ಸೂತ್ರಧಾರ : ಕೇಳೊ ಹಡದಪ್ಪ ಮಾತಾ
ಅಣ್ಣ ಹ್ವಾದನೊ ಎತ್ತಾ
ಕೈಯಾರೆ ಮುಗಿವೆನು ಕಾಲಾರೆ ಬೀಳುವೆನು
ಕೊಲ್ಲಬ್ಯಾಡಯ್ಯಾ ವ್ಯರ್ಥ.
ಬಣ್ಣದ ಘನ ಕರಗಿ
ನೆರಳಾಗಿ ಹರಿದಾವೊ
ನಾನಲ್ಲದನ್ನವು | ಅಲ್ಲದ ಭಿನ್ನವು
ಮೂಡಿ ಮುಳುಗುವವಯ್ಯಾ
ಹಿಂದನರಿಯದ ಮೂಢ ಮುಂದೇನ ತಿಳಿವೇನೊ
ತಿಳಿದು ತಿಳಿಸುವ ಗುರುವ | ಅರಸಿ ಅಲೆದಾಡುವೆನೊ
ಉಳಿಸೊ ಅಲ್ಲಿಯತನಕ.
(ಸೂತ್ರಧಾರನ ಹಾಡು ಮುಗಿದು ಲಾಲಿಮಧ್ರುವ ದೀರ್ಘವಾಗಿ ನಡೆಯುತ್ತದೆ. ಅದು ಪ್ರಾರಂಭವಾದೊಡನೆ ಬಾಳಗೊಂಡ ಕುಡಗೋಲು ಹಿಡಿದುಕೊಂಡು ಬರುತ್ತಾನೆ. ಅವನಿಗೆ ಎದುರಾಗಿ ಮುದಿಗೌಡನೂ ಬರುತ್ತಾನೆ. ಲಾಲಿಮಧ್ರುವ ಮುಗಿಯುವತನಕ ಬಾಳಗೊಂಡ ಗೌಡನನ್ನೇ ದಿಟ್ಟಿಸಿ ನೋಡುತ್ತ ಅವನಲ್ಲಿ ಏನನ್ನೋ ಹುಡುಕುತ್ತಿರುವಂತೆ ನೋಡುತ್ತಿರುತ್ತಾನೆ. ಗೌಡ ಮೀಸೆ ತಿರುವುತ್ತ ನಗುತ್ತಿರುತ್ತಾನೆ. ಹುಡುಕುತ್ತಿದ್ದವನು ಸಿಕ್ಕನೆಂಬಾಗ ಬಾಳಗೊಂಡ ಬಹಳ ಉತ್ಸಾಹಿತನಾಗುವದಿಲ್ಲ. ದೃಶ್ಯದ ಅಂತ್ಯಕ್ಕೆ ಬಾಳಗೊಂಡನ ಮುಖದ ಮೇಲೆ ಶವದ ಕಳೆ ಬಂದು ಮುದಿಗೌಡ ವಿಶೇಷ ಕಾಂತಿ ಹೊಂದುತ್ತಾನೆ. ಅವನ ನಗೆ, ನಿಲುವುಗಳೆಲ್ಲ ವಿಶೇಷ ಪ್ರಭಾವ ಬೀರುವಂತಿರುತ್ತವೆ.)

ಬಾಳಗೊಂಡ : ಚಕಮಕ್ಕಿ ಕಲ್ಲ ಕಡಧಾಂಗ ಭೆಟ್ಟಿ
ಆದಿವು, – ಇಂದ ಸಿಕ್ಕಿ ಬಾರೊ ಗೆಣೆಯಾ!
ಹಿಡೀಬೇಕ ಹಿಡೀಬೇಕಂತ ಎಷ್ಟ ಓಡಾಡಿದೆ,
ಎಂದಿನಿಂದ ಕುಡಗೋಲ ಮಸದೆ! ಆದರ
ಸಿಕ್ಕೆಂತ ಒಮ್ಮೆಲೆ ಕೊಲ್ಲೋದಿಲ್ಲ; ನಾಕ
ಮಾತ ಅವ ಏನಪಾ, ಮೊದಲs ಕೊಂದ
ಬಿಟ್ಟರ ಆ ನಾಕ ಮಾತಿಗಿ ಹೂಂ ಅನ್ನಾಕ
ಯಾರ ಸಿಗೋದಿಲ್ಲ ಆಮ್ಯಾಲ. ಬ್ಯಾರೇ
ಮಾತಾಗಿದ್ದರ ನಡೆದಿರೋದು ಅನ್ನಲಾ! ಆದರ
ಒಂದಷ್ಟ ಮಾತ ಹಿಂಗ ಇರತಾವಲ್ಲ,
ಹಿಂತಾವ ಇರತಾವಲ್ಲ, – ಅವನ್ನ ನಾನs
ಹೇಳಬೇಕು, ನೀನs ಕೇಳಬೇಕು. ಯಾಕಂದಿ,
ನಾ ಹೇಳಿದಾಗ ನನ್ನ ಒಳಗ ಅಳಿಗ್ಯಾಡೋವಂಥಾ
ಸವಾಲ ಕೇಳಾಂವ ನೀ ಒಬ್ಬನs. ಅಸಲ
ಜವಾಬ ಕೊಡಬೇಕಂತ ಒಳಗ ಕೈಹಾಕಿ
ಹುಡಿಕ್ಯಾಡತೇನ ನೋಡು – ಆ ದಣಿವಿನ್ಯಾಗ
ಒಂದ ರೀತಿ ಸಮಾಧಾನ ಆಗತದ, ಏನಪಾ.
ಅದಕ್ಕs ನಿನ್ನ ಅಂಥಲ್ಲಿ ಹಿಡೀಬೇಕ,
ಇಂಥಲ್ಲಿ ಹಿಡಿಬೇಕ, ಮಾತಾಡೋವಾಗ
ಹಿಡೀಬೇಕ – ಹೆಂಗಸರ ಜೋಡಿ ಇದ್ದಾಗ
ಹಿಡೀಬೇಕ – ಎಷ್ಟ ಏನ, – ಹಿಡಿದ
ಕುಡಗೋಲಿಗಿ ನನ್ನ ನಾಡಿ ಎಷ್ಟ ಸಲ
ಬಡೀತದನೊ ಅಷ್ಟ ಯುಕ್ತಿ ಹೊಳದೂವೇನಪಾ.
ಮಂದೀ ಬಾಯಿಲೆ ಹೌದನ್ನಿಸಿಕೊಳ್ಳಲಿಕ್ಕೆ
ಹಾಂಗೆಲ್ಲಾ ಯುಕ್ತಿ ಮಾಡಿದೇಂತ ಇಟ್ಟಕೊ.
ಮಾಡಿದ ವಿಚಾರ ನಡದ ಆಗಮಾಡಲಿಕ್ಕೆ
ನಮ್ಮಂಥವರಿಗೆಲ್ಲಾ ಎಲ್ಲಿ ಅಗತದ ಹೇಳು?
ಅದಕ್ಕs ನಾವ ಆಡೋದs ಒಂದು, ಅದು
ಇರೋದs ಒಂದು. ಇಷ್ಟs ತಿಳಿಯಲ್ಲ, –
ನಿನ್ನ ಹೆಸರೇನಂತ ಮನ್ನಿ ಆ ಸೂತ್ರಧಾರ
ಕೇಳಿದರ, ನಾ ಹೇಳಬೇಕನ್ನೂದರಾಗ ಚಾಳದಾಗಿನ
ಮಂದಿ ಹೊರಗ ಬಂದ ಜಗಳಾಡಿಧಾಂಗ
ಒಳಗಿನಿಂದ ಹತ್ತಹದಿನೈದ ಮಂದಿ ಹೊರಗ
ಬಂದ ತಮ್ಮ ತಮ್ಮ ಹೆಸರ ಹೇಳಾಕ
ಹತ್ತ್ಯಾರಲಾ! ಒಬ್ಬನ ಹೆಸರ ನನಗ
ಗೊತ್ತಿಲ್ಲ! ಯಾಂವ ಕಸಾಬಂತಾನ! ಯಾಂವ
ಕೊಳ್ಳಿದೆವ್ವ ಅಂತಾನ! ನನಗs ಗೊತ್ತಿಲ್ದs
ನನ್ನೊಳಗ ಇವರೆಲ್ಲಾ ಇದ್ದಾರ್ಹೆಂಗಾ? ಹಾಂಗಾದರ
ನನ್ನ ಖರೆ ಹೆಸರ ಯಾವದಾ? ಅದಕ್ಕs
ನಾಕ ಮಂದ್ಯಾಗ ನನ್ನ ಹೆಸರ ಬರಬೇಕಾದರ,
ಹಿಂಗ ಬಂದ ಹೆಸರ ನನಗ ತಿಳಿಬೇಕಾದರ
ನಿನ್ನಂಥವನ್ನ ಬಂಟತನ ಮಾಡಿ ಕೊಲ್ಲಬೇಕಾಗಿತ್ತು,
ಏನಪಾ! ನಿನ್ನs ಯಾಕಂತ ಕೇಳ – ಹೇಳತೇನ.

ಗೌಡ : ಅದನ್ನಷ್ಟ ನೀನs ಕೇಳಿಕೊಂಡ ಹೇಳಿಬಿಡಲ್ಲ.

ಬಾಳಗೊಂಡ : (ಕೇಳದವನಂತೆ)
ಮನ್ನಿರಾತ್ರಿ ಅರನಿದ್ದ್ಯಾಗ ಒಂದ ಟಕಳಿ
ಬಿದ್ಹಾಂಗಾಯ್ತೇನಪಾ! ಮನಿ ಬಾಗಲಾ ಹಾಕಿ
ಕಿಟಕಿ ಮುಚ್ಚೀದೇನು, ಪಡಸಾಲ್ಯಾಗೊಂದು
ಬಾಂವಿ ಆದ್ಹಾಂಗಾಯ್ತು. ಬಾಂವ್ಯಾಗ ಪಾತಾಳಗಡ
ಇಳಿಬಿಟ್ಟ ಹೀಂಗ ನಿಂತಿದ್ದೆ, – ಯಾರೊ
ಹಿಂದಿನಿಂದ ಬಂದು ಬೆನ್ನಮ್ಯಾಲೆ ಧಂ
ಅಂತ ಗುಮ್ಮಿದರಪ! ಯಾರಂತ ತಿರುಗಿ
ನೋಡಿದರ ಒಳ್ಳೇ ಚಂದ ದೇವಿ!
ತಾಯೀ! ಅನ್ನೂದರಾಗಂದರ – ಎಚ್ಚರಾಯ್ತು!
ರತ್ನ ಇಲ್ಲ! ನೀನ ತಗೊಂಡ ಪಾರೀ
ಮನಿಗಿ ಹೋದದ್ದು ಆಮ್ಯಾಲ ಗೊತ್ತಾಯ್ತು!
ನಿನ್ನ ಮ್ಯಾಲ ಸಿಟ್ಟ ಬಂಧಾಂಗ – ನಿನ್ನ ಕರದ
ಶಾಬಾಶ್ ಅನ್ನೂ ಹಾಂಗೂ ಆಯ್ತು. ಅಂದs
ಸರ್ವತ್ತಿನಾಗ ಕಮಲೀ ಮನೀಗಿ ಹೋಗಬೇಕಂತ
ತಾಳೇಹಾಕಿ, ಲಸಿಮ್ಯಾನ ಕಳಿಸಿ, ಅಂವ
ಕೇಳಿಕೊಂಡ ಬರಲೆಂತ ಕುಂತೆ, ಅಲ್ಲೆ
ಜರಾ ನಿದ್ದಿ ಬಂದ ಮಗ್ಗಲಾದರ, ನಾನ್ಹಾಂಗಾಗಿ ನನಗಿಂತ
ಮೊದಲs ಹೋಗೀದೀ ನೋಡೊ! ಏನನ್ನಲಿ
ನಿನ್ನ ಬುದ್ಧಿಗಿ? ಅದಕ್ಕs ಆ ದಿನ
ನಿರ್ಧಾರ ಮಾಡಿಬಿಟ್ಟೆ – ನಿನ್ನ ಕೊಂದರs
ನನ್ನ ಹೆಸರ ಬರೋದಂತ. ಹಂಗ್ಯಾಕ ನಗತಿ?

ಗೌಡ : ತಮ್ಮಾ, ನಾಲಿಗೆ ಐತೆಂತ ಬದಿಕೀದಿ
ನೋಡ ನೀನು. ಏನ ಮಾತಾಡ್ತೀ
ಏನ ಮಾತಾಡ್ತೀ – ಮಾರಾಯಾ ಆಟ
ಸುರುವಾದಾಗಿಂದ ನೋಡತೇನು, – ಒಂದ
ನಮನಿ ಕಪ್ಪೀಹಾಂಗ ವಟವಟ ಎತ್ತ
ಹ್ವಾದರೂ ಬಿಡವಲ್ಲಿ.

ಬಾಳಗೊಂಡ : ಮುದುಕಾ, ಬಂಟರು ಏನ ಮಾತಾಡಿದರೂ
ಅದೆಲ್ಲಾ ಕುಡಗೋಲ ಮಸದ ಸಪ್ಪಳಂತ
ತಿಳಕೊ.

ಗೌಡ : ಕಡ್ಯಾಣಿಲ್ಲ ಕೊಸ್ಯಾಣಿಲ್ಲ ಬರೀ ಕುಡಗೋಲ
ಮಸದರ ಬಂತೇನ ಹೇಳಲಾ. ನೀ
ಹುಟ್ಟಿದಾಗಿಂದ ಕೊಲ್ಲತೇನ ಕೊಲ್ಲತೇನ
ಅಂದಷ್ಟ ಮಂದಿನ್ನ ನಾ ಕೊಂದ
ಹಾಕೀದೇನ ಏನಪಾ. ಆದರ ಎಡಗೈ
ಮಾಡಿದ್ದ ಬಲಗೈಗಿ ಗೊತ್ತಿಲ್ಲ. ನಿನ್ಹಾಂಗ
ಬರೇ ಮಾತಲೆ ಕಡಿಯೋದಾಗಿದ್ದರ
ಕಟಕರ ಗಿಣಿ ಈ ನಾಡಿಗೇ ಪುಢಾರಿ
ಆಗತಿತ್ತು, ತಿಳೀತೇನ? ಹುಚ್ಚಾ, ಮನಿಗಿ
ಹೋಗಿ ದೀಪಾ ಹಚ್ಚು, ಗ್ವಾಡೀಮ್ಯಾಲ
ನೆರಳು ಬೀಳತೈತಿ ನೋಡು, ಅದನ್ನ
ಕಡೀ ಹೋಗು. ಛೀ ನೀ ಅಂದರ
ನನಗ ದುಪ್ಪಟ್ಟ ಕರುಣಾ ಬರಾಕ
ಹತ್ತಿತಲ್ಲೊ, – ಒಂದಪಟ್ಟು ನೀ ನನ್ನ
ಖಾಸ ಮಗಾ ಆದದ್ದಕ್ಕ; ಇನ್ನೊಂದು
ಪಟ್ಟ ನೀ ಇಂಥಾ ರೋಗಿ ಇದ್ದದ್ದಕ್ಕ.

ಬಾಳಗೊಂಡ : ಇಂಥಾ ಸುಳ್ಳ ಇನ್ನೂ ನಂಬತೇನಂತ
ತಿಳಿದಿದ್ದೀಯೇನ? ನೀ ರಾಕ್ಷಸ – ಹುಲಿಯಾಗಿ
ನಮ್ಮಪ್ಪನ್ನ ಕೊಂದಿ, ನಮ್ಮಪ್ಪನ ಹಾಂಗs
ಆಗಿ ಊರಾಳಿದಿ – ಇದ ನನಗ
ಗೊತಿಲ್ಲಂದಿ?

ಗೌಡ : ಏ ಬೇಶ್ ಬೇಶ್! ನೀ ಭಾಳ ಭಾಳ
ತಿಳಕೊಂಡೀಯಪ! ಸಾಲೀಮಾಸ್ತರ
ನಿನ ಮುಂದ ಝಕ್ಕಿಸಿದ ಅನ್ನಬಾರದ?
ಚಪ್ಪಾಳಿ ಬಡದ ನಗೂ ಮಾತ ಯಾಕ
ಆಡತೀಯೋ? ಬಾಳಗೊಂಡಾ ಈ ರಾಕ್ಷಸ
ಅಂದರ….

ಬಾಳಗೊಂಡ : ಇಕಾ ನಂದಾ ನಿಂದಾ ಹೆಸರ ಒಂದ
ಉಸರಿನ್ಯಾಗ ಆಡಬ್ಯಾಡ….

ಗೌಡ : ಮತ್ತ ಬಾಯಿ ಬಾಯಿ ಬಿಡಾತನಲ್ಲೊ.
ಹಿಂತಾ ಮಾತ ನಿನ್ನ ಬಾಯಿಗಿ ಒಪ್ಪಾಣಿಲ್ಲ
ತಮ್ಮ. ಇನ್ನ ಬ್ಯಾರೇ ಮಾತ ಕಲಿ ನೀ.
ಪಾರೀ ಮನ್ಯಾಗ ಒಬ್ಬ ಲಾಲ್ಯಾ ಇದ್ದಾನ
ನೋಡೊ, ಅವನ ಕೈಯಾಗ ನಾಕ ದಿನಾ
ನುರಿ; ಕೊಡಾ ಹೆಂಗ ಹೊರಬೇಕು,
ಕೈ ಹೆಂಗ ಬೀಸಬೇಕು, ಅಮಾಸಿ
ಹುಣಿವಿ ದಿನ ಎಲ್ಲವ್ವನ ಗುಡ್ಡದಾಗ
ಹೆಂಗ ಕುಣೀಬೇಕು, ಗಂಡಸರ ಜೋಡಿ
ಹೆಂಗ ಮಾತಾಡಬೇಕು – ಎಲ್ಲಾ ಕಲಸ್ತಾನ
ಅಂವ. ಥೂ ನಿಮ್ಮವ್ವ ನಿನ್ನ ಹಡಿಯೋ
ಬದಲಿ ಇಷ್ಟ ದೊಡ್ಡದೊಂದ ಹೂಂಸ
ಬಿಡಬಾರದs, ನಾಕ ಮಂದಿ ಮೂಗ
ಮುಚ್ಚಿಕೋತಿದ್ದರು!

ಬಾಳಗೊಂಡ : ಮುದುಕಾ…. ಮುದುಕಾ….
ಮಿತಿಮೀರಿ ಬೆಳೀಲಾಕ ಹತ್ತೀದಿ.

ಗೌಡ : ನೀ ನನ್ನ ಕಡ್ಯಾಕ ಬಂದ ಹುರಪಲೆ
ನನಗೇನ ಖುಶಿ ಆಗಿತ್ತು ಎಷ್ಟಂದರೂ
ಬೀಜ ನಂದು! ನಿನ್ನ ಕೈಯಾಗ ನಾ
ಸತ್ತರೂ ಹಲ್ಲಿ ಜೊಲ್ಲಿನ್ಹಾಂಗ ಒಳಗೊಳಗs
ಊರ ಮಂದಿ ಹೊಟ್ಟ್ಯಾಗ ಜನ್ಮಜನ್ಮಾಂತರ
ಬೆಳೀಬೇಕ, ಸಾಯುವಾಗ ‘ನಾ ಸತ್ತರೂ
ಅಮಾಸಿ ನಿಲ್ಲಾಣಿಲ್ಲೊ ಮಗನs’ ಅಂತ
ಒಂದ ಕವನಾ ಕವಿ ಮಾಡಿ ಹಾಡಬೇಕ,-
ನಿಶ್ಯಾನ್ಯಾಗಿ ಮೆರೀಬೇಕ – ಅಂತ ಏನೇನ
ಕನಸ ಕಂಡಿದ್ನೇನಪಾ! ಆದರ ನೀ
ನನ್ನಂಥಾ ನರಮನಿಶ್ಯಾಗ ಹುಟ್ಟಿದಾಂವಲ್ಲ –
ಬರೀ ಮಾತಿಗಿ ಹುಟ್ಟಿದಾಂವ! ಕಡಿಯೋದಂದರ
ಬಾಯಾಗಿರೋದಿಲ್ಲೊ ಕೂಸs ರಗತದಾಗಿರತೈತಿ!
ಎದ್ಯಾಗ ಬರಕೊ ಈ ಮಾತು. ಹಾಂಗs
ಇದನ್ನಷ್ಟ ತಿಳಕೊ : ನಿನ್ನ ಒಳಗ
ರಗತ ಮಾಂಸ ಇಲ್ಲs ಇಲ್ಲ, ಬರೀ
ರೋಗಿಷ್ಟರ ಉಗಳ ತುಂಬೇತಿ, ಹೋಗು
ಜಬರ ಮಾಡತಾನ ಜಬರ.

ಬಾಳಗೊಂಡ : ಮುದುಕಾ ನನ್ನ ಖಾಲೀ ಮಾಡಿ ನೀನs
ತುಂಬಿಕೊಳ್ಳಾಕ ಹತ್ತೀದಿ….

ಗೌಡ : ಬಾಯ್ಮುಚ್ಚಲೇ, ನನಗೇನ ಅರ್ಧಾ ಆಗೇತ್ಯೊ
ನಿಂದ ತುಂಬಿಕೊಳ್ಳಾಕ? ನಾ ಒಮ್ಮಿ
ಕಕ್ಕಿದಷ್ಟ ನೀ ಜೀವಮಾನ ತಿನ್ನಾಕಿಲ್ಲ.
ಮಗಾ ಮನ್ನಿ ಹುಟ್ಟಿ ನಿನ್ನಿ ಕಣ್ಣ
ತೆರದ್ದಾನು, ಇಂದ ತನ್ನ ಐಸಿರಿ ನನಗ
ದಾನಾಮಾಡಾಕ ಬಂದಾನ! ಹೋಗಲೇ
ಕುರುಸಾಲ್ಯಾ. ಚಿತ್ರದಾಗಿನ ಹಣ್ಣ ನೀ,-
ನೋಡಿದರ ಬಾಯಾಗ ನೀರ ಬರತಾವು,
ತಿನ್ನಾಕಿಲ್ಲ. ಹೋಗು, ಆ ಹೊಳಿ ಅಗಸ್ಯಾಗ
ಸಾಣಿಕಲ್ಲಾಗಿ ಕುಂತಕೊ. ನೀರ ತರೋ
ಹೆಂಗಸರು ಹೋಗಬರೋವಾಗ ನದರ
ಮಸ್ಯಾಕರೆ ಆದೀತು.

ಬಾಳಗೊಂಡ : ಮುದುಕಾ ನನ್ನ ಮಾತ ನೀನs
ಆಡಲಿಕ್ಹತ್ತೀದಿ….

ಗೌಡ : ಹೌಂದ್ಯಾಕ ಹೌಂದ, ಹೌಂದಂದರ ಹೌಂದ.
ಹೌಂದೇನ ಹೌಂದ. ಏನ ಮಾಡಾಂವಾ?
ಕಮಲಿ ಮೀಸಲಾ ನೀ ಮುರದ ಬಂದಿ,
ನಾ ಉಂಡ ಬಂದಿನು. ರತ್ನ ನಿನ್ನ
ಹಂತ್ಯಾಕ ಐತೆಂದರು, ಕದ್ದಿನು. ಹೆಜ್ಜಿ
ಹೆಜ್ಜಿಗಿ ನಿನ್ನ ತಾಕತ್ತಿಗಿ ಸವಾಲ
ಹಾಕಿದ್ನು. ನಾ ಇಷ್ಟ ಮಾತಿನಾಂವಲ್ಲ –
ಆದರ ಇಂಥ ಮಗನ್ನ ಹಡದ್ನೆಲ್ಲಾ
ಅಂತ ಭಾಳ ತ್ರಾಸ ಆತ ನನಗ.
ಒಂದ ದಿನಾ ಆ ಪರಿಬ್ಯಾಗ ಬಾಳಗೊಂಡ
ನನ್ನ ಮಗಾ ಅಂತ ಹೇಳಾಂವಿದ್ನು.
ಆದರ ಇನ್ನ ಹೇಳಾಣಿಲ್ಲ, ಅಪ್ಪನ
ಹೆಸರ ಇಲ್ಲದs ಸಾಯ್ಹೋಗ ನಡಿ.

ಬಾಳಗೊಂಡ : (ಚೀರಿ)
ಮುದುಕಾss….

ಗೌಡ : ಒಳಗಿನ ಶಿರಾ ಹರದೀತ, ಯಾಕಾದರೂ
ಚೀರತೀಯೊ? ಚಂದಾಗಿ ನಾಕ ಮಂದಿ
ಹೌಂದನ್ನೋ ಹಾಂಗ ಜಗಳಾ ಸೈತ
ಮಾಡಾಕ ಬರಾಣಿಲ್ಲಲ್ಲೊ, ಕಾ ನೋಡ
ಗಂಡಸರ ಸುತ್ತೋ ಈ ರುಂಬಾಲ
ತಗೋತೇನು, ಬಳಿ ಒಪ್ಪಿಧಾಂಗ
ಈ ಕೈಗಿ ಕುಡಗೋಲ ಒಪ್ಪಾಣಿಲ್ಲ, ಅದನ್ನ
ತಗೋತೇನು….
(ರುಂಬಾಲು ಕುಡುಗೋಲು ಕಸಿದುಕೊಂಡು ಕೊನೆಗೆ ಬಾಳಗೊಂಡನ ಭುಜ ತಟ್ಟಿ ಹೇಳುತ್ತಾನೆ.)
ನೋಡಿಲ್ಲಿ – ಕಾ ಹೋಗತೇನು-
ಏನ ಮಾಡತಿ? ಒಂದ ಮಾತ
ಹೇಳಿರತೇನು: ಇನ್ನ ಆ ಹಳಿ ಬಡಿವಾರ
ಬಿಟ್ಟಬಿಡ.
(ಗೌಡ ಹೊರಡುವನು. ತಕ್ಷಣವೆ ಬಾಳಗೊಂಡ ಗೌಡನ ಎದೆ ಹಿಡಿದು ತರುಬುತ್ತಾನೆ.)

ಬಾಳಗೊಂಡ : ನೀ ನನ್ನ ತಂದಿ ಖರೆ?

ಗೌಡ : ಯಾಕ?

ಬಾಳಗೊಂಡ : ಖರೆ ಏನ ಹೇಳೊ.

ಗೌಡ : ಹೇಳದಿದ್ದರ ಅಳತಿಯೇನ ಮತ್ತ? ಅಪ್ಪನ
ಗುರುತ ಮಾಡೋದರಿಂದ ಸಿಗತೈತಿ, ಬರೀ
ಆಡಿ ಹಾಡಿಕೊಂಡ ಅಳೋದರಿಂದ
ಸಿಗಾಣಿಲ್ಲೇನಪಾ, ನಿನ ಮುಂದ ನಿಂತರ
ಪುರಾಣಿಕನ್ಹಾಂಗ ಮತ್ತೊಂದ ಕತಿ
ಹೇಳಾಂವ ನೀ, ಹೋಗ ಮನಿಗಿ ಹೋಗ.
ಹೋಗಪಾ ಶ್ಯಾಣ್ಯಾ….
(ಮಕ್ಕಳನ್ನು ರಮಿಸಿದಂತೆ ಬಾಳಗೊಂಡನ ಗದ್ದ ತೀಡಿ ಅಣಕಿಸುತ್ತ ಹೊರಡುವನು.)

ಬಾಳಗೊಂಡ : ನನ್ನ ರುಂಬಾಲ, ರತ್ನ, ಕುಡಗೋಲ ಸುಮ್ಮನ ಕೊಡೋ ಏ….
(ಗೌಡ ಅಣಕಿಸುವ ಹಾಗೆ ಬಯಲಾಟದ ಗತ್ತಿನಲ್ಲಿ ಬಾಳಗೊಂಡನ ಸುತ್ತ ನರ್ತಿಸುವನು. ಬಾಳಗೊಂಡ ಮೇಲಿನ ಮಾತನ್ನು ಮತ್ತೆ ಮತ್ತೆ ಚೀರುವನು. ಮುದುಕ ಲಕ್ಷಿಸದೇ ಹೊರಡುವನು. ‘ಸುಮ್ಮನ ಕೊಡೋ ಗೌಡಾಎಪ್ಪಾಕೊಡೋ‘-ಎಂದು ಚೀರಿ ಅಲ್ಲಿಯೇ ಮಾತು ಹೇಳುತ್ತಲೇ ಕಲ್ಲಿಗಾಗಿ ಹುಡುಕಿ ಒಂದು ದೊಡ್ಡ ಕಲ್ಲು ಸಿಕ್ಕನಂತರ ಕಲ್ಲಿನಿಂದ ಮುದುಕನ ಮೇಲೆ ಹೇರುವನು. ಮುದುಕ ಚೀರಿ ನರಳಿ ಸಾಯುವನು. ಅವನು ಚೀರಿ ನರಳುತ್ತಿರುವಾಗ ಬಾಳಗೊಂಡ ಅಪ್ರತಿಭನಾಗಿ ಸಂಕಟವನ್ನನುಭವಿಸಿ ಕೊನೆಗೆ ಹುಚ್ಚನಂತೆ ಆಡುವನು.)

ಬಾಳಗೊಂಡ : ತಿಳೀತಿಲ್ಲ? ತೋರಿಸಿದೆನಿಲ್ಲ?
ಮಾಡಿದೆನಿಲ್ಲ?
(ಹೀಗೆನ್ನುತ್ತಲೇ ಮುದುಕನ ರುಂಬಾಲು ತೆಗೆದು ತನ್ನ ತಲೆಯ ಮೇಲಿಟ್ಟುಕೊಂಡು ಕುಡಗೋಲು ರತ್ನ ತೆಗೆದುಕೊಂಡು ಗೌಡನ ಶವವನ್ನು ಚೀಲದಲ್ಲಿ ತುಂಬಿ ಬೆನ್ನ ಮೇಲಕ್ಕೆ ಹೊರುವನು.)

ಬಾಳಗೊಂಡ : ಸೂತ್ರಧಾರ

ಸೂತ್ರಧಾರ : ಹಾ

ಬಾಳಗೊಂಡ : ನನ್ನ ಬೆನ್ನಮ್ಯಾಲಿಂದೇನು?

ಸೂತ್ರಧಾರ : ಕರ್ಮದ ಗಂಟು.

ಬಾಳಗೊಂಡ : ಇದನ್ನ ಊರ ಮುಂದಿನ ಹಾಳಬಾಂವ್ಯಾಗ
ಒಗದ ಜಳಕಾ ಮಾಡಿ ಬರತೇನು.
ಅಷ್ಟರಾಗ ಹೊಲೇರ ಕಮಲಿ ಬಂದ ನಮ್ಮ
ದನದ ಹಕ್ಕ್ಯಾಗ ಮೇವಿನ ಕಟ್ಟೀಮ್ಯಾಲ
ಕಾದಿರಬೇಕಂತ ತಿಳಿಸುವಂಥವನಾಗು.

ಸೂತ್ರಧಾರ : ನಾನಾದರೂ ತಿಳಿಸುತ್ತೇನೆ. ನೀನಾದರೂ
ಹೋಗುವಂಥವನಾಗು.
(ಲಾಲಿಮಧ್ರುವ ಕೇಳಿಸುತ್ತದೆ. ಬಾಳಗೊಂಡ ನಿಷ್ಕ್ರಮಿಸುವನು.)

ಸೂತ್ರಧಾರ : ಹಾರಿ ಹಾರೈಸುವೆ | ಹಲವ ಹಂಬಲಿಸುವೆ
ತೋರೆಲೊ ಕರುಣಾ | ಬಾರೊ ಮೋಹನಾ ||||
ಹೊಕ್ಕು ಹೊರಬಂದಂಥ ಅರಳುಮಲ್ಲಿಗಿ ಹೂವ
ಮದಾ ಮೂಸಿ ಕೈ ತುರಿಸಿ ಉರುಪ ಹೆಚ್ಚಿಸಿದಾಂವಾ
ನನ್ನ | ನುಡುವ ತೊಡುವಂಥ ಶ್ರೀಮಂತ
ಧೀಮಂತಾ | ಹಾ ದೊರೆಯೆ ||||
ಲಜ್ಜಿ ನಾಚಿಕಿ ಮಾನ ಕಳಚಿ ಬರಿಮೈಯಾದೆ
ನೆನಪಾಗಿ ಸರ್ವಾಂಗ ಗುಡಿಗಟ್ಟಿ ನಿಲ್ಲುವೆ
ಹೊಟ್ಟಿ | ಬಗಿದು ಒಳಗಿಟ್ಟುಕೊಳ್ಳುವೆನೊ |
ನವಿರೇಳುವೆನೊ | ಹಾ ದೊರೆಯೆ ||||
ಎಸಗುವ ಎಸಕದ ಹೆಸರ ಗೊತ್ತಿರದಾಂವಾ
ಉಲಿದುಲಿದು ನಿಂತಲ್ಲಿ ಸಂತೀಯ ಮಾಡಾಂವಾ
ಇಂಥಾ | ಮಾತಿನ ಪಾತಕವ್ಯಾಕೊ |
ಎಂಜಲ ಬದುಕೊ | ಹಾ ದೊರೆಯೆ ||||
ಎಡವೀದಂಥಾ ಗೊತ್ತ ಮರೆತು ಅರಸುವಿಯೆತ್ತ
ವಾಕಿನಿಂದಲೆ ವಸ್ತು ಹಿಡಿವೆನೆಂಬುವುದೆತ್ತ
ನಿನ್ನ | ಸಂದೇಹದೊಳು ದೇಹ ಮರತಿ |
ದೇಹ ಮರತಿ | ಹಾ ದೊರೆಯೆ ||||
ಚರ್ಮಸ್ಪರ್ಶಕೆ ಒಳಗೊ ಸ್ಪರ್ಶ ಚರ್ಮಕೆ ಒಳಗೊ
ಚಕಮಕಿ ಕಿಡಿಯೊಳಗ ನನ್ನ ನಿನ್ನಯ ಅರಿವೊ
ಹುಟ್ಟಿ | ಹೊಂದಿ ಬಂದೇವೊ ಶಾಪ |
ಬಿಡದ ಶಾಪ | ಹಾ ದೊರೆಯೆ ||||
(ಸೂತ್ರಧಾರನ ಹಾಡು ಅರ್ಧಕ್ಕೆ ಬಂದಿರುವಾಗ ಬಾಳಗೊಂಡ ಗೌಡನ ವೇಷ ಭೂಷಣಗಳಲ್ಲಿ ಬಂದು ಮತ್ತೆ ನೇಪಥ್ಯದಲ್ಲಿಗೆ ಹೋಗುತ್ತಾನೆ. ಹಾಡು ಪೂರ್ತಿ ಮುಗಿದು ಸೂತ್ರಧಾರ ಸರಿದಾದ ಮೇಲೆ ಬಾಳಗೊಂಡ ಅತ್ಯಂತ ದಣಿದವನಾಗಿ ರಂಗದಲ್ಲಿರುವ ಗದ್ದಿಗೆಯ ಮೇಲೆ ಬಂದು ಕುಳಿತುಕೊಳ್ಳುತ್ತಾನೆ. ದೂರದಲ್ಲಿಮಳಿ ಮಳಿ ಮಳಿ ಮಳಿ ಬಂತರ್ಯೋ…. ಬೀಸಿ ಬಂತರ್ಯೋ ಸೂಸಿ ಬಂತರ್ಯೋಎಂಬ ಅನೇಕ ಉತ್ಸಾಹದ ಧ್ವನಿಗಳು ಕೇಳಿ, ಬರಬರುತ್ತ ಸ್ಪಷ್ಟವಾಗುತ್ತವೆ. ಗೌಡ್ತಿ ಸಂಭ್ರಮದಿಂದ ಪ್ರವೇಶಿಸುವಳು)

ಗೌಡ್ತಿ : ಬೆವರ ಬಂದ ನನ್ನ ಮೈ ಘಮಘಮಾ
ಹೆಂಗ ನಾರತೈತಿ ನೋಡ್ರೇ….
ಎಂದೂ ಬಾರದ ಬೆವರ ಹೆಂಗ ಇಳೀತೈತಿ
ನೋಡ್ರೇ…. ನೋಡ್ರೇ….
(ರಂಗದ ಕಡೆಗೆ ಓಡಾಡಿ ಬೆವರು ಒರೆಸಿಕೊಳ್ಳುತ್ತ ಸಡಗರ ಮಾಡುತ್ತ ಸಂಭ್ರಮಿಸುತ್ತಾಳೆ.)

ಸೂತ್ರಧಾರ : (ಸಂಭ್ರಮದಿಂದ ಪ್ರವೇಶಿಸಿ)
ರಾಮಗೊಂಡ! ರಾಮಗೊಂಡ ಬಂದಾ!
ನಿಮ್ಮನ್ನ ನೋಡಬೇಕಂತಾನ ಒಳಗ
ಕರೀಲ್ರಿ?
(ಬಾಳಗೊಂಡ ಬೇಡವೆಂಬಂತೆ ಕಣ್ಣುಮುಚ್ಚಿಕೊಂಡೇ ಸನ್ನೆ ಮಾಡುವನು. ‘ಮಳಿ ಮಳೀ ಮಳೀಎಂದು ಹೊರಗೆ ಜನ ಕಿರುಚುತ್ತಿದ್ದಾರೆ. ಸೂತ್ರಧಾರ ಪ್ರೇಕ್ಷಕರಿಗೆ ನಮಿಸುತ್ತಿರುವಾಗ ತೆರೆ.)

tyle=’f4 ̂sz1 �3 font-family: “Times New Roman”,”serif”;color:black’> ಕಾರಣ ಇಲ್ಲದ್ದಕ್ಕ ಹೋದಂತ ಹೇಳು.

 

ಹಳಬ : ನಿಮ್ಮ ಕಡೆ ಮಂದಿ ಕಾರಣ ಇದ್ದಾಗs ಬದಕತಾರೇನ್ರಿ?

ಬಾಳಗೊಂಡ : ಹೇಳಿದಷ್ಟ ಕೇಳು. ಸರಳ ಹೋಗು, ತಡೀ ಹಾಕು,
ಕುದರಿ ಬಿಚ್ಚು, ಹೋದ ಹಾದೀ ಹಿಡದ
ಎಡಕ್ಕ ಎಡಾ ಅನ್ನಬ್ಯಾಡ. ಬಲಕ್ಕ ಬಲಾ ಅನ್ನಬ್ಯಾಡಾ
ಯಾರ ಕೇಳಿದರೇನೂ ಹೇಳಬ್ಯಾಡಾ.
ತಿಳೀತೊ ಇನ್ನೊಮ್ಮಿ ಹೇಳಲ್ಯೊ?