ಈ ವಾರ ಸಿ.ಎಲ್‌.ಆರ್. ಜೇಮ್ಸ್ (೧೯೦೧-೧೯೮೯) ಎನ್ನುವ ವೆಸ್ಟ್‌ಇಂಡಿಯನ್ ಧೀಮಂತ ಲೇಖಕರೊಬ್ಬರ ಬಗ್ಗೆ ಬರೆಯಲು ಹೊರಟಿರುವ ನನಗೆ ನನ್ನ ಕಾಲದ ಕೆಲವು ಚಿಂತಕರು ನೆನಪಾಗುತ್ತಾರೆ. ಮುಖ್ಯವಾಗಿ ಗತಿಸಿದ ಹಿರಿಯ ಗೆಳೆಯ ಸಮಾಜವಾದಿ ವೆಂಕಟರಾಮ್‌. ೧೯೬೬ ರಲ್ಲಿ ಇಂಗ್ಲೆಂಡಿನಿಂದ ನನ್ನ ಶಿಕ್ಷಣ ಮುಗಿಸಿ ಹಿಂದಕ್ಕೆ ಬಂದ ನನ್ನ ಹಲವು ನಿಲುವುಗಳನ್ನು –  ವಿಕೇಂದ್ರೀಕರಣ, ಜಾತಿ ಸಮಾನತೆ, ದೇಶೀಯ ಭಾಷೆಗಳು ಇವಕ್ಕೆ ಸಂಬಂಧಿಸಿದ ನಿಲುವುಗಳನ್ನು –  ತನ್ನ ಒಳನೋಟಗಳಿಂದ ಗಾಢಗೊಳಿಸುತ್ತ ಹೋದವರಲ್ಲಿ ಗೆಳೆಯ ವೆಂಕಟರಾಮ್‌ ಮುಖ್ಯರು. ಗಂಟೆಗಟ್ಟಲೆ ಅವರ ಜೊತೆ ಹೊಡೆಯುತ್ತಿದ್ದ ಹರಟೆಯಲ್ಲಿ ಅದೃಷ್ಟವಶಾತ್‌ ನಾನು ಸಿ.ಎಲ್.ಆರ್. ಜೇಮ್ಸ್‌ರನ್ನು ಒಮ್ಮೆ ಲಂಡನ್‌ನಲ್ಲಿ ಭೇಟಿಯಾದ ವಿಷಯ ಎತ್ತಿದೆ.

ಅದೃಷ್ಟವಶಾತ್‌ ಯಾಕೆಂದರೆ ನಾನು ಮೆಚ್ಚಿಕೊಂಡಿದ್ದ ಈ ವೆಸ್ಟ್ ಇಂಡಿಯನ್ ಲೇಖಕ ಎಷ್ಟು ಮಹತ್ವದ ಬರಹಗಾರ ಎಂದು ನನಗೆ ಗೊತ್ತಾದದ್ದು ವೆಂಕಟರಾವ್‌ನಿಂದ. ತನ್ನ ಕಿರಿಯ ಗೆಳೆಯನೊಬ್ಬ ಸಿಎಲ್‌ಆರ್‌ರನ್ನು ಭೇಟಿಯಾಗಿ ಮಾತಾಡಿದ್ದ ಎಂಬುದೇ ಭಾರತ ಬಿಟ್ಟು ಆ ತನಕವೂ ಕದಲದೇ ಇದ್ದ ವೆಂಕಟರಾಮ್‌ಗೆ ಅಭಿಮಾನದ ವಿಷಯವಾಗಿತ್ತು. ಅವರಿಗೆ ಓದಿಕೊಂಡು ಮಾತ್ರ ಗೊತ್ತಿದ್ದ ಮನುಷ್ಯ ಈ ಸಿಎಲ್‌ಆರ್‌. ಆತ ಸತ್ತಮೇಲೆ ಎಡ್ವರ್ಡ್ ‌ಸೈದ್‌ನಂತಹ ಪ್ರಖ್ಯಾತರು ಆತನ ಬಗ್ಗೆ ಮಾತಾಡಿ ಆತನ ಬರವಣಿಗೆಯನ್ನು ಗಮನಕ್ಕೆ ತರುವ ಮುನ್ನವೇ ನಮ್ಮ ವೆಂಕಟರಾಮ್‌ಗೆ ಆತನ ಮಹತ್ವ ತಿಳಿದಿತ್ತು. ನನಗೂ ತಿಳಿಯುವಂತೆ ಮಾಡಿದ್ದರು. ಒಳ್ಳೆಯ ಗೆಳೆಯರು ಮಾತ್ರ ನಮಗೇ ನಾವು ಪೂರ್ಣವಾಗಿ ದಕ್ಕುವಂತೆ ಮಾಡುತ್ತಾರೆ. ಗೆಳೆಯ ಸುಬ್ಬಣ್ಣ ಮತ್ತು ಗೆಳೆಯ ರಾಜಶೇಖರ್‌ಗೆ ಈ ಕೆಲವು ವರ್ಷಗಳಲ್ಲಿ ನಾನು ಈ ಕಾರಣಕ್ಕಾಗಿ ಋಣಿ.

ಸಿಎಲ್‌ಆರ್‌ಗೂ ವೆಂಕಟರಾಮ್‌ಗೂ ನಂಟು ತಂದವನು ಟ್ರಾಟ್ಸ್‌ಕಿ. ಕೆಲವರಲ್ಲಿ ವೈಚಾರಿಕ ರೋಮಾಂಚನವನ್ನೂ, ಸ್ಟಾಲಿನ್ ವಾದಿಗಳಲ್ಲಿ ಪರಮ ದ್ವೇಷವನ್ನೂ ಹುಟ್ಟಿಸುತ್ತಿದ್ದ ಒಂದು ಶಬ್ದವೆಂದರೆ ಟ್ರಾಟ್ಸ್‌ಕಿ. ಬ್ರೆಜ್ನೇವ್ ಕಾಲದಲ್ಲಿ (ಎಂಬತ್ತರ ದಶಕದ ಪ್ರಾರಂಭದಲ್ಲಿ ಎಂದು ತೋರುತ್ತದೆ) ನಾನು ಸೋವಿಯತ್‌ರಷ್ಯಕ್ಕೆ ಹೋಗಿದ್ದಾಗ ಆಗಿನ ಲೆನಿನ್‌ಗ್ರಾಡ್‌ನ ಮ್ಯೂಸಿಯಮ್‌ಗೆ ನನ್ನನ್ನು ಕರೆದುಕೊಂಡು ಹೋಗಿದ್ದರು. ಆ ನಗರದಲ್ಲಿ ಕ್ರಾಂತಿಕಾಲದ ಲೆನಿನ್‌ಸಾಹಸಗಳನ್ನು ಬಾಯಿಪಾಠ ಮಾಡಿಕೊಂಡಿದ್ದ ಗೈಡ್ ಒಬ್ಬಳು ಆ ನಗರದ ನೆನೆಯಲೇಬೇಕಾದ ಟ್ರಾಟ್ಸ್‌ಕಿಯ ಹೆಸರನ್ನು ಒಮ್ಮೆಯಾದರೂ ನೆನಸಿರಲಿಲ್ಲ. ನಾವು ಒಂದು ಪ್ರಖ್ಯಾತ ವರ್ಣಚಿತ್ರವನ್ನು ನೋಡುತ್ತಲಿದ್ದಾಗ ಲೆನಿನ್ ಟ್ರಾಟ್ಸ್‌ಕಿ ಜೊತೆ ಸಂವಾದದಲ್ಲಿ ಇರುವುದನ್ನು ನೋಡಿದೆ. ಪುಣ್ಯಕ್ಕೆ ಈ ಖ್ಯಾತಚಿತ್ರದಿಂದ ಅಳಿಸಿಹಾಕಲಾರದೆ ಉಳಿದ ಈ ಟ್ರಾಟ್ಸ್‌ಕಿಯನ್ನು ಬೊಟ್ಟುಮಾಡಿ ಇದು ಯಾರು ಎಂದು ಗೈಡನ್ನು ಕೇಳಿದೆ. ಅವಳು ತಲೆಯಲ್ಲಾಡಿಸಿದಳು. ನಾನು  ಆ ಕ್ಷಣದಿಂದ ಅವಳ ಗೈಡಾಗಿ ಕೆಲಸ ಮಾಡಿದೆ. ವೆಂಕಟರಾಮ್‌ ನನಗೆ ಟ್ರಾಟ್ಸ್‌ಕಿಯನ್ನು ಅರೆದು ಕುಡಿಸಿದ್ದರು.

* * *

ನನ್ನ ಮುವ್ವತ್ತ ಎರಡನೆಯ ವಯಸ್ಸಿನಲ್ಲಿ ಸ್ಟಾಲಿನ್‌, ಮಾವೋ, ಲೋಹಿಯಾ, ಗಾಂಧಿ, ಜೆಕೆ, ರಮಣ, ಪರಮಹಂಸ ಇತ್ಯಾದಿಗಳನ್ನೂ, ನಾನು ಬರೆಯಬೇಕೆಂದುಕೊಂಡಿದ್ದ ಕಥೆಗಳನ್ನೂ, ಮುವ್ವತ್ತರ ದಶಕದಲ್ಲಿ ಹಿಟ್ಲರ್‌ ಒಡ್ಡಿದ್ದ ಸವಾಲನ್ನು ಆರ‍್ವೆಲ್, ಇಶರ್‌ವುಡ್, ಎಡ್ವರ್ಡ್ ಅಪ್ವರ್ಡ್‌ ಮತ್ತು ಆಡೆನ್‌ ಹೇಗೆ ಎದುರಿಸಿದರು ಎಂಬುದನ್ನೂ ತಲೆಯಲ್ಲಿ ತುಂಬಿಕೊಂಡು ಓಡಾಡುತ್ತಿದ್ದ ನನ್ನ ಎಲ್ಲ ಆಲೋಚನೆಗಳನ್ನೂ ಹಂಚಿಕೊಳ್ಳಬಲ್ಲವನಾಗಿದ್ದ ವೆಸ್ಟ್ ಇಂಡೀಸ್‌ನ ಗೆಳೆಯನೊಬ್ಬನಿದ್ದ. ಈ ರಾಬರ್ಟ್ ನೋಡಲೂ ಚೂಪು; ಮಾತಿನಲ್ಲೂ ಚೂಪು. ಗುಂಗುರು ಕೂದಲಿನ ಈ ಕಪ್ಪು ಸುಂದರ ಪರಮ ತುಂಟ ಬೇರೆ. ಟಿಕೆಟ್‌ ಇಲ್ಲದೆ ಅಂಡರ್‌ಗ್ರೌಂಡ್ ಟ್ರೈನಿನಲ್ಲಿ ನುಸುಳುವುದು ಹೇಗೆಂದು ಗೊತ್ತಿದ್ದ ಈತ ತನಗಿಂತ ಕೊಂಚ ತೋರ ದೇಹದ, ಭಾರತೀಯ ಸಭ್ಯತೆಯಿಂದಾಗಿ ಮುಜುಗರಪಡುವ ನನ್ನನ್ನು ಸದಾ ಹಾಸ್ಯ ಮಾಡುತ್ತಿದ್ದ. ‘ನೀವು ಭಾರತೀಯರು ಕೊಂಚ ಅರಾಜಕರಾಗದ ಹೊರತು ವಸಾಹತುಶಾಹಿಯ ಪೊಳ್ಳು ಸಜ್ಜನಿಕೆಯಿಂದ ಬಿಡುಗಡೆಯಾಗಲಾರಿರಿ’ ಎನ್ನುತ್ತಿದ್ದ. ನಾಯ್‌ಪಾಲ್‌ ಬಗ್ಗೆ ಕೂಡ ಅವನ ದೂರು ಅದು.

ಟಿಕೆಟ್ಟಿಗೆ ನಾನು ಹಣ ಖರ್ಚು ಮಾಡದಂತೆ ಲಂಡನ್‌ನಲ್ಲಿ ನನ್ನನ್ನು ಸುತ್ತಿಸುತ್ತಿದ್ದಾಗ ಒಂದು ಮಧ್ಯಾಹ್ನ ಕೆಂಪಾದ ಇಟ್ಟಿಗೆಯ ಸಾಲು ಮನೆಗಳಿದ್ದ ಒಂದು ಕೆಳ ಮಧ್ಯಮ ವರ್ಗದ ಬೀದಿಗೆ ಕರೆದುಕೊಂಡು ಬಂದ. ದಾರಿಯುದ್ದಕ್ಕೂ ನಾವೀಗ ಭೇಟಿಯಾಗುತ್ತಿರುವ ಮನುಷ್ಯನ ಬಗ್ಗೆ ಬಹಳ ಹೆಮ್ಮೆಯಿಂದ ತನ್ನ ಗುರು ಎಂದು ಕೊಂಡಾಡಿದ್ದ. ಯಾವುದೋ ಒಂದು ಜೀರ್ಣಾವಸ್ಥೆಯಲ್ಲಿದ್ದ ಮನೆಯ ಮೆಟ್ಟಿಲನ್ನು ಹತ್ತಿ ಹೋದದ್ದಾಯಿತು. ಮನೆಯ ಬಾಗಿಲು ತೆರೆದೇ ಇತ್ತು. ಬ್ರಿಟನ್‌ನಲ್ಲಿ ಹೀಗೆ ಬಾಗಿಲು ತೆರೆದಿರುವುದು ಅಪರೂಪ. ಅದು ಅಷ್ಟು ಚಳಿಯಿಲ್ಲದ ಶರದೃತುವಿನ ಕಾಲ ಎಂಬುದು ಈಗ ನೆನಪು.

ಬೆಲ್‌ಗಿಲ್ ಏನೂ ಮಾಡದೆ ನಾವು ಮಹಡಿ ಹತ್ತಿ ಹೋಗಿ ತೆರೆದ ಬಾಗಿಲಿನಿಂದ ಕಂಡದ್ದು ಸುಮಾರು ಅರವತ್ತು ವರ್ಷ ವಯಸ್ಸಿನ ನೀಳವಾದ ಕಾಯದ ಕಪ್ಪು ಬಿಳಿ ಮಿಶ್ರಣದ ಗುಂಗುರು ಕೂದಲಿನ ಗಟ್ಟಿ ಮುಟ್ಟಾದ ಒಬ್ಬ ಮನುಷ್ಯನನ್ನು. ಈತ ಒಂದು ಶರ್ಟನ್ನು ನೀಟಾಗಿ ಇಸ್ತ್ರಿ ಮಾಡುತ್ತಾ ನಿಂತಿದ್ದ. ನಮ್ಮನ್ನು ನೋಡಿ ಮುಗುಳ್ನಕ್ಕು ಪಕ್ಕದ ಖುರ್ಚಿಗಳಲ್ಲಿ ಕೂರುವಂತೆ ಕಣ್ಣು ಸನ್ನೆ ಮಾಡಿ ತನ್ನ ಇಸ್ತ್ರಿ ಕೆಲಸವನ್ನು ಕೊಂಚ ಹೊತ್ತು ಮುಂದುವರಿಸಿದ. ಒಂದು ಕಾಲದಲ್ಲಿ ಕ್ರಿಕೆಟ್ ಆಡುತ್ತಿದ್ದ ಈತ ತನ್ನ ಮೈಕಟ್ಟಿನ ಚುರುಕನ್ನು ಇಳಿವಯಸ್ಸಿನಲ್ಲೂ ಉಳಿಸಿಕೊಂಡಿದ್ದ.

ಕೂತು ಕಾಯುವಾಗ ಈ ಸಿಎಲ್‌ಆರ್ ಜೇಮ್ಸ್‌ನ ಕ್ರಿಕೆಟ್‌ ಹುಚ್ಚಿನ ಬಗ್ಗೆ ನನ್ನ ಗೆಳೆಯ ಮಾತಾಡುತ್ತ ಆ ಬಗ್ಗೆ ಸಿಎಲ್‌ಆರ್‌ ಅದ್ಭುತವಾದೊಂದು ಪುಸ್ತಕ ಬರೆದಿದ್ದಾನೆಂದೋ ಬರೆಯಲಿರುವನೆಂದೋ ಹೇಳಿದ. ಈ ಪುಸ್ತಕದ ಬಗ್ಗೆ ನಾನು ಓದಿದ್ದು ನಂತರವೋ ಮೊದಲೋ ಮರೆತಿದ್ದೇನೆ. ವೆಸ್ಟ್ ಇಂಡಿಯನ್ ಲೇಖಕರೆಂದರೆ ಮೂಗುಮುರಿಯುತ್ತಿದ್ದ ನಾಯ್‌ಪಾಲ್ ಈ ಪುಸ್ತಕ ಮೆಚ್ಚಿ ಬರೆದಿದ್ದನ್ನು ನಾನು ಓದಿದ್ದೇನೆ ಎಂದಷ್ಟು ನೆನಪು.

ನನ್ನ ಬಗ್ಗೆ ಮೊದಲೇ ನನ್ನ ಗೆಳೆಯ ಹೇಳಿರಬೇಕು. ಸಿಎಲ್‌ಆರ್‌ ನೇರವಾಗಿ ಮಾತಾಡಲು ಶುರುಮಾಡಿದ.

ನಾನು ಕನ್ನಡದಲ್ಲಿ ಬರೆಯುವುದೆಂದು ಅವನಿಗೆ ಗೊತ್ತಿತ್ತು. ಕಾಮನ್ವೆಲ್ತ್ ಸಮ್ಮೇಳನದಲ್ಲಿ ಕೇವಲ ಇಂಡಿಯಾದ ಇಂಗ್ಲಿಷ್‌ ಬರಹಗಾರರನ್ನು ಕರೆದದ್ದು ತಪ್ಪೆಂದು ನಾನು ಬರೆದ ಲೇಖನ ಟೈಮ್ಸ್‌ ಲಿಟರರಿ ಸಪ್ಲಿಮೆಂಟಿನಲ್ಲಿ ಬಂದದ್ದನ್ನು ಜೇಮ್ಸ್‌ ಓದಿದ್ದ. ‘ನೋಡಿ ನಿಮಗೆ ನಿಮ್ಮದೇ ಭಾಷೆಯಿರುವುದರಿಂದ ಒಂದು ಅನುಕೂಲ. ವಸಾಹತುಶಾಹಿ ಪ್ರಭುತ್ವ ನಿಮ್ಮ ಅಸ್ಮಿತೆಯನ್ನು ಅಳಿಸಿಹಾಕುವಂತಿಲ್ಲ. ನಮಗೆ ನಮ್ಮದೇ ಭಾಷೆ ವೆಸ್ಟ್‌ಇಂಡೀಸ್‌ನಲ್ಲಿ ಇಲ್ಲದಿರುವುದೂ ಒಂದು ಅನುಕೂಲ. ಇವರ ಇಂಗ್ಲಿಷ್‌ ನಮ್ಮದೂ ಆಗಿರುವುದರಿಂದ ನಾವು ಅವರಿಗೆ ಒಂದು ಚಾಲೆಂಜ್‌ – ಭಾಷೆಯಲ್ಲಿ ಪಶ್ಚಿಮದ ಅಷ್ಟೂ ಸಂಪತ್ತು ಅಪ್ರಯತ್ನವಾಗಿ ನಮ್ಮದಾಗುವಂತೆ ನಾವು ಮಾಡಿಕೊಳ್ಳಬಹುದು. ನೋಡಿ ಕ್ರಿಕೆಟ್‌ ಆಡುವ ಶೈಲಿಯನ್ನೇ ಬದಲು ಮಾಡಿ ನಾವು ನಮ್ಮನ್ನು ಆಳಿದವರನ್ನು ಗೆದ್ದಿದ್ದೇವಲ್ಲವೆ?’ ಲಗಾನ್ ಸಿನಿಮಾ ಬರುವುದಕ್ಕೆ ಸುಮಾರು ಮೂರು ದಶಕಗಳ ಹಿಂದೆಯೇ ಜೆಮ್ಸ್‌ ಈ ಮಾತು ಆಡಿದ್ದ.

ಭಾರತದ ಬಗ್ಗೆ ಮಾತಾಡುವಾಗ ಸುಮ್ಮನೇ ಎಮ್ ಎನ್ ರಾಯ್ ಹೆಸರು ಎತ್ತಿದೆ. ಜೇಮ್ಸ್ ಕೆಂಡಮಂಡಲವಾಗಿಬಿಟ್ಟ. ‘ರಾಯ್ ಹೆಸರು ಎತ್ತಬೇಡ. ಅವನು ಟ್ರಾಟ್‌ಸ್ಕಿಯನ್ನು ವಂಚಿಸಿದಾತ. ಸ್ಟಾಲಿನ್ ವಾದಿ. ನನಗೂ ಟ್ರಾಟ್‌ಸ್ಕಿ ಬಗ್ಗೆ ಭಿನ್ನಾಭಿಪ್ರಾಯವಿದೆ. ಆದರೆ ಅವನ ದಾರ್ಶನಿಕ ಧೀಮಂತಿಕೆಯನ್ನು ಅವನ ಒಡನಾಟದಿಂದ ತಿಳಿದಿರುವವನು ನಾನು. ಸ್ಟಾಲಿನ್‌ವಾದಿಗಳಾದ್ದರಿಂದಲೇ ನಿಮ್ಮ ಭಾರತದ ಕಮ್ಯುನಿಸ್ಟರು ಗಾಂಧಿಯಿಂದ ಏನೂ ಕಲಿಯಲಾರದೆ ಹೋದರು?

ಜೇಮ್ಸ್‌ವಸಾಹತು ಶಾಹಿ ವಿರುದ್ಧದ ಹೋರಾಟದಲ್ಲಿ ಮೆಚ್ಚಿಕೊಂಡಿದ್ದು ಮೂವರನ್ನು. ಮೊದಲನೆಯದಾಗಿ ಗಾಂಧಿ. ಏಕೆಂದರೆ ಗಾಂಧಿ ಬಾಯಿಯಿಲ್ಲದ ಜನರಿಗೆ ಮಾತುಬರುವಂತೆ ಮಾಡಿದ. ಹೋರಾಟಕ್ಕೆ ಸಜ್ಜುಗೊಳಿಸಿದ. ಎರಡನೆಯವನು ಆಫ್ರಿಕಾದ ನುಕ್ರುಮಾ. ನುಕ್ರುಮಾ ಕರಿಯನಾಗಿದ್ದು ಬ್ರಿಟಿಷ್ ರಾಣಿ ಎಲಜಬೆತ್‌ಜೊತೆ ಕುಣಿದ. ಮೂರನೆಯವನು ಮಾವೊ. (ಅದು ಕಲ್ಚರಲ್ ರೆವಲ್ಯೂಶನ್ನಿನ ಕಾಲ) ರೈತರನ್ನು ಕ್ರಾಂತಿಗೆ ಅಣಿಮಾಡಿದ.

ಜೇಮ್ಸ್‌ಮಾತಿನಲ್ಲಿ ಕೊಂಚ ವ್ಯಾಕುಲ ಕಾಣಿಸಿಕೊಂಡಿದ್ದು ನುಕ್ರುಮಾ ನಾಸರ್‌ ಬಗ್ಗೆ ಮಾತನಾಡುವಾಗ. ನುಕ್ರುಮಾ ಬಗೆಯ ಮೂರನೇ ಜಗತ್ತಿನ ನಾಯಕರಿಗೆ ಹೋರಾಟದ ಮೂಲಕ ದೊರಕುವ ರಾಜ್ಯ ಪ್ರಭುತ್ವ ಅಸಮಾನ್ಯವಾದ ಶಕ್ತಿ ಸಂಪತ್ತನ್ನು ತರುತ್ತದೆ ಅದರಿಂದಲೇ, (ಪ್ರಾಯಶಃ ಅನಿವಾರ್ಯವಾಗಿ?) ಅವರು ಹೇಗೆ ಬಹಳ ಬೇಗ ಸಂವೇದನಾ ಶೂನ್ಯರಾಗುತ್ತಾರೆಂಬುದು ಜೇಮ್ಸ್‌ನ ವ್ಯಾಕುಲತೆಯ ಕಾರಣ. ಈ ವ್ಯಾಕುಲ ಕೂಡ ಪ್ರಭುತ್ವದ ಜೊತೆಗಿನ ತನ್ನ ಒಡನಾಟದಿಂದಲೇ ಜೇಮ್ಸ್‌ಗೆ ಹುಟ್ಟಿದ್ದಿರಬೇಕು. ಮೂಲತಃ ಚಿಂತಕರೂ ಲೇಖಕರೂ ಆದವರು ತಾವೇ ಬೆಳೆಸಿದ, ಮೆಚ್ಚಿದ ರಾಜಕೀಯ ನಾಯಕರು ತಮ್ಮ ಕೈಮೀರಿ ಪ್ರಭುಗಳೇ ಆಗಿಬಿಡುವುದರ ದುರಂವನ್ನು ಅನುಭವಿಸಿರುತ್ತಾರೆ. ಎಡ್ವರ್ಡ್  ಸೈದ್ ಪಾಡೂ ಇದಾಯಿತು. ಆದರೆ ಅವರು ತಮ್ಮ ಸಾಮಾಜಿಕ ಕ್ರಾಂತಿಯ ಅಗತ್ಯದ ನಂಬಿಕೆ ಕಳೆದುಕೊಂಡಿರುವುದಿಲ್ಲ ಎನ್ನುವುದು ನಮಗೆ ಪ್ರಿಯವಾಗಬೇಕಾದ ಸೋಜಿಗ.

ನಾನು ‘ರಾಯ್ ಕೊನೆಯಲ್ಲಿ ಗಾಂಧಿಯನ್ನು ಒಪ್ಪಿಕೊಂಡಿದ್ದರು’ ಎಂದು ಹೇಳಿದೆ. ‘ಆದರೂ ಅವನು ಮೂಲತಃ ಸ್ಟಾಲಿನ್ ವಾದಿಯೇ. ಗೆದ್ದದ್ದನ್ನು ಆಮೇಲೆ ಒಪ್ಪಿಕೊಳ್ಳುವುದರಲ್ಲಿ ಹೆಚ್ಚುಗಾರಿಕೆ ಏನಿದೆ?’ –  ಜೇಮ್ಸ್‌ ನನಗೆ ಬೇಸರವಾಗದಂತೆ ನನ್ನ ಮಾತನ್ನು ತಳ್ಳಿಹಾಕಿದ್ದ.

ನಾನು ಲೋಹಿಯಾ ಬಗ್ಗೆ ಮಾತಾಡಿದೆ. ಜೇಮ್ಸ್‌ ಕೂಡ ಸಹಜ ಸ್ಫೂರ್ತಿಯಲ್ಲಿ ಜನ ದಂಗೆ ಎದ್ದು ಜಗತ್ತನ್ನು ಬದಲು ಮಾಡಬಲ್ಲರೆಂದು ನಂಬಿದ್ದ. ಬಾಲ್ಶೆವಿಕ್ ಮಾದರಿಯ ಕೇಂದ್ರೀಕೃತ ಕೇಡರ್‌ ಪಕ್ಷ ಕಟ್ಟುವುದರ ಅಪಾಯವನ್ನು ತೀಕ್ಷ್ಣವಾಗಿ ವಿರೋಧಿಸುತ್ತ ಇದ್ದ. ಕಪ್ಪು ಜನ ತಾವೇ ಒಗ್ಗಟ್ಟಾಗಿ ವರ್ಣಬೇಧವನ್ನು ವಿರೋಧಿಸುವುದು ಮುಖ್ಯ, ಈ ಸಂಘಟನೆ ಕಾರ್ಮಿಕ ಒಕ್ಕೂಟದ ಒಮದು ಅಂಗವಾಗಿರಲೇಬೇಕಿಲ್ಲ, ಆಗಿದ್ದರೆ ಒಳಿತು ಅಷ್ಟೇ ಎಂದು ತಿಳಿದಿದ್ದ.

ರಷ್ಯದ ವ್ಯವಸ್ಥೆ ವ್ಯಕ್ತಿಮೂಲದ ಬಂಡವಾಳಶಾಹಿಗೆ ಮಾತ್ರ ವಿರೋಧಿ, ಆದರೆ ಇನ್ನೂ ಅಪಾಯದ ಸ್ಟೇಟ್‌ಕ್ಯಾಪಿಟಲಿಸಂ ಆಗಿಬಿಟ್ಟಿದೆ ಎನ್ನುವ ಲೋಹಿಯಾ ಧೋರಣೆಗೂ ಜೇಮ್ಸ್‌ ಧೋರಣೆಗೂ ಬಹಳ ಸಾಮ್ಯಗಳಿದ್ದುವು. ಟ್ರಾಟ್ಸ್‌ ಕಿಯಿಂದಲೂ ಜೇಮ್ಸ್‌ ದೂರವಾಗಿದ್ದನೆ? ಆತ ಕಪ್ಪು ಜನರಿಗೊಂದು ತಾತ್ವಿಕ ಸಿದ್ಧಾಂತ ಕೊಟ್ಟವನಾದರೂ ಮೂಲತಃ ಅವರು ಪಾಶ್ಚಿಮಾತ್ಯ ದೃಷ್ಟಿಕೋನದಿಂದ ಪ್ರೇರಿತರಾದ ಚಿಂತಕರೆ? ಈ ಬಗೆಯ ಪ್ರಶ್ನೆಗಳನ್ನು ಲೋಹಿಯಾ ಬಗ್ಗೆಯೂ ಕೇಳುವವರಿದ್ದಾರೆ. ಸಹಜ ಸ್ಫೂರ್ತಿಯಿಂದ ಜನ ಬಂಡೆದ್ದು ತಮ್ಮ ಜಗತ್ತನ್ನು ಬದಲು ಮಾಡಿಕೊಳ್ಳುತ್ತಾರೆ, ಮತ್ತು ಕರಿಯರು, ಹೆಂಗಸರು ತಮ್ಮ ತಮ್ಮ ಹೋರಾಟಗಳನ್ನು ಮಾಡಬೇಕು, ಇದೇನೂ ಒಂದು ಕೇಂದ್ರೀಕೃತವಾದ ಬಾಲ್ಯವಿಕ್ ಪಕ್ಷದ ನಿರ್ದೇಶನದಲ್ಲಿ ನಡೆಯಬೇಕಿಲ್ಲ; ಹಾಗೆ ನಡೆದರೆ ಸ್ಟಾಲಿನ್‌ರಂಥವರನ್ನು ಪಕ್ಷ ಹುಟ್ಟಿಹಾಕುವುದು ಸಾಧ್ಯ ಎಂದು ನಂಬಿದವರಲ್ಲಿ ಜೇಮ್ಸ್‌ಕೂಡಾ ಒಬ್ಬ. ಅಮೆರಿಕಾದ ದಕ್ಷಿಣದ ಕರಿಯರು ತಮ್ಮದು ಬೇರೆ ರಾಷ್ಟ್ರವೇ ಆಗಬೇಕೆಂದು ಹೋರಾಡಬೇಕು ಎಂದು ಸ್ಟಾಲಿನ್ ತಿಳಿದಿದ್ದ; ಹಾಗೆ ಸೂಚಿಸಿದ್ದ ಕೂಡ. ಆದರೆ ಅಮೆರಿಕಾದ ಕರಿಜನರಿಗೆ ಬೇಕಾಗಿದ್ದದ್ದು ಒಕ್ಕೂಟ; ಪ್ರತ್ಯೇಕ ರಾಜ್ಯವಾಗಿರಲಿಲ್ಲ.

ಕೇಡರ್ ಪಕ್ಷಗಳ ಶಕ್ತಿಯೇನೆಂದು ಎಲ್ಲರಿಗೂ ಗೊತ್ತು. ನಮ್ಮಲ್ಲಿ ಕಮ್ಯುನಿಸ್ಟರು ಮತ್ತು ಬಿಜೆಪಿಯವರು ಕೇಡರ್ ಪಕ್ಷಿಗಳು. ಕಾಂಗ್ರೆಸ್ ಮಾಸ್ ಪಾರ್ಟಿ. ಕೇಡರ್ ಪಕ್ಷಿಗಳು ತಾವು ಅಧಿಕಾರದಲ್ಲಿದ್ದಾಗ ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ತಮ್ಮ ಹತೋಟಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತವೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಇದನ್ನು ಭಾರತಾದ್ಯಂತ ಶೈಕ್ಷಣಿಕ ಕ್ಷೇತ್ರದಲ್ಲಂತೂ ಮಾಡಿತು. ಎಲ್ಲ ಕೇಡರ್ ಪಕ್ಷಗಳನ್ನೂ ಅನುಮಾನಿಸುವ ನನ್ನ ಗೆಳೆಯರು ಹೇಳುವುದಿದೆ. ಬಿಜೆಪಿಯ ಚಿಂತಕರೆಂದುಕೊಳ್ಳುವ ಅವರ ಕೇಡರುಗಳು ಆಳವಾಗಿ ಯೋಚಿಸುವ ಶಕ್ತಿ ಪಡೆದವರಲ್ಲ. ಇಡೀ ಭಾರತದಲ್ಲಿ ಬಿಜೆಪಿ ತಾತ್ವಿಕತೆಯಿಂದ ಪ್ರಭಾವಿತನಾದ ಒಬ್ಬನೇ ಒಬ್ಬ ದೊಡ್ಡ ಲೇಖಕನಿಲ್ಲ; ತಾತ್ವಿಕನೂ ಇಲ್ಲ. ಆದರೆ ಕಮ್ಯುನಿಸ್ಟ್‌ ಮನೋಭೂಮಿಕೆಯಿಂದ ಬಂದ ಹಲವು ಚಿಂತಕರೂ ಲೇಖಕರೂ ಇದ್ದಾರೆ. ಬ್ರೆಕ್ಟ್‌ನಂಥವರಂತೂ ಕಮ್ಯುನಿಸ್ಟ್‌ ಸಿದ್ಧಾಂತವನ್ನು ಕೈಬಿಡದೆ ಅದನ್ನು ಇನ್ನಷ್ಟು –  ಮಾರ್ಕ್ಸನನ್ನೂ ಮೀರುವಂತೆ –  ಬೆಳೆಸುವುದು ಸಾಧ್ಯವಾಯಿತು.

ಇದು ನಿಜವೆನ್ನುತ್ತಲೇ ಸಿ ಎಲ್ ಆರ್‌ ಜೇಮ್ಸ್ ಒಪ್ಪಬಹುದು ಎನ್ನುವ ಒಂದು ಘಟನೆ ನೆನಪಾಗುತ್ತಿದೆ. ಕೇರಳದ ನಕ್ಸಲೈಟ್‌ ಧೀರೆ ಅಜಿತಾ ಹೆಸರು ನೀವು ಕೇಳಿರಬಹುದು. ಆಕೆ ಹಿಂಸೆಯ ದಾರಿ ಬಿಟ್ಟು ಮಹಿಳಾ ಜಾಗೃತಿಯಲ್ಲಿ ತೊಡಗಿಸಿಕೊಂಡಿದ್ದರು. ಒಮ್ಮೆ ನನಗೆ ಅವರು ಹೇಳಿದರು. ಇಲ್ಲಿ ಕೇರಳದಲ್ಲಿ ಹೆಂಗಸರನ್ನು ಒಟ್ಟುಮಾಡುವುದು ಕಷ್ಟ. ಕಮ್ಯುನಿಸ್ಟರು ತಮ್ಮ ವರ್ಗಸಿದ್ಧಾಂತದಲ್ಲಿ ಹೆಂಗಸರ ಹಿತರಕ್ಷಣೆಯೂ ಸೇರಿರುವುದರಿಂದ ಅದಕ್ಕೊಂದು ಪ್ರತ್ಯೇಕ ಸಿದ್ಧಾಂತದ ಅಗತ್ಯವಿಲ್ಲ ಎಂದು ನಮ್ಮ ಚಳವಳಿಗೆ ಅಡ್ಡಗಾಲು ಹಾಕುತ್ತಾರೆ.

ಬಂಗಾಳದ ಬಹು ಸಮರ್ಥ ಜ್ಯೋತಿ ಬಸುರವರನ್ನು ಯಾರೋ ಕೇಳಿದರಂತೆ: ‘ನಿಮ್ಮ ಕ್ಯಾಬಿನೆಟ್ಟಿನಲ್ಲಿ ಒಬ್ಬ ದಲಿತನೂ ಇಲ್ಲವಲ್ಲ?’ ಅದಕ್ಕವರು ಪ್ರಾಮಾಣಿಕವಾಗಿಯೇ ಹೇಳಿದರಂತೆ: ‘ನಾವು ಕಮ್ಯುನಿಸ್ಟರಾದ್ದರಿಂದ ನಾವೇ ದಲಿತರನ್ನೂ ಪ್ರತಿನಿಧಿಸುತ್ತೇವೆ’.

* * *

ಮುಂದೆ ಎಡ್ವರ್ಡ್‌ ಸೈದ್ ಬರೆದಂತಹ ಪುಸ್ತಕವನ್ನು ಆಗಲೇ ಜೇಮ್ಸ್‌ ಬರೆದಿದ್ದರು. ಕ್ರಿಕೆಟ್ ಬಗ್ಗೆ ಮತ್ತು ಮೆಲ್ವಿಲ್‌ನ ‘ಮೋಬಿ ಡಿಕ್’ ಬಗ್ಗೆ ಆತ ಬರೆದವು ಇಂದಿಗೂ ಪ್ರಸ್ತುತ. ನಮ್ಮ ಲೋಹಿಯಾ ಜೊತೆ, ಅಂಬೇಡ್ಕರ್‌ ಜೊತೆ ಓದಬೇಕಾದ ನಿಜವಾದ ‘ಇಂಟೆಲೆಕ್ಚುಯಲ್‌’ ಎಂದು ಕರೆಯಬಹುದಾದ ಸೃಜನಶೀಲ ಪ್ರತಿಭೆ ಸಿಎಲ್‌ಆರ್‌ ಜೇಮ್ಸನದು. ವೆಂಕಟರಾಮ್‌ ಜೊತೆ ಅವನನ್ನು ನೆನೆಯುವುದು ಸಾಧ್ಯವಾದ್ದು ನನ್ನ ಅದೃಷ್ಟ.

೩೦-೪-೨೦೦೬

* * *