್ಲವೋ, ಎಲ್ಲಿದ್ದಾನೆ ಎಂಬುದು ಇಂಗ್ಲೆಂಡಿನ ಬರಹಗಾರರ ಲೋಕಕ್ಕೇ ಗೊತ್ತೇ ಇರಲಿಲ್ಲ. ಪರಮಹಂಸರ ಅನುಯಾಯಿಗಾಗಿ, ಅವಸಾನದ ಕಾಲದಲ್ಲಿ ಬರ್ಲಿನ್‌ನಲ್ಲಿ ಬದುಕಿ ಆ ಬಗ್ಗೆ ಅದ್ಭುತವಾದ ಕಥೆಗಳನ್ನು ಬರೆದ ಇಷರ್‌ವುಡ್ ಮಾತ್ರ ಖ್ಯಾತನಾದ. ಅವನೂ ಆಡೆನ್ನನೂ ಇಂಗ್ಲೆಂಡಿನ ಬಿಗುಮಾನದ ನೈತಿಕತೆಯಿಂದ ಹೇಸಿ ಇಂಗ್ಲೆಂಡನ್ನು ತೊರೆದು ಅಮೆರಿಕನ್ನರಾದರು. ಎಲಿಯಟ್ ಇದಕ್ಕೆ ವಿರುದ್ಧವಾದದ್ದನ್ನು ಮಾಡಿದ. ಹೆನ್ರಿ ಜೇಮ್ಸ್‌ನಂತೆ ಎಲಿಯಟ್‌ನೂ ಚರ್ಯೆಯಿಲ್ಲದೆ ಜನಸಮೂಹವಾಗಿ ಬಿಟ್ಟ ಅಮೆರಿಕಾವನ್ನು ತೊರೆದು ಬ್ರಿಟಿಷ್ ಪ್ರಜೆಗಳಾಗಿದ್ದರು.

ಎಲ್ಲೋ ಮೂಲೆ ಸೇರಿ ತನ್ನ ಬದಲಾಗುತ್ತಿರುವ, ಬದಲಾಗಬೇಕಾದ ಅರಿವಿಗೆ ತಕ್ಕ ಶೈಲಿಯೇನೆಂಬುದನ್ನು ಹುಡುಕುತ್ತ ಮೌನಿಯಾಗಿ ಬಿಟ್ಟ ಅಪ್ವರ್ಡ್‌ನಲ್ಲಿ ನಂಬಿಕೆ ಇಟ್ಟುಕೊಂಡಿದ್ದವನು ಇಷರ್‌ವುಡ್ ಮಾತ್ರ. ಸ್ನೇಹಿತನ ಅಜ್ಞಾತವಾಸವನ್ನು ಗೌರವಿಸಿ, ತನ್ನ ಕಾಲದ ಅತ್ಯುತ್ತಮ ಕೃತಿಗಳನ್ನು ಈ ತನ್ನ ಯೌವನದ ದಿನಗಳ ಗೆಳೆಯ ಬರೆದೇ ಬರೆಯುತ್ತಾನೆಂದು ಸಾಯುವವರೆಗೂ ಸತತವಾಗಿ ಇಷರ್‌ವುಡ್‌ನಂಬಿದ್ದ.

ಈ ಅಪ್ವರ್ಡ್ ನನಗೆ ಹೇಗೆ ಪರಿಚಿತನಾದ? ಅದೊಂದು ಕಥೆಯೇ.

ನನ್ನದೊಂದು ನೆನಪು. ಜಾರ್ಜ್ ಥಾಮ್ಸನ್ನಿನ ಮನೆಯಲ್ಲಿ ಅವನ ಕಮ್ಯುನಿಸ್ಟ್ ಗೆಳೆಯರೆಲ್ಲ (ಹೆಚ್ಚು ಜನ ಹಂಗೆರಿಯನ್ನು ಸೋವಿಯತ್ತರು ಆಕ್ರಮಣ ಮಾಡಿದ ನಂತರ ಪಕ್ಷ ಬಿಟ್ಟವರು) ಸಭೆ ಸೇರಿದ್ದಾರೆ. ಜಾರ್ಜ್ ಥಾಮ್ಸನ್ ಅವತ್ತು ತನ್ನ ಹೊಸದೊಂದು ಥೀಸಿಸ್ ಚರ್ಚಿಸುವುದಿದೆ –  ಸ್ಟಾಲಿನ್ ಬಗ್ಗೆ. ಕೈಲಾಸಪತಿ ನನ್ನನ್ನೂ ಈ ಆತ್ಮೀಯ ಕೂಟಕ್ಕೆ ಕರೆದಿದ್ದಾನೆ. ಜಾರ್ಜ್ ಥಾಮ್ಸನ್ ತನ್ನದೇ ವಿಧಾನದಲ್ಲಿ ವಿವರಿಸುತ್ತಾನೆ: ಚರಿತ್ರೆಯ ಮಹಾ ಪುರುಷರನ್ನು ಆಯಾ ಕಾಲದ ಇಕ್ಕಟ್ಟುಗಳ ಸಂದರ್ಭದಲ್ಲೇ ಇಟ್ಟು ನೋಡಬೇಕಾಗುತ್ತದೆ. ಉದಾಹರಣೆಗೆ : ತನ್ನ ಕಾಲವನ್ನೇ ಅಲ್ಲಾಡಿಸಿದ ನೆಪೋಲಿಯನ್. ಅವನ ತಪ್ಪುಗಳನ್ನು ನಾವು ಕ್ಷಮ್ಯವೆನ್ನುವಂತೆ ವಿವರಿಸುವುದಿಲ್ಲವೆ? ಹಾಗೇ ಸ್ಟಾಲಿನ್ನನ್ನೂ ನಾವು ಅರಿಯಬೇಕು. ಈಗಿನ ಸೋವಿಯತ್‌ರಿವಿಷನಿಷ್ಟರಂತೆ ಅಲ್ಲ. ಸ್ಟಾಲಿನ್ನಿನ ತಪ್ಪುಗಳನ್ನು ಅರಿತೂ ಅವನನ್ನು ಮೆಚ್ಚಿ ಮಾವೋ ಅರಿಯುವ ಹಾಗೆ.

ನನಗೇಕೊ ಈ ಲಾಜಿಕ್ ಸರಿಯೆನ್ನಿಸಲಿಲ್ಲ. ಅಂಜುತ್ತಂಜುತ್ತ ಕೈ ಎತ್ತಿದೆ. ಅಲ್ಲಿ ಸೇರಿದ ಘಟಾನುಘಟಿ ತಾರ್ಕಿಕರಾದ ಎಲ್ಲರೂ ನನ್ನನ್ನು ದಿಟ್ಟಿಸುತ್ತಿದ್ದಂತೆ ಹೇಳಿದೆ: ‘ಮಾರ್ಕ್ಸ್‌ನ ವಾದದಿಂದ ಪ್ರಣೀತವಾದ ಕಮ್ಯುನಿಸಂ ಸೈಂಟಿಫಿಕ್ ಎಂದು ನಿಮ್ಮ ವಾದ. ನೆಪೋಲಿಯನ್‌ಗೆ ಸಿದ್ಧಾಂತದ ಬಲವಿರಲಿಲ್ಲ. ಅದೊಂದು ವೈಯಕ್ತಿಕ ತೀಟೆ, ಸಾಹಸಗಳ ಕಥೆ. ಆದರೆ ರಷ್ಯದ ಕಮ್ಯುನಿಸಂಗೆ ಸಿದ್ಧಾಂತ ಮತ್ತು ಕ್ರಿಯೆಗಳ ಜೋಡಣೆಯ ಸೈಂಟಿಫಿಕ್ ಚೌಕಟನ್ನು ಲೆನಿನ್ ಒದಗಿಸಿದ; ಆಗಲೇಬೇಕಾದ್ದನ್ನು ಆದಷ್ಟು ಬೇಗ ಆಗುವಂತೆ ಮಾಡುವ ಸಿದ್ಧಾಂತ ಅದು ಎನ್ನುತ್ತೀರಿ (Democratic centralism and venguard of the proletariat etc). ಆದರೆ ಈಗ ನೆಪೋಲಿಯನ್ ಜೊತೆ ಸ್ಟಾಲಿನ್ನನ್ನು ಹೋಲಿಸುತ್ತೀರಿ. ಸ್ಟಾಲಿನ್, ನೆಪೋಲಿಯನ್ ನಂತೆಯೇ ಪರ್ಸನಾಲಿಟಿ ಕಲ್ಟ್‌ನಲ್ಲಿ ಪರವಶನಾಗಿ ಮಾಡಿದ ತಪ್ಪುಗಳು, ಈ ಸೈಂಟಿಫಿಕ್‌ಸೋಷಲಿಸಂನಲ್ಲಿ ಇಣುಕಲು ಸಾಧ್ಯವಾದ ಬಿರುಕುಗಳು ಲೆನಿನ್‌ವಾದದಲ್ಲಿ, ಅವನ ಕ್ರಾಂತಿಪೂರಕವಾದ ಸಂಘಟನಾ ಕ್ರಮದಲ್ಲೇ ಇರಬಹುದಲ್ಲವೆ?’

ಥಾಮ್ಸನ್ ಗೌರವದಿಂದ ಹೇಳಿದ : ‘ಒಳ್ಳೆಯ ಪ್ರಶ್ನೆ. ಉತ್ತರ ಹುಡುಕಿಕೊಳ್ಳಬೇಕು. ಯೋಚಿಸುತ್ತೇನೆ.’

ಆ ಸಭೆಯ್ಲಿದ್ದ ಹಿರಿಯ ಪ್ರೊಫೆಸರ್ ಒಬ್ಬ ನನ್ನ ಮಾತಿಗೆ ಸೇರಿಸಿದ ಇನ್ನೊಂದು ಮಾತನ್ನು ನಾನು ಮರೆಯಲಾರೆ. ನಾನು ಸ್ಟಾಲಿನ್ ಎಂದು ಕರೆದ ದುಷ್ಟನನ್ನು ಅವನು ‘ಜೋ’ ಎಂಬ ಆತ್ಮೀಯ ಸಲಿಗೆಯಲ್ಲಿ ಗುರುತಿಸಿ ಮಾತಾಡಿದ್ದು ನನಗೆ ವಿಶೇಷವೆನಿಸಿತ್ತು. ಅವನ ವಾದಕ್ಕೊಂದು ಚರಿತ್ರೆಯೂ ಇತ್ತು; ಹಂಗೇರಿಯಲ್ಲಿ ಸೋವಿಯತ್ ಆಕ್ರಮಣದಿಂದ ಹುಟ್ಟಿದ ಸಂಕಟವೂ ಇತ್ತು. ಅಲ್ಲದೆ ಅಲ್ಲಿ ನೆರೆದಿದ್ದ ಧೀಮಂತರು ಕ್ಷೇಮದಲ್ಲಿ ಚೀನಾ ಪರವಾಗಿಯೂ ವಿಯೆಟ್ನಾಂ ಪರವಾಗಿಯೂ ಅಮೆರಿಕಾ ವಿರೋಧವಾಗಿಯೂ ತಮ್ಮ ಮಾರ್ಕ್ಸ್‌ವಾದವನ್ನು ಉಳಿಸಿಕೊಳ್ಳುವುದು ಸಾಧ್ಯವಿತ್ತು.

‘ಕಮ್ ಆನ್ ಜಾರ್ಜ್, ಪರ್ಸನಾಲಿಟಿ ಕಲ್ಟ್ ತಪ್ಪೆಂದು ಹೊಳೆಯಲಿಕ್ಕೆ ನಿನಗೆ ಇಷ್ಟು ವರ್ಷಗಳು ಬೇಕಾದವೊ? ಪ್ರತಿ ವರ್ಷ ಜೋನ ಹುಟ್ಟಿದ ಹಬ್ಬದ ದಿನ ನೀನೇ ನಮ್ಮೆಲ್ಲರಿಂದ ಹಣ ಸಂಗ್ರಹಿಸಿ ಜೋಗೆ ಉಡುಗೊರೆ ಕಳಿಸುವ ಏರ್ಪಾಡು ಮಾಡುತ್ತಿದ್ದಿ. ನಾನೊಂದು ಸಾರಿ ಇದು ತಪ್ಪು, ಇದು ಪರ್ಸನಾಲಿಟಿ ಕಲ್ಟ್‌ಎಂದು ಹೇಳಿದಾಗ ನೀನೇನು ಆಗ ಹೇಳಿದಿ? ನೆನಪು ಮಾಡಿಕೊ.’

ಬ್ರೆಜ್ನೇವ್ ಕಾಲದಲ್ಲಿ ರಷ್ಯಕ್ಕೆ ಹೋದಾಗಲೂ ಸತ್ತ ಸ್ಟಾಲಿನ್ ನನಗೆ ಎದುರಾಗುತ್ತಿದ್ದ. ನಿಗೂಢವಾಗಿ ಸತ್ತ ಅವನ ಹೆಂಡತಿಯ ಗೋರಿಯ ಮೇಲೆ ಯಾರೋ ಆ ದಿನವೇ ತಂದಿದ್ದ ಅರಳಿದ ಗುಲಾಬಿ ನೋಡಿದಾಗ; ಕಟುವಾದ ವಾಸನೆಯ ಸಿಗರೇಟನ್ನು ಕೊಳ್ಳಲೇಬೇಕಾಗಿ ಬಂದಾಗಲೆಲ್ಲ ‘ಇದನ್ನೇ ಸ್ಟಾಲಿನ್ ಸೇದುತ್ತ ಇದ್ದುದು’ ಎಂದು ನಮ್ಮ ದುಬಾಷಿ ಹೇಳಿದಾಗ; ‘ಇದು ಸ್ಟಾಲಿನ್‌ಗೆ ಪ್ರಿಯವಾಗಿದ್ದ ವೋಡ್ಕ’ ಎಂದು ಒಂದು ಸಾರಿ ಮುಚ್ಚಳ ತೆರೆದರೆ ಮತ್ತೆ ಮುಚ್ಚಲು ಬಾರದ, ಇಡೀ ಸೀಸೆ ಕುಡಿಯಬೇಕಾದ ಮೆಣಸಿನ ಘಾಟಿನ ಸೀಸೆಯನ್ನು ಕೊಂಡಾಗ, ಜಾರ್ಜಿಯಾದಲ್ಲಿ ಇನ್ನೂ ಹೀರೋ ಆಗಿ ಉಳಿದ ಅವನ ಚಿತ್ರವನ್ನು ಟ್ಯಾಕ್ಸಿಗಳಲ್ಲಿ ಕಂಡಾಗ, ಅವನು ತನ್ನ ದಢೂತಿ ಮೀಸೆಯಲ್ಲೆ ನಮಗೆ ಎದುರಾಗುತ್ತಿದ್ದ. ಎರಡನೇ ಮಹಾಯುದ್ಧವನ್ನು ಬಹಳ ಕಾಲ ಮರೆಯದವರೆಂದರೆ ಸೋವಿಯತ್ತರು. ಅಷ್ಟು ನಿರ್ದಯನಾಗಿದ್ದ ವ್ಯಕ್ತಿ ಈ ಎಲ್ಲರಿಗೂ ‘ಜೋ’ ಆಗಿಯೂ ಉಳಿದಿದ್ದ.

* * *

ಸ್ಟಾಲಿನ್‌ನನ್ನು ಜೋ ಎಂದೇ ಕರೆದು ಥಾಮ್ಸನಿನ ಮನೆಯಲ್ಲಿ ಆಡಿಕೊಂಡ ಸ್ನೇಹದ ನಿಷ್ಠುರ ಜಗಳವನ್ನು ನಾನು ದಿಢೀರನೆ ಮತ್ತೆ ನೆನಪು ಮಾಡಿಕೊಂಡಿದ್ದು ಹಲವು ವರ್ಷಗಳ ನಂತರ. ಗಾರ್ಬೆಚೋವ್ ಕಾಲದಲ್ಲಿ. ಸೋವಿಯತ್‌ಒಕ್ಕೂಟದ ಪ್ರಸಿದ್ಧವಾದ ಪತ್ರಿಕೆಯೊಂದರಲ್ಲಿ ನನ್ನ ‘ಸಂಸ್ಕಾರ’ ಮೀರ ಎಂಬಾಕೆಯ ಭಾಷಾಂತರದಲ್ಲಿ ಪ್ರಕಟವಾದ ನಂತರ. ಆ ಸಭೆಯಲ್ಲಿ ಸ್ಟಾಲಿನ್ ಕಾಲದ ಅತಿರೇಕಗಳ ಚರ್ಚೆ ನಡೆದಿತ್ತು. ನಾನು ಪುರಂದರ ದಾಸರ ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಎಂಬ ಸಾಲನ್ನು ಉದ್ಧರಿಸಿ, ಪ್ರಭುತ್ವ ಉತ್ತಮವಾಗಿದ್ದರೂ ಅದು ತನ್ನ ಆಂತರ್ಯದ ಸತ್ಯಗಳಿಗೆ ಲೊಳಲೊಟ್ಟೆ ಅಥವಾ ಯಾವ ಪ್ರಭುತ್ವವಾದರೂ ಯಾವ ಕಾಲದಲ್ಲಾದರೂ ಉತ್ತಮವಾದೀತೆಂದು ತಿಳಿಯುವುದೇ ಲೊಳಲೊಟ್ಟೆ; ಇದನ್ನು ನಿಮ್ಮ ಲೇಖಕ ವರ್ಗ ತಿಳಿದಿದ್ದರೆ ಲೆನಿನ್‌ನನ್ನ ನೀವು ಆರಾಧಿಸುತ್ತಿರಲಿಲ್ಲ; ಸ್ಟಾಲಿನ್ನಿನ ಕ್ರೌರ್ಯಗಳಿಗೆ ಕುರುಡಾಗುತ್ತಿರಲಿಲ್ಲ ಎಂದೆ. ನಾನು ಹೀಗೆನ್ನಬಹುದಾದ ಕಾಲದಲ್ಲಿ ಮಾವೋನ ಸಾಂಸ್ಕೃತಿಕ ಕ್ರಾಂತಿಯ ಹಿಂಸೆ ಬಯಲಾಗಿತ್ತು. ಗಾಂಧಿಯ ಭಾರತ ಎಮರ್ಜನ್ಸಿಯನ್ನು ಅನುಭವಿಸಿತ್ತು.

ಅಲ್ಲಿದ್ದ ಒಬ್ಬ ವೃದ್ಧ ಲೇಖಕ ಅತ್ಯಂತ ನಾಟಕೀಯವಾಗಿ ಹೇಗೆ ಅಲ್ಲಿ ಕೂತ ಲೇಖಕರೆಲ್ಲ ತಲೆ ತಗ್ಗಿಸಿ ಅವನನ್ನು ಕೇಳಿಸಿಕೊಳ್ಳುವಂತೆ ಮಾಡಿದ ಎಂಬುದೇ ನನ್ನ ಕಥೆ.

ಅದು ನಡೆದದ್ದು ಹೀಗೆ: ಎಲ್ಲರೂಕೂತಿದ್ದಾಗ ಅವನು ಎದ್ದು ನಿಂತ. ಗಂಟಲನ್ನು ಕೆರೆದು ಸರಿ ಮಾಡಿಕೊಂಡು ಎತ್ತರದ ದನಿಯಲ್ಲಿ ಹಾಡಲು ಶುರುಮಾಡಿದ. ಒಂದೆರಡು ನಿಮಿಷ ಭಾವುಕವಾಗಿ ಹಾಡಿ ನಿಲ್ಲಿಸಿದ. ಎಲ್ಲರನ್ನೂ ನೋಡಿದ. ‘ನೀವು ಎಲ್ಲರೂ ಈಗ ತಲೆತಗ್ಗಿಸಿ ಕೇಳಿಸಿಕೊಂಡ ಈ ಹಾಡನ್ನು ನಾವೆಲ್ಲರೂ ಹಾಡುತ್ತಿದ್ದೆವು ಅಲ್ಲವೆ? ನಾಚಿಕೆ, ಮಾನ ಏನಾದರೂ ನಮಗೆ ಆಗ ಇತ್ತೆ? ಈ ಹಾಡಿನಲ್ಲಿರುವ ಜೋನನ್ನು ಹೊಗಳುವ ಒಂದೊಂದು ಮಾತೂ ಈಗ ಹೇಸಿಗೆ ಹುಟ್ಟಿಸುತ್ತಿದೆ, ಅಲ್ಲವೆ? ಇಷ್ಟೂ ವರ್ಷಗಳ ಕಾಲ ನಾವು ಯಾವುದಕ್ಕೆ ಕಾದಿದ್ದು ಹೇಳಿ? ನಮ್ಮದೇ ಒಂದು ಬ್ಯಾಂಕ್ ಅಕೌಂಟ್ ಓಪನ್ ಮಾಡೋದು ಸಾಧ್ಯವಾಗುವ ಕಾಲಕ್ಕೆ ಅಲ್ಲವೆ?’

* * *

ಹೀಗೆ ನಾವು ಅರಿಯಬಲ್ಲಂತೆ ನನ್ನ ಮನಸ್ಸನ್ನು ಚೂಪು ಮಾಡಿದ, ಸ್ಟಾಲಿನ್‌ನಿಂದ ಮೂಕನಾದರೂ ತನ್ನ ಕ್ರಾಂತಿಯ ನಂಬಿಕೆ ಕಳೆದುಕೊಳ್ಳದ, ಆಧ್ಯಾತ್ಮಿಕತೆಗೆ ಕೊನೆಗೂ ಒಲಿಯದೆ ಉಳಿದ, ಪ್ರಸಿದ್ಧನಾಗದೆ ಮೂಲೆಗುಂಪಾದ, ಆದರೆ ಪ್ರಸಿದ್ಧರಾದ ಗೆಳೆಯರನ್ನು ಪಡೆದ ಅಪ್ವರ್ಡ್‌ಗೆ ಹಿಂದಿರುಗುವೆ.

ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದ ಲಾರೆನ್ಸ್‌ಬಗ್ಗೆ ನಾನು ರಿಸರ್ಚ್ ಮಾಡಲೆಂದು ಇಂಗ್ಲೆಂಡಿಗೆ ಹೋದದ್ದು. ಅಲ್ಲಿ ಹೋದ ಮೇಲೆ ಕೆ.ಎಂ. ಪಣಿಕ್ಕರ್‌ನನಗೆ ಹೇಳಿದ್ದು ನಿಜವೆನ್ನಿಸಿತು ಲಾರೆನ್ಸ್ ಮೇಲಿನ ಕೆಲಸ ಒಂದು ಇಂಡಸ್ಟ್ರಿಯಂತೆಯೇ ಅಮೆರಿಕಾದಲ್ಲಿ ಬೆಳೆದಿತ್ತು. ಕಾಲಿಡಲು ಜಾಗವಿಲ್ಲದ ಬೌದ್ಧಿಕ ಸ್ಲಮ್‌ನಂತೆ ಲಾರನ್ಸ್ ಬಗೆಗಿನ ವಿಮರ್ಶಾಲೋಕ ನನಗೆ ಭಾಸವಾಯಿತು.

ಈಗ ಕಾಲವಾದ ನನ್ನ ವಾರಿಗೆಯ ಮಾಲ್ಕಂ ಬ್ರಾಡ್‌ಬರಿ ಅರವತ್ತರ ದಶಕದ ಇಂಗ್ಲಿಷ್ ವಾಙ್ಮಯ ಲೋಕದಲ್ಲಿ ಪ್ರಸಿದ್ಧನಾದ ಕಾದಂಬರಿಕಾರ, ಉದರವಾದಿಯಾದ ಎಡಪಂಥದ ಚಿಂತಕ. ಕೆಲ ಕಾಲ ನನ್ನ ಗೈಡ್. ಈತ ನನ್ನ ಪ್ರಿಯ ಗೆಳೆಯರಲ್ಲೊಬ್ಬನೂ ಆಗಿಬಿಟ್ಟ (ಕೊನೆಯಲ್ಲಿ ಇನ್ನೊಬ್ಬ ಪ್ರಸಿದ್ಧ ವಿಮರ್ಶಕ ಹಾಗೂ ಕಾಮಿಕ್‌ಕಾದಂಬರಿಕಾರ ಡೇವಿಡ್ ಲಾಡ್ಜ್ ನನ್ನ ಗೈಡ್). ಬ್ರಾಡ್ ಬರಿ ಪೈಪ್ ಸೇದುತ್ತ ತನ್ನ ಟೈಪ್‌ರೈಟರ್ ಎದುರು ಕೂತು ಹೇಳಿದ್ದು ನೆನಪಾಗುತ್ತಾದೆ: ‘ಎಡ್ವರ್ಡ್ ಅಪ್ವರ್ಡ್ ಎಂಬ ವಿಲಕ್ಷಣ ಲೇಖಕನೊಬ್ಬನಿದ್ದ, ಮುವ್ವತ್ತರ ದಶಕದಲ್ಲಿ ನಾವು ಬ್ರಿಟಿಷರು ಸೈದ್ಧಾಂತಿಕವಾಗಿ ಯೂರೋಪಿಯನ್ನರಂತೆ ಚಿಂತಿಸುವುದೇ ಇಲ್ಲ. ನಿತ್ಯಾನುಭವದ ಸತ್ಯಕ್ಕೆ ಮಾತ್ರ ನಾವು ಬದ್ಧರು. ಮಿಲ್ ಮತ್ತು ಬೆಂಥಾಮ್‌ನಂತಹ ಯುಟಿಲಿಟೇರಿಯನ್ನರು ಮಾತ್ರ ನಮ್ಮ ಹೀರೋಗಳು. ಅಪ್ವರ್ಡ್ ಅದಕ್ಕೆ ವಿನಾಯಿತಿ. ಮುವ್ವತ್ತರ ದಶಕವೇ ಅದಕ್ಕೆ ವಿನಾಯಿತಿ. ಅಂತಹ ಒಂದು ದಶಕವನ್ನು ಬ್ರಿಟನ್ ಮತ್ತೆ ಕಂಡಿಲ್ಲ. ಅವನೀಗ ಎಲ್ಲಿದ್ದಾನೆಂದು ಯಾರಿಗೂ ತಿಳಿಯದು. ಅವನು ಬರೆಯುತ್ತಿದ್ದ ಕಾಲದ ಬಗ್ಗೆ ಆಗಿನ ಜಿಜ್ಞಾಸೆಗಳ ಬಗ್ಗೆ ರಿಸರ್ಚ್ ಮಾಡು.’

ನನಗೂ ಆಗ ಚೀನಾ ಕ್ರಾಂತಿಯ ಬಗ್ಗೆ ವಿಶೇಷವಾದ ಆಸಕ್ತಿಯಿತ್ತು. ಆಗಲಿ ಎಂದು ಸೋಮಾರಿ ಕನಸಿಗನಾದ ನಾನು ಅಳೆದು ಹೊಯ್ದು ಅಪ್ವರ್ಡ್‌ನ ಮೊದಲ ಕಥೆಗಳನ್ನು ಪ್ರಕಟಿಸಿದವರ ಕೇರ್ ಆಫ್ ವಿಳಾಸಕ್ಕೆ ಅಪ್ವರ್ಡ್‌ಗೊಂದು ಕಾಗದ ಬರೆದೆ : ‘ನಿನ್ನನ್ನು ನೋಡುವುದು ಸಾಧ್ಯವೆ?…..’ ಹೀಗೆ ಒಂದೆರಡು ಮಾತಿನ ಕಾಗದ ಅದು.

ಕೂಡಲೆ ಉತ್ತರ ಬಂತು. ‘ನಿನಗೆ ಹತ್ತಿರ ವುಲ್ವರ್ ಹ್ಯಾಂಪ್ಟನ್‌ಗೆ ನಾನು ನನ್ನ ಮಗನ ಮನೆಗೆ ಬರುತ್ತ ಇದ್ದೀನಿ. ನೀನು ಈ ರೈಲಲ್ಲಿ ಈ ಹೊತ್ತಿಗೆ ಬಂದರೆ, ಕಾರ್ಮಿಕರ ಕ್ಯಾಪ್ ಹಾಕಿಕೊಂಡು ಕೈಯಲ್ಲಿ ಎನ್‌ಕೌಂಟರ್ ಪತ್ರಿಕೆ ಹಿಡಿದುಕೊಂಡು ನಾನು ಪ್ಲಾಟ್‌ಫಾರಂನಲ್ಲಿ ಕಾದಿರುತ್ತೀನಿ. ಇಲ್ಲಿರುವ ಹಲವರು ನಿನ್ನ ದೇಶದವರು. ನೀನೂ ಒಂದು ಎನ್‌ಕೌಂಟರ್ ಪತ್ರಿಕೆ ಹಿಡಿದುಕೊಂಡಿರು. ಆಗ ಗುರುತಾಗುವುದು ಸುಲಭವಾಗುತ್ತದೆ.’

ಆ ಹೊತ್ತಿಗೆ ಆ ರೈಲಲ್ಲಿ ಆ ಪತ್ರಿಕೆ ಹಿಡಿದುಕೊಂಡು ಆ ಕ್ಯಾಪ್ ಧರಿಸಿದ್ದ ಸುಂದರವಾದ ಮುಗುಳ್ನಗೆಯ, ಗುಂಡುಮುಖದ, ಇಷರ್ವುಡ್‌ನ ಕಲ್ಪನಾಲೋಕದ ಮಾರ್ಟ್‌ಮಿಯಟರ್ ತೊರೆದು ಸೋವಿಯತ್ತಾಗಲಾರದೆ, ಆದರೆ ತಾನು ನಂಬಿದ ತತ್ವ ಬಿಡಲಾರದೆ, ಒಳಬದುಕನ್ನೂ ಹೊಳೆಯಿಸಬಲ್ಲ ವಾಸ್ತವ ಮಾರ್ಗದ ಶೈಲಿಯ ಹುಡುಕಾಟದಲ್ಲಿ ಇದ್ದ ಎಡ್ವರ್ಡ್ ಅಪ್ವರ್ಡ್‌ನ ಕೈಕುಲುಕಿದೆ. ಅವನು ಅರವತ್ತು ದಾಟಿದ್ದ; ನಾನು ಮುವ್ವತ್ತು ದಾಟಿದ್ದ. ಹಳೆಯ ಕಾರೊಂದರಲ್ಲಿ ನನ್ನನ್ನು ಕೂರಿಸಿಕೊಂಡು ಅವನ ಮಗನ ಮನೆಗೆ, ಮನೆಗೆ ಕರೆದುಕೊಂಡು ಹೋದ. ಅವನ ಸೊಸೆ ಆಗ ಗರ್ಭಿಣಿ. ಅಪ್ವರ್ಡ್‌ನ ಹೆಂಡತಿ, ಅವನ ಜೊತೆ ಕಾರ್ಮಿಕ ಸಂಘಟನೆಯಲ್ಲಿ ನಿರತಳಾಗಿದ್ದವಳು. ಆಗಲೇ ಮೊಮ್ಮಕ್ಕಳನ್ನು ಕಂಡವಳು, ಹೊಸದೊಂದನ್ನು ನಿರೀಕ್ಷಿಸುತ್ತಿದ್ದವಳು ನಮಗೆ ಟೀ ಮಾಡಿಕೊಟ್ಟಳು. ಅಲ್ಲಿಂದ ಶುರುವಾಯಿತು ನಮ್ಮ ಸ್ನೇಹ ಮತ್ತು ನನ್ನ ಆತ್ಮೀಯ ಅನುಭವವೂ ಆದ ರಿಸರ್ಚ್.

ಅವನು ಬರೆದ ಕಾಗದಗಳು ನನ್ನಲ್ಲಿವೆ. ಏಪ್ರಿಲ್ ೧೯೬೬ ರಲ್ಲಿ, ಅವನ ಗುರುತಾಗಿ ಸುಮಾರು ಎರಡು ವರ್ಷಗಳಾದ ನಂತರ ಬರೆದೊಂದು ಕಾಗದಲ್ಲಿ ಹೀಗೆ ಹೇಳುತ್ತಾನೆ : ‘Meeting you has always meant a lot to me and it may yet help me to find my way back to what I really want to do in my writing.’ ಅವನಿಗೆ ತನ್ನ ಸೃಜನಾತ್ಮಕತೆಯ ಬಗ್ಗೆಯೇ ಅನುಮಾನ ಹುಟ್ಟಿಸಿದ ತಾತ್ವಿಕತೆಯ ಬಗ್ಗೆ ನನ್ನ ಟೀಕಿಗೆ ಅವನು ಕೊಟ್ಟ ಉತ್ತರ ಇದು. ಆದರೆ ಈ ಪತ್ರದಲ್ಲೂ ಅವನು ಮಾರ್ಕ್ಸ್‌ನ ಕ್ರಾಂತಿಯ ಕನಸನ್ನು ಬಿಟ್ಟುಕೊಟ್ಟಿರಲಿಲ್ಲ. ಲಿಬರಲ್ ಮನೋಧರ್ಮದ ಒಪ್ಪಂದ ಮಾಡಿಕೊಂಡಿರಲಿಲ್ಲ.

ನನ್ನ ಬದುಕಿನ ಮಹತ್ವದ ದಿನಗಳು ಇವು. ನರ್ಸರಿಗೆ ಹೋಗಲೊಲ್ಲದ, ತನ್ನ ಕಲ್ಪನಾ ಲೋಕದಲ್ಲಿ ಹಲವು ಪಾತ್ರಗಳನ್ನು ಸೃಷ್ಟಿಸಿ ತುಂಟಾಟದಲ್ಲಿ ಎಲ್ಲರನ್ನೂ ರಮಿಸುವ ನನ್ನ ಮಗ, ಇನ್ನು ಮೂರು ತಿಂಗಳಲ್ಲಿ ಹೊರಬರುವ ನಿರೀಕ್ಷೆಯನ್ನು ನನ್ನ ಹೆಂಡತಿಯ ಹಿತವಾದ ಆಯಾಸದ ನಡುಗೆಯಲ್ಲಿ ಕಣ್ಣಿಗೆ ಕಾಣುವಂತೆ ಉಬ್ಬಿಸುತ್ತಿದ್ದ ನನ್ನ ಮಗಳು, ಈ ಭಾರದ ಜೊತೆ ನನ್ನ ರಿಸರ್ಚ್‌ನ ಚಾಪ್ಟರುಗಳನ್ನು ಲೈಬ್ರರಿಗೆ ತೆಗೆದುಕೊಂಡು ಹೋಗಿ ಟೈಪ್ ಮಾಡಿಸಿ ತರುತ್ತಿದ್ದ ನನ್ನ ಹೆಂಡತಿಯ ಕಾಯಕ, ಈ ಎಲ್ಲದರ ನಡುವೆ ನಾನು ಆ ದಿನಗಳಲ್ಲಿ ಬರೆದ ಕನ್ನಡದ ನನ್ನ ಕೃತಿಗಳು, ಆಗೀಗ ಭೇಟಿಯಾಗುತ್ತಿದ್ದ ನಟರಾಜ್, ರಾಮಚಂದ್ರ ಶರ್ಮ, ಡಿ.ಎ. ಶಂಕರ್‌, ಬಿ.ಕೆ. ಚಂದ್ರಶೇಖರ್ ಜೊತೆ ನಡೆಸಿದ ಅಹೋರಾತ್ರಿಯ ಹರಟೆಗಳು, ಅವನ ಸಹವಾಸದಲ್ಲಿ ತಯಾರಾಗುತ್ತಿದ್ದ ನನ್ನ ತುಡುವಿನ ಚಕ್ಕುಲಿ, ಕೋಡುಬಳೆ, ಜೊತೆಗೆ ಡ್ರಾಫ್ಟ್‌ಬಿಯರ್. ಸತತ ನಮ್ಮ ಮನೆಯಲ್ಲಿದ್ದು ನನ್ನ ಹೆಂಡತಿಗೆ ಕಿರಕಿರಿಯಾದರೂ ಅವಳ ವಿಶ್ವಾಸವನ್ನು ಗೆದ್ದ ಟಾಮ್‌ಎಂಬ ವಿದ್ಯಾರ್ಥಿ ಮತ್ತು ಅಭಿಮಾನಿ, ಅಡುಗೆ ಮಾಡಿ ಅದನ್ನು ನಮ್ಮ ಮನೆಗೆ ತಂದು, ನಮ್ಮ ಅಡುಗೆಯನ್ನೂ ಬಡಿಸಿಕೊಂಡು ಊಟ ಮಾಡಿ ಹೋಗುತ್ತಿದ್ದ ನನ್ನ ಆಧ್ಯಾಪಕ ಹಾಗೂ ಮಿತ್ರ ಮಾರ್ಟಿನ್ ಗ್ರೀನ್ (ಮುಂದೆ ಗಾಂಧೀಜಿ ಬಗ್ಗೆ ಮಹತ್ವದ ಪುಸ್ತಕಗಳನ್ನು ಬರೆದವನು ಇವನು) –  ಈ ಎಲ್ಲದರ ಜತೆ ದಣಿವೇ ಇಲ್ಲದಂತೆ ಬೆಳೆದ ಕಾಲ ಅದು.

* * *

ಅಪ್ವರ್ಡ್‌‌ಗೆ ನಾನು ಲಯನಲ್ ಟ್ರಿಲ್ಲಿಂಗ್‌ನನ್ನು ಓದಿಸಿದೆ. ರೇಮಂಡ್ ವಿಲಿಯಮ್ಸ್‌ನನ್ನು ಅವನು ಓದಿ ಮೆಚ್ಚಿಕೊಂಡಿದ್ದ. ನನ್ನ ‘ಘಟಶ್ರಾದ್ಧ’ ಕಥೆ ವಿ.ಕೆ. ನಟರಾಜರ ಭಾಷಾಂತರದಲ್ಲಿ ಪ್ರಕಟವಾಗಿತ್ತು. ಅದನ್ನು ಓದಿ ಬ್ರಾಡ್‌ಬರಿಯಂತೆಯೇ ಅಪ್ವರ್ಡ್‌ನೂ ಇಷ್ಟಪಟ್ಟಿದ್ದ. ಬಾಲಕನ ಧಾರ್ಮಿಕ ಸಂಪತ್ತಿನ ಭಾಷೆ ಇಂಗ್ಲಿಷ್ ಹುಡುಗನ ಓದಿನಲ್ಲಿ ಕೃತಕವೆನ್ನಿಸುವುದರಿಂದ ಅದನ್ನು ಕೈಬಿಡಲಾಯಿತು. ಮುಗ್ಧತೆಯಲ್ಲಿ ನನ್ನ ಕಥೆಯ ನಾಣಿ ಸೃಷ್ಟಿಸುವ ಅಲೌಕಿಕದ ಪ್ರಪಂಚ ಬ್ಲೇಕ್ ಕಾಲದ ಬಾಲಕನಿಗೆ ಸಾಧ್ಯವೋ ಏನೊ! ಈಗ ನನ್ನ ಮೊಮ್ಮಕ್ಕಳಿಗೂ ಅದು ಅಪರಿಚಿತ. ಇವೆಲ್ಲವನ್ನೂ ನಾನು ಅಪ್ವರ್ಡ್ ಜೊತೆ ಚರ್ಚಿಸುತ್ತ ಇದ್ದೆ.

ಅಪ್ವರ್ಡ್ ತನ್ನ ಮಾರ್ಕ್ಸಿಸ್ಟ್ ಧೋರಣೆಗಳನ್ನು ಬಿಲ್‌ಕುಲ್ ಬಿಡದವ. ನಾನು ‘ಮಾನವ ಸ್ವಭಾವದಲ್ಲಿ ಸಾರ್ವಕಾಲಿಕ’ ಎನ್ನುವುದನ್ನು ಅವನು ‘ಹೌದು ಆದರೆ ಈ ಸಾರ್ವಕಾಲಿಕವಾದ್ದು ಮೃಗೀಯ ಲೋಕದಲ್ಲೂ ಕಾಣುವಂತಹುದು. ಲೇಖಕನಾಗಿ ನನಗೆ ಮುಖ್ಯವಾದ್ದು ನನ್ನ ಕಾಲಕ್ಕೆ ವಿಶೇಷವಾದ್ದು’ ಎಂದು ಒಂದು ಕಾಗದದಲ್ಲಿ ಬರೆದಿದ್ದಾನೆ. ಸದ್ಯಕ್ಕೆ ಮಾತ್ರ ಸ್ಪಂದಿಸುವುದರಿಂದ, ಕೇವಲ ರಾಜಕೀಯವಾಗಿ ಯೋಚಿಸುವುದರಿಂದ ನೀವು ನಿನ್ನ ಜೀನಿಯಸ್‌ಗೇ ಹೊರಗಿನವನಾಗಿಬಿಟ್ಟೆ ಎಂದು ನಾನು ವಾದಿಸುವುದನ್ನು ಒಪ್ಪುತ್ತಿದ್ದ ಅಪ್ವರ್ಡ್, ಪಾಲಿಟಿಕ್ಸ್ ಬದ್ಧತೆ ಸಾಹಿತ್ಯವನ್ನು ನಾಶ ಮಾಡುವಂತೆ, ಅನುಭಾವ – ಮಿಸ್ಟಿಸಿಸಂ –  ಕೂಡ ಕಾವ್ಯವನ್ನು ಸಪ್ಪೆಗೊಳಿಸಿ ಚರ್ವಿತಚರ್ವಣಗೊಳಿಸುತ್ತದೆ ಎಂದು ವಾದಿಸುತ್ತಿದ್ದ. ಅರವಿಂದರಿಂದ ಸತ್ಯವನ್ನು ಕಡ ಪಡೆದು ಬರೆಯುವ ಕನ್ನಡದ ಲೇಖಕರ ವಿರುದ್ಧ ದಂಗೆಯೆದ್ದ ನವ್ಯ ಪಂಥದ ನನಗಂತೂ ಇದು ನಿಜವೆನ್ನಿಸಿತ್ತು.

ನೀನು ಹಿಟ್ಲರ್‌ವಾದಿಯಾಗಿ ಒಂದು ವಿಶೇಷ ಜಾಣ್ಮೆಯ ಪದ್ಯ ಬರೆದರೂ ಅದು ಒಳ್ಲೆಯ ಪದ್ಯವಾಗಲಾರದು; ಆದರೆ ನೀನು ಮಾರ್ಕ್ಸ್‌ನನ್ನು ಒಪ್ಪದಿದ್ದರೂ ಜೀವನಕ್ಕೆ ನೈಜವಾಗಿದ್ದು ಬರೆದರೆ ಬಾಲ್ಸಾಕ್‌ನಂತೆ ದೊಡ್ಡ ಕೃತಿಗಳನ್ನು ಬರೆಯುವುದು ಸಾಧ್ಯ ಎನ್ನುವಷ್ಟರ ಮಟ್ಟಿಗೆ ಅಪ್ವರ್ಡ್ ಬದಲಾಗಿದ್ದ.

ನಾನು ಭಾರತಕ್ಕೆ ಮರಳಿದ ಮೇಲೆ, ನನ್ನ ಕನ್ನಡವಾದದಿಂದಾಗಿ ಯೂನಿವರ್ಸಿಟಿಯ ಇಂಗ್ಲಿಷ್ ಇಲಾಖೆಯಿಂದ ದೂರ ಉಳಿಯಬೇಕಾಯಿತು. ಅಪ್ವರ್ಡ್ ನನ್ನ ಹಿತಚಿಂತಕನಾಗಿ, ರಾಜಕೀಯ ಜಂಜಾಟಗಳಲ್ಲಿ ನಿನ್ನ ಬರವಣಿಗೆ ಬಿಡಬೇಡ, ನಾನು ಮಾಡಿದ ತಪ್ಪು ಮಾಡಬೇಡವೆಂದು ಬರೆದ ಕಾಗದಗಳು ನನ್ನ ಬಳಿ ಇವೆ. ಅಪ್ವರ್ಡ್ ಬರೆದು ಮಗಿಸಿದ ತ್ರಿವಳಿ ಕಾದಂಬರಿಗಳನ್ನು ನನಗೆ ಕಳುಹಿಸಿದ್ದಾನೆ. ನನ್ನ ಥೀಸಿಸ್‌ನನ್ನು ಇಷರ್‌ವುಡ್‌ಗೆ ಕಳುಹಿಸಿ, ಅದನ್ನು ಅಮೆರಿಕಾದಲ್ಲಿ ಪ್ರಕಟಿಸಲು ಪ್ರಯತ್ನಿಸಿದ್ದಾನೆ. ಆದರೆ ನಾನದನ್ನು ಒಂದು ಪುಸ್ತಕದ ರೂಪದಲ್ಲಿ ತಿದ್ದುವುದು ಅಗತ್ಯವಾಗಿತ್ತು. ನನಗೆ ಅದರಲ್ಲಿ ಉಮೇದೇ ಹುಟ್ಟಲಿಲ್ಲ.

ನನ್ನಿಂದ ತಾನು ಉಪಕೃತನೆಂದು ಅಪ್ವರ್ಡ್ ಅವನಿಗಿಂತ ಕಿರಿಯನಾದ ನನ್ನನ್ನು ಬೆಳೆಸುವ ಪ್ರೀತಿಯಲ್ಲಿ ಹೇಳಿರಬಹುದು. ನಾನಂತೂ ಅವನ ಸಹವಾಸದಿಂದ ನನ್ನ ಒಳಬಾಳನ್ನು ಬೆಳೆಸಿಕೊಂಡಿದ್ದೇನೆ. ಅವನ ಜೊತೆ ಸಂಪರ್ಕ ತಪ್ಪಿ ಅದೆಷ್ಟು ವರ್ಷಗಳೇ ಆಗಿಹೋದುವೊ! ಆದರೆ ಕೆಲವು ವರ್ಷಗಳ ಹಿಂದೆ ನಡೆದ ಒಂದು ಘಟನೆಯಿಂದ ಈ ಸ್ಮೃತಿ ಸರಣಿಯನ್ನು ಕೊನೆ ಮಾಡುತ್ತೇನೆ.

ಅಪ್ವರ್ಡ್‌ನ ಅಭಿಮಾನಿ ಮತ್ತು ಮುವ್ವತ್ತರ ದಶಕ ಸೃಷ್ಟಿಸಿದ ಚಿಂತನಾಪರ ಲೇಖಕ (ಎನ್‌ಕೌಂಟರ್‌ಸಂಪಾದಕ) ಸ್ಟೀಫನ್‌ಸ್ಪೆಂಡರ್ ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ನಾನು ಅವರನ್ನು ನೋಡಿ ನನ್ನ ಹೆಸರು ಹೇಳಿಕೊಂಡು ನಮಸ್ಕರಿಸಿದೆ. ಸ್ಪೆಂಡರ್ ನಯವಾಗಿ ಅಪ್ಪಟ ಬ್ರಿಟಿಷ್‌ಸೌಜನ್ಯದ ಮಾತಾಡಿ ಕೈಕುಲುಕಿದರು. ನಾನು ಆಮೇಲೆ ಜಾಗ ಹುಡುಕಿ ಹಿಂದಿನ ಸಿಟಲ್ಲಿ ಕುಳಿತುಕೊಂಡೆ. ಸಭೆ ಸ್ಪೆಂಡರ್‌ನನ್ನು ನೋಡಲೆಂದು ತುಂಬಿತ್ತು. ರಾಮಕೃಷ್ಣ ಹೆಗಡೆ ಸಭೆಗೆ ಬಂದರು. ಸ್ಪೆಂಡರ್ ಅವರೊಡನೆ ಮಾತಾಡುತ್ತಿದ್ದವರು ಎದ್ದು ನಿಂತರು. ಹೆಗಡೆಯೂ ನಿಂತು ಹುಡುಕಿ ನನ್ನನ್ನು ಗುರುತಿಸಿ ಅವನಿಗೆ ತೋರಿಸಿದರು. ಅವನ ಸಮಕಾಲೀನ ಲೇಖಕರಲ್ಲಿ ಪ್ರಾಯಶಃ ಎಲ್ಲರಿಗಿಂತ ಎತ್ತರದ ಆಳಾದ ಸ್ಪೆಂಡರ್‌ನಾನು ಕೂತಿದ್ದ ಜಾಗಕ್ಕೆ ನಡೆದು ಬಂದ, ಕೈಕುಲುಕಿ ಹೆಳಿದ : ‘ನಾನು ನೋಡಬೇಕೆಂದು ಇದ್ದ ಅನಂತಮೂರ್ತಿ ನೀನೇ ಇರಬಹುದೆಂದು ನೀನು ನನ್ನನ್ನು ಮಾತಾಡಿಸಿದಾಗ ಹೊಳೆಯಲೇ ಇಲ್ಲ, ಸಾರಿ. ನಿನ್ನನ್ನು ನಾನು ಓದಿದ್ದೇನೆ. ನಿನ್ನನ್ನು ನೋಡಲು ಬಯಸಿದ್ದೆ. ಥ್ಯಾಂಕ್ಸ್‌ಫಾರ್ ಕಮಿಂಗ್.’

ಈ ಸ್ಪೆಂಡರ್ ಬೇರೆಯ ಮನುಷ್ಯನೇ ಆಗಿದ್ದ. ಬ್ರಿಟಿಷ್ ಸೌಜನ್ಯದ ಮಾತಾಡಲಿಲ್ಲ. ಅಪ್ವರ್ಡ್ ಬಗ್ಗೆ ಹಳೆಯ ಸ್ನೇಹಿತನಂತೆ ಮಾತಾಡಿದ.

ನಾನು ಗುರುತಿಸಿಕೊಂಡಾಗ ಸೌಜನ್ಯದ ಸ್ಪೆಂಡರ್‌ನನಗೆ ಕಂಡಿದ್ದ. ಆದರೆ ಒಲಗಿನಿಂದ ಗುರುತಿಸಿಕೊಂಡಿದ್ದಾಗಲೇ ನಾವು ಒಬ್ಬರನ್ನೊಬ್ಬರು ನಿಜವಾಗಿ ಕಾಣುವುದು ಅಲ್ಲವೆ? ನಾನು ಕಂಡ ಅಪ್ವರ್ಡ್ ಅವನ ಯೌವನದ ಗೆಳೆಯ ಸ್ಪೆಂಡರಿಗೆ ನನ್ನನ್ನು ಕಾಣಿಸಿದ್ದ.

* * *

ಅತಿ ದುಷ್ಟವಾದ ಕಾಲದಲ್ಲಿ ಬರೆಯುವುದು ಸಾಧ್ಯವೆ? ಅಥವಾ ಸಾಧುವೆ? ಎಂಬ ಪ್ರಶ್ನೆಯಿಂದ ಈ ಲೇಖನ ಮಾಲೆಯನ್ನು ಪ್ರಾರಂಭಿಸಿದ್ದೆ. ಯಹೂದ್ಯರನ್ನು ಹಿಂಸೆ ಮಾಡಿ ಬೇಯಿಸಿ ಸುಟ್ಟ ಆಸ್‌ವಿಟ್ಜ್ (Aushwitz) ಕ್ರೌರ್ಯವನ್ನು ಕಂಡ ನಂತರ ಕಾವ್ಯ ಸಾಧ್ಯವೆ ಎಂದು ಕಂಗಾಲಾಗಿ ಹೇಳಿದವರು ಇದ್ದಾರೆ. ಈ ದಿನಗಳಲ್ಲಿ, ಭಾರತ ಬಲವಾಗುತ್ತಿರುವಂತೆ ಕಾಣುವ ದಿನಗಳಲ್ಲಿ ಎಲ್ಲೆಲ್ಲು ಕೋಮುಹಿಂಸೆ, ಭಯೋತ್ಪಾದನೆ ತಲೆಯೆತ್ತುತ್ತಿರುವಾಗ ಒಂದು ಪ್ರೇಮ ಕಥೆಯನ್ನು ಬರೆಯುವುದು ಸಾಧ್ಯವೆ ಎಂದು ಕೇಳಬಹುದೇನೊ?

ಬ್ರೆಕ್ಟ್ ಬರೆದೊಂದು ಪದ್ಯ ನೆನಪಾಗುತ್ತದೆ. ನೆನಪಾದಷ್ಟನ್ನು ಮಾತ್ರ ಹೇಳುತ್ತೇನೆ. ಮಗಳು ಕೇಳುತ್ತಾಳೆ : ‘ಅಪ್ಪ, ನಾನು ಫ್ರೆಂಚ್ ಕಲಿಯಲೆ?’ ಅಪ್ಪನಿಗೆ ಹೇಳಬೇಕೆನ್ನಿಸುತ್ತದೆ: ‘ಕಿರುಚಿದಷ್ಟು ಮಾತ್ರ ಕೇಳಿಸುವ ಈ ಜಂಜಡದಲ್ಲಿ ಫ್ರೆಂಚಿನ ಸೂಕ್ಷ್ಮಗಳಿಂದ ಏನು ಪ್ರಯೋಜನ ಮಗಳೆ?’ ಮಗಳು ಕೇಳುತ್ತಾಳೆ: ‘ಗಣಿತ ಕಲಿಯಲೇ ಅಪ್ಪ?’ ಅಪ್ಪನಿಗೆ ಹೇಳಬೇಕೆನ್ನಿಸುತ್ತಿದೆ: ‘ಎರಡು ಚೂರು ರೊಟ್ಟಿಯ ಜೊತೆ ಇನ್ನೆರಡು ಚೂರನ್ನು ಮಾತ್ರ ಬಯಸುವ ಈ ಕಾಲದಲ್ಲಿ ಗಣಿತ ಕಲಿತೇನು ಪ್ರಯೋಜನ ಮಗಳೆ?’ ಮಗಳು ಕೇಳುತ್ತಾಳೆ: ‘ಚರಿತ್ರೆಯನ್ನು ಓದಲೇ ಅಪ್ಪ?’ ಅಪ್ಪನಿಗೆ ಹೇಳಬೇಕೆನ್ನಿಸುತ್ತದೆ: ‘ಬಲಿಷ್ಠರು ಬಡವರನ್ನು ಕೊಲ್ಲುತ್ತಾರೆ ಎನ್ನುವಷ್ಟು ಮಾತ್ರ ನಿಜವೆನ್ನಿಸುವ ಈ ಕಾಲದಲ್ಲಿ ಚರಿತ್ರೆಯನ್ನೋದಿ ಏನು ಪ್ರಯೋಜನ ಮಗಳೆ?’

ಆದರೆ ಈ ಪದ್ಯ ಹುಟ್ಟಿಸುವ ಬೆರಗು ಅಪ್ಪ ಕೊಡುವ ಉತ್ತರದಲ್ಲಿದೆ: ‘ಹೀಗೆಲ್ಲ ನನಗೆ ಅನ್ನಿಸಿದರೂ ಮಗಳೆ, ಹೇಳುವೆ ಕೇಳು – ನೀನು ಫ್ರೆಂಚ್ ಕಲಿಯಬೇಕು, ಗಣಿತ ಕಲಿಯಬೇಕು, ಚರಿತ್ರೆ ಓದಬೇಕು.’

ಈ ದಿನಗಳಲ್ಲಿ ಮನುಷ್ಯ ಯಾವ ಕೃತಕತೆಯೂ ಇಲ್ಲದಂತೆ ನಿಸ್ವಾರ್ಥಿಯಾಗಿ, ಅದರಲ್ಲೇ ಖುಷಿ ಕಾಣುವವನಾಗಿ ಇರುವುದು ಸಾಧ್ಯವೆ/ ಸಾಧ್ಯವೆಂದು ಯಾವ ಸೈದ್ಧಾಂತಿಕವಾದದ ಆಶ್ರಯವನ್ನೂ ಪಡೆಯದೆ ಹೇಳುವ ಕಥೆಯೊಂದನ್ನು ಈಚೆಗೆ ಓದಿ ಸಂತೋಷಪಟ್ಟಿದದೇನೆ. ಅದು ಜಯಂತ ಕಾಯ್ಕಿಣಿ ಬರೆದ ಒಂದು ಕಥೆ; ‘ಚಾರ್ಮಿನಾರ್‌’ (ದೇಶ ಕಾಲ – ೭).

* * *

ಮನುಷ್ಯನ ಒಳಬಾಳಿನ ಸುಳಿ ಸುತ್ತುಗಳನ್ನು, ಸುಖ ದುಃಖಗಳನ್ನು, ಕಪಟವನ್ನು, ದೈವಿಕತೆಯನ್ನು, ಆಗುಹೋಗುಗಳನ್ನು, ಹಾಗೆಯೇ ಹೊರ ಪ್ರಕೃತಿಯ ಏಕಕಾಲಕ್ಕೆ ಶಾಶ್ವತವು ಚಂಚಲವೂ ಆದ ಮಾಯಾಜಗತ್ತನ್ನು ಸೃಷ್ಟಿಸುವುದರಲ್ಲಿ ಸಾಹಿತ್ಯ ಲೋಕಕ್ಕೆ ಮಾದರಿಗಳಗಿ ಪೂರ್ವಸೂರಿಗಳೂ ಇದ್ದಾರೆ; ಆಧುನಿಕರೂ ಇದ್ದಾರೆ. ಆದರೆ ರಾಜಕೀಯವೆಂದರೆ ಸಂಗೀತ ಕಚೇರಿಯಲ್ಲಿ ಗುಂಡಿನ ಶಬ್ದ ಕೇಳಿಸಿದಂತೆ ಎಂಬ ಐರೋಪ್ಯ ಲೇಖಕನೊಬ್ಬನ ಮತಿದೆ. ಕೇಳಿಸಿಕೊಳ್ಳದೆ ಇರುವಂತಿಲ್ಲ; ಕೇಳಿಸಿದ್ದನ್ನು ಹೇಗೆ ನಿಭಾಯಿಸಬೇಕು ತಿಳಿಯುವುದಿಲ್ಲ. ರಾಜಕೀಯವನ್ನೆ ವಸ್ತುವಾಗಿ ಪಡೆದ, ಆದರೆ ಜೀವನದ ನಿತ್ಯದ ಸಂಗೀತವನ್ನು ಕಡೆಗಣಿಸಲಾರದ ಲೇಖಕನೊಬ್ಬ ಹೇಗೆ ತಾನು ಕಾಣುವ ವಿರೋಧದ ಸತ್ಯಗಳನ್ನು ಒಟ್ಟಾರೆಯಾಗಿ ನಿಭಾಯಿಸುತ್ತಾನೆ ಇದು ಸವಾಲು, ವೇದವ್ಯಾಸರು ಸ್ವೀಕರಿಸುವ ಸವಾಲು. ಟಾಲ್‌ಸ್ಟಾಯ್ ನಿಭಾಯಿಸುವ ಸವಾಲು. ಒಂದೇ ಕಾಣ್ಕೆಯಲ್ಲಿ ನೆಪೋಲಿಯನ್ ಶೀತದಿಂದ ವಿಚಲಿತವಾಗುವುದನ್ನೂ, ಒಬ್ಬಳು ತಾನು ಪಡೆದ ನಸ್ಯದ ಘಾಟು ರುಚಿಸದೆ ಕಿರಿಕಿರಿಗೊಳ್ಳುವುದನ್ನೂ, ಹೋರಾಟದಲ್ಲಿ ತೊಡಗಿದವ ರಾತ್ರಿ ಆಕಾಶ ನೋಡುತ್ತ ಮಲಗಿ ಶೂನ್ಯದ ದರ್ಶನ ಪಡೆಯುವುದನ್ನೂ ಟಾಲ್‌ಸ್ಟಾಯ್ ಒಟ್ಟಾಗಿ ಕಂಡು ಬರೆಯಬಲ್ಲ.

ಮುವ್ವತ್ತರ ದಶಕದ ಲೇಖಕರಿಗೆ ಇದು ಸಾಧ್ಯವಾಗಲಿಲ್ಲ. ರಾಷ್ಟ್ರೀಯತೆಯ ಅರ್ಥಹೀನ ದುರಾಸೆಯಿಂದ ನಡೆದ ಮೊದಲನೆಯ ಮೂರ್ಖ ಯುದ್ಧದಲ್ಲಿ ಜರ್ಮನಿ ಸೋತದ್ದು ಮಾತ್ರವಲ್ಲ; ದರಿದ್ರ ದೇಶವಾಯಿತು. ಇದರ ಫಲವಾಗಿ ಹಿಟ್ಲರ್ ಹುಟ್ಟಿಕೊಂಡ. ಪ್ರಾರಂಭದಲ್ಲಿ ಇಂಗ್ಲೆಂಡೂ ಅವನನ್ನು ತಾಳಿಕೊಂಡಿತು. ಸ್ಟಾಲಿನ್‌ಅವನ ಜೊತೆ ಒಪ್ಪಂದವನ್ನೇ ಮಾಡಿಕೊಂಡು ಪ್ರಪಂಚದ ಕಮ್ಯುನಿಸ್ಟರನ್ನು ಕಂಗಾಲುಗೊಳಿಸಿದ. ಆಮೇಲೆ ಎರಡನೇ ಮಹಯುದ್ಧದಲ್ಲಿ ಸೋವಿಯತ್‌ಸೈನಿಕರು ತಮ್ಮ ಅಸಾಮಾನ್ಯ ಶೌರ್ಯದಲ್ಲೂ ತ್ಯಾಗದಲ್ಲೂ ಯೂರೋಪಿನಲ್ಲಿ ಹಿಟ್ಲರನನ್ನು ಸೋಲಿಸಿದರು. ಆಗಲೇ ಸೋತ ಜಪಾನಿನ ಮೇಲೆ – ಯೂರೋಪಿನ ಮೇಲೆ ಅಲ್ಲ – ಸೋತರೂ ಸೋಲದ ಜಪಾನಿನ ಸೊಕ್ಕನ್ನು ಅಡಗಿಸಲಿಕ್ಕೂ, ಇನ್ನೂ ಕ್ರೂರವೆಂದರೆ, ತಮ್ಮ ಹೊಸ ಅಸ್ತ್ರವನ್ನು ಪ್ರಯೋಗಮಾಡಿ ಅದರ ಶಕ್ತಿಯನ್ನು ಕಣ್ಣಾರೆ ತಿಳಿಯಲಿಕ್ಕೂ ಅಮೆರಿಕನ್ನರು ಆಟಂಬಾಂಬನ್ನು ಬಳಸಿದರು. ಹಿಟ್ಲರ್‌ಯಹೂದ್ಯರನ್ನು ಕೊಂದರೆ, ಅಮೆರಿಕಾ ಬಡಪಾಯಿಗಳಾದ ಹಿರೋಷಿಮಾ, ನಾಗಸಾಕಿಯ ಮುಗ್ಧರನ್ನು ಸುಟ್ಟು ಎಲ್ಲರನ್ನೂ ನಿಧಾನವಾಗಿ ಕೊಲ್ಲುವ ಬೂದಿಯನ್ನು ಸೃಷ್ಟಿಸಿ ಮೊಸಳೆ ಕಣ್ಣೀರಿಟ್ಟಿತು.

ಯುದ್ಧಾನಂತರ ಸೋವಿಯತ್ತರು ಪೂರ್ವ ಯೂರೋಪಿನ ಹಲವು ದೇಶಗಳನ್ನು ಗುಲಾಮರನ್ನಾಗಿಯೂ ನಿರಭಿಮಾನರನ್ನಾಗಿಯೂ ಮಾಡಿ ತಮ್ಮ ಪಕ್ಷದ ಹಿಡಿತದಿಂದ ಆಳಿದರು. ಸೋವಿಯತ್‌ಒಕ್ಕೂಟ ನೆವದಲ್ಲಿ ರಷ್ಯದ ರಾಷ್ಟ್ರೀಯತೆಗೆ ತನ್ನೊಳಗಿನ ಹಲವು ದೇಶಗಳನ್ನು ಅಡಿಯಾಳಾಗಿ ಮಾಡಿದರು. ಝಾರ್‌ದೊರೆಗಳು ಮಾಡಲಾರದ್ದನ್ನು ಸಿದ್ಧಾಂತದ ನೆವದಲ್ಲಿ ಸೋವಿಯತ್ತರು ಮಾಡಿದರು.

ಇವೆಲ್ಲವನ್ನೂ ಒಟ್ಟಾಗಿ ಗ್ರಹಿಸಲು ಕೆಲವು ಫ್ರಾಯ್ಡ್‌ನನ್ನು ಬಳಸಿದರು; ಇನ್ನು ಕೆಲವರು ಮಾರ್ಕ್ಸ್‌ನನ್ನು ಬಳಸಿದಿರು. ಆದರೆ ತಮ್ಮ ಅಂತರ್ಯದಿಂದ ಹೊರಗಿನ್ನೂ ಒಳಗನ್ನೂ ಒಟ್ಟಾಗಿ ನೋಡಲಾರದೆ ಹೋದರು.

ಈಗ ಯಾವ ಸಿದ್ಧಾಂತವೂ ಇಲ್ಲದ ವಿಶ್ವ ಮಾರುಕಟ್ಟೆಯ ರಾಜಕೀಯ ಎಲ್ಲೆಲ್ಲೂ, ಗಾಂಧಿ – ಬುದ್ಧರು ಹುಟ್ಟಿದ ಭಾರತದಲ್ಲೂ, ಮಾವೋ ಮೆರೆದ ಚೀನಾದಲ್ಲೂ, ಮಾರ್ಕ್ಸ್‌ನಿಗೆ ಆಶ್ರಯ ಕೊಟ್ಟಿದ್ದ ಇಂಗ್ಲೆಂಡಿನಲ್ಲೂ ಬುಷ್‌ನನ್ನು ಎರಡು ಸಾರಿ ಗೆಲ್ಲಿಸಿದ ಅಮೆರಿಕಾಕ್ಕೆ ಅಡಿಯಾಳಾಗಿ ನಡೆದಿದೆ.

* * *