ಬಾಳಗೊಂಡ : ಛೇ! ನಾ ಗೌಡಲ್ಲ, ಕಾಣ್ಸಾಣಿಲ್ಲೇನ? ಕಣ್ಣಾಗ
ಪಂಜ ಹಚ್ಚಿಕೊಂಡ, ಹೋರಿ ಇಷ್ಟ್ಯಾಕ ಧಡಪಡ
ಮಾಡತದsನೊ? ದೂರ್ಯಾಕ ನಿಂತಿ? ಸನೇಕ
ಬಾರಲ್ಲ, ಅಂಧಾಂಗ ನಿನ್ನ ಹೆಸರ ಕಮಲಿ
ಅಂತ ನಿನ್ನಿ ಮೊನ್ನಿ ಗೊತ್ತಾಯ್ತು. ನಿನ್ನ
ನೋಡಬೇಕಂತ ಎಷ್ಟ ತಡಕಾಡಿದೆ ಅಂತಿ?
ನಾ ಆಗಲೆ ಹೇಳಲಿಲ್ಲ – ನಾ ನೀ ಸೇರೋ
ಯಾವುದೋ ಒಂದ ಮೂಲ್ಯಾಗ ಬಾಳಗೊಂಡ
ಸಿಗತಾನಂತ? ಈಗ ಬೇಕಾದರ ಯಾರ ಹೆಸರಿನ್ಯಾಗ
ಎಷ್ಟೆಷ್ಟ ಅಕ್ಷರ ಅದಾವಂತ ಕೇಳು, – ನಂದ
ನಿಂದಷ್ಟs ಅಲ್ಲ, ಕುಂತ ಮಂದೀ ಖೂನ
ಗುರುತ, ವಿಳಾಸ ಕೇಳು, ಥಟ್ಟನೆ ಉತ್ತರ
ಕೊಡ್ತೀನಿಲ್ಲ, ನೋಡಲ್ಲ. ನೀ ಬೇಕಾದರ ನನ್ನ
ಎದಿ ಸೀಳಿ ಕಡ್ಡೀ ಕೊರದ ನೋಡು – ಮೂಲಿ
ಮೂಲ್ಯಾಗೆಲ್ಲ ನಿನ್ನ ಹೆಸರ! ನೀ ಅಲ್ಲಿ ನಿಂತ
ಹಾಡಿದರ ಇಲ್ಲಿ ನನ್ನ ಒಳಗ ಪಾತಾಳಗಡ
ಇಳಧಾಂಗಾಯ್ತು – ಇದಕೇನಂತಿ?
(ಗೌಡ್ತಿ ಹಾಡತೊಡಗಿದರೂ ಬಾಳಗೊಂಡ ಹಾಗೇ ಮಾತು ಮುಂದುವರಿಸುವನು.)

ಗೌಡ್ತಿ : ಹಾಳಬಾಂವ್ಯಾಗ ನೀರ ಸೆಲಿ ಝಮ್ಮಂತ ಒಡೆದು ಬರಲಿ
ಕೆಳಗ ಹಾಕಿ ನೀ ಕುಟ್ಟೊ ನನ್ನ! ನಾದೊ ನನ್ನ!
ಲೇ ಮಾಡೊ ಜಿಬ್ಬ ಜಿಬ್ಬಿ ಜಿಬ್ಬಿ
ಅಲ್ಲಿತನಕ ತೊಡಿ ಬೆವರುತನಕ ನವಿರೇಳುತನಕ ತೆನಿ ಮೂಡುತನಕ
ನಾ ಕುಣೀಬೇಕ, ಮೈ ಮಣೀಬೇಕ ಕಾಲ್ದಣೀಬೇಕ ತಾಯಿ
ಹುಚ್ಚಿಯಾಂಗ, ಮೈ ತುಂಬಿಧಾಂಗ ಬೆದಿಮಣಿಕಿನ್ಹಾಂಗ ಆಗಿ.

ಬಾಳಗೊಂಡ : ಮನ್ನಿ ಜಕ್ಕಜಲದಿ ರತ್ನ ಕೊಟ್ಟ ಕೂಡಲೆ
ನನಗ ಯಾರ ನೆನಪ ಆಯ್ತಂತಿ? ರತ್ನಂದರ
ಬರಿ ರತ್ನಲ್ಲ – ಮಳಿ ಸೂತ್ರ! ಅದಕ್ಕs
ಲಸಿಮ್ಯಾನ ಕರದ ನಿಮ್ಮ ಮನಿಗಿ ಕಳಿಸಿ
ಅದಾಳs ಹೆಂಗ? ಬಾ ಅಂತಾಳೇನಂತ ಕೇಳಿಕೊಂಬರಾಕ
ಕಳಿಸಿದ್ದೆ. ಮಗ ಇನ್ನs ಬರಲಿಲ್ಲ. ಆಯ್ತು
ನೀನs ಬಂದೆಲ್ಲ. ಈ ರತ್ನ….
(ತಲೆ ಹಿಡಿದುಕೊಂಡು ಗಡಬಡಿಸುವನು.)
ರತ್ನ…. ರತ್ನ ಎಲ್ಲಿ? ಅವ್ವಾ?
(ಒಳಕ್ಕೆ ಓಡುವನು. ಒಳಗಿನಿಂದಲೂ ಮಾತು ಕೇಳಿಸುವದು)
ರತ್ನ ಎಲ್ಲೀ ಅಂದೆ. ಮನ್ಯಾವರೆಲ್ಲಾ ಎಲ್ಲಿ,
ಸತ್ತರೇನಂತೀನಿ. ಅವ್ವಾss….
(ಗೌಡ್ತಿ ತಲೆಗೂದಲು ಜಾಡಿಸುತ್ತ ಬರುವಳು. ಬಾಳಗೊಂಡ ಅವಳೆದುರು ಬಂದುಅವ್ವಾ ನನ್ನ ರತ್ನ ಎಲ್ಲಿ?” ಎಂದು ಕೇಳಿದಾಗ ಗೌಡ್ತಿ ಆತನನ್ನೇ ನೋಡುತ್ತಾ ಸುಮ್ಮನೆ ನಿಂತುಕೊಳ್ಳುವಳು. ‘ಮುದಿಗೌಡ ಎಲ್ಲಿ?’ ಎಂದು ಕೇಳಿ ಉತ್ತರಕ್ಕಾಗಿ ಕಾಯದೆ ಅವಸರದಿಂದ ಓಡಿ ಹೋಗುತ್ತಾನೆ. ಗೌಡ್ತಿ ನಿಧಾನವಾಗಿ ಮಾಯವಾಗುತ್ತಾಳೆ. ಅಷ್ಟೇ ನಿಧಾನವಾಗಿ ಸೂತ್ರಧಾರ ಕಾಣಿಸಿಕೊಂಡು ಮಾತಾಡುವನು. ಅವನ ಮಾತು ಮುಗಿಯುತ್ತಿರುವಂತೆಯೇ ಮೂರು ದೇವತೆಗಳು ಮೂಡುತ್ತಾರೆ.)

ಸೂತ್ರಧಾರ : ಬಾಳಗೊಂಡ ಅವಸರದಿಂದ ಬಂಗಾರ ಕುದರಿ
ಬಿಚ್ಚಿದ…. ತಡಿ ಹಾಕಿ ಏರಿದ…. ಲಗಾಮ
ಜಗ್ಗಿ ಓಡಿಸಿದ…. ತಾಯೀ ಊರ ಗತಿ
ಏನು? ನನ್ನ ಗತಿಯೇನು? ಇನ್ನ ಮ್ಯಾಲ ನಿಮಗ
ನಿವsದಿ ಯಾರ ತರತಾರ? ಜಾತ್ರಿ ಯಾರ
ಮಾಡತಾರ? ಗೌಡ ಎಲ್ಲಿ ಓಡಿದ?
ಬಾಳಗೊಂಡ ಎಲ್ಲಿ ಓಡಿದ?

೨ನೆಯವಳು : ಬಾಳಾ, ಮುಂದಿಂದ ನೆನದರ ಇನ್ನೂ ಭಯ
ಬರತೈತಿ, ಯಾಕ ನೋಡೇನಂತಿ?

ಸೂತ್ರಧಾರ : ಹಾಂಗಾದರ ನಮ್ಮ ನಶೀಬದಾಗ ಒಂದ
ಗೊತ್ತ ಗುರಿ ಇಲ್ಲs ಏನು?

೨ನೆಯವಳು : ಅಷ್ಟ ಆತುರ ಇದ್ದರ ಬೆನ್ನಹತ್ತಿ ಬಾ
(ರಂಗವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿ ಬರುವಳು. ಹೊಲೇರ ಪಾರಿ ಹೊರಸಿನ ಮೇಲೆ ಎಲಿ ಅಡಿಕೆ ಜಿಗಿಯುತ್ತ ಕುಳಿತಿರುವಳು.)

ಸೂತ್ರಧಾರ : ಅಡ! ಹೊಲಿಗೇರಿಗ್ಯಾಕ ಬಂದಿವಿ? ಇಷ್ಟ
ಯಾಳೆ ಆದರೂ ಯಾರೋ ಹೊರಸಿನ ಮ್ಯಾಲ
ಹಾಂಗs ಕೂತಾರ, ಯಾಕಿದ್ದೀತು? ನಾ ಈಕಿ
ಜೋಡಿ ಎರಡ ಮಾತ ಮಾತಾಡಲಿ?
(ಎರಡನೆಯವಳು ಆಡಬಹುದೆಂದು ಸೂಚಿಸುವಳು. ಮೂವರೂ ಮರೆಯಾಗುವರು.)
ಯಾರ ಯಾರವರಾ? ಹೊಲೇರ ಪಾರ್ಯೇನ?

ಪಾರಿ : ಹಲ್ಲ ಬಿದ್ದ ಸೂಳೇರ ಗುರುತಾ ಯಾರ ಯಾಕ
ಹಿಡದಾರಲಾ ಬಿಡು. ನಿಂದಾರ ಏನ ತಪ್ಪು?

ಸೂತ್ರಧಾರ : ದೆವ್ವ ಅಡ್ಡಾಡೊ ಯಾಳೇದಾs ಹಿಂಗ ಒಂದs
ಕುಂತರ ಥಟ್ಟನ ಗುರುತ ಹೆಂಗ
ಸಿಗಬೇಕು? ಅದರಾಗ ಕೆಟ್ಟ ದೆವ್ವಿನಂಥಾಕಿ ನೀ.
ಉಳಿದವರದೆಲ್ಲಾ ಒಂದ ಹರಿಕಿ ಆದರ ನಿಂದs
ಒಂದು. ಹೇಳ ಇಂಥಾ ಕತ್ತಲ್ಯಾಗ ಇಲ್ಯಾಕ
ಕೂತಿ, ಏನ ಕತಿ? ಎಲಿ ತಿಂದ ರಂಗಲಾಲ
ಆಗೀದಿ ಅಂದರೇನು? ಕಾಡಿಗಿ ಹಚ್ಚೀದಿ
ಅಂದರೇನು? ಮುದಿಕ್ಯಾದರೂ ಇನ್ನs ನಿನ್ನ
ಹುಳಿ ಮುರೀಲಿಲ್ಲ ಬಿಡು.

ಪಾರಿ : ಪರಬೂ ನಾ ಇಂದ ಹೆಂಗ ಕಾಣತೇನೊ?

ಸೂತ್ರಧಾರ : ಇದ್ದಷ್ಟರಾಗ ಚಂದ ಕಾಣತಿ ಅನ್ನಲಾ!

ಪಾರಿ : ಏ ಹೇಳಲಾ.

ಸೂತ್ರಧಾರ : ಮತ್ತ ಹೇಳ್ನೆಲ್ಲ –

ಪಾರಿ : ನನಗಿಂದ ಭಾಳ ಖುಸಿಮೋಜಿ ಆಗೇತ್ಯs!

ಸೂತ್ರಧಾರ : ಹಿಂದಿಲ್ಲ, ಮುಂದಿಲ್ಲ ಖುಶಿಮೋಜಿ ಅಂದರ
ನನಗೇನ ತಿಳೀಬೇಕು? ಸವಿಸ್ತಾರ ಕಥನಾ
ಮಾಡಿ ಹೇಳಿದರ ತಿಳಿದೀತು.

ಪಾರಿ : ಹೊಯ್ಯಂದs; ನೀ ಏನ ಎಡ್ನೇದಾಂವೇನ ಬಿಡ.
ನನ್ನ ಮಗಳು ಕಮಲೀನ ನೋಡೀಯೇನಲಾ?

ಸೂತ್ರಧಾರ : ನೋಡದೇನು? ಮನ್ನಿಮನ್ನಿ ಹಾಲಗಡಿಗಿ
ಹಿಡಕೊಂಡ ಕರ್ರೆವ್ವಗ ಎರ್ಯಾಕ ಹೊಂಟಿದ್ದಳು….

ಪಾರಿ : ಹೂಂ ಹೊಯ್ಯಂದs. ಅಂದ ಬಾಳಗೊಂಡ ಬರಲಿಲ್ಲ?
ಅದs ದಿನಾ ನನ್ನ ಮಗಳಿಗಿ ನಾನs ಅಕ್ಕಡಿ
ಹಾಲ ತುಂಬಿದ ಗಡಿಗಿ ಕೊಟ್ಟ ‘ಕರ್ರೆವ್ವಗ
ಎರದ ಬಾ ಮಗಳs’ ಅಂದಿನು. ‘ಹೂಂ ಎವ್ವಾ’
ಅಂದಳು. ಹಾದ್ಯಾಗ ಅದ್ಯಾವದೋ ಬಿಳೀ
ಕುದರಿ ಸರದಾರಂತ, ಹೊತ್ತ ಮುಣಗಿದ
ಯಾಳೇದಾಗ ಬಂದ, ಗಡಿಗಿ ಹಾಲೆಲ್ಲ ಕುಡದ
ಗುರತಿಗಿ ಮುತ್ತಿನ ಹಾರ ಕೊಟ್ಟ ಹೋದನಂತ
ಹೇಳಿ, ಹಾಡಿಕೋತ ಹ್ವಾದ ಮಗಳು ಅಳಕೋತ
ಬಂದ ಮನಿ ಹೊಕ್ಕಳಪಾ! ಅಂದ ನನಗೇನಾ
ಮಗಳ ತುಟಿ ಬಿಚ್ಚಿ ಎವ್ವಾ ಅನ್ನಲಿಲ್ಲ.
ಒಂದ ಯಾಕಿಲ್ಲ, ಒಂದ ಎಂತಿಲ್ಲ, ಮುತ್ತಿನ
ಸರಾ ಎದಿಗಿ ಒತ್ತಿಕೊಂಡು ಒಂದಳತಿ
ಅತ್ತs ಅಳತಿತ್ತು! ಮಗಳು ಮೈನೆರೆದಾಗ
ಮಂದೀ ಕಣ್ಣ ಹತ್ತಿ ಮೂರ ದಿನಾ ಏರಿದ
ಉರಿ ಇಳಿದಿರಲಿಲ್ಲ ಖರೆ, ಇಷ್ಟ ಮೆತ್ತಗಾಗಿರಲಿಲ್ಲ.
ಮುಂಚಿನ ಅದರ ಸಡಗರೇನs ನಮ್ಮಪ್ಪಾ!
ಎವ್‌ಎವ್ ಎವ್ವಂತ್ಹೇಳಿ ಗಿಣೀಹಾಂಗ
ಒಳಗೊಮ್ಮಿ ಹೊರಗೊಮ್ಮಿ ಕರದs ಕರೀತಿತ್ತು!
ಆಜು ಬಾಜೂ ಸೂಳೇರೆಲ್ಲ ನೆಲಾ ಸವರಿ
ಲಟಿಕಿ ಮುರೀಬೇಕ! ಇದs ಮುದಿಗೌಡ
ಮನಿಗಿ ಬಂದರ ಕಮಲಿ ಮಲಗಿದ್ದರೂ
ಲಟಲಟ ಮುದ್ದು ಕೊಡತಿದ್ದ. ಆಡೂ
ಮಗಳು ಆಟ ಮರತರ ಏನಾಗಬ್ಯಾಡಲಾ?

ಸೂತ್ರಧಾರ : ಆಗೋದ ಆಗೋದs ಮತ್ತ!

ಪಾರಿ : ನನಗೂ ಒಂದ ಹೊಯ್ಕ ಆತನ್ನಲಾ. ಗುಡದವ್ವ
ಏನ ನಿನ್ನ ಆಟ? ನಿನ್ನ ಹರಿಕಿ ಮುಟ್ಟಲಿಲ್ಲ?
ಕಾಲಾಗ ಸಗತಿ ಇಲ್ಲದ್ದಕ್ಕ ಕುಣಿಯೋದ
ಬಿಟ್ಟರ, ಸಿಟ್ಟಾದೇನ ಹಡೆದವ್ವಾ? ನಾಳಿನ
ಮುತ್ತೋದಿ ಹುಣಿವಿಗಿ ಕಮಲೀನ ಕರಕೊಂಡ
ಬರತೇನಂತ ಹರಿಕಿ ಹೊತ್ತಿನಪಾ. ಮೂರ
ಹಗಲಾತ, ಮೂರ ರಾತ್ರಿ ಆತ, ಕಡೀಕಂದರ
ಬಾಯಿ ಬಿಟ್ಟಳು! ಆದ ಹಕೀಕತ್ತೆಲ್ಲಾ
ಅಕಿ ಬಾಯಲೆ ಕೇಳಿನು. ಅಂದs ರಾತ್ರಿ
ಕನಸಿನ್ಯಾಗ ಒಂದ ಎಳಕ ಹುಡುಗ – ಕೆಂಪ
ಈಟೀಟ ಜಡಿ, ಜಡ್ಯಾಗೊಂದ ಎಳಿ
ಸೂರ್ಯಾನಿಟಗೊಂಡ, ಮಲ್ಲಿಗಿ ಹೂವಿನ್ಹಾಂಗ
ನಕ್ಕೋತ ಬಂದ ನೋಡs!

ಸೂತ್ರಧಾರ : ಅಡಡಡ!

ಪಾರಿ : ಹೂಂನs! ಇದರಾಗ ಒಂದs ವಾಕ್ಕೇವ ತಪ್ಪಿದ್ದರ
ಗುಡದವ್ವ ನೋಡಿಕೊಳ್ಳಲಿ. ಬಂದs ‘ಸ್ವಾಮಾರ
ರಾತ್ರಿ ಬಂದ ಹಾರ ತೋರಿಸಿ ನಿನ್ನ ಮಗಳ
ಕೂಕುಮದ ಮ್ಯಾಲ ಬಂಡಾರ ತೂರತೇನಂ’ತ
ಹೇಳಿ ಗಪ್ಪಗಾರ ಆದಪಾ! ಎವ್ವಾs
ಗುಡ್ಡದೆಲ್ಲವ್ವ, ಕರಿಮಾರಿ ಕರ್ರೆವ್ವ
ತೆಗ್ಗಿನ ಲಗಮವ್ವ, ಗುಡ್ಡದ ನಿರವಾನಿ –
ನೋಡಪಾ, ಎಚ್ಚರಾಗಿ, ಗಮ್ಮನ ಬೆವತು,
ಮೈ ಮುಳ್ಳಾಗಿನ ಮಸಾರಿ ಹಾಂಗ ನಾರತಿತ್ತು!
ಎದ್ದ ಮಗಳ ಮೋತಿ ನೋಡಿನು, ನನ್ನ
ಸವತಿ ಎಲ್ಲಾ ಕಂಡಾವರ್ಹಾಂಗ ಏನೋ
ಬಡಬಡಿಸಿ ನಗತಿತ್ತು! ಎವ್ವಾ ಗುಡ್ಡದ ಮಾಯೀ,
ಈ ಕನಸ ಖರೆನೋ ಸುಳ್ಳೋ ನೋಡೋಣಂತ
ಇಂದ ಸ್ವಾಮಾರ ಕಮಲಿ ಹಣಿಗಿ ಕೂಕುಮ
ಹಚ್ಚಿ ಕುಂತಿನು, ಕುಂತಿನು; ಹಳಬರ
ಲಸಿಮ್ಯಾ ಬಂದ. ಬಾಳಗೊಂಡ ಬರಬೇಕಂತಾನ
ಕರತರಲೇನ ಅನ್ನಾನ್‌ತ್ಲೆ ನನಗೂ ಹೆಂಗೆಂಗೊ
ಆತ ಅನ್ನಲಾ! ಹೀಂಗ ಒಂದ ಹೋಳ
ಎಲಿ ಅಡಿಕಿ ಹಾಕ್ಕ್ಯೊಂಡ ಕುಂತೀದೇನು,-
ಬಿಳೀಕುದರಿ ಏರಿ ಬಾಳಗೊಂಡ ಬರತಾನಲಾ!….

ಸೂತ್ರಧಾರ : ಈಗ ಒಳಗ ಬಾಳಗೊಂಡ ಇದಾನು?

ಪಾರಿ : ಹೂಂ ಯಾಕ?

ಸೂತ್ರಧಾರ : ನೆತ್ತ್ಯಾಗ ರತ್ನ ಇತ್ತು?

ಪಾರಿ : ಹೆಂಗ ಥಳಥಳ ಗುಡದವ್ವನ ಮೂಗಬಟ್ಟಿನ್ಹಾಂಗ ಹೊಳೀತಿತ್ತು!

ಸೂತ್ರಧಾರ : ಕುದರಿ ಎಂಥಾದಿತ್ತು?

ಪಾರಿ : ಬಿಳೀ ಕುದರಿ, ಅಲ್ಲಿ ಕಾಣ್ಸಾಣಿಲ್ಲೇನಲಾ?

ಸೂತ್ರಧಾರ : ದೇವರs ಇದ ಕಣ್ಣಲೆ ಮುದಿಗೌಡ
ಬಿಳೀ ಕುದರಿ ಏರಿದ್ದ ನೋಡಿದೇನು, – ಇದೇನಾತು?
ತಾಯೀ….
(ಹಿಂದೆ ದೇವತೆಗಳು ಪ್ರತ್ಯಕ್ಷರಾಗಿದ್ದಲ್ಲಿಗೆ ಹೋಗುವನು. ಅದೇ ಹೊತ್ತಿನಲ್ಲಿ ಬಾಳಗೊಂಡ ಪ್ರವೇಶಿಸುವನು.)

ಬಾಳಗೊಂಡ : ಹೊಲೇರ ಪಾರವ್ವನ ಮನಿ ಇದs ಏನ?

ಪಾರಿ : ಹೊಯ್ಯಂದಿದs, ಯಾರವರಾ? ಅಯ್ಯs! ಅಯ್ಯs!
ಒಳಗಿದ್ದಾಂವ ಹೊರಗ ಯಾವಾಗ ಬಂದಿ? ಇದೇನ
ಚಂದ ಬಯಲಾಟ ಎಪ್ಪಾ?
(ಬಾಳಗೊಂಡ ಅವಸರದಲ್ಲಿ ಒಳಗೆ ಪ್ರವೇಶಿಸಬೇಕೆಂದಾಗ ಸೂತ್ರಧಾರ ಓಡಿ ಬಂದು ತರುಬಿ ಆಶ್ಚರ್ಯಚಕಿತನಾಗುತ್ತಾನೆ.)

ಸೂತ್ರಧಾರ : ಅಪ್ಪಾ, ಕೈಯಾಗ ಕುಡಗೋಲ ಹಿಡಕೊಂಡ,
ಕೆಂಪ ಕುದರಿ ಏರಿ ಬಂದಂಥಾ ಧೀರಾ
ನೀನು ದಾರು? ನಿನ್ನ ನಾಮಾಂಕಿತವೇನು?

ಬಾಳಗೊಂಡ : ಹೊತ್ತಿಲ್ಲ, ಗೊತ್ತಿಲ್ಲ ಹೆಸರೇನಂತ, ತಗೀಯಲೇ….
(ಒಳಗೆ ಕಮಲಿ ಚಿಟ್ಟನೆ ಚೀರುವಳು. ಬಾಳಗೊಂಡ ತುಸು ಹೊತ್ತು ಅಧೀರನಾಗಿ, ಕೊನೆಗೆ ಕುಡಗೋಲು ಹಿಡಿದು ನಿರ್ಧಾರದಿಂದ ಒಳಕ್ಕೆ ಓಡುವನು. ‘ಹಿಡೀರಿ, ಹಿಡೀರಿ ಕಳ್ಳನ್ನ! ಮಗನ s’ ಎನ್ನುವ ಅವನ ಧ್ವನಿ ಒಳಗಿನಿಂದ ಕೇಳಿ ಬರುತ್ತದೆ. ಮುದಿಗೌಡ ಬಗಲಿಲ್ಲಿ ಅಂಗಿ, ರುಮಾಲು ಹಿಡಿದು ರಂಗದ ಒಂದು ಬದಿಯಿಂದ ಇನ್ನೊಂದು ಬದಿಗೆ ಓಡುವನು. ಬಾಳಗೊಂಡ ಒದರುತ್ತ ಬೆನ್ನು ಹತ್ತುವನು. ಅವರಿಬ್ಬರೂ ದೂರ ಹೋದುದನ್ನು ಅವನ ಒದರುವಿಕೆಯೇ ಸೂಚಿಸುತ್ತದೆ. ಕಮಲಿ ಹುಚ್ಚಿಯಂತೆ ಚೀರುತ್ತ ಬಂದು ತಾಯನ್ನಪ್ಪುವಳು. ಪಾರಿಯ ಮೈಯಲ್ಲಿ ಎಲ್ಲವ್ವ ತುಂಬಿ ಕಣ್ಣು ಕಿಸಿದು ಭಯಂಕರವಾಗಿ ಕುಣಿಯುತ್ತ ರಂಗದ ಹಿಂಭಾಗಕ್ಕೆ ಹೋಗುವಳು. ಕಮಲಿ ಅಸಹಾಯಕತೆಯಿಂದ ಎಲ್ಲ ಕಡೆಗೆ ನೋಡಿ ನಿರಾಸೆಯಿಂದ ಮೂರ್ಛೆ ಹೋಗುತ್ತಾಳೆ. ಹಿಂದಿನ ಮೂರೂ ದೇವತೆಗಳೂ ಸೂತ್ರಧಾರನೊಡನೆ ಮುಂಭಾಗದಲ್ಲಿ ಕಾಣಿಸಿಕೊಳ್ಳುತ್ತಾರೆ. ಸೂತ್ರಧಾರ ಕೈಮುಗಿದು-)

ಸೂತ್ರಧಾರ : ತಾಯೀ, ಮುಷ್ಟಿಗಿ ಒಳಗ ಮುಚ್ಚಿಕೋಬ್ಯಾಡ
ಏನಿದರ ಗೂಢಾರ್ಥ? ಒಡದ ಹೇಳ. ಗೌಡ
ರತ್ನ ತಗೊಂಡದ್ದ ಖರೆ, ಬಿಳೀ ಕುದರಿ
ಏರಿದ್ದ ಖರೆ, ಇನ್ನೊಬ್ಬ ಬಾಳಗೊಂಡ ಯಾರಾ?

೨ನೆಯವಳು : ಸೂತ್ರಧಾರ ರತ್ನದ ಹರಳ ತೆಗೆದುಕೊಂಡು
ಮುದಿಗೌಡ ತಾನs ಬಾಳಗೊಂಡ ಆಗಿ
ಕಮಲಿ ಮನಿಗಿ ಬಂದ. ಕಳಕೊಂಡದ್ದ
ಅರಿವಾಗಿ ಬಾಳಗೊಂಡ ಎದ್ದ ಹುಡಿಕ್ಯಾಡೋವಾಗ
ಹಳಬರ ಲಸಿಮ್ಯಾ ಸಿಕ್ಕ, ಅಂವಗ ಹೊಯ್ಕಾಗಿ
‘ಪಾರಿ ಮನ್ಯಾಗಿದ್ದಾಂವ ಇಲ್ಲಿ ಹೆಂಗ ಬಂದಿ?’
ಅಂತ ಕೇಳಿದ. ದೆವ್ವಂತ ಲಸಿಮ್ಯಾ ಓಡಿ
ಹೋಗೋವಾಗ ಅವನ್ನ ಹಿಡದ ಪಾರೀ ಮನಿ
ಸಮಾಚಾರ, ಹಾದಿ ಎಲ್ಲಾ ಕೇಳಿ ಇಲ್ಲಿಗಿ ಬಂದ.
ಕಂದಾ ಈಗಲಾದರೂ ನನ್ನ ಗುರುತು ನಿನಗಾಯಿತೇನು?

ಸೂತ್ರಧಾರ : ತಾಯೀ ನೀವು ಲಗಮವ್ವನವರಂತ ನಮಗೆಲ್ಲ
ತಿಳಿದ ಬಂಧಾಂಗಾತು. ಆದರ ಇಂಥಾ ದೊಡ್ಡಮಂದಿ
ಹಿಂಗ್ಹೆಂಗ ಗುಡೀ ಬಿಟ್ಟ ಯಾಕ ಬಯಲಿಗಿ ಬಿದ್ದಿರಿ?
ತಿಳಿಸುವಂಥವರಾಗಿರಿ.

೨ನೆಯವಳು : ನಿಮ್ಹಾಂಗ ನಾವೂ ಅನಾಥರಾಗಿದೀವೊ ಬಾಳಾ,
ಯಾವುದಾದರೂ ಮೂಲಿಯೊಳಗಿನ ಸರದಾರ ಬಂದು
ಕಾಪಾಡ್ಯಾನೇನಂತ ನೋಡುತಿದ್ದೇವ ನೋಡು.
ಸೂತ್ರಧಾರ, ಅಲ್ಲಿ ಯಾಕೊ ಬೆಂಕೀ ಸುತ್ತ
ಮಂದಿ ಕುಣೀತಾರ ಯಾಕಿದ್ದೀತು? ಮೂರ ಗುಂಪಿ
ಏನವು? ಯಾಕ ಹಾಡತಾರ?

ಸೂತ್ರಧಾರ : ಅದ? ಊರಾಗಿನ ಮೂರ ಮಂದಿ ಮುತ್ತೈದೇರ
ಸೇರಿ ಕರಿ ಆಕಳ ಸೆಗಣಿ ತಂದು, ಪಾರಂಬಿ
ಕರ್ರೆವ್ವನ ಮುಂದ ಮೂರ ಕುಳ್ಳ ಬಡದ್ದಾರ.
ಮೂರ ಹಗಲಿ ಮೂರ ರಾತ್ರೀ ಒಳಗ ಆ
ಕುಳ್ಳಿನಾಗ ಹುಳಾ ಬಿದ್ದರ, ಮಳಿ ಬರತೈತಂತ
ನೇಮ ಐತಿ. ಇಂದಮಾಸಿ, ಬೆಳಿಗ್ಗಿ
ಅವಧಿ ಮುಗದು ಪಾರೀ ಕೈಯಿಂದ
ಪೂಜಿ ಮಾಡಿಸಿ ಕೆದರಿ ನೋಡತೇವು.
ಊರ ಮಂದೆಲ್ಲ ಅದಕ್ಕs ಅಲ್ಲಿ ಸೇರ್ಯಾರ.
ಆಯ್ತು ಇನ್ನೇನ ಬೆಳ್ಳಿಚಿಕ್ಕಿ ಮೂಡೋ ಹೊತ್ತ
ಬಂತು, ನಾನೂ ಅಲ್ಲಿಗೇ ಹೋಗಿ ನಮ್ಮ
ನಶೀಬ ನೋಡತೇನು. ಹುಳಾ ಬೀಳದಿದ್ದರ
ಗುಳೇಕಟ್ಟಿಕೊಂಡ ಬ್ಯಾರೇ ಕಡೆ ಹೋಗತೇವು.

ಮೂವರು : ಹಾಂಗಿದ್ದರ ಸೂತ್ರಧಾರ ನಾವು ಬರುವಂಥವರಾಗುತ್ತೇವೆ.

ಸೂತ್ರಧಾರ : (ನಮಿಸಿ) ಆಗಲಿ ತಾಯಂದಿರಾ ಬರುವಂಥವರಾಗಿರಿ.
(ಹೋಗುವರು. ಸೂತ್ರಧಾರನೂ ಹೋಗುವನು. ದೂರದಿಂದಹೊಯ್ಯೋ ಹೊಯ್ಯೋ ಮಳೆರಾಯಎಂಬ ಗೀತ ಅಸ್ಪಷ್ಟವಾಗಿ ಕೇಳಿಬರುತ್ತದೆ. ಕುಣಿಯುತ್ತಿದ್ದ ಪಾರಿ ನಿಲ್ಲಿಸಿನಿನ್ನ ತಾಯೀ ಗುಳದಾಳಿ ಕಾಪಾಡೊ ರಾಮಾs’ ಎಂದು ಚೀರುತ್ತಿರುವಂತೆ ತೆರೆ.)

ಪರಸಾದ ಏನಪಾ.
ಏಕದಮ್ಮ ಎಷ್ಟ ದೂರ ಹ್ವಾದಿ ನೊಡು!

 

ಬಾಳಗೊಂಡ : ಬ್ಯಾಡೊ ಮುದುಕಾ ತಡೀಯೊ. ಒಮ್ಮಿಂದೊಮ್ಮಲೆ ಹೀಂಗ ತೂರಬ್ಯಾಡೊ….
ಅಥವಾ, ನಿಮ್ಮ ಜೋಡಿ ನಾ ರಾಜಿ ಯಾಕ ಮಾಡಿಕೊಳ್ಳಲಿ?
ನೀವು ಹೇಳಿಧಾಂಗ, ಹೇಳಿದಷ್ಟ, ಅಳತಿ ಮಾಡಿ
ಬೆಳ್ಯಾಕ ನಾಯೇನ ನಿಮ್ಮ ಕುಂಡದಾಗಿನ
ಹೂವಿನ ಬಳ್ಳಿ ಅಲ್ಲ, ಕಸುವಿದ್ದರ ಬೆಳದೇನು
ಇಲ್ಲಾಂದರ ಕಮರೇನು, ಏನಂತಿ?

ಮುದುಕ : ನಾನೂ ಅದನ್ನs ಅಂತೀನೋ ತಮ್ಮ,
ನಿನ್ನ ಬೆಳಸಾಕ ನಾವೇನ ನೀರಾಗಿಲ್ಲ, ಗೊಬ್ಬರಾಗಿಲ್ಲ.
ಅದಕ್ಕs ನೀ ಇಲ್ಲಿ ಬೇರ ಬಿಡಲಿಲ್ಲ.
ಕಾಗೀ ಬಳಗದಾಗ ಕೋಗಿಲ ಹ್ಯಾಂಗಿರತೈತಿ ಹೇಳು?

ಸೂತ್ರಧಾರ : ಕೋಗಿಲ ಹುಟ್ಟಿದ್ದಾದರೂ ಕಾಗೀ ಗೂಡಿನೊಳಗs
ಅಲ್ಲೇನ? ಇದಕ್ಕೇನಂತಿ?

ಮುದುಕ : ನಿನಾಪ್ಪನ ಮತ್ತು ಅದನs ತೀಡತಾನಲ್ಲೊ,
ಕೋಗಿಲ ಬೆಳದ ಮ್ಯಾಲ ಕಾಗೀ ಬಳಗದಾಗ
ಇರತೈತೇನ ಹೇಳಂತೀನು.

ಬಾಳಗೊಂಡ : ಖರೆ, ಏ ಹಳಬಾ,

ಹಳಬ : (ಪ್ರವೇಶ) ಬಂದೇನ್ರಿ ಧನಿ.

ಬಾಳಗೊಂಡ : ನನ್ನ ಬಿಳೀಕುದರಿ ಬಿಚ್ಚಿಕೊಂಬಾ ಹೋಗು.

ಹಳಬ : ಇಂಥ ರಾತ್ರ್ಯಾಗ ಹಿಂಗs ಹೋಗತೇರಿ?

ಬಾಳಗೊಂಡ : ಇನ್ನೇನ ತಂಬಿಕೊಂಡ ಹೋಗಬೇಕಂತಿ?

ಹಳಬ : ಗೌಡ್ತಿ ಕೇಳಿದರ ಏನ ಹೇಳಲಿ?

ಬಾಳಗೊಂಡ : ಬ್ಯಾರೇ ಕಡೆ ಬೇರ ಹುಡಕೋದಕ್ಕ ಹೋದಂತ ಹೇಳು.

ಹಳಬ : ದೊಡ್ಡಗೌಡ ಕೇಳಿದರ….

ಬಾಳಗೊಂಡ : ಸಣ್ಣಗೌಡ ಸತ್ತಂತ ಹೇಳು.

ಹಳಬ : ಯಾಕ ಹ್ವಾದಂತ ಕೇಳಿದರ….

ಬಾಳಗೊಂಡ : ಇರಲಿಕ್ಕೇನೂ ಕಾರಣ ಇಲ್ಲದ್ದಕ್ಕ ಹೋದಂತ ಹೇಳು.

ಹಳಬ : ನಿಮ್ಮ ಕಡೆ ಮಂದಿ ಕಾರಣ ಇದ್ದಾಗs ಬದಕತಾರೇನ್ರಿ?

ಬಾಳಗೊಂಡ : ಹೇಳಿದಷ್ಟ ಕೇಳು. ಸರಳ ಹೋಗು, ತಡೀ ಹಾಕು,
ಕುದರಿ ಬಿಚ್ಚು, ಹೋದ ಹಾದೀ ಹಿಡದ
ಎಡಕ್ಕ ಎಡಾ ಅನ್ನಬ್ಯಾಡ. ಬಲಕ್ಕ ಬಲಾ ಅನ್ನಬ್ಯಾಡಾ
ಯಾರ ಕೇಳಿದರೇನೂ ಹೇಳಬ್ಯಾಡಾ.
ತಿಳೀತೊ ಇನ್ನೊಮ್ಮಿ ಹೇಳಲ್ಯೊ?