ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ತಾತ್ವಿಕವಾಗಿ ಯೋಚಿಸಬಲ್ಲವರಾಗಿದ್ದ ಕೆಲವು ರಾಜಕಾರಣಿಗಳು ಇದ್ದರು; ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವರೂ ವಿರಳವಾಗಿದ್ದರು. ಮಾನ್ಯ ನಿಜಲಿಂಗಪ್ಪನವರು, ಹೆಗಡೆಯವರು, ಹನುಮಂತಯ್ಯನವರು, ವೀರೇಂದ್ರ ಪಾಟೀಲರು ಸಮರ್ಥ ಆಡಳಿತಗಾರರಾಗಿ ಥಟ್ಟನೆ ನೆನಪಾಗುತ್ತಾರೆ. ಕರ್ನಾಟಕದ ಏಕೀಕರಣಕ್ಕಾಗಿ ನಿಜಲಿಂಗಪ್ಪನವರು, ವೀಕೇಂದ್ರೀಕರಣಕ್ಕಾಗಿ ಹೆಗಡೆಯವರು, ಸಂಸ್ಕೃತಿ ಪ್ರಸಾರಕ್ಕಾಗಿ ಹನುಮಂತಯ್ಯನವರು, ವ್ಯವಸ್ಥೆಯ ಅಚ್ಚುಕಟ್ಟಿಗಾಗಿ ವೀರೇಂದ್ರ ಪಾಟೀಲರು ಮಾಡಿದ ಕೆಲಸವನ್ನು ಜನಮೆಚ್ಚಿದ್ದಾರೆ. ವಿದ್ಯಾಕ್ಷೇತ್ರದಲ್ಲಿ ಆಗುತ್ತಿರುವ ವ್ಯಾಪಾರೀಕರಣವನ್ನು ತಡೆಗಟ್ಟಲು ಹೋಗಿ ವಿರೋಧಿಗಳನ್ನು ಬೆಳೆಸಿಕೊಂಡ ಮೊಯಿಲಿಯವರನ್ನು ಕೃತಜ್ಞತಾಭಾವದಲ್ಲಿ ಗುರುತಿಸುವವರಲ್ಲಿ ನಾನೂ ಒಬ್ಬ. ‘ಮಾನವೀಯತೆ, ಬಿಚ್ಚುಮಾತಿನ ಪ್ರಾಮಾಣಿಕತೆ ಮತ್ತು ಹಾಸ್ಯಪ್ರಜ್ಞೆಯ ಪಟೇಲರು ನನ್ನ ಆತ್ಮೀಯರು. ಆದರೆ ಈಗ ನಾನು ಬರೆಯ ಹೊರಟಿರುವುದು ಯಾವ ರಾಜಕಾರಣಿಗಳು ತಾತ್ವಿಕವಾಗಿ ಯೋಚಿಸಿದ್ದಷ್ಟೇ ಅಲ್ಲದೆ, ಒಳ್ಳೆಯ ಆಡಳಿತ ನಡೆಸಿದಷ್ಟೇ ಅಲ್ಲದೆ, ವ್ಯವಸ್ಥೆಯಲ್ಲೇ ಬದಲಾವಣೆಗಳನ್ನೂ ತರಲು ಪ್ರಯತ್ನಿಸಿದರು ಎಂಬ ಬಗ್ಗೆ. ಈ ಕುರಿತು ಚರ್ಚೆ ನಡೆಯಲಿ ಎಂದು ಆದಷ್ಟು ಸರಳವಾಗಿ, ನೇರವಾಗಿ ಈ ರಾಜಕಾರಣಿಗಳನ್ನು ಗುರುತಿಸಲು ಯತ್ನಿಸುತ್ತೇನೆ. ಅವರು ಯಾರೆಂದರೆ ಶಾಂತವೇರಿ ಗೋಪಾಲಗೌಡರು, ಅಬ್ದುಲ್‌ನಜೀರ್‌ಸಾಬರು, ದೇವರಾಜ ಅರಸರು ಮತ್ತು ಬಸವಲಿಂಗಪ್ಪನವರು. ನಾಲ್ಕು ಹೆಸರುಗಳನ್ನು ಮಾತ್ರ ನಾನು ಇಲ್ಲಿ ಎತ್ತಲು ಕಾರಣ ನನ್ನ ದೃಷ್ಟಿಕೋನವನ್ನು, ಪರೀಕ್ಷೆಯ ನಿಕಷವನ್ನು ಒಟ್ಟಿನಲ್ಲಿ ಒಪ್ಪಿಕೊಳ್ಳುವವರು ಬೇರೆ ಹೆಸರುಗಳಿದ್ದರೆ ಅವರನ್ನೂ ಗುರುತಿಸಿ ಚರ್ಚೆ ಎಂದು. ಸಾಮಾಜಿಕ ಬದಲಾವಣೆ ಸದ್ಯದ ನನ್ನ ಲಕ್ಷ್ಯವಿದ್ದಂತೆ, ಓದುಗರನೂ ಆಗಿದ್ದಲ್ಲಿ ಚರ್ಚೆಗೆ ಅರ್ಥ ಮತ್ತು ದಿಕ್ಕು ಇರುತ್ತದೆ.

ಜಾತಿಗೀತಿ ಬಡತನ ಇತ್ಯಾದಿಯಾಗಿ ನಮ್ಮ ಗ್ರಾಮೀಣ ಬದುಕಿನ ಸಮಸ್ಯೆಗಳ ಮೂಲವಿದ್ದದ್ದು ಭೂಮಿಯ ಒಡೆತನದ ಪ್ರಶ್ನೆಯಲ್ಲಿ. ನನ್ನ ಬಾಲ್ಯದಲ್ಲಿ ನಾನು ನೋಡಿದ, ಅನುಭವಿಸಿದ ಅನೇಕ ದುಷ್ಟತನಗಳು ಗೇಣಿ ವಸೂಲಿಯ ಬರ್ಬರ ಸಂದರ್ಭದಲ್ಲಿ ನಡೆದಂಥವು ಆಗಿದ್ದವು. ನನ್ನ ತಂದೆಯವರು ಕೆಲಸ ಮಾಡುತ್ತಿದ್ದ ಮಠದವರೇ ಒಬ್ಬ ಬಡವ ಗೇಣಿದಾರನ ಮನೆಯನ್ನು ಜಪ್ತಿ ಮಾಡಿದ್ದನ್ನು, ಅದರಿಂದ ನನ್ನ ತಂದೆ ಖಿನ್ನರಾದದ್ದನ್ನು ನಾನು ನೋಡಿದ್ದೇನೆ. ಇನ್ನೊಬ್ಬ ಸಣ್ಣ ಜಮೀನಿನ ಮಾಲೀಕ –  ಅಂಥ ದೊಡ್ಡ ಕುಳವೇನೂ ಅಲ್ಲ – ತನಗಿಂತ ಬಡಪಾಯಿಯಾಗಿದ್ದ ಗೇಣಿದಾರನ ಹೆಂಡತಿ ಒಲೆಯ ಮೇಲೆ ಕಾಯಲು ಇಟ್ಟ ಹಾಲನ್ನು ಕೂಡಾ ಹೊರಗೆ ಎಸೆದು ಮನೆಯಲ್ಲಿ ಇದ್ದುದೆಲ್ಲವನ್ನೂ ಜಪ್ತಿ ಮಾಡಿಕೊಂಡು ಹೋದುದನ್ನು ನಾನು ನೋಡಿದ್ದೇನೆ. ನಾನು ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ಸಮಾಜವಾದಿ ಚಿಂತನೆ ನನ್ನಲ್ಲಿ ಹುಟ್ಟಿದ್ದು ಹೀಗೆ.

ನನ್ನ ಕಾಲದಲ್ಲಿ ಶಾಂತವೇರಿ ಗೋಪಾಲಗೌಡರು ಇದನ್ನು ಹುಟ್ಟಿಸಿದವರಲ್ಲಿ ಬಹಳ ಮುಖ್ಯರು. ಅವರು ವಿಧಾನಸಭೆಯಲ್ಲಿ ಬರೇ ಎರಡು ಮೂರು ಜನರನ್ನು ಜೊತೆಯಲ್ಲಿಟ್ಟುಕೊಂಡು ಒಂದು ದೊಡ್ಡ ವಿರೋಧ ಪಕ್ಷದ ಹಾಗೆ ಕೆಲಸ ಮಾಡುತ್ತಾ ಬಂದವರು ಮತ್ತು ಚುನಾವಣೆಗೆ ನಿಂತಾಗ ಒಂದು ಓಟು ಮತ್ತು ಒಂದು ನೋಟು ಎರಡನ್ನೂ ಕೊಡಿ ಅಂತ ಕೇಳಿದವರು. ಭೂ ಹಂಚಿಕೆ ಅವರ ಕಾಲದಲ್ಲಿ ಆಗಲಿಲ್ಲ. ಅದು ಆಮೇಲೆ ಆಯಿತು. ನಾವು ಬಯಸಿದಷ್ಟು ಅಲ್ಲ: ‘ಉಳುವವನೇ ಹೊಲದೊಡೆಯ’ ಎನ್ನುವ ಗೌಡರ ಸ್ಲೋಗನ್ನು ಸ್ಲೋಗನ್ನಾಗಿಯೇ ಉಳಿಯಿತು. ಆದರೆ ಅದಕ್ಕೆ ಬೇಕಾದ ಮನೋಸಿದ್ಧತೆಗೆ ಕಾರಣರಾದವರು ಗೋಪಾಲಗೌಡರು. ಅವರ ವಲಯದಲ್ಲಿ ಈ ಹೋರಾಟಕ್ಕೆ ಸಹಾಯಕರಾದ ಬಹಳ ಜನರಿದ್ದರು. ಅವರ ಬಗ್ಗೆ ಪ್ರತ್ಯೇಕವಾಗಿ ಬರೆಯುವುದಿದೆ. ಎರಡನೆಯವರು ಅಬ್ದುಲ್‌ನಜೀರ್ ಸಾಬ್‌ರು. ಕುಡಿಯಲು ನೀರಿಲ್ಲದೆ ಮಕ್ಕಳನ್ನು ಹೆತ್ತು ಹೊತ್ತ ಹೆಂಗಸರು ಮೈಲುಗಟ್ಟಳೆ ನಡೆದುಹೋಗಿ, ಕೊಡಪಾನದಲ್ಲಿ ನೀರು ತುಂಬಿಸಿಕೊಂಡು ತಲೆಯ ಮೇಲಿಟ್ಟುಕೊಂಡು, ಅದನ್ನು ಚೆಲ್ಲದಂತೆ ನಡೆದು ತರುವ ದೃಶ್ಯ ಆಗ ಎಲ್ಲೆಲ್ಲೂ ಕಾಣಿಸುತ್ತಿತ್ತು. ಹೀಗೆ ಕೊಡದಲ್ಲಿ ನೀರನ್ನು ಹೊತ್ತು ನಡೆಯುವಾಗಲೂ ಅಪಾರವಾದ ಕುಶಲತೆಯನ್ನೂ, ನಿತ್ಯಸತ್ಯಗಳ ಮಾತುಗಾರಿಕೆಯ ಸೊಗಸನ್ನೂ ಈ ಹಳ್ಳಿ ಹೆಂಗಸರು ಹೇಗೆ ಉಳಿಸಿಕೊಳ್ಳಲು ಸಾಧ್ಯವಾಯಿತೊ – ಅದೊಂದು ಬೆರಗಿನ ವಿಷಯ. ಜೊತೆಗೇ ಅದನ್ನು ಕೇವಲ ಮೆಚ್ಚುವ ಹಾಗಿ ಕವಿ – ತೆವಲಿನಲ್ಲಿ ವರ್ಣಿಸಬಾರದ ವಿಷಯ. ಅವರನ್ನು ಈ ಅನಿವಾರ್ಯವಲ್ಲದ ಕಷ್ಟದಿಂದ ಪಾರು ಮಾಡಿದವರು ನಜೀರ್‌ಸಾಬರು. ಅವರು ಹಳ್ಳಿ ಹಳ್ಳಿಯಲ್ಲಿ ಹೋಗಿ ತಾವೇ ಖುದ್ದು ನಿಂತು ಕೊಳವೆ ಬಾವಿ ತೋಡಿಸಿದರು. ದಲಿತರ ಕೇರಿಯಲ್ಲಿ ನೀರು ಸಿಗುವುದಾದರೆ ಮೊದಲು ಅಲ್ಲಿ ತೋಡಿಸಿದರು. ಅವರನ್ನು ನೀರು ಸಾಬಿ ಎಂದೇ ಜನ ಕರೆದರು. ಅಬ್ದುಲ್ ನಜೀರ್‌ಸಾಬರಿಗೆ ಈ ಕೆಲಸವನ್ನು ಮಾಡಲು ನಿಜವಾಗಿ ಬೆಂಬಲವಾಗಿ ನಿಂತವರು ನನಗೆ ಗೊತ್ತಿರುವ ಹಾಗೆ ರಾಮಕೃಷ್ಣ ಹೆಗಡೆ ಮತ್ತು ಜೆ. ಎಚ್. ಪಟೇಲರು. ಈ ಕೊಳವೆ ಬಾವಿಗಳಲ್ಲಿ ತಾವು ಇರುವಲ್ಲೇ ನೀರು ಸಿಗುವಂತೆಯೇ ಅಧಿಕಾರವೂ ಸಿಗುವಂತಹ ವಿಕೇಂದ್ರೀಕೃತ ವ್ಯವಸ್ಥೆಗಾಗಿ ಅವರು ದುಡಿದರು.

ನಜೀರ್‌ ಸಾಬ್ ಕರ್ನಾಟಕದ ಮುಖ್ಯಮಂತ್ರಿ ಆಗಬಹುದಿತ್ತು. ನಿಜವಾದ ಜಾತ್ಯತೀತತೆಯನ್ನು ನಾನು ಅವರಲ್ಲಿ ಕಂಡಿದ್ದೆ. ಮುಸ್ಲಿಂ ಜನಸಮುದಾಯದಲ್ಲಿ ಏನಕೇನ ಜನಪ್ರಿಯರಾಗಿ ಅವರ ಓಟು ಪಡೆಯಲು ಸಾಧ್ಯವಿಲ್ಲದಷ್ಟು ಬಿಚ್ಚುಮನಸ್ಸಿನ ಹಾಗೂ ವರ್ತನೆಯ ಜಾತ್ಯತೀತವಾದಿ ಅವರು. ಶುಕ್ರವಾರವಾದರೂ ಮಸೀದಿಗೆ ಹೋಗಿ ನೀವು ನಮಾಜ್‌ಮಾಡಿ ಬರಬಾರದೇ ಎಂದು ಸದಾ ಬೀಡಿ ಸೇದುವ, ಕೆದರಿದ ಕೂದಲಿನ, ದೊಗಲೆ ಪೈಜಾಮ ಜುಬ್ಬ ಧರಿಸುವ ನಜೀರರನ್ನು ನಾವು ಛೇಡಿಸಿದ್ದುಂಟು.

ಮೂರನೆಯವರು ದೇವರಾಜ ಅರಸು. ಇದರ ಬಗ್ಗೆ ಕೂಡಲೇ ಹೇಳಬೇಕಾದ ಮಾತೊಂದಿದೆ. ಇವರ ಕಾಲದಲ್ಲಿಯೇ ಕರ್ನಾಟಕದಲ್ಲಿ ಭ್ರಷ್ಟಾಚಾರ ನೆಲೆ ಊರಿಬಿಟ್ಟಿತೆಂದೂ ಅವರು ಈ ಭ್ರಷ್ಟಾಚಾರವನ್ನು ತಮ್ಮ ರಾಜಕೀಯಕ್ಕೆ ನೇರವಾಗಿ ಬಳಸಿಕೊಂಡರೆಂದೂ ಎಡಗೈಯಲ್ಲಿ ತೆಗೆದುಕೊಂಡದ್ದನ್ನು ಬಲಗೈಯಲ್ಲಿ ಕೊಡುತ್ತಿದ್ದರೆಂದೂ ನಮ್ಮ ನೈತಿಕ ಭಾವನೆಗಳನ್ನು ಗಲಿಬಿಲಿಗೊಳಿಸಬಲ್ಲ ಮಾತುಗಳನ್ನು ಆಗ ನಾವೆಲ್ಲರೂ ಕೇಳುತ್ತಿದ್ದೆವು. ನಿಜವೆಷ್ಟು ಅತಿಶಯವೆಷ್ಟು ಇಂತಹ ಆರೋಪಗಳಲ್ಲಿ ಎಂಬುದು ಅದರಿಂದ ಪ್ರಯೋಜನ ಪಡೆಯುವವರಿಗೆ ಮುಖ್ಯವೆನ್ನಿಸುವುದೇ ಇಲ್ಲ. ಹೊರಗಿನ ನಮಗೆ ಸ್ಪಷ್ಟವಾಗುವುದೇ ಇಲ್ಲ. ಅರಸರು ಮಾಡಿದ ಭೂಹಂಚಿಕೆ, ಜೀತವಿಮೋಚನೆ ಇತ್ಯಾದಿ ಒಳ್ಳೆಯ ಕೆಲಸಕ್ಕೆ ವಿರೋಧವಾಗಿಯೂ ಮೇಲುಜಾತಿಗಳು ಒಟ್ಟಾಗಿ ಜನತಾ ಪಕ್ಷದ ಜಯಕ್ಕೆ ಕಾರಣರಾದರು ಎಂಬುದನ್ನು, ‘ತಾತ್ವಿಕ’ ಕಾರಣಕ್ಕೆ ಜನತಾವನ್ನು ಬೆಂಬಲಿಸಿದ ನನ್ನಂಥವರು ಮರೆಯಬಾರದು. ಅವರು ಅಧಿಕಾರ ಕಳೆದುಕೊಂಡ ಮೇಲೆ ಮೈಸೂರಿನಲ್ಲಿ ನಾನು ಈ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಅವರನ್ನು ಮುಜುಗರದಲ್ಲಿ ಕೇಳಿದ್ದೆ. ಅದಕ್ಕವರು ನಸುನಕ್ಕು ‘ಈ ಬಗ್ಗೆ ನಾನು ಬಹಳ ಹೇಳುವುದಿದೆ, ಆಮೇಲೆ ಎಂದು ಸ್ನೇಹದಲ್ಲಿ ನುಡಿದಿದ್ದರು. ತ್ಯಾಗ – ಭೋಗ ಸಮನ್ವಯದ ಭರತೇಶನನ್ನೂ ಗುಮಾನಿಯಿಂದ ನೋಡುತ್ತಿದ್ದ ಆಗಿನ ನನ್ನಂಥವರು ಕೊಂಚ ಗುಮಾನಿಯಿಂದಲೇ ಅರಸರು ರಾಜಕಾರಣದಲ್ಲಿ ತಂದ ಪಲ್ಲಟವನ್ನು ಗುರುತಿಸಿದ್ದೆವು. ಮುಂದೆ ಅರಸರ ಅಭಿಮಾನಿಗಳಲ್ಲಿ ಅವರ ಉತ್ಕಟತೆಯಾಗಲೀ, ಕೊನೆಯ ಪಕ್ಷ ಸಾಧನೆಯ ಜಾಣ್ಮೆಯಾಗಲೀ ಕಾಣಲಿಲ್ಲ. ಎಮರ್ಜನ್ಸಿ ಕಾಲದಲ್ಲಿ ಎಲ್ಲ ಮುಖ್ಯಮಂತ್ರಿಗಳೂ ಅರಸರಂತೆ ವರ್ತಿಸಿದ್ದಲ್ಲಿ ಇಂದಿರಾಗಾಂಧಿ ಸೋಲುತ್ತಿರಲಿಲ್ಲವೇನೊ? ಯಾವ ಜಾತಿಯೂ ಇನ್ನೊಂದು ಜಾತಿಯ ಸಹಕಾರವಿಲ್ಲದೆ ತಾನು ಮಾತ್ರ ಈ ದೇಶವನ್ನು ಆಳಲು ಸಾಧ್ಯ ಎಂಬ ಗರ್ವದ ಯಜಮಾನಿಕೆಗೆ ತಡೆ ತಂದವರು ದೇವರಾಜ ಅರಸರು. ಬಿಹಾರದಲ್ಲಿ ಕರ್ಪೂರಿ ಠಾಕೂರರು ಇದನ್ನು ಮಾಡಲು ಯತ್ನಿಸಿ ಸೋತಾಗ ಅರಸರು ಅವರಿಗೆ ಹೀಗೆ ಹೇಳಿದರೆಂದು ಒಂದು ಸುದ್ದಿ ಕೇಳಿದ್ದೇನೆ :

‘ನಿಮ್ಮಿಂದಾಗಿ ಆಯ್ಕೆಯಾಗುವ ಸಣ್ಣಪುಟ್ಟ ಜಾತಿಯ ಜನರಿಗೆ ತಮ್ಮ ಮೇಲಿನ ಒತ್ತಡ ತಾಳಿಕೊಳ್ಳಲು ಧನಬಲ ಬೇಕು. ಅದನ್ನು ನೀವು ಹೇಗಾದರೂ ಒದಗಿಸಿ ಅವರನ್ನು ಉಳಿಸಿಕೊಳ್ಳಬೇಕು. ಚುನಾವಣೆ ನಡೆಸಲು ಹಣಬೇಕಲ್ಲವೆ?’ ಅರಸರು ತಂದ ಬದಲಾವಣೆ ಮಾತ್ರ ನೈತಿಕವಾಗಿ ಗಟ್ಟಿಯಾಗದೆ, ಕೆಳಜಾತಿಗಳು ಇನ್ನೂ ಬಲವಾಗದೆ ಉಳಿದಿವೆ. ಇದಕ್ಕೆ ಅರಸರು ಬಳಸಿದ ಅವಕಾಶವಾದಿ ‘ಉಪಾಯ’ಗಳೂ ಕಾರಣವಿರಬಹುದು. ಉಪಾಯಗಳು ಶಾಶ್ವತ ಅಸ್ತ್ರಗಳಾಗಿ ಬಿಡುತ್ತವೆ! ಹಿಂದುಳಿದ ಜಾತಿಗಳ ರಾಜಕಾರಣ ಗುರಿತಪ್ಪಿರುವುದು ಉಪಾಯಗಳು ಧನಗಳಿಕೆಯ ಅಸ್ತ್ರಗಳಾಗಿಬಿಟ್ಟಿರುವುದರಿಂದ.

ನಾಲ್ಕನೆಯವರು ಬಸವಲಿಂಗಪ್ಪ ಅವರು ಎಲ್ಲರಂತೆ ಒಬ್ಬ ಕಾಂಗ್ರೆಸ್ ರಾಜಕಾರಣಿ. ಈ ಚುನಾವಣೆಗಳಿಗಾಗಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಬಹಳ ಪ್ರಾಮಾಣಿಕವಾಗಿ ಅವರು ಮಾತನಾಡುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರ ಜತೆಗಿನ ನನ್ನ ಅನುಭವವೊಂದನ್ನು ನೆನಪಿಸಿಕೊಳ್ಳುತ್ತೇನೆ. ಆಗ ಇಂದಿರಾಗಾಂಧಿಯವರ ಚಿಕ್ಕಮಗಳೂರು ಚುನಾವಣೆಯಲ್ಲಿ ಅವರ ತುರ್ತುಪರಿಸ್ಥಿತಿ ಕ್ರೌರ್ಯದ ವಿರುದ್ಧ ನಾವೆಲ್ಲಾ ಪ್ರಚಾರ ನಡೆಸುತ್ತಿದ್ದೆವು. ಈ ದಿನಗಳಲ್ಲಿ ಒಮ್ಮೆ ನಾನು, ನಂದನಾ ರೆಡ್ಡಿ ಮತ್ತು ಬಸವಲಿಂಗಪ್ಪ ಒಟ್ಟಿಗೆ ಮಂಗಳೂರಿನಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆವು. ನಂದನಾರೆಡ್ಡಿ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ನನ್ನ ಪಕ್ಕದಲ್ಲಿ ಕುಳಿತಿದ್ದ ಬಸವಲಿಂಗಪ್ಪ ಹಿಂದಿನ ಸೀಟಿಗೆ ಬೆಟ್ಟುಮಾಡಿ ತೋರಿ ‘ಅವರು ಎಷ್ಟು ಮಾಡಿಕೊಂಡರು?’ ಎಂದು ಕೇಳಿದರು.

ನನಗೆ ಅರ್ಥವಾಗಲಿಲ್ಲ ಎಂದೆ. ‘ಅಯ್ಯೋ ಅನಂತಮೂರ್ತಿ, ನಿಮಗೆ ಇದೇನೂ ಅರ್ಥವಾಗುವುದಿಲ್ಲ. ಒಂದು ಚುನಾವಣೆ ನಡೆಯುತ್ತಿದೆ ಅಂದರೆ ಹಣದ ಹೊಳೆ ಹರಿಯುತ್ತಿರುವ ಹಾಗೆ. ನಾವು ನಮ್ಮ ನಮ್ಮ ಚೊಂಬುಗಳನ್ನು ತೆಗೆದುಕೊಂಡು ಹೋಗಿ ತುಂಬಿಸಿಕೊಂಡು ಬರುತ್ತೇವೆ. ನಾನೂ ಹಾಗೆ ಮಾಡದೆ ಇದ್ದರೆ ಎಲೆಕ್ಷನ್‌ಗೆಲ್ಲಲು ಸಾಧ್ಯವಿತ್ತೇ? ನಮ್ಮ ಲೀಡರೇ ನನ್ನ ಸೋಲಿಸಲು ನನ್ನ ಎದುರಾಳಿಗೆ ದುಡ್ಡು ಕೊಟ್ಟಿರುತ್ತಾರೆ. ಇವೆಲ್ಲ ತಿಳಿಯದ ನೀವು ಚುನಾವಣೆ ಪ್ರಚಾರಕ್ಕೆ ಹೋಗಬಾರದು.

ಇದು ಬಸವಲಿಂಗಪ್ಪನವರ ಮಾತಿನ ರೀತಿ. ಇದರ ಜತೆಗೆ ಅವರಲ್ಲಿ ಒಂದು ದಿಟ್ಟವಾದ ಸಿನಿಕತನದ ಸೋಂಕು ಇಲ್ಲದ ವಿಚಾರವೂ ಇತ್ತು. ಇಂದಿರಾಗಾಂಧಿಯನ್ನು ಅವರು ದುರ್ಗೆಯೆಂದು ನಮ್ಮ ಬೇಂದ್ರೆಯಂತೆ, ಮೊಕಾಶಿಯಂತೆ, ಚಿತ್ರಕಾರ ಹುಸೇನ್‌ರಂತೆ ಭಾವಿಸಿದ್ದರು. ಆಕೆಯ ಬಲವಿಲ್ಲದೆ ಅರಸರು ಏನನ್ನೂ ಸಾಧಿಸಲು ಆಗುತ್ತಿರಲಿಲ್ಲವೆಂದೂ ವಾದಿಸುತ್ತಿದ್ದರು. ದಲಿತರು ಮಲ ಹೊರುವುದನ್ನು ಹೇಗಾದರೂ ತಪ್ಪಿಸಬೇಕು ಎಂಬ ವಿಷಯದಲ್ಲಿ ಅವರು ತತ್ಪರರಾಗಿ ಕೆಲಸ ಮಾಡಿದರು. ಅವರು ತೀರ್ಥಹಳ್ಳಿಯ ಸಭೆಯೊಂದರಲ್ಲಿ ಹೇಳಿದ್ದು ನೆನಪಾಗುತ್ತದೆ. ನನ್ನ ಸಂಸ್ಕಾರ ಕಾದಂಬರಿಯಲ್ಲಿ ಶೂದ್ರ ಹೆಣ್ಣನ್ನು ಬ್ರಾಹ್ಮಣ ಪ್ರೀತಿಸುವುದೇ ಹೊರತಾಗಿ ಬ್ರಾಹ್ಮಣ ಹೆಣ್ಣನ್ನು ಶೂದ್ರ ಪ್ರೀತಿಸುವುದಲ್ಲ ಎಂದು ಆತ್ಮೀಯವಾಗಿ ಟೀಕಿಸಿ, ಕಣ್ಣುಮಿಟುಕಿಸಿ, ‘ನಿಮ್ಮ ಭಾರತೀಪುರ ಓದಿದ್ದೇ ಮಲಹೊರುವ ಪದ್ಧತಿಯನ್ನು ನಿಲ್ಲಿಸಬೇಕೆಂದು ಶಪಥ ಮಾಡಿದೆ’ ಎಂದರು (ನನ್ನ ಕೃತಿಗಳೆಲ್ಲವನ್ನೂ ಅವರಿಗೆ ಓದಿಸುತ್ತಿದ್ದವರು ಮೊದಲು ಗೋಪಾಲಗೌಡರು, ನಂತರ ಪಟೇಲರು) ಮತ್ತೆ ಸಭೆಯಲ್ಲಿದ್ದ ಬ್ರಾಹ್ಮಣರನ್ನು ಉದ್ದೇಶಿಸಿ; ‘ಈಗ ನಮ್ಮ ಜನ ಹೊರುತ್ತಿರುವ ಮಲ ಒಳ್ಳೆಯ ಆರ್ಗಾನಿಕ್ ಮೆನೂರ್ ಮಾಡಿದರೆ, ಚೀನಾದಲ್ಲಿ ಮಾಡುತ್ತಿರುವಂತೆ, ಆಗ ಅದರ ಬೆಲೆ ಎಷ್ಟಿರುತ್ತದೆ ಗೊತ್ತೆ? ಆ ನಿಮ್ಮ ಹೆಗಲುಗಳ ಮೇಲೆ ಪ್ರಿಂಟೆಡ್ ಚೀಲಗಳಲ್ಲಿ ಅದು ಇರುತ್ತೆ ಎಂದು ನಕ್ಕಿದ್ದರು. ಬಸವಲಿಂಗಪ್ಪನವರನ್ನು ಜಾತಿವಾದಿ ಎಂದು ಕರೆಯಲು ಸಾಧ್ಯವೇ ಆಗದಂತೆ ತಮ್ಮ ವಿಚಾರವನ್ನು ಮಂಡಿಸಬಲ್ಲ ಸೊಗಡು ಅವರ ಮಾತಿನಲ್ಲಿತ್ತು. ಬೂಸಾ ಪ್ರಕರಣದ ಅವರ ವಾದಗಳು ಇದಕ್ಕೆ ಉದಾಹರಣೆ. ಅದರಿಂದಾಗಿ ಅಸ್ಪೃಶ್ಯ ಜಾತಿಗಳಲ್ಲದೆ ಉಳಿದ ನಿರ್ಗತಿಕರೂ ‘ದಲಿತ’ ಎಂಬ ಕಲ್ಪನೆಗೆ ಒಳಗಾದರು.

* * *

ಕೈ ಕೆಸರು ಮಾಡಿಕೊಳ್ಳಲು ಅಂಜುವವನು ರಾಜಕಾರಣದಲ್ಲಿ ಏನೂ ಸಾಧಿಸಲಾರ ಎಂಬ ವಾದವಿದೆ –  ಇದು ಚುನಾವಣೆಗಳಲ್ಲಿ ಗೆದ್ದು ಬರಬೇಕಾದ ಪ್ರಜಾತಂತ್ರದಲ್ಲಿ ನಂಬಿದವರ ವಾದ. ಭ್ರಷ್ಟಾಚಾರವಲ್ಲದಿದ್ದರೂ, ವೈಯಕ್ತಿಕ ಲಾಭಕ್ಕಲ್ಲದಿದ್ದರೂ, ‘ವಸೂಲಿ’ ಮಾಡದೆ ಪಕ್ಷ ಬೆಳೆಯಲು ಸಾಧ್ಯವಿಲ್ಲ ಎನ್ನುವ ವಾದವಿದು. ಅರಸರಂಥವರ, ಬಸವಲಿಂಗಪ್ಪನನಂಥವರ ವಾದ ಇದು. ಉದ್ದೇಶ ಪೂರ್ವಕವಾದ ಕ್ರೌರ್ಯವಲ್ಲದ, ಅದೊಂದು ಗೀಳಾಗಿಬಿಡದ, ಅಗತ್ಯವಾದ ‘ಹಿಂಸೆ’ಗೆ ಅಂಜುವವನು ಕ್ರಾಂತಿಕಾರ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬ ಇನ್ನೊಂದು ವಾದವಿದೆ. ಇದು ಮಾವೋ ಲೆನಿನ್‌ನಂಥವರ ವಾದ. ಶಾಶ್ವತವಲ್ಲದ ಈ ಬದುಕಿನಲ್ಲಿ ಯಾವುದಕ್ಕೂ ಅಂಟಿಕೊಳ್ಳದಂತೆ ದೈವದಲ್ಲಿ ತಲ್ಲೀನನಾಗಿರಬೇಕು ಎಂಬ ಸಿದ್ಧಾಂತವೂ ಇದೆ. ಇವರು ಕೊಳಕನ್ನು ನೋಡಲು ಒಲ್ಲದ ಜಾಣ ಕುರುಡರೂ ಆಗಿರಬಹುದು; ರಮಣರಂತಹ ಕರುಣಾಶೀಲರೂ ಆಗಿರಬಹುದು; ಶ್ರೀಮಂತರ ಟೆನ್ಶನ್‌ ಇಳಿಸುವ ಶ್ರೀ ಶ್ರೀ ಗುರುಗಳೂ ಆಗಿರಬಹುದು. ಮಾರ್ಗ ಮತ್ತು ಗುರಿ ಬೇರೆ ಬೇರೆಯಾಗಿರುವುದು ಸಾಧ್ಯವಿಲ್ಲ; ಸದ್ಗುರಿಗೆ ಸನ್ಮಾರ್ಗವೊಂದೇ ದಾರಿ ಎಂಬ ಇನ್ನೊಂದು ನಿಷ್ಠುರ ನಂಬಿಕೆಯಿದೆ. ಸಾಕು ನನಗೊಂದು ಹೆಜ್ಜೆ ಎಂದು ಆ ಇನ್ನೊಂದು ಹೆಜ್ಜೆಗಾಗಿ ಸಾವಿಗೂ ಅಂಜದ ಗಾಂಧಿಯಂಥವರ ನಿಲುವು ಇದು. ಎಲ್ಲ ವಾದಗಳಿಗೂ ಒಂದು ನಿಜದ ತಿರುಳು ಸಿಗುವುದು ನಾವು ದೀನ ದಲಿತರ ಪರವಾಗಿ, ಮಾತಾಡಲಾರದೇ ಇರುವವರ ಪರವಾಗಿ, ಭೀತರ ಪರವಾಗಿ ನಿಲ್ಲದೇ ಹೋದರೆ ನಮ್ಮ ಬದುಕಿಗೆ ಅರ್ಥವಿಲ್ಲ ಎನ್ನಿಸಿದಾಗ; ಅಂದರೆ ವೈಯಕ್ತಿಕ ಜಂಜಾಟದ ಈ ಸಂಸಾರದ ನಡುವೆ ಬದುಕುತ್ತಿರುವಾಗಲೇ ನಮ್ಮಂಥ ಸಾಮಾನ್ಯರಿಗೆ ಹೀಗೆ ಅನ್ನಿಸುವುದು ಮಾತ್ರವಲ್ಲದೆ, ಅನ್ನಿಸಿದ್ದರ ಪರಿಣಾಮವಾಗಿ ಅಷ್ಟೋ ಇಷ್ಟೋ ನಾವು ಕಾರ್ಯ ಪ್ರವೃತ್ತರಾದಾಗ. ಒಳಗಿನ ತುಮುಲ ಕಳೆಯದಂತೆ ಹೊರಗಿನ ಕ್ರಿಯೆಯಲ್ಲಿ ತನ್ನ ಕೈಲಾದಷ್ಟು ಯಾವ ಮಿತಿಯಲ್ಲಾದರೂ ವಿನಯದಲ್ಲಿ ತೊಡಗಿದಾಗ ರಾಜಕಾರಣದ ಅರ್ಥವಿರುವುದು ಹೀಗೆ ‘ಕೇರ್‌’ ಮಾಡುವದರಲ್ಲಿ. ‘ಕೇರ್‌’ ಅನ್ನುವುದು ಮನೋಶಾಸ್ತ್ರಜ್ಞ, ಎರಿಕ್‌ಫ್ರಿಮ್‌ನಿಗೆ ‘ಲವ್‌’ ಎನ್ನುವುದಕ್ಕಿಂತ ಪ್ರಿಯವಾದ ಶಬ್ದ. ಕೆಲವು ಮಹಾನ್ ರಾಜಕೀಯ ನಾಯಕರ ಜನರ ಮೇಲಿನ ‘ಪ್ರೇಮ’ ಯಾವಾಗ ಸಹನೆ ತಪ್ಪಿದ ಕ್ರೌರ್ಯವಾಗುತ್ತೋ ಹೇಳುವುದು ಕಷ್ಟ. ‘ಲವ್‌’ ಕೇವಲ ತೋರುವಂತೆ ನಟಿಸಬಹುದಾದ ರಾಜಕೀಯ ಪ್ರದರ್ಶನವಾದರೆ, ‘ಕೇರ್‌’ನಲ್ಲಿ ಮಾಡಿದುದು ಮಾತ್ರ ತೋರುವ ಪಾಲನೆ ಇರುತ್ತದೆ. ಇದು ತಾಯಿಯ ಕೆಲಸ.

ನಾನು ವರ್ಣಿಸಿದ ನಾಲ್ವರಲ್ಲಿಯೂ ಈ ನನ್ನ ಭಾವನೆಗಳನ್ನು ಹಂಚಿಕೊಳ್ಳುವುದು ಸಾಧ್ಯವಿತ್ತೆಂದು, ಅವರು ಕೂಡ ತಮ್ಮ ಗುಣದೋಷಗಳಲ್ಲಿ ಮನುಷ್ಯ ಮಾತ್ರರೆಂದು ನಿಮ್ಮ ಎದುರು ಅವರನ್ನು ಕೊಟ್ಟಿದ್ದೇನೆ.

೧೯೨೦೦೬

* * *