ಬೆಂಗಳೂರಿನ ಸುಚಿತ್ರ ಅಕಾಡೆಮಿಯಲ್ಲಿ ಸುಬ್ಬಣ್ಣನನ್ನು ನೆನಪಿಸಿಕೊಳ್ಳಲು ನಾವು ಸೇರಿದ್ದೆವು. ನಮ್ಮ ಜೊತೆ ಎಂ.ಪಿ. ಪ್ರಕಾಶರು ಇದ್ದರು. ಪಟೇಲರ ನಂತರ ನನಗೆ ರಾಜಕೀಯ ಕ್ಷೇತ್ರದಲ್ಲಿ ಉಳಿದಿರುವ ಪ್ರಿಯ ಸ್ನೇಹಿತರಲ್ಲಿ ಪ್ರಕಾಶ್ ಮುಖ್ಯರು; ಈಗ ಸುದ್ದಿಯಲ್ಲಿರುವ ಅವರನ್ನು ವಿಮರ್ಶಿಸುವುದು ನಮ್ಮ ಸಖ್ಯಕ್ಕೇ ಅಗತ್ಯವೆನ್ನಿಸಿ ಕೆಲವು ಮಾತುಗಳು.

ಸಿದ್ದರಾಮಯ್ಯನವರಿಗೆ ಬದಲಾಗಿ ಪ್ರಕಾಶ್ ಉಪಮುಖ್ಯಮಂತ್ರಿಯಾದರು –  ದೇವೇಗೌಡರ ರಾಜಕೀಯದಿಂದ. ಪ್ರಕಾಶ್ ಬದಲು ಬೇರೆಯವರನ್ನು ಆ ಜಾಗದಲ್ಲಿ ಕೂರಿಸಿದ್ದರೆ ದೇವೇಗೌಡರ ಹೆಸರು ಇನ್ನಷ್ಟು ಕೆಡುತ್ತಿತ್ತು. ಇದನ್ನು ತಿಳಿಯಲಾರದಷ್ಟು ಪ್ರಕಾಶ್‌ ದಡ್ಡರಲ್ಲ. ಆದರೆ ಈ ಲಾಭಪಡೆದ ತಾವೇ ಅದೇ ಪವರ್‌ ಪಾಲಿಟಿಕ್ಸ್‌ಗೆ ಬಲಿಯಾಗಬಹುದೆಂದು ಅರಿಯವಷ್ಟರಲ್ಲಿ(?) ಅಧಿಕಾರ ಕಳೆದುಕೊಂಡರು. ತಾನು ದೇವೇಗೌಡರ ಪಕ್ಷವೆಂದು ಹೇಳಿಕೊಂಡೇ ಕುಮಾರಸ್ವಾಮಿಗಳ ಪರವಾಗಿ ವೋಟ್‌ ಹಾಕಿ ಪ್ರಕಾಶ್‌ ತಮ್ಮ ಪಕ್ಷ ಒಡೆಯದಂತೆ ನೋಡಿಕೊಳ್ಳುತ್ತಿದ್ದಾರೆ ಎಂಬ ಧಾರಾಳದಲ್ಲಿ ಅವರ ವರ್ತನೆಯನ್ನು ಮೆಚ್ಚುವವರ ವಾದ ನನಗೆ ಗೊತ್ತು. ಪ್ರಕಾಶರಿಗೆ ದೇವೇಗೌಡರಲ್ಲಿ ನಿಜವಾದ ಪ್ರೀತಿಯಿದೆಯೆ, ನಂಬಿಕೆಯಿದೆಯೆ ಇತ್ಯಾದಿ ಮಾನವೀಯ ಸಂಬಂಧದ ಪ್ರಶ್ನೆಗಳೇ ಅಪ್ರಸ್ತುತವಾಗಿರುವದು, ಅದೂ ನಾಚಿಕೆ ಕಳೆದುಕೊಳ್ಳದ ಸೂಕ್ಷ್ಮಜ್ಞರಾದ ಪ್ರಕಾಶರಂತಹ ವ್ಯಕ್ತಿಗೂ ಅಪ್ರಸ್ತುತವಾಗಿರುವುದು ದುರಂತವಲ್ಲವೆ ಎಂದು ನಾವು ಕೇಳುತ್ತೇವೆ. ಆದರೆ ಈ ದಿನಗಳಲ್ಲಿ ರಾಜಕಾರಣ ತರುವ ಪ್ರತಿಷ್ಠೆ ಮತ್ತು ಹಣದ ಪ್ರಮಾಣ ತಿಳಿದವರು ಇಂತಹ ಪ್ರಶ್ನೆಯೇ ಹಾಸ್ಯಾಸ್ಪದವೆಂದು ತಳ್ಳಿಹಾಕುತ್ತಾರೆ.

ರಾಜಕೀಯದಲ್ಲಿ ಹಠಮಾರಿಗಳಾದ ತಾತ್ವಿಕರು ಈಗ ಅಪರೂಪವಾಗಿಬಿಟ್ಟಿದ್ದಾರೆ. ಹಠಮಾರಿಯಾಗದೆ ಏನನ್ನೂ ಈ ಜೌಗುನೆಲದಲ್ಲಿ ಊರುವಂತಿಲ್ಲ. ಏಕೋದ್ದೇಶಕ್ಕೆ ಬದ್ಧರಾದ ಹಠಮಾರಿಗಳು (ನಂಜುಂಡಸ್ವಾಮಿಯಂಥವರು) ಸಂಸಾರಿಗಳಾದ ನಮ್ಮಂಥವರ ನಿತ್ಯ ಜೀವನದ ಸರಳವಾದ ಆಸೆ ಆಮಿಷಗಳನ್ನು ಅರಿಯಲಾರದೆ ಆತ್ಮರತರಾಗಿ ತಮ್ಮ ಘನೋದ್ದೇಶದಲ್ಲೇ ಸೋಲುತ್ತಾರೆ ಎನ್ನುವುದು ನಿಜ. ಆದರೆ ಹೊಂದಿಕೊಂಡು ಹೋಗುವ ಪ್ರಕಾಶರಂತಹ ಸೌಜನ್ಯಶೀಲರು ಸಪ್ಪೆಯಾಗುತ್ತಾರೆ ಎನ್ನುವುದು ಅದಕ್ಕಿಂತ ಹೆಚ್ಚಿನ ನಿಜ. ಕೊನೆಯಲ್ಲಿ ರಾಮಕೃಷ್ಣ ಹೆಗಡೆಯವರೂ ಸಪ್ಪೆಯಾಗಿಬಿಟ್ಟರು. ಇಲ್ಲಿ ಇನ್ನೊಂದು ಸಂದಿಗ್ಧವಿದೆ. ಯಾವುದು ಸೌಜನ್ಯಶೀಲತೆ, ಯಾವುದು ಅವಕಾಶವಾದಿ ರಾಜಕಾರಣ ಎಂಬುದು ತಿಳಿಯಲಾರದಂತೆ (ತಿಳಿಯಗೊಡದಂತೆ?) ಇರುವ ಸಪ್ಪೆತನ ಸದ್ಯದ ಲಾಭಕ್ಕಾಗಿ ಹಾಕುವ ಸೋಗೂ ಆಗಿರಬಹುದು –  ಡೆಮೊಕ್ರಸಿ ಸೃಷ್ಟಿಸುವ ಪಂಚವಾರ್ಷಿಕ ಅವಕಾಶದಲ್ಲಿ.

ನಾನು ಪ್ರಕಾಶ್‌ ಅವರಿಂದ ಅವರದೇ ನಿಶ್ಚಯದ ಅಜ್ಞಾತವಾಸವನ್ನು  ನಿರೀಕ್ಷಿಸಿದ್ದೆ. ಅಜ್ಞಾತವಾಸಕ್ಕೆ ಅಂಜದವನು ಧೀಮಂತನೂ ದೂರದೃಷ್ಟಿಯುಳ್ಳವನೂ ಆದ ರಾಜಕಾರಣಿಯಾಗಿರುತ್ತಾನೆ. ಇತಿಹಾಸದಲ್ಲಿ ನಾವಿದಕ್ಕೆ ಹಲವು ಸಾಕ್ಷಿಗಳನ್ನು ಕಾಣುತ್ತೇವೆ. ಕ್ರಿಸ್ತ, ಬುದ್ಧ, ಪಾಂಡವರು, ಗಾಂಧಿ ಬಿಡಿ, ನಮ್ಮ ಕಾಲದಲ್ಲಿ ಜಯಪ್ರಕಾಶ್‌ ನಾರಾಯಣ್‌ ಕೂಡ ಬಹಳ ಕಾಲ ಅವರ ಪತ್ನಿ ಪ್ರಭಾವತಿಯವರ ರಕ್ಷಣೆಯಲ್ಲಿ ರಾಜಕೀಯ ಅಜ್ಞಾತವಾಸದಲ್ಲಿ ಇದ್ದವರು. ಹೆಂಡತಿ ಸತ್ತಮೇಲೆ ನಿಸ್ಸಂಗಿಯಾಗಿಬಿಟ್ಟ ಜಯಪ್ರಕಾಶ್‌ ತಮ್ಮ ಅನಾರೋಗ್ಯವನ್ನು ಲೆಕ್ಕಿಸದೆ ರಾಜಕೀಯಕ್ಕೆ ಬಂದರು. ಅವರು ಬಂದ ಕಾಲವಾದರೂ ಎಂಥದ್ದು? ಆಗ ನಂಬೂದರಿಪಾಡ್‌ ಏಕೆಜಿ ಸೇರಿದಂತೆ ಎಂತೆಂಥಾ ಕಮ್ಯುನಿಸ್ಟ್ ನಾಯಕರಿದ್ದರು! ಆಗಲೂ ಭಾರತದ ಜನತೆ ಕಿವಿಗೊಟ್ಟದ್ದು ಜಯಪ್ರಕಾಶ್‌ರಿಗೆ. ಇದಕ್ಕೆ ಅವರ ಅಜ್ಞಾತವಾಸದ ನಿರಪೇಕ್ಷೆಯೂ ಒಂದು ರೀತಿಯಲ್ಲಿ ಕಾರಣವಾಗಿತ್ತು.

* * *

‘ಸಿದ್ಧಾಂತಗಳು ಸತ್ತಿವೆ’ ಎಂದು ತೇಜಸ್ವಿ ಹೇಳಿದ್ದಾರೆಂದು ಪ್ರಕಾಶರು ಅಂದರು. ಆದರೆ ನಾನು ಮಾತ್ರ ಸಿದ್ಧಾಂತಗಳು ಸತ್ತಿಲ್ಲ ಎಂದು ನಂಬಿದ್ದೇನೆ. ಅವು ಸತ್ತಂತೆ ಕಾಣಿಸುತ್ತಿವೆ ಅಷ್ಟೇ. ಮನುಷ್ಯರಿಗೆ ಸುಸ್ತಾಗುತ್ತದೆ. ಈಗ ಯಾವುದು ನಮಗೆ ಸುಖ ಅಂದುಕೊಳ್ಳುತ್ತೇವೆಯೋ ಅದು ಬಹುಬೇಗ ದಣಿವನ್ನೂ ತರಬಹುದು. ಈಗ ಅಂಥದ್ದೊಂದು ದಣಿವನ್ನು ನಾವು ಅನುಭವಿಸುತ್ತಿದ್ದೇವೆ.

ಆದರೆ ಚರಿತ್ರೆಯ ವಿಚಿತ್ರ ಏನು ಅಂದರೆ –  ಇದು ವಿಕಾಸವಾದಿ/ಪ್ರಗತಿವಾದಿ ಮಾರ್ಕ್ಸ್‌‌ಗೂ ಮುಖ್ಯವೆನ್ನಿಸದೇ ಹೋದ ವಿಚಿತ್ರ –  ಆದಿಕಾಲದಿಂದಲೂ ಯಾವುದು ಸರಿ, ಯಾವುದು ತಪ್ಪು ಎಂಬ ಮೂಲಭೂತವಾದ ಒಂದು ಅಂತಿಮ ನೈತಿಕತೆ ಕರಾರುವಾಕ್ಕಾಗಿ ಉಳಿದುಕೊಂಡೇ ಬಂದಿದೆ. ಗುಲಾಮಗಿರಿ ಇಲ್ಲದೆ ಯಾವ ಉತ್ಪಾದನೆಯೂ ಸಾಧ್ಯವಿಲ್ಲ ಎಂಬ ವಾಸ್ತವದ ಎದುರು ದೈವಸ್ಪರ್ಶಕ್ಕೆ ಒಳಗಾದವರಿಗೆ ಗುಲಾಮಗಿರಿ ತಪ್ಪು ಎಂದು ತಿಳಿದಿತ್ತು. ನಾವೆಲ್ಲರೂ ಕೆಲವು ಮುಹೂರ್ತದಲ್ಲಾದರೂ ದೈವಸ್ಪರ್ಶಕ್ಕೆ ಒಳಗಾಗಬಲ್ಲ ಮನುಷ್ಯರು. ಅದು ಬಂದು ನಮ್ಮನ್ನು ಸ್ಪರ್ಶಿಸಿದಾಗ ಪರಮಸತ್ಯಗಳು ನಮಗೆ ಗೋಚರವಾಗುತ್ತವೆ. ಇಲ್ಲದಿದ್ದರೆ ಸಾಕ್ರಟೀಸ್, ಬುದ್ಧ, ಕ್ರಿಸ್ತ, ಗಾಂಧಿಯಂಥ ವ್ಯಕ್ತಿತ್ವಗಳೇ ಇರುತ್ತಿರಲಿಲ್ಲ. ಆದ್ದರಿಂದ ಇವತ್ತಿನ ಎಲ್ಲ ತವಕ ತಲ್ಲಣಗಳಿಗೆ ನಾವು ವಿಶ್ಲೇಷಣೆಯ ಮೂಲಕ  ಸಬೂಬುಗಳನ್ನು ಹುಡುಕಬಹುದು. ಆದರೆ ಈ ಯಾವ ಸುಖತರುವ ಸಂಪತ್ತು ಇಲ್ಲದಿದ್ದರೂ ಮನುಷ್ಯ ಸುಖಿಯಾಗಿರಬಲ್ಲ. ರೋಮಾಂಚಿತನಾಗಿ ತನ್ನ ಪ್ರಪಂಚವನ್ನು ಕೆಲ ಕ್ಷಣವಾದರೂ ಅನುಭವಿಸಬಲ್ಲ ಎಂದು ತಿಳಿದವನಿಗೆ ಈ ಸಬೂಬುಗಳು ಬೇಕಿಲ್ಲ.

ನಮಗೆ ಇವತ್ತು ಜಪಾನಿನ ಕಂಪೆನಿಯೊಂದು ಇಲ್ಲಿಗೆ ಬಂದು ಕೆಲಸ ಕೊಡಬೇಕಾದ ಅಗತ್ಯವಿಲ್ಲ. ನಮಗೆ ಈ ಕಾಲ್‌ಸೆಂಟರ್‌ಗಳ ಅಗತ್ಯ ಇಲ್ಲ. ನಮಗೆ ಇಂಥ ಶ್ರೀಮಂತಿಕೆಯ ಅಗತ್ಯವಿಲ್ಲ. ಇವುಗಳಿಲ್ಲದೆಯೇ ಮನುಷ್ಯ ಸುಖವಾಗಿರುವುದಕ್ಕೆ ಸಾಧ್ಯ ಇದೆ. ಇಂಥದ್ದೊಂದು ಪ್ರಜ್ಞೆ ಮನುಷ್ಯನಿಗೆ ಬಂದರೆ ಸಾಕು. ಯಾಕೆಂದರೆ ನಾವು ಸಾಯುವಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ.

* * *

ಕೆಲವು ಶಬ್ದಗಳು ಇವೆ. ನೈತಿಕ ಎಚ್ಚರವಿಲ್ಲದೆ ಬಳಸಿದಾಗ ಈ ಶಬ್ದಗಳು ಒಂದೋ ನಮ್ಮ ಒಣಪ್ರತಿಷ್ಠೆಯನ್ನು ಹಿಗ್ಗಿಸುತ್ತವೆ; ಅಥವಾ ಲಾಭದಾಯಕವಾಗುವಂತೆ ಜಾರಿಕೊಳ್ಳುವ ಉಪಾಯಗಳಾಗುತ್ತವೆ. ‘ಅನುಸಂಧಾನ’ ಎನ್ನುವ ಶಬ್ದ ನೋಡಿ. ಇಂಗ್ಲಿಷಿನಲ್ಲಿ ಇದು negotiate; ನಾವು ಅಮೆರಿಕಾದ ಬುಷ್‌ ಜೊತೆ ಈಗ ಮರ್ಯಾದೆ ಬಿಟ್ಟು ಮಾಡಿಕೊಳ್ಳುವ ಒಪ್ಪಂದ; ಹಾಗೆಯೇ ಸಂಸಾರಿಯಾದವನು ತನ್ನ ಸತ್ಯಕ್ಕೆ ಅಪಚಾರವಾಗದಂತೆ ವಾಸ್ತವದ ಜೊತೆ ಹೊಂದಿಕೊಂಡು ಹೋಗುವುದು –  ಎರಡೂ negotiateಗಳೇ. ಆದರೆ ಎಷ್ಟು ನೈತಿಕ ಅಂತರ ಎರಡರ ನಡುವೆ! ನಾನು ನಮ್ಮ ಸುಬ್ಬಣ್ಣ, ಪ್ರವಾದಿ ಮಹಮ್ಮದ್, ಇಂದಿರಾ ಗಾಂಧಿ –  ಹೀಗೆ ಕೆಲವು ಉದಾಹರಣೆಗಳಿಂದ ಈ ಶಬ್ದದ ಉಪಯೋಗವನ್ನೂ ತೊಡಕನ್ನೂ ವಿವರಿಸಲಿದ್ದೇನೆ.

ವಾಸ್ತವದ ಜೊತೆ ತನ್ನ ನಿಜ ಚಹರೆ ಕಳೆದುಕೊಳ್ಳದಂತೆ ಯಾವ ಬಗೆಯ ಅನುಸಂಧಾನದಲ್ಲಿ ತೊಡಗಬೇಕು, ಹಾಗೆಯೇ ಚಿರಸತ್ಯವೆಂದು ತೋರಿದ್ದನ್ನು ಉಳಿಸಿಕೊಳ್ಳಲು ಯಾವ ವಿರೋಧದಲ್ಲಿ ತೊಡಗಬೇಕು –  ಈ ಎರಡೂ ಸಂಸಾರಿಯಾದ ಸುಬ್ಬಣ್ಣನಿಗೆ ಗೊತ್ತಿತ್ತು. ಇದಕ್ಕೊಂದು ಉದಾಹರಣೆ ಕೊಡುತ್ತೇನೆ: ಸುಬ್ಬಣ್ಣ ಅಡಿಕೆಯಿಂದಲೇ ಆಸ್ತಿ ಪಾಸ್ತಿ ಮಾಡಿಕೊಂಡವನು. ಆದ್ದರಿಂದ ಈ ಅಡಿಕೆಯನ್ನು ಅನಾರೋಗ್ಯಕ್ಕೆ ಕಾರಣವಾಗುವ ಹೊಗೆ ಸೊಪ್ಪಿನ ಉತ್ಪನ್ನಗಳ ಪಟ್ಟಿಗೆ ಸೇರಿಸಲು ಹೊರಟಾಗ ಸುಬ್ಬಣ್ಣ ಪಟ್ಟ ಸಂಕಟ ಅಷ್ಟಿಷ್ಟಲ್ಲ. ನನಗೊಂದು ನೂರು ಕಾಗದಗಳು. ದಿನಾ ಫೋನು. ‘ನಿನಗೆ ಗೊತ್ತಿದ್ದ ಅವರಿಗೆ ಹೇಳು. ಇವರಿಗೆ ಹೇಳು.’ ‘ಅಡಿಕೆಯನ್ನು ಆ ಪಟ್ಟಿಗೆ ಸೇರಿಸುವುದಾದರೆ ಕಾಫಿಯನ್ನೂ ಈ ಪಟ್ಟಿಗೆ ಸೇರಿಸಬೇಕು. ಅನ್ನವನ್ನೂ ಸೇರಿಸಬೇಕು.’ ಹೀಗೆ…

ಇದರ ಜತೆಗೇ ಸುಬ್ಬಣ್ಣನ ಮತ್ತೊಂದು ಧೈರ್ಯವನ್ನು ನೋಡಬೇಕು. ಅಡಿಕೆಯನ್ನು ಗುಟ್ಕಾ ಮಾಡಿ ಮಾರುವುದಕ್ಕೆ ಶುರು ಮಾಡಿದರಲ್ಲವೆ? ಇದರಿಂದಾಗಿಯೇ ಅಡಿಕೆಗೆ ಬಹಳ ಬೆಲೆ ಬಂದಿದ್ದು. ಈ ಗುಟ್ಕಾವನ್ನು ನಿಷೇಧಿಸಬೇಕೆಂದು ಸುಬ್ಬಣ್ಣನೇ ಹೇಳಿದ. ಇದರ ಮೂಲಕ ಮಲೆನಾಡಿನ ಎಲ್ಲಾ ಅಡಿಕೆ ಬೆಳೆಗಾರರ ನಿಷ್ಠುರವನ್ನು ಕಟ್ಟಿಕೊಂಡ. ‘ನಾವು ಗುಟ್ಕಾ ಮಾಡಿ ಅಡಿಕೆಗೆ ಬೆಲೆ ತರಬಾರದು. ಆದರೆ ಅಡಿಕೆಗೆ ಒಂದು ಸಹ ಬೆಲೆ ಇದೆ, ಅಷ್ಟು ಸಾಕೆಂದು ನಾವು ತೃಪ್ತರಾಗಬೇಕು’ ಎಂದು ಸುಬ್ಬಣನ ವಾದ. ಅನೈತಿಕವಾದ ಲಾಭ ಗಳಿಕೆಗೆ ವಿರೋಧ ಮತ್ತು ಅಗತ್ಯದ ಜೊತೆ ಅನುಸಂಧಾನ ಇವೆರೆಡೂ ಈ ವಾದದಲ್ಲಿ ಇತ್ತು. ಇದು ಸಂಸಾರಿಯ ಆಯ್ಕೆ.

* * *

ಅರಬ್ಬರು ಮರಳುಗಾಡಿನವರು. ಬರೀ ತರಕಾರಿ ತಿಂದು ಬದುಕುವ ಸಾಧ್ಯತೆಯೇ ಅವರಿಗಿಲ್ಲ. ಆದ್ದರಿಂದ ಪ್ರವಾದಿ ಮಹಮ್ಮದ್ ಕಾಲದ ಜನರಿಗೆ ಪ್ರಾಣಿಗಳನ್ನು ತಿನ್ನಲೇ ಬೇಕಿತ್ತು. ತಿನ್ನುವುದಕ್ಕಾಗಿ ಅವುಗಳನ್ನು ಕೊಲ್ಲಲೇ ಬೇಕಿತ್ತು. ಅದಕ್ಕಾಗಿ ಪ್ರಾಣಿಗಳನ್ನು ಹೇಗೆ ಕೊಲ್ಲಬೇಕು ಎಂದು ಪ್ರವಾದಿ ಮಹಮ್ಮದ್ ಯೋಚನೆ ಮಾಡಿದ್ದರು. ಕೊಲ್ಲುವುದಕ್ಕಾಗಿ ಚೂರಿಯನ್ನು ಹರಿತ ಮಾಡುವುದನ್ನು ಆಹಾರಕ್ಕೆ ಬಳಕೆಯಾಗುವ ಪ್ರಾಣಿ ನೋಡಬಾರದು ಎಂಬ ನಿಷೇಧವನ್ನು ಸೂಚಿಸಿದ್ದರು. ಒಂದು ಪ್ರಾಣಿಯನ್ನು ಆಹಾರಕ್ಕಾಗಿ ಕೊಲ್ಲುವಾಗ ಅದನ್ನು ಇನ್ನೊಂದು ಪ್ರಾಣಿ ನೋಡುವುದು ನಿಷಿದ್ಧ. ಕೊಲ್ಲುವ ಕ್ರಿಯೆ ಆದಷ್ಟು ಕಡಿಮೆ ನೋವಾಗುವಂತೆ ಇರಬೇಕು. ಇದು ಸಂಸಾರಿಯ ಆಯ್ಕೆ.

ಈ ಬಗೆಯ ಸಂಸರಿಗಳ ಆಯ್ಕೆಗಳ ಅರಿವು ನಮಗಿರಬೇಕು. ಸುಬ್ಬಣ್ಣನಿಗೆ ಈ ಅರಿವಿತ್ತು.

ಸುಬ್ಬಣ್ಣ ಒಬ್ಬ ಸಿಟಿಝನ್‌ ಆಗಿ ಬದುಕುತ್ತಿದ್ದ. ಅವನು ಯಾವಾಗಲೂ ಹೇಳುತ್ತಿದ್ದ ಘಟನೆ ಒಂದಿದೆ. ಹೆಗ್ಗೋಡಿನ ಚಾವಡಿಯಲ್ಲಿ ಅಡಿಕೆ ತಿನ್ನುತ್ತಾ ಹರಟೆ ಹೊಡೆಯುತ್ತಿದ್ದಾಗ ಒಂದು ದಿನ ಹೀಗೆ ಹರಟೆ ಹೊಡೆಯಲು ಬಂದವರೊಬ್ಬರು ಬಹಳ ಚಿಂತಿತರಾಗಿದ್ದರಂತೆ. ಅವರು ಯಾವುದೋ ಪತ್ರಿಕೆಯಲ್ಲಿ ‘ಭಾರತ ಬಹಳ ಸಾಲ ಮಾಡಿಕೊಂಡು ಬಿಟ್ಟಿದೆ’ ಎಂಬ ಸುದ್ದಿ ಓದಿದ್ದರಂತೆ. ಅವರು ‘ಅಲ್ಲಾ ಮಾರಾಯ ಇಷ್ಟು ಸಾಲ ಮಾಡಿಕೊಂಡು ನಾವು ಹೆಂಗೋ ಬದುಕೋದು?’ ಅಂತ ಸುಬ್ಬಣ್ಣನನ್ನು ಕೇಳಿದರಂತೆ. ಅವರು ತಾನೇ ಸಾಲ ಮಾಡಿಕೊಂಡಂತೆ ತಲ್ಲಣಗೊಂಡಿದ್ದರಂತೆ. ಸಾರ್ವಜನಿಕ ವಿಷಯಗಳ ಬಗ್ಗೆ ಮಾತಾಡುವ ಚಿಂತಕರು ಹೀಗೆ ತಲೆಕೆಡಸಿಕೊಳ್ಳುವವರಾಗಿರಬೇಕು.

* * *

‘ರಾಷ್ಟ್ರಪ್ರೇಮ’ ತರುವ ನಮ್ಮಂಥವರ ಕುರುಡಿನ ಬಗ್ಗೆ ಈಗ ಯೋಚಿಸೋಣ.

ನನಗೆ ಬೇರೆ ದೇಶಗಳಿಗೆ ಹೋದಾಗ ಇಂದಿರಾಗಾಂಧಿಯ ಬಗ್ಗೆ ಬಹಳ ಹೆಮ್ಮೆ ಅನ್ನಿಸುತ್ತಿತ್ತು. ನಿಕ್ಸನ್‌ಗೆ ಆಕೆ ಎಂಥಾ ಪಾಠ ಕಲಿಸಿದಳು! ನಿಕ್ಸನ್‌ಆಕೆಯನ್ನು ಭೇಟಿಯಾಗುವುದಕ್ಕೆ ತಡ ಮಾಡಿದಾಗ ಧೀಮಂತ ಲೇಖಕಿ ಸುಸಾನ್ ಸಾಂಟಾಗ್‌ಜತೆ ಆಕೆ ಬ್ರೇಕ್‌ಫಾಸ್ಟ್‌ ಮಾಡಿದಳು. ಅಮೆರಿಕದ ದೊಡ್ಡ ದೊಡ್ಡ ತತ್ಜಜ್ಞಾನಿಗಳ ಜತೆ ಮಾತನಾಡಿದಳು. ಒಮ್ಮೆ ಆಕೆ ರಷ್ಯಾಕ್ಕೆ ಹೋಗುವ ಸಂದರ್ಭದಲ್ಲಿ ಬ್ರೆಜ್ನೇವ್‌ಗೆ ಆರೋಗ್ಯ ಸರಿ ಇರಲಿಲ್ಲ. ಆತ ತನಗೆ ಏರ್‌ಪೋರ್ಟ್‌‌ಗೆ ಬರಲು ಸಾಧ್ಯವಿಲ್ಲ ಎಂದಾಗ ಆಕೆ ತನ್ನ ಕಾರ್ಯಕ್ರಮವನ್ನೇ ರದ್ದು ಮಾಡಲು ನಿರ್ಧರಿಸಿದಳಂತೆ. ಆಗ ಬ್ರೆಜ್ನೇವ್‌ ಕೂಡಾ ದಿಗಿಲುಕೊಂಡು ಜ್ವರದಲ್ಲಿಯೂ ಏರ್‌ಪೋರ್ಟ್‌‌ಗೆ ಬರಲು ನಿರ್ಧರಿಸಿದ. ವಿಮಾನವಿಳಿದ ಇಂದಿರಾ ಬ್ರೆಜ್ನೇವ್‌ಕುಳಿತಿದ್ದ ಕಾರಿನ ಬಳಿಗೆ ಹೋಗಿ ಆತನ ಕೈ ಹಿಡಿದು, ‘ಇಂಥ ಜ್ವರದಲ್ಲಿಯೂ ಬರುವುದಕ್ಕೆ ನಿಮಗೇನಾದರೂ ಬುದ್ಧಿ ಇದೆಯೇ?’ ಎಂದು ಪ್ರೀತಿಯಲ್ಲಿ ಬೈದು, ಆತನನ್ನು ತಕ್ಷಣವೇ ಹಿಂದಿರುಗಲು ಹೇಳಿದಳು. ನಮಗೆ ಇಂಥ ವಿಷಯಗಳ ಬಗ್ಗೆ ಹೆಮ್ಮೆ ಅನ್ನಿಸುತ್ತದೆ. ಏಕೆಂದರೆ ಆಕೆ ‘ಪ್ರಬಲರಿಗೆ’ ಚಳ್ಳೆಹಣ್ಣು ತಿನ್ನಿಸಿದಳು ಎಂಬ ಕಾರಣಕ್ಕೆ. ಇದೇ ವೇಳೆ ಇಂದಿರಾಗಾಂಧಿ ಈ ದೇಶದಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗಕ್ಕೂ ಕಾರಣಳಾದ ನಾಯಕಿ ಎಂಬುದನ್ನೂ ಗಮನಿಸಬೇಕಾಗುತ್ತದೆ. ಈ ಬಗೆಯ ಗ್ರಹಿಕೆಯೇ ಸಂಸಾರಿಯ ತವಕ – ತಲ್ಲಣ.

* * *

ರಾಷ್ಟ್ರಪ್ರೇಮದಿಂದ ಹುಟ್ಟುವ ಸಜ್ಜನರಾದ ವಿಜ್ಞಾನಿಗಳ ಕುರುಡಂತೂ ತೀರ ಅಪಾಯಕಾರಿ; ಈಗ ಅದಕ್ಕೊಂದು ಉದಾಹರಣೆ :

ಜೈನರಲ್ಲಿ ‘ಸಂಕಲ್ಪ ಹಿಂಸೆ’ ಎಂಬ ಕಲ್ಪನೆಯಿದೆ. ಜನ್ನ ಇದರ ಬಗ್ಗೆ ಬಹಳ ಹಿಂದೆಯೇ  ಒಂದು ಕಾವ್ಯ ರಚಿಸಿದ್ದಾನೆ –  ಯಶೋಧರ ಚರಿತೆ ಅದು. ಒಂದು ಕ್ರಿಯೆಯ ಹಿಂದೆ ಹಿಂಸೆಯ ಸಂಕಲ್ಪ ಇದ್ದರೂ ಅದು ಹಿಂಸೆ. ಅದು ಪ್ರತ್ಯಕ್ಷವಾಗಿ ಮಾಡುವ ಹಿಂಸೆಯಷ್ಟೇ ಅಪಾಯಕಾರಿ. ಅಣುಬಾಂಬ್‌ ತಯಾರಿಸುವಾಗ ಅದರಿಂದ ಎಷ್ಟು ಜನರನ್ನು ಕೊಲ್ಲಬಹುದು ಎಂಬ ಎಲ್ಲಾ ಲೆಕ್ಕಾಚಾರಗಳನ್ನು ಮಾಡಲಾಗುತ್ತದೆ. ಅಮೆರಿಕದವರಂತೂ ಬಾಂಬ್ ಪ್ರಯೋಗಿಸಿ ತಮ್ಮ ಲೆಕ್ಕಾಚಾರ ಸರಿಯಾಗಿದೆಯೇ ಎಂದು ತಾಳೆ ನೋಡಿದರು. ಅಣುಬಾಂಬಿನ ಪರಿಣಾಮಕ್ಕೆ ಗುರಿಯಾದವರ ಚಿಕಿತ್ಸೆಗೆ ಆಸ್ಪತ್ರೆಗಳನ್ನೂ ಕಟ್ಟಿಸಿದ್ದರಂತೆ. ಇವು ವಿಕಿರಣದ ಆಘಾತಕ್ಕೆ ಒಳಗಾದವರನ್ನು ಗುಣಪಡಿಸುವ ಆಸ್ಪತ್ರೆಗಳಲ್ಲ. ಮನುಷ್ಯನ ದೇಹದ ಮೇಲೆ ಬಾಂಬ್‌ನ ಪರಿಣಾಮ ನಿರೀಕ್ಷಿತ ಮಟ್ಟದಲ್ಲಿಯೇ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿ ನೋಡುವ ಪ್ರಯೋಗಾಲಯಗಳು! ಅಷ್ಟರ ಮಟ್ಟಿಗಿನ ಕ್ರೌರ್ಯವನ್ನು ಅಣುಬಾಂಬ್‌ ತೆರೆದಿಟ್ಟಿತು. ನಮ್ಮ ಪ್ರೀತಿಯ ಪ್ರೆಸಿಡೆಂಟ್ ಕೂಡಾ ಸಂಕಲ್ಪ ಹಿಂಸೆಯ ದೊಡ್ಡ ಪ್ರತಿಪಾದಕರು. ಅಣುಬಾಂಬ್‌ಮಾತ್ರ ಇದ್ದರೆ ಸಾಕೆ ಅದನ್ನು ನಿರೀಕ್ಷಿತ ಗುರಿಗೆ ಮುಟ್ಟಿಸುವ ವ್ಯವಸ್ಥೆ ಬೇಡವೇ ಎಂದು ಕಲಾಂರವರು ಪ್ರಶ್ನಿಸುತ್ತಾರೆ.

ರಾಷ್ಟ್ರಪತಿಗಳನ್ನು ಕಂಡರೆ ನನಗೆ ಗೌರವವಿದೆ. ಹಿಪ್ಪಿಗಳಂತೆ ಕೂದಲು ಬಿಟ್ಟು, ಎಲ್ಲಾ ಔಪಚಾರಿಕತೆಗಳನ್ನು ತೊರೆದು ಓಡಾಡುವ ಸರಳತೆಯಿಂದಾಗಿ ಅವರು ನನಗಿಷ್ಟ. ಆದರೆ ಅವರ ಅಣುಬಾಂಬಿನ ಕುರಿತು ಪರಿಕಲ್ಪನೆಗಳನ್ನು ನೋಡುವಾಗ ಮಕ್ಕಳನ್ನು ಪ್ರೀತಿಸುವ ಇಷ್ಟು ಒಳ್ಳೆಯ ಮನಸ್ಸಿನೊಳಗೆ ಇಷ್ಟೊಂದು ಹಿಂಸೆಯ ಸಂಕಲ್ಪ ಯಾಕೆ ತುಂಬಿದೆ ಎಂದು ನನಗೆ ಆಶ್ಚರ್ಯವೂ ಆಗುತ್ತದೆ. ನಮ್ಮ ಕಾಲದ ತವಕ ತಲ್ಲಣಗಳಲ್ಲಿ ಇದೂ ಒಂದು, ಎಷ್ಟು ಒಳ್ಳೆಯವರೂ ಕೂಡಾ ಈ ಅಣುಬಾಂಬ್ ಇಲ್ಲದಿದ್ದರೂ ನಾವು ಬದುಕುತ್ತಿದ್ದೆವು, ಅಣುಬಾಂಬ್‌ ಇದ್ದೂ ಅದರಿಂದಲೇ ಸರ್ವನಾಶವಾಗಬಹುದು ಎಂಬ ಸರಳ ಸತ್ಯವನ್ನೇ ಮರೆತುಬಿಡುತ್ತಾರೆ!

ಸಾವಿರಾರು ವರ್ಷಗಳಿಂದಲೂ ಎಲ್ಲ ಒತ್ತಡ, ಅನಿವಾರ್ಯತೆಗಳ ಮಧ್ಯೆಯೂ ಯಾವುದು ತಪ್ಪು ಯಾವುದು ಸರಿ ಎಂಬುದನ್ನು ಅರಿಯುವ ವಿವೇಕವನ್ನು ಕೆಲವರಾದರೂ ಕಳೆದುಕೊಂಡಿರುವುದಿಲ್ಲ. ಅದನ್ನೇ ನಾವು ಆಧ್ಯಾತ್ಮ ಅಥವಾ ಸ್ಪಿರಿಚ್ಯುಯಲ್ ಸೆನ್ಸ್ ಅಂತ ಕರೆಯುವುದು. ಭಾರತದಲ್ಲಿ ಈಗ ಇದು ಮಸುಕಾಗುವಂತೆ ಕಾಣಿಸುತ್ತಿದೆ. ಇದಕ್ಕೆ ದೊಡ್ಡ ದೊಡ್ಡ ತಗಡುಗಳಲ್ಲಿ ಚಿತ್ರಿತರಾಗಿ ರಸ್ತೆಯುದ್ದಕ್ಕೂ ಮೆರೆಯುವ ನಮ್ಮ ಸ್ಪಿರಿಚ್ಯುಯಲ್ ಗುರುಗಳೂ ಕಾರಣ. ಸರಿ ಯಾವುದು ತಪ್ಪು ಯಾವುದು ಎಂಬುದನ್ನು ತಿಳಿದೂ ಇಂದಿನ ರಾಜಕೀಯ ನಾಟಕದಲ್ಲಿ ಭಾಗಿಗಳಾಗಿರುವ ಪ್ರಕಾಶರಂತಹ ಸಜ್ಜನರೂ ಕಾರಣ.

ಸಂಖ್ಯಾಬಲದ ಮೇಲೆ ಕೇವಲ ಅಧಿಕಾರದ ಆಸೆಯಿಂದ ಮಾಡುವ ಬಿಜೆಪಿ ಮತ್ತು ಕುಮಾರಸ್ವಾಮಿಯವರ ರಾಜಕಾರಣದಲ್ಲಿ ನೈತಿಕ ಪ್ರಶ್ನೆಯಾಗಲೀ, ಸೋಗಿನ ತಾತ್ವಿಕತೆಯಾಗಲೀ ನಮ್ಮನ್ನು ಕಾಡುವುದಿಲ್ಲ. ಅಧಿಕಾರವನ್ನು ನಿರ್ವಹಿಸುವ ಅವರ ಕ್ರಮದಿಂದ ಅವರ ಸೋಲುಗೆಲುವ ನಿರ್ಧರಿತವಾಗುತ್ತದೆ. ಭಾರತದ ಗೃಹಸ್ಥರಾದ ಎಲ್ಲ ಬಡಜನರೂ ಚುನಾವಣೆ ಸಂದರ್ಭದಲ್ಲಿ ರಾಷ್ಟ್ರ ಬೆಳಗುತ್ತಿದೆ ಎಂದಾಗಲೂ ನಿಜವೇನು ಎಂದು ತಿಳಿದು ಓಟ್‌ ಹಾಕುತ್ತಾರೆ.

ಸಮಸ್ಯೆ ಹುಟ್ಟುವುದು ಸೋಗಿನ ನೈತಿಕ ಭಾಷೆ ಬಳಸಿದಾಗ.

೨೦೦೬

* * *