ಬಂಗಾಳದ ಮಹತ್ವದ ಲೇಖಕರಾದ ಬಂಕಿಮಚಂದ್ರ ಚಟರ್ಜಿ ೧೮೯೪ರಲ್ಲಿ ಕಾಲವಾದರು. ಇಡೀ ಬಂಗಾಳ ದುಃಖದಲ್ಲಿ ಮುಳುಗಿತು. ಈ ಸಂದರ್ಭದಲ್ಲಿ ಜನರು ತಮ್ಮ ಶೋಕವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಸರಿಯೇ ತಪ್ಪೇ ಎಂಬ ವಾಗ್ವಾದ ನಡೆಯಿತು.

ಈ ವಾಗ್ವಾದವನ್ನು ನಡೆಸಿದವರು ಕೂಡಾ ಇಬ್ಬರು ಪ್ರತಿಭಾವಂತರು. ನವೀನ್‌ಚಂದ್ರ ಸೇನ್‌ ಮತ್ತು ರವೀಂದ್ರನಾಥ ಟ್ಯಾಗೋರ್‌. ಈ ಇಬ್ಬರ ನಡುವೆ ನಡೆದ ಸಂವಾದದಲ್ಲಿ ನವೀನ್‌ಚಂದ್ರ ಸೇನ್‌ ಸಾರ್ವಜನಿಕ ಶೋಕ ಪ್ರದರ್ಶನ ಭಾರತೀಯ ಸಂಸ್ಕೃತಿಗೆ ಹೊರತಾದುದು ಎಂದು ವಾದಿಸಿದರು. ತೀವ್ರವಾದ ದುಃಖವನ್ನು ಏಕಾಂತದಲ್ಲಿ ಅನುಭವಿಸಬೇಕು ಎಂದು ಪ್ರತಿಪಾದಿಸಿದ ನವೀನ್ ಚಂದ್ರ ಒಂದು ದೊಡ್ಡ ಸಭೆಯಲ್ಲಿ ದುಃಖವನ್ನು ಅಭಿವ್ಯಕ್ತಗೊಳಿಸಿದಾಗ ಅದೊಂದು ಸಾರ್ವಜನಿಕ ಮನರಂಜನೆಯ ಪ್ರದರ್ಶನವಾಗುತ್ತದೆಯೇ ಹೊರತು ಅದು ತೀವ್ರವಾದ ದುಃಖವಾಗಿ ಉಳಿಯುವುದಿಲ್ಲ ಎಂದರು.

ಆಗ ಟ್ಯಾಗೋರ್‌ ಒಂದು ಮಹತ್ವದ ಲೇಖನ ಬರೆದು ನವೀನ್‌ ಚಂದ್ರರ ನಿಲುವಿಗೆ ವಿರುದ್ಧವಾಗಿ ವಾದಿಸಿದರು. ‘ದುಃಖದ ಸಾರ್ವಜನಿಕ ಪ್ರದರ್ಶನವನ್ನು ನಾವು ಪಾಶ್ಚಾತ್ಯರಿಂದ ಕಲಿತಿರುವುದು ನಿಜ. ನಾವು ಎಷ್ಟೋ ವಿಷಯಗಳನ್ನು ಪಾಶ್ಚಾತ್ಯರಿಂದಲೇ ಕಲಿಯುತ್ತಿದ್ದೇವೆ. ಹಾಗೆಯೇ ದುಃಖದ ಪ್ರದರ್ಶನದಲ್ಲಿ ಕೂಡಾ ನಾವು ಪಾಶ್ಚಾತ್ಯರನ್ನು ಅನುಸರಿಸುವುದು ನಮ್ಮ ಸಾಮಾಜಿಕ ಅಗತ್ಯವೊಂದನ್ನು ಹೊಸ ರೀತಿಯಲ್ಲಿ ಪೂರೈಸಿಕೊಂಡಂತೆ ಆಗುತ್ತದೆ. ಭಾರತೀಯ ಸಮಾಜ ಈಚೆಗೆ ತಾನೊಂದು ಸಮಾಜವೆಂದೇ ಗುರುತಿಸಿಕೊಳ್ಳುತಿದೆ; ಕೇವಲ ಖಾಸಗಿ ಕುಟುಂಬಗಳ ಒಂದು ಗುಂಪಾಗಿ ಮಾತ್ರ ಉಳಿದಿಲ್ಲ. ಈಗ ಭಾರತೀಯ ಸಮಾಜ ಕೇವಲ ಕುಟುಂಬಗಳು ಮಾತ್ರವಲ್ಲ; ಹೊಸ ಜವಾಬ್ದಾರಿಗಳನ್ನು ಪಡೆದ ಸಾರ್ವಜನಿಕ ಕ್ಷೇತ್ರವೆನ್ನುವುದೂ ಅಷ್ಟೇ ನಿಜವಾಗಿದೆ.’ ಟ್ಯಾಗೋರ್‌ ಮುಂದುವರಿದು ಹೇಳಿದರು. ‘ನಮ್ಮ ದೇಹದಲ್ಲಿ ಸಾರ್ವಜನಿಕವಾಗಿ ಆಳವಾದ ದುಃಖವನ್ನು ಪ್ರದರ್ಶಿಸುವುದು ಇನ್ನೂ ಸಹಜವಾಗಿಲ್ಲ ಎಂಬುದು ನಿಜ. ನಮ್ಮ ಸಾರ್ವಜನಿಕತೆ ಇನ್ನೂ ಎಳಸಾಗಿದೆ. ನಮ್ಮ ಸಾಂಸ್ಕೃತಿಕ ನಾಯಕರಿಂದ ಪಡೆದದ್ದನ್ನು ಬಹುಬೇಗ ನಾವು ಮರೆಯುತ್ತೇವೆ. ನಮಗೆ ಕರ್ತವ್ಯ ಪ್ರಜ್ಞೆ ಎನ್ನುವುದೊಂದು ಇನ್ನೂ ಬಲವಾಗಿ ಬೆಳೆದಿಲ್ಲ. ಈ ಎಳಸುತನವನ್ನು ನಾವು ಕಳೆದುಕೊಳ್ಳಬೇಕು. ಹಿರಿಯರ ಕೊಡುಗೆಯನ್ನು ನೆನೆಪಿಟ್ಟುಕೊಂಡು ಪಾಲಿಸುವುದನ್ನು ಕಲಿಯಬೇಕು….’

ಈ ಮಹತ್ವದ ವಾಗ್ವಾದವನ್ನು ನನ್ನ ಗಮನಕ್ಕೆ ತಂದವರು ಪ್ರೊ. ಕಾರಂತ್‌ಎನ್ನುವ ಸಮಾಜ ವಿಜ್ಞಾನಿ. ಪಾರ್ಥ ಚಟರ್ಜಿ ಅವರು ಬರೆದ ಒಂದು ಲೇಖನದಲ್ಲಿ ಈ ವಾಗ್ವಾದದ ಪೂರ್ಣಪಾಠ ದೊರೆಯುತ್ತದೆ.

ರಾಜ್‌ಕುಮಾರ್‌ ತೀರಿಕೊಂಡಾಗ ಟೆಲಿವಿಷನ್ ಕ್ಯಾಮರಾಗಳನ್ನು ಕಂಡು ಶಿಳ್ಳೆ ಹಾಕುವವರನ್ನು, ನಿಂತಿರುವ ಬಸ್ಸನ್ನು ಕಂಡು ಕಲ್ಲೆಸೆಯುವವರನ್ನು, ಹತ್ತಿದ ಬೆಂಕಿಯನ್ನು ಕಂಡು ಕುಣಿದಾಡಿದವರನ್ನು ನಾವು ಟೆಲಿವಿಷನ್‌ನಲ್ಲಿ ನೋಡಿದೆವು. ಹಾಗೆಯೇ ಎರಡು ದಿನಗಳ ಹಿಂದೆ ಯಾವ ಟೆಲಿವಷನ್‌ ಕ್ಯಾಮೆರಾಗಳು ಇಲ್ಲದಾಗ ಅತ್ಯಂತ ಸಾಮಾನ್ಯ ಜನರು ಸಾವಿರಾರು ಸಂಖ್ಯೆಯಲ್ಲಿ ಬಂದು ರಾಜ್‌ಕುಮಾರ ಅವರ ಸಮಾಧಿಯ ಮೇಲೆ ಹೂವನ್ನಿಟ್ಟು ತೆಂಗಿನಕಾಯಿ ಬಾಳೆಹಣ್ಣುಗಳನ್ನು ಸಮರ್ಪಿಸಿ ಮೌನವಾಗಿ ಪೂಜೆ ಮಾಡುವುದನ್ನೂ ನಾನು ನೋಡಿದೆ.

ಕ್ಯಾಮೆರಾ ಕಂಡ ತಕ್ಷಣ ಕಪಿಗಳಂತೆ ಆಡಿದವರೂ ಈ ಸಮಾಧಿಯ ಮುಂದೆ ಆಳವಾದ ದುಃಖದಲ್ಲಿ ಸೇರಿದವರೂ ಬೇರೆ ಬೇರೆಯೇ? ಅಥವಾ ಒಂದೇ ಬಗೆಯ ಜನರೇ? ಒಂದು ಕ್ಷಣ ನನಗೆ ಗಲಿಬಿಲಿಯಾಯಿತು. ತಮ್ಮನ್ನು ರಾಜ್‌ಕುಮಾರ್‌ಅಭಿಮಾನಿಗಳೆಂದು ಗುರುತಿಸಿಕೊಳ್ಳುವವರು ಕೆಲವರಾದರೆ ಹಾಗೆ ಗುರುತಿಸಿಕೊಳ್ಳದೆ ತಮ್ಮ ಇಡೀ ಭಾವನಾ ಲೋಕವನ್ನು ರಾಜ್‌ಕುಮಾರ್‌ರಿಂದ ರೂಪಿಸಿಕೊಂಡವರು ಹಲವರಿರಬಹುದು ಎನ್ನಿಸಿತು. ಅಭಿಮಾನಿಗಳೆಂದು ಗುರುತಿಸಿಕೊಂಡವರಲ್ಲೂ ಈ ಬಗೆಯ ಪಾವಿತ್ರ್ಯದ ಭಾವನೆ ಇರಬಹುದು ಎಂದು ಅನಿಸಿತು. ಈ ಪಾವಿತ್ರ್ಯದ ಭಾವನಾ ಲೋಕ ಕರ್ನಾಟಕ ರಾಜ್ಯದ ಒಂದು ದೊಡ್ಡ ಸಂಪತ್ತು ಎಂದು ನನಗನ್ನಿಸುತ್ತದೆ. ಆದರೆ ರಾಜಕೀಯ ಭ್ರಷ್ಟಾಚಾರದ ಮತ್ತ ವಿದ್ಯಾವಂತರ ಸಿನಿಕತನದ ಇನ್ನೊಂದು ಲೋಕವನ್ನು ಮಾತ್ರ ಕ್ಯಾಮರಾ ಕಣ್ಣುಗಳು ಸತತ ನೋಡುತ್ತಿರುತ್ತವೆ.

* * *

ಟೆಲಿವಿಷನ್‌ನಂಥ ಸಮೂಹ ಮಾಧ್ಯಮಗಳು ನಮ್ಮ ಕಾಲದಲ್ಲಿ ಸತ್ಯಗಳನ್ನು ತೆರೆದಿಡುವುದಕ್ಕೆ ಬದಲಾಗಿ ಅವನ್ನು ಮುಚ್ಚಿಡುವ ಮನೋರಂಜಕ ಸಾಧನಗಳಾಗಿಬಿಟ್ಟಿವೆ. ಮೇಧಾ ಪಾಟ್ಕರ್‌ತಮ್ಮ ಉಪವಾಸವನ್ನು ಕೊನೆಗೊಳಿಸುತ್ತಿದ್ದಂತೆ ೨೪ ಗಂಟೆಗಳ ಕಾಲವೂ ಸುದ್ದಿಯನ್ನು ಪ್ರಸಾರ ಮಾಡುವ ಭಾರತದ ಎರಡು ದೊಡ್ಡ ಪರಸ್ಪರ ಸ್ಪರ್ಧಿ ಚಾನೆಲ್‌ಗಳು ಈ ಉಪವಾಸದ ಅಂತ್ಯವನ್ನು ಅರ್ಥೈಸುತ್ತಿದ್ದ ಕ್ರಮ ನನ್ನಲ್ಲಿ ತೀವ್ರವಾದ ಹೇಸಿಗೆಯನ್ನು ಉಂಟುಮಾಡಿತು.

ಒಂದು ಚಾನಲ್‌ಚರ್ಚೆಗೆ ಎತ್ತಿಕೊಂಡಿದ್ದು ‘ಸಿನಿಮಾ ನಟ ಅಮೀರ್‌ಖಾನ್‌ ಇದರಲ್ಲಿ ತೊಡಗಿಸಿಕೊಂಡಿದ್ದು ಸರಿಯೇ ತಪ್ಪೇ?’ ಎಂಬ ಪ್ರಶ್ನೆಯನ್ನು. ಸಾವಿರಾರು ರೈತ ಕುಟುಂಬಗಳು ತಮ್ಮ ಮನೆ – ಮಠಗಳನ್ನು, ಕುಲದೇವತೆಗಳನ್ನು, ಜೀವನಕ್ರಮಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಇವರೊಳಗೆ ಹುಟ್ಟಲೇ ಇಲ್ಲ.

ಇನ್ನೊಂದು ಚಾನೆಲ್ ಅಂತೂ ಹವಾನಿಯಂತ್ರಿತ ಕೊಠಡಿಯಲ್ಲಿ ಉಪವಾಸ ಮಾಡುತ್ತಿದ್ದ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅದನ್ನು ಕೊನೆಗೊಳಿಸಿದ್ದು ಮತ್ತು ಮೇಧಾ ಪಾಟ್ಕರ್‌ ತನ್ನ ಉಪವಾಸವನ್ನು ಮುಗಿಸಿದ್ದೂ ಒಂದೇ ಬಗೆಯ ನಿರ್ಣಯಗಳೆಂದು ಬಿತ್ತರಿಸಿತು. ‘ಇಬ್ಬರೂ ತಾವು ಗೆದ್ದಿದ್ದೇವೆಂದು ತಿಳಿದಿದ್ದಾರೆ’ ಎಂದು ಪದೇ ಪದೇ ಹೇಳಿತು.

ಮೇಧಾ ಪಾಟ್ಕರ್‌ಎಲ್ಲೂ ತಾನು ಸುಪ್ರೀಂ ಕೋರ್ಟ್ ಆದೇಶದಿಂದ ಸಂತೋಷ ಪಟ್ಟಿದ್ದೇನೆ ಅಥವಾ ಗೆದ್ದಿದ್ದೇನೆ ಎಂದು ಹೇಳಿಯೇ ಇರಲಿಲ್ಲ. ಮೇಧಾ ಸಾಯುವುದಕ್ಕಾಗಿ ಉಪವಾಸ ಮಾಡಿದವಳಲ್ಲ. ಆಕೆ ಗೆಲ್ಲುವುದಕ್ಕಾಗಿ ಉಪವಾಸ ಮಾಡಿದವಳು. ಈ ಮೂಲಕ ಲೋಹಿಯಾ ಬರೆದ ‘ನಿರಾಶಾಕಿ ಕರ್ತವ್ಯ’ ಎನ್ನುವ ಪ್ರಬಂಧವನ್ನು ಅವರು ನೆನಪು ಮಾಡಿದರು.

ಮೇಧಾ ಉಪವಾಸ ಕುಳಿತದ್ದು ಇನ್ನೊಂದು ಮುಂದಿನ ಹೆಜ್ಜೆಯನ್ನು ಇಡಲಿಕ್ಕಾಗಿ. ನಿರ್ದಿಷ್ಟ ಅವಧಿಯ ಒಳಗೆ ನಿರಾಶ್ರಿತರಾಗುವವರಿಗೆ ಏನೇನು ಮಾಡಬೇಕೆಂದು ಸುಪ್ರೀಂ ಕೋರ್ಟ್‌ ಹೇಳಿರುವುದನ್ನು ಕಾರ್ಯಗತಗೊಳಿಸಲು ಮೇಧಾ ತಮ್ಮ ಜೀವವನ್ನು ಉಳಿಸಿಕೊಂಡರು. ಎರಡು ಟೆಲಿವಿಷನ್ ಚಾನಲ್‌ಗಳಿಗೂ  ಸತ್ಯ ಬೇಕಿರಲಿಲ್ಲ. ಎರಡು ಉಪವಾಸ ನಿಲ್ಲಿಸುವ ದೃಶ್ಯಗಳನ್ನು ಅಕ್ಕ ಪಕ್ಕದಲ್ಲಿಟ್ಟು ಸುಂದರವಾದ ಚಿತ್ರಗಳನ್ನು ಪ್ರದರ್ಶಿಸಿ ಪ್ರಸಿದ್ಧ ನಟರ ವರ್ತನೆಗಳನ್ನು ಚರ್ಚಿಸಿ ನಮ್ಮ ಮನರಂಜಿಸುವುದು ಮಾತ್ರ ಅವರ ಉದ್ದೇಶವಾಗಿತ್ತು. ಜೊತೆಗೇ ಈ ಮನರಂಜನೆ ಪ್ರಸಿದ್ಧ ಕಂಪೆನಿಗಳು ಉತ್ಪಾದಿಸುವ ವಸ್ತುಗಳನ್ನು –  ಸೋಪು, ಬಟ್ಟೆ, ಆಹಾರ ಇತ್ಯಾದಿಗಳನ್ನು –  ನಾವು ಕೊಳ್ಳುವಂತೆ ಮಾಡುವುದಕ್ಕಾಗಿ ನಮ್ಮ ಮನಸ್ಸನ್ನು ಹಿಡಿದಿಡುವ ಉಪಾಯವಾಗಿತ್ತು. ನಾವು ನಮ್ಮ ಎಲ್ಲ ಸೂಕ್ಷ್ಮತೆಗಳನ್ನೂ ಕಳೆದುಕೊಳ್ಳುವಂತೆ ಈ ಟೆಲಿವಿಷನ್‌ ಚಾನೆಲ್‌ಗಳು ನಮ್ಮ ಎಲ್ಲ ಮುಖ್ಯ ಸಮಸ್ಯೆಗಳನ್ನು ‘ಜುಜುಬಿಗೊಳಿಸುತ್ತಾ’ ಇವೆ.

ಇಂಥ ಮಾಧ್ಯಮಗಳ ನಡುವೆ ‘ದಿ ಹಿಂದೂ’ ಪತ್ರಿಕೆಯೊಂದೇ ನಮಗೆ ಸತ್ಯವನ್ನು ವಸ್ತುನಿಷ್ಠವಾಗಿ ಹೇಳಿದ್ದು. ಹಾಗೆಯೇ ಕೆಲವು ಭಾರತೀಯ ಭಾಷಾ ಪತ್ರಿಕೆಗಳೂ ಈ ಕೆಲಸ ಮಾಡಿದವು.

ಖಾಸಗಿತನ ಮತ್ತು ಸಾಮಾಜಿಕತೆಯ ನಡುವಿನ ಅಂತರ ಕಡಿಮೆಯಾಗುತ್ತಿರುವುದರ ಬಗ್ಗೆ ಟ್ಯಾಗೋರ್‌ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಬರೆದಿದ್ದರು. ಆದರೆ ಇಂದಿನ ನಮ್ಮ ಸಾಮಾಜಿಕ ಟೆಲಿವಿಷನ್‌ ಮಾಧ್ಯಮದಿಂದಾಗಿ ಅವರು ಊಹಿಸಲಾರದಷ್ಟು ಕಣ್ಣಿಗೆ ಕುಕ್ಕುವ ಅಥವಾ ಕೇವಲ ಪ್ರದರ್ಶನವಷ್ಟೇ ಆಗಿಬಿಡುವ ಸಂಗತಿಯಾಗಿದೆ. ಅಂದರೆ ಖಾಸಗಿಯಾಗಿ ಯಾವ ಆಳವಾದ ಭಾವನೆಗಳಿಲ್ಲದೆಯೇ ಕೇವಲ ಪ್ರದರ್ಶನಕ್ಕೆ ತಮ್ಮನ್ನು ಒಡ್ಡಿಕೊಳ್ಳುವ ಮನಸ್ಸುಗಳೇ ಇವತ್ತು ರಾರಾಜಿಸುತ್ತಿವೆ. ಆದ್ದರಿಂದ ನಮ್ಮ ಟೆಲಿವಿಷನ್‌ಚಾನೆಲ್‌ಗಳಿಗೆ ಮೋದಿಯ ದರ್ಪದ ಕಣ್ಣುಗಳು, ಮೇಧಾರ ದುಃಖತಪ್ತ ಕಣ್ಣುಗಳು ಅಕ್ಕಪಕ್ಕದಲ್ಲಿಟ್ಟು ಮಾಡಬಹುದಾದ ಸುಂದರ ಚಿತ್ರವಾಗಿಬಿಟ್ಟಿದೆ.

ಈ ದೊಡ್ಡ ಟೆಲಿವಿಷನ್‌ ಚಾನೆಲ್‌ಗಳು ರಾಜ್‌ಕುಮಾರ್‌ ಮರಣದ ಸುದ್ದಿಯನ್ನೂ ಆನಂತರದ ಹಿಂಸಾತ್ಮಕ ಘಟನೆಗಳನ್ನು ಬಳಸಿಕೊಂಡಿದ್ದು ‘ಬ್ಯಾಂಗಲೋರ್‌’ ಬಹುರಾಷ್ಟ್ರೀಯ ಕಂಪೆನಿಗಳಿಗೆ ತಮ್ಮ ಹಣವನ್ನು ‘ಇನ್ವೆಸ್ಟ್’ ಮಾಡಲು ಎಷ್ಟು ಕ್ಷೇಮವಾದ ನಗರ ಎಂಬುದನ್ನು ಚರ್ಚಿಸಲು ಮಾತ್ರ. ಇಂಥ ಒಂದು ಚಾನೆಲ್‌ನಲ್ಲಿ ನನಗೂ ಒಂದು ಪ್ರಶ್ನೆಯನ್ನು ಕೇಳಲಾಯಿತು. ‘ಕರ್ನಾಟಕ ಕನ್ನಡವನ್ನು ಮಾತನಾಡುವ ನಾಡು. ಆದುದರಿಂದ ಇಲ್ಲಿರುವ ಎಲ್ಲರಿಗೂ ಕನ್ನಡ ಗೊತ್ತಿದ್ದರೆ ಒಳ್ಳೆಯದು’ ಎಂದು ನಾನು ಹೇಳಿದಾಗ ಐಟಿ ಸೇರೆಗಾರರೊಬ್ಬರು ಅದನ್ನು chauvinism (ಭಾಷಾಂಧತೆ) ಎಂದು ಕರೆದರು. ನಾನದಕ್ಕೆ ‘ಫ್ರೆಂಚ್‌ ಭಾಷೆಯನ್ನು ಉಳಿಸಿಕೊಳ್ಳಬೇಕೆಂದು ಬಯಸುವ ಫ್ರಾನ್ಸ್‌ನಷ್ಟೇ ನಾವು ಕೂಡಾ ಭಾಷಾಂಧರು’ ಎಂದೆ.

ಅದಕ್ಕಿಂತ ಹಿಂದೆ ಒಮ್ಮೆ ಬಿಬಿಸಿಯವರು ನನಗೆ ಫೋನ್‌ಮಾಡಿ ‘ಕನ್ನಡ ಇನ್ನು ಮುಂದೆ ಕರ್ನಾಟಕದಲ್ಲಿ ಕಡ್ಡಾಯವಂತೆ ನಿಜವೇ?’ ಎಂದು ಕೇಳಿದರು.

ಅದಕ್ಕೆ ನಾನು ಅಷ್ಟೇ ಆಶ್ಚರ್ಯದಿಂದ ‘ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಕಡ್ಡಾಯವಂತೆ ಹೌದೇ?’ ಎಂದು ಕೇಳಿದೆ.

೨೩೨೦೦೬

* * *