ಡಬ್ಲ್ಯು ಎಚ್ ಆಡೆನ್ ಎಂಬ ಕವಿ ಬರೆದ ಒಂದು ಕವನ ನನಗೆ ಬಹಳ ಮೆಚ್ಚುಗೆಯಾದ್ದು. Musee des Beaux Arts ಎಂಬ ಈ ಪದ್ಯದಲ್ಲಿ ಪುರಾತರನು ನಿಜ ತಿಳಿದ ಮಾಸ್ತರರು (Masters). ಈ ಪೂರ್ವಸೂರಿಗಳು ಪೂರ್ಣಪ್ರಜ್ಞರು. ಮಾನವನ ದಾರುಣ ದುಃಖದ ನಿಜ ಸ್ವರೂಪದ ಸಾಕ್ಷಿಗಳು. ಅವರಿಗೆ ಗೊತ್ತಿದೆ: ಅತ್ಯಂತ ದಾರುಣವಾದ ಒಂದು ಘಟನೆ ನಡೆಯುವ ಹೊತ್ತಿನಲ್ಲೇ ಯಾರೋ ಊಟ ಮಾಡುತ್ತಿರುತ್ತಾರೆ. ಯಾರೋ ಕಿಟಕಿಯ ಬಾಗಿಲು ತೆರೆಯುತ್ತಿರುತ್ತಾರೆ. ಯಾರೋ ಉದಾಸೀನದಲ್ಲಿ ನಡೆದಾಡುತ್ತಿರುತ್ತಾರೆ. ಹಾಗೆಯೇ ದೇವರ ಪುನರಾವತಾರದ ದಿವ್ಯ ಮುಹೂರ್ತಕ್ಕಾಗಿ ಆತುರದಲ್ಲಿ ವೃದ್ಧರಾದ ಭಕ್ತರು ಕಾಯುತ್ತಿರುವಾದ ಇಂಥದೇನೂ ಮುಖ್ಯವೆಂದು ತಿಳಿಯದ ಮಕ್ಕಳು ತೋಟದಲ್ಲಿನ ಕೊಳದ ದಂಡೆಯ ಮೇಲೆ ಜಾರುತ್ತ, ಕುಂಟುತ್ತ ಆಟವಾಡುತ್ತಿರುತ್ತಾರೆ. ಏಸುಕ್ರಿಸ್ತು ಶಿಲುಬೆಗೇರುವುದು ಯಾವುದೋ ಕೊಳೆ ಕಸಗಳು ತುಂಬಿದ ಒಂದು ಮೂಲೆಯಲ್ಲಿ. ಆ ಹೊತ್ತಿಗೆ ಯಾವುದೋ ಬೀದಿ ನಾಯಿ ತನ್ನ ಎಂದಿನ ನಾಯಿಪಾಡಿನಲ್ಲಿ ಅಲೆಯುತ್ತಿರುತ್ತದೆ. ಮರಣ ದಂಡನೆಯನ್ನು ಚಲಾಯಿಸಲು ಬಂದವನ ಕುದುರೆ ತನ್ನ ಮುಗ್ಧ ಅಂಡನ್ನು ಯಾವುದೋ ಮರಕ್ಕೆ ತುರಿಕೆ ಕಳೆಯಲು ಬಾಲವೆತ್ತಿ ಉಜ್ಜಿಕೊಳ್ಳುತ್ತಿರುತ್ತದೆ. ಅಪೂರ್ವವೆಂದು ನಮಗೆ ಅನ್ನಿಸುವುದು ಜರಗುವುದು ನಿತ್ಯದ ನಿರಂತರದ ಸಂದರ್ಭದಲ್ಲಿ, ಅದರ ನಿರ್ಲಕ್ಷ್ಯದಲ್ಲಿ ಕೂಡ.

ಹದಿನಾರನೇ ಶತಮಾನದ ಬ್ರೂಗೆಲ್ ಎಂಬ ಕಲಾವಿದನ ಇಕಾರೆಸ್ ಎಂಬ ಚಿತ್ರವನ್ನು ಉದಾಹರಣೆಯಾಗಿ ಆಡೆನ್ ಕೊಡುತ್ತಾನೆ. ಚಿತ್ರದ ಕತೆ ಹೀಗಿದೆ. ಡೆಡಾಲಸ್ ಎನ್ನುವ ಕುಶಲಕರ್ಮಿ ತನ್ನ ದೊರೆಗೆ ಕಲ್ಪಿಸಿ ಕೊಟ್ಟ ವ್ಯೂಹದಲ್ಲಿ ತಾನೇ ಬಂಧಿಯಾಗಿರುತ್ತಾನೆ – ಮಗ ಇಕಾರಸ್‌ನ ಜೊತೆ. ಈ ಮಗನಿಗೆ ಕುಶಲಕರ್ಮಿಯಾದ ತಂದೆ ರೆಕ್ಕೆಗಳನ್ನು ಸೃಷ್ಟಿಸಿ ಅಂಟಿಸಿ ವ್ಯೂಹದಿಂದ ಪಾರಾಗಲು ಅವಕಾಶ ಮಾಡಿಕೊಡುತ್ತಾನೆ. ಬಾಲನಾದ ಇಕಾರೆಸ್ ಹಾರುತ್ತಾ ಹಾರುತ್ತಾ ಸೂರ್ಯನಿಗೆ ಹತ್ತಿರವಾಗಿ ರೆಕ್ಕೆಯ ಮೇಣ ಕರಗಿ ಕೆಳಗೆ ಬೀಳುತ್ತಾನೆ. ಈ ದೃಶ್ಯವನ್ನು ಬ್ರೂಗಲ್ ಚಿತ್ರಿಸಿದ್ದಾನೆ. ಈ ಚಿತ್ರದಲ್ಲಿ ತನ್ನ ಭೂಮಿಯನ್ನು ಉಳುತ್ತಿರುವ ರೈತನೊಬ್ಬನಿದ್ದಾನೆ. ತನ್ನ ಪಾಡಿಗೆ ತನ್ನ ಕೆಲಸವನ್ನು ಮಾಡಿಕೊಳ್ಳುತ್ತಿರುವ ಈ ರೈತನಿಗೆ ಇಕಾರೆಸ್ಸಿನ ರೋದನ ಕೇಳಿದ್ದೀತು; ಅವನು ಸಮುದ್ರಕ್ಕೆ ದೊಪ್ಪೆಂದು ಬಿದ್ದು ಮುಳುಗುವಾಗಿನ ಶಬ್ದವೂ ಕೇಳಿದ್ದೀತು. ಆದರೆ ರೈತನಿಗೆ ಇದೇನೂ ಅಷ್ಟು ಮುಖ್ಯವಾದ ನಷ್ಟವಲ್ಲ; ತನ್ನ ಉಳುವ ಕಾಯುಕದಲ್ಲಿ ಅವನು ಮಗ್ನ. ಸಮುದ್ರದ ಹಸಿರಾದ ನೀರಿನಲ್ಲಿ ಮುಳುಗುತ್ತಿರುವ ಇಕಾರಸ್‌ನ ಬಿಳಿಯ ಪಾದಗಳ ಮೇಲೆ ಸೂರ್ಯನ ಹೊಳೆಯುವ ಕಿರಣಗಳು ಬಿದ್ದಿವೆ –  ನಿರುದ್ದೇಶವಾಗಿ, ಅನಿವಾರ್ಯವಾಗಿ. ಈ ಚಿತ್ರದಲ್ಲಿ ಶ್ರೀಮಂತವೆಂದು ತೋರುವ ಅಚ್ಚುಕಟ್ಟಿನ ಹಡಗೊಂದು ತೇಲುತ್ತಿದೆ. ಹಡಗಿನಲ್ಲಿ ಕೂತವರು ಬಾಲನೊಬ್ಬ ಆಕಾಶದಿಂದ ಅನಾಮತ್ತಾಗಿ ಬೀಳುವ ಭೀಕರವಾದ ದೃಶ್ಯವೊಂದನ್ನು ನೋಡಿರಬಹುದು. ಆದರೆ ಆ ಹಡಗಿಗೆ ತನ್ನದೇ ಆದ ಗೊತ್ತು ಗುರಿಗಳಿವೆ; ಚಲಿಸುತ್ತಲೇ ಇರಬೇಕಾದ್ದು ಅದರ ಪಾಡು.

ಎರಡನೇ ಮಹಾಯುದ್ಧದ ಸಮಯದಲ್ಲಿ ಆಡೆನ್‌ ಬರೆದ ಈ ಪದ್ಯ ಸರ್ವಗ್ರಾಹಿಯಾದ ಎಪಿಕ್ ಕಲ್ಪನೆಯ ಚಿತ್ರವೊಂದನ್ನು ನಮ್ಮ ಎದುರು ಇಡುತ್ತದೆ. ಈ ಪದ್ಯ ನನ್ನನ್ನು ಯಾವಾಗಲೂ ಕಾಡುತ್ತದೆ. ಈ ಪದ್ಯವನ್ನು ಧಾರುಣ ಮಾಡುವ ಪ್ರತಿಮೆ ಒಬ್ಬ ಮುಗ್ಧ ಬಾಲಕನ ಆಕಸ್ಮಿಕವಾದ ಅರ್ಥಶೂನ್ಯವಾದ ಸಾವಿನದು. ತನ್ನ ಪಾಡಿಗೆ ತಾನಿರುವ ಈ ಚಿತ್ರದ ಜಿವಿಗಳೂ ಕೇಡಿಗರಲ್ಲ. ಆದರೆ ಪದ್ಯದಲ್ಲಿ ಕ್ರಿಸ್ತನನ್ನು ಕೊಲ್ಲುವುದೂ, ಕ್ರಿಸ್ತನೊಬ್ಬ ಹುಟ್ಟುವುದೂ, ಇದರ ಸುತ್ತ ತಮ್ಮ ಪಾಡಿಗೆ ತಾವಿರುವ ಬದುಕಿನ ದೈನಿಕ ಸತ್ಯಗಳೂ ಬರುತ್ತವೆ. ಇಲ್ಲಿ ಆರೋಪವಿಲ್ಲ; ತಟಸ್ಥವೂ, ಪ್ರಾಯಶಃ ಇದು ಇರುವುದೇ ಹೀಗೆಂಬ ಸರ್ವಸ್ವೀಕಾರದ ನೋಟವೂ ಇದೆ.

ನಾವೀಗ ನಿತ್ಯ ಎದುರಾಗುತ್ತಿರುವ ಉದ್ದೇಶ ಪೂರ್ವಕವಾದ ದೌರ್ಜನ್ಯಗಳನ್ನು, ಸಂಕಟಗಳನ್ನು ಆಡೆನ್ನಿನ ಪೂರ್ವಸೂರಿಗಳ ಕಣ್ಣಿನಿಂದ ನೋಡುವುದು ಸಾಧ್ಯವೆ? ಮುಂಬೈಯಲ್ಲಿ ಸ್ಫೋಟವಾಗಿ ಜನ ಸಾಯುತ್ತಾರೆ. ವಿದ್ಯಾರ್ಥಿಗಳ ಗುಂಪೊಂದು ಪ್ರೊಫೆಸರ್‌ ಒಬ್ಬರನ್ನು ದಬ್ಬಿ ಬಡಿದು ಕೊಲ್ಲುತ್ತಾರೆ. ಗಣಿಯೊಂದರಲ್ಲಿ ಬಡ ಕಾರ್ಮಿಕರು ಸಿಕ್ಕಿಬಿದ್ದು ಉಸಿರು ಕಟ್ಟಿ ಸಾಯುತ್ತಾರೆ. ಇವೆಲ್ಲವನ್ನೂ ಕಾಣುತ್ತಲೇ ದುಃಖ ಪಡುತ್ತಲೇ ಹಾಗೆಂದು ಮಾತಾಡುತ್ತಲೇ ನಮ್ಮ ದೈನಿಕಗಳಲ್ಲಿ ನಾವು ಮತ್ತೆ ತೊಡಗಿರುತ್ತೇವೆ. ಈ ದಾರುಣ ಪ್ರಸಂಗಗಳು ಜರಗುವಾಗ ಯಾವುದೋ ಬೀದಿಯ ಬದಿಯಲ್ಲಿ ಒಬ್ಬ ಕಡಲೆಕಾಯಿ ಮಾರುತ್ತಾ ಕೂತಿರುತ್ತಾನೆ. ಯಾರೋ ಕೆಲಸವಿಲ್ಲದ ಸೋಮಾರಿ ನೊಣ ಹೊಡೆದುಕೊಂಡು ಬಿಸಿಲು ಕಾಯುತ್ತಾನೆ. ಟೆಲಿವಿಷನ್‌ನಲ್ಲಿ ಈ ರುದ್ರ ಘಟನೆಗಳನ್ನು ನೋಡುವಾಗಲಂತೂ ನಡು ನಡುವೆ ಕಮರ್ಷಿಯಲ್ ಬ್ರೇಕ್‌ಗಳು ಇರುತ್ತವೆ: ಆಗ ಕಪ್ಪು ತಲೆಗೂದಲಿನ ಬಿಳಿಗಡ್ಡದ ಬಚ್ಚನ್‌ ಬಂದು ಸೋಪು ಮಾರುತ್ತಾನೆ. ಸಚಿನ್ ಟೈರು ಮಾರುತ್ತಾನೆ. ಅಮೀರ್ ಖಾನ್‌ ಕೋಕ್ ಮಾರುತ್ತಾನೆ. ಶಾರೂಖ್ ಪೆಪ್ಸಿ ಮಾರುತ್ತಾನೆ. ಮತ್ತೆ ಬೆಂಕಿಯಲ್ಲಿ ಉರಿಯುತ್ತಿರುವ ಬಸ್ಸುಗಳನ್ನು ನೋಡುತ್ತೇವೆ. ಗಾಯದಿಂದ ವಿಕಾರವಾದ ಮುಖಗಳನ್ನು ನೋಡುತ್ತೇವೆ. ಸತ್ತ ಬಾಲಬಾಲೆಯರ ಹೆಣಗಳನ್ನು ನೋಡುತ್ತೇವೆ.  ಮತ್ತೆ ಬ್ರೇಕ್ ಸಿಗುತ್ತದೆ. ನಮ್ಮನ್ನು ಕುತೂಹಲದಲ್ಲಿ ಕಾಯುವಂತೆ ಶಾರ್ಟ್ ಬ್ರೇಕ್ ಎಂದು ಪುಸಲಾಯಿಸುವ ಸುಕುಮಾರಿಯ ಕೋರಿಕೆಯಲ್ಲಿ. ಮತ್ತೆ ವಿದ್ವಜ್ಜನರಿಂದ ಇನ್ನೊಂದು ಕಮರ್ಷಿಯಲ್ ಬ್ರೇಕ್‌ಗೆ ಅಡ್ಡಿಯಾಗದಂತೆ ವಿಶ್ಲೇಷಣೆಯ ಖಂಡನೆ ಮಂಡನೆಗಳು ನಡೆಯುತ್ತವೆ.

ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್‌ ಮೇಲೆ ವಿಮಾನ ಬಂದು ಅಪ್ಪಳಿಸಿ ಅಲ್ಲಿನ ನೂರಾರು ಜನರನ್ನು ಭಸ್ಮಗೊಳಿಸಿದ್ದನ್ನು ಸ್ವೀಡನ್ನಿಗೆ ಹೋಗಲು ಕಾಫಿ ಕುಡಿಯುತ್ತಾ ಕಾದು ಕೂತ ನಾನು ಏರ್‌ಪೋರ‍್ಟಿನಲ್ಲಿ ನೋಡಿದ್ದು. ಅದೊಂದು ಮಾನವ ಹೃದಯವನ್ನೇ ಬದಲು ಮಾಡಬಹುದಾದ ಘಟನೆಯಾಗಿತ್ತು. ಆದರೆ ನಾವೆಲ್ಲರೂ ಮಾಡಬೇಕಾದ ಕೆಲಸಗಳನ್ನು ಮಾಡುತ್ತಲೇ ಹೋದೆವು. ಅಮೆರಿಕ ಅಂತೂ ತನ್ನ ಮುಂದಿನ ಕೆಲಸಗಳಿಗೆ ಈ ಭಯಂಕರ ಘಟನೆಯನ್ನು ಒಳ್ಳೆಯ ನೆವ ಮಾಡಿಕೊಂಡು ಬಳಸಲು ಶುರು ಮಾಡಿತು.

ನಾವು ಭಾರತೀಯರು ಕರ್ಮವನ್ನು ನಂಬುತ್ತೇನೆ. ಕರ್ಮಕ್ಕೆ ತಕ್ಕ ಫಲ ಸಿಗುತ್ತದೆ ಎಂದು ತಿಳಿಯುತ್ತೇವೆ. ವರ್ಲ್ಡ್ ಟ್ರೇಡ್ ಸೆಂಟರ್‌ರನ್ನು ದುಷ್ಕರ್ಮಿಗಳು ನಾಶಮಾಡಿದ ಹಿನ್ನೆಲೆಯಲ್ಲಿ ಅಮೆರಿಕಾದ ಹಲವು ಪಾಪಕೃತ್ಯಗಳು ಇವೆ. ಪಾಲೆಸ್ಟೀನ್, ಚಿಲಿ, ಹಿರೋಷಿಮಾ, ನಾಗಸಾಕಿ – ಒಂದೇ ಎರಡೇ? ಹಲವು ಮುಗ್ಧರು ಅಮೆರಿಕಾದಲ್ಲಿ ಸತ್ತರು. ಹಲವು ಬಡಪಾಯಿಗಳು ಪಾಲಿಸ್ಟೇನಿನಲ್ಲಿ ಸತ್ತರು. ಚಿಲಿಲ್ಲಿ ಸತ್ತರು. ಮುಸ್ಲಿಮ್ ದೊರೆಗಳು ನವಾಬರು ಬಲವಾದರು. ಇದರಿಂದ ಅಮೆರಿಕಾ ಕಲಿತದ್ದೇನು? ಬದಲಾಗಿ, ಟೆರರಿಸಂನನ್ನು ನಾಶಮಾಡುವ ನೆವದಲ್ಲಿ ಅಮೆರಿಕಕ್ಕೆ ಸಿಕ್ಕ ಫಲ ನೋಡಿ. ಆಫ್ಘಾನಿಸ್ಥಾನ ಅವರ ಕೈವಶವಾಯಿತು. ಇರಾಕ್ ಅವರ ಕೈವಶವಾಯಿತು. ಪಾಕಿಸ್ತಾನ ಮತ್ತು ಭಾರತ ಪರಸ್ಪರ ಶಾಂತಿಯನ್ನು ಬಯಸುವುದೂ ಅಮೆರಿಕದ ಅಭಿವೃದ್ಧಿಗೆ ಅಗತ್ಯವಾದಂತಾಯಿತು. ಈಗ ಬುಶ್‌ನ ಖ್ಯಾತಿ ಸ್ವಲ್ಪ ತಗ್ಗಿದೆಯಂತೆ. ಆದರೆ ಇನ್ನೊಬ್ಬ ಬಂದು ಅವನ ಜಾಗದಲ್ಲಿ ಕುಳಿತು ಅನಿವಾರ್ಯವೆಂಬಂತೆ ತನ್ನ ಹಿಂದಿನವರು ಮಾಡಿದ್ದನ್ನೇ ಮುಂದುವರಿಸುತ್ತಾನೆ. ಕಮರ್ಷಿಯಲ್ ಬ್ರೇಕ್‌ಗಳು ಆಗೀಗ ಇದ್ದೇ ಇರುತ್ತವೆ.

ನಾನು ತುಂಬ ಇಷ್ಟಪಡುವ ಹಲವು ಅಮೆರಿಕನ್ ಮಿತ್ರರು ನನಗಿದ್ದಾರೆ. ಇವರೆಲ್ಲರೂ ಬುಶ್‌ನನ್ನು ಕಟುವಾಗಿ ಟೀಕಿಸುತ್ತಾರೆ. ಆದರೂ ಆಡೆನ್‌ ತನ್ನ ಪದ್ಯದಲ್ಲಿ ಹೇಳುವಂತೆ ತನ್ನ ಪಾಡಿಗೆ ಸಾಗುವ ಜೀವನ ಸಾಗುತ್ತಲೇ ಇರುತ್ತದೆ. ಅಮೆರಿಕ ಒಂದು ದೇಶವಾಗಿ ಒಂದು ಅಂಗಿಯನ್ನು ತಾನೇ ತಯಾರು ಮಾಡಿ ಪ್ರಪಂಚದಲ್ಲಿ ಮಾರಲಾರದು. ಅವರೇ ಒಂದು ಅಂಗಿಯನ್ನು ಹೊಲಿದು ಸಿದ್ಧಪಡಿಸುವುದಾದರೆ ಈಗ ಇರುವ ಬೆಲೆಯ ಹತ್ತರಷ್ಟಾದರೂ ಅಂದೇ ಅಂಗಿಯ ಬೆಲೆಯಾಗಿರುತ್ತದೆ. ಅಂಗಿ, ಚೆಡ್ಡಿ, ಚಹಾ, ಕಾಫಿ, ಗೋಧಿ ಮಾರಿ ಅವರು ಸಮೃದ್ಧರಾಗಿರುವುದಿಲ್ಲ; ಅವರ ಶ್ರೀಮಂತಿಕೆಯ ಮೂಲವಿರುವುದು ಅವರು ಮಾರುವ ಯುದ್ಧ ಸಾಮಗ್ರಿಗಳಲ್ಲಿ. ಈ ಯುದ್ಧ ಸಾಮಗ್ರಿಗಳನ್ನು ಬಳಸುವುದಕ್ಕಾಗಿಯೇ ಆಫ್ಘಾನಿಸ್ಥಾನ್, ಇರಾಕ್‌ನಲ್ಲಿ ಅವರೇ ಸಮಸ್ಯೆಯನ್ನು ಹುಟ್ಟುಹಾಕಿ, ಅದು ತಮ್ಮ ಮೇಲೆಯೆ ಎರಗುವಂತೆ ಮಾಡಿಕೊಂಡು, ಅದನ್ನು ನಿವಾರಿಸಿಕೊಳ್ಳಲು ಮತ್ತಷ್ಟು ಯುದ್ಧ ಸಾಮಗ್ರಿಗಳನ್ನು ಸೃಷ್ಟಿಸಿ, ರಾಷ್ಟ್ರಗಳ ನಡುವೆ ಇಲ್ಲದ ಜಗಳವನ್ನು ಹುಟ್ಟು ಹಾಕಿ ಅಮೆರಿಕ ಹಿಗ್ಗುತ್ತಿದೆ. ಈಗ ಅದರ ಕಣ್ಣು ಇರಾನಿನ ಮೇಲೆ. ಇದನ್ನು ತಡೆಯಬಲ್ಲವರು ಯಾರು? ಶ್ರೇಷ್ಠವೆಂದು ನಾವು ಮೆಚ್ಚುವ ದೊಡ್ಡ ವಿದ್ಯಾಸಂಸ್ಥೆಗಳು, ನೊಬೆಲ್ ಪಾರಿತೋಷಕ ಪಡೆದ ಮಹಾ ವಿದ್ವಾಂಸರು, ಇವರು ನಡೆಸುವ ಹೊಸ ಪ್ರಯೋಗಗಳು –  ಎಲ್ಲದಕ್ಕೂ ಅಮೆರಿಕಾವೇ ಈಗ ತಾಣ. ಯೂರೋಪಿನ ಘನ ವಿಜ್ಞಾನಿಗಳೂ ತಮ್ಮ ಸಂಶೋಧನೆಗಳನ್ನು ಪ್ರಕಟಿಸುವ ಭಾಷೆ ಕ್ರಮೇಣ ಅಮೆರಿಕಾದ ಇಂಗ್ಲಿಷಿನಲ್ಲಿ ಎಂದು ಕೇಳಿದ್ದೇನೆ. ಅದರ ಸಂಸ್ಕೃತಿ ಈಗ ಸರ್ವವ್ಯಾಪಿ – ಅದರ ಕೋಕೋಕೋಲಾದಂತೆ, ಕೆಂಟಕಿ ಚಿಕನ್‌ನಂತೆ, ತರಹೇವಾರಿ ಬರ್ಗರ್‌ನಂತೆ.

ಅಮೆರಿಕದ ರಾಜಕೀಯ ನೀತಿಯನ್ನು ಟೀಕಿಸುವ ಸದ್ಗೃಹಸ್ಥರೇ ತಮ್ಮ ದೇಶದಲ್ಲಿ ಕಷ್ಟದ ಜೀವನ ನಡೆಸಬೇಕಾಗಿ ಬರುವುದನ್ನು ಸಹಿಸಿಕೊಳ್ಳಲಾರರೇನೋ? ಅಮೆರಿಕದಲ್ಲಿ ಆದಾಯತೆರಿಗೆ ಹೆಚ್ಚಿಸುವಂತಿಲ್ಲ; ಬ್ರೆಡ್ಡು ಹಾಲಿನ ಬೆಲೆ ಏರುವಂತಿಲ್ಲ; ಪೆಟ್ರೋಲ್ ಬೆಲೆಯಂತೂ ಏರುವುದು ಸಾಧ್ಯವೇ ಇಲ್ಲ. ಸಾಯಲೇ ಬೇಕಾದ ಇಳಿವಯಸ್ಸಿನಲ್ಲಿ ಯಾರೂ ಸಾಯುವಂತಿಲ್ಲ. ಮುದಿಯಾಗುವುದು ತೋರದಂತೆ ಮಾಡುವ ಅಮರ್ತ್ಯರಾಗುವ ಕನಸಿನ ಭ್ರಮಾದೇವಲೋಕ ಆಧುನಿಕ ಅಮೇರಿಕಾ.

ಯಾರೋ ಕೆಲವು ದುಷ್ಟರ ಸಂಚಿನಿಂದ ಹೀಗೆಲ್ಲಾ ಆಗುತ್ತಿದೆ, ಮನುಷ್ಯನ ಸ್ವಭಾವವೇ ಹೀಗೆ ಇತ್ಯಾದಿ ಕಾರಣಗಳನ್ನು ಕೊಟ್ಟು ಸಮಾಧಾನಪಡಬಲ್ಲ ವಿಷಯವಲ್ಲ ಇದು. ಪಿ. ಸಾಯಿನಾಥ್‌ಎನ್ನುವ ಧೀಮಂತ ಚಿಂತಕರೊಬ್ಬರು ‘ದಿ ಹಿಂದೂ’ ಪತ್ರಿಕೆಯಲ್ಲಿ ಮೂರು ಸೆಪ್ಟೆಂಬರ್ ೧೧ ಗಳು ಇವೆ, ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಿ ಎನ್ನುತ್ತಾರೆ.

* * *

ಆಡೆನ್‌ ಮಾಸ್ತರರೆಂದು ಕರೆಯುವ ಪೂರ್ವಸೂರಿಗಳು ತಮ್ಮ ಪೂರ್ಣದೃಷ್ಟಿಯಲ್ಲಿ ಥಟ್ಟನೆ ಎದುರಾಗುವ ದುರಂತವನ್ನು ನಿತ್ಯದ ನಿರಂತರ ಉಸಿರಾಟದ ದೈನಿಕಗಳ ಸಂದರ್ಭದಲ್ಲಿಟ್ಟು ದುರಂತಗಳು ಹರಿಯುವ ಜೀವನದಲ್ಲಿ ಅನಿವಾರ್ಯವಾಗಿ ಒದಗಿ ಬರುವ ಆಕಸ್ಮಿಕಗಳಲ್ಲ. ನಾವೇ ನಮ್ಮ ದುರಾಸೆಯಲ್ಲೂ ಸರ್ವಶಕ್ತರೆನ್ನುವ ಗರ್ವದಲ್ಲೂ ಖುದ್ದಾಗಿ ಸೃಷ್ಟಿಸುವ ಕ್ರೂರ ದುರಂತಗಳು. ಆದ್ದರಿಂದ, ಅಮೆರಿಕಾದ ಧೀರ ಚಿಂತಕ ನೋಮ್‌ ಚಾಮ್‌ಸ್ಕಿಯ ಹಾಗೆ ನಾವು ಸತ್ಯ ಪಕ್ಷಪಾತಿಯಾಗಿ ಹೋರಾಡುತ್ತಲೇ ಇರಬೇಕಾಗುತ್ತದೆ. ಆದ್ದರಿಂದ ಸಾಯಿನಾಥರು ನ್ಯೂಯಾರ್ಕ್‌‌ನಲ್ಲಿ ೨೦೦೨ ರಲ್ಲಿ ನಡೆದ ಘಟನೆಯ ಜತೆ ಚಿಲಿಯಲ್ಲಿ ಒಂದು ಹೊಸ ಯುಗಕ್ಕಾಗಿ ಸಮಾಜವಾದಿ ಸಾಲ್ವಡೋರ್ ಅಲಂಡೆ ಮಾಡಿದ ಹೋರಾಟವನ್ನು ನೆನೆಯುತ್ತಾರೆ. ಈ ಸಮಾಜವಾದೀ ಪ್ರಯತ್ನವನ್ನು ಅಮೆರಿಕ ನಾಶ ಮಾಡಿದ್ದೂ ಸೆ.೧೧ ರಂದೇ. ಆಶ್ಚರ್ಯವೆಂದರೆ, ಇದೇ ಸೆ.೧೧ ನೇ ತಾರೀಕು ೧೦೦ ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದ ಜೋಹನ್ನೆಸ್‌ನಲ್ಲಿ ಗಾಂಧೀಜಿ ಸತ್ಯಾಗ್ರಹವನ್ನು ಪ್ರಾರಂಭಿಸಿದರು ಎಂಬುದನ್ನು ನಮ್ಮ ಮನಸ್ಸು ಕಲಕುವಂತೆ ಸಾಯಿನಾಥರು ನೆನಪು ಮಾಡುತ್ತಾರೆ.

ನಮ್ಮನ್ನು ನಾಶಮಾಡುತ್ತಿರುವ ಭಯೋತ್ಪಾದಕರ ಬಳಿ ಇರುವ ಗನ್ನುಗಳು ಅಮೆರಿಕನ್ನರೇ ತಾಲಿಬಾನ್‌ಗಳಿಗೆ ಒದಗಿಸಿದಂಥವು. ಆದರೆ ಸದ್ದಾಂಗ ಹುಸೇನನ ಬಳಿ ಇವು ಯಾವುವೂ ಇರಲಿಲ್ಲ. ಅವನು ಬಹಳ ಹಿಂದೆ ಅಮೆರಿಕದಿಂದ ಪಡೆದ ಅಂತಹ ಮಾರಕ ಅಸ್ತ್ರಗಳನ್ನು ಇರಾನಿನ ಮೇಲೆ ಬಳಸಿ ಕಳೆದುಕೊಂಡಿದ್ದ. ಅವನೂ ಒಬ್ಬ ದುಷ್ಟನೇ. ದೇಸೀ ದುಷ್ಟ ಅವನಾದರೆ ಅಮೇರಿಕಾದ ಬುಷ್ ಗೌರವಾನ್ವಿತ ಅಂತರಾಷ್ಟ್ರೀಯ ದುಷ್ಟ. ಇಲ್ಲದ weapons of mass destruction ಹುಡುಕುವ ನೆವದಲ್ಲಿ ಇರಾಕರನ್ನು ಅಮೇರಿಕಾ ವಶಪಡಿಸಿಕೊಂಡು –  ಪೆಟ್ರೋಲಿಗಾಗಿ. ಆದರೆ ಗಾಂಧೀಜಿ ನೂರು ವರ್ಷಗಳ ಹಿಂದೆ ಇದೇ ದಿನ weapons of mass destruction ನ್ನು ಅನಾವರಣಗೊಳಿಸಿದರು –  ಕೆಡುಕಿನಿಂದ ಮಾನವನನ್ನು ಮುಕ್ತಗೊಳಿಸಲಿಕ್ಕಾಗಿ ಎನ್ನುತ್ತಾರೆ ಸಾಯಿನಾಥರು.

* * *

ನಾವೆಲ್ಲಾ ಸಮುದ್ರ ಮಂಥನದ ಕಥೆ ಕೇಳಿರುತ್ತೇವೆ. ಆಗ ಹುಟ್ಟಿದ ಹಾಲಾಹಲವನ್ನು ಶಿವ ತನ್ನ ಗಂಟಲಿನಲ್ಲಿ ಸ್ವೀಕರಿಸಿದ್ದನ್ನು ಓದಿದ್ದೇವೆ. ಹೀಗೆ ಅಮೃತದ ಬಟ್ಟಲಿಗಾಗಿ ನಡೆಯುವ ಹೋರಾಟವಂತೂ ನಮ್ಮ ಪುರಾಣಗಳಲ್ಲಿ ಬಹಳ ಕಾಲ ಸಾಗಿತು. ಇದರಲ್ಲಿ ಗೆದ್ದವರು ದೇವತೆಗಳಾದರು. ಸೋತವರು ರಾಕ್ಷಸರಾದರು. ಹೀಗಾದ ನಂತರ ನಾವು ದೇವತೆಗಳು ಗೆದ್ದರು ರಾಕ್ಷಸರು ಸೋತರು ಎಂದುಕೊಳ್ಳುವುದು ಸಾಧ್ಯವಾಗಿ ಸಾಧುವೂ ಆಯಿತು.

ಈಗಿನ ಅಮೃತದ ಬಟ್ಟಲು ಪೆಟ್ರೋಲ್ ಸಿಗುವ ಜಾಗಗಳು. ಪೈಪೋಟಿಯಲ್ಲಿ ಈಗ ಸೋವಿಯತ್‌ ರಾಕ್ಷಸನಿಲ್ಲ. ಅಥವಾ ಪೆಟ್ರೋಲಿಗೆ ಸಂಬಂಧಿಸಿದಂತೆ ಯಾವತ್ತೂ ರಾಕ್ಷಸರೂ ಇರಲಿಲ್ಲ. ದೇವತೆಗಳೂ ಇರಲಿಲ್ಲ. ಅಮೆರಿಕ ತನ್ನೊಳಗೇ ಎರಡನ್ನೂ ಇಟ್ಟುಕೊಂಡಂತೆ ನಮ್ಮೆಲ್ಲರಿಗೆ ಆಕರ್ಷಕವಾದ ತಾಣವೂ ಆಗಿದೆ, ಭಯೋತ್ಪಾದನೆಯನ್ನು ಉಂಟು ಮಾಡುವ ತಾಣವೂ ಆಗಿದೆ. ಮಾರಕ ಅಸ್ತ್ರಗಳ ಸೃಷ್ಟಿಯಿಂದಲೇ ಒಂದು ಅರ್ಥ ವ್ಯವಸ್ಥೆ ಸಮೃದ್ಧವಾಗುವುದು ಅಸಾಧ್ಯವಾಗದ ಹೊರತು ಕಾಮರೂಪಿಯಾದ ಅಮೆರಿಕ ಬದಲಾಗದು.

ಹಿಂಸೆಗೆ ಪ್ರತಿಹಿಂಸೆ ಮಾಡುವ ದೃಶ್ಯಗಳನ್ನು ಬೆಪ್ಪಾಗಿ ಕಮರ್ಷಿಯಲ್‌ ಬ್ರೇಕ್‌ಗಳ ನಡುವೆ ನೋಡುತ್ತಿರುವ ನಾನು ಹಿಂದಿನ ಒಂದು ಲೇಖನದಲ್ಲಿ ಸೂಚಿಸಿದ ರೂಪಕವನ್ನು ಮತ್ತೆ ನೆನೆಯಲು ಇಚ್ಛಿಸುತ್ತೇನೆ. ಕೆಡುಕನ್ನು ನೋಡಬೇಡ, ಕೆಡುಕನ್ನು ಕೇಳಿಸಿಕೊಳ್ಳಬೇಡ, ಕೆಡುಕನ್ನು ಮಾತಾಡಬೇಡ ಎಂದು ಕಣ್ಣು ಕಿವಿ ಬಾಯಿಗಳನ್ನು ಮುಚ್ಚಿಕೊಂಡ ಮೂರು ಮಂಗಗಳನ್ನು ಆದರ್ಶ ಮಾಡಿಕೊಂಡಿದ್ದ ಗಾಂಧೀಜಿ ಇದ್ದದ್ದು ಮಾತ್ರ ಸತತ ಕ್ರಿಯಾಶೀಲನಾಗಿ, ಸಾಯುವ ತನಕ ಕೆಡುಕನ್ನು ಸತತವಾಗಿ ಎದುರಿಸದ ಸತ್ಯಾಗ್ರಹಿಯಾಗಿ, ವಿರೋಧಾಭಾಸದಂತೆ ಕಾಣುವ, ಆದರೆ ಒಂದಕ್ಕೊಂದು ಪೂರಕವಾದ, ಈ ರೂಪಕದಲ್ಲಿರುವ ನಾವು ಪಡೆಯಬೇಕಾದ ಅಂತರಂಗ ಶುದ್ಧತೆ ಮತ್ತು ಬಹಿರಂಗ ಮಾತ್ರವಾಗದ ಕ್ರಿಯಾಶೀಲತೆ ಅನಾವರಣಗೊಂಡ ನೂರು ವರ್ಷಗಳ ಹಿಂದಿನ ಸೆಪ್ಟಂಬರ್ ೧೧ ಜಗತ್ತಿಗೆ ಮುಖ್ಯವಾದೀತೆ? ಕವಿ ಆಡೆನ್ ಕಾಣುವ ಸಮದರ್ಶಿಯ ನೋಟವನ್ನು ಒಳಗೊಂಡೇ ಅದನ್ನು ಮೀರುವ ಧ್ಯಾನಶೀಲವೂ ಆದ ನಾಗರಿಕ ಸಮಾಜವೊಂದು ಜಗತ್ತಿನಲ್ಲಿ ಸೃಷ್ಟಿಯಾದೀತೆ?

ಈ ಭೂಮಿ ಉಳಿಯಲೆಂದಾದರೂ ಅಮೆರಿಕಾದ ವೈಭವದಿಂದ ಅಮೆರಿಕಾವೇ ದಣಿದೀತೆ?

* * *

ನನ್ನನ್ನೇ ನಾನು ಕೆಣಕಿಕೊಳ್ಳಲು ಈ ಮೂರು ರೂಪಕಗಳನ್ನು ಎದುರಿಗಿಟ್ಟು ಕೊಂಡಿದ್ದೇನೆ: ೧. ಆಡನ್ನಿನ ಸರ್ವಗ್ರಾಹಿ ಪೂರ್ವಸೂರಿಗಳ ಸಮದರ್ಶಿತ್ವ ೨. ದೌರ್ಜನ್ಯಗಳನ್ನು ಸಂಕಟಗಳನ್ನು ಕಮರ್ಷಿಯಲ್ ಬ್ರೇಕ್‌ಗಳ ಮಾರುವ ಕೊಳ್ಳುವ ಸಂಭ್ರಮಗಳ ನಡುವೆ ಕಾಣುವ, ಆಡೆನ್ ಬಗೆಯ ಕಾಣುವಿಕ ವಿಕೃತಗೊಂಡ ನಮ್ಮ ಸರ್ವಸ್ವೀಕಾರದ ದೈನಿಕ ೩. ಪೂರ್ಣಶುದ್ಧಿಯ ಸ್ಥಿತಪ್ರಜ್ಞ ಆದರ್ಶದಲ್ಲಿ ಮೂರು ಮಂಗಗಳನ್ನು ಧ್ಯಾನಿಸುತ್ತಲೇ ಮೌನವನ್ನು ಸತ್ಯಾಗ್ರಹದ ಅಸ್ತ್ರ ಮಾಡಿಕೊಂಡ ಅರೆಬೆತ್ತಲೆಯ ಫಕೀರ.

೨೪೨೦೦೬

* * *