ಸೂತ್ರಧಾರ : ಕುಂತಿರೊ ಅಣ್ಣಗೋಳ್ರಾ ನಿಂತಿರೋ ತಮ್ಮಗೋಳ್ರಾ,
ಗರಡಿ ಹುಡಗೋರು ಹಾಂಗs ಬಂದ ಅಟ್ಟ ಏರಿದೇವು.
ಇದನ್ನು ಕವಿ ಮಾಡಿದಾಂವಿನ್ನೂ ಹಣ್ಣಾಗಿಲ್ಲ,
ಆಡಾವರಿನ್ನೂ ಬಲಿತಿಲ್ಲ; ಅಜ್ಞಾನ ಬಾಲಕರು
ಜೋಲಿ ತಪ್ಪಿ ಏನಾರ ತಪ್ಪ ಮಾಡಿದರ
ಚಪ್ಪಾಳಿ ಹೊಡದ ನಗಬ್ಯಾಡರಿ;
ಜೋಡೆಳಿ ಸಿಳ್ಳ ಹಾಕಬ್ಯಾಡರಿ;
ಇದ್ಯಾತರ ಅಟಂತ ಏಳಬ್ಯಾಡರಿ; ತಿಳೀಲಾರಕ ಕುರ್ಚಿ ತಿಕ್ಕಿ ಆಕಳಿಸಬ್ಯಾಡರಿ,-
ಗೀತರೂಪದಿಂದ ಗೀತೀ ಮಾಡದs ಪ್ರೀತೀಲೆ
ನೀತೀ ಹೇಳತೇವು-
ಇದೆಲ್ಲಾ ನಮ್ಮ ನಿಮ್ಮೊಳಗs ಹುಟ್ಟಿ, ಒಳಗೊಳಗs
ಬೆಳದದ್ದಂತ ತಿಳಕೊಂಡು, ಶರಣಂದವರನ್ನ
ಕರುಣದಿಂದ ಕೇಳಬೇಕಂತ ಹೇಳಿ
ಹಿರೇರೆಲ್ಲಾರಿಗೂ ನಮೋ ನಿಮ್ಮ ಪಾದಕ.
(ತೆಂಗಿನಕಾಯಿ ಒಡೆದು ಅದರ ಎರಡೂ ಭಾಗಗಳನ್ನು ರಂಗದ ಎರಡೂ ಬದಿಗೆ ಎಸೆಯುವನು. ಇದೇ ಈಗ ಹೊತ್ತು ಮುಳುಗಿದೆ. ಊರ ಅಗಸಿ. ರಂಗದ ಬಲ ಬದಿಯಲ್ಲಿ ಒಂದು ಗದ್ದಿಗೆಯಿದೆ. ತೀರ ಹಿಂಭಾಗದಲ್ಲಿ ಜನ ಸೇರಿದ್ದು ರಂಗದ ಮುಂಭಾಗದಲ್ಲಿ ನಡೆಯುವ ಪೂರ್ವರಂಗದ ಬಗೆಗೆ ಅವರೆಲ್ಲ ನಿಷ್ಕಾಳಜಿಯಿಂದ, ಶೂನ್ಯ ಮನಸ್ಕರಾಗಿದ್ದು ಪೂರ್ವರಂಗ ಮುಗಿದಾದ ಮೇಲೆ ಮುಂಭಾಗದಲ್ಲಿ ಗದ್ದಿಗೆಯ ಸುತ್ತ ಸೇರುತ್ತಾರೆ. ಪೂರ್ವರಂಗದ ಸಂಭಾಷಣೆ, ಧಾಟಿ, ನಟನೆಇವೆಲ್ಲವೂ ಶ್ರೀಕೃಷ್ಣ ಪಾರಿಜಾತದಂತೆಯೇ ಇರಬೇಕು.)

ಸೂತ್ರಧಾರ : ಹೆಂಗ ಹೇಳಲಿ? ಹೆಂಗ ಹೇಳಲಾರದs ಇರಲಿ?
ಹೆಂಗ ಹೇಳಿದರೂ, ಮತ್ಹೆಂಗ ತಿಳಿಸಿದರೂ
ಒಡಕ ಗಡಿಗಿ ಹಾಂಗ ಬರೀ ಸಪ್ಪಳಾಗತೈತಿ,
ಒಳದನಿ ಸಿಗೋದs ಇಲ್ಲ.
ನಾವ ಆಡೋದs ಒಂದು, ಅದು ಇರೋದs ಇನ್ನೊಂದು,-
ತಾಳಿಲ್ಲ ಮೇಳಿಲ್ಲ, ಇಲ್ಲಂತ ಬಿಡಾಕಾಗಾಣಿಲ್ಲ.
ಮಾತಾಡಿ ಹಿಡ್ಯಾಕ, ಹಿಡದ ನೋಡಾಕ, ನೋಡಿ ಕೇಳಾಕ
ತಿಣಿಕೇ ತಿಣಕತೀವಿ : ಹೀಂಗ ಖುದ್ದ
ಕೇಳೋದಕ್ಕ ಬಾಯಿ ತೆರದರೂ ಅಂದರ
ತೆರದ ಹೇಳಿದರೂ
ನಾ ಹೇಳೋದs ಒಂದು, ನೀವು ಕೇಳೋದs ಇನ್ನೊಂದು,
ಕೇಳಿ ತಿಳಕೊಳ್ಳೋದ ಇನ್ನೂ ಮತ್ತೊಂದು!
ಹಾಂಗ ಹೇಳಿದ್ದ ಸೈತ ಹೇಳಬೇಕಂದದ್ದs ಏನಲ್ಲ!
ಮೂಲ ಮೀಸಲ, ಶಿವಾ ಮುರೀದs ಉಳೀತೈತಿ
ಎಲ್ಲಿಂದ ಹೊರಟು ಎಲ್ಲಿಗಿ ಬಂದಿವಿ?
ಈಗ ಬೇಕಂದರ ನಮ್ಮ ನಿಮ್ಮ ಅಸಲ ಮಾತs
ತಗೋರೆಲ್ಲ;
ಆಡಾಕ ಅಟ್ಟಾ ಏರಿದೇವಂದರ, ಆಟೇನೂ ಹೊಸಾದಲ್ಲ.
ಹಾಂಗ ನೋಡಿದರ, ಬ್ಯಾಡ ಅದನs ಹೀಂಗ ಹೇಳಬೇಕಂದರ
ಅಥವಾ ಹೆಂಗ ಹೇಳಿ ತಿಳಿಕೊಂಡರೇನಾ,-
ನಮ್ಮ ನಿಮ್ಮ ಮುಖಗೋಳೆಲ್ಲ ಆಟದ ಅಟ್ಟನ!
ಹೌದೊ ಅಲ್ಲೋ ನೋಡ್ರೆಲಾ,-
ಹರೀವತ್ತೆದ್ದ ಮಲಗೋತನಕ ಎಷ್ಟ ಬಯಲಾಟ
ಮಾಡತೇವ, ಎಷ್ಟ ಸೋಗ, ಎಷ್ಟ ಮುಖವಾಡ!
ಹೊರಗಾ ಒಳಗಾ ಒಂದಮಾಡೋ ನಿಜಲಿಂಗ
ಎಲ್ಲಿ, ಯಾ ಕಡೆ, ಯಾ ಗವ್ಯಾಗಿದಾನೋ!
ಆಡತೇವ, ಕುಡೀತೇವ, ತಿಂತೇವ, ನಡೀತೇವ,-
ಏನಂದರೂ ನಮ್ಮ ಗುರುತ ನಮಗಿಲ್ಲ.
ಜಳಕಾ ಮಾಡಾಕ ಹೋದಾಗ ಬಾಂವ್ಯಾಗ ಒಮ್ಮೊಮ್ಮಿ
ಗುರುತ ಹತ್ತಿಧಾಂಗಾಗಿ ಕೈಚಾಚತೇವು, ಅದರ
ಮುಟ್ಟಿದರೆ ತೆಕ್ಕಾಗಿಲ್ಲ, ಹಿಡದರ ಹಿಡ್ಯಾಗಿಲ್ಲ.
ಮೂಗ ಹಿಡದ ಅಳಬೇಕಂದರ, ಹೆಣಾ ಕಂಡ ಅಳೋದ
ಭಾಳ ಹಳೀ ಪದ್ಧತಿ, ಏನ ಮಾಡೋಣು?
ಗಚ್ಚಿನ ಮಾನ್ಯಾಗ ಹೆಚ್ಚಿನ ಹುಲಿ ಹೊಕ್ಕ
ತಟ್ಟಂತ ಒಂದ ಹನಿ ಮಳಿಯಿಲ್ಲ, ಬೆಳಿಯಿಲ್ಲ.
ಬಿತ್ತಿದ ಬೀಜ ಹುರದ ಹೋಗಿ, ಬಿರಕ ಬಿಟ್ಟ ಬೀಳನೆಲ
ಆs ಅಂತ ಬಾಯಿ ತೆರಕೊಂಡೈತಿ!
ಮಂದೀ ಮಕಾ ಕರಕಾಗಿ, ಹಸರಿನ ಜೋಡಿ ಕಣ್ಣಾಗಿನ
ಹೌಸಿ ಒಣಗಿ, ಬೆವತೇನಂದರ ಬೆವರ ಸೈತ
ಸುರೀದಂಥಾ ತೊಗಲ ಜೋಳಿಗಿ ತೊಟಗೊಂಡ,
ಮುಗಿಲೆದರ ತೆರಕೊಂಡ, ಇಲ್ಲಿ ನಿಂತೀವಿ.
ಲೆಕ್ಕಲೆ ಹೇಳಬೇಕಂದರ,-
ಈಗ, ಈ ಸೂರ ಸೋರಬೇಕಾಗಿತ್ತು,
ನಾವಾ ನೀವಾ ಮಣ್ಣಿನ ಹದದಾಗ ರೆಂಟಿ ಹಲ್ಲ ಊರಿ
ಬೀಜಾ ಬಿತ್ತಬೇಕಾಗಿತ್ತು, ಆದರ ಶಿವಾ!-
ಹುಟ್ಟಿದ ಹೋರಿಗೋಳ ಆಗs ಎತ್ತಾಗಿ,
ಕೂಳಿಲ್ಲದ್ದಕ್ಕ ಎತ್ತಿನ ಎಲುವ ಅರದ ತಿಂದು,
ಊರ ಮಂದಿ ಗುಳೆ ಎದ್ದರೂ
ಮುಗಿಲಿಗೇನಾ ಕರುಣಾ ಬರಲಿಲ್ಲ.
ತಪ್ಪಿದ ಲೆಕ್ಕಾ ಬರೋಬರಿ ಮಾಡಾವರು ಯಾರಾ?
ಒಂದs ಒಂದು ಭರೋಸ ಬೀಜ ಕಳಕೊಂಡ
ಗುಡ್ಡ ಸೇರಿತು, ಬಸವಾ ಬಸವಾ!
ಇದನ್ನೆಲ್ಲ ನೆನದಾಗ ಹಗಲೆಲ್ಲ ಅನಸತೈತಿ,-
ನರಮನಿಶ್ಯಾ ಭೂಮಿ ತಲಿಮ್ಯಾಲ ಹುಟ್ಟಿದ ಬಳಿಕ
ಇಲ್ಲಾ ಕಸಾಬಾದರೂ ಆಗಬೇಕು-
ಇಲ್ಲಾ, ದನಾ ಆದರೂ ಆಗಬೇಕು.
(ಹೊಲೇರ ಕಮಲಿ ರಂಗಮಧ್ಯಕ್ಕೆ ಬಂದು ಬೆದರಿ ತಕ್ಷಣವೇ ಒಳಕ್ಕೆ ಓಡಿ ಹೋಗುವಳು.)
ಅಡ! ಇಷ್ಟ ಅನ್ನೂದರಾಗs ಯಾವುದೋ ಹುಡುಗಿ
ಹೀಂಗ ಬಂದ ಹಾಂಗ ಹೋಯ್ತಲ್ಲೊ! ಯಾರವರಾ?
ಯಾರ ಯಾರವರಾ? ಅಪ್ಪೂ ಹಿಮ್ಯಾಳ್ಯಾ,

ಹಿಮ್ಮೇಳದವ : (ಪ್ರವೇಶಿಸಿ)
ಯಾಕ ಕರದಿ? ಯಾಕ ಕರದಿ?
ಹುಡಿಗಿ ಅನ್ನೋದಷ್ಟs ತಡ, ಕಣ್ಣೀ ಹರಕೊಂಡ
ಹಾಂಗs ಬಂದೇನ, ಎಲ್ಲಿ ಐತಿ?

ಸೂತ್ರಧಾರ : ಅಕಾ ಅವಸರ ಮಾಡಬ್ಯಾಡ, ಅಲ್ಲಿ ಹೌದಾ?
ಯಾರಾ, ಏನಾ ಕೇಳೋಣು, ಹೋಗಿ ಕರದು ಬಾ.

ಹಿಮ್ಮೇಳದವ : (ಹೋಗದೆ ಹಾಗೇ ಕಣ್ಣು ತೆರೆದು ವರ್ಣಿಸುತ್ತ ನಿಲ್ಲುವನು)
ಕುಡಿಹಬ್ಬ ಕೊಂಕೇನ!
ಕಣ್ಣ ಕಾಡಿಗಿಯೇನ!
ಸಣ್ಣಾನೆಸಳ ಬೈತಲದಾಕಿ ಯಾರೀಕಿ?

ಸೂತ್ರಧಾರ : ಮೀರಿ ಹೊಗತಾಳ ಕೂಗ ಹೊಡೆದ ಕರಿಯೋ.

ಹಿಮ್ಮೇಳದವ : ಬಿರಿ ಬಿರಿ ನಡಿವಾಕಿ
ತಿರ ತಿರಗಿ ನೋಡುವಾಕಿ
ವಾರಿ ನೋಡಿ ವಯ್ಯಾರ ಮಾಡೋ ಹುಡಿಗಿ ಯಾರೀಕಿ?

ಸೂತ್ರಧಾರ : ದೂರ ಹೋಗತಾಳ ಒದರಿ ಕರಿಯೊ.

ಹಿಮ್ಮೇಳದವ : ಸಣ್ಣದಡಿ ಪಾವಡದಾಕಿ
ಕಿರಿ ನಿರಿಗಿ ಹೆಚ್ಚಿನ ಸೀರಿ
ಮಿರಿ ಮಿರಿ ಮಿಂಚೊ ಬಾಲಿ ಯಾರೀಕಿ?

ಸೂತ್ರಧಾರ : ಏ, ಮರೀಗಾಗತಾಳ ಚೀರಿ ಕರಿ ಅಂದರ,

ಹಿಮ್ಮೇಳದವ : ಏ ಅವೂ, ಪರಿಬ್ಯಾ ಕರೀತಾನ, ಬಂದ,
ಎಲಿ ಅಡಿಕಿ ತಿಂದ,
ನಾಕ ಮಾತ ಮಾತಾಡಿ ಹೋಗ.
ಏ ಹತ್ತ ಬರೆ ಅವೂ….
(ತುಸು ಹೊತ್ತು ಇಬ್ಬರೂ ಸುಮ್ಮನಾಗಿ ಅದೇ ದಿಕ್ಕನ್ನು ನೋಡುತ್ತಿರುವಂತೆ ಕಮಲಿ ನಿಧಾನವಾಗಿ ರಂಗದ ಬಲಭಾಗದಿಂದ ಬಂದು ಗಂಭೀರವಾಗಿ ನಿಲ್ಲುವಳು. ಎಡಗೈಯಲ್ಲಿ ಹಾಲಿನ ಗಡಿಗೆಯಿದೆ. ಪಾರಿಜಾತದ ಗೊಲ್ಲತಿಯಂತೆ ಅವಳ ಭಂಗಿ, ಉಡುಪು, ಕೊನೆಯತನಕ ಹಿಮ್ಮೇಳದವನ ಬಗ್ಗೆ ನಿರ್ಲಕ್ಷ್ಯದಿಂದ ಇರುತ್ತಾಳೆ.)

ಸೂತ್ರಧಾರ : ಸೂರ್ಯ ತಾಯೀ ಹೊಟ್ಯಾಗ ಹೋದ ಯಾಳೇದಲ್ಲಿ
ಹಾಲಗಡಿಗಿ ಇಡಕೊಂಡ, ಕೈಬೀಸಿ,
ಬಿರಿಬಿರಿ ಹೊಂಟೀದಿ,- ತಂಗೀ
ನೀನು ಯಾರು?

ಹಿಮ್ಮೇಳದವ : (ಕಮಲಿ ಸುಮ್ಮನೆ ನಿಂತುದನ್ನು ನೋಡಿ)
ಉದ್ದಕ ಈಚಲಬಡ್ಡೀ ಹಾಂಗ ಹಾಂಗs ನಿಂತಾಳಲ್ಲೊ!
ದೇವರ ಇದಕ ಮೋತಿ ಮಕಾ ಮಾಡಿದಾನಿಲ್ಲೊ?
ಇನ್ನೊಮ್ಮಿ ಮಾತಾಡಿಸಿ ನೋಡು,

ಸೂತ್ರಧಾರ : ತಂಗೀ, ಇಲ್ಲಿ ಬಂದಂಥವಳು ನೀನು ದಾರು?

ಕಮಲಿ : ಹರೇದ ಹುಡಿಗೇರನ್ನ ತರಿಬಿ, ಹೆಸರ ಕೇಳೋವಂಥಾ
ನೀನು ದಾರು?

ಹಿಮ್ಮೇಳದವ : ನಿಮ್ಮಂಥಾ ಹೊತ್ತ ಗೊತ್ತಿಲ್ಲs ತಿರಗಾವರಿಗಿ ಹಗ್ಗಾಹಚ್ಚಿ
ಹಂತೀಹೂಡೋ ಮೇಟಿ ತಾಳ ಅಂತಾರ.
ಅಟ್ಟದ ಮ್ಯಾಲಿ ಬಂದಂಥವರನ್ನ ಗಟ್ಟಿಸಿ ಮಾತಾಡಿಸುವಂತಾ
ಸೂತ್ರಧಾರ ಅಂತಾರ.
ಹೋಗೋ ಬಾರೊ ಪರಬೂ ಅಂತಾರ.
ನನಗ ಬಂದ ಹಿಮ್ಮಾಳ್ಯಾ ಅಂತಾರ.
(ಪ್ರತಿಕ್ರಿಯೆಗಾಗಿ ಕಾದು ಆಗಲೂ ಅವಳು ಸುಮ್ಮನೆ ನಿಂತುದನ್ನು ನೋಡಿ)
ತೋದ ಹೊರಸಿನ್ಹಾಂಗ ಇನ್ನೂ ಬಿಗದ್ದಾಳಲ್ಲೊ!
ನಾರೊ ಎಣ್ಣಿ ಹಚ್ಚಿದಾಳಂತ
ಭಾಳ ದಿಗರ ಮಾಡತಾಳೇನಿಕಿ?

ಸೂತ್ರಧಾರ : ತಂಗೀ ಬಂದಂಥವಳು ನೀನು ದಾರು?
ನಿನ್ನ ನಾಮಾಂಕಿತವೇನು?

ಹಿಮ್ಮೇಳದವ : ಕನ್ನಡದಾಗ ಕೇಳೊ, ತಂಗೀ, ಓಣ್ಯಾಗಿನ
ಅವ್ವಕ್ಕಗೋಳು, ಹೇಳಗುಗ್ಗರಿ ತಿಂದ
ಇಟ್ಟಂಥಾ ನಿನ್ನ ಹೆಸರೇನು?

ಕಮಲಿ : ಅಪ್ಪಾ ಸೂತ್ರಧಾರ, ಹೇಳಾಕs ಬೇಕ?

ಸೂತ್ರಧಾರ : ಹೇಳಿದರ ನನಗಾದರೂ ತಿಳಿದೀತು.
ಕುಂತ ನಾಕ ಮಂದಿಗಾದರೂ ತಿಳಿದೀತು.

ಹಿಮ್ಮೇಳದವ : ಮ್ಯಾಲ ನನಗಾದರೂ ತಿಳಿದುಬಂದೀತು,

ಕಮಲಿ : ಸೂತ್ರಧಾರ, ಬಲಕ್ಕ ಬೇವಿನ ಮರ, ಎಡಕ್ಕ
ತೆಂಗಿನ ಮರ, ನಡಕಿನ ಹೊಲಗೇರ್ಯಾಗಿರುವಂಥಾ
ಹೊಲೇರ ಪಾರೀ ಮಗಳು,
ಕಮಲಿ ಕಮಲಿ ಅಂತಾರ ನೋಡು.

ಹಿಮ್ಮೇಳದವ : ಪಾರಿ? ಊರ ಹೋರಿಗೋಳೆಲ್ಲಾ ಆಕಿ ಕಾಲಾಗs
ಎತ್ತಾದವು ಬಿಡೋ!

ಸೂತ್ರಧಾರ : ಅವೂ ಕಮಲವ್ವ,
ಹೊತ್ತ ಮುಣಗಿದ ಯಾಳೇದಲ್ಲಿ
ಮನೀ ಮುಂದಿನ ಹೊರಸಿನ ಮ್ಯಾಲ ಕುಂಡ್ರೂದ ಬಿಟ್ಟ
ಹಾಲಗಡಿಗಿ ಹಿಡಕೊಂಡ
ಈ ಸಭಾಕ ಬಂದ್ಯಾಕ? ಹ್ವಾದ್ಯಾಕ?

ಹಿಮ್ಮೇಳದವ : ಹಾಂಗೆಲ್ಲಾ ಹೋಬ್ಯಾಡೂ ಹಂತ್ಯಾಕ ಹಾದರ
ಗಬ್ಬ ಆಗೂ ಜಾತಿ ಅದು!

ಕಮಲಿ : ಅಪ್ಪಾ ಸೂತ್ರಧಾರ
ಕಾಲಾಗ ಕೆಟ್ಟ ಅಮಾಸಿ ಬಂತು.
ಇಂದಿಗೆ ಮೂರ ದಿನದಿಂದ ಕೆಟ್ಟ ಕನಸ ಬಿದ್ದು,
ಕನಸಿನಾಗ ಯೋಳಹೆಡಿ ಸರ್ಪ ಕಂಡ್ಹಾಂಗಾಗಿ,
ದೇವರಿಗಿ ಹಾಲೆರದ, ಬೇಡಿಕೊಂಬರಾಕ ಹೊಂಟೇನಿ.

ಸೂತ್ರಧಾರ : ಯೋಳಹೆಡಿ ಸರ್ಪ ಕಂಡರ ಕೆಟ್ಟ ಕನಸ ಹೆಂಗ ಆಯ್ತು?

ಕಮಲಿ : ಅಯ್ ಶಿವನ! ಹೆಂಗ ಹೇಳಲೆ?

ಹಿಮ್ಮೇಳದವ : ಏ, ಹೆಂಗಾರ ಮಾಡಿ ಹೇಳಾಕs ಬೇಕ ತಗಿ.

ಕಮಲಿ : ಅವಯ್ಯ! ಏನ ಹೇಳಲೆ?

ಹಿಮ್ಮೇಳದವ : ಏನಾರ ಹೇಳಾಕs ಬೇಕ ಬಿಡು. ನಿಂದ ಕೇಳಾಕs
ನಾ ಹುಟ್ಟಿಧಾಂಗ ಅನ್ನಸಾಕ ಹತ್ತೇತಿ!

ಕಮಲಿ : ಅಪ್ಪಾ ಸೂತ್ರಧಾರ,
ಇಂದಿಗಿ ಮೂರ ರಾತ್ರಿ ಆತು, ಕೆಟ್ಟ ಕನಸ
ಬೀಳಲಿಕ್ಹತ್ಯಾವ….

ಸೂತ್ರಧಾರ : ತಂಗೀ ಕನಸಿನೊಳಗ ಏನೇನ ಕಂಡಿ?

ಕಮಲಿ : ಹಾಂಗಾದರ ಹೇಳುತ್ತೇನೆ ಕೇಳುವಂಥವನಾಗು.

ಸೂತ್ರಧಾರ : ಕೇಳುತ್ತೇನೆ, ನೀನಾದರೂ ಹೇಳುವಂಥವಳಾಗು.

ಕಮಲಿ : (ಉಚಿತ ಅಭಿನಯ, ನೃತ್ಯದೊಂದಿಗೆ)
ಅಪ್ಪಾ ಸೂತ್ರಧಾರ ಕೇಳೊ ಕನಸ ಕಂಡಿನೆ
ಸುಖದ ನೋವ ಸದ್ದಮಾಡಿ ಹೆಂಗ ಹೇಳಲೆ? ||||
ಬೆಳ್ಳಿತೊಡಿಯ ಬಿಳಿಯ ಕುದರಿ ಬೆರಗ ಕಂಡಿನೆ
ಬೆನ್ನನೇರಿ ಚಿನ್ನದುರಿಯ ಕಾಡ ಕಂಡಿನೆ ||
ಅಯ್ ನನ ಶಿವನ ಆರ್ಯಾಣದಾಗ ಅರಳಿ ಶಿರಸಲ
ಎಲ್ಲಿ ಕೈಯ ಹಾಕಿದಲ್ಲಿ ಗೊಂಚಲs ಗೊಂಚಲ ||
ಹಿಂದ ಮುಂದ ತಂಪಗಾಳಿ ತೀಡಿ ಸಳಸಳ
ಚಿನ್ನ ತೊಡಿಯ ಊರಿ ಸುರಿಸೇನ ಹೂವ ಬಳಬಳ ||
ಹೂವ ಕರಗಿ ಕೆಂಪ ನೀರ ಕೆರಿಯ ಕಂಡಿನೆ
ಯೋಳ ಹೆಡಿಯ ಕಾಳನಾಗ ದೊರಿಯ ಕಂಡಿನೆ ||
ಸಂದಿಗೊಂದಿ ಬೆಂಕಿ ಹಚ್ಚಿ ಹೆಡಿಯ ಚುಚ್ಚಿದಾ
ಮೈಯನೊಟ್ಟಿ ಮೆಟ್ಟಿ ತುಳಿದು ಮುದ್ದಿ ಮಾಡಿದಾ ||
ಬಳಸಿ ಆಗುಮಾಡಿ ಸಾಗಿ ಸಂದು ಹೋದನೊ
ಸುಖದ ನೋವ ಎದಿಗಿ ನಟ್ಟು ದಾಟಿ ಹೋದನೊ ||
ಅಪ್ಪಾ ಸೂತ್ರಧಾರ

ಸೂತ್ರಧಾರ : ಹಾ.

ಕಮಲಿ : ಕಾಣಾ ಕಾಣಾ ಇದರಿಗೊಂದ ಬಿಳಿ ಕುದರ್ಯಾಗಿ
ಕುದರೀ ಏರಿ ಸೆರಗ ಬೀಸಿಧಾಂಗಾತು.
ಕಣ್ಣಮುಚ್ಚಿ ಕಣ್ಣ ತೆರೆಯೋದರೊಳಗ
ನಿರ್ವಾಣೆಪ್ಪನ ಗುಡ್ಡ ಆಗಿ, ಗುಡ್ಡದ ತುಂಬ
ಎಲ್ಲಿ ನೋಡತಿ ಅಲ್ಲಿ, ಎಲ್ಲಿ ಕೈ ಹಾಕತಿ ಅಲ್ಲಿ
ಕೆಂಪ ಹೂವಿನ ಗೊಂಚಲs ಗೊಂಚಲ!
ನನ್ನ ಮೈ ಸಂದಿಗೊಂದ್ಯಾಗೆಲ್ಲ ಮೂಡಗಾಳಿ ಸುಳುಸುಳು ಅಂದು,
ಶಿವನs ಇದೇನಂತ ನೋಡಿಕೊಂಡರ,-
ನಾನs ಬಂಗಾರ ತೊಡಿ ಊರಿ ಗಿಡಾ ಆಧಾಂಗಾತು!
ನಡುಕ ಹುಟ್ಟಿ ಮೈ ಹೀಂಗ ಅಲುಗಿದರ,
ಬಳಬಳಾ ಹೂ ಉದರಿ, ಉದುರಿದ ಹೂವ ಕೆಂಪ ಕೆರಿಯಾಗಿ
ಕೈಮಾಡಿ ಕರಧಾಂಗಾತು!
ಕುಡೀಬೇಕಂದರ ಬಗಸ್ಯಾಗ ಬಂತು ಇಲ್ಲಾ,-
ಯೋಳ ಹೆಡಿ ನಾಗರಹಾಂವ ನಡಾ ಬಿಗಧಾಂಗಾಗಿ
ಎವ್ವಾs ಅಂತ ಚಿಟ್ಟನ ಚೀರಿ ಎಚ್ಚರಾತು.
ಕರೆವ್ವಗ ಹಾಲೆರಿ ಅಂತ ಅವ್ವ ಅಂದಳು.
ಅದಕ್ಕs ಹೊಂಟೇನಿ.

ಹಿಮ್ಮೇಳದವ : ಅಂತೂ ಹಾಲಿನ ಗಡಿಗಿನ್ನೂ ಮುಕ್ಕಾಗಿಲ್ಲಂಧಾಂಗಾತು.

ಸೂತ್ರಧಾರ : ಅಷ್ಟ ಸಸಾರಲ್ಲೊ ಈ ಗಣಿತ. ಕಮಲವ್ವಾ,
ನೀ ಎಲ್ಲಿ, ಯಾಕ ಹೊಂಟೀದಿ ಅನ್ನೋದು ನನಗಾದರೂ
ತಿಳೀತು, ಕುಂತ ಸಭಾಕಾದರು ತಿಳಿದಬಂತು.
ಆದರ ಮೊದಲ ಬಂದ್ಯಾಕ? ಹ್ವಾದ್ಯಾಕ?

ಕಮಲಿ : ಹಿಂಗs ಹೋಗೂಣಂತ ಸನೆ ನೋಡಿ ಬಂದರ
ಗುಬುಗುಬು ಮಂದಿ ಕೂಡಿತ್ತು, ತಿರಿಗಿನಿ.
ಮಂದ್ಯಾಗ ನಂದೇನೈತಿ? ಅಂಧಾಂಗ ಮಂದಿ
ಯಾಕ ಕೂಡೇತಿ?

ಸೂತ್ರಧಾರ : ನಮಗ ನಿನಗ ಹೇರಪೇರ ಆಗೋದs ಇಲ್ಲಿ.
ನೀ ಯಾಕ ಹೊಂಟೀದಿ ಅನ್ನೋದರ ನಿನಗ ಗೊತ್ತೈತಿ:
ನಮಗ ಎಂದ ಗೊತ್ತಿತ್ತು?
ಮರತವರ್ಹಾಂಗ ಹುಡಿಕ್ಯಾಡಾಕ ಸೇರೇವಿಲ್ಲಿ!
ಏನ ಮರತಿದೇವ ಅದs ಗೊತ್ತಿಲ್ಲಾ, ಹುಡುಕೋದೇನಾ?
ಬಿಳೀ ಮುಗಲ ಸಂಜಿ ಮುಂಜಾನೆ
ಒಣಾ ಬಣ್ಣಾ ನಕ್ಕ ತಿರಿಗೇ ತಿರಿಗತೈತಿ.
ಭೂಮಿಮ್ಯಾಲ ಲಂಗೋಟಿಯಷ್ಟ ನೆರಳ ಬೀಳೋದಿಲ್ಲ;
ಹದಾ ಬಾಯ್ತೆರದ ಹಾಂಗs ನಿಂತೈತಿ,-

ಹಿಮ್ಮೇಳದವ : ಮಂದೀದೊಂದಾದರ ನಿಂದs ಒಂದಪಾ!
ನೆಟ್ಟಗ ಮಾತಾಡಾಕೇನ ರೊಕ್ಕ ಬೀಳತಾವು?
ಮಾರಾಯಾ, ಸರಳ ಹಾದೀ ಹಿಡದ ಮಾತಾಡಿದರs
ಒಬ್ಬನ ಮಾತ ಇನ್ನೊಬ್ಬಗ ಮುಟ್ಟೋ ದಿನಮಾನ ಅಲ್ಲಿವು;
ಅಂತಾದರಾಗ ಒಂಕ ಒಗಟಾ ಹಾಕಿದರ?
ನೋಡ ಕಮಲವ್ವಾ, ಹೇಳಿ ಹ್ವಾದ ಮಳಿ ಬರಲಿಲ್ಲ.
ಊರಿಗಿ ಊಟಾ ಹಾಕಿ ಐದ ದಿನಾ ಹಸೀ ಒದ್ದೀಲೆ
ಬಜನಿ ಮಾಡಿದರೂ ಮುಗಲ ಯಾಕನ್ನಲಿಲ್ಲ.
ಯಾಕನ್ನಬೇಕನ್ನಲಾ. ಗೌಡ್ರ ಮಗ ಬಾಳಗೊಂಡ
ಸಾಲಿ ಬರ್ಯಾಕ ಬ್ಯಾರೇ ದೇಸಕ ಹೋಗಿದ್ದ.
ಅಷ್ಟೂ ಬರದ ಇಂದ ಬರತಾನ.
ಮನ್ನಿ, ಪಾರಂಬಿ ಕರ್ರೆವ್ವ ಪೂಜೇರಿ ಮೈಯಾಗ ತುಂಬಿ
‘ಗೌಡನ ಮಗ ಬಂದು ಊರ ಅಗಸ್ಯಾಗ
ಮೂರ ಹೆಜ್ಜಿ ಇಟ್ಟದ್ದಾದರ,
ಪಳಪಳ ಮಳಿ ಬರತೈತಿ’ ಅಂತ ಹೇಳ್ಯಾಳ.
ಮೂರ್ಯಾಕ? ಅಗಸ್ಯಾಗ ಐದ ಹೆಜ್ಜಿ ಬಿಟ್ಟ ಗದ್ದಿಗೀ ಮಾಡೇವ!
ಎಲ್ಲಾ ಆತು. ಇನ್ನ ಅವನ ಕಾಲಗುಣಲೆ ಆದರೂ
ಮಳಿ ಬರತೈತೇನಂತ ಅಗಸ್ಯಾಗ ನಿಂತೇವ.
ಹೊತ್ತ ಮುಣಗಿ ಕತ್ತಲಾಗಾಕ ಹತ್ತೇತಿ
ಇನ್ನೇನ ಬರೋ ಹೊತ್ತಾತ.

ಸೂತ್ರಧಾರ : ಅವೂ ಕಮಲವ್ವ,
ಪೂಜಿಗಿ ಹೋಗೋದ ಹೋಗತಿ.
ನೀ ಎರವ ಹಾಲಿನ್ಹಾಂಗ ಮುಗಲ ಸುರೀಲೆಂತ
ಬೇಡಿಕೋ ಹೋಗು.

ಕಮಲಿ : ಹಾಂಗಾದರ, ಅಪ್ಪಾ ಸೂತ್ರಧಾರ ನಾ ಬರಲ್ಯಾ?
ಅಪ್ಪೂ ಹಿಮ್ಯಾಳ್ಯಾ ನಾ ಬರಲ್ಯಾ?
(ಹೋಗುವಳು)
(
ಪೂರ್ವರಂಗ ಮುಗಿದುದು. ಸೂತ್ರಧಾರ ಪ್ರೇಕ್ಷಕರನ್ನು ಕುರಿತಾಗಿ ಸ್ವಗತ ಭಾಷಣ ವೆಂಬಂತೆ ಮಾತಾಡುತ್ತಿರುವಾಗ ಹಿಂದಿನವರೆಲ್ಲ ಗದ್ದಿಗೆಯ ಸುತ್ತ ಸೇರಲಾರಂಭಿಸುತ್ತಾರೆ.)

ಸೂತ್ರಧಾರ : ಕಾಯೋದ, ಹಾದೀ ನೋಡೋದ, ಕಾಯೋದ,-
ಮಾಡಾಕೇನೂ ಇಲ್ಲದ್ದಕ್ಕ ಕಾಯೋದ,
ನೋಡಾಕೇನೂ ಇಲ್ಲದ್ದಕ್ಕ ಕಾಯೋದ,
ಕಿರಿಬೆರಳ ಚಿವುಟಿದರು ಎಚ್ಚರಾಗದಷ್ಟು
ಮೈ ಮರಗಟ್ಟೋತನಕ ಕಾಯೋದ!-
ಹಳೀ ನೋವಿನ್ಹಾಂಗ ಎಲ್ಲೋ ಅಳಕತೈತಿ;
ನಮ್ಮನ್ನೇನ ಈ ತೆಪ್ಪ ಉಳಸಾಣಿಲ್ಲ,
ಮುಳಗೋದ ತಪ್ಪಸಾಣಿಲ್ಲ,
ಈಸಿ ಬರೋ ತಾಕತ್ತಿಲ್ಲ,
ಆದರ ನಂಬಾಕ ಮನಸ ಆಗಾಣಿಲ್ಲ.
ಯಾಕಂದರ ತೆಪ್ಪs ಇಲ್ಲ!
ದೇವರs, ನಾವು ಮಾಡತಾ ಇದ್ದದ್ದ ನಮಗs
ಗೊತ್ತಾದರ ಏನ ಮಾಡೋಣು?
ಹೊತ್ತ ಮುಣಗಿ ಕತ್ತಲಾತ ಇನ್ನೂ ಬರಲಿಲ್ಲಲ್ಲೊ!

ಇರಿಪ್ಯಾ : ಭರಿಮ್ಯಾ ಒಬ್ಬ ಹ್ವಾದಾ, ಭಾಳ ಹಳಹಳಿ
ಆತ ಮಾರಾಯಾ!

ಗುರ್ಯಾ : ಬಿಕನೇಸಿಗೋಳಿದ್ದರ ಇಷ್ಟ ಆಗೋದs ಮತ್ತ;
ಅದಕೇನ ನಾ ಇಲ್ಲ, ನೀ ಇಲ್ಲ.

ಯಮನ್ಯಾ : ಆದದ್ದರ ಏನ ಹೇಳ್ರೊ ನಮಗsಟು.

ಇರಿಪ್ಯಾ : ಸಜ್ಜನ ಬಂದ ನೋಡ್ರೆಪಾ, ಗೊತ್ತಿಲ್ಲದವನ್ಹಾಂಗ ಆಡತೀಯಲ್ಲೊ?

ಯಮನ್ಯಾ : ಏ, ಏನ ಖರೇನ ನನ್ನಾಣಿ ನಿರ್ವಾಣೆಪ್ಪನ
ಆಣಿ ಗೊತ್ತಿಲ್ಲ, ಒಳತನ್ನು.

ಗದಿಗ್ಯಾ : ಹಳಬರ ಭರಿಮ್ಯಾ ಇರಾಕಿಲ್ಲಲೊ? ಅಂವ ಇಂದ ಹ್ವಾದ.

ಯಮನ್ಯಾ : ಅsಟ ನನಗೂ ಗೊತೈತೊ; ಹೆಂಗ ಹ್ವಾದಂದ್ರ?

ಇರಿಪ್ಯಾ : ಸರ್ವತ್ತಿನಾಗ ಮುದಿಗೌಡ ಬರಿಮ್ಯಾನ ಕರದು-
ಮಗನs ಹೊಲೇರ ಯಮನೀ ಮನಿಗಿ ಹೋಗು
ನಾಳಿ ಹರೀವತ್ತ ಗೌಡರು ಮನೀಗಿ ಬರಾಕ
ಹೇಳ್ಯಾರಂತs ಕರದ ಬಾ ಹೋಗು – ಅಂದಾರ.
ಈ ಮಗಾ ಹೋಗಿ ಬಾಗಲಾ ಬಡದ್ದಾನು-
ತೆರದಿತ್ತು. ಅಡ! ಈ ಯಾಳೇದಾಗ ಯಮನಿ
ಬಾಗಲಾ ಹಾಂಗs ಬಿಟ್ಟಾಳಲ್ಲಪಾ – ಅಂದವನ
ಒಳಗ ಹೊಕ್ಕಿದಾನು – ದೀಪಿಲ್ಲ, ಬೆಳಕಿಲ್ಲ –
ಕೈಯಾಡಿಸಿಕೋತ ಹೊಕ್ಕಿದಾನು, – ಹೊರಸ ಸಿಕ್ಕೈತಿ.
ಮ್ಯಾಲ ಯಮನಿ ಮಲಗಿದ್ದಳು. ಇಂದ ಯಾರೂ
ಗಿರಾಕಿ ಇಲ್ಲದ್ದಕ್ಕ ಕದಾ ತಗದೈತಂದವನ ಮಗಾ
ಇವನೂ ದೋತರ ಕಚ್ಚೀ ಬಿಚ್ಚಿದ!
ಗಳಿಗಿ ಹೊತ್ತಾಗಿ, ಮಗನ ಮದಾ ಇಳದ
ಕರದ್ದಾನು – ಮಾತಾಡಿಲ್ಲ. ಅಳಿಗ್ಯಾಡಿಸಿದಾನು – ಎದ್ದಿಲ್ಲ,
ಮುಟ್ಟತಾನು ಮೈ ತಣ್ಣಗ ಚೋಳ!
ಅಲ್ಲೆ ಒಮ್ಮಿ ಚೀರಿ, ಮತ್ತೇನ ತಿಳೀತೇನೊ
ಬಾಯಿಮಾಡಿ ಹಾಡಿಕೋತ ಹೊರಗ ಬಂದ.
ಸೀತೀನ ಎಬ್ಬಿಸಿ ಚಿಮಣಿ ತಗೊಂಡ್ಹೋಗಿ
ನೋಡತಾನು-ತೆರದ ಕಣ್ಣ ತೆರಧಾಂಗs
ಯಮನಿ ಗೊಟಕ್! ಇವನೂ
ಮಗಾ ಚೀರಿದವನs ಅಲ್ಲೇ ಗೊಟಕ್ಕಂದಬಿಟ್ಟ.