ನೀನಾಸಂ ಸೃಷ್ಟಿಸಿದ ನನ್ನ ಗೆಳೆಯ ಕೆ.ವಿ. ಸುಬ್ಬಣ್ಣ ತೀರಿಕೊಂಡಿದ್ದು ಹೋದ ವರ್ಷ ಜುಲೈ ಹದಿನಾರನೇ ತಾರೀಕು. ಈ ಹದಿನಾರಕ್ಕೆ ಹೆಗ್ಗೋಡಿನಲ್ಲಿ ಅವರನ್ನು ನೆನೆಯುವ ಒಂದು ಸಮಾರಂಭ ನಡೆಯಿತು. ಸುಬ್ಬಣ್ಣನವರ ಮಗ ಅಕ್ಷರ ಆ ದಿನ ತಾವೇ ಭಾಷಾಂತರಿಸಿದ ಷೇಕ್ಸ್‌ಪಿಯರಿನ ‘ಮೆಷರ್‌ ಫಾರ್‌ ಮೆಷರ’ನ್ನು ಆಡಿಸಿದರು. ‘ಕ್ರಮ ವಿಕ್ರಮ’ ಅಕ್ಷರ ಕೊಟ್ಟ ಶೀರ್ಷಿಕೆ. ವಿಶೇಷವೆಂದರೆ ಈ ನಾಟಕದಲ್ಲಿ ಭಾಗವಹಿಸಿದವರು ಊರಿನವರು; ತಮ್ಮ ತಮ್ಮ ವೃತ್ತಿಗಳಲ್ಲಿ  ನಿರತರು. ನೀನಾಸಂನ ರಂಗಶಾಲೆಯಲ್ಲಿ ಕಲಿತವರಲ್ಲ. ಹಲವು ವರ್ಷಗಳಲ್ಲಿ ನಿರತರು. ನೀನಾಸಂನ ರಂಗಶಾಲೆಯಲ್ಲಿ ಕಲಿತವರಲ್ಲ. ಹಲವು ವರ್ಷಗಳ ಹಿಂದೆ ನೀನಾಸಂ ಹುಟ್ಟಿಕೊಂಡಿದ್ದೂ ಹೆಗ್ಗೋಡಿನ ಸುತ್ತಮುತ್ತಲ ಹಳ್ಳಿಯವರೇ ಆಗೀಗ ನಾಟಕಗಳು ಆಡಲೆಂದು. ಈ ಹಳ್ಳಿಯ ಜನ ಷೇಕ್ಸ್‌ಪಿಯರನ ನಾಟಕವನ್ನು ಆಡುವುದೇ ವಿಶೇಷ. ಹೊರಗಿನ ವಿಶಾಲ ಪ್ರಪಂಚ ಹೆಗ್ಗೋಡಿನಲ್ಲಿ ತಾವು ಇರುವ ತಾಣದಲ್ಲೇ ಒದಗಬೇಕೆಂಬ ಸುಬ್ಬಣ್ಣನವರ ಆಶಯ ಹೀಗೆ ಮತ್ತೆ ಸಾರ್ಥಕವಾಯಿತು.

ಷೇಕ್ಸ್‌ಪಿಯರನ ನಾಟಕ ಕ್ರೈಸ್ತ ಧಾರ್ಮಿಕ ಜಗತ್ತಿನಲ್ಲಿ ನಡೆಯುವಂಥದು. ಆದರೆ ಇದರ ಉದ್ದೇಶ ಒಂದು ಧರ್ಮದ ಪ್ರತಿಪಾದನೆಯೂ ಅಲ್ಲ, ಖಂಡನೆಯೂ ಅಲ್ಲ, ಬದಲಾಗಿ ಕ್ರೈಸ್ತಧರ್ಮ ತನ್ನ ಆಳದಲ್ಲಿ ನೆಚ್ಚಿಕೊಂಡ ಮೌಲ್ಯಗಳನ್ನು ಸಮಸ್ಯಾತ್ಮಕಗೊಳಿಸಿ ಶೋಧಿಸುವುದು. ಅಂದರೆ ಮನುಷ್ಯನ ಸ್ವಭಾವ, ವರ್ತನೆ, ಹಾಗೂ ದೈವಸಮ್ಮತ ಎಂದು ಅವನು ತಿಳಿದ ನೀತಿಸಂಹಿತೆಯನ್ನು ಅವುಗಳ ಸದ್ಯದ ಸತ್ಯದ ಅಸ್ತಿತ್ವದ ಸ್ಥಿತಿಯಲ್ಲಿ ಪರಿಶೀಲಿಸುವುದು.

ಸಂತ ಮಾಥ್ಯೂನ ಗಾಸ್ಪೆಲ್ (ಮತ್ತಾಯನ ಸುವಾರ್ತೆ) ನಲ್ಲಿ ಈ ಶಬ್ದ ‘ಮೆಷರ್‌’ ಬರುತ್ತದೆ. ನೀನು ಮಾಡುವ ಅಳತೆಯಿಂದಲೇ ನಿನ್ನನ್ನೂ ಅಳೆಯಲಾಗುತ್ತದೆ ಎಂಬುದು ಇದರ ತಾತ್ಪರ್ಯ. ಇಡೀ ಕ್ರೈಸ್ತಧರ್ಮದ ಆಧಾರವಿರುವುದು ಕ್ರಿಸ್ತನ ‘ಸರ್ಮನ್‌ ಆನ್‌ ದ ಮೌಂಟ್‌’ನಲ್ಲಿ. ಕ್ರಿಸ್ತನು ನಮ್ಮ ನಡತೆಯ ಬಳಿ ಹೊರಗುಗಳನ್ನು, ಅಂದರೆ ಹೊರಗೆ ಕೃತಿಯಾಗಿ ತೋರುವುದನ್ನು ಮತ್ತು ನಿಜವಾಗಿ ಮನಸ್ಸಿನಲ್ಲಿ ಅನ್ನಿಸುವುದನ್ನು ಪ್ರತ್ಯೇಕವಲ್ಲ ಎಂಬಂತೆ ನೋಡುತ್ತಾನೆ. ಹಾದರ ಮಾಡುವುದು ಮಾತ್ರ ತಪ್ಪಲ್ಲ; ಒಂದು ಹೆಣ್ಣನ್ನು ಹಾಗೆ ನೋಡಿ ಆಶಿಸುವುದೂ ಅಷ್ಟೇ ತಪ್ಪು.

ನಾವು ಯಾವುದನ್ನು ಕಾನೂನು ಎಂದು ತಿಳಿಯುತ್ತೇವೆಯೋ ಅದನ್ನು ಒಂದು ರಾಜ್ಯವ್ಯವಸ್ಥೆಗೆ ಜಾರಿಯಲ್ಲಿ ತರಲು ಸಾಧ್ಯವಾಗುವುದು ಮಾನವನ ಸಾಮಾಜಿಕವಾದ ಬಾಹ್ಯ ವರ್ತನೆಗೆ ಸಂಬಂಧಿಸಿದಂತೆ ಮಾತ್ರ. ಆದರೆ ಕ್ರೈಸ್ತಧರ್ಮದಲ್ಲಿ ಇದು ಮನುಷ್ಯನ ಅಂತರಂಗಕ್ಕು ಅನ್ವಯವಾಗಬೇಕಾಗುತ್ತದೆ. ಆಳುವ ವ್ಯವಸ್ಥೆಗೆ ಅಂತರಂಗದ ನಿಯಂತ್ರಣ ಸಾಧ್ಯವೆ? ಸಾಧುವೆ? ಈ ಒಳ ಹೊರಗುಗಳನ್ನು ಪ್ರತ್ಯೇಕವೆಂದು ನೋಡಬಾರದೆಂದು ಆಶಿಸುವ/ ಭಾವಿಸುವ, ಆದ್ದರಿಂದ ಒಳಜೀವನದ ಆತ್ಮವಿಮರ್ಶೆಯಲ್ಲಿ ನರಳುವ ಸೋಗಿನ/ ಅಥವಾ ನಿಜವಾಗಿ ಬಾಧಿತವಾದ ಮಾನವಜೀವಿಯ ಸಮಸ್ಯೆಯಿದು. ಬೆತ್ತಲಾದ ಅಂತರಂಗ ದರ್ಶನದಲ್ಲಿ ಇಡೀ ನಾಟಕದ ಸಮಸ್ಯೆ ಹಾಡಿ ಕುಣಿದು ಪಿಸುಗುಟ್ಟಿ ಪುಸಲಾಯಿಸಿ ಅದು ತರುವ ಉನ್ಮತ್ತ ಡಯೋನಿಯಸ್ ಎನರ್ಜಿಯಲ್ಲಿ ನಮ್ಮನ್ನು ಕಾಡುತ್ತದೆ. ಈ ನಾಟಕದ ಒಟ್ಟು ರುಚಿ ಕೊಂಚ ಕಹಿಯಾದ ಕಷಾಯದ್ದು.

ಈ ನಾಟಕದಲ್ಲಿ ಇಬ್ಬರು ಪ್ರಮುಖ ಪಾತ್ರಗಳು. ವಿಯೆನ್ನಾ ನಗರವನ್ನು ಆಳುವ ವಿನ್ಸೆಂಟೋ ಒಬ್ಬನಾದರೆ ಇನ್ನೊಬ್ಬ ಆಂಜೆಲೋ. ನಾಟಕ ಶುರುವಾಗುವುದೇ ವಿನ್ಸೆಂಟೋ ಆಂಜೆಲೋಗೆ ತನ್ನ ರಾಜ್ಯಾಧಿಕಾರವನ್ನು ಕೆಲಕಾಲದವರೆಗೆ ವರ್ಗಾಯಿಸುವ ನಿಶ್ಚಯ ಮಾಡುವುದರಿಂದ. ವಿನ್ಸೆಂಟೋ ಕೊಡುವ ಕಾರಣ ಇದು; ರಾಜ್ಯ ವ್ಯವಸ್ಥೆಯ ಬುನಾದಿಯಾಗಿರುವ ನೀತಿ ಸಂಹಿತೆ ನಿದ್ದೆ ಹೋಗಿದೆ. ತನ್ನ ಆಡಳಿತದ ಔದಾರ್ಯದಿಂದಾಗಿ ಜನ ನೀತಿಯ ಭಯವಿಲ್ಲದೆ ಅವರಿಗೆ ಬೇಕಾದಂತೆ ವರ್ತಿಸುತ್ತಿದ್ದಾರೆ. ಆದ್ದರಿಂದ ನಿಯಮನಿಷ್ಠನಾದ ಆಂಜೆಲೋ ಕೆಲಕಾಲ ರಾಜ್ಯವಾಳಿ ಜನರನ್ನು ನಿಯಮಬದ್ಧರಾಗಿ ಬಾಳುವಂತೆ ಮಾಡಬೇಕು. ಆದರೆ ಪದವಿ ತ್ಯಾಗದ ಈ ವ್ಯಾಖ್ಯೆ ಕಾಣುವಷ್ಟು ಸರಳವಲ್ಲ.

ವಿನ್ಸೆಂಟೋನ ಉದ್ದೇಶ ಕಾಣುವುದಕ್ಕೆ ಘನವಾಗಿದೆ. ಆದರೆ ಇವನು ಘೋಷಿಸಿದಂತೆ ಕಣ್ಮರೆಯಾಗುವುದಿಲ್ಲ. ಅಡಗಿ ಕೂತು ನೋಡುತ್ತಾನೆ. ಆದ್ದರಿಂದ ಅವನ ಘನೋದ್ದೇಶವನ್ನು ನಾವು ಪ್ರಶ್ನಿಸುವಂತೆ ನಾಟಕವಿದೆ. ಅಂದರೆ ಆಂಜೆಲೋನನ್ನು ಅವನು ಪಣವೊಡ್ಡಿ ಪರೀಕ್ಷಿಸಿ ಅಳತೆ ಮಾಡುವ, ಸ್ವಹಿತಸಾಧನೆಯ ಹುನ್ನಾರವೂ ಈ ವಿನ್ಸೆಂಟೋಗೆ ಇದೆ ಎಂಬ ಅನುಮಾನ ನಮಗೆ ಹುಟ್ಟುತ್ತದೆ.

ಆಂಜೆಲೋ ತಾನೊಬ್ಬ ನಿಷ್ಠುರ ನೀತಿವಂತನೆಂದೇ ತಿಳಿದಿದ್ದಾನೆ. ಆದರೆ ಬಹುಬೇಗನೆ ನಮಗೆ ಗೊತ್ತಾಗುವುದು ಎರಡು ವಿಷಯ; ಷೇಕ್ಸ್‌ಪಿಯರ್‌ನ ಕಾಲದ ನಂತರ ಅಧಿಕಾರಕ್ಕೆ ಬಂದ ಪ್ಯೂರಿಟನ್ ಕ್ರಾಂವೆಲ್‌ನ ರೂಪುರೇಷೆಗಳನ್ನು ಇವನಲ್ಲಿಯೂ ಷೇಕ್ಸ್‌ಪಿಯರ್‌ನ ಅಸಾಧಾರಣ ಮುನ್ನೋಟದ ಪ್ರತಿಭೆಯಿಂದಾಗಿ ನಾವು ಕಾಣುತ್ತೇವೆ. ತಾನೊಬ್ಬ ನೀತಿವಂತನೆಂಬ ಭಾವನೆ ಅಹಂಕಾರಕ್ಕೆ ತಿರುಗುತ್ತದೆ. ಪರಿಣಾಮವಾಗಿ ಅವನ ಆಡಳಿತ ಕ್ರೂರವಾಗುತ್ತದೆ. ಆದರೆ ಇಷ್ಟು ನೀತಿವಂತನಾದ ಮನುಷ್ಯ ಒಂದು ಹೆಣ್ಣನ್ನು ಎದುರಾದದ್ದೇ ಚಂಚಲವಾಗುತ್ತಾನೆ. ತನ್ನಲ್ಲಿ ಇಂತಹ ಒಂದು ಪ್ರಲೋಭನೆ ಇರುವುದು ಸಾಧ್ಯವೆ ಎಂದು ಧರ್ಮಸಂಕಟಕ್ಕೆ ಒಳಗಾಗುತ್ತಾನೆ. ನಾವು ಅವನು ಸಂಕಟಪಡುವುದನ್ನು ಕಾಣುತ್ತೇವೆ. ಇದು ತೋರಿಕೆಯ ಸಂಕಟವಲ್ಲವಾದರೂ ಪ್ರಯೋಜನಕ್ಕೆ ಬರುವ ಸಂಕಟವಲ್ಲ. ಅವನ ಕಾಮುಕತೆಯೇ ಅವನ ಮುಂದಿನ ಎಲ್ಲ ವರ್ತನೆಗಳನ್ನು ನಿಯಂತ್ರಿಸುತ್ತದೆ.

ಇವೆಲ್ಲವನ್ನೂ ವಿನ್ಸೆಂಟೋ ಗಮನಿಸುತ್ತಲೇ ಇದ್ದಾನೆ. ತಾನು ಮಾಡಲಾರದ್ದನ್ನು ಆಂಜೆಲೋ ಮಾಡಬೇಕು. ಮಾಡಿ ಕಷ್ಟಕ್ಕೊಳಗಾಗಬೇಕು ಎಂದು ಅವನು ಒಳಗಿನಿಂದ ಭಾವಿಸಿರಬಹುದೆಂಬ ಗುಮಾನಿ ನಮ್ಮಲ್ಲಿ ಬೆಳೆಯುತ್ತದೆ.

ಇಡೀ ಸಮಸ್ಯೆ ತಲೆದೋರುವುದು ಕ್ಲಾಡಿಯೋ ಎಂಬ ಉನ್ನತ ವರ್ಗದ ಯುವಕನೊಬ್ಬ ಮದುವೆಯಾಗದೆ ಜೂಲಿಯಟ್ ಎನ್ನುವವಳ ಜತೆ ಸಂಬಂಧ ಬೆಳಸಿ ಅವಳು ಬಸುರಾಗುವಂತೆ ಮಾಡಿದ್ದ ಎಂಬುದರಿಂದ. ಇದಕ್ಕೆ ಆಂಜೆಲೋ ವಿಧಿಸುವುದು ಮರಣ ದಂಡನೆ. ಈ ಶಿಕ್ಷೆಯನ್ನು ನಾಟಕದಲ್ಲಿ ಬರುವ ಯಾವ ಪಾತ್ರವೂ ಒಪ್ಪುವುದಿಲ್ಲ. ದೇಶದ ದಂಡನಾಯಕ ಕೂಡಾ ಇದು ಅತಿಯಾಯಿತೆಂದು ಭಾವಿಸುತ್ತಾನೆ. ಮನುಷ್ಯನ ಸ್ವೇಚ್ಛಾರಕ್ಕೆ ಅನುವು ಮಾಡಿಕೊಟ್ಟಿದ್ದ ವಿನ್ಸೆಂಟೋ ದೊರೆಯ ತಪ್ಪುಗಳನ್ನು ತಿದ್ದಲು ಆಂಜೆಲೋಗೆ ಇರುವ ಒಂದೇ ದಾರಿ, ಅವನು ತಿಳಿದಂತೆ, ನಿಷ್ಠು ಕಠಿಣತೆಯಿಂದ ಇರುವ ಕಾನೂನನ್ನು ಜಾರಿ ಮಾಡುವುದು. ಅವನ ವಾದ ಇದು: ‘ಕಾನೂನು ಕಟ್ಟಳೆಗಳು’ ಮುಖ್ಯ. ಎಷ್ಟು ಮುಖ್ಯವೆಂದರೆ, ಎಷ್ಟು ಜರೂರಿನದೆಂದರೆ ಈ ಕಾನೂನನ್ನು ಜಾರಿಗೊಳಿಸುವವರಲ್ಲಿ ಕೆಲವರು ತಾವೇ ಸ್ವತಃ ಅಪರಾಧಿಗಳಾಗಿದ್ದರೂ ಅದರಿಂದಾಗಿ ಕಾನೂನಿಗೆ ಇರುವ ಸತ್ಯ ಕಡಿಮೆಯಾಗಲಾರದು. ಮುಖ ಮೋರೆ ನೋಡಿ ಜರುಗಿಸುವುದು ಕಾನೂನಲ್ಲ. ಅದೊಂದು ಆತ್ಯಂತಿಕವಾದ ಸತ್ಯ. ಮುಂದೆ ತಾನೇ ಹಾದರಮಾಡಿದಾಗಲೂ ಕ್ಲಾಡಿಯೋಗೆ ಕೊಡುವ ಶಿಕ್ಷೆಯನ್ನು ಕೊಟ್ಟುಬಿಡುತ್ತಾನೆ. ಪ್ರಭುತ್ವದ ದರ್ಪಕ್ಕೆ ಮಾನವ, ಹಾಗೇ ತನ್ನದೇ ಆದ ದೌರ್ಬಲ್ಯಗಳ ಹಂಗಿಲ್ಲ. ಎಂಟನೇ ಹೆನ್ರಿ ಮತ್ತು ತನ್ನ ರಾಣಿಯೇ ಆಗಿದ್ದ ಎಲಿಜಿಬೆತ್‌ರ ಆಡಳಿತವನ್ನೂ ಟವರ್ ಆಫ್ ಲಂಡನ್ನಿನಲ್ಲಿ ಕಾನೂನುಸಮ್ಮತವಾಗಿ ನಡೆಯುತ್ತಿದ್ದ ಕಗ್ಗೊಲೆಗಳನ್ನೂ ನೋಡಿದ್ದ ನಮ್ಮ ಮಹಾನಾಟಕಕಾರನಿಗೆ ರಾಜ್ಯವ್ಯವಸ್ಥೆಯಲ್ಲಿ ಅಡಗಿದ ಕ್ರೌರ್ಯದ ಖುದ್ದು ಅನುಭವವಿದ್ದಿರಬೇಕು. ಕ್ರಿಶ್ಚಿಯನ್ ರಾಷ್ಟ್ರವಾದ ಬ್ರಿಟನ್ನಿನಲ್ಲಿ ಆಗ ನಡೆಯುತ್ತಿದ್ದ ಪ್ರಾಟಸ್ಟೆಂಟ್ ಕ್ಯಾಥೋಲಿಕ್ಕರ ನಡುವಿನ ಹಿಂಸಾಚಾರಕ್ಕೆ ಕಾರಣರಾದ ಹುಂಬ ಮಠಾಧಿಪತಿಗಳು, ಗಂಡುಮಗುವನ್ನು ಹೆರಲಿಲ್ಲವೆಂದು ರಾಣಿಯನ್ನೇ ಕೊಲ್ಲುವ ರಾಜರು ಕ್ರಿಸ್ತನಿಗೆ ಒಲಿದು ತೊರೆದೆಬಿಟ್ಟೆವು ಎಂದು ತಿಳಿದಿದ್ದವರು ಯಾವುದೋ ಆದಿಮ ಕ್ಷುದ್ರದೇವತೆಯ ಪೂಜಾರಿಗಳಂತೆ ನಿಜದಲ್ಲಿ ವರ್ತಿಸುತ್ತ ಇದ್ದರು. ಸಮಸ್ಯೆಯೆಂದರೆ ಇವರೇ ತಾವು ಕ್ರೈಸ್ತರೆಂದೂ ಅಂದುಕೊಂಡಿದ್ದರು. ಇವೆಲ್ಲವರೂ ಷೇಕ್ಸ್‌ಪಿಯರ್‌ನ ಮಾನವ ನಿಜದ ಶೋಧನೆಯ ವಿಷಯಗಳೇ.

ಈ ನಾಟಕದಲ್ಲಿ ಮನುಷ್ಯನ ಸ್ವೇಚ್ಛಾಚಾರವನ್ನು ಸಹಜವೆಂದು ತಿಳಿಯುವ ಅಧಿಕಪ್ರಸಂಗಿಯಾದ ಶ್ರೀಮಂತ ಲೂಸಿಯೇ ಎಂಬುವವನೂ ಇದ್ದಾನೆ. ಮರಣದಂಡನೆಗೆ ಒಳಗಾದ ಕ್ಲಾಡಿಯೋನಿಗೆ ಒಬ್ಬ ಅಕ್ಕ ಇದ್ದಾಳೆ. ಅವಳ ಹೆಸರು ಇಸಬೆಲ್ಲಾ. ಇಸಬೆಲ್ಲಾ ತನ್ನ ಕನ್ಯತ್ವವನ್ನು ದೇವರಿಗೆ ಅರ್ಪಣೆ ಮಾಡಿ ಸನ್ಯಾಸಿನಿಯಾಗಲು ತಯಾರಾಗುತ್ತಿದ್ದಾಳೆ. ಲೂಸಿಯೋ ಈ ಸನ್ಯಾಸಿನಿಯನ್ನು ಸಂಪರ್ಕಿಸುತ್ತಾನೆ; ಆಂಜೆಲೋನ ಮನಃಪರಿವರ್ತನೆಯಾಗುವಂತೆ ಮಾಡಲು ಈ ಸನ್ಯಾಸಿ ಸುಂದರಿಯೇ ತಕ್ಕವಳೆಂದು ಈ ಖದೀಮ ತಿಳಿದಿದ್ದಾನೆ. ಮನುಷ್ಯಜ ನಿಜವನ್ನು ಮೂಸಿ ಅರಿಯಬಲ್ಲ ಜಾಣರೆಲ್ಲರೂ ಖದೀಮರೇ.

ಸನ್ಯಾಸಿನಿಯಾಗಲೂ ಹೊರಟ ಇಸಬೆಲ್ಲಾಳೂ ಸರಳವಾದ ಆದರ್ಶವಾದೀ ಪಾತ್ರವೇನೂ ಅಲ್ಲ. ತಾನೆಷ್ಟು ಗಟ್ಟಿಯಿರಬಹುದು ಎನ್ನುವ ಗುಮಾನಿ ಅವಳಿಗೇ ಇದ್ದೀತು. ಆತ್ಮದಂಡನೆಯ ಇನ್ನಷ್ಟು ಕಠಿಣವಾದ ವ್ರತಗಳನ್ನು ಅವಳು ತೋರಿಕೊಳ್ಳುವಂತೆಯೂ ಬಯಸುತ್ತಾಳೆ. ಲೂಸಿಯೋಗೆ ಸಹಜವಾದ ಸ್ವೇಚ್ಛಾಚಾರ ಮತ್ತು ಇಸಬೆಲ್ಲಾಳ ಉಗ್ರ ವ್ರತಾಚರಣೆಯ ಘೋಷಿತ ಸಂಕಲ್ಪ – ಎರಡೂ ಸಂಬಂಧಿಗಳೇ.

ತನ್ನ ಸೋದರನೇ ಮರಣ ದಂಡನೆಗೆ ಒಳಗಾಗಿದ್ದಾನೆಂದು ವಯ್ಯಾರದ ಮಾತುಗಾರಿಕೆಯ ಲೂಸಿಯೋನಿಂದ ಗೊತ್ತಾಗಿದ್ದೇ ಅವಳು ಮತನಿಷ್ಠ ಕಟುಕನಾದ ಆಂಜೆಲೋನನ್ನು ಭೇಟಿಯಾಗಿ, ತನ್ನ ತಮ್ಮನ ಜೀವವನ್ನು ಉಳಿಸಬೇಕೆಂದು ಪ್ರಾರ್ಥಿಸುತ್ತಾಳೆ. ಅವಳ ಪಾಪಭೀರು ಧಾರ್ಮಿಕ ಮಾತಿನ ಮಾರ್ಮಿಕತೆಯೇ ಆಂಜೆಲೋನಲ್ಲಿ ಅವಳ ಬಗ್ಗೆ ಮೋಹ ಅಂಕುರಿಸುವಂತೆ ಮಾಡುತ್ತದೆ. ಅವನಿಗೆ ಆಕರ್ಷಿತಳಾಗಿ ಕಾಣುವುದು ವೇಶ್ಯೆಯಲ್ಲ. ಒಬ್ಬಳು ಸನ್ಯಾಸಿನಿ! ಇದನ್ನು ಲೂಸಿಯೋನ ಘಾಟಿತನ ಮೊದಲೇ ಊಹಿಸಿದೆ. ಇತರರ ದೌರ್ಬಲ್ಯಗಳ ಪ್ರೇಕ್ಷಕರೆಂದು ಆರಾಮಿನಲ್ಲಿ ನಗುತ್ತ ಕೂತ ನಮ್ಮನ್ನು ಗುಮಾನಿಯಿಂದ ನಾವೇ ಪರೀಕ್ಷಿಸಿಕೊಳ್ಳಬೇಕಾಗುವಂತೆ ಈ ಖದೀಮರು ಪುಸಲಾಯಿಸುತ್ತಾರೆ.

ಆಸ್ತಿಗೆ ಸಂಬಂಧಿಸಿದಂತೆ ಎಲ್ಲರೂ ಪಾಪಿಗಳೇ ಎಂಬುದು ಈ ನಾಟಕದಲ್ಲಿ ಮುಖ್ಯವಾದ್ದು. ಅಷ್ಟು ನೀತಿ ಶ್ರದ್ಧೆಯ ಆಂಜೆಲೋ ತಾನು ಮದುವೆಯಾಗಬೇಕಾಗಿದ್ದ ಮರಿಯಾಳನ್ನು ಮದುವೆಯಾಗಿರುವುದಿಲ್ಲ. ಅದಕ್ಕೆ ಕಾರಣ ಅವಳ ಕುಟುಂಬದಿಂದ ತನಗೆ ಸಿಗಬೇಕಾಗಿದ್ದ ವರದಕ್ಷಿಣೆ ಸಿಗಲಿಲ್ಲ ಎಂಬುದು. ಹಾಗೆಯೇ ಕ್ಲಾಡಿಯೋ ಜ್ಯೂಲಿಯಟ್‌ಳನ್ನು ಮದುವೆಯಾಗದೆ ಬಸುರು ಮಾಡಿ ಅಪರಾಧಿಯಾಗಿದ್ದಾನೆ. ಆದರೆ ಮದುವೆಯಾಗದೇ ಇರುವುದಕ್ಕೆ ಕಾರಣ ಅವಳಿಂದ ದೊರೆಯಬಹುದಾದ ವರದಕ್ಷಿಣೆ ಸಿಗುವುದು ತಡವಾದ್ದರಿಂದ. ಅಂದರೆ ರತ್ಯಾತುರದಿಂದ ಆದ ವ್ಯಭಿಚಾರ ಇದು.

ಇಂಥ ಒಂದು ಲೋಕ ಲೂಸಿಯೋನಂಥ ಸಿನಿಕ ಸ್ವೇಚ್ಛಾಚಾರಿಯನ್ನು ಸೃಷ್ಟಿಸಿದಂತೆಯೇ ಪಾಂಪೆ ಎನ್ನುವ ನಾಚಿಕೆಗೆಟ್ಟ ತಲೆ ಹಿಡುಕನನ್ನೂ, ನಾಚಿಸುವಂತೆ ತಲೆಹರಟೆ ಮಾಡುವ ಎಲ್ಬೋನನ್ನೂ ಸೃಷ್ಟಿಸಿದೆ. ಆಂಜೆಲೋನ ಕಠಿಣ ಕ್ರೂರ ನಿಯತ್ತಿನ ರಾಜ್ಯಭಾರದಲ್ಲಿ ಎಲ್ಲ ಪುರುಷರೂ ಬೀಜಹೀನ ಷಂಡರಾಗುತ್ತಾರೆ ಎಂದು ಯಾವ ಭಂಡ ಮಾತಿಗೂ ಅಂಜದೆ ವಾದಿಸುವ ಈ ಪಾಂಪೆ, ಲೂಸಿಯಾ, ಸೂಳೆ ಸವಕಲಿಯ ಲೋಕವನ್ನು ಷೇಕ್ಸ್‌ಪಿಯರ್‌ನಮ್ಮಲ್ಲಿ ಉಮೇದು ಉಕ್ಕುವಂತೆ ಸೃಷ್ಟಿಸುತ್ತಾನೆ ಎನ್ನುವುದು ಕ್ರೈಸ್ತನೀತಿ ಸಂಹಿತೆಯನ್ನು ಅಳುಬುರುಕುತನವೆಂದೂ ಅಪ್ರಾಮಾಣಿಕವೆಂದೂ ತಿಳಿದಿದ್ದ ಫಿಲಾಸಫರ್ ನೀಶೇ ಮೆಚ್ಚುವ ಡಯೋನೀಸಿಯನ್ ಕಲೆಗಾರಿಕೆ.

ಎಲ್ಲವನ್ನೂ ಕದ್ದು ನೋಡುವ ‘ಮೂಲಕ ಮಹಾಶಯ’ನಾದ ವಿನ್ಸೆಂಟೋ ಆಂಜೆಲೋನನ್ನು ಹಿಡಿದು ಕೆಡವಲು ಒಂದು ಉಪಾಯ ಹೂಡುತ್ತಾನೆ. ತನ್ನ ಪಾವಿತ್ರ್ಯಕ್ಕಾಗಿ (ತೋರುವಂತೆಯೂ?) ವಾದಿಸುವ ಇಸಬೆಲ್ಲಾಳನ್ನು ವೇಷಾಂತರಿಯಾದ ವಿನ್ಸೆಂಟೋ ಒಂದು ಕುಟಿಲೋಪಾಯಕ್ಕೆ ಅದೆಷ್ಟು ಸುಲಭದಲ್ಲಿ ಒಪ್ಪಿಸುತ್ತಾನೆ ಎಂಬುದೊಂದು ಆಶ್ಚರ್ಯದ  ವಿಷಯ. ಇಂಥ ಕುಟಿಲೋಪಾಯಗಳು ಷೇಕ್ಸ್‌ಪಿಯರ್‌ನ ಕಾಲದ ನಾಟಕೀಯತೆಯ ಸರಕುಗಳೂ ಆಗಿದ್ದವೆಂಬುದು ನಿಜ; ಆದರೆ ಸನ್ಯಾಸಿನಿಯಾಗ ಹೊರಟ ಇಸಬೆಲ್ಲಾ ಇದನ್ನು ಬೇಷರತ್ ಒಪ್ಪುವುದು,  ಸನ್ಯಾಸಿ ವೇಷದ ವಿನ್ಸೆಂಟೋ ಅದನ್ನು ಸೂಚಿಸುವುದು ಕೇವಲ ನಾಟಕೀಯ ಉಪಾಯ ಮಾತ್ರವೆಂದು ನಮಗೆ ಅನ್ನಿಸುವುದಿಲ್ಲ. (ಮುಂದೆ ಇಸಬೆಲ್ಲಾ ದೊರೆ ವಿನ್ಸೆಂಟೋನನ್ನು ಮದುವೆಯಾಗಲು ಒಪ್ಪುತ್ತಾಳೆ ಎಂದು ನಾಟಕ ಕೊನೆ ಮಾಡುವ ಕೆಲವು ನಿರ್ದೇಶಕರು ಈ ಸಂದರ್ಭದಲ್ಲಿ ಸನ್ಯಾಸಿಯಾಗ ಹೊರಟ ಸುಂದರಿ ಸನ್ಯಾಸಿ ವೇಷದ ದೊರೆಯನ್ನು ಅಪ್ಪಿ ಮೆಚ್ಚುವಂತೆ ದೃಶ್ಯಸಂಯೋಜನೆ ಮಾಡುತ್ತಾರೆಂದು ನಾನು ಓದಿದ್ದೇನೆ.)

ಉಪಾಯ ಇದು: ಇಸಬೆಲ್ಲಾ ಆಂಜೆಲೋ ಜತೆ ಮಲಗಲು ಒಪ್ಪಬೇಕು. ಬದಲಾಗಿ, ಅವಳ ತಮ್ಮನ ಮರಣ ದಂಡನೆಯನ್ನು ಶಿಕ್ಷೆಯನ್ನು ಕೈಬಿಡುವಂತೆ ವಚನ ಪಡೆಯಬೇಕು. ಆದರೆ ಆ ಕಾಳರಾತ್ರಿ ಅವರು ಕೂಡಬೇಕಾದ ಗುಪ್ತಜಾಗಕ್ಕೆ ಇಸಬೆಲ್ಲಾಳ ಬದಲು ಆಂಜೆಲೋನಿಂದ ವಂಚಿತೆಯಾದ ಮರಿಯಾನ ಹೋಗಬೇಕು.

ಆ ಕಾಳರಾತ್ರಿ ಆಂಜೆಲೋ ತನ್ನ ಮೋಹದ ಇಸಬೆಲ್ಲಾ ಎಂದೇ ಭ್ರಮಿಸಿ ತಾನು ಮದುವೆಯಾಗದೆ ವಂಚಿಸಿದ ಮಾರಿಯಾನಳನ್ನು ಸಂಭೋಗಿಸುತ್ತಾನೆ. ಆದರೆ ಕ್ಲಾಡಿಯೋಗೆ ಕೊಟ್ಟ ಮರಣದಂಡನೆ ಶಿಕ್ಷೆಯನ್ನು ಹಿಂದಕ್ಕೆ ಪಡೆಯುವುದಿಲ್ಲ. ಕಾನೂನು ಕಟ್ಟಳೆಗಳು ದರ್ಪ ದೊರೆಗಳಿಗೆ ‘ಇಂಪರ್‌ನಲ್’ ತಾನೆ!

ಪೋಲಿ ಫಟಿಂಗರ ಈ ನಾಟಕದಲ್ಲಿ ಯಾರೂ ಸಾಯುವುದಿಲ್ಲ. ವಿನ್ಸೆಂಟೋ ತಾನು ಹಿಂದಿರುಗುವುದಾಗಿ ಘೋಷಿಸಿ ಪ್ರತ್ಯಕ್ಷನಾಗುತ್ತಾನೆ. ಎಲ್ಲರೂ ನೆರೆದಿದ್ದಾರೆ. ಸಿನಿಕನಾದ ಲೂಸಿಯೋ ದೊರೆ ವಿನ್ಸೆಂಟೋನನ್ನು ಕೆಲವು ನಿಜವೆನ್ನಿಸುವ ಮಾತುಗಳಿಂದಲೇ ಹೀನಾಮಾನ ಹಂಗಿಸಿರುತ್ತಾನೆ –  ಅವನು ಪಾದ್ರಿವೇಷಧಾರಿಯಾಗಿದ್ದಾಗ. ನಾಟಕದಲ್ಲಿ ಯಾರೂ ಮಾನ ಉಳಿಸಿಕೊಳ್ಳುವುದಿಲ್ಲ. ಸಂಪೂರ್ಣ ಮಾನ ಕಳೆದುಕೊಳ್ಳುವುದೂ ಇಲ್ಲ..

ಷೇಕ್ಸ್‌ಪಿಯರ್ ನಾಟಕದ ವರ್ಗೀಕರಣದಲ್ಲಿ ಹಿಂದೆ ಈ ನಾಟಕವನ್ನು ಕಾಮಿಡಿಯೆಂದು ಕರೆಯುವ ವಾಡಿಕೆ ಇತ್ತು. ಕಾಮಿಡಿ ಯಾವಾಗಲೂ ಕೊನೆಯಾಗುವುದು ಮದುವೆಯಲ್ಲಿ ತಾನೆ? ಈ ಕಾಮಿಡಿಯಲ್ಲೂ ಮದುವೆಗಳಾಗುತ್ತವೆ. ಕ್ಲಾಡಿಯೋಗೆ ಜ್ಯೂಲಿಯಟ್ ಜತೆ, ಆಂಜೆಲೋಗೆ ಅವನಿಗೆ ಇಷ್ಟವಿಲ್ಲದ ಮರಿಯಾನ ಜತೆ, ಲೂಸಿಯೋಗೆ ಅವನು ಕೆಡಿಸಿದ ಹೆಣ್ಣಿನ ಜತೆ. ಇಷ್ಟು ಸಾಲದೆಂಬಂತೆ ಕೊನೆಯಲ್ಲಿ ತಾನೊಬ್ಬ ಬಹು ಉದಾರಿ ಎಂಬ ದೊಡ್ಡಸ್ತಿಕೆಯಲ್ಲಿ ವಿನ್ಸೆಂಟೋ ದೊರೆ ಸನ್ಯಾಸಿನಿಯಾಗ ಹೊರಟಿದ್ದ ಇಸಬೆಲ್ಲಾಳನ್ನು ತಾನು ಮದುವೆಯಾಗುವುದಾಗಿ ಘೋಷಿಸುತ್ತಾನೆ. ಅವನ ಮಾತಿನ ಧೋರಣೆಯಲ್ಲಿ ಅವಳಿಗೆ ಅದು ತಾನು ಮಾಡುತ್ತಿರುವ ಉಪಕಾರವೆಂಬಂತೆ ತೋರುತ್ತದೆ.

ಒಟ್ಟಿನಲ್ಲಿ ಈ ನಾಟಕ ನೀತಿ ನಿಯತ್ತುಗಳನ್ನೂ, ಅಧಿಕಾರದ ದರ್ಪ, ಔದಾರ್ಯದ ತೋರುಗಾಣಿಕೆಗಳನ್ನೂ ಸಮಸ್ಯಾತ್ಮಕವಾಗಿ ಮಂಡಿಸುವ ಕೃತಿಯಾಗಿದೆ. ಸುಲಭವಾದ ವರ್ಗೀಕರಣಕ್ಕೆ ಸಿಗದಿರುವ ಈ ನಾಟಕವನ್ನು ಪ್ರಾಬ್ಲಂ ಪ್ಲೇ ಎನ್ನುತ್ತಾರೆ. ಇದನ್ನು ಭಾಷಾಂತರಿಸುವುದು ಬಹಳ ಕಷ್ಟ. ನಾಟಕದ ತುಂಬಾ ಮನುಷ್ಯನ ಅದಮ್ಯವಾದ ಪ್ರಾಣಿ ಸಹಜ ಕಾಮದ ಚಿತ್ರಣವಿದೆ. ಪ್ರಪಂಚದಲ್ಲಿ ಷೇಕ್ಸ್‌ಪಿಯರ್‌ನಷ್ಟು ದಿಟ್ಟನಾದ ಭಂಡ ಲೇಖಕ ಇನ್ನೊಬ್ಬನಿಲ್ಲ. ಮಹಾ ಭಂಡನಾದ ಪಾಲ್ಸ್‌ಸ್ಟಾಫ್‌ನನ್ನು ಸೃಷ್ಟಿಸಿದವನು ಷೇಕ್ಸ್‌ಪಿಯರ್‌. ಎಷ್ಟು ಭಂಡವಾದದ್ದು ಷೇಕ್ಸ್‌ಪಿಯರ್‌ನಲ್ಲಿ ಇದೆಯೋ ಅಷ್ಟೇ ದಿವ್ಯವಾದದ್ದೂ ಅವನಲ್ಲಿ ಇದೆ.

ಷೇಕ್ಸ್‌ಪಿಯರ್‌ನ ರೆನೈಸಾನ್ಸ್ ನಂತರದ ಆಂಜೆಲೋ ಸೂಚಿಸುವ ಕ್ರಾಂವೆಲ್ ಕಾಲದಲ್ಲಿ ನಾಟಕಗಳೇ ಬಹಿಷ್ಕೃತವಾದುವು. ನೀತಿಯ ಒಂದು ಅತಿಗೂ, ಭ್ರಷ್ಟತೆಯ ಇನ್ನೊಂದು ಅತಿಗೂ ತುಯ್ಯುವುದೇ ಕ್ರಿಶ್ಚಿಯನ್ ಪ್ರಭುತ್ವಗಳ ಲಕ್ಷಣ ಎಂಬುದನ್ನು ನಾವು ಆ ಕಾಲದಲ್ಲಿ ಯೂರೋಪಿನಲ್ಲೆಲ್ಲಾ ನೋಡುತ್ತೇವೆ. ಷೇಕ್ಸ್‌ಪಿಯರ್ ಒಬ್ಬ ದಾರ್ಶನಿಕ ಲೇಖಕ. ಏಕೆಂದರೆ ಅವನು ಈ ಅತಿಗಳ ಸ್ವರೂಪವನ್ನು ತಿಳಿದಿದ್ದ. ಲಂಪಟವಾಗುವ ಸ್ವೇಚ್ಛಾಚಾರದ ಅರ್ಥಹೀನತೆ, ಮತ್ತು ಅದರಿಂದ ಕವಿಯುವ ಮಂಕು ಅವನಿಗೆ ಗೊತ್ತಿತ್ತು. ಜೊತೆಗೇ ನೀತಿವಂತಿಕೆಯ ಅಹಂಕಾರದಲ್ಲಿ ಕ್ರೂರವಾಗುವ ರಾಜ್ಯವ್ಯವಸ್ಥೆ ಹೇಗೆ ಸಂಸಾರಿಯ ಸಹಿಷ್ಣುತೆಯನ್ನೂ, ಉದಾಸೀನವಾದ ಲಯದಲ್ಲಿ ನಿತ್ಯಸಂಚಾರಿಯಾದ ದೈನಿಕದ ಸಾಮತೇಜಸ್ಸನ್ನೂ, ಒಡನಾಟದ ಆಪ್ತತೆಯನ್ನೂ ಪತ್ತೆಯಾಗದಂತೆ ನಾಶಮಾಡಬಲ್ಲುದೆಂಬುದು ಅವನಿಗೆ ಗೊತ್ತಿತ್ತು. ಅವನ ಅಲೌಕಿಕದ ಹುಡುಕಾಟ ನಿತ್ಯದ ಲೌಕಿಕತೆಯಲ್ಲೇ ಅಂತರ್ಗಾಮಿಯಾದದ್ದು.

ಈ ಘನವಾದ ಶೋಧದಲ್ಲಿ ಎಲ್ಲೂ ಷೇಕ್ಸ್‌ಪಿಯರ್‌ ಹಲವು ಲೇಖಕರಂತೆ ಸಂದೇಶಗಳನ್ನು ಕೊಡುವ ಗುರುವಾಗುವುದಿಲ್ಲ. ಷೇಕ್ಸ್‌ಪಿಯರ್‌ನ ಭಾಷೆಯಲ್ಲಿ ಉಕ್ಕುವ ಎನರ್ಜಿಯನ್ನು ನಾವು ಬೇರೆ ಯಾರಲ್ಲೂ ಅಷ್ಟು ಸತತವಾಗಿ ಕಾಣಲಾರೆವು. ಭಾರತೀಯನಾದ ನನಗೆ ಹೊಳೆಯುವ ವಿನಾಯಿತಿ ಎಂದರೆ ವೇದವ್ಯಾಸರು ಸೃಷ್ಟಿಸುವ ಮಹಾಭಾರತದ ಲೋಕ.

ಇಂಗ್ಲಿಷ್ ಬಲ್ಲವರಿಗೇ ಅತಿ ತೊಡಕಾದ ನಾಟಕವನ್ನು ಅಕ್ಷರ ಬಹಳ ಸಮರ್ಥವಾಗಿ ಭಾಷಾಂತರಿಸಿದ್ದಾರೆ. ಷೇಕ್ಸ್‌ಪಿಯರ್‌ನ ಲೋಕವನ್ನು ಈಗಿನ ವಾಸ್ತವವಾದೀ ಯೂರೋಪು ಅರ್ಥ ಮಾಡಿಕೊಳ್ಳುವುದಕ್ಕಿಂತ ಹೆಚ್ಚು ಸಮರ್ಪಕವಾಗಿ ಅಕ್ಷರ ಅರ್ಥ ಮಾಡಿಕೊಂಡಂತೆ ತೋರುತ್ತದೆ. ಈ ನಾಟಕದಲ್ಲಿ ಒಬ್ಬ ವೇಶ್ಯೆ ಬರುತ್ತಾಳೆ. ಅವಳನ್ನು ಷೇಕ್ಸ್‌ಪಿಯರ್ ಮಿಸ್ಟ್ರೆಸ್‌ಓವರ್ ಡನ್‌ ಎಂದು ಕರೆಯುತ್ತಾನೆ. ಇವಳು ಅಕ್ಷರನಲ್ಲಿ ಸವಕಲಿಯನ್ನು ಆಗುತ್ತಾಳೆ. ಇವಳನ್ನು ನಿರ್ದೇಶಕನಾಗಿ ಅಕ್ಷರ ಒಬ್ಬ ಉಕ್ಕುವ ಶಕ್ತಿಯ ಪುರಾಣದ ಕ್ಷುದ್ರ ದೇವತೆಯಂತೆ ನಿರೂಪಿಸಿದ್ದಾರೆ. ಯಕ್ಷಗಾನ ಬಯಲಾಟಗಳ ಪರಿಚಯ ಇರುವ ನೀನಾಸಂ ನಟರು ಎಂತಹಾ ಭಂಡ ಮಾತನ್ನಾದರೂ ನಿರಂಬಳವಾಗಿ ಆಡುತ್ತಾರೆ. ಹಿಂದೂ ಪುರಾಣಗಳ ಲೋಕದೊಳಕ್ಕೆ ಸಹಜವೆಂಬಂತೆ ಬರುವ ಷೇಕ್ಸ್‌ಪಿಯರ್‌ನ ಸುಂದರಿ ಸನ್ಯಾಸಿನಿಯ ಪಾತ್ರವನ್ನೂ ಅಕ್ಷರ ಒಬ್ಬ ಕನ್ನಡಿಗನಾಗಿ ಗ್ರಹಿಸಿದ್ದಾರೆ. ಹಲವು ನಿರ್ದೇಶಕರಿಗೆ ಕೊನೆಯಲ್ಲಿ ಇಸಬೆಲ್ಲಾ ವಿನ್ಸೆಂಟೋನ ಕೈ ಹಿಡಿಯುತ್ತಾಳೋ ಇಲ್ಲವೋ ಎನ್ನುವುದೊಂದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಆದರೆ ಅಕ್ಷರದಲ್ಲಿ ಇಸಬೆಲ್ಲಾಳದೇ ಕೊನೆಯ ಮಾತು. ಅವಳು ಆಡಿಕೊಳ್ಳುವುದು ಈ ಲೋಕದ ಯಾವ ಗಂಡನಿಗೂ ಒಲಿಯದ ಶಿವನಿಗೆ ಮಾತ್ರ ಒಲಿದ ಅಕ್ಕಮಹಾದೇವಿಯ ವಚನವನ್ನು.

* * *

ಸುಬ್ಬಣ್ಣ ಕಣ್ಮರೆಯಾಗಿದ್ದಾನೆ. ಆದರೆ ಅವನು ಹುಟ್ಟುಹಾಕಿದ ಕನ್ನಡದ ಸಾಂಸ್ಕೃತಿಕ ಪ್ರಪಂಚ ಷೇಕ್ಸ್‌ಪಿಯರ್‌ನನ್ನು ಒಳಗೊಳ್ಳಬಲ್ಲಂತೆ ಜೀವಂತವಾಗಿದೆ ಎಂಬ ನನ್ನ ಸಂತೋಷವನ್ನೂ ಇಲ್ಲಿ ನಾನು ಹಂಚಿಕೊಂಡಿದ್ದೇನೆ.

೨೩೨೦೦೬

* * *