ಎಂಥಾ ದೇವರಯ್ಯಾ ನೀನು? ಪಟ್ಟೆ
ಪೀತಾಂಬರವಿಲ್ಲ, ವಜ್ರದ ಕಿರೀಟವಿಲ್ಲ,
ಪಚ್ಚೆಯ ಪದಕವಿಲ್ಲ, ತ್ರಿಶೂಲ
ಖಡ್ಗಗಳಿಲ್ಲ, ಬಿಲ್ಲು ಬಾಣಗಳಿಲ್ಲ.
ಬಟ್ಟ ಬಯಲೆಲ್ಲ ಗಟ್ಟಿಗೊಂಡಂತಿರುವ
ಬೆಟ್ಟದ ಮೇಲೆ ನಿಂತಿರುವೆ ಏಕಾಂಗಿ
ದಿವ್ಯಮೌನದೊಳಿರುವ ನಗ್ನಯೋಗಿ !

ಎಲ್ಲವನ್ನೂ ಕಟ್ಟಿಕೊಂಡವರಿಗಲ್ಲ
ಪೂಜೆ ಈ ದೇಶದಲ್ಲಿ, ಎಲ್ಲವನ್ನೂ
ಕೊಟ್ಟು ನಿಂತವರಿಗೆ. ನಿನ್ನಂತೆ
ಗೆದ್ದ ಗೆಲುವಿನ ತುತ್ತ ತುದಿಯಲ್ಲಿ
ಸೋತವನಿಗೆಲ್ಲವನ್ನೂ ಧಾರೆಯನೆರೆದು
ತಪಕ್ಕೆ ನಡೆದವರುಂಟೆ ಈ
ಧರಿತ್ರಿಯಲ್ಲಿ ? ಇಂಥ ಮತ್ತೊಂದು
ನಿದರ್ಶನವುಂಟೆ ಜಗತ್ತಿನ ಚರಿತ್ರೆಯಲ್ಲಿ?

ಈ ನಿಲುವಿಗೊಂದು ಪ್ರತಿರೂಪವನ್ನು
ಹುಡುಕುತ್ತ ಹುಡುಕುತ್ತ ಹೊರಟ
ಚಾವುಂಡರಾಯನಿಗೆ ಕಂಡದ್ದು ಹೇಗೆ
ಕಲ್ಲಿನೊಳಗಡಗಿಕೊಂಡಿದ್ದ ನಿನ್ನ
ಈ ಬೃಹನ್ಮೂರ್ತಿ? ಕವಿಯಲ್ಲದವನಿ
ಗೆಲ್ಲಿಯದೊ ಈ ಬಗೆಯ ಕಾಣ್ಕೆಯ
ಸ್ಫೂರ್ತಿ? ನೀನೊ ಮೃಣ್ಮಯದೊ-
ಳಾವಿರ್ಭವಿಸಿದಂಥ ಚಿನ್ಮಯ
ಮಹಾಕಾವ್ಯ, ಭವ್ಯಜನ ಶ್ರಾವ್ಯ!

ನಾವಿದ್ದೇವೆ ಈಗ ಮಾರುಕಟ್ಟೆಯ ಮಧ್ಯೆ
ತಕ್ಕಡಿ ಹಿಡಿದು ಎಲ್ಲವನ್ನೂ ಅಳೆದು
ತೂಗುತ್ತ, ಅವರಿವರ ಬಡಿದು ಬಾಚುತ್ತ,
ಹಿಂಸೆ-ಭಯ-ತಲ್ಲಣಗಳಲ್ಲಿ ಬೇಯುತ್ತ,
ನಿನ್ನ ಕಣ್ ಬೆಳಕಿನಲಿ ದಾರಿ ಹುಡುಕುತ್ತ.