ಸೂಚನೆ ||
ಅಧ್ವರೊಪಕ್ರಮದೊಳಮಲಹಯಮೈದೆ ನೀ |
ಲಧ್ವಜನ ಪಟ್ಟಣದೊಳಗ್ನಿಯಂ ಕಂಡರಿಬ |
ಲಧ್ವಂಸಿ ಪಾರ್ಥನವನಂ ಜಯಿಸೆ ಧಂಗದಿಂ ತನ್ನ ಪುರಮಂ ಪೊಕ್ಕನು ||

ರಾಯ ಕೇಳನುಸಾಲ್ವನಂ ಕೂಡಿಕೊಂಡು ಕಮ |
ಲಾಯತಾಂಬಕನಖಿಳಯಾದವರ ಗಡಣದಿಂ |
ದಾ ಯುಧಿಷ್ಠಿರನೃಪನ ಸನ್ಮಾನಮಂ ತಳೆಯುತಿರೆ ಜಾಹ್ನವೀತಟದೊಳು ||
ಆಯಿತದ್ವರಶಾಲೆ ಶಾಸ್ತ್ರವಿಶ್ರುತದ ವಿವಿ |
ಧಾಯತ ವಿಚಿತ್ರ ವೈಭವದಿಂದೆ ಬಳಿಕಾ ಮ |
ಹಾ ಯಾಗದನುಪಮ ಪ್ರಾರಂಭಕಾಲದ ವಸಂತರ್ತು ಸಂಭವಿಸಿತು ||೧||

ಒಂದೆಡೆಯೊಳಂ ತನಗೆ ನಿಲವಿಲ್ಲದತಿವೇಗ |
ದಿಂದೆ ನಿರುತಂ ಪ್ರಬಲಮಾಗಿ ಬೀಸುವ ಗಾಳಿ |
ಚಂದನದ್ರುಮಮಂ ತೊಡರ್ದಹಿಗಲಾಹಾರವಂ ಕೊಂಡುಕೊಂಡು ಮಿಕ್ಕು ||
ಮಂದತ್ವಮಂ ತಳೆದು ಮಲಯಾಚಲದಸಿ ಮೆ |
ಯಿಂದೆ ಸತಸಿಜದೊಳ್ ಭ್ರಮಿಸುವ ಮರಿದುಂಬಿಗಳ |
ವೃಂದಮಂ ಕೂಡಿಕೊಂಡಲೆವೆಲರ್ ಬಂದುದು ವಿರಹಿಗಳೆದಯಾರುವಂತೆ ||೨||

ಮಿರುಗುವ ತಳಿರ್ದೋರಣಂಗಳಂ ಕಟ್ಟಿಸುತೆ |
ಮರಿಗೋಗಿಲೆಗಳ ಬಾಯ್ಗಳ ಬಲಿದ ಬಂಧನದ |
ಸೆರೆಗಲಂ ಬಿಡಿಸುತ್ತೆ ತುಂಬಿಗಳ ದಳಕೆ ಕಮ್ಮಲರ್ಗಳಂ ಸೂರೆವಿಡುತೆ ||
ಕಿರುವೆಲರೊಳೆತ್ತಲುಂ ಸಾರಿಸುತೆ ವಿರಹಿಗಳ |
ನೆರಗಿಸುತೆ ಜೊನ್ನದ ಜಸಂ ಪೆರ್ಚೆ ಮಧುನೃಪಂ |
ಪೊರಮಟ್ಟು ಮಾಗಿಯನ್ನುಡುಗಿಸಿ ಸಮಸ್ತ ವನರಾಷ್ಟ್ರಮಂ ಕೈಕೊಂಡನು ||೩||

ಪೊಸಮಾವಶೋಕೆಯೊಳ್ ಮರಿದುಂಬಿ ಕೋಗಿಲೆಯೊ |
ಳೆಸೆದ ಸಂಪಗೆ ಪೊಚ್ಚಪೊಂದಾವರೆಯೊಳೊಳ್ಪ |
ಡಸಿದ ಮಲ್ಲಿಗೆಯಲರ್ ಬೆಳತ ಬೆಳ್ದಿಂಗಳೊಳ್ ಗಿಳಿವಿಂಡು ಬನಸಿರಿಯೊಳು ||
ಎಸೆದುವೊಂದೊಂದರೊಳ್ ಮಧುಮಾಸಕಂಗಜನ |
ದೆಸೆಯಂತೆ ಖತಿಯಂತೆ ಧನದಂತೆ ಜಸದಂತೆ |
ಪಸುರ್ವೆಳಸಿನಂತೆ ಕೆಂಪಸಿತಂ ಪಳದಿ ಪಳುಕುಪಚ್ಚೆಗಳ ಬಣ್ಣದಿಂದೆ ||೪||

ತಳಿತೆಸೆವ ನೆಳಲ್ಗಳಂ ಸಾರ್ದು ಶೀ |
ತಳದ ನಿರ್ಮಲಸುವಾರಿಯನೀಂಟಿ ನವ್ಯಪರಿ |
ಮಳದಿಂದೆ ಸೊಗಸ ತೀಡುವ ತೆಳಿವೆಲರ್ಗೆ ಮೆಯ್ಯೊಡ್ಡಿ ಮಾರ್ಗಶ್ರಮವನು ||
ಕಳೆದರಧ್ವಗರೋಪರೊಳ್ ನೆರೆದು ವಿರಹಿಗಳ್ |
ಮಲಯಜದ ಘನಸಾರದೊಳ್ ತಂಪುವೆತ್ತು ನಿ |
ಚ್ಚಳದ ಕರುವಾಡದೊಳ್ ಭೋಗಿಸಿದರಂದು ಚೈತ್ರಾಗಮದ ಸಂಭ್ರಮದೊಳೂ ||೫||

ಆ ಚೈತ್ರಮಾಸಮೆಸೆದುದು ಧರ್ಮಜನ ಕೀರ್ತಿ |
ಭೂಚಕ್ರಮಂ ಮುಸುಕಿದಂತೆ ಬೆಳುದಿಂಗಳಿರೆ |
ಯಾಚಕರನೆತ್ತಲುಂ ಕೂಗಿ ಕರೆವಂತುಲಿಯೆ ಕೋಗಿಲೆಗಳಿಳೆಯ ಜನದ ||
ಲೋಚನಕುದಯಿಪ ಪಸದಂತೆ ಚೂತಾಂಕುರಂ |
ಗೋಚರಿಸೆ ಪಾತಕಕ್ಷಯದಂತೆ ಮಾಗಿಯ ವಿ |
ಮೋಚನಂ ಕಾಣೀಸಲ್  ಪುಣ್ಯವಾಸನೆಯಂತೆ ದಕ್ಷಿಣದ ವಾಯು ಸುಳಿಯೆ ||೬||

ಧಾತ್ರೀಶ ಕೇಳ್ ಬಳಿಕ ಧರ್ಮಜಂ ತಾಮರಸ |
ನೇತ್ರ ವೇದವ್ಯಸರಾಜ್ಞೆಯಿಂದಖಿಳರ್ಷಿ |
ಗೋತ್ರದ ಮುನಿಗಳೆಲ್ಲರಂ ಕರೆಸಿ ಮೆಲವರನುಜ್ಞೆಯಿಂದಾ ಯಜ್ಞದ ||
ಸೂತ್ರಪ್ರಕಾರದಿಂದಾರಾಜಿಸುವ ಬಹಿಃ |
ಕ್ಷೇತ್ರದಧ್ವರಶಾಲೆಯೊಳ್ ದೀಕ್ಷೆಯಂ ತಳೆದು |
ಚೈತ್ರಸಿತಪೌರ್ಣಮಾಸಿಯ ದಿನದೆ ಬಿಟ್ಟನರ್ಚಿಸಿ ಹಯವನುತ್ಸವದೊಳು ||

ಇಂದುಕುಲದಗ್ಗಳೆಯ ಪಾಂಡುವಸುಧಾಪಾಲ |
ನಂದನ ಯುಧಿಷ್ಠಿರ ನರೇಂದ್ರನಧ್ವರಹಯಮಿ |
ದಂ ದಿಟ್ಟರಾರಾದೊಡಂ ಕಟ್ಟಿಕೊಳಲಾರ್ಪೊಡಿಳೆಯೊಳೆಂಬೀ ಲಿಪಿಯನು |
ಸಂದಿಸಿ ಬರೆದ ಕನಕಪಟ್ಟಮನದರ ಪಣೆಯೊ |
ಳೊಂದಿಸಿ ತುರಂಗಮವನಮಲಸ್ತ್ರಾಭರಣ |
ದಿಂ ದಿವ್ಯಗಂಧಮಾಲ್ಯಾಕ್ಷತೆಗಳಿಂದಲಂಕರಿಸಿ ಬಿಟ್ಟರ್ ಶುಭದೊಳು ||೮||

ಶ್ಲಾಘ್ಯದಿಂದಾದ ಮಜ್ಜನಭೋಜನದ ಸದಾ |
ರೋಗ್ಯದಿಂ ತಾಂಬೂಲ ವಸ್ತ್ರ ಭೂಷಣದ ಸೌ |
ಭಾಗ್ಯದಿಂ ಕುಸುಮ ಪರಿಮಳಲೇಪನಂಗಳಿಂ ಸ್ತ್ರಿಪುರುಷರೇಕಾಂತಕೆ ||
ಯೋಗ್ಯವಹ ಸಜ್ಜೆವನೆಯೊಳಗೀರ್ವರುಂ ದಿವ್ಯ |
ಭೋಗ್ಯಮೆನಿಪೊಂದು ಮಂಚದೊಳೊರಗಿ ಕಾಮವೈ |
ರಾಗ್ಯಮಾಗಿರ್ಪುದಸಿಪತ್ರವ್ರತಂ ತದ್ವ್ರತದೊಳರಸನಿರುತಿರ್ದನು ||೯||

ತದ್ಯಾಗವೊಂದು ಬರಿಸಕೆ ಮುಗಿದವುದನ್ನೆಗಂ |
ಸದ್ಯಾಜಮಾನದೀಕ್ಷೆಯನವನಿಪಂ ತಾಳ್ದ |
ನುದ್ಯುಕ್ತರಾದರ್ಜುನನೊಡನೆ ಹಯರಕ್ಷೆಗಸುರಹರನಾಜ್ಞೆಯಿಂದೆ ||
ಉದ್ಯತ್ಪರಾಕ್ರಮಿಗಳನುಸಾಲ್ವ ಸಾತ್ಯಕಿ |
ಪ್ರದ್ಯುಮ್ನ ಕೃತವರ್ಮ ಯೌವನಾಶ್ವಾತಿಬಲ |
ಖದ್ಯೋತಸುತಸೂನು ಮೊದಲಾದ ವೀರರೊದಗಿತು ಚಾತುರಂಗದೊಡನೆ ||೧೦||

ಇಭಮುಖಾರ್ಚನೆಯಂ ನವಗ್ರಹದ ಪೂಜೆಯಂ |
ವಿಭವದಿಂ ಮಾಡಿ ಧರ್ಮಜ ಭೀಮ ಕುಂತಿಗೆ |
ಳ್ಗಭಿನಮಿಸಿ ಕೃಷ್ಣನ ಪದಾಂಬುಜಕ್ಕೆರಗಿ ದಿಕ್ಪಾಲರಂ ಬೇಡಿಕೊಂಡು ||
ಶುಭಮಹೂರ್ತದೊಳರಸಿಯರ ಸೇಸೆವೆತ್ತು ಮುನಿ |
ಸಭೆಗೆ ವಂದಿಸಿ ಪರಕೆಗೊಂಡು ಪಾಠಕರ ಜಯ |
ರಭಸದಿಂದೆಸೆವ ಮಂಗಳವಾದಯಘೋಷದಿಂದರ್ಜುನಂ ಪೊರಮಟ್ಟನು ||೧೧||

ಮುರಹರನ ರಾಣಿಯರ್ ಧುರಧಿರ ಕರ್ಣಸುತ |
ನರಸಿಯೆಂದೆನ್ನ ಪೊಗಳ್ವಂತೆ ಮಿಗೆ ಸಂಗರದೊ |
ಳರಿಗಳಂ ಗೆಲ್ವುದೆಂದಾರತಿಯನೆತ್ತಿ ಮುತ್ತಿನ ಸೇಸೆಗಳನೆ ಸೂಸಿ ||
ಭರದಿಂದ ಬಂದಪ್ಪಿದಂಗನೆಯ ಮೊಗನೋಡಿ |
ಕುರುಳುಗಳನುಗುರ್ಗಳಿಂ ತಿದ್ದಿ ಮುದ್ದಿಸಿ ತನ್ನ |
ಬೆರಳುಂಗುರಂಗೊಟ್ಟು ಸಂತಯಸಿ ವೃಷಕೇತು ಕಾಂತೆಯಂ ಬೀಳ್ಕೊಂಡನು ||೧೨||

ಅಂಕೆಯಿಂದರ್ಜುನಂಗಂದು ಯಾದವಸೈನ್ಯ |
ಮಂ ಕೂಡಿಕೊಟ್ಟು ದಳಪತಿಯಾಗಿ ತನಯನಂ |
ಮುಂಕೊಳಿಸಿ ಕರ್ಣಜ ಸುವೇಗಾನುಸಾಲ್ವರ ಸಹಾಯಮಂ ಕೈವರ್ತಿ ಸಿ ||
ಪಂಕರುಹಲೋಚನಂ ಪೊರಮಟ್ಟನಿಬರೆಲ್ಲ |
ರಂ ಕಳುಹಿ ತಿರುಗಿದಂ ಸ್ವೇಚ್ಛೆಯಿಂದಾ ಹಯಂ |
ತೆಂಕಮೊಗಮಾಗಿ ನಡೆದುದು ಕರಿತುರಗರಥಪದಾತಿಗಳ್ ಸಂದಣಿಸಲು ||೧೩||

ಊಹಿಸುವೊಡರಿದೆನೆ ತುರಂಗಮದ ಕೂಡೆ ಸ |
ನ್ನಾಹದಿಂ ಮೇರೆದಪ್ಪಿದ ಮಹಾರ್ಣವದ ಪ್ರ |
ವಾಹಮೆನೆ ತಳ್ತಿಡಿದ ತರುಗುಲ್ಮಲತೆಗಳಿಂ ನಡೆಗೊಂಡ ಕಾನನಮೆನೆ ||
ಮೋಹರಂ ಭೂತಳಮನೊಳಕೊಂಡು ಬರುತಿರ್ದು |
ದಾಹಯಂ ಬಳಿಕ ದಕ್ಷಿಣದಿಶಾಮುಖಮಾಗಿ |
ಮಾಹಿಸ್ಮತೀಪಟ್ಟಣದ ಬಹಿರ್ಭಾಗದುಪವನದೆಡೆಗೆ ನಡೆತಂದುದು ||೧೪||

ಆ ನಗರದರಸು ನೀಲಧ್ವಜಂ ಮೇಣವನ |
ಸೂನು ಪ್ರವೀರನೆಂಬವನಾಗಳಲ್ಲಿಗು |
ದ್ಯಾನಕೇಲಿಗೆ ಬಂದನೊಲವಿಂದೆ ಮದನಮಂಜರಿಯೆಂಬ ಕಾಂತೆಯೊಡನೆ ||
ಆ ನಳಿನಲೋಚನೆಯ ಕೆಳದಿಯರ್ ಬಿಡಯದಿಂ |
ದಾನಂದನದೊಳು ಸಂಚರಿಸುತಿರ್ದರ್ ಬಳಿಕ |
ವಿನಕೇತನ ಮಹೀಪಾಲನರಮನೆಯ ಸೊಕ್ಕಾನೆಗಳ ತಂಡದಂತೆ ||೧೫||

ನೋಡಿ ತಿಲಕವನಪ್ಪಿ ಕುರುವಕವನೆಳನಗೆಯೊ |
ಳೂಡಿ ಸಂಗೆಯಂ ಪ್ರಯಂಗುವಂ ಸೋಂಕಿ ಮುರಿ |
ದಾಡಿ ಚೂತಮನೊದೆದಶೋಕೆಯಂ ಬಕುಳಮಂ ಮುಕ್ಕುಳಿಸಿ ಮಧ್ಯದಿಂದೆ ||
ಪಾಡಿ ಪುನ್ನಾಗಮಂ ಕರ್ಣಿಕಾರವನೆ ಕೊಂ |
ಡಾಡಿ ಮಂದಾರಮಂ ಜಾಣ್ಣುಡಿದು ಪುಷ್ಟಿತಂ |
ಮಾಡಿ ತೋರಿದರಂಬುಪಾಕ್ಷಿಯರ್ ನಾನಾವಿಲಾಸದಿಂದಾ ಬನದೊಳು ||೧೬||

ಮುಟ್ಟಲ್ ಪ್ರ್ರಿಯಂಗು ಪೂವಹ ತರಳೆಯರ ಕೈಗೆ |
ನಿಟ್ಟಿಸಲ್ ತಿಲಕಮಲರಹ ನೀರೆಯರ ಕಣ್ಗೆ |
ಮೆಟ್ಟಿದೊಡಶೋಕಮಂಕುರಮಪ್ಪ ಬಾಲೆಯರ ಮೆಲ್ಲಡಿಗೆ ಮಿಗೆ ಬೆಳ್ನಗೆ ||
ಪುಟ್ಟಲ್ಕೆ ಸಂಪಗೆ ಮುಗುಳ್ದೋರ್ಪ ಸುದತಿಯರ |
ಬಟ್ಟಮೊಗಕೆಣೆಯಹವೆ ತಾವರೆಗಳೆಂದವಂ |
ಬಿಟ್ಟು ತುಂಬಿದ ಜೌವನೆಯರ ತನುಪರಿಮಳಕೆ ಕವಿದುವಾ ಬನದಳಿಗಳು ||೧೭||

ಸಣ್ಣನಡು ಸೈನಿಮಿರೆ ತೋಲಮೊದಲೆಳ್ಪೆಸೆಯೆ |
ತಿಣ್ಣಮೊಲೆಗಳ್ ಪೊದಳೆ ಬೆನ್ನು ಸೋರ್ಮುಡಿಯಲೆಯ |
ಕಣ್ಣ ಬೆಳಗಾಗಸವನಾವರಿಸೆ ಮೊಗಮೆತ್ತಿ ತುದಿಗಾಲ್ಗಳಿಂದೆ ನಿಂದು ||
ಬಣ್ಣವಳಿಯದ ಪೂಗಳಂ ಕೊಯ್ದು ಬೆಂಡಾಗಿ |
ತಣ್ಣೆಲರ್ಗೊಡ್ಡಿ ಮೈಬೆಮರನಾರಿಸಿಕೊಂಡು |
ಪೆಣ್ಣುವಿಂಡಾ ಬನದೊಳಲರ್ಗಳಂ ತಮ್ಮ ತನುವಿನ ಕಂಪಿನಿಂ ಪೊರೆದರು ||೧೮||

ನಿಲುಕಿ ಪೊಗೊಯ್ವ ಲಲಿತಾಂಗಿಯರ ಬಟ್ಟ ಬ |
ಲ್ಮೊಲೆಗಳಂ ಪೊರಲಾರದಸಿಯ ಸೆಳೆನಡುವಿದು ಶಿ |
ಥಿಲಮೆಂದು ಹರಿನೀಲದೆಸೆವೊಂದು ಸಣ್ಣಸರಳಂ ಮನೋಜಂ ನಿರ್ಮಿಸಿ ||
ನಿಲಿಸಿ ಬಿಗಿದನೊ ಮೂರುಕಟ್ಟನೆಡೆಗೆನಲ್ |
ಸಲೆ ರಾಜಿಸಿತು ವಳಿತ್ರಯದ ಚೆಲ್ವಿಕೆಯಿಂದೆ |
ಲಲನೆಯರ ಮಧ್ಯದೊಳೊಗೆದ ಬಾಸೆ ಕುಸುಮಾಪಚಯಸಮಯದೊಳ್ ಪೊಸತೆನೆ ||೧೯||

ತುಂಬಿಗಳನೋಡಿಸದ ಚಂಪಕಂ ಸೊಕ್ಕಾನೆ |
ಯಂ ಬೆದರಿಸದ ಸಿಂಗಮಿಡಿದಂಧಕಾರಮಂ |
ತುಂಬಿಸದ ಚಂದ್ರಮಂಡಲಮಿರಲ್ ಕಂಡಿಲ್ಲಿ ನಾವುಮಿರ್ದೊಡೆ ನಮ್ಮನು ||
ಶಂಬರಾರಿಯ ಶರಂ ಕಾಡದಿರುಳಿನ ವಿರಹ |
ಕೆಂಬ ನಿಶ್ಚಯದೊಳಗಲದ ಬಾಲಿಕೆಯರುರವ |
ನಿಂಬುಗೊಂಡೆಣೆವಕ್ಕಿಯೆನಲೆಸೆದುವಲರ್ಗೊಯ್ವ ನೀರೆಯರ ನೆಲೆಮೊಲೆಗಳು ||೨೦||

ಮೊಳೆವಲ್ಲ ಮೊಲ್ಲೆಯಂ ಚೆಂದುಟಿಯ ಬಂದುಗೆಯ |
ನೆಳನಗೆಯ ಮಲ್ಲಿಗೆಯ ನೆಸಳ್ಗಣ್ಣ ನೈದಿಲಂ |
ನಳಿತೋಳ ಸಿರಿಸಮಂ ಸೆಳ್ಗುಗುರ ಕೇತಕಿಯ ನುಣ್ಮೊಗದ ತಾವರೆಯನು ||
ತೊಳಗುವ ಸುನಾಸಿಕದ ಸಂಪಗೆಯನವಯವದೊ |
ಳಳವಡಿಸಿ ಕುಸುಮಗಂಧಿಯರೇತಕಿನ್ನು ಪೂ |
ಗಳನರಸಿ ಕೊಯ್ವರೆಂದವರ ನಡು ಚಿಂತಿಸಿಯೆ ಬಡವಾದುದೆನಲೆದುದು ||೨೧||

ಕರವೀರವರ್ಗಮಂ ಬಾಗಿಸಿದರದಟರಂ |
ತಿರದೆ ಪುನ್ನಾಗಮಂ ಪತ್ತಿರಂಜಿಸಿದರ್ ಚ |
ದುರಮಾವುತಿಗರಂತೆ ಜಾತಿಯಂತರವನರಿದಾಯ್ದರವನೀಶರಂತೆ ||
ಸುರಗಿಯಂ ತುಡುಕಿದರ್ ಭಟರಂತೆ ಬಗೆಗೆಳಸಿ |
ಪರಿದರ್ ಸುವಿಟರಂತೆ ಪಾದರಿಯನರಸಿ ಪಿಡಿ |
ದುರವಣಿಸಿದರ್ ನಗರಶೋಧನೆಯ ತಳವಾರರಂತೆ ಬನದೊಳ್ ಪೆಣ್ಗಳು ||೨೨||

ಜಾತಿ ಸೇವಂತೆಗೆ ಶಿರೀಷಮೊದಲಾದ ಪೂ |
ಜಾತಿಗಳೊಳಿಂತಲರ್ಗೊಯ್ಯುತುಪವನದೊಳ್ ನಿ |
ಜಾತಿಶಯಲೀಲೆಯಿಂದಿರುತಿರ್ದಳಾ ಮದನಮಂಜರಿ ಕೆಳದಿಯರೊಡನೆ ||
ಭೂತಳದೊಳಿದು ಶುಭಾಕಾರದಿಂದಾಶ್ಚರ್ಯ |
ಭೂತಮೆನೆ ಮೈದೋರಿತಾಗಳಮರೇಂದ್ರ ಸಂ |
ಭೂತನ ತುರಂಗಮಮದಂ ಕಂಡು ಮುತ್ತಿದರ್ ಮತ್ತಗಜಗಾಮಿನಿಯರು ||೨೩||

ವನಿತೆಯರೊಳಾ ಮದನಮಂಜರಿ ಹಯದ ಪಣೆಯ |
ಕನಕಪಟ್ಟದ ಲೇಖನವನೋದಿಕೊಂಡು ಯಮ |
ತನುಜನಗ್ಗಳಿಕೆಯಂ ಕಂಡು ನಸುನಗುತೆ ನಿಜಪತಿಗಾಗಳದನುಸಿರಲು ||
ಕನಲ್ದಿನಿಯಳಂ ನೋಡುತವನೆದ್ದು ಕಾಣಬಹು |
ದೆನುತೆ ಪಿಡಿದಶ್ವಮಂ ಕಟ್ಟಿ ಪಟ್ಟಣಕ್ಕೆ ಮಾ |
ನಿನಿಯರಂ ಕಳುಹಿ ಪರಿವಾರಮಂ ಕರೆಸಿ ಕಾದಲನುವಾದನು ||೨೪||

ಭೋಲೋಲ ಕೇಳಗ್ನಿ ಮನೆಯಳಿಯನಾಗಿಹಂ |
ನೀಲಧ್ವಜಂಗದೆಂತೆನೆ ಮುನ್ನವನ ಮಗಳ್ |
ಮೂಲೋಕದೊಳ್ ಸುಭಗರಾರೆಂದರಸಿ ನೋಂತು ಪಾವಕನ ನೊಲಿಸೆ ಮೆಚ್ಚಿ ||
ಬಾಲಿಕೆಯನಂದುಮೊದಲಾಗಿ ವೈಶ್ವಾನರಂ |
ಪಾಲಿಪಂ ಪತಿರೂಪದಿಂದಾ ಪುರದೊಳವನ |
ಮೂಲ ಬಲದಿಂ ಪ್ರವೀರಂ ಪಿಡಿದು ಕಟ್ಟಿದಂ ಪಾರ್ಥನ ತುರಂಗಮವನು ||೨೫||

ಕಟ್ಟಿರ್ದ ಕುದುರೆಯಂ ಕಂಡು ಕಾಪಿನ ಭಟರ್ |
ಧಟ್ಟಿಸಿದೊಟಾ ಪ್ರವೀರಂ ಕೆರಳ್ದಾಹವಂ |
ಗೊಟ್ಟೆ ನಾರ್ಪೊಡೆ ಬರಲಿ ತನ್ನೊಡನೆ ಕಾಳಗಕೆ ಪಡೆಸಹಿತ ಪಾರ್ಥನೆಂದು ||
ತೊಟ್ಟಂ ಶರಾಸನದೊಳಂಬನವನೀ ಮಾತು |
ಮುಟ್ಟಿದುದು ಫಲುಗುಣಂಗೆಳನಗೆಯ ಕೋಪದಿಂ |
ದಟ್ಟಿನೋಡಿದೊಡಾಗ ನಡೆದುದು ಚತುರ್ಬಲಂ ಸರ್ವಸನ್ನಾಹದಿಂದೆ ||೨೬||

ಚೂಳಿಯ ಚತುರ್ಬಲದ ಧಾಳಿ ಸಗರಿಕೆ ನಭಕೆ |
ದೂಳಿ ದೆಸೆದೆಸೆಗಳ್ಗೆ ಘೀಳಿಡುವವಾದ್ಯರವ |
ದೋಳಿ ನೆರೆ ಮುಸುಕಿತೊಂದೇ ಬಾರಿ ಪುರಜನಕೆ ರವಿಗೆ ದಿಕ್ಪಾಲಕರ್ಗೆ ||
ಬಾಳುವ ಮಹಾತೇಜಮತಿಶಯದ ಪದವಿಗಳ್ |
ಕಾಳಹುದು ಮಸುಳಿಪುದು ಚಲನಮಹುದೆಂದು ಹೇ |
ರಾಳಭಯದಿಂ ಶಂಕೆಯಿಂದದ್ಭುತಂಗಳಿಂ ಧೃತಿ ಗತಿ ಮತಿಗಳಳಿದುವು ||೨೭||

ಮೇರೆದಪ್ಪಿದ ಮಹಾರ್ಣವದಂತೆ ಭುವನಸಂ |
ಹಾರಕಾಲದ ಮೇಘಚಯದಂತೆ ಭರದಿಂದೆ ಪ್ರ |
ವೀರನಂ ಮುಸುಕಿತರ್ಜುನನ ಮುಂಚೂಣಿಯ ಚತುರ್ಬಲಂ ದೆಸೆದೆಸೆಯೊಳು ||
ತೇರೈಸದಿರ್ದನವನತಿಸತ್ವದಿಂದೆ ಸಂ |
ಸಾರಪ್ರಲಾಪಮಾಲಾಕುಲಮನಧಾತ್ಮ |
ಸಾರದಿಂ ತಡೆವ ಯೋಗೀಶ್ವರನ ಚಿತ್ತದಂತೆಚ್ಚರಿನ ಧಾತುಗೆಡದೆ ||೨೮||

ಮೇಗೆ ಮುಸುಕಿದ ಚೂಣಿಯನಿತು ಚಾತುರ್ಬಲವ |
ನಾಗಳೊರ್ವನೆ ಚಾರಿವರಿವರಿದು ಬಾಣಪ್ರ |
ಯೋಗಂಗಳಿಂ ಪ್ರವೀರಂ ಕೊಲ್ವುದಂ ಕಂಡು ಬಿಲ್ಗುಂಡು ಕೋಪದಿಂದೆ ||
ಬೇಗದಿಂ ಪ್ರದ್ಯುಮ್ನ ಸಾತ್ಯಕಿ ವೃಷಧ್ವಜ ಸು |
ವೇಗಾನುಸಾಲ್ವ ಕೃತವರ್ಮಾದಿ ಪಟುಭಟರ್ |
ತಾಗಿದರ್ ಕಲ್ಪಮೇಘಂಗಳಿಂ ತಡೆವಿಟ್ಟಮಳೆಯೆನಲ್ ಕಣೆಗರೆಯುತೆ ||೨೯||

ಆ ಪ್ರವೀರಂ ಬಳಿಕನಿಬರೆಲ್ಲರೊಡನೆ ನಾ |
ನಾಪ್ರಕಾರದ ಸಮರದೊಳ್ ಕಾದಲಿತ್ತ ಸೇ |
ನಾಪ್ರತಿಸಹುತ ನೀಲಧ್ವಜಂ ನಗರಮಂ ಪೊರೆವಟ್ಟನೇವೇಳ್ವೆನು ||
ಈ ಪ್ರಭಾಕರಕಿರಣವಿ ವಾಯುಸಮಚರಣ |
ವಿ ಪ್ರವಹಿಸುವ ನದಿಗಳೆ ಗಗನವಿ ಧರೆ ಮ |
ಹಾಪ್ರಳಯಕಡಗುವಂತಡಗಿ ಭೂವನತ್ರಯಂ ಬರಿದೂಳಿಮಯವಾಗಲು ||೩೦||

ಮೊಗಸಿದರ್ ಪರಬಲವನಾಗಳ್ ಪ್ರವೀರನಂ |
ತೆಗೆಸಿದರ್ ಪಿನ್ನೆಲೆಗೆ ರಿಪುಸೈನ್ಯದಳವಿಯಂ |
ತೆಗೆಸಿದರ್ ತಮತಮಗೆ ಕೈಕೊಂಡು ವಾರಣ ವರೂಥ ವರವಾಜಿಗಳನು ||
ಪುಗಿಸಿದರ್ ವೈರಿಮೋಹರದೊಳಗೆ ಸಾಹಸಂ |
ಮಿಗಿಸಿದರ್ ಪೊಯ್ದಾಡಿ ತನಿವೀರರಸದಿಂದೆ |
ಸೊಗಸಿದರ್ ಧುರಧಿರ ನೀಲಧ್ವಜನ ಮನೆಯ ಚತುರ ಚತುರಂಗದವರು ||೩೧||

ಮಗ್ಗಿದರ್ ಮಸಗಿದಂಬುಧಿಯ ತೆರೆಯಂತೆ ಸಲೆ |
ಮಗ್ಗಿದರ್ ಮುಗಿಲಮೊಗ್ಗರದಂತೆ ಭೋಂಕರಿಸು |
ತೊಗ್ಗಿದರ್ ಕವಿದು ಜೇನ್ನೊಣದಂತೆ ಪೊಯ್ದಾಡಿ ರಿಪುಸೈನ್ಯಕಾನನವನು ||
ನೆಗ್ಗಿದರ್ ನೆಲೆಗೆಡಿಸಿ ಬಿರುಗಾಲೀಯಂತೈದೆ |
ನುಗ್ಗಿದರ್ ನುಚ್ಚುನುರಿಯಾಗೆ ಬರಸಿಡಿಲಂತೆ |
ಹಿಗ್ಗಿದರ್ ಪೆಚ್ಚಿ ವೀರಾವೇಶದಿಂದೆ ಪಟುಭಟರಾಗಳಾಹವದೊಳು ||೩೨||

ಪೊಯ್ದಾಡಿ ಮಡಿದ ಕಲಿಗಳ ಶರೀರಂಗಳಂ |
ಪೊಯ್ದೆಳೆದು ಪರಿತಿಂಬ ಮರುಳ್ಗಳಂ ಮೇಣವರ |
ನೊಯ್ದಲ್ಲಿ ದಿವ್ಯತನುಗಳೊಳಪ್ಪಿ ಚುಂಬಿಸುವ ಸುರಸತಿಯರಂ ಕಾಣುತೆ ||
ಮೆಯ್ದೆಗೆದಪರೆ ವೀರರೆಂದೊರ್ವರೊರ್ವರಂ |
ಬಯ್ದು ಮೂದಲಿಸಿ ರಣರಂಗದೊಳ್ ಪಟುಭಟರ್ |
ಕಯ್ದೋರುತಿರ್ದರೊಡವೆರಸಿ ಕೇಶಾಕೇಶಿಯುಧದಿಂದಳವಳಿಯದೆ ||೩೩||

ಕೃತವರ್ಮನುರಮಣಿಯನನುಸಾಲ್ವನುಬ್ಬಟೆಯ |
ನತಿಬಲಸುವೇಗನ ಪರಾಕ್ರಮವನಾದಿತ್ಯ |
ಸುತಸುತನ ಶೌರ್ಯಮಂ ಸಾತ್ಯಕಿಯ ವೀರ್ಯಮಂ ವರಯೌವನಾಶ್ವನೃಪನ ||
ಅತುಳವಿಕ್ರಮವನನಿರುದ್ಧನಾಟೋಪಮಂ |
ಪ್ರತಿಭಟಭಯಂಕರ ಪ್ರದ್ನುಮ್ನನದಟನು |
ನ್ನತಿಗೆಡಿಸಿತಾಗ ನೀಲಧ್ವಜನ ಪರಿವಾರಮೇಳ್ವೆನಾಹದೊಳು ||೩೪||

ಅರ್ಜುನಂ ಕಂಡನಹಿತ ಪ್ರಬಲಬಲಮಸುರ |
ನಿರ್ಜರರ್ಗರಿದೆನೆ ಕಠೋರಮಾಗಲ್ ತನ್ನ |
ವರ್ಜಯಿಸಲರಿಯರೇನೆಂದು ಕಡುಗೊಪದಿಂ ಚಾಪಮಂ ಪಿಡಿದು ಮಿಡಿದು ||
ಗರ್ಜನೆಯೊಳೆಯ್ದೆ ಕಡೆಗಾಲದೊಳ್ ಮಳೆಗರೆವ |
ಪರ್ಜನ್ಯನಂತಾರ್ದಿಸುತೆ ನಡೆಯಲಿದಿರಾಂಪ |
ವರ್ಜಗದೊಳುಂಟೆ ಮುರಿದುದು ಪುರಕೆ ನೀಲಧ್ವಜನ ಸೇನೆ ಕೆಟ್ಟು ಕೆದರಿ ||೩೫||

ಮುರಿದು ಬಹಸೇನೆಯಂ ಕಂಡಾ ಪ್ರವೀರನುರೆ |
ಜರೆದು ಕೋದಂಡಮಂ ಕೊಂಡು ಕೌಂತೇಯನಂ |
ತರುಬಲಡಹಾಯ್ದು ವೃಷಕೇತು ಬರಲಾತನೊಳ್ ಸರಿಯಾಗಿ ಕಾದುತಿರಲು ||
ಪೆರಗಿಕ್ಕಿ ಕರ್ಣಿಯಂ ಮುಂದೆ ನಿಂದನುಸಾಲ್ವ |
ನುರುಬಿದೊಡವಂ ನೋಯೆ ನೀಲಧ್ವಜಂ ತಾನೆ |
ತುರುಗಿದಗ್ಗದ ಸಕಲಬಲ ಸಹಿತ ನೂಕಿದಂ ಫಲುಗುಣನ ಪಡೆಯ ಮೇಲೆ ||೩೬||

ವಾನರವರಧ್ವಜಂ ಮುಳಿದು ನೀಲಧ್ವಜನ |
ಸೇನೆಯಂ ತಡೆಗಡಿಯುತಾತನಂ ಮುಸುಕಿದನ |
ನೂನಶರಜಾಲದಿಂ ಬಳಿಕವಂ ಕಂಗೆಟ್ಟು ಪಾವಕಂ ಪೊರೆಯೊಳಿರಲು ||
ನೀನಳಿಯನಾಗಿರ್ದುಮೆನಗಿನಿತಪಾಯವೇ |
ಕೀನರನ ದೆಸೆಯ ಭಯಮಂ ಬಿಡಿಸಬೇಕೆನೆ ಕೃ |
ಶಾನು ಕೇಳ್ದಾಗ ಸುಡತೊಡಗಿದಂ ತಾನೆ ಪೊಕ್ಕರ್ಜುನನ ಸೈನಿಕವನು ||೩೭||

ಛತ್ರ ಚಾಮರ ಹರಿಗೆ ಹಕ್ಕರಿಗೆ ಹಲ್ಲಣ ವಿ |
ಚಿತ್ರದ ಪತಾಕೆ ಸೀಗುರಿ ಸಿಂಧ ಸೀಸಕ ತ |
ನುತ್ರ ರಂಜಿಕೆ ಪಾಶ ವಸ್ತ್ರ ವಾಹನ ವಾದ್ಯ ಕೈದು ಬತ್ತಳಿಕೆ ಬಂಡಿ ||
ಪತ್ರ ಬಂದುರ ಬಾಣ ಕೋದಂಡ ರಥ ರಥಾಂ |
ಗ ತ್ರಿವೇಣುಕ ಯುಗಾಕ್ಷಂಗಳುರಿಗೊಳೆ ಪಾಂಡು |
ಪುತ್ರ ಸೇನೆಯೊಳೆಲ್ಲರುಂ ಬೆದರಿದರ್ ಕೆಟ್ಟು ಕೆದರಿದರ್ ಕಿಡಿಯನೊದರಿ ||೩೮||

ಹೊಗೆಹೊಗೆದು ಹೊಗೆ ಸುತ್ತಿ ಹೊಗುವ ದೆಸೆ ದೆಸೆಗಳಂ |
ಮೊಗೆಮೊಗೆದು ಮೊಗಸಿ ಪಲಮೊಗದೊಳವ್ವಳಿಸಿ ಪುಟ |
ನೆಗೆನೆಗೆದು ನೆಗಳ್ದು ಸೋನೆಗಳಾಗಿ ಸುರಿವ ಕಿರುಗಿಡಿಗಳ ತುಷಾರದಿಂದೆ ||
ಧಗಧಗಧಗನೆ ಪೊತ್ತುವಾ ಜ್ವಾಲೆಗಳ ಮಾಲೆ |
ಭುಗುಭುಗುಭುಗಿಲ್ಭುಗಿಲ್ಭುಗಿಲೆಂದು ಡಾವರಿಸೆ |
ತೆಗೆತೆಗೆದು ತಗುಳ್ದೆಲ್ಲರಂ ದಹಿಸತೊಡಗಿದವು ದಳ್ಳುರಿ ನರನ ಬಲದೊಳು ||೩೯||

ಕಟ್ಟುಗ್ರ ಕೋಪದಿಂ ಮುಳಿದಂದು ರಾಘವಂ |
ತೊಟ್ಟ ಬಾಣದ ಮೊನೆಯ ದಳ್ಳುರಿಯ ಜಳಕೆ ಕಂ |
ಗೆಟ್ಟು ಸಿಡಿಮಿಡಿಗೊಂಡ ಸಾಗರದ ಜೀವಾಳಿಯಂತೆ ಪಾಂಡವನ ಸೇನೆ ||
ಅಟ್ಟಿ ಸುಡುವನಲ ಧೂಮಜ್ವಾಲೆಗೊಡನೆ ಗೋ |
ಳಿಟ್ಟು ಹೊದಕೆಕುಳಿಗೊಂಡು ಹೊರಳುತಿರಲುಬ್ಬೆಗಂ |
ಬಟ್ಟು ಪಾರ್ಥಂ ಚಿಂತಿಸಿದನೆತ್ತಣದ್ಭುತಮಿದೆಂದು ಪಾವಕನುರುಬೆಗೆ ||೪೦||

ಭಗ್ನರಾದರ್ ಕೆಲರ್ ಕವಚಾದಿಗಳ್ ಬೆಂದು |
ನಗ್ನರಾದರ್ ಕೆಲರ್ ಪೆಚ್ಚಿದುರಿಗಿಚ್ಚಿನೊಳ್ |
ಮಗ್ನರಾದರ್ ಕೆಲರ್ ತನ್ನ ಸೇನೆಯೊಳಕಟ ಧರ್ಮಜನ ಹಯಮೇದಕೆ ||
ವಿಘ್ನಮಾದುದೆ ಶಿವಶೀವೆನುತೆ ಚಿಂತಿಸಿದನಿದ |
ಕಗ್ನಿಯಂ ಭಜಿಸಿ ನೋಡುವೆನೆಂದು ನಿಜ ಕರ ವಿ |
ಲಗ್ನ ಚಾಪವನಿಳುಹು ಶುಚಿಯಾಗಿ ಪಾವಕನನರ್ಜುನಂ ಪ್ರಾರ್ಥಿಸಿದನು ||೪೧||

ಬಳಿಕನಲ ಸೂಕ್ತಗಳಿಂದೆ ನುತಿಗೆಯ್ದ ಭೂ |
ತಳಕೊಂದಿ ಸಾಷ್ಟಾಂಗದಿಂದೆರಗಿ ನಿಂದು ನೀಂ |
ಮುಳಿಯಲೇಕೀ ಮಖಂ ನಿನಗೈಸಲೇ ನಿನ್ನ ದೆಸೆಯಿಂದಖಿಳ ಸುರರ್ಗೆ ||
ತಳೆವುದು ಹವಿರ್ಭಾಗವಿ ಚರಾಚರದ ಪೊರೆ |
ಗೊಳಗೆಲ್ಲಮುಂ ನೀನೆ ನಿನ್ನಿಂದೆ ಮೂಲೋಕ |
ದಳಿವುಳಿವು ಸಾಕದಂತಿರಲೆನಗೆ ಮಾರ್ಗಮಂ ಕೊಟ್ಟುಳುಹಬೇಕೆಂದನು ||೪೨||

ದೇವ ನೀನಂದು ಗಾಂಡೀವಮಂ ತನಗಿತ್ತೆ |
ಭಾವಿಸಲ್ ಪಾಂಚಾಲೆ ನಿನ್ನೊಳುದ್ಭವಿಸಿದಳ್ |
ನಾವು ಲೋಗರೆ ನಿನಗೆ ಪೇಳೆಂದು ನುತಿಸಿ ಕುಂತೀಸುತಂ ಬೇಡಿಕೊಳಲು ||
ಪಾವಕಂ ಮೆಚ್ಚಿ ನುಡಿದಂ ಪಾರ್ಥ ಕೇಳೊದೊ |
ಡಾವು ಮೂಳಿಯೆವು ನಿಮಗೆ ಹರಿ ಸವಿಪದೊಳಿರ್ದು |
ವಿ ವಾಜಿಮೇಧಮೇಕಮೃತಮಿರಲಳೆಗಳೆಸಿದಂತಾಯ್ತು ನಿಮಗೆಂದನು ||೪೩||

ಅಹುದು ನೀವೆಂಬುದಂ ವಿರಬರ್ಪುದೆ ಹರಿಯ |
ಸಹವಾಸಮೇ ಸಾಕು ಜಗದೊಳ್ ಸ್ವಧರ್ಮಮಂ |
ವಹಿಸದವರಾರು ಮುನಿವರನಾಜ್ಞೆಯಾದಪುದು ಮೇಣಂತುಮಲ್ಲದೆಮಗೆ ||
ವಿಹಗೇಂದ್ರವಾಹನಂ ಮಾಡವೇಳ್ಕೆಂದನು ||
ಗ್ರಹಿಸಿದಂ ಮುಖಮನಿದಕೆಂತೆಮದು ನರನೆನಲ್ |
ದಹಿಪುದಂ ಮಾಣ್ದೆನೆಂದಭಯಮಿತ್ತಗ್ನಿ ನೀಲಧ್ವಜಂಗಿಂತೆಂದನು ||೪೪||

ಸಂಗರಂ ಬೇಡ ನರನೊಡನೆ ಸಾಕಾತನ ತು |
ರಂಗಮವ ಬಿಡು ನಡೆ ನಗರಕೆಂದು ವೈಶ್ವಾನ |
ರಂ ಗುಣದೊಳರಸನಂ ತಿರುಗಿದನತ್ತಲರ್ಜುನನುರಿಯ ಡಾವರವನು ||
ಭಂಗಿಸಿದನೆಚ್ಚು ನಾರಾಯಣಾಸ್ತ್ರದೊಳನ್ನೆ |
ಗಂ ಗಗನ ಮಣಿ ಪಶ್ಚಿಮಾಂಗನೆಯ ಬೈತಲೆಯ |
ರಂಗು ಮಾಣಿಕದಂತೆ ಕಣ್ಗೆ ಕಾಣೀಸುತಿರ್ದುದಸ್ತಗಿರಿ ಮಸ್ತಕದೊಳು ||೪೫||

ರಂಜಿಸುವ ಪಶ್ಚಿಮಾಚಲ ಕಿರಾತಂ ತೊಟ್ಟ |
ಗುಂಜಾಭರಭಮೊ ಮೇಣ್ ಗಗನಾಂಬುಧಿಯ ತಡಿಯ |
ಮಂಜು ವಿದ್ರುಮ ಲತೆಯೊ ಮೇಣಪರ ದಿಗ್ವಧುವಿನಂಗ ಕುಂಕುಮ ಲೇಪವೋ ||
ಅಂಜನೇಬದ ಸೀಂಧುರವೋ ಶಿವನ ಮಸ್ತಕದ |
ಕೆಂಜೆಡೆಯೊ ವಿಷ್ಣು ಪದ ಪಂಖರುಹದರುಣತೆಯೊ |
ಸಂಜೆವೆಣ್ಣುಟ್ಟ ರಕ್ತಾಂಬರವೊ ಪೇಳೆನಲ್ಕಾಬೈದುಗೆಂಪೆಸೆದುದು ||೪೬||

ಬಿಚ್ಚುವೆಣೆವಕ್ಕಿಗಳ ಹೃದಯಮಂ ಬೇಯಿಸುವ |
ಪೊಚ್ಚ ಪೊಸಕೆಂಡುಂಗಳೆನೆ ಲೋಕಮಂ ನುಂಗ |
ಲಿಚ್ಚಯಿಸಿ ಬಪ್ಪ ಕತ್ತಲೆಯೆಂಬ ಕಾಳರಕ್ಕಸಿ ಕೋಪದಿಂದುಗಳ್ದ ||
ಕಿಚ್ಚಿನ ಕೆದರ್ಗಿಡಿಗಳೆನೆ ತನ್ನ ಬಾಳುವೆಗೆ |
ನಚ್ಚಿನವಳೀ ರಾತ್ರಿ ವಧುವೆಮದು ಹಿಮಕರಂ |
ಮೆಚ್ಚಿ ಮುಂಗಳುಪಿದೆಳಮಾಣೀಕಗಳೆಂಬಂತೆ ಸಂಜೆದಾರೆಗಳೆಸೆದುವು ||೪೭||

ಓಡಿದುವು ಪಕ್ಷಿಗಳ್ ಗೂಡಿಂಗೆ ದೆಸೆಗಳಂ |
ನೋಡಿದುವು ಘೂಕಂಗಳಳಿಗಳಂ ಸೆರೆಗೆಯ್ದು |
ಪುಡಿದುವು ಬಾಗಿಲಂ ಕಮಲಂಗಳರಲ್ದುವಿಂದೀವರಂಗಳ್ ನಭದೊಳ್ ||
ಮೂಡಿದುವು ಬಾಗಿಲಂ ಚಕ್ರವಾಕಂಗಳಂ |
ಕಾಡಿದುವು ವಿರಹತಾಪಂಗಳಿಳೆಯೆಲ್ಲಮಂ |
ತೀಡಿದುವು ಕತ್ತಲೆಗಳಲಗಲ್ಲಿಗಲ್ಲಿಗೆ ಮನೆಮನೆಗೆ ಸೊಡರ್ ಕಣ್ಗೆಸೆದುವು ||೪೮||

ರವಿ ಪಶ್ಚಿಮಾದ್ರಿಯ ಮರೆಗೊಳೆ ತಮಸ್ತೋಮ |
ಮವನಿಯಂ ಮುಸುಕಿತೀ ತೆರೆದೊಳಸಿತಧ್ವಜಂ |
ಬವರದೊಳ್ ಮುರಿದು ಭಂಗಿತೆನಾಗಿ ತಿರುಗಿದಂ ತನ್ನ ಪಟ್ಟಣಕಿತ್ತಲು ||
ಪವನ ಸಖನಂ ಬೇಡಿಕೊಂಡು ನಾರಾಯಣಾ |
ಸ್ತ್ರವನೆಚ್ಚು ಪೆರ್ಚಿದುರಿಯಂ ಕಿಡಿಸಿ ನಿಜ ಸೈನಿ |
ಕವನೆಲ್ಲ ಬಿಡಿಸಿದಂ ದೇವಪುರ ಲಕ್ಷ್ಮೀಪತಿಯ ಮೈದುನಂ ಮುದದೊಳು ||೪೯||