ನಾನು ಮತ್ತು ಕೆ.ವಿ. ಸುಬ್ಬಣ್ಣ ಐವತ್ತು ವರ್ಷ ಜತೆಯಲ್ಲಿದ್ದೆವು. ನಮ್ಮ ಮಟ್ಟಿಗೆ ಸುಬ್ಬಣ್ಣನ ಮನಸ್ಸು ಹೇಗೆ ಕೆಲಸ ಮಾಡುತ್ತಿತ್ತು ಎಂಬುದು ಬಹಳ ಮುಖ್ಯ. ಅವನು ಇರುವಷ್ಟು ಕಾಲ ನಾವಿಬ್ಬರೂ ವಾರಕ್ಕೆ ಒಂದು ಸಾರಿಯಾದರೂ ಟೆಲಿಫೋನ್‌ನಲ್ಲಿ ವಾಗ್ವಾದ ನಡೆಸುತ್ತಿದ್ದೆವು. ಎಲ್ಲರಿಗೂ ಅಲ್ಲಮನ ಬಗ್ಗೆ ಬಹಳ ಹುರುಪಿದ್ದಾಗ – ಈ ಹುರುಪು ಬಂದಿದ್ದು ದಿವಂಗತ ಡಿ.ಆರ್. ನಾಗರಾಜನಿಂದ – ಒಂದು ದಿನ ನಾಗರಾಜ್ ಅಲ್ಲಮನ ಬಗ್ಗೆ ಮಾತನಾಡಿದರು. ಇದು ಸುಬ್ಬಣ್ಣನಿಗೂ ಇಷ್ಟವಾಯಿತು. ಆದರೆ ಸುಬ್ಬಣ್ಣ ನನಗೆ ಹೇಳಿದ್ದು ಹೀಗೆ: ‘ಅಲ್ಲಮ ಮತ್ತು ಕಾಳಿದಾಸನಲ್ಲಿ ನಾನು ಆಯ್ಕೆ ಮಾಡುವುದು ಕಾಳಿದಾಸನನ್ನು.’

ಸುಬ್ಬಣ್ಣನಿಗೆ ತುಂಬ ರ್ಯಾಡಿಕಲ್ ಆಗಿ ಕಾಣಿಸುವ ವಿಷಯಗಳ ಬಗ್ಗೆ ಒಂದು ಸಣ್ಣ ಅನುಮಾನವಿತ್ತು. ರ್ಯಾಡಿಕಲಿಸಂ ಅತಿಗೆ ಹೋಗುವ ಅಪಾಯವನ್ನು ನೋಡಿದ್ದರಿಂದಲೋ ಏನೋ ಅವನಿಗೆ ಅದರ ಬಗ್ಗೆ ಅನುಮಾನ ಇತ್ತು. ಅಲ್ಲಮನಲ್ಲೂ ಅಂಥದ್ದೊಂದು ರ್ಯಾಡಿಕಲಿಸಂ ಇದೆ.

ಒಂದು ಸಾರಿ ಸೋಫೋಕ್ಸಿಸ್‌ನ ನಾಟಕ  ನೋಡಿದಾಗಲೂ ಸುಬ್ಬಣ್ಣ ‘ಅನಂತ್‌ ನನಗೆ ಇವೆಲ್ಲಾ ಇಷ್ಟ ಆಗಲ್ಲ’ ಎಂದಿದ್ದ. ಇಷ್ಟ ಆಗಲ್ಲ ಎಂದರೆ ಇದು ತೀರಾ ವೈಯಕ್ತಿಕವಾದ ಇಷ್ಟಾನಿಷ್ಟದ ಮಾತು.

ಸುಬ್ಬಣ್ಣನ ಮನಸ್ಸಿನಲ್ಲಿ ಎಲ್ಲದಕ್ಕೂ ಅವಕಾಶ ಇತ್ತು. ಹಾಗಿಲ್ಲದಿದ್ದರೆ ಅವನಿಗೆ ನೀನಾಸಂ ಕಟ್ಟುವುದಕ್ಕೇ ಆಗುತ್ತಿರಲಿಲ್ಲ. ನೀನಾಸಂನಲ್ಲಿ ಸೋಪೋಕ್ಲಿ‌, ಷೇಕ್ಸ್‌ಪಿಯರ್, ಬೆಕೆಟ್, ಹೊಸ ನಾಟಕಕಾರರು, ಕನ್ನಡ ನಾಟಕಕಾರರು, ಇತರ ಭಾರತೀಯ ಭಾಷೆಗಳ ನಾಟಕಕಾರರು ಹೀಗೆ ಎಲ್ಲರಿಗೂ ಅಲ್ಲಿ ಅವಕಾಶ ಇತ್ತು. ಆದರೆ ಸುಬ್ಬಣ್ಣನ ಮನಸ್ಸಿನ ಆಯ್ಕೆಗಳು ಬೇರೆಯೇ. ವೈಯಕ್ತಿಕ ಆಯ್ಕೆಗಳಿಗೆ ಬಂದರೆ ಸುಬ್ಬಣ್ಣನದು ಕ್ಲಾಸಿಕಲ್ ಮೈಂಡ್. ಆದ್ದರಿಂದಲೇ ಸಂಘರ್ಷದ ಬಗ್ಗೆ ಅವನಿಗೆ ಅಂಥ ದೊಡ್ಡ ನಂಬಿಕೆ ಇರಲಿಲ್ಲ. ಯಾವ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಬದುಕಬಹುದು ಎಂಬುದರ ಶೋಧನೆ ಸುಬ್ಬಣ್ಣನದ್ದು. ಈ ಹೊಂದಾಣಿಕೆ ಒಂದು ರಾಜೀ ಅಲ್ಲ. ಇದನ್ನವನು ಅನುಸಂಧಾನ ಎಂದು ಕರೆಯುತ್ತಿದ್ದ.

ಕೊನೆಯ ದಿನ ಅವನ ಹತ್ತಿರ ಮಾತನಾಡಿದಾಗ ನಾನು ‘ನೀನು ಅನುಸಂಧಾನ ಅನುಸಂಧಾನ ಅನ್ನುತ್ತಲೇ ಇರುತ್ತೀಯ. ಭಿನ್ನ ಅಭಿಪ್ರಾಯಗಳ ನಡುವಣ ತೀವ್ರ ಘರ್ಷಣೆ ಮತ್ತು ಆಗ ಹುಟ್ಟುವ ಬಿಸಿ ಈ ಅನುಸಂಧಾನಕ್ಕೆ ಬಹಳ ಅಗತ್ಯ’ ಎಂದಿದ್ದೆ. ಅನುಸಂಧಾನ ಯಾವಾಗಲೂ ಈ ಘರ್ಷಣೆಯ ನಂತರದ ಬೆಳವಣಿಗೆ. ಅನುಸಂಧಾನಕ್ಕೆ ಮುನ್ನ ನಡೆಯುವ ಘರ್ಷಣೆಯಲ್ಲಿ ಎರಡೂ ಕಡೆಯೂ ಸೃಜನಶೀಲ ಶಕ್ತಿ ಅನಾವರಣಗೊಳ್ಳುತ್ತದೆ. ಈ ತರ್ಕವನ್ನು ಇಟ್ಟುಕೊಂಡು ನಾನು ‘ಘರ್ಷಣೆಯಲ್ಲಿ ಜನ್ಮ ತಳೆಯುವ ಸೃಜನಶೀಲಶಕ್ತಿಯ ಕುರಿತು ಕಡಿಮೆ ಆಸಕ್ತಿ ತೋರಿಸಿದರೆ ಕೊನೆಗೊಂದು ದಿನ ನೀನು ಸೃಜನಶೀಲತೆಯ ಬಗ್ಗೆಯೇ ವಾಗ್ವಾದ ಸುಬ್ಬಣ್ಣನ ಜತೆಗೆ ಮಾತ್ರ ಸಾಧ್ಯ. ಏಕೆಂದರೆ ಅವನ ಮನಸ್ಸಿನಲ್ಲಿ ಹಲವು ವಿಷಯಗಳಿಗೆ ಅವಕಾಶವಿತ್ತು.

ನಾವೆಲ್ಲಾ ಇತ್ತೀಚೆಗೆ ಬರೀ ಕಲ್ಚರ್ ಅಂದರೆ ಸಂಸ್ಕೃತಿಯ ಬಗ್ಗೆಯೇ ಮಾತನಾಡುತ್ತಿದ್ದೇವೆ. ತುಳುವಿಗೊಂದು ಸಂಸ್ಕೃತಿ ಇದೆ. ಕೊಡವಕ್ಕೊಂದು ಸಂಸ್ಕೃತಿ ಇದೆ. ಹೀಗೆ ನೋಡುತ್ತಾ ಹೋದರೆ ಭಾರತದಲ್ಲಿ ಸಾವಿರಾರು ಸಂಸ್ಕೃತಿಗಳು ಸಿಗುತ್ತವೆ. ಸರಳವಾಗಿ ಹೇಳಿದರೆ ನಾವೆಲ್ಲಾ ಜೀವಿಸುವುದು ಈ ಬಗೆಯ ಸಂಸ್ಕೃತಿಗಳಲ್ಲೇ. ಆದರೆ ಈ ಎಲ್ಲಾ ಸಂಸ್ಕೃತಿಗಳನ್ನೂ ಒಳಗೊಳ್ಳುವುದು ನಾಗರಿಕತೆ. ಈ ನಾಗರಿಕತೆಯ ಬಗ್ಗೆ ಮಾತಾಡುವುದಕ್ಕೆ ಲೇಖಕರಾದ ನಾವೆಲ್ಲಾ ಹಿಂಜರಿಯುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ಈ ನಾಗರಿಕತೆ ಎಂಬುದು ತುಂಬಾ ಪೊಲಿಟಿಸೈಸ್ ಆಗಿರುವ ಪರಿಕಲ್ಪನೆ. ಸಂಘ ಪರಿವಾರ ಹಿಂದೂ ನಾಗರೀಕತೆಯ ಬಗ್ಗೆ ಅತಿಯಾಗಿ ಮಾತನಾಡಿ ನಾವು ನಾಗರಿಕತೆಯ ಬಗ್ಗೆ ಏನು ಮಾತನಾಡಿದರೂ ಅವರ ಮಾತುಗಳೇ ಕೇಳುವಂಥ ಅಬ್ಬರವಾಗಿಬಿಡುತ್ತದೆ. ಈ ಅಪಾಯವನ್ನು ಮೊದಲೇ ಊಹಿಸಿಕೊಂಡು ನಾವು ಅದರ ಬಗ್ಗೆ ಮಾತನಾಡುವುದನ್ನೇ ಬಿಟ್ಟಿದ್ದೇವೆ. ಆದರೆ ಸುಬ್ಬಣ್ಣನಿಗೆ ಈ ಸಮಸ್ಯೆ ಯಾವತ್ತೂ ಕಾಡಿರಲಿಲ್ಲ. ಅವನಿಗೆ ನಿತ್ಯದ ಧ್ಯಾನದ ವಿಷಯವಾಗಿ ಭರ್ತೃಹರಿ ಇದ್ದ. ಕಾಳಿದಾಸ ಇದ್ದ. ಧ್ವನ್ಯಾಲೋಕ ಇತ್ತು.ಕನ್ನಡದಲ್ಲಿ ಅವನು ಬಹಳ ಇಷ್ಟಪಡುತ್ತಿದ್ದದ್ದು ಪಂಪನನ್ನು.

* * *

ನಾನು ಮತ್ತು ಸುಬ್ಬಣ್ಣ ಲಿಂಗಾಯತರ ಮಠವೊಂದಕ್ಕೆ ಹೋಗಿದ್ದೆವು. ಅಲ್ಲಿ ಅವನು ಧೈರ್ಯವಾಗಿ ಹೇಳಿದ ಮಾತು ಇದು; ‘ಬಸವ, ಬಸವ ಎಂದೇ ಬಡಬಡಿಸುತ್ತಿರಬೇಡಿ. ಕನ್ನಡದಲ್ಲಿ ಬಸವನಿಗೆ ಹೊರತಾದದ್ದೂ ಇದೆ.’ ಇದು ನಾವೆಲ್ಲಾ ಪೊಲಿಟಿಕಲಿ ಇನ್‌ಕರೆಕ್ಟ್ ಎಂದು ಕರೆಯಬಹುದಾದ ಹೇಳಿಕೆ. ಆದರೆ ಸುಬ್ಬಣ್ಣನಿಗೆ ಈ ಭಯ ಇರಲಿಲ್ಲ. ಈ ಭಯ ಇಲ್ಲದೇ ಇರುವುದರ ಕಾರಣ ನಾನು ಮೊದಲೇ ಹೇಳಿದಂತೆ ಸುಬ್ಬಣ್ಣನದ್ದು ಕ್ಲಾಸಿಕಲ್ ಆದ ಮನಸ್ಸು.

ಕ್ಲಾಸಿಕಲ್ ಆದ ಮನಸ್ಸು ಬಹಳ ಸುಲಭದಲ್ಲಿ ಭೂತದ ಪುನರ್‌ಸೃಷ್ಟಿಯನ್ನು ಬಯಸುವ ಮನಸ್ಸೂ ಆಗಿಬಿಡಬಹುದು. ಇದು ಬಹಳ ಅಪಾಯಕಾರಿಯಾಗಿಬಿಡುತ್ತದೆ. ಸುಬ್ಬಣ್ಣನದ್ದು ಇಂಥ ನೇತ್ಯಾತ್ಮಕ ಕ್ಲಾಸಿಕಲ್ ಮನಸ್ಸಲ್ಲ. ಅದು ಬಹಳ ಇತ್ಯಾತ್ಮಕವಾದದ್ದು. ಅವನು ಭೂತದ ಕನಸುಗಳು, ಭರವಸೆಗಳನ್ನು ಜೀವಂತಗೊಳಿಸುತ್ತಿದ್ದನೇ ಹೊರತು ಭೂತವನ್ನು ಪುನರ್ ಸೃಷ್ಟಿಸಲು ಹೊರಡುತ್ತಿರಲಿಲ್ಲ. ಈ ಸ್ಪಷ್ಟತೆ ಇದ್ದರೆ ವೇದ, ಉಪನಿಷತ್ತು, ಕಾಳಿದಾಸ, ಭಾಸ, ಕುರಾನ್ ಹೀಗೆ ಯಾವುದಕ್ಕೆ ಬೇಕಾದರೂ ಹೋಗಿ ಆ ಕಾಲವನ್ನು ಪುನರ್ ಸೃಷ್ಟಿಸಲು ಹೊರಡುವ ರಿವೈವಲಿಸ್ಟ್ ಆಗದೆ ಉಳಿಯಬಹುದು.

ಕಮ್ಯುನಿಸ್ಟರು ಬಹಳ ಕೆಟ್ಟ ಶಬ್ದ ಎಂದು ತಿಳಿದಿರುಬ ರಿವಿಷನಿಸ್ಟ್ ಎಂಬ ಪದವನ್ನು ನಾನು ಒಳ್ಳೆಯ ಪದ ಎಂದು ತಿಳಿದುಕೊಂಡಿದ್ದೇನೆ. ಈ ಅರ್ಥದಲ್ಲಿ ಸುಬ್ಬಣ್ಣ ಮಹಾನ್ ರಿವಿಷನಿಸ್ಟ್. ಭಾಸ, ಕಾಳಿದಾಸ, ಪಂಪರನ್ನೆಲ್ಲಾ ವರ್ತಮಾನಕ್ಕೆ ಹೇಗೆ ಅನ್ವಯಿಸಬಹುದು ಎಂಬುದನ್ನು ಸುಬ್ಬಣ್ಣ ಶೋಧಿಸಿ ತೋರಿಸಿದ. ಅಷ್ಟೇಕೆ ಬಂಡಾಯದ ಅಬ್ಬರದಲ್ಲಿ ನಾವು ಮರೆತೇಬಿಟ್ಟಿದ್ದ ಪುತಿನ ಹೇಗೆ ಪ್ರಸ್ತುತರಾಗುತ್ತಾರೆ ಎಂಬುದನ್ನು ‘ಗೋಕುಲ ನಿರ್ಗಮನ’ದಲ್ಲಿ ಅನಾವರಣಗೊಳಿಸಿದ. ಭಾರತದ ಗ್ರಾಮೀಣ ಸಂಸ್ಕೃತಿಯಲ್ಲಿ ಕಂಡುಬಂದ ನಗರೀಕರಣದೆಡೆಗಿನ ಸ್ಥಿತ್ಯಂತರವನ್ನು ಕಾಳಿದಾಸನ ಮೂಲಕ ಅರ್ಥ ಮಾಡಿಕೊಳ್ಳುವ ಸುಬ್ಬಣ್ಣನ ಪ್ರಯತ್ನ ಕೂಡಾ ಬಹಳ ಮುಖ್ಯವಾದುದು. ಕಾಳಿದಾಸ ಒಬ್ಬ ಗ್ರಾಮೀಣ ಸಂಸ್ಕೃತಿಯ ಲೇಖಕನಲ್ಲ. ಅವನ ಕಲ್ಪನೆಗಳೆಲ್ಲವೂ ನಗರದ ಸಂಸ್ಕೃತಿಯ ಪ್ರತೀಕಗಳೇ ಎಂಬುದರ ಹಿನ್ನೆಲೆಯಲ್ಲಿ ಸುಬ್ಬಣ್ಣನ ಪ್ರಯತ್ನವನ್ನು ಅರ್ಥಮಾಡಿಕೊಳ್ಳಬೇಕು.

* * *

ನಾವು ವರ್ತಮಾನದ ಬಗ್ಗೆ ಆತಂಕ ಪಡಬೇಕಾದದ್ದು ಬಹಳ ಅಗತ್ಯ. ವರ್ತಮಾನದ ಆತಂಕಗಳಿಗೆ ನಾವು ಜೀವಕೊಟ್ಟು ಸ್ಪಂದಿಸಬೇಕು. ಆದರೆ ಭವಿಷ್ಯದ ಬಗ್ಗೆ ಆತಂಕ ಪಡುವುದು ಒಂದು ರೀತಿಯ ದುರಹಂಕಾರ ಆಗಿಬಿಡುತ್ತದೆ ಎಂಬ ಸಂಶಯ ನನಗಿದೆ. ನಮ್ಮ ಎಲ್ಲಾ ರಾಜಕೀಯ ಸಿದ್ಧಾಂತಿಗಳ ದೊಡ್ಡ ಸಮಸ್ಯೆ ಎಂದರೆ ಅವರ ಆತಂಕಗಳೆಲ್ಲಾ ಭವಿಷ್ಯಕ್ಕೆ ಮಾತ್ರ ಸೀಮಿತವಾಗಿವೆ. ಭವಿಷ್ಯವನ್ನು ನಿರ್ಮಿಸುವವರು ನಾವೇ ಎಂಬ ಅಹಂಕಾರದಲ್ಲಿ ಈ ಆತಂಕಗಳು ಮೊಳಕೆಯೊಡೆಯುತ್ತವೆ.

ಪರಮ ವಿನಯವಿರುವ ಸೃಜನಶೀಲ ಮನಸ್ಸು ನಮ್ಮದಾಗಿದ್ದರೆ ನಾವು ಇಂದಿಗಾಗಿ ಆತಂಕಪಡುತ್ತೇವೆಯೇ ಹೊರತು ನಾಳೆಗಾಗಿಯಲ್ಲ. ನಾವು ಅನೇಕರು ಭವಿಷ್ಯದ ಕುರಿತ ಆತಂಕವನ್ನು ಪೊಲಿಟಿಕಲಿ ಕರೆಕ್ಟ್ ಆಗಿರುವ ವರ್ತನೆಯನ್ನಾಗಿಸಿಕೊಂಡಿದ್ದೇವೆ. ಹೀಗೆ ಭವಿಷ್ಯದ ಕುರಿತ ಆತಂಕ ಅತಿಯಾಗಿರುವುದರಿಂದಲೇ ಹಿಂಸೆ ಇತ್ಯಾದಿಗಳೆಲ್ಲವೂ ಹೆಚ್ಚಿದೆ ಅನ್ನಿಸುತ್ತಿದೆ. ಸುಬ್ಬಣ್ಣನ ಆತಂಕಗಳೆಲ್ಲವೂ ವರ್ತಮಾನಕ್ಕೆ ಸಂಬಂಧಿಸಿದವು. ‘ಮುಂದೆ ಕನ್ನಡ ಅಲ್ಲದೇ ಇದ್ದರೆ ಇನ್ಯವುದಾದರೂ ಭಾಷೆ ಮಾತನಾಡುತ್ತಾರೆ’ ಎಂದು ಲಘುವಾಗಿ ಹೇಳುವ ಧೈರ್ಯ ಸುಬ್ಬಣ್ಣನಿಗಿತ್ತು. ಆದರೆ ಕನ್ನಡದ ಅನೇಕ ಆಧುನಿಕ ಭಾಷಾವಿಜ್ಞಾನಿಗಳು ‘ಋ’ ಅಕ್ಷರವನ್ನು ಕನ್ನಡ ವರ್ಣಮಾಲೆಯಿಂದ ಕೈಬಿಡುವ ಬಗ್ಗೆ ಚಿಂತಿಸುತ್ತಿದ್ದಾಗ ಸುಬ್ಬಣ್ಣನಿಗೆ ಆತಂಕವಾಗಿಬಿಟ್ಟಿತ್ತು. ಅವನು ವರ್ತಮಾನದ ಕನ್ನಡಕ್ಕೆ ‘ಋ’ ಅಗತ್ಯ ಎಂದು ವಾದಕ್ಕಿಳಿದಿದ್ದ. ನಾನು ತುಮಕೂರು ಸಾಹಿತ್ಯ ಸಮ್ಮೇಳನಾಧ್ಯಕ್ಷನಾಗಿ ಆಯ್ಕೆಯಾದಾಗ ‘ನಿನ್ನ ಭಾಷಣದಲ್ಲಿ ‘ಋ’ ಬಿಡಬೇಡಿ ಅಂತ ಹೇಳು’ ಎಂದು ಒತ್ತಾಯಿಸಿದ್ದ. ಸುಬ್ಬಣ್ಣನ ಆತಂಕಗಳೆಲ್ಲವು ವರ್ತಮಾನದ ಆತಂಕಗಳಿಗೆ ಮಾತ್ರ ಸೀಮಿತವಾಗಿದ್ದರೆಇಂದ ಭವಿಷ್ಯದ ಬಗ್ಗೆ ಆತಂಕಪಡುವವರಿಗೆ ಇದ್ದ ಗರ್ವ ಅವನಿಗೆ ಇರಲಿಲ್ಲ.

ಸುಬ್ಬಣ್ಣ ಯಾವಾಗಲೂ ಒಂದು ಭಾರತೀಯವಾದ ಮನಸ್ಸಿನ ಹುಡುಕಾಟದಲ್ಲಿದ್ದ. ಇದು ನಮ್ಮ ಕ್ಲಾಸಿಕ್‌ಗಳಲ್ಲಿದೆ ಎಂದೇನೂ ಅವನು ಭಾವಿಸಿರಲಿಲ್ಲ. ಜಾನಪದದಲ್ಲೂ ಇದರ ಅಸ್ತಿತ್ವವನ್ನು ಅವನು ಗುರುತಿಸಿದ್ದ. ಹಾಗೆಯೇ ಜಾನಪದ ಎನ್ನುವುದು ಕ್ಲಾಸಿಕ್‌ಗಿಂತ ಸಂಪೂರ್ಣ ಭಿನ್ನವಾದುದು ಎಂಬುದನ್ನು ಅವನು ಒಪ್ಪುತ್ತಿರಲಿಲ್ಲ. ಇವೆರಡೂ ಒಂದು ಮತ್ತೊಂದರ ಜತೆ ಸದಾ ಅನುಸಂಧಾನದಲ್ಲಿ ತೊಡಗಿಕೊಂಡಿವೆ ಎಂಬುದು ಅವನ ನಿಲುವು.

ಸದ್ಯದ ಬಗ್ಗೆ ಆತಂಕ ಪಡುತ್ತಾ ಸದ್ಯದ ಬೆಳವಣಿಗೆಗಳನ್ನು ಔದಾರ್ಯದಲ್ಲಿ ನೋಡುತ್ತಾ ಭವಿಷ್ಯದ ಬಗೆಗೆ ಪಡುವ ಆತಂಕದಿಂದ ಹುಟ್ಟುವ ಗರ್ವವನ್ನು ನಿಗ್ರಹಿಸಿಕೊಂಡು ವಿನಯದಿಂದಿರುತ್ತಾ ಹೇಗೆ ಕೆಲಸ ಮಾಡಬೇಕು ಎಂಬುದು ಸುಬ್ಬಣ್ಣನ ಬಹಳ ಮುಖ್ಯ ಧ್ಯೇಯವಾಗಿತ್ತು. ಆದ್ದರಿಂದಲೇ ಕೆಲವರಿಗೆ ಸುಬ್ಬಣ್ಣ ವೈದಿಕ ಮನಸ್ಸಿನ ಮನುಷ್ಯ. ಇದನ್ನು ಅವನಿಗೇ ಹೇಳಿದ್ದರೂ ಆತನೇನು ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ. ಹಾಗೆಯೇ ಅಂದುಕೊಳ್ಳಿ ಎಂದುಬಿಡುತ್ತಿದ್ದ.

ಆದರೆ ಸುಬ್ಬಣ್ಣನಿಗೆ ತಾನು ವೈದಿಕ ಅಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಿತ್ತು. ಅಸ್ಪೃಶ್ಯತೆಯ ಬಗ್ಗೆ ಆತನಿಗೆ ಯಾರಿಗೂ ಸಾಧ್ಯವಿಲ್ಲದೇ ಇರುವಂಥ ಒಂದು ಸಿಟ್ಟಿತ್ತು. ಇದರ ಜತೆಗೇ ಅವನಿಗೆ ಇನ್ನೊಂದು ರೀತಿಯ ವಿನಯವೂ ಇತ್ತು. ಒಂದು ದಿನ ನಾವಿಬ್ಬರೂ ಅಸ್ಪೃಶ್ಯತೆಯ ಬಗ್ಗೆ ಒಂದು ದೊಡ್ಡ ವಾಗ್ವಾದ ನಡೆಸಿದೆವು. ಕೊನೆಯಲ್ಲಿ ಅವನು ಹೇಳಿದ: ‘ಅಸ್ಪೃಶ್ಯತೆಯ ನಿವಾರಣೆ ಆಗಬೇಕು ನಿಜ. ಆದರೆ ನನ್ನ ಸಮಸ್ಯೆಯನ್ನು ಸ್ವಲ್ಪ ಕೇಳು. ಮೊದಲು ಅವರು ಹೊರಗಡೆ ನಿಂತು ಮಾತನಾಡುತ್ತಾ ಇದ್ದರು. ನಾನವರನ್ನು ಅಂಗಳದ ಒಳಕ್ಕೆ ಕರೆದುಕೊಂಡು ಬಂದಿದ್ದೀನಿ. ಇನ್ನು ಮನೆಯೊಳಕ್ಕೆ ಕರೆದುಕೊಂಡು ಬರುವುದು ಸಾಧ್ಯವೋ? ಇಲ್ಲವೋ? ಅನ್ನುವುದು ನನ್ನ ಸಮಸ್ಯೆ. ಅದನ್ನು ನಾನು ಮನಸ್ಸಿನಲ್ಲಿ ಇಟ್ಟುಕೊಂಡೇ ಉಳಿದಿದ್ದನ್ನು ಮಾತನಾಡುತ್ತೇನೆ.’

ಇದು ಸುಬ್ಬಣ್ಣನ ವಿನಯ. ನಮ್ಮಲ್ಲಿ ಇಂಥದ್ದೊಂದು ವಿನಯ ಇಲ್ಲದಿದ್ದರೆ ನಾವು ಪೊಲಿಟಿಕಲಿ ಕರೆಕ್ಟ್ ಆಗಿರುತ್ತಾ ನಾವು ಏನನ್ನು ಅಂದುಕೊಳ್ಳುವುದಿಲ್ಲವೋ ಅದನ್ನು ಹೇಳುತ್ತಿರುತ್ತೇವೆ. ಸುಬ್ಬಣ್ಣ ತಾನಂದುಕೊಳ್ಳದೇ ಇರುವ ಯಾವುದನ್ನೂ ಹೇಳುತ್ತಿರಲಿಲ್ಲ.

* * *

ನಾನು ಸಮಾಜವಾದಿ, ಉಗ್ರವಾದಿ ಹೀಗೆ ಏನೇನೋ ಆಗಿದ್ದ ಕಳೆದ ಐವತ್ತು ವರ್ಷಗಳಲ್ಲಿ ಸುಬ್ಬಣ್ಣನಂಥ ಗೆಳೆಯ ನನಗಿದ್ದದ್ದು ನನ್ನ ಪುಣ್ಯ. ಅವನ ಜತೆ ನನ್ನ ತಲ್ಲಣಗಳನ್ನು ಹಂಚಿಕೊಳ್ಳಬಹುದಿತ್ತು. ಅದರ ಮೂಲಕ ಮತ್ತೆ ಸಹಜ ಸ್ಥಿತಿಗೆ ಮರಳಬಹುದಿತ್ತು.

ಈ ಸಹಜ ಸ್ಥಿತಿ ಎಂಬುದು ಬಹಳ ಮುಖ್ಯ. ಸಹಜವಾದ ಮಟ್ಟದ ಹೃದಯ ಬಡಿತ ಮನುಷ್ಯನಿಗೆ ಅನಿವಾರ್ಯವಾಗಿರುವಂತೆ ಸಹಜವಾದ ಸಾಂಸ್ಕೃತಿಕ ಮಿಡಿತದ ಅಗತ್ಯವೂ ಇದೆ.

ಇಂಥದ್ದೊಂದು ಸಾಂಸ್ಕೃತಿಕ ಮಿಡಿತವಿಲ್ಲದೆ ಒಂದು ಸಂಸ್ಥೆಯನ್ನು ಕಟ್ಟುವುದಕ್ಕೆ ಸಾಧ್ಯವಿಲ್ಲ. ಒಂದು ದೊಡ್ಡ ಸಂಸ್ಥೆಯಾಗಬೇಕೆಂದರೆ ಅದು ಎಲ್ಲವನ್ನೂ ಒಳಗೊಳ್ಳುವ ಶಕ್ತಿಯನ್ನು ಪಡೆದಿರಬೇಕು. ಅದಕ್ಕೆ ಸುಬ್ಬಣ್ಣನಿಗೆ ಇದ್ದಂಥ ಮನೋಭೂಮಿಕೆ ಇರಬೇಕು. ಅಂದರೆ ಅಲ್ಲಮನನ್ನು ನಾನು ಇಷ್ಟಪಡುತ್ತೇನೆ, ಆದರೆ ಕಾಳಿದಾಸನೇ ನನಗೆ ಅಚ್ಚುಮೆಚ್ಚು ಎಂದು ಹೇಳುವ ಧೈರ್ಯ ಇರಬೇಕು.

ನಮ್ಮ ಮೇಲೆ ಸಂಸ್ಕೃತದ ಪ್ರಭಾವ ಎಷ್ಟೇ ಇದ್ದರೂ ಪಶ್ಚಿಮದ ಒತ್ತಡ ಎಷ್ಟೇ ಹೆಚ್ಚಾಗಿದ್ದರೂ ನಾವು ನಮ್ಮತನವನ್ನು ಉಳಿಸಿಕೊಂಡು ಎರಡಕ್ಕೂ ಸ್ಪಂದಿಸುತ್ತಾ ಬದುಕುವ ಕ್ರಮವನ್ನು ಸುಬ್ಬಣ್ಣ ಹೆಗ್ಗೋಡಿನಲ್ಲಿ ಹುಡುಕುತ್ತಿದ್ದ, ಕನ್ನಡದಲ್ಲೂ ಹುಡುಕುತ್ತಿದ್ದ. ಅವನ ಈ ಹುಡುಕಾಟ ಬಹಳ ಹಳೆಯದ್ದು. ನಾನು ಇಂಗ್ಲಿಷ್ ಆನರ್ಸ್‌ಮಾಡುತ್ತ ಇಂಗ್ಲಿಷ್‌ನ ದೊಡ್ಡ ದೊಡ್ಡ ಲೇಖಕರ ಬಗ್ಗೆ ಹೇಳುತ್ತಿದ್ದರೆ ನನಗೆ ಆತ ಪಂಪನನ್ನೂ ರತ್ನಾಕರವರ್ಣಿಯನ್ನೂ ಪೂರ್ತಿಯಾಗಿ ಓದಿ ಹೇಳಿದ್ದ. ನಾನು ಹೇಳುವುದಕ್ಕೆಲ್ಲಾ ಆತ ‘ಅವೆಲ್ಲಾ ಇಲ್ಲೂ ಇದೆ. ಧ್ವನ್ಯಾಲೋಕದಲ್ಲಿ ಇದಕ್ಕೆ ಉತ್ತರವಿದೆ’ ಎಂದು ಅದನ್ನು ಹುಡುಕಿಯೂ ಬಿಡುತ್ತಿದ್ದ.

ಸುಬ್ಬಣ್ಣನಂಥ ಇನ್ನೊಂದು ಕ್ಲಾಸಿಕಲ್ ಮನಸ್ಸು ನಮಗೆ ಸಿಗುವುದು ಬಹಳ ಕಷ್ಟ.ನಾನು ಮೊದಲೇ ಹೇಳಿದಂತೆ ಕ್ಲಾಸಿಕಲ್ ಮನಸ್ಸು ಸ್ವಲ್ಪ ಆಯ ತಪ್ಪಿದರೂ ಬರೇ ಗೊಡ್ಡು ಸಂಪ್ರದಾಯವಾದೀ ಮನಸ್ಸೂ ಆಗಿಬಿಡಬಹುದು. ಸುಬ್ಬಣ್ಣ ಕೊನೆಯ ತನಕವೂ ಆಯ ತಪ್ಪದೆ ನಿಜವಾದ ಅರ್ಥದ ಭಾರತೀಯ ಮನಸ್ಸನ್ನು ಉಳಿಸಿಕೊಂಡಿದ್ದ.

೨೫೨೦೦೭

* * *