ಸೆಕ್ಯುಲರ್‌ ಪಾಶ್ಚಿಮಾತ್ಯ ಚಿಂತನೆಯಲ್ಲಿ ಈಗಾಗಲೇ ಸಮಾಜವಾದ ಎನ್ನುವುದು ಒಂದು ಹುಸಿಯಾದ ವಿಚಾರವೆಂದು ಹಲವರಿಗೆ ಕಾಣಲು ತೊಡಗಿದೆ ಅಥವಾ ಬಹ್ಯುತ್ಪನ್ನ ಹೇಗೂ ನಿವಾರಿಸಬಹುದಾದ ಬಡವರ ಸಮಸ್ಯೆಗೆ ಸಮಾಜವಾದದ ಐಡಿಯಾಲಜಿ ಅನಗತ್ಯ ಎನಿಸತೊಡಗಿದೆ. ಆದರೆ ಮನುಷ್ಯನ ಇತಿಹಾಸದಲ್ಲಿ ಇವತ್ತಿನವರೆಗೂ ಹೊಟ್ಟೆ ತುಂಬ ಉಂಡರೂ ನೀರಸವಾದ ಅರ್ಥಹೀನವಾದ ದುಡಿಮೆಯನ್ನು ಮಾಡುವ ಒಂದು ವರ್ಗ ಇದ್ದೇ ಇರುತ್ತದೆ. ಕಮ್ಯುನಿಸ್ಟ್ ರಷ್ಯಾದಲ್ಲೂ ಉತ್ಪಾದನೆಯಲ್ಲಿ ತೊಡಗಿದ್ದ ಇಂಥದ್ದೊಂದು ವರ್ಗವಿತ್ತು. ಇವರು ಎಷ್ಟು ಕುಡಿದು ತಿಂದರೂ ಇವರು ವ್ಯಯ ಮಾಡುವ ದುಡಿಮೆಯ ಬಹಳಷ್ಟು ಕಾಲ ಯಂತ್ರಿಕವೂ ನೀರಸವೂ ಆಗಿರುತ್ತದೆ. ಹೀಗೆ ಭೌತಿಕವಾಗಿ ಸತತವಾಗಿ ಉಳಿಯುವ ಅಸಮಾನತೆಗಳ ನಡುವೆಯೂ ಮನುಷ್ಯನ ಮೂಲದರಲ್ಲಿರುವ ಕಾಂತಿಯನ್ನು ಗಮನಿಸಬಲ್ಲವರು ಈ ಜಗತ್ತಿನ ಅನುಭಾವಿಗಳು. ಅವರೇ ಬಸವ, ಅಲ್ಲಮ, ತುಕಾರಾಂ, ಬ್ಲೇಕ್ ಇಂಥವರು. ಸಿಮೋನ್‌ ವೇರ್‌ ಈ ಬಗೆಯ ತುಡಿತದಲ್ಲಿ ಪ್ರಪಂಚದ ಜೀವನದ ಕಷ್ಟಕ್ಕೆ ಎದುರಾದಳು.

ಫ್ರಾನ್ಸ್‌ನಲ್ಲಿ ಹುಟ್ಟಿದ ಸಿಮೋನ್‌ ವೇಲ್‌ ಇಂಗ್ಲೆಂಡಿನಲ್ಲಿ ತನ್ನ ೩೪ನೆಯ ವಯಸ್ಸಿನಲ್ಲೇ ಸತ್ತಳು. ಟಿ.ಎಸ್. ಎಲಿಯಟ್ ಇವಲನ್ನು a woman of genius akin to that of saints ಎನ್ನುತ್ತಾನೆ. ಜ್ಯೂಯಿಷ್ ಮನೆತನದಲ್ಲಿ ಇವಳು ಹುಟ್ಟಿದ್ದು. ಅವಳ ಕುಟುಂಬ ಸಂಪ್ರದಾಯಸ್ಥವಲ್ಲ. ಚಿಕ್ಕಂದಿನಲ್ಲಿ ಇವಳು ನೀರೀಶ್ವರವಾದಿ. ಎರಡು ಮಹಾಯುದ್ಧಗಳ ಕಾಲದಲ್ಲಿ ಬದುಕಿದ ಇವಳು ತನ್ನ ಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಜನೆಯ ಸಮಯದಲ್ಲೇ ದೇಹವನ್ನು ತೀವ್ರವಾಗಿ ದಂಡಿಸುವ ದುಡಿಮೆಯಲ್ಲಿ ತೊಡಗಿದ್ದಳು. ಕಾರ್ಖಾನೆಗಳಲ್ಲಿ ಕೂಲಿಯಾಗಿ ಕಾರ್ಮಿಕ ಸಂಘಟನೆ ಮಾಡಿದಳು. ಗಣಿಗಳಲ್ಲಿ ದುಡಿದಳು. ಅವಳಿಗೆ ತನ್ನ ೨೮ನೇ ವಯಸ್ಸಿನಲ್ಲಿ ಒಂದು ದಿವ್ಯ ಅನುಭವವಾಗಿ ತನ್ನ ಚಿಂತನೆಯಲ್ಲಿ ಕ್ರೈಸ್ತಳಾದಳು. ಆದರೆ ತನಗೆ ಪ್ರಿಯವಾದ ಬಿಷಪ್‌, ಒಬ್ಬನ ಜತೆ ಒಂದು ದೊಡ್ಡ ವಾಗ್ಯುದ್ಧದಲ್ಲಿ ತೊಡಗಿ ಮತಾಂತರವಾಗಲು ನಿರಾಕರಿಸಿದಳು. ‘ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ದೈವಸ್ಪರ್ಶ ಪಡೆದ ಸಂತರೂ ಇರಲಿಲ್ಲವೇ? ಬುದ್ಧ ಇರಲಿಲ್ಲವೇ?’ ಎನ್ನುವ ಸಿಮೋನ್‌ ವೇಲ್‌ ಕ್ರಿಸ್ತನ ನಂತರ ಮಾತ್ರ ಈ ಪ್ರಪಂಚದಲ್ಲಿ ದೈವಾನುಗ್ರಹವಾಯಿತು ಎನ್ನುವುದನ್ನು ನಂಬಲಾರದವಳಾದಳು.

ಇವಳು ಶಾಲೆಯಲ್ಲಿ ಸಾರ್ತ್‌‌ನ ಜೀವಸಂಗಾತಿಯಾದ ಸಿಮೋನ್‌ ಡ ಬುವಾ ಜೊತೆ ಕಲಿತವಳು. ತನ್ನ ಮೂವತ್ತ ಮೂರನೆಯ ವಯಸ್ಸಿನಲ್ಲಿ ಫ್ಯಾಸಿಸ್ಟ್‌ ಜರ್ಮನಿಯನ್ನು ತೊರೆದು ಅಮೆರಿಕಕ್ಕೆ ಹೋಗುವಾಗ ಅವಳಿಗೆ ಪ್ರಿಯನಾದ ಬಿಷಪ್‌ ಫಾದರ್‌ ಫೆರಿನ್‌ ಹೀಗೆ ಬರೆಯುತ್ತಾರೆ: ‘ಪ್ಲೇಗ್‌ ಪೀಡಿತ ಊರಿನಲ್ಲಿ ವೈದ್ಯರ ಅಗತ್ಯವಿರುವಂತೆ ಚಿಂತನ ಶೀಲಕರಾದ ಧಿಂತ ಸಂತರು ಇಂದಿನ ಅಗತ್ಯ.’

ಅಮೆರಿಕದಲ್ಲಿ ಅವಳಿಗೆ ಇರಲಾಗಲಿಲ್ಲ. ಇಂಗ್ಲೆಂಡಿಗೆ ಬಂದಳು. ಇಂಗ್ಲೆಂಡಿನಲ್ಲಿ ಇರುವಾಗ ಫ್ರಾನ್ಸ್‌ನಲ್ಲಿ ತನ್ನ ಜನರು ಸಾಕಷ್ಟು ತಿನ್ನಲು ಇಲ್ಲದೆ ಹಸಿದಿರುತ್ತಾರೆಂದು ಜೈನರ ಹಾಗೆ ಸಲ್ಲೇಖನ ವ್ರತದಲ್ಲಿ ಅತ್ಯಂತ ಕಡಿಮೆ ಆಹಾರ ಸ್ವೀಕರಿಸುತ್ತಾ ಸಾವನ್ನಪ್ಪಿದಳು. ಇದನ್ನು ಒಬ್ಬ ವೈದ್ಯ ಆತ್ಮಹತ್ಯೆ ಎಂದು ವರದಿ ಮಾಡುತ್ತಾನೆ. ಅವಳ ಹುಡುಕಾಟ ಮಾರ್ಕ್ಸ್‌‌ವಾದದ ಪ್ರಭಾವದಿಂದ ಮೊದಲಾಗಿ ಅನುಭಾವದ ದಿಕ್ಕಿನಲ್ಲಿ ಬೆಳೆಯುತ್ತದೆ. ಅವಳ ಒಂದು ವಿಚಾರ ಹೀಗಿದೆ : ‘ಮಾರ್ಕ್ಸ್, ದುರ್ಬಲವಾದವರು ಸಂಘಟಿತರಾಗಿ ಕ್ರಾಂತಿಯನ್ನು ಮಾಡುತ್ತಾರೆಂದು ನಂಬುತ್ತಾನಲ್ಲವೇ?’ ದುರ್ಬಲವಾದುದು ದುರ್ಬಲವಾಗಿರುವಾಗಲೇ ಒಂದು ಶಕ್ತಿಯಾಗಿಯೂ ಇರಬಹುದು ಎಂಬುದು ಹೊಸ ವಿಚಾರವಲ್ಲ. ಕ್ರಾಸ್‌ನನ್ನು ಒಂದು ಚಿಹ್ನೆಯಾಗಿ ಪಡೆದ ಕ್ರೈಸ್ತಧರ್ಮದ ನಂಬಿಕೆ ಅದು. ಸಿಮೋನ್‌ ವೇಲ್‌ಳಿಗೆ ಮಾತ್ರ ಈ ಚೈತನ್ಯ ಈ ಪ್ರಪಂಚದ್ದು ಮಾತ್ರವಲ್ಲ, ಅದು ಲೋಕಾತೀತವಾದುದು. ಅದು ರಹಸ್ಯವಾಗಿ ಮೌನವಾಗಿ ಕೆಲಸ ಮಾಡತ್ತದೆ. ಜನ ಸಮುದಾಯದಲ್ಲಿ ಅದು ಪ್ರವಹಿಸುತ್ತದೆ. ಕಿಂಚಿತ್ತಾಗಿ ಸತತವಾಗಿ ಜನರ ಬಾಳಿನಲ್ಲಿ ಹೊಕ್ಕು ಹೊರಡುತ್ತಲೇ ಇರುತ್ತದೆ. ಆದರೆ ಈ ಚೈತನ್ಯ ಸಮೂಹದಲ್ಲಿ ವಾಸಿಸುವುದಿಲ್ಲ. ಬದಲಾಗಿ ವ್ಯಕ್ತಿಗಳ ಆತ್ಮದಲ್ಲಿ ಅದು ನೆಲೆಸಿರುತ್ತದೆ.

ಮಾರ್ಕ್ಸ್ ಈ ಅಲೌಕಿಕವಾದ ರಹಸ್ಯವಾದ ಒಂದು ಶಕ್ತಿ ಚೈತನ್ಯ ರೂಪವಾಗಿ ದುರ್ಬಲವಾದುದರಲ್ಲಿ ಅಡಗಿ ಇರಬಹುದು ಎಂಬುದನ್ನು ಒಪ್ಪಿಕೊಳ್ಳದೇ ಭೌತಿಕವಾದ ಸಂಘರ್ಷದ ವ್ಯಾಪಾರದಲ್ಲಿ ಮಾತ್ರ ಹೊಮ್ಮುತ್ತದೆ ಎಂದು ತಿಳಿದಿದ್ದ.

ಮನುಷ್ಯನ ಪ್ರಜ್ಞೆ ಸಾಮಾಜಿಕ ಸಂಬಂಧಗಳಿಂದ ಉತ್ಪನ್ನವಾಗುವಂಥದ್ದು; ಅದು ಸ್ವಯಂಭು ಅಲ್ಲ ಎಂದು ಮಾರ್ಕ್ಸ್ ಹೇಳಿದರೆ ಈ ಸಾಮಾಜಿಕ ಸಂಬಂಧಗಳನ್ನು ಆಗಿಸುವ ಮೂಲದಲ್ಲೇ ಇರುವುದು ಪ್ರಜ್ಞೆಯಲ್ಲವೇ ಎಂದು ಸಿಮೋನ್‌ ವೇಲ್ ವಾದಿಸುತ್ತಾಳೆ. ತನ್ನ ಚಿಕ್ಕ ವಯಸ್ಸಿನಲ್ಲೇ ಅವಳು ಟ್ರಾಟ್‌ಸ್ಕಿಯನ್ನು ಭೇಟಿಯಾಗಿದ್ದಳು. ಅವಳನ್ನು ಮೆಚ್ಚಿದ್ದ ಟ್ರಾಟ್‌ಸ್ಕಿ, ಸಿಮೋನ್ ವೇಲ್ ಕಾರ್ಮಿಕ ಹೋರಾಟದಲ್ಲಿ ನಂಬಿಕೆ ಕಳೆದುಕೊಂಡು ವ್ಯಕ್ತಿವಾದಿಯಾದಳು ಎಂದು ದೂರುತ್ತಾನೆ… ಐಹಿಕಕ್ಕೆ ನಿಷ್ಠನಾಗಿದ್ದ ಚಾರ್ಲ್ಸ್ ಡಿ ಗಾಲ್‌ ‘ಅವಳ ತಲೆ ಸರಿ ಇಲ್ಲ’ ಎನ್ನುತ್ತಾನೆ.

ಆದರೆ ಟ್ರಾಟ್‌ಸ್ಕಿ ತಿಳಿದಂತೆ ಸಿಮೋನ್ ಮೇಲ್‌ ಕೇವಲ ಕನಸುಗಾರಳಲ್ಲ. ಸತತವಾಗಿ ದುಡಿಯುತ್ತಾ ಕಾರ್ಮಿಕರ ಜತೆ ಊಟ ಮಾಡುತ್ತಾ ಅವರ ಜತೆ ಬದುಕುತ್ತಾ ತನ್ನ ಕ್ಲಿಷ್ಟವಾದ ತಾತ್ವಿಕ ಗ್ರಂಥಗಳನ್ನು ನಮಗೆ ಬಿಟ್ಟುಹೋದವಳು.

ಪ್ಲೇಟೋನ ಗುಹೆಯ ರೂಪಕ ಸಿಮೋನ್‌ವೇಲ್‌ನ ತಾತ್ವಿಕತೆಯ ಮೂಲಾರ್ಕವಾಗಿತ್ತು. ಪ್ಲೇಟೋನ ಗುಹೆಯಲ್ಲಿ ನಾವೆಲ್ಲೋ ನಡುವೆ ಕೂತಿದ್ದೇವೆ. ನಮ್ಮ ಹಿಂದೆ ಬೆಳಕಿದೆ. ಬೆಳಕನ್ನು ನಾವು ನೋಡಲಾರೆವು. ನಮ್ಮ ಕೈಕಾಲು ಕಟ್ಟಿದೆ. ಹಿಂದಿನಿಂದ ಗೊಂಬೆಯಾಟವೊಂದು ನಡೆದಿದೆ. ಅದರ ನೆರಳುಗಳನ್ನು ಮಾತ್ರ ನಾವು ನೋಡುತ್ತೇವೆ. ನಾವು ಬಂಧಿತರು ಎಂಬುದನ್ನು ತಿಳಿಯದೆ ನೆರಳನ್ನೇ ನಿಜವೆಂದು ನಾವು ಭಾವಿಸುತ್ತೇವೆ.

ಈ ರೂಪಕದಲ್ಲಿ ನಮ್ಮ ಕೈಕಾಲುಗಳನ್ನು ಕಟ್ಟಿ ಹಾಕಿದ ಕೈಕೋಳಗಳನ್ನು ಸಿಮೋನ್‌ ವೇಲ್‌ ನಾವು ಸಂಭ್ರಮಿಸುವ ಕಲ್ಪನಾ ಶಕ್ತಿ ಮತ್ತು ತಾರ್ಕಿಕ ಬುದ್ಧಿಶಕ್ತಿ ಎನ್ನುತ್ತಾಳೆ. ಈ ಕಲ್ಪನಾ ಶಕ್ತಿಯೇ ನಮ್ಮನ್ನು ಭ್ರಮೆಯಲ್ಲಿ ಬಂಧಿಸಿರುತ್ತದೆ. ಒಳನೋಟ ಸಾಧ್ಯವಾಗಲು ನಾವು ತೆಪ್ಪಗಿರಬೇಕು. ಗುಹೆಯಲ್ಲಿರುವ ಕೆಲವು ಜಾಣರು ತಜ್ಞರಾಗಿರುತ್ತಾರೆ. ಆದರೆ ನೆರಳುಗಳನ್ನು ವಿವರಿಸುವುದರಲ್ಲೇ ಮಗ್ನರಾಗಿರುತ್ತಾರೆ. ತೋಳ ಬಂಧಿಗಳನ್ನು ಕಳಚಿ ಮೂಲದಲ್ಲಿ ಇರುವ ಬೆಳಕನ್ನು ನೋಡುವುದು ಸಾಧ್ಯ.

ಆಳವಾದ ಧ್ಯಾನ, ಸತ್ಯದ ಗಮನ ಈ ಮಿಥ್ಯಾಲೋಕದಲ್ಲಿ ಬದುಕುವ ನಮಗೆ ಯಾವಾಗ ಹೇಗೆ ಸಾಧ್ಯ? ಎಂದು ಸಿಮೋನ್‌ ವೇಲ್ ಕೇಳುತ್ತಾಳೆ. ಹುಡುಕುವ ಆತುರ ನಮಗಿರಬಾರದು. ಏನನ್ನೂ ನಾವು ಉದ್ದೇಶಪೂರ್ವಕವಾಗಿ ನಿರೀಕ್ಷಿಸಬಾರದು. ಸುಮ್ಮನಿದ್ದು ನಮ್ಮ ಒಳಗೆ ಜ್ಞಾನ ಪ್ರವಹಿಸುವಂತೆ ನಿರಪೇಕ್ಷೆಯಲ್ಲಿ ನಾವು ಕಾದಿರಬೇಕು. ನಾವು ಬರಿದಾಗಬೇಕು. ನಗ್ನರಾಗಿರಬೇಕು. ಈ ಬಗೆಯ ಧ್ಯಾನವೆಂದರೆ ಪೂರ್ಣಶ್ರದ್ಧೆಯ ಪ್ರಾರ್ಥನೆಯಾಗಿರುತ್ತದೆ.

ಆಸೆ ಆಮಿಷಗಳಿಂದ ಅಂಧರಾದ ಜನಸಮೂಹವನ್ನು ಪ್ಲೇಟೋ ‘ಗ್ರೇಟ್‌ಬೀಸ್ಟ್’ (ಮಹಾ ಮೃಗ) ಎಂದು ಕರೆಯುತ್ತಾನೆ. ಈ ಮಹಾ ಮೃಗ ಆಸೆಪಡುವುದನ್ನೇ ನಾವು ಒಳಿತೆಂದೂ, ಇಷ್ಟಪಡದೇ ಇರುವುದನ್ನು ಕೆಡುಕೆಂದೂ ಭಾವಿಸುತ್ತೇವೆ. ಅಮೆರಿಕದಲ್ಲಿ ಇದನ್ನು ರಾಜಕಾರಣ ಎಂದು ಕರೆಯುತ್ತಾರೆ.

ಸಿಮೋನ್‌ ವೇಲ್‌ ತನ್ನ ಮನಸ್ಸನ್ನು ಮಾತ್ರವಲ್ಲದೆ ತನ್ನ ದೇಹದ ದುಡಿಮೆಯನ್ನೂ ಪ್ರಾರ್ಥನಾ ರೂಪದ ಒಂದು ಆಯುಧವಾಗಿ ಬಳಸಿದಳು.

ಅವಳಿಗೆ ಎರಡು ಶಬ್ದಗಳು ಬಹಳ ಮುಖ್ಯವಾಗಿದ್ದವು. ಒಂದು ನೆಸಟಿಟಿ –  ನಿಯತಿ. ಈ ನಿಯತಿಗೆ ಎಲ್ಲವೂ ಅಧೀನ. ಭೂಮಿಗಿರುವ ಗುರುತ್ವಾಕರ್ಷಣಾ ಶಕ್ತಿ ಇದ್ದಂತೆ ಇದು. ದೇವರು ಕೂಡಾ ಇದಕ್ಕೆ ಅಧೀನ.

ಸಿಮೋನ್‌ ವೇಲ್‌ ತನ್ನ ೨೨ನೇ ವಯಸ್ಸಿನಲ್ಲಿ ತತ್ವಶಾಸ್ತ್ರದ ಅಧ್ಯಾಪಕಿಯಾದಳು. ಅಧ್ಯಾಪಕ ವೃತ್ತಿಯ ನಡುವೆ ರೆನಾಲ್ಟ್‌ ಕಾರ್‌ ಫ್ಯಾಕ್ಟರಿಯಲ್ಲೂ, ದ್ರಾಕ್ಷಿ ತೋಟಗಳಲ್ಲೂ ದೈಹಿಕ ದುಡಿಮೆ ಮಾಡಿದಳು. ಸ್ಪೇನ್‌ನ ರಿಪಬ್ಲಿಕನ್‌ ಸೈನ್ಯ ಸೇರಿ ಕ್ಯಾಟಲೋನಿಯಾದಲ್ಲಿ ಕ್ರಾಂತಿಕಾರರ ಪರ ಹೋರಾಡುವಾಗ ತನ್ನ ಒಳಜೀವನವನ್ನು ಯುದ್ಧದ ಭೀಕರತೆ ಆಕ್ರಮಿಸಿದ ಅನುಭವ ಪಡೆದಳು. ೧೯೪೧ ರಲ್ಲಿ ದಕ್ಷಿಣ ಫ್ರಾನ್ಸ್‌ನಲ್ಲಿದ್ದು ಹೊಲಗಳಲ್ಲಿ ದುಡಿಮೆ ಮಾಡುತ್ತಾ ಗ್ರೀಕ್‌, ಸಂಸ್ಕೃತ ಮತ್ತು ಹಿಂದೂ ಧರ್ಮಗಳ ತನ್ನ ಅಭ್ಯಾಸವನ್ನು ಮುಂದುವರಿಸಿದಳು. ೧೯೪೨ ರಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಫ್ಯಾಸಿಸ್ಟ್‌ ವಿರೋಧಿ ಫ್ರೆಂಚ್‌ ತಾತ್ಕಾಲಿಕ ಸರ್ಕಾರದ ಪರವಾಗ ಅಮೆರಿಕಾದಲ್ಲಿ ಕೆಲಸ ಮಾಡಿದಳು. ರಾಜ್ಯಸತ್ತೆಗೂ ಪ್ರಜೆಗಳಿಗೂ ಇರಬೇಕಾದ ಅನ್ಯೋನ್ಯ ಸಂಬಂಧ ಕುರಿತ ತನ್ನ ಮಹತ್ವದ ಪುಸ್ತಕವೊಂದನ್ನು ಅವಳು ಬರೆದದ್ದು ಆಗಲೇ. ಹಿಟ್ಲರ್‌ ಆಕ್ರಮಣ ಮಾಡಿದ ಫ್ರಾನ್ಸ್‌ನಲ್ಲಿ ತನ್ನ ಜನರಿಗೆ ಕೊಡಲಾಗುತ್ತಿದ್ದ ಆಹಾರಕ್ಕಿಂತ ಹೆಚ್ಚೇನನ್ನೂ ತಿನ್ನಲು ನಿರಾಕರಿಸಿ ಕ್ರಮೇಣ ಪ್ರಾಯೋಪವೇಶವೆನ್ನಬಹುದಾದ ವ್ರತದಲ್ಲಿ ೧೯೪೩ ರಲ್ಲಿ ತನ್ನ ೩೪ನೇ ವಯಸ್ಸಿನಲ್ಲಿ ಸಿಮೋನ್‌ ವೇಲ್‌ ಸತ್ತಳು. ಈ ನಮ್ಮ ಕಾಲದ ದೊಡ್ಡ ದಾರ್ಶನಿಕರಲ್ಲಿ ಇವಳೊಬ್ಬಳೆನ್ನಬಹುದು. ಮಾರ್ಕ್ಸ್‌‌ವಾದದಿಂದ ಪ್ರಾರಂಭವಾಗಿ ದೈವಿಕ ಶ್ರದ್ಧೆಯ ದಿಕ್ಕಲ್ಲಿ ತನ್ನ ಎಲ್ಲ ರಾಜಕೀಯ ನಿಷ್ಠೆಗಳನ್ನು ಉಳಿಸಿಕೊಂಡೇ ಇವಳು ಬೆಳೆಯುತ್ತ ತೀವ್ರ ಆರ್ತತೆಯಲ್ಲಿ ಸತ್ಯವನ್ನು ಶೋಧಿಸುತ್ತಾ ಬದುಕಿದ ಬಗೆಯೂ ಸತ್ತ ಬಗ್ಗೆಯೂ ಅಪೂರ್ವವಾದದ್ದು.

* * *

ಸಿಮೋನ್‌ ವೇಲ್‌ನ ಮೊದಲ ಗ್ರಹಿಕೆ ಇದು. ಪ್ರಪಂಚ ಮುಚ್ಚಿದ ಬಾಗಿಲು. ಇದೊಂದು ತಡೆ, ಜೊತೆಗೇ ಇದೊಂದು ದಾರಿ.

ಮಾವನ ಸ್ಥಿತಿಯಲ್ಲಿನ ಮೂಲ ವಿರೋಧವೆಂದರೆ, ಅವನು ಕಡ್ಡಾಯಗಳಿಗೆ ಒಳಗಾಗಿದ್ದಾನೆ. ಆದರೆ ನ್ಯಾಯಕ್ಕಾಗಿ ಹಂಬಲಿಸುತ್ತಾನೆ. ನಿಯತಿಯಲ್ಲಿ ಅವನು ನಿರ್ಬಂಧಿತ; ಆದರೆ ಒಳಿತಿಗಾಗಿ ಹಾತೊರೆಯುತ್ತಾನೆ. ಅವನ ದೇಹ ಮಾತ್ರವಲ್ಲ, ಅವನ ಯೋಚನೆಗಳೂ ಹೀಗೆ ಸಿಕ್ಕಿಬಿದ್ದಿವೆ; ಆದರೂ ಒಳಿತಿಗಾಗಿ ಸತತ ಶ್ರಮಿಸುವುದೇ ಅವನ ಅಸ್ತಿತ್ವದ ಜೀವಾಳವಾಗಿದೆ. ಆದ್ದರಿಂದಲೇ ನಾವೆಲ್ಲರೂ ನಿಯತಿಗೂ ಒಳಿತಿಗೂ ನಡುವೆ ಸಂಬಂಧವಿದೆಯೆಂದು ನಂಬುತ್ತೇವೆ. ಒಳಿತಿಗಾಗಿ ನಾವು ಮಾಡುವ ವಿಚಾರ ಇಹಲೋಕದಲ್ಲೇ ಸರ್ವಶಕ್ತವಾಗುತ್ತದೆಂದು ಕೆಲವರು ತಿಳಿಯುತ್ತಾರೆ; ಅವರು ಆದರ್ಶವಾದಿಗಳು. ಅವರು ಎರಡು ಬಗೆಯ ತಪ್ಪು ಮಾಡುತ್ತಾರೆ ಒಂದು, ಈ ವಿಚಾರಗಳಿಗೇ ಸ್ವಯಂ ಶಕ್ತಿ ಇಲ್ಲ; ಎರಡು, ಅವು ಒಳಿತನ್ನು ಸಹಜವಾಗಿಯೇ ಗಳಿಸುವುದಿಲ್ಲ. ಯಾಕೆಂದರೆ ಈ ವಿಚಾರಗಳು ಕೂಡ ಕಡ್ಡಾಯಗಳಿಂದ ಪ್ರಭಾವಿತವಾಗುತ್ತದೆ… ಇನ್ನು ಕೆಲವರು ಕಡ್ಡಾಯಗಳೇ ಸ್ವಯಂ ಒಳಿತಿನ ದಿಕ್ಕಿನಲ್ಲಿ ಚಲಿಸುತ್ತವೆ ಎಂದು ತಿಳಿಯುತ್ತಾರೆ; ಇವರು ಮೂರ್ತಿಪೂಜಕರು. ಎಲ್ಲ ಭೌತವಾದಿಗಳ ನಂಬಿಕೆ ಇದು. ಇವರೂ ಎರಡು ಬಗೆಯ ತಪ್ಪು ಮಾಡುತ್ತಾರೆ: ಮೊದಲನೆಯದಾಗಿ, ಕಡ್ಡಾಯ ಒಳಿತಿಗೆ ಅನ್ಯವಾದದ್ದು; ಎರಡನೆಯದಾಗಿ, ಎಲ್ಲ ಕಡೆಯೂ, ಯಾವಾಗಲೂ ಕಡ್ಡಾಯಗಳು ಒಳಿತಿಗಿಂತ ಬಲವಾದವು ಎಂಬುವಂತಿಲ್ಲ. ಇಂಥ ತಪ್ಪುಗಳನ್ನು ಮಾಡದೇ ಇರುವುದು ಯಾರಿಗೆ ಸಾಧ್ಯವೆಂದರೆ ಒಳಿತು ಮತ್ತು ನಿಯತಿಗಲ ನಡುವೆ ಆಜ್ಞೇಯವಾದ ಐಕ್ಯವಿದೆ, ಆದರೆ ಈ ಐಕ್ಯ ಪ್ರಪಂಚದ ಹೊರಗಿದೆ ಎಂದು ತಿಳಿದವರಿಗೆ. ತಮ್ಮ ಆಕಾಂಕ್ಷೆಯನ್ನೂ ಗಮನವನ್ನೂ ಈ ಐಕ್ಯದಲ್ಲಿ ನೆಟ್ಟಲ್ಲಿ ಅದು ಇಲ್ಲೂ ಸಹ ನಮ್ಮ ಅನುಭವಗಮ್ಯವಾದೀತೆಂದು ಇವರು ತಿಳಿಯುತ್ತಾರೆ. ಇಪ್ಪತ್ತೈದು ಶತಮಾನಗಳ ಹಿಂದೆಯೇ, ಕೆಲವು ಗ್ರೀಕ್ ದಾರ್ಶನಿಕರು ಗುಲಾಮಗಿರಿ ನೈಸರ್ಗಿಕವಾಗಿಯೂ ವೈಚಾರಿಕವಾಗಿಯೂ ತಪ್ಪೆಂದು ಹೇಳಿದ್ದರು. ಕಾಲ ದೇಶಗಳಿಗೆ ಅನುಗುಣವಾಗಿ ನಮ್ಮ ನೈತಿಕತೆ ಬದಲಾಗುತ್ತವಾದರೂ ಅನುಭಾವದಿಂದ ಹುಟ್ಟುವ ನೈತಿಕತೆ ಮಾತ್ರ ಯಾವಾಗಲೂ ಸ್ಥಿರವಾಗಿದೆ, ಏಕವಾಗಿದೆ, ಒಂದೇ ರೀತಿಯದಾಗಿದೆ. ಉದಾಹರಣೆಗೆ ಈಜಿಫ್ಟ್, ಗ್ರೀಸ್, ಇಂಡಿಯಾ, ಚೀನಾ, ಬೌದ್ಧ ಧರ್ಮ, ಇಸ್ಲಾಂ ಕ್ರೈಸ್ತ ಧರ್ಮ, ಎಲ್ಲ ದೇಶಗಳ ಜಾನಪದ ಪರಂಪರೆ –  ಇವನ್ನು ನೋಡಬಹುದು. ಈ ನೈತಿಕತೆಯನ್ನು ಬದಲಿಸಲು ಸಾಧ್ಯವಿಲ್ಲ; ಯಾಕೆಂದರೆ, ಈ ಪ್ರಪಂಚದ ಹೊರಗಿರುವ ಪರಿಪೂರ್ಣ ಒಳಿತಿಂದ ಪ್ರತಿಫಲವಾದದ್ದು ಅದು. ಎಲ್ಲ ಧರ್ಮಗಳೂ ಈ ನೈತಿಕತೆಯನ್ನೂ ಸಾಮಾಜಿಕ ನೈತಿಕತೆಯನ್ನೂ ಬೇರೆ ಬೇರೆ ಹದಗಳಲ್ಲಿ ಮಿಶ್ರಗೊಳಿಸಿಲ್ಲವೆಂದಲ್ಲ. ಆದರೆ ಶುದ್ಧವಾದ ಅತೀತವಾದ ಒಳಿತೊಂದು ಇದೆ ಎಂಬುದಕ್ಕೆ ಈ ಪ್ರಪಂಚಕ್ಕೆ ಸಂಬಂಧಿಸಿದಂತೆ ಇದೇ ಪ್ರಾಯೋಗಿಕವಾದ ಪ್ರಮಾಣ; ದೇವರು ಇದ್ದಾನೆಂಬುದಕ್ಕೂ ಇವೇ ಪ್ರಾಯೋಗಿಕ ರುಜುವಾತು.

ಕೆಲವು ವಿಶಿಷ್ಟ ಉದ್ದೇಶಗಳಿಗಾಗಿ ದೇವರು ಈ ಜಗತ್ತನ್ನೋ, ನಮ್ಮ ಜೀವನವನ್ನೋ ಪ್ರವೇಶಿಸಿ ಕೆಲವು ಗುರಿಗಳನ್ನು ಸಾಧಿಸುತ್ತಾನೆಂಬ ಹಾಸ್ಯಾಸ್ಪದವಾದ ದೈವದ ದೃಷ್ಟಿ ನೈಜ ಶ್ರದ್ಧೆಗೆ ವಿರೋಧವಾದದ್ದು. ವೈಜ್ಞಾನಿಕವಾದ ಲೋಕದೃಷ್ಟಿಯಿಂದ ಇದನ್ನು ಒಪ್ಪುವುದು ಅಸಾಧ್ಯ. ವಿದ್ಯೆಯ ಪ್ರಭಾವಕ್ಕೊಳಗಾದ ಕ್ರಿಶ್ಚಿಯನ್ನರು ಜಗತ್ತನ್ನು ವೈಜ್ಞಾನಿಕವಾಗಿ ಭಾವಿಸುವುದರ ಜೊತೆಗೇ, ದೈವ ತಮಗಾಗಿ ದುಡಿಯುತ್ತದೆಂಬ ನಂಬಿಕೆಯನ್ನೂ ಇಟ್ಟುಕೊಂಡಿರುತ್ತಾರೆ. ಇದರಿಂದ ಅವರ ಮನಸ್ಸು ಇಬ್ಭಾಗವಾಗಿ ಒಡಕೊಂಡುಬಿಡುತ್ತದೆ… ಹೀಗಾಗಿ ಅವರು ವೈಜ್ಞಾನಿಕವಾಗಿಯಾಗಲೀ, ಧಾರ್ಮಿಕವಾಗಿಯಾಗಲೀ ಆಲೋಚಿಸಲಾರದವರಾಗಿ ಬಿಡುತ್ತಾರೆ. ದೇವರು ನಮಗಾಗಿ ಮಧ್ಯ ಪ್ರವೇಶ ಮಾಡುವನೆಂಬುದನ್ನಂತೂ ಗಂಭೀರವಾಗಿ ಪರಿಶೀಲಿಸುವುದು ಸಹ ಸಾಧ್ಯವಿಲ್ಲ. ಹೀಗಾಗಿ ಧಾರ್ಮಿಕ ಶ್ರದ್ಧೆ ದೇವರನ್ನು ನಂಬದವರಿಗೆ ಹಾಸ್ಯಾಸ್ಪದವೆನ್ನಿಸುತ್ತದೆ.

ಒಳಿತೇ ಬೇರೆ, ನಿಯತಿಯೇ ಬೇರೇ; ಒಂದು ಇನ್ನೊಂದಲ್ಲ. ಎರಡೂ ಬಹುದೂರದಲ್ಲಿರುವಂತವು. ಎರಡರ ನಡುವಿನ ಐಕ್ಯವಾಗುವುದು ನಮಗೆ ಅನಿವಾರ್ಯವಾದರು ಈ ಐಕ್ಯತೆ ರಹಸ್ಯವಾದದ್ದು. ಈ ಅವ್ಯಕ್ತ ಐಕ್ಯತೆಯ ಧ್ಯಾನವನ್ನೇ ಅಪ್ಪಟ ಧಾರ್ಮಿಕ ಜೀವನವೆನ್ನಬಹುದು.

* * *

ನಿರೀಶ್ವರವಾದದ ಅತ್ಯಂತ ಮಹತ್ವದ ವಿಚಾರವೆಂದರೆ, ಪ್ರಗತಿ. ಆದರೆ ಇದು ವಸ್ತುವಿನ ಮೂಲ ಸ್ವರೂಪ ತಿಳಿದು ಮಾಡುವ ಪ್ರಾಯೋಗಿಕ ತರ್ಕಕ್ಕೆ ವಿರುದ್ಧವಾದದ್ದು. ತನ್ನಲ್ಲೇ ಸಾಮಾನ್ಯವಾದಂಥ ಗುಣ ಪಡೆದದ್ದು ಸ್ವಯಂ ಅತ್ಯುತ್ತಮ ಗುಣವಿಶೇಷ ಪಡೆದದ್ದನ್ನು ಹುಟ್ಟಿಸಬಲ್ಲದೆಂದು ಹೇಗೆ ಹೇಳಲು ಸಾಧ್ಯ?

* * *

ನಾನು ಒಳಿತಿಗಾಗಿ ಆಸೆಪಡುವುದು ಮಾತ್ರ ಸಾಧ್ಯ. ಉಳಿದೆಲ್ಲ ಆಸೆಗಳೂ ಕೆಲವು ಸಾರಿ ಪರಿಣಾಮಕಾರಿಯಾಗಬಹುದು ಅಥವಾ ಆಗದೇ ಇರಬಹುದಾದರೂ ಇದೊಂದು ಆಸೆ ಮಾತ್ರ ಯಾವತ್ತೂ ಪರಿಣಾಮಕಾರಿಯಾಗುತ್ತದೆ. ಕಾರಣವಿಷ್ಟೇ; ಚಿನ್ನದ ಮೇಲಿನ ಆಸೆ ಚಿನ್ನವೇ ಆಗಲಾರದು; ಆದರೆ ಒಳಿತಿಗಾಗಿನ ಆಸೆಯೇ ಒಳಿತಾದದ್ದು.

ಧರ್ಮ ಸಂತೈಕೆಯ ಆಕರವಾಗಿರುವ ತನಕ ನೈಜ ಶ್ರದ್ಧೆಗೆ ಅಡ್ಡಿಯಾಗುತ್ತದೆ.

ದೇವರು ರೊಟ್ಟಿಯಾದಾನು, ಕಲ್ಲಾದಾನು, ವೃಕ್ಷವಾದಾನು, ಕುರಿಯಾದಾನು, ಮನುಷ್ಯನಾದಾನು. ಆದರೆ ಅವನು ಜನಸಮೂಹವಾಗಲಾರ. ಇಡೀ ಜನಸಮೂಹ ದೇವರ ಅವತಾರವಾಗುವುದು ಅಸಾಧ್ಯ.

* * *

ಪಯರಿನಲ್ಲಿ ಬಳ್ಳಿಗಳಲ್ಲಿ ಎಲ್ಲ ಸೌರಶಕ್ತಿಯೂ ಶೇಖರವಾಗಿ, ಪತ್ರ ಹರಿತ್ತಿನಲ್ಲಿ ಸಾಂದ್ರಗೊಳ್ಳುತ್ತದೆ. ಈ ಮುಖಾಂತರ ಸೂರ್ಯನ ಶಕ್ತಿಯೇ ಮಾನವರನ್ನು ಪ್ರವೇಶಿಸಿ ಅವರನ್ನು ಜೀವಂತಗೊಳಿಸುತ್ತದೆ. ರೈತ ಈ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾನೆ.

ಸಾವು ಮತ್ತು ದುಡಿಮೆಗಳು ಅಗತ್ಯಗಳೇ ಹೊರತು ನಮ್ಮ ಸ್ವತಂತ್ರ ಆಯ್ಕೆಗಳಲ್ಲ. ಮನುಷ್ಯ ಶ್ರಮದ ಮೂಲಕ ಕೊಟ್ಟಿದ್ದನ್ನು ಪ್ರಪಂಚ ಅನ್ನವಾಗಿ, ಶಾಕವಾಗಿ ಮನುಷ್ಯನಿಗೆ ಹಿಂದಿರುಗಿಸುತ್ತದೆ. ಸಾವು ಎದುರಾದಾಗ ಅದನ್ನು ಒಪ್ಪಿಕೊಳ್ಳುವುದೆಂದರೆ ಇದು ತಾನು ಎಂದು ತಿಳಿದುಕೊಳ್ಳುವ ಪ್ರತಿಯೊಂದರಿಂದಲೂ ಅಂತಿಮವಾಗಿ, ಥಟ್ಟನೇ ಕಿತ್ತುಕೊಳ್ಳುವುದಾಗಿದೆ. ಶ್ರಮವನ್ನು ಒಪ್ಪಿಕೊಳ್ಳುವುದ ಇದಕ್ಕಿಂತ ಕಡಿಮೆ ಕ್ರೂರವಾದದ್ದು. ಜೀವನದುದ್ದಕ್ಕೂ ಪ್ರತಿ ಬೆಳಿಗ್ಗೆ ಇದು ಸಂಭವಿಸುತ್ತದೆ. ಸಂಜೆಯ ತನಕ ಮುಂದುವರಿಯುತ್ತದೆ. ದಿನ ಕಳೆದು ದಿನವಾದರೂ ಬೆಳಿಗ್ಗೆಯಿಂದ ಸಂಜೆತನಕ ಸಾಗುವ ಇದು ಮಾರನೇ ದಿನ ಮತ್ತೆ ಅಗತ್ಯವಾಗುತ್ತದೆ. ಹೀಗೆ ಸಾಯುವ ತನಕ. ಪ್ರತಿ ಬೆಳಿಗ್ಗೆ ಕೂಲಿಕಾರ ಆ ದಿನದ ದುಡಿಮೆ ಮಾಡಲು ಅನುವಾಗುತ್ತಾನೆ, ತನ್ನ ಆಯುಷ್ಯ ತೀರುವತನಕ ದುಡಿಮೆಯಿಂದ ಅವನು ಬಳಲಿ ಸುಸ್ತಾಗುವುದು ಊಟ ಮಾಡಲೆಂದು, ಊಟ ಮಾಡುವುದು ದುಡಿಮೆಗಾಗಿ ಮತ್ತೆ ಶಕ್ತಿಯನ್ನು ಪಡೆಯಲೆಂದು. ಒಂದು ವರ್ಷದ ಶ್ರಮದ ನಂತರ ಎಲ್ಲವೂ ಶುರುವಿನಲ್ಲಿ ಹೇಗಿತ್ತೋ ಹಾಗೇ ಇರುತ್ತವೆ. ಅನಂತತೆಯ ಹೊಳಹುವಿನಲ್ಲಿ ಅವನ ದುಡಿಮೆ ಪ್ರಕಾಶಿತವಾದಲ್ಲಿ ಮಾತ್ರ ದುಡಿಮೆಯ ಏಕತಾನದ ಬೇಸರ ಸಹನೀಯವಾಗುತ್ತದೆ.

ಯಂತ್ರ ಕಲ್ಲಿದ್ದಲನ್ನು ಉರಿಸುವಂತೆ ದುಡಿಮೆಗಾರ ತನ್ನ ಮಾಂಸವನ್ನೇ ಉರಿಸುತ್ತ ಅದನ್ನು ಶಕ್ತಿಯಾಗಿ ಪರಿವರ್ತಿಸುತ್ತಾನೆ. ತನ್ನ ರಕ್ತಮಾಂಸವನ್ನು ಶ್ರಮದ ಫಲವಾಗಿ, ಆಹಾರ ಮದಿರೆಗಳಾಗಿ ಮಾಡಿಕೊಡುತ್ತಾನೆ. ಕಾರ್ಯಕ್ರಮ ಒಂದೋ ಕೀಳುಗೊಳಿಸುವ ಜೀತವಾಗುತ್ತದೆ ಅಥವಾ ಯಜ್ಞವಾಗುತ್ತದೆ.

* * *

ಸಿಮೋನ್‌ ವೇಲ್‌ ನನಗೆ ಅಷ್ಟಿಷ್ಟು ಅರ್ಥವಾಗಿದ್ದಾಳೆ. ಆದರೆ ಅವಳನ್ನು ನಾನು ನನ್ನ ಅರಿವಿನಲ್ಲಿ ಇನ್ನೂ ಪಡೆದಿಲ್ಲ. ನನ್ನ ಹಲವು ಭಾವನಾತ್ಮಕ ವಿಚಾರಗಳಲ್ಲಿ ಅವಳು ನನಗೆ ಹೊಳೆಯುತ್ತಾಳೆ. ಶಂಕರಾಚಾರ್ಯರಂತೆ ಚಿಕ್ಕವಯಸ್ಸಿನಲ್ಲೇ ಸತ್ತ ಅವಳು ಪರಮ ತಾರ್ಕಿಕ ತತ್ವಜ್ಞಾನಿ, ಹಾಗೆಯೇ ಸಂತಳೂ ಕೂಡ. ಒಂದನ್ನು ಬಿಟ್ಟು ಇನ್ನೊಂದನ್ನು ಗ್ರಹಿಸುವಂತಿಲ್ಲವೆನ್ನುವುದೇ ಅವಳು ಒಡ್ಡುವ ತೊಡಕು.

ನನ್ನದೇ ಕಷ್ಟವಿರುವುದು ದೇವರು ಈ ಲೋಕಕ್ಕೆ ಹೊರತಾಗಿ ಇದ್ದಾನೆಂಬ ಅವಳ ನಂಬಿಕೆಯಲ್ಲಿ. ಬಹಳ ವರ್ಷಗಳ ಹಿಂದೆ ಓದಿದ ಘಟನೆಯೊಂದು ನೆನಪಾಗುತ್ತದೆ. ತನಗೆ ಪೂಜ್ಯನಾದ ಟಾಲ್‌ ಸ್ಟಾಯ್‌ನನ್ನು ಕಮ್ಯುನಿಸ್ಟ್‌ ಲೇಖಕ ಗಾರ್ಕಿ ನೋಡಲು ಹೋಗುತ್ತಾನೆ. ಮುದುಕ ಟಾಲ್‌ ಸ್ಟಾಯ್‌ ಬಂಡೆಯೊಂದರ ಮೇಲೆ ಕೂತಿರುತ್ತಾನೆ. ಗಾರ್ಕಿಯನ್ನು ಕೇಳುತ್ತಾನೆ; ನೀನು ದೇವರನ್ನು ನಂಬುತ್ತೀಯ? ಗಾರ್ಕಿ ಇಲ್ಲವೆನ್ನುತ್ತಾನೆ. ಟಾಲ್‌ ಸ್ಟಾ‌ಯ್  ಅನುಕಂಪದಲ್ಲಿ ನಕ್ಕು ಹೇಳುತ್ತಾನೆ: ನಿನ್ನಷ್ಟು ಒಳ್ಳೆಯ ಮನುಷ್ಯ ದೇವರನ್ನು ನಂಬದೇ ಇರುವುದು ಸಾಧ್ಯವೇ ಇಲ್ಲ. ನೀನು ನಂಬುತ್ತೀಯ. ಆದರೆ ಒಪ್ಪಿಕೊಳ್ಳಲು ಹೆದರುತ್ತೀಯ. ಗಾರ್ಕಿ ಬರೆಯುತ್ತಾನೆ ದೇವರು ಇದ್ದಾನೊ ಇಲ್ಲವೊ? ಆದರೆ ಬಂಡೆಯ ಮೇಲೆ ಏಕಾಂಗಿಯಾಗಿ ಕೂತ ಟಾಲ್‌ಸ್ಟಾಯ್ ನನ್ನ ಪಾಲಿಗಂತೂ ದೇವರಂತೆ ಕಂಡ.

ಸಿಮೋನ್‌ ವೇಲ್ ಎದುರಾದಾಗ ನನಗೆ ಈ ಭೇಟಿ ನೆನಪಾಗುತ್ತದೆ.

ಸಿಮೋನ್‌ ವೇಲ್‌ನ ಸಮಾಧಿ ಮಾಡಿದ ಸ್ಥಳದಲ್ಲಿ ಈ ಬರವಣಿಗೆ ಇದೆ: ನನ್ನ ಏಕಾಕಿತನದಲ್ಲಿ ಎಲ್ಲರ ದುಃಖವನ್ನೂ ತುಂಬಿಕೊಂಡಿದ್ದೇನೆ…

೨೮೨೦೦೬

* * *