ಕನ್ನಡದ ಬರೆವಣಿಗೆಯಲ್ಲಿ 49 ಅಕ್ಷರಗಳಿವೆ. ಇವು ಅಕಾರದಿಂದ (ಎಂದರೆ, ಅ ಎಂಬ ಅಕ್ಷರದಿಂದ) ಮೊದಲುಗೊಂಡು ಳಕಾರದವರೆಗೂ ಇವೆ. ಈ ವರ್ಣಮಾಲೆ ಸಂಸ್ಕೃತದ ವರ್ಣಮಾಲೆಯನ್ನೇ ಅನುಸರಿಸಿದ್ದು ಸ್ವರ-ವ್ಯಂಜನ-ಯೋಗವಾಹಗಳೆಂಬ ಮೂರು ಗುಂಪುಗಳಲ್ಲಿ ಪ್ರತ್ಯೇಕವಾಗಿ ಗುರುತಿಸಿಕೊಂಡಿವೆ. ಅಕಾರದಿಂದ ಔಕಾರದವರೆಗಿರುವ ಅಕ್ಷರಗಳು ಸ್ವರಗಳು. ಸಂಸ್ಕೃತದ ಋಾಕಾರವನ್ನು ಇತ್ತೀಚೆಗೆ ಕನ್ನಡದಿಂದ ಕೈಬಿಟ್ಟಿದೆ. ಅ ಆ ಇ ಈ ಉ ಊ ಋ ಋಾ.. ಎಂದು ರಾಗವಾಗಿ ಓದಿಕೊಳ್ಳುವುದಕ್ಕೆ ಮಾತ್ರ ಋಾ ಎಂಬ ಅಕ್ಷರದ ಪ್ರಯೋಜನವಿದ್ದಿತು. ಹೋಗಲಿ ಬಿಡಿ. ಇನ್ನುಳಿದ ಸ್ವರಗಳಲ್ಲಿ ಋಕಾರವು ಸಂಸ್ಕೃತ ಪದಗಳಾದ ಋಣ, ಋಷಿ, ಕೃಷ್ಣ, ಗೃಹ, ಕೃಪೆ ಮೊದಲಾದ ಪದಗಳಲ್ಲಿ ಮಾತ್ರವೇ ಕಂಡುಬರುತ್ತಿದ್ದು, ಶುದ್ಧಕನ್ನಡ ಪದಗಳಲ್ಲಿ ಋ ಎಂಬ ಅಕ್ಷರವಾಗಲಿ ಧ್ವನಿಯಾಗಲಿ ಇಲ್ಲ. ಋಣ-ರಿಣ, ಋಷಿ-ರಿಸಿ ಎಂಬಂತೆ ತದ್ಭವಪದಗಳನ್ನು ಸೃಷ್ಟಿಸಿಕೊಂಡಿರುವುದೂ ಇದೇ ಕಾರಣಕ್ಕೆ. ಹಾಗಿದ್ದ ಮೇಲೆ ಈ ಪದಗಳನ್ನು ರುಣ, ರುಶಿ, ಕ್ರುಷ್ಣ, ಗ್ರುಹ ಎಂದು ಮೊದಲಾಗಿ ಹೇಳಲೂ ಬರೆದು ಓದಲೂ ಏನು ಅಡ್ಡಿ? ಋಾಕಾರದಂತೆಯೇ ಋಕಾರವನ್ನೂ ಕೈಬಿಡಬಹುದಲ್ಲ ಎಂಬ ವಿಚಾರವೂ ಮಂಡನೆಯಾಗಿದೆ. ಸ್ವತಂತ್ರವಾಗಿ ಋಕಾರವುಳ್ಳ ಪದಗಳು ಹಲವು; ಋ ಗುಣಿತಾಕ್ಷರವಾಗಿ ಬಳಕೆಯಾಗಿರುವ ಪದಗಳು ಅನೇಕ. ಇವು ನಮ್ಮ ಕಾವ್ಯಗ್ರಂಥಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವುದರಿಂದ ಶುದ್ಧಕನ್ನಡದ ಬರೆವಣಿಗೆಯಿಂದ ಋಕಾರವು ದೂರವಾಗುವವರೆಗೆ ಸಹನೆಯಿಂದ ಕಾಯಬೇಕು.. ಅಲ್ಲಿಯವರೆವಿಗೆ ರು ಎಂಬ ಅಕ್ಷರಕ್ಕೂ ಋಕಾರಕ್ಕೂ ಉಚ್ಚಾರಣೆಯ ವ್ಯತ್ಯಾಸವರಿಯದ ವಿದ್ಯಾರ್ಥಿಗೆ ಋಕಾರವುಳ್ಳ ಪದಗಳ ಬರೆವಣಿಗೆಯ ಗೊಂದಲ ತಪ್ಪಬೇಕಾದರೆ ಋಕಾರವೂ ಅದರ ಗುಣಿತಾಕ್ಷರವೂ ಬರುವ ಪದಗಳ ಉಕ್ತಲೇಖನದ ಅಭ್ಯಾಸವೇ ಸೂಕ್ತ ಪರಿಹಾರ.

ಕನ್ನಡ ಕಲಿಕೆಯಲ್ಲಿ ಒದಗುವ ಸಮಸ್ಯೆಗೆ ಕಾರಣಗಳು ಹಲವು. ಒಂದು ಅಕ್ಷರದ ಧ್ವನಿಯಂತೆಯೇ ಉಚ್ಚಾರವಾಗುವ ಧ್ವನಿಯುಳ್ಳ ಬೇರೊಂದು ಅಕ್ಷರವಿರುವುದು, ಒಂದು ಅಕ್ಷರದಂತೆಯೇ ಕಾಣುವ ಇನ್ನೊಂದು ಅಕ್ಷರವಿರುವುದು, ಕಾಗುಣಿತ, ಒತ್ತಕ್ಷರಗಳಲ್ಲಿ ಉಂಟಾಗುವ ಗೊಂದಲ- ಮೊದಲಾದವನ್ನು ಇಲ್ಲಿ ಪಟ್ಟಿಮಾಡಬಹುದು. ಹೀಗೆ ಸುಮ್ಮನೆ ಪಟ್ಟಿಮಾಡುತ್ತ ಕಾಲಹರಣ ಮಾಡುವ ಬದಲು ಈಗ ಮಾತನಾಡುತ್ತಿರುವ ವಿಷಯ, ಎಂದರೆ, ಋಕಾರದ ಬಗೆಗಿನ ಓದು ಬರೆಹಗಳಲ್ಲಿ ಎದುರಾಗುವ ತೊಂದರೆಯನ್ನೇ ಗಮನಿಸೋಣ.

ಮೊದಲಿಗೆ, ನಮ್ಮ ಭಾಷಾಜ್ಞಾನವನ್ನು ಸ್ವಲ್ಪಮಟ್ಟಿಗೆ ಪರೀಕ್ಷಿಸಿಕೊಳ್ಳೋಣವೇ?

ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಏನೆಂಬುದನ್ನು ಒಂದೆಡೆ ಬರೆದಿಟ್ಟುಕೊಳ್ಳಿ. ಸರಿ-ತಪ್ಪುಗಳ ಬಗೆಗೆ ಆಮೇಲೆ ಯೋಚಿಸೋಣವಂತೆ.

ಇವುಗಳಲ್ಲಿ ಸರಿಯಾದ ರೂಪ ಯಾವುದೆಂಬುದನ್ನು ಗುರುತಿಸಿ. ಕೆಲವು ಪ್ರಶ್ನೆಗಳಿಗೆ ಸಂಬಂಧಿಸಿದಂತೆ, ಕೊಟ್ಟ ಉದಾಹರಣೆಗಳಲ್ಲಿ ಯಾವುದೂ ಸರಿಯಲ್ಲವೆಂದು ತೋರಿದಲ್ಲಿ ‘ಯಾವುದೂ ಅಲ್ಲ’ ಎಂಬ ಉತ್ತರವನ್ನು ಗುರುತಿಸಿ.

1. ಅ. ಪ್ರಕ್ರತಿ  ಆ. ಪ್ರಕೃತಿ  ಇ. ಪೃಕ್ರತಿ  ಈ. ಪ್ರಕ್ರುತಿ
2. ಅ. ಸಾದ್ರುಶ್ಯ  ಆ. ಸಾದ್ರಶ್ಯ  ಇ. ಸಾದೃಶ್ಯ  ಈ. ಯಾವುದೂ ಅಲ್ಲ
3. ಅ. ಸೃಜನಶೀಲತೆ  ಆ. ಸ್ರಜನಶೀಲತೆ  ಇ. ಸ್ರುಜನಶೀಲತೆ  ಈ. ಸರ್ಜನಶೀಲತೆ
4. ಅ. ಕ್ರತಕತೆ  ಆ. ಕೃತಕತೆ  ಇ. ಕ್ರುತಕತೆ  ಈ. ಯಾವುದೂ ಅಲ್ಲ
5. ಅ. ಅಕೃತ್ರಿಮ ಆ. ಅಕ್ರತ್ರಿಮ ಇ. ಅಕ್ರುತ್ರಿಮ  ಈ. ಅರ್ಕತ್ರಿಮ
6. ಅ. ಗೃಹಸ್ಥಾರ್ಶಮ ಆ. ಗ್ರಹಸ್ಥಾಶ್ರಮ ಇ. ಗ್ರುಹಸ್ಥಾಶ್ರಮ ಈ. ಗೃಹಸ್ಥಾಶ್ರಮ

ಇಲ್ಲಿ ಕೊಟ್ಟ ಪ್ರಶ್ನೆಗಳು ಋಕಾರವು ಗುಣಿತಾಕ್ಷರವಾಗಿ ಬರುವ ಸಂದರ್ಭಗಳಿಗೆ ನಿದರ್ಶನಗಳು. ಇವುಗಳಲ್ಲಿ ಶುದ್ಧರೂಪಗಳೆಂದರೆ:
1.ಆ. ಪ್ರಕೃತಿ 2.ಇ. ಸಾದೃಶ್ಯ 3.ಅ. ಸೃಜನಶೀಲತೆ 4.ಆ, ಕೃತಕತೆ 5.ಅ. ಅಕೃತ್ರಿಮ 6.ಈ. ಗೃಹಸ್ಥಾಶ್ರಮ

ಈಗ ನಿಮ್ಮ ಉತ್ತರಗಳಲ್ಲಿ ತಪ್ಪುಗಳಾಗಿದ್ದರೆ ಕಾರಣವೇನೆಂದು ಪರಿಶೀಲಿಸೋಣ: ಋಕಾರವು ಗುಣಿತಾಕ್ಷರವಾಗಿ ಬರುವ ನಿರ್ದಿಷ್ಟ ಅಕ್ಷರವನ್ನು ರಕಾರಯುಕ್ತ ಒತ್ತಕ್ಷರವೆಂದು ತಪ್ಪು ತಿಳಿಯುವುದು. ಕೃ ಎಂಬುದನ್ನು ಓದುವಾಗ ಕ್ರು ಎಂದೋ ಕ್ರ ಎಂದೋ ಉಚ್ಚರಿಸುವುದರಿಂದ ಪದದಲ್ಲಿ ಋಕಾರದ ಧ್ವನಿಯಿದೆ ಎಂಬುದೇ ನಮಗೆ ಗೊತ್ತಾಗದಿರುವುದು.

ಋತು, ಋಷಿ, ಋಣ, ಋಗ್ವೇದ, ಋಕ್ಕು – ಹೀಗೆ ಋಕಾರದಿಂದ ಮೊದಲಾಗುವ ಕೆಲವೇ ಪದಗಳು ನಮ್ಮ ಪುಸ್ತಕಗಳಲ್ಲಿ ಕಂಡುಬರುವುದರಿಂದ, ಅವನ್ನು ಓದಿ ಬರೆದು ನೆನಪಿಟ್ಟುಕೊಳ್ಳಬಹುದು.

ಈ ವಾಕ್ಯಗಳಲ್ಲಿ ಉಪಯೋಗಿಸಬೇಕಾದ ಪದಗಳು ಯಾವುವೆಂಬುದನ್ನು ಗುರುತಿಸಿ:
1) ಅರ್ಜಿಯನ್ನು ತುಂಬಿದಮೇಲೆ ನಿಮ್ಮ —– ಹಾಕಿರಿ. (ರುಜು/ಋಜು)
2) —–ಮಾರ್ಗದಲ್ಲಿ ನಡೆಯುವವನಿಗೆ ಹೆದರಿಕೆಯೇಕೆ? (ರುಜು/ಋಜು)

ಮೊದಲ ವಾಕ್ಯದಲ್ಲಿ ರುಜು (ಸಹಿ ಎಂಬ ಅರ್ಥದಲ್ಲಿ ) ಎಂಬ ಪದವೂ ಎರಡನೆಯ ವಾಕ್ಯದಲ್ಲಿ ಋಜು ಎಂದರೆ ಸತ್ಯ, ಪ್ರಾಮಾಣಿಕ ಎಂಬ ಅರ್ಥದ ಸಂಸ್ಕೃತಪದವೂ ಇರಬೇಕು. ಹೀಗೆ ಋ-ರು ಗಳ ಬದಲಾವಣೆಯಿಂದ ಅರ್ಥವ್ಯತ್ಯಾಸಗಳಾಗುವ ಸಂದರ್ಭ ಕಡಿಮೆ.

ಇನ್ನು, ಕಕಾರದಿಂದ ಳಕಾರದವರೆಗಿನ ವ್ಯಂಜನಗಳನ್ನು ಪದಗಳಲ್ಲಿ ಬಳಸುವಾಗ ಸ್ವರಗಳನ್ನು ಸೇರಿಸಿ ಗುಣಿತಾಕ್ಷರಗಳಾಗಿ ಮಾಡಿಕೊಂಡೇ ಓದಿ ಬರೆಯುತ್ತೇವೆಯಲ್ಲ. ಋ ಎಂಬ ಸ್ವರದ ಗುಣಿತಾಕ್ಷರ ರೂಪವನ್ನು ಬಳಸುವ ಹಲವು ಸಾಮಾನ್ಯ ಪದಗಳಿವೆ. ಕ್+ಋ= ಕೃ. ಕೃಪೆ. ಕೃಷ್ಣ, ಕೃಶ, ಗೃಹ, ವಿಜೃಂಭಣೆ, ತೃಣ, ಉತ್ಕೃಷ್ಟ, ಸಂಸ್ಕೃತ, ನೃಪ, ಅನೃತ, ಮೃತ್ಯು, ಅಪಹೃತ ಮೊದಲಾದವು. ಇಲ್ಲಿ ನೆನಪಿಟ್ಟುಕೊಳ್ಳಬೇಕಾದ ವಿಷಯವೆಂದರೆ ವ್ಯಂಜನಕ್ಕೆ ಋಕಾರ ಸೇರಿ ಬರುವ ರೂಪ ಗುಣಿತಾಕ್ಷರವೇ ಹೊರತು ಒತ್ತಕ್ಷರವಲ್ಲ. ಗೃಹ ಎಂಬ ಪದಕ್ಕೂ ಗ್ರಹ ಎಂಬುದಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಿ.

ನೆಂಟರ ಮನೆಯ ಗೃಹಪ್ರವೇಶಕ್ಕೆ ಹೋಗಿದ್ದೆವು.
ಅವನ ಗ್ರಹಚಾರ ಸರಿಯಿಲ್ಲವೆಂದು ಕಾಣುತ್ತದೆ.

ಮೊದಲ ವಾಕ್ಯದಲ್ಲಿ ಗ್+ಋ=ಗೃ ಗುಣಿತಾಕ್ಷರರೂಪ; ಎರಡನೆಯ ವಾಕ್ಯದಲ್ಲಿ ಗ್+ರ್+ಅ= ಗ್ರ ಎಂಬುದು ಒತ್ತಕ್ಷರವುಳ್ಳ ರೂಪ. ಇದೇ ರೀತಿ ಮುಂದಿನ ವಾಕ್ಯಗಳಲ್ಲಿರುವ ರೂಪಗಳನ್ನು ಗಮನವಿಟ್ಟು ಓದಿ:

ಜ್ವರ ಬಿಟ್ಟಮೇಲೆ ಅವನು ತುಂಬ ಕೃಶವಾಗಿಬಿಟ್ಟಿದ್ದಾನೆ.
ಕ್ರಷರ್ ಯಂತ್ರದಲ್ಲಿ ಎಂತಹ ಕಲ್ಲಾದರೂ ಬೇಗ ಪುಡಿಯಾಗಿಬಿಡುತ್ತದೆ.

ಈ ಪದಗಳಲ್ಲಿ ಯಾವ ಅಕ್ಷರಗಳಿರಬೇಕು, ಗಮನಿಸಿ:
1) ಇವತ್ತು ಚಂದ್ರ–ಹಣ ; — ಹನಿರ್ಮಾಣಕ್ಕೆ ಸಾಲ ಸಿಗುತ್ತದೆ (ಗೃ/ಗ್ರ)
2) ತಾಪ–ಯ ಯಾರನ್ನೂ ಬಿಟ್ಟಿದ್ದಲ್ಲ ; –ಷೆ ಎಂದರೆ ಬಾಯಾರಿಕೆ (ತೃ/ತ್ರ)

ಈ ವಾಕ್ಯಗಳಲ್ಲಿ ಕ್ರಮವಾಗಿ ಚಂದ್ರಗ್ರಹಣ, ಗೃಹನಿರ್ಮಾಣ, ತಾಪತ್ರಯ, ತೃಷೆ ಎಂಬ ಪದಗಳು ಶುದ್ಧರೂಪಗಳು.

ಪುಸ್ತಕಗಳನ್ನು ಓದುವ ಅಭ್ಯಾಸದ ಮಹತ್ವ ಎಷ್ಟೆಂಬುದು ನಿಮ್ಮ ಬರೆವಣಿಗೆಯ ಕೌಶಲದಿಂದಲೂ ವ್ಯಕ್ತವಾಗುತ್ತದೆ. ಪುಸ್ತಕವ್ಯಾಸಂಗದಿಂದ ವಾಕ್ಯಶುದ್ಧಿ, ಶುದ್ಧಪದಪ್ರಯೋಗಗಳ ತಿಳುವಳಿಕೆ ಲಭಿಸುತ್ತದೆ. ತರಗತಿಯ ಕಲಿಕೆಯೊಂದರಿಂದಲೇ ಭಾಷಾಜ್ಞಾನ ಹೆಚ್ಚುವುದೆಂಬ ಭ್ರಮೆ ಬೇಡ.

ಈ ಪದಗಳಲ್ಲಿ ಶುದ್ಧರೂಪಗಳು ಯಾವುವು? ಗುರುತಿಸಿ ಹೇಳಿ.
ಸೂಚನೆ: ಮುಖ್ಯವಾಗಿ ಈ ಪದಗಳಲ್ಲಿ ರ ಎಂಬ ಅಕ್ಷರವು ಒತ್ತಕ್ಷರವಾಗಿರುವ ಸಂದರ್ಭಗಳನ್ನೂ, ಋ ಗುಣಿತಾಕ್ಷರವಾಗಿರುವುದನ್ನೂ ಗಮನದಲ್ಲಿಟ್ಟುಕೊಂಡು ಸರಿ-ತಪ್ಪುಗಳನ್ನು ಪರಿಶೀಲಿಸಿ.

1) ದ್ರಷ್ಟಿಕೋನ 2) ಕ್ರುತಿಚೌರ್ಯ 3) ಕ್ಷಿಪ್ರಕ್ರಾಂತಿ 4) ಗ್ರಹಸ್ಥಾಶ್ರಮ 5)ದ್ರುಢೀಕರಣ ಪತ್ರ
6) ಪೃಥಮ ಮುದ್ರಣ 7) ಮೃದುವಚನ 8) ಅಭಿವ್ರದ್ಧಿ 9) ವೃಂದಾವನ 10) ಸುಶೃತ

ಈ ಹತ್ತು ಪದಗಳಲ್ಲಿ ಸರಿಯಾದ ರೂಪಗಳು ಇವು: 3) ಕ್ಷಿಪ್ರಕ್ರಾಂತಿ 7) ಮೃದುವಚನ 9) ವೃಂದಾವನ

ಇನ್ನುಳಿದ ರೂಪಗಳು ಹೀಗಿರಬೇಕು:
1) ದೃಷ್ಟಿಕೋನ 2) ಕೃತಿಚೌರ್ಯ 4) ಗೃಹಸ್ಥಾಶ್ರಮ 5) ದೃಢೀಕರಣ ಪತ್ರ
6) ಪ್ರಥಮ ಮುದ್ರಣ 8) ಅಭಿವೃದ್ಧಿ 10) ಸುಶ್ರುತ

ಮೊದಲಿಗೇ ಹೇಳಿದಂತೆ, ಋಕಾರದ ಉಚ್ಚಾರಣೆಗೆ ಸಂಬಂಧಿಸಿದ ಗೊಂದಲವೆಂದರೆ ಋಕಾರವು ರು ಎಂಬ ಅಕ್ಷರದ ಉಚ್ಚಾರಣೆಯನ್ನು ಹೋಲುವುದು. ಬರೆವಣಿಗೆಗೆ ಸಂಬಂಧಿಸಿದ ಇನ್ನೊಂದು ತೊಂದರೆಯೇನೆಂದರೆ ರಕಾರವು ( ರ ಎಂಬ ಅಕ್ಷರವನ್ನು ವ್ಯಾಕರಣಕಾರರು ರೇಫ ಎಂದು ಕರೆಯುತ್ತಾರೆ. ಸದ್ಯಕ್ಕೆ ಓದುಗರಿಗೆ ಕಷ್ಟವಾಗಬಾರದೆಂದು ರಕಾರ ಎಂದೇ ಬರೆದಿದ್ದೇನೆ) ಒತ್ತಕ್ಷರವಾಗಿ ಬರುವ ಪದಗಳಲ್ಲಿ ರಕಾರದ ಒತ್ತಕ್ಷರವೋ? ಋ ಎಂಬ ಗುಣಿತಾಕ್ಷರ ಬರಬೇಕೋ ಹೇಗೆ? ಎಂಬ ಸಂಶಯವಾಗತೊಡಗುತ್ತದೆ. ಶ್ರುತಿ-ಶೃತಿ ಇವೆರಡರಲ್ಲಿ ಯಾವುದು ಸರಿ ಎಂದು ನಾನು ಬಹಳ ಸಲ ಯೋಚಿಸುತ್ತಿದ್ದೆ. ಒಂದು ದಿನ ಸಂಸ್ಕೃತದ ನಿಘಂಟನ್ನು ತೆರೆದು ನೋಡಿದಾಗ ಶ್ರುತಿ ಎಂಬ ಪದವಿತ್ತೇ ಹೊರತು ಶೃತಿ ಎಂಬ ಪದವೇ ಕಾಣಲಿಲ್ಲ.

ಋಕಾರವು ಗುಣಿತಾಕ್ಷರವಿರುವ ಅಂತೆಯೇ ರಕಾರವು ಒತ್ತಕ್ಷರವಾಗಿ ಬರುವ ಕೆಲವು ಶುದ್ಧರೂಪಗಳನ್ನು ಇಲ್ಲಿ ಕೊಟ್ಟಿದೆ. ಇವನ್ನು ಓದಿ ಉಕ್ತಲೇಖನವಾಗಿ ಹೇಳಿಸಿಕೊಂಡು ಬರೆದು ನಿಮ್ಮ ಬರೆವಣಿಗೆಯ ಸುಧಾರಣೆಯನ್ನು ಪರೀಕ್ಷಿಸಿಕೊಳ್ಳಿ:

ತ್ರಿಶಂಕು, ದೃಷ್ಟಿ, ವಿಕೃತ, ಶ್ರುತಿ, ಶ್ರೋತೃ, ಕೃತಕ, ಕೃತಜ್ಞತೆ, ಕೃತ್ರಿಮ, ಕೃಪಣ, ಕ್ರಾಂತಿ, ಕಾರ್ಯಕ್ರಮ, ಕ್ರಿಯಾಪದ, ಗೃಹ, ಗೃಹಿಣಿ, ಗ್ರಹಿಕೆ, ಗ್ರಂಥ, ವಿಜೃಂಭಣೆ, ತೃತೀಯಾ, ತೃಪ್ತಿ, ದೃಢ, ದೃಢೀಕರಣ, ದೃಶ್ಯ, ದೃಷ್ಟಾಂತ, ದೃಷ್ಟಿ, ದ್ರಾವಿಡ, ದ್ರಷ್ಟಾರ, ದ್ರವ್ಯ, ನೃಪ, ನೃತ್ಯ, ಪೃಥ್ವಿ, ಪೃಷ್ಠಭಾಗ, ಪ್ರಕಟಣೆ, ಪ್ರಕಾರ, ಪ್ರಶಂಸೆ, ಪ್ರಕೃತಿ, ಪ್ರಕ್ರಿಯೆ, ಪ್ರಗತಿ, ಪ್ರಣಯ, ಪ್ರಲಾಪ, ಬೃಹದಾಕಾರ, ಬೃಂದಾವನ, ಬೃಹಸ್ಪತಿ, ಧೃತಿ, ಧೃತರಾಷ್ಟ್ರ, ಧ್ರುವ, ಮೃತ್ಯುಪ್ರಾಯ, ವೃಥಾ, ಅದೃಶ್ಯ, ಅಪಹೃತ.