(ಸರಿರಾತ್ರಿಯ ಸಮಯ. ಭಯಂಕರವಾಗಿರುವ ಮೂವರು ಸ್ತ್ರೀಯರು ರಂಗದ ಮಧ್ಯದ ಗದ್ದಿಗೆಯ ಮೇಲೆ ಕುಳಿತಿದ್ದಾರೆ. ರಂಗದ ಮುಂಭಾಗದಲ್ಲಿ ಸೂತ್ರಧಾರ ಕಾಣಿಸಿಕೊಂಡು ಅವರನ್ನು ನೋಡುತ್ತಾನೆ.)

ಸೂತ್ರಧಾರ : ಆಟ ಅರ್ಧಾಕ ಬಂದರೂ ಹೊಸಾ ಮಂದಿ
ಬರೋದೇನ ನಿಂದರಲಿಲ್ಲ. ಬರೋ ಮಂದಿ
ಮುಗದ ಹಿಂದ ಸರೀಬೇಕಂದರ ಮತ್ತ
ಮೂರ ಮಂದಿ ಇಲ್ಲೆ ಬಂದ ಕುಂತಾರ.
ನೋಡಾಕ ದೆವ್ವಿನ್ಹಾಂಗ ಕಾಣತಾರ, ಇವರು
ಯಾರಿರಬಹುದು? ಒಬ್ಬರ ಹಣೀಮ್ಯಾಲ
ಕುಂಕುಮ ಇಲ್ಲ, – ಮಿಂಡೇರಂತೂ ಹೌದ!
ನೋಡಾಕ ಇದ್ದಲಿ ಹಾಂಗ ಕಂಡರೂ ಜಳ
ಇಲ್ಲೀತನಕಾ ತಾಗತೈತಂದ ಮ್ಯಾಲ, ಯಾರೋ
ದೊಡ್ಡ ಮಂದೀನs ಇರಬೇಕು, ಮಾತಾಡಿಸಿ
ನೋಡೋಣು, – ಅವ್ವಾ ತಾಯಂದಿರಾ ತಾವು
ಬಂದಂಥವರು ದಾರು? ಇಂತಾ ಕತ್ತಲಿ
ಯಾಳೇದಾಗ ಇಲ್ಲಿಗಿ ಬಂದ ಕಾರಣೇನು?
ಚಂದದಿಂದ ಹೇಳುವಂಥವರಾಗಿರಿ.
(ಸುಮ್ಮನೆ ಅವರು ಒಬ್ಬರನ್ನೊಬ್ಬರು ನೋಡುತ್ತ ಕುಳಿತಿರುವರು.)
ಅಡ! ಹೆಸರ ಕೇಳಿದ ಯಾಳೇನ ಚಲೋ
ಇಲ್ಲೇನ ಮಣ್ಣ! ಅವ್ವಾ ತಾಯಂದಿರಾ
ಕಣ್ಣಿಗಿ ದೊಡವರ್ಹಾಂಗ ಕಾಣತೇರಿ; ಹೆಸರ
ಕೇಳೋದರಾಗ ಏನಾರ ಎಡವಟ್ಟ ಆಗಿದ್ದರ
ಹೊಟ್ಟ್ಯಾಗ ಹಾಕ್ಕ್ಯೊಂಡು, ತಮ್ಮ ನಾಮಾಂಕಿತವೇನೆಂದು
ಶರಣಂತೇನು, ಹೆದರಬ್ಯಾಡಂತ ಹರಸಿ
ತಿಳಿಸುವಂಥವರಾಗಿರಿ.

೧ನೆಯವಳು : ನಮ್ಮ ಹೆಸರ ಕೇಳೋವಂಥಾ ನೀ ದಾರು?
ಮೊದಲು ಹೇಳುವಂಥವನಾಗು ಕಂದಾ,
ನಿನ್ನ ಮಾತೆನಗೆ ಚಂದಾ.

ಸೂತ್ರಧಾರ : ತಾಯೀ ತಮ್ಮಂಥಾ ತಿಳಿದವರು ಸೂತ್ರಧಾರ
ಅಂತಾರು, ತಿಳೀದವರು ಮೇಟೀತಾಳ ಅಂತಾರು.
ಎರಡೂ ಅಲ್ಲದವರು ಹೋಗುಬಾರೊ ಪರಬೂ
ಅಂತಾರು. ನಿಮಗ ತಿಳಿದ ಹೆಸರಲೆ ಕರೆದು
ನಿಮ್ಮ ನಾಮಾಂಕಿತ ಹೇಳುವಂಥವರಾಗಿರಿ.

೧ನೆಯವಳು : ಸೂತ್ರಧಾರ, ಹೇಳಲೇಬೇಕೇನು?

ಸೂತ್ರಧಾರ : ಹೇಳಿದರ ನನಗೂ ತಿಳಿದೀತು, ಕೂತಂಥ
ನಾಕ ಮಂದಿಗಾದರು ತಿಳಿದೀತು?

೧ನೆಯವಳು : ಹಾಂಗಿದ್ದರ ಸೂತ್ರಧಾರಾ, ಕೇಳುವಂಥವನಾಗು,
(ಕೆಳಗಿನ ಪದ್ಯವನ್ನು ಮಾತಾಡುವ ದಾಟಿಯಲ್ಲಿ ಹೇಳಬೇಕು.)
ಆಯ್ತಾರಮಾಸಿ ಪುರಮಾಸೆ ಕತ್ತಲಿ|
ಗಚ್ಚಿನ ಗುಡ್ಯಾಗ ದೀಪಿಲ್ಲ, ಬೆಳಕಿಲ್ಲ.
ನಿನ್ನಿ ಮೊನ್ನಿ ಹರೇಕ ಬಂದೆ
ಕಣ್ಣ ಹಾರಿಸಿ ಹುಸಿ ನಗಿ ನಕ್ಕೆ
ನೆರಿಮನಿ ರಾಯ ಮೀಸೀ ಕುಣಿಸಿ
ಕೂಕುಮ ಹಚ್ಚಿ ಮದಿವ್ಯಾದ||
ಹೊಸ ಸೊಸಿಯಾಗಿ ನಡ್ಯಾಕ ಹೋದೆ
ಹೊಸಾ ಹಾಸಿಗಿ ಮಗಮಗ ಮಗ್ಗಿ
ಮಗ್ಗಲದಾಗ ಗನ ಗಂಡಾ | ನನ ಗಂಡಾ
ಕಣ್ಣಿನಾಗ ಚೂರಿ ಇಟಗೊಂಡ
ಮಗ್ಗಲ ಗಂಡನ ಮೈತುಂಬಿರಿದೆ
ಕೈಯ ಉಗರ ಕುಡಗೋಲಾ | ಕುಡಗೋಲಾ||
ಕಾಲಿನೊಳಗ ಮುಳ್ಳಿನಾಂವಿಗಿ
ಗಂಡನ ಮೈಯ ಕಚಪಚ ತುಳಿದೆ
ಹೆದರಿದ ಗಂಡನ ಹರಣಾ ಹಾರಿ
ಕೋಣನ ಮೈಯ ಸೇರ್ಯಾವ
ಕೋಣಾ ಕಡಿದು ಜೀವಾ ಹಿಂಡಿ
ಹಾಸಿಗಿ ತುಂಬ ಹಸಿರಕ್ತ | ಹಸಿರಕ್ತ||
ರಗತದ ಸುತ್ತ ಒಡ್ಡ ಕಟ್ಟಿ
ಬತ್ತಿಯಾದೆ ಕಾಲ ಊರಿ
ನೆತ್ತಿಯ ದೀಪ ಹೊತ್ತಿಸಿಕ್ಯಾರಿ
ಮಿಂಡರ ಕರೆದೆ ಕೈಮಾಡಿ| ಕೈಮಾಡಿ||
ಮಿಂಡ ಬಂದಾ ದೀಪ ಕಳದಾ
ಅಕ್ಕರತೀಲೆ ಏನೇನಂದಾ
ನೋಡಬ್ಯಾಡ ಕಣ್ಣ ತೆರೆದ
ತೆರದರ ನಾ ಸುಂಟರಗಾಳಿ | ಸುಂಟರಗಾಳಿ||
ಹತ್ತ ಹುಣಿವಿ ಹತ್ತಮವಾಸಿ
ಕಣ್ಣ ತೆರದ ಕಂಡೇನ
ಗಂಡನಲ್ಲ ಮಿಂಡನಲ್ಲ
ಹಳೀ ದೆವ್ವ ಹಂತೇಲಿತ್ತ
ರಗತದ ಕೂಕಮ ಹಚ್ಚಿತ್ತ
ರಗತದ ಕೂಕುಮ ಹಚ್ಚಿತ್ತ.

ಸೂತ್ರಧಾರ : ತಾಯೀ ನಿಮ್ಮ ಕತೀ ಆದರೂ ನಮ್ಮ
ಗೌಡ್ತಿ ಕಥೀ ಹಾಂಗೈತಿ;
ನೀವು ದುರಗವ್ವನವರಲ್ಲ?
(ಹೌದೆಂಬಂತೆ ಕತ್ತು ಹಾಕುವಳು.)
ತಾಯಿ, ನಿಮ್ಮ ಹೆಸರೇನಂಬೋದು ನನಗಾದರು
ತಿಳಿದುಬಂತು. ಇನ್ನ ನಿಮ್ಮ ನಾಮಾಂಕಿತವೇನೆಂದು
ಚಂದದಿಂದ ಹೇಳುವಂಥವರಾಗಿರಿ.

೩ನೆಯವಳು : ಸೂತ್ರಧಾರ, ನಾನು ಕೊಮರಾಮನ ತಾಯಿಯೆಂದು
ಭಾವಿಸುವಂಥವನಾಗು.

ಸೂತ್ರಧಾರ : ತಾಯೀ, ಯಾವ ಕೊಮರಾಮ, ಏನ ಕತಿ
ಎಲ್ಲಾ ಬಿಡಿಸಿ ಹೇಳುವಂಥವಳಾಗು.
( ಹಾಡನ್ನೂ ವಿಶೇಷ ರೀತಿಯಲ್ಲಿ ಮಾತಾಡಬೇಕು.)

೩ನೆಯವಳು : ದಿಕ್ಕನಾಳಿದ ಮಗ ದಂಡನಾಳಿದ ಮಗ
ಹೆಬ್ಬೂಲಿಯಂಥ ಗಂಡಮಗ
ಹುಟ್ಟಿದೆರಡೇ ದಿನಕ ಪಟ್ಟs ತಿರುಗೀದ
ಪಟ್ಟs ಹುಡಿಗೇರ ಎಳದ ಮಗ ||
ಹೋಗತ ಹೊನ್ನವ ಮುಡಿದ ಬರತ ಬನ್ನಿಯ ಮುಡಿದ
ಕಂಡಲ್ಲಿ ಕರಿಬೇವ ಮುಡಿದ
ಹಾದೀ ಹುಡಿಗಿಯನೆಳೆದ ಬೀದೀ ಬಾಲಿಯನೆಳೆದ
ಸಂದಿಗೊಂದಿಯ ಸುಂದರಿಯನೆಳೆದ ||
ಪುಂಡನ ಪುಂಡಾಟಕ ಹಿಂಡ ಮಂದಿ ಕೂಡ್ಯಾರ
ಕಂಡಲ್ಲಿ ಹಿಡಿದಾರ ಕಲ್ಲ
ಎಣಿಸಿ ಐನೂರ್ಮಂದಿ ಸಾವಿರ ಕೈಗೋಳ
ಕೈಗೊಂದ ಕೊಡಲಿ ಕುಡಗೋಲ ||
ಸವರ್ಯಾರ ಧೀರನ್ನ ತರದಾರ ಕೂಸಿನ್ನ
ಕಡದಾರ ಹಿಡಿಹಿಡದ ಎಳಕನ್ನಾ
ಕೈ ತೊಳದ ಕನ್ನಡಿ ಕಂಡೇನ ಅಂದರ
ಸತ್ತಾಂವಾ ಅವನಲ್ಲ ನಾವೇನ ||
ದಿಕ್ಕನಾಳಿದ ಮಗ ದಂಡನಾಳಿದ ಮಗ
ಹೆಬ್ಬೂಲಿಯಂಥ ಗಂಡಮಗ
ಹೆಬ್ಬೂಲಿಯಂಥ ಗಂಡಮಗನ ತಾಯಿ
ದಿಟ್ಣಾದೇವಿಯು ನಾನು ತಿಳಿಯೊ ಮಗ ||

ಸೂತ್ರಧಾರ : ಹಡದವ್ವಾ ಇದಾದರೂ ಇನ್ನೂ ಆಗದ ಕತಿ; ಅವ್ವಾ,
ನೀವು ದಿಟ್ಣಾದೇವಿ ಅನ್ನೋದು.
ನನಗಾದರು ತಿಳೀತು, ಕುಂತ ಬುದ್ಧಿವಂತರಿಗಾದರು
ತಿಳೀತು. ತಾಯಿ, ಇನ್ನ ಮ್ಯಾಲ ನಿಮ್ಮ ನಾಮಾಂಕಿತ
ಏನೆಂದು ಚಂದದಿಂದ ತಿಳಿಸುವಂಥವರಾಗಿರಿ.

೨ನೆಯವಳು : ಸೂತ್ರಧಾರ, ನಾ ಅಂದ ಆಡಾಕಿಲ್ಲ.

ಸೂತ್ರಧಾರ : ಬಲ್ಹಾಂಗ ಹೇಳು.

೨ನೆಯವಳು : ರಾಗ ಹಚ್ಚಿ ಹಾಡಾಕಿಲ್ಲ.

ಸೂತ್ರಧಾರ : ತಿಳಧಾಂಗ ಹೇಳು.

೨ನೆಯವಳು : ಸೂತ್ರಧಾರ,

ಸೂತ್ರಧಾರ : ತಾಯೀ,

೨ನೆಯವಳು : ಇಂದ ಯಾವಾರ?

ಸೂತ್ರಧಾರ : ಸೋಮಾರ.

೨ನೆಯವಳು : ಯಾಳೆ ಎಷ್ಟು?

ಸೂತ್ರಧಾರ : ಸರ್ವತ್ತು.

೨ನೆಯವಳು : ನಿಂತ ನೋಡ ಎದುರಿಗೇನೈತಿ?

ಸೂತ್ರಧಾರ : ಗೌಡ್ರ ಮನಿ.

೨ನೆಯವಳು : ಏನೇನ ಕಾಣತಿ?

ಸೂತ್ರಧಾರ : ಗಪ್ಪಗಾರ! ಒಂದ ಸಪ್ಪಳಿಲ್ಲ…. ಗೌಡ್ತಿ ಕಣ್ಣಿನ್ಹಾಂಗ
ಜಗಲಿ ಮ್ಯಾಲೊಂದ, ದನದ ಹಕ್ಕ್ಯಾಗೊಂದ
ಪಣತಿ. ಅಲ್ಲೇ ಕಟ್ಟೀಮ್ಯಾಲ ಗೌಡ ಮಲಗ್ಯಾನ,
ಬಾಳಗೊಂಡ ಮಲಗ್ಯಾನ…. ನಾಳೆ ಹರಿವತ್ತಿನ
ಎಳಿಬಿಸಲೆಲ್ಲಾ ಬಾಳಗೊಂಡನ ತುಟ್ಯಾಗ
ತುಳಕ್ಯಾಡತೈತಿ! ನೆತ್ತ್ಯಾಗ ಒಂದಳತಿ ಉರಿಯೋ ದೀಪ-
ಉದ್ದಕ ತೋದ ಬತ್ತೀಹಾಂಗ ಬಿದ್ದಾನ!

೨ನೆಯವಳು : ದೀಪಲ್ಲೊ ಬಾಳಾ, ಜಕ್ಕಜಲದಿ ಬಂದು ಅಕ್ಕರತೀಲೆ
ರತ್ನದ ಹರಳ ಕೊಟ್ಟಾಳ; ರತ್ನಂದರ
ಅಂತಿಂಥಾ ರತ್ನ ಅಲ್ಲ, ಹಂತ್ಯಾಕ ಅದನ್ನ ಇಟಕೊಂಡ
ಖರೆ ಹೆಂಗಸನ್ನ ಹಾಸಿಗಿ ಮಾಡಿ ಮಲಗಿದರೆ
ಬೆವರ ಸುರಧಾಂಗ ಮಳಿ ಬರತೈತೊ ಬಾಳಾ.

ಸೂತ್ರಧಾರ : ನಿನ್ನ ಮಾತ ಕೇಳಿ ಮಳ್ಯಾಗ ನೆನದಷ್ಟ
ಖುಷಿ ಆತ ತಾಯೀ, ಮುಂದ ಹೇಳು.

೨ನೆಯವಳು : ಸೂತ್ರಧಾರ ಮತ್ತೇನ ನೋಡತಿ?

ಸೂತ್ರಧಾರ : ಮುದಿಗೌಡ ಕಣ್ಣ ಕಿಸದ! ಸಂಶೇಧಾಂಗ ಎದ್ದ!
ನೆರಳಾಗಿ ಬೆಳೆದ! ಕತ್ತಲ್ಯಾಗ ಬಾಳಗೊಂಡನ
ಮೈಮ್ಯಾಲ ಬಿದ್ದು ರತ್ನ ತಗೊಂಡ! ತನ್ನ
ತಲ್ಯಾಗಿಟ್ಟಕೊಂಡ! ನಡಮನಿಗಿ ಹೋಗಿ
ಹೊರಸ ತುಂಬ ಕೈಯಾಡಿಸಿ ಹೊರಗ ಬಂದ.
ದನದ ಹಕ್ಕಿಗಿ ನಡದಾ…. ಹಕ್ಕ್ಯಾಗ….
ಹಡದವ್ವಾ, ಖರೆ ಹೇಳಿದರ ಕೇಳತಿ, ಸುಳ್ಳ
ಹೇಳಿದರ ಕೇಳತಿ, ಊರ ಗೌಡ್ತಿ ಹಕ್ಕಿತುಂಬ
ಏಕಾಗಿ ನಿಂತಾಳ! ಮೈತುಂಬ ಕೂಕುಮ!
ಎಣ್ಣಿ ಹಚ್ಚಿದ ಹಸೀ ತಲಿ, ಬಿಟ್ಟ ಕೂದಲ ಬೆನ್ನ ದಾಟಿ
ನೆಲಕ್ಕ ಚೆವರಿ ಬೀಸತಾವ! ಗೌಡ್ತೀ ಆ ಕಡೆ
ಕೆಂಪ ಕುದರಿ, ಈ ಕಡೆ ಬಿಳೀ ಕುದರಿ,
ಬಲಕ್ಕ ಬಂಗಾರ ತೊಡಿ, ಎಡಕ್ಕ ಬೆಳ್ಳೀ ತೊಡಿ-
ನಡಕ್ಕ ಹೋಗಿ ಗೌಡ ನಿಂತಕೊಂಡಾ…. ರತ್ನದ
ಹರಳ ಕಣ್ಣಾಗಿಟ್ಟಕೊಂಡ, ಇಟ್ಟಕೊಂಡವನ
ಯೋಳಪಟ್ಟಿ ಹುಲಿ ಆದ, ಆದವನ
ರಾಕ್ಷೇಸಾಗ…. ಇಟ್ಟುಕೊಂಡವನ, ಆದವನ….
ಗೌಡ್ತಿ ತೂಡಿ ಏರಿದ!….
(ಒಳಕ್ಕೆ ಗೌಡ್ತಿ ಚಿಟ್ಟನೆ ಚೀರಿದ ಸದ್ದು. ಜೊತೆಗೆಯಾರ ಯಾರಂವ? ಕಳ್ಳ ಯಾವನಲೇ?” ಎಂದು ಬಾಳಗೊಂಡ ಕೂಗಿದ ಸದ್ದು. ತುಸು ಹೊತ್ತು ನೀರವ….)

ಸೂತ್ರಧಾರ : ಮುದಿಗೌಡ ಬಿಳೀ ಕುದರಿ ಏರಿ ಓಡಿಸಿದಾ.
ಗೌಡ್ತಿ ಕಾಡಿಗಿ ಜ್ವಾಳಧಾಂಗ ಮೋತಿ ಮಾಡಿ,
ಕೆಂಪ ಕುದರಿ ಮೈ ತುಂಬ ಕೈಯಾಡಿಸಲಿಕ್ಹತ್ತಿದಳು!
ಕುದರೀ ಲದ್ದಿ ಮೈತುಂಬ ಹಚ್ಚಿಕೊಂಡಳು!
ಆಹಾ! ಏನ ಚೆಲಿವಿ ಗೌಡ್ತಿ! ಗುಡ್ಡದೆಲ್ಲವ್ವ
ಗುಡಿ ಬಿಟ್ಟ ಹೊರಗ ಬಂಧಾಂಗ, ಜಾತ್ರಿ ಆಡಿ
ಬಂಡಾರ ಬಳಕೊಂಢಾಂಗ, ತಲೀ ಏನ
ಒಲೀತಾಳ! ನಡ ಏನ ಮಣೀತಾಳ! ಅಷ್ಟ
ದೂರಿದ್ದರೂ ಇದs ಹರಗಿದ ಎರಿ ಹೊಲಧಾಂಗ
ನಾರತಾಳೇನ! ನಮ್ಮವ್ನ ನೋಡಿದವರು
ಕಣ್ಣಾಗ ಹಾಕಿ ಮುಚ್ಚಿಕೋಬೇಕ! ಆಡಾ!
ಅಲ್ಲೆ ತಿರಗಲಿಕ್ಹತ್ತಿದಳು! ಅರೆ, ಎದ್ಯಾಗ
ಕೈ ಹುಗದ ಕುಣೀಲಿಕ್ಹತ್ತಿದಳು!
ಹಾಡಲಿಕ್ಹತ್ತಿದಳು!….
(ಎಲ್ಲವ್ವನ ಭಕ್ತರು ರಂಡಿಹುಣ್ಣಿವಿ ದಿನ ಬಾರಿಸುವಂಥ ವಾದ್ಯ ಕೇಳಿಸಿ ಹಾಡಲಾರಂಭಿಸುತ್ತಾಳೆ. ಸೂತ್ರಧಾರ ಮತ್ತು ಮೂರೂ ದೇವತೆಗಳೂ ನಿಧಾನವಾಗಿ ಮಾಯವಾಗುತ್ತಾರೆ. ಗೌಡ್ತಿ ನೆರಳಿನಂತೆ ಆಗೀಗ ನರ್ತನದ ಭಂಗಿಯಲ್ಲಿ ಕಾಣಿಸಿ ಕೊಳ್ಳುತ್ತಾಳೆ.)

ಗೌಡ್ತಿ : ನಾ ಕುಣೀಬೇಕ ಮೈ ಮಣೀಬೇಕ ಕಾಲ್ದಣೀಬೇಕ ತಾಯಿ!
ನವಿಲಿನ್ಹಾಂಗ, ಎಳಿ ಮಣಿಕಿನ್ಹಾಂಗ, ತಿರತಿರಗಿಧಾಂಗ ಬಗರಿ!
ತೊಡೀ ತೆರೆದು ತಲಿ ಬಿಚ್ಚಿ ಕೈಯ ಎದಿ ಮಿದಿವಿನಾಗ ಹುಗದು
ಬಗಲ ಬೆವತು ಅಹ ನಾರಬೇಕು ಗಿಜಗಳಿಕಿ ಸಿಂದಿಹಣ್ಣು ||
ಕಾದ ತಗಡು ತೊಗಲಿನ್ಯಾಗ ಹೊತ್ತೇತಿ ಕಾಡ ಬೆಂಕಿ
ಸಂದಿಗೊಂದಿ ಬುಗುಬುಗು ಅಂದು ತಲಿಗೂದಲುರಿಯ ಜ್ವಾಲಿ
ಸುಡಸುಡs ಇಂಥ ಸಪ್ಪ ಬಾಳೆ ನಿಂತೇನ ದೀಪಕಂಬ!
ಬಣ್ಣಬಣ್ಣದs ನೆರಳ ತಿರಗತಾವ ಊರ ಕೇರಿ ತುಂಬ.

ಬಾಳಗೊಂಡ : (ಕೈಯಾಡಿಸುತ್ತ ಬರುತ್ತಾನೆ.)
ಏನ, ಎಂತ ಒಂದೂ ಗೊತ್ತಾಗಾಣಿಲ್ಲ. ನನ್ನ
ನಾ ಚಿವುಟಿಕೊಂಡರೂ ಯಾರನ್ನೋ ಚಿವುಟಿಧಾಂಗ
ಅನ್ನಸ್ತsದ. ಯಾವಾಗ ಬೆಳಕ ಹರದ
ನಮ್ಮ ಗುರುತ ನಾವು ಹಿಡೀತೀವೊ!
ಮನಿ ನಮ್ಮದಾದರೂ ಎಷ್ಟ ಹೆದರಿಕಿ
ಬರ್ತsದಂತೀನಿ. ಈ ಕಟ್ಟಿ, ಈ ದನಾ
ಒಂದ ಸಲ, ತಪ್ಪಿ ಸಹಿತ ಹಗಲಿ
ನೋಡಲಿಲ್ಲಲ್ಲ ನಾನು. ಈಗೊಂದ ಕನ್ನಡಿ
ಸಿಕ್ಕಿದ್ದರ ಹೆಂಗ ಕಾಣತಿದ್ದೆನೊ….

ಗೌಡ್ತಿ : ಕಣ್ಣ ಕಾಡಿಗೀ ಕೆನ್ನಿಗಿಳಿಧಾಂಗ ಮೂಡತಾವ ನೆನಪ
ಕೌದಿಯೊಳಗ ಹುಡಕ್ಯಾಡಿ ಮೂಸತೇನ ಮತ್ತ ಹಳೀ ನಾತ
ಜೋಡ ನಾಗರಾ ತಿಡೀ ಬೀಳತಾವ ಕನಸಿನ್ಯಾಗ ಬಂದಾ
ಏನಾಡತಾವ ತಳಕ್ಯಾಡತ್ಯಾವ ರೆಂಟೀಯ ಸಾಲ ಹಿಡದಾ.

ಬಾಳಗೊಂಡ : ಅಡ! ಕಾಲಾಗೇನಿದಾ? ಕಾಲಿಗಿ ಥಂಡಿ ಹತ್ತಿ,
ಕಾಲ ಕರಗಿ, ನಡಾ ಕರಗಿ, ಎದಿ, ಮುಖ ಅಳ್ಳಕ
ಕತ್ತಲ್ಯಾಧಾಂಗ, ಮನಿ ತುಂಬ ತೆಪ್ಪಾ ಹೊತ್ತ
ಹರದಾಡಿಧಾಂಗ – ತೆಪ್ಪದಾಗ ಯಾರೋ ಎದ್ದ –
ಕುಂತರಲ್ಲ; ಯಾರವರಾ? ನಾ ಇದನ್ನs
ಹುಡಿಕ್ಯಾಡತಿದ್ದೆನೇನ?

ಗೌಡ್ತಿ : ಬೆವರ ಆಗಿ ಹರಿದಾಡತೇನು ಇಡಿ ಹೊಲಾ ತುಂಬಿಕೊಂಡಾ
ಹಸಿಗೆ ಹಸೀ ಬೆರೆತಾಗ ಅಯ್ ಶಿವನ ಏಳತಾವ ನವಿರಾ
ಬೆಳಿ ಏಳತೈತಿ ತೆನಿಗೊಂದು ಹಕ್ಕಿ ನಗತಾವ ಒಂದ ಸವನಾ
ಕಣ್ಣ ತೆರೆದರೇನೈತಿ ಹಾಳು ಮುದಿರಾತ್ರಿ ಅಯ್ಯ ಶಿವನ!

ಬಾಳಗೊಂಡ : ಹೆಣ್ಣಧ್ವನಿ, ಹಿಂದ ಕೇಳಿದ ಧ್ವನಿ, ಮ್ಯಾಲಿಂದ
ಮ್ಯಾಲ ಎದ್ಯಾಗ ಕೇಳಿಸೋ ಧ್ವನಿ! ಈ ಧ್ವನಿ
ಹುಟ್ಟಿದ ಎದ್ಯಾಗ ನನ್ನ ಹಳಿ ಬೇರ
ಅಳಗ್ಯಾಡತಾವ, ಯಾರದಿದಾ? ಹಾಲ ಕೊಟ್ಟ
ಹಾರ ಬೇಡಿದ ಹುಡಿಗಿ ಈಕೀನ ಇರಬೇಕೇನ?
(ಉತ್ಸಾಹಿತನಾಗಿ)
ಸಿಕ್ಕೆಲೇ ಮಗನ ಬಾಳಗೊಂಡಾ! ಬಿಳೀಕುದರಿ,
ಜರದ ರುಮಾಲ, ಚಿಗರ ಮೀಸ್ಯಾಗ ಯಾಸಿ ನಗಿ,
ಗಡಿಗಿ ಹಾಲ ಕುಡದ ಹಾರ ಕೊಟ್ಟ ಹೋದಾಂವ
ನೀನs ಅಲ್ಲೆನಲೇ?

ಗೌಡ್ತಿ : ಕಡೀಬೇಕ ಅಹ ಕಚ್ಚಬೇಕ ಹಿಂಗಪ್ಪಬೇಕೊ ನಾನಾ
ಗಿಣೀ ಹಣ್ಣಿಗೀ ಜೋತ ಬಿದ್ದಾಂಗ ಎಳಿಬೇಕೊ ನಿನ್ನ
ತೆಕ್ಕಿಮುಕ್ಕ್ಯಾಗ ನೆಗ್ಗಬೇಕೊ ಮೀಸಲದ ಮಿಂಡ ಬಾರೊ
ಮಿಂಡಿ ಬಿದರ ನಿಂತೇನೊ ತೆರೆದು ಬಿರುಗಾಳಿಯಾಗಿ ಸೇರೊ

ಬಾಳಗೊಂಡ : ಬಾಳಗೊಂಡ ಬರೋ ದಿನ ಹಾಲಗಡಿಗಿ ಹಿಡಕೊಂಡ
ಬರತಿದ್ದಿ ನೀನs ಹೌದಲ್ಲೊ? ನನಗದು
ಗೊತ್ತಿತ್ತು, – ಒಂದಿಲ್ಲ ಒಂದ ದಿನ ನೀ
ಸಿಕ್ಕs ಸಿಗತಿ, ಬಂದs ಬರತಿ ಅಂತ.
ನೋಡಬಾರದ? ನಿನ್ನ ಹಾಲ ಕುಡದ ಹಾರ
ಕೊಟ್ಟವನ ಹಿಡೀಬೇಕ ಹಿಡೀಬೇಕಂತ ಹಟಗಾಸಿ
ಹುಡಕ್ಕಾಡತೇನು – ಇಷ್ಟ ದಿನ ತಪ್ಪಿಸ್ಯಾಡಿದ.
ಅದಕ್ಕ ನನಗ ನಿನ್ನ ಗರ್ಜ ಇತ್ತು. ನೀ
ಬಂದ ನಿಂತರ ಸಾಕು, ನಿನ್ನ ತೊಡ್ಯಾಗಿನ
ಬೆವರ ಮೂಸಿ ನೋಡಿ ಅಲ್ಲೇ ಮೂಡತಾನಂತ
ಗೊತ್ತತ್ತ ನನಗ. ಖರೆ ಆಯ್ತೊ ಇಲ್ಲೊ?
ಸಿಕ್ಕೋ ಇಲ್ಲೊ? ಆ ಸೂತ್ರಧಾರ ಬಂದ
ಈಗ ನನ್ನ ಹೆಸರ ಕೇಳಲಿ, ಜೋಡೆಳಿ
ಉಡದಾರ ಮುಟ್ಟಿಕೊಂಡ ಹೇಳತೇನ;
ಮಗನೇ ನನ್ನ ನಾಮಾಂಕಿತವೇನೆಂದರೆ….

ಗೌಡ್ತಿ : ನಿನ್ನ ಬಸವಿ ಬಸವಳಿಯತೇನೋ ಬಾ ಮೀಸೆ ಹೊತ್ತ ದೊರೆಯೇ
ಎಲ್ಲೆಲ್ಲಿ ಹಿಡದರಲ್ಲಲ್ಲಿ ಬೆಣ್ಣಿ ಕರಗುವೆನು ತೋಳಿನೊಳಗೆ
ಕೋಳಿ ಒಣಗೀಯ ಹೋಳಿನಂಥ ತುಟಿಗಲ್ಲ ಕಡಿಯೊ ಗೆಣೆಯಾ
ಘಾಸಿಯಾಗಿ ಕನಸಿನಲಿಮಾವಾಅನ್ನುವೆನೊ ಮೀಸಲೊಡೆಯ

ಮುದುಕ : ಹ್ಯಾಂಗನ್ನಸಬೇಕು? ನನ್ನ ಹಣಿಮ್ಯಾಲಿಂದ ಇದೇನ ಹೇಳು?

ಬಾಳಗೊಂಡ : ಒಲ್ಯಾಗಿನ ಬೂದಿ.

ಮುದುಕ : ಇದು ನಮಗೆ ದೇವರ ಪರಸಾದ ಏನಪಾ.
ಏಕದಮ್ಮ ಎಷ್ಟ ದೂರ ಹ್ವಾದಿ ನೊಡು!

ಬಾಳಗೊಂಡ : ಬ್ಯಾಡೊ ಮುದುಕಾ ತಡೀಯೊ. ಒಮ್ಮಿಂದೊಮ್ಮಲೆ ಹೀಂಗ ತೂರಬ್ಯಾಡೊ….
ಅಥವಾ, ನಿಮ್ಮ ಜೋಡಿ ನಾ ರಾಜಿ ಯಾಕ ಮಾಡಿಕೊಳ್ಳಲಿ?
ನೀವು ಹೇಳಿಧಾಂಗ, ಹೇಳಿದಷ್ಟ, ಅಳತಿ ಮಾಡಿ
ಬೆಳ್ಯಾಕ ನಾಯೇನ ನಿಮ್ಮ ಕುಂಡದಾಗಿನ
ಹೂವಿನ ಬಳ್ಳಿ ಅಲ್ಲ, ಕಸುವಿದ್ದರ ಬೆಳದೇನು
ಇಲ್ಲಾಂದರ ಕಮರೇನು, ಏನಂತಿ?

ಮುದುಕ : ನಾನೂ ಅದನ್ನs ಅಂತೀನೋ ತಮ್ಮ,
ನಿನ್ನ ಬೆಳಸಾಕ ನಾವೇನ ನೀರಾಗಿಲ್ಲ, ಗೊಬ್ಬರಾಗಿಲ್ಲ.
ಅದಕ್ಕs ನೀ ಇಲ್ಲಿ ಬೇರ ಬಿಡಲಿಲ್ಲ.
ಕಾಗೀ ಬಳಗದಾಗ ಕೋಗಿಲ ಹ್ಯಾಂಗಿರತೈತಿ ಹೇಳು?

ಸೂತ್ರಧಾರ : ಕೋಗಿಲ ಹುಟ್ಟಿದ್ದಾದರೂ ಕಾಗೀ ಗೂಡಿನೊಳಗs
ಅಲ್ಲೇನ? ಇದಕ್ಕೇನಂತಿ?

ಮುದುಕ : ನಿನಾಪ್ಪನ ಮತ್ತು ಅದನs ತೀಡತಾನಲ್ಲೊ,
ಕೋಗಿಲ ಬೆಳದ ಮ್ಯಾಲ ಕಾಗೀ ಬಳಗದಾಗ
ಇರತೈತೇನ ಹೇಳಂತೀನು.

ಬಾಳಗೊಂಡ : ಖರೆ, ಏ ಹಳಬಾ,

ಹಳಬ : (ಪ್ರವೇಶ) ಬಂದೇನ್ರಿ ಧನಿ.

ಬಾಳಗೊಂಡ : ನನ್ನ ಬಿಳೀಕುದರಿ ಬಿಚ್ಚಿಕೊಂಬಾ ಹೋಗು.

ಹಳಬ : ಇಂಥ ರಾತ್ರ್ಯಾಗ ಹಿಂಗs ಹೋಗತೇರಿ?

ಬಾಳಗೊಂಡ : ಇನ್ನೇನ ತಂಬಿಕೊಂಡ ಹೋಗಬೇಕಂತಿ?

ಹಳಬ : ಗೌಡ್ತಿ ಕೇಳಿದರ ಏನ ಹೇಳಲಿ?

ಬಾಳಗೊಂಡ : ಬ್ಯಾರೇ ಕಡೆ ಬೇರ ಹುಡಕೋದಕ್ಕ ಹೋದಂತ ಹೇಳು.

ಹಳಬ : ದೊಡ್ಡಗೌಡ ಕೇಳಿದರ….

ಬಾಳಗೊಂಡ : ಸಣ್ಣಗೌಡ ಸತ್ತಂತ ಹೇಳು.

ಹಳಬ : ಯಾಕ ಹ್ವಾದಂತ ಕೇಳಿದರ….

ಬಾಳಗೊಂಡ : ಇರಲಿಕ್ಕೇನೂ ಕಾರಣ ಇಲ್ಲದ್ದಕ್ಕ ಹೋದಂತ ಹೇಳು.

ಹಳಬ : ನಿಮ್ಮ ಕಡೆ ಮಂದಿ ಕಾರಣ ಇದ್ದಾಗs ಬದಕತಾರೇನ್ರಿ?

ಬಾಳಗೊಂಡ : ಹೇಳಿದಷ್ಟ ಕೇಳು. ಸರಳ ಹೋಗು, ತಡೀ ಹಾಕು,
ಕುದರಿ ಬಿಚ್ಚು, ಹೋದ ಹಾದೀ ಹಿಡದ
ಎಡಕ್ಕ ಎಡಾ ಅನ್ನಬ್ಯಾಡ. ಬಲಕ್ಕ ಬಲಾ ಅನ್ನಬ್ಯಾಡಾ
ಯಾರ ಕೇಳಿದರೇನೂ ಹೇಳಬ್ಯಾಡಾ.
ತಿಳೀತೊ ಇನ್ನೊಮ್ಮಿ ಹೇಳಲ್ಯೊ?