ಎಂಥಾ ಮಾನವ ಜನ್ಮಾ ಏನು ಕೆಡಿಸಿ ಬಿಟ್ಟೀರಪ್ಪಾ | ಇಂಥಾ ಜನ್ಮಾ ಸಿಕ್ಕೀತೇನರಪ್ಪಯ್ಯಾ || ಪ || ಭ್ರಾಂತಿ ಸಂಸಾರಕ ಬಿದ್ದು ಕೆಟ್ಟೇರಪ್ಪಯ್ಯಾ || ಅ ಪ || ಹರೇದೇರ ಮೋಹಕ್ಕಾಗಿ ಹರನ ಪೂಜಾ ಮಾಡುದುಬಿಟ್ಟು | ಬರಿದೇ ನಿದ್ರೆಯ ಮಾಡಿ ನೀವು ಕೆಟ್ಟೀರಪ್ಪಯ್ಯಾ || ಅರುಣೋದಯವಾಗದ ಮುನ್ನ ಗುರು ಧ್ಯಾನ ಮಾಡಿದರೆ ಪರಮಾನಂದ ಪ್ರಾಪ್ತಿ ನಿಮಗೆ ಆಗುವುದಪ್ಪಯ್ಯಾ || ೧ || ಕಾಲು ಕೈ ಕಣ್ಣು ಮೂಗು ಮೇಲ ನಾಲಿಗೀರಲಿಕ್ಕಾಗಿ | ಕಾಲಹರನ ಪೂಜೆ ನೀವು ಬಿಟ್ಟೀರಪ್ಪಯ್ಯಾ || ಕಾಲಯಮನರು ಬಂದು ನಿಮ್ಮ ಕಾಲ ಹಿಡಿದು ಒಯ್ಯುವಾಗ | ತಾಳೋ ತಾಳ ಅಂದರ ಹ್ಯಾಂಗ ತಾಳಿರಪ್ಪಯ್ಯಾ || ೨ || ಹಣವಿದ್ದಾಗಲೆ ಭಕ್ತಿ ಗುಣವಿದ್ದಾಗಲೇ ಯುಕ್ತಿ ನೆನವಿದ್ಧಾಗಲೆ ಮುಕ್ತಿ ಪಡದೀರಪ್ಪಯ್ಯಾ || ಹಣ ಕೆಟ್ಟು ಹೋಗುವಾಗ ಗುನ ಕೆಟ್ಟು ಹೋಗುವಾಗ | ಘನವಾದ ಯಮನ ಬಾಧಿಗೆ ಬಿದ್ದೀರಪ್ಪಯ್ಯಾ || ೩ || ಹಿಂದೀನ ಜನ್ಮದಲ್ಲಿ ಒಂದೇ ಭಾವದ ಪುಣ್ಯಮಾಡಿ | ಇಂದು ನರಜನ್ಮದೋಳು ಹುಟ್ಟೀರಪ್ಪಯ್ಯ || ಇಂದೀನ ಜನ್ಮದೋಳು ನಿಂದೆಯ ಕುಹಕನಾಡಿ | ಹಂದೀಯ ಜನ್ಮಕ್ಕೆ ನೀವು ಬಿದ್ದೀರಪ್ಪಯ್ಯಾ || ೪ || ಇರವೀ ಎಂಬತ್ತುನಾಲ್ಕು ಲಕ್ಷ ಯೋನಿ ತಿರುಗಿ ತಿರುಗಿ | ಅರವೀನ ಜನ್ಮಕ್ಕೆ ನೀವು ಬಂದೀರಪ್ಪಯ್ಯಾ || ಧರೆಯೋಳು ನೀರಲ್ಕೇರಿ ಒಡೆಯ ಪಂಚಾಕ್ಷರಿ | ಕರುಣ ಕಟಾಕ್ಷ ನೀವು ಪಡೆದೀರಪ್ಪಯ್ಯಾ || ೫ ||