ಕೊಲ್ಲಾಪುರದ ರಾಜ ಶೂದ್ರ ಸಮುದಾಯದ ಏಳಿಗೆಗಾಗಿ ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಹೋರಾಡಿದವನು. ಇವನ ಬಗ್ಗೆ ಒಂದು ವೃತ್ತಾಂತವಿದೆ. ಅವನು ಶಿವಾಜಿವಂಶದವನು. ಶಿವಾಜಿ ಕ್ಷತ್ರಿಯನಾಗಿ ಸಿಂಹಾಸನ ಏರಿದವನು. ಕಾಶಿಯ ಬ್ರಾಹ್ಮಣರು ಅವನಿಗೆ ಕ್ಷತ್ರಿಯಪಟ್ಟ ಕೊಡಲು ಅವನಿಗೊಂದು ವಂಶಾವಳಿ ನಿರ್ಮಿಸಲು ಮುಂದಾದರು. ಮಹಾರಾಷ್ಟ್ರದ ಬ್ರಾಹ್ಮಣರು ಒಲ್ಲೆಯೆಂದಾಗ ಆದದ್ದು ಇದು.

ಕೊಲ್ಲಾಪುರದ ರಾಜನ ಸ್ಥಳೀಯ ಪುರೋಹಿತರು ಮಂತ್ರಯುಕ್ತವಾಗಿ ಅವನ ಸ್ನಾನ ಸಿಂಹಾಸನಾರೋಹಣ ಇತ್ಯಾದಿಗಳಲ್ಲಿ ನೆರವಾಗಬೇಕು. ಯಾಕೆಂದರೆ ಕ್ಷತ್ರಿಯನಾಗಿ ಅವನು ದ್ವಿಜ. ಆದರೆ ಅವನ ಪುರೋಹಿತರು ಗುಪ್ತವಾಗಿ ಇದನ್ನು ಒಪ್ಪಿಕೊಳ್ಳದೆ ಅವನಿಗೆ ಸಂಸ್ಕೃತ ಶ್ಲೋಕಗಳನ್ನು ಬಳಸಿ ರಿಚುಯಲ್‌ಗಳನ್ನು ನಡೆಸುತ್ತಿದ್ದರು. ಇದು ಗೊತ್ತಾಗಿ ರಾಜ ಕ್ರುದ್ಧನಾದ. ಉದಾರವಾದಿಯಾದ ಇನ್ನೊಬ್ಬ ಪುರೋಹಿತನನ್ನು ಪಡೆದು ಮಂತ್ರ ಸ್ನಾನ ಮಾಡಿಸಿಕೊಳ್ಳತೊಡಗಿದ.

ಈ ಬಗ್ಗೆ ಮಹಾರಾಷ್ಟ್ರದಲ್ಲೊಂದು ದೊಡ್ಡ ವಾಗ್ಯುದ್ಧವೇ ನಡೆಯಿತಂತೆ. ಈ ಸಮರದಲ್ಲಿ ಲೋಕಮಾನ್ಯ ತಿಲಕರೂ ರಾಜನ ಪರವಾಗಿ ಮಾತಾಡದೆ ಸುಮ್ಮನಿದ್ದರೆಂದು ಹೇಳುವವರಿದ್ದಾರೆ. ಯಾಕೆಂದರೆ ಆ ದಿನಗಳಲ್ಲಿ ಬ್ರಿಟಿಷರ ವಿರುದ್ಧವಾಗಿ ಮೇಲಿನ ಜಾತಿಗಳಿದ್ದವು. ಆದರೆ ಮಹಾತ್ಮ ಫುಲೆಯಂತಹ ಶೂದ್ರ ನಾಯಕರು ಸಮಾಜ ಸುಧಾರಣೆ ಮೊದಲು ಆನಂತರ ಬ್ರಿಟಿಷರಿಂದ ಬಿಡುಗಡೆ ಎನ್ನುತ್ತಿದ್ದರು (ದಕ್ಷಿಣ ಭಾರತದಲ್ಲಿ ಇವರು ಜಸ್ಟೀಸ್ ಪಾರ್ಟಿಯೆಂದು ತಮ್ಮನ್ನು ಕರೆದುಕೊಂಡರು.)

ಸಹಜವಾಗಿಯೇ ಲೋಕಮಾನ್ಯರು ಈ ವ್ಯಾಜ್ಯದಲ್ಲಿ ತಲೆ ಹಾಕಲಿಲ್ಲ. ಬಿಡುಗಡೆ ಮತ್ತು ಸಮಾಜ ಸುಧಾರಣೆ –  ಎರಡೂ ಒಟ್ಟೊಟ್ಟಾಗಿ ಆಗಬೇಕೆಂದು ಆಗ್ರಹಿಸಿದ್ದು ಗಾಂಧಿ ಮಾತ್ರ.

ಈ ಘಟನೆಯನ್ನು ನೆನಪು ಮಾಡಲು ಕಾರಣವೇನೆಂದರೆ ಹಿಂದೂ ಸಮಾಜದಲ್ಲಿ ಹಲವು ಮೇಲು ಕೀಳಿನ ಭೇದಗಳನ್ನು ಸೃಷ್ಟಿಸಲು ಏನಾದರೊಂದು ಉಪಾಯ ಮಾಡುತ್ತಲೇ ಇರುತ್ತೇವೆ. ಈ ಉಪಾಯ ಎಲ್ಲರಿಗೂ ಒಪ್ಪಿತವಾಗಲು ಮೇಲಿರುವವರಿಗೆ ಅನುಕೂಲದ ಜೊತೆ ಅನಾನುಕೂಲಗಳೂ, ಕೆಳಗಿನವರಿಗೆ ಅನಾನುಕೂಲಗಳ ಜೊತೆ ಕೆಲವು ಅನುಕೂಲಗಳೂ ಇರುವಂತೆ ನೋಡಿಕೊಳ್ಳುತ್ತೇವೆ. ಆಹಾರದ ನಿಯಮಗಳಲ್ಲೂ ವ್ರತಾಚರಣೆಗಳಲ್ಲೂ ಇದನ್ನು ಹಿಂದಿನ ಆಚಾರದಲ್ಲಿ ಬದುಕುವವರ ನಡುವೆ ಕಾಣಬಹುದು. ಮಂತ್ರ ಕೆಲವರಿಗೆ, ನೀತಿ ಶ್ಲೋಕಗಳು ಹಲವರಿಗೆ, ವೇದ ಕೆಲವರಿಗೆ ಪುರಾಣ ಹಲವರಿಗೆ; ಹಾಗೆಯೇ ವಿಗ್ರಹ ಮಾಡುವ ತಂತ್ರ ಹಲವರಿಗೆ; ಆದರೆ ಈ ವಿಗ್ರಹದಲ್ಲಿ ದೈವತ್ವ ತುಂಬುವ ಮಂತ್ರದ ಅಧಿಕಾರ ಕೆಲವರಿಗೆ – ಹೀಗೆ ನಮ್ಮ ಸಂಪ್ರದಾಯಬದ್ಧ ಸಮಾಜ ನಡೆದು ಬಂತು (ಶ್ರೇಣೀಕರಣ ಹಿಂದೂ ಸಮಾಜದ ಮೂಲಗುಣ ಎಂದು ಸಮಾಜಶಾಸ್ತ್ರಜ್ಞರ ತಿಳುವಳಿಕೆ).

ಹೀಗೆ ಜಾರಿಮೂಲವಾಗಿ ಅಸಮಾನತೆಯನ್ನೂ, ಅಸಮಾನತೆಯಂತೆ ಕಾಣದ ವಿಸಮಾನತೆಯನ್ನೂ ಸೃಷ್ಟಿಸುವುದು ಇಂದಿನ ಕಾಲದಲ್ಲಿ ಸಾಧ್ಯವಿಲ್ಲವೆಂದು ತೋರಿದ್ದೇ ಬೇರೊಂದು ಉಪಾಯವನ್ನು ಆಳುವ ವರ್ಗ ಸೃಷ್ಟಿಸಿದೆ. ಮಂತ್ರಾಧಿಕಾರಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ಇದು ಯಾವುದೆಂದರೆ ಇಂಗ್ಲಿಷ್ ಜ್ಞಾನ.

ಕೆಲವರಿಗೆ ಇಂಗ್ಲಿಷ್‌  ಕಲಿಸುವ ಖಾಸಗಿ ಶಾಲೆಗಳು, ಹಲವರಿಗೆ ಏನನ್ನೂ ಸರಿಯಾಗಿ ಕಲಿಸದ ಸರ್ಕಾರೀ ಶಾಲೆಗಳೂ ಈ ಕಾಲದ ಭೇದ ನಿರ್ಮಿಸುವ ಉಪಾಯವಾಗಿದೆ. ನಮ್ಮ ರಾಜ್ಯಾಂಗದ ಉದ್ದೇಶ ಸಫಲವಾಗಬೇಕಾದರೆ ಈ ಬಗೆಯ ಭೇದ ನಿರ್ಮಿಸುವ ಶಾಲೆಗಳಲ್ಲಿ ಕಲಿತವರ ನಡುವಿನ ಏರು – ತಗ್ಗುಗಳನ್ನು ಕಡಿಮೆಮಾಡಬೇಕೆನ್ನಲು ಈಗ ಇರುವ ಏಕೈಕ ಮಾರ್ಗ ಮೀಸಲಾತಿ. ಅದೊಂದು ಸದಾ ತೇಪೆ ಹಾಕುವ ಕೆಲಸ. ಈ ಮೀಸಲಾತಿಯ ಅಗತ್ಯ ಸತತವಾಗಿ ಇರಬಾರದೆಂದು ನಾವು ಬಯಸುವುದಾದರೆ ಇನ್ನೊಂದು ಮಾರ್ಗವಿದೆ. ಅದೆಂದರೆ, ಸಣ್ಣಮಕ್ಕಳ ಶಾಲೆಗಳಲ್ಲಿ ಯಾವ ಭೇದವೂ ಇಲ್ಲದಂತೆ ನೋಡಿಕೊಳ್ಳುವುದು; ಎಲ್ಲ ಮಕ್ಕಳೂ ಸಮಾನ ಎಂದು ತಿಳಿದು ಎಲ್ಲ ಮಕ್ಕಳೂ ಕೊನೆಯ ಪಕ್ಷ ಹತ್ತನೇ ತರಗತಿಯವರೆಗೆ ಒಂದೇ ಗುಣ ಮಟ್ಟದ – ಸಾಧ್ಯವಾದಷ್ಟು ಉತ್ತಮವಾದ ಗುಣಮಟ್ಟದ – ಶಾಲೆಗಳಲ್ಲಿ ಒಟ್ಟಾಗಿ ಕಲಿಯುವಂತೆ ನೋಡಿಕೊಳ್ಳುವುದು. ಪ್ರತಿಯೊಂದು ಮಗುವೂ ವಿಶಿಷ್ಟವೆಂದು ತಿಳಿದು ಅದರ ಅಗತ್ಯವನ್ನು ಪೂರೈಸುವ ಶಾಲೆಗಳು ಇವಾಗಿರಬೇಕು. ಈ ಶಾಲೆಗಳನ್ನು ಇಂಗ್ಲಿಷಿನಲ್ಲಿ ‘ಕಾಮನ್‌  ಸ್ಕೂಲ್‌’ ಎನ್ನುತ್ತಾರೆ.

ಇದನ್ನು ಸಾಧಿಸಲು ನಮ್ಮ ಕಾನೂನುಗಳಲ್ಲಿ ಅಗತ್ಯವಾದ ಬದಲಾವಣೆಗಳಾಗಬೇಕು. ಮಕ್ಕಳು ಎಲ್ಲಿ ವಾಸಿಸುತ್ತಾರೋ ಆ ವಾಸಕ್ಕೆ ಹತ್ತಿರವಾದ ಶಾಲೆಗೆ ಆ ಮಗು ಹೋಗಬೇಕು. ಹತ್ತಿರವಿರುವ ಶಾಲೆ ಖಾಸಗಿಯಾದರೆ ಅಂತಹ ಶಾಲೆ ತಮ್ಮ ನೆರೆಹೊರೆಯ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಬೇಕು. ಈ ಮಕ್ಕಳ ಶಿಕ್ಷಣಕ್ಕೆ ನ್ಯಾಯವಾಗಿ ಆಗುವ ಖರ್ಚನ್ನು ಸರ್ಕಾರ ಭರಿಸಬೇಕು. ನೆರೆಹೊರೆಯಲ್ಲಿ ಇರುವ ಶಾಲೆ ಸರ್ಕಾರಿ ಶಾಲೆಯಾದರೆ ಉತ್ತಮರ ಮಕ್ಕಳೂ ಈ ಶಾಲೆಗಳಿಗೆ ಹೋಗಬೇಕು. ಎಲ್ಲ ಶಾಲೆಗಳಲ್ಲೂ ತಾಯಿ ತಂದೆ ಆಧ್ಯಾಪಕರ ಕಮಿಟಿಗಳಿರಬೇಕು. ನಮ್ಮ ಮಧ್ಯಮ ವರ್ಗದ ಮಕ್ಕಳು ಸರ್ಕಾರಿ ಶಾಲೆಗಳಿಗೆ ಹೋಗಬೇಕಾದ್ದು ಕಡ್ಡಾಯವಾದರೆ ಆಗ ನಾವು ಶಾಲೆಯ ಗುಣಮಟ್ಟದ ಬಗ್ಗೆ ಆಸಕ್ತರಾಗಿರುತ್ತೇವೆ. ನನ್ನ ಬಾಲ್ಯದ ಅನುಭವವನ್ನೇ ಹೇಳುವುದಾದರೆ ಸರ್ಕಾರಿ ಶಾಲೆಗಳಲ್ಲಿ ಇರುವ ಅಧ್ಯಾಪಕರು ಹೆಚ್ಚು ಶಿಕ್ಷಿತರು. ಈಗಲೂ ಇದು ನಿಜ. ಹೆಚ್ಚು ಸಂಬಳವಿರುವುದೂ ಸರ್ಕಾರಿ ಶಿಕ್ಷಕರಿಗೆ. ಇವರಿಗೆ ಸತತವಾಗಿ ನಡೆಯುವ ವಿಶೇಷ ತರಬೇತಿಯ ಸೌಲಭ್ಯವೂ ಇದೆ.

ಇಂಗ್ಲಿಷಿಗಾಗಿ – ಯಾಕೆಂದರೆ ಭೇದಗಳನ್ನು ಸೃಷ್ಟಿಸುವ ಈ ಕಾಲದ ದೊಡ್ಡ ಸಾಧನವೇ ಇಂಗ್ಲಿಷ್‌ ಆದ್ದರಿಂದ ಮಧ್ಯಮವರ್ಗದವರು ಅನುದಾನವಿಲ್ಲದೆ ನಡೆಯುವ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಾರೆ. ಈ ಶಾಲೆಗಳು ನಮ್ಮ ಕಾಲದಲ್ಲಿ ಹೋಟೆಲು ನಡೆಸುವುದಕ್ಕಿಂತ ಹೆಚ್ಚು ಹಣಗಳಿಕೆ ಮಾಡಬಲ್ಲ ಸಂಸ್ಥೆಗಳಾಗಿವೆ. ಈ ಶಾಲೆಗಳು ನೆರೆಹೊರೆಯ ಮಕ್ಕಳಿಗೆ ಶಿಕ್ಷಣಕೊಡಬೇಕು ಎಂದಾದರೆ ಅಗತ್ಯವಾದ ಧನಸಹಾಯವೂ ಸರ್ಕಾರದಿಂದ ಇವರಿಗೆ ಸಿಕ್ಕು ಅವರು ಮಾತಿನಲ್ಲಿ ಹೇಳುವ ಶಿಕ್ಷಣ ಕ್ಷೇತ್ರದ ಸೇವೋದ್ದೇಶ ನಿಜವೂ ಆಗುತ್ತದೆ. ಹಾಗೆಯೇ ಸರ್ಕಾರಿ ಶಾಲೆಗಳಿಗೆ ವಿದ್ಯಾವಂತ ಕುಟುಂಬದಿಂದ ಬಂದ ಮಕ್ಕಳ ತಾಯಿತಂದೆಯರ ಆಸಕ್ತಿಯೂ ಒತ್ತಾಸೆಯೂ ಲಭಿಸಿದಂತಾಗುತ್ತದೆ.

* * *

ನಾವು ಭಾರತದಲ್ಲಿ ಹೊಸಬಗೆಯ ಜಾತಿ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಲು ಅಗತ್ಯವಿರುವ ಹಾದಿಯನ್ನು ಈಗ ಕಂಡುಕೊಂಡಿದ್ದೇವೆ. ಅದು ಪಾಶ್ಚಾತ್ಯ ಅನುಕರಣೆಯ ಆಧುನಿಕತೆಗಾಗಿ. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ ಎಂದು ಬಸವಣ್ಣ ನುಡಿದರೆ ನಾವೀಗ ನಿಗಾವಹಿಸುವುದು ಅಲ್ಲಿ ಸಲ್ಲುವುದಕ್ಕಾಗಿ ಇಲ್ಲಿ ಸಲ್ಲದಂತೆ ಮಕ್ಕಳನ್ನು ಬೆಳೆಸುವುದು. ಉದಾಹರಣೆಗೆ ಬೆಂಗಳೂರಿನಲ್ಲಿ ವಿಶೇಷ ಶಾಲೆಗಳಿವೆ. ಇವು ಶ್ರೀಮಂತರ ಮತ್ತು ಮೇಲ್ಮಧ್ಯಮ ವರ್ಗಗಳಿಗೆ ಮಾತ್ರಕೈಗೆ ಎಟುಕುವಂಥವು. ಇಲ್ಲಿರುವುದು ಇಂಗ್ಲಿಷ್ ಮಾಧ್ಯಮದ ಶಿಕ್ಷಣ. ಇಲ್ಲಿ ಕಲಿಯುವ ಒಂದು ಮಗುವಿಗೆ ವರ್ಷಕ್ಕೆ ಸುಮಾರು ಒಂದು ಲಕ್ಷ ರೂಪಾಯಿಗಳಷ್ಟು ಶುಲ್ಕ ಕೊಡಬೇಕಂತೆ. ಸರಕಾರೀ ಶಾಲೆಗಳು ಉಚಿತ ಶಿಕ್ಷಣ ಕೊಡುತ್ತವೆ. ಆದರೆ ಅಲ್ಲಿ ಕನ್ನಡ ಮಾಧ್ಯಮದಲ್ಲಿ ಬೋಧಿಸುತ್ತಾರೆ. ಎಲ್ಲರ ಆಸೆ ಅಂದರೆ –  ಅತ್ಯಂತ ಬಡವರ ಆಸೆ ಕೂಡಾ –  ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವುದು. ಏಕೆಂದರೆ ನಮ್ಮ ಆರ್ಥಿಕ ಕಲ್ಯಾಣ ಇಂಗ್ಲಿಷ್‌ ಭಾಷೆಯ ಮೇಲೆ ನಿಂತಿದೆ. ಈ ಇಂಗ್ಲಿಷ್‌ ಅಮೆರಿಕಾಕ್ಕೆ ಹತ್ತಿರವಾಗಲು ನಾವು ಬಯಸುವ ಸಾಧನ. ಹಿಂದೆ ಸಂಸ್ಕೃತದಲ್ಲಿದ್ದ ಮಂತ್ರ ಯಾರೂ ಕಾಣದ ದೇವರಿಗೆ ಹತ್ತಿರದವನೆಂದು ಉಬ್ಬಿ ಮೆರೆಯುವ ಸಾಧನವಾಗಿದ್ದರೆ, ಇಂದು ಅಮೆರಿಕಾ ಎನ್ನುವ ಸಾಕ್ಷಾತ್‌ ದೇವರಿಗೆ ಹತ್ತಿರವಾಗುವ ಸಾಧನ.

* * *

ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣ ಪಡೆಯುವುದು ನಾವು ಕಲಿಯುತ್ತಿದ್ದ ದಿನಗಳಲ್ಲಿ ಬಹಳ ಸಹಜವಾಗಿತ್ತು. ಸ್ವಾತಂತ್ರ್ಯ ಪೂರ್ವ ಕಾಲದ ಭಾರತದಲ್ಲಿ ನಾನೊಂದು ಸಾಮಾನ್ಯ ಶಾಲೆಯಲ್ಲಿ ಕಲಿತೆ… ನಮ್ಮದು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ. ನಾನು ಶಾಲೆಗೆ ಹೋಗಿ ಅಲ್ಲಿ ಇತರ ಎಲ್ಲಾ ಜಾತಿಗಳ ಮಕ್ಕಳ ಜತೆ ಕುಳಿತುಕೊಳ್ಳಬೇಕಿತ್ತು. ಶಾಲೆಗೆ ಹೋಗುವಾಗ ನಾನೊಂದು ಅಂಗಿ ಹಾಕಿಕೊಳ್ಳುತ್ತಿದ್ದೆ. ಮನೆಗೆ ಬಂದಾಗ ಹೊರಗಿನ ಗೋಡೆಯ ಮೇಲಿದ್ದ ಮೊಳೆಗೆ ಅದನ್ನು ನೇತು ಹಾಕಿ ಅಂಗವಸ್ತ್ರ ಹೊದ್ದುಕೊಂಡು ಮನೆಯೊಳಕ್ಕೆ ಹೋಗುತ್ತಿದ್ದೆ. ನಾನು ಬರೆಹಗಾರನಾದದ್ದು ಅಂಗಿಯಿಂದಲೇ ಹೊರತು ಅಂಗವಸ್ತ್ರದಿಂದಲ್ಲ. ನಾನು ಧರಿಸಿದ ಅಂಗಿಯಿಂದಾಗಿ ಶಾಲೆಯಲ್ಲಿ ನನಗೆ ಬೇರೆ ಬೇರೆ ಜಾತಿಯ ಗೆಳೆಯರ ಜೊತೆ ಬೆರೆಯಲು ಸಾಧ್ಯವಾಯಿತು.

ನಾವು ಹೇಳುವ ಭಾರತೀಯ ಸಂಸ್ಕೃತಿ ಎಂಬುದು ಭಾರತದ ಶ್ರೀಮಂತ ವರ್ಗದಲ್ಲಿ ಮಾತ್ರ ಸಿಗುವ ವಿಶೇಷವಲ್ಲ. ಸಂಸ್ಕೃತಿಯ ನಿಜವಾದ ವಾರಸುದಾರರ ಅನಕ್ಷರಸ್ಥರೂ ಹೌದು. ಅವರಿಗೆ ಓದುವುದು ಸಾಧ್ಯವಿಲ್ಲದೆ ಇರಬಹುದು. ಆದರೆ ಬಹಳ ಶ್ರೀಮಂತವಾದ ರಂಗ ಪರಂಪರೆ, ಚಿಂತನಾ ಪರಂಪರೆಗಳು ಅವರಲ್ಲಿವೆ. ನಮ್ಮ ಕುಶಲಕರ್ಮಿಗಳೂ ಇವರೇ. ಅಂದರೆ ಬಹುಪಾಲು ತಂತ್ರಜ್ಞಾನಿಗಳೂ ಇವರೇ. ಮಧ್ಯಮವರ್ಗದ ಮಕ್ಕಳು ಉದಾರೀಕೃತ ಅರ್ಥವ್ಯವಸ್ಥೆಯ ಈ ದಿನಗಳಲ್ಲಿ ಈ ಕೆಳವರ್ಗದ ಕಷ್ಟಸಹಿಷ್ಣು ಕುಟುಂಬಗಳಿಂದ ಬೆಳೆದು ಬಂದ ಮಕ್ಕಳ ಜೊತೆಗಿನ ಆರೋಗ್ಯಕಾರಿಯಾದ ವಿದ್ಯಾರ್ಜನೆಯ ಸಹಯೋಗದಿಂದ ವಂಚಿತರಾಗಿ ಬಡವಾಗುತ್ತಿದ್ದಾರೆ. ಎಲ್ಲ ಕಷ್ಟಗಳನ್ನೂ ಸಹಿಸಿಕೊಂಡು ಜೀವನ ಸಂತೋಷ ಕಳೆದುಕೊಳ್ಳದ ನಮ್ಮ ನಾಡಿನ ಬಡವರ ಉಲ್ಲಾಸವೇ ಸದಾ ಆತಂಕದಲ್ಲಿ, ಗಳಿಕೆಯ ಆತಂಕದಲ್ಲಿ ಬಾಳುವ ಸಿಟಿಯ ಮಧ್ಯಮವರ್ಗಕ್ಕೆ ಬಾಲ್ಯದಲ್ಲೂ ಲಭಿಸದಂತಾಗಿರುವುದು ಒಂದು ದುರಂತ.

ನಮ್ಮ ಕಾಲದಲ್ಲಿ ಜ್ಞಾನ ಬಾಗಿಲಾಗಿ ವರವಾಗಿದ್ದ ಇಂಗ್ಲಿಷ್ ಭಾಷೆ ಈಗ ಒಂದು ಶಾಪವೇ ಆಗಿದೆ. ಹನ್ನೆರಡನೇ ತರಗತಿ ಮುಗಿಯುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಮಾತನಾಡಲು ಬಂದರೆ ಅವರಿಗೊಂದು ಕಾಲ್‌ ಸೆಂಟರ್‌ ಕೆಲಸ ಸಿಗುತ್ತದೆ. ಭಾರತದ ಇಡೀ ರಾತ್ರಿ ಅಮೆರಿಕನ್ನರ ಹಗಲಿಗಾಗಿ ವ್ಯಯವಾಗುವ ಉದ್ದಿಮೆ ಇದು.

ಇದಕ್ಕಾಗಿ ಏನೂ ಮಾಡಬೇಕಿಲ್ಲ. ಪದ್ಮನಾಭ ಎಂಬ ಹೆಸರನ್ನು ಸುಲಭವಾದ ಇಂಗ್ಲಿಷ್‌ ಹೆಸರಿಗೆ ಬದಲಾಯಿಸಿಕೊಳ್ಳಬೇಕು. ಧ್ವನಿಯನ್ನು ಬದಲಾಯಿಸಿಕೊಳ್ಳಬೇಕು. ಅಮೆರಿಕನ್‌ ಆಕ್ಸೆಂಟ್ ಕಲಿಯಬೇಕು. ನಮ್ಮ ಭಾಷೆಗಳ ವಾಸನೆ ಕೂಡ ಬರದಂತೆ ಮಾತಿನ ಎಚ್ಚರಿಕೆ ಇರಬೇಕು.

ವಸಾಹತು ಶಾಹಿಯ ದಿನಗಳಲ್ಲಿ ನಾವು ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗುತ್ತಿದ್ದೆವು. ಆಗ ನಾವು ಬಿಸಿಲಿನಲ್ಲಿ ಕೆಲಸ ಮಾಡಿ ಆರೋಗ್ಯವಾಗಿದ್ದೆವು. ಈಗ ನಾವು ಆರೋಗ್ಯವಂತ ಮಕ್ಕಳನ್ನೂ ಹುಟ್ಟಿಸಲಾರದ ಸತತ ಆತಂಕದ ಯಾವ ಖುಷಿಯೂ ಇಲ್ಲದ ಕೌಟುಂಬಿಕ ಜೀವನ ನಡೆಸುತ್ತ ಇದ್ದೇವೆ.

ಇದನ್ನು ನಾವು ಅಭಿವೃದ್ಧಿ ಎಂದು ಕರೆಯುತ್ತಿದ್ದೇವೆ. ಐಟಿ ಜನರು ನಮ್ಮ ಕರ್ನಾಟಕ ಸರಕಾರಕ್ಕೆ ಬೆದರಿಕೆ ಹಾಕಿ ರಸ್ತೆಗಳನ್ನು ಸರಿಪಡಿಸಲು ಹೇಳುತ್ತಿದ್ದಾರೆ. ಅವರಿಗೆ ವೇಗವಾಗಿ ಕಾರುಗಳು ಸಂಚರಿಸುವಂಥ ರಸ್ತೆಗಳು ಬೇಕು. ಇಂಥ ರಸ್ತೆಗಳು ಹೈದರಾಬಾದಿನಲ್ಲಿ ನೋಡಿದ್ದೇನೆ. ಚಂದ್ರಬಾಬು ನಾಯ್ಡು ಅಂಥ ರಸ್ತೆಗಳನ್ನು ನಿರ್ಮಿಸಿದ್ದಾರೆ. ಅಂಥದ್ದೊಂದು ರಸ್ತೆಯನ್ನು ದಾಟಲು ಗಂಟೆಗಟ್ಟಳೆ ಕಾಯುತ್ತಿರುವ ವೃದ್ಧರನ್ನೂ ನೋಡಿದ್ದೇನೆ. ನಾವು ಎರಡು ಭಾರತ ಸೃಷ್ಟಿಸಿದ್ದೇವೆ. ಸಾಮಾನ್ಯರಿಗೆ ಆ ಬದಿಗೆ ದಾಟಲು ಸಾಧ್ಯವಿಲ್ಲ.

* * *

ಸಮಾನ ಶಾಲೆಗಳನ್ನು ಮಾಡಿ. ಹತ್ತನೇ ತರಗತಿ ತನಕ ಎಲ್ಲ ಮಕ್ಕಳೂ ಒಟ್ಟಾಗಿ ಬೆಳೆಯಲಿ; ಒಟ್ಟಾಗಿ ಕಲಿಯಲಿ. ಇಂಗ್ಲಿಷ್ ಅಗತ್ಯವೋ? ಹಾಗಾದರೆ ಎಲ್ಲ ಮಕ್ಕಳಿಗೂ ಇಂಗ್ಲಿಷ್‌ ಕೊಡಿ. ಆದರೆ ವಿಷಯಗಳನ್ನು ಕಲಿಯುವ ಮಾಧ್ಯಮ ನಮ್ಮ ದೇಶದ ಬೀದಿ ಭಾಷೆಯಾದ ಕನ್ನಡವೇ ಆಗಿರಬೇಕು. ಜೀವನದ ನಿತ್ಯಾನುಭವದ ಸದ್ಯದಲ್ಲೇ ಎಲ್ಲ ಜ್ಞಾನವೂ ಲಭಿಸಿ ಗಟ್ಟಿಯಾಗಲಿ.

ಇಂಗ್ಲಿಷ್‌ ಮಾಧ್ಯಮದ ಶಾಲೆಗಳನ್ನು ಸದ್ಯ ಮುಚ್ಚಲು ಸಾಧ್ಯವಿಲ್ಲವೆನ್ನುವುದಾದರೆ ಈ ಶಾಲೆಗಳಲ್ಲಿ ಕಲಿಯುವ ಮಕ್ಕಳು ಅವರ ಸಮಾಜ ವಿಜ್ಞಾನ, ಆರೋಗ್ಯಶಾಸ್ತ್ರ, ಭೂಗೋಳ ಚರಿತ್ರೆ ಇತ್ಯಾದಿ ಮಾನವಿಕ ವಿಷಯಗಳನ್ನು ಕನ್ನಡದಲ್ಲೇ, ಅಂದರೆ ಜೀವನಾನುಭವದ ಭಾಷೆಯಾದ, ಬೀದಿ ಭಾಷೆಯಾದ ಕನ್ನಡದಲ್ಲೇ ಕಲಿಯಬೇಕೆನ್ನುವ ನಿಯಮವಿರಲಿ. ಅವರಿಗೆ ಕನ್ನಡವನ್ನು ಒಂದು ಭಾಷೆಯಾಗಿ ಮಾತ್ರ ಕಲಿಸಿದರೆ ಕೇವಲ ಕಾಟಾಚಾರಕ್ಕೆ ಕಲಿಯುತ್ತಾರೆ –  ಅಷ್ಟೆ.

ಹತ್ತನೇ ಇಯತ್ತೆಯ ತನಕ ಒಟ್ಟಾಗಿ ಬೆಳೆದು ಕಲಿಯುವ ಮಕ್ಕಳು ಅನಂತರ ತಮ್ಮ ವಿಶೇಷ ಅಗತ್ಯದ ಶಿಕ್ಷಣವನ್ನು ಪಡೆಯಲಿ. ಅಪಾರ ಜನಕೋಟಿಯಿಂದ ಆಗ ನಾವು ‘ಮೆರಿಟ್‌’ ಅನ್ನು ಸೃಷ್ಟಿಸುವ ಯಜ್ಞವನ್ನು ಮಾಡಿರುತ್ತೇವೆ. ಆಗ ಬಹು ಬಗೆಯ ಮೆರಿಟ್ ಸೃಷ್ಟಿಯಾಗಿರುತ್ತದೆ. ಭಾರತ ಬಹುರೂಪಿಯಾದ ನಾಗರಿಕತೆಯಾಗಿರುತ್ತದೆ. ಮೀಸಲಾತಿ ಅಗತ್ಯವೆನ್ನುತ್ತಲೇ ಅದರ ಜೊತೆಯಲ್ಲೆ ಈ ಬಗೆಯ ಬಹುರೂಪಿಯಾದ ಸಮೃದ್ಧವಾದ ನಾಗರಿಕತೆಯನ್ನು ಸೃಷ್ಟಿಸುವ ಜ್ಞಾನಯಜ್ಞವನ್ನು ಸಮಾನ ಶಾಲೆಗಳಲ್ಲಿ ನಡೆಸಬೇಕೆಂದು ನಾವೆಲ್ಲರೂ ಒತ್ತಾಯಿಸಬೇಕು.

೧೪೨೦೦೬

* * *