ನಿತ್ಯದ ಸಾಂಸಾರಿಕ ಗೋಳಿನ, ಕುಡಿತದಲ್ಲಿ ಅದನ್ನು ಮರೆಯುವೆನೆಂದು ಭ್ರಮಿಸುತ್ತಿದ್ದ ನನ್ನ ಗೆಳೆಯನೊಬ್ಬ ಕಂಡಿದ್ದೇ ಹೇಳುತ್ತ ಇದ್ದ ಒಂದು ಮಾತೆಂದರೆ ‘ಇವತ್ತು ಇನ್ನೊಂದು ರಂಪ ಕಣೋ’. ಸಿಗರೇಟನ್ನು ಬೀಸುವ ಗಾಳಿಯಲ್ಲೂ ಕಡ್ಡಿಗೀರಿ ಹಚ್ಚಿಸಬಲ್ಲವನಾಗಿದ್ದ ಅವನು ಹೇಳುತ್ತಿದ್ದ ಸಲಿಗೆಯ ಮಾತಿದು. ಆರಾಮಾಗಿ ಸಿಗರೇಟು ಸೇದುತ್ತ ಅದೇನೆಂದು ಅವನು ಹೇಳಬೇಕಾಗಿರಲಿಲ್ಲ; ನಾನೂ ಕೇಳಬೇಕಾಗಿರಲಿಲ್ಲ.

ಮನೆಯಲ್ಲಿ ಇದ್ದವರು ಮೂರು ಜನ; ಅವನು, ಅವನ ಹೆಂಡತಿ ಮತ್ತು ವಯಸ್ಸಾದ ತಾಯಿ. ಈ ಮೂರು ಜನ ಏನೇನೊ ಕಾರಣಗಳನ್ನು ಹುಡುಕಿ ಜಗಳವಾಡದೇ ಇರಲಾರರು. ನಿತ್ಯ ಜಗಳದಲ್ಲಿ ಅದೇ ಅದೇ ಮಾತುಗಳನ್ನು ಎತ್ತಿ ನಿನ್ನೆ ತಾನೇ ವಾದಿಸಿದ್ದಾಗಿದೆ ಎಂಬುದನ್ನು ಮರೆತೋ ಮರೆಯದೆಯೋ –  ಅದು ಮುಖ್ಯವಲ್ಲ –  ಮತ್ತೆ ವಾದಿಸುವುದು; ತಾನು ಸಾಯುತ್ತೇನೆಂದು ಪ್ರತಿಸಾರಿಯೂ ಜಗಳದ ಅದೇ ಘಟ್ಟ ಮುಟ್ಟಿದ್ದೇ ತಾಯಿ ಬೆದರಿಕೆ ಹಾಕುವುದು. ಅದಕ್ಕಿಂತ ಮುಂಚೆ ತಾನು ಸಾಯುತ್ತೇನೆಂದು ಸೊಸೆ ಕೆಲವೊಮ್ಮೆ ಬೆದರಿಕೆ ಹಾಕಿ – ಮೊದಲಾಗಿ ಹಾಕಿದೆನೆಂದು ಬೀಗಿ –  ಗೊಳೋ ಎಂದು ಅಳುವುದು. ಇದೇ ನನ್ನ ಪ್ರಾಣಿ ಪಕ್ಷಿಗಳೆಂದರೆ ಹುಚ್ಚಾಗುವ ಸಲುಗೆಯ ಸುಖ + ಗಂಡನನ್ನು ಬಿಟ್ಟು ಒಂಟಿಯಾಗಿದ್ದು ಅವರಿವರ ಮನೆಯಲ್ಲಿ ಅಡುಗೆ ಕೆಲಸ ಮಾಡಿ ಸಲುಹಿದ ತಾಯಿಯ ಮಗ + ತಲೆ ಬಾಚಿ ಹೂ ಮುಡಿದಾಗ ಚೆಲುವೆಯಾಗಿ ಕಾಣುವ, ಹುಡುಗಿಯಾಗಿದ್ದಾಗ ಕುಂಟೆಬಿಲ್ಲೆ ಅಟದ ಖುಷಿಯ ಹೆಂಡತಿಯ ಗಂಡ ತಾನು ಮನೆಬಿಟ್ಟು ಹೋಗುತ್ತೇನೆಂದು ಮೆಟ್ಟು ಹಾಕಿಕೊಳ್ಳುತ್ತ ಕಿರುಚುವುದು. ಒಂದು ಕ್ಷಣ ಮೂವರೂ ಇವೆಲ್ಲವೂ ಅಪ್ರಕೃತವೆಂಬಂತೆ ಸುಮ್ಮನಾಗುವುದು.

ಆಮೇಲೆ, ಹಾಕಿಕೊಂಡ ಮೆಟ್ಟನ್ನು ಕಳಚಿ, ಬೆವರೊರಸಿಕೊಂಡು, ಅಲ್ಲೇ ಏನೂ ತೋಚದಂತೆ ಒಂದು ಕ್ಷಣ ಕೂತು, ಅಪೂರ್ವ ಕೈಚಳಕದಿಂದ ಮಕ್ಕಳನ್ನು ರಮಿಸಬಲ್ಲ ನನ್ನ ಈ ಗೆಳೆಯ, ತಾಯಿ ಮಾಡಿಟ್ಟ ಘಮಘಮ ಕಾಫಿಯನ್ನು ಕುಡಿದು ಸೈಕಲ್ ಹತ್ತಿ ಮನೆಯಿಂದ ಹೊರಗೆ ಹೊರಡುವುದು; ಹೊರಡುವಾಗ ತನಗೆ ಗೊತ್ತಾಗುವಂತೆ ಅಳುತ್ತ ಕೂತ, ಮಾಸಿದ ಸೀರೆಯುಟ್ಟು ತಲೆಬಾಚಿಕೊಳ್ಳದ ಹೆಂಡತಿಯನ್ನು ಗಮನಿಸಲೇ ಇಲ್ಲ ಎಂದು ಅವಳಿಗೆ ಎನ್ನಿಸುವಂತೆ ಯಾವುದೋ ಹಾಡನ್ನು ಸಿಳ್ಳೆ ಹಾಕುತ್ತ ಇವನು ಮನೆಯಿಂದ ಹೊರಡುವುದು. ಮತ್ತೆ ನಾಳೆ ಈ ಆಡಿದ ಮಾತುಗಳನ್ನೇ ಮತ್ತೆ ಆಡುವುದು, ಆಡಿದ್ದನ್ನು ಕೇಳಿಸಿಕೊಳ್ಳುತ್ತಿಲ್ಲವೇನೋ ಎಂದು ಜೋರಾಗಿ ಆಡುವುದು, ಕಿರುಚಿ ಆಡುವುದು, ಒಬ್ಬರಿಗೊಬ್ಬರು ಕಿವುಡರಾಗಿ ಗಂಟಲಿನ ಧ್ವನಿ ಹೆಚ್ಚಾಗುವಂತೆ ಪರಸ್ಪರ ಸಹಕರಿಸುವುದು.

ಈ ಮೂರು ಜನ ಒಟ್ಟಾಗಿಯೂ ಇರಲಾರರು; ಬಿಟ್ಟೂ ಇರಲಾರರು. ಯಾವ ಹೊಸ ಮಾತನ್ನೂ ಆಡಲಾರರು. ಹೇಳಿದ್ದು ನಾಟುವಂತೆ ಮಾಡುವ ಮನಸ್ಸಿನ ಭಾಷೆಯನ್ನು ಕಳೆದುಕೊಂಡರು; ಆಡಿದ್ದನ್ನು ಮಾಡಲಾರದವರು. ನೋಯದವರು; ನೋಯಿಸಲಾರದವರು; ಆದರೆ ನೋಯಿಸುವ ಉದ್ದೇಶವನ್ನು ಬಿಡಲಾರದವರು. ತಮ್ಮ ನರಕದಿಂದ ಹೊರಬರಲಾರದ ಲಂಪಟರು; ನಿತ್ಯ ನಾರಕಿಗಳು. ಅಂದರೆ ಏನನ್ನೂ ತೀವ್ರವಾದ ದುಃಖದಲ್ಲಿ ಕಲಿಯಲಾರದವರು. ದುಃಖಕ್ಕೆ ಮೌನದಲ್ಲಿ ಎದುರಾಗಿ, ಅದನ್ನು ನಿಟ್ಟಿಸಿ ನೋಡಿ ಬದಲಾಗದವರು. ಕೊನೆಯ ಪಕ್ಷ ದುಃಖದಲ್ಲಿ ಉಗ್ಗಲೂ ಆಗದಷ್ಟು ಸಲೀಸಾದ ಸರಾಗ – ಭಾಷಿಗಳಾದವರು. ಹೀಗೆ ನಾನು ಸಲುಗೆಯಲ್ಲಿ ನನ್ನ ಗೆಳೆಯನನ್ನು ಜರಿದಾಗಲೂ ನನಗೆ ಅನ್ನಿಸುವುದಿತ್ತು. ಆದರೂ ಅವರು ಅರಳಬಲ್ಲವರಲ್ಲೇ? ಯಾಕೆಂದರೆ ಅವರು ಹೀಗಾದದ್ದು ತೋರಿಕೆಗಾಗಿ ಹೊರಗಿನವರಿಗಲ್ಲ; ಬಿಟ್ಟಿರಲಾರದ ತಮ್ಮ ತಮ್ಮ ನಡುವೆ ಮಾತ್ರ.

ಗಣಿಗಾರಿಕೆ ಲಂಚ ಪ್ರಕರಣ ಈ ಬಗೆಯದಲ್ಲ; ಇನ್ನೊಂದು ಬಗೆಯ ಸಿಟ್ಟು ಕೂಡ ನಾಟಕೀಯ ಸೋಗಾದ ರಂಪದ ರಾಜಕಾರಣ. ಒಂದು ಗುರಿಯತ್ತ ದೌಡಾಯಿಸುತ್ತಿದ್ದಾರೆಂದು ಭಾಸವಾಗುವಂತೆ ಎದುರುಬದಿರಾಳಿಗಳು ಇರುವಲ್ಲೇಕುಮ್ಮು ಚಟ್ಟು ಹಾಕಿ ತಮ್ಮ ನಿಗದಿತ ಸ್ಥಳಗಳಲ್ಲಿಯೇ ಗುರಿಮುಟ್ಟಿದ ಭ್ರಮೆಯನ್ನು ನಮ್ಮಲ್ಲಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇನ್ನೊಂದು ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಲು ಮಾಡುತ್ತ ಇರುವ ರಂಪ ಇದು ಅಥವಾ ತಮ್ಮ ಅಪವಿತ್ರ ಮೈತ್ರಿಯನ್ನು ಕೊನೆಗಾಣಿಸಿ ಲಾಭ ಮಾಡಿಕೊಳ್ಳಲು ಕೆಲವರು ಹೂಡಿಕೊಂಡ ಉಪಾಯ.

ಈ ಪ್ರದರ್ಶನದಲ್ಲಿ ನನ್ನ ನಿಮ್ಮ ಪಾಡು ನೋಡಿ. ಮನೆ ಎದುರಿನ ಮರದಲ್ಲಿ ಬಂದು ಕೂತ ಪುಟ್ಟ ಪಕ್ಷಿಯೊಂದನ್ನು ಸುಮ್ಮನೇ ನೋಡುತ್ತ ಕೂತಿರಬಹುದಿತ್ತು. ಕುಟುಕಲು ಏನೋ ಸಿಕ್ಕಾಗ ಅದು ಪಡುವ ಖುಷಿ, ಅದರ ರೆಕ್ಕೆ ಎತ್ತಿ ಮಡಚುವ ಗಾಬರಿ, ಅದರ ಜೀವಂತ ಚಂಚಲತೆ, ಅದರ ಸತತವಾದ ಸದ್ಯತೆ, ತನ್ನ ಸಖಿಯನ್ನೋ ಸಖನನ್ನೋ ಅದು ಕರೆಯುವಾಗ ಆ ಪುಟ್ಟಗಂಟಲು ಹೊರಡಿಸಬಲ್ಲ ನಾದ… ಕಿಟಕಿಯಾಚಿನ ಮರದ ಮೇಲಿರುವ ಹಕ್ಕಿಯನ್ನು ಗಮನಿಸುವ ಬೆರಗಿನ ಬದಲು ನಾವೆಲ್ಲರೂ ಮಾಡಿದ್ದೇನು?

ಯಾರೋ ಒಬ್ಬ ಕುಂಕುಮ ತೊಟ್ಟ ಪುಣ್ಯದ ಗಣಿಮಾಲೀಕರೊಬ್ಬರು ನೂರಾರು ಕ್ಯಾಮರಾಗಳ ಆತುರಕ್ಕೆ ಎದುರಾದ ಹೀರೋ ಆಗಿ ‘ಇಗೋ ಇಗೋ ಕಾಣಲಿದ್ದೀಯ, ಒಂದು ನೂರಾ ಐವತ್ತು ಕೋಟಿ ರೂಪಾಯಿಗಳನ್ನು ನಮ್ಮನ್ನಾಳುವ ದುಷ್ಟನೊಬ್ಬ ಗಣಿಮಾಲೀಕರಿಂದ ಲಂಚವಾಗಿ ಪಡೆದಿದ್ದನ್ನು ನೋಡಲಿದ್ದೀಯ’ ಎಂದು ಮೈಕ್‌ಹಿಡಿದು ಸತತ ಮಾತಾಡುವುದನ್ನು ಕೇಳುತ್ತ ಪೆದ್ದರಂತೆ ಟೆಲಿವಿಷನ್‌ಎದುರು ಕೂತದ್ದು. ಅವರನ್ನೇ, ಬಳ್ಳಾರಿಯ ಸೆಖೆಗೆ ಅವರು ಬೆವರುತ್ತ ಮಾತಾಡುವುದನ್ನೇ, ಅವರ ಬೆವರನ್ನು ಅವರ ಹಿಂಬಾಲಕನೊಬ್ಬ ಹಿಂದೆ ವಿಧೇಯವಾಗಿ ನಿಂತು ಒರಸುವುದನ್ನೇ ನೋಡುತ್ತ, ಯಾವುದೋ ಒಂದು ಪಾಪಿಷ್ಠ ಕೈಯಿಂದ ಇನ್ನೊಂದು ಪಾಪಿಷ್ಠ ಕೈಗೆ ಭಾಗ್ಯದ ಲಕ್ಷ್ಮೀ ವರ್ಗವಾಗುವುದನ್ನು ನಿರೀಕ್ಷಿಸುತ್ತಲೇ ಬಡಪಾಯಿಗಳಾದ ನಾವು ತಾಳ್ಮೆಯಲ್ಲಿ ಕಾಯುತ್ತ ಇದ್ದದ್ದು.

ಇನ್ನೂ ಮುಖ್ಯವಾಗಿ ಇಡೀ ಭಾರತಕ್ಕೆ ಈ ಮೆಗಾ ಸೀರಿಯಲ್ ಪ್ರದರ್ಶನವನ್ನು ಗಣಿಮಾಲೀಕರೂ ಮಾಧ್ಯಮದವರೂ ಒಟ್ಟಾಗಿ ಏರ್ಪಡಿಸಿ ಬಿಸ್ಕತ್ತು, ಬಚ್ಚನ್‌, ಕಾರು, ಟೈರು, ಸೋಪು, ಟೂ‌ತ್ ಪೇಸ್ಟು ಇತ್ಯಾದಿಗಳ ಕಮರ್ಶಿಯಲ್‌ ಬ್ರೇಕ್‌ಗಳಿಗೆ ಅನುವಾದದ್ದು. ನಮ್ಮಲ್ಲಿ ಒಂದು ಗಾದೆಯಿದೆ: ಅಜ್ಜಿ ಸುಟ್ಟ ಹಾಗೂ ಆಯ್ತು: ಚಳಿ ಕಾಯಿಸಿಕೊಂಡ ಹಾಗೂ ಆಯ್ತು. ನಾವೇ ಆರಿಸಿದ ಸರ್ಕಾರದ ಮುಖ್ಯಸ್ಥರು ಈ ಲಂಚವನ್ನು ಖಂಡಿತ ಸ್ವೀಕರಿಸುವುದು ಸಾಧ್ಯವೇ ಇಲ್ಲ ಎಂಬ ನಿರೀಕ್ಷೆಯಲ್ಲಾದರೂ ಈ ಪ್ರದರ್ಶನವನ್ನು ನಾವು ನೋಡಿದ್ದಲ್ಲಿ ಅದಕ್ಕೊಂದು ನೈತಿಕ ಅರ್ಥವಾದರೂ ಇರಬಹುದಿತ್ತು. ಆದರೆ ಲಂಚವನ್ನು ಕೈಯಾರೆ ಕೊಡುವುದನ್ನು, ಅದನ್ನು ಹೆಲಿಕಾಫ್ಟರ್‌ನಲ್ಲಿ ಕೊಂಡೊಯ್ಯುವುದನ್ನು ನೋಡುವ ನಿರೀಕ್ಷೆಯಲ್ಲೇ ಈ ರಂಪವೆಂಬ ನಾಟಕದ ಪ್ರೇಕ್ಷಕರಾಗಿ ನಾವು ಇದ್ದವೆಂಬುದು ನಮಗೆ ಹೇಸಿಗೆ ಹುಟ್ಟಿಸಿತೆ? ನಿರೀಕ್ಷಿಸುತ್ತ ಬಯಸಿದ ಪಾಪಕೃತ್ಯವನ್ನು ನಾವ್ನು ಕಾಣಲಾರದೆ ಪೆಚ್ಚಾದೆವು –  ಅಲ್ಲವೆ? ಮುಂದಿನ ಪ್ರದರ್ಶನದಲ್ಲಿ ಇದನ್ನು ತೋರಿಸುತ್ತೇನೆಂದು, ತಾನೇ ಮೆಚ್ಚಿದ ಸಿನಿಮಾಗಳ ಇನ್ನೊಬ್ಬ ಅಪ್ಪಟ ಪ್ರಾಮಾಣಿಕ ತಾನೆಂಬ ಹೀರೋ ಭಂಗಿಯಲ್ಲಿ ಗಣಿಮಾಲೀಕನೊಬ್ಬ ಹೇಳಿದ್ದನ್ನು (ಬಡವಾಗಿ ಹುಟ್ಟಿ ಪೋಲೀಸ್ ಕುಟುಂಬದಲ್ಲಿ ಬೆಳೆದು ದುರ್ಗೆಯ ಕೃಪೆಯಿಂದ ಕೋಟ್ಯಾಧೀಶನಾದ ಕಷ್ಟಜೀವಿಯಾದ ಹಿಂದುತ್ವದ ಕಟ್ಟಾಳು ಬೆವರುತ್ತ ಹೇಳಿದ್ದನ್ನು) ನಾವು ನಂಬಿ ಕಾದಿದ್ದೇವೆ, ಅಲ್ಲವೆ?

ಪ್ರಜಾತಂತ್ರದ ವ್ಯಕ್ತಿಸ್ವಾತಂತ್ರ್ಯದ ನೆವದ ದುರುಪಯೋಗದಿಂದಲೂ ದಿಢೀರ್ ಶ್ರೀಮಂತಿಕೆಯ ಅಮೆರಿಕಾದ ಅನುಸರಣೆಯಿಂದಲೂ ಹುಟ್ಟಿಕೊಂಡ ಈ ಗಣಿಗಾರಿಕೆಯ ರಾಜಕೀಯ ರಂಪಕ್ಕೂ ನಾನು ಮೊದಲು ವಿವರಿಸಿದ ಕೌಟುಂಬಿಕ ರಂಪಕ್ಕೂ ಅಗಾಧವಾದ ಒಂದು ವ್ಯತ್ಯಾಸವಿದೆ. ಹುಳಿಯಾಗಿ ಹಳಸಿದ, ಆದರೆ ಅದು ಅನಿವಾರ್ಯವಲ್ಲದ ನಾನು ಚಿತ್ರಿಸಿದ ಕೌಟುಂಬಿಕ ರಂಪದಲ್ಲೂ ಮಗುವೊಂದು ಹುಟ್ಟಿತು., ರಂಪವನ್ನು ಮರೆಸುವಷ್ಟು ಹಿತದ ಒಂದು ರಾತ್ರೆಯ ಸಂಗದ ಫಲವಾದ ಎಲ್ಲಿಂದಲೋ ಪ್ರತ್ಯಕ್ಷವಾದಂತೆ ಕಂಡ ಈ ಮಗು ಬೆಳೆಯುತ್ತಿದ್ದಂತೆ ಅದರ ಚೆಲ್ಲಾಟಗಳಲ್ಲಿ ತಾಯಿ ಅಜ್ಜಿಯಾದಳು. ಹೆಂಡತಿ ತಾಯಿಯಾದಳು. ಮಗ ತಂದೆಯಾದ. ರಂಪಗಳು ಕೊನೆಗೊಂಡವೆಂದೇನೂ ನಾನು ಹೇಳುತ್ತಿಲ್ಲ. ಸಾಯುವ ಬೆದರಿಕೆಯ ಮಾತು ಒಂದು ಪೊಳ್ಳು ಬೆದರಿಕೆಯ ಮಾತಾಗಿಯೂ ಅವರಿಗೆ ಅರ್ಥಹೀನವಾಯಿತೆಂದಾದರೂ ಹೇಳಬಹುದು. ಆದರೆ ಈ ಭೂಮಿಯೆಂಬ ತಾಯಿಯನ್ನು ರೇಪ್ ಮಾಡುವ ಗಣಿಗಾರಿಕೆಯಲ್ಲಿ ಪಾಲುದಾರರಾದವರ ನಡುವಿನ ರೂಪಾಯಿ ರಂಪದ ಎಷ್ಟು ಕೋಟಿಯಿಂದಲೂ ಏನೂ ಹುಟ್ಟುವುದಿಲ್ಲ. ಈ ರಂಪಕ್ಕೆ ಮರೆಸುವ ಕತ್ತಲಿಲ್ಲ.

* * *

ಈ ರಂಪದ ಸಾರ್ವಜನಿಕ ಪ್ರದರ್ಶನದ ತುರಿಕೆ ಸುಖಕ್ಕೆ ನಮ್ಮ ಒಳಮನೆಗಳಲ್ಲೇ ಅವಕಾಶಮಾಡಿಕೊಂಡಿರುವ ಗೃಹಸ್ಥರಾದ ನಮ್ಮಂಥವರು ಓದಲೇ ಬೇಕಾದ ಒಂದು ಲೇಖವನ್ನು ಅಕಸ್ಮಾತ್ತಾಗಿ ಪುಣ್ಯವಶಾತ್ ಎಂಬಂತೆ ನನ್ನ ಕಣ್ಣಿಗೆ ಬಿದ್ದು ಓದಿದೆ. ಶ್ರೀ ಚಂದ್ರಶೇಖರ್‌ ನಂಗಲಿಯವರ ‘ನೈಸರ್ಗಿಕ ಸಂಪನ್ಮೂಲ ಮತ್ತು ಗಣಿಗಾರಿಕೆ’ (ಹೊನ್ನಾರು ೨೯) ಎಂಬುದು ಈ ಕಾಲದ ಗಾಢವಾದ ಪ್ರಶ್ನೆಯೊಂದರ ಬಗ್ಗೆ ನಮ್ಮ ಮನಸ್ಸನ್ನು ಕಲಕುವ ಬರವಣಿಗೆಯಾಗಿದೆ. ಗಣಿಗಾರಿಕೆಯನ್ನು ನಿಸರ್ಗದ ರೇಪಿಗೆ ಹೋಲಿಸಿದಾಗ ನನ್ನ ಮಾತುಗಳು ವಟಗುಡುವ ಇನ್ನೊಂದು ರಂಪದ ಮಾತಿನ ಹಾಗೆ ನನಗೆ ಭಾಸವಾಗುತ್ತಿದ್ದಂತೆ ನಂಗಲಿಯವರ ಮಾತು ನನ್ನ ಮಾತಿನ ಸಿಟ್ಟಿನ ಹಿಂದಿನ ದುಃಖವನ್ನು ನನಗೆ ತೋರುವಂತೆ ಮಾಡಿತು. ಸತತ ಚಾರಣಿಯಾಗಿ ನಿಸರ್ಗವನ್ನು ಒಬ್ಬ ಪ್ರೇಮಿಯಂತೆ ಅನುಭವಿಸುವ ನಂಗಲಿಯವರದು ನಾವು ಆಲಿಸಬೇಕಾದ ಮಾತು.

ನಿಸರ್ಗದ ಮಡಿಲಿನಲ್ಲೆ ಬೆಳೆಯುತ್ತಿರುವ ದಲಿತರಿಗೆ ಪೂರ್ಣ ಪ್ರಮಾಣದ ಮೀಸಲಾತಿಯನ್ನು ಗಣಿಗಾರಿಕೆಯಲ್ಲಿ ಒದಗಿಸಬೇಕೆಂಬ ಯಾರೋ ಮಾಡಿದ ಸಲಹೆಗೆ ದಲಿತಪರವಾದ ನಿಲುವಿನ ನಂಗಲಿಯವರು ಪ್ರತಿಕ್ರಿಯಿಸುವುದು ಹೀಗೆ:

‘…ಪುನರುತ್ತಪತ್ತಿಯಿಲ್ಲದೆ ಮೂಲೋತ್ಪಾಟನೆಯ ವಿಧಾನಗಳನ್ನು ಅನುಸರಿಸುವ ಗಣಿಗಾರಿಕೆಯನ್ನು ಅಮೇಧ್ಯ ಸೇವನೆಗೆ ಹೋಲಿಸಬಹುದು. ಅಮೇದ್ಯವನ್ನು ಯಾರು? ಎಷ್ಟು ತಿನ್ನಬೇಕು ಎಂದು ನಿರ್ಧರಿಸುವ ಪ್ರಶ್ನೆಯಲ್ಲ ಇದು. ಹಂದಿಗಳು ಎಷ್ಟು ತಿನ್ನಬೇಕು? ನಾಯಿಗಳು ಎಷ್ಟು ತಿನ್ನಬೇಕು? ಕೋಳಿಗಳು ಎಷ್ಟು ತಿನ್ನಬೇಕು? ಎಂದು ಶೇಖಡಾವಾರು ಪ್ರಮಾಣದಲ್ಲಿ ನಿಗದಿಪಡಿಸಲು ಸಾಧ್ಯವೇನು?’

ಈ ಕಟುವಾದ ಮಾತಿನ ಹಿಂದೆ ಸಂಕಟವಿದೆ; ಆತಂಕವಿದೆ; ಆಳವಾದ ನಿಸರ್ಗದ ಬಗೆಗಿನ ಮಾತೃಪ್ರೇಮವಿದೆ. ಮುಖ್ಯವಾಗಿ ‘ಡೆವಲಪ್‌ಮೆಂಟ್‌’ ಎಂದು ನಾವು ಏನನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳುತ್ತೇವೆಯೋ ಅದರ ಬಗ್ಗೆ ಉಪಯುಕ್ತವಾದ ಜೀವಪರವಾದ ವಿಕಾಸಶೀಲವೂ ಆದ ಚಿಂತನೆಯಿದೆ. ಎನರ್ಜಿ ಎಂದು ನಾವು ಕರೆಯುವ ಶಕ್ತಿಯನ್ನು ೧. ಪ್ರಾಕೃತ, ೨. ಸಂಸ್ಕೃತ ೩. ವಿಕೃತ ಎಂದು ವಿಭಾಗಿಸಿ ವೈಜ್ಞಾನಿಕ ಸಮಾಧಾನದಲ್ಲಿ ನಂಗಲಿ ಹೇಳುತ್ತಾರೆ:

‘ಅಲೆಮಾರಿಯಾಗಿದ್ದ ಆದಿಮಾನವನನ್ನು ನದಿದಂಡೆಯ ಮಾನವರನ್ನಾಗಿ ಪರಿವರ್ತಿಸಿದ್ದು ಕೃಷೀಕರಣವೆಂಬ ಮೊದಲನೆಯ ಅಲೆಯಾಗಿದ್ದರೆ, ಕೈಗಾರಿಕೆಗಳು ಮತ್ತು ಸಮುದ್ರಯಾನಗಳ ಮೂಲಕ ಆಧುನಿಕ ಮಾನವನನ್ನು ಸೃಷ್ಟಿಸಿದ್ದು ಕೈಗಾರಿಕೀಕರಣವೆಂಬ ಎರಡನೇ ಅಲೆಯಾಗಿದೆ. ಮೊದಲನೆ ಅಲೆಯಾದ ಕೃಷೀಕರಣದಿಂದ ಎರಡನೇ ಅಲೆಯಾದ ಕೈಗಾರಿಕೀಕರಣದವರೆಗೆ ಮನುಷ್ಯ ನಡೆದು ಬಂದ ಸುದೀರ್ಘ ಹಾದಿಯನ್ನು ನೆನಸಿಕೊಂಡರೆ ಇವೆರಡೂ ಪ್ರಕ್ರಿಯೆಗಳ ನಡುವಣ ಅಂತರ ಎಷ್ಟೊಂದು ಕಷ್ಟಕರ ಮತ್ತು ಎಷ್ಟೊಂದು ಸುದೀರ್ಘ ಅವಧಿ ಎಂದು ಆಶ್ಚರ್ಯವಾಗುತ್ತದೆ. ಆದರೆ ನಮ್ಮ ಬದುಕು ಈಗ ಮೂರನೇ ಅಲೆಗೆ ತೆರೆದುಕೊಳ್ಳುತ್ತಿದೆ. ಎರಡನೇ ಅಲೆಗೂ ಮೂರನೇ ಅಲೆಗೂ ನಡುವೆ ಅಂತರವೇ ಇಲ್ಲದಂತೆ ಮೂರನೇ ಅಲೆ ಅಪ್ಪಳಿಸುತ್ತಿದೆ. ಇದನ್ನು ಜಾಗತೀಕರಣದ ಅಲೆ ಎಂದು ಕರೆಯಬಹುದು. ಇಲ್ಲಿನ ಚಾಲಕ ಶಕ್ತಿಯು ಪ್ರಾಕೃತ ಶಕ್ತಿಗಳು ಅಲ್ಲ ಸಾಂಸ್ಕೃತ ಶಕ್ತಿಗಳು ಅಲ್ಲ. ವಿಕೃತ ಶಕ್ತಿಗಳು ಎಂದು ಕರೆಯಬೇಕಾಗಿದೆ.’

ಭೂಮಿಯನ್ನು ಪರಚಿ ಅಗೆದು ಬಗೆದು ತೆಗೆದ ಅದಿರನ್ನು ಚೀನಾಕ್ಕೆ ಮಾರುವುದನ್ನು ದೇಶಸೇವೆಯೆಂದೂ, ಇದರಲ್ಲಿ ಪಾಲುಕೇಳುವ ನಮ್ಮ ರಾಜಕೀಯ ನಾಯಕರನ್ನು ಲಂಚಕೋರರೆಂದು ಕರೆಯುವ ಗಣಿಮಾಲೀಕರಿಂದಲೂ, ಗಣಿಗಾರಿಕೆಯನ್ನು ನಿಲ್ಲಿಸುತ್ತೇನೆಂದು ತೋರಿಕೆಯ ರಂಪದ ಮಾತಾಡುವ ಅಧಿಕಾರಶಾಹಿಯಿಂದಲೂ ನಾವು ಮುಕ್ತರಾಗುವುದು ಸಾಧ್ಯವೆ?

* * *

ಯಾವ ವಿವರಣೆಯನ್ನೂ ಕೊಡದೆ, ಇಷ್ಟರವರೆಗೆ ಆಡಿದ್ದಕ್ಕೆ ಪಶ್ಚಾತ್ತಾಪ ಪಡದೆ, ನಿಮ್ಮ ಎದುರು ಮೂರು ಮಂಗಗಳನ್ನು ಕೂರಿಸುತ್ತೇನೆ: ಒಂದು ಮಂಗ ದುಷ್ಟವಾದ್ದನ್ನು ನೋಡಬೇಡ ಎಂದು ತನ್ನ ಕಣ್ಣುಗಳನ್ನು ಮುಚ್ಚಿಕೊಂಡಿದೆ. ಎರಡನೇ ಮಂಗ ದುಷ್ಟವಾದ್ದನ್ನು ಆಡಬೇಡ ಎಂದು ತನ್ನ ಬಾಯಿಯನ್ನು ಮುಚ್ಚಿಕೊಂಡಿದೆ. ಮೂರನೆಯದು ದುಷ್ಟವಾದ್ದನ್ನು ಕೇಳಿಸಿಕೊಳ್ಳಬೇಡ ಎಂದು ತನ್ನ ಕಿವಿಯನ್ನು ಮುಚ್ಚಿಕೊಂಡಿದೆ.

ಮರದ ಮೇಲಿನ ಪುಟ್ಟ ಪಕ್ಷಿಯನ್ನು ನೋಡಿ ಸುಖಿಸುವ ನಮ್ಮ ಅಂತರಂಗದ ಮುಗ್ಧತೆಯನ್ನು ಕಾಪಾಡಿಕೊಳ್ಳುವ ಆಸೆಯಿಂದ ಈ ಮೂರು ಮಂಗಗಳನ್ನು ಎಂತಹ ತಳಮಳದಲ್ಲೂ ಸ್ವಾಸ್ಥ್ಯವನ್ನು ಕಳೆದುಕೊಳ್ಳುವ ಸತ್ಯಾಗ್ರಹಿಯಾದ ಗಾಂಧಿಯ ಕಣ್ಣಿನಿಂದ ನೋಡಲು ಬಯಸುತ್ತೇನೆ.

೨೦೦೬

* * *